ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -12)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಮತ್ತು ವಿಂದಮ್ ಆತ್ಮೀಯ ಗೆಳೆಯರಾದ ನಂತರ  ಪ್ರತಿದಿನ ಸಂಜೆ ನೈನಿತಾಲ್ ಪಟ್ಟಣದಲ್ಲಿದ್ದ ಯುರೋಪಿಯನ್ನರ ಕ್ಲಬ್‍ನಲ್ಲಿ ಸೇರುವುದು ವಾಡಿಕೆಯಾಗಿತ್ತು. ಸೇವೆಯಿಂದ ನಿವೃತ್ತಿಯಾಗುವ ದಿನಗಳು ಹತ್ತಿರವಾಗುತ್ತಿದ್ದಂತೆ  ಜಿಲ್ಲಾಧಿಕಾರಿಯಾಗಿದ್ದ  ವಿಂದಮ್, ಒಂದು ದಿನ ತನ್ನ ಭವಿಷ್ಯದ ಯೋಜನೆಗಳನ್ನು ಮಿತ್ರ ಕಾರ್ಬೆಟ್ ಜೊತೆ ವಿನಿಮಯ ಮಾಡಿಕೊಂಡ.  ಇಂಗ್ಲೆಂಡ್‍ನಲ್ಲಿ ಪಿತ್ರಾರ್ಜಿತವಾಗಿ ಆಸ್ತಿ ಇದ್ದರೂ ಕೂಡ ವಿಂದಮ್‍ಗೆ ಮತ್ತೇ ತನ್ನ ತಾಯ್ನಾಡಿಗೆ ತೆರಳುವ ಆಸಕ್ತಿ ಇರಲಿಲ್ಲ. ಆದರೆ 200 ವರ್ಷಗಳ ಕಾಲ ಆಳಿಸಿಕೊಂಡು ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿ ಇದ್ದ ಭಾರತದಲ್ಲೂ ಕೂಡ  ನೆಲೆಸುವ ಇಚ್ಛೆ ಇರಲಿಲ್ಲ. ತನ್ನ ಭವಿಷ್ಯದ ನಿವೃತ್ತಿಯ ದಿನಗಳಿಗಾಗಿ ವಿಂದಮ್ ಪೂರ್ವ ಆಫ್ರಿಕಾದ ತಾಂಜೇನಿಯವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದ.

ವಿಶ್ವದ ಮೊದಲ ಮಹಾಯುದ್ಧದ ನಂತರ ತಾಂಜೇನಿಯ ದೇಶ, ಜರ್ಮನರ ಕೈಯಿಂದ ಬ್ರಿಟಿಷರಿಗೆ ವರ್ಗಾವಣೆಯಾಗಿತ್ತು. ಹೊರ ಜಗತ್ತಿಗೆ ಪೂರ್ಣ ಪ್ರಮಾಣದಲ್ಲಿ ತೆರದು ಕೊಳ್ಳದ ಈ ನಾಡಿನಲ್ಲಿ ಹೇರಳವಾದ ಅರಣ್ಯ ಪ್ರದೇಶ, ಕಾಡು ಪ್ರಾಣಿಗಳು, ಬೇಸಾಯಕ್ಕೆ ಅನುಕೂಲವಾಗುವಂತಹ ಫಲವತ್ತಾದ ಭೂಮಿ, ಹಾಗೂ ಅತ್ಯಂತ ಕಡಿಮೆ ಕೂಲಿದರಕ್ಕೆ ಸಿಗುವ ಸ್ಥಳೀಯ ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರು ಇವೆಲ್ಲವೂ ವಿಂದಮ್‍ನ ಆಲೋಚನೆಗೆ ಕಾರಣವಾಗಿದ್ದವು. ತಾಂಜೇನಿಯಾದಲ್ಲಿದ್ದ ತನ್ನ ಮಿತ್ರರಾದ ಕೆಲವು ಬ್ರಿಟಿಷ್ ಅಧಿಕಾರಿಗಳ ನೆರವಿನೊಂದಿಗೆ ಅಲ್ಲಿಗೆ ಭೇಟಿ ನೀಡಿದ ವಿಂದಮ್, ಅಲ್ಲಿನ ತಾಂಜೇನಿಕ ಎಂಬ ಕೀನ್ಯಾದ ಗಡಿಭಾಗದ ಪ್ರಾಂತ್ಯದಲ್ಲಿ 1450 ಎಕರೆ ಪ್ರದೇಶದ ಎಸ್ಟೇಟ್ ಒಂದನ್ನು ವೀಕ್ಷಿಸಿ ಬಂದಿದ್ದ.

ಪೂರ್ವ ಆಫ್ರಿಕಾದ ಅತ್ಯಂತ ಎತ್ತರದ ಪ್ರದೇಶವಾಗಿದ್ದು ಸದಾ ತಂಪು ಹವಾಗುಣವಿರುವ ಹಾಗೂ ಜಗತ್ ಪ್ರಸಿದ್ಧವಾದ ಮತ್ತು ಮಂಜಿನಿಂದ ಆವೃತ್ತವಾಗಿರುವ ಕಿಲಿಮಾಂಜರೊ ಕಣಿವೆ ಪ್ರದೇಶದಲ್ಲಿ ಕಿಕಾಪು ಎಂಬ ಹೆಸರಿನ ಈ ತೋಟವನ್ನು  ಒಬ್ಬ ಜರ್ಮನ್ ಪ್ರಜೆ ಅಭಿವೃದ್ಧಿ ಪಡಿಸಿದ್ದ. ಆದರೆ ತಾಂಜೇನಿಯ ದೇಶ ಬ್ರಿಟಿಷರ ತೆಕ್ಕೆಗೆ ಬರುತ್ತಿದ್ದಂತೆ ಅವನು ಇದನ್ನು ಒಬ್ಬ ಬ್ರಿಟಿಷ್ ಅಧಿಕಾರಿಗೆ ಮಾರಿ ತನ್ನ ಸ್ವದೇಶಕ್ಕೆ ಹಿಂತಿರುಗಿದ್ದ. ಕಿಕಾಪು ಎಂಬ ಹೆಸರಿನ ಈ ಎಸ್ಟೇಟ್ ಕೊಳ್ಳುವಷ್ಟು ಹಣ ವಿಂದಮ್ ಬಳಿ ಇರಲಿಲ್ಲವಾದ್ದರಿಂದ ಇಬ್ಬರೂ ಕೂಡಿ ಕೊಳ್ಳುವ ಯೋಜನೆಯನ್ನು ವಿಂದಮ್ ತನ್ನ ಗೆಳೆಯ ಕಾರ್ಬೆಟ್ ಮುಂದಿಟ್ಟ. ಆ ವೇಳೆಗಾಗಲೇ ಕಾರ್ಬೆಟ್ ನಿವೇಶನಗಳ ಬದಲಿಗೆ ಕೃಷಿ ಭೂಮಿಗಳ ಮೇಲೂ ತನ್ನ ಆದಾಯದ ಹಣವನ್ನು ವಿನಿಯೋಗಿಸಲು ಪ್ರಾರಂಭಿಸಿದ್ದ. ಒಮ್ಮೆ ಅನಿರಿಕ್ಷೀತವಾಗಿ ಚಹಾ ತೋಟವೊಂದಕ್ಕೆ ಪಾಲುದಾರನಾಗುವ ಅವಕಾಶ ಕಾರ್ಬೆಟ್‍ಗೆ ಒದಗಿ ಬಂದಿತು.

ಕಾರ್ಬೆಟ್ ವಿಶ್ವದ ಮೊದಲ ಮಹಾ ಯುದ್ದದ ಸಂದರ್ಭದಲ್ಲಿ ಫ್ರಾನ್ಸ್‌ನ ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾಗ, ಬ್ರಿಟಿಷ್ ಸೇನೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ಯುವ ಅಧಿಕಾರಿ ರಾಬರ್ಟ್ ಬೆಲ್ಲೆಯರ್‍ಸ್ ಎಂಬಾತ ನೈನಿತಾಲ್ ಪಟ್ಟಣದ ಸಮೀಪದ ಅಲ್ಮೋರ ಎಂಬ ಗಿರಿಧಾಮದದಿಂದ ಬಂದವನಾಗಿದ್ದುದರಿಂದ ಇಬ್ಬರ ನಡುವೆ ಪರಿಚಯವಾಗಿ ನಂತರ ಅದು ಗಾಢ ಸ್ನೇಹಕ್ಕೆ ತಿರುಗಿತ್ತು.

ಮೊದಲನೇ ಮಹಾಯುದ್ಧ ಮುಗಿದ ನಂತರ ಬೆಲ್ಲೆಯರ್‍ಸ್ ಕೂಡ ವಾಪಸ್ ಭಾರತಕ್ಕೆ ಬಂದು ಕುಮಾವನ್ ಪ್ರಾಂತ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆತನಿಗೆ ಅರಣ್ಯದಲ್ಲಿನ ಶಿಕಾರಿಗಿಂತ ನದಿಯಲ್ಲಿ ಮೀನು ಶಿಕಾರಿ ಮಾಡುವ ಹವ್ಯಾಸವಿತ್ತು. ರಜೆ ಅಥವಾ ಬಿಡುವಿನ ದಿನಗಳಲ್ಲಿ ಕಾರ್ಬೆಟ್ ಮತ್ತು ಬೆಲ್ಲೆಯರ್‍ಸ್  ಜೊತೆಗೂಡಿ ನದಿಗಳಲ್ಲಿ ಮೀನು ಶಿಕಾರಿ ಮಾಡುತಿದ್ದರು.

ಒಂದು ದಿನ ಬೆಲ್ಲೆಯರ್‍ಸ್ ಕಾರ್ಬೆಟ್ ಜೊತೆ ತನ್ನ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಜೊತೆಗೆ ಅವನಿಂದ ಸಹಾಯಕ್ಕಾಗಿ ವಿನಂತಿಸಿಕೊಂಡ. ಬೆಲ್ಲೆಯರ್‍ಸ್ ತಂದೆ ಸ್ವೀವನ್‍ಸನ್ ಅಲ್ಮೋರ ಬಳಿ 10 ಸಾವಿರ ಎಕರೆ ಚಹಾ ತೋಟವನ್ನು ಹೊಂದಿದ್ದ. ಕುಟುಂಬದ ನಿರ್ವಹಣೆಗಾಗಿ ಅದರಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶವನ್ನು ಅವನು ಮೊದಲೇ ಮಾರಿಹಾಕಿದ್ದ. ಉಳಿದ ನಾಲ್ಕು ಸಾವಿರ ಎಕರೆ ಚಹಾ ತೋಟ ನಿರ್ವಹಣೆಯಿಲ್ಲದೆ ಪಾಳುಬಿದ್ದಿತ್ತು. ಸ್ಟೀವನ್‌ಸನ್ ನಿಧನದ ನಂತರ ಅದನ್ನು ನಿರ್ವಹಿಸಲು ಬೆಲ್ಲೆಯರ್‍ಸ್ ವಿಫಲನಾಗಿದ್ದ. ಅಲ್ಲದೆ ಬ್ರಿಟಿಷ್ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಅವನು ಹೊರಟು ಹೋದ ನಂತರ ಅದನ್ನು ನೋಡಿಕೊಳ್ಳುವವರೇ ಇರಲಿಲ್ಲ. ಚಹಾ ತೋಟದ ಅಭಿವೃದ್ಧಿಗಾಗಿ ಅಲಹಬಾದ್ ಬ್ಯಾಂಕ್‍ನಿಂದ ಪಡೆದಿದ್ದ ಒಂದು ಲಕ್ಷ ರೂಪಾಯಿ ಸಾಲ ಹಲವು ವರ್ಷಗಳ ನಂತರ ಬಡ್ಡಿ ಸೇರಿ ಎರಡು ಲಕ್ಷ ರೂಪಾಯಿ ದಾಟಿತ್ತು. ಈ ಕಾರಣಕ್ಕಾಗಿ ಬ್ಯಾಂಕ್ ಇಡೀ ತೋಟವನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ತೊಡಗಿತ್ತು.

ಬೆಲ್ಲೆಯರ್‍ಸ್ ವಿನಂತಿ ಮೇರೆಗೆ ಕಾರ್ಬೆಟ್ ಬ್ಯಾಂಕ್ ಸಾಲ ತೀರಿಸಲು ಮುಂದಾದ. ಬ್ಯಾಂಕ್ ಸಾಲ ತೀರಿದ ನಂತರ ಕಾರ್ಬೆಟ್ ನಾಲ್ಕು ಸಾವಿರ ಎಕರೆಯ ಚಹಾ ತೋಟಕ್ಕೆ ಜಂಟಿ ಪಾಲುದಾರನಾಗುವುದು,  ತೋಟದಿಂದ ಬರುವ ಆದಾಯವನ್ನು ಕಾರ್ಬೆಟ್ ತೆಗೆದುಕೊಂಡು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯನ್ನು ಬೆಲ್ಲೆಯರ್‍ಸ್‌‌ಗೆ ನೀಡುವುದು ಎಂಬ ಕರಾರಿನ ಮೇ‍ಲೆ ಕಾ‍ರ್ಬೆಟ್ ತನ್ನ ಮ್ಯಾಥ್ಯು ಕಂಪನಿಯ ಪರವಾಗಿ ಬ್ಯಾಂಕ್ ಸಾಲವನ್ನು ತೀರಿಸಿದ.

ಅಲ್ಮೋರ ಸಮೀಪದ ಚೌಕುರಿ ಎಂಬ ಪ್ರದೇಶದಲ್ಲಿದ್ದ ಈ ಚಹಾ ತೋಟ ಸಂಪೂರ್ಣ ಪಾಳು ಬಿದ್ದಿತ್ತು. ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಷ್ಠಾವಂತ ಕೆಲವು ಕಾರ್ಮಿಕರನ್ನು ಅಲ್ಲಿಗೆ ಕರೆಸಿಕೊಂಡು ಒಂದೇ ವರ್ಷದಲ್ಲಿ ಅದನ್ನು ಸಹಜ ಸ್ಥಿತಿಗೆ ತಂದ. ನಂತರ ಅದನ್ನು ಕೇದಾರ್‌ನಾಥ್ ಎಂಬಾತನಿಗೆ ಎಂಟು ಲಕ್ಷ ರೂಪಾಯಿಗೆ ಮಾರಾಟ ಮಾಡಿ ತನ್ನ ಪಾಲಿನ ಹಣ ನಾಲ್ಕು ಲಕ್ಷ ರೂಗಳನ್ನು ಕಳೆದು, ಉಳಿದ ಹಣವನ್ನು ಬೆಲ್ಲೆಯರ್‍ಸಗೆ ನೀಡಿದ. ಕೇವಲ ಒಂದು ವರ್ಷದ ಅವಧಿಯಲ್ಲಿ ತನ್ನ ಕಂಪನಿ ಪರವಾಗಿ ಎರಡು ಲಕ್ಷ ಹಣ ವಿನಿಯೋಗಿಸಿದ್ದ ಕಾರ್ಬೆಟ್, ಅದರಲ್ಲಿ ಎರಡು ಲಕ್ಷ ರೂ ಆದಾಯವನ್ನು ಪಡೆದ. ತನ್ನ ವ್ಯವಹಾರದ ಜಾಣ್ಮೆಯ ಜೊತೆಗೆ ಗೆಳೆಯನ್ನು ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಅವನದಾಗಿತ್ತು.

ಚಹಾ ತೋಟದ ವ್ಯವಹಾರದಿಂದ ಗಳಿಸಿದ ಆದಾಯವನ್ನು ಗೆಳೆಯ ವಿಂದಮ್ ಜೊತೆ ತಾಂಜೇನಿದಲ್ಲಿ ಭೂಮಿಗೆ ತೊಡಗಿಸಲು ನಿರ್ಧರಿಸಿದ ಕಾರ್ಬೆಟ್ ಈ ವ್ಯವಹಾರಕ್ಕಾಗಿ ಬೆಲ್ಲೆಯರ್‍ಸ್‌ನನ್ನು ಸಹ ಪಾಲುದಾರನಾಗಿ ಮಾಡಿದ. 1924 ರಲ್ಲಿ ವಿಂದಮ್, ಕಾರ್ಬೆಟ್, ಬೆಲ್ಲೆಯರ್‍ಸ್ ಮೂವರು ಸೇರಿ ಸ್ಟಾಕ್ ಕಂಪನಿಯೊಂದನ್ನು ಆರಂಭಿಸಿ, ಕಂಪನಿಯ ಹೆಸರಿನಲ್ಲಿ ತಾಂಜೇನಿಯಾದ 1450 ಎಕರೆ ಕಿಕಾಪು ಎಸ್ಟೇಟ್ ಅನ್ನು  ಖರೀದಿಸಿದರು. ವಿಂದಮ್, ಎಸ್ಟೇಟ್ ಖರೀದಿಸಿದ ವೇಳೆಗೆ ಇನ್ನು ನಿವೃತ್ತಿಯಾಗದ ಕಾರಣ ಕಾರ್ಬೆಟ್ ಮೇಲೆ ಅದನ್ನು ಅಭಿವೃದ್ಧಿ ಪಡಿಸುವ ಜವಬ್ದಾರಿ ಬಿದ್ದಿತು. ಆ ಕಾರಣಕ್ಕಾಗಿ ಪ್ರತಿ ಮೂರು ತಿಂಗಳಿಗೆ ತಾಂಜೇನಿಯಾಕ್ಕೆ ಅವನು ಪ್ರವಾಸ ಹೋಗುವುದು ಅನಿವಾರ್ಯವಾಯಿತು.

ಕಿಕಾಪು ಎಸ್ಟೇಟ್ ವ್ಯವಸಾಯಕ್ಕೆ ಯೋಗ್ಯವಾಗುವ ರೀತಿಯಲ್ಲಿ ಜರ್ಮನ್ ಪ್ರಜೆ ಅಭಿವೃದ್ಧಿ ಪಡಿಸಿದ್ದರಿಂದ ಜಿಮ್ ಕಾರ್ಬೆಟ್ ಸ್ಥಳಿಯ ಕೂಲಿ ಕಾರ್ಮಿಕರ ನೆರವಿನಿಂದ ಅಲ್ಲಿ ಬಾಳೆ, ಮುಸುಕಿನ ಜೋಳ, ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಲು ಪ್ರಾರಂಭಿಸಿದ. ಎಸ್ವೇಟ್‍ನಲ್ಲಿ ಕಾರ್ಮಿಕರು, ಹಾಗೂ ಮೆನೇಜರ್ ಉಳಿದುಕೊಳ್ಳಲು ಮಣ್ಣಿನ ಗೋಡೆಗಳಿಂದ ಕಟ್ಟಿದ ತಾಂಜೇನಿಯ ಶೈಲಿಯ ಮನೆಗಳು ಮಾತ್ರ ಇದ್ದವು. ಹಾಗಾಗಿ ವಿಂದಮ್ ಭಾರತದಿಂದ ಅಲ್ಲಿಗೆ ತೆರಳುವ ವೇಳೆಗೆ, ಕಾರ್ಬೆಟ್ ಬಂಗಲೆಯೊಂದನ್ನು ನಿರ್ಮಿಸಿದ. ಮೂವರು ಪಾಲುದಾರರ ಆಸಕ್ತಿಯ ಫಲವಾಗಿ ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ಒಳ್ಳೆಯ ಆದಾಯ ಎಸ್ಟೇಟ್‍ನಿಂದ ಬರತೊಡಗಿತು. ವಿಂದಮ್‍ಗೆ ಕಿಕಾಪು ಎಸ್ಟೇಟ್ ತನ್ನ ನಿವೃತ್ತಿಯ ದಿನ ಕಳೆಯಲು ಆಧಾರವಾದರೆ, ಬೆಲ್ಲಿಯರ್‍ಸ ಅದೇ ಜೀವನಾಧಾರವಾಗಿತ್ತು. ಜಿಮ್ ಕಾರ್ಬೆಟ್‍ಗೆ ತಾನು ಹಾಕಿದ ಬಂಡವಾಳಕ್ಕೆ ಸರಿಯಾದ ಪ್ರತಿಫಲ ಪಡೆಯುವುದು ಮುಖ್ಯವಾಗಿತ್ತು.

ಸುಮಾರು ಇಪ್ಪತ್ತು ವರ್ಷಗಳ ಕಾಲ ಮೂವರು ಜಂಟಿಯಾಗಿ ಎಸ್ಟೇಟ್‍ ಅನ್ನು ನಿರ್ವಹಿಸಿದ ನಂತರ ಅದನ್ನು ಮಾರಿ ಹಾಕಿದರು. ವಿಂದಮ್, ತಾಂಜೇನಿಯಾ ಪಕ್ಕದ ಕೀನ್ಯಾದಲ್ಲಿ ಮತ್ತೋಂದು ಚಹಾ ಎಸ್ಟೇಟ್ ಖರೀದಿಸಿದರೆ, ಬೆಲ್ಲಿಯರ್‍ಸ್ ರುಢಿಸಿಯಾಕ್ಕೆ ತೆರಳಿ ನಿವೃತ್ತಿಯ ಜೀವನ ಆರಂಭಿಸಿದ. ಜಿಮ್ ಕಾರ್ಬೆಟ್ ಕೂಡ ಕೀನ್ಯಾದಲ್ಲಿ 30 ಎಕರೆ ಪ್ರದೇಶದ ಒಂದು ಚಿಕ್ಕ ಚಹಾ ಎಸ್ಟೇಟ್‍ವೊಂದನ್ನು ಖರೀದಿಸಿದ. ಕೀನ್ಯಾದ ಅರಣ್ಯ ಪ್ರದೇಶದಲ್ಲಿ ವಿಂದಮ್ ಮತ್ತು ಕಾರ್ಬೆಟ್ ಬಿಡುವಾದಾಗಲೆಲ್ಲಾ ಜೋಡಿಯಾಗಿ ಶಿಕಾರಿ ಮಾಡುತ್ತಾ ಅಲೆಯುವ ಅಭ್ಯಾಸವನ್ನು ಮುಂದುವರಿಸಿದ್ದರು. ಇದಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ವ್ಯವಹಾರವನ್ನು ತನ್ನ ಸಹೋದರಿ ಮ್ಯಾಗಿಗೆ ವಹಿಸಿ, ವರ್ಷದಲ್ಲಿ  ಕನಿಷ್ಠ  ಆರು ತಿಂಗಳು ಕೀನ್ಯಾದಲ್ಲಿ ವಾಸಿಸುತ್ತಿದ್ದ.

    (ಮುಂದುವರಿಯುವುದು)

(ಚಿತ್ರಕೃಪೆ: ವಿಕಿಪೀಡಿಯ)

Leave a Reply

Your email address will not be published. Required fields are marked *