ನಾಡಿನ ನಕ್ಸಲ್ ನಿಗ್ರಹ ದಳದಿಂದ ಕಾಡಿನ ಅಮಾಯಕ ವಿದ್ಯಾರ್ಥಿಯ ಬಂಧನ

-ನವೀನ್ ಸೂರಿಂಜೆ

ಕರ್ನಾಟಕದ ನಕ್ಸಲ್ ನಿಗ್ರಹ ದಳದ ಅಟ್ಟಹಾಸಕ್ಕೆ ಇದೀಗ ಅಮಾಯಕ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ಬಲಿಪಶುವಾಗಿದ್ದಾನೆ. ನಕ್ಸಲ್ ಬೆಂಬಲಿಗರೆಂಬ ಆರೋಪದಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬೆಳ್ತಂಗಡಿಯ ಕುತ್ಲೂರು ಪರಿಸರದಲ್ಲಿ ಕಳೆದ ಶನಿವಾರ ಬಂಧಿಸಿರುವ ಮೂವರಲ್ಲಿ ಓರ್ವನಾದ ವಿಠ್ಠಲ ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ನೂರು ಶೇಕಡಾ ತರಗತಿ ಹಾಜರಾತಿಯನ್ನು ಹೊಂದಿರುವ ಬುದ್ದಿವಂತ ವಿದ್ಯಾರ್ಥಿ ನಕ್ಸಲ್ ಪೀಡಿತ ಗ್ರಾಮದ ಮಲೆಕುಡಿಯ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಜೈಲಲ್ಲಿ ಕೊಳೆಯುವಂತಾಗಿದೆ.

ನಕ್ಸಲ್ ವಿರೋಧಿ ಎಡಪಕ್ಷವಾದ ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನಲ್ಲಿ ಸಕ್ರಿಯನಾಗಿದ್ದ ವಿಠ್ಠಲ ಕಳೆದ ಆಗಸ್ಟ್ ತಿಂಗಳಿನಿಂದ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಆರಂಭಿಸಿದ್ದ. ತನ್ನ ಹುಟ್ಟೂರಿನಲ್ಲಿ ನಕ್ಸಲ್ ಚಟುವಟಿಕೆಗಳಿಂದ ಬೇಸತ್ತಿದ್ದ ವಿಠ್ಠಲ್, ಎಡ ಪಕ್ಷದ ಅಂಗ ಸಂಘಟನೆಯಾದ ದಲಿತ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯನಾಗಿಸಿಕೊಂಡಿದ್ದ. ವಿಶೇಷವೆಂದರೆ ಮಲೆಕುಡಿಯ ಜನಾಂಗಕ್ಕೆ ಸೇರಿದ ವಿಠ್ಠಲ ಕುತ್ಲೂರಿನ ಮಲೆಕುಡಿಯ ಸಮುದಾಯದಲ್ಲಿ ಎಸ್ಎಸ್ಎಲ್‌‍ಸಿಗಿಂತ ಮೇಲ್ಮಟ್ಟದ ವಿದ್ಯಾಭ್ಯಾಸದ ಹಂತವನ್ನು ತಲುಪಿರುವ ಏಕೈಕ ಯುವಕ. ಕಾಡಿನಲ್ಲಿ ಶತ ಶತಮಾನಗಳಿಂದ ಬದುಕಿದ್ದವರನ್ನು ಒಕ್ಕಲೆಬ್ಬಿಸಲು ಪ್ರತೀ ಕುಟುಂಬಕ್ಕೆ ಹತ್ತು ಲಕ್ಷ ನೀಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದಾಗ ಅದನ್ನು ವಿರೋಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿರುವಲ್ಲಿ ವಿಠ್ಠಲ್ ಪಾತ್ರ ಪ್ರಮುಖವಾದುದು. ಅಲ್ಲಿಯವರೆಗೆ ಅಧಿಕಾರಿಗಳು ತೋರಿಸಿದ ಕಾಗದಕ್ಕೆ ಹೆಬ್ಬೆಟ್ಟು ಒತ್ತುತ್ತಿದ್ದವರು ವಿಠ್ಠಲ್‍ನ ವಿದ್ಯಾಬ್ಯಾಸದ ನಂತರ ಚಿತ್ರಣ ಬದಲಾಗಿತ್ತು. ಈ ಕಾರಣದಿಂದಾಗಿಯೇ ಇಂದಿಗೂ ನಲ್ವತ್ತು ಕುಟುಂಬಗಳನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಇದು ಎಎನ್ಎಫ್ ಮತ್ತು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿತ್ತು.

ಮಂಗಳೂರು ವಿವಿಯ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದುಕೊಂಡು ಕಳೆದ ಒಂದು ವರ್ಷದಿಂದೀಚೆಗೆ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ವಿಠ್ಠಲನಿಗೆ ಪತ್ರಿಕೋಧ್ಯಮ ಕ್ಷೇತ್ರವನ್ನು ಆಯ್ದುಕೊಳ್ಳುವಂತೆ ಸಲಹೆ ನೀಡಿದ್ದೇ ಮಂಗಳೂರಿನ ಪತ್ರಕರ್ತರು. ನಾನೂ ಸೇರಿದಂತೆ ಮಂಗಳೂರಿನ ಪತ್ರಕರ್ತ ಮಿತ್ರರೆಲ್ಲಾ ನಕ್ಸಲ್ ಪೀಡಿತ ಪ್ರದೇಶಕ್ಕೆ ವರದಿಗಾಗಿ ತೆರಳಿದ್ದ ಸಂದರ್ಭ ಪದವಿ ಶಿಕ್ಷಣ ಮುಗಿಸಿದ್ದ ವಿಠ್ಠಲ ಕಣ್ಣಿಗೆ ಬಿದ್ದಿದ್ದ. ನಂತರ ಹಲವಾರು ಬಾರಿ ಕುತ್ಲೂರು ಪ್ರದೇಶಕ್ಕೆ ವರದಿಗಾಗಿ ನಾವು ತೆರಳಿದ್ದ ಸಂಧರ್ಭ ನಮಗೆಲ್ಲಾ ಕಾಡಿನಲ್ಲಿ ಆಶ್ರಯ ನೀಡಿದ್ದು ಇದೇ ವಿಠ್ಠಲ್ ಮನೆ. ನಂತರ ವಿಠ್ಠಲ್ ನಮ್ಮವನಾಗಿದ್ದ. ನಮ್ಮ ವರದಿಗಾರಿಕೆಯ ಕೆಲಸಗಳನ್ನು ಮೌನವಾಗಿ ಗಮನಿಸುತ್ತಿದ್ದ ವಿಠ್ಠಲ್‍ಗೆ ತಾನೂ ಪತ್ರಕರ್ತನಾಗಬೇಕು ಎಂಬ ಆಶೆ ಮೊಳಕೆಯೊಡೆದಿತ್ತು. ಅದನ್ನು ನಮ್ಮ ಬಳಿ ಹೇಳಿಕೊಂಡಿದ್ದ. ನಾವು ತಕ್ಷಣ ಅದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದೆವು. ನೇರ ಮಂಗಳೂರಿಗೆ ಕರೆಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿ ವ್ಯವಸ್ಥೆಗಳನ್ನು ಮಾಡಿದ್ದೆವು.

ಪತ್ರಕರ್ತ ಮಿತ್ರರೆಲ್ಲಾ ಸೇರಿ ಪುಸ್ತಕಗಳ ವ್ಯವಸ್ಥೆಯನ್ನೂ ಮಾಡಿಕೊಟ್ಟೆವು. ನಂತರ ವಿಠ್ಠಲ್ ತಿರುಗಿ ನೋಡಿದ್ದೇ ಇಲ್ಲ. ಕಾಲೇಜಿನಲ್ಲಿ ನೀಡೋ ಎಸೈನ್‍ಮೆಂಟ್‍ಗಳನ್ನು ಅಸ್ಥೆಯಿಂದ ನಿರ್ವಹಿಸುತ್ತಿದ್ದ. ಯಾವುದೇ ಸುದ್ಧಿಯ ಎಸೈನ್‍ಮೆಂಟ್ ನೀಡಿದರೂ ನೇರ ನನ್ನಲ್ಲಿಗೆ ಬಂದು ಸಲಹೆಗಳನ್ನು ಪಡೆದುಕೊಂಡು ಪರಿಪೂರ್ಣ ವರದಿ ತಯಾರಾಗುವಂತೆ ನೋಡಿಕೊಳ್ಳುತ್ತಿದ್ದ. ಆತ ಕಾಲೇಜಿಗೆ ಸೇರಿದ ದಿನದಿಂದ ಒಂದೇ ಒಂದು ತರಗತಿಯನ್ನೂ ತಪ್ಪಿಸಿಲ್ಲ. ನೂರು ಶೇಕಡಾ ಹಾಜರಾತಿ ಇದೆ ಎಂದು ಕಾಲೇಜು ದಾಖಲೆಗಳು ದೃಢೀಕರಿಸುತ್ತದೆ. ರಜೆಯ ಸಂಧರ್ಭದಲ್ಲಿ ಎಲ್ಲೆಲ್ಲಿ ವಿಚಾರ ಸಂಕಿರಣಗಳಿವೆ ಎಂದು ನನ್ನಲ್ಲಿ ತಿಳಿದುಕೊಂಡು ಹಾಜರಾಗುತ್ತಿದ್ದ. ಒಟ್ಟಾರೆ ಆತನೊಬ್ಬ ಭರವಸೆಯ ಪತ್ರಕರ್ತನಾಗಿ ಎಲ್ಲಾ ರೀತಿಯಲ್ಲೂ ರೂಪುಗೊಳ್ಳುತ್ತಿದ್ದ ಎಂದು ನನಗನ್ನಿಸುತ್ತಿತ್ತು.

ಕಳೆದ ಎರಡು ವಾರದಿಂದ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಕೂಂಬಿಕ್ ಕಾರ್ಯಾಚರಣೆ ನಡೆಯುತ್ತಿದೆ. ಕುತ್ಲೂರಿನಲ್ಲಿ ಕೂಂಬಿಕ್ ನಡೆಸಿದ ಎಎನ್ಎಫ್ ತಂಡವು ಚೀಂಕ್ರ ಮಲೆಕುಡಿಯನನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿತ್ತು. ನಂತರ ಎಎನ್ಎಫ್ ತಂಡವು ನೇರವಾಗಿ ವಿಠ್ಠಲ್ ಮನೆಗೆ ತೆರಳಿ ವಿಠ್ಠಲ್ ತಂದೆ ಲಿಂಗಣ್ಣ ಮಲೆಕುಡಿಯರನ್ನು ವಿಚಾರಣೆ ನಡೆಸಿತು. ರಾತ್ರಿಯಿಡೀ ಗೃಹ ಬಂಧನದಲ್ಲಿರಿಸಿದ ಎಎನ್ಎಫ್ ತಂಡವು ವೃದ್ಧ ಲಿಂಗಣ್ಣರಿಗೆ ಬೇಕಾಬಿಟ್ಟಿ ಥಳಿಸಿತ್ತು. ಇದನ್ನು  ಮರುದಿನ ಬೆಳಿಗ್ಗೆ ಪಕ್ಕದ ಮನೆಯ ಪೂವಪ್ಪ ಮಲೆಕುಡಿಯ ವಿಠ್ಠಲ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಮರುದಿನ ಬೆಳಗ್ಗೆ ಕುತ್ಲೂರಿಗೆ ಹೊರಟು ನಿಂತ ವಿಠ್ಠಲ ಈ ಬಗ್ಗೆ ನನಗೆ ಮತ್ತು ಆತನ ಪರಿಚಯದ ಕೆಲ ಮಾಧ್ಯಮ ಮಿತ್ರರಿಗೂ ತನ್ನ ತಂದೆಯ ಬಗ್ಗೆ ಮಾಹಿತಿ ನೀಡಿದ್ದ. “ತಂದೆಯನ್ನು ನೋಡಲೇ ಬೇಕೆಂದಿದ್ದರೆ ಹೋಗು. ಇಲ್ಲದೆ ಇದ್ದರೆ ಪೂವಪ್ಪ ಮತ್ತು ಇತರರು ತಂದೆಯನ್ನು ಆಸ್ಪತ್ರೆಗೆ ದಾಖಲಿಸುವಂತೆ ನಾನು ಹೇಳುತ್ತೇನೆ” ಎಂದು ಅವನಿಗೆ ನಾನೇ ಹೇಳಿದ್ದೆ. ಆದರೂ ಆತನ ಮನಸ್ಸು ತಂದೆ ಮತ್ತು ತಾಯಿಯನ್ನು ನೋಡಬೇಕು ಎಂದು ಹಂಬಲಿಸುತ್ತಿರುವುದನ್ನು ನಾನು ಬಲ್ಲವನಾದೆ.” ಸರಿ ಹೋಗು. ಆದರೆ ನಿನ್ನ ಕಾಲೇಜಿನ ಗುರುತು ಪತ್ರವನ್ನು ತೆಗೆದುಕೊಂಡು ಹೋಗು. ಮತ್ತು ಕಾಡಿನಲ್ಲಿ ಎಎನ್ಎಫ್ ಪೊಲೀಸರು ಎದುರಾದರೆ ನೀನಾಗಿಯೇ ಗುರುತು ಪತ್ರ  ತೋರಿಸಿ ಮಾತನಾಡು. ನಂತರ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಅವಕಾಶ ನೀಡುವಂತೆ ಕೇಳಿಕೊ” ಎಂದು ಅತನಿಗೆ ಸಲಹೆಗಳನ್ನು ನೀಡಿದ್ದೆ.

ಬಸ್ಸು ಇಳಿದು ಎರಡು ಗಂಟೆಗಳ ಕಾಲ ದಟ್ಟ ಅರಣ್ಯದಲ್ಲಿ ಎಲ್ಲೂ ಕೂಡಾ ಎಎನ್ಎಫ್ ಸಿಬ್ಬಂದಿಗಳು ವಿಠ್ಠಲ್‍ಗೆ ಸಿಕ್ಕಿಲ್ಲ. ಎತ್ತರದ ಗುಡ್ಡ ಸಿಕ್ಕಾಗೆಲ್ಲಾ ಆತನ ಮೊಬೈಲ್ ನೆಟ್‍ವರ್ಕ್ ಸಿಗುತ್ತಿತ್ತು. ಆಗೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದ. ನಾನು ಇನ್ನಷ್ಟೂ ಸಲಹೆಗಳನ್ನು ನೀಡುತ್ತಿದ್ದೆ. ಮಧ್ಯಾಹ್ನದ ವೇಳೆಗೆ ಕುತ್ಲೂರಿನ ದಟ್ಟ ಅರಣ್ಯದ ನಡುವಿನ ತನ್ನ ಮನೆಗೆ ತಲುಪಿದ್ದ ವಿಠ್ಠಲನನ್ನು ವಿಚಾರಣೆಯ ನೆಪದಲ್ಲಿ ತಂದೆ ಲಿಂಗಣ್ಣನ ಜೊತೆ ಎಎನ್ಎಫ್ ತಂಡ ಬಂಧಿಸಿ ಕರೆದೊಯ್ದು ಎಫ್ಐಆರ್ ದಾಖಲಿಸಿ ಜೈಲಿಗಟ್ಟಿದೆ.

ಎಎನ್ಎಫ್ ತಂಡವು ಬಂಧಿತ ವಿಠ್ಠಲನ ಮನೆಯಲ್ಲಿ ಕರಪತ್ರ, ಬೈನಾಕ್ಯುಲರ್‌ನಂತಹ ಸಲಕರಣೆಗಳು ದೊರಕಿವೆ ಎಂಬುದಾಗಿ ಹೇಳಿಕೊಂಡಿದೆ. ವಿಠ್ಠಲನ ಬಳಿ ನಕ್ಸಲ್ ಪರವಾದ ಲೇಖನಗಳು, ನಕ್ಸಲ್ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹಾಗೂ ನಕ್ಸಲರು ಮೃತರಾದ ವರದಿಗಳ ಪತ್ರಿಕಾ ಸಂಗ್ರಹ ಕೂಡಾ ಇತ್ತು ಎಂಬ ಆರೋಪವನ್ನೂ ಹೊರಿಸಿದೆ. (ಮಾಮೂಲಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಂಗಳೂರು ನಗರದಲ್ಲಿರುವ ಮೂನ್ಶೈನ್ ಎಂಬ ಬ್ಯೂಟಿ ಪಾರ್ಲರಿನ ಡ್ರಾವರ್‌‌‌‌‌‌ನಲ್ಲಿ ಕಾಂಡೋಮ್ ಪ್ಯಾಕೇಟ್ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಮಹಿಳಾ ಕಾರ್ಮಿಕರನ್ನು ಅರೆಸ್ಟ್ ಮಾಡಿದವರಿಗೆ ಕರಪತ್ರ ಇಡೋದೇನೂ ಮಹಾಸಂಗತಿಯಲ್ಲ ಬಿಡಿ.)

ಈ ನಡುವೆ, ವಿಠ್ಠಲ ಮತ್ತು ಆತನ ತಂದೆಯ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಬೆಳ್ತಂಗಡಿಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಎನ್ಎಫ್ ತಂಡವು ಸುಳ್ಳು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ವಿಠ್ಠಲನನ್ನು ಹತ್ತಿರದಿಂದ ಬಲ್ಲ ಸಹಪಾಠಿಗಳು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಚಿನ್ನಪ್ಪ ಗೌಡರಿಗೆ ವಿವಿ ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ವಿಠ್ಠಲನ ತಂದೆ ವಯೋವೃದ್ಧರಾದ ಲಿಂಗಣ್ಣ ಮಲೆಕುಡಿಯರಿಗೆ ಪೊಲೀಸರು ನೀಡಿರುವ ದೈಹಿಕ ದೌರ್ಜನ್ಯದಿಂದಾಗಿ ಕಾಲಿನ ಮಣಿಗಂಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರನ್ನೀಗ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ವಿವಿ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದು ತರಗತಿಯಲ್ಲಿ ನೂರು ಶೇಕಡಾ ಹಾಜರಾತಿಯನ್ನು ಹೊಂದಿದ್ದ ವಿಠ್ಠಲ್ ಮೇಲೆ ಪೊಲೀಸರು ಸೆಕ್ಷನ್ 10 ಮತ್ತು 13(2) ಅನ್ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಷನ್) ಆ್ಯಕ್ಟ್ ಮೂಲಕ ರಾಜದ್ರೋಹದ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಉಜ್ವಲ ಭವಿಷ್ಯದ ಕನಸು ಹೊತ್ತಿದ್ದ ಯುವಕ ಮತ್ತಾತನ ಮನೆಯವರಿಗೆ ಇದೀಗ ಎಎನ್ಎಫ್ ತಂಡವು ನಕ್ಸಲ್ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟಿರುವುದು ನಿಜಕ್ಕೂ ವಿಷಾದನೀಯ.

5 thoughts on “ನಾಡಿನ ನಕ್ಸಲ್ ನಿಗ್ರಹ ದಳದಿಂದ ಕಾಡಿನ ಅಮಾಯಕ ವಿದ್ಯಾರ್ಥಿಯ ಬಂಧನ

  1. g.mahanthesh.

    ನಕ್ಸಲ್​ ನಿಗ್ರಹ ದಳ ನಡೆಸುತ್ತಿರುವ ಕೂಬಿಂಗ್​ ಕಾರ್ಯಾಚರಣೆ ಬಗ್ಗೆನೇ ಸಾಕಷ್ಟು ಅನುಮಾನಗಳಿದಾವೆ. ಸ್ಟೇಷನ್​ನಲ್ಲಿ ಬೇಜಾರಾದಾಗ ಪಿಕ್​ನಿಕ್​ ಹೋಗೋ ರೀತೀಲಿ ಕೂಬಿಂಗ್​ ನಡೆಸ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದಾವೆ. ಶಿವಮೊಗ್ಗದಲ್ಲಿ ಎಸ್ಪಿಯಾಗಿದ್ದ ಮುರುಗನ್​(ಹಾಲಿ ಸಿಐಡಿ ಡಿಜಿ)ನಡೆಸಿದ್ದ ಕೂಬಿಂಗ್​ ಕಾರ್ಯಾಚರಣೆ ಬಗ್ಗೆ ಆಕ್ಷೇಪಗಳಿದಾವೆ. ಎಎನ್​ಎಫ್​ ಮಾಡುತ್ತಿರುವ ಖರ್ಚು ವೆಚ್ಚ ಸಾರ್ವಜನಿಕರ ಎದುರು ಬಹಿರಂಗ ಪಡಿಸಿದರೆ, ಇದರ ಬಂಡವಾಳ ಬಯಲಾಗಲಿದೆ. ಅನ್​ ಸಾಲ್ವ್​ ಕೇಸ್​ಗಳನ್ನ ಸಾಲ್ವ್​ ಮಾಡಲಿಕ್ಕೆ ಪೊಲೀಸರು, ಅಮಾಯಕರನ್ನ ಬಂಧಿಸಿ, ಸ್ವಕುಚಮರ್ಧನ ಮಾಡುತ್ತಿರುವುದೇನು ಗುಟ್ಟಾಗಿ ಉಳಿದಿಲ್ಲ.ಸ್ನಾತಕೋತ್ತರ ವಿದ್ಯಾರ್ಥಿ ವಿಠಲ ಅವರನ್ನ ಬಂಧಿಸಿರುವುದಕ್ಕೆ ಎಸ್​ಎಫ್​ಐ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಬಿಡುಗಡೆಗೆ ಹಕ್ಕೊತ್ತಾಯ ಮಂಡಿಸುವ ಅಗತ್ಯತೆ ಇದೆ.
    ಏನಂತೀರಿ….

    Reply
  2. Ananda Prasad

    ಪ್ರತಿಗಾಮಿ ಮನೋಭಾವದವರಿಗೆ ಪ್ರಗತಿಶೀಲ ಮನೋಭಾವದವರೆಲ್ಲ ನಕ್ಸಲ್ ಬೆಂಬಲಿಗರೆಂಬ ಪೂರ್ವಾಗ್ರಹ ಇರುವ ಸಂಭವ ಇರುತ್ತದೆ. ಪ್ರತಿಗಾಮಿಗಳು ಇದೇ ರೀತಿ ಚತ್ತೀಸ್ಗಡದಲ್ಲಿ ವೈದ್ಯ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ವಿನಾಯಕ್ ಸೇನ್ ಕೂಡ ನಕ್ಸಲ ಬೆಂಬಲಿಗರೆಂದು ಜೈಲಿಗಟ್ಟಿದ ಉದಾಹರಣೆ ಇದೆ. ಅಮಾಯಕರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಅವರು ನಿಜವಾಗಿಯೂ ನಕ್ಸಲರಾಗಿ ಸೇಡು ತೀರಿಸಿಕೊಳ್ಳಲು ಹಾತೊರೆಯುಂತೆ ಮಾಡಬಹುದು ಎಂಬ ಎಚ್ಚರ ಆಡಳಿತ ನಡೆಸುವವರಿಗೆ ಇರಬೇಕು.

    Reply
  3. Sadanand

    ನಕ್ಸಲ್​ ನಿಗ್ರಹ ದಳ ನಡೆಸುತ್ತಿರುವ ಕೂಬಿಂಗ್​ ಕಾರ್ಯಾಚರಣೆ ಬಗ್ಗೆನೇ ಸಾಕಷ್ಟು ಅನುಮಾನಗಳಿದಾವೆ. ಅಂತಹದ್ರಲ್ಲಿ ಕಾಡಿನ ಮದ್ಯ ಹೋಗೋಕೆ ಆಗದೆ ಮದ್ಯದಲ್ಲೆ ಸುತ್ತಿ ಭಯ ಪಟ್ಟು ಬರುವ ಈ ಎಎನ್ಎಪ್ ನಕ್ಸಲ್ ರನ್ನು ಹಿಡಿಯಲಾಗದೆ ಅಮಾಯಕ ಮಲೆಕುಡಿಯ ಜನಾಂಗದ ಯುವಕನಿಗೆ ನಕ್ಸಲ್ ಪಟ್ಟ ಕಟ್ಟಿ ಬಂದಿಸುವಲ್ಲಿ ಯಶಸ್ವಿಯಾಗಿದೆ. ಅವರ ಈ ಹಿರಿಮೆಗೆ ಏನ್ ಹೇಳೋಣ. ಕಾಡಿಂದ ಹೊರಬಂದು ಸಮಾಜದಲ್ಲಿ ತಾನೂ ಎಲ್ಲರಂತೆ ಶಿಕ್ಷಣ ಪಡೆದು ಎನಾದ್ರು ಸಾದಿಸೋಣ ಅಂತಾ ಇದ್ದ ಯುವಕನಿಗೆ ನಕ್ಸಲ್ ಪಟ್ಟಿ ಕಟ್ಟಿದಾರಲ್ಲಾ ಇವ್ರಿಗೆ ನಿಜವಾಗಲೂ ತಾಕತ್ತಿದ್ದ್ರೆ ನಕ್ಸಲ್ ರನ್ನ ಬಂದಿಸಲಿ ಅದು ಬೀಟ್ಟು ಅಮಾಯಕ್ರನ್ನಲ್ಲಾ. ನಕ್ಸಲ್ ರ ಹೆಸರಲ್ಲಿ ತಮ್ಮವ್ರನ್ನೆ ಕೊಂದಿದೆ ಎಎನ್‌ಎಫ್‌, ಹಾಗಿರುವಾಗ ಬುಡಕಟ್ಟು ಜನಾಂಗದ ಒಬ್ಬ ಸಾಮಾನ್ಯ ಯುವಕನಿಗೆ ನಕ್ಸಲ್ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟೊದು ದೊಡ್ಡ ವಿಷಯ ಅಲ್ಲಾ. ಜೀವಕ್ಕೇ ಬೆಲೆ ಕೊಡದ ಎಎನ್‌ಎಪ್ ಜೀವನಕ್ಕೆ ಕೊಡುತ್ತಾ?

    Reply
  4. ಮುಹಮ್ಮದ್ ಇರ್ಷಾದ್

    ನೂರು ಅಪರಾದಿಗಳೂ ಕಾನೂನಿನ ಕೈಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ ಒಬ್ಬ ಻ ಅಮಾಯಕ ನಿರಪರಾದಿಗೆ ಶಿಕ್ಷೆ ಆಗಬಾರದು ಎಂದು ನಮ್ಮ ಸಂವಿಧಾನ ಹೇಳುತ್ತೆ. ಆದರೆ ದುರದೃಷ್ಟಕರ ಎಂಬುವಂತ್ತೆ ಅದೆಷ್ಟೋ ಅಮಾಯಕರು ತಪ್ಪು ಮಾಡದೆ ಶಿಕ್ಷೆಯನ್ನು ಅನುಭವಿಸುವಂತ್ತಾಗಿದೆ. ಎ.ಎನ್.ಎಫ್ ನಿಂದ ಬಂಧಿತನಾದ ವಿಠಲನ ಕತೆಯೂ ಇದೇ ಎಂಬೂದರಲ್ಲಿ ಸಂಶಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಪತ್ರಕರ್ತರಿಗೆ ಕುತ್ಲೂರು ಪ್ರದೇಶದ ಸುದ್ಧಿಗಳಿಗೆ ಮಾಹಿತಿದಾರನಾಗಿದ್ದ ವಿಠಲ ಎಂಬ ಮುಗ್ದ ಯುವಕ ಇದೀಗ ನಕ್ಸಲ್ ಆರೋಪದಲ್ಲಿ ಜೈಲಿಗಟ್ಟಿರುವುದು ಅಘಾತಕಾರಿ. ಈತನ ಮುಗ್ಧ ನಡೆಯೇ ನನ್ನನ್ನು ಸೇರಿದಂತ್ತೆ ಅನೇಕ ಪತ್ರಕರ್ತರಿಗೆ ಹತ್ತಿರವಾಗಿದ್ದ. ನಾನೂ ಒಬ್ಬ ಉತ್ತಮ ಪತ್ರಕರ್ತನಾಗಿ ಹೊರಹೊಮ್ಮಬೇಕು ಎಂಬ ಆಸೆಯನ್ನೂ ಇಟ್ಟುಕೊಂಡಿದ್ದ ಈ ಬಡ ಯುವಕ. ಯಾವತ್ತೂ ನಕ್ಸಲ್ ಹಿಂಸಾ ಚಟುವಟಿಕೆಯನ್ನು ವಿರೋಧಿಸುತ್ತಿದ್ದ ಮಲೆಕುಡಿಯ ಯುವಕನನ್ನು ಇದೀಗ ನಕ್ಸಲ್ ಹೆಸರಿನಲ್ಲಿ ಬಂಧಿಸಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಸರ್ಕಾರ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಅಮಾಯಕನನ್ನು ಬಿಡುಗಡೆಗೊಳಿಸಿ ಎಂಬುವುದೇ ನಮ್ಮೆಲ್ಲರ ಆಗ್ರಹ.

    Reply
  5. vageesh kumar g a

    ಎಲ್ಲಾ ವಾದಗಳೂ ಸರಿ. ವಿಠಲ್ ನಂತಹ ಅಮಾಯಕರಿಗೆ ಶಿಕ್ಷೆ ಆಗಬಾರದು. ಇದರಲ್ಲಿ ಸಂದೇಹವೇ ಇಲ್ಲ. ಆದ್ರೆ, ನಕ್ಸಲ್ ಎಂಬ ಹೆಸರಿನಲ್ಲಿ ಮುಗ್ಧ ಕಾಡಿನ ನಿವಾಸಿಗಳನ್ನು ಪೊಲೀಸರ ಬಲೆಗೆ ಬೀಳಿಸುತ್ತಾ, ತಾವು ಕಾಡಿನಲ್ಲಿ ಮಜಾ ಮಾಡುವ ನಕ್ಸಲೀಯರು ಇದನ್ನು ಅರಿತುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಬಂಧೂಕು ಎತ್ತಿದರೆ, ಅದು ಭಯೋತ್ಪಾದನೆಯೇ ಹೊರತು ಜನರಿಂದ ಸಂತಾಪ ಪಡೆದುಕೊಳ್ಳುವ ಪ್ರಜಾತಾಂತ್ರಿಕ ಹೋರಾಟವಾಗುವುದಿಲ್ಲ. ಎಡ-ಬಲ ಪಂಥಗಳೆರಡನ್ನೂ ಬಿಟ್ಟು ಎಲ್ಲರೂ ನ್ಯೂಟ್ರಲ್ ಆಗಿ ಯೋಚನೆ ಮಾಡಿದ್ರೆ, ಸಮಸ್ಯೆಯ ಮೂಲವನ್ನು ಕಂಡು ಹಿಡಿದು ರಸ್ತೆ-ನೀರು, ವಿದ್ಯಾಭ್ಯಾಸ, ಉದ್ಯೋಗದಂತಹ ಮೂಲ ಅವಶ್ಯಕತೆಗಳನ್ನು ಸರ್ಕಾರ ನೀಡಿದ್ರೆಇಂತಹ ಪಿಡುಗುಗಳು ತಲೆ ಎತ್ತುವುದೇ ಇಲ್ಲ. ಆದ್ರೆ, ಇಂತಹ ಸಮಸ್ಯೆಗಳಿಂದಲೇ ಚಳಿ ಕಾಯಿಸಿಕೊಳ್ಳುವ ಸರ್ಕಾರಗಳಿಗೆ ಇವುಗಳ ಮೂಲೋತ್ಪಾಟನೆ ಆಗುವುದೂ ಬೇಕಿಲ್ಲದಿರುವುದು ವಿಪರ್ಯಾಸ.

    Reply

Leave a Reply

Your email address will not be published. Required fields are marked *