ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

-ಡಾ.ಎಸ್.ಬಿ.ಜೋಗುರ

ಕಳೆದ ವರ್ಷವಿಡೀ  ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟ ಜನಲೋಕಪಾಲ್ ಮಸೂದೆ ಸಿಡಿಯದಿರುವ ಪಟಾಕಿಯಂತೆ ಟುಸ್… ಎಂದದ್ದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಕೊಂಚ ನಿರಾಶೆಯನ್ನುಂಟು ಮಾಡಿರುವುದು ಸ್ವಾಭಾವಿಕವೇ ಆದರೂ ರಾಜಕೀಯ ಶಕ್ತಿಗಳು ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳಲು ತಯಾರಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಅವೇನಿದ್ದರೂ ಬಾಯಿ ಮಾತಿನ ಮೂಲಕವೇ ರಾಜಕೀಯ ವಿಪ್ಲವಗಳನ್ನು ಹುಟ್ಟುಹಾಕಬಲ್ಲವೇ ಹೊರತು ಕಾರ್ಯಾತ್ಮಕವಾಗಿ ಅಲ್ಲ. ಹಾಗಾಗಿಯೇ ರಾಜ್ಯಸಭೆಯಲ್ಲಿ ಅದಕ್ಕೆ ಗ್ರೀನ್ ಸಿಗ್ನಲ್ ಸಿಗದಿರುವುದು ನಿರೀಕ್ಷಿತವೇ ಎನ್ನುವಂತಿದೆ. ಆಳುವ ಮತ್ತು ವಿರೋಧ ಪಕ್ಷಗಳೆರಡೂ ಚುನಾವಣೆಯ ಸಂದರ್ಭದಲ್ಲಿ ಕೋಮಾ ಸ್ಥಿತಿಯಲ್ಲಿರುವ ಈ ಲೋಕಪಾಲ್ ಮಸೂದೆಯ ಬಗ್ಗೆ ತಮಗೆ ತಿಳಿದಂತೆ ಮತದಾರನ ಎದುರು ವಿವರಿಸಿ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ಈ ಲೋಕಪಾಲ ಬಿಲ್ ರಾಜ್ಯಸಭೆಯವರೆಗೂ ಬಂದು ಅಟಕಾಯಿಸಿಕೊಂಡಿರುವುದು ಇದೇ ಮೊದಲಂತೂ ಅಲ್ಲ. ಈ ಮುಂಚೆ ಸುಮಾರು ಹನ್ನೊಂದು ಬಾರಿ ಈ ಮಸೂದೆಯು ಸದ್ಯದ ಹಂತದವರೆಗೆ ಬಂದು ತಲುಪಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಿದೆ. 1968 ರಿಂದಲೂ ಈ ಬಗೆಯ ಮರಳಿ ಯತ್ನವ ಮಾಡುವ ಕೆಲಸ ನಿರಂತರವಾಗಿ ನಡದೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದೆನ್ನುವಾಗಲೇ ಅದು ಕೋಮಾ ಹಂತವನ್ನು ತಲುಪುವ ಸ್ಥಿತಿ ಮಾಮೂಲಾಗಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿಯಾದ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತ್ತಾದರೂ ಅವರ ಅಂತಿಮ ಉದ್ದೇಶ ಮಾತ್ರ ಸಾಕಾರಗೊಳ್ಳದಿರುವುದು ವಿಷಾದನೀಯವೇ ಹೌದು. ಜಾರಿಗೊಳಿಸುವುದಿದ್ದರೆ ಬಲಿಷ್ಟ ಜನಲೋಕಪಾಲ ಜಾರಿಗೊಳಿಸಿ, ಇಲ್ಲದಿದ್ದರೆ ಬೇಡ ಎಂದು ಪಟ್ಟು ಹಿಡಿದ ಅಣ್ಣಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿಯೂ ಹೋರಾಟ, ಸತ್ಯಾಗ್ರಹವನ್ನು ಆರಂಭಿಸಿರುವುದಿತ್ತು. ಅಣ್ಣಾನ ಹೋರಾಟಕ್ಕೆ ಸಿಕ್ಕ ಬೆಂಬಲ ಆಳುವ ಪಕ್ಷದ ಸಾಮರ್ಥ್ಯವನ್ನೇ ಕೆಣಕಿದಂತಿತ್ತು. ಹೀಗಾಗಿ ಅಣ್ಣಾನನ್ನು ಬಂಧಿಸಿ ಬಿಡುಗಡೆ ಮಾಡಿಯೂ ಆಯಿತು. ನಂತರ ಬಿಡುಗಡೆ ಮಾಡಿ ಅವರ ಸತ್ಯಾಗ್ರಹಕ್ಕೆ ರಾಮಲೀಲಾದಂತಹ ಚಾರಿತ್ರಿಕವಾದ ಸ್ಥಳವನ್ನೇ ನೀಡಿತು.

ಅಣ್ಣಾ ಒಡ್ಡುವ ಶರತ್ತುಗಳನ್ನು ಒಪ್ಪಿಕೊಂಡು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರ ರಾಜ್ಯಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುವುದರಲ್ಲಿ ಅದರದೇಯಾದ ಕೆಲ ರಾಜಕೀಯ ಕಾರಣಗಳು ಇರಬಹುದಾದರೂ ಆ ಮೂಲಕ ಪರೋಕ್ಷವಾಗಿ  ಅಣ್ಣಾ ಹೋರಾಟದ ಸತ್ವ ಕಡಿಮೆ ಮಾಡುವಲ್ಲಿಯೂ ಅವರ ರಾಜಕೀಯ ಧೋರಣೆ ಕಾರಣವಾಯಿತು. ಅದೇ ವೇಳೆಗೆ ಈ ಜನಲೋಕಪಾಲ ಮಸೂದೆಯನ್ನು ಯಾರು ವಿರೋಧಿಸಿದರು ಎನ್ನುವುದಕ್ಕಿಂತಲೂ ರಾಜಕೀಯ ಹಿತಾಸಕ್ತಿಗಳ ಗಮನವೇ ಇಲ್ಲಿ ಮುಖ್ಯವಾಗಿ ಬಲಿಷ್ಟ ಲೋಕಪಾಲ ಮಸೂದೆ ಸೊರಗುವಂತಾಯಿತು. ಅದೇ ವೇಳೆಗೆ ಅಣ್ಣಾ ಬಳಗದಲ್ಲಿಯ ಕೆಲವರ ಮಾತುಗಳಲ್ಲಿ ಗೊಂದಲಗಳು, ರಾಜಕೀಯ ಪಕ್ಷವೊಂದರ ಪರವಾದ ಮಾತುಗಳಂತೆ ಕೇಳಬರತೊಡಗಿದವು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಅಣ್ಣಾ ಟೀಮಿಗೆ ಇದ್ದ ನಾಯಕತ್ವದ ರಭಸ ವರ್ಷದ ಅಂತ್ಯದಲ್ಲಿ ತನ್ನ ಗಡುಸುತನವನ್ನು ಕಳೆದುಕೊಳ್ಳತೊಡಗಿತು.

ಜನತೆಗೆ ಅದರಲ್ಲೂ ದುಡಿದು ಬದುಕುವ ಸಾಮಾನ್ಯರಿಗೆ ಈ ಲೋಕಪಾಲ ಮಸೂದೆಯ ಜಾರಿಗೊಳ್ಳುವಿಕೆ, ಜಾರಿಯಾಗದಿರುವಿಕೆ ಎರಡೂ ಅಷ್ಟಾಗಿ ಬಾಧಿಸುವುದಿಲ್ಲ. ಹಾಗೆಯೇ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ನಿರಂತರವಾಗಿ ನೆನಪಿಟ್ಟು ಆ ದಿಶೆಯಲ್ಲಿ ನಡೆಯಬೇಕಾದ ನಿರಂತರ ಹೋರಾಟವನ್ನು ರೂಪಿಸುವಷ್ಟು ಇವರ ಬದುಕು ಸುಭದ್ರವಾಗಿಲ್ಲ. ಈಗ ಅದೇ ಅಣ್ಣಾ ಮತ್ತೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರೆ ಸಾಮಾನ್ಯ ಮಧ್ಯಮವರ್ಗದ ಜನ ಮೊದಲಿನ ಹುರುಪಿನಲ್ಲಿಯೇ ಅಣ್ಣಾ ಕೂಗಿಗೆ ಸ್ಪಂದಿಸುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ ಸಾಮಾನ್ಯನ ಬದುಕೇ ಹಾಗಿದೆ. ಆತ ಯಾವುದನ್ನೂ ತುಂಬಾ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲಾರ. ಜೊತೆಗೆ ಅತ್ಯಂತ ಬೇಗ ಆತ ಒಂದು ವ್ಯವಸ್ಥೆಯ ಬಗ್ಗೆ ಸಿನಿಕತನವನ್ನು ಹೊಂದುವುದೂ ಇದೆ.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ತಮ್ಮ ಕರಾಳ ವ್ಯವಹಾರಗಳಿಗೆ ಕುತ್ತು ಬರುವಂತಹ ಯಾವ ನಿಯಮಗಳನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿರುವುದು ತೀರಾ ಅಪರೂಪ. ಅಂತಹದರಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡು ಎಲ್ಲರೂ ಲೋಕಪಾಲ ಮಸೂದೆಗೆ ಒಳಪಡಬೇಕು ಎನ್ನುವ ಅಣ್ಣಾನ ಒತ್ತಾಸೆ ಈಡೇರುವದಾದರೂ ಹೇಗೆ..?

ಅಣ್ಣಾ ಜನಲೋಕಪಾಲ ಮಸೂದೆಯ ವಿಷಯದಲ್ಲಿ ತನ್ನ ಮಿತಿಗಳನ್ನೂ ಮೀರಿ ಹೋರಾಟ ಮಾಡಿದ. ಹಾಗೆಯೇ ಹಿಂದೆಂದೂ ಯಾರಿಗೂ ಸಿಗದ ಅಪಾರ ಪ್ರಮಾಣದ ಜನಬೆಂಬಲವೂ ಅವನಿಗೆ ದೊರೆಯಿತು. ಅಂತಿಮವಾಗಿ ಆಗಬೇಕಾದ ಮಹತ್ತರವಾದ ಕೆಲಸವೊಂದು ಹಾಗೇ ಉಳಿದುಹೋಯಿತು. ಪರೋಕ್ಷವಾಗಿ ಈ ಬಗೆಯ ಬಲಿಷ್ಟ ಲೋಕಪಾಲ ಮಸೂದೆ ಬಹುತೇಕ ರಾಜಕಾರಣಿಗಳಿಗೆ ಬೇಕಾಗದಿರುವಂತೆ, ಭ್ರಷ್ಟ ಅಧಿಕಾರಿ ಸಮೂಹಕ್ಕೂ ಬೇಕಾಗಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ಜನಸಾಮಾನ್ಯ ಮಾತ್ರ ತನ್ನ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಎಂದಿನಂತೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದಾನೆ. ಮತ್ತೆ ಅಣ್ಣಾ ಒಂದೊಮ್ಮೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆ ನೀಡಿದರೆ ಭ್ರಷ್ಟಾಚಾರ ವಿಷಯದಲ್ಲಿ ಅಪಾರ ಪ್ರಮಾಣದಲ್ಲಿ ಮಾತಾಡಿ, ಆ ಬಗ್ಗೆ  ಕೇಳಿ ಯಥಾಸ್ಥಿತಿಯನ್ನೇ ಅನುಭವಿಸುವಂತಾದ ಜನ ಅದೇ ಮೊದಲಿನ ಪ್ರಮಾಣದಲ್ಲಿ ಅಣ್ಣಾಗೆ ಸಾಥ್ ನೀಡುತ್ತಾರೆಂದು ನನಗನಿಸದು.

One thought on “ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

  1. Ananda Prasad

    ಮೂರ್ನಾಲ್ಕು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇಂದು ಜನರ ಜೀವನ ಮಟ್ಟ ಸಾಕಷ್ಟು ಸುಧಾರಣೆಯಾಗಿದೆ. ಹೀಗಾಗಿ ಭ್ರಷ್ಟಾಚಾರ ಎಂಬುದು ಜನರನ್ನು ತೀವ್ರವಾಗಿ ಬಾಧಿಸಿರುವಂತೆ ಕಾಣುವುದಿಲ್ಲ. ಕೆಲಸ ಆಗದಿದ್ದರೆ ಸ್ವಲ್ಪ ಮಾಮೂಲು ತಳ್ಳಿದರೆ ಕೆಲಸ ಆಗುವುದರಿಂದ ಇದು ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುವುದಿಲ್ಲ. ದೇಶಕ್ಕೆ ನಿಜವಾಗಿಯೂ ತೀವ್ರವಾಗಿ ಬಾಧಿಸುತ್ತಿರುವುದು ಕಾರ್ಪೋರೇಟ್ ವಲಯದ ಭ್ರಷ್ಟಾಚಾರ ಮತ್ತು ಅದರಿಂದ ದೇಶಕ್ಕೆ ಆಗುತ್ತಿರುವ ನಷ್ಟ ಅಗಾಧವಾದುದು. ಈ ವಿಷಯದ ಬಗ್ಗೆ ಅಣ್ಣಾ ಬಳಗದ ಹೋರಾಟದಲ್ಲಿ ಗಮನ ನೀಡಲಾಗಿಲ್ಲ. ರಾಜಕಾರಣಿಗಳು ನಡೆಸುತ್ತಿರುವ ಭ್ರಷ್ಟಾಚಾರ ದೇಶವನ್ನು ತೀವ್ರವಾಗಿ ಬಾಧಿಸುತ್ತಿರುವ ಎರಡನೆಯ ಅಂಶವಾಗಿದೆ. ಇದರ ಬಗ್ಗೆ ಅಣ್ಣಾ ಹೋರಾಟದಲ್ಲಿ ಸಾಕಷ್ಟು ಗಮನ ನೀಡಲಾಗಿತ್ತು. ರಾಜಕಾರಣಿಗಳು ನಡೆಸುವ ಭ್ರಷ್ಟಾಚಾರ ಜನತೆಯನ್ನು ನೇರವಾಗಿ ಬಾಧಿಸುವುದಿಲ್ಲ, ಅದು ಪರೋಕ್ಷ ಪರಿಣಾಮ ಬೀರುತ್ತದೆ. ಹೀಗಾಗಿ ಜನರಲ್ಲಿ ಅದರ ಬಗ್ಗೆ ಹೆಚ್ಚಿನ ಗಮನ ಇಲ್ಲ. ಸಾಮಾನ್ಯ ಜನರಿಗೆ ತಮ್ಮ ಕೆಲಸ ಬಿಟ್ಟು ದಿನಗಟ್ಟಲೆ ಹೋರಾಟದಲ್ಲಿ ತೊಡಗುವ ತ್ರಾಣ ಇಲ್ಲದಿರುವುದರಿಂದ ಮತ್ತು ಜೀವನ ಸಾಗಿಸಲಾರದಷ್ಟು ಪರಿಸ್ಥಿತಿ ಹದಗೆಟ್ಟಿಲ್ಲದಿರುವುದರಿಂದ ಹೋರಾಟವನ್ನು ದೀರ್ಘ ಕಾಲ ಕೊಂಡೊಯ್ಯುವ ಮನಸ್ಥಿತಿ ಇಂದು ಜನರಲ್ಲಿ ಇಲ್ಲ.

    Reply

Leave a Reply

Your email address will not be published. Required fields are marked *