Daily Archives: March 15, 2012

ವಂಶವಾಹಿ ಪ್ರಜಾಪ್ರಭುತ್ವ – ಕಾರಣಗಳು ಮತ್ತು ಪರಿಹಾರ

-ಆನಂದ ಪ್ರಸಾದ್

ಭಾರತದಲ್ಲಿ ಸ್ವಾತಂತ್ರ್ಯದ ನಂತರ ವಂಶವಾಹಿ ಪ್ರಜಾಪ್ರಭುತ್ವ ಬೆಳೆದು ನಿಂತಿದೆ. ಆರಂಭದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿತ್ತು. ನಂತರ ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಬೆಳೆದಿದ್ದು ಹಿಂದಿದ್ದ ರಾಜರ ಆಳ್ವಿಕೆಯನ್ನೇ ಹೋಲುತ್ತಿದೆ. ನೆಪಮಾತ್ರಕ್ಕೆ ಐದು ವರ್ಷಗಳಿಗೊಮ್ಮೆ (ಅಥವಾ ಅವಧಿಪೂರ್ವ) ಚುನಾವಣೆಗಳು ನಡೆಯುತ್ತಿದ್ದರೂ ಹೆಚ್ಚಿನ ಬದಲಾವಣೆ ಏನೂ ಕಂಡು ಬರುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಕುಟುಂಬ, ಕರ್ನಾಟಕದಲ್ಲಿ ದೇವೇಗೌಡ ಕುಟುಂಬ, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಒರಿಸ್ಸಾದಲ್ಲಿ ನವೀನ ಪಾಟ್ನಾಯಕ್, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಮುಲಾಯಂ ಸಿಂಗ್, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಬಾಳ್ ಠಾಕ್ರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಹೀಗೆ ವ್ಯಕ್ತಿ ಕೇಂದ್ರಿತ ಅಥವಾ ಕುಟುಂಬ ಕೇಂದ್ರಿತ ಪಕ್ಷಗಳು ಬೆಳೆದು ನಿಂತಿವೆ. ಕುಟುಂಬ ಅಥವಾ ವ್ಯಕ್ತಿ ಕೇಂದ್ರಿತ ನೆಲೆಯನ್ನು ಮೀರಿ ಏಕೆ ಭಾರತದಲ್ಲಿ ರಾಜಕೀಯ ಪಕ್ಷಗಳು ಯಶಸ್ವಿಯಾಗುತ್ತಿಲ್ಲ, ಇದಕ್ಕೆ ಏನು ಕಾರಣ ಎಂಬ ಬಗ್ಗೆ ಭಾರತದಲ್ಲಿ ಚಿಂತನೆ ನಡೆಯುತ್ತಿಲ್ಲ.

ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಬೆಳವಣಿಗೆಗೆ ಸೈದ್ದಾಂತಿಕ ನೆಲೆಯಲ್ಲಿ ಪಕ್ಷಗಳು ಸಂಘಟಿತವಾಗಬೇಕು. ಎಲ್ಲ ಪಕ್ಷಗಳು ಸೈದ್ಧಾಂತಿಕ ನೆಲೆಯಲ್ಲಿ ತಮ್ಮ ಪಕ್ಷಗಳು ರೂಪುಗೊಂಡಿವೆ ಎಂದು ಹೇಳುತ್ತಿದ್ದರೂ ಆಂತರಿಕ ಪ್ರಜಾಪ್ರಭುತ್ವವನ್ನು ತಮ್ಮ ಪಕ್ಷಗಳಲ್ಲಿ ಅಳವಡಿಸಿಕೊಂಡಿಲ್ಲ. ಕೆಲವು ಪಕ್ಷಗಳಲ್ಲಿ ಕಾಟಾಚಾರಕ್ಕಾಗಿ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆದರೂ ಒಬ್ಬ ವ್ಯಕ್ತಿಯೇ ಅಥವಾ ಒಂದು ಕುಟುಂಬದ ಸದಸ್ಯರು ಮಾತ್ರವೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಭಾರತದ ರಾಜಕೀಯ ಪಕ್ಷಗಳ ದೌರ್ಬಲ್ಯ. ಇದಕ್ಕೆ ಆ ಕುಟುಂಬದ ಸದಸ್ಯರೇ ಕಾರಣ ಎಂದು ಹೇಳುವಂತಿಲ್ಲ. ಇದಕ್ಕೆ ಒಟ್ಟು ಭಾರತೀಯರ ಮನಸ್ಥಿತಿಯೇ ಕಾರಣ ಎನಿಸುತ್ತದೆ.

ಭಾರತೀಯ ರಾಜಕಾರಣಿಗಳಲ್ಲಿ ಅಧಿಕಾರದ ಲಾಲಸೆ ಹಾಗೂ ಗುಂಪುಗಾರಿಕೆ ತುಂಬಿಕೊಂಡಿರುವುದು ಇದಕ್ಕೆ ಕಾರಣವೆನಿಸುತ್ತದೆ. ಒಂದು ಕುಟುಂಬದ ವ್ಯಕ್ತಿ ಅಧ್ಯಕ್ಷನಾಗಿರದ ಪಕ್ಷದಲ್ಲಿ ಆ ಪಕ್ಷವು ಚೂರು ಚೂರಾಗುವುದು ಭಾರತದ ರಾಜಕಾರಣದ ದುರಂತ. ಉದಾಹರಣೆಗೆ ಸೋನಿಯಾ ಗಾಂಧಿ, ರಾಜೀವ ಗಾಂಧಿ ನಿಧನದ ನಂತರ ರಾಜಕೀಯಕ್ಕೆ ಕೆಲ ವರ್ಷಗಳು ಬಂದಿರಲಿಲ್ಲ. ನೆಹರೂ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಚೂರು ಚೂರಾಗುವ ಭೀತಿ ಉಂಟಾಗಿತ್ತು ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷವು ಒಂದಾಗಿ ಇರುತ್ತಿರಲಿಲ್ಲ. ನೆಹರೂ ಕುಟುಂಬದ ಸದಸ್ಯ ನಾಯಕ ಸ್ಥಾನದಲ್ಲಿದ್ದರೆ ಮಾತ್ರ ಕಾಂಗ್ರೆಸ್ ಒಟ್ಟಾಗಿ ಉಳಿಯುತ್ತದೆ ಇಲ್ಲದೆ ಹೋದ ಪಕ್ಷದಲ್ಲಿ, ಪಕ್ಷದಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿ ಚೂರು ಚೂರಾಗುವ ಪರಿಸ್ಥಿತಿ ಇದೆ. ಇದಕ್ಕೆ ನಮ್ಮ ರಾಜಕಾರಣಿಗಳ ಅಧಿಕಾರದಾಹವೇ ಕಾರಣ.

ಇದೇ ಪರಿಸ್ಥಿತಿ ಇಂದು ಭಾರತೀಯ ಜನತಾ ಪಕ್ಷದಲ್ಲೂ ಇದೆ. ಅಲ್ಲಿ ಯಜಮಾನಿಕೆಯ ಸ್ಥಾನವನ್ನು ಸಂಘ ಪರಿವಾರ ಎಂಬ ಸಂವಿಧಾನಬಾಹಿರ ಶಕ್ತಿ ಪಡೆದುಕೊಂಡಿದೆ. ಸಂಘವು ತೇಪೆ ಹಾಕುತ್ತಿರುವ ಕಾರಣ ಬಿಜೆಪಿ ಎಂಬ ಪಕ್ಷವು ಒಂದಾಗಿ ಉಳಿದಿದೆ ಇಲ್ಲದೆ ಹೋದರೆ ಅದು ಕೂಡ ಚೂರು ಚೂರಾಗಿ ಹೋಗುತ್ತದೆ. ಇನ್ನು ಉಳಿದ ಪ್ರಾದೇಶಿಕ ಪಕ್ಷಗಳ ಸ್ಥಿತಿಯೂ ಅಷ್ಟೇ. ಅಲ್ಲಿಯೂ ಒಂದು ಕುಟುಂಬದ ಕೈಯಲ್ಲಿ ಇರುವ ಪಕ್ಷ ಒಂದಾಗಿ ಉಳಿದಿದೆ ಮತ್ತು ಆ ಕುಟುಂಬಕ್ಕೆ ತಗ್ಗಿ ಬಗ್ಗಿ ನಡೆಯುವ ವ್ಯಕ್ತಿಗಳಿಗೆ ಮಾತ್ರ ಮಣೆ. ಇದಕ್ಕೆ ಅಪವಾದವಾಗಿ ಇರುವುದು ಇಂದು ಎಡ ಪಕ್ಷಗಳು ಮಾತ್ರ. ಆದರೆ ಎಡ ಪಕ್ಷಗಳಿಗೆ ಬಂಗಾಲ, ಕೇರಳ ಹೊರತುಪಡಿಸಿದರೆ ಹೆಚ್ಚಿನ ಅಸ್ತಿತ್ವ ಇಲ್ಲ. ಕಾಂಗ್ರೆಸ್ಸೇತರ ಪಕ್ಷವಾಗಿ ಅಧಿಕಾರ ಹಿಡಿದ ಜನತಾ ಪಕ್ಷವು ಅಧಿಕಾರದ ಕಚ್ಚಾಟದಿಂದಾಗಿಯೇ ಚೂರುಚೂರಾಗಿದೆ. ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ನಮ್ಮ ರಾಜಕಾರಣಿಗಳಿಗೆ ಒಂದಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವ ಇಲ್ಲ.

ರಾಜಕೀಯಕ್ಕೆ ಬರುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳು ಅರ್ಥವಾಗದೆ ಇರುವುದು ಮತ್ತು ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕಂಡು ಬರುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ರಾಜಕೀಯ ಪಕ್ಷಗಳನ್ನು ರೂಪಿಸಿ ಗಟ್ಟಿಯಾಗಿ ಸೈದ್ದಾಂತಿಕ ದೃಢತೆಯನ್ನು ಕಾಪಾಡಿಕೊಂಡು ಬರದಿರುವುದೆ ಇಂಥ ಪರಿಸ್ಥಿತಿಗೆ ಕಾರಣ. ಸೈದ್ಧಾಂತಿಕ ನೆಲೆಯಲ್ಲಿ ಒಂದುಗೂಡಿ ಕೆಲಸ ಮಾಡುವುದು ಭಾರತೀಯ ರಾಜಕಾರಣಿಗಳಿಗೆ ಗೊತ್ತೇ ಇಲ್ಲ. ಅದು ಗೊತ್ತಿದ್ದರೆ ಅಧಿಕಾರಕ್ಕಾಗಿ ಕಚ್ಚಾಡುವ, ಪಕ್ಷವನ್ನೇ ಚೂರು ಚೂರು ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪರಿಹಾರವಾದರೂ ಏನು? ಪಕ್ಷಕ್ಕೆ ವ್ಯಕ್ತಿಗಳನ್ನು ಸೇರಿಸಿಕೊಳ್ಳುವಾಗ ಪಕ್ಷದ ಸಿದ್ಧಾಂತವನ್ನು ವಿವರಿಸಿ ಸಿದ್ಧಾಂತವನ್ನು ಮೀರಿದರೆ ಪಕ್ಷದಿಂದ ಹೊರಹಾಕುವ ಸ್ಪಷ್ಟ ಧೋರಣೆಗಳನ್ನು ರಾಜಕೀಯ ಪಕ್ಷಗಳು ಹೊಂದಿದರೆ ಇಂಥ ಪರಿಸ್ಥಿತಿಯನ್ನು ಬಹುತೇಕ ತಡೆಯಬಹುದು. ಹೀಗೆ ಮಾಡಬೇಕಾದರೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾದ ಸಿದ್ಧಾಂತ ಇರಬೇಕಾಗುತ್ತದೆ. ಈಗ ಇರುವ ಯಾವ ರಾಜಕೀಯ ಪಕ್ಷಗಳಿಗೂ (ಎಡ ಪಕ್ಷಗಳನ್ನು ಹೊರತು ಪಡಿಸಿ) ಸ್ಪಷ್ಟ ಸಿದ್ಧಾಂತವೇ ಇಲ್ಲದಿರುವುದು ಭಾರತದ ಸಮಕಾಲೀನ ರಾಜಕೀಯದ ದುರಂತ. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಡುವ ರಾಜಕೀಯ ಪಕ್ಷಗಳೇ ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದಾದರೂ ಹೇಗೆ?

ಭಾರತದ ರಾಜಕೀಯಕ್ಕೆ ತೃತೀಯ ರಂಗವೊಂದರ ಅವಶ್ಯಕತೆ ಇದೆಯೇ ಎಂದರೆ ಅಂಥ ಒಂದು ಅವಶ್ಯಕತೆ ಇದೆ ಎನಿಸುತ್ತದೆ. ಆದರೆ ಅಂಥ ತೃತೀಯ ರಂಗವೊಂದು ಸ್ಪಷ್ಟವಾದ ಸೈದ್ಧಾಂತಿಕ ಧೋರಣೆ ಹೊಂದಿರಬೇಕು ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ಒಂದು ದೀರ್ಘಕಾಲೀನ ಪ್ರಣಾಳಿಕೆ ಹೊಂದಿರಬೇಕು. ಹಾಗಿರದೆ ಬರಿಯ ಅಧಿಕಾರಕ್ಕಾಗಿ ರೂಪುಗೊಳ್ಳುವ ತೃತೀಯ ರಂಗ ಯಶಸ್ವಿಯಾಗುವುದಿಲ್ಲ ಮತ್ತು ಹೆಚ್ಚು ಸಮಯ ಬಾಳುವುದಿಲ್ಲ. ತೃತೀಯ ರಂಗದಲ್ಲಿ ಒಟ್ಟುಗೂಡುವ ಪಕ್ಷಗಳಿಗೆ ದೀರ್ಘಕಾಲೀನ ಸೈದ್ದಾಂತಿಕ ಬದ್ಧತೆ ಇಲ್ಲದೆ ಹೋಗುವುದು, ಅಧಿಕಾರಕ್ಕಾಗಿ ಸಿದ್ಧಾಂತವನ್ನೂ ಮೀರಿ ತಮಗೆ ಒಪ್ಪಿಗೆಯಾಗದ ಸಿದ್ಧಾಂತದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಅವಕಾಶವಾದಿ ಪ್ರವೃತ್ತಿ ತೋರುವುದೇ ಸಂಭಾವ್ಯ ತೃತೀಯ ರಂಗದ ಪಕ್ಷಗಳ ದೊಡ್ಡ ದೌರ್ಬಲ್ಯವಾಗಿದೆ. ಅವು ಆ ದೌರ್ಬಲ್ಯವನ್ನು ಮೀರಿ ನಿಂತರೆ ಅಂಥ ಒಂದು ತೃತೀಯ ರಂಗ ರೂಪುಗೊಳ್ಳಬಹುದು, ತನ್ನ ಅವಧಿಪೂರ್ಣ ಆಡಳಿತ ನೀಡಲು ಸಾಧ್ಯ. ದ್ವಿಪಕ್ಷೀಯ ಆಡಳಿತಕ್ಕಿಂತ ಇನ್ನೂ ಒಂದು ಪರ್ಯಾಯ ಇರುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಏಕೆಂದರೆ ದ್ವಿಪಕ್ಷೀಯ ವ್ಯವಸ್ಥೆ ಇದ್ದರೆ ಹೇಗಿದ್ದರೂ ಆಡಳಿತ ವಿರೋಧಿ ಅಲೆಯಿಂದ ಮುಂದಿನ ಸಾರಿ ತನಗೆ ಆಡಳಿತ ಸಿಗುತ್ತದೆ ಎಂಬ ನಿರ್ಲಕ್ಷ್ಯ ರಾಜಕೀಯ ಪಕ್ಷಗಳಲ್ಲಿ ಬೆಳೆಯುತ್ತದೆ ಮತ್ತು ತಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎಂಬ ಅಹಂಕಾರವೂ ಬೆಳೆಯುತ್ತದೆ. ತ್ರಿಪಕ್ಷೀಯ ವ್ಯವಸ್ಥೆ ಇದ್ದರೆ ರಾಜಕೀಯ ಪಕ್ಷಗಳು ಸ್ವಲ್ಪ ಎಚ್ಚರಿಕೆಯಿಂದ ಇರಲು ಸಾಧ್ಯ.

ಸದ್ಯದ ಭಾರತೀಯ ರಾಜಕೀಯವನ್ನು ಅವಲೋಕಿಸಿದರೆ ಆರೋಗ್ಯಕರ ಸೈದ್ದಾಂತಿಕ ನೆಲೆಗಟ್ಟಿನ ರಾಜಕೀಯ ಸ್ವಾತಂತ್ರ್ಯ ನಂತರದ ಆರು ದಶಕಗಳಲ್ಲಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ. ಇಂಥ ಒಂದು ಆರೋಗ್ಯಕರ ಸೈದ್ದಾಂತಿಕ ರಾಜಕೀಯ ಜಾಗೃತಿ ಬೆಳೆಯಲು ಇನ್ನು ಎಷ್ಟು ದಶಕಗಳು ಅಥವಾ ಶತಮಾನಗಳು ಬೇಕೋ ಊಹಿಸಲಾಗುವುದಿಲ್ಲ. ಭಾರತೀಯರು  ಜಡ   ಪ್ರವೃತ್ತಿಯವರಾಗಿರುವುದರಿಂದ ಮತ್ತು ಇಲ್ಲಿ ಯಾವುದೇ ಹೊಸ ಚಿಂತನೆಗಳಿಗೆ ಸ್ಥಾನ ಇಲ್ಲದಿರುವುದರಿಂದ ಯಾವುದೇ ಕ್ಷೇತ್ರದಲ್ಲೂ ಹೊಸತನ ತರುವುದು ಬಹಳ ಕಷ್ಟವಾಗಿದೆ. ಹೀಗಾಗಿ ಉಳಿದ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರದಲ್ಲೂ ವಂಶವಾಹಿ ಪ್ರಜಾಪ್ರಭುತ್ವದಿಂದ ನಿಜವಾದ ಪ್ರಜಾಪ್ರಭುತ್ವದೆಡೆಗೆ ನಮ್ಮ ದೇಶ ಯಾವಾಗ ಪರಿವರ್ತನೆಯಾಗುವುದೋ ಹೇಳಲಾಗದು. ಅಲ್ಲಿಯವರೆಗೆ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸತನ ತರಲು ಸಾಧ್ಯವಿದೆ.

ಆಧುನಿಕ ವೈಜ್ಞಾನಿಕ ಚಿಂತನೆಯವರು ಈಗಿರುವ ವಂಶವಾಹಿ ಪ್ರಜಾಪ್ರಭುತ್ವ ಕುಟುಂಬಗಳಲ್ಲೇ ರೂಪುಗೊಂಡರೆ ಅಂಥ ಸಾಧ್ಯತೆ ಇದೆ. ಈಗಿರುವ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸ ಚಿಂತನೆಗಳನ್ನು ತರಲು ಸಾಕಷ್ಟು ಅವಕಾಶ ಇದೆ ಏಕೆಂದರೆ ಪಕ್ಷಗಳಲ್ಲಿ ಕುಟುಂಬದ ವ್ಯಕ್ತಿಗಳಲ್ಲೇ ಅಧಿಕಾರ ಕೇಂದ್ರೀಕೃತವಾಗಿರುವುದರಿಂದ ಅವರು ತೆಗೆದುಕೊಳ್ಳುವ ಪ್ರಗತಿಪರ ನಿರ್ಧಾರಗಳಿಗೆ ಪಕ್ಷದೊಳಗೆ ಅಷ್ಟಾಗಿ ವಿರೋಧ ಬರುವ ಸಾಧ್ಯತೆ ಇಲ್ಲ. ಹೀಗಿದ್ದರೂ ಪ್ರಗತಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕುಟುಂಬ ಪ್ರಭುತ್ವಗಳಿಗೆ ಸಾಧ್ಯವಾಗದೆ ಇರಲು ಅವರಲ್ಲಿ ರಾಜಕೀಯ ಚಿಂತನೆ ಹಾಗೂ ವ್ಯಾಪಕ ಓದಿನ ಕೊರತೆ ಇರುವುದೇ ಕಾರಣ. ವಂಶವಾಹಿ ಪ್ರಭುತ್ವ ಇರುವ ಕುಟುಂಬಗಳ ಹೊಸ ತಲೆಮಾರುಗಳು ಹೆಚ್ಚು ಹೆಚ್ಚು ಪ್ರಗತಿಶೀಲ ಚಿಂತನೆ ಅಳವಡಿಸಿಕೊಳ್ಳಲು ವ್ಯಾಪಕ ಅಧ್ಯಯನದ ಅವಶ್ಯಕತೆ ಇದೆ ಹಾಗೂ ದೇಶದ ಪರ್ಯಟನೆ ಮಾಡಿ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವಂಶವಾಹಿ ಪ್ರಭುತ್ವದ ಹೊಸ ತಲೆಮಾರಿಗೆ ಅಸಾಧ್ಯವೇನೂ ಅಲ್ಲ.