ಜಾತಿವಿನಾಶ ಮತ್ತು ಹಾವನೂರ ವರದಿ

– ಪ್ರೊ. ಎಂ.ಡಿ. ನಂಜುಂಡಸ್ವಾಮಿ

ಶ್ರೀ ಹಾವನೂರ್‌‌‌‌‍ರವರ ಅಧ್ಯಕ್ಷತೆಯಲ್ಲಿ ಸಲ್ಲಿಸಲಾಗಿರುವ ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆ ಇತ್ತೀಚೆಗೆ ಟೀಕೆಗಳು ಕೇಳಿಬರುತ್ತಿವೆ. ಇದರಲ್ಲಿ ವೀರಶೈವರು ಮತ್ತು ಮರಾಠರು ತಮ್ಮನ್ನು ಮುಂದುವರಿದವರೆಂದು ಪರಿಗಣಿಸಿರುವುದು ತಮಗೆ ಅನ್ಯಾಯವಾಗಿದೆಯೆಂದು ಹೇಳುತ್ತಿದ್ದಾರೆ. ವೈಜ್ಞಾನಿಕವಾಗಿ ಜನಸಂಖ್ಯೆಯಲ್ಲಿ ನಿಗದಿಪಡಿಸದೆ, ತಮ್ಮ ಶೇಕಡಾ 90 ಭಾಗ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆಂದೂ ಶೇಕಡಾ 70 ಭಾಗಕ್ಕಿಂತ ಹೆಚ್ಚು ಜನರು ಕೃಷಿ ಕಾರ್ಮಿಕರೆಂದೂ, ಹೀಗಿದ್ದರೂ ತಮ್ಮನ್ನು ಹಿಂದುಳಿದವರೆಂದು ಪರಿಗಣಿಸದೆ ಅನ್ಯಾಯವಾಗಿದೆಯೆಂದೂ ವೀರಶೈವರು ದೂರುತ್ತಿದ್ದಾರೆ. ವೀರಶೈವರಲ್ಲಿ ಕೆಲವರನ್ನು ಮಾತ್ರ ಹಿಂದುಳಿದವರೆಂದೂ, ಮಿಕ್ಕವರನ್ನು ಮುಂದುವರಿದವರೆಂದೂ ಆಯೋಗ ಪರಿಗಣಿಸಿ ವೀರಶೈವರಲ್ಲಿ ಒಡಕನ್ನು ತರಲು ಪ್ರಯತ್ನಿಸಿದೆಯೆಂದೂ ದೂರಲಾಗುತ್ತಿದೆ.

ಈ ಎಲ್ಲ ದೂರುಗಳಿಗೂ ಹಿನ್ನೆಲೆಯಲ್ಲಿರುವ ಮುಖ್ಯ ಕಾರಣಗಳು ಇಷ್ಟು: ಭಾರತದ ಜಾತಿಪದ್ಧತಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು; ಜಾತಿ ವಿನಾಶದ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲದಿರುವುದು; ಹಾವನೂರರ ವರದಿಯನ್ನು ನಿಷ್ಪಕ್ಷಪಾತದಿಂದ ಅರ್ಥಮಾಡಿಕೊಂಡಿಲ್ಲದಿರುವುದು; ಹಾವನೂರರು ಸಂವಿಧಾನದ ನಿಯಮವನ್ನು ವಿಶ್ಲೇಷಣೆ ಮಾಡಿರುವ ನ್ಯಾಯ ತೀರ್ಪುಗಳ ಚೌಕಟ್ಟಿನಲ್ಲಿ ವರದಿ ತಯಾರಿಸಿದ್ದಾರೆ ಎನ್ನುವ ಅಂಶವನ್ನು ಗಣನೆಗೆ ತೆಗೆದುಕೊಂಡಿಲ್ಲದಿರುವುದು; ಜಾತಿ ಅಂಶಗಳು ಸಿಕ್ಕದಂತೆ ಮಾಡಿರುವ ಕೇಂದ್ರ ಸರ್ಕಾರದ ಕುತಂತ್ರದ ಬಗ್ಗೆ ಅರಿವಿಲ್ಲದಿರುವುದು; ಹಾಗೂ ನ್ಯಾಯಾಲಯಗಳು ಮಾಡಿರುವ ಕುತಂತ್ರಗಳನ್ನು ಗಮನಿಸಿಲ್ಲದಿರುವುದು. ಈ ಕಾರಣಗಳಿಂದಾಗಿ ವಿನಾಶದಲ್ಲಿ ಆಸಕ್ತಿಯಿರುವವರಿಗೆ ಹಾಗೂ ಸಮಾನತೆಯ ಹೋರಾಟದಲ್ಲಿ ಆಸಕ್ತಿ ಇರುವವರಿಗೆ ಈ ಕೆಳಕಂಡ ಕೆಲವು ಅಂಶಗಳನ್ನು ಗಮನಕ್ಕೆ ತರುವುದು ಈ ಲೇಖನದ ಉದ್ದಿಶ್ಯ.

1. ಹಿಂದುಳಿದ ವರ್ಗಗಳಿಗೆ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಹಾವನೂರರ ಆಯೋಗಕ್ಕೆ ಇದ್ದ ಅಡತಡೆಗಳು ಕೇಂದ್ರ ಸರ್ಕಾರ  ಮತ್ತು ಶ್ರೇಷ್ಠ ನ್ಯಾಯಾಲಯದ ತೀರ್ಮಾನಗಳು. ಕೇಂದ್ರ ಸರ್ಕಾರ ನಿಮ್ನ ವರ್ಗಗಳಿಗೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ಯಾವ ನಿಖರವಾದ ನೀತಿಯ ಆಧಾರವೂ ಇಲ್ಲದೆ 18% ಅವಕಾಶಗಳನ್ನು ಮೀಸಲಿಟ್ಟಿತು. (ಶತಮಾನಗಳಿಂದ ಆಗಿರುವ ವಂಚನೆಯ ದೃಷ್ಟಿಯಿಂದ ಇದು ನ್ಯಾಯವಾದ ಕ್ರಮವೇ ಆಗಿದೆ.) ನಂತರ ಶ್ರೇಷ್ಠ ನ್ಯಾಯಾಲಯವು 50% ಮಾತ್ರ ಮೀಸಲಿಡಬೇಕೆಂದೂ, ಉಳಿದ 50% ಸಾಮರ್ಥ್ಯ ((Merit Pool) ಕ್ಷೇತ್ರಕ್ಕೆ ಪ್ರತ್ಯೇಕವಿಡಬೇಕೆಂದೂ ಹೇಳಿತು. (ಬಾಲಾಜಿ ಮೊಕದ್ದಮೆ, AIR, 1963 ಸುಪ್ರೀಂಕೋರ್ಟ್ ಪುಟ 649). ಇದರಿಂದಾಗಿ ಆಯೋಗಕ್ಕುಳಿದ ಸ್ಥಾನಗಳು 32% ಮಾತ್ರ. ಈ ಅವಕಾಶಗಳನ್ನು ಅದು 83% ಜನರಿಗೆ ಹಂಚುವ ಕೆಲಸ ಮಾಡಿದೆ. ಇದು ಹೇಗೆಂದರೆ ಸಾಮರ್ಥ್ಯ  ಕ್ಷೇತ್ರದ 50% ಸ್ಥಾನಗಳನ್ನೂ ಕೇವಲ ಪರೀಕ್ಷೆಯಲ್ಲಿ ಪಡೆದ ಅಂಕಿ-ಅಂಶಗಳ ಆಧಾರದ ಮೇಲೆ 4% ಬ್ರಾಹ್ಮಣರೇ ಪಡೆಯುತ್ತಿರುವ ಪರಿಸರದಲ್ಲಿ ಮತ್ತೆ ಕೇಂದ್ರ ಮೀಸಲಿಟ್ಟ 18% ಸ್ಥಾನಗಳನ್ನು 13% ನಿಮ್ನವರ್ಗ ಹಾಗೂ ಪರಿಶಿಷ್ಟ ಜನಾಂಗಗಳು ಪಡೆದ ಮೇಲೆ ಉಳಿಯುವ 32% ಸ್ಥಾನಗಳು 83% ಜನರಿಗೆ ಉಳಿಯುತ್ತವೆ.

2. ಮಿಕ್ಕೆಲ್ಲ ಜಾತಿಗಳಲ್ಲಿ ಒಗ್ಗಟ್ಟಿಲ್ಲದಂತೆ ನೋಡಿಕೊಂಡು ತನ್ನ ಪ್ರತಿಷ್ಠೆಯನ್ನು ಮುಂದುವರಿಸಿಕೊಂಡು ಹೋಗುವ ಪುರೋಹಿತಶಾಹಿಯ ಕುತಂತ್ರವೇ ಜಾತಿ ಪದ್ಧತಿ. ಶೂದ್ರರಲ್ಲಿ ಹರಿಜನರನ್ನು ಮತ್ತು ಇತರ ಶೂದ್ರರನ್ನು ಒಡೆಯಲು ಹಾಗೂ ಡಾ. ಅಂಬೇಡ್ಕರರ ಬೆಂಬಲ ಸಹಾನುಭೂತಿ ಪಡೆಯಲು ಮಾಡಿದ ಮೊದಲ ಕುತಂತ್ರ ಅವರಿಗೆ ಮಾತ್ರ ಮೀಸಲು ಸ್ಥಾನ ಕೊಟ್ಟಿದ್ದು. ಅನಂತರ ಈ ಗೊಂದಲದಿಂದ ತನ್ನ ವರ್ಗ ತಪ್ಪಿಸಿಕೊಂಡು ಹಾಯಾಗಿರಲು ಸಾಮರ್ಥ್ಯ -ಕ್ಷೇತ್ರದ ಜಾಲವನ್ನು ಸೃಷ್ಟಿಸಿದ್ದು ಆ ವರ್ಗದ ಎರಡನೇ ಕುತಂತ್ರ. ಇದಕ್ಕಿಂತ ಹೆಚ್ಚಿನ ಪರಿಣಾಮಕಾರಿಯಾದ ಕುತಂತ್ರವನ್ನು ಕೂಡ ಶ್ರೇಷ್ಠ ನ್ಯಾಯಾಲಯ ಮಾಡಿದೆ. ಇದೇನೆಂದರೆ ನಿಜವಾಗಿಯೂ ಹಿಂದುಳಿದ ವರ್ಗಗಳನ್ನು ಮುಂದುವರಿದ ವರ್ಗವೆಂದು ಪರಿಗಣಿಸುವಂತೆ ಅದು ಒದಗಿಸಿರುವ ಸೂತ್ರ. ಉದಾಹರಣೆಗೆ, ಮೇಲ್ಕಂಡ ಬಾಲಾಜಿ ಮೊಕದ್ದಮೆಯಲ್ಲಿ ನಾಗನಗೌಡ ಸಮಿತಿಯವರು 1000ಕ್ಕೆ 6.9 ಜನರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳಲ್ಲಿರುವುದನ್ನು ರಾಜ್ಯ ಸರಾಸರಿ (State Average) ಎಂದು ಗುಣಿಸಿ, ಯಾವುದೇ ಜಾತಿಯ ಜನಸಂಖ್ಯೆಯಲ್ಲಿ 6.9ಕ್ಕಿಂತ ಸ್ವಲ್ಪ ಕಡಿಮೆ ಜನರು ಹೈಸ್ಕೂಲು ತರಗತಿಯಲ್ಲಿದ್ದರೆ ಆ ಜಾತಿ ಹಿಂದುಳಿದದ್ದು ಎನ್ನುವ ಸೂತ್ರವನ್ನು ಅಳವಡಿಸಿದ್ದನ್ನು ವಿಶ್ಲೇಷಿಸುತ್ತಾ ಶ್ರೇಷ್ಠ ನ್ಯಾಯಾಲಯವು 6.9ಕ್ಕಿಂತ ಸ್ವಲ್ಪ ಕಡಿಮೆಯಿದ್ದರೂ ಆ ಜಾತಿಯನ್ನು ಹಿಂದುಳಿದಿದ್ದೆಂದು ಹೇಳಲು ಸಾಧ್ಯವಿಲ್ಲವೆಂದೂ, 6.9ರ ಅರ್ಧಕ್ಕಿಂತಲೂ ಕಡಿಮೆಯಿರುವ ಅಂದರೆ ಜಾತಿಯ 1000 ಜನರಲ್ಲಿ 2.45 ಜನರು ಹೈಸ್ಕೂಲಿನಲ್ಲಿದ್ದರೆ ಅಂತಹ ಜಾತಿಯನ್ನು ಹಿಂದುಳಿದದ್ದೆಂದು ಪರಿಗಣಿಸಬಹುದೆಂದೂ ಹೇಳಿದೆ.

ಹಾವನೂರರು ಹೈಸ್ಕೂಲಿನ ಮೇಲಿನ ಮೂರು ತರಗತಿಗಳನ್ನು ತೆಗೆದುಕೊಂಡರೆ ಬಹಳಷ್ಟು ಜಾತಿಗಳನ್ನು ಮುಂದುವರಿದವರೆಂದು ಹೇಳಬೇಕಾಗುತ್ತದೆಯಾದ್ದರಿಂದ, ಎಸ್.ಎಸ್.ಎಲ್.ಸಿ. ಅಂಕಿಅಂಶದ ಆಧಾರದ ಮೇಲೆ ರಾಜ್ಯ ಸರಾಸರಿಯಾದ 1000 ಜನರಿಗೆ 1.69 ಜನರು ಯಾವುದೇ ಜಾತಿಯಲ್ಲಿ ಮೆಟ್ರಿಕ್‍ನಲ್ಲಿದ್ದರೆ ಆ ಜಾತಿ ಮುಂದುವರಿದದ್ದು ಎನ್ನುವ ಸೂತ್ರ ಅಳವಡಿಸಿದ್ದಾರೆ. ವೀರಶೈವರು ಹಾಗೂ ರಾಜ್ಯ ಸರಾಸರಿಯನ್ನು ಮೀರಿದರೆ ಅದಕ್ಕೆ ಹಾವನೂರರು ಏನು ಮಾಡಲೂ ಸಾಧ್ಯವಿಲ್ಲ. ನಿಜವಾಗಿಯೂ, ಬಹುಸಂಖ್ಯಾತ ಗ್ರಾಮಾಂತರದ ವೀರಶೈವರು ಹರಿಜನರಷ್ಟೇ ದುಃಸ್ಥಿತಿಯಲ್ಲಿರುವುದು ನಿಜವಾದರೂ, ಶ್ರೇಷ್ಠ ನ್ಯಾಯಾಲಯದ ಸೂತ್ರದಂತೆ ಅದನ್ನೇ ಪಾಲಿಸಬೇಕಾಗಿ ಬಂದ ಹಾವನೂರರ  ಸೂತ್ರದಂತೆ ಮುಂದುವರೆದವರೆಂದು ಕರೆಯಲ್ಪಡುತ್ತಾರೆ.

ಇವೆರಡೂ  ಸೂತ್ರಗಳು ತಿರಸ್ಕರಿಸಲು ಅರ್ಹವಾದವು. (ಆದರೆ ನ್ಯಾಯಾಲಯದಲ್ಲಿ ಇವು ತಿರಸ್ಕೃತವಾಗುವುದಿಲ್ಲ.) ಏಕೆಂದರೆ, 300ಕ್ಕೊಬ್ಬ ಹೈಸ್ಕೂಲ್ ಓದಿರುವ ಜಾತಿ ಮುಂದುವರಿದದ್ದು ಎನ್ನುವ ನ್ಯಾಯಾಲಯಗಳು 2000ಕ್ಕೆ 3 ಜನ ಓದಿನ ಜಾತಿಯನ್ನು ಮುಂದುವರಿದದ್ದು ಎಂದು ಹೇಳಿಯೇ ಹೇಳುತ್ತವೆ. 0.16% ಶೈಕ್ಷಣಿಕ ಮುಂದುವರಿಕೆ ಯಾವ ಪ್ರಗತಿಯ ಸೂಚಿಯಲ್ಲ. ಇದಲ್ಲದೆ, ರಾಜ್ಯ ಸರಾಸರಿ ಕೂಡ ತಲಾ ಪ್ರತಿ ಆದಾಯದ ಗುಣಿತದಷ್ಟೇ ದೋಷ ಪೂರಿತವಾದದ್ದು. ಬಿರ್ಲಾ ಮತ್ತು ಹರಿಜನನೊಬ್ಬನ ಆದಾಯದ ಸರಾಸರಿಯು ತಲಾ ಆದಾಯವಾಗುವುದಾದರೆ, ಬ್ರಾಹ್ಮಣ ಹಾಗೂ ಕ್ರೈಸ್ತರ ಪೂರ್ವ ಸಾಕ್ಷರತೆ ಮತ್ತು ಹರಿಜನರ ಅನಕ್ಷರತೆಯ ಸರಾಸರಿಯು ರಾಜ್ಯ ಸರಾಸರಿ ಆಗುತ್ತದೆ.

3. ಶ್ರೇಷ್ಠ ನ್ಯಾಯಾಲಯದ ಕುತಂತ್ರಗಳ ಜೊತೆಗೆ ಕೇಂದ್ರ ಸರ್ಕಾರ ಕೂಡ ತನ್ನದೊಂದು ಕುತಂತ್ರದೊಂದಿಗೆ ಷಾಮೀಲಾಗಿದೆ. ಸಂವಿಧಾನದ ಮೀಸಲು ಸ್ಥಾನಗಳ ವಿತರಣೆಗೆ ಅವಶ್ಯಕವಾಗಿ ಬೇಕಾದ ಅಂಕಿಅಂಶಗಳೇ ಸಿಗದಂತೆ ತನ್ನ ಜನಗಣತಿ (Census) ಕೆಲಸದಲ್ಲಿ ಅದು ಜಾತಿ ವಿವರಗಳನ್ನು ಶೇಖರಿಸುವುದನ್ನೇ ಸಂಪೂರ್ಣ ಕೈಬಿಟ್ಟಿದೆ. ಜಾತ್ಯತೀತತೆಯ ಪ್ರವರ್ತಕ ಎಂಬ ಸೋಗಿನಲ್ಲಿ ಕೇಂದ್ರ ಸರ್ಕಾರ ಇಡೀ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಅಂಕಿಅಂಶಗಳೇ ದುರ್ಲಭವಾಗುವಂತೆ ಮಾಡಿದೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಅಂಕಿಅಂಶಗಳೂ ಕೂಡ ದೊರಕುತ್ತಿಲ್ಲದ ಸನ್ನಿವೇಶದಲ್ಲಿ ಹಾವನೂರರ ಆಯೋಗ ಸಾಮಾಜಿಕ- ಆರ್ಥಿಕ ಸಮೀಕ್ಷೆ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ಮೇಲಾದರೂ ರಾಜ್ಯ ಸರ್ಕಾರವೇ ಪ್ರತಿ ಜಾತಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸಂಗ್ರಹಿಸಲು ಪ್ರಯತ್ನಿಸಬೇಕೆಂದೂ ಆಯೋಗ ಶಿಫಾರಸ್ಸು ಮಾಡಿದೆ. ಜನಗಣತಿಯನ್ನು ರಾಜ್ಯ ಪಟ್ಟಿ (State list)ಗೆ ಸೇರಿಸಲು ಹೋರಾಟ ಆಗಬೇಕಾಗಿದೆ.

4. ಸಮಾನತೆಗಾಗಿ ಹೋರಾಡುವವರು ಮೇಲಿನ ಅಂಶಗಳನ್ನು ಗಮನದದಲ್ಲಿಟ್ಟುಕೊಂಡು ತಮ್ಮ ಹೋರಾಟವನ್ನು ರೂಪಿಸಿಕೊಳ್ಳಬೇಕು. ಸಾಮರ್ಥ್ಯದ ಹೆಸರಿನಲ್ಲಿ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಅಸಮರ್ಥ ಪುರೋಹಿತ ವರ್ಗ ಈ ದೇಶವನ್ನು ಅಧೋಗತಿಗೆ ಇಳಿಸಿರುವ ಸಂದರ್ಭದಲ್ಲಿ ಸಮಾನ ವಿತರಣೆಗೆ ಬೇಕಾದ ಅಂಕಿ-ಅಂಶಗಳನ್ನೇ ಬಚ್ಚಿಟ್ಟಿರುವಾಗ, ಹಾಗೂ ರಾಜ್ಯ-ಸರಾಸರಿ ಎಂಬ ಶೋಚನೀಯ ಸೂತ್ರವನ್ನು ಜಾರಿಗೆ ತಂದಿರುವಾಗ ಹಿಂದುಳಿದವರ ಹೋರಾಟದ ಸ್ವರೂಪ ಬದಲಾಗಬೇಕು.

5. ಆದ್ದರಿಂದ, ಹಿಂದುಳಿದವರು ಈಗ ಸಿಕ್ಕುವ ಅಂಕಿಅಂಶಗಳ ಆಧಾರದ ಮೇಲೆಯೇ ಹೋರಾಟ ರೂಪಿಸಲು ಪ್ರಯತ್ನಿಸಬೇಕು. ಇದು ಸಾಧ್ಯ. ಕೆಳಕಂಡ ಎರಡು ದಾರಿಗಳಲ್ಲಿ ಯಾವುದಾದರೂ ಒಂದು ದಾರಿಯನ್ನು ಹೋರಾಟ ಆರಿಸಿಕೊಳ್ಳಬಹುದು.

ಅ) ಹಾವನೂರರೇ ಹೇಳುವಂತೆ `ಜಾತಿ-ಜಾತಿಯ ನಡುವಿನ ಫಲಿತಾಂಶವೇ ಸಮಾನತಾ ಸಾಧನೆಯ ಯಶಸ್ಸು’ (ವರದಿ ಪುಟ6) ಎನ್ನುವ ಸೂತ್ರದ ಆಧಾರದ ಮೇಲೆ ಫಲಿತಾಂಶ ಪ್ರತಿ ಜಾತಿಯಲ್ಲಿ ಎಷ್ಟಿರಬೇಕು ಎನ್ನುವುದನ್ನು ಮೊದಲು ಗುಣಿಸಬೇಕು. ಪೂರ್ಣ ಸಾಕ್ಷರತೆ ಮತ್ತು ಪೂರ್ಣ ಉದ್ಯೋಗ ಪಡೆದಿರುವ ಬ್ರಾಹ್ಮಣ ಜಾತಿಯನ್ನು ನಾವು ಫಲಿತಾಂಶದ ಸೂಚಿಯಾಗಿ ತೆಗೆದುಕೊಳ್ಳಬೇಕು. (ಇಲ್ಲಿರುವ ಅಂಕಿ-ಅಂಶ ಕೇವಲ ಸರ್ಕಾರದ ಸೇವೆಯಲ್ಲಿರುವ ಬ್ರಾಹ್ಮಣರದ್ದು. ಖಾಸಗಿ ಕ್ಷೇತ್ರವೂ ಪೂರ್ಣ ಅವರಿಗೇ ಮೀಸಲಾಗಿದ್ದರೂ ಕೂಡ ಇರುವ ಅಂಕಿ ಅಂಶದ ಆಧಾರದ ಮೇಲೆ ಹೋರಾಟ ಪ್ರಾರಂಭವಾಗಬಹುದು.) ವಸ್ತುಸ್ಥಿತಿ ಹೀಗಿದೆ :

ಮುಖ್ಯಜಾತಿಗಳು ಜನಸಂಖ್ಯೆ ಮೆಟ್ರಿಕ್ ತೇರ್ಗಡೆ ಆದವರು 1972 (4ನೇ ವರ್ಗ ಬಿಟ್ಟು) ಸರ್ಕಾರಿ ನೌಕರಿಗಳಲ್ಲಿರುವವರು.
ಬ್ರಾಹ್ಮಣರು  4.23  13,113   36,235
ಲಿಂಗಾಯಿತರು(ಮುಂದುವರಿದ) 22.00  10,224   39,408
ಒಕ್ಕಲಿಗರು 11.82 3,764  19,189
ಕುರುಬರು 6.77  927   5,185
ನಿಮ್ನ ವರ್ಗಗಳು  13.63  2,203 16,461
ಮುಸ್ಲಿಮರು 10.63  3,517  20,727
ಕ್ರೈಸ್ತರು 2.09  2,928  8,009
ಇತರ ಹಿಂದುಳಿದ  ವರ್ಗಗಳು  29.32  14,383  60,810
ರಾಜ್ಯದ  ಒಟ್ಟು  100.00  50,759  1,98,015

ಸಮಾನ ಫಲಿತಾಂಶವನ್ನು ಬ್ರಾಹ್ಮಣ ಜಾತಿಯನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದರೆ ಎಷ್ಟರಮಟ್ಟಿಗೆ ಎಲ್ಲ ಜಾತಿಗಳೂ ಹಿಂದುಳಿದಿವೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಜಾತಿಗಳಿಗೆ ನ್ಯಾಯವಾಗಿ ದೊರೆಯಬೇಕಾದ ಅವಕಾಶಗಳನ್ನು ಯಾರು ಅಪಹರಿಸುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ಎಲ್ಲ ಜಾತಿಗಳಿಗೂ ದೊರೆಯಬೇಕಾದ ಅವಕಾಶಗಳು ಮುಂದಿನ ಪುಟದ ಮೇಲ್ಗಡೆ ಇವೆ.

ಈ ಅಂಕಿಅಂಶಗಳನ್ನು ನೋಡಿದರೆ ಸಮಾನ  ಫಲಿತಾಂಶ ಸಾಧನೆಗೆ ಈಗಿರುವ ರಾಜ್ಯ ವ್ಯವಸ್ಥೆಯಲ್ಲಿರುವ ಶಿಕ್ಷಣ ಸೌಲಭ್ಯವನ್ನು ಸುಮಾರು 600% ಮತ್ತು ಉದ್ಯೋಗ ಸೌಲಭ್ಯವನ್ನು ಸುಮಾರು 500% ಹೆಚ್ಚಿಸಬೇಕಾಗುತ್ತದೆ. ವರ್ಷಕ್ಕೆ 1% ಆರ್ಥಿಕ ಪ್ರಗತಿಯ ಈಗಿನ ಯೋಜನಾಕ್ರಮದಿಂದ ಈ ಕೆಲಸ ಮಾಡಲು ಸುಮಾರು 250 ವರ್ಷವಾದರೂ ಬೇಕು. ಆದ್ದರಿಂದ ಸಮಾನ ಫಲಿತಾಂಶವನ್ನು ತಕ್ಷಣದಲ್ಲಿ ಸಾಧಿಸಬೇಕಾದರೆ ಈಗಿರುವ ಸೌಲಭ್ಯಗಳನ್ನೇ  ಜನಸಂಖ್ಯೆಯ ಆಧಾರದ ಮೇಲೆ ವಿತರಣೆ ಮಾಡಬೇಕು.

ಪ್ರಮುಖ ಜಾತಿಗಳು  ಮೆಟ್ರಿಕ್  ಶಿಕ್ಷಿತರು  ಇರಬೇಕಾದ  ಸಂಖ್ಯೆ  ಸರ್ಕಾರಿ ನೌಕರಿಯಲ್ಲಿ ಇರಬೇಕಾದ  ಸಂಖ್ಯೆ
(ಬ್ರಾಹ್ಮಣರು) (13,113) (36,235)
ಲಿಂಗಾಯಿತರು  68,187  1,88,422
ಒಕ್ಕಲಿಗರು 26,585  1,01,095
ಕುರುಬರು  19,669  54,352
ನಿಮ್ನ ವರ್ಗಗಳು  39,339  1,81,175
ಮುಸ್ಲಿಮರು  32,782 9 ,587
ಕೈಸ್ತರು 6,425 17,755
ಇತರ ಹಿಂದುಳಿದ  ವರ್ಗಗಳು  90,479  2,50,021
ರಾಜ್ಯದ  ಒಟ್ಟು 2,96,579 9,19,642

ಹಿಂದುಳಿದ ವರ್ಗಗಳ ಅವಕಾಶಗಳನ್ನು ಯಾವ ಯಾವ ವರ್ಗದವರು ಅಪಹರಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯುವುದು, ಹಾಗೂ ಯಾವ ಯಾವ ವರ್ಗದವರಿಗೆ ಎಷ್ಟು ಪ್ರಮಾಣದಲ್ಲಿ ವಂಚನೆ ನಡೆಯುತ್ತಿದೆ ಎನ್ನುವುದು ಕೂಡ ಸ್ಪಷ್ಟವಾಗುತ್ತದೆ.

ಜನಸಂಖ್ಯೆಯ ಆಧಾರದ ಮೇಲೆ ಉದ್ಯೋಗ ಸೌಲಭ್ಯಗಳ ವಿತರಣೆಯ ವಿವರಗಳಿಗೆ ಈ ಪಟ್ಟಿ ನೋಡಿ:-

ಪ್ರಮುಖ ಜಾತಿಗಳು ಶೇಕಡಾ ಜನಸಂಖ್ಯೆ ನೌಕರಿ ಹೊಂದಿರುವುದು ನೌಕರಿ ನ್ಯಾಯವಾಗಿ ಸಿಕ್ಕಬೇಕಾದ್ದು
ಬ್ರಾಹ್ಮಣರು 4.23 36,235 8,373
ಲಿಂಗಾಯಿತರು 22.00 39,408  42,560
ಒಕ್ಕಲಿಗರು  11.82 19,189 23,403
 ಕುರುಬರು  6.77  5,185  13,404
 ನಿಮ್ನ ವರ್ಗಗಳು  13.14 16,461 26,017
 ಮುಸ್ಲಿಮರು 10.63 20,727  21,047
 ಕೈಸ್ತರು 2.09 8,009 4,138
 ಇತರ ಹಿಂದುಳಿದ ವರ್ಗಗಳು  29.32 60,810  58,053

ರಾಜ್ಯದ ಒಟ್ಟು 1,98,015 ಉದ್ಯೋಗಗಳಲ್ಲಿ (4ನೇ ವರ್ಗ ಬಿಟ್ಟು) ಈ ಅಂಕಿ ಅಂಶಗಳು  ನಮ್ಮ ಸಮಾಜದ ಹಲವಾರು ವೈಚಿತ್ರ್ಯಗಳನ್ನು ಹೊರಗೆಡಹುತ್ತವೆ. ಅದರಲ್ಲಿ ಮುಖ್ಯವಾಗಿ ಬಹುಸಂಖ್ಯಾತ ಜಾತಿಗಳಿಗಾಗಿರುವ ಮೋಸ ಬ್ರಾಹ್ಮಣ ಜಾತಿ ಪಡೆದುಕೊಂಡಿರುವ ಲಾಭ ಎನ್ನುವುದು ಸ್ಪಷ್ಟವಾಗುತ್ತದೆ. ಅದು ಸುಮಾರು 450% ರಷ್ಟು ಹೆಚ್ಚಿನ ಲಾಭ ಪಡೆಯುತ್ತಿದೆ.

6. ಹೀಗಾಗಿರುವುದಕ್ಕೆ ಮುಖ್ಯ ಕಾರಣ ಸಾಮರ್ಥ್ಯ ((Merit)ವನ್ನು ಅಳತೆಮಾಡಲು ನಾವು ಇಟ್ಟುಕೊಂಡಿರುವ ಸೂತ್ರ. ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಒದರುವುದು ಸಾಮರ್ಥ್ಯ ಎನ್ನಿಸಿಕೊಂಡಿದೆ. ವೇದಗಳನ್ನು ಬಾಯಿಪಾಠ ಮಾಡಿ ಮರುಪಠನ ಮಾಡುವುದು ಸಾಮರ್ಥ್ಯ ಎನ್ನಿಸಿಕೊಂಡಿದೆ. ಬ್ರಾಹ್ಮಣರು ಸಮರ್ಥರು ಎನ್ನುವ ನಂಬಿಕೆ ಹಿಂದಿನಿಂದ ಬಂದಿವೆ. ಆದರೆ, ಅವರ ಸಾಮರ್ಥ್ಯ ಸೀಮಿತ. ಮಿಕ್ಕೆಲ್ಲ ಕ್ಷೇತ್ರದಲ್ಲಿ ಅವರು ಅಸಮರ್ಥರಾದ್ದರಿಂದಲೇ ಅಂತಹವರು ದೇಶದ ಎಲ್ಲ ಕ್ಷೇತ್ರಗಳನ್ನೂ ತಮ್ಮದಾಗಿಸಿಕೊಂಡಿರುವುದರಿಂದಲೇ ಭಾರತ ಮೂರನೇ ದರ್ಜೆ ದೇಶವಾಗಿರುವುದು. ಔದ್ಯೋಗಿಕ ಸಾಮರ್ಥ್ಯವೇ ಬೇರೆ. ಇದು ದೇಶದ ದಿನನಿತ್ಯ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಔದ್ಯೋಗಿಕ ಜಾತಿಗಳ ಜನರಲ್ಲಿ ಮಾತ್ರ ಕಾಣಲು ಸಾಧ್ಯ.

ಇದಲ್ಲದೆ, ಸೀಮಿತ ಉದ್ಯೋಗಾವಕಾಶದ ಭಾರತದ ವಿಕೃತ ಆರ್ಥಿಕ ವ್ಯವಸ್ಥೆಯಲ್ಲಿ ನಿರುದ್ಯೋಗಿಗಳಾಗಿರುವ ಆದರೆ ಸಮರ್ಥರಾದ ಅಭ್ಯರ್ಥಿ ಅಭ್ಯರ್ಥಿಗಳ ಹೆಚ್ಚಳ ಎಲ್ಲಾ ಜಾತಿಗಳಲ್ಲೂ ಇರುವುದು ಸರ್ವವಿದಿತ. ಹೀಗಿರುವಾಗ ಪರೀಕ್ಷೆಯ ಅಂಕಗಳ ಮೇಲೆ ತೀರ್ಮಾನಿಸುವ ಶೇಕಡಾ 50 ಭಾಗ  ಸಾಮರ್ಥ್ಯ ಕ್ಷೇತ್ರ (Merit Pool) ರದ್ದಾಗಬೇಕು. ಸಮಾನ ಫಲಿತಾಂಶ ಹಾಗೂ ದಕ್ಷತೆಗಳನ್ನು ಸಾಧಿಸಲು ಇರುವ ಮಾರ್ಗ ಇದೊಂದೇ. ಅದೇನೆಂದರೆ, ಜನಸಂಖ್ಯೆಯ ಆಧಾರದ ಮೇಲೆ ಅವಕಾಶಗಳನ್ನು ಆಯಾ ಜಾತಿಯ ಪ್ರಮಾಣಕ್ಕನುಗುಣವಾಗಿ (Reservation According to Proportion of Population) ಮೀಸಲಿಡಬೇಕು ಹಾಗೂ ಆಯಾ ಜಾತಿಗಳೊಳಗೇ  ಸಾಮರ್ಥ್ಯ ಕ್ಷೇತ್ರ ( Merit Pool in each Caste) ರಚಿಸಿ, ಸಮರ್ಥರಿಗೆ 50 ಭಾಗ ಆದ್ಯತೆ ಕೊಟ್ಟು ಉಳಿದ 50 ಭಾಗವನ್ನು ಇತರ ಸೂತ್ರಗಳ ಆಧಾರದ ಮೇಲೆ ಹಂಚಬೇಕು.

7. ಇಂತಹ ಸೂತ್ರದಿಂದ ಜಾತೀಯತೆ ಮುಂದುವರಿಯುತ್ತದೆಂದು ಢೋಂಗಿ ಸಮದರ್ಶಿಗಳು ಗುಲ್ಲೆಬ್ಬಿಸುತ್ತಾರೆ. ಆದರೆ, ಒಂದು ಜಾತಿ ತನ್ನ ಜಾತಿ ಲಕ್ಷಣಗಳನ್ನು ಕಳೆದುಕೊಳ್ಳಬೇಕಾದರೆ ಅದು ಕೆಲವು ಕನಿಷ್ಟ ಸಾಧನೆಗಳನ್ನು ಮಾಡಬೇಕಾಗುತ್ತದೆ. ಜಾತಿಯ ಔದ್ಯೋಗಿಕ ಸಾಮರ್ಥ್ಯ್ ದಿಂದ ಭಿನ್ನವಾದ ಸಾಮರ್ಥ್ಯವನ್ನು ಅದು ಬೇರೆಲ್ಲ  ಕ್ಷೇತ್ರದಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದು ಸಮಂಜಸ ಪ್ರಮಾಣವನ್ನು ನಾವು ನಿಗದಿ ಮಾಡಬಹುದು.

ಯಾವುದೇ ಜಾತಿಯ 50 ಭಾಗ ಶಾಲಾ ವಯಸ್ಕ ಜನಸಂಖ್ಯೆ ಮೆಟ್ರಿಕ್ ಪಾಸಾಗುವ ಹಂತ ಮುಟ್ಟಿದಾಗ, ಮತ್ತು 50 ಭಾಗ ಉದ್ಯೋಗ ವಯಸ್ಕ-ಜನಸಂಖ್ಯೆ ಜಾತಿ-ಉದ್ಯೋಗದಿಂದ ಭಿನ್ನವಾದ ಕ್ಷೇತ್ರಗಳಲ್ಲಿ ಉದ್ಯೋಗಸ್ಥರಾದಾಗ ಆ ಜಾತಿಯನ್ನು ಮುಂದುವರಿದ ಜಾತಿ ಎಂದು ಘೋಷಿಸುವುದು. ದೇಶದ ದಕ್ಷತೆಗೆ 50% ಭಾಗ ಮೀಸಲಿಡಬೇಕು ಎನ್ನುವ ವಾದವನ್ನು ಒಪ್ಪುವವರೂ ಒಂದು ಜಾತಿಯ ಮುಂದುವರಿಕೆಗೂ ಇದೇ ಸೂತ್ರವನ್ನು ಒಪ್ಪಬೇಕಾಗುತ್ತದೆ.

8. ಮೇಲಿನ ಸೂತ್ರಗಳನ್ನು ರಾಷ್ಟ್ರದ ಬಹುಮುಖ  ಸಾಮರ್ಥ್ಯದ ಬಗ್ಗೆ ಕಳಕಳಿ ಇರುವ ಯಾವುದೇ ಉತ್ತಮ ಜಾತಿಯೂ ಒಪ್ಪಲೇಬೇಕು. ಆದರೆ ಅವು ಒಪ್ಪುತ್ತಿಲ್ಲ. ಏಕೆಂದರೆ, ಉತ್ತಮ ಜಾತಿಗಳು ಇದರಿಂದ ಅಲ್ಪಕಾಲಿಕ ಅನ್ಯಾಯವನ್ನು ಅನುಭವಿಸಬೇಕಾಗುತ್ತದೆ. ಶತಮಾನಗಳಿಂದ ಇತರ ಜಾತಿಗಳಿಗೆ ಅವು ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಅವಕ್ಕೆ ಇಚ್ಛೆಯಿಲ್ಲ.

ಆದ್ದರಿಂದಲೇ, ಅವು ಹಿಂದುಳಿದಿರುವಿಕೆಯನ್ನು ಆರ್ಥಿಕ ಆಧಾರದ (Economic Backwardness) ಮೇಲೆ ನಿರ್ಣಯಿಸಬೇಕು ಎನ್ನುವ ಕೂಗನ್ನು ಎಬ್ಬಿಸುತ್ತಿರುವುದು. ವಿಶೇಷಾವಕಾಶದ ಸೂತ್ರಗಳನ್ನೇ ವಿರೋಧಿಸುವ ಈ ಶಕ್ತಿಗಳು ಜಾತ್ಯತೀತ ಮುಖವಾಡವನ್ನು ಹಾಕಿಕೊಂಡು ಅಲ್ಪಸ್ವಲ್ಪ ಸೌಲಭ್ಯಗಳನ್ನು ಪಡೆಯುತ್ತಿರುವ ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಮೋಸ ಮಾಡಲು ಹಂಚಿಕೆ ನಡೆಸಿದ್ದಾರೆ. ವೀರಶೈವರೂ ಕೂಡ, ತಾವೂ ಮುಂದುವರಿದವರಿರಬಹುದೆಂಬ ಅನುಮಾನದಲ್ಲಿಯೋ, ಅಥವಾ ತಮಗೆ ಸಿಕ್ಕಿರುವ ಪ್ರಾತಿನಿಧ್ಯ ಹೆಚ್ಚೇನೋ ಎನ್ನುವ ಅನುಮಾನದಿಂದಲೋ, ಅಥವಾ ಉತ್ತಮ ಜಾತಿಯವರ ಸನಾತನವಾದಿ ಕುತಂತ್ರವನ್ನೇ ಉಪಯೋಗಿಸುವ ಸಲುವಾಗಿಯೋ ಇದೇ ಕೂಗನ್ನು ಹಾಕುವುದಕ್ಕೆ ಪ್ರಾರಂಭಿಸಿರಬಹುದು. ಅವರ ಹೋರಾಟದ ಅಸ್ಪಷ್ಟತೆಯಿಂದಾಗಿ ಅವರ ನಿಜವಾದ ಮರ್ಮ ಗೊತ್ತಾಗುತ್ತಿಲ್ಲ.

ಆರ್ಥಿಕ ಹಿಂದುಳಿದಿರುವಿಕೆಯನ್ನು ಸೂತ್ರವನ್ನಾಗಿ ಒಪ್ಪಿದರೆ ಜಾತಿ ಪದ್ಧತಿ ಹಾಗೂ ಅಸಮಾನತೆಗಳು ಮುಂದುವರಿಯುತ್ತವೆ. ಹತ್ತು ಸಾವಿರ ಕುರಿಗಳಿರುವ ಒಬ್ಬ ಕುರುಬನ ಮಗನಿಗೂ ಯಾವ ಆಸ್ತಿಯೂ ಇಲ್ಲದ ಶ್ಯಾನುಭೋಗನ ಮಗನಿಗೂ ಸಮಾನವಕಾಶ ಕೊಟ್ಟರೆ ಅಸಮಾನತೆ ಮುಂದುವರಿಯುತ್ತದೆ. (1977 – 78ರ ಸಾಲಿನಲ್ಲಿ ಹಾವನೂರರು ವಿಶೇಷ ವರ್ಗ (Special Category)ಕ್ಕೆ ಕೊಟ್ಟಿರುವ ಸೌಲಭ್ಯಗಳು ಮೆಡಿಕಲ್ ಸೀಟು ಹಂಚಿಕೆಯಲ್ಲಿ ಎಲ್ಲವೂ ಬ್ರಾಹ್ಮಣ ವಿದ್ಯಾರ್ಥಿಗಳಿಗೇ ಸಿಕ್ಕಿವೆ.)

ಈ ಸೂತ್ರವನ್ನು ಒಪ್ಪಿದರೆ ಢೋಂಗಿ ಸಾಮಥ್ರ್ಯ ಕ್ಷೇತ್ರ ರಚಿಸಿಕೊಂಡು 50% ಭಾಗ ಅವಕಾಶಗಳನ್ನು ಅಪಹರಿಸುತ್ತಿರುವ ಉತ್ತಮ ಜಾತಿಗಳು ಬಡತನದ ಸರ್ಟಿಫಿಕೇಟುಗಳ ಮೂಲಕ ಇನ್ನೂ ಶೇಕಡಾ 20-30 ಭಾಗ ಜಾಗಗಳನ್ನು ಅಪಹರಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಹರಿಜನರಿಗೆ ಸರ್ಟಿಫಿಕೇಟುಗಳು ಸಿಕ್ಕುವುದೂ ಕಷ್ಟವಾಗುತ್ತದೆ. ಇತ್ತೀಚೆಗೆ ಶ್ರೀ ಜಗಜೀವನರಾಮ್ರವರು ಇದನ್ನೇ ಹೇಳಿದ್ದು ಸತ್ಯವಾದ ವಿಷಯ. ಅವರು ಹರಿಜನರಾದದ್ದರಿಂದ ಅವರಿಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಿಂದುಳಿದ ವರ್ಗಗಳು ಈ ಆರ್ಥಿಕ ಹಿಂದುಳಿದಿರುವಿಕೆಯ ಸೂತ್ರವನ್ನು ಬಲವಾಗಿ ವಿರೋಧಿಸಬೇಕು.

9. ಇದಕ್ಕಿಂತ ಮುಖ್ಯವಾಗಿ ಉತ್ತಮ ಜಾತಿಯವರು ಮಾಡಿರುವ ಕುತಂತ್ರ ಮತ್ತೊಂದಿದೆ. ರಾಜ್ಯ ಮಟ್ಟದಲ್ಲಿ ಹಿಂದುಳಿದ ವರ್ಗಗಳು ಕಡಿದಾಡಿಕೊಳ್ಳುವಂತೆ ಮಾಡಿ, ಕೇಂದ್ರ ಸೇವಾ ಕ್ಷೇತ್ರ (Central Services)ಗಳಲ್ಲಿ ಅವರಿಗೆ ಯಾವ ಮೀಸಲು ಸ್ಥಾನವನ್ನೂ ಕೊಡದೇ 27 ವರ್ಷಗಳು ಕಾಲಹರಣ ಮಾಡಿ ಅಲ್ಲಿನ ಎಲ್ಲ ಅವಕಾಶಗಳನ್ನೂ ತಾನೇ ತೆಗೆದುಕೊಂಡಿವೆ. ಕಾಲೇಲ್ಕರ್ ಆಯೋಗದ ವರದಿಯನ್ನು ಮೂಲೆಗೆಸೆದಿವೆ. ಈ ಬಗ್ಗೆ ವೀರಶೈವರಾಗಲೀ, ಯಾವುದೇ ಹಿಂದುಳಿದ ವರ್ಗವಾಗಲೀ ಪ್ರತಿಭಟನೆ ಮಾಡಿಲ್ಲ. ದೇಶದ ಎಲ್ಲ ರಾಜ್ಯಗಳ ಹಿಂದುಳಿದ ವರ್ಗಗಳ ಯುವಜನರು ನಿರುದ್ಯೋಗಿಗಳಾಗಿರುವುದಕ್ಕೆ ಇದೊಂದು ಬಹು ದೊಡ್ಡ ಕಾರಣ.

ಇದರ  ಜೊತೆಗೇ, ಖಾಸಗಿ ಉದ್ಯಮ (Private Sector)ಗಳೂ ಉತ್ತಮ ಜಾತಿಯವರ ಪೂರ್ಣ ಸ್ವಾಮ್ಯವಾಗಿರುವುದರ ಬಗ್ಗೆ ಕೂಡ ಹಿಂದುಳಿದ ವರ್ಗಗಳು ಎಚ್ಚರಗೊಳ್ಳಬೇಕು. ಕೇಂದ್ರ ಸೇವಾಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಜನಸಂಖ್ಯಾ ಪ್ರಮಾಣದ ಮೀಸಲು ಸ್ಥಾನಕ್ಕೆ ಹೋರಾಡಬೇಕು.

10. ಮೇಲೆ ಹೇಳಿದ ವಿಷಯಗಳೆಲ್ಲ ಮೇಲ್ಮೈಯಲ್ಲಿ ಕಾಣುವ ಸತ್ಯಗಳು, ಇವುಗಳಿಗೆಲ್ಲ ಮೂಲಕಾರಣಗಳಾದ ಆರ್ಥಿಕ ರಾಜಕೀಯ ವ್ಯವಸ್ಥೆ ಜಾತಿ ಪದ್ಧತಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಅವಕಾಶಗಳನ್ನು ಸೀಮಿತಗೊಳಿಸುವ ಶಕ್ತಿಯಾಗಿದೆ. ವಿವರಿಸಿದಲ್ಲಿ ಇವು, ಬಂಡವಾಳಶಾಹಿ ಆಸ್ತಿ ಸಂಬಂಧಗಳು, ಜನರಿಗೆ ತಿಳಿಯದ ಭಾಷೆಯಲ್ಲಿ ರಾಜ್ಯ ವ್ಯವಹಾರ, ನಿರುದ್ಯೋಗ ಸೃಷ್ಟಿಸುವ ಬೃಹತ್ ಕೈಗಾರಿಕಾ ಯಂತ್ರಗಳು, ಬಹುಸಂಖ್ಯಾತರು ಮೇಲೇಳದಂತೆ ಮಾಡುವ ಕೃಷಿಕ್ಷೇತ್ರದ ನಿರ್ಲಕ್ಷ್ಯ, ಬಹುಸಂಖ್ಯಾತ ಕೃಷಿಕರು ಯಥಾಸ್ಥಿತಿಯಲ್ಲಿರುವಂತೆ ಮಾಡುವ ಬೆಲೆ ನೀತಿ, ಬಹುಸಂಖ್ಯಾತರನ್ನು ಕೇವಲ ಪ್ರೇಕ್ಷಕರನ್ನಾಗಿಸುವ ರಾಜಕೀಯ ಕೇಂದ್ರೀಕರಣ, ದೈಹಿಕ ಶ್ರಮ ಹಾಗೂ ಮಾನಸಿಕ ಶ್ರಮಕ್ಕಿರುವ ಮೌಲ್ಯದ ವ್ಯತ್ಯಾಸ ಇತ್ಯಾದಿ ಕಾರಣಗಳು ಜಾತಿಗಳು ಜಡವಾಗಿಯೇ ಇರುವಂತೆ ಹಾಗೂ ದೇಶ ಮುಂದೆ ಹೋಗದಂತೆ ಹಿಡಿದಿಟ್ಟಿವೆ. ಸಾಮಾಜಿಕ ಕ್ರಾಂತಿಗಾಗಿ ಹೋರಾಡುವವರು ಅದಕ್ಕೆ ಪೂರಕವಾದ ಆರ್ಥಿಕ -ರಾಜಕೀಯ ಕ್ರಾಂತಿಗೂ ಶ್ರಮಿಸದಿದ್ದಲ್ಲಿ ಜಾತಿವಿನಾಶ ಸಾಧ್ಯವಿಲ್ಲ. ಬುದ್ಧ-ಬಸವರು ಸೋಲಲು ಮೂಲ ಕಾರಣ ಇದೇ ಆಗಿದೆ.

11. ಸಮಾನತೆಗಾಗಿ ಹೋರಾಡುವ ಯಾರೇ ಆಗಲಿ, ವಿಶೇಷವಾಗಿ ಕಲ್ಯಾಣದ ಬಸವಣ್ಣನ ಶಿಷ್ಯರಾದ ವೀರಶೈವರು ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟು ಕೆಳಗಿನ ಕನಿಷ್ಠ ಕಾರ್ಯಕ್ರಮದೊಂದಿಗೆ ತಮ್ಮ ಹೋರಾಟವನ್ನು ಪ್ರಾರಂಭಿಸಬೇಕು. ಶೀಘ್ರ ಕಾರ್ಯಕ್ರಮವಾಗಿ:

  • ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾತಿ ಅಂಕಿ ಅಂಶಗಳನ್ನು, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಂಕಿ ಅಂಶಗಳನ್ನು, ಶಾಲಾ ವಯಸ್ಕ ಹಾಗೂ ಉದ್ಯೋಗ ವಯಸ್ಕರ ಅಂಕಿ ಅಂಶಗಳನ್ನು ಶೇಖರಿಸಲು;
  • ಈಗಿರುವ ಢೋಂಗಿ ಸಾಮರ್ಥ್ಯ್ ಕ್ಷೇತ್ರ (Merit Pool)ದ ರದ್ದಿಗಾಗಿ;
  • ಜಾತಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳ  ಮೀಸಲು ಹಾಗೂ ಆಯಾ ಜಾತಿಗಳಲ್ಲೇ ಸಾಮಥ್ರ್ಯ ಕ್ಷೇತ್ರದ ರಚನೆಗಾಗಿ;
  • ಯಾವುದೇ ಜಾತಿಯ ಶಾಲಾವಯಸ್ಕರಲ್ಲಿ  ಶೇಕಡಾ 50ಭಾಗ ಮೆಟ್ರಿಕ್ ಪಾಸಾದವರು ಹಾಗೂ ಉದ್ಯೋಗ ವಯಸ್ಕರಲ್ಲಿ 50 ಭಾಗ ಜನರು ಜಾತಿ – ಕಸುಬನ್ನು ಬಿಟ್ಟು ಬೇರೆ ವೃತ್ತಿ ಮಾಡುತ್ತಿರುವವರು ಇದ್ದಲ್ಲಿ ಅಂತಹ ಜಾತಿಯನ್ನು ಮುಂದುವರೆದದ್ದೆಂದು ಘೋಷಿಸುವ ಸೂತ್ರಕ್ಕಾಗಿ;
  • ಅಖಿಲ ಭಾರತ ಹಿಂದುಳಿದ ವರ್ಗಗಳ ಆಯೋಗ ರಚನೆಗಾಗಿ ಹಾಗೂ ಖಾಸಗಿ ಕ್ಷೇತ್ರಗಳಲ್ಲೂ ಕೇಂದ್ರ ಸೇವಾ ಕ್ಷೇತ್ರಗಳಲ್ಲೂ ಮೀಸಲು ಸ್ಥಾನಕ್ಕಾಗಿ;
  • ಇದಲ್ಲದೆ  ಜಾತಿ ವಿನಾಶದ ದೂರಕಾಲಿಕ ಕಾರ್ಯಕ್ರಮವಾಗಿ
  • ಹಿಂದಿ ಅಥವಾ ಇಂಗ್ಲಿಷಿಗೆ ಬದಲು ಎಲ್ಲ ಹಂತ ಎಲ್ಲ ಕ್ಷೇತ್ರಗಳಲ್ಲಿ ಜನ ಭಾಷೆ (ಮಾತೃಭಾಷೆ)ಯ ಬಳಕೆಗಾಗಿ;
  • ಎಲ್ಲ ಕ್ಷೇತ್ರಗಳಲ್ಲಿ ಮಾನವ ಶ್ರಮದ  ಸಮಾನ ಮೌಲ್ಯೀಕರಣಕ್ಕಾಗಿ;
  • ಮಾನವ ಶಕ್ತಿಯನ್ನು ತಿರಸ್ಕರಿಸುವ ಬೃಹತ್ ಯಂತ್ರಗಳ ಬದಲು ಮಾನವ ಶಕ್ತಿಯನ್ನು ಬಳಸಿಕೊಳ್ಳುವ ಸಣ್ಣ  ಯಂತ್ರಗಳಿಗಾಗಿ;
  • ಜಾತಿ ಸೃಷ್ಟಿಸುವ ಬಂಡವಾಳಶಾಹಿ ಆಸ್ತಿ ವ್ಯವಸ್ಥೆಯ ಬದಲು ಜಾತಿ ವಿನಾಶಕ್ಕೆ  ಪೂರಕವಾಗುವ, ಉತ್ಪಾದನೆ ಸಾಮಾಜೀಕರಣವಾಗಿರುವ ಉತ್ಪಾದನಾ ಆಸ್ತಿಯ ಸಾಮಾಜೀಕರಣಕ್ಕಾಗಿ;
  • ಯೋಜನಾ ವೆಚ್ಚದ ಶೇ.80 ಭಾಗವನ್ನು ಶೇ.80 ಭಾಗ ಜನರು ಅವಲಂಬಿಸಿರುವ ಕೃಷಿ ಕ್ಷೇತ್ರಕ್ಕೆ ಮೀಸಲಿಡಲು.
  • ಕೈಗಾರಿಕಾ ವಸ್ತುಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿಮಾಡುವಂತೆಯೇ ಕೃಷಿ ಉತ್ಪಾದನೆಗೂ ಬೆಲೆ ನಿಗದಿ ಮಾಡಲು;
  • ಗ್ರಾಮಮಟ್ಟದ ಜನರೂ ಸಮಾನ ಪಾತ್ರ ವಹಿಸುವಂತೆ ಯೋಜನಾ ಹಾಗೂ ರಾಜಕೀಯ ವಿಕೇಂದ್ರೀಕರಣಕ್ಕಾಗಿ.

ಈ ಮೇಲ್ಕಂಡ ಕಾರ್ಯಕ್ರಮವನ್ನು ಹಾವನೂರರೂ  ಸಲಹೆ ಮಾಡಿದ್ದಾರೆ. ವೀರಶೈವ ಮುಖಂಡರಾಗಲೀ  ಬೇರೆ ಹಿಂದುಳಿದವರ ನಾಯಕರಾಗಲೀ ಇದನ್ನು ಗಮನಿಸಿಲ್ಲ. ಹಾಗೆಯೇ, ವೀರಶೈವರಲ್ಲಿ ಒಡಕನ್ನು ತರಲಿಕ್ಕೆ ಯಾವ ಆದಿ ಶಂಕರಾಚಾರ್ಯನೂ  ಎದ್ದು ಬಂದಂತೆ ಕಂಡುಬರುತ್ತಿಲ್ಲ. ವೀರಶೈವರ ಒಡಕಿಗೆ ಅವರೇ ಕಾರಣರು.  ಹಲವಾರು ಉಪಜಾತಿಗಳನ್ನು ಸೃಷ್ಟಿಸಿಕೊಂಡು ಪ್ರತಿಯೊಂದಕ್ಕೆ ಮಠ ಜಗದ್ಗುರುಗಳನ್ನು ಸೃಷ್ಟಿಸಿಕೊಂಡಿರುವುದಕ್ಕೆ ಯಾರು ಕಾರಣರು? ಉಪಜಾತಿಗಳ ನಡುವೆ ವಿವಾಹ ನಡೆಸಬೇಕೆಂದು ಕಳೆದ ವೀರಶೈವ ಮಹಾ ಸಮ್ಮೇಳನದಲ್ಲಿ ನಿರ್ಣಯ ಮಾಡಿದವರು ಯಾರು? ನಾವು ಅತಿ ವರ್ಣಾಶ್ರಮಿಗಳು, ನಮ್ಮ ಬಗ್ಗೆ ಅಲ್ಲಸಲ್ಲದ ಟೀಕೆಗಳನ್ನು ಮಾಡಿದ್ದಾರೆಂದು ಇತರರನ್ನು ದೂರುವ ಬದಲು ಜಾತಿ ಸಮಸ್ಯೆಯ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಬೇಕಾದದ್ದೂ ಆನಂತರ ಸರಿಯಾದ ದಿಕ್ಕಿನಲ್ಲಿ ಹೋರಾಟ ರೂಪಿಸಿಕೊಳ್ಳಬೇಕಾದದ್ದು ವೀರಶೈವರ ಜವಾಬ್ದಾರಿ. ಅವರ ಇತ್ತೀಚಿನ ನಿಲುವು ಕಲ್ಯಾಣದ ಬಸವಣ್ಣನಿಗೆ ಕಲ್ಯಾಣಕಾರಿಯಾಗಿಯೇನೂ ಇಲ್ಲ.

ಕಲ್ಯಾಣದ ಬಸವಣ್ಣನ ಸಮಾನತಾ ಆಂದೋಲನ ಪ್ರಾರಂಭಿಸಬೇಕೆಂಬ ನಿಜವಾದ ಇಚ್ಛೆ ವೀರಶೈವರಿಗಿದ್ದರೆ ಅವರಿಗಿರುವ ಮಾರ್ಗಗಳು ಎರಡು: ಉಪಜಾತಿಗಳ ಬೇರೆ ಬೇರೆ ಬಾವುಟ ಹಾರಿಸುತ್ತಿರುವ ಎಲ್ಲ ಮಠಾಧೀಶರೂ ಮಠಗಳೂ ವಿಲೀನಗೊಂಡು ಒಂದೇ ಬಾವುಟದಡಿಯಲ್ಲಿ ಸೇರಿ ತಮ್ಮ ನವಪುರೋಹಿತಶಾಹಿಗೆ ಚರಮಗೀತೆ ಹಾಡಬೇಕು. ದೇಹವೇ ದೇಗುಲ, ಕಾಯಕವೇ ಕೈಲಾಸ ಎನ್ನುವ ಪುರೋಹಿತಶಾಹಿ-ವಿರೋಧಿಗಳಿಗೆ ಇದು ಕಷ್ಟವಾಗಬಾರದು. ಇದಕ್ಕೆ ಮಠಾಧೀಶರುಗಳು ಒಪ್ಪದಿದ್ದಲ್ಲಿ, ಬಸವಣ್ಣನ ನಿಜವಾದ ಶಿಷ್ಯರುಗಳೆಲ್ಲ ಒಂದಾಗಿ ಈ ಮಠ ಮಾನ್ಯಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕು. ಇವೆರಡೂ ಶೀಘ್ರದಲ್ಲಿಯೇ ನಡೆಯದಿದ್ದಲ್ಲಿ ಕರ್ನಾಟಕದ ವೀರಶೈವರು ಕೇವಲ ಜಾತಿವಾದಿಗಳಾಗಿದ್ದಾರೆ; ಬಸವಣ್ಣನ ಜಾತಿ-ವಿನಾಶ ಆಂದೋಲನವನ್ನು ಮರೆತಿದ್ದಾರೆ ಎಂದು ಯಾರಾದರೂ ಹೇಳಲೇ ಬೇಕಾಗುತ್ತದೆ.

ಈ ಲೇಖನ ಎಲ್ಲ ಹಿಂದುಳಿದ ವರ್ಗಗಳನ್ನೂ ಉದ್ದೇಶಿಸಿ ಬರೆದದ್ದು. ವೀರಶೈವರ ಹಾಹಾಕಾರದ ಸನ್ನಿವೇಶದಲ್ಲಿ ಅವರಿಗೆ ಹೇಳಿರುವ ಕಿವಿಮಾತುಗಳನ್ನು ಎಲ್ಲ ಹಿಂದುಳಿದವರೂ ಗಮನಕ್ಕೆ ತೆಗೆದುಕೊಂಡು ಸ್ಪಷ್ಟ ಹೋರಾಟಕ್ಕೆ ಸಿದ್ಧವಾಗಬೇಕೆಂದು ವಿನಂತಿಸಿಕೊಳ್ಳುತ್ತೇನೆ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

3 thoughts on “ಜಾತಿವಿನಾಶ ಮತ್ತು ಹಾವನೂರ ವರದಿ

  1. g.mahanthesh.

    ಎಲ್​.ಜಿ.ಹಾವನೂರು ವರದಿ ಪರಿಣಾಮಕಾರಿಯಾಗಿ ಇವತ್ತಿಗೂ ಅನುಷ್ಠಾನವಾಗಿರುವ ಅನುಮಾನ ಇದೆ. ಹಾವನೂರು ಕುರಿತ ನೆನಪನ್ನ ಹಿಂದೊಮ್ಮೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವ್ರು ಟಿ.ವಿ.ಸಂದರ್ಶನದಲ್ಲಿ ಮೆಲುಕು ಹಾಕಿದ್ದರು.
    ಹಾವನೂರು ವರದಿ ದಕ್ಷಿಣಾ ಆಫ್ರಿಕಾದ ಸಂವಿಧಾನ ರಚನೆ ಮಾಡಲು ಪರಾಮರ್ಶನ ಗ್ರಂಥವಾಗಿ ಬಳಕೆ ಆಯಿತು. ಹಾವನೂರು ಅವರಲ್ಲಿದ್ದ ವಿದ್ವತ್ತನ್ನ ಗುರುತಿಸಿದ್ದು, ಬೆಳಕಿಗೆ ತಂದಿದ್ದು ದೇವರಾಜು ಅರಸು ಎಂಬುದು ಇಲ್ಲಿ ಮುಖ್ಯವಾಗಬೇಕು.
    – ಅರಸರ ವಿಚಾರ ಪ್ರಸ್ತಾಪವಾದಾಗಲೆಲ್ಲಾ ಹಾವನೂರು ಆಯೋಗವನ್ನ ಪ್ರಸ್ತಾಪಿಸಲೇಬೇಕು. ಹಾವನೂರು ಆಯೋಗದಲ್ಲಿ ಪ್ರಸ್ತಾಪವಾಗದೇ ಇರೋ ಅಂಶವನ್ನ ಅರಸು ಸೇರಿಸಿದರು. ಅದು ಬಿಎಸ್​ಜಿ. ಬ್ಯಾಕ್​ವರ್ಡ್​ ಸ್ಪೆಷಲ್​ ಗ್ರೂಪ್‌. ಕಡಿಮೆ ವರಮಾನ ಹೊಂದಿರುವ ಎಲ್ಲಾ ಜಾತಿಗಳ ಜನರಿಗೆ ಶೇ.15ರಷ್ಟು ಮೀಸಲಾತಿ ಕೊಡುವ ವಿಚಾರ. ಇದು ಅರಸರ ದೂರದೃಷ್ಟಿ.- ಹಾವನೂರು ವರದಿ ದಕ್ಷಿಣಾ ಆಫ್ರಿಕಾದ ಸಂವಿಧಾನ ರಚನೆ ಮಾಡಲು ಪರಾಮರ್ಶನ ಗ್ರಂಥವಾಗಿ ಬಳಕೆ ಆಯಿತು. ಹಾವನೂರು ಅವರಲ್ಲಿದ್ದ ವಿದ್ವತ್ತನ್ನ ಗುರುತಿಸಿದ್ದು, ಬೆಳಕಿಗೆ ತಂದಿದ್ದು ದೇವರಾಜು ಅರಸು ಎಂಬುದು ಇಲ್ಲಿ ಮುಖ್ಯವಾಗಬೇಕು. ಆದರೆ ಕ್ರಾಂತಿರಂಗದ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂದು ಮುನಿಸುಕೊಂಡ ಹಾವನೂರು ಅವರು ಅರಸರ ಪಾಳೆಯವನ್ನ ಬಿಟ್ಟು ಹೋಗಿದ್ದು ಮಾತ್ರ ವಿಪರ್ಯಾಸ.

    Reply
  2. prasad raxidi

    ಜಾತಿ ವಿನಾಶ , ಸಾಮಾಜಿಕ ನ್ಯಾಯ, ಮುಂತಾದ ಹೋರಾಟಗಳಿಗೆಲ್ಲ ನಮ್ಮ ಜಾತಿವಾರು ವಿಂಗಡನೆ ಶೈಕ್ಷಣಿಕ ಮಟ್ಟ ಮತ್ತು ಸರ್ಕಾರಿ ಉದ್ಯೋಗ ಸಿಕ್ಕಿರುವ ಪ್ರಮಾಣಗಳನ್ನು ಮಾತ್ರ ನೋಡಿ ನಮ್ಮ ಸೈದ್ಧಾಂತಿಕ ಹಿನ್ನೆಲೆಯನ್ನು ರೂಪಿಸಿಕೊಂಡಿದ್ದರಿಂದಲೇ ರೈತ ಚಳುವಳಿಯೂ ಸೇರಿದಂತೆ ಅನೇಕ ಹೋರಾಟಗಳು ಇಂದು ಹಿನ್ನೆಲೆಗೆ ಸರಿಯಲು ಕಾರಣವಾಗಿದೆ. ಪ್ರತಿಯೊಂದು ಜಾತಿಯೂ ಹೊಂದಿರು ಶೈಕ್ಷಣಿಕ ಮಟ್ಟದ ಜೊತೆಯಲ್ಲಿ ಆ ಜಾತಿ ಹೊಂದಿರುವ ಭೂ ಒಡೆತನ, ಉದ್ಯಮಗಳ ಸಂಖ್ಯೆ ಮತ್ತು ಗಾತ್ರ, ಸಂಪತ್ತಿನ ಪ್ರಮಾಣ (ಇದರಲ್ಲಿ ಅನಧಿಕೃತವೇ ಹೆಚ್ಚಿರಬಹುದು) ಇವುಗಳನ್ನು ಪರಿಗಣಿಸದೆ ಮಾಡುವ ತೀರ್ಮಾನಗಳು ನಿಜ ಚಿತ್ರಣವನ್ನು ಕೊಡಲಾರದು. ಇಂದು ಜಾತಿ ಪಧ್ಧತಿ ಇನ್ನಷ್ಟು ಗಟ್ಟಿಯಾಗಿ ಉಳಿದುಕೊಳ್ಳು ಭುಮಿ ಮತ್ತು ಸಂಪತ್ತಿನ ಒಡೆತನವೂ ಸಹ ಅತ್ಯಂತ ಪ್ರಮುಖ ಕಾರಣವಾಗಿದೆ.( ಅಂತರ್ಜಾತಿ- ಧರ್ಮ- ವಿವಾಹಗಳಿಗೆ ಮರ್ಯಾದಾ ಹತ್ಯೆ ಎಂದು ತಪ್ಪಾಗಿ ಕರೆಯತ್ತಿರುವ ಕಗ್ಗೊಲೆಗೆ ಸಂಪತ್ತಿನ ಒಡೆತನದ ಪ್ರಶ್ನೆಯೂ ಸೇರಿಕೊಂಡಿದೆ)

    Reply
  3. amaasa

    ಹೌದು ಇಂದು ಕರ್ನಾಟಕದಲ್ಲಿ ಜಾತಿಯನ್ನ ಹೆಚ್ಚು ಒಡಲಲ್ಲಿಟ್ಟು ಪೋಷಿಸುತ್ತಿರುವವರು ಲಿಂಗಾಯತರು ಮಾತ್ರ… ಅವರು ಬಸವಣ್ಣನ ಜಾತಿ ವಿನಾಶದ ಆಂದೋಲನ ಮರೆತಿದ್ದಾರೆ.

    Reply

Leave a Reply

Your email address will not be published. Required fields are marked *