ವಕೀಲರನ್ನು, ಪತ್ರಕರ್ತರನ್ನು ಅನುಮಾನದಿಂದ ನೋಡುವಂತೆ ಮಾಡಿದವರ್ಯಾರು?

– ಶಿವರಾಮ್ ಕೆಳಗೋಟೆ

ವಕೀಲರ ಸಂಘದ ಕಾರ್ಯದರ್ಶಿ ಎ.ಪಿ ರಂಗನಾಥ್ ಸುವರ್ಣ ನ್ಯೂಸ್ ವಾಹಿನಿಯ ನೇರ ಪ್ರಸಾರದ ವಾರ್ತಾ ಸಂಚಿಕೆಯಲ್ಲಿ ಸಂಪಾದಕ ಹಮೀದ್ ಪಾಳ್ಯವರಲ್ಲಿ ಒಂದು ಮನವಿ ಮಾಡಿಕೊಂಡರು. ಪೊಲೀಸರು ಹಾಗೂ ಪತ್ರಕರ್ತರಿಂದ ವಕೀಲರ ಮೇಲೆ ನಡೆದ ಹಲ್ಲೆ, ಕೋರ್ಟ್ ಆವರಣದಲ್ಲಿ ನಡೆದ ದಾಂಧಲೆಯ ಸಿಡಿ ಕಳುಹಿಸುತ್ತೇನೆ ದಯವಿಟ್ಟು ಪ್ರಸಾರ ಮಾಡಿ ಎಂದರು. ಹಮೀದ್ ಪಾಳ್ಯ ಒಪ್ಪಲಿಲ್ಲ. ಅದೇ ಹೊತ್ತಿಗೆ ನ್ಯೂಸ್ ರೂಂ ನಿಂದ ಸ್ಟುಡಿಯೋದೊಂದಿಗೆ ಸಂಪರ್ಕದಲ್ಲಿದ್ದ ಅಜಿತ್ ಹನುಮಕ್ಕನವರ್ ‘ನಮಗೆ ಕೋರ್ಟ್ ಆವರಣದಲ್ಲಿ ಹೊಡೆದು ಕಳುಹಿಸಿದ ಮೇಲೆ, ನಿಮ್ಮ ಸುದ್ದಿ ಪ್ರಸಾರ ಮಾಡಬೇಕು ಎಂದು ನಿರೀಕ್ಷಿಸುವುದೇ ಹಾಸ್ಯಾಸ್ಪದ,’ಎನ್ನುತ್ತಾರೆ.

ಸುವರ್ಣ ನ್ಯೂಸ್ ಅಷ್ಟೇ ಅಲ್ಲ, ಯಾವ ಸುದ್ದಿ ವಾಹಿನಿಯೂ ವಕೀಲರ ಬಳಿ ಇರುವ ವಿಡಿಯೋ ಕ್ಲಿಪಿಂಗ್ ಗಳನ್ನು ಪ್ರಸಾರ ಮಾಡಲು ಒಪ್ಪಲಿಲ್ಲ.  ಎಲ್ಲಾ ಚಾನೆಲ್ ಮುಖ್ಯಸ್ಥರು ಕೊಡುವ ಸಮರ್ಥನೆ ‘ನಾವು ಅಲ್ಲಿರಲಿಲ್ಲ. ನಮ್ಮನ್ನು ಅಲ್ಲಿಂದ ಓಡಿಸಿದ್ದಿರಿ..’ ವಾದಕ್ಕೋಸ್ಕರ ಈ ವಾದವನ್ನು ಒಪ್ಪಿಕೊಳ್ಳೋಣ. ಹಾಗಾದರೆ, ಚಾನೆಲ್ ಪ್ರತಿನಿಧಿ ಖುದ್ದು ಹಾಜರಾಗದ ಯಾವ ಘಟನೆಯನ್ನೂ ಪ್ರಸಾರ ಮಾಡುವುದೇ ಇಲ್ಲವೆ? ಖುದ್ದು ವೀಕ್ಷಿಸದ ಯಾವ ಅನ್ಯಾಯವನ್ನು, ಗಲಭೆಯನ್ನೂ, ಕೊಲೆಯನ್ನೂ, ಭ್ರಷ್ಟಾಚಾರವನ್ನೂ ವರದಿ ಮಾಡುವುದೇ ಇಲ್ಲವೆ?

ಅಪರಾಧ ಕಾರ್ಯಕ್ರಮಗಳಲ್ಲಿ ಕೊಲೆಯನ್ನು ‘ಮರು ಸೃಷ್ಟಿ’ ಮಾಡುವ ಕಲೆ ನಿಮಗೆ ಗೊತ್ತು. ಆದರೆ, ಪೊಲೀಸರು ಬೆಂಕಿ ಹಚ್ಚಿ ವಾಹನಗಳನ್ನು ಸುಟ್ಟ ವಿಡಿಯೋಗಳು ಏಕೆ ಬೇಡ? ‘ಪೂರ್ವಗ್ರಹಿಗಳಾಗಿರಬೇಡಿ’ ಎಂಬುದು ನನ್ನನ್ನೂ ಸೇರಿದಂತೆ ಎಲ್ಲಾ ಪತ್ರಕರ್ತರಿಗೆ ಹಿರಿಯರು ಹೇಳಿ ಕೊಟ್ಟ ಮೊದಲ ಪಾಠ. ಆದರೆ ಈ ಹೊತ್ತಿನ ಚಾನೆಲ್, ಪತ್ರಿಕೆ ಮುನ್ನಡೆಸುತ್ತಿರುವ ಹಿರಿಯರಿಗೆ ಈ ಪಾಠ ಬೇಕಿಲ್ಲವೆ? ಏಕೆ ಇಷ್ಟೊಂದು ಹಠ?

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡುತ್ತ ‘ಮೊದಲು ಸಾರ್ವಜನಿಕರು ರಾಜಕಾರಣಿಗಳ ಬಗ್ಗೆ ಸದಾ ಅನುಮಾನದಿಂದ ಮಾತನಾಡುತ್ತಿದ್ದರು. ಆದರೆ ಈಗ ಪತ್ರಕರ್ತರು, ವಕೀಲರು ಮತ್ತು ಪೊಲೀಸರ ಬಗ್ಗೆಯೂ ಹಾಗೆಯೆ ಮಾತನಾಡುವಂತಾಗಿದೆ,’ ಎಂದರು. ಪೊಲೀಸರ ಬಗ್ಗೆ ಅನುಮಾನದಿಂದ ನೋಡುವ ಪರಿಪಾಟ ಬಹಳ ದಿನಗಳ ಹಿಂದಿನಿಂದಲೇ ಇದೆ. ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ಕಾಂಡೋಮ್ ಇಟ್ಟು ಅಮಾಯಕರನ್ನು ಬಂಧಿಸಿದ್ದ ಕೀರ್ತಿ ಇವರದು. ಅದಿರಲಿ. ಆದರೆ, ಪತ್ರಕರ್ತರು ಮತ್ತು ವಕೀಲರು ಸಾರ್ವಜನಿಕರ ದೃಷ್ಟಿಯಲ್ಲಿ ಹೀಗೇಕಾದರು?

ವಕೀಲರು:

ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡಿದ್ದ ಬಹುತೇಕರು ವಕೀಲರು. ಯಾರು ‍ಯಾಕೆ, ಮಹಾತ್ಮ ಗಾಂಧಿ ಮೂಲತಃ ವಕೀಲರು(ಹಾಗೆ ಪತ್ರಕರ್ತರು ಕೂಡ). ಆದರೆ ಈಗಿನ ಎಲ್ಲಾ ವಕೀಲರು ಹಿಂದಿನ ವಕೀಲರಂತೆ ಇಲ್ಲ. ಹಾಗೆ ಇರಲೂ ಸಾಧ್ಯವಿಲ್ಲ.

ಇತ್ತೀಚೆಗೆ ಒಂದು ಲಾ ಕಾಲೇಜಿನ ಪ್ರಾಧ್ಯಾಪಕರು ಖಾಸಗಿ ಮಾತಿನಲ್ಲಿ ಹಂಚಿಕೊಂಡಿದ್ದು ಈ ಹೊತ್ತಿನ ವಕೀಲರ ಸ್ಥಿತಿ, ಮನಸ್ಥಿತಿ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತದೆ. ಕರ್ನಾಟಕದಲ್ಲಿರುವ ಅನೇಕ ಅನುದಾನಿತ ಕಾನೂನು ಕಾಲೇಜುಗಳಿಗೆ ಪ್ರವೇಶ ಪಡೆಯುವವರ ಕೊರತೆ ಇದೆ. ಪ್ರವೇಶಾತಿ ಇಲ್ಲದಿದ್ದರೆ ಅನುದಾನಕ್ಕೆ ಕುತ್ತು ಬೀಳುವ ಆತಂಕದಲ್ಲಿರುವ ಸಂಸ್ಥೆಗಳು ಹೇಗಾದರೂ ಮಾಡಿ ಪ್ರತಿ ವರ್ಷ ಒಂದಿಷ್ಟು ವಿದ್ಯಾರ್ಥಿಗಳನ್ನು ಹುಡುಕಿ ಪ್ರವೇಶ ಕೊಡುತ್ತಾರೆ. ಅವರು ಕಟ್ಟುನಿಟ್ಟಾಗಿ ಕಾಲೇಜಿಗೆ ಬರದಿದ್ದರೂ ಕೇಳುವುದಿಲ್ಲ. ಹಾಜರಾತಿ ಕಡ್ಡಾಯವಿಲ್ಲ. ಪರೀಕ್ಷೆ ಮೌಲ್ಯಮಾಪನ ಶಿಸ್ತುಬದ್ಧವಾಗಿ ನಡೆಯುವುದಿಲ್ಲ. ಸಾಮಾನ್ಯವಾಗಿ ಇಂತಹ ಕಾಲೇಜುಗಳಿಗೆ ಪ್ರವೇಶ ಪಡೆಯುವವರು ಬೇರೆ ಯಾವ ಕೋರ್ಸ್‌ಗೂ ಸೇರಿಕೊಳ್ಳಲು ಅರ್ಹ ಅಂಕಗಳಿಲ್ಲದವರು. ಕೊನೆಗೆ ವಿಧಿ ಇಲ್ಲದೆ ಕಪ್ಪು ಕೋಟು ಹಾಕಿ ಕೋರ್ಟ್ ಪ್ರವೇಶಿಸುತ್ತಾರೆ.– ಇಂಥವರ ಸಂಖ್ಯೆ ಒಟ್ಟು ವಕೀಲರ ಸಂಖ್ಯೆಯಲ್ಲಿ ತೀರಾ ನಗಣ್ಯ. ಆದರೆ ಕಲ್ಲು ಎಸೆಯೋಕೆ, ಪತ್ರಕರ್ತಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿ ಇಡೀ ವಕೀಲ ಸಮುದಾಯದ ಗೌರವಕ್ಕೆ ಧಕ್ಕೆ ಉಂಟು ಮಾಡಲು ಅಷ್ಟುಸಂಖ್ಯೆ ಸಾಕು. ಇವರ ಕಾರಣ ರಾಜ್ಯದ ಎಲ್ಲಾ ವಕೀಲರನ್ನು ಅನುಮಾನದಿಂದ ನೋಡುವಂತಾಗಿದೆ.

ಪತ್ರಕರ್ತರು:

ವಕೀಲರಾದರೂ ಕನಿಷ್ಟ ಕಾನೂನು ಪದವಿ ಪಡೆದಿರಬೇಕು. ಆದರೆ ಪತ್ರಕರ್ತರಿಗೆ ಯಾವ ಪದವಿಯೂ ಕಡ್ಡಾಯವಲ್ಲ. ಸುದ್ದಿ ಗ್ರಹಿಸುವ ಕಲೆ ಗೊತ್ತಿದ್ದರೆ ಸಾಕು. (‘ಸುದ್ದಿ ಗ್ರಹಿಸುವ ಕಲೆ’ ಸಾಪೇಕ್ಷ. ಅದನ್ನು ಅಳೆಯಲು ಒಂದೊಂದು ಸಂಸ್ಥೆ, ಒಬ್ಬೊಬ್ಬ ಸಂಪಾದಕರ ಮಾನದಂಡ ಬೇರೆ ಬೇರೆ.) ಇತ್ತೀಚೆಗೆ ಪತ್ರಿಕೋದ್ಯಮ ಪ್ರವೇಶಿಸುತ್ತಿರುವ ಅನೇಕ ಯುವ ಪತ್ರಕರ್ತರಲ್ಲಿ ಹುಸಿ ಅಹಂ ಸಾಮಾನ್ಯವಾಗಿರುತ್ತದೆ. ‘ನಾವು ಪತ್ರಕರ್ತರು. ಎಲ್ಲಿಗೆ ಬೇಕಾದರೂ ಹೋಗಬಹುದು, ಯಾರನ್ನು ಬೇಕಾದರೂ ಯಾವ ಪ್ರಶ್ನೆ ಬೇಕಾದರೂಕೇಳಬಹುದು’ – ಎಂಬುದನ್ನೇ ತಮ್ಮ ಹಕ್ಕು ಎಂದುಕೊಂಡವರಂತೆ ವರ್ತಿಸುತ್ತಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಗೂಂಡಾಗಿರಿಗೂ ಇಳಿಯುವ ಸಾಹಸ ಮಾಡುತ್ತಾರೆ. ಲಜ್ಜೆ ಬಿಟ್ಟು ಸಾರ್ವಜನಿಕವಾಗಿ ತಮ್ಮ‘ಅಂಗ’ ಪ್ರದರ್ಶನಕ್ಕಿಳಿಯುತ್ತಾರೆ. ಇಂಥವರ ಸಂಖ್ಯೆ ಸಹಜವಾಗಿಯೇ ಸಭ್ಯ ಪತ್ರಕರ್ತರಿಗಿಂತ ಕಡಿಮೆಯೇ. ಆದರೆ ಇಡೀ ಮಾಧ್ಯಮ ಕ್ಷೇತ್ರದ ಬೆಂಬಲ ಗಿಟ್ಟಿಸುವಷ್ಟು ಸಾಮರ್ಥ್ಯ ಅವರಿಗಿದೆ. ಪ್ರಿಂಟ್  ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಎಲ್ಲಾ ಮುಖ್ಯಸ್ಥರು ಒಗ್ಗೂಡಿ ‘ಪತ್ರಕರ್ತರಿಗೆ ನ್ಯಾಯ’ ಕೊಡಿಸಲು ಹೋರಾಡುವಂತೆ ಪ್ರೇರೇಪಿಸುತ್ತಾರೆ. ಹಾಗೆಯೇ ಸಾರ್ವಜನಿಕವಾಗಿ ಪತ್ರಕರ್ತರ ಬಗ್ಗೆ ಕೀಳು ಭಾವನೆ ಮೂಡಿಸುವಲ್ಲಿ ಯಶಸ್ವಿ ಯಾಗುತ್ತಾರೆ.

Deccan Herald - Mining Payments
Deccan Herald - Mining Payments

ಇವರೆಲ್ಲರ ಹೊರತಾಗಿ ಮತ್ತೆ ಕೆಲವರಿದ್ದಾರೆ. ಅವರು ವೃತ್ತಿಯಲ್ಲಿ ಅಗ್ರಗಣ್ಯರು. ಸುಳ್ಳು ದಾಖಲೆ ಕೊಟ್ಟು ಜಿ-ಕೆಟಗರಿ ಸೈಟು ಕೊಳ್ಳುವವರು, ಗಣಿ ಕಪ್ಪ ಪಡೆದು ನಾಚಿಕೆ ಇಲ್ಲದೆ ಸ್ಟುಡಿಯೋದಲ್ಲಿ ನ್ಯಾಯ ನೀತಿ ಅಂತ ಕಾರ್ಯಕ್ರಮ ಮಾಡೋರು, ಸುದ್ದಿಗೆ ಬೆಲೆ ಕಟ್ಟಿ ವೃತ್ತಿ ಘನತೆಯನ್ನು ವ್ಯಾಪಾರಕ್ಕಿಟ್ಟವರು, ತಮ್ಮ ಜಾತಿ ಮತ್ತು ಪಂಥಗಳಿಗಾಗಿ ಸುದ್ದಿಯ ಸ್ಟೇಸ್ ಅನ್ನು ಮಾರಿಕೊಂಡವರು– ಇವರೆಲ್ಲರೂ ಇವತ್ತಿನ ಈ ಸ್ಥಿತಿಗೆ ಕಾರಣ.

ಎಲ್ಲಾ ಸುದ್ದಿಸಂಸ್ಥೆಗಳ ಸಂಪಾದಕರು ಬೀದಿಗಿಳಿದು ‘ಹಲ್ಲೆ ಮಾಡಿದ ವಕೀಲರನ್ನು ಬಂಧಿಸಿ’ ಎಂದು ಒತ್ತಾಯ ಮಾಡಿದರೂ ಪೊಲೀಸ ವ್ಯವಸ್ಥೆ ಏಕೆ ಜಪ್ಪಯ್ಯ ಎನ್ನುತ್ತಿಲ್ಲ ಎನ್ನುವುದಕ್ಕೆ ಕಾರಣವೇನೆಂದರೆ ಪ್ರತಿಭಟನೆ ನೇತೃತ್ವ ವಹಿಸಿರುವ ಅನೇಕರು ನೈತಿಕತೆ ಉಳಿಸಿಕೊಂಡಿಲ್ಲ. ಹಾಗಾಗಿ ಅವರ ಮಾತಿಗೆ ಬೆಲೆ ಇಲ್ಲ. ಹಿಂದೆ ದಾಳಿಕೋರರನ್ನು ಬಂಧಿಸಿ ಎಂದು ನಾಲ್ಕು ಸಾಲು ಸಂಪಾದಕೀಯ ಬರೆದರೂ ಸಾಕಿತ್ತು. ಅದರ ಪರಿಣಾಮ ಮಾರನೆಯ ದಿನವೇ ಕಾಣುತ್ತಿತ್ತು.

ಮುಖ್ಯವಾಗಿ ಈಗ ಆಗಬೇಕಿರುವುದು ದುಷ್ಟರನ್ನು ದೂರ ಇಡುವುದು. ಅವರು ಎಲ್ಲಿಯೇ ಇರಲಿ. ವೃತ್ತಿ ಘನತೆಗೆ ಕುಂದುಂಟುಮಾಡುವವರು ಯಾವ ವೃತ್ತಿಯಲ್ಲೂ ಇರಬಾರದು. ಏನಂತೀರಿ?

ಫೋಟೊ: www.daijiworld.com

4 comments

  1. ಅಪರೇಷನ್ ಕಮಲ ಎಂಬ ಅನೈತಿಕ ರಾಜಕೀಯ ನಡೆಸಿದಾಗ ಬಹುತೇಕ ಮಾಧ್ಯಮಗಳು ಅದನ್ನು ಖಂಡಿಸಿ ಜನಜಾಗೃತಿ ಮಾಡಲಿಲ್ಲ. ಅದರಲ್ಲೂ ಟಿವಿ ವಾಹಿನಿಗಳು ಈ ಕುರಿತು ನಿರಂತರ ಜಾಗೃತಿ ಮೂಡಿಸಿದ್ದಿದ್ದರೆ ಅನೈತಿಕ ರಾಜಕೀಯ ಮಾಡಿದ ರಾಜಕಾರಣಿಗಳು ಉಪಚುನಾವಣೆಗಳಲ್ಲಿ ಗೆಲ್ಲುತ್ತಿರಲಿಲ್ಲ. ಇಂಥ ಅನೈತಿಕ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಅಂಥ ಅನೈತಿಕತೆಯನ್ನು ಸೋಲಿಸಲೇಬೇಕು ಎಂದು ಮಾಧ್ಯಮಗಳು ಅಂದೇ ಹಠ ಕಟ್ಟಿ ನಿರಂತರ ಜಾಗೃತಿ ಮೂಡಿಸಿದ್ದಿದ್ದರೆ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತಿತ್ತು. ಆದರೆ ಅದು ಮಾಧ್ಯಮಗಳಿಗೆ ಮುಖ್ಯವಾಗಲಿಲ್ಲ. ಒಮ್ಮೆ ಇಂಥ ಅಪರೇಷನ್ ಕಮಲದ ಅನೈತಿಕ ರಾಜಕೀಯವನ್ನು ಮತದಾರರು ಸೋಲಿಸಿದ್ದಿದ್ದರೆ ಮತ್ತೆ ಅಂಥ ಸಾಹಸ ಮಾಡಲು ಬಿಜೆಪಿ ಹೋಗುತ್ತಿರಲಿಲ್ಲ. ಮಾಧ್ಯಮಗಳ ಜವಾಬ್ದಾರಿ ಸಮಾಜದಲ್ಲಿ ಅತ್ಯಂತ ಮಹತ್ವದ್ದು. ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ, ಪರಿವರ್ತನೆ ತರುವ ಸಾಮರ್ಥ್ಯ ಮಾಧ್ಯಮಗಳಿಗಿದೆ, ಅದರಲ್ಲೂ ಟಿವಿ ಮಾಧ್ಯಮದ ಸಾಮರ್ಥ್ಯ ಅಗಾಧವಾದುದು.

  2. ಆವತ್ತು ಸುವರ್ಣ ನ್ಯೂಸ್ ಚರ್ಚೆಯಲ್ಲಿ ಹಮೀದ್ ಪಾಳ್ಯ ನಡೆದುಕೊಂಡ ರೀತಿ ಖಂಡಿತಾ ಸೂಕ್ತವಾದದ್ದಾಗಿರಲಿಲ್ಲ.ಈ ಹೊತ್ತು ಒಂದೆಡೆ ಡಾ.ಸಿ.ಎಸ್. ದ್ವಾರಕನಾಥ್ ಹೇಳಿದ ಮಾತು ಹೆಚ್ಚು ಅರ್ಥಪೂರ್ಣವಾದದ್ದೆನಿಸಿತು. ನಿಷ್ಪಕ್ಷಪಾತ ವರದಿಗಾರಿಕೆಗೆ ಬೇಕಾಗಿರುವುದು ಸಾಕ್ಷಿ ಹೇಳುವ ಕ್ಲಿಪಿಂಗ್-ಫೂಟೇಜ್ ಗಿಂತಲೂ ಹೆಚ್ಚು ಆತ್ಮಸಾಕ್ಷಿಯಂತೆ ನಡೆಯುವ ಮನಸ್ಸು. ಏನೇ ಆದರೂ ಆತ್ಮಾವಲೋಕನ ಮಾಡಿಕೊಳ್ಳೋದಿಕ್ಕೆ ಯಾರೂ ತಯಾರಿಲ್ಲದಿರುವುದಂತೂ ದುರಂತ! ಇತ್ತ ಟಿವಿ9 ನ ಚಕ್ರವ್ಯೂಹದಲ್ಲಿ ಲಕ್ಷ್ಮಣ್ ಹೂಗಾರರ ಎಲ್ಲಾ ಕಾರ್ಯಕ್ರಮಗಳನ್ನೂ ನಾನು ತಪ್ಪದೆ ನೋಡುತ್ತೇನೆ ಮತ್ತು ಮೆಚ್ಚಿಕೊಳ್ಳುತ್ತೇನೆ. ಆದರೆ ಆ ದಿನ ವಕೀಲರ ಸಂಘದ ಅಧ್ಯಕ್ಷರೊಂದಿಗೆ ಮಾತಾಡಿದ ರೀತಿ ಮಾತ್ರ ಪಕ್ಕದ ಮನೆಯವರೊಂದಿಗಿನ ಬೀದಿ ಜಗಳದಂತಿತ್ತು! ಛೇ! ಯಾರು ಯಾರಿಗೆ ಹೇಳೋಣ?

  3. ಡಾ. ಸಿ.ಎಸ್ ದ್ವಾರಕನಾಥರ ಈ ಮೇಲಿನ ಮಾತು ಇದೇ ವಿಷಯ ಕುರಿತಾಗಿ ಇನ್ನೊಂದು ವಾಹಿನಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಪ್ರಸಾರವಾದುದು.ಹಮೀದ್ ಪಾಳ್ಯರೊಂದಿಗಿನ ಚರ್ಚೆಯಲ್ಲಲ್ಲ. ಹಮೀದ್ ಅವರನ್ನೇ ಆಹ್ವಾನಿಸಿದ್ದರೆ ಚೆನ್ನಾಗಿತ್ತು! ಯಾರದೇ ಸಾತ್ವಿಕ ವರ್ಚಸ್ಸಿನೆದುರು ಕಟುಗಂಭೀರ ಸತ್ಯವೊಂದು ಮುಖಾಮುಖಿಯಾಗುವ ಸೌಂದರ್ಯವಂತೂ…… ಅದು ನೋಢುವುದೇ ಚೆಂದ! ಹಾಗಾಗುವ ಬಹುತೇಕ ಸಾಧ್ಯತೆಗಳನ್ನು ಮಾಧ್ಯಮಗಳು ವ್ಯವಸ್ಥಿತವಾಗಿ ತಪ್ಪಿಸಿಕೊಂಡಿರುವುದಂತೂ ನಿಜ.

  4. ನಿಮ್ಮ ಲೇಖನ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ಮಧ್ಯಸ್ಥಿಕೆಗೆ ಬರುವವರು ನೀವು ಎತ್ತಿರುವ ವಿಚಾರಗಳ ಬಗ್ಗೆ ಅವುಗಳ ಪರಿಣಾಮಗಳ ಬಗ್ಗೆ ಮತ್ತು ಮುಂದೆ ನಡೆದುಕೊಳ್ಳಲು ಅಳವಡಿಸಿಕೊಳ್ಳಬೇಕಾದ ನಿಯಮಗಳ ಬಗ್ಗೆ ತಮ್ಮ ಆಳವಾದ ಅನುಭವಗಳನ್ನು ವ್ಯಕ್ತಪಡಿಸಬೇಕಾಗುತ್ತದೆ ಮತ್ತು ಸಮಾಜದ ಸುಸ್ಥಿತಿಯನ್ನು ಕಾಪಾಡಿಕೊಳ್ಳಲು ಎಲ್ಲರೂ ಅನುಸರಿಸಬೇಕಾಗುತ್ತದೆ.
    ವೈಯಕ್ತಿಕವಾಗಿ ನನಗೆ ಪತ್ರಿಕಾ ರಂಗ ತಳೆದ ನಿಲುವು ಅದರಲ್ಲೂ ಮುಖ್ಯವಾಗಿ ಪ್ರಜಾವಾಣಿ ಪತ್ರಿಕೆಯ ವರದಿಯು ಸಾಕಷ್ಟು ಬೇಸರಮೂಡಿಸಿದೆ.

Leave a Reply

Your email address will not be published.