Daily Archives: March 19, 2012

ಜಾತೀಯತೆ ಹಾಗೂ ಜಾತ್ಯಾತೀತತೆ

-ಡಾ.ಎಸ್.ಬಿ.ಜೋಗುರ

ಅದೊಂದು ಅಚ್ಚುಕಟ್ಟಾದ ವೇದಿಕೆ. ವೇದಿಕೆಯ ಮೇಲೆ ನಿರೂಪಕನನ್ನು ಒಳಗೊಂಡು ಏಳು ಜನ. ಆ ಏಳು ಜನರಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವವನನ್ನು ಮೈನಸ್ ಮಾಡಿದರೆ ಮಿಕ್ಕವರೆಲ್ಲಾ ಬಹುತೇಕವಾಗಿ ಒಂದೇ ಜಾತಿಗೆ ಸೇರಿದವರು. ಅವರೆಲ್ಲರೂ ಅಲ್ಲಿ ಸೇರಿರುವ ಉದ್ದೇಶ ‘ಜಾತ್ಯಾತೀತತೆಯ ಪ್ರಸ್ತುತತೆ’ ಎನ್ನುವ ವಿಷಯದ ಬಗ್ಗೆ ಕುರಿತು ಚರ್ಚಿಸುವುದಾಗಿದೆ. ಜಾತ್ಯಾತೀತತೆ ಎಂದರೇನು? ಎನ್ನುವ ವಿಷಯದಿಂದ ಆರಂಭವಾಗುವ ಅವರ ಚರ್ಚೆ ಅದರ ಕಾರಣಗಳು. ಪರಿಣಾಮಗಳನ್ನೊಳಗೊಂಡು ಅಂತಿಮವಾಗಿ ತಮ್ಮ ಸಮುದಾಯ ಚಿಕ್ಕ ಸಮುದಾಯ, ಅನೇಕ ಬಗೆಯ ಹಕ್ಕು ಸೌಲಭ್ಯಗಳಿಂದ ವಂಚಿತವಾದ ಸಮುದಾಯ, ಹಾಗೆ ನೋಡಿದರೆ ತಮ್ಮ ಜಾತಿಗೆ ಸಿಗುವ ಸೌಲಭ್ಯಗಳು ತನ್ನದೇ ಸೈಜಿನ ಜಾತಿಯವರಿಗೆ ಸಿಗುವ ಸೌಲಭ್ಯಗಳಿಗಿಂತಲೂ ಕಡಿಮೆ, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಅದನ್ನು ನಾವೆಲ್ಲಾ ಒಗ್ಗಟ್ಟಾಗಿ ವೋಟು ಕೇಳಲು ಬರುವವರಿಗೆ ಮನದಟ್ಟು ಮಾಡಬೇಕು, ನಮ್ಮ ಜಾತಿಯ ಮಠಾಧೀಶರನ್ನೊಳಗೊಂಡು ಆ ದಿಶೆಯಲ್ಲಿ ಒಂದು ಗಟ್ಟಿ ಹೋರಾಟವನ್ನು ರೂಪಿಸಬೇಕು ಎನ್ನುವವರೆಗೆ ಆ ಚರ್ಚೆ ಬಂದು ನಿಲ್ಲುತ್ತದೆ. ಈ ರೀತಿಯ ಚರ್ಚೆಗಳು ಕೇಂದ್ರ ವೃತ್ತಾಂತದಿಂದ ಕರೆಕ್ಟಾಗಿ ಶುರುವಾದರೂ ವಿಚಲಿತವಾಗಿ ಎಲ್ಲೆಲ್ಲೋ ಹಾಯುವ, ಸುತ್ತಿ ಸುಳಿಯುವ ಸುಂಟರಗಾಳಿಯಂತೆ ಹೋಗಿ ನಿಲ್ಲುವ ಅಪಾಯದ ನಡುವೆ, ಜಾತ್ಯಾತೀತತೆ ಎನ್ನುವ ಪದ ಇವರ ಭಂಡತನಕ್ಕೆ ಬೆದರಿ ನಾಚಿ ನೀರಾಗುವ ಜೊತೆಗೆ ತನ್ನ ಅನರ್ಥಕ್ಕೆ ಕಂಗಾಲಾಗುವುದೂ ಇದೆ.

ಇಂಗ್ಲಿಷ್‍ನ  ‘ಸೆಕ್ಯುಲ್ಯಾರಿಝಂ’ ಎನ್ನುವ ಪದ ಆಯಾ ಹೊತ್ತಿಗೊದಗುವಂತೆ ಅರ್ಥೈಸುವಲ್ಲಿರುವ ಮುಖ್ಯ ಕಾರಣ ಇತರೆ ಭಾಷೆಗಳಲ್ಲಿ [ಕನ್ನಡವನ್ನೊಳಗೊಂಡು] ಸಾರ್ವತ್ರಿಕವಾಗಿ ಸಲ್ಲಬಹುದಾದ ಸ್ವೀಕೃತವಾದ ಏಕಮಾತ್ರ ಪದವಿಲ್ಲ. ಕನ್ನಡದಲ್ಲಂತೂ ಜಾತ್ಯಾತೀತತೆ ಎನ್ನುವ ಪದವನ್ನು ಧರ್ಮ ನಿರಪೇಕ್ಷತೆ, ಮತಾತೀತತೆ ಎಂತಲೂ ಕರೆಯವುದಿದೆ. ಅತ್ಯಂತ ಜಟಿಲವಾಗಿರುವ ಜಾತಿ ಹಾಗೂ ಧರ್ಮದಂತಹ ವಿಷಯಗಳಲ್ಲಿ ಸಡಿಲತೆಯನ್ನು ಕಂಡುಕೊಳ್ಳುವ ಮಾರ್ಗವಾಗಿ ಜಾತ್ಯಾತೀತತೆ ಪರಿಕಲ್ಪನೆ ಬೆಳೆದುಬಂದಿದೆ. ಸರಳವಾಗಿ ಹೇಳುವುದಾದರೆ ಧರ್ಮ ಮತ್ತು ಜಾತಿಯಂಥ  ವಿಷಯಗಳನ್ನು ಕುರಿತು ಅತ್ಯಂತ ಯತಾರ್ಥವಾಗಿ ವ್ಯವಹರಿಸುವ ಮನ:ಸ್ಥಿತಿಯ ಜಾತ್ಯಾತೀತತೆ. ಪಿ.ಎಚ್.ಲ್ಯಾಂಡಿಸ್ ಎನ್ನುವ ಚಿಂತಕರು ಈ ಜಾತ್ಯಾತೀತತೆ ಎನ್ನುವುದು ಎರಡು ಪ್ರಮುಖ ಧ್ಯೇಯಗಳನ್ನು ಆಧರಿಸಿದೆ ಎಂದಿರುವರು. ಒಂದನೆಯದಾಗಿ ಅನೇಕ ಶತಮಾನಗಳಿಂದಲೂ ನಂಬಿಕೊಂಡು ಬರಲಾಗಿದ್ದ ಅತಿಮಾನುಷ ಶಕ್ತಿಗಳ ಬಗೆಗಿನ ನಂಬುಗೆಯ ಬುಡಕ್ಕೆ ಕೈ ಹಾಕಿ ಅಲ್ಲಾಡಿಸುವುದು, ಎರಡನೆಯದಾಗಿ ಈ ಅತಿಮಾನುಷ ಶಕ್ತಿಯ ಬಗೆಗಿನ ನಂಬುಗೆಯ ಜಾಗದಲ್ಲಿ ವೈಚಾರಿಕತೆಯನ್ನು ತಂದು ನಿಲ್ಲಿಸಿರುವ ಕೆಲಸ ಅಷ್ಟೇ ಮುಖ್ಯವಾದುದು. ಅನೇಕ ಶತಮಾನಗಳಿಂದಲೂ ಧರ್ಮದ ಹೊಟ್ಟೆಯೊಳಗೆ ಬೆಚ್ಚಗೆ ಕುಳಿತು ಕಾವು ಕಂಡ ನಂಬುಗೆಗಳು, ಸಂಪ್ರದಾಯಗಳ ಬೇರುಗಳು ಸಡಿಲುಗೊಂಡು, ನಡುಕ ಉಂಟಾಗುವಲ್ಲಿ ಈ ಜಾತ್ಯಾತೀತ ಮನೋಭಾವವೇ ಕಾರಣ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾತ್ಯಾತೀತತೆ ಎನ್ನುವ ಪದ ಆಯಾ ದೇಶಗಳಲ್ಲಿ ಕೋಮುಗಲಭೆಗಳು ಘಟಿಸಿದಾಗ ಬಳಕೆಯಾಗುವ ಪದವಾಗಿ ತನ್ನ ಸಂಕುಚಿತ ಸೀಮಿತವನ್ನು ಉಳಿಸಿಕೊಂಡಿದೆ ಎನ್ನುವಂತಾಗಿದೆ.

ಜಾತ್ಯಾತೀತತೆಯ ಬಗೆಗೆ ಮಾತನಾಡುತ್ತಾ ಖ್ಯಾತ ಇತಿಹಾಸಕಾರ್ತಿ ರೋಮಿಲಾ ಥಾಪರ್ ಅವರು ’ಜಾತ್ಯಾತೀತತೆ ಎನ್ನುವುದು ಜಾತ್ಯಾತೀತವಲ್ಲದ ಘಟನೆಗಳಿಗೆ ಸಿಗಬಹುದಾದ ಪ್ರತಿಕ್ರಿಯೆಯ ಹಂತದಲ್ಲಿಯ ಒಂದು ಪದವಾಗಿ ಮಾತ್ರ ಉಳಿದಿದೆ’ ಎಂದಿರುವುದರ ಹಿಂದೆ ಆ ಪದದ ಸಸ್ತಾ ಬಳಕೆಯ ಬಗೆಗಿನ ಕಳಕಳಿ ಅಡಕವಾಗಿದೆ. ಅನೇಕ ಸಂದರ್ಭಗಳಲ್ಲಿ ಈ ಜಾತ್ಯಾತೀತತೆಯ ಪರಿಕಲ್ಪನೆಯನ್ನು ಪಾಶ್ಚಾತ್ತೀಕರಣಕ್ಕೆ ಸಂವಾದಿ ಎನ್ನುವ ಹಾಗೆ ಬಳಸುವುದೂ ಇದೆ. ಆದರೆ ಎರಡೂ ಬೇರೆ ಬೇರೆ ಕಲ್ಪನೆಗಳೇ. ಜಾತ್ಯಾತೀತತೆ ಎನ್ನುವದು ಧರ್ಮ ಮತ್ತು ಜಾತಿಯನ್ನು ಧಿಕ್ಕರಿಸುವ ಬಗ್ಗೆ ಮಾತನಾಡುವುದಲ್ಲ, ಬದಲಾಗಿ ತನ್ನಂತೆ ಪರರ ಬಗೆದೊಡೆ ಕೈಲಾಸ ಕಣ್ಣ ಮುಂದೆಯೇ ಎಂದು ಪ್ರತಿಪಾದಿಸುವ ಮನೋಭಾವ. ಹಾಗೆ ನೋಡಿದರೆ ಈ ಜಾತ್ಯಾತೀತತೆಗೆ ಒಂದು ಅಗಾಧವಾದ ಶಕ್ತಿಯಿದೆ. ಅದು ಕೇವಲ ವೇದಿಕೆಯ ಉಪಭೋಗದ ವಿಷಯವಾಗಿ, ಚರ್ಚೆ ಮತ್ತು ಸಂವಾದದ ಸರಕಾಗಿ ಉಳಿದಿರುವ ಹಿನ್ನೆಲೆಯಲ್ಲಿಯೇ ಅದರ ತಾಕತ್ತಿನ ಅರಿವು ನಮಗೆ ಸರಿಯಾಗಿ ಗ್ರಹಿಕೆಯಾಗುತ್ತಿಲ್ಲ. ಇದನ್ನು ಬಳಸಿ ಒಂದು ಸಮುದಾಯವನ್ನು ಕೇವಲ ಧಾರ್ಮಿಕ ಸಾಮರಸ್ಯದ ತಳಹದಿಯ ಮೇಲೆ ಕಟ್ಟುವ ಕೆಲಸ ಮಾತ್ರವಲ್ಲದೇ ಅದನ್ನು ಔಚಿತ್ಯಪೂರ್ಣವಾಗಿ ರೂಪಿಸುವಲ್ಲಿಯೂ ಇದು ನೆರವಾಗುತ್ತದೆ. ಅದು ಗಾಂಧೀಜಿಯವರ ರಾಮರಾಜ್ಯ, ಪ್ಲೇಟೊನ ಆದರ್ಶರಾಜ್ಯ, ಥಾಮಸ್ ಮೋರ್‍‌ನ ಯುಟೊಪಿಯಾಕ್ಕೆ ತುಂಬಾ ಹತ್ತಿರವಾದ ಸಮುದಾಯವನ್ನು ಕಟ್ಟುವಲ್ಲಿ ಈ ಜಾತ್ಯಾತೀತತೆಯ ಶಕ್ತಿ ನೆರವಾಗುತ್ತದೆ. ಈ ಪರಿಕಲ್ಪನೆಯನ್ನು ಬಳಸುವಾಗಲೆಲ್ಲಾ ನಾವು ಬಹುತೇಕವಾಗಿ ಹಿಂದು-ಮುಸ್ಲಿಂ, ಧಾರ್ಮಿಕ ಸಮೂಹಗಳನ್ನು ಮೀರಿ, ಹೊರತುಪಡಿಸಿ ಚಿಂತಿಸುವುದೇ ಇಲ್ಲ. ಜಾತ್ಯಾತೀತತೆ ಎನ್ನುವುದು ಧರ್ಮ, ಜಾತಿ, ಭಾಷೆ, ಪ್ರಾದೇಶಿಕತೆಯನ್ನು ಮೀರಿ ಅನ್ವಯ, ಅಳವಡಿಕೆಯಾಗುವ ಅವಶ್ಯಕತೆಯಿದೆ.

ಜಾತಿ ಎನ್ನುವುದು ಭಾರತೀಯ ಸಮಾಜದಲ್ಲಿ ಮತ್ತೆ ನಮ್ಮ ಬದುಕಿನ ಬೇರೆ ಬೇರೆ ಆಯಾಮಗಳ ಬಗೆಗಿನ ತೀರ್ಮಾನಗಳ ಮಧ್ಯೆ ಎಂಟ್ರಿ ಹೊಡೆಯುವ ಪರಿಣಾಮವಾಗಿ ನಾವು ಜಾತ್ಯಾತೀತತೆಯ ಪರಿಕಲ್ಪನೆಯನ್ನು ಸಂಕುಚಿತವಾದ ರೀತಿಯಲ್ಲಿ ಬಳಸುವ, ಅದರ ಆಳ ಅಗಲವನ್ನು ಕುಬ್ಜಗೊಳಿಸುವ ಕೆಲಸವನ್ನು ತಿಳಿದೂ ಮಾಡುತ್ತಿರುತ್ತೇವೆ. ಹಾಗಾದಾಗ ಜಾತ್ಯಾತೀತತೆ ಎನ್ನುವ ಪದ ಹುಳ ತಿಂದ ಕಟ್ಟಿಗೆಯಂಥಾಗುತ್ತದೆ. ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ತಳ ಊರಿದ ಈ ಕಲ್ಪನೆಯನ್ನು ವಸ್ತುನಿಷ್ಠ ಹಿನ್ನೆಲೆಯಲ್ಲಿ ಅರಿಯುವ ಅವಶ್ಯಕತೆಯಿದೆ. ಜಾತಿಯ ಸೆಳಕಿನೊಂದಿಗೆ ಜಾತ್ಯಾತೀತತೆ ಎನ್ನುವ ಪದ ಪ್ರಯೋಗ ಮಾಡುವಾತ ಆ ಪದಕ್ಕೂ ನ್ಯಾಯ ಕೊಡಲಾರ. ಅಂತೆಯೇ ತನ್ನ ಜೊತೆಗಿರುವ ಜನಸಮೂಹಕ್ಕೂ ಕೂಡಾ. ಇನ್ನು ಕೆಲ ವಿದೇಶಿ ಚಿಂತಕರು ಭಾರತೀಯ ನೆಲದಲ್ಲಿ ಜಾತ್ಯಾತೀತತೆ ಎನ್ನುವುದು ಸಾಧ್ಯವೇ ಇಲ್ಲ ಯಾಕೆಂದರೆ ಇಲ್ಲಿ ವೃತ್ತಿ ಮತ್ತು ಪ್ರವೃತ್ತಿ ಎರಡೂ ಒಂದೇ ಆಗಿಲ್ಲ ಎನ್ನುವುದಿದೆ. ಅಂದರೆ ಆಚರಣೆ ಮತ್ತು ಅನುಸರಣೆಯ ಮಧ್ಯೆ ಇಲ್ಲಿ ತುಂಬಾ ಅಂತರಗಳಿವೆ ಎಂದು ಹೇಳುವವರಿದ್ದಾರೆ.

ಆಂದ್ರೇ ಬೀತೇ ಎನ್ನುವ ಚಿಂತಕರು ಈ ಜಾತ್ಯಾತೀತತೆ ಎನ್ನುವ ಪರಿಕಲ್ಪನೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ತಾವು ತುಂಬಾ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಫ್ರಾನ್ಸ್ ಮತ್ತು ಜರ್ಮನಿಯಲ್ಲಿಯೂ ಗೊಂದಲಗಳನ್ನು ಒಳಗೊಂಡಿರುವುದಿದೆ. ಅತಿ ಮುಖ್ಯವಾಗಿ ಆಯಾ ರಾಷ್ಟ್ರೀಯ ನೆಲೆಯಲ್ಲಿ ಜಾತ್ಯಾತೀತತೆ ಎನ್ನುವುದು ಅರ್ಥೈಸುವಂತಾದರೂ ಅದರ ಮೂಲ ಆಶಯ ಮಾತ್ರ ಧರ್ಮ, ಜಾತಿ, ಜನಾಂಗ, ಭಾಷೆಗಳಿಗೆ ಸಂಬಂಧಿಸಿರುವ ಉದಾರ ಮನೋಭಾವವೇ ಆಗಿರಬೇಕೇ ಹೊರತು ಮೂಲ ಆಶಯದಿಂದ ವ್ಯತಿರಿಕ್ತವಾಗಿ ಜಾತ್ಯಾತೀತತೆಯ ವ್ಯಾಖ್ಯಾನವೇ ವಿಭಿನ್ನವಾಗುವುದು ವಿಪರ್ಯಾಸ.

ಭಾರತವನ್ನು ನಾವು ಗಣನೆಗೆ ತೆಗೆದುಕೊಂಡಾಗ ಇಲ್ಲಿರುವ ಧರ್ಮಗಳು, ಭಾಷೆಗಳು, ವೇಷ- ಭೂಷಣಗಳು, ಆಹಾರ ಪದ್ಧತಿಗಳು, ಹಬ್ಬ ಹರಿದಿನಗಳು, ಜಾತ್ರೆಗಳು ಈ ನೆಲದ ಬದುಕಿನಲ್ಲಿ ಸ್ವಾಭಾವಿಕವಾಗಿಯೇ ಜಾತ್ಯಾತೀತತೆಯ ಗುಣಗಳನ್ನು ಸಂಪೋಷಿಸಿಕೊಂಡು ಬರುವಲ್ಲಿ ಕಾರಣವಾಗಿವೆ. ಈ ಗುಣಕ್ಕೆ ಧಕ್ಕೆ ಬಂದಾಗಲೆಲ್ಲಾ ಬದುಕು ಭಯವಾಗಿ ಕಾಡುವುದಿದೆ. ಬದುಕಿನ ರಿಕ್ತತೆಯನ್ನು ಮೀರಿಯೂ ಕೂಡಿ ಬದುಕುವ ತಹತಹಿಕೆಗೆ ತೊಡಕಾಗುವ ಶಕ್ತಿಗಳನ್ನು ಸಹಿಸದಿರುವ ಗುಣ ಈ ಮಣ್ಣಿನಲ್ಲಿಯೇ ಇದೆ. ನಾವು ಅಭಿವೃದ್ಧಿ ಹೊಂದುತ್ತಿರುವ ಮಾರ್ಗಗುಂಟ ಆಧುನೀಕರಣ ಹೊಂದುವ ಹಂಬಲದವರಾದರೆ  ಆ ದಿಶೆಯಲ್ಲಿ ನೆರವಾಗುವ ಬಹುತೇಕ ಸಂಸ್ಥೆಗಳನ್ನು ಜಾತ್ಯಾತೀತ ನೆಲೆಯಲ್ಲಿಯೇ ಪ್ರತಿಷ್ಟಾಪನೆ ಮಾಡುವ ಜರೂರತ್ತಿದೆ.

ನಮ್ಮ ಮಕ್ಕಳು ನೆರೆಮನೆಯ ಹುಡುಗರೊಂದಿಗೆ ಕೂಡಿ ಆಡುವಾಗ ಅವರು ಹೀಗೆ, ಹಾಗೆ ಅದನ್ನ ತಿಂತಾರೆ ಇದನ್ನು ತಿಂತಾರೆ ಎಂದು ಮಕ್ಕಳ ಕಿವಿಯಲ್ಲಿ ಪಿಸುಗುಡುವ ಪಿಚಕಾರಿಗಳಾಗದೇ ಒಂದು ಮಗು ಇನ್ನೊಂದು ಮಗುವಿಗಿಂತಾ ಯಾವುದೇ ರೀತಿಯಲ್ಲೂ ಭಿನ್ನವಾಗಲಾರದು ಎನ್ನುವ ಉದಾರತೆಯಿಂದ ಆರಂಭವಾಗುವ ಪಾಠ, ಶಾಲೆ-ಕಾಲೇಜುಗಳು, ನಮ್ಮ ನೌಕರಶಾಹಿ ವ್ಯವಸ್ಥೆಗಳು, ವಿಶ್ವವಿದ್ಯಾಲಯಗಳನ್ನೊಳಗೊಂಡು ನಮ್ಮ ದೈನಂದಿನ ಬದುಕನ್ನು ತನ್ನಿಷ್ಟದಂತೆ ರೂಪಿಸಹೊರಟ ಸಮೂಹ ಮಾಧ್ಯಮಗಳವರೆಗೂ ಮುಂದುವರೆಯಬೇಕು. ಹೀಗೆ ಸಮಾಜದ ಎಲ್ಲ ಸ್ತರದ ಸಂಘ-ಸಂಸ್ಥೆಗಳು ಜಾತ್ಯಾತೀತತೆಯ ನೆಲೆಯಲ್ಲಿಯೇ ಮೈದಳೆದು, ಕಾರ್ಯ ನಿರ್ವಹಿಸುವಂತಾಗಬೇಕು. ’ಈ ಮುಂಚಿನ ಧಾರ್ಮಿಕ ಭಿನ್ನತೆಗಳನ್ನು ಸಾರೂಪ್ಯಗೊಳಿಸುವಲ್ಲಿಯೇ ಜಾತ್ಯಾತೀತತೆಯ ಗುಣದ ಅಗಮ್ಯ ಶಕ್ತಿ ಅಡಗಿದೆ’ ಎಂದು ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸರು ಹೇಳಿರುವುದಿದೆ. ಜಾತ್ಯಾತೀತತೆಯ ಸ್ಥಾಪನೆಯಲ್ಲಿ ಧಾರ್ಮಿಕ ಸಂಗತಿಗಳು ಸಮಾಜದಲ್ಲಿಯ ಮಿಕ್ಕ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸುವ ಬದಲಾಗಿ ಅವುಗಳ ಮುಕ್ತ, ಸ್ವಾಯತ್ತ ಕಾರ್ಯ ನಿರ್ವಹಣೆಯಲ್ಲಿ ತೊಡಕಾಗದಿರುವಂತೆ ವ್ಯವಹರಿಸುವುದು ಕೂಡಾ ಅಷ್ಟೇ ಮುಖ್ಯವಾದುದು. ಆ ಮೂಲಕ ಜಾತಿ ಧರ್ಮಗಳ ಪ್ರಭುತ್ವವನ್ನು ತಕ್ಕ ಮಟ್ಟಿಗಾದರೂ ಕಡಿಮೆ ಮಾಡಬಹುದು. ಜಾತ್ಯಾತೀತತೆ ಎನ್ನುವದು ಒಂದು ಬಲವಂತದ ಹೇರಿಕೆ ಇಲ್ಲವೇ ಕಷ್ಟದ ಆಯ್ಕೆಯಾಗದೇ ಒಂದು ಬೃಹತ್ ಸಮಷ್ಠಿಯ ಇಷ್ಟವಾಗಬೇಕು.