ಕರಿಕೋಟಿನ ದಂಡು ಪಾಳ್ಯದ ಗ್ಯಾಂಗ್


– ಡಾ.ಎನ್.ಜಗದೀಶ ಕೊಪ್ಪ


 

ಗೆಳೆಯರೇ,

ಮಾರ್ಚ್ ಎರಡರ ಶುಕ್ರವಾರ, ಅಂದರೆ ಈ ದಿನ, ಕರ್ನಾಟಕದ ಪಾಲಿಗೆ ಕಪ್ಪು ಚುಕ್ಕೆಯ ದಿನ ಮಾತ್ರವಲ್ಲ, ಕರಾಳ ದಿನವೂ ಕೂಡ ಹೌದು. ಈ ದಿನ ಬೆಂಗಳೂರಿನಲ್ಲಿ ಕಪ್ಪುಕೋಟಿನ ಕೆಲವು ವಕೀಲರು ನಡೆಸಿರುವ ದಾಂಧಲೆ, ಗೂಂಡಾಗಿರಿ, ಮತ್ತು ಮಾಧ್ಯಮದವರು, ಪೋಲಿಸರು, ವಿದ್ಯಾರ್ಥಿಗಳ ಮೇಲೆ ಅವರು ನಡೆಸಿರುವ ಅಮಾನುಷ ಹಲ್ಲೆ ಈ ಕೃತ್ಯಗಳನ್ನು ಗಮನಿಸಿದಾಗ ಇಡೀ ನಾಗರೀಕ ಜಗತ್ತು ತಲೆತಗ್ಗಿಸುವಂತಿತ್ತು.

ಇವರುಗಳು ವಕೀಲರೊ? ಅಥವಾ ದಂಡುಪಾಳ್ಯದ ಗ್ಯಾಂಗಿನ ಸದಸ್ಯರೊ? ಎಂಬ ಅನುಮಾನ ಕಾಡತೊಡಗಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲರು ಎನಿಸಿಕೊಂಡ ಕೆಲ ಗೂಂಡಾಗಳು ವರ್ತಿಸುತ್ತಿರುವ ವೈಖರಿ ನಿಜಕ್ಕೂ ನಾಗರೀಕರಲ್ಲಿ ಜಿಗುಪ್ಸೆ ಮೂಡಿಸಿತ್ತು. ಅದು ಈ ದಿನ ಪರಕಾಷ್ಟೆ ಮುಟ್ಟಿತು.

ಕಳೆದ ತಿಂಗಳು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರುಗಳು ಸತತ ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ನಾಗರೀಕರ ಮೇಲೆ ಹಲ್ಲೆ ನಡೆಸಿದಾಗ ಪೋಲಿಸರು ಮತ್ತು ಸರ್ಕಾರ ತಮ್ಮ ನಿಷ್ಕ್ರಿಯತೆಯನ್ನು ಬದಿಗಿಟ್ಟು ಆ ದಿನವೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ, ನಾವುಗಳು ಈ ದಿನದ ಈ ಕರಾಳ ಕೃತ್ಯಕ್ಕೆ ಸಾಕ್ಷಿಯಾಗಬೇಕಿರಲಿಲ್ಲ.

ನನ್ನ ಮೂರು ದಶಕಗಳ ಪತ್ರಿಕೋದ್ಯಮದ ವೃತ್ತಿಯಲ್ಲಿ ಹಲವಾರು ವಕೀಲರನ್ನು ನೋಡಿದ್ದೇನೆ. ಇವತ್ತಿಗೂ, ಬೆಂಗಳೂರಿನ ಸಿ.ಎಚ್. ಹನುಮಂತರಾಯ, ಪ್ರೊ. ರವಿವರ್ಮಕುಮರ್, ಸಿ.ಎಸ್. ದ್ವಾರಕನಾಥ್, ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಮಂಡ್ಯದ ಕೇಶವಮೂರ್ತಿ, ಮೈಸೂರಿನ ರಾಧಾಮಣಿ, ಧಾರವಾಡದ ಬಸವಪ್ರಭು ಹೊಸಕೇರಿ ಮುಂತಾದ ಹಿರಿಯ ವಕೀಲರು ನನ್ನ ಗೆಳೆಯರಾಗಿದ್ದಾರೆ ನಿಜ. ಆದರೆ, ಇವರ್ಯಾರು ತಮ್ಮ ವೃತ್ತಿಯ ಘನತೆಯನ್ನಾಗಲಿ, ಅಥವಾ ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಗರೀಕನಿಗೆ ಇರಬೇಕಾದ ಜವಬ್ದಾರಿಗಳನ್ನಾಗಲಿ ಮರೆತು ಎಂದೂ ಕೀಳಾಗಿ ವರ್ತಿಸಿದವರಲ್ಲ. ಏನಾಗಿದೆ ಈ ಯುವ ವಕೀಲರಿಗೆ? ಇವರ ವರ್ತನೆಯನ್ನ ವೀಕ್ಷಿಸಿದರೆ, ಇವರುಗಳು ವಿಶ್ವವಿದ್ಯಾಲಯಗಳಿಂದ ಕಾನೂನು ಪದವಿ ಪಡೆದು ಬಂದವರಂತೆ ಕಾಣುವುದಿಲ್ಲ, ಬದಲಾಗಿ ಯಾವುದೋ ಕೊಳಚೆಗೇರಿಯಲ್ಲಿ ಮಚ್ಚು ಲಾಂಗುಗಳ ಜೊತೆ ಬೆಳೆದು ಬಂದವರಂತೆ ಭಾಸವಾಗುತ್ತಾರೆ.

ಕಳೆದ ತಿಂಗಳು 17ರಂದು ಇವರುಗಳ ಮುಷ್ಕರದಿಂದ ಸಾರ್ವಜನಿಕರಿಗೆ ಆದ ತೊಂದರೆಯನ್ನು ಪರಿಣಾಮಕಾರಿಯಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳ ಮೇಲೆ ಸೇಡಿನ ಭಾವನೆಯನ್ನು ಜೀವಂತವಾಗಿ ಇರಿಸಿಕೊಂಡಿದ್ದ ಈ ವಕೀಲರು ಈ ದಿನ ಏಕಾಏಕಿ ಕ್ಯಾಮರಾಮೆನ್‌ಗಳ ಮೇಲೆ ಮೃಗಗಳಂತೆ ಮುಗಿಬಿದ್ದು ಹಲ್ಲೆ ನಡೆಸಿದ ಕ್ರಮ ಇಡೀ ವಕೀಲರ ಸಮುದಾಯವೇ ತಲೆ ತಗ್ಗಿಸುವ ಸಂಗತಿ. ಕಳೆದ ತಿಂಗಳ ಘಟನೆಯನ್ನು ಮಾಧ್ಯಮದಲ್ಲಿ ಬಹಿರಂಗವಾಗಿ ಖಂಡಿಸಿದ್ದ ಪೊ.ರವಿವರ್ಮಕುಮಾರ್‌ರವರಿಗೆ ಇದೇ ಗೂಂಡಗಳು ಜೀವ ಬೆದರಿಕೆ ಹಾಕಿದ್ದನ್ನು ಸಹ ಇಲ್ಲಿ ನೆನೆಯಬಹುದು.

ಕಳೆದ ಒಂದು ದಶಕದಿಂದ ವಕೀಲಿ ವೃತ್ತಿಗೆ ಬರುತ್ತಿರುವ ಬಹುತೇಕ ಮಂದಿ ನಾಲಾಯಕ್ಕಾದವರು. ( ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾನು ಬರೆದ  “ನಿಂತ ನೀರಾಗಿ ಕೊಳೆತವರು” ಎಂಬ ಲೇಖನ ಇದೇ ವರ್ತಮಾನದಲ್ಲಿ ಪ್ರಕಟವಾಗಿದೆ ಗಮನಿಸಿ.)

ಈ ದಿನ ಬೆಳಿಗ್ಗೆ 10 ಗಂಟೆಯಿಂದಲೇ ಕಾವೇರಿ ಭವನದ ಹಿಂಭಾಗದ ಸಿವಿಲ್ ನ್ಯಾಯಾಲಯ ಸಂಕೀರ್ಣ ರಣರಂಗವಾಗಿಹೋಯಿತು. ಖೈದಿಗಳನ್ನು ವಿಚಾರಣೆಗೆ ಕರೆತಂದ ಪೋಲಿಸರು ಮತ್ತು ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ ನಾಗರೀಕರನ್ನು ಸಂಜೆಯವರೆಗೂ ಒತ್ತೆಯಾಳುಗಳಾಗಿ ಇರಿಸಿಕೊಂಡು ವಕೀಲರು ನಡೆಸುತಿದ್ದ ದಾಂಧಲೆಯನ್ನು, ವಾಹನಗಳಿಗೆ ಬೆಂಕಿ ಹಚ್ಚಿ, ಪೋಲಿಸರತ್ತ ಕಲ್ಲು ತೂರುತಿದ್ದ ಅವರ ಕ್ರಿಯೆಯನ್ನು ಗಮನಿಸುತ್ತಿದ್ದರೆ, ಈ ರಾಜ್ಯದಲ್ಲಿ ಸರ್ಕಾರವೆಂಬುದು ಅಸ್ತಿತ್ವದಲ್ಲಿ ಇದೆಯಾ? ಎಂಬ ಪ್ರಶ್ನೆ ಮನಸಿನಲ್ಲಿ ಒಮ್ಮೆ ಹಾದುಹೋಯಿತು.

ರಾಜಧಾನಿಯಲ್ಲಿ ಘಟನೆ ಸಂಭವಿಸಿ ಮೂರು ಗಂಟೆಗಳ ನಂತರವೂ, ಗುಪ್ತಚರ ಇಲಾಖೆಯನ್ನು ತನ್ನ ಬಳಿ ಇಟ್ಟುಕೊಂಡ ಒಬ್ಬ ಮುಖ್ಯಮಂತ್ರಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರ ನೀಡುತ್ತಾನೆ, ಪತ್ರಕರ್ತರ ಪ್ರಶ್ನೆಗೆ ಯಾವ ಉತ್ತರವನ್ನು ನೀಡದ ಒಬ್ಬ ಗೃಹಸಚಿವ ಪೇಲವ ನಗೆ ಬೀರುತ್ತಾನೆ, ಇಡೀ ನಗರದ ರಕ್ಷಣೆ ಹೊತ್ತ ಒಬ್ಬ ಪೋಲಿಸ್ ಆಯುಕ್ತ ಘಟನಾ ಸ್ಥಳಕ್ಕೆ ತೆರಳಿ ಒಬ್ಬ ಪೋಲಿಸ್ ಪೇದೆಯಂತೆ ಅಸಹಾಯಕನಾಗಿ ನಿಂತು ಮಾತಿಲ್ಲದೆ ತೆರಳುತ್ತಾನೆ ಅಂದರೆ, ಇವರುಗಳ ವರ್ತನೆಯನ್ನು ಹೇಗೆ ವ್ಯಾಖ್ಯಾನಿಸಬೇಕು, ಅಥವಾ ಹೇಗೆ ಅರ್ಥೈಸಿಕೊಳ್ಳಬೇಕು ನೀವೇ ನಿರ್ಧರಿಸಿ.

ಇದೀಗ ರಾಜ್ಯ ಸರ್ಕಾರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಇದೊಂದು ತಿಪ್ಪೆ ಸಾರಿಸುವ ಕ್ರಮ ಅಷ್ಟೇ. ಕರ್ನಾಟಕದ ಇತಿಹಾಸದಲ್ಲಿ ಯಾವ ನ್ಯಾಯಾಂಗದ ತನಿಖೆಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಅಥವಾ ವರದಿ ಅನ್ವಯ ಯಾರಿಗೆ ಶಿಕ್ಷೆಯಾಗಿದೆ ಎಂಬುದನ್ನು ಬಲ್ಲವರು ಉತ್ತರಿಸಬೇಕಾಗಿದೆ.

ಕೊನೆಯ ಮಾತು- ಈ ದಿನದ ಘಟನೆ ಕುರಿತಂತೆ ನಮ್ಮ ದೃಶ್ಯ ಮಾಧ್ಯಮಗಳು ವರದಿ ಮಾಡುವಾಗ ಬಳಸಿದ ಭಾಷೆ ವೃತ್ತಿಗೆ ಘನತೆ ತರುವಂತಿರಲಿಲ್ಲ. ವಿಶೇಷವಾಗಿ ಸುವರ್ಣವಾಹಿನಿಯ ರಂಗನಾಥ್ ಭಾರಧ್ವಜ್ ಮತ್ತು ಪಬ್ಲಿಕ್ ಟಿ.ವಿ.ಯ ನಮ್ಮ ರಂಗಣ್ಣ ತೀವ್ರ ಭಾವೋಧ್ವೇಗಕ್ಕೆ ಒಳಗಾಗಿ ಒರಟು ಭಾಷೆಯನ್ನು ಬಳಸಿದರು. ಇಡೀ ಘಟನಾವಳಿಗಳನ್ನು ಸಂಯಮದಿಂದ ವರದಿ ಮಾಡಿದ ಕೀರ್ತಿ ಟಿ.ವಿ.9  ವರದಿಗಾರ ಕಿರಣ್‌ಗೆ ಸಲ್ಲಬೇಕು.

(ಚಿತ್ರಕೃಪೆ: ಹಿಂದು, ಸಿಎನ್‍ಎನ್-ಐಬಿಎನ್)

7 thoughts on “ಕರಿಕೋಟಿನ ದಂಡು ಪಾಳ್ಯದ ಗ್ಯಾಂಗ್

  1. ದಿನೇಶ್ ಕುಮಾರ್ ಎಸ್.ಸಿ

    ಪತ್ರಕರ್ತರ ಮೇಲೆ ದ್ವೇಷಸಾಧನೆಗಾಗಿ ಹಲ್ಲೆ ನಡೆಸಿದ ಕೆಲ ವಕೀಲರ ವರ್ತನೆ ನನ್ನ ಧಿಕ್ಕಾರ. ಅದೇ ರೀತಿ ಸಿಟಿ ಸಿವಿಲ್ ಕೋರ್ಟ್ ಆವರಣದೊಳಗೆ ನ್ಯಾಯವಾದಿಗಳ ಮೇಲೆ ನಡೆದ ಪೊಲೀಸರ ಪ್ರತೀಕಾರದ ದಾಳಿಯನ್ನೂ ಕಟುಶಬ್ದಗಳಿಂದ ಖಂಡಿಸಲು ಬಯಸುತ್ತೇನೆ. ಗಲಭೆಗೆ ಸಂಬಂಧವೇ ಇಲ್ಲದ ನ್ಯಾಯವಾದಿಗಳ ಮೇಲೂ ಪೊಲೀಸರು ದೌರ್ಜನ್ಯವೆಸಗಿದ್ದಾರೆ, ಮಹಿಳಾ ವಕೀಲರೂ ಏಟು ತಿಂದಿದ್ದಾರೆ. ಹಲವರ ಕಾರುಗಳ ಗಾಜುಗಳನ್ನು ಪುಡಿಮಾಡಿದ್ದಾರೆ. ಅಸೋಸಿಯೇಷನ್ ಕಚೇರಿಯ ಪೀಠೋಪಕರಣ, ಟಿವಿಗಳನ್ನು ಒಡೆದು ಹಾಕಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ನ್ಯಾಯಾಧೀಶರನ್ನೂ ಸಹ ಥಳಿಸಿದ್ದಾರೆ. ವಕೀಲರ ಗೂಂಡಾಗಿರಿಯೂ ಗೂಂಡಾಗಿರಿಯೇ, ಪೊಲೀಸರ ಗೂಂಡಾಗಿರಿಯೂ ಗೂಂಡಾಗಿರಿಯೇ. ಮಾಧ್ಯಮಗಳು ಪೊಲೀಸ್ ದೌರ್ಜನ್ಯದ ಕುರಿತು ಸಣ್ಣ ಸುದ್ದಿಯನ್ನೂ ಮಾಡದೇ ಹೋದದ್ದು ವೃತ್ತಿದ್ರೋಹದ ಕೆಲಸ. ವಕೀಲರು-ಪೊಲೀಸರು-ಪತ್ರಕರ್ತರು ತಮ್ಮ ತಮ್ಮ ಅಹಂಗಳನ್ನು ಬದಿಗಿಟ್ಟು ಇನ್ನಾದರೂ ಭೂಮಿಯ ಮೇಲೆ ತಾವೂ ಎಲ್ಲರಂತೆ ಮನುಷ್ಯರು-ದೇವಲೋಕದಿಂದ ಕೆಳಗೆ ಇಳಿದವರಲ್ಲ ಎಂಬ ಸತ್ಯವನ್ನು ಅರಿತುಕೊಳ್ಳುವಂತಾಗಲಿ.

    Reply
  2. purushothama

    ನೀವು ತೆಗೆದಿರುವ ಪ್ರಶ್ನೆಗಳು ನಿಜಕ್ಕು ವಾಸ್ತವವಾಗಿದೆ ಆದರೆ ಸತ್ಯವನ್ನು ಸಹ ಗಮನಿಸ ಬೇಕಲ್ಲವೆ. ನಮ್ಮ ಇತಿಹಾಸದಲ್ಲಿ ನೀವು ಎಲ್ಲಿಯಾದರು ಕೆಳಿದ್ದೀರ ಒಬ್ಬ ನ್ಯಾಯಾದೀಶನನ್ನು ನ್ಯಾಯಾಲಯದಲ್ಲಿಯೇ ರಕ್ತ ಬರುವಹಾಗೆ ಹಲ್ಲೆ ನಡೆಸಿರುವುದು? ಅದನ್ನ ನೂವು ಯಾಕೆ ಪ್ರಶ್ನಿಸಿಲ್ಲ ಸಾರ್. ಅಂದರೆ ಪೋಲಿಸರು ಎಲ್ಲಿ ಬೇಕಾದರು ನುಗ್ಗಿ ದಾಂದಲೆ ಮಾಡಬಹುದು ಎಂಬ ಅರ್ಥವಾ? ದಯವಿಟ್ಟು ತಿಳಿಸಿ.

    Reply
  3. jagadishkoppa

    ಪ್ರಿಯ ಪುರುಷೋತ್ತಮ್ ನಿಮ್ಮ ಪ್ರಶ್ನೆಗೆ ನನ್ನ ಸಹಮತವಿದೆ. ನ್ಯಾಯಾಲಯದ ಆವರಣದೊಳಕ್ಕೆ ಪತ್ರಕರ್ತರನ್ನು ಬಿಟ್ಟುಕೊಳ್ಳಲು ವ್ಯವಸ್ಥೆ(ವಕೀಲರು) ಸಿದ್ಧವಿಲ್ಲದೇ ಇರುವಾಗ, ನ್ಯಾಯಾಧೀಶರಿಗೆ ಅಥವಾ ನ್ಯಾಯವಾದಿಗಳಿಗೆ ಆದ ಅನ್ಯಾಯಇಲ್ಲವೆ ದೌರ್ಜನ್ಯವನ್ನು ಹೊರಜಗತ್ತಿಗೆ ಪತ್ರಕರ್ತರು ತಲುಪಿಸುವುದು ಹೇಗೆ?

    Reply
  4. Ananda Prasad

    ಕರ್ನಾಟಕದಲ್ಲಿ ಭಾರತದ ಸಂವಿಧಾನ ಹಾಗೂ ಕಾನೂನುಗಳು ಅನ್ವಯವಾಗುವುದಿಲ್ಲ ಎಂಬ ಪರಿಸ್ಥಿತಿ ಬಂದಿರುವಂತೆ ಕಾಣುತ್ತದೆ. ಇಲ್ಲಿ ಹಿಂದುತ್ವವಾದಿಗಳು ಸಂಘಟನೆಗಳು ಯಾವುದೇ ಕಾನೂನು ಕೈಗೆತ್ತಿಕೊಂಡರೂ ಅವರಿಗೆ ಶಿಕ್ಷೆಯಾದ ಉದಾಹರಣೆ ಇಲ್ಲ. ಅವರ ಮೇಲಿರುವ ಎಲ್ಲ ಕೇಸುಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಚರ್ಚ್ ಧಾಳಿಯ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡವರಿಗೆ ಯಾವುದೇ ಶಿಕ್ಷೆಯಾಗಲಿಲ್ಲ. ಈ ಕುರಿತು ನೇಮಕವಾದ ಆಯೋಗ ತಿಪ್ಪೆ ಸಾರಿಸಿತು. ಹಾವೇರಿ ಗೋಲಿಬಾರ್ ತನಿಖೆ ಆಯೋಗ ಸತ್ತವರು ರೈತರೇ ಅಲ್ಲ ಎಂದು ಹೇಳಿತು. ಸುಳ್ಯದಲ್ಲಿ ಪೋಲೀಸ್ ಸ್ಟೇಶನ್ ಮೇಲೆ ಕಲ್ಲೆಸೆದವರ ಮೇಲೆ ಕ್ರಮ ತೆಗೆದುಕೊಂಡ ಪೊಲೀಸರು ಎತ್ತಂಗಡಿಯಾದರು. ದಕ್ಷಿಣ ಕನ್ನಡದಲ್ಲಿ ಪೋಲೀಸ್ ವ್ಯವಸ್ಥೆಯೇ ಸಂಘ ಪರಿವಾರದ ಹಿಡಿತದಲ್ಲಿದೆ. ಇದರ ಅರ್ಥವಿಷ್ಟೇ ಎಲ್ಲಿ ಬಿಜೆಪಿ ಆಡಳಿತ ಇದೆಯೋ ಅಲ್ಲಿ ಸಂವಿಧಾನದ ಕಾನೂನುಗಳು ಅನ್ವಯ ಆಗುವುದಿಲ್ಲ. ಅಲ್ಲಿ ಅನ್ವಯವಾಗುವುದು ಸಂಘ ಪರಿವಾರದ ಕಾನೂನುಗಳು. ಸಂಘ ಪರಿವಾರದ ಕಾನೂನುಗಳು ಯಾವ ರೀತಿ ಇವೆ ಎಂದರೆ ಯಾರು ಹೆಚ್ಚು ಜನರ ಗುಂಪು ಸೇರಿಸಿ ಧರ್ಮದ ಹೆಸರಿನಲ್ಲಿ ಗಲಭೆ ಮಾಡಿಸುತ್ತರೋ ಅವರು ದೇಶಭಕ್ತರು, ಹೀಗಾಗಿ ಅವರನ್ನು ಪೊಲೀಸರು ಮುಟ್ಟಬಾರದು. ಕರ್ನಾಟಕದಲ್ಲಿ ಪೊಲೀಸರು ವಕೀಲರು ಏನೇ ಗಲಭೆ ಮಾಡಿದರೂ ಕ್ರಮ ತೆಗೆದುಕೊಳ್ಳದಿರಲು ಬಿಜೆಪಿಯ ಹಲವು ಮಂತ್ರಿಗಳು, ಮಾಜಿ ಮುಖ್ಯ ಮಂತ್ರಿ ಹೀಗೆ ಹಲವರು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವುದು ಕಾರಣವಾಗಿರಬಹುದೇ ಎಂಬ ಸಂಶಯವಿದೆ ಏಕೆಂದರೆ ವಕೀಲರ ಮೇಲೆ ಕ್ರಮ ತೆಗೆದುಕೊಂಡರೆ ವಕೀಲರ ಸಮೂಹ ಅವರ ಮೇಲೆ ತಿರುಗಿ ಬಿದ್ದು ಮಂತ್ರಿಗಳು ಹಾಗೂ ಇನ್ನಿತರರ ಕೇಸುಗಳಲ್ಲಿ ವಾದಿಸಿ ಅವರನ್ನು ಬಚಾವು ಮಾಡಲು ವಕೀಲರು ಮುಂದೆ ಬರದೆ ಹೋಗಬಹುದು ಎಂಬ ದೂರಾಲೋಚನೆ ಇರಬಹುದೇ?

    Reply
  5. KOTETHOTA ARUNA KUMAR

    ಈ ಎಲ್ಲ ಘಟನೆಗಳು ಪೂರ್ವ ನಿಯೋಜಿತ ಅನ್ನಿಸುತಿದೆ. ಜನಾರ್ಧನ್ ರೆಡ್ಡಿಯ ಭಂಟರ ಕೈವಾದ ಇರಬಹುದೇ? ಹಾಗಿದ್ದರೂ ಮಾಧ್ಯಮದವರು RTP ಭರಾಟೆಯಲ್ಲಿ ಲಕ್ಷ್ಮಣ ಗೆರೆಯನ್ನು ದಾಟುವುದು ವಿಪರ್ಯಾಸ. ವಕೀಲರಲ್ಲೂ ಕೆಲವು ‘ಕಪ್ಪು ಕುರಿಗಳು” ಇದ್ದಾರೆ. ಇವರಿಂದ ನಾಯ್ಯ ವ್ಯವಸ್ಥೆಗೆ ಅಣಕು ಬಡಿದಿದೆ. ಈ ಸಮಸ್ಯಗೆ ಪರಿಹಾರ ‘ಮಾಧ್ಯಮದವರು ವಕೀಲರಾಗಬಾರದು & ವಕೀಲರು ಮಾಧ್ಯಮದವರಾಗಬಾರದು”.

    Reply
  6. ಪುರುಷೋತ್ತಮ

    ಯಾಕ್ರಿ ನ್ಯಾಯಾಲಯದಲ್ಲಿನ ಕಲಾಪಗಳನ್ನ ನೇರವಾಗಿ ಹಸಿ ಹಸಿ ದೃಷ್ಯವಾಗಿ ತೋರಿಸಬೇಕು. ಅಂತಿಮ ಆದೇಶ ಹೇಳದರೆ ಸಾಲದೆ? ನೀವೂ ಹೋಗಿ ನೋಡಿ ಕೋರ್ಟನ ಆವರಣವನ್ನು ಮತ್ತು ಸಂಘದ ಕಛೇರಿಯನ್ನು. ಸರಿ ಸುಳ್ಳು ಸುಳ್ಳು ವರದಿಗಳನ್ನು ಯಾಕ್ರಿ ಪ್ರಸಾರ ಮಾಡಬೇಕು ? ತಪ್ಪು ಯಾರದೆ ಆದರು ಶಿಕ್ಷೆ ಆಗಬೇಕು ಬರೀ ವಕೀಲರದೆ ತಪ್ಪು ಎಂದರೆ ಯಾವ ನ್ಯಾಯ? ಪೋಲಸರು ವಕೀಲರನ್ನು ಒಡೆದಿದ್ದಾರೆ. ದಾಂದಲೆ ಮಾಡಿದ್ದಾರೆ. ಪೋಲಿಸರೆ ಕಾರು ಸ್ಕೂಟರಿಗೆ ಬೆಂಕಿಯನ್ನಚ್ಚಿದ್ದಾರೆ. ಪತ್ರಕರ್ತರಿಗೂ ಮತ್ತು ವಕೀಲರಿಗು ಗಲಾಟೆ ನಡೆದಿದ್ದು 11 ಘಂಟೆಯ ಮೊದಲು ಆದರೆ ಅದರ ನಂತರ ಸಂಜೆ 6 ಘಂಟೆಯ ವರೆಗು ವಕೀಲರ ಮೇಲೆ ನಡೆದ ಹಲ್ಲೆಗಳನ್ನು ಯಾಕೆ ಪ್ರಸಾರ ಮಾಡಿಲ್ಲ ಮತ್ತು ತಪ್ಪು ಎಂದು ಹೇಳಿಲ್ಲ. ಅವರಿಗೂ ಶಿಕ್ಷೆಯಾಗ ಬೇಕಲ್ಲವೇ?

    Reply
  7. bharath

    all madhyamadalli barodellla sulle…..police sattu hodaru antha banthu..? sathra..? illa, sullu suddi habbisode lawyers image na halu madodakke….adanna thumbha vyasthithavagi madi geddiddiri….police nimmannu hodeyuva kala ddoravilla…madiddunno maharaya anno paristiti nimagu baratte….court nalla eradu kadeya vada keli teerpu kodthare, adare madhyamadavaru, baree avara samarthane yalle kala kaleedu bittaru….erdau kadeya version thorisi, yarade tappu agaidru, shikshe agabeku andidre, adu nyaya agatittu…neevu madiddu, nalkane angada kole…ಇವರುಗಳು madhyamadavaro? ಅಥವಾ ದಂಡುಪಾಳ್ಯದ ಗ್ಯಾಂಗಿನ ಸದಸ್ಯರೊ? ಎಂಬ ಅನುಮಾನ ಕಾಡತೊಡಗಿದೆ long live media

    Reply

Leave a Reply to purushothama Cancel reply

Your email address will not be published. Required fields are marked *