ಮರ್ಯಾದೆ ಹತ್ಯೆಯ ಬೇರುಗಳ ಹುಡುಕಾಟ…

-ಡಾ.ಎಸ್.ಬಿ.ಜೋಗುರ

ಸಾಂಪ್ರದಾಯಿಕ ಭಾರತೀಯ ಸಮಾಜದ ಅಂತ:ಸತ್ವದ ಹಾಗೆ ಮೂರು ಪ್ರಮುಖ ಸಂಗತಿಗಳು ನಮ್ಮನ್ನು ಸಾವಿರಾರು ವರ್ಷಗಳಿಂದ ಪ್ರಭಾವಿಸುತ್ತಲೇ ಬಂದಿವೆ.  ಅವುಗಳಲ್ಲಿ ಮುಖ್ಯವಾಗಿ ಜಾತಿಪದ್ಧತಿ, ಅವಿಭಕ್ತ ಕುಟುಂಬ ಮತ್ತು ಇಲ್ಲಿಯ ಗ್ರಾಮೀಣ ಜೀವನ.  ಹಾಗಾಗಿಯೇ  ಕೆ.ಎನ್. ಪಣಿಕ್ಕರ್ ಎನ್ನುವ ಚಿಂತಕರು ಭಾರತೀಯ ಸಮಾಜ ಈ ಮೇಲಿನ ಮೂರು ಸಂಗತಿಗಳನ್ನು ಆಶ್ರಯಿಸಿಯೇ ಸಾಗಿ ಬಂದಿದೆ ಎಂದಿರುವರು. ಆಯಾ ಕಾಲಮಾನಕ್ಕನುಗುಣವಾದ ಬದಲಾವಣೆಗಳ ನಡುವೆಯೂ ಈ ಮೂರು ಸಂಗತಿಗಳು ನಮ್ಮ ಸಮಾಜದ ರಚನೆ ಮತ್ತು ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು, ನಿರ್ಧರಿಸಿಕೊಂಡು, ನಿಯಂತ್ರಿಸಿಕೊಂಡು ಬಂದಿದೆ. ಈ ಮೂರರಲ್ಲಿಯೇ ಮೀರಿದ ಮತ್ತು ಗಡುಸಾಗಿ ಉಳಿದುಕೊಂಡು ತನ್ನ ಪ್ರಭಾವವನ್ನು ಹಿಂದೆಂದಿಗಿಂತಲೂ ವಿಭಿನ್ನವಾಗಿ ಮತ್ತು ಸಂಘಟಿತವಾಗಿ ನಿರ್ವಹಿಸಿಕೊಂಡು ಬರುತ್ತಿರುವ ಪ್ರಮುಖ ಸಂಸ್ಥೆಯೆಂದರೆ ಜಾತಿಪದ್ಧತಿಯಾಗಿದೆ. ಅದು ಸಡಿಲಾಗಿದೆ ಎನ್ನುವಾಗಲೇ ಹೊಸ ಬಗೆಯ ತೊಡಕುಗಳನ್ನು ಅಂತರ್ಗತಗೊಳಿಸಿಕೊಂಡು ನಿರಾಯಾಸವಾಗಿ ಅದು ಸಾಗಿ ಬರುತ್ತಿದೆ. ಪರಂಪರೆಯ ಸಹವಾಸದಲ್ಲಿರುವ ಯಾವುದೇ ಬಗೆಯ ಸಂಸ್ಥೆಗಳಿರಲಿ ಅವು ತಮ್ಮ ಬೇರುಗಳನ್ನು ಸಡಿಲಿಸಿಕೊಂಡರೂ ರೆಂಬೆ, ಕೊಂಬೆ, ಹೀಚು, ಕಾಯಿ, ಹಣ್ಣುಗಳನ್ನು ಸಮೃದ್ಧವಾಗಿ ಸುರಿಯುವಲ್ಲಿ ಹಿಂದೆಬಿದ್ದಿಲ್ಲ. ಜಾತಿಯಲ್ಲಿ ಮಹತ್ತರವಾದ ಬದಲಾವಣೆಗಳಾಗಿಲ್ಲ. ಬದಲಾವಣೆಗಳಾದಂತೆ ಕಾಣುವುದೆಲ್ಲಾ ಕೇವಲ ಸಮಾನಾಂತರ ಸಂಚಲನೆ ಮಾತ್ರ. ಹಾಗಾಗಿ ಅದು ಎಂದಿನಂತೆ ಮಾನವನ ಬದುಕನ್ನು ನಿಯಂತ್ರಿಸಿ, ನಿರ್ದೇಶಿಸುವ ದಿಶೆಯಲ್ಲಿ ತನ್ನ ಉತ್ತರದಾಯಿತ್ವವನ್ನು ಬಿಟ್ಟುಕೊಡದೇ ಮೆರೆಯುತ್ತಲೇ ಇದೆ. ಮದನ್ ಮತ್ತು ಮಜುಮದಾರ್ ಎನ್ನುವ ಚಿಂತಕರು ಹೇಳುವಂತೆ ಜಾತಿಯು ಭಾರತೀಯ ಸಮಾಜದಲ್ಲಿ ಒಂದು ನಿರ್ಬಂಧಿತ ಸಮೂಹವಾಗಿ ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡ ಬೇಕಾಗಿದೆಯೋ ಅದೆಲ್ಲವನ್ನೂ ಸಂಪ್ರದಾಯ ಮತ್ತು ಆಚರಣೆಗಳ ಹೆಸರಲ್ಲಿ ನಿರಾತಂಕವಾಗಿ ಮುಂದುವರೆಸಿಕೊಂಡು ಬರುತ್ತಿದೆ. ದಿನ ಬೆಳಗಾದರೆ ಹುಟ್ಟಿಕೊಳ್ಳುತ್ತಿರುವ ಜಾತಿವಾರು ಕಲಹಗಳು, ಸಂಘಟನೆಗಳು, ಮಠಗಳು, ಮಠಾಧೀಶರು ಮೇಲಿನ ಮಾತಿಗೆ ಸಾಕ್ಷಿಯಾಗುತ್ತಿದ್ದಾರೆ.

ಜಾತಿಪದ್ಧತಿ ನಮ್ಮ ಊಟ, ಆಟ, ಮದುವೆ, ದೈವ, ದೇವರು, ಸಂಬಂಧ, ಸ್ನೇಹ, ಅಡುಗೆ, ಬಟ್ಟೆ, ಭಾಷೆ, ಮನೆಗಳ ರಚನೆ ಮುಂತಾದ ಸಂಗತಿಗಳ ಮೇಲೆ ಪ್ರಭಾವ ಬೀರಿ ಅದು ನಿರ್ದೇಶಿಸುವ ಹಾಗೆ ನಮ್ಮ ವ್ಯವಹಾರಗಳನ್ನು ಸಾಮಾಜಿಕ ಅನುಮತಿಗಳಿಗೆ ತಕ್ಕಂತೆ ನಿರ್ವಹಿಸಿದರೆ ಜಾತಿಯೆಂಬ ಸಂಸ್ಥೆಯಲ್ಲಿ ತಕ್ಕ ಮಟ್ಟಿನ ಸ್ಥಾನಮಾನಗಳು ಲಭ್ಯವಾಗುತ್ತವೆ. ತಪ್ಪಿ ನೀವು ಜಾತಿಯ ನಿರ್ಬಂಧಗಳನ್ನು ಮೀರಿ ವ್ಯವಹರಿಸಿದರೆ ಮೂದಲಿಕೆಯ ಮಾತುಗಳು, ನಿಂದನೆ, ಬಹಿಷ್ಕಾರದಂತಹ ಶಿಕ್ಷೆಗೂ ನೀವು ರೆಡಿಯಾಗಬೇಕು. ಇಂಥಾ ಜಾತಿಯ ನಿರ್ಬಂಧಗಳನ್ನು ಮುರಿದು, ಅತ್ಯಂತ ಕರ್ಮಠವಾಗಿರುವ 12ನೇ ಶತಮಾನದ ಸಂದರ್ಭದಲ್ಲಿ ಬಸವೇಶ್ವರರು ಅಂತರ್ಜಾತಿಯ ವಿವಾಹವನ್ನು ಮಾಡಿಸಿ ಸೈ ಎನಿಸಿಕೊಂಡು ಚರಿತ್ರೆಯಾದರೂ ಅವರು ಅನುಭವಿಸಿರುವ ತೊಂದರೆಗಳನ್ನು ಕಲ್ಪಿಸಬಹುದೇ ಹೊರತು ಮೀರಿ, ಅನುಭವಿಸಿ ಮಾತನಾಡುವಂತಿಲ್ಲ. ಇಂದಿಗೂ ಅಂತರ್ಜಾತಿಯ ವಿವಾಹವಾಗುವವರಿಗೆ ಅದರಲ್ಲೂ ದಲಿತ ಕನ್ಯೆಯನ್ನು ವಿವಾಹವಾಗುವವರಿಗೆ ಇರಬಹುದಾದ ತೊಡಕುಗಳನ್ನು ನೋಡಿದರೆ ಸಮಾಜದ ಆಂತರಿಕ ರಚನೆ ನಾವು ಮಾತನಾಡುವ ವೇಗದಲ್ಲಿ ಬದಲಾವಣೆ ಹೊಂದಿಲ್ಲ ಎನ್ನುವುದು ಸತ್ಯ. ಇನ್ನು ಈ ಜಾತಿಯನ್ನು ಅದರ ಆಚರಣೆಯನ್ನು ಒಂದು ಮೌಲ್ಯದ ಹಾಗೆ ಸಂಪೋಷಿಸಿಕೊಂಡು ಬಂದ ಅವಿಭಕ್ತ ಕುಟುಂಬ ಎನ್ನುವ ವ್ಯವಸ್ಥೆ ಪರೋಕ್ಷವಾಗಿ ಜಾತಿಯ ಆಚರಣೆಗಳು ಫಲಪ್ರದವಾಗಿ ನಡೆಯುವಲ್ಲಿ ನೆರವಾಯಿತೆಂದೇ ಹೇಳಬೇಕು.

ಕುಟುಂಬದ ಘನತೆ ಗೌರವದ ಸಲುವಾಗಿ ಯಾವ ಹಂತಕ್ಕಾದರೂ ಹೋಗಬಹುದು ಎನ್ನುವ ಮನೋಭೂಮಿಕೆ ಸಿದ್ಧವಾದದ್ದೇ ಇಲ್ಲಿ.  ಪಿ.ಎಚ್. ಪ್ರಭು ಎನ್ನುವ ದಾರ್ಶನಿಕರು ತಮ್ಮ “ಹಿಂದು ಸೋಶಿಯಲ್ ಅರ್ಗನ್ಶೆಜೇಶನ್” ಎನ್ನುವ ಕೃತಿಯಲ್ಲಿ ಅವಿಭಕ್ತ ಕುಟುಂಬದಲ್ಲಿ  ‘ಅಗ್ನಿ’ ಎನ್ನುವುದನ್ನು ಒಂದು ಮೌಲ್ಯ ಇಲ್ಲವೇ ಘನತೆ ಎಂದು ಅದನ್ನು ಕಾಯಬೇಕು.  ಆ ‘ಅಗ್ನಿ’ ಇಲ್ಲವೇ ಜ್ಯೋತಿಗೆ ಧಕ್ಕೆ ಬರುವಂತಿದ್ದರೆ ಕುಟುಂಬದ ಸದಸ್ಯರೆಲ್ಲರೂ ಒಂದಾಗಿ ಅದನ್ನು ಸಂರಕ್ಷಿಸಬೇಕು,  ಎಂದು ಹೇಳಿರುವ ಮಾತಿನ ಹಿಂದೆ ಕುಟುಂಬದ ಘನತೆಗೆ ಧಕ್ಕೆ ಬರಲು ಬಿಡಬಾರದು ಎನ್ನುವ ಒಂದು ಅಘೋಷಿತ ಕರಾರಿದೆ. ಹಾಗೆ ಕಾಯುವುದು ಅತಿ ಮುಖ್ಯವಾಗಿ ಅಲ್ಲಿಯ ಕರ್ತನ ಹೊಣೆಗಾರಿಕೆ.  ಡೇವಿಡ್ ಜಿ.ಮೆಂಡಲ್ಬಾಮ್ ಎನ್ನುವ ಚಿಂತಕರು ಕೂಡಾ ಈ ವಿಚಾರವನ್ನು ಕುರಿತು ಚರ್ಚಿಸಿದ್ದಾರೆ. ಅಂದರೆ ಜಾತಿ ಹಾಗೂ ಜನಾಂಗ ಸಂಕರವನ್ನು ಅವಿಭಕ್ತ ಕುಟುಂಬ, ಜಾತಿ ಪದ್ಧತಿಗಳೆರಡೂ ಆಗ ಸಹಿಸುತ್ತಿರಲಿಲ್ಲ, ಈಗಲೂ ಸಹಿಸುವುದಿಲ್ಲ. ಈಗ ನಮ್ಮ ಮಧ್ಯೆ ಆಗಾಗ ಕೇಳಿ ಬರುವ ಮರ್ಯಾದೆ ಹತ್ಯೆಯ ಪ್ರಕರಣಗಳ ಮೂಲ ಬೇರುಗಳು ಜಾತಿಯ ಏಣಿಶ್ರೇಣಿ ವ್ಯವಸ್ಥೆಯ ತುತ್ತ ತುದಿ ಹಾಗೂ ಕೆಳತುದಿಯ ಮಧ್ಯೆ ನಡೆಯುವ ಸಾಮಾಜಿಕ ಸಂಪರ್ಕ ಮತ್ತು ಕುಟುಂಬದ ಘನತೆ ಎರಡನ್ನೂ ಆಧರಿಸಿದೆ. ಸಮಾಜ ಸುಧಾರಣಾ ಆಂದೋಲನದಲ್ಲಿ  ಬ್ರಹ್ಮ ಸಮಾಜದ ಮೂಲಕ ಸತಿ ಸಹಗಮನವನ್ನು ನಿಷೇಧಿಸಲು ಹೆಣಗಿದ ರಾಜಾರಾಮ ಮೋಹನರಾಯ್‍ರ ಆಶಯ ಈ ಬಗೆಯ ಸಾಂಪ್ರದಾಯಿಕ, ಪರಂಪರೆಯ ಹೆಸರಲ್ಲಿ ನಡೆಯುವ ಸ್ತ್ರೀ ಹತ್ಯೆಯ ನಿಷೇಧವೇ ಆಗಿತ್ತು.

 ‘ಮರ್ಯಾದೆ’ ಎನ್ನುವುದು ಒಂದು ಅಮೂರ್ತವಾದ ಸಂಗತಿ ಅದು ನಮ್ಮ ನಮ್ಮ ಸಮಾಜದ ಮನೋಭೂಮಿಕೆಯನ್ನು ಆಧರಿಸಿರುವಂಥದು. ನಮಗೆ ಮರ್ಯಾದೆ,  ಘನತೆ ಅನಿಸುವ ವಿಷಯ ವಿದೇಶಿಯರಿಗೆ ಒಂದು ಸಾಮಾಜಿಕ ಅನಿಷ್ಟ ಎನಿಸಬಹುದು. ಹಾಗೆಯೇ ಅವರ ಕೆಲ ಆಚರಣೆಗಳು ಕೂಡಾ ನಮ್ಮವರ ತಾತ್ಸಾರಕ್ಕೂ ಕಾರಣವಾಗಬಹುದು. ಅತಿ ಮುಖ್ಯವಾಗಿ ಜಾತಿ ಪದ್ಧತಿ ಎನ್ನುವದು ಭಾರತೀಯ ಸಮಾಜದ ಏಕಮೇವ ಲಕ್ಷಣವಾಗಿದ್ದು, ಇಲ್ಲಿ ಮಾತ್ರ ಇದರ ಅಪರಂಪಾರ ರೂಪಗಳು ನೋಡಲು ಸಾಧ್ಯ. ನಮ್ಮ ಪರಂಪರೆಯಲ್ಲಿ ಈ ಬಗೆಯ ಮರ್ಯಾದೆ ಹತ್ಯೆಯ ಪ್ರಕರಣಗಳು ಜಾನಪದ ಕಥೆಗಳಲ್ಲೂ ಅಲ್ಲಲ್ಲಿ ಬೆಳಕು ಕಂಡಿರುವುದಿದೆ. ಕಲ್ಲನಕೇರಿ ಮಲ್ಲನಗೌಡ ತನ್ನ ಸೊಸೆ ಭಾಗೀರತಿಯನ್ನು ಕೆರೆಗೆ ಆಹಾರವನ್ನಾಗಿ ನೀಡಿದ್ದು ಮೇಲ್ನೋಟಕ್ಕೆ ಒಂದು ಸಮೂಹ ಪ್ರೇರಿತ ಕ್ರಿಯೆ ಎನಿಸಿದರೂ ಅದು ಊರ ಒಳಿತಿಗಾಗಿ ಜರುಗಿದ ಕ್ರಿಯೆ ಎಂದೆನಿಸಿದರೂ ಎಲ್ಲೋ ಒಂದೆಡೆ ಆ ಗೌಡನ ಪ್ರತಿಷ್ಠೆಯ ಪ್ರಶ್ನೆಯೂ ಅಲ್ಲಿ ಅಡಕವಾಗಿರುವುದು ಹೌದು. ಅದೇ ವೇಳೆಗೆ ಈ ಮರ್ಯಾದೆ, ಶೀಲ, ಚಾರಿತ್ರ್ಯ ದ ಕೊರತೆಗಳೆಲ್ಲಾ ಇವತ್ತಿಗೂ ಹೆಣ್ಣಿನ ಇಲ್ಲವೇ ಕೆಳಸ್ತರದ ಜೀವಗಳನ್ನು ಬಲಿಕೊಡುವ ಮೂಲಕವೇ ಇತ್ಯರ್ಥವಾಗಬೇಕಾದ ಕ್ರಮ ಅತ್ಯಂತ ವಿಷಾದನೀಯವಾದುದು. ಹತ್ಯೆಯ ಮೂಲಕ ಮರ್ಯಾದೆಯ ಕಾಪಾಡುವಿಕೆ ಎನ್ನುವ ವಿಚಾರವೇ ಅತ್ಯಂತ ಬಾಲಿಶವಾದುದು. ಅತ್ಯಂತ ವೇಗವಾದ ನಾಗರಿಕತೆಯ ನಡುವೆಯು ಈ ಬಗೆಯ ಮರ್ಯಾದೆ ಹತ್ಯೆಯ ಪ್ರಕರಣಗಳು ದಿನಬೆಳಗಾದರೆ ಸುದ್ಧಿಯಾಗುವುದು ಮನುಷ್ಯನಲ್ಲಿರುವ ಮೃಗತ್ವದ ಮೇಲೆ ಬೆಳಕು ಹರಿಸಿದಂತಿರುತ್ತದೆ.

ಅಂತರ್ಜಾತಿಯ ಮದುವೆಗಳು ಸಾಂಪ್ರದಾಯಿಕ ಜಾತಿ ಪದ್ಧತಿಯ ನಿರ್ಮೂಲನೆಯಲ್ಲಿ ಒಂದು ರಾಮಬಾಣವಿದ್ಧಂತೆ. ಪ್ರತಿಗಾಮಿಗಳಿಗೆ ಈ ಬಗೆಯ ರಾಮಬಾಣಕ್ಕಿಂತಲೂ ತಟಸ್ಥವಾಗಿರುವ ಬಿಲ್ಲಿನ ಬಗ್ಗೆಯೇ ಹೆಚ್ಚು ಆಸ್ಥೆ. ಹಾಗಾಗಿ ಜಾತಿ ಪದ್ಧತಿ ನಮ್ಮ ಸಮಾಜದ ಅತಿ ಪ್ರಮುಖವಾದ ಒಂದು ಪರಂಪರೆಯಾಗಿ ಮುಂದುವರೆಯುತ್ತದೆ. ಅದೇ ವೇಳೆಗೆ ಈ ಸಾಂಪ್ರದಾಯಿಕ ಜಾತಿ ತುಂಡಾಗುವಲ್ಲಿಯೇ ಅನೇಕರ ಉದರದೆದುರಿನ ಪ್ರಶ್ನೆಯೂ ಅಲ್ಲಿ ಅಡಕವಾಗಿರುವುದರಿಂದ ಅತ್ಯಂತ ಜಾಣತನದಿಂದ ಜಾತಿ ಪದ್ಧತಿಯನ್ನು ಪೋಷಿಸಿಕೊಂಡು ಬರುವ ವ್ಯವಸ್ಥಿತ ಹುನ್ನಾರಗಳೂ ಇವೆ. ಇನ್ನು ಮರ್ಯಾದೆ ಹತ್ಯೆಗಳು ಸಾಮಾನ್ಯವಾಗಿ ಮಹಿಳೆಯನ್ನು ಮಾತ್ರ ಬಾಧಿಸುವುದೇ ಹೆಚ್ಚು, ಅದರಲ್ಲೂ ದಲಿತ ಹುಡುಗ-ಹುಡುಗಿಯರನ್ನಂತೂ ಅದು ಬೆಂಬಿಡದೇ ಪೀಡಿಸುವ ಭೂತವಿದ್ದಂತೆ. ಮದುವೆಯಾಗಿ ಮಕ್ಕಳಾಗಿ ತಮ್ಮ ಬದುಕನ್ನು ತಮ್ಮಿಷ್ಟದಂತೆ ದೂಡುವಾಗಲೇ ದುತ್ತನೇ ಎದುರಾಗುವ ದುರುಳರ ನಾಲಿಗೆಗೆ ನೆತ್ತರವಾಗುವ ಅಮಾಯಕರನ್ನು ನೋಡಿದರೆ ಮಾನವೀಯ ಕಾಳಜಿ ಇರುವ ಯಾರೇ ಆಗಲಿ ಕರಗುತ್ತಾರೆ. ಕೊರಗುತ್ತಾರೆ. ಒಂದಂತೂ ಸತ್ಯ ಈ ಮರ್ಯಾದೆ ಹತ್ಯೆಯ ಬೀಜಗಳು ಜಾತಿಪದ್ಧತಿ ಮತ್ತು ಅವಿಭಕ್ತ ಕುಟುಂಬದ ಘನತೆ ಮತ್ತು ಗೌರವ ಸಂರಕ್ಷಣೆಯ ನಡುವೆ ಥಳಕು ಹಾಕಿಕೊಂಡಿರುವದಿದೆ. ಮಿಕ್ಕಂತೆ ಧರ್ಮ, ಪ್ರಾದೇಶಿಕತೆ, ಜನಾಂಗಗಳು ಬರಬಹುದಾದರೂ ಮರ್ಯಾದೆ ಹತ್ಯೆಯ ಮೂಲ ಜಾತಿಯ ಜಿಗುಟುತನ ಮತ್ತು ಅವಿಭಕ್ತ ಕುಟುಂಬದ ಕರ್ಮಠ ರಚನೆಯನ್ನು ಆಧರಿಸಿದೆ.

(ಚಿತ್ರಕೃಪೆ: ವಿಕಿಪೀಡಿಯ)

Leave a Reply

Your email address will not be published. Required fields are marked *