Daily Archives: March 4, 2012

ವಕೀಲರು, ಪತ್ರಕರ್ತರು ಮತ್ತು ಫ್ಯಾಂಟಮ್ ಭೂತ


– ಪರಶುರಾಮ ಕಲಾಲ್


 

ಮಾಧ್ಯಮಗಳು ಮತ್ತು ವಕೀಲರ ನಡುವೆ ನಡೆದ ಯುದ್ಧವನ್ನು ನಾವು ಎಲ್ಲರೂ ನೋಡಿದ್ದೇವೆ. ನೋಡಿದ್ದೇವೆ ಏನು ಬಂತು ರೇಸಿಗೆಯಾಗುವಷ್ಟು ದೃಶ್ಯಮಾಧ್ಯಮಗಳು ಉಣ ಬಡಿಸಿವೆ. ವಕೀಲರದು ಸರಿಯೇ ? ಮಾಧ್ಯಮದ್ದು ಸರಿಯೇ ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದಕ್ಕಿಂತ ಇದು ಯಾಕೇ ನಡೆಯಿತು ? ಏನು ಸಮಸ್ಯೆ ಇದಕ್ಕೆ ಕಾರಣ ಎಂದು ಎಲ್ಲರೂ ಯೋಚಿಸಬೇಕಿದೆ.

ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿದ ಸಂದರ್ಭದಲ್ಲಿ ನ್ಯಾಯಾಂಗ ಒಂದಿಷ್ಟು ಮಾನವಂತ ಕೆಲಸ ಮಾಡಿತು ಎನ್ನುವದನ್ನು ಒಪ್ಪುವ ಒಂದು ವರ್ಗ ಇದೆ. ಚರ್ಚೆಯನ್ನು ಇಲ್ಲಿಂದಲೇ ಆರಂಭಿಸೋಣ. ಅಣ್ಣಾ ಹಜಾರೆ ಭೃಷ್ಠಾಚಾರದ ವಿರುದ್ಧ ಹೋರಾಟದವರೆಗೆ ಇದನ್ನು ಎಳೆದುಕೊಂಡು ಹೋಗಬಹುದು. ಗಣಿ ಹಗರಣ ಕುರಿತಂತೆ ಆಂಧ್ರ ಹಾಗೂ ಕರ್ನಾಟಕದಲ್ಲಿ  ಸಿಬಿಐ ತನಿಖೆ ನಡೆಸುತ್ತಿರುವುದು. ಯಡಿಯೂರಪ್ಪ ಗಣಿ ಕಪ್ಪ ಪಡೆದ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಲು ಸಾಧ್ಯವೇ ವರದಿ ನೀಡಲು ಸಿಇಸಿ (ಕೇಂದ್ರ ಉನ್ನತಾಧಿಕಾರಿಗಳ ತಂಡ) ಸೂಚಿಸಿದೆ. ಇಲ್ಲಿ ಮಾಧ್ಯಮಗಳಿಗಿಂತ ನ್ಯಾಯಾಂಗ ಇಡೀ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಂಗವೆಂದರೆ ನ್ಯಾಯಾಧೀಶರು ಮಾತ್ರವಲ್ಲ, ಅಲ್ಲಿ ವಕೀಲರು ಇರುತ್ತಾರೆ. ಅವರ ಪಾತ್ರವೂ ಸಹ ಬಹಳ ಮುಖ್ಯ.

ಮತ್ತೊಂದು; ನಾವು ದೃಶ್ಯ ಮಾಧ್ಯಮಗಳ ಕಡೆ ನೋಡೋಣ. ದೃಶ್ಯಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಬಂದ ಮೇಲೆ ರೋಚಕ ಸುದ್ದಿಗಳಿಗೆ ಹೆಚ್ಚು ಗಮನ ಕೊಟ್ಟವು. ಮತ್ತೊಂದು ಕಡೆ ಇವೇ ನ್ಯಾಯಾಲಯಗಳಾಗಿ ಕೆಲಸ ಮಾಡ ತೊಡಗಿದವು. ಆರೋಪಿಗಳನ್ನು ಆರೋಪಿಗಳೆಂದು ಕರೆಯದೇ ಈ ಕೃತ್ಯವೆಸಗಿದ ಪಾತಕಿಗಳು, ದುಷ್ಟರು, ಖೂಳರು ಎಂದೇ ಚಿತ್ರಿಸಿದವು. ಎಷ್ಟೋ ಸಾರಿ ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡಿದ ರೀತಿಯಲ್ಲಿ ವರದಿ ಮಾಡಿದ್ದು ಇದೆ. ಇದು ಸಾಲದು ಎಂಬಂತೆ ಚಿತ್ರನಟಿಯರನ್ನು ಕುಳ್ಳರಿಸಿ, ಕುಟುಂಬ ನ್ಯಾಯಾಲಯವನ್ನು ತೆರೆದು ಗಂಡ-ಹೆಂಡತಿ ಜಗಳ ಬಿಡಿಸುವ ನ್ಯಾಯಾಧೀಶರ ಪಾತ್ರ ನೀಡಿದರು. ಜನರಿಗೆ ಮನರಂಜನೆ ನೀಡುತ್ತಾ ಕೆಳ ಮಧ್ಯಮವರ್ಗದವರ ಬದುಕು ಬೀದಿಪಾಲಾಗಿಸಿ, ಎಷ್ಟೋ ಪ್ರಕರಣಗಳಲ್ಲಿ ನೇರವಾಗಿ ಹೊಡೆದಾಡಿಸುವ ದೃಶ್ಯಗಳನ್ನು ಸಹ ಲೈವ್ ಆಗಿಯೇ ಬಿತ್ತರಿಸಿದವು. ಈಗ ಕುಟುಂಬ ಜಗಳವಿರಲಿ, ಏನೋ ಸಮಸ್ಯೆ ಇರಲಿ ಎಲ್ಲರೂ ಈ ದೃಶ್ಯಮಾಧ್ಯಮಗಳ ಬಾಗಿಲು ತಟ್ಟುವಂತೆ ಮಾಡಿ ಬಿಟ್ಟಿವೆ. ಯಾರಿಗೂ ನಾವು ಹೆದುರುವುದಿಲ್ಲ. ನಾವು ಮಾಧ್ಯಮದವರು. ಏನು ಬೇಕಾದರೂ ಮಾಡುತ್ತೇವೆ ಎಂಬ ದುಸ್ಸಾಹಸದ ಮಾತುಗಳನ್ನು ಆಡಿದವು.

ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರೂ ಇದೇ ದುಸ್ಸಾಹಸದ ಮಾತುಗಳನ್ನು ಖಾಸಗಿಯಾಗಿ ಆಡುತ್ತಾರೆ. ಆಡಿಕೊಳ್ಳಲಿ ಬಿಡಿ. ಎಷ್ಟೇ ಆಗಲಿ, ಅದು ಅವರ ಖಾಸಗಿ ಮಾತು ಎನ್ನಬಹುದು. ದೃಶ್ಯ ಮಾಧ್ಯಮದವರು, ಮುದ್ರಣ ಮಾಧ್ಯಮದವರು ಇದೇ ಮಾತನ್ನು ಆಡಿದಾಗ ಭಯ ಆವರಿಸುತ್ತೆ . ಯಾಕೆಂದರೆ ಅದು ಸಾರ್ವಜನಿಕವಾಗಿ ಆಡಿ ಬಿಟ್ಟಾಗ. ಖಾಸಗಿಯಾಗಿ ಏನೋ ಬೇಕಾದರೂ ಹೇಳಿಕೊಳ್ಳಲಿ, ಆದರೆ ಅದನ್ನು ಪತ್ರಿಕೆಗಳಲ್ಲಿ ಬರೆದು, ದೃಶ್ಯಮಾಧ್ಯಮದಲ್ಲಿ ಆಡಿ ತೋರಿಸಿದಾಗ ಇವರೆಲ್ಲಾ ಏನು ಮಾಡುತ್ತಿದ್ದಾರೆ ? ಏನು ಮಾಡಬೇಕು ಎಂದುಕೊಂಡಿದ್ದಾರೆ ? ವಕೀಲರು ಹಾಗೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು ಇವರಿಬ್ಬರಿಗೆ ಸುಪ್ರಮಸಿ ಸಮಸ್ಯೆ ಕಾಡುತ್ತಿದೆ. ಇದು ಒಂದು ರೀತಿಯ ಫ್ಯಾಂಟಮ್ ಭೂತ ಆವರಿಸಿಕೊಂಡಿದೆ. ನಾವೇ ಸೂಪರ್ ಮ್ಯಾನ್ ಎನ್ನುವ ಎರಡು ಸೂಪರ್ ಮ್ಯಾನ್‌ಗಳ ನಡುವೆ ನಡೆಯುತ್ತಿರುವ ಯುದ್ಧವಿದು. ಇದಕ್ಕಿಂತ ಬೇರೇನೂ ಇದರ ಹಿಂದೆ ಇಲ್ಲ.

ಇದಕ್ಕೆ ಮುದ್ರಣ ಮಾಧ್ಯಮವೂ ಕೈಗೊಡಿಸಿದೆ. ಮುದ್ರಣ ಮಾಧ್ಯಮವೂ ಈಗ ರೋಚಕ ಸುದ್ದಿಗೆ, ಟ್ಯಾಬ್ಲಾಯ್ಡ್  ಭಾಷೆಗೆ ಒಳಗಾಗಿರುವ ಹೊತ್ತಿನಲ್ಲಿ ಅದನ್ನೇ ದೊಡ್ಡ ತನಿಖೆ ವರದಿ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಅವರು ಬೆಂಬಲಿಸಲೇಬೇಕು. ಬೆಂಬಲಿಸಿದ್ದಾರೆ. ಅವರು ಯುದ್ಧವನ್ನು ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್  ಕೋರ್ಟ್ ಆವರಣ ಬಿಟ್ಟು ದೃಶ್ಯಮಾಧ್ಯಮದ ಕಣ್ಣು ಬೇರೆ ಕಡೆ ಹೋಗಲೇ ಇಲ್ಲ. ಇಡೀ ದಿನ ಕರ್ನಾಟಕವೇ  ಹತ್ತಿ ಉರಿಯುತ್ತಿದೆ ಎಂಬ ಚಿತ್ರಣವನ್ನು ನೀಡಿದರು. ರೆಡ್ಡಿಯನ್ನು ಅದುವರೆಗೆ ಹೊಸ ಬಟ್ಟೆ, ಧರಿಸಿದ್ದರು. ಇಡ್ಲಿ ತಿಂದರು, ಕಾಫಿ ಕುಡಿದರು ಎಂದೆಲ್ಲಾ ವರ್ಣಿಸುತ್ತಿದ್ದ  ದೃಶ್ಯ ಮಾಧ್ಯಮಗಳು ರೆಡ್ಡಿಯನ್ನು ಕೈ ಬಿಟ್ಟು ಬಿಟ್ಟರು. ಇದು ರೆಡ್ಡಿ ಗ್ಯಾಂಗ್ಗೂ, ಸರ್ಕಾರಕ್ಕೂ  ಸ್ವಲ್ಪ ಖುಷಿಯ ವಿಷಯ. ಈ ಘಟನೆಯಾಗದಿದ್ದರೆ ಗಣಿ ಹಗರಣದಲ್ಲಿ ಯಾರಿರಬಹುದು ಎಂದು ಎಲ್ಲರ ಹೆಸರನ್ನು ಇರಬಹುದು ಎಂದು ಹೇಳಲಾಗುತ್ತಿದೆ ಎಂದು ಅವರೇ ತೀರ್ಪು  ನೀಡಿ ಬಿಡುತ್ತಿದ್ದರು.

ಕೊನೆ ಗುಟುಕು : ಒಬ್ಬ ಪೊಲೀಸ್ ಪೇದೆ ಮಹದೇವಯ್ಯ ವಕೀಲರ ಕಲ್ಲು ತೂರಾಟದಿಂದ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೇ ಸತ್ತು ಹೋಗಿ ಬಿಟ್ಟ ಎಂದೇ ಬಹುತೇಕ ದೃಶ್ಯ ಮಾಧ್ಯಮಗಳು ಹೇಳಿಯೇ ಬಿಟ್ಟವು. ಅದು ಸುಳ್ಳಾಗಿತ್ತು. ಸುಳ್ಳಾಗಿದ್ದರ ಬಗ್ಗೆ ಯಾವ ಕ್ಷಮೆಯನ್ನೂ ಕೇಳದೇ ಇರುವುದನ್ನು ನೋಡಿದರೆ ಇದು ನಿರ್ಲಜ್ಜೆಯ  ಪರಮಾವಧಿ ಎನ್ನದೇ ಬೇರೆ ಪದವೇ ಇಲ್ಲ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ರೈಲ್ವೆ ಇಲಾಖೆಯಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೂ ಸಹ ಅವನಲ್ಲಿ ತನ್ನ ತಾಯಿನಾಡಾದ ಬ್ರಿಟೀಷರ ಪರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಬಹುದಿನಗಳಿಂದ ಮನೆ ಮಾಡಿತ್ತು.

1902 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಸ್ಥಳೀಯ ಬಿಳಿಯರು ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದಾಗ (ಬೋರ್ ‌ಯುದ್ಧ) ಸೇನೆಯಲ್ಲಿ ಸೇವೆ ಸಲ್ಲಿಸಲು ಕಾರ್ಬೆಟ್ ಅರ್ಜಿ ಸಲ್ಲಿಸಿದ್ದ. ಆದರೆ ಸರ್ಕಾರ ಅವನ ಅರ್ಜಿಯನ್ನು ತಿರಸ್ಕರಿಸಿತು. ಕಾರ್ಬೆಟ್‍ನನ್ನು ಸೇನೆಗೆ ನಿಯೋಜಿಸಿದರೆ, ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಮೊಕಮೆಘಾಟ್ ಮತ್ತು ಸಮಾರಿಯಘಾಟ್ ನಿಲ್ದಾಣಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಗೆ ಅಡ್ಡಿಯಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು. ಕಾರ್ಬೆಟ್ ಸೇನೆಗೆ ಸೇರುವ ವಿಷಯದಲ್ಲಿ ಆತನ ತಾಯಿಗೂ ಇಷ್ಟವಿರಲಿಲ್ಲ. ಮಗನಿಗೆ ಮದುವೆ ಮಾಡಬೇಕೆಂಬ ಚಿಂತೆ ಮಾತ್ರ ಅವಳನ್ನು ಸದಾ ಕಾಡುತಿತ್ತು. ಒಮ್ಮೆ ಕಾರ್ಬೆಟ್ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದಾಗ, ಇಂಗ್ಲೆಂಡ್‍ನಿಂದ  ಸಂಬಂಧಿಕರ ಮನೆಗೆ ಬಂದಿದ್ದ ಒರ್ವ ತರುಣಿಯ ಜೊತೆ ಸ್ನೇಹ ಉಂಟಾಗಿ, ಅದು ಮದುವೆ ಹಂತದವರೆಗೆ ಬೆಳದು ಆನಂತರ  ಅನಿರೀಕ್ಷಿತವಾಗಿ ನಿಂತು ಹೋಯಿತು. ಸದಾ ಜನಜಂಗುಳಿಯಿಂದ ದೂರ ಉಳಿದು ಏಕಾಂಗಿಯಾಗಿ ಇರ ಬಯಸುತಿದ್ದ ಕಾರ್ಬೆಟ್, ಪ್ರಾಣಿ ಮತ್ತು ಪರಿಸರದ ಮೇಲಿನ ಅನನ್ಯ ಪ್ರೀತಿಯಿಂದ ನಂತರದ ದಿನಗಳಲ್ಲಿ  ಮದುವೆ ವಿಷಯಕ್ಕೆ ತಿಲಾಂಜಲಿ ನೀಡಿದ.

ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದಾಗಲೇ ಕಾರ್ಬೆಟ್‍ಗೆ ಸೇನೆಗೆ ಸೇರುವ ಅವಕಾಶ ಅನಿರೀಕ್ಷಿತವಾಗಿ ಒದಗಿ ಬಂತು. 1914 ರ ಜುಲೈ ತಿಂಗಳಲ್ಲಿ ಪ್ರಾರಂಭವಾದ ಮೊದಲ ವಿಶ್ವ ಮಹಾಯುದ್ಧದ ಪರಿಣಾಮ ಬ್ರಿಟಿಷ್ ಸೇನೆಯಲ್ಲಿ ಸೈನಿಕರ ಕೊರತೆ ಎದ್ದು ಕಾಣುತಿತ್ತು. ಇಂಗ್ಲೆಂಡ್ ತನ್ನ ವಸಾಹತು ಪ್ರದೇಶಗಳಲೆಲ್ಲಾ ಸೇನೆಯನ್ನು ನಿಯೋಜಿಸಿದ್ದರಿಂದ ಅದನ್ನು ವಾಪಸ್ ಕರೆಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಭಾರತದಿಂದ ಹೊಸದಾಗಿ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ಆಸಕ್ತಿ ತಾಳಿತ್ತು. ತನ್ನ ಅನುಪಸ್ಥಿತಿಯಲ್ಲಿ ಕೂಡ ಕಾರ್ಮಿಕರು ಕೆಲಸ ಮಾಡುತ್ತಾರೆ ಎಂಬ ಭರವಸೆಯನ್ನು ಕಾರ್ಬೆಟ್ ಸರ್ಕಾರಕ್ಕೆ ನೀಡಿದ ಮೇಲೆ ಆತನನ್ನು ಸೇನೆಗೆ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆ ವೇಳೆಗಾಗಲೇ ಕಾರ್ಬೆಟ್‍ಗೆ ನಲವತ್ತು ವರ್ಷ ಮೀರಿದ್ದರಿಂದ ಆತನನ್ನು ಯುದ್ಧಭೂಮಿಗೆ ಬದಲಾಗಿ ಸೈನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯವನ್ನು ವಹಿಸಲಾಯಿತು. ಕಾರ್ಬೆಟ್‍ಗೆ ಮೊದಲಿಗೆ ಈ ವಿಷಯದಲ್ಲಿ ನಿರಾಸೆಯಾದರೂ, ಸೇನೆಗೆ, ಅದಕ್ಕಿಂತ ಹೆಚ್ಚಾಗಿ  ತನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದುದ್ದಕ್ಕಾಗಿ ತೃಪ್ತಿಪಟ್ಟುಕೊಂಡ.

ಯುದ್ಧಭೂಮಿಯಲ್ಲಿ ಸೈನಿಕರಿಗೆ ತಾತ್ಕಾಲಿ ಶೆಡ್ ನಿರ್ಮಾಣ ಮಾಡುವುದು, ರಸ್ತೆ, ಸೇತುವೆ ನಿರ್ಮಿಸುವುದು, ಅವರಿಗೆ ಆಹಾರ, ಇನ್ನಿತರೆ ವಸ್ತುಗಳನ್ನು ರೈಲು ಇಲ್ಲವೆ ವಾಹನಗಳ ಮೂಲಕ ಸರಬರಾಜು ಮಾಡುವ ಜವಬ್ದಾರಿ ಇವೆಲ್ಲವನ್ನು ಕಾರ್ಬೆಟ್ ನಿರ್ವಹಿಸಬೇಕಾದ್ದರಿಂದ ಅವನಿಗೆ ಬೇಕಾದ 500 ಜನರ ತಂಡವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ‍ವನ್ನು ಅವನಿಗೆ ನೀಡಲಾಯಿತು. ಹಾಗಾಗಿ ನೈನಿತಾಲ್ ಪಟ್ಟಣಕ್ಕೆ ಬಂದ ಕಾರ್ಬೆಟ್ ಸುತ್ತಮುತ್ತಲಿನ ಹಳ್ಳಿಗಳ ಧೃಡಕಾಯದ ಯುವಕನ್ನು ಸೇನೆಯ ಸೇವೆಗಾಗಿ ಆಯ್ಕೆಮಾಡಿಕೊಂಡ. ಬ್ರಿಟಿಷ್ ಸರ್ಕಾರ ಕಾರ್ಬೆಟ್‍ನ ತಂಡಕ್ಕೆ ಕುಮಾವನ್-70 ಎಂದು ನಾಮಕರಣ ಮಾಡಿತು.

ಕಾರ್ಬೆಟ್ ಮೊಕಮೆಘಾಟ್‍ಗೆ ಹೋಗಿ ಸ್ಟೇಶನ್ ಮಾಸ್ಟರ್ ಸೇರಿದಂತೆ, ಎಲ್ಲರಿಗೂ ಕೆಲಸದ ಜವಬ್ದಾರಿ ವಹಿಸಿ, ಅವರ ಪ್ರಾರ್ಥನೆ, ಹಾರೈಕೆಗಳೊಂದಿಗೆ ಮರಳಿ ನೈನಿತಾಲ್‍ಗೆ ಬಂದು ತನ್ನ ತಂಡದೊಂದಿಗೆ ಬಾಂಬೆಗೆ ತೆರಳಿದ. 1917 ರ ಜೂನ್ ತಿಂಗಳಿನಲ್ಲಿ ಅವನ ತಂಡ ಹಡಗಿನಲ್ಲಿ ಇಂಗ್ಲೆಂಡ್‍ನತ್ತ ಪ್ರಯಾಣ ಬೆಳಸಿತು. 500 ಜನರಿದ್ದ ಅವನ ತಂಡದಲ್ಲಿ ಹಲವು ಜಾತಿಯ ಹಾಗೂ ಹಲವು ಧರ್ಮದ ಜನರಿದ್ದುದು ವಿಶೇಷ. ಅವರೆಲ್ಲಾ ಸಮುದ್ರದ ಮೂಲಕ ಭಾರತ ಬಿಟ್ಟು ತೆರಳುತಿದ್ದಂತೆ ತಮ್ಮ ಜಾತಿ, ಧರ್ಮದ ನೆಲೆಗಳನ್ನು ಮರೆತು, ಭಾರತೀಯರು ಎಂಬ ಭಾವನೆ ಅವರುಗಳ ಎದೆಯಲ್ಲಿ ಚಿಗುರೊಡೆದಿತ್ತು. ಕಾರ್ಬೆಟ್‍ಗೂ ಕೂಡ ಇದು ಅವನ ಪಾಲಿಗೆ ಮೊದಲ ವಿದೇಶ ಪ್ರವಾಸವಾಗಿತ್ತು. ತನ್ನ ಕುಟುಂಬ, ವೃದ್ಧ ತಾಯಿ, ಸಹೋದರಿ ಇವರೆಲ್ಲರನ್ನು ಅಗಲಿ ಹೋಗುವ ಸಂದರ್ಭದಲ್ಲಿ ಅವನೂ ಕೂಡ ಭಾವುಕನಾಗಿದ್ದ. ಅದರೆ ಅವನಲ್ಲಿ ತನ್ನ ಮೂಲ ನೆಲೆಯಾದ ಇಂಗ್ಲೆಂಡ್, ಅದರಲ್ಲೂ ವಿಶೇಷವಾಗಿ ಐತಿಹಾಸಿಕ  ಲಂಡನ್ ‍ನಗರ ನೋಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು.

ಅವನ ತಂಡ ಸುಮಾರು 30 ದಿನಗಳ ಪ್ರಯಾಣದ ನಂತರ ಇಂಗ್ಲೆಂಡಿನ ಸೌತ್ ಹ್ಯಾಂಪ್ಟೆನ್ ನಗರವನ್ನು ತಲುಪಿತು. ಒಂದು ವಾರ ಕಾಲ ಬಂದರಿನಲ್ಲಿ ಬೀಡು ಬಿಟ್ಟಿದ್ದ ಕಾರ್ಬೆಟ್ ನೇತೃತ್ವದ ಕುಮಾವನ್-70 ತಂಡವನ್ನು ಅಂತಿಮವಾಗಿ ಫ್ರಾನ್ಸ್ ನ ಯುದ್ದ ಭೂಮಿಗೆ ಕಳಿಸಿಕೊಡಲಾಯಿತು. ಅಲ್ಲಿನ ವಾತಾವರಣ, ಚಳಿ, ವಿವಿಧ ಬಗೆಯ ಸೊಳ್ಳೆಗಳು, ಅನಿರೀಕ್ಷಿತವಾಗಿ ಬಂದೆರಗುವ ಸಾಂಕ್ರಾಮಿಕ ರೋಗಗಳು ಇವೆಲ್ಲವೂ ಕಾರ್ಬೆಟ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಮಸ್ಯೆ ಎದುರಾಯಿತು. ಸೇನೆಯಲ್ಲಿ ಯಥೇಚ್ಚವಾಗಿ ಸರಬರಾಜು ಮಾಡುತಿದ್ದ ದನದ ಮತ್ತು ಹಂದಿಯ ಮಾಂಸ ಹಾಗೂ ವಿಸ್ಕಿ, ರಮ್ ‍ಅನ್ನು ತಿನ್ನುವ ಅಥವಾ ಕುಡಿಯುವ ಅಭ್ಯಾಸ ಯಾರಿಗೂ ಇರಲಿಲ್ಲ. ಆದರೆ ತಂಬಾಕನ್ನು ಬಳಸುವ ಅಭ್ಯಾಸವಿತ್ತು. ಕಾರ್ಬೆಟ್‍ನ ಮನವಿ ಮೇರೆಗೆ ಮಾಂಸದ ಬದಲು ಆಲೂಗೆಡ್ಡೆ, ಬಟಾಣಿ ಮುಂತಾದ ಹಸಿರು ತರಕಾರಿಗಳು, ಮತ್ತು ಅಕ್ಕಿ ಹಾಗೂ ಗೋಧಿಹಿಟ್ಟನ್ನು ತಂಡಕ್ಕೆ ಸರಬರಾಜು ಮಾಡಲಾಯಿತು. ಇದಕ್ಕೆ ಕಾರಣ ಬಹುತೇಕ ಸದಸ್ಯರು ಸಸ್ಯಹಾರಿಗಳಾಗಿದ್ದದ್ದು.

ಯುದ್ಧಭೂಮಿಯಲ್ಲಿ ತೂರಿ ಬರುವ ಗುಂಡು ಹಾಗೂ  ಫಿರಂಗಿಯ ಶೆಲ್‍ಗಳ ನಡುವೆ, ಸೈನಿಕರಿಗೆ ಕಂದಕ ತೋಡುವುದು, ಅವರಿಗೆ ಬಂಕರ್ ನಿರ್ಮಿಸಿ ಕೊಡುವುದು ಇಲ್ಲವೆ ಕೇಬಲ್ ತಂತಿಯ ಜಾಲ ನಿರ್ಮಿಸಿ ಕೊಡುವ ಕೆಲಸವನ್ನು ಕಾರ್ಬೆಟ್ ತಂಡ ಯಶಸ್ವಿಯಾಗಿ ನಿರ್ವಹಿಸಿತು. ಎಷ್ಟೋಬಾರಿ ತುರ್ತು ವೇಳೆಯಲ್ಲಿ ಹಗಲು ಇರುಳು ಎಂಬ ಪರಿವಿಲ್ಲದೆ ಸೇತುವೆ ಮತ್ತು ರೈಲ್ವೆ ಮಾರ್ಗವನ್ನು ಸಹ ಈ ತಂಡ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಬೆಟ್ ತನ್ನ ತಂಡದ ಸದಸ್ಯರ ಪಾಲಿಗೆ ಕೇವಲ ನಾಯಕನಾಗಿರದೆ, ಸಂತನಂತೆ, ಸಹೋದ್ಯೋಗಿಯಂತೆ ವರ್ತಿಸುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಕೆಲಸ ಮಾಡುವ ರೀತಿ ಅಲ್ಲಿನ ಇತರೆ ಸೈನ್ಯದ ಅಧಿಕಾರಿಗಳಿಗೆ ವಿಸ್ಮಯವನ್ನುಂಟು ಮಾಡಿತ್ತು. ಸೈನಿಕರೆಲ್ಲಾ ಚಳಿ ತಡೆಯಲು ರಮ್‍ನಂತಹ ಮಾದಕ ದ್ರವ್ಯಕ್ಕೆ ಮೊರೆ ಹೋದರೆ, ಭಾರತದ ಕಾರ್ಬೆಟ್ ತಂಡದ ಸದಸ್ಯರು ತಮ್ಮ ಎರಡು ಅಂಗೈಗಳನ್ನು ಉಜ್ಜಿಕೊಳ್ಳುತ್ತಾ, ಚಳಿಯನ್ನು ನಿಯಂತ್ರಿಸುವ ಬಗೆ ಅವರಲ್ಲಿ ಅಚ್ಚರಿ ಉಂಟು ಮಾಡಿತ್ತು.

ನೈನಿತಾಲ್ ಮತ್ತು ಕುಮಾವನ್ ಪರ್ವತ ಗಿರಿ ಶ್ರೇಣಿಗಳಲ್ಲಿ ಬೆಳೆದು ಬಂದಿದ್ದ ಕಾರ್ಬೆಟ್ ತಂಡದ ಸದಸ್ಯರಿಗೆ ಚಳಿಯ ವಾತಾವರಣದ ನಡುವೆ ಬದುಕುವ ಕಲೆ ಕರಗತವಾಗಿತ್ತು. ಹಾಲಿಲ್ಲದ ಕಪ್ಪು ಚಹಾ ಮತ್ತು ಚುಟ್ಟಾ,  ಈ ಎರಡು ವಸ್ತುಗಳಿದ್ದರೆ ಆಹಾರವಿಲ್ಲದೆ ದುಡಿಯುವ ಶಕ್ತಿ ಅವರಲ್ಲಿತ್ತು. 1918 ರ ಜನವರಿ ತಿಂಗಳಿನಲ್ಲಿ ಒಮ್ಮೆ ಇವರ ಬಿಡಾರಕ್ಕೆ ಆಗಮಿಸಿ, ಇವರ ಕಾರ್ಯ ಚಟುವಟಿಕೆ, ಆಹಾರ ಸಂಸ್ಕೃತಿ ಎಲ್ಲವನ್ನು ಕೂಲಂಕುಶವಾಗಿ ವೀಕ್ಷಿಸಿದ, ಬ್ರಿಟೀಷ್ ಸರ್ಕಾರದಲ್ಲಿ ವಿದೇಶಿ ಸೈನ್ಯ ಪಡೆಗಳ ಉಸ್ತುವಾರಿ ಹೊತ್ತಿದ್ದ ಲಾರ್ಡ್ ಅಂಪ್ತಿಲ್ ಸರ್ಕಾರಕ್ಕೆ ಪತ್ರ ಬರೆದು ಕಾರ್ಬೆಟ್ ತಂಡದ ಶ್ರಮವನ್ನು ಪ್ರಶಂಸಿಸಿದ. ಅಲ್ಲದೆ ನಂತರದ ದಿನಗಳಲ್ಲಿ ಕಾರ್ಬೆಟ್‍ನನ್ನು ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. (ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಹೋರಾಟ ನಡೆಸುತಿದ್ದಾಗ, ಗಾಂಧಿಯ ಮೇಲೆ ಶಿಸ್ತು ಕ್ರಮ ಕೈಗೊಂಡ ಅಧಿಕಾರಿಗಳಲ್ಲಿ ಲಾರ್ಡ್ ಅಂಪ್ತಿಲ್ ಕೂಡ ಒಬ್ಬ.)

ಗಂಗಾನದಿಯ ತಟದ ಮೊಕಮೆಘಾಟ್‍ನಲ್ಲಿ ಉರಿವ ಬಿಸಿಲು, ಕೊರೆವ ಚಳಿ, ಅಥವಾ ಸುರಿವ ಮಳೆಯೆನ್ನದೆ ಕಾರ್ಮಿಕರನ್ನು ಹುರಿದುಂಬಿಸುತ್ತಾ ವರ್ಷಾನುಗಟ್ಟಲೆ ಕಠಿಣ ಕೆಲಸ ಮಾಡಿದ್ದ ಅನುಭವಗಳು ಕಾರ್ಬೆಟ್ ಪಾಲಿಗೆ ಯುದ್ಧಭೂಮಿಯ ಮೂಲಭೂತ ಸೌಕರ್ಯಗಳ ರಚಾನಾತ್ಮಕ ಕೆಲಸಗಳಿಗೆ ವರವಾಗಿ ಪರಿಣಮಿಸಿದವು. 1918 ರಲ್ಲಿ ವಿಶ್ವದ ಮೊದಲ ಮಹಾಯುದ್ಧ ಮುಗಿದಾಗ ಲಂಡನ್ ನಗರಕ್ಕೆ ಕಾರ್ಬೆಟ್ ತಂಡವನ್ನು ಕರೆಸಿಕೊಂಡ ಬ್ರಿಟಿಷ್ ಸರ್ಕಾರ ಪ್ರತಿಯೊಬ್ಬ ಸದಸ್ಯನಿಗೂ ಶೌರ್ಯ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿತು. ಜಿಮ್ ಕಾರ್ಬೆಟ್‍ನ ಹುದ್ದೆಯನ್ನು ಕ್ಯಾಪ್ಟನ್ ದರ್ಜೆಯಿಂದ ಮೇಜರ್ ದರ್ಜೆಗೆ ಏರಿಸಿ ವಿಶೇಷವಾಗಿ ಸನ್ಮಾನಿಸಿತು.

ಭಾರತಕ್ಕೆ ಹಿಂತಿರುಗುವ ಮುನ್ನ ಕಾರ್ಬೆಟ್ ಲಂಡನ್ ನಗರದಲ್ಲಿ ಉಳಿದು, ತನ್ನ ಕನಸಿನ ಲಂಡನ್ ಗೋಪುರ, ಬಂಕಿಂಗ್ ಹ್ಯಾಮ್ ಅರಮನೆ, ಪಾರ್ಲಿಮೆಂಟ್ ಭವನ ಮುತಾಂದ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡ. ಥೇಮ್ಸ್ ನದಿಯ ದಡದಲ್ಲಿ ಏಕಾಂಗಿ ಮನೊಸೋಇಚ್ಛೆ ನಡೆದಾಡಿದ. ನೈನಿತಾಲ್ ಅರಣ್ಯ ಪ್ರದೇಶದಲ್ಲಿ ಮೈಲಿಗಟ್ಟಲೆ ಒಡಾಡಿದ ಅನುಭವ ಇದ್ದ ಕಾರ್ಬೆಟ್ ಲಂಡನ್ ನಗರವನ್ನು ಕಾಲ್ನಡಿಗೆಯಲ್ಲೇ ವೀಕ್ಷಣೆ ಮಾಡಿದ. ತನ್ನ ಕುಮಾವನ್-70 ತಂಡದೊಂದಿಗೆ ಹಡಗಿನಲ್ಲಿ ವಾಪಾಸಾಗುತಿದ್ದಾಗ, ಈಜಿಪ್ಟನಲ್ಲಿ ಹಡಗು ಎರಡು ದಿನ ಲಂಗರು ಹಾಕಿದ ಪ್ರಯುಕ್ತ ಕಾರ್ಬೆಟ್ ತನ್ನ ಸದಸ್ಯರೊಂದಿಗೆ ಕೈರೊ ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ. ಪಿರಮಿಡ್‍ಗಳನ್ನು ನೋಡಿ ಅವುಗಳ ರಚನೆ ಮತ್ತು ಅಗಾಧತೆಗೆ ಕಾರ್ಬೆಟ್ ಬೆರಗಾದ. ತನ್ನ ಸಹೋದರಿ ಮ್ಯಾಗಿ ಮತ್ತು ತಾಯಿಗೆ ಒಂದಿಷ್ಟು ಹತ್ತಿಯ ಬಟ್ಟೆಗಳನ್ನು ಖರೀದಿಸಿ ಬಾಂಬೆಯತ್ತ ಪ್ರಯಾಣ ಬೆಳಸಿದ. ತಾನು ಕರೆದುಕೊಂಡು ಹೋಗಿದ್ದ 500 ಮಂದಿ ಸದಸ್ಯರಲ್ಲಿ ಒರ್ವ ವ್ಯಕ್ತಿ ಮಾತ್ರ ಭಾರತಕ್ಕೆ ಹಿಂತಿರುಗುತಿದ್ದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹಡಗಿನಲ್ಲೇ ಮೃತಪಟ್ಟ. ಉಳಿದವರೆಲ್ಲರೂ ಕಾರ್ಬೆಟ್ ಜೊತೆ ಸುರಕ್ಷಿತವಾಗಿ ಬಾಂಬೆ ನಗರದ ಮೂಲಕ ತಮ್ಮ ಊರುಗಳಿಗೆ ಹಿಂರುಗಿದರು.

ಕಾರ್ಬೆಟ್ ಎರಡು ತಿಂಗಳ ಕಾಲ ರಜೆ ಹಾಕಿ ತನ್ನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ. ಆ ವೇಳೆಗೆ 43 ವರ್ಷ ದಾಟಿದ್ದ ಕಾರ್ಬೆಟ್ ತನ್ನ ಎಲ್ಲ ಉದ್ಯೋಗಗಳಿಗೆ ತಿಲಾಂಜಲಿ ಇತ್ತು ತನ್ನ ವೃದ್ಧ ತಾಯಿ ಮತ್ತು ಅವಿವಾಹಿತೆ ಅಕ್ಕನೊಂದಿಗೆ ಇದ್ದು ಬಿಡಬೇಕೆಂದು ಯೋಚಿಸಲಾರಂಭಿಸಿದ್ದ. ರಜೆಯ ಅವಧಿ ಮುಗಿಯುವ ಮುನ್ನವೇ ಕಾರ್ಬೆಟ್ ಮತ್ತೆ ತನ್ನ ತಂಡದೊಂದಿಗೆ ಆಫ್ಪಾನಿಸ್ಥಾನಕ್ಕೆ ತೆರಳಬೇಕೆಂದು ಸರ್ಕಾರದಿಂದ ಆದೇಶ ಬಂದಿತು. ಆಗಿನ ಅವಿಭಜಿತ ಭಾರತ (ಪಾಕ್ ಮತ್ತು ಭಾರತ,) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತಾದರೂ, ನೈರುತ್ಯ ಭಾಗದ ಆಫ್ಫಾನಿಸ್ಥಾನ, ಬಲೂಚಿಸ್ತಾನ ಸ್ವತಂತ್ರ್ಯವಾಗಿದ್ದು ಹಲವು ಬುಡಕಟ್ಟು ನಾಯಕರ ಆಳ್ವಿಕೆಗೆ ಒಳಪಟ್ಟಿದ್ದವು. ಬುಡಕಟ್ಟು ನಾಯಕರ ಆಂತರಿಕ ಹೋರಾಟದ ಲಾಭವನ್ನು ಪಡೆಯಲು ಬಯಸಿದ ಬ್ರಿಟಿಷ್ ಸರ್ಕಾರ ಇಡೀ ಪ್ರಾಂತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ  ಹಲವು ನಾಯಕರಿಗೆ ಪರೋಕ್ಷ ಬೆಂಬಲ ಸೂಚಿಸಿತ್ತು. ಅಲ್ಲದೆ ಸೈನ್ಯದ ಸಹಾಯವನ್ನೂ ನೀಡಿತ್ತು.

ಆಫ್ಫಾನಿಸ್ತಾನ ಕಾಬೂಲ್, ತಾಲ್, ವಜೀರಿಸ್ತಾನ್ ಮುಂತಾದ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳು ಕಾರ್ಯ ನಿರ್ವಹಿಸಿದ ಕಾರ್ಬೆಟ್, ತನ್ನ ತಂಡದ ಸದಸ್ಯರು  ಹಾಗೂ ಪಂಜಾಬ್ ಬೆಟಾಲಿಯನ್ ತಂಡದ ಜೊತೆಗೂಡಿ ಪಾಕಿಸ್ತಾನದ ಗಡಿ ಭಾಗದಲ್ಲಿ ಸಮಾರು 50 ಕಿ.ಮಿ ಉದ್ದದ ರೈಲ್ವೆ ಮಾರ್ಗ ನಿರ್ಮಿಸಿ ಮಿಲಿಟರಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟ.  1918 ರ ನವಂಬರ್ ವೇಳೆಗೆ ವಾಪಸ್ ನೈನಿತಾಲ್‍ಗೆ ಬಂದ ಕಾರ್ಬೆಟ್ ಮುಂದಿನ ದಿನಗಳನ್ನು ನಿವೃತ್ತಿಯ ದಿನಗಳಾಗಿ ಕಳೆಯಬೇಕೆಂದು ನಿರ್ಧರಿಸಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ. ನೈನಿತಾಲ್‍ನಿಂದ ನೇರವಾಗಿ ಮೊಕಮೆಘಾಟ್‍ಗೆ ತೆರಳಿ ಸರಕು ಸಾಗಾಣಿಕೆ ಕಾರ್ಯಗಳನ್ನು ತನ್ನ ಬಳಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ವಹಿಸಿ, ಶಾಲೆಯ ಜವಬ್ದಾರಿಯನ್ನು ಸ್ಟೇಶನ್ ಮಾಸ್ಟರ್ ರಾಮ್‍ಶರಣ್‍ಗೆ ವಹಿಸಿ, ತನ್ನ ಎರಡು ದಶಕದ ಗಂಗಾನದಿಯ ತಟದ ಏಕಾಂಗಿ ಬದುಕಿಗೆ ವಿದಾಯ ಹೇಳಿ, ಬಾಲ್ಯದಿಂದಲೂ ತನಗೆ ಪ್ರಿಯವಾದ ನೈನಿತಾಲ್ ಪರಿಸರದ ಕಾಡಿನತ್ತ ತೆರಳಲು ಸಿದ್ಧನಾದ.

(ಮುಂದುವರೆಯುವುದು)