ರಾಮಕೃಷ್ಣ ಹೆಗ್ಡೆಯ ನುಡಿಗಳು ಮತ್ತು ಯಡಿಯೂರಪ್ಪನ ನಡೆಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಇದು 2003ರ ಡಿಸೆಂಬರ್ ತಿಂಗಳ ಒಂದು ಘಟನೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುಧಾ ಮೂರ್ತಿಯವರ ಪ್ರವಾಸಕಥನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿ ಕುರಿತ ಎರಡು ಕೃತಿಗಳನ್ನು ಪ್ರಕಟಿಸಿ, ಬಿಡುಗಡೆಗಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರನ್ನು ಆಹ್ವಾನಿಸಿತ್ತು. ಅಂದಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾವಳಿ ಈಗಿನ ಹಾಗೆ ಇರಲಿಲ್ಲ. ನಾಲ್ಕು ದಿನಪತ್ರಿಕೆ ಹಾಗೂ ಎರಡು ಚಾನಲ್‌ಗಳು ಮಾತ್ರ ಇದ್ದವು.

ಸಂಜೆ 6 ಗಂಟೆಗೆ ಪತ್ರಿಕೆಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾವು ಆರು ಮಂದಿ ಪತ್ರಕರ್ತರು ಸುಮಾರು 5:30ರ ವೇಳೆಗೆ ಕಾರ್ಯಕ್ರಮಕ್ಕೆ ಹಾಜರಾದಾಗ ಪತ್ರಿಕೆಯ ಟ್ರಸ್ಟ್ ಅಧ್ಯಕ್ಷರ ಕಚೇರಿಯಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು. ಆ ವೇಳೆಗಾಗಲೇ ಆಗಮಿಸಿದ್ದ ರಾಮಕೃಷ್ಣ ಹೆಗ್ಡೆ ನಮ್ಮೊಂದಿಗೆ ತಿಂಡಿ ತಿನ್ನುತ್ತಾ ಇದ್ದಕ್ಕಿದ್ದಂತೆ ತಮ್ಮ ಒಂದು ಬಾಲ್ಯದ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟರು. ಅವರ ಮಾತಿನ ಲಹರಿ ಹೀಗಿತ್ತು:

ನನಗಾಗ ಕೇವಲ ಆರು ಅಥವಾ ಏಳು ವರ್ಷವಿರಬಹುದು. ಸಿದ್ದಾಪುರದ ಗದ್ದೆಯ ನಡುವೆ ಇದ್ದ ನಮ್ಮ ಮನೆ ಆ ಕಾಲಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ರೀತಿಯಲ್ಲಿ ತಂಗುದಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಗಡಿಭಾಗದಲ್ಲಿದ್ದ ನಮ್ಮ ಮನೆ ಸ್ವಾತಂತ್ರ್ಯ ಹೋರಾಟಗಾರರು ಪೋಲಿಸರಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು.

ಶಿವಮೊಗ್ಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೇಲಿ ನೆಗೆದು ನಮ್ಮ ಮನೆಗೆ ಬಂದರೆ ಹಿಡಿಯುವಂತಿರಲಿಲ್ಲ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆ ಪೋಲಿಸರು ಬಂದರೆ ಸಲೀಸಾಗಿ ಬೇಲಿ ನೆಗೆದು ಶಿವಮೊಗ್ಗ ಗಡಿಪ್ರದೇಶಕ್ಕೆ ತೆರಳಬಹುದಾಗಿತ್ತು. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಮಹಾಬಲೇಶ್ವರ ಹೆಗಡೆ ಯಾರೇ ನಮ್ಮ ಮನೆಗೆ ಬಂದರೂ ಜಾತಿ ಧರ್ಮ ಬೇಧವಿಲ್ಲದೆ ಆತಿಥ್ಯ ನೀಡುತಿದ್ದರು. ನನ್ನ ತಾಯಿ ಸರಸ್ವತಿ ಹೆಗಡೆ ಕೂಡ ಅಕ್ಷರಶಃ ಅನ್ನಪೂರ್ಣೆಯಂತೆ ನಡೆದುಕೊಳ್ಳುತಿದ್ದರು.

ನಮ್ಮ ಮನೆ ಬ್ರಿಟೀಷರಿಗೆ ತಲೆನೋವಾದ ಕಾರಣ ಸರ್ಕಾರ ಗದ್ದೆಯ ಬಯಲಿನಲ್ಲಿ ಇದ್ದ ನಮ್ಮ ಮನೆಯನ್ನು ಧ್ವಂಸ ಮಾಡುವಂತೆ ಪೋಲಿಸರಿಗೆ ಆದೇಶ ಜಾರಿ ಮಾಡಿತು. ಒಂದು ಬೆಳಗಿನ ಜಾವ ಮನೆಗೆ ಬಂದ ಪೋಲಿಸರು ನಮ್ಮ ಹೆಂಚಿನ ಮನೆ, ಅದರೊಳಗೆ ಅತಿಥಿಗಳಿಗಾಗಿ ನಿರ್ಮಿಸಿದ್ದ ಅಟ್ಟ, ಪಾತ್ರೆ, ದಿನಸಿ ಸಾಮಾನುಗಳನ್ನು ನಾಶ ಮಾಡಿ ಹೊರಟು ಹೋಯಿತು.

ನನ್ನ ಅಪ್ಪ, ಅಮ್ಮ, ನಾನು, ನನ್ನ ಸಹೋದರ ಎಲ್ಲರೂ ಬಯಲಿಗೆ ಬಿದ್ದೆವು. ದೃತಿಗೆಡೆದ ನನ್ನಪ್ಪ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ನಾವು ಸಂತೆಯಿಂದ ಬರುವ ವೇಳೆಗೆ ನಮ್ಮೂರಿನ ಸುತ್ತ ಮುತ್ತಲಿನ ಜನ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ಸಾಂಬಾರ್ ಪುಡಿ ಹೀಗೆ ಹಲವು ವಸ್ತುಗಳನ್ನು ಅಮ್ಮನ ಬಳಿ ಕೊಟ್ಟು ಹೋಗಿದ್ದರು. ಆ ದಿನ ನನ್ನಮ್ಮ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಅಡುಗೆ ಮಾಡಿ ನಮಗೆ ಬಡಿಸಿದಳು. ಆದಿನ ನಾನು ನನ್ನ ಕುಟುಂಬ ತಿಂದ ಅನ್ನ, ಬೇಳೆ ಅಥವಾ ಉಪ್ಪು ಯಾರ ಮನೆಯದು, ಯಾರ ಜಾತಿಯದು, ಯಾವ ಧರ್ಮದ್ದೆಂದು ನಾವ್ಯಾರು ಕೇಳಲಿಲ್ಲ. ಎಲ್ಲಾ ಧರ್ಮದ, ಎಲ್ಲ ಜಾತಿಯ ಋಣ ನನ್ನ ರಕ್ತದಲ್ಲಿ ಹರಿಯುತ್ತಿದೆ. ಹಾಗಾಗಿ ನಾನು ಇವುಗಳ ಬಗ್ಗೆ ಎಂದೂ ವಕಾಲತ್ತು ವಹಿಸಲಾರೆ.

ಅತ್ಯಂತ ತಾಳ್ಮೆಯಿಂದ ಯಾವುದೇ ಭಾವೋದ್ರೇಕವಿಲ್ಲದೆ, ತಣ್ಣನೆಯ ದನಿಯಲ್ಲಿ ಅವರು ಮಾತನಾಡುತ್ತಿದ್ದಾಗ ಅವರ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿದ್ದ ನೀರು ಅವರ ಕುರುಚಲು ಗಡ್ಡದಲ್ಲಿ ಲೀನವಾಗುತಿತ್ತು. ಅವರ ಮಾತುಗಳನ್ನು ಕೇಳುತ್ತಿದ್ದ ನಮ್ಮ ಕಣ್ಣುಗಳು ಸಹ ಒದ್ದೆಯಾಗಿದ್ದವು.

ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಬೇರೆಲ್ಲೂ ನನ್ನ ಅಂಡು ಸ್ಥಳವೂರಲಾರದು ಎಂಬಂತೆ ವರ್ತಿಸುತ್ತ ಹಲವು ಅವತಾರಗಳನ್ನು ತಾಳುತ್ತಿರುವ ಯಡಿಯೂರಪ್ಪ ಎಂಬ ಅವಿವೇಕಿ ಮತ್ತು ಜಾತಿಯ ಹೆಸರಿನಲ್ಲಿ ಅವನ ಭಟ್ಟಂಗಿಗಳು ಮತ್ತು ಚೇಲಾಗಳು ಕರ್ನಾಟಕದಲ್ಲಿ ನಡೆಸುತ್ತಿರುವ ರಾಜಕೀಯ ವರಸೆ ನೋಡಿ ಏಕೋ ಏನೋ ರಾಮಕೃಷ್ಣ ಹೆಗ್ಡೆ ನೆನಪಾದರು.

One thought on “ರಾಮಕೃಷ್ಣ ಹೆಗ್ಡೆಯ ನುಡಿಗಳು ಮತ್ತು ಯಡಿಯೂರಪ್ಪನ ನಡೆಗಳು

  1. Ananda Prasad

    ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಯನ್ನು ತುಂಬಲು ಇನ್ನೂ ಮುಹೂರ್ತ ಸಿಕ್ಕಿಲ್ಲ ಎಂದು ಕಾಣುತ್ತದೆ. ಇದುವರೆಗೆ ಬನ್ನೂರ್ಮಟ ಅವರನ್ನು ಲೋಕಾಯುಕ್ತರಾಗಿ ಮಾಡಲು ರಾಜ್ಯಪಾಲರು ಅಡ್ಡಿಯಾಗಿದ್ದರು ಎಂದು ಹೇಳುತ್ತಿದ್ದ ಸರ್ಕಾರ ಬನ್ನೂರ್ಮಟ ಅವರು ಹಿಂದೆ ಸರಿದು ತುಂಬಾ ದಿನಗಳೇ ಸಂದರೂ ಇನ್ನೂ ಲೋಕಾಯುಕ್ತ ಹುದ್ಧೆ ತುಂಬದಿರಲು ಕಾರಣವೇನು? ಈಗ ಈ ಬಗ್ಗೆ ಯಾವ ಟಿವಿ ವಾಹಿನಿಗಳಿಗೂ ನೆನಪಿಲ್ಲ. ಲೋಕಾಯುಕ್ತ ಹುದ್ಧೆ ಖಾಲಿ ಇರುವುದಕ್ಕೂ ಯಡಿಯೂರಪ್ಪನವರು ಗಣಿ ಹಗರಣದಲ್ಲಿ ನಿರಪರಾಧಿ ಎಂದು ಹೈಕೋರ್ಟ್ ತೀರ್ಪು ನೀಡಿರುವುದಕ್ಕೂ ಇರುವ ಸಂಬಂಧ ಏನು ಎಂಬ ಬಗ್ಗೆ ಜನರು ಚಿಂತಿಸಬೇಕಾಗಿದೆ. ಲೋಕಾಯುಕ್ತ ಹುದ್ಧೆಯಲ್ಲಿ ಒಬ್ಬ ಸಮರ್ಥ ವ್ಯಕ್ತಿ ಇದ್ದಿದ್ದ ಪಕ್ಷದಲ್ಲಿ ಯಡಿಯೂರಪ್ಪನವರಿಗೆ ಹೈಕೋರ್ಟಿನಿಂದ ಕ್ಲೀನ್ ಚಿಟ್ ಸಿಗುತ್ತಿತ್ತೆ ಎಂಬುದೂ ಯೋಚಿಸಬೇಕಾದ ವಿಚಾರ.

    Reply

Leave a Reply

Your email address will not be published. Required fields are marked *