Daily Archives: March 9, 2012

ಗೋಹತ್ಯಾ ನಿಷೇಧ ಕಾನೂನು ಹಾಗೂ ವೋಟ್ ಬ್ಯಾಂಕ್ ರಾಜಕೀಯ

-ಆನಂದ ಪ್ರಸಾದ್

ಗೋವನ್ನು ಪವಿತ್ರವೆಂದೂ, ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆಂದೂ ಹೇಳಿ ಹಿಂದೂಗಳಲ್ಲಿ ಒಗ್ಗಟ್ಟು ತರಲು ಗೋವಿನ ವಿಷಯವನ್ನು ಹಿಂದುತ್ವವಾದಿಗಳು ಬಳಸುತ್ತಾ ಬಂದಿದ್ದಾರೆ. ಹೀಗಾಗಿ ಗೋಹತ್ಯೆ ನಿಷೇಧ ಕಾನೂನು ತರುವುದು ಒಂದು ದೊಡ್ಡ ರಾಷ್ಟ್ರಸೇವೆ ಹಾಗೂ ಹಿಂದೂಗಳ ಕಲ್ಯಾಣದ ಮಹತ್ವದ ಹೆಜ್ಜೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಗೋಹತ್ಯಾ ಕಾಯಿದೆಗೆ ತಿದ್ದುಪಡಿ ತಂದು ವಯಸ್ಸಾದ ದನಗಳು, ಕೃಷಿಕರಿಗೆ ಸಾಕಲಾಗದ ಗಂಡು ಕರುಗಳು ಇವುಗಳನ್ನು ಹತ್ಯೆಯ ಉದ್ದೇಶಕ್ಕೆ ಮಾರಲಾಗದಂತೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನೀತಿಯಿಂದ ರೈತರಿಗೆ ಹೊರೆಯಾಗಲಿದೆ. ಬಿಜೆಪಿ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಕಾನೂನಾದರೆ ಕೃಷಿಕರು ವಯಸ್ಸಾದ ದನಗಳನ್ನು ಹಾಗೂ ಗಂಡು ಕರುಗಳನ್ನು ಸಾಕಬೇಕು ಇಲ್ಲವೇ ಇವುಗಳನ್ನು ಗೋ ಆಶ್ರಮಕ್ಕೆ ಸೇರಿಸಬೇಕು ಹಾಗೂ ಅದರ ಸಾಗಣೆ ವೆಚ್ಚ, ಅದನ್ನು ಸಾಕುವ ವೆಚ್ಚವನ್ನು ರೈತರೇ ಭರಿಸಬೇಕೆಂದು ಹೇಳಲಾಗುತ್ತಿದೆ.

ಇಂಥ ಕಾನೂನು ಬಂದರೆ ರೈತರು ತಮ್ಮ ವಯಸ್ಸಾದ ದನಗಳನ್ನು ಹಾಗೂ ಗಂಡು ಕರುಗಳನ್ನು ರಸ್ತೆಯಲ್ಲಿ ಬಿಟ್ಟು ಬರುವ ಪ್ರವೃತ್ತಿ ಬೆಳೆದರೂ ಅಚ್ಚರಿ ಇಲ್ಲ. ಇಂಥ ದನಗಳು ಕಂಡ ಕಂಡವರ ಗದ್ದೆ, ತೋಟಗಳಿಗೆ ನುಗ್ಗಿ ದೊಡ್ಡ ತೊಂದರೆಯೂ ಉಂಟಾಗಬಹುದು. ಈ ಕಾನೂನು ಜಾರಿಯಾದರೆ ಹೈನುಗಾರಿಕೆಯ ವೆಚ್ಚ ಹೆಚ್ಚಲಿದ್ದು ಹಾಲಿನ ದರ ಇನ್ನಷ್ಟು ಹೆಚ್ಚಾಗಬಹುದು. ಏಕೆಂದರೆ ಈ ಕಾನೂನು ಜಾರಿಯಾದರೆ ಕರು ಹಾಕದ ವಯಸ್ಸಾದ ದನಗಳು ಹಾಗೂ ಕೃಷಿಕರು ಸಾಕಲು ಅಸಾಧ್ಯವಾದ ಗಂಡು ಕರುಗಳನ್ನು ಅವು ಸಾಯುವವರೆಗೆ ಒಂದೋ ಕೃಷಿಕರು ಅಥವಾ ಗೋ ಆಶ್ರಮದವರು ಸಾಕಬೇಕಿರುವುದರಿಂದ ಮೇವಿಗೆ ಬೇಡಿಕೆ ಹೆಚ್ಚಿ ಮೇವಿನ ಬೆಲೆ ಹೆಚ್ಚಳವಾಗುತ್ತದೆ. ಮೇವಿನ ಬೆಲೆ ಹೆಚ್ಚಿದಂತೆ ಹಾಲಿನ ಬೆಲೆ ಹೆಚ್ಚಲೇಬೇಕು. ಇಲ್ಲದಿದ್ದರೆ ರೈತರು ಹೈನುಗಾರಿಕೆಯನ್ನು ಮುಂದುವರಿಸುವುದು ಸಾಧ್ಯವಿಲ್ಲ. ಈಗ ಕೃಷಿಕರು ಹೈನುಗಾರಿಕೆಯಲ್ಲಿ ವರ್ಷಕ್ಕೊಂದು ಕರುವನ್ನು ಪಡೆಯುತ್ತಿರುವುದರಿಂದ ಇವುಗಳನ್ನು ಸಾಯುವವರೆಗೆ ಸಾಕಲೇಬೇಕಿರುವುದರಿಂದ ದನಕರುಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಆಗಬಹುದು. ಈ ಹೆಚ್ಚಳದ ಪರಿಣಾಮ ಹಾಲಿನ ಎಲ್ಲ ಬಳಕೆದಾರರ ಮೇಲೆ ಬೀಳಲಿದೆ ಹಾಗೂ ಹಾಲಿನ ಬೆಲೆ ಹೆಚ್ಚಳವನ್ನು ಎಲ್ಲರೂ ಭರಿಸಲೇಬೇಕಾಗುತ್ತದೆ. ಇದು ಹಿಂದೂ ವೋಟ್ ಬ್ಯಾಂಕ್ ರಾಜಕೀಯಕ್ಕೆ ಎಲ್ಲ ಹಿಂದೂಗಳೂ ತೆರಬೇಕಾದ ಬೆಲೆಯಾಗಿದೆ.

ಈಗ ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ ಹಾಗೂ ಇದು ಹೀಗೆ ಮುಂದುವರಿದರೆ ದನಗಳ ಸಂತತಿ ವಿನಾಶವಾಗಲಿದೆ ಎಂಬ ಗುಲ್ಲನ್ನು ಹಿಂದುತ್ವವಾದಿಗಳು ಎಬ್ಬಿಸಿದ್ದಾರೆ. ಈ ವಿಷಯದಲ್ಲಿ ಎಳ್ಳಷ್ಟೂ ಹುರುಳಿಲ್ಲ. ದನಗಳು ಎಲ್ಲಿಯವರೆಗೆ ಹಾಲು ಕೊಡುತ್ತಿರುತ್ತವೆಯೋ ಅಲ್ಲಿಯವರೆಗೆ ಅವನ್ನು ಯಾವ ಕೃಷಿಕರೂ ಹತ್ಯೆಗಾಗಿ ಮಾರುವುದಿಲ್ಲ. ದನಗಳು ವಯಸ್ಸಾದ ನಂತರವಷ್ಟೇ ಅವನ್ನು ಸಾಕಲಾರದೆ ಕೃಷಿಕರು ಮಾರುತ್ತಾರೆ. ಹೀಗಾಗಿ ದನಗಳ ಸಂತತಿ ವಿನಾಶವಾಗುವ ಅಪಾಯ ಇಲ್ಲವೇ ಇಲ್ಲ. ಈಗ ಆಧುನಿಕ ವಿಧಾನಗಳಿಂದ ವರ್ಷಕ್ಕೊಂದು ಕರುವನ್ನು ಪಡೆಯುತ್ತಿರುವುದರಿಂದ ದನಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿರುವ ಸಾಧ್ಯತೆ ಇಲ್ಲ. ಗೋಹತ್ಯೆ ನಿಷೇಧ ಎಂಬುದು ರಾಜಕೀಯದ ಹಿಂದೂ ವೋಟ್ ಬ್ಯಾಂಕ್ ಅವಶ್ಯಕತೆಯೇ ಹೊರತು ದನಗಳ ಸಂತತಿ ಉಳಿಸುವ ಉದ್ದೇಶದಿಂದ ರೂಪುಗೊಂಡಿರುವುದು ಖಂಡಿತ ಅಲ್ಲ. ಇದು ವೋಟ್ ಬ್ಯಾಂಕ್ ವಿಷಯವಾದುದರಿಂದ ಇದನ್ನು ವಿರೋಧಿಸಲು ಯಾವುದೇ ರಾಜಕೀಯ ಪಕ್ಷವೂ ಹಿಂಜರಿಯುವ ಸನ್ನಿವೇಶ ನಿರ್ಮಾಣವಾಗಿದೆ. ಅಂಥ ಸನ್ನಿವೇಶವನ್ನು ಹಿಂದುತ್ವವಾದಿಗಳು ರೂಪಿಸಿದ್ದು ಇದರ ಹೊರೆಯನ್ನು ಹಿಂದೂ ರೈತರೇ ಹೊರುವಂತೆ ಮಾಡಿರುವುದು ವಿಪರ್ಯಾಸ.

ಹಿಂದೂ ಧರ್ಮದಲ್ಲಿರುವ ಮೇಲು ಕೀಳು ಎಂಬ ತಾರತಮ್ಯವನ್ನು ಹಾಗೇ ಉಳಿಸಿಕೊಂಡು ಎಲ್ಲ ಹಿಂದೂಗಳಲ್ಲೂ ಒಗ್ಗಟ್ಟನ್ನು ರೂಪಿಸಲು ಮತ್ತು ಆ ಒಗ್ಗಟ್ಟೇ ವೋಟ್ ಬ್ಯಾಂಕ್ ಆಗಿ ರೂಪುಗೊಳ್ಳಲು ಹಿಂದುತ್ವವಾದಿಗಳು, ಪ್ರತಿಗಾಮಿಗಳು ಬಳಸುವ ಈ ಚಾಣಾಕ್ಷ್ಯ ಉಪಾಯದ ಅರಿವು ಹಿಂದೂಗಳಲ್ಲಿ ಬಹುತೇಕರಿಗೆ ಇಲ್ಲ ಅಥವಾ ಇದ್ದರೂ ದನಕ್ಕೆ ದೇವರ ಸ್ಥಾನವನ್ನು ಆರೋಪಿಸಿರುವುದರಿಂದ ಅಂಥ ಚಿಂತನೆಗಳೂ ಅವರಿಗೆ ಒಪ್ಪಿಗೆಯಾಗುವುದಿಲ್ಲ. ಹೀಗಾಗಿ ಗೋ ಹತ್ಯೆ ನಿಷೇಧ, ಮತಾಂತರ ಹೆಸರಿನಲ್ಲಿ ಬೇರೆ ಧರ್ಮಗಳ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವಂತೆ ಯೋಜನೆ ರೂಪಿಸುವುದು ಹಿಂದೂ ವೋಟ್ ಬ್ಯಾಂಕ್ ರಾಜಕೀಯವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ಹಿಂದುತ್ವವಾದಿಗಳು ನಿರಂತರವಾಗಿ ಚುನಾವಣೆಗಳಲ್ಲಿ ಗೆಲ್ಲಲು ಕಾರಣವಾಗಿದೆ. ಇದಕ್ಕೆ ಹಿಂದುಗಳಲ್ಲಿ ಇರುವ ಅರಿವಿನ ಕೊರತೆಯೇ ಕಾರಣವಾಗಿದೆ. ಇದನ್ನು ಹಿಂದೂಗಳಿಗೆ ತಿಳಿಸಿ ಹೇಳುವ ಪ್ರಯತ್ನ ಮಾಧ್ಯಮಗಳಿಂದ ನಡೆಯುತ್ತಿಲ್ಲ.

ಗೋವಿನ ಮೂತ್ರ ಸರ್ವರೋಗ ಪರಿಹಾರಕ ಎಂಬ ಮೂಢನಂಬಿಕೆಯನ್ನೂ ಇದರ ಜೊತೆಗೆ ಭಿತ್ತಿ ಬೆಳೆಯಲಾಗುತ್ತಿದೆ. ಗೋ ಮೂತ್ರ ಕುಡಿಯುವುದರಿಂದ ಕ್ಯಾನ್ಸರಿನಂಥ ಮಾರಕ ಕಾಯಿಲೆಯನ್ನೂ ಗುಣಪಡಿಸಬಹುದು ಎಂದು ಪ್ರಚಾರ ಮಾಡಲಾಗುತ್ತಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹಾಗಿದ್ದರೂ ಇಂಥ ಪ್ರಚಾರಕ್ಕೆ ಮರುಳಾಗುವ ಹಿಂದೂಗಳಿಗೆ ಕೊರತೆಯಿಲ್ಲ. ಇದನ್ನೆಲ್ಲಾ ನೋಡುವಾಗ ಬಹುತೇಕ ಹಿಂದೂಗಳ ಮೆದುಳಿನಲ್ಲಿ ಯೋಚನೆ ಮಾಡುವ ಭಾಗ ಸರಿಯಾಗಿ ಬೆಳವಣಿಗೆ ಆಗಿಲ್ಲವೆನೋ ಎಂಬ ಅನುಮಾನ ಮೂಡುತ್ತದೆ. ನಾವು ಯಾವ ಅಂಗವನ್ನು ಹೆಚ್ಚು ಉಪಯೋಗ ಮಾಡುತ್ತೇವೆಯೋ ಆ ಅಂಗ ಬೆಳವಣಿಗೆಯಾಗುವುದು ನಿಸರ್ಗ ನಿಯಮ. ನಿಸರ್ಗದಲ್ಲಿ ಸಾವಿರಾರು ವರ್ಷಗಳ ಹಿಂದೆ ನಾಲ್ಕು ಕಾಲಿನಲ್ಲಿ ನಡೆಯುತ್ತಿದ್ದ ಪ್ರಾಣಿಗಳು ಎರಡು ಕಾಲಿನಲ್ಲಿ ನಡೆಯಲು ಶುರು ಮಾಡಿ ಇನ್ನುಳಿದ ಎರಡು ಕಾಲುಗಳನ್ನು ಬೇರೆ ಕೆಲಸಗಳಿಗೆ ತೊಡಗಿಸಿದ್ದು ವಾನರ ಪ್ರಾಣಿಯ ಉಗಮಕ್ಕೆ ಕಾರಣವಾಯಿತು. ಈ ವಾನರ ಪ್ರಾಣಿಯೇ ವಿಕಾಸವಾಗಿ ಇಂದಿನ ಮಾನವನಾಗಿದ್ದಾನೆ. ಇದು ಒಂದು ಅಂಗದ ಬೆಳವಣಿಗೆಗೆ ಅದನ್ನು ಹೆಚ್ಚು ಹೆಚ್ಚು ಉಪಯೋಗ ಮಾಡುವುದರ ಮಹತ್ವವನ್ನು ಹೇಳುತ್ತದೆ. ಪಾಶ್ಚಾತ್ಯರು ಮೆದುಳನ್ನು ಹೆಚ್ಚು ಹೆಚ್ಚು ಬಳಸಿ ಹೊಸ ಹೊಸ ಅವಿಷ್ಕಾರಗಳನ್ನು ಮಾಡಿ ಮುಂದುವರಿಯುತ್ತಿದ್ದಾರೆ ನಾವು ಮಾತ್ರ ಹಿಂದುತ್ವದ ಹೆಸರಿನಲ್ಲಿ ಯೋಚನೆ ಮಾಡುವುದನ್ನೇ ನಿಲ್ಲಿಸಿ ಹಿಂದೂಗಳ ಮೆದುಳು ಹೊಸ ಅನ್ವೇಷಣೆಗಳನ್ನು, ಹೊಸ ಚಿಂತನೆಗಳನ್ನು ಮಾಡಲಾರದ ಜಡ್ಡುಗಟ್ಟಿದ ಸ್ಥಿತಿಗೆ ತಲುಪಿರುವಂತೆ ಕಾಣುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)