Daily Archives: February 29, 2012

ವೈಜ್ಞಾನಿಕ ಮನೋಭಾವ ಮತ್ತು ದೇಶದ ಮುನ್ನಡೆಯ ಸಂಬಂಧ

-ಆನಂದ ಪ್ರಸಾದ್

ವಿಜ್ಞಾನವು ಇಂದು ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಜೀವನಕ್ಕೆ ನೆಮ್ಮದಿಯನ್ನೂ, ಸಂತೋಷವನ್ನೂ, ಭದ್ರತೆಯನ್ನೂ ಕೊಡುವಲ್ಲಿ ವಿಜ್ಞಾನದ ಪಾತ್ರ ಮಹತ್ತರವಾದುದು. ಒಂದು ಕಾಲವಿತ್ತು, ಅದೂ ಹೆಚ್ಚು ಹಿಂದಿನದಲ್ಲ ಕೆಲವೇ ದಶಕಗಳ ಹಿಂದೆ ಜನ ಪ್ಲೇಗು, ಮಲೇರಿಯಾ, ಕ್ಷಯ, ರೇಬೀಸ್, ಕಾಲರಾ ಮೊದಲಾದ ರೋಗಗಳು ಬಂದರೆ ಸಾವನ್ನೇ ಎದುರು ನೋಡಬೇಕಾಗಿತ್ತು. ವಿಜ್ಞಾನವು ಇವುಗಳ ಕಾರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಔಷಧಿಗಳನ್ನು ಕಂಡು ಹಿಡಿದು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಲಕ್ಷಾಂತರ ಅಮೂಲ್ಯ ಜೀವಗಳನ್ನು ಉಳಿಸಿದೆ, ಉಳಿಸುತ್ತಿದೆ. ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸಿದ ಕಾರಣವೇ ವಿಜ್ಞಾನಿಗಳು ಇಂಥ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸುವವರಿಗೆ ಸೂಕ್ತ ಪ್ರೋತ್ಸಾಹ ಇಲ್ಲ, ಬದಲಿಗೆ ಕಿರುಕುಳ ಸಿಕ್ಕುತ್ತದೆ. ಹೀಗಾಗಿ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ್ದರೂ ವಿಶ್ವಖ್ಯಾತಿಯ ವಿಜ್ಞಾನಿಗಳನ್ನು ಬೆಳೆಸಲಿಲ್ಲ. ಲಕ್ಷಾಂತರ ಜೀವಗಳನ್ನು ಉಳಿಸಲು ಕಾರಣವಾದ ವಿಜ್ಞಾನಿಗಳನ್ನು ನಮ್ಮ ಯಾವ ಟಿವಿ ವಾಹಿನಿಗಳೂ ಕೊಂಡಾಡಿದ್ದು, ಹಾಡಿ ಹೊಗಳುವುದು ಬಿಡಿ, ಕನಿಷ್ಠ ಅವರ ಪರಿಚಯವನ್ನೂ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಾಣುವುದಿಲ್ಲ. ಆದರೆ ಪವಾಡ ಪುರುಷರನ್ನು ಮಾತ್ರ ಅಪಾರವಾಗಿ ಹಾಡಿ ಹೊಗಳುವುದನ್ನು ಕಾಣುತ್ತೇವೆ. ಜ್ಯೋತಿಷಿಗಳು, ವಾಸ್ತು ಎಂಬ ಹೆಸರಿನಲ್ಲಿ ಮೋಸ ಮಾಡುವ ಜನರಿಗೆ ನಮ್ಮ ಟಿವಿ ಮಾಧ್ಯಮದಲ್ಲಿ ಅಗ್ರ ಸ್ಥಾನ.

ಕೆಲವು ದಶಕಗಳ ಹಿಂದೆ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಹಲವಾರು ಗಂಟೆಗಳನ್ನು ಅಥವಾ ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು ಹಾಗೂ ಭಾರೀ ಶ್ರಮದಾಯಕವಾಗಿತ್ತು. ಇಂದು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಂಚರಿಸ ಬಹುದಾದರೆ ಅದಕ್ಕೆ ಕಾರಣ ವಿಜ್ಞಾನಿಗಳು ರೂಪಿಸಿದ ಆಧುನಿಕ ಮೋಟಾರು ವಾಹನಗಳು ಹಾಗೂ ತಂತ್ರಜ್ಞಾನಗಳು. ಈ ಯಾವ ತಂತ್ರಜ್ಞಾನವನ್ನೂ ರೂಪಿಸಿದವರು ನಮ್ಮ ದೇಶದವರಲ್ಲ. ನಮ್ಮ ದೇಶದಲ್ಲಿ ಏನಿದ್ದರೂ ಅದು ಪರದೇಶದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ. ಇದಕ್ಕೆ ಕಾರಣ ಹೊಸ ತೆರನಾಗಿ ಯೋಚಿಸಲು ಅವಕಾಶ ಕೊಡದ ನಮ್ಮ ಬಾಗಿಲು ಮುಚ್ಚಿದ ಮಾನಸಿಕತೆ. ನಾವು ಎಲ್ಲವೂ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಹೊಸದನ್ನು ಚಿಂತಿಸುವುದನ್ನೇ ಬಿಟ್ಟಿದ್ದೇವೆ. ನಮ್ಮ ಮಾನಸಿಕತೆ ಇನ್ನೂ ಹಲವು ಶತಮಾನಗಳ ಹಿಂದೆ ಇದೆ. ಇದರ ಪರಿಣಾಮವೇ ಇಂದು ನಾವು ಟಿವಿ ವಾಹಿನಿಗಳಲ್ಲಿ ನೋಡುತ್ತಿರುವ ಅವೈಜ್ಞಾನಿಕ ಚಿಂತನೆಗಳ ಮಹಾಪೂರ. ಇಂದು ಒಂದು ನಿಮಿಷದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜನರನ್ನು ಸಂಪರ್ಕಿಸಲು ಸಾಧ್ಯ. ಅದಕ್ಕೆ ಕಾರಣವಾಗಿರುವುದು ಕೂಡ ವಿಜ್ಞಾನವೇ. ಯಾವುದೇ ಹಳ್ಳಿ ಮೂಲೆಯಲ್ಲಿದ್ದರೂ ಇಂದು ಸಾಮಾನ್ಯ ಮನುಷ್ಯನೂ ಡಿ.ಟಿ. ಹೆಚ್ ತಂತ್ರಜ್ಞಾನದ ಮೂಲಕ ಹತ್ತಾರು ಟಿವಿ ವಾಹಿನಿಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರುವುದು ವಿಜ್ಞಾನದ ಕೊಡುಗೆಯಿಂದಲೇ. ಆದರೆ ಆ ತಂತ್ರಜ್ಞಾನ ಮಾತ್ರ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಕೆಯಾಗುತ್ತಿಲ್ಲ. ಇದು ಎಂಥಾ ವಿಪರ್ಯಾಸ! ನಮ್ಮ ಮನೋಭಾವ ಜಡ್ಡುಗಟ್ಟಿದೆ. ಹೀಗಾಗಿ ನಮ್ಮ ದೇಶ ಪ್ರಗತಿಶೀಲ ಚಿಂತನೆಯಲ್ಲಿ ಬಹಳ ಹಿಂದುಳಿದಿದೆ. ನಮ್ಮ ಜನ ಇನ್ನೂ ಆದಿವಾಸಿ ಮನೋಭಾವದಿಂದ ಹೊರಬಂದಿಲ್ಲ ಎಂಬುದು ನಮ್ಮ ಟಿವಿ ವಾಹಿನಿಗಳನ್ನು ಬೆಳಗ್ಗೆ 6 ರಿಂದ 10 ಘಂಟೆವರೆಗೆ ನೋಡಿದರೆ ಅರ್ಥವಾಗುತ್ತದೆ.

ಇಂದು ವಿಜ್ಞಾನದ ಬೆಳವಣಿಗೆಯಿಂದಾಗಿ ಆಹಾರ ಭದ್ರತೆ ಬಂದಿದೆ. ಬರಗಾಲ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಜನ ಆಹಾರ ಇಲ್ಲದೆ ಬಳಲುವ ಪರಿಸ್ಥಿತಿ ಸಂಪೂರ್ಣ ಮಾಯವಾಗಿದೆ. ಹಲವಾರು ಯಂತ್ರಗಳು ಬಂದಿರುವುದರಿಂದಾಗಿ ಮಾನವನ ದೈಹಿಕ ಶ್ರಮ ಎಷ್ಟೋ ಕಡಿಮೆಯಾಗಿದೆ. ಇದನ್ನೆಲ್ಲಾ ಸಾಧ್ಯವಾಗಿಸಿದ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು . ಆದರೆ ವಾಸ್ತವವಾಗಿ ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರುವುದು ಕಂಡು ಬರುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲೂ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಮನ್ನಣೆ ಅಷ್ಟಕ್ಕಷ್ಟೇ. ವೈಜ್ಞಾನಿಕ ಮನೋಭಾವವಂತೂ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ.

ನಮ್ಮ ದೇಶದಲ್ಲಿ ಹೊಸ ಚಿಂತನೆಗಳಿಗೆ ಬರ ಇದೆ. ಹೀಗಾಗಿಯೇ ದೇಶದ ರಾಜಕೀಯ ರಂಗ ಮರಗಟ್ಟಿದೆ. ದೇಶದ ಶಾಸಕಾಂಗ ವ್ಯವಸ್ಥೆ ಹೊಸ ಜನೋಪಯೋಗಿ ಕಾನೂನುಗಳನ್ನು ರೂಪಿಸಲು ಬಹುತೇಕ ವಿಫಲವಾಗಿದೆ. ಕಾರ್ಯಾಂಗ ಜಡ್ಡುಗಟ್ಟಿದೆ. ನ್ಯಾಯಾಂಗವೂ ಭಾರೀ ವಿಳಂಬ ಗತಿಯಲ್ಲಿ ತೆವಳುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿ ಸುಧಾರಣೆಗಳನ್ನು ತರಬೇಕೆಂಬ ಚಿಂತನೆಯೇ ಇಲ್ಲದಿರುವುದು. ಕಾಲ ಕಾಲಕ್ಕೆ ದೇಶದ ಕಾನೂನುಗಳಲ್ಲಿ ಜನೋಪಯೋಗಿ ಸುಧಾರಣೆ ಮಾಡದೇ ಹೋದರೆ ಪ್ರಜಾಪ್ರಭುತ್ವ ಜಡ್ಡುಗಟ್ಟುತ್ತದೆ. ಇದನ್ನೆಲ್ಲಾ ಮಾಡಬೇಕಾದವರು ಯಾರು?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡುವ ಸಾಮರ್ಥ್ಯ ಇರುವುದು ಶಾಸಕಾಂಗಕ್ಕೆ. ಆದರೆ ನಮ್ಮ ಶಾಸಕಾಂಗಕ್ಕೆ ಆಯ್ಕೆಯಾಗುವವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲವೇ ಇಲ್ಲವೆಂದರೂ ಸರಿ. ಹೀಗಾಗಿ ಎಲ್ಲೆಡೆಯೂ ಹೊಸ ಚಿಂತನೆಗಳ ಬರ ಇದೆ.

ದೇಶದ ಮಾಧ್ಯಮ ರಂಗವನ್ನು ನೋಡಿದರೆ ಇದೇ ಸ್ಥಿತಿ ಇದೆ. ಇಲ್ಲಿಯೂ ಮೂಢ ನಂಬಿಕೆಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಧ್ಯಮಗಳನ್ನು ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿರುವುದರಿಂದ ಇಲ್ಲಿ ಯಾವುದೇ ಹೊಸ ಚಿಂತನೆಗಳನ್ನು ನಿರೀಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಏನಾದರೂ ಬದಲಾವಣೆ, ಹೊಸತನ ತರುವ ಸಾಮರ್ಥ್ಯ ಇರುವುದು ಬಂಡವಾಳಗಾರರಿಗೆ ಮಾತ್ರ. ಬಂಡವಾಳಗಾರರಿಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ತುಡಿತ ಇದ್ದರೆ ಇಂದೂ ಕೂಡ ಮಾರುಕಟ್ಟೆ ಶಕ್ತಿಗಳನ್ನೂ ಮೀರಿ ಹೊಸ ಚಿಂತನೆಗಳಿಗೆ, ವೈಜ್ಞಾನಿಕ ಮನೋಭಾವಕ್ಕೆ ತಮ್ಮ ಮಾಧ್ಯಮಗಳಲ್ಲಿ ಒತ್ತು ಕೊಡಲು ಸಾಧ್ಯವಿದೆ. ತಮ್ಮ ಬೇರೆ ಉದ್ಯಮಗಳಲ್ಲಿ ಬರುವ ಅಪಾರ ಲಾಭದ ಒಂದಂಶವನ್ನು ಬಳಸಿ ಮಾಧ್ಯಮಗಳನ್ನು ನಡೆಸಲು ಸಾಧ್ಯವಿದೆ.

ಮಾಧ್ಯಮಗಳನ್ನು ನಡೆಸಲು ಜಾಹೀರಾತುಗಳನ್ನೇ, ಮಾರುಕಟ್ಟೆ ಶಕ್ತಿಗಳನ್ನೇ ಅವಲಂಬಿಸ ಬೇಕಾದ ಅಗತ್ಯವಿಲ್ಲ. ನಮ್ಮ ಭಾರೀ ಬಂಡವಾಳಗಾರರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯ ಕೊರತೆ ಇರುವುದರಿಂದಾಗಿ ಇಂಥ ಒಂದು ಚಿಂತನೆಯೇ ಅವರಲ್ಲಿ ಕಂಡುಬರುತ್ತಿಲ್ಲ. ನಮ್ಮ ಬಹುತೇಕ ಬಂಡವಾಳಗಾರರೂ ಕಂದಾಚಾರ, ಮೌಢ್ಯ, ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲದೆ ಹೋಗಿದ್ದರೆ, ಕೆಲವೇ ಕೆಲವು ಬಂಡವಾಳಗಾರರಾದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ದೇಶದ ಸ್ಥಿತಿಯನ್ನೇ ಗಮನಾರ್ಹವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಲು ಇಂದು ಸಾಧ್ಯವಿರುವುದು ಟಿವಿ ಮಾಧ್ಯಮಕ್ಕೆ. ಈ ಮಾಧ್ಯಮವನ್ನು ಬಳಸಿಕೊಂಡೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ. ಈ ಕೆಲಸ ವೈಯಕ್ತಿಕವಾಗಿ ಇಂದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರ ಸಂಘಟನೆ ಮಾಡಿಕೊಂಡು ಇಡೀ
ದೇಶದಲ್ಲಿ ಜಾಗೃತಿ ಮಾಡಬೇಕಾದರೆ ಜೀವವನ್ನೇ ತೇಯಬೇಕಾದೀತು. ತಮ್ಮ ಕುಟುಂಬ, ವೃತ್ತಿ ಬಿಟ್ಟು ಅದಕ್ಕೆ ಯಾರೂ ಸಿದ್ಧರಿರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದೇ ಕೆಲಸವನ್ನು ಟಿವಿ ಮಾಧ್ಯಮವು ಸುಲಭವಾಗಿ, ಏಕಕಾಲದಲ್ಲಿ ಮಾಡಲು ಸಾಧ್ಯವಿದೆ. ವೈಜ್ಞಾನಿಕ ಮನೋಭಾವ ಇರುವ ಕೆಲವು ಜನ ಬಂಡವಾಳಗಾರರು ತಮ್ಮ ಇತರ ಉದ್ಯಮಗಳ ಭಾರೀ ಲಾಭಾಂಶದ ಒಂದು ಅಂಶವನ್ನು ಜನಪರ, ದೇಶಪರ ಟಿವಿ ಮಾಧ್ಯಮವನ್ನು ಕಟ್ಟಲು ಬಳಸಿದರೆ ದೇಶದಲ್ಲಿ ಭಾರೀ ಬದಲಾವಣೆಯನ್ನೇ ತರಲು ಸಾಧ್ಯವಿದೆ.

ಇಂದು ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅಗತ್ಯ ಇದೆ. ಶಾಸಕಾಂಗದಲ್ಲಿ ಮಹತ್ತರ ಬದಲಾವಣೆ ತರಬೇಕಾದರೆ ಇಂದು ದೇಶಭಕ್ತರ ಹೊಸ ರಾಷ್ಟ್ರೀಯ ಪಕ್ಷವನ್ನು ಕಟ್ಟಬೇಕಾದ ಅಗತ್ಯ ಇದೆ. ಆ ಪಕ್ಷವು ಚುನಾವಣೆಗಳಲ್ಲಿ ನಿಂತು ಗೆದ್ದು ಸರ್ಕಾರ ರೂಪಿಸಿ ಜನಪರವಾದ ಕಾನೂನುಗಳನ್ನು ರೂಪಿಸುವ ಮೂಲಕ ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ತನ್ಮೂಲಕ ಇಡೀ ರಾಷ್ಟ್ರದ ಸ್ಥಿತಿಯನ್ನು ಬದಲಾಯಿಸಲು ಪ್ರಜಾಸತ್ತಾತ್ಮಕವಾಗಿಯೇ ಸಾಧ್ಯವಿದೆ. ಹೊಸ ಪಕ್ಷವನ್ನು ರೂಪಿಸುವಾಗ ಅದರಲ್ಲಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಉದಾಹರಣೆಗೆ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಗಳ ಮೂಲಕವೇ ಅಯ್ಕೆಯಾಗಬೇಕು, ಪಕ್ಷದಲ್ಲಿ ವಂಶವಾಹಿ ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ನಿಯಮ ರೂಪಿಸುವುದು, ಚುನಾವಣೆಗಳಲ್ಲಿ ನಿಲ್ಲುವವರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿ ಪಡಿಸುವುದು; ಭ್ರಷ್ಟರು, ಆಪಾದಿತರು, ಅಪರಾಧಿಗಳು ಚುನಾವಣೆಗಳಿಗೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು; ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಇತರ ಮಂತ್ರಿಗಳ ಸ್ಥಾನಗಳಿಗೆ ಅರ್ಹತೆಯೊಂದನ್ನೇ ಆಧಾರವಾನ್ನಗಿಸುವುದು; ಪಕ್ಷದ ನೀತಿ ನಿಯಮ ಉಲ್ಲಂಘಿಸಿದವರನ್ನು ಹೊರಹಾಕಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು, ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶವಾಗದಂತೆ ನಿಯಮ ರೂಪಿಸುವುದು ಮೊದಲಾದವುಗಳನ್ನು ಮಾಡಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಜನವಿರೋಧಿಯಾಗುವುದನ್ನು ತಪ್ಪಿಸಬಹುದು. ಇದನ್ನು ಈಗ ಇರುವ ರಾಜಕೀಯ ಪಕ್ಷಗಳೂ ಮಾಡಬಹುದು.

ಒಂದು ಸ್ಪಷ್ಟವಾದ ಪರ್ಯಾಯ ಚಿಂತನೆಗಳ, ಜನಪರ ಸೈದ್ದಾಂತಿಕ ಧೋರಣೆಯ ರಾಷ್ಟ್ರೀಯ ಪಕ್ಷವು ರೂಪುಗೊಂಡರೆ ಅದರ ಪರವಾಗಿ ನಮ್ಮ ಟಿವಿ ವಾಹಿನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡುವುದು ಅಸಾಧ್ಯವೇನೂ ಅಲ್ಲ. ದೇಶದಾದ್ಯಂತ ಈಗ ಇರುವ ರಾಜಕೀಯ ಪಕ್ಷಗಳಿಂದ ರೋಸಿ ಹೋಗಿರುವ ಜನತೆ ಹೊಸತನಕ್ಕಾಗಿ ಹಂಬಲಿಸುತ್ತಿರುವುದು ಸಹಜವೇ ಆಗಿದೆ. ಜನ ಸ್ವಚ್ಛ, ಭ್ರಷ್ಟಾಚಾರ ರಹಿತ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಕಂಡು ಬಂದಿದೆ. ಆದರೆ ಆ ಹೋರಾಟ ರಾಜಕೀಯಕರಣಗೊಂಡು ದುರ್ಬಲವಾಗಿದೆ. ಅಣ್ಣಾ ಹಜಾರೆ ಹಾಗೂ ಅವರ ತಂಡದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇರುವುದೂ ಕಂಡು ಬಂದಿದೆ. ಇದೇ ತಂಡದಲ್ಲಿ ಸ್ಪಷ್ಟವಾದ ವೈಜ್ಞಾನಿಕ ಮನೋಭಾವ ಇದ್ದಿದ್ದರೆ ಇದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿತ್ತು. ಈಗ ಹಜಾರೆಯವರ ಹೋರಾಟವನ್ನು ನೋಡುವುದಾದರೆ ಅದು ಒಂದು ರಾಜಕೀಯ ಪಕ್ಷದ ಪರವಾಗಿ ದೇಶದಲ್ಲಿ ಜನಾಭಿಪ್ರಾಯ ಹುಟ್ಟು ಹಾಕಲು ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಅದು ದುರ್ಬಲವಾಗಿದೆ. ಈಗ ಹಜಾರೆಯವರು ಯಾವ ಪಕ್ಷದ ಪರವಾಗಿ ಹವಾ ಉಂಟು ಮಾಡಲು ಬಯಸುತ್ತಿದ್ದಾರೋ ಆ ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಹಾಗೂ ಆ ಪಕ್ಷದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸ್ಥಾನವೂ ಇಲ್ಲದಿರುವುದೂ ಕಂಡು ಬರುತ್ತದೆ.

ಎಕೂಷೆ ಫೆಬ್ರವರಿ : ಅಂತರರಾಷ್ಟ್ರೀಯ ಮಾತೃಭಾಷಾ ದಿನ

-ಭಾರತೀ ದೇವಿ. ಪಿ

ಬಹುಸಂಖ್ಯಾತರ ಭಾಷೆಯನ್ನು ಮಾನ್ಯಮಾಡಬೇಕೆಂದು ಹುಟ್ಟಿಕೊಂಡ ಚಳುವಳಿಯೊಂದು ಸ್ವಾಯತ್ತದೇಶಕ್ಕಾಗಿ ನಡೆದ ದೊಡ್ಡ ಹೋರಾಟ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸಿದ್ದನ್ನು ನೆನಪಿಸಿಕೊಡುವ ದಿನ ಫೆಬ್ರವರಿ 21. ಪ್ರತಿವರ್ಷ ಫೆಬ್ರವರಿ 21ನೇ ತಾರೀಕನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸಾಂಸ್ಕೃತಿಕ ಮತ್ತು ಭಾಷಿಕ ಬಹುತ್ವವನ್ನು ಮಾನ್ಯಮಾಡುವ ದಿಸೆಯಲ್ಲಿ ವಿಶ್ವಸಂಸ್ಥೆ 1999ರಲ್ಲಿ ಈ ದಿನವನ್ನು ಮಾತೃಭಾಷಾ ದಿನವನ್ನಾಗಿ ಘೋಷಿಸಿತು.

ಈ ಫೆಬ್ರವರಿ 21ರ ವಿಶೇಷತೆ ಏನು ಎಂಬುದನ್ನು ತಿಳಿಯಲು ಇತಿಹಾಸದತ್ತ ಕಣ್ಣು ಹಾಯಿಸಬೇಕಾಗುತ್ತದೆ. 1947ರಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿದ್ದ ಪ್ರದೇಶವನ್ನು ಬಿಟ್ಟುಹೋಗುವ ಮೊದಲು ಭಾರತ ಮತ್ತು ಪಾಕಿಸ್ತಾನ ಎಂಬ ದೇಶಗಳು ರೂಪುಗೊಂಡದ್ದನ್ನು ನಾವೆಲ್ಲರೂ ಬಲ್ಲೆವು. ಹೀಗಾದಾಗ ಪಾಕಿಸ್ತಾನ ಎರಡು ಭಾಗಗಳಾಗಿ ಈಗಿರುವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನವಾಗಿಯೂ, ಇಂದಿನ ಬಾಂಗ್ಲಾದೇಶ ಪೂರ್ವಪಾಕಿಸ್ತಾನವಾಗಿಯೂ ಭಾರತದ ಪೂರ್ವ ಮತ್ತು ಪಶ್ಚಿಮ ಗಡಿಗಳಾಚೆ ಹರಡಿಹೋಗಿದ್ದವು. ಆಡಳಿತ, ಕಾನೂನು, ನೀತಿನಿಯಮಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುವಲ್ಲಿ ಹೆಚ್ಚಿನ ಹಿಡಿತವಿದ್ದದ್ದು ಪಶ್ಚಿಮ ಪಾಕಿಸ್ತಾನದ ನೇತಾರರ ಕೈಯಲ್ಲಿ. ಹೀಗಾಗಿ ಪೂರ್ವಪಾಕಿಸ್ತಾನದ ಜನರು ಎಲ್ಲ ರಂಗದಲ್ಲಿಯೂ ಅವಗಣನೆಗೆ ಒಳಗಾಗಿದ್ದರು. ಜೊತೆಗೆ ಪೂರ್ವಪಾಕಿಸ್ತಾನದ ಬಹುಸಂಖ್ಯಾತರ ಭಾಷೆ ಬಾಂಗ್ಲಾ (ಬಂಗಾಳಿ) ಇದ್ದಾಗಲೂ ಅದನ್ನು ಕಡೆಗಣಿಸಿ ಜಿನ್ನಾ ಮೊದಲಾಗಿ ನೇತಾರರು ಉರ್ದುವನ್ನು ರಾಷ್ಟ್ರಭಾಷೆಯಾಗಿ ಘೋಷಿಸಿದರು. ಇದು ಪೂರ್ವ ಪಾಕಿಸ್ತಾನದ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಇದು ತಮ್ಮ ಹಕ್ಕನ್ನು, ಹಿತಾಸಕ್ತಿಯನ್ನು ಅವಗಣಿಸುವ ಬಗೆಯಾಗಿ ಅವರಿಗೆ ಕಂಡಿತು. ಇದೇ ಸಂದರ್ಭದಲ್ಲಿ ಭಾಷೆಯ ಕುರಿತಾದ ತಮ್ಮ ಹಕ್ಕು ಸ್ಥಾಪಿಸುವ ಉದ್ದೇಶದಿಂದ ‘ಆಲ್ ಪಾರ್ಟಿ ಸ್ಟೇಟ್ ಲಾಂಗ್ವೇಜ್ ಕಮಿಟಿ’ ರೂಪಿತವಾಯಿತು.

ಈ ವಿರುದ್ಧ 1952ರ ಫೆಬ್ರವರಿ 20-21ರಂದು ದೇಶವ್ಯಾಪಿ ಚಳುವಳಿ ಮಾಡುವುದಾಗಿ ಈ ಸಮಿತಿ ನಿರ್ಧರಿಸಿತು. 21ರಂದು ಬಜೆಟ್ ಮಂಡನೆಯಿದ್ದ ಕಾರಣ ಈ ದಿನಗಳನ್ನು ಅವರು ಆರಿಸಿಕೊಂಡರು. ಇದರಲ್ಲಿ ವಿದ್ಯಾರ್ಥಿಗಳು, ನಾಯಕರು, ಸಾಹಿತಿಗಳು ಎಲ್ಲರೂ ಸೇರಿದ್ದರು. ಆದರೆ ಸರ್ಕಾರ ಇದ್ದಕ್ಕಿದ್ದಂತೆ ಚಳುವಳಿ ನಡೆಸದಂತೆ 144ನೇ ಸೆಕ್ಷನ್ ಹೇರಿತು. ಈ ಸಂದರ್ಭದಲ್ಲಿ ಮುಂದಿನ ಕ್ರಮ ನಿರ್ಧರಿಸಲು 20ರ ಸಂಜೆ ಮುಂಚೂಣಿಯಲ್ಲಿರುವವರು ಸಭೆ ಸೇರಿದರು. ಈ ಹೊತ್ತಿನಲ್ಲಿ ಪ್ರತಿಭಟನೆ ಕೈಬಿಡುವ ತೀರ್ಮಾನಕ್ಕೂ ಕೆಲವು ನಾಯಕರು ಬಂದರು. ಆದರೆ ಈಗಾಗಲೇ ಹುರುಪಿನಿಂದ ಕೆಚ್ಚಿನಿಂದ ಕೂಡಿದ್ದ ಯುವಸಮುದಾಯಕ್ಕೆ ಈ ನಿರ್ಧಾರ ಸಮ್ಮತವಾಗಲಿಲ್ಲ.

ಫೆಬ್ರವರಿ 21ರಂದು (ಬಂಗಾಳಿ ಭಾಷೆಯಲ್ಲಿ ಎಕೂಷೆ ಫೆಬ್ರವರಿ) ವಿದ್ಯಾರ್ಥಿಗಳು ಢಾಕಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಿಳಿದರು. ಬಜೆಟ್ ಮಂಡನೆಗೆಂದು ಬರುತ್ತಿದ್ದ ನಾಯಕರು ಪ್ರವೇಶಿಸದಂತೆ ದ್ವಾರದಲ್ಲಿ ತಡೆ ಒಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರು ಸರ್ಕಾರದ ಆದೇಶದಂತೆ ಗುಂಡು ಹಾರಿಸತೊಡಗಿದರು. ಈ ಗುಂಡಿನ ದಾಳಿಗೆ ಹಲವಾರು ವಿದ್ಯಾರ್ಥಿಗಳು ಬಲಿಯಾದರು.

ಪ್ರಭುತ್ವದ ಹೇರಿಕೆ, ಕ್ರೌರ್ಯವನ್ನು ನೇರವಾಗಿ ಬಯಲಿಗೆಳೆದ ಈ ಘಟನೆ ಸ್ವಾಯತ್ತ ಬಾಂಗ್ಲಾದೇಶಕ್ಕಾಗಿ ಹೋರಾಟ ನಡೆಸಲು ದೊಡ್ಡ ಪ್ರೇರಣೆಯಾಯಿತು. ಕೊನೆಯಲ್ಲಿ 1971ರಲ್ಲಿ ಸ್ವತಂತ್ರ ಬಾಂಗ್ಲಾದೇಶ ತಲೆಯೆತ್ತಿತು.

ಈ ನೆನಪಿನಲ್ಲಿ ವಿಶ್ವಸಂಸ್ಥೆ ಫೆಬ್ರವರಿ 21ನ್ನು ಬಹುತ್ವವನ್ನು ಒಳಗುಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸುವ ದಿನವಾಗಿ ಮಾತೃಭಾಷಾ ದಿನ ಎಂದು ಘೋಷಿಸಿದೆ. ಬಹುಭಾಷಿಕ ಪರಿಸರದಲ್ಲಿ ನೆಲೆಸಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರಂತರ ಕೊಡುಕೊಳೆಯಲ್ಲಿ ನಿರತವಾಗಿರುವ ನಾವು ಬಹುತ್ವವನ್ನು ಮಾನ್ಯಮಾಡುವುದನ್ನು ಅತ್ಯಗತ್ಯವಾಗಿ ಕಲಿಯಲೇಬೇಕಾಗಿದೆ. ಮಾತೃಭಾಷಾ ದಿನ ನಮ್ಮ ಭಾಷೆ ಸಕ್ಕರೆ, ಚಿನ್ನ ಎಂದು ಕೊಂಡಾಡುವ ದಿನವಲ್ಲ ಎಂಬುದು ಈ ದಿನದ ಹಿನ್ನೆಲೆಯನ್ನು ಅರಿತರೆ ಅರ್ಥವಾಗುತ್ತದೆ. ಭಾಷಾ ಹೇರಿಕೆ, ಭಾಷಾ ಮೂಲಭಾತವಾದವನ್ನು ಕಿತ್ತೊಗೆದು ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲ ಭಾಷೆಗಳನ್ನು ಗೌರವಿಸುವ ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುವ ದಿನ ಇದು. ಈ ದಿನಕ್ಕೆ ಸಂಬಂಧಿಸಿದಂತೆ ಈ ವರ್ಷದ ಘೋಷಣಾ ವಾಕ್ಯವೂ ‘ಮಾತೃಭಾಷಾಮಾಧ್ಯಮ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ’ ಎಂದಿರುವುದು ಇಂದಿನ ತುರ್ತನ್ನು ಮತ್ತೆ ಒತ್ತಿಹೇಳುವಂತಿದೆ.