Monthly Archives: February 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-8)


– ಡಾ.ಎನ್.ಜಗದೀಶ ಕೊಪ್ಪ  


ಜಿಮ್ ಕಾರ್ಬೆಟ್ ಮೊಕಮೆಘಾಟ್‌ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳು ಕಂಡುಬಂದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆ ವಿಷಯದಲ್ಲಿ ಶಿಸ್ತು ಕಾಣಬರತೊಡಗಿತು. ಪ್ರಾರಂಭದಲ್ಲಿ ಕಾರ್ಬೆಟ್‌ಗೆ ಇದ್ದ ಒತ್ತಡಗಳು ಮರೆಯಾದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನಲ್ಲಿ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸೆಂಬರ್ ತಿಂಗಳ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್‌ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ. ತನ್ನ ಕುಟುಂಬದಲ್ಲಿ ಆಚರಿಸುತ್ತಿದ್ದ ಕ್ರಿಸ್‌ಮಸ್ ಹಬ್ಬ ಹೊರತುಪಡಿಸಿದರೆ, ಉಳಿದ ಹಿಂದೂ ಧರ್ಮದ ಹಬ್ಬಗಳಾದ ಹೋಳಿ, ಗಣೇಶಚತುರ್ಥಿ, ದೀಪಾವಳಿಯನ್ನು ಮೊಕಮೆಘಾಟ್‌ನಲ್ಲಿ ಕಾರ್ಮಿಕರ ಜೊತೆ ಆಚರಿಸುತ್ತಿದ್ದ. ಹಬ್ಬದ ದಿನಗಳಲ್ಲಿ ಕಾರ್ಮಿಕರು ಕಾಡಿನಿಂದ ಬಗೆಬಗೆಯ ಹೂ ಮತ್ತು ಎಲೆಗಳನ್ನು ತಂದು ಕಾರ್ಬೆಟ್‌ನ ಮನೆಯನ್ನು ಸಿಂಗರಿಸಿದರೆ, ಮಹಿಳೆಯರು ಮನೆಯ ಮುಂದೆ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದರು. ಕಾರ್ಮಿಕರ ಮಕ್ಕಳ ಬಗ್ಗೆ ಅಪಾರ ಪ್ರೀತಿ, ಕರುಣೆ ಹೊಂದಿದ್ದ ಕಾರ್ಬೆಟ್ ಸಾವಿರಾರು ರೂಪಾಯಿ ಖರ್ಚು ಮಾಡಿ ಸಿಹಿತಿಂಡಿಗಳ ಪೊಟ್ಟಣಗಳನ್ನು ಪೇಟೆಯಿಂದ ಕೊಂಡುತಂದು ಪ್ರತಿ ಮನೆಗೂ ಹಂಚುತ್ತಿದ್ದ. ಜಾತಿ, ಅಂತಸ್ತು ಎಂಬ ತಾರತಮ್ಯವಿಲ್ಲದೆ ಅವರು ನೀಡಿದ ಆಹಾರವನ್ನು ಹಬ್ಬದ ದಿನಗಳಲ್ಲಿ ಸೇವಿಸುತ್ತಿದ್ದ.

ತನಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಹೆಸರು ಬರಲು ಕಾರ್ಮಿಕರ ಶ್ರಮವೇ ಕಾರಣ ಎಂಬ ಅರಿವು ಕಾರ್ಬೆಟ್‌ನನ್ನು ಸದಾ ಎಚ್ಚರಿಸುತ್ತಿತ್ತು. ಹಾಗಾಗಿ ಪ್ರತಿಯೊಬ್ಬ ಕಾರ್ಮಿಕನ ಕುಟುಂಬವನ್ನು ತನ್ನ ಕುಟುಂಬದಂತೆ ಪ್ರೀತಿಸುತ್ತಿದ್ದ. ಅವನು ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ 26 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಘಟನೆಯಾಗಲಿ, ಅಥವಾ ಅವಿಧೇಯನಾಗಿ ನಡೆದುಕೊಂಡ ಸಂಗತಿಯಾಗಲಿ ಜರುಗಲಿಲ್ಲ. ಒಮ್ಮೆ ಮಾತ್ರ ಕಾರ್ಮಿಕರ ಸಂಬಳ ತಲುಪುವುದು ತಡವಾದ ಕಾರಣ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಸಿದ್ದ.

ಮೊಕಮೆಘಾಟ್‌ನಲ್ಲಿ ಕೆಲಸ ಪ್ರಾರಂಭಿಸಿದ ನಾಲ್ಕನೇ ವರ್ಷದಲ್ಲಿ ಕೇಂದ್ರ ಕಚೇರಿಯಿಂದ ಕೂಲಿಕಾರ್ಮಿಕರ ಸಂಬಳ ಬರುವುದು ತಡವಾಯಿತು. ಪ್ರತಿವಾರ ಹಣ ಪಾವತಿಸುತ್ತಿದ್ದ ಕಾರ್ಬೆಟ್ ತಾನು ಉಳಿಸಿದ್ದ ಸಂಬಳ ಮತ್ತು ಬೋನಸ್ ಹಣವನ್ನು ಕಾರ್ಮಿಕರಿಗೆ ಪಾವತಿಸುತ್ತಾ ಕೆಲಸ ಮುಂದುವರಿಸಿದ್ದ. ಹೀಗೆ ಆರು ವಾರ ಕಳೆದರೂ ಹಣ ಬರಲಿಲ್ಲ. ತನ್ನಲ್ಲಿದ್ದ ಹಣವೆಲ್ಲಾ ಖರ್ಚಾದ ನಂತರ ಏಳನೇ ವಾರ ಹಣ ಪಾವತಿಸಿರಲಿಲ್ಲ. ಆದರೂ ಎಲ್ಲಾ ಕಾರ್ಮಿಕರು ಕೆಲಸ ಮುಂದುವರಿಸಿದ್ದರು.

ಕಲ್ಲಿದ್ದಲು ತುಂಬುವ ಕಾರ್ಮಿಕನಾಗಿ ಕೆಲಸ ಮಾಡುತಿದ್ದ ಒಬ್ಬ ಮುಸ್ಲಿಂ ವೃದ್ದನೊಬ್ಬ ನಾಲ್ಕನೇ ದಿನದ ರಾತ್ರಿ ಒಂದಿಷ್ಟು ಹಣ ಕೇಳಲು ಕಾರ್ಬೆಟ್ ನಿವಾಸಕ್ಕೆ ಬಂದ. ಅದು ಊಟದ ಸಮಯವಾದ್ದರಿಂದ ಸಾಹೇಬರು ಊಟ ಮಾಡಲಿ ಎಂದು ಹೊರಗೆ ಕಾಯುತ್ತಿದ್ದ. ಸೇವಕ ಕಾರ್ಬೆಟ್ ಗೆ ಬಡಿಸುತಿದ್ದ ಊಟವನ್ನು ಗಮನಿಸಿದ ಆ ಮುಸ್ಲಿಂ ವೃದ್ದ ಸೇವಕನನ್ನು ಪ್ರಶ್ನಿಸಿದ, ಏಕೆ ಸಾಹೇಬರು ಒಂದೇ ಚಪಾತಿಯನ್ನು ಮಾತ್ರ ತಿನ್ನುತ್ತಿದ್ದಾರೆ? ಆಗ ನಿಜ ಸಂಗತಿಯನ್ನ ಬಿಚ್ಚಿಟ್ಟ ಸೇವಕ, ಸಾಹೇಬರು  ಕಳೆದ ಆರುವಾರಗಳಿಂದ ತಮ್ಮಲ್ಲಿದ್ದ ಹಣವನ್ನು ಕೂಲಿ ರೂಪದಲ್ಲಿ ನಿಮಗೆಲ್ಲಾ ಪಾವತಿಸಿಬಿಟ್ಟಿದ್ದಾರೆ. ಕಛೇರಿಯಿಂದ ಕಳೆದ ಒಂದೂವರೆ ತಿಂಗಳಿಂದ ಹಣ ಬಂದಿಲ್ಲ. ಮನೆಗೆ ದಿನಸಿ ಸಾಮಾನು ತರಲು ಅವರ ಬಳಿ ಹಣವಿಲ್ಲ. ಹಾಗಾಗಿ ಬೆಳಿಗ್ಗೆ, ರಾತ್ರಿ ಒಂದೊಂದೇ ಚಪಾತಿ ಸೇವಿಸುತ್ತಿದ್ದಾರೆ ಎಂದು ಎಲ್ಲವನ್ನೂ ವಿವರಿಸಿದ. ಕೂಲಿ ಹಣ ಕೇಳಲು ಬಂದಿದ್ದವ ಏನೂ ಮಾತಾಡದೇ ಮನೆಗೆ ಹಿಂತಿರುಗಿದ.

ಊಟ ಮಾಡಿ ಮನೆಯ ಹೊರಗೆ ಆರಾಮ ಕುರ್ಚಿಯಲ್ಲಿ ಸಿಗರೇಟು ಸೇದುತ್ತಾ ಕುಳಿತಿದ್ದ ಕಾರ್ಬೆಟ್ ಎದುರು ಆ ವೃದ್ದ ಮತ್ತೆ ಪ್ರತ್ಯಕ್ಷನಾದ. ಅವನ ಕೈಯಲ್ಲಿ ಕರವಸ್ತ್ರದಿಂದ ಮುಚ್ಚಿದ್ದ ಕೆಲವು ವಸ್ತುಗಳಿದ್ದವು. ಕಾರ್ಬೆಟ್ ಎದುರು ಕೈಜೋಡಿಸಿ ನಿಂತ ಆ ಮುಸ್ಲಿಂ ವೃದ್ದ, “ಮಹಾರಾಜ್ ನಿಮ್ಮ ಸೇವಕನಿಂದ ಎಲ್ಲಾ ವಿಷಯ ತಿಳಿಯಿತು. ಸಾಹೇಬ್, ನಾವು ಹಸಿವಿನಲ್ಲಿ ಹುಟ್ಟಿದವರು, ಹಸಿವಿನಲ್ಲಿ ಬದುಕಿದವರು, ಹಸಿವಿನಲ್ಲೆ ಸಾಯುವ ಮಂದಿ. ಇದು ನಮಗೆ ಹೊಸದಲ್ಲ. ಆದರೆ, ನೀವು ಈ ರೀತಿ ಇರುವುದನ್ನ ಸಹಿಸಲು ಸಾದ್ಯವಾಗುತ್ತಿಲ್ಲ. ತೆಗೆದುಕೊಳ್ಳಿ ಇದರಲ್ಲಿ ನನ್ನ ಹೆಂಡತಿಯ ಒಡವೆಗಳಿವೆ. ಇವುಗಳನ್ನ ಮಾರಿ ಹಾಕಿ ಮನೆಗೆ ಸಾಮಾನು ತಂದು ಊಟ ಮಾಡಿ ನೆಮ್ಮದಿಯಿಂದ ಇರಿ,” ಎನ್ನುತ್ತಾ ಕಾರ್ಬೆಟ್‌ನ ಕಾಲು ಬಳಿ ಕಣ್ಣೀರಿಡುತ್ತಾ ಕುಳಿತು ಬಿಟ್ಟ.. ಆ ಬಡ ಕೂಲಿ ಕಾರ್ಮಿಕನ ಮಾತು ಕೇಳಿದ ಕಾರ್ಬೆಟ್ ಕಣ್ಣಲ್ಲೂ ಸಹ ನೀರು ಹರಿಯತೊಡಗಿತು. ಕಾರ್ಮಿಕನನ್ನು ಹಿಡಿದೆತ್ತಿ ನಿಲ್ಲಿಸುತ್ತಾ ಇನ್ನೆರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಹೋಗು ಎಂದು ಸಮಾಧಾನ ಹೇಳಿ ಕಳಿಸಿದ. ಕಾರ್ಬೆಟ್ ಆ ಕ್ಷಣದಲ್ಲಿ ಟೆಲಿಗ್ರಾಫ್ ಕಚೇರಿಗೆ ತೆರಳಿ,  ಉಳಿದ ಎಲ್ಲಾ ಲೈನ್ ಗಳನ್ನು ತೆರವುಗೊಳಿಸಿ ಈ ಸಂದೇಶವನ್ನು ಗೋರಖ್‌ಪುರಕ್ಕೆ ತ್ವರಿತವಾಗಿ ರವಾನಿಸಿ ಎಂದು ಸಿಬ್ಬಂದಿಗೆ ಸೂಚನೆ ಕೊಟ್ಟ. ಮುಂದಿನ 48 ಗಂಟೆಗಳ ಒಳಗಾಗಿ ಕಾರ್ಮಿಕರ ವೇತನ ಪಾವತಿಸದಿದ್ದರೆ, ಕೆಲಸ ಸ್ಥಗಿತಗೊಳಿಸಲಾಗುವುದು ಅಲ್ಲದೆ ಕೆಲಸಕ್ಕೆ ರಾಜಿನಾಮೆ ನೀಡಲಾಗುವುದು ಎಂಬ ಎಚ್ಚರಿಕೆಯ ಸಂದೇಶ ಕಳಿಸಿ ಮನೆಗೆ ಬಂದು ಮಲಗಿದ. ಮಧ್ಯ ರಾತ್ರಿಯ ವೇಳೆಗೆ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಮೂಲಕ ನಾಳೆಯೇ ಹಣ ರವಾನಿಸಲಾಗುತ್ತದೆ ಎಂಬ ಮರು ಸಂದೇಶ ಕೂಡ ಕಾರ್ಬೆಟ್‌ಗೆ ಬಂದು ತಲುಪಿತು. ನಿರಿಕ್ಷೆಯಂತೆ ಮಾರನೇ ದಿನ ಸಂಜೆ ವೇಳೆಗೆ ಇಬ್ಬರು ಬಂದೂಕುದಾರಿ ಪೋಲಿಸರ ರಕ್ಷಣೆಯೊಂದಿಗೆ ಗೋರಖ್‌ಪುರದಿಂದ ಬಂದಿದ್ದ ಹಣದ ಪೆಟ್ಟಿಗೆಯನ್ನು ರೈಲ್ವೆ ಸಿಬ್ಬಂದಿ ಹೊತ್ತು ತಂದು ಕಾರ್ಬೆಟ್ ಗೆ ತಲುಪಿಸಿದರು.

ದಿನ ನಿತ್ಯ ಬಡಕೂಲಿ ಕಾರ್ಮಿಕರ ಬವಣೆಗಳನ್ನ ನೋಡುತ್ತಾ, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಾ ಬದುಕಿದ್ದ ಕಾರ್ಬೆಟ್ ಗೆ ಕಾರ್ಮಿಕರ ಪರವಾಗಿ ತಾನು ಸೇವೆ ಸಲ್ಲಿಸುತ್ತಿದ್ದ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ಮಾಡದೇ ವಿಧಿ ಇರಲಿಲ್ಲ. ಇದೊಂದು ಘಟನೆಯಿಂದ ಎಚ್ಚೆತ್ತ ಇಲಾಖೆ ಮುಂದಿನ 18 ವರ್ಷಗಳಲ್ಲಿ ಹಣ ಪಾವತಿಸಲು ಎಂದೂ ವಿಳಂಬ ಮಾಡಲಿಲ್ಲ.

ತನ್ನಲ್ಲಿ ಕೂಲಿ ಕೆಲಸ ಕೇಳಿಕೊಂಡು ಯಾರೇ ಬರಲಿ, ಅವರ ಹಿನ್ನೆಲೆಯನ್ನು ವಿಚಾರಿಸಿ, ಕೆಲಸ ಕೊಡುವುದು, ಕಷ್ಟದಲ್ಲಿದ್ದರೆ ಸಹಾಯ ಮಾಡುವುದು ಇವೆಲ್ಲಾ ಕಾರ್ಬೆಟ್‌ನ ದಿನಚರಿ ಮತ್ತು ಹವ್ಯಾಸಗಳಾಗಿದ್ದವು. ಅವನು ಕಾರ್ಮಿಕರ ಹಿತಾಸಕ್ತಿಗೆ ಎಷ್ಟೊಂದು ಗಮನ ನೀಡುತ್ತಿದ್ದ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮೂರು ವರ್ಷಗಳಿಂದ ಅವನಲ್ಲಿ ಬುದ್ದು ಎಂಭಾತ ಕಲ್ಲಿದ್ದಲು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದ ಅವನಿಗೆ ಕೂಲಿ ಕೆಲಸದಲ್ಲಿ ಪತ್ನಿ ಕೂಡ ಸಹಕರಿಸುತ್ತಿದ್ದಳು. ಅವನು ಸದಾ ಮೌನಿಯಾಗಿ ಚಿಂತೆಯಲ್ಲಿ ಇರುವಂತೆ ಕಾಣುತ್ತಿದ್ದ. ಅವನು ಎಂದೂ ನಕ್ಕಿದ್ದನ್ನು ಕಾರ್ಬೆಟ್ ನೋಡಿರಲೇ ಇಲ್ಲ. ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಜನವರಿವರೆಗೆ ಊರಿಗೆ ಹೋಗುತ್ತಿದ್ದ. ಈ ಬಗ್ಗೆ ಕಾರ್ಬೆಟ್‌ಗೆ ಕುತೂಹಲ ಮೂಡಿ ಮೇಸ್ತ್ರಿಯನ್ನು ವಿಚಾರಿಸಿದಾಗ ಊರಿನಿಂದ ಅಂಚೆಪತ್ರ ಬಂದ ತಕ್ಷಣ ಬುದ್ದು ಹೊರಟುಬಿಡುತ್ತಾನೆ ಎಂಬ ಮಾಹಿತಿ ಮಾತ್ರ ದೊರೆಯಿತು. ಮತ್ತೇ ಜನವರಿ ತಿಂಗಳಿನಲ್ಲಿ ಬುದ್ದು ಕೆಲಸಕ್ಕೆ ಹಾಜರಾದಾಗ ಕಾರ್ಬೆಟ್ ಅವನನ್ನು ಕರೆದು ವಿಚಾರಿಸಿದ.

ನನ್ನ ಊರಿನಲ್ಲಿ ಶ್ರೀಮಂತ ಜಮೀನುದಾರನೊಬ್ಬನಿಂದ ಅಜ್ಜ ಪಡೆದಿದ್ದ ಎರಡು ರೂಪಾಯಿ ಸಾಲಕ್ಕೆ  ಅಜ್ಜ ಮತ್ತು ನನ್ನಪ್ಪ ಜೀವನ ಪೂರ್ತಿ ಜೀತದಾಳಾಗಿ ದುಡಿದರೂ ಇನ್ನೂ ಬಡ್ಡಿ ಸೇರಿ 125 ರೂಪಾಯಿ ಬಾಕಿ ಉಳಿದಿದೆ. ನಾನು ಇಲ್ಲಿ ದುಡಿದ ಹಣದಲ್ಲಿ ಪ್ರತಿವರ್ಷ 25 ರೂ ಪಾವತಿಸುತ್ತಿದ್ದೇನೆ. ಜೊತೆಗೆ ಅವನ ಜಮೀನಿನಲ್ಲಿ ಫಸಲು ಕೊಯ್ಲಿಗೆ ಬಂದಾಗ  ನಾನು ಹೋಗಿ ಒಕ್ಕಣೆ ಮಾಡಿಕೊಟ್ಟು ಬರಬೇಕು. ಇದಕ್ಕಾಗಿ ಪ್ರತಿ ವರ್ಷ ನನ್ನಿಂದ ಕೆಲವು ಪತ್ರಕ್ಕೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುತ್ತಾನೆ ಎಂದು ಬುದ್ದು ತನ್ನ ಬದುಕಿನ ವೃತ್ತಾಂತವನ್ನು ವಿವರಿಸಿದ,

ಮುಂದಿನ ಬಾರಿ ಪತ್ರ ಬಂದಾಗ ನನಗೆ ತಂದು ತೋರಿಸು ನೀನು ಊರಿಗೆ ಹೋಗುವ ಅವಶ್ಯಕತೆಯಿಲ್ಲ, ಹಣವನ್ನು ನಾನು ಚುಕ್ತಾ ಮಾಡುತ್ತೇನೆ ಎಂದು ಕಾರ್ಬೆಟ್ ತಿಳಿಸಿದ. ಒಂಬತ್ತು ತಿಂಗಳು ಕಳೆದ ನಂತರ ಎಂದಿನಂತೆ ಅವನ ಊರಿನಿಂದ ಪತ್ರ ಬಂತು. ಕಾರ್ಬೆಟ್ ಪತ್ರದಲ್ಲಿದ್ದ ಶ್ರೀಮಂತ ಜಮೀನುದಾರನ ವಿಳಾಸ ಪತ್ತೆ ಹಚ್ಚಿ ಅವನಿಗೆ ವಕೀಲನ ಮೂಲಕ ನೋಟೀಸ್ ಜಾರಿ ಮಾಡಿದ. ಆ ಶ್ರೀಮಂತ ಜಮೀನುದಾರ ಕಾರ್ಬೆಟ್‌ನನ್ನು ಎದುರಿಸಲಾರದೆ, ನೋಟೀಸ್ ನೀಡಿದ ವಕೀಲನ ಮನೆಗೆ ಹೋಗಿ ಅವನನ್ನು ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ. ಜೊತೆಗೆ ಹಣ ಬಾಕಿ ಇರುವುದರ ಬಗ್ಗೆ ಬುದ್ದು ಪ್ರತಿವರ್ಷ ಬರೆದು ಕೊಟ್ಟಿದ್ದ ಕಾಗದ ಪತ್ರಗಳನ್ನು ತೋರಿಸಿದ.

ಕಾರ್ಬೆಟ್ ಬಳಿ ಬಂದ ವಕೀಲ ಎಲ್ಲವನ್ನು ವಿವರಿಸಿದಾಗ ಅವನ ಬಾಕಿ ಹಣ 125 ರೂಪಾಯಿ, ಅದಕ್ಕೆ ಬಡ್ಡಿ 50 ರೂಪಾಯಿ ಮತ್ತು ವಕೀಲನ ಸೇವಾಶುಲ್ಕ 50 ರೂಪಾಯಿ ಎಲ್ಲವನ್ನು ಪಾವತಿಸಿ, ಬುದ್ದುವಿನ ಕಾಗದ ಪತ್ರವನ್ನು ಪಡೆಯುವಂತೆ ಸೂಚಿಸಿದ. ಜಮಿನುದಾರ ಎಲ್ಲಾ ಪತ್ರಗಳನ್ನು ಹಿಂತಿರುಗಿಸಿದ. ಆದರೆ, ಪ್ರತಿವರ್ಷ ಮೂರು ತಿಂಗಳು ಪುಕ್ಕಟೆ ದುಡಿಯುವ ಕುರಿತಂತೆ ಬರೆದುಕೊಟ್ಟಿದ್ದ ಕರಾರು ಪತ್ರವನ್ನು ಮಾತ್ರ ತನ್ನಲ್ಲೆ ಉಳಿಸಿಕೊಂಡ. ಇದರಿಂದ ಸಿಟ್ಟಿಗೆದ್ದ ಕಾರ್ಬೆಟ್ ಅವನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ ಮೊಕೊದ್ದಮೆ ದಾಖಲಿಸಿದ. ಈ ಘಟನೆಯಿಂದ ಬೆಚ್ಚಿಬಿದ್ದ ಆ ಶ್ರೀಮಂತ ತಾನೇ ಖುದ್ದು ಕಾರ್ಬೆಟ್ ಬಳಿ ಬಂದು ಪತ್ರ ಒಪ್ಪಿಸಿಹೋದ.

ಆ ದಿನ ಸಂಜೆ ಕಾರ್ಬೆಟ್ ಬುದ್ದು ಮತ್ತು ಅವನ ಪತ್ನಿಯನ್ನು ಮನೆಗೆ ಕರೆಸಿ ಇನ್ನು ಮುಂದೆ ನೀವು ಸ್ವತಂತ್ರರಾಗಿದ್ದೀರಿ. ನೆಮ್ಮದಿಯಿಂದ ಬಾಳಿ ಎನ್ನುತ್ತಾ ಅವರ ಎದುರು ಸಾಲಪತ್ರಗಳನ್ನು ಸುಡಲು ಆರಂಭಿಸಿದ. ಕಾರ್ಬೆಟ್‌ನ ಪ್ರಯತ್ನಕ್ಕೆ ತಡೆಯೊಡ್ಡಿದ ಬುದ್ದು, “ಬೇಡ ಮಹರಾಜ್ ಅವುಗಳನ್ನು ಸುಡಬೇಡಿ ನಮ್ಮ ಸಾಲ ತೀರುವ ತನಕ ಅವುಗಳು ನಿಮ್ಮಲ್ಲಿರಲಿ, ಇನ್ನು ಮುಂದೆ ನಾವು ನಿಮ್ಮ ಜೀತದಾಳುಗಳು,” ಎನ್ನುತ್ತಾ ಒದ್ದೆ ಕಣ್ಣುಗಳಲ್ಲಿ ಕೈ ಮುಗಿದು ನಿಂತ. ಕಾರ್ಬೆಟ್ ಅವನ ಹೆಗಲ ಮೇಲೆ ಕೈ ಇರಿಸಿ, “ಬುದ್ದು, ನೀನು ನನ್ನ ಹಣವನ್ನು ತೀರಿಸುವುದು ಬೇಕಾಗಿಲ್ಲ. ನಿನ್ನ ಮುಖದಲ್ಲಿ ನಗು ಕಂಡರೆ ಸಾಕು, ನನ್ನ ಸಾಲ ತೀರಿದಂತೆ,” ಎಂದು ನುಡಿಯುತ್ತಿದ್ದಂತೆ  ಕಲ್ಲಿದ್ದಲು ಮಸಿಯಿಂದ ಕಪ್ಪಾಗಿದ್ದ ಬುದ್ದುವಿನ ಮುಖವನ್ನು ಅವನ ಕಣ್ಣೀರು ತೋಯಿಸಿಬಿಟ್ಟಿತು.

ಕಾಲಿಗೆ ನಮಸ್ಕಾರ ಮಾಡಿ ಮನೆಯತ್ತ ತೆರಳುತ್ತಿದ್ದ ಬುದ್ದು ಹಾಗೂ ಅವನ ಪತ್ನಿಯನ್ನು ನೋಡುತ್ತಾ ಕುಳಿತ ಕಾರ್ಬೆಟ್, ಈ ನನ್ನ ಭಾರತದಲ್ಲಿ ಬಡತನವಿದೆ, ಆದರೆ, ಬಡವರಲ್ಲಿ ಹೃದಯ ಶೀಮಂತಿಕೆಯೂ ಇದೆ ಇದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತು ಪಡಿಸಲಿ? ಎನ್ನುವ ಪ್ರಶ್ನೆಯನ್ನು ಮನಸ್ಸಿಗೆ ಹಾಕಿಕೊಳ್ಳುತ್ತಾ ತುಟಿಗೆ ಸಿಗರೇಟು ಇಟ್ಟು ಬೆಂಕಿ ಹಚ್ಚಿದ.

(ಮುಂದುವರಿಯುವುದು)

ಅಸಹಜ ನಿರೀಕ್ಷೆಗಳ ಮಧ್ಯೆ ಜನಶ್ರೀ

-ಭೂಮಿ ಬಾನು

ಸದ್ಯದ ಮಟ್ಟಿಗೆ ಒಂದಿಷ್ಟು ಸೆನ್ಸಿಬಲ್ ಚಾನೆಲ್ ಎನ್ನಬಹುದಾದ ಜನಶ್ರೀ ಸುದ್ದಿ ವಾಹಿನಿ ಇಂದು (ಫೆಬ್ರವರಿ 18) ಒಂದು ವರ್ಷ ಪೂರೈಸಿದೆ. ಚಾನೆಲ್‌ನ ಕ್ರಿಯಾಶೀಲ ಹಾಗೂ ಸೂಕ್ಷ್ಮ ಮನಸ್ಸಿನ  ಸಿಬ್ಬಂದಿಗೆ ಅಭಿನಂದನೆಗಳು.

ಹೇಳಿ ಕೇಳಿ ಚಾನೆಲ್ ಅನ್ನು ಆರಂಭಿಸಿದ್ದು ಗಣಿ ವ್ಯವಹಾರದಲ್ಲಿ ಹಣ ಗಳಿಸಿದ್ದ ಜನಾರ್ಧನ ರೆಡ್ಡಿ. ಅವರಿಗೆ ಜ್ಯೋತಿಷ್ಯದ ಬಗ್ಗೆಯಾಗಲಿ, ವೈಜ್ಞಾನಿಕ ಚಿಂತನೆಯ ಅಗತ್ಯತೆಯಾಗಲಿ, ಸ್ಪಷ್ಟ ಆಲೋಚನೆಗಳೇನೂ ಇರಲಿಲ್ಲ. ದೈವದ ಬಗ್ಗೆ ಅತೀವ ಭಕ್ತಿ ಇತ್ತು, ಆದರೆ ಸಾರ್ವಜನಿಕ ಸಂಪತ್ತಿನ ದುರಪಯೋಗದ ಬಗ್ಗೆ ಮುಜುಗರ ಇರಲಿಲ್ಲ. ಇಂತಹವರಿಂದ ಒಂದು ಮೂಢನಂಬಿಕೆ ವಿರೋಧಿ ಸುದ್ದಿವಾಹಿನಿಯೊಂದನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ಅದರಲ್ಲೂ ಪೈಪೋಟಿಯಲ್ಲಿರುವ ಇತರೆ ಚಾನೆಲ್ ಗಳು ಜ್ಯೋತಿಷ್ಯ, ಅಂಧ ಶ್ರದ್ಧೆಗಳನ್ನು ಢಾಳಾಗಿ ತೋರಿಸಿ ನೋಡುಗರನ್ನು ಆಕರ್ಷಿಸುತ್ತಿರುವಾಗ ಒಂದು ವರ್ಷದ ಹಿಂದೆ ಆರಂಭವಾದ ಚಾನೆಲ್  ಭಿನ್ನವಾಗಿರಬೇಕೆಂಬ ನಿರೀಕ್ಷೆಯೇ ಅಸಹಜವಾಗಿತ್ತು.

ಆದರೆ ಚಾನೆಲ್ ಭಿನ್ನವಾಗಿಯೇ ಹೊರಬಂತು. ಅದಕ್ಕೆ ಕಾರಣ ಮಾಲಿಕರಲ್ಲ, ಕ್ರಿಯಾಶೀಲ ಸಿಬ್ಬಂದಿ. ರಾಶಿ ಭವಿಷ್ಯ, ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ.…ತಲೆದಂಡದಂತಹ ಕಾರ್ಯಕ್ರಮಗಳನ್ನು ಇವರು ಪ್ರಸಾರ ಮಾಡಲಿಲ್ಲ. ಗ್ರಹಣದ ಸಂದರ್ಭಗಳಲ್ಲೂ ಜ್ಯೋತಿಷ್ಯದ ಜೊತೆ ವೈಜ್ಞಾನಿಕ ಚಿಂತನೆಯನ್ನು ಮುಖಾಮುಖಿಯಾಗಿಸಿದರು. ನಿನ್ನೆ (ಫೆ.17) ಕೂಡ ರೈಸ್ ಪುಲ್ಲಿ ಯಿಂದ ಮೋಸ ಹೋಗುವವರನ್ನು ಎಚ್ಚರಗೊಳಿಸಲು ಒಂದು ಉತ್ತಮ ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಜನಶ್ರೀಗೆ ಸೇರುತ್ತದೆ.

ಟಿ.ಆರ್.ಪಿ ಗಳಿಕೆಯಲ್ಲಿ ಜನಶ್ರೀ ಯಾವ ಸ್ಥಾನದಲ್ಲಿದೆಯೋ ಹೊರ ಜಗತ್ತಿಗೆ ಅದು ಗೊತ್ತಾಗುವುದಿಲ್ಲ. ಗೊತ್ತಾದರೂ, ಅದು ಕೆಲವೇ ವರ್ಗಗಳಿಗೆ ಸೀಮಿತವಾದ ಮಾಹಿತಿಯಾಗಿ ಉಳಿದುಬಿಡುತ್ತದೆ. ವಿಭಿನ್ನ, ವಿಶಿಷ್ಟವಾದ ಅನೇಕ ಕಾರ್ಯಕ್ರಮಗಳು ಈ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿವೆ. ಒಂದು ಸಿನಿಮಾ ಕತೆ, ಈಗ ನಾನು, ಒಂದೊಳ್ಳೆ ಕೆಲಸ, ಜನಶ್ರೀ ತನಿಖೆ, ಡೆಡ್ ಲೈನ್… ಕೆಲವು ಉದಾಹರಣೆಗಳಷ್ಟೆ.

ಹಾಗಂತ ಚಾನೆಲ್ ಎಲ್ಲಾ ಲೋಪಗಳಿಂದ ಮುಕ್ತ ಎಂದೇನಲ್ಲ. ಬಳ್ಳಾರಿ ಗಣಿ ಸುದ್ದಿಗಳು ಗೌಣವಾಗಿ ಬಿತ್ತರಗೊಳ್ಳುತ್ತವೆ. ಚಾನೆಲ್ ಮಾಲಿಕರು ಜೈಲಿಗೆ ಹೋದದ್ದು ಸುದ್ದಿಯಾದರೂ, ಯಡಿಯೂರಪ್ಪನ ಜೈಲು ಸಹವಾಸ ಅಥವಾ ಶ್ರೀರಾಮುಲು ಗೆಲುವಿನ ಸುದ್ದಿಯಷ್ಟಲ್ಲ.

ಗುಂಡಿಗಳಿರುವ ರಸ್ತೆ, ಹಾಳಾದ ಸೇತುವೆ, ತಲುಪದ ಪಿಂಚಣಿ, ಅನರ್ಹರಿಗೆ ವಿಶ್ವವಿದ್ಯಾನಿಲಯಗಳು ಹಾಕಿದ ಮಣೆ…ಹೀಗೆ ಅನೇಕ ಸುದ್ದಿಗಳಾಗುತ್ತವೆ. ಆದರೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನಿಂತು ನೋಡಿದಾಗ ಇನ್ನೂ ಶೋಷಣೆ ಇದೆ. ಜಾತಿ ಜಾತಿಗಳ ನಡುವಿನ ಸೇತುವೆ ಶಿಥಿಲಗೊಂಡಿದೆ. ದಲಿತರು, ಹಿಂದುಳಿದವರು ಸಾಗಬೇಕಾದ ಪ್ರಗತಿ ಪಥದಲ್ಲಿ ಗುಂಡಿಗಳೇ ಹೆಚ್ಚು. ಅತ್ತ ಕಡೆಯೂ ಒಂದಿಷ್ಟು ಗಮನ ಹರಿಸಬೇಕಿದೆ. ಅಥವಾ ಈ ನಿಟ್ಟಿನಲ್ಲಿ ಎಷ್ಟೇ ಗಮನ ಹರಿಸಿದರೂ ಕಡಿಮೆಯೇ.

ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

– ಸದಾನಂದ ಕೋಟ್ಯಾನ್

ಮಂಗಳೂರಿನಲ್ಲಿ ಪತ್ರಿಕಾ ಭವನದ ಮೂರನೇ ಮಹಡಿ ಉದ್ಘಾಟನೆ ಆಗಿದೆ. ಕರಾವಳಿಯವರೇ ಆದ ಮುಖ್ಯಮಂತ್ರಿ ಸದಾನಂದ ಗೌಡರು ಭವನ ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ರಾಜ್ಯಾಂಗಕ್ಕೆ ದಾಸನಾಗಿರುವುದಕ್ಕೆ ಇಡೀ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂಬಂತೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತುಂಬ ರಾಜಕಾರಣಿಗಳು. ಅವರ ಅಕ್ಕಪಕ್ಕದಲ್ಲಿ ರಾಜಕಾರಣಿಗಳು ನೀಡಿದ ಕೊಡುಗೆಯನ್ನು ಪ್ರಶಂಸಿಸುವ ಆಸ್ಥಾನ ಭಟರ ಪಾತ್ರಧಾರಿಗಳಾಗಿ ಪರಿವರ್ತನೆ ಹೊಂದಿದ ಪತ್ರಕರ್ತರು. ಇಡೀ ಸಮಾರಂಭ ಮಂಗಳೂರಿನಲ್ಲಿ ಮಾಧ್ಯಮ ಎತ್ತ ಸಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿತ್ತು.

ಸೋರುತ್ತಿರುವ ಸ್ಥೈರ್ಯ, ರಾಜ್ಯಾಂಗ ಮತ್ತು ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ ಸಾಮರ್ಥ್ಯ ಕಳೆದುಕೊಂಡ ಲೇಖನಿಗಳಿಗೆ ಪ್ರಸ್ತುತ ಅಗತ್ಯವಾಗಿ ಶಕ್ತಿ ತುಂಬಬೇಕಾಗಿದೆ. ಪತ್ರಿಕಾ ಭವನದಲ್ಲಿ ಅಪಾರ ಹಣವಿದೆ. ದೇಶದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಪತ್ರಕರ್ತರು ಇದ್ದಾರೆ. ಅವರ ಸ್ಫೂರ್ತಿಯ ಗೊಡವೆಗೆ ಹೋಗದ, ಲೋಕಲ್ ದಾಸ್ಯಕ್ಕೆ ಶರಣಾದ ಪತ್ರಕರ್ತರು ಭವನದ ನೆಪದಲ್ಲಿ ಮತ್ತಷ್ಟು ಕೆಳಗಿಳಿದರು. ಅದಕ್ಕೆ ಪಕ್ಕಾ ಸಾಕ್ಷಿ ಉದ್ಘಾಟನಾ ಆಹ್ವಾನ ಪತ್ರದಲ್ಲಿರುವ ಕಳಂಕಿತ ಶಾಸಕರೊಬ್ಬರ ಹೆಸರು.

ಹಾಗೆ ನೋಡಿದರೆ ಮಂಗಳೂರಿನ ಪತ್ರಕರ್ತ ಗೆಳೆಯರಿಗೆ ಈಗ ಕಡು ಕಷ್ಠದ ಕಾಲ. ಅವರನ್ನು ಕಷ್ಟದಿಂದ ಪಾರು ಮಾಡುವ ಕೃಷ್ಣಣ್ಣ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು ಈ ನೀಲಿಚಿತ್ರದ ಪೊಲೀ ಹುಡುಗನ ಕೃಷ್ಣ ಲೀಲೆಗಳನ್ನು ವರದಿ ಮಾಡುತ್ತಾ ಛೀ ಥೂ ಎಂದು ಉಗಿಯುತ್ತಿದ್ದರೆ ಮಂಗಳೂರಿನ ಮಾಧ್ಯಮದ ಗೆಳೆಯರು ತಮ್ಮ ಪತ್ರಕರ್ತರ ಸಂಘದ ಮೂರನೇ ಮಹಡಿಯ ಸಭಾಂಗಣದ ಉದ್ಘಾಟಣೆಗೆ ಕೃಷ್ಣ ಲೀಲೆ ಬಹಿರಂಗಗೊಂಡ ಮರು ದಿವಸವೇ ಕಾರ್‍ಯಕಾರಿ ಸಮಿತಿಯ ಸಭೆ ಸೇರಿ ಆಹ್ವಾನಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಬಹಳ ನೋವಿನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಕೃಷ್ಣ ಪಾಲೇಮಾರ್ ಹೆಸರಿನ ಕೆಳಗೆ ನಮೂದಿಸಿದ್ದಾರೆ. ನೀಲಿಚಿತ್ರ ಸರಬರಾಜುದಾರ ಎಂದು ಇಡೀ ರಾಜ್ಯ ಮತ್ತು ದೇಶದ ಜನತೆ ಟೀಕಿಸುತ್ತಿದ್ದರೆ ಮಂಗಳೂರಿನ ಕಾರ್‍ಯನಿರತ ಪತ್ರಕರ್ತರಿಗೆ ಕೃಷ್ಣ ಜೆ ಪಾಲೇಮಾರ್ “ಮುಖ್ಯ ಅತಿಥಿ”. ಅಷ್ಟು ಮಾತ್ರವಲ್ಲದೆ ತಾವು ಕೆಲಸ ಮಾಡುವ ಮಾಧ್ಯಮಗಳಲ್ಲಿ ತಮ್ಮ ಋಣ ತೀರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷ್ಣಣ್ಣನಿಗೆ ಮೊಬೈಲ್ ಬಳಸಲೇ ಗೊತ್ತಿಲ್ಲ, ಯಾರೋ ಅಪಾಪೋಲಿಗಳು ಕಳುಹಿಸಿರುವ ಎಂಎಂಎಸ್ ಎಂದು ವೈಭವೀಕರಿಸಿ ಬರೆಯುವುದರ ಜೊತೆಗೆ ಕೃಷ್ಣಣ್ಣ ನೈತಿಕ ಹೊಣೆ ಹೊತ್ತು (ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹುದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದಂತೆ) ರಾಜೀನಾಮೆ ನೀಡಿದ್ದಾರೆ ಎಂದು ಹುತಾತ್ಮ ಪಟ್ಟವನ್ನು ಕಟ್ಟಲು ಹೆಣಗಾಡಿ ನಗೆಪಾಟೀಲಿಗೀಡಾಗುತ್ತಿದ್ದಾರೆ.

ಹೀಗೆ ಮಂಗಳೂರು ಪತ್ರಕರ್ತರ ಕಾರುಬಾರು ಪಟ್ಟಿ ಮಾಡುವುದಾದರೆ :

  • ಇಡೀ ಕರ್ನಾಟಕ ರಾಜ್ಯದಲ್ಲಿ ಕೆಐಎಡಿಬಿ ಹಗರಣಗಳು ಹೊರಬೀಳುತ್ತಿದ್ದರೆ ಮಂಗಳೂರಿನ ಪತ್ರಕರ್ತರು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
  • ವರದಿಗಾರಿಕೆಯಲ್ಲಿ ಪ್ರಾಯೋಜಕರತ್ತಲೇ ನಿಷ್ಠೆ ಹೊರತು ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಿಲ್ಲ
  • ನೈತಿಕ ಪೊಲೀಸ್‌ಗಿರಿಗೆ ಸದಾ ಬೆಂಬಲಿಸುತ್ತಿದ್ದ ಮಾಧ್ಯಮ, ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಆರಂಭಿಸಿದ ನಂತರವಷ್ಟೇ ಬಹಿರಂಗ ಬೆಂಬಲವನ್ನು ನಿಲ್ಲಿಸಿ, ನಿಜವಾದ ಸುದ್ದಿಯತ್ತ ಪ್ರಾಮುಖ್ಯತೆ ಕೊಟ್ಟರು.
  • ಬ್ರಹ್ಮಕಲಶ, ನಾಗಮಂಡಲಗಳ ಜಾಹೀರಾತಿಗೇ ಕಾಯುವ ಪತ್ರಿಕೆಗಳು ದೇವರ ಆರಾಧನೆಗಿಂತಲೂ ಜಾಹೀರಾತು ಆರಾಧನೆಗೇ ಒತ್ತು ಕೊಡುತ್ತಿರುವುದು ಇಂದಿಗೂ ವಾಸ್ತವ.

ಇನ್ನು  ಕೃಷ್ಣ ಜೆ. ಪಾಲೇಮಾರ್ ಕೃಪಾಪೋಷಿತ ಮಾಫಿಯಾಗಳ ವಿಚಾರ ಕೇಳಬೇಕೇ? ನಗರದಲ್ಲಿರುವ ಅಕ್ರಮ ಮಾಲ್ ಒಂದರ ಪಾಲುದಾರರೊಬ್ಬರಿಗೆ ಪಾಲೇಮಾರ್ ಪರವಾದ ಪ್ರತಿಭಟನೆ ಮಾಡಲು ಐಡಿಯಾ ಕೊಟ್ಟವರೂ ಪತ್ರಕರ್ತರು. ನಾವೇ ನಮ್ಮಷ್ಟಕ್ಕೆ ಬರೆದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ, ನಮ್ಮ ವರದಿಗೆ ಪೂರಕವಾಗಿ ನಿಮ್ಮ ದ್ವನಿಯೂ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಪತ್ರಕರ್ತರದ್ದು. ಬಳ್ಳಾರಿಯಿಂದ ಗಣಿ ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಮಾಫಿಯಾದ ಹಿಂದೆ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಕೈ ಕೆಲಸ ಮಾಡಿತ್ತು. ಆದರೆ ಮಂಗಳೂರಿನ ಪತ್ರಕರ್ತರು ಈ ಬಗ್ಗೆ ವರದಿಗಳನ್ನು ಮಾಡಿದ್ದೇ ಇಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ರಾಜೀನಾಮೆಗೆ ಪಾಲೇಮಾರ್ ಕಾರಣರಾಗಿದ್ದ ಸಂಧರ್ಭ ಬೆಂಗಳೂರು ಮತ್ತು ಕಾರವಾರದಿಂದ ಪಾಲೇಮಾರ್ ವಿರುದ್ಧ ವರದಿಗಳು ಪ್ರಕಟಗೊಂಡವು. ಆದರೆ ಮಂಗಳೂರಿನ ಶಾಸಕ, ಸಚಿವರಾಗಿದ್ದ ಪಾಲೇಮಾರ್ ಬಗ್ಗೆ ಪತ್ರಕರ್ತರು ಆಸಕ್ತಿ ವಹಿಸಿ ಪ್ರಕರಣವನ್ನು ಫಾಲೋ ಮಾಡಲೇ ಇಲ್ಲ. ಕೆಐಎಡಿಬಿ ಹಗರಣ ರಾಜ್ಯಾಧ್ಯಂತ ಸುದ್ಧಿಯಾದಾಗ ಮಂಗಳೂರು ಕೆಐಎಡಿಬಿ ಹಗರಣಗಳ ಹೂರಣವನ್ನು ಕೆದಕಲು ಹೋಗಲೇ ಇಲ್ಲ. ಕೆಐಎಡಿಬಿ ಕಡತಗಳ ಯಾವುದೋ ಒಂದು ಮೂಲೆಯಲ್ಲಿ ಪಾಲೇಮಾರ್ ಹೆಸರು ಇರಲೇ ಬೇಕು ಎಂಬುದು ಕರಾವಳಿಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇರುವ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿ ಫ್ಲ್ಯಾಟು, ಲೇಔಟ್, ಮಾಲ್, ಬಹುಮಹಡಿ ಕಟ್ಟಡಗಳ ನಿರ್ಮಾಣದ ಹಿಂದೆ ಪಾಲೇಮಾರ್ ಪಾಲುದಾರಿಕೆ ಇದೆ. ಪಾಲೇಮಾರ್ ಜಮೀನಿನಲ್ಲಿ ಪತ್ತೆಯಾದ ಅಕ್ರಮ ಮರಳು ಶೇಖರಣೆಗೆ ಜಿಲ್ಲಾಧಿಕಾರಿ ತಂಡ ದಾಳಿ ಮಾಡಿದಾಗಲೂ ಮಂಗಳೂರಿನ ಕೆಲವೊಂದು ಪತ್ರಿಕೆಗಳಿಗೆ ಅದು ಸುದ್ಧಿಯೇ ಆಗಿರಲಿಲ್ಲ. ಸಚಿವರೊಬ್ಬರ ವ್ಯವಹಾರಕ್ಕೆ ಅಧಿಕಾರಿಗಳು ತಂಡ ದಾಳಿ ಮಾಡಿ ಮರಳನ್ನು ವಶಪಡಿಸಿಕೊಳ್ಳುವುದು ಸುದ್ಧಿಯೇ ಅಲ್ಲ ಎಂಬುದು ಪಾಲೇಮರ್ ಮತ್ತು ಪತ್ರಕರ್ತರ ಮಧ್ಯದ ಸಂಬಂಧವನ್ನು ಎತ್ತಿ ತೋರಿಸುತ್ತದೆ.

ಸದನದಿಂದ ಮಾಧ್ಯಮಗಳನ್ನು ಹೊರಗಿಡುವುದು ಬುದ್ಧಿವಂತಿಕೆಯಲ್ಲ, ಬಡತನ…

– ಚಿದಂಬರ ಬೈಕಂಪಾಡಿ

ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ ಎನ್ನುವ ಮಾತು ನಿಜ ಎನ್ನುವುದನ್ನು ರಾಜಕಾರಣಿಗಳು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದರೂ ಆಂತರಿಕವಾಗಿ ಅವರು ಹಾಗೆ ಯೋಚಿಸುತ್ತಾರೆಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ವಿಧಾನ ಸಭಾ ಕಲಾಪ ನಡೆಯುತ್ತಿದ್ದಾಗ `ಅಶ್ಲೀಲ ವೀಡಿಯೋ’ ನೋಡಿದರೆಂಬುದು ಜಗಜಾಹೀರಾಗುತ್ತಿದ್ದಾಂತೆಯೇ ಇಡೀ ರಾಜಕೀಯ ಕ್ಷೇತ್ರದಲ್ಲಿ ತಲ್ಲಣಗಳು ಕಾಣಿಸಿಕೊಂಡವು.

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಂಡ ದೃಶ್ಯಗಳು ಮತ್ತೆ ಮತ್ತೆ ಕಣ್ಣೊರೆಸಿಕೊಂಡು ನೋಡುವಷ್ಟರಮಟ್ಟಕ್ಕೆ ದಿಗಿಲುಂಟು ಮಾಡಿದವು. ವಿಧಾನ ಸಭೆಯ ಇತಿಹಾಸದಲ್ಲಿ ಗದ್ದಲಗಳು ನಡೆದಿವೆ, ಕುರ್ಚಿ, ಮೈಕ್ ಬಿಸಾಡಿದ ಘಟನೆಗಳು ನಡೆದಿವೆ, ಅನೇಕ ಕಾರಣಗಳಿಗಾಗಿ ಅನೇಕ ರೀತಿಯ ರಂಪಾಟಗಳು ಘಟಿಸಿವೆ, ಸದನದೊಳಗೇ ರಾತ್ರಿಯೆಲ್ಲ ಧರಣಿ ನಡೆಸಿರುವುದು, ಹೀಗೆ ಹತ್ತು ಹಲವು ಘಟನೆಗಳು ಈ ಪ್ರಜಾಮಂದಿರದೊಳಗೆ ನಡೆದಿವೆ. ಆದರೆ `ಅಶ್ಲೀಲ ವೀಡಿಯೋ’ ನೋಡಿ ಸಿಕ್ಕಿಬಿದ್ದ ಮೊಟ್ಟಮೊದಲ ಘಟನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಅಶ್ಲೀಲ ಮಾತುಗಳನ್ನು ಅಥವಾ `ಅನ್‌ಪಾರ್ಲಿಮೆಂಟರಿ’ ಪದಬಳಕೆ ಮಾಡುವುದೇ ತಪ್ಪು ಎನ್ನುವಷ್ಟರಮಟ್ಟಿಗೆ ಸದನಕ್ಕೆ ಘನತೆಯಿದೆ. ಈ ಕಾರಣಕ್ಕಾಗಿಯೇ ಅಂಥ ಪದಗಳನ್ನು ಆಡಿದವರು ಕ್ಷಮೆಯಾಚಿಸಿರುವುದು, ಅಂಥ ಪದಗಳನ್ನು ಕಡತದಿಂದ ಕಿತ್ತು ಹಾಕಿಸಿದಂಥ ನೂರಾರು ಉದಾಹರಣೆಗಳಿವೆ. ಆದರೆ `ಅಶ್ಲೀಲ ವೀಡಿಯೋ’ ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸನ್ನಡತೆಯನ್ನು ಸದನದೊಳಗಿರುವವರು ಪಾಲಿಸುವಂತೆ ಮಾಡುವುದು ಜವಾಬ್ದಾರಿಯುತವಾದ ಹಾಗೂ ಸುಧಾರಣೆಯ ಕ್ರಮ. `ಅಶ್ಲೀಲ ವೀಡಿಯೋ’ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿಲ್ಲ, ನಿಜಕ್ಕೂ ತಪ್ಪಾಗಿರುವುದು ಎಲ್ಲಿ? ಎನ್ನುವ ಶೋಧವೂ ಆಗಿಲ್ಲ. ಅತ್ಯಂತ ಆತುರವಾಗಿ ರಾಜಕಾರಣಿಗಳ ಮನಸ್ಸು (ಸಾಮೂಹಿಕವಾಗಿ ಅಲ್ಲ, ಕೆಲವೇ ಕೆಲವು) ಮಾಧ್ಯಮಗಳನ್ನು ಸದನದಿಂದ ಹೊರಗಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಆಘಾತಕಾರಿ. `ಅಶ್ಲೀಲ ವೀಡಿಯೋ’ ನೋಡಿದ ಅಪರಾಧಕಿಂತಲೂ ಘೋರವಾದ ಅಪರಾಧವನ್ನು ಮಾಡಲು ಕರ್ನಾಟಕದಲ್ಲಿ ಸಂಚು ಹೆಣೆಯುತ್ತಿರುವುದು ನಿರೀಕ್ಷಿತವೂ ಹೌದು.

ಸದನದೊಳಗೆ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ತಮಗೆ ಅನುಕೂಲಕರವಾದ ಸೂತ್ರ ಹೆಣೆದು ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದು ಎನ್ನುವ ತೀರ್ಮಾನಕ್ಕೆ ಬರುವಂಥ ದಡ್ಡ ಕೆಲಸವನ್ನು ಬುದ್ಧಿವಂತರು ಮಾಡುತ್ತಿರುವುದು ಮೂರ್ಖತನ ಮತ್ತು ಅವಿವೇಕಿತನ ಕೂಡಾ. ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳಿಗೆ ಸದನದೊಳಗೆ ಮಣೆಹಾಕಿ ಹುಳುಕನ್ನು ಎತ್ತಿತೋರಿಸುವ ಮಾಧ್ಯಮಗಳ ಕತ್ತುಹಿಚುಕುವ ದಡ್ದತನ ಇದರ ಹಿಂದಿದೆ. ಬೆಳಕೇ ಇಲ್ಲದ ಸ್ಥಿತಿಯನ್ನು ನೆನಪಿಸಿಕೊಂಡಂತಾಗುತ್ತದೆ ಮಾಧ್ಯಮಗಳಿಲ್ಲದ ಸದನವನ್ನು ಊಹಿಸುವುದು ಎನ್ನುವ ಸಾಮಾನ್ಯ ಅರಿವೂ ಇಲ್ಲದಷ್ಟು ಬುದ್ಧಿ ಬಡತನವೇ ನಮ್ಮ ರಾಜಕಾರಣಿಗಳಿಗೇ?.

ಮಾಧ್ಯಮಗಳ ಕತ್ತು ಹಿಚುಕುವ, ತಮಗೆ ಬೇಕಾದಂತೆ ಕುಣಿಸುವ ತಂತ್ರಗಳನ್ನು ದಶಕಗಳ ಹಿಂದೆಯೂ ಅನೇಕರು ರೂಪಿಸಿದ್ದರು ಮತ್ತು ತಮ್ಮದೇ ಆದ ತಂತ್ರಗಾರಿಕೆಯಿಂದ ಕಾರ್ಯಗತ ಮಾಡುವ ದುಸ್ಸಾಹಸವನ್ನು ಮಾಡಿ ಇತಿಹಾಸದ ಪುಟ ಸೇರಿಕೊಂಡಿರುವ ದೊಡ್ಡ ರಾಜಕಾರಣಿಗಳನ್ನು ಈಗಿನವರು ನೆನಪು ಮಾಡಿಕೊಂಡರೆ ಅರ್ಥವಾಗಿ ಬಿಡುತ್ತದೆ ತಾವೇನು ಮಾಡಲು ಹೊರಟಿದ್ದೇವೆಂಬುದು. ನಿರ್ಮಲವಾಗಿದ್ದ ಮಾಧ್ಯಮ ಕ್ಷೇತ್ರವನ್ನು `ಪೇಯ್ಡ್ ನ್ಯೂಸ್’ ಮೂಲಕ ಕಲುಷಿತಗೊಳಿಸಿದವರು ಯಾರು?.

ಪತ್ರಕರ್ತನ ಹುದ್ದೆ ನಿರ್ವಹಿಸಿದರೆ ಹೊಟ್ಟೆಗೇನು ಗತಿ? ಎನ್ನುವ ಕಾಲ ಬದಲಾಗಿದೆ, ರಾಜಕಾರಣಿಯ ಮನಸ್ಸಿನ ಹಿಂದೆ ಮಾಧ್ಯಮಗಳು ಮತ್ತು ಮಾಧ್ಯಮ ಮಂದಿಯ ಬುದ್ಧಿ ಕೆಲಸ ಮಾಡುವಂತಾಗಿರುವ ಸ್ಥಿತಿಗೆ ಹೊಣೆ ಯಾರು? ವೃತ್ತಿಯ ಘನತೆ ಎತ್ತಿಹಿಡಿಯುವುದೇ ಪರಮಧರ್ಮವೆಂದು ಬದುಕಿದ ಮಾಧ್ಯಮ ಮಂದಿಯ ನಿಜವಾದ ಬದುಕು ಹಿಂದೆ ಹೇಗಿತ್ತು? ಈಗ ಹೇಗಿದೆ? ಇಂಥ ಬದಲಾವಣೆಯ ಬಿರುಗಾಳಿಯ ಸುಳಿಯನ್ನು ಅರ್ಥಮಾಡಿಕೊಳ್ಳಿ.

ಸದನದೊಳಗೆ ಪ್ರವೇಶಿಸುವುದೆಂದರೆ ದೇವಮಂದಿರಕ್ಕೆ ಪ್ರವೇಶಿಸಿದಂತೆ ಎನ್ನುವ ಕಲ್ಪನೆ ಜೀವಂತವಾಗಿದೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸದನದೊಳಗಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ಮೌಲ್ಯಗಳು ಇಳಿಮುಖವಾಗುತ್ತಿವೆ ಎನ್ನುವ ಸ್ವರವನ್ನು ಹಿರಿಯ ಪತ್ರಕರ್ತರು ಬಹಿರಂಗವಾಗಿ ಎತ್ತುತ್ತಿರುವುದು. ತಮ್ಮ ಅನೂಕೂಲಕ್ಕೆ ಮಾಧ್ಯಮಗಳನ್ನು ತೆಕ್ಕೆಯಲ್ಲಿಟ್ಟುಕೊಂಡು, ಮಾಧ್ಯಮ ಮಂದಿಯನ್ನು ಮಡಿಲಲ್ಲಿಟ್ಟುಕೊಂಡು ಮುದ್ದಾಡಿದವರು ಈಗ ಕೈಚೆಲ್ಲಿದರೆ ಹೇಗೆ? ಎನ್ನುವುದು ಇಲ್ಲಿ ಪ್ರಶ್ನೆಯಲ್ಲ.

ಒಬ್ಬ ಶಾಸಕನ ಸರಿಸಮಾನಕ್ಕೆ ಅಧಿಕಾರಿಗಳು ನಿಂತು ಮಾತನಾಡುವುದೇ ತಪ್ಪು ಎನ್ನುವ ದಿನಗಳಿದ್ದವು. ಮಂತ್ರಿಯ ಜೊತೆಯಲ್ಲಿ ವೇದಿಕೆ ಹತ್ತುವುದೇ ಸಲ್ಲದು ಎನ್ನುವ ನಿರ್ಬಂಧದ ದಿನಗಳಿದ್ದವು. ಈಗ ಅಧಿಕಾರಿಗಳೇ ರಾಜಕಾರಣಿಗಳ ಹೆಗಲಮೇಲೆ ಕೈ ಹಾಕಿಕೊಂಡು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ ಅಂತಾದರೆ ಕಳೆದುಹೋಗಿರುವ ಮೌಲ್ಯಗಳನ್ನು ಎಲ್ಲಿ ಹುಡುಕುವಿರಿ?. ಮಡೆಸ್ನಾನ, ಪಂಕ್ತಿಭೇದ ಭೋಜನ, ತಲೆಮೇಲೆ ಮಲಸುರಿದುಕೊಂಡು ಪ್ರತಿಭಟಿಸುವಂಥ ಘಟನೆಗಳು ನಿಮ್ಮ ಸುತ್ತಲೂ ನಡೆಯುತ್ತಿವೆಯಲ್ಲ ಅವುಗಳ ವಿರುದ್ಧ ತಾರ್ಕಿಕವಾದ ಹೋರಾಟ ಮಾಡಲು ಸಾಧ್ಯವಾಯಿತೇ? ಖಾಸಗೀಕರಣಕ್ಕೆ ಮುಚ್ಚಿದ್ದ ಬಾಗಿಲುಗಳನ್ನು ತೆರೆದು ಎಂಥ ಅನಾಹುತವಾಗುತ್ತಿದೆ ಎನ್ನುವ ಅರಿವಾದರೂ ಬೇಡವೇ?.

ದೇಹಕ್ಕೆ ಮುಪ್ಪು ಬಂದರೆ ಒಪ್ಪಿಕೊಳ್ಳಬಹುದು, ಬುದ್ಧಿಗೆ ಮುಪ್ಪು ಬರಬಾರದು. ಮಾಧ್ಯಮಗಳನ್ನು ಸದನದಿಂದ ದೂರವಿಡುವ ಪ್ರಯತ್ನವೆಂದರೆ ಬುದ್ಧಿಗೆ ಮುಪ್ಪು ಬಂದಿದೆ ಎಂದೇ ಅರ್ಥ. ಇಂಥ ತಪ್ಪು ಕೆಲಸವನ್ನು ಮಾಡಿದ ಅಪಕೀರ್ತಿಗೆ ಕರ್ನಾಟಕ ಒಳಗಾಗುವುದು ನಿಜಕ್ಕೂ ಆಘಾತಕಾರಿ. ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಕೆಡಿಪಿ ಸಭೆಗಳನ್ನು ನೋಡಿದರೆ ಸಾಕು ನಿದ್ದೆ ಗೊರಕೆ, ಆಕಳಿಕೆ, ಮೊಬೈಲ್‌ನಲ್ಲಿ ಸರಸ-ಸಲ್ಲಾಪದ ಲೋಕವೇ ಅನಾವರಣಗೊಳ್ಳುತ್ತದೆ. ಅಲ್ಲೂ ಮಾಧ್ಯಮಗಳಿವೆ, ಆದರೆ ಎಚ್ಚೆತ್ತುಕೊಂಡಿಲ್ಲ, ಈಗ ವಿಧಾನ ಸಭೆಯ ಕಲಾಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ಚುರುಕಾಗುವ ಕಾಲ ಸನ್ನೀಹಿತವಾಗಿದೆ.

ವಿಧಾನ ಸಭೆಯ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನ ಸಫಲವಾದರೆ ಅದು ಕೆಳಹಂತಕ್ಕೂ ಅನ್ವಯವಾಗುವ ಅಪಾಯವಿದೆ. ಸದನದ ಕಲಾಪ ಗೌಪ್ಯ ಅಲ್ಲ, ಅದನ್ನು ಸಾರ್ವಜನಿಕರು ಅರ್ಥಾತ್ ಪ್ರಜೆಗಳು ತಿಳಿದುಕೊಳ್ಳುವ ಮೂಲಭೂತ ಹಕ್ಕೂ ಕೂಡಾ. ಅಂತೆಯೇ ಮಾಧ್ಯಮಗಳು ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದರಲ್ಲಿ ತಪ್ಪಿಲ್ಲ. ರಾಜಕಾರಣಿಗಳು ಅದರಲ್ಲೂ ಮಾಧ್ಯಮಗಳ ಬೆಳಕಲ್ಲೇ ಹೊಳಪುಕಂಡುಕೊಂಡವರು ಬುದ್ಧಿಗೆ ಕವಿದಿರುವ ಮುಸುಕನ್ನು ಸರಿಸಿಕೊಳ್ಳುವುದು ಒಳ್ಳೆಯದು. ಅವಿವೇಕತನ ಎಂದೂ ಬುದ್ಧಿವಂತಿಕೆಯೆನಿಸಿಕೊಳ್ಳುವುದಿಲ್ಲ, ಇಲ್ಲೂ ಹಾಗೆಯೇ.