ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ


-ಬಿ. ಶ್ರೀಪಾದ ಭಟ್


 

“ನೀನು ಶ್ರೇಷ್ಟನಾಗುವುದು ಮಹಾತ್ವಾಕಾಂಕ್ಷೆಯಿದ್ದಾಗ. ಅದರೆ ಅದರ ಜೊತೆಗೆ ಬರುವ ಖಾಯಿಲೆಗಳಿಂದ ಮುಕ್ತನಾದಾಗ. ಮಾಡುವ ಕೆಲಸಗಳು ಪವಿತ್ರವಾಗಿರಬೇಕೆಂದು ಅರಿವಾದಾಗ.” – ಲೇಡಿ ಮ್ಯಾಕ್ ಬೆತ್ ( ಅನು.:ರಾಮಚಂದ್ರ ದೇವ )

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಸೌಂದರ್ಯ ಅವನ/ಅವಳ ದೈಹಿಕ ಅಂದದ ಮೂಲಕ ಅಳೆಯುತ್ತೇವೆ. ಅಥವ ಅಳೆಯಲ್ಪಡುತ್ತದೆ. ಅವರ ಬಣ್ಣ, ಎತ್ತರ, ಕಣ್ಣು, ಮೂಗು, ತೂಕ, ಹೀಗೆ ಅನೇಕ ಸಂಗತಿಗಳು ಗಣನೆಗೆ ಒಳಪಡುತ್ತವೆ .ಈ ಬಾಹ್ಯ ಸೌಂದರ್ಯ ಹೆಚ್ಚಾಗಿ ಆಕರ್ಷಣೆಗೆ ಪರಿಗಣಿತವಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಜನಪ್ರಿಯ ವ್ಯಕ್ತಿಗಳಾದ ಅನೇಕ ಸಿನಿಮಾ ನಟ/ನಟಿಯರು, ಆಟಗಾರರು, ಅಥ್ಲೀಟ್ ಗಳು ,ರಾಜಕಾರಣಿಗಳು ಅಥವಾ ನಾವು ದಿನ ನಿತ್ಯ ಮುಖಾಮುಖಿಯಾಗುವ ವ್ಯಕ್ತಿಗಳು, ಹೀಗೆ ಈ ಬಾಹ್ಯ ಸೌಂದರ್ಯದ ಆಕರ್ಷಣೆಗೆ, ಮನಸೋಲುವಿಕೆಗೆ ಅನೇಕ ಮಜಲುಗಳಿವೆ .ಇದು ಸಹಜವಾದದ್ದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ವ್ಯಕ್ತಿಯೊಬ್ಬನ ದೈಹಿಕ ಸೌಂದರ್ಯವನ್ನು ಮೀರಿ, ದೈಹಿಕ ಆಕರ್ಷಣೆಯ ಕೊರತೆಯಿದ್ದರೂ, ತಮ್ಮ ಅನೇಕ ದೈಹಿಕ ನೂನ್ಯತೆಗಳ ನಡುವೆಯೂ ತನ್ನ ಕಾರ್ಯಕ್ಷೇತ್ರದಲ್ಲಿನ ಸಾಧನೆಯಿಂದ ಅವನು/ಅವಳು ಆಕರ್ಷಕವಾಗಿ ಕಂಗೊಳಿಸುವುದು ನಿಜಕ್ಕೂ ವಿಶೇಷವೆನಿಸುತ್ತದೆ.

ಇತ್ತೀಚೆಗೆ “ಪಾನ್ ಸಿಂಗ್ ಟೋಮರ್” ಎನ್ನುವ ಹಿಂದಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಇರ್ಫ಼ಾನ್ ಖಾನ್ ಅತ್ಯಂತ ಸಾಧಾರಣ ರೂಪಿನ ನಟ. ಹತ್ತರಲ್ಲೊಬ್ಬ. ಆದರೆ ತನ್ನ ಶ್ರೇಷ್ಟ ನಟನೆಯ ಮೂಲಕ, ಆ ಚಿತ್ರದ ಗೆಲುವಿನ ಮೂಲಕ, ಇಂದು ಆಕರ್ಷಕ ನಟನಾಗಿ ಮೇಲೇರುತ್ತಿದ್ದಾನೆ. ಇದೇ ಮಾತು ನಾಸಿರುದ್ದೀನ್ ಶಾ ಹಾಗೂ ಓಂಪುರಿ ಅವರಂತಹ ಸಾಧಾರಣ ರೂಪಿನ ಶ್ರೇಷ್ಟ ನಟರಿಗೂ ಅನ್ವಯಿಸುತ್ತದೆ. ಇದೇ ಮಾತು ಸ್ಮಿತಾ ಪಾಟೀಲ್‌ಳಂತಹ ಅದ್ಭುತ ನಟಿಗೆ ಕೂಡ ಅನ್ವಯಿಸುತ್ತದೆ. ಸುಂದರಿಯರಾದ, ಮಾದಕ ರೂಪಿನ ಶ್ರೀದೇವಿ. ಜಯಪ್ರದ ಅವರಿಗಿಂತಲೂ ಕಪ್ಪಗಿನ ಅನಾಕರ್ಷಕ ರೂಪಿನ ಸ್ಮಿತಾ ಪಾಟೀಲ್, ಶಬನ ಅಜ್ಮಿ‌ರಂತಹ ಅದ್ಭುತ ನಟಿಯರು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸಿನ ರಾಣಿಯರಾಗಿದ್ದರು. ಇದಕ್ಕೆ ಕಾರಣ ಅವರ ಮನೋಜ್ನ ಅಭಿನಯದ ಸೌಂದರ್ಯ. ಅವರ ಬುದ್ಧಿಜೀವಿ ವ್ಯಕ್ತಿತ್ವ. ಇದೇ ಮಾತು ನಮ್ಮ ಪಿ.ಟಿ.ಉಷಾ ಎನ್ನುವ ಅದ್ಭುತ ಆಟಗಾರ್ತಿ ಬಗೆಗೂ ನಿಜ. ನೋಡಲಿಕ್ಕೆ ಕಪ್ಪಗೆ, ತೆಳ್ಳಗೆ, ಅತ್ಯಂತ ಸಾಧಾರಣ ರೂಪಿನ ಹುಡುಗಿಯಾಗಿದ್ದ ಈ ಪಿ.ಟಿ.ಉಷಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಗೆಲ್ಲತೊಡಗಿದಾಗ ಅವಳ ವ್ಯಕ್ತಿತ್ವವೇ ಆಕರ್ಷಕವಾಗಿ ಕಂಗೊಳಿಸತೊಡಗಿತು. ಅವಳ ಕಪ್ಪಗಿನ ಸಾಧಾರಣ ರೂಪ ನೇಪಥ್ಯಕ್ಕೆ ಸರೆಯಿತು.

ತನ್ನ ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ದೇಹದಿಂದ ಅನಾಕರ್ಷಕವಾಗಿ ಕಂಡುಬರುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ “ಅಖಿಲೇಶ್ ಸಿಂಗ್ ಯಾದವ್” ತಾನು ಹಗಲಿರುಳೂ ದುಡಿದು ,ಹಾದಿ ತಪ್ಪಿದ, ಸೋತಿದ್ದ ಸಮಾಜವಾದಿ ಪಕ್ಷವನ್ನು ತಳಮಟ್ಟದಿಂದ ,ಕಾರ್ಯಕರ್ತರ ಮೂಲಕ ಮರಳಿ ಅಖಾಡಕ್ಕೆ ಕರೆತಂದು 2012ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸುವಂತೆ ಮಾಡಿ ಮತ್ತೆ ಅಧಿಕಾರವನ್ನು ತಂದು ಕೊಟ್ಟಿದ್ದಾನೆ. ಈ ಮೂಲಕ ಸಮಾಜವಾದಿ ಪಕ್ಷದ ಗೆಲುವಿನ ರೂವಾರಿಯಾಗಿದ್ದಾನೆ. ಇನ್ನು ಮುಂದಿನ ಒಂದು ತಿಂಗಳು ಈ ಅಖಿಲೇಶ ಯಾದವ್ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಈ ಅಖಿಲೇಶ್ ತನ್ನ ಈ ಸ್ವಯಾರ್ಜಿತ ಗೆಲುವಿನ ಮೂಲಕ ಸಹಜವಾಗಿಯೇ ಆಕರ್ಷಕವಾಗಿ ಕಾಣತೊಡಗಿದ್ದಾನೆ. ಮೇಲ್ಕಾಣಿಸಿದ ಆತನ ಸಾಧಾರಣ ರೂಪ ಇಂದು ಅಸಾಧಾರಣವಾಗಿಯೂ, ಸುಂದರವಾಗಿಯೂ ಕಾಣಲ್ಪಡತೊಡಗುತ್ತದೆ. ಎಲ್ಲರೂ ಈ ಅಖಿಲೇಶ್ ಯಾದವ್‌ನಲ್ಲಿ ನಾಯಕನ ರೂಪು ಕಾಣತೊಡಗಿದ್ದಾರೆ.ಇದೇ ಗೆಲುವಿನ ಗಮ್ಮತ್ತು. ಆದೇ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ದೈಹಿಕವಾಗಿ ಆಕರ್ಷಕವಾಗಿದ್ದ, ಕಣ್ಣು, ಮೂಗು, ಬಣ್ಣ, ಎತ್ತರ, ಧ್ವನಿ ಮುಂತಾದವುಗಳೆನ್ನೆಲ್ಲಾ ಸಮರೂಪವಾಗಿ ಪಡೆದಿದ್ದ, ತನ್ನ 42ರ ವಯಸ್ಸಿನಲ್ಲಿಯೂ ಅತ್ಯಂತ ಸುಂದರನಾಗಿ ಕಾಣುತ್ತಿದ್ದ ಈ ರಾಹುಲ್ ಗಾಂಧಿಯ ಡ್ರೆಸ್ ಕೋಡ್ ಕೂಡ ಅತನ ಸುಂದರ ರೂಪಿಗೆ ಮೆರುಗು ನೀಡುತ್ತಿತ್ತು. ಅತನ ಕುರುಚಲು ಗಡ್ದ ಸಹ! ಆದರೆ ಏನಾಯಿತು? ರಾಹುಲ್ ಗಾಂಧಿ ತನ್ನ ರಾಜಕೀಯ ಸ್ಥಾನಮಾನವನ್ನು,ತನ್ನ ಘನತೆಯನ್ನು ಪಣಕ್ಕಿಟ್ಟು ಹೋರಾಡಿದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯವಾಗಿ ಸೋಲನ್ನು ಅನುಭವಿಸಿ ಹೆಚ್ಚೂ ಕಡಿಮೆ ನೆಲ ಕಚ್ಚಿದೆ. ಅಲ್ಲದೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ. ಇದರ ವಿಶ್ಲೇಷಣೆಗೆ ಬೇರೆಯೆದೇ ವೇದಿಕೆ ಬೇಕಾಗುತ್ತದೆ.ಆದರೆ ಇಂದು ಈ ತನ್ನ ಹೀನಾಯ ಸೋಲಿನ ಮೂಲಕ ಸುಂದರನಾದ ರಾಹುಲ್ ಗಾಂಧಿ ಅತ್ಯಂತ ಅನಾಕರ್ಷಕವಾಗಿ ಕಾಣತೊಡಗಿದ್ದಾನೆ. ಈ ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಯುವರಾಜ ರಾಜಕೀಯ ಯುದ್ಧದಲ್ಲಿ ಸೋತಂತಹ ದಿನಗಳಲ್ಲಿ ಇಂದು ಆತನ ಮನಮೋಹಕ ಬಣ್ಣ, ಹೊಳಪು, ಸುಂದರ ಕಾಯ ಯಾವುದೂ ಈತನನ್ನು ಮೇಲಕ್ಕೆತ್ತಲಾರವು. ಗೆಲುವಿಗೆ ಮಾತ್ರ ಆ ಸಾಧ್ಯತೆ ಇತ್ತು. ಇದು ಅಖಿಲೇಶ್ ಯಾದವ್ ಪಾಲಿಗೆ ನಿಜವೆಂದು ಸಾಬೀತಾಗಿದೆ. ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ಅನಾಕರ್ಷಕ ಅಖಿಲೇಶ್ ಯಾದವ್ ತನ್ನ ಗೆಲುವಿನ ಮೂಲಕ ಆಕರ್ಷಕವಾಗಿ ಎಲ್ಲರ ಕಣ್ಮಣಿಯಾಗಿ ಕಂಗೊಳಿಸುತ್ತಿದ್ದರೆ ಆಕರ್ಷಕ, ಸುಂದರ ಪುರುಷ ರಾಹುಲ್ ಗಾಂಧಿ ತನ್ನ ಹೀನಾಯ ಸೋಲಿನೊಂದಿಗೆ ಮೂಲೆಗೆ ತಳ್ಳಲ್ಪಟ್ಟಿದ್ದಾನೆ. ಅನಾಕರ್ಷಕವಾಗಿ ಕಾಣುತ್ತಿದ್ದಾನೆ. ಇದೇ ಪ್ರಾಮಾಣಿಕ ಗೆಲುವಿನ ಮನಮೋಹಕ ಆದರೆ ನಿಷ್ಟುರ ಕಠೋರ ದೃಶ್ಯಗಳು.

ಇಂದು ಯಶಸ್ಸಿನ ಅಲೆಯ ಮೇಲಿರುವ ಅಖಿಲೇಶ್ ಸಿಂಗ್ ಯಾದವ್‌ಗೆ ಮ್ಯಾಕ್ ಬೆತ್ ನಾಟಕದಲ್ಲಿ ಬ್ಯಾಂಕೋ ಹೇಳಿದ “ಹೊಸ ಗೌರವಗಳು ಅವನಿಗೆ ಸಂದಿವೆ, ಅವು ಹೊಸ ಬಟ್ಟೆಗಳಂತೆ; ದೇಹಕ್ಕೆ ಒಗ್ಗುವುದು ಉಪಯೋಗಿಸತೊಡಗಿದ ಮೇಲೆ,”ಎನ್ನುವ ಮನೋಜ್ಞ ಮಾತುಗಳು ಅರ್ಥವಾದರೆ ಎಷ್ಟು ಚೆನ್ನ! ರಾಮ ಮನೋಹರ ಲೋಹಿಯಾ ಅವರನ್ನು ಓದತೊಡಗಿದರೆ ಎಷ್ಟು ಚೆನ್ನ! ಒಂದು ವರ್ಷದ ನಂತರ ಲೋಹಿಯಾರ ಕೆಲವು ಮಾತುಗಳನ್ನು ತನ್ನ ತೊದಲು ನುಡಿಗಳಲ್ಲಿ ಹೇಳುವಂತಾದರೆ ಎಷ್ಟು ಚೆನ್ನ! ಬುಂದೇಲಖಂಡ, ಪೂರ್ವಾಂಚಲದಲ್ಲಿನ ಅನೇಕ ದಲಿತರ ಓಟುಗಳು ಈ ಬಾರಿ ಸಮಾಜವಾದಿ ಪಕ್ಷಕ್ಕೆ ಸಂದಿದ್ದರ ಹಿಂದಿನ ಸಾಮಾಜಿಕತೆ ಈ ಅಖಿಲೇಶ್ ಅರ್ಥ ಮಾಡಿಕೊಂಡರೆ, ಮುಸ್ಲಿಂರ ಓಟ್ ಬ್ಯಾಂಕ್ ಹೇಗೆ ಮತ್ತು ಏಕೆ ಸಂಘಟಿತವಾಗಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿತು ಎನ್ನುವುದನ್ನು ಈ ಅಖಿಲೇಶ್ ಅರಿತರೆ, ಯಾದವರು ಇಂದು ಒಂದು ಹಿಂದುಳಿದ ಜಾತಿಯಾಗಿ ಉಳಿದಿಲ್ಲ ಅದು ಒಂದು ಮಧ್ಯಮ ವರ್ಗದ, ಬಲಿಷ್ಟ ದಬ್ಬಾಳಿಕೆಯ ಜಮೀನ್ದಾರಿ ಜಾತಿಯಾಗಿ ಮೆರೆಯುತ್ತಿದೆ ಎನ್ನುವುದರ ಹಿನ್ನೆಲೆಯ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮನನ ಮಾಡಿಕೊಂಡರೆ, ಎಷ್ಟು ಚೆನ್ನ ಅಲ್ಲವೆ? ಇದೆಲ್ಲದಕ್ಕಿಂತ ಮುಖ್ಯವಾದದ್ದು ಅಖಿಲೇಶ್ ಸಿಂಗ್ ಯಾದವ್ ಎನ್ನುವ ಯುವ ನಾಯಕನಿಗೆ 25 ರಿಂದ 30 ರ ವಯಸ್ಸಿನ ಆಜುಬಾಜಿರುವ ಶೇಕಡ 35 ರಷ್ಟು ಯವ ಜನಾಂಗ ಇಂದು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಯವ ಜನತೆಯ ಬೆಂಬಲವೇ ಇವತ್ತಿನ ಸಮಾಜವಾದಿ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದು, ಬಲು ದೊಡ್ಡ ತಿರುವು ನೀಡಿದ್ದು. ಸಹಜವಾಗಿಯೇ Generation next ಹುಡುಗನಂತಿರುವ ಯುವರಾಜ “ರಾಹುಲ್ ಗಾಂಧಿ”ಯನ್ನು ಏತಕ್ಕೆ ಕೈ ಬಿಟ್ಟು ಅಖಿಲೇಶ್ ಸಿಂಗ್ ಯಾದವ್ ನನ್ನು ಕೈ ಹಿಡಿದರು ಎನ್ನುವುದರ ಒಳ ನೋಟಗಳನ್ನು ಈ ಅಖಿಲೇಶ್ ಅರ್ಥ ಮಾಡಿಕೊಂಡ ದಿನ, ಮುಂದಿನ ಎರಡು ವರ್ಷಗಳಲ್ಲಿ ತನಗೆ ಅರ್ಥವಾದಷ್ಟನ್ನು, ದಕ್ಕಿದಷ್ಟನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳ Blue print ಅನ್ನು ಈ ಅಖಿಲೇಶ್ ಸಿಂಗ್ ಯಾದವ್ ತಯಾರಿಸಿಕೊಂಡ ದಿನ ನಿಜಕ್ಕೂ ಉತ್ತರ ಪ್ರದೇಶದ ಭವಿಷ್ಯದ ಅರ್ಥಪೂರ್ಣ ಕನುಸುಗಳು ಸಾಕಾರಗೊಳ್ಳಬಹುದೇನೋ ಎನ್ನುವ ಅನುಮಾನಗಳ ಬೀಜ ಹುಟ್ಟಿಕೊಳ್ಳುವ ಹೊಸ ಚಿಂತನೆಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಕಡೆಯದಾಗಿ ಈ ಅಖಿಲೇಶ್ ಸಿಂಗ್ ಯಾದವ್, “ನಾನು ಉತ್ತರ ಪ್ರದೇಶದ ಎಲ್ಲಾ ವರ್ಗಗಳ ,ಜಾತಿಗಳ ಪ್ರತಿನಿಧಿ ಆಗಿರುವವರೆಗೂ ಇಲ್ಲಿ ಇನ್ನೆಂದೂ ಗೂಂಡಾ ರಾಜ್ ತಲೆಯತ್ತಲಾರದು, ಇಲ್ಲಿ ಇನ್ನೆಂದೂ ದಲಿತರ ಹತ್ಯಾಕಾಂಡಗಳು ನಡೆಯಲಾರವು, ಸಾಚಾರ್ ಕಮಿಟಿಯನ್ನು ಜಾರಿಗೊಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ,” ಎಂದು ಮೊದಲು ಘೋಷಿಸಿಲೇಬೇಕು. ಏಕೆಂದರೆ ಇದು minimum requirement ಗೆದ್ದ ನಾಯಕನಿಂದ. ಏಕೆಂದರೆ “ನೇತಾಜಿ”ಗೆ ವಯಸ್ಸಾಗಿದೆ. ಅವರು ಇದನ್ನು ಹೇಳುವುದಿರಲಿ ಇಂತಹ ಮಾತುಗಳೂ ಕೂಡ ನೆನಪಿರಲಾರವು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)

3 thoughts on “ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ

  1. Ananda Prasad

    ಅಖಿಲೇಶ್ ಯಾದವ್ ಇಂಜಿನೀಯರಿಂಗ್ ಪದವೀಧರ (ಮೈಸೂರು ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್) ಮತ್ತು ಪರಿಸರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ (ಸಿಡ್ನಿ ವಿಶ್ವವಿದ್ಯಾನಿಲಯ, ಆಷ್ಟ್ರೇಲಿಯ). ಸಮಾಜವಾದಿ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಆಧುನಿಕ ವೈಜ್ಞಾನಿಕ ಚಿಂತನೆಯೊಂದಿಗೆ ನಿಜವಾಗಿಯೂ ಮುನ್ನಡೆದರೆ ಭಾರತಕ್ಕೆ ಒಂದು ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ಸಾಧ್ಯತೆ ಅಖಿಲೇಶ್ ಯಾದವ್ ಅವರಿಗಿದೆ. ಜಡ್ಡುಗಟ್ಟಿ ಹೋಗಿರುವ ಭಾರತದ ರಾಜಕೀಯ ವ್ಯವಸ್ಥೆಗೆ ಹೊಸ ಚಿಂತನೆಗಳ, ಆಧುನಿಕ ಸ್ನಾತಕೋತ್ತರ ಪದವಿ ಪಡೆದ ಅರ್ಹ ಯುವ ನೇತಾರರ ಅವಶ್ಯಕತೆ ಇದೆ. ಭ್ರಷ್ಟಾಚಾರದಲ್ಲಿ ತೊಡಗದೆ ಪಕ್ಷವನ್ನು ಸಿದ್ಧಾಂತದ ಆಧಾರದಲ್ಲಿ ಮುನ್ನಡೆಸುವ ಹಾದಿಯಲ್ಲಿ ನಡೆದರೆ ಇದನ್ನು ಸಾಧಿಸಲು ಸಾಧ್ಯವಿದೆ. ಮುಲಾಯಂ ಸಿಂಗ್ ಯಾದವ್ ಮೇಲೆ ಭ್ರಷ್ಟಾಚಾರದ ಆಪಾದನೆಗಳಿವೆ. ಮುಂದೆ ಹೀಗಾಗದಂತೆ ನಡೆದುಕೊಂಡರೆ ಮಾತ್ರ ಪಕ್ಷ ಭಾರತಕ್ಕೆ ಒಂದು ಹೊಸ ದಿಕ್ಕನ್ನು ತೋರಿಸುವ ಸಾಧ್ಯತೆ ಇದೆ.

    Reply
  2. g.mahanthesh.

    ಖಂಡಿತವಾಗಿ ಪ್ರಜಾಪ್ರಭುತ್ವ ಭಾರತಕ್ಕೆ ಯುವ ನೇತಾರರ ಅವಶ್ಯಕತೆ ಇದೆ. ಆದ್ರೆ ಯುವ ನೇತಾರರು ಯಾವ ಹಿನ್ನೆಲೆಯಿಂದ ಬರುತ್ತಿದ್ದಾರೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ. ಯಾಕೆ ಈ ಮಾತು ಹೇಳುತ್ತಿದ್ದೇನೆಂದರೇ, ರಾಹುಲ್​ ಆಗಲಿ, ಅಖಿಲೇಶ್​ ಆಗಲಿ ಇವರೆಲ್ಲಾ ರಾಜಕಾರಣ ಅದರಲ್ಲೂ ಕುಟುಂಬ ರಾಜಕಾರಣ ಹಿನ್ನೆಲೆ ಇರುವಂಥವರೇ. ಅಂದು ನೆಹರೂ, ಇಂದಿರಾ ಕುಟುಂಬದ ಕುಡಿಗಳು ಇವತ್ತು ಮುಲಾಯಂಸಿಂಗ್​ ಯಾದವ್​ ಕುಟುಂಬದ ಕುಡಿಗಳ ಕೈಗೆ ಉತ್ತರ ಪ್ರದೇಶ ಸಿಲುಕಿದೆ. ಉತ್ತರ ಪ್ರದೇಶವನ್ನ ಪ್ರತಿಮೆಗಳ ರಾಜ್ಯವನ್ನಾಗಿಸಿದ್ದ ಬೆಹನ್​ ಮಾಯಾವತಿಗೆ ತಕ್ಕ ಪಾಠ ಕಲಿಸಲಾಗಿದೆ. ಈ ಪಾಠದಿಂದ ಬೆಹನ್​ ಮಾಯಾವತಿ ಕಲಿಯುಬೇಕು. ಕಲಿಯುವುದಕ್ಕೆ ಇನ್ನೂ 5 ವರ್ಷಗಳ ಕಾಲವಕಾಶ ಇದೆ. ಕಾನ್ಶಿರಾಮ್​ ಮತ್ತು ಬಹುಜನ ಸಮಾಜ ಪಾರ್ಟಿಯ ನಿಜವಾದ ಆಶಯಗಳು ನಿಜಕ್ಕೂ ಗೆಲ್ಲಬೇಕಿತ್ತು. ಅಲ್ಲವೇ…..

    Reply
    1. Ananda Prasad

      ಇಂದು ಭಾರತದಲ್ಲಿ ಎಡ ಪಕ್ಷಗಳನ್ನು ಹೊರತು ಪಡಿಸಿದರೆ ಬೇರೆ ಯಾವುದೆ ಪಕ್ಷವೂ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದಂತೆ ಕಂಡರೂ ಅದನ್ನು ನಿಯಂತ್ರಿಸುವುದು ಸಂವಿಧಾನ ಬಾಹಿರ ಶಕ್ತಿಯಾದ ಸಂಘ ಪರಿವಾರವೇ ಆಗಿದೆ. ಮಾಯಾವತಿ, ಜಯಲಲಿತಾ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ನವೀನ ಪಾಟ್ನಾಯಕ್, ದೇವೇಗೌಡ, ಮುಲಾಯಂ ಸಿಂಗ್, ಕರುಣಾನಿಧಿ, ಸೋನಿಯಾ ಗಾಂಧಿ ಇವರ ಪಕ್ಷಗಳೆಲ್ಲ ವ್ಯಕ್ತಿ ಕೇಂದ್ರಿತ ಅಥವಾ ಕುಟುಂಬ ಕೇಂದ್ರಿತ ಪಕ್ಷಗಳೇ ಆಗಿವೆ. ಮಾಯಾವತಿಯವರ ಬಿಎಸ್ಪಿ ಕೂಡ ವ್ಯಕ್ತಿ ಕೇಂದ್ರಿತ ಪಕ್ಷವೇ ಆಗಿದೆ. ಹೀಗಾಗಿಯೇ ಮಾಯಾವತಿ ಎಡವಲು ಕಾರಣವಾಗಿರುವುದು. ಮಾಯಾವತಿಯವರಲ್ಲಿ ವೈಚಾರಿಕ ಮನೋಭಾವದ ಕೊರತೆ ಇದೆ. ಪಕ್ಷದಲ್ಲಿ ತಾನೇ ಎಲ್ಲ ಎಂಬ ಅಹಂಕಾರವೂ ಇದೆ. ಪ್ರತಿ ಬಾರಿಯೂ ಮಾಯಾವತಿಯೆ ಮುಖ್ಯಮಂತ್ರಿ ಆಗಬೇಕೆಂದೇನೂ ಇಲ್ಲ. ನೈಜ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಮಾಯಾವತಿ ಬೇರೆ ನಾಯಕರಿಗೂ ಪಕ್ಷದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟು ಸಮೂಹ ನಿರ್ಣಯಗಳನ್ನು ತೆಗೆದುಕೊಂಡಿದ್ದರೆ ಇಂದು ಈ ರೀತಿ ಸೋಲಬೇಕಾಗಿರಲಿಲ್ಲ. ಬಿಎಸ್ಪಿಯೂ ಉಳಿದ ಪಕ್ಷಗಳಂತೆ ಇಂದು ವ್ಯಕ್ತಿ ಕೇಂದ್ರಿತ ಪಕ್ಷವಾಗಿದೆ.

      Reply

Leave a Reply

Your email address will not be published. Required fields are marked *