Daily Archives: March 17, 2012

ವರ್ಷವಿಡೀ ದಿನದ 24 ಗಂಟೆಯೂ ತೆರೆದಿರುವ ಮಹಾ ಜ್ಞಾನಭಂಡಾರ

-ಆನಂದ ಪ್ರಸಾದ್

ಪ್ರಪಂಚದ ಯಾವುದೇ ಭಾಗದಲ್ಲಿ ಲಭ್ಯವಿರುವ ಅಮೋಘ ಜ್ಞಾನಸಂಪತ್ತನ್ನು ಬೆರಳ ತುದಿಯಲ್ಲಿ ಕೆಲವೇ ಸೆಕೆಂಡಿನಲ್ಲಿ ತೋರಿಸುವ ವಿಜ್ಞಾನದ ಅದ್ಭುತ ಪವಾಡ ಅಂತರ್ಜಾಲ ಎಂಬುದರಲ್ಲಿ ಸಂದೇಹವಿಲ್ಲ. ಪ್ರಪಂಚದಾದ್ಯಂತ ಲಭ್ಯವಿರುವ ಈ ಜ್ಞಾನ ಸಂಪತ್ತು ಎಲ್ಲ ಜನತೆಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಿದ ವಿಜ್ಞಾನದ ದಿನಗಳಲ್ಲಿ ಬದುಕುವ ಸೌಭಾಗ್ಯ ನಮ್ಮದು. ಕೆಲವೇ ದಶಕಗಳ ಹಿಂದೆ ಯಾವ ಕೊಟ್ಯಾಧಿಪತಿಗೂ ಲಭ್ಯವಿಲ್ಲದ ಈ ಭಾಗ್ಯ ಇಂದು ಸಾಮಾನ್ಯ ಜನತೆಗೆ ಲಭ್ಯವಾಗುವಂತೆ ವಿಜ್ಞಾನ ಹಾಗೂ ತಂತ್ರಜ್ಞಾನ ಮಾಡಿರುವುದು ನಮ್ಮ ಕಾಲದ ಮಹಾ ವಿಸ್ಮಯ. ನಾವು ಇಂದು ಯಾವುದೇ ವಿಷಯದ ಮೇಲೆ ಹುಡುಕಿದರೂ ಅಗಾಧ ಜ್ಞಾನ ಮಾಹಿತಿ ಕುಳಿತಲ್ಲಿಗೆ ತಲುಪಿಸುವ ಸಾಮರ್ಥ್ಯ ಅಂತರ್ಜಾಲದ್ದಾಗಿದೆ.  ಗ್ರಂಥಾಲಯಗಳಿಗಾದರೆ ಕಾಲಮಿತಿ ಇದೆ, ಅಲ್ಲಿ ನಮಗೆ ಬೇಕಾದ ಮಾಹಿತಿಯನ್ನು, ಪುಸ್ತಕಗಳನ್ನು ಹುಡುಕುವುದು ತುಂಬಾ ಪ್ರಯಾಸದ ಕೆಲಸ. ಆದರೆ ಇಂದು ಅಂತರ್ಜಾಲದಿಂದಾಗಿ ಯಾವ ಮಾಹಿತಿಯೂ ಬೇಕಾದರೆ ದಿನವಿಡೀ ಲಭ್ಯ. ಇದಕ್ಕೆ ಯಾವುದೇ ಸಮಯ ಮಿತಿ ಇಲ್ಲ. ಹುಡುಕಲು ಯಾವುದೇ ಪ್ರಯಾಸವಿಲ್ಲ.

ಪ್ರಪಂಚಂದ ಯಾವುದೇ ದೇಶದಲ್ಲಿ ಕುಳಿತು ನಮ್ಮ ಭಾಷೆಯ ಪತ್ರಿಕೆ ಓದಬಹುದು, ನಮ್ಮ ಭಾಷೆಯ ಸಂಗೀತ ಕೇಳಬಹುದು.  ಟಿವಿ ಮಾಧ್ಯಮದಲ್ಲಾದರೆ ಅವರು ಏನು ಪ್ರಸಾರ ಮಾಡುತ್ತಾರೋ ಅದನ್ನು ನಾವು ನೋಡಬೇಕು.  ಅಂತರ್ಜಾಲದಲ್ಲಾದರೆ ನಮಗೆ ಬೇಕಾದ ದೃಶ್ಯಗಳನ್ನು ಹುಡುಕಿ ನಾವೇ ನೋಡಬಹುದು, ನಮಗೆ ಬೇಕಾದ ಸಂಗೀತವನ್ನು ನಾವೇ ಯೂಟ್ಯೂಬಿನಲ್ಲಿ ಅಥವಾ ಅಂಥದೇ ಜಾಲ ತಾಣದಲ್ಲಿ ಉಚಿತವಾಗಿ ಕೇಳಬಹುದು, ನಮ್ಮ ಗಣಕ ಯಂತ್ರಕ್ಕೆ ಬೇಕಾದ ಉತ್ತಮ ಗೀತೆಗಳನ್ನು ಇಳಿಸಿಕೊಂಡು ಸಂಗ್ರಹಿಸಿ ಇಡಬಹುದು. ನಮ್ಮ ದೃಶ್ಯಾವಳಿಗಳನ್ನು ನಾವೇ ಅಂತರ್ಜಾಲಕ್ಕೆ  ಹಾಕಿ ಎಲ್ಲರೂ ನೋಡುವಂತೆ ಮಾಡಬಹುದು.  ಪ್ರಪಂಚದಾದ್ಯಂತ ಸಮಾನ ಮನಸ್ಕರನ್ನು, ಸಮಾನ ಅಭಿರುಚಿ, ಆಸಕ್ತಿ ಇರುವ ವ್ಯಕ್ತಿಗಳನ್ನು ಹುಡುಕಿ ವಿಚಾರ ವಿನಿಮಯ ಮಾಡಬಹುದು.  ಪ್ರಪಂಚದಾದ್ಯಂತ ಕೆಲವೇ ಕ್ಷಣಗಳಲ್ಲಿ ವೀಡಿಯೊ ಸಂವಾದ ನಡೆಸಬಹುದು.

ವಿಕಿಪೀಡಿಯದಂಥ ಉಚಿತ ಮಾಹಿತಿ ಭಂಡಾರ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ ಮಹನೀಯರು ಅಭಿನಂದನಾರ್ಹರು.  ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮೊದಲಾದ ಕ್ಷೇತ್ರಗಳ ಸಾಮಾನ್ಯ ಗ್ರಂಥಾಲಯಗಳಲ್ಲಿ ಸಿಗದ ಅಗಾಧ ಮಾಹಿತಿ ಇಂದು ಅಂತರ್ಜಾಲದಿಂದಾಗಿ ಎಲ್ಲರಿಗೂ ಲಭ್ಯ.  ಯಾವುದೇ ರೋಗದ ಬಗ್ಗೆ, ಔಷಧಿಗಳ ಬಗ್ಗೆ ಇಂದು ಕ್ಷಣಾರ್ಧದಲ್ಲಿ ಅಂತರ್ಜಾಲದಲ್ಲಿ ಮಾಹಿತಿ ಲಭ್ಯ.  ಅಂತರ್ಜಾಲದ ಸಂಪರ್ಕದ ಮೂಲಕವೇ ಇಂದು ಬ್ಯಾಂಕುಗಳ ಎಟಿಎಂಗಳು ಕೆಲಸ ಮಾಡುತ್ತಿದ್ದು ದೇಶದ ಯಾವುದೇ ಭಾಗದಿಂದಲೂ ನಮ್ಮ ಬ್ಯಾಂಕ್ ಅಕೌಂಟಿನಲ್ಲಿರುವ ಹಣವನ್ನು ದಿನದ ಯಾವುದೇ ಸಮಯದಲ್ಲಾದರೂ ತೆಗೆಯುವ ಸೌಲಭ್ಯ ದೊರಕಿದೆ.  ಮೊದಲಾದರೆ ಬ್ಯಾಂಕಿನ ವೇಳೆಯಲ್ಲಿ ಮಾತ್ರ ಅದೂ ನಮ್ಮ ಅಕೌಂಟ್ ಇರುವ ಬ್ಯಾಂಕ್ ಶಾಖೆಯಲ್ಲಿ ಮಾತ್ರ ನಿಮಿಷಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯಬೇಕಾಗಿತ್ತು.

ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ಅಂಗಡಿಗಳಲ್ಲಿ ಹಣ ಪಾವತಿಸಬಹುದು ಅದೂ ಕೂಡ ಅಂತರ್ಜಾಲದ ಮೂಲಕವೇ ಕೆಲಸ ಮಾಡುವುದು.  ಈಗ ಅಂತರ್ಜಾಲ ಸಂಪರ್ಕ ಇರುವ ಮೊಬೈಲ್ ಫೋನಿನಿಂದಲೂ ಹಣ ವರ್ಗಾವಣೆ ಮಾಡಬಹುದು.  ಇ-ಮೇಲ್ ಮೂಲಕ ವಿಶ್ವದ ಯಾವುದೇ ಭಾಗದಿಂದ ಯಾವುದೇ ಭಾಗಕ್ಕೆ ಎಷ್ಟು ಮಂದಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಪತ್ರಗಳನ್ನು ಉಚಿತವಾಗಿ ಕಳುಹಿಸಬಹುದು. ಪತ್ರದ ಜೊತೆ ವೀಡಿಯೊ, ಫೋಟೋ ಇನ್ನಿತರ ಮಾಹಿತಿಯನ್ನೂ ಉಚಿತವಾಗಿ ಕಳುಹಿಸಬಹುದು. ಇದು ಕೂಡ ಸಾಧ್ಯವಾಗಿರುವುದು ಅಂತರ್ಜಾಲದಿಂದಲೇ. ಇಂದು ಅಂತರ್ಜಾಲದಲ್ಲಿ ಸಾವಿರಾರು ಬ್ಲಾಗುಗಳು ಹಾಗೂ ವೆಬ್‍ಸೈಟುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿವೆ.  ಸಾಂಪ್ರದಾಯಿಕ ಪತ್ರಿಕೆ, ಟಿವಿ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಹಿಂಜರಿಯುತ್ತಿರುವಾಗ ಅಂತರ್ಜಾಲವು ಅಂತರ್ಜಾಲ ಸಂಪರ್ಕ ಹೊಂದಿರುವ ಪ್ರತಿ ಜನಸಾಮಾನ್ಯನಿಗೂ ತನ್ನ ಭಾವನೆಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ.

ಮುಂದೆ ಅಂತರ್ಜಾಲ ಹಾಗೂ ಗಣಕ ಯಂತ್ರದ ಬಳಕೆ ಹೆಚ್ಚಿದಂತೆ ಅಂತರ್ಜಾಲವು ಪ್ರಮುಖ ಮಾಧ್ಯಮವಾಗಿ ಮೂಡಿಬರಬಹುದು.  ಇಂಥ ಅಂತರ್ಜಾಲವನ್ನು ಸಂಶೋಧಿಸಿದ್ದು ಟಿಮ್ ಬರ್ನರ್ಸ್ ಲೀ ಎಂಬ ಬ್ರಿಟಿಷ್ ಮೂಲದ ವಿಜ್ಞಾನಿ.  ಲೀ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದಿಲ್ಲ ಹಾಗೂ ಇದನ್ನು ಬಳಸಲು, ಅಭಿವೃದ್ದಿಪಡಿಸಲು ಮುಕ್ತವಾಗಿರಿಸಿದ್ದಾರೆ.  ತನ್ನ ಸಂಶೋಧನೆಗೆ ಪೇಟೆಂಟ್ ಪಡೆದಿದ್ದರೆ ಇಂದು ಲೀ ಕೊಟ್ಯಾಧಿಪತಿಯಾಗಬಹುದಿತ್ತು.  ಓರ್ವ ನಿಜವಾದ ವಿಜ್ಞಾನಿ ಹಾಗೂ ಬುದ್ಧಿಜೀವಿ ತನ್ನ ಸಂಶೋಧನೆಗಳನ್ನು ವ್ಯಾಪಾರಕ್ಕೆ ಇಡುವುದಿಲ್ಲ ಹಾಗೂ ಮಾನವಕುಲದ ಉದ್ಧಾರಕ್ಕೆ ತನ್ನ ಸಂಶೋಧನೆಯನ್ನು ಧಾರೆಯೆರೆಯುತ್ತಾನೆ.  ಇದಕ್ಕೆ ಬರ್ನರ್ಸ್ ಲೀ ಉತ್ತಮ ನಿದರ್ಶನ.