Daily Archives: March 20, 2012

ನಮ್ಮ ಗಣರಾಜ್ಯ ಎತ್ತ ಸಾಗಿದೆ?

-ಪ್ರೊ. ಬರಗೂರು ರಾಮಚಂದ್ರಪ್ಪ

1950 ಜನವರಿ 26 ರಂದು ಅನುಷ್ಠಾನಕ್ಕೆ ಬಂದ ನಮ್ಮ ಸಂವಿಧಾನದ ಪ್ರಕಾರ ನಮ್ಮ ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಇದು ಇಂಡಿಯಾದ ರಾಜಕೀಯ ಚರಿತ್ರೆಯಲ್ಲಿ ಒಂದು ಮುಖ್ಯ ಘಟ್ಟ; ಬ್ರಿಟಿಷರಿಂದ ಬಿಡುಗಡೆಗೊಳಿಸಲ್ಪಟ್ಟ ನಮ್ಮ ದೇಶವು ತಾಂತ್ರಿಕವಾಗಿ ಒಂದು ನಿರ್ದಿಷ್ಟ ವಿಧಿವಿಧಾನವನ್ನು ಒಪ್ಪಿಕೊಂಡ ಘಟ್ಟ. ಆದರೆ ಯಾವುದೇ ಗಣರಾಜ್ಯಕ್ಕೆ ತನ್ನ ತಾಂತ್ರಿಕ ನೆಲೆಯೊಂದೇ ಮೂಲ ಸತ್ವವಾಗುವುದಿಲ್ಲ. ಈ ತಾಂತ್ರಿಕ ನೆಲೆಯು ರಾಜಕೀಯ ಸ್ವಾತಂತ್ರ್ಯವನ್ನು ಪ್ರಕಟಿಸುವ ಒಂದು ಸಾಧನ. ಈ ಸಾಧನವನ್ನು ಬಳಸುತ್ತಲೇ ಅದನ್ನು ಮೀರಿದ ಅರ್ಥಪೂರ್ಣ ಬದಲಾವಣೆಗಳನ್ನು ತರದಿದ್ದರೆ ಆ ತಾಂತ್ರಿಕ ನೆಲೆಯು ತಾತ್ವಿಕ ನೆಲೆಯಾಗಿ ಬೇರು ಬಿಡುವುದಿಲ್ಲ.

ಈ ರಾಜಕೀಯ ಸ್ವತಂತ್ರ್ಯವು ಆರ್ಥಿಕ  ಸಾಮಾಜಿಕ ಸಮಾನತೆಯನ್ನು ತರಲು ವಿಫಲವಾದರೆ ಅನ್ಯಾಯಕ್ಕೆ ಒಳಗಾದ ಜನ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿಯಾರು ಎಂಬ ಎಚ್ಚರಿಕೆಯ ಮಾತನ್ನು ಅಂಬೇಡ್ಕರ್ ಆಡಿದಾಗ ಅದರ ಹಿನ್ನೆಲೆಯಲ್ಲಿ ಕಾಳಜಿ ಎಂದರೆ ಸಮಗ್ರ ಸಾಮಾಜಿಕ ಬದಲಾವಣೆ, ಈ ಬದಲಾವಣೆಯ ಸ್ವರೂಪ ಕುರಿತಂತೆ ಭಿನ್ನಾಭಿಪ್ರಾಯಗಳು ಇರಬಹುದಾದರೂ ಗಣರಾಜ್ಯದ ಅರ್ಥಪೂರ್ಣತೆ ಇರುವುದಂತೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವ ಪ್ರಕ್ರಿಯೆಯಲ್ಲಿ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಬೆಲೆ ತರುತ್ತ, ಅದರ ಬೇರುಗಳನ್ನು ಭದ್ರಮಾಡುತ್ತದೆ.

ಆದರೆ ನಮ್ಮ ಸಂವಿಧಾನವು ಮೂಲತಃ ತಾಂತ್ರಿಕ ನೆಲೆಯ ವ್ಯಾಪಕ ಚೌಕಟ್ಟನ್ನು ಒದಗಿಸಿದೆಯೇ ಹೊರತು, ರಾಜಕೀಯ ಸೈದ್ಧಾಂತಿಕ ಸಂಕಲ್ಪದ ಒಳಚಿತ್ರವನ್ನು ಒಳಗೊಂಡಿಲ್ಲ. ವಿಧಿ, ವಿಧಾನಗಳ ಈ ವ್ಯಾಪಕ ಸ್ವರೂಪವು ನಮ್ಮ ದೇಶದ ಆಧುನಿಕ ರಾಜಕೀಯ ಪ್ರಕ್ರಿಯೆಗೆ ಹೇರಳ ಅವಕಾಶವನ್ನು ಒದಗಿಸುವ ಉದ್ದೇಶವನ್ನೇನೋ ಹೊಂದಿದೆ. ಅನಕ್ಷರತೆ-ಅಸಮಾನತೆಗಳು ಪ್ರಧಾನ ಲಕ್ಷಣವಾದ ಸಮಾಜದಲ್ಲಿ ಈ ಸಂವಿಧಾನಾತ್ಮಕ ಚೌಕಟ್ಟನ್ನು ಜನಪರವಾದ ಸೈದ್ಧಾಂತಿಕ ಚೌಕಟ್ಟನ್ನಾಗಿಸುವ ಕ್ರಿಯೆ ಒಂದು ಪ್ರಮುಖ ಹೊಣೆಗಾರಿಕೆಯಾಗಿದ್ದು ಇತರೆ ಅಂಶಗಳೊಂದಿಗೆ ಈ ಕ್ರಿಯೆಗೂ ಮುಕ್ತ ಅವಕಾಶವನ್ನು ನಮ್ಮ ಸಂವಿಧಾನವು ಒದಗಿಸಿದೆ. ಮುಕ್ತ ಅವಕಾಶ ಕಲ್ಪನೆಯ ಹಿಂದೆ ಬಿಡುಗಡೆಯ ಭಾವನೆಯೊಂದು ಕೆಲಸ ಮಾಡುತ್ತದೆಯೆಂಬುದು ನಿಜ. ನಮ್ಮ ಸಂವಿಧಾನದ ರಚನೆ ಮತ್ತು ಸ್ವೀಕಾರದ ಸಂದರ್ಭ ಈ ಭಾವನೆಯ ಜೊತೆಗೆ ‘ಮುಕ್ತ ಬೌದ್ಧಿಕ ನೆಲೆ’ ಯನ್ನೂ ಪಡೆದಿತ್ತೆನಿಸುತ್ತದೆ.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಎದ್ದು ಕಾಣಿಸಿದ ಸಾಮಾಜಿಕ ಆರ್ಥಿಕ ಸಂಗತಿಗಳ ಕ್ರೋಢಿಕರಣ ನಡೆದು, ಅದರ ಫಲವಾಗಿ ರೂಪುಗೊಂಡ ರಾಜಕೀಯ ತಾತ್ವಿಕತೆಯ ಒಳನೋಟಗಳನ್ನು ಸಂವಿಧಾನ ಒಳಗೊಳ್ಳಲಿಲ್ಲ. ಸ್ವದೇಶಿ ಸ್ವಾವಲಂಬನೆಯ ಪ್ರಶ್ನೆ ಸಂವಿಧಾನದ ಪ್ರಶ್ನೆಯಾಗಲಿಲ್ಲ. ಆದರೆ ಅಲ್ಲೀವರೆಗಿನ ಹೋರಾಟದ ಅನುಭವವು ಎರಡು ಪ್ರಮುಖ ಸಂಗತಿಗಳನ್ನು ಸಂವಿಧಾನದ ಭಾಗವನ್ನಾಗಿಸಿತು. ಒಂದು ಈ ದೇಶದಲ್ಲಿ ಜಾತ್ಯತೀತ ನೆಲೆಯೇ ಮುಖ್ಯವೆಂದು ಪ್ರತಿಪಾದಿಸಿದ್ದು. ಈ ಮೂಲಕ ಧರ್ಮ ನಿರಪೇಕ್ಷತೆಯನ್ನು ಒಪ್ಪಿದ್ದು, ಅಸ್ಪೃಶ್ಯತೆಯ ಆಚರಣೆಯನ್ನು ವಿರೋಧಿಸುತ್ತ  ಮೀಸಲಾತಿಯ ಅವಕಾಶ ಒದಗಿಸಿದ್ದು, ಈ ಎರಡೂ ಅಂಶಗಳು ನಮ್ಮ ಸಂವಿಧಾನದ ಹಿಂದಿರುವ ರಾಜಕೀಯ ಸಂಕಲ್ಪದ ಸಂಕೇತಗಳು. ಆದರೆ ಇಂಥ ರಾಜಕೀಯ ಸಂಕಲ್ಪ ವ್ಯಾಪಕವಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ರಾಜಕಾರಣಕ್ಕಿಂತ ನ್ಯಾಯಾಂಗದ ನೆಲೆ-ನೋಟಗಳನ್ನು ಪಡೆದ ಸಂವಿಧಾನವೊಂದು ರೂಪುಗೊಂಡು ಸ್ವೀಕಾರವಾಯಿತು. ಇದರಲ್ಲಿ ಆಡಳಿತ ನಡೆಸಲಿಕ್ಕೆ ಬೇಕಾದ ತಾಂತ್ರಿಕ ಅಂಶಗಳನ್ನು ವಿವರಿಸಿಕೊಳ್ಳುವುದೇ ಪ್ರಧಾನ ಅಂಶವಾಯಿತು. ತಕರಾರುಗಳು ಎದ್ದಾಗ ಎದುರಿಸಬೇಕಾದ ವಿಧಾನಗಳನ್ನು ಒಳಗೊಳ್ಳುವ ತೀವ್ರತೆ ಕಂಡುಬಂದಿತು. ಆದ್ದರಿಂದಲೇ ನಮ್ಮ ಸಂವಿಧಾನವು ನ್ಯಾಯಾಂಗದ ನೋಟವನ್ನು ಒಳಗೊಂಡಿದೆ- ಎಂದದ್ದು.

ನಮ್ಮ ನ್ಯಾಯಕಲ್ಪನೆಯ ಮಿತಿಯನ್ನು ನಿರ್ದೇಶಿಸಲು ಉತ್ತಮ ಉದಾಹರಣೆಯೆಂದರೆ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆ, ನ್ಯಾಯಾಂಗವೇ ಎಲ್ಲವನ್ನೂ ಒದಗಿಸಲು ಸಾಧ್ಯವೆಂಬ ಭರವಸೆಯ ವಾತಾವರಣ ಇದ್ದ ಪಕ್ಷದಲ್ಲಿ  ‘ಸಾಮಾಜಿಕ ನ್ಯಾಯ’ ವೆಂಬ ವಿಚಾರವೇ ಹುಟ್ಟುತ್ತಿರಲಿಲ್ಲ. ಈ ವಿಚಾರದ ವ್ಯಾಪಕತೆಯು ನಮ್ಮ ಸಂವಿಧಾನದ ಇತಿಮಿತಿಗಳ ಮೇಲೂ ಬೆಳಕು ಚೆಲ್ಲುತ್ತದೆ, ನಿರ್ದಿಷ್ಟ ರಾಜಕೀಯ ನೆಲೆಯ ಅಭಾವವನ್ನು ಎತ್ತಿ ತೋರಿಸುತ್ತದೆ. ಸಂವಿಧಾನದಲ್ಲಿ ಕೆಲಸ ಮಾಡಿರುವ ಮೂಲಭೂತ ಹಕ್ಕುಗಳು ಮತ್ತು ಸೂಚಿಸಿರುವ ನಿರ್ದೇಶಕ ತತ್ವಗಳು ರಾಜಕೀಯ ನೆಲೆಯನ್ನು ಹೊಂದಿವೆಯೆಂಬುದು ನಿಜ. ಆದರೆ ಈ ಅಂಶಗಳು ಮುಕ್ತ ಸಮಾಜದ ಕಲ್ಪನೆಯ ಹಿನ್ನೆಲೆ ಪಡೆದಿರುವುದರಿಂದ ಸಮಾಜದ ಸಕಲ ವರ್ಗಗಳಿಗೂ ಮುಕ್ತ ಅವಕಾಶವನ್ನು ಒದಗಿಸುತ್ತವೆ. ಈ ಅವಕಾಶವನ್ನು ಬಳಸಿಕೊಂಡು ಜನಪರ ಹೋರಾಟಗಳ ಮೂಲಕ ನಿರ್ದಿಷ್ಟ ರಾಜಕೀಯ ಶೈಲಿಯನ್ನು ರೂಪಿಸುವ ಹೊಣೆ ಜನತೆಯ ಮೇಲೆ ಇದೆ. ಇಷ್ಟರಮಟ್ಟಿಗೆ ಇದು ಪ್ರಜಾಸತ್ತಾತ್ಮಕವಾದದ್ದು. ಈ ಪ್ರಜಾಸತ್ತಾತ್ಮಕ ತಾಂತ್ರಿಕ ನೆಲೆಯ ಉಪಯೋಗದಿಂದ ರಾಜಕೀಯ ತಾತ್ವಿಕತೆಯನ್ನು ಬೆಳೆಸುವ ಕ್ರಿಯೆಗೆ ಒಂದು ಅವಕಾಶ ಒದಗಿದೆ. ಅದೇ ಸಂದರ್ಭದಲ್ಲಿ ಈ ಕ್ರಿಯೆಗೆ ವಿರುದ್ಧವಾಗಿ ಕೆಲಸ ಮಾಡುವ ಶಕ್ತಿಗಳಿಗೂ ಅವಕಾಶವಿದೆ. ಸರ್ವರಿಗೂ ಸಮಾನ ಅವಕಾಶ ಒದಗಿಸುವ ನಮ್ಮ ಸಂವಿಧಾನದ ಆಶಯಕ್ಕೆ (14ನೇ ವಿಧಿ) ಮಿತಿಯೊದಗುವುದು ಇಂಥ ಸಂದರ್ಭದಲ್ಲೇ ಕೆಲವು ಸಾಮಾಜಿಕ- ಆರ್ಥಿಕ  ಸಂಗತಿಗಳ ಪ್ರಸ್ತಾಪವಿದ್ದರೂ ಸ್ವಾತಂತ್ರ್ಯ ಚಳವಳಿಯು ಪ್ರಧಾನವಾಗಿ ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಒತ್ತಾಸೆ ಹೊಂದಿದ್ದು ಅಧಿಕಾರದ ಹಸ್ತಾಂತರವನ್ನು ಬಯಸಿದ್ದರಿಂದ, ರಾಜಕೀಯ ಕ್ರಾಂತಿಯಿಂದ ನಿರೀಕ್ಷಿಸುವ ಸಂವಿಧಾನ ಶೈಲಿಯನ್ನು ಇಲ್ಲಿ ಅಪೇಕ್ಷಿಸುವುದು ಸರಿಯಾಗಲಾರದು. ಈ ಅರಿವನ್ನು ಇಟ್ಟುಕೊಂಡೇ ವಸ್ತುಸ್ಥಿತಿಯನ್ನು ವಿಶ್ಲೇಷಿಸತೊಡಗಿದಾಗ ನಮ್ಮ ಗಣರಾಜ್ಯದ ಕಲ್ಪನೆಯ ಹಿಂದೆ ಮುಕ್ತ ಸಮಾಜದ ಶೈಲಿಯೊಂದು ಕಂಡು ಬರುತ್ತದೆ. ‘ಮುಕ್ತ ಸಮಾಜ’ ಎನ್ನುವುದು  ಬೂರ್ಜ್ವಾ  ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆಯ ಲಕ್ಷಣಗಳನ್ನು ಹರ್ಬರ್ಟ್  ಅಪ್ತೇಕರ್ ಎಂಬ ರಾಜಕೀಯ ವಿಜ್ಞಾನಿಯು ಸೊಗಸಾಗಿ ಕ್ರೋಢೀಕರಿಸಿದ್ದಾರೆ. ((The nature of Democarcy, Freedom and Revoluton ಎಂಬ ಗ್ರಂಥದಲ್ಲಿ)

(1)  ಬೂರ್ಜ್ವಾ ಸ್ವಾತಂತ್ರ್ಯವೆಂದರೆ ಮುಕ್ತವ್ಯಾಪಾರಕ್ಕೆ ಅವಕಾಶ.

(2) ಆರ್ಥಿಕ  ಚಟುವಟಿಕೆಯಲ್ಲಿ ಬಂಡವಾಳಶಾಹಿಯ ತೊಡಗುವಿಕೆ ಒಂದು ಸಾಮಾನ್ಯ ಸ್ವಾಭಾವಿಕ ಕ್ರಿಯೆ.

(3) ಇಂಥ ಕ್ರಿಯೆಗೆ ಸರ್ಕಾರಿ ನಿಯಂತ್ರಣ ಸಲ್ಲದೆಂಬ ಭಾವನೆ.

(4) ಆದರೆ ಸರ್ಕಾರದ ಮೇಲೆ ಬಂಡವಾಳಶಾಹಿಯ ನಿಯಂತ್ರಣ.

(5) ಸ್ವಾತಂತ್ರ್ಯ ಎನ್ನುವುದು ರಾಜಕೀಯ ವಿಧಿವಿಧಾನಕ್ಕೆ ಸಂಬಂಧಿಸಿದ್ದು; ಆರ್ಥಿಕತೆಗಲ್ಲ.

(6) ಆರ್ಥಿಕ  ಅಸಮಾನತೆ ಎನ್ನುವುದು ಸ್ವಾತಂತ್ರ್ಯದ ಒಂದು ಸಹಜ ಪರಿಣಾಮ; ಅದರ ಅಸ್ತಿತ್ವ ಸ್ವಾಭಾವಿಕ.

ಹೀಗೆ ಪಟ್ಟಿ ಮಾಡುವ ಹರ್ಬರ್ಟ್ ಅಪ್ತೇಕರ್ ಮತ್ತೊಂದು ಮುಖ್ಯ ಮಾತನ್ನು ಹೇಳುತ್ತಾನೆ, ಬೂರ್ಜ್ವಾ ದೃಷ್ಟಿಕೋನವು ರಾಜಕೀಯವನ್ನು ಉಳ್ಳವರ ನಡುವಿನ ಹೋರಾಟವನ್ನಾಗಿ ನೋಡುತ್ತದೆಯೇ ಹೊರತು ಉಳ್ಳವರು ಮತ್ತು ಬಡವರ ನಡುವಿನ ಹೋರಾಟವನ್ನಾಗಿ ನೋಡುವುದಿಲ್ಲ-ಇದು ಆತನ ಮಾತು. ಮುಕ್ತ ಸಮಾಜ ಮತ್ತು ಅದರ ಪ್ರತಿಪಾದನೆ ಮಾಡುವ ರಾಜಕೀಯ ನೆಲೆಯ ಬಗ್ಗೆ ಇದೊಂದು ಗಮನಾರ್ಹ ವ್ಯಾಖ್ಯಾನ. ನಮ್ಮ ದೇಶವೂ ಇಂಥ ಸ್ಥಿತಿಯಲ್ಲೇ ಗಣರಾಜ್ಯವಾಗಿ ವಿವಿಧ ತಿರುವುಗಳಿಂದ ಹೊಸ ನಲೆಯ ಹುಡುಕಾಟದಲ್ಲಿ ತೊಡಗಿರುವುದರಿಂದ, ಬೂರ್ಜ್ವಾ ಸ್ವಾತಂತ್ರ್ಯದ ಗುಣಲಕ್ಷಣಗಳನ್ನು ಗಮನಿಸುವುದು ಉಪಯುಕ್ತವಾಬಹುದು.

ಮುಕ್ತದ್ವಾರದ ದನಿಯೆತ್ತಿದ ನಮ್ಮ ಗಣರಾಜ್ಯ ತನ್ನ ಆರ್ಥಿಕ ನೀತಿಯಲ್ಲೇ ತನ್ನೆಲ್ಲವನ್ನೂ ಪ್ರಕಟಿಸಿಕೊಂಡಿದೆ. ಸ್ಥೂಲವಾಗಿ ಹೇಳುವುದಾದರೆ ಇಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸೆಕ್ಟರ್ಗಳೆರಡೂ ಇಲ್ಲಿ ಚಲಾವಣೆಯಲ್ಲಿವೆ. ಖಾಸಗಿ ಒಡೆತನದಲ್ಲಿ ಉತ್ತಮ ಸೇವೆ ಸಿಗುತ್ತದೆಯೆಂಬ ಭಾವನೆ ನಮ್ಮ ಗಣರಾಜ್ಯದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಉಳಿದ ವಿಚಾರಗಳೇನೇ ಇರಲಿ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ 1969 ರಲ್ಲಿ ಕಾಂಗ್ರೆಸ್ ಒಡೆದ ನಂತರದ ವರ್ಷಗಳಲ್ಲಿ, ಖಾಸಗಿ ಒಡೆತನಕ್ಕೆ ಪೆಟ್ಟು ಕೊಡುವ ಪ್ರಬಲ ಪ್ರಕ್ರಿಯೆ ಪ್ರಾರಂಭವಾಯಿತು. ರಾಜಧನ ರದ್ದು, ಬ್ಯಾಂಕ್ ರಾಷ್ಟ್ರೀಕರಣದಂಥ ನಿರ್ಧಾರಗಳು ತಲ್ಲಣ ಉಂಟು ಮಾಡಿದವು. ವಾಸ್ತವವಾಗಿ ಇವು ಅತ್ಯಂತ ಪ್ರಗತಿಪರ ನಿರ್ಧಾರಗಳು. ಇಲ್ಲಿ ತಲ್ಲಣಕ್ಕೆ ಒಳಗಾದವರು ಉಳ್ಳವರೆ ಹೊರತು ಬಡವರಲ್ಲ, ಬ್ಯಾಂಕ್ ರಾಷ್ಟ್ರೀಕರಣದ ಕೆಲಕಾಲದಲ್ಲೇ ‘ಬ್ಯಾಂಕು’ ಗಳ ಸೇವೆ ಸರಿಯಿಲ್ಲ ಎಂಬ ಕೂಗು ಎದ್ದಿತು, ಸರ್ಕಾರಿ ನೌಕರರ ಕೆಲಸಗಳ್ಳತನವು ಗಮನಾರ್ಹ ಪ್ರಮಾಣದಲ್ಲಿ ಇರಬಹುದಾದರೂ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಎದ್ದ ಈ ಕೂಗು ಖಾಸಗಿ ಒಡೆತನದ ನೆಲೆಯಿಂದ ಹೊರಟಿದ್ದು ಎಂಬುದನ್ನು ಮರೆಯಬಾರದು. ತಮ್ಮ ಹಿಡಿತ ತಪ್ಪಿದ್ದರಿಂದಲೇ ಸಣ್ಣಪುಟ್ಟ ತಪ್ಪುಗಳನ್ನೂ ದೊಡ್ಡದು ಮಾಡಿ ಪ್ರಚಾರ ಮಾಡಲಾಯಿತು.

ಇಷ್ಟಕ್ಕೂ ಈ ‘ಸೇವೆ’ ಎಂಬ ಪರಿಕಲ್ಪನೆಯೇ ಗಣರಾಜ್ಯಕ್ಕೆ ಅವಮಾನಕರವಾದುದು. ಬ್ಯಾಂಕ್ ರಾಷ್ಟ್ರೀಕರಣವಾದ ಮೇಲೆ ಒಳ್ಳೆಯ ಕೆಲಸ ನಡೆಯುತ್ತಿಲ್ಲ ಎಂದು ಹೇಳುವುದಕ್ಕೆ ಅವಕಾಶವಾಗದೆ ಒಳ್ಳೆಯ ಸೇವೆ ಸಲ್ಲುತ್ತಿಲ್ಲ ಎಂದು ಆರೋಪಿಸಿದ್ದು ಎಂಥ ಮಾನಸಿಕ ನೆಲೆಯಿಂದ ಎಂಬುದನ್ನು ಯೋಚಿಸಿ ಪ್ರಾಚೀನ ರಾಜಶಾಹಿ ಪ್ರೇರಿತ ಆಧುನಿಕ ಪಾಳ್ಳೇಗಾರಿ ಮತ್ತು ಬಂಡವಾಳಶಾಹಿ ಮನಸ್ಸುಗಳು ಅನ್ಯರಿಂದ ಸದಾ ಸೇವೆಯನ್ನು ಬಯಸುತ್ತವೆ. ಬಾಗಿಲಲ್ಲೇ ಬಾಗಿದ ಬೆನ್ನು ಮತ್ತು ಮಂದಹಾಸದ ಮುಖಗಳನ್ನು ನಿರೀಕ್ಷಿಸುತ್ತವೆ. ಆಗುವ ‘ಕೆಲಸ’ಕ್ಕಿಂತ ಮಾಡುವ ಸೇವೆ ಇವರಿಗೆ ಮುಖ್ಯ. ಗಣರಾಜ್ಯವೊಂದರಲ್ಲಿ ನೌಕರನು ನಿಷ್ಠೆಯಿಂದ ತನ್ನ ಕೆಲಸ ಮಾಡಬೇಕು, ಸೇವೆ ಮಾಡಬೇಕಾಗಿಲ್ಲ, ಜನರು ಆತನಿಂದ ಕೆಲಸವನ್ನು ನಿರೀಕ್ಷಿಸಬೇಕು. ಸೇವೆಯನ್ನಲ್ಲ ಆದರೆ ನಾವಿಂದು ಕೆಲಸ ಮತ್ತು ಸೇವೆ ಎರಡನ್ನೂ ಒಂದೇ ರೀತಿಯಲ್ಲಿ ನೋಡುತ್ತಿದ್ದೇವೆ. ಒಂದೇ ರೀತಿಯಲ್ಲಿ ನೋಡುವಂತೆ ನಮ್ಮ ಮಾನಸಿಕ ನೆಲೆಯನ್ನು ನಿರ್ಮಿಸಲಾಗಿದೆ. ಕೆಲಸವನ್ನೇ ಸೇವೆಯೆಂದು ಕರೆಯುವ ದೃಷ್ಟಿ ಒಂದು ಕಡೆಗಿದ್ದರೆ, ‘ಸೇವೆ’ ಸಲ್ಲಿಸಬೇಕೆಂದು ಒತ್ತಾಯಿಸುವ ಅಪೇಕ್ಷೆ ಖಾಸಗಿ ಒಡೆತನದ ಮನಸ್ಥಿತಿಯಿಂದ ಬರುತ್ತಿದೆ; ಇದು ರಾಜಶಾಹಿ ಮತ್ತು ಪಾಳ್ಳೇಗಾರಿ ಪ್ರವೃತ್ತಿಯ ಅಪೇಕ್ಷೆ. ಈಗ ಆಧುನಿಕ ಮಾದರಿಗಳ ಮುಖಾಂತರ ‘ಸೇವೆ’ಯು ಬಂಡವಾಳಶಾಹಿ ಮುಖ ಹೊತ್ತುಕೊಂಡು ಬಂದಿದೆ. ಅಂದರೆ ನಮಗೆ ಪ್ರಜಾಪ್ರಭುತ್ವದ ಪರಿಭಾಷೆಯೊಂದು ಇನ್ನೂ ಖಚಿತವಾಗಿ ರೂಪುಗೊಳ್ಳುತ್ತಿಲ್ಲ. ಆದ್ದರಿಂದಲೇ ‘ಕೆಲಸ’ವನ್ನು ‘ಸೇವೆ’ ಎನ್ನುತ್ತೇವೆ. ಖಚಿತ ಪ್ರಜಾಸತ್ತಾತ್ಮಕ ಪರಿಭಾಷೆ ರೂಪುಗೊಂಡಿಲ್ಲ ಮತ್ತು ಬಳಕೆಯಲ್ಲಿಲ್ಲ ಎಂಬುದರ ಅರ್ಥ ನಾವಿನ್ನು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಿಲ್ಲ ಎಂಬುದೇ ಆಗಿದೆ. ಹಳೆಯ ರಾಜ್ಯವ್ಯವಸ್ಥೆಯ ಪಳೆಯುಳಿಕೆಗಳನ್ನುಳ್ಳ ‘ಪಾಳೆಗಾರಿ ಪ್ರಜಾಪ್ರಭುತ್ವ’ ನಮ್ಮಲ್ಲಿದೆ. ಈ ಪಾಳ್ಳೇಗಾರಿ ಪ್ರಜಾಪ್ರಭುತ್ವದ (Feudal Democracy ) ಮನಸ್ಸು ಅನ್ಯರಿಂದ ‘ಸೇವೆ’ಯನ್ನು ಬಯಸುತ್ತದೆ. ಸೇವೆ ಮಾಡುವ ಮತ್ತು ಸೇವೆ ಮಾಡಿಸಿಕೊಳ್ಳುವ ವರ್ಗ ವಿಭಜನೆಯನ್ನು ಉಳಿಸಿಕೊಳ್ಳಲು ಅಪೇಕ್ಷಿಸುತ್ತದೆ.

ನಮ್ಮ ಗಣರಾಜ್ಯದಲ್ಲಿ ಪ್ರಾಚೀನ ರಾಜ್ಯವ್ಯವಸ್ಥೆಯ ಪಾಳ್ಳೇಗಾರಿ ಪ್ರವೃತ್ತಿಯು ಆಧುನಿಕ ರಾಜಕೀಯ ಮುಖದ ಮೂಲಕವೂ ಉಳಿದುಕೊಂಡು ಬರುತ್ತಿರುವುದಕ್ಕೆ ವ್ಯಕ್ತಿ ಪ್ರಧಾನ ರಾಜಕೀಯ ಒಂದು ಉತ್ತಮ ಉದಾಹರಣೆ. ಆಧುನಿಕ ರಾಜಕಾರಣದ ಪ್ರಮುಖ ಬೆಳವಣಿಗೆ ಎಂದರೆ ರಾಜಕೀಯ ಪಕ್ಷಗಳ ಉದಯ. ಇದನ್ನು ರಾಜಕೀಯ ವಿಜ್ಞಾನಿ ಸಾಮ್ಯುಯಲ್ ಹಂಟಿಂಗ್ಟನ್ ಹೀಗೆ ಹೇಳುತ್ತಾನೆ, ರಾಜಕೀಯ ಆಧುನಿಕೀಕರಣ ಮೂಲಭೂತ ಅಂಶವೆಂದರೆ ಹಳ್ಳಿ ಪಟ್ಟಣಗಳನ್ನೂ ದಾಟಿ ವಿವಿಧ ಸಾಮಾಜಿಕ ಗುಂಪುಗಳು ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಆದದ್ದು. ಇದರಿಂದ ರಾಜಕೀಯ ಪಕ್ಷಗಳಂಥ ರಾಜಕೀಯ ಸಂಸ್ಥೆಗಳು ಬೆಳೆದು ಈ ಪಾಲ್ಗೊಳ್ಳುವಿಕೆಯನ್ನು ಸಂಘಟಿಸುವಂತಾಯಿತು. ಹೀಗೆ ರಾಜಕೀಯ ಆಧುನಿಕೀಕರಣದಿಂದ ರಾಜಕೀಯ ಪಕ್ಷಗಳು ಬೆಳೆದು ಬಂದದ್ದಲ್ಲದೆ ಇನ್ನೊಂದು ಮುಖ್ಯ ಸಂಗತಿಯು ರಾಜಕೀಯ ವ್ಯಾಪ್ತಿಗೆ ಬಂತು. ಹಂಟಿಂಗ್ಟನ್ ಹೇಳುವಂತೆ ಎಲ್ಲ ಸಾಮಾಜಿಕ ಗುಂಪುಗಳು-ಅಂದರೆ, ಹಳೆಯ, ಹೊಸ, ಸಾಂಪ್ರದಾಯಿಕ, ಆಧುನಿಕ-ಎಲ್ಲವೂ ಸಮೂಹಗಳಾಗಿ ಜಾಗೃತಗೊಂಡು ಇನ್ನೊಂದು ಸಮೂಹಕ್ಕೆ ಸಂಬಂಧಿಸಿದಂತೆ ತಂತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತವೆ.

ಇಂಥ ಸಂದರ್ಭದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಬಲಶಾಲಿಯಾದ ಸಮೂಹ ಸಹಜವಾಗಿಯೇ ತನ್ನ ಹಿತಾಸಕ್ತಿಯನ್ನು ಸಮರ್ಥವಾಗಿ ರಕ್ಷಿಸಿಕೊಳ್ಳುತ್ತದೆ. ನಮ್ಮ ಗಣರಾಜ್ಯದಲ್ಲಿ ಸರ್ಕಾರವನ್ನು ನಿಯಂತ್ರಿಸುವ ಶಕ್ತಿಯನ್ನು ಪಡೆಯುತ್ತದೆ. ಇದು ಪ್ರಜಾಪ್ರಭುತ್ವದ ಶಕ್ತಿಯನ್ನು ಕುಗ್ಗಿಸುತ್ತದೆಯಾದರೂ ಆ ದಿಕ್ಕಿನತ್ತ ಒತ್ತು ಬೀಳದಂತೆ ಎಚ್ಚರವಹಿಸಲಾಗುತ್ತದೆ. ಹೀಗಾಗಿ ಎಲ್ಲವೂ ‘ಪ್ರಜಾಪ್ರಭುತ್ವದ ಅನಿವಾರ್ಯ’ಗಳೆಂದು ಒಪ್ಪಿಕೊಳ್ಳುವ ವಾತಾವರಣ ನಿರ್ಮಿತವಾಗುತ್ತದೆ. ಪಾಳೆಗಾರಿ ವ್ಯಕ್ತಿ ಪ್ರಾಧಾನ್ಯತೆ ಎದ್ದು ಕಾಣುತ್ತದೆಯಾದರೂ ಇದನ್ನೂ ಸ್ವಾಭಾವಿಕ ಅನಿವಾರ್ಯವೆಂಬಂತೆ ಪ್ರಚುರಪಡಿಸಲಾಗುತ್ತದೆ. ಹೀಗಾಗಿ ನಮ್ಮ ಗಣರಾಜ್ಯದಲ್ಲಿ ರಾಜಕೀಯ ಪಕ್ಷಗಳು ಸೈದ್ಧಾಂತಿಕೆಯನ್ನು ರೂಪಿಸಿ, ರೂಢಿಸಿಕೊಳ್ಳುವ ಕ್ರಿಯೆಗಿಂತ ಹೀರೋಗಳನ್ನು ರೂಪಿಸಿ ವಿಜೃಂಭಿಸುವ ಕೆಲಸಕ್ಕೆ ಶಾಮೀಲಾಗುತ್ತದೆ. ರಾಜಶಾಹಿ, ಪಾಳ್ಳೇಗಾರಿ ಪದ್ಧತಿಗಳ ಹಿನ್ನೆಲೆಯುಳ್ಳ ನಮ್ಮ ಮನಸ್ಸು ಅದರಿಂದ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಹೊಂದಲು ಸಾಧ್ಯವಾಗಿಲ್ಲ. ಆಧುನಿಕ ಬೆಳವಣಿಗೆಯಿಂದ ನಮ್ಮ ಸಮಾಜದ  ಆರ್ಥಿಕ ಸಂಬಂಧಗಳು ಸ್ವಪ ಬದಲಾಗಿದ್ದರೂ ಖಾಸಗಿ ಒಡೆತನ ಮತ್ತು ನಿಯಂತ್ರಣಗಳು ಬಲವಾಗಿಯೇ ಇವೆ. ಸಂವಿಧಾನದ ಆಸ್ತಿಯ ಹಕ್ಕು ಉಳ್ಳವರಿಗೆ ‘ವರ’ವಾಗಿ ಪರಿಣಮಿಸಿದೆ. ಆಸ್ತಿವಂತರು ದೇಶದ ಉತ್ಪಾದನೆಯ ಮೇಲೆ ಹಿಡಿತ ಸಾಧಿಸಿ ಸಾಮಾಜಿಕ ಆರ್ಥಿಕ  ವ್ಯವಸ್ಥೆಯನ್ನು ತಮ್ಮ ಪರವಾಗಿ ಒಗ್ಗಿಸಿಕೊಳ್ಳುತ್ತಾರೆ.

ಖಾಸಗಿ ಒಡೆತನ ಎನ್ನುವುದು ವ್ಯಕ್ತಿ ಪ್ರಧಾನ ನೆಲೆಯನ್ನು ಒಳಗೊಂಡ ಪರಿಕಲ್ಪನೆ. ಆದ್ದರಿಂದ ಇಂದಿನ ನಮ್ಮ ಗಣರಾಜ್ಯದಲ್ಲಿ ಖಾಸಗಿ ಆಸ್ತಿಯ ವಿಸ್ತರಣೆ, ವ್ಯಕ್ತಿಪ್ರಧಾನ ರಾಜಕಾರಣ-ಎರಡೂ ವಿಜೃಂಭಿಸುತ್ತಿವೆ. ವಿವಿಧ ಮಾಧ್ಯಮಗಳು ಪ್ರಜಾಪ್ರಭುತ್ವದ ಹೆಸರಿನಲ್ಲೇ ಇಂಥ ಪ್ರವೃತ್ತಿಯನ್ನು ಪೋಷಿಸುತ್ತಿವೆ. ಇದು ಎಷ್ಟರಮಟ್ಟಿಗೆ ನಡೆಯುತ್ತಿದೆಯೆಂದರೆ ಮಧ್ಯಪಂಥೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವೆನ್ನುವುದು ಉಳಿದಿಲ್ಲ; ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಆಯ್ಕೆಯಲ್ಲಿ ಕಾಂಗ್ರೆಸ್ಸಾಗಲೀ ಜನತಾದಳವಾಗಲಿ ರಹಸ್ಯ ಮತದಾನವನ್ನು ಅನುಸರಿಸುತ್ತಿಲ್ಲ. ರಹಸ್ಯ ಮತದಾನದ ಕ್ರಮಕ್ಕೆ ಒತ್ತಾಯಿಸುವವರು ಮತ್ತು ವ್ಯಕ್ತಿ ಪ್ರಾಧಾನ್ಯತೆಯನ್ನು ಖಂಡಿಸುವವರು (ಈ ಎರಡೂ ಪಕ್ಷಗಳಲ್ಲಿ ಮತ್ತು ಮಾಧ್ಯಮಗಳಲ್ಲಿ) ಖಳನಾಯಕರಾಗಿ ಬಿಡುತ್ತಾರೆ! ಇಷ್ಟಾದರೂ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ! ಪ್ರಜಾಪ್ರಭುತ್ವದ ತಾತ್ವಿಕತೆ ಹಾಗಿರಲಿ, ತಾಂತ್ರಿಕತೆಯನ್ನೂ ಪೂರೈಸಲಾಗದೆ ‘ಸರ್ವಾನುಮತ’ದ ಸೋಗಿನಲ್ಲಿ ಸೊರಗಿ ಹೋಗುತ್ತಿರುವ ಇಂಥ ರಾಜಕೀಯ ಪಕ್ಷಗಳು ಸೈದ್ಧಾಂತಿಕ ನೋಟಗಳನ್ನು ತಮ್ಮ ಕೇಂದ್ರ ಪ್ರಜ್ಞೆಯಾಗಿಸಿಕೊಳ್ಳುವ ಮಾತು ದೂರವೇ ಉಳಿದಿದೆ. ಸೈದ್ಧಾಂತಿಕತೆಯ ಕೇಂದ್ರಪ್ರಜ್ಞೆಯುಳ್ಳ ಪಕ್ಷಗಳಲ್ಲಿ ಎಡಪಂಥೀಯತೆ ಕಂಡಕೂಡಲೇ ಕೆಂಡವಾಗುವ ಕಣ್ಣುಗಳು ನಮ್ಮಲ್ಲಿವೆ; ಎಡಪಂಥೀಯತೆಯೋ ಬಲಪಂಥೀಯತೆಯೋ ಒಟ್ಟಿನಲ್ಲಿ ಒಂದು ಸೈದ್ಧಾಂತಿಕ ಸಂಘರ್ಷದ ನೆಲೆಯನ್ನಾದರೂ ಕಾಣಬೇಕೆಂಬ ಹಂಬಲ ನಮ್ಮ ಅನೇಕ ಬುದ್ಧಿವಂತರಿಗೆ ಇಲ್ಲ; ನಮ್ಮ ಮಾಧ್ಯಮಗಳಿಗೂ ಸೈದ್ಧಾಂತಿಕತೆಯಲ್ಲಿ ರೋಚಕತೆ’ ಕಾಣುವುದಿಲ್ಲ ತಾತ್ವಿಕತೆಯೆನ್ನುವುದೇ ಶುಷ್ಕವಾಗಿ ಕಾಣುವ ಮನಸ್ಥಿತಿಯೊಂದು ನಿರ್ಮಾಣವಾಗುತ್ತಿರುವುದು ನಿಜಕ್ಕೂ ಅನಾರೋಗ್ಯಕರವಾದುದು. ಇಂಥ ಅನಾರೋಗ್ಯಕರ ಮನಸ್ಸಿನ ಹಿಂದೆ ಯಥಾಪ್ರಕಾರ ನಮ್ಮ ಸಾಮಾಜಿಕ-ಆರ್ಥಿಕ  ನೆಲೆಗಳ ಸಾಂಪ್ರದಾಯಿಕ ಸೆಳೆತವಿರುತ್ತದೆ. ವ್ಯಕ್ತಿವೈಭವೀಕರಣಕ್ಕೆ ಒತ್ತೆಯಾಳಾಗುವ ಮನಸ್ಸು ಮತ್ತು ಮೆದುಳುಗಳು ಪ್ರಜಾಸತ್ತಾತ್ಮಕ ಮೌಲ್ಯದ ಮಾತನ್ನೇ ಬಾಯಿಪಾಠ ಒಪ್ಪಿಸುವುದು ಎಂಥ ವಿಪರ್ಯಾಸ!

ನಿಜ, ಯಾವುದೇ ಪಕ್ಷಕ್ಕೆ ನಾಯಕತ್ವ ಬೇಕು. ಆದರೆ ಪಕ್ಷದಿಂದ ನಾಯಕತ್ವವೂ ನಾಯಕತ್ವದಿಂದ ಪಕ್ಷವೂ ಎನ್ನುವುದು ಇಲ್ಲಿನ ಪ್ರಶ್ನೆ ಪಕ್ಷದ ಸೈದ್ಧಾಂತಿಕ ಪ್ರತಿನಿಧಿಯಾಗಿ ನಾಯಕನಿರಬೇಕೇ ಹೊರತು ನಾಯಕನೇ ಸರ್ವಸ್ವವಾಗಿ ಆತನಿಂದಲೇ ಪಕ್ಷ-ಎಂಬಂಥ ಸ್ಥಿತಿ ನಿರ್ಮಾಣ ವಾಗುವುದು ಅಪಾಯಕರ.

ನಮ್ಮ ಗಣರಾಜ್ಯದಲ್ಲಾದ ಇನ್ನೊಂದು ಅನಾರೋಗ್ಯಕರ ಬೆಳವಣಿಗೆಯೆಂದರೆ ಪಕ್ಷಕ್ಕಿಂತ  ಸರ್ಕಾರವೇ ಮುಕ್ಯವಾಗುವುದು. ನಿರ್ದಿಷ್ಟ ಪಕ್ಷವೊಂದು ಬಹುಮತ ಪಡೆದು  ಸರ್ಕಾರವನ್ನು ರಚಿಸಿದಾಗ ಪಕ್ಷದ ನಿರ್ದೇಶನಕ್ಕನುಗುಣವಾಗಿ ಕಾರ್ಯನಿರ್ವಹಿಸುವ ಹೊಣೆ  ಸರ್ಕಾರ ದ್ದಾಗಿರುತ್ತದೆ. ಯಾಕೆಂದರೆ ಜನರು ಪಕ್ಷವನ್ನು ಆಯ್ಕೆಮಾಡಿರುತ್ತಾರೆ. ಆದರೆ  ಸರ್ಕಾರದ ರಚನೆಯಾದ ಕೂಡಲೆ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯು ತನ್ನ ಪಕ್ಷದ ಪ್ರತಿ ವಹಿವಾಟಿನ ಮೇಲೂ ನಿಯಂತ್ರಣ ಸಾಧಿಸಿ ಬಿಡುತ್ತಾನೆ. ಪಕ್ಷದ ಅಧ್ಯಕ್ಷ ಮತ್ತಿತರ ಪದಾಧಿಕಾರಿಗಳಿಗೆ ತಾಂತ್ರಿಕ ಅಸ್ತಿತ್ವ ಮಾತ್ರ ಇರುತ್ತದೆ. ಅಧಿಕಾರಕೇಂದ್ರಿತ ರಾಜಕೀಯದ ಅಪಾಯಕಾರಿ ಮುಖಕ್ಕೆ ಇನ್ನೊಂದು ಉದಾಹರಣೆ, ಅಷ್ಟೇ ಅಲ್ಲ, ಪಾಳ್ಳೇಗಾರಿ ಪ್ರಜಾಪ್ರಭುತ್ವಕ್ಕೆ ಉದಾಹರಣೆಯೂ ಹೌದು. ಚುನಾವಣೆ ಮುಂತಾದ ತಾಂತ್ರಿಕ ಅಂಶಗಳನ್ನು ಪೂರೈಸುವುದರಿಂದ ಪ್ರಜಾಪ್ರಭುತ್ವವಾಗಿಯೂ, ಸಾಮಾಜಿಕ-ಆರ್ಥಿಕ ನೆಲೆ ಮತ್ತು ಅಧಿಕಾರ ಕೇಂದ್ರಿತ ರಾಜಕೀಯದಿಂದ ಪಾಳ್ಳೇಗಾರಿ ಸ್ವರೂಪದ್ದಾಗಿಯೂ, ಇರುವ ಈ ಗಣರಾಜ್ಯದಲ್ಲಿ, ಮೂಲಭೂತ ಸಮಸ್ಯೆಗಳು ಗೌಣವಾಗಿ, ಮೇ ತೊಡಕುಗಳೇ ಸವಾಲುಗಳೆಂಬಂತೆ ಪ್ರತಿಪಾದಿತವಾಗುತ್ತವೆ. ಈ ನನ್ನ ಮಾತಿಗೆ ಉದಾಹರಣೆಯಾಗಿ ಕೆಲವು ವಿರೋಧ ಪಕ್ಷಗಳು ‘ವಂಶಾಡಳಿತ ವಿರೋಧ’ವನ್ನು ದೊಡ್ಡಸವಾಲೆಂಬಂತೆ ಪ್ರತಿಪಾದಿಸಿದ್ದನ್ನು ಗಮನಿಸಬಹುದು. ಜವಹರಲಾಲ್ ನೆಹರೂ ಅವರ ಹಿನ್ನೆಲೆ ಇದ್ದುದರಿಂದ ಇಂದಿರಾಗಾಂಧಿಯವರಿಗೆ, ಇಂದಿರಾಗಾಂಧಿಯವರಿಂದ ರಾಜೀವ್ ಗಾಂಧೀಯವರಿಗೆ ವಿಶೇಷ ರಾಜಕೀಯ ಸೌಲಭ್ಯ, ಸವಲತ್ತು ಮತ್ತು ಅಧಿಕಾರಗಳು ಲಭ್ಯವಾದವು ನಿಜ.

ಆದರೆ ಇವರು ಇಂಥವರ ಮಕ್ಕಳು ಎಂಬ ಕಾರಣಕ್ಕಾಗಿಯೇ ರಾಜಕೀಯ ಅಧಿಕಾರ ಪಡೆಯಬಾರದೆಂದು ಹೇಳುವಂತಿಲ್ಲ. ಸೂಕ್ತ ವಿಧಾನದಲ್ಲಿ ರಾಜಕೀಯ ಅಧಿಕಾರ ಪಡೆಯಬೇಕೆಂದು ನಾವು ಪ್ರತಿಪಾದಿಸಬಹುದಷ್ಟೆ. ಇಂಥವರಿಗೆ ವಂಶದ ಹಿನ್ನೆಲೆಯಿರುವುದರಿಂದಲೇ ವಿಶೇಷಾಧಿಕಾರ ಲಭ್ಯವಾಗುತ್ತಿದೆಯೆಂದು ಹೇಳುವಾಗಲೂ ನಾವು ತಾಂತ್ರಿಕ ಪ್ರಶ್ನೆಗಳಿಂದ ಇಕ್ಕಟ್ಟಿಗೆ ಸಿಕ್ಕಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಂಶಾಡಳಿತ ವಿರೋಧ ಎನ್ನುವುದು ಒಂದು ನೈತಿಕ ಪ್ರಶ್ನೆಯಾಗುತ್ತದೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿ ನಾಯಕತ್ವದ ವಿಷಯವನ್ನು ನಾವು ನೋಡುವುದೇ ಹೆಚ್ಚು ಸೂಕ್ತವಾದುದು. ಆ ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತು ಕೆಲವು ಆಸಕ್ತರ ಆಕಾಂಕ್ಷೆಗಳ ಫಲವಾಗಿ ಒಂದೇ ವಂಶಕ್ಕೆ ಸೇರಿದ ನಾಯಕರು ಅನಿವಾರ್ಯವಾಗಿದ್ದರೆ ಅದನ್ನೇ ಇತರೆ ಪಕ್ಷಗಳು ದೊಡ್ಡ ಸವಾಲೆಂದು ಭಾವಿಸಬೇಕಾಗಿಲ್ಲ. ವಂಶಾಡಳಿತ ವಿರೋಧ ಮಾಡುವುದೇ ಮುಖ್ಯವಾಗುವುದು, ಮೂಲಭೂತ ಭಿನ್ನ ನೆಲೆಗಳು ಇಲ್ಲದ ಸಂದರ್ಭದಲ್ಲಿ ಮಾತ್ರ ಎನ್ನುವುದು ನನಗಿಲ್ಲಿ ಮುಖ್ಯ. ಕಾಂಗ್ರೆಸ್, ಜನತಾದಳ (ಪಕ್ಷ)-ಇಂಥ ಮಧ್ಯ ಪಂಥೀಯ ಪಕ್ಷಗಳ ರಾಜಕೀಯ ನೆಲೆ-ನಿಲುವುಗಳು ಮೂಲಭೂತವಾಗಿ ಬೇರೆಬೇರೆಯಾಗಿಲ್ಲ. ಮೇಲ್ಮೈ ಲಕ್ಷಣದಲ್ಲಿ ಭಿನ್ನತೆ ಕಾಣಿಸಬಹುದಾದರೂ ಉಳಿದಂತೆ ಒಡೆದು ಕಾಣುವ ವ್ಯತ್ಯಾಸವೇನೂ ಇಲ್ಲ. ಕಂಡು ಬರುವ ಒಂದೇ ವ್ಯತ್ಯಾಸವೆಂದರೆ ಕಾಂಗ್ರೆಸ್ನಲ್ಲಿ ಒಂದೇ ವಂಶದವರಿಗೆ ನಾಯಕತ್ವ ಸಿಗುತ್ತಾ ಬಂದದ್ದು ಸರಿ, ಅದೇ ಇತರರಿಗೆ ದೊಡ್ಡ ಸವಾಲು ಎಂಬಂತಾಯಿತು. ವಾಸ್ತವವಾಗಿ ನಿಜವಾದ ಸವಾಲೆಂದರೆ ಈ ಗಣರಾಜ್ಯದ ಸಾಮಾಜಿಕ, ಆರ್ಥಿಕ  ಬದಲಾವಣೆ ಮತ್ತು ಈ ಮೂಲಕ ಸಮಾನತೆಯ ಸಮಾಜದ ನಿರ್ಮಾಣ , ಆದರೆ ಇತರೆ ಮಧ್ಯಪಂಥೀಯ ಪಕ್ಷಗಳಿಗೆ ಈ ಹಿನ್ನೆಲೆಯ ಚಿಂತನೆಯಾಗಲೀ, ಕಾರ್ಯಕ್ರಮವಾಗಲಿ ದೃಢವಾಗಿ ಇಲ್ಲವಾದ ಕಾರಣ ಅಧಿಕಾರ ಗಳಿಸಲು ಅಡ್ಡವಾಗಿ ಕಂಡ ಇಂದಿರಾಗಾಂಧಿ ರಾಜೀವ್ಗಾಂಧಿಯವರು ಒಂದು ವಂಶದ ವ್ಯಕ್ತಿಗಳಾಗಿ ಸವಾಲೆಂಬಂತಾದರು. ಇಂದಿರಾಗಾಂಧಿಯವರು ಇದ್ದುದರಲ್ಲಿ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತ ಅಧಿಕಾರದಲ್ಲುಳಿಯಲು ಪ್ರಯತ್ನಿಸಿದ್ದರಿಂದ ಆ ಕಾರ್ಯಕ್ರಮಗಳನ್ನು ವಿರೋಧಿಸುವುದು ಮತ್ತು ಪರ್ಯಾಯ ಕಾರ್ಯಕ್ರಮ ಕೊಡುವುದು ಕಷ್ಟವಾಗಿ ಈ ಪಕ್ಷಗಳು ವಂಶಾಡಳಿತವಿರೋಧಕ್ಕೆ ಗಂಟುಬಿದ್ದವು. ಪಾಳ್ಳೇಗಾರಿ ಪ್ರಭುತ್ವಕ್ಕೆ ಸೇವೆ ಸಲ್ಲಿಸಿದ ಪಂಪರೆಯುಳ್ಳ ನಮ್ಮ ದೇಶದ ಜನತೆಗೆ ವಂಶಾಡಳಿತ ಎನ್ನುವುದು ಒಂದು ತೊಡಕಾಗಿ ಕಾಣಿಸಲಿಲ್ಲ, ಸಾಮಾನ್ಯ ಜನತೆಗೆ ಬದುಕಿನ ಬವಣೆಯೇ ಪ್ರಮುಖ ಸವಾಲಾಗಿದೆಯಾದ್ದರಿಂದ ತಮಗಾದ ಅಲ್ಪಸ್ವಲ್ಪ ಅನುಕೂಲಕ್ಕಾಗಿ ಅವರು ವ್ಯಕ್ತಿ ಆರಾಧನೆಯಲ್ಲಿ ತೊಡಗಿದರು. ಇಂಥ ಪ್ರವೃತ್ತಿಯನ್ನು ವಿರೋಧಿಸಿದ ಕೆಲ ಬುದ್ಧಿವಂತರು ಮತ್ತು ಮಾಧ್ಯಮಗಳು ಸಹ ವಿರೋಧಪಕ್ಷಗಳ ನೆಲೆಯಲ್ಲಿ ವ್ಯಕ್ತಿ ಆರಾಧನೆಗೆ ತೊಡಗಿದ್ದು ಒಂದು ವಿರೋಧಾಭಾಸವೇ ಸರಿ! ಒಟ್ಟಿನಲ್ಲಿ ಬಹುಪಾಲು ಅಕ್ಷರಸ್ತರು ಮತ್ತು ಅನಕ್ಷರಸ್ತರಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಗಾಧ ಅಂತರವೇನೂ ಕಾಣುತ್ತಿಲ್ಲ. ಅನಕ್ಷರಸ್ತರು ಪ್ರಜಾಪ್ರಭುತ್ವವನ್ನು ಕುರಿತು ಮಾತೇ ಆಡುವುದಿಲ್ಲ. ಅಕ್ಷರಸ್ತರು ಪ್ರಜಾಪ್ರಭುತ್ವದ ಮಾತಾಡುತ್ತಲೇ ಅದಕ್ಕೆ ವಿರುದ್ಧ ನೆಲೆಯಲ್ಲಿ ಕೆಲಸ ಮಾಡುವುದು ನಿಂತಿಲ್ಲ. ಅಂದರೆ ನಮ್ಮಲ್ಲಿ ಬಲವಾದ ಸಾಮಾಜಿಕ  ಆರ್ಥಿಕ  ಬದಲಾವಣೆಯಾಗದೆ, ಈ ಮೂಲಕ ಸಮಾನತೆಯತ್ತ ಸಾಗುವ ಹೆಜ್ಜೆ ಗಟ್ಟಿಯಾಗದೆ, ಈ ದ್ವಂದ್ವಗಳು ನೀಗುವುದಿಲ್ಲ; ಪ್ರಜಾಪ್ರಭುತ್ವದ ಮೂಲ ಆಶಯ ಅನುಷ್ಠಾನಗೊಳ್ಳುವುದಿಲ್ಲ. ಇಲ್ಲಿಯವರೆಗೆ ಈ ದಿಕ್ಕಿನಲ್ಲಿ ನಡೆದ ಕೆಲಸ ಹೇಳಿಕೊಳ್ಳುವಂತಿಲ್ಲ.

ನಮ್ಮ ಗಣರಾಜ್ಯದ ಸಾಮಾಜಿಕ  ಆರ್ಥಿಕ ಸ್ಥಿತಿಗತಿಗಳು ಮೇಲಿನ ಮಾತುಗಳಿಗೆ ಪುಷ್ಟಿ ಕೊಡುತ್ತವೆ. ನಮ್ಮಲ್ಲಿ ಪ್ರಗತಿಯೇ ಆಗಿಲ್ಲವೆಂದರೆ ಅದು ಹಸಿ ಸುಳ್ಳಾಗುತ್ತದೆ. ಆದರೆ ಈ ಪ್ರಗತಿಯು ಅಧಿಕಾರದ ಒಂದು ಯಾಂತ್ರಿಕ ಪ್ರಕ್ರಿಯೆಯಾಗಿ ನಡೆಯಿತೇ ಹೊರತು ನಿರ್ದಿಷ್ಟ, ದೃಢ ರಾಜಕೀಯ ಕಾರ್ಯಕ್ರಮವಾಗಿ ನಡೆಯಲಿಲ್ಲ. ಉಳಿದಂತೆ ಏನೇ ಭಿನ್ನಾಭಿಪ್ರಾಯವಿರಲಿ ಪ್ರಗತಿಯ ತೀವ್ರತೆ ಎರಡು ಸಂದರ್ಭದಲ್ಲಿ ಉಂಟಾಗಿದೆ ಎನ್ನಿಸುತ್ತದೆ. ಒಂದು ನೆಹರು ಅವರ ಔದ್ಯಮೀಕರಣದ ಕ್ರಿಯೆ; ಎರಡು-ಇಂದಿರಾಗಾಂಧಿಯವರು ‘ಗರೀಬಿ ಹಠಾವೊ’ ಘೋಷಣೆಯ ಹಿಂದೆಯೇ ಹಾಕಿಕೊಂಡ ಪ್ರಗತಿಪರ ಕಾರ್ಯಕ್ರಮಗಳು. ಈ ಎರಡೂ ಸಂದರ್ಭಗಳು ಕೆಟ್ಟದ್ದನ್ನೂ ಕೊಡುವುದರ ಜೊತೆಗೆ ನಮ್ಮ ಕನಸುಗಳು ಬತ್ತದಂತೆಯೂ ನೋಡಿಕೊಂಡಿವೆ. ಒಂದು ಕಡೆ ಔದ್ಯಮೀಕರಣದ ಅತಿರೇಕ ಕಂಡು ಬಂತು. ಇನ್ನೊಂದು ಕಡೆ ಪ್ರಗತಿಪರ ಕಾರ್ಯಕ್ರಮಗಳು ಅಧಿಕಾರದಲ್ಲಿ ಉಳಿಯುವ ತಂತ್ರಗಳಾದವು. ಇಷ್ಟಾದರೂ ಈ ಎರಡೂ ಕಾಲಘಟ್ಟದಲ್ಲಿ ನಮ್ಮ ದೇಶದ ಅನೇಕರ ಆಸೆ, ಆಕಾಂಕ್ಷೆಗಳಿಗೆ, ಬದುಕಬಹುದೆಂಬ ಭರವಸೆಗೆ, ಕನಸಿನ  ಸ್ಪರ್ಶ ಸಿಕ್ಕಿತು. ಆದ್ದರಿಂದಲೇ ತುರ್ತುಪರಿಸ್ಥಿತಿ ಹೇರಿದರೂ ಬುದ್ಧಿಜೀವಿಗಳು ಅದನ್ನು ವಿರೋಧಿಸಿದರೂ ಇಂದಿರಾ ಗಾಂಧಿ ಜನಸಾಮಾನ್ಯರ ಪ್ರೀತಿ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಳ್ಳಲಿಲ್ಲ. ಇಷ್ಟಾಗಿಯೂ ನಮ್ಮ ದೇಶದ ಸ್ಥಿತಿ ಆಶಾದಾಯಕವಾಗಿಲ್ಲ; ಸಾಮಾಜಿಕ- ಆರ್ಥಿಕ ಅಸಮಾನತೆಯ ಅಂತರ ಕಡಿಮೆಯಾಗಿಲ್ಲ, ಬದಲಾಗಿ ಬಂಡವಾಳಗಾರರ ಸಂಪತ್ತು ಬೆಳೆಯುತ್ತಲೇ ಇದೆ. ರಾಜಕೀಯ ಆಧುನಿಕತೆಯಿಂದ ಹಳ್ಳಿಗಳ ಪಾಳ್ಳೇಗಾರಿ ಭೂಮಾಲೀಕ ವರ್ಗವು ಅಧಿಕಾರಗಳಿಸುವುದಕ್ಕಾಗಿ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತಿರುವಂತೆ, ಆಧುನಿಕ ಬಂಡವಾಳಗಾರರು ಔದ್ಯಮೀಕರಣದ ಲಾಭ ಪಡೆಯುತ್ತಿದ್ದಾರೆ. ಸಾಂಕೇತಿಕವಾಗಿ ಉದಾಹರಿಸುವುದಾದರೆ-ಬಿರ್ಲಾ ಅವರ ಬಂಡವಾಳ 1950ರಲ್ಲಿ 150 ಕೋಟಿಗಳಿದ್ದದ್ದು 1966 ರಲ್ಲಿ 456 ಕೋಟಿಯಾಗಿ, 1976 ರಲ್ಲಿ 1056 ಕೋಟಿಯಾಗಿ 1984 ರ ವೇಳೆಗೆ 2400 ಕೋಟಿ ರೂಪಾಯಿಗಳಾಗಿತ್ತು. ನಮ್ಮ ಕೇಂದ್ರ ಸರ್ಕಾರದ ಬಜೆಟ್ನ ಖೋತಾ ಲೆಕ್ಕವು ಮೇಲ್ಕಂಡ ಇಸವಿಗಳ ಕ್ರಮದಲ್ಲಿ 532 ಕೋಟಿ, 948 ಕೋಟಿ, 1133 ಕೋಟಿ ಮತ್ತು 2060 ಕೋಟಿಯಷ್ಟಾಗಿತ್ತು. ಈಗ ಇನ್ನೂ ಹೆಚ್ಚಾಗಿದೆ. ಬಂಡವಾಳಗಾರರ ಬಂಡವಾಳವೂ ಹೆಚ್ಚಾಗಿದೆ. ಇವರ ಬಂಡವಾಳ ಹೆಚ್ಚಾಗುತ್ತಿದ್ದರೆ ಸರ್ಕಾರದ ಸಂಪನ್ಮೂಲ ಖೋತಾ ಆಗುತ್ತಿದೆ! ಜೊತೆಗೆ ಒಂದು ಅಂದಾಜಿನ ಪ್ರಕಾರ ನಮ್ಮ ಗಣರಾಜ್ಯದಲ್ಲಿ ಈಗ 40,000 ಕೋಟಿ ರೂಪಾಯಿಗಳಷ್ಟು ಕಪ್ಪು ಹಣವಿದೆ. ಇಷ್ಟಾಗಿಯೂ ನಮ್ಮದು ಬಡದೇಶ; ಬಡತನಕ್ಕೆ ಬರವಿಲ್ಲದ ದೇಶ!

ಇನ್ನು ಗ್ರಾಮೀಣ ಭಾರತಕ್ಕೆ ಬಂದರೆ ಸರ್ಕಾರಿ ಲೆಕ್ಕದ ಪ್ರಕಾರವೇ ನಮ್ಮ ದೇಶದಲ್ಲಿ-ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ – 22 ಲಕ್ಷ ಜನ ಜೀತಗಾರರಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಒಂದು ಲಕ್ಷ ತೊಂಬತ್ತು ಸಾವಿರ. ಈ ದೇಶದಲ್ಲಿ 1981 ರಲ್ಲಿ 571 ಜನ ದಲಿತರ ಕೊಲೆಯಾದರೆ 1982 ರಲ್ಲಿ 633 ಮತ್ತು 1983 ರಲ್ಲಿ 683 ದಲಿತರ ಮೇಲೆ ದಲಿತರ ಕೊಲೆಯಾಗಿದೆ. 1988 ರ ಅಂಕಿ ಅಂಶದ ಪ್ರಕಾರ, ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಅತಿಯಾಗಿದ್ದು, ಆ ರಾಜ್ಯ ಪ್ರಥಮ ಸ್ಥಾನ ಪಡೆದಿದೆ! ಒಟ್ಟಿನಲ್ಲಿ ಸಾಮಾಜಿಕ-ಆರ್ಥಿಕ  ಹಲ್ಲೆಗಳು ಅತಿಯಾಗುತ್ತ ಹೋದದ್ದು ನಮ್ಮ ರಾಷ್ಟ್ರದ ರಾಜಕೀಯ ಪಕ್ಷಗಳ ದೌರ್ಬಲ್ಯ, ಅಧಿಕಾರ ಆಕರ್ಷಿತ  ರಾಜಕೀಯದಲ್ಲಿ ಮಾತ್ರ ಆಸಕ್ತರಾದ ವ್ಯಕ್ತಿ ಮತ್ತು ಪಕ್ಷಗಳಿಗೆ ನೈಜ ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರ ಮಾರ್ಗಾನ್ವೇಷಣೆಯ ಪ್ರಕ್ರಿಯೆ ಪ್ರಮುಖವಾಗದೆ, ಕೆಲವು ಅಮುಖ್ಯ ಸಂಗತಿಗಳು ರಾಜಕೀಯ ಪ್ರಶ್ನೆಗಳಾಗಿ ಕಾಣಿಸಿದ್ದು ನಮ್ಮ ರಾಜಕಾರಣದ ಮಿತಿ ಮಧ್ಯಪಂಥೀಯ ರಾಜಕಾರಣದ ಪಟ್ಟು, ಪ್ರತಿಪಟ್ಟುಗಳು ಮತ್ತು ತಂತ್ರ ಕುತಂತ್ರಗಳು ನಮ್ಮ ನಡುವಿನ ಸಾಹಸಗಳೆಂಬಂತೆ ವೈಭವೀಕೃತಗೊಳ್ಳುತ್ತಿರುವುದು ನಿಜಕ್ಕೂ ಅವಮಾನದ ಸಂಗತಿ. ಇವೆಲ್ಲ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುವುದಂತೂ ಅವಮಾನ ಮಾತ್ರವಲ್ಲ, ಅಪರಾಧ.

ಇಲ್ಲಿ ಬರ್ನಾಡ್ ಶಾ  ಅವರು ಹೇಳಿದ ಮಾತು ಮುಖ್ಯವೆನಿಸುತ್ತದೆ- ಪ್ರಜಾಪ್ರಭುತ್ವವು ಬಿಸಿಗಾಳಿ ತುಂಬಿದ ಒಂದು ಬೆಲೂನು. ಜನರು, ತಮ್ಮ ಜೇಬುಗಳ್ಳತನವಾಗುತ್ತಿರುವುದನ್ನೂ ಲೆಕ್ಕಿಸದೆ, ಮೇಲೆ ಹಾರಾಡುವ ಈ ಬೆಲೂನನ್ನು ನೋಡುತ್ತಿರುತ್ತಾರೆ-ಈ ಮಾತುಗಳು ಪ್ರಜಾಪ್ರಭುತ್ವ ಉಂಟುಮಾಡಬಹುದಾದ ಮೈಮರೆವು ಮತ್ತು ಭ್ರಷ್ಟತೆಯ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ನಾವು ಪ್ರಜಾಪ್ರಭುತ್ವದಿಂದ ಪುಳಕಿತರಾಗುತ್ತಲೇ ಸದಾ ಜಾಗೃತರಾಗಿರಬೇಕಾದ ಅಗತ್ಯವನ್ನು ಬರ್ನಾಡ್ ಶಾ ತನ್ನದೇ ರೀತಿಯಲ್ಲಿ ಹೇಳಿದ್ದಾರೆ. ಜನರ ಅಜಾಗರೂಕತೆಯು ರಾಜಕೀಯ ದುರುಪಯೋಗ ಮತ್ತು ಭ್ರಷ್ಟತೆಯ ದಾರಿಯನ್ನು ಸುಗಮಗೊಳಿಸುತ್ತದೆ. ಸಮೂಹ ಚಳವಳಿಗಳು ಹೆಚ್ಚಾಗಿಲ್ಲದಿದ್ದರೆ ದುರುಪಯೋಗದ ಪ್ರಮಾಣ ಮತ್ತಷ್ಟು ಏರುತ್ತದೆ. ನಮ್ಮ ದೇಶದಲ್ಲಿ ಜನಪರವಾದ ಸಮೂಹ ಚಳವಳಿಗಳು ಎಲ್ಲಾ ಕಡೆ ವ್ಯಾಪಿಸಿಲ್ಲವಾದ್ದರಿಂದ ರಾಜಕೀಯವೂ ಒಂದು ‘ವ್ಯವಹಾರ’ ಮಾತ್ರವಾಗದೆ. ವ್ಯಾವಹಾರಿಕ ನೆಲೆಗೆ ಒತ್ತು ಬಿದ್ದಿದೆ. ಭ್ರಷ್ಟಾಚಾರ, ಪ್ರತ್ಯೇಕವಾದ ಮತ್ತು ಕೋಮುವಾದಗಳು ನಮ್ಮ ಗಣರಾಜ್ಯದ ಇವತ್ತಿನ ಪ್ರಮುಖ ಸಮಸ್ಯೆಗಳಾಗಿ ಕಣಿಸುತ್ತಿದೆ..

ಭ್ರಷ್ಟಾಚಾರವೆಂದರೆ ಭಯ ಬೀಳಬೇಕಾದ ಮನಸ್ಥಿತಿ ಇಂದು ಮಾಯವಾಗುತ್ತಿದ್ದು ಅದೊಂದು ಸ್ವಾಭಾವಿಕ ಕ್ರಿಯೆಯಾಗುತ್ತಿದೆ. ನಮ್ಮ ಗಣರಾಜ್ಯದ ಅತ್ಯಂತ ಅನಾರೋಗ್ಯಕರ ಬೆಳವಣಿಗೆಯಿದು. ಸ್ವಾರ್ಥ, ಲಾಭಕೋರತನ, ಲಂಚಾದಿಗಳೇ ಜೀವನವಿಧಾನವಾಗುತ್ತಿರುವ ಸಮಾಜ, ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಆತಂಕಕಾರಿಯಾಗುತ್ತದೆ. ಲಂಚ ತೆಗೆದುಕೊಂಡರೂ ಪರವಾಗಿಲ್ಲ ಕೆಲಸವಾದರೆ ಸಾಕೆಂದು ಜನರು ಅಪೇಕ್ಷಿಸುವ ಹಂತ ತಲುಪಿರುವುದು ನಮ್ಮ ಸಾಮಾಜಿಕ ಬದುಕಿನ ದೊಡ್ಡ ಕಳಂಕ. ಈ ಕಳಂಕಕ್ಕೆ ಕಾರಣವಾದ ರಾಜಕೀಯ ಪುಢಾರೀಕರಣ ಮತ್ತು ಪದ್ಧತಿಗಳು ಬದಲಾಗುವಂತೆ ನಮ್ಮ ಕಣ್ತುಂಬ ಹೊಸ ಸಮಾಜದ ಕನಸು ತುಂಬಬೇಕಾಗಿದೆ. ಆದರೆ ಕನಸಿಗೆ ಕಿಚ್ಚಿಟ್ಟು ಕುರುಡಾಗಿಸುವ ಕ್ರೌರ್ಯ ನಮ್ಮ ವ್ಯವಸ್ಥೆಯ ಒಳಸೇರಿಕೊಂಡಿದೆ. ಭ್ರಷ್ಟಾಚಾರ ಎನ್ನುವುದು ಕೇವಲ ನೈತಿಕ ಪ್ರಶ್ನೆಯಲ್ಲ. ಅದೊಂದು ರಾಜಕೀಯ ಪ್ರಶ್ನೆ. ಭ್ರಷ್ಟಾಚಾರ ಬಲವಾಗುತ್ತ ಸರ್ವಾಧಿಕಾರ, ಚಿಗುರತೊಡಗುತ್ತದೆ. ಯಾಕೆಂದರೆ, ಭ್ರಷ್ಟಾಚಾರಿಯಾದ ಅಧಿಕಾರಸ್ಥ ರಾಜಕಾರಣಿಗಳು ಅದು ಬಯಲಾಗುತ್ತ ಹೋದಂತೆ ಬಿಗಿಯಾಗತೊಡಗುತ್ತಾರೆ. ತಮ್ಮ ರಕ್ಷಣೆಗಾಗಿ ಅಧಿಕಾರದ ಸೂತ್ರಗಳನ್ನು ಬಳಸಿಕೊಳ್ಳುತ್ತಾರೆ. ಸಾಧ್ಯವಾದಷ್ಟು ರಾಜಕೀಯ ಶಕ್ತಿಯನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳಬಯಸುತ್ತಾರೆ. ಆಗ ಪ್ರಜಾಪ್ರಭುತ್ವದ ತಾಂತ್ರಿಕ ಅಂಶಗಳು ಅಸ್ತಿತ್ವದಲ್ಲಿದ್ದರೂ ಅಂತಃ ಸತ್ವವು ಸರ್ವಾಧಿಕಾರಿ ಧೋರಣೆಯನ್ನು ಒಳಗೊಳ್ಳುತ್ತದೆ. ಇದರಿಂದ ರಾಜಕೀಯ ಅಧಿಕಾರಸ್ಥರ ಭ್ರಷ್ಟಾಚಾರವು ಸರ್ವಾಧಿಕಾರೀ ಹೆಜ್ಜೆಗೆ ಒತ್ತಾಸೆಯಾಗುವ ಅಪಾಯವಿದೆ.

ಭ್ರಷ್ಟಾಚಾರದ ಇನ್ನೊಂದು ಅಪಾಯವೆಂದರೆ ‘ಅಭಿನಯ ಚತುರತೆ’, ಭ್ರಷ್ಟಾಚಾರಿಯಾದವನು ತನ್ನನ್ನು ಹಾಗೆಂದು ಕರೆದುಕೊಳ್ಳಲು ಸಾಧ್ಯವಿಲ್ಲದ್ದರಿಂದ ಸದಾ ಸತ್ಯನ್ಯಾಯಗಳ ಮಾತೇ ಆಡುತ್ತಾನೆ; ಅದರಂತೆ ಅಭಿನಯಿಸುತ್ತಾನೆ. ಇನ್ನು ಜನರಿಗೆ ಈತ ಭ್ರಷ್ಟಚಾರಿಯೆಂದು ಗೊತ್ತಿದ್ದರೂ ಆತನ ಬಳಿ ಕೆಲಸಕ್ಕೆ ಅಲೆಯಬೇಕಾಗಿ ಬಂದಾಗ ಇಲ್ಲದ ನಗುವನ್ನು ಬರಿಸಿಕೊಳ್ಳುತ್ತಾರೆ; ಸಲ್ಲದ ಗೌರವ ಕೊಡುತ್ತಾರೆ; ಅಸಹಾಯಕತೆಯಿಂದ ಆಕ್ರೋಶವನ್ನು ಅದುಮಿಟ್ಟುಕೊಳ್ಳುತ್ತಾರೆ. ಬರಬರುತ್ತ ಭ್ರಷ್ಟಾಚಾರವನ್ನು ಒಪ್ಪಿಕೊಂಡು ಒಗ್ಗಿಕೊಳ್ಳುವ ಮನಃಸ್ಥಿತಿ ತಲುಪುತ್ತಾರೆ. ಒಟ್ಟಾರೆ ಆಪ್ರಮಾಣಿಕತೆ ಆವರಿಸಿಕೊಳ್ಳುತ್ತದೆ. ಆಗ ಇವರ ನಗು ನಿಜವಾದ ನಗುವಾಗಿರುವುದಿಲ್ಲ; ಆಳು ಅಂತರಂಗದ ಒತ್ತಾಸೆಯಿಂದ ಬರುವುದಿಲ್ಲ; ಆಕ್ರೋಶ, ಆಳದ ನೋವಿನಿಂದ ಹುಟ್ಟುವುದಿಲ್ಲ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ಅಭಿನಯ ಚತುರತೆಗೆ ಇಂಥ ಅಂತರ್ ಸಂಬಂಧವಿದೆ.

ಅಪ್ರಾಮಾಣಿಕತೆಯುಳ್ಳವರ ಇನ್ನೊಂದು ನಡವಳಿಕೆಯೆಂದರೆ ಅನ್ಯರ ಮೇಲೆ ಅಸಂಬದ್ಧ ಆರೋಪ ಹೊರಿಸುವ ಚಾಳಿ. ತನ್ನ ಅಪ್ರಾಮಾಣಿಕತೆ ಮತ್ತು ಅಭಿನಯ ಚತುರತೆಗಳು ಅನಾವರಣಗೊಳ್ಳುತ್ತ ಹೋದಂತೆ ಗಟ್ಟಿವ್ಯಕ್ತಿಗಳಿಗೆ ಮಸಿ ಬಳಿಯುವ ವಿಷ ಮನಸಿನ ಮೂಲಕ ಖುಷಿ ಪಡುವ ವಿಕೃತ ಪ್ರವೃತ್ತಿ ಬೆಳೆಯುತ್ತದೆ. ಅಕ್ಷರಸ್ಥ ಅಪ್ರಾಮಾಣಿಕರಲ್ಲಿ ಈ ಅಂಶ ಹೆಚ್ಚು ಕಾಣಿಸಿಕೊಳ್ಳುತ್ತದೆ. ಅನಕ್ಷರಸ್ಥರಲ್ಲಿ ಇನ್ನು ಮುಗ್ಧ ಭಾವನೆಗಳು ಉಳಿದಿದ್ದು ನೇರ ನಡೆ ನುಡಿ ಕಾಣಿಸಲು ಸಾಧ್ಯ. ಆದರೆ ಬುದ್ಧಿವಂತ ಅಪ್ರಾಮಾಣಿಕರು ತಾವೂ ಕೆಡುವುದಲ್ಲದೆ ಅನ್ಯರ ಹೆಸರನ್ನು ಕೆಡಿಸುತ್ತಾ ಸಾಮಾಜಿಕ ಪರಿಸರಕ್ಕೆ ತಮ್ಮ ಅಂತರಂಗದ ಕೊಳಕನ್ನು ಧಾರೆಯೆರೆಯುತ್ತಾರೆ. ಒಂದು ಕಡೆ ರಾಜಕೀಯ ಭ್ರಷ್ಟತೆ, ಇನ್ನೊಂದು ಕಡೆ ಇಂಥ ಮಾನಸಿಕ ಭ್ರಷ್ಟತೆ-ಎರಡೂ ಸೇರಿ ಪ್ರಜಾಸತ್ತಾತ್ಮಕ ಪರಿಸರದ ಅಂತಃಸತ್ವವನ್ನು ಹಾಳು ಮಾಡುತ್ತಿವೆ. ರಾಜಕೀಯ ಭ್ರಷ್ಟಾಚಾರಿಗಳಂತೆ  ‘ಅಂತರಂಗ ಅತ್ಯಾಚಾರಿ’ ಗಳೂ ಅತ್ಯಂತ ಅಪಾಯಕಾರಿಗಳಾಗಿದ್ದರೆ.

ಇದರಿಂದ ನಮ್ಮ ಶಿಕ್ಷಣವು ಕಲಿಕೆಯನ್ನು ಮೀರಿ ಮಾನವೀಯ ಅಂಶಗಳನ್ನು ಎಷ್ಟರಮಟ್ಟಿಗೆ ಕಲಿಸಿದೆ ಎಂಬ ಪ್ರಶ್ನೆಯೇಳುತ್ತದೆ. ಸಾರ್ವಜನಿಕ ಶಿಕ್ಷಣದ ಒತ್ತಾಸೆಯಲ್ಲಿ ನಮ್ಮ ದೇಶದ ಹೆಚ್ಚು ಜನ ವಿದ್ಯಾವಂತರಾಗುತ್ತಿರುವುದು, ಸಮಾಜದ ವಿವಿಧ ನೆಲೆಗಳಿಂದ ಶಿಕ್ಷಿತರು ಹೆಚ್ಚಾಗುತ್ತಿರುವುದು ಗಣರಾಜ್ಯಕ್ಕೆ ಗೌರವ ತರುವ ಸಂಗತಿ. ಆದರೆ ಇದೇ ಸಂದರ್ಭದಲ್ಲಿ ನಡೆಯುತ್ತಿರುವ ಅಕ್ಷರ ದುರುಪಯೋಗ ಮತ್ತು ಅಕ್ಷರ ವ್ಯಕ್ತಿತ್ವದ ಪೊಳ್ಳುತನಗಳನ್ನು ನಾವು ಗಮನಿಸಬೇಕು. ಅನೇಕರಲ್ಲಿ ವಿದ್ಯೆ, ವಿನಯ ತರುವ ಬದಲು ವಿಕೃತಿಗಳನ್ನು ತರುತ್ತಿದೆ. ಅಕ್ಷರದ ಅಹಂಕಾರ ಹೆಚ್ಚುತ್ತಿದೆ. ಇದರಿಂದ ಕೆಲವರಾದರೂ ಅಕ್ಷರ ವ್ಯಭಿಚಾರದಲ್ಲಿ ತೊಡಗುತ್ತಾರೆ. ಅಕ್ಷರದ ಮೂಲಕ ಆತಂಕ ಹುಟ್ಟಿಸಿ ಭಯೋತ್ಪಾದಕರಾಗುವವರೂ ಇದ್ದಾರೆ. ಇಂಥವರೆಲ್ಲ ತಮಗೆ ತಾವು ಸ್ವಯಂಸಿದ್ಧರೆಂಬ ಭ್ರಮೆಯಲ್ಲಿ ಆತ್ಮವಂಚನೆ ಮತ್ತು ಅನ್ಯವಂಚನೆ- ಎರಡಕ್ಕೂ ಕಾರಣರಾಗುತ್ತರೆ. ಶಿಕ್ಷಿತ ಜನಾಂಗ ಅಶಿಕ್ಷಿತರಿಂದ ಅಂತರ ಹೆಚ್ಚಿಸಿಕೊಳ್ಳುವ ಅಪಾಯವೂ ನಮ್ಮ ಕಣ್ಣೆದುರಿಗಿದೆ. ಒಂದು ಕಾಲಕ್ಕೆ ಅಕ್ಷರ ಕಲಿಕೆಯೇ ದುಸ್ಸಾಧ್ಯವಾಗಿದ್ದ ಈ ದೇಶದಲ್ಲಿ ಗಣರಾಜ್ಯದ ವಾತಾವರಣದಿಂದ ಅದು ಸಾಧ್ಯವಾಗುತ್ತಿದ್ದು, ಇದನ್ನು ಮೀರಿದ ಮುನ್ನೋಟ ಮತ್ತು ಮಾನವೀಯ ದನಿಗಳನ್ನು ನಮ್ಮ ಅಕ್ಷರಗಳು ಮಿಡಿಯಬೇಕು. ಪ್ರಜಾಪ್ರಭುತ್ವದಲ್ಲಿ ಅಕ್ಷರಗಳಿಗೆ ಅಂತಃಕರಣವಿರಬೇಕು. ಇದು ಯಾವುದೇ ಮಾನವೀಯ ಸಮಾಜದ ಆಶಯ.

ಈ ಆಶಯಕ್ಕನುಗುಣವಾದ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆಯಾದರೂ ಅವನ್ನು ಮೆಟ್ಟಿಮರೆಸುವಂತೆ ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ಅಕ್ಷರದ ಆತ್ಮವಂಚನೆಗಳು ಒಗ್ಗೂಡುತ್ತಿವೆ. ಪೊಳ್ಳು ವ್ಯಕ್ತಿತ್ವಗಳನ್ನು ರೂಪಿಸುತ್ತಿವೆ. ಇದು ನಿಸ್ಸಂದೇಹವಾಗಿ ಜನವಿರೋಧಿ ಪ್ರಕ್ರಿಯೆ; ಗಣರಾಜ್ಯವನ್ನು ಗೂಳಿರಾಜ್ಯ ಮಾಡುವ ಕ್ರಿಯೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಗಣರಾಜ್ಯ ಕಂಡ ಇನ್ನೊಂದು ಪ್ರಮುಖ ತಳಮಳವೆಂದರೆ ಪ್ರಾದೇಶಿಕ ಮತ್ತು ಪ್ರತ್ಯೇಕತಾವಾದ. ವಾಸ್ತವವಾಗಿ ಪ್ರಾದೇಶಿಕವಾದ ಮತ್ತು ಪ್ರತ್ಯೇಕವಾದಗಳು ಬೇರೆಯೇ ನೆಲೆಗಳನ್ನು ಪಡೆದಿದೆ. ಆದರೂ ಪ್ರತ್ಯೇಕತಾವಾದಕ್ಕೆ ಪ್ರಾದೇಶಿಕವಾದವು ಮೂಲ ಪ್ರೇರಣೆಯಂತೆ ಕೆಲಸ ಮಾಡಿದೆ. ಗಣರಾಜ್ಯ ಘೋಷಣೆಯ ನಂತರದ ನಮ್ಮ ಯೋಜನೆಗಳು ತೋರಿದ ಪ್ರಾದೇಶಿಕ ಅಸಮತೋಲನ, ಅಸಮಾನತೆಗಳು ಪ್ರಾದೇಶಿಕವಾದ ಹುಟ್ಟಲು ಕಾರಣವಾದವು. ತಂತಮ್ಮ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಸಂರಕ್ಷಿಸಿಕೊಳ್ಳಬಯಸುವ ‘ಸಾಂಸ್ಕೃತಿಕ ಸ್ವಾಯತ್ತತೆ’ಯ ಅಪೇಕ್ಷೆ ಒಂದು ಕಡೆಗಿದ್ದರೆ, ಮೇಲೆ ಸೂಚಿಸಿದ ಅಸಮತೋಲನದ ಫಲವಾಗಿ ಕಡೆಗಣಿಸಲ್ಪಟ್ಟ ಭಾವನೆ ಮತ್ತು ಅವಕಾಶವಂಚಿತ ಅಸಹಾಯಕತೆಯಿಂದ ಹುಟ್ಟಿದ ಆಕ್ರೋಶವು ಪ್ರಾದೇಶಿಕ ಭಾವನೆಗಳನ್ನು ಕೆರಳಿಸತೊಡಗಿತು. ಇದೇ ಅಂಶ ಅತ್ಯುಗ್ರ ಸ್ಥಿತಿ ತಲುಪಿದಾಗ ಪ್ರತ್ಯೇಕತಾವಾದ ಹುಟ್ಟಿತು. ಪ್ರಾದೇಶಿಕ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳಲು ಎಲ್ಲ ರೀತಿಯ ಅವಕಾಶವಿರಬೇಕೆಂಬ ಒಂದು ಬೇಡಿಕೆಯೇ ಆಗಬಾರದು. ಯಾಕೆಂದರೆ ಫೆಡರಲ್ ಪದ್ಧತಿಯನ್ನು ಒಪ್ಪಿದ ನಮ್ಮ ಸಂವಿಧಾನದ ಒಂದರ್ಥದಲ್ಲಿ ಪ್ರಾಂತ್ಯಗಳಿಗೆ ವ್ಯಕ್ತಿತ್ವದ ನೆಲೆಯೊದಗಿಸಿದೆ. ಪ್ರಾಂತೀಯ ವ್ಯಕ್ತಿತ್ವವನ್ನು ಉಳಿಸಿಕೊಂಡೇ ರಾಷ್ಟ್ರೀಯ ವ್ಯಕ್ತಿತ್ವವಾಗುವುದು ಫೆಡರಲ್ ಪದ್ಧತಿಯ ಆಶಯ. ಆದ್ದರಿಂದ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪರಸ್ಪರ ಪೂರಕವಾಗಿರಬೇಕೇ ಹೊರತು ವಿರುದ್ಧ ದಿಕ್ಕಿನಲ್ಲಿರಬೇಕಿಲ್ಲ. ಇದನ್ನು ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳ ಪರ ವಾದ ಮಂಡಿಸುವರು ಅಗತ್ಯವಾಗಿ ಅರಿಯಬೇಕು. ಈ ಅರಿವಿನ ಅಭಾವವೆ ಅನಾರೋಗ್ಯಕರ ನೆಲೆಗಳನ್ನು  ನಿರ್ಮಿಸುತ್ತಿದೆ.

ಕೇಂದ್ರ-ರಾಜ್ಯ ಸಂಬಂಧದ ಪ್ರಶ್ನೆಯೂ ಈ ಹಿನ್ನೆಲೆಯಲ್ಲೇ ಚರ್ಚಿತವಾಗುತ್ತಿದ್ದ ರಾಜ್ಯಗಳಿಗೆ ಹೆಚ್ಚು ಆರ್ಥಿಕ ಸ್ವಾಯತ್ತತೆ ಕೊಡುವುದು ಸೂಕ್ತ. ಆದರೆ ಸರ್ವ ಸಂಪೂರ್ಣ ಸ್ವಾಯತ್ತತೆ ಎನ್ನುವುದು ಪ್ರತ್ಯೇಕತಾವಾದವಾಗುವ ಅಪಾಯವಿದೆ. ಅಲ್ಲದೆ, ಪ್ರಾದೇಶಿಕವಾದಿಗಳು ಮಂಡಿಸುತ್ತಿರುವ ವಿಚಾರದ ಧಾಟಿಯನ್ನು ನೋಡಿದರೆ, ರಾಜ್ಯಗಳಿಗೆ ಸ್ವಾಯತ್ತತೆ ಸಿಕ್ಕಿದರೆ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆಯೆಂಬ ಭ್ರಮೆ ಕಾಣುತ್ತದೆ. ವಾಸ್ತವವಾಗಿ ನಿರುದ್ಯೋಗ, ಸಾಮಾಜಿಕ- ಆರ್ಥಿಕ ಅಸಮಾನತೆ, ಅನಕ್ಷರತೆ-ಇಂಥ ಮೂಲಭೂತ ಸಮಸ್ಯೆಗಳ ಮೂಲ ಇರುವುದು ರಾಜಕೀಯ ವ್ಯವಸ್ಥೆಯಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಬಲ್ಲ ರಾಜಕೀಯ ವ್ಯವಸ್ಥೆಯನ್ನು ಬರಮಾಡಿಕೊಳ್ಳುವ ಹೋರಾಟಗಳನ್ನು ರೂಪಿಸುವ  ಬದಲು ಪ್ರಾದೇಶಿಕ ಮತ್ತು ಪ್ರತ್ಯೇಕತಾವಾದಗಳೇ ಪರಿಹಾರವೆಂಬಂತೆ ಅಭಿಪ್ರಾಯ ಮೂಡಿಸಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುವ ಕ್ರಮ ಸ್ವಾಗತಾರ್ಹವಾದರೂ ಇಷ್ಟರಿಂದಲೇ ನಿರುದ್ಯೋಗ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾಕೆಂದರೆ ನಿರುದ್ಯೋಗವು ಪ್ರಾದೇಶಿಕತೆ ಅಥವಾ ರಾಷ್ಟ್ರೀಯತೆ ಪರಿಕಲ್ಪನೆಗಳ ಸೃಷ್ಟಿಯಲ್ಲ; ದೇಶದ ಆರ್ಥಿಕ ನೀತಿಯನ್ನು ಅವಲಂಬಿಸಿದ ಸಮಸ್ಯೆ. ಈ ಅರಿವಿಲ್ಲದೆ ಭ್ರಮೆ ಮೂಡಿಸುವುದು, ಸಮಸ್ಯೆಯ ಮೂಲವನ್ನು ಮೂಲೆಗೊತ್ತುವುದು ಪ್ರಾದೇಶಿಕವಾದದ ಸ್ವಯಂ ಸಮಸ್ಯೆ. ಈ ಸಮಸ್ಯೆಯನ್ನು ನೀಗಿಕೊಂಡು ಹೊಸ ರಾಜಕೀಯ ವ್ಯವಸ್ಥೆಯನ್ನು ಅಪೇಕ್ಷಿಸುವ ಅರಿವಿನ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾಂಸ್ಕೃತಿಕ ಸ್ವಾಯತ್ತತೆ ಮತ್ತು ಹೆಚ್ಚು ಆರ್ಥಿಕಸ್ವಾಯತ್ತತೆಗೆ ತನ್ನ ಬೇಡಿಕೆಯನ್ನು ಮಿತಿಗೊಳಿಸಿಕೊಳ್ಳುವುದು ಆರೋಗ್ಯಕರ ಪ್ರಾದೇಶಿಕವಾದವಾಗುತ್ತದೆ. ಈ ಬೇಡಿಕೆಯನ್ನು ಗೌರವಿಸುವುದು ಉತ್ತಮ ರಾಷ್ಟ್ರೀಯವಾದವಾಗುತ್ತದೆ. ಆದರೆ ಪ್ರತ್ಯೇಕವಾದವು ರಾಷ್ಟ್ರೀಯ ಅಭದ್ರತೆಗೆ ಕಾರಣವಾಗುತ್ತದೆ.

ಸಾಮಾಜಿಕ ಆರ್ಥಿಕ ಸಮಾನತೆಯನ್ನು ತರಬಯಸುವ ಸೂಕ್ತ ಪ್ರಾಮಾಣಿಕ ರಾಜಕೀಯ ವ್ಯವಸ್ಥೆ ಮತ್ತು ಜನಪರ ಕಾಳಜಿಯ ಕಾರ್ಯಕ್ರಮಗಳು, ಪ್ರತ್ಯೇಕತಾವಾದ ಹುಟ್ಟದಂತೆ ನೋಡಿಕೊಳ್ಳಲು ಸಾಧ್ಯವಿತ್ತು. ಹೀಗಾಗದೆ ಪ್ರಾದೇಶಿಕತೆಯಿಂದ ಪ್ರತ್ಯೇಕತೆಯತ್ತ ಚಳವಳಿಗಳು ತಿರುಗಿದಾಗ ವಿದೇಶಿಶಕ್ತಿಗಳು ಕೈವಾಡ ನಡೆಸಿದ್ದೂ ಉಂಟು. ಅಭಿವೃದ್ಧಿಶೀಲ ರಾಷ್ಟ್ರಗಳು ಸಮತೆಯ ಸಮಾಜದತ್ತ ಸರಿಯದಂತೆ ತಡೆಯುವ ಯತ್ನವಾಗಿ ವಿದೇಶಿಶಕ್ತಿಗಳು ಹೇರಳ ಹಣ ಸುರಿಯುವುದು ಮತ್ತು ಪ್ರತ್ಯೇಕತೆಯನ್ನು ಪ್ರಚೋದಿಸುವುದು ಈಗ ರಹಸ್ಯವಾಗಿ ಉಳಿದಿಲ್ಲ. ಕೆಲವೊಮ್ಮೆ ಪ್ರಾರಂಭದಲ್ಲಿ ಪ್ರಾಮಾಣಿಕವಾಗಿಯೇ ಪ್ರತ್ಯೇಕತೆಯ ಹೋರಾಟಗಳು ಹುಟ್ಟಿದರೂ ಆಮೇಲೆ ವಿದೇಶೀ ಸೂಕ್ಷ್ಮಗಳು ತಳುಕು ಹಾಕಿಕೊಳ್ಳಬಹುದು; ಪರೋಕ್ಷವಾಗಿ ಪ್ರತ್ಯೇಕತೆಯ ವಿಚಾರವನ್ನು ಗಟ್ಟಿಗೊಳಿಸುವ ವೈಚಾರಿಕ ಪ್ರಯತ್ನಗಳು ನಡೆಯಬಹುದು. ಒಟ್ಟಿನಲ್ಲಿ ಜನಪರತೆಯ ಹೆಸರಿನಲ್ಲೇ ಜನವಿರೋಧೀ ಪರಿಣಾಮವನ್ನುಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ನಮ್ಮ ಗಣರಾಜ್ಯ ಎದುರಿಸುತ್ತಿರುವ ಒಂದು ಪ್ರಮುಖ ಸವಾಲು, ಈ ಸವಾಲನ್ನು ಪ್ರಾದೇಶಿಕ ಅಸಮತೋಲನವನ್ನು ನೀಗುವ ನಿಜವಾದ ಫೆಡರಲ್ ವ್ಯವಸ್ಥೆಯ ಒಳನೋಟದಿಂದಲೇ ಎದುರಿಸಬೇಕು; ಪ್ರಾದೇಶಿಕ ಪ್ರಾಮುಖ್ಯತೆಯನ್ನು ಒಪ್ಪುತ್ತ ಪ್ರತ್ಯೇಕತೆಯ ಪ್ರಯತ್ನಗಳನ್ನು ಮಣ್ಣುಗೂಡಿಸಬೇಕು. ಈ ದಿಕ್ಕಿನಲ್ಲಿ ನಮ್ಮ ಗಣರಾಜ್ಯಕ್ಕೆ ಬೇಕಾಗಿರುವುದು-ಸಾಮಾಜಿಕ, ರಾಜಕೀಯ ಸಂಕಲ್ಪ, ಇಲ್ಲದಿದ್ದರೆ ಪ್ರಾದೇಶಿಕತೆಯ ಹೆಸರಿನಲ್ಲಿ ಭಾವೋದ್ರೇಕದ ಬಿಂದ್ರನ್ವಾಲೆಗಳು ‘ಸೃಷ್ಟಿ’ ಯಾಗುತ್ತಲೇ ಇರುತ್ತಾರೆ.

ನಮ್ಮ ದೇಶವು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸವಾಲೆಂದರೆ ಕೋಮುವಾದ, ಈ ಸವಾಲು ನಮ್ಮ ದೇಶದ ಸ್ವಾತಂತ್ರ್ಯಗಳಿಕೆಯ ಸಂದರ್ಭದಿಂದಲೂ ಇದೆ. ಈಗಂತೂ ಕೋಮುವಾದದ ಕೆಂಡ, ದೇಶದ ಸಂದಿಗೊಂದಿಯ ಕಿಟಕಿ ಬಾಗಿಲುಗಳನ್ನು ಬಡಿಯುತ್ತಿದ್ದು ಅತ್ಯಂತ ಸೂಕ್ಷ್ಮ ಸ್ಥಿತಿಯನ್ನು ತಲುಪುತ್ತಿದೆ. ಅಲ್ಪಸಂಖ್ಯಾತರ ಅಭದ್ರತೆ ಮತ್ತು ಬಹುಸಂಖ್ಯಾತರ ಅಸಹನೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಚಿಲ್ಲರೆತನ ವಿಜೃಂಭಿಸುತ್ತಿದೆ. ಈಗ ಹಿಂದೂ-ಮುಸ್ಲಿಂ ಮತ್ತು ಹಿಂದೂ-ಸಿಖ್ ಜನಾಂಗಗಳ ನಡುವೆ ವಿಷಗೋಡೆ ನಿರ್ಮಿಸಿರುವ ಕೋಮುವಾದವು ಮುಂದೊಂದು ದಿನ ದಲಿತ ಜನಾಂಗ ಮತ್ತು ಸವರ್ಣೀಯ ಹಿಂದುಗಳ ನಡುವಿನ ನಿರಂತರ ಅಂತರ ಮತ್ತು ಅಂತರ್ಘರ್ಷಣೆಯತ್ತ ಕಣ್ಣು ಹಾಕಲಿದೆ. ಕೋಮುವಾದದ ವ್ಯಾಪ್ತಿ ಅಪಾಯಕಾರಿಯಾಗಿ ಹಬ್ಬುವ ಎಲ್ಲ ಲಕ್ಷಣಗಳೂ ಇಂದು ಕಾಣಿಸುತ್ತಿದೆ. ಇದರಿಂದ ಜನಸಾಮಾನ್ಯರು ಮತ್ತು ಭ್ರಮಿತ ‘ಬುದ್ಧಿಜೀವಿ’ಗಳು ಅನೇಕರಲ್ಲಿ ಚರಿತ್ರೆಯನ್ನು ಸಮಚಿತ್ತದಿಂದ ನೋಡಿ ಮತೀಯ ದೃಷ್ಟಿಯನ್ನು ಮೆಟ್ಟುವ ಮಾನವೀಯ ದೃಷ್ಟಿ ಮಾಯವಾಗುತ್ತಿದೆ. ಚರಿತ್ರೆಯು  ಚರ್ಚೆಯ ವಸ್ತುವಾಗದೆ ವೈಭವೀಕರಣದ ಬೀದಿ ಜಗಳವಾಗುವುದು ಯಾವುದೇ ಮನಸ್ಸು ಮತ್ತು ಮೆದುಳುಗಳಿಗೆ ಮಾಡುವ ಅಪಮಾನ. ಆದರೆ ಮತೀಯ ಹಕ್ಕು ಸ್ಥಾಪನೆಯ ಸಾಧನವಾಗಿ ಈ ಅಪಮಾನ ಮಾಡುವ ಕೆಲಸ ನಡೆಯುತ್ತಲೇ ಇದೆ. ಇದರಿಂದ ಚರಿತ್ರೆಯ ಸಂಶೋಧನೆ, ಸಂವಾದಗಳಿಗಿಂತ ಭಾವೋದ್ರೇಕ ಬಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಯಾವುದೇ ಮತಧರ್ಮದಲ್ಲಿರುವ ಕೋಮುವಾದಿಗಳನ್ನು ವಿರೋಧಿಸುವ ವಾತಾವರಣವನ್ನು ನಾವು ಬೆಳೆಸಬೇಕು. ನಮ್ಮ ಗಣರಾಜ್ಯವು ಯಾವುದೇ ಕಾರಣಕ್ಕೂ ಮತೀಯ ರಾಜ್ಯವಾಗಕೂಡದು. ನಮ್ಮ ಗಣರಾಜ್ಯ ನಿಜವಾದ ಅರ್ಥದಲ್ಲಿ ಜನಪರರಾಜ್ಯವಾಗಿ ಅರ್ಥವಂತಿಕೆಯನ್ನು ಅರಳಿಸಬೇಕು.

ಈ ದಿಕ್ಕಿನತ್ತ ಹೆಜ್ಜೆಯಿಡುವುದಕ್ಕಾಗಿಯೇ ನಾವು ನಮ್ಮ ಗಣರಾಜ್ಯ ಎತ್ತಸಾಗಿದೆ ಎಂದು ಸಾವಿರ ಸಾರಿ ಪ್ರಶ್ನಿಸಿಕೊಳ್ಳಬೇಕಾಗಿದೆ. ಈ ಪ್ರಶ್ನೆಯ ಹಿಂದೆ ಇರಬೇಕಾದ್ದು ನಿರಾಶೆಯಲ್ಲ; ನೋವು ಮತ್ತು ಕಳಕಳಿ.

 

ಆಧುನಿಕ ಕರ್ನಾಟಕ ಮತ್ತು ಜಾತ್ಯತೀತತೆ

-ಡಾ. ನಟರಾಜ್ ಹುಳಿಯಾರ್

ಕಳೆದ ಐವತ್ತು, ಅರವತ್ತು ವರ್ಷಗಳ ಕರ್ನಾಟಕದ ಚರಿತ್ರೆಯ ಮುಖ್ಯ ಬೆಳವಣಿಗೆಗಳಲ್ಲಿ “ಸೆಕ್ಯುಲರ್ ಇಂಟೆಲೆಕ್ಚುಯಲ್ಸ್” ವಿಕಾಸ ಕೂಡ ಒಂದು. ಈ ಸೆಕ್ಯುಲರ್ ಬುದ್ಧಿಜೀವಿಗಳು ಕರ್ನಾಟಕದಲ್ಲಿ ಹಲವು ಬಗೆಯ ವ್ಯವಸ್ಥೆಯ ವಿರೋಧಿ ಚಳವಳಿಗಳಲ್ಲಿ ಬೆರೆತು ಹೋಗಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಾ ಬಂದಿರುವ ಗಾಂಧೀವಾದಿ ಚಳವಳಿ, ಸಮಾಜವಾದಿ ಚಳವಳಿ, ಮಾರ್ಕ್ಸ್‌ವಾದಿ ಚಳವಳಿ, ವಿಚಾರವಾದಿ ಚಳವಳಿ, ದಲಿತ ಚಳವಳಿ, ರೈತಚಳವಳಿ, ಸ್ತ್ರೀವಾದಿ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ… ಮುಂತಾಗಿ ಎಲ್ಲ ಮುಖ್ಯ ಚಳವಳಿಗಳಲ್ಲೂ  ಈ ಸೆಕ್ಯುಲರ್ ಬುದ್ಧಿಜೀವಿಗಳು ಭಾಗಿಯಾಗಿದ್ದಾರೆ. ಹಾಗೆಯೇ ನವೋದಯ, ಪ್ರಗತಿಶೀಲ, ನವ್ಯ, ಬರಹಗಾರರ ಒಕ್ಕೂಟ, ದಲಿತ, ಬಂಡಾಯ ಹಾಗೂ ರಂಗಭೂಮಿ ಚಟುವಟಿಕೆಗಳಂಥ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಳವಳಿಗಳ ಜೊತೆಗೂ ಇದ್ದಾರೆ. ಸರ್ಕಾರೇತರ ಸಂಸ್ಥೆಗಳಲ್ಲೂ ಅವರು ಇದ್ದಾರೆ. ಈ ಎಲ್ಲ ಚಳವಳಿಗಳು, ಅವುಗಳ ನಾಯಕರು, ಅದರಲ್ಲಿ ಭಾಗಿಯಾದ ವಿವಿಧ ವೇದಿಕೆಗಳು, ವಿವಿಧ ರಾಜಕೀಯ ಪಕ್ಷಗಳ ಕಾಲಕಾಲದ ಜಾತ್ಯತೀತ ನಿಲುವುಗಳು ಹಾಗೂ ಜಾತ್ಯತೀತ ಬುದ್ಧಿಜೀವಿಗಳು ಈ ಎಲ್ಲರ ಪ್ರಯತ್ನಗಳಿಂದಾಗಿ ಕರ್ನಾಟಕದಲ್ಲಿ ಗಟ್ಟಿಯಾದ ಜಾತ್ಯತೀತ ಚಿಂತನೆ ಹಾಗೂ ಕೋಮುವಾದ ವಿರೋಧಿ ಚಿಂತನೆಗಳು ರೂಪುಗೊಂಡಿವೆ. ಈ ಚಿಂತನೆಗಳನ್ನು ವಿವಿಧ ಹಂತಗಳಲ್ಲಿ ಕರ್ನಾಟಕದ ಸಾಮಾನ್ಯ ಜನ ಕೂಡ ಒಂದು ಮಟ್ಟದಲ್ಲಿ ಪ್ರತಿಧ್ವನಿಸಿದ್ದಾರೆ. ಇವೆಲ್ಲದರ ಹಿನ್ನೆಲೆಗೆ ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕದಲ್ಲಿ ಬೆಳೆದ ಜಾತಿವಿನಾಶ ಪರಿಕಲ್ಪನೆಯೂ ಕೆಲಸ ಮಾಡಿದೆ.

ಸ್ವಾತಂತ್ರ್ಯೋತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ರಾಜಕಾರಣ, ಚಳವಳಿ, ಚಿಂತನೆಗಳನ್ನು ಪ್ರಭಾವಿಸಿದ ಹಾಗೂ ಪ್ರೇರೇಪಿಸಿದ ಪೆರಿಯಾರ್‍‌ವಾದ, ಲೋಹಿಯಾವಾದ ಹಾಗೂ ಅಂಬೇಡ್ಕರ್‍‌ವಾದಗಳ ಮೂಲದಲ್ಲಿ ಹಾಗೂ ವಿವಿಧ ಸಾಹಿತ್ಯ ಚಳವಳಿಗಳ ಮುಖ್ಯ ಕಾಳಜಿಗಳಲ್ಲಿ ಜಾತಿವಿನಾಶ ಹಾಗೂ ಜಾತಿವಿರೋಧಗಳು ಕೂಡ ಇದ್ದವು. ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಚಿಂತಕರು ಜಾತ್ಯತೀತತೆಯನ್ನು ಒಂದು ತತ್ವವಾಗಿ ಒಪ್ಪಿದವರಾಗಿದ್ದರು. ರೈತ ಚಳ‌ವಳಿಯನ್ನು ರೂಪಿಸಿದ ಎಂ.ಡಿ.‍ನಂಜುಂಡಸ್ವಾಮಿಯವರು ಎಪ್ಪತ್ತರ ದಶಕದ ಸಮಾಜವಾದಿ ಯುವಜನ ಸಭಾದ ಕಾಲದಿಂದಲೂ ಜಾತಿವಿನಾಶ ಕುರಿತ ಚಿಂತನೆಯನ್ನು ಬೆಳೆಸಿದವರು. ಮುಂದೆ ರೈತ ಚಳವಳಿಯ ಇನ್ನಿತರ ನಾಯಕರಲ್ಲೂ ಜಾತ್ಯತೀತತೆ ಒಂದು ಮಟ್ಟದಲ್ಲಾದರೂ ಮುಂದುವರಿಯಿತು. ದಲಿತ ಚಳವಳಿಯಲ್ಲಂತೂ ಜಾತಿ ವಿರೋಧ ಬಹಳ ಸ್ಪಷ್ಟವಾಗಿತ್ತು. ಪೆರಿಯಾರ್‌ವಾದ ವೈಚಾರಿಕತೆಯ ಮೂಲಕ ಜಾತಿಯ ವಿರುದ್ಧ ಸಮರ ಸಾರಿತ್ತು. ಲೋಹಿಯಾವಾದ ಜಾತಿ ಅಸಮಾನತೆಯ ವಿರುದ್ಧ ಹೋರಾಟ ಮಾಡುತ್ತಾ ಜಾತಿವಿನಾಶದ ಕಾರ್ಯನೀತಿಯನ್ನು ಅಳವಡಿಸಿಕೊಂಡಿತ್ತು.

ಎಪ್ಪತ್ತರ ದಶಕದ ಅರಸು ಆಡಳಿತದಲ್ಲಿ ಆರಂಭಗೊಂಡ ಹಿಂದುಳಿದ ಹಾಗೂ ದಲಿತ ಜಾತಿಗಳ ಹೊಸ ಸಮೀಕರಣ, ಹಾವನೂರು ವರದಿಯ ನಂತರ ಹಿಂದುಳಿದ ವರ್ಗಗಳಲ್ಲಿ ಕಂಡು ಬಂದ ಹೊಸ ಚಲನೆ, ಬಸವಲಿಂಗಪ್ಪನವರು ಪ್ರಾಚೀನ ಕನ್ನಡ ಸಾಹಿತ್ಯ ಕುರಿತು ಮಾಡಿದ ವಿಮರ್ಶೆಯ ಫಲವಾಗಿ ಹುಟ್ಟಿದ ಬೂಸಾ ಚಳವಳಿ, ಜಯಪ್ರಕಾಶ ನಾರಾಯಣರ ನವನಿರ್ಮಾಣ ಚಳವಳಿ, ಇಂದಿರಾಗಾಂಧಿಯವರು ಹೇರಿದ ಎಮರ್ಜೆನ್ಸಿಯನ್ನು ವಿರೋಧಿಸಿದ ಚಿಂತನೆಗಳು-ಇವೆಲ್ಲದರ ಫಲವಾಗಿ ಕೂಡ ಕರ್ನಾಟಕದಲ್ಲಿ ಜಾತ್ಯತೀತ ಚಿಂತನೆ ರೂಪುಗೊಂಡಿತು. ಈ ದಿಸೆಯಲ್ಲಿ ಎಪ್ಪತ್ತರ ದಶಕದಲ್ಲಿ ವಿಶ್ವವಿದ್ಯಾಲಯಗಳ ಪ್ರಜ್ಞಾವಂತ ವಿದ್ಯಾರ್ಥಿಗಳು ತಮ್ಮ ಹೆಸರುಗಳಲ್ಲಿದ್ದ ಜಾತಿಸೂಚಕ ಗುರುತುಗಳನ್ನು, ಜಾತಿ ಚಿಹ್ನೆಗಳನ್ನು ಕೈ ಬಿಟ್ಟದ್ದು ಕೂಡ ಒಂದು ಚಾರಿತ್ರಿಕ ಬೆಳವಣಿಗೆಯಾಗಿತ್ತು. ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದ ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ಧಲಿಂಗಯ್ಯ ಮುಂತಾದವರ ಚಿಂತನೆ ಹಾಗೂ ಹೋರಾಟಗಳು ಕೇವಲ ದಲಿತ ಜಾತಿ, ವರ್ಗಗಳಿಗೆ ಮಾತ್ರ ಸೀಮಿತವಾಗದೆ, ಅವುಗಳ ಆಚೆಗೂ ಜಾತ್ಯತೀತ ಚಿಂತನೆಯನ್ನು ಬಿತ್ತಲು ನೆರವಾದವು. ವಚನ ಚಳವಳಿಯಿಂದ ಪ್ರಭಾವಿತರಾದ ಸೂಕ್ಷ್ಮಜ್ಞರು, ಕುವೆಂಪು, ಕಾರಂತರ ಬರಹಗಳಿಂದ ಪ್ರಭಾವಗೊಂಡ ಸೂಕ್ಷ್ಮವಾದ ತರುಣ ತರುಣಿಯರು, ನಂತರ ನವ್ಯ ದಲಿತ, ಬಂಡಾಯ ಹಾಗೂ ಸಮುದಾಯದಂಥ ರಂಗ ಚಳವಳಿಗಳಿಂದ ರೂಪುಗೊಂಡ ಬರಹಗಾರ, ಬರಹಗಾರ್ತಿಯರು, ಓದುಗರು, ರಂಗಭೂಮಿ ನಟನಟಿಯರು ಜಾತ್ಯತೀತತೆಯನ್ನು ಒಂದು ಮೌಲ್ಯವನ್ನಾಗಿ ಬೆಳೆಸತೊಡಗಿದರು. ಸಂಕ್ರಮಣ, ಶೂದ್ರ, ವಿಮುಕ್ತಿ, ಪಂಚಮ ಥರದ ಕಿರುಪತ್ರಿಕೆಗಳ ಜೊತೆಗೆ ಪ್ರಜಾವಾಣಿ, ಮುಂಗಾರು, ಆಂದೋಲನ, ಲಂಕೇಶ್‌ಪತ್ರಿಕೆ, ಸುದ್ದಿಸಂಗಾತಿ ಪತ್ರಿಕೆಗಳು ಕೂಡ ಜಾತ್ಯತೀತ ನೋಟಕ್ರಮವನ್ನು ಬೆಳೆಸಿದವು.

ಡಾ.ಸಿದ್ಧಲಿಂಗಯ್ಯನವರು ವಿಧಾನ ಪರಿಷತ್ತಿನ ಶಾಸಕರಾಗಿದ್ದಾಗ ಸದನದಲ್ಲಿ ಮಂಡಿಸಿದ ಅಂತರ್ಜಾತೀಯ ವಿವಾಹಿತರಿಗೆ ಮೀಸಲಾತಿಯ ಬೇಡಿಕೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ರವಿವರ್ಮಕುಮಾರ್ ಅವರು ಅಂತರ್ಜಾತೀಯ ವಿವಾಹಿತರ ಮೀಸಲಾತಿಗಾಗಿ ಮಾಡಿರುವ ಶಿಫಾರಸುಗಳು ಕೂಡ ಚಾರಿತ್ರಿಕ ಮಹತ್ವವುಳ್ಳವು. ಈ ಸಂದರ್ಭಗಳಲ್ಲಿ ಡಾ.ಸಿದ್ಧಲಿಂಗಯ್ಯ ಹಾಗೂ ರವಿವರ್ಮಕುಮಾರ್ ಇಬ್ಬರೂ ಭಾರತದ ದೇವಾನುದೇವತೆಗಳೇ ಜಾತಿ ಮೀರಿ ಮದುವೆಯಾದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪ, ಕೆ.ರಾಮದಾಸ್, ಕಡಿದಾಳು ಶಾಮಣ್ಣ, ಎಚ್.ಎಲ್. ಕೇಶವಮೂರ್ತಿ. ಬಂಜಗೆರೆ ಜಯಪ್ರಕಾಶ್, ರವಿವರ್ಮಕುಮಾರ್, ಅನಸೂಯಮ್ಮ ಥರದ ನೂರಾರು ಜಾತ್ಯತೀತ ಚಿಂತಕ, ಚಿಂತಕಿಯರು ಬೆಂಬಲಿಸಿರುವ, ಏರ್ಪಡಿಸಿರುವ ಸರಳ ಜಾತ್ಯತೀತ ವಿವಾಹಗಳು, ಸೈದ್ಧಾಂತಿಕ ಹಿನ್ನೆಲೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು  ಜಾತ್ಯತೀತ  ಆಲೋಚನೆಯನ್ನು ಬಿತ್ತಿ, ಬೆಳೆಸುತ್ತಾ ಬಂದಿವೆ.  ಕನ್ನಡದ ಹಲವು ಜನಪ್ರಿಯ ಸಿನಿಮಾಗಳಲ್ಲಿ ಬರುವ ಅಂತರ್ಜಾತೀಯ ಪ್ರೇಮಗಳ ಸನ್ನಿವೇಶಗಳಲ್ಲಿ ಕೂಡ ಜಾತ್ಯತೀತ ಚಿಂತನೆ ಮೇಲ್ಪದರದಲ್ಲಿಯಾದರೂ ಕಾಣಿಸಿಕೊಳ್ಳುತ್ತಾ ಬಂದಿದೆ. ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳ ಮೂಲಕ, ಉದಾರವಾದಿ ಧೋರಣೆಯ ಶಿಕ್ಷಣ ಸಂಸ್ಥೆಗಳ ಮೂಲಕ  ಕೂಡ ಜಾತ್ಯತೀತ ನೋಟ ಪ್ರಸಾರಗೊಂಡಿದೆ. ಆಧುನಿಕ ಕನ್ನಡ ಸಾಹಿತ್ಯದ ಗಂಭೀರ ಕೃತಿಗಳ ಆಳದಲ್ಲಿ ಜಾತ್ಯತೀತ ಧ್ವನಿಗಳಿವೆ. ಸಾಹಿತ್ಯ, ಕಲೆ, ಸಿನಿಮಾ ಹಾಗೂ ಪತ್ರಿಕೋದ್ಯಮಗಳಲ್ಲಿ ತೊಡಗಿರುವ ಅನೇಕ ಗಂಭೀರ ವ್ಯಕ್ತಿಗಳು ಸಾಮಾನ್ಯವಾಗಿ ಜಾತ್ಯತೀತ ತತ್ವಕ್ಕೆ ಬದ್ಧರಾಗಿಯೇ ಉಳಿದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಕ್ರಿಯಾಶೀಲ ಅಧ್ಯಾಪಕ, ಅಧ್ಯಾಪಕಿಯರು, ಮಾನವ ಹಕ್ಕುಗಳ ಕಾರ್ಯಕರ್ತರು, ಲಾಯರುಗಳು, ವಿವಿಧ ರೀತಿಯ ಸಾಮಾಜಿಕ ನ್ಯಾಯಗಳ ಚಳವಳಿಯಲ್ಲಿ ಭಾಗಿಯಾಗುತ್ತಿರುವವರು ಕೂಡ ಜಾತ್ಯತೀತತೆಯನ್ನು ತಾತ್ವಿಕವಾಗಿ ಒಪ್ಪಿದವರೇ ಆಗಿದ್ದಾರೆ. ಬೌದ್ಧ,  ಶರಣ, ಸೂಫಿ, ಮಂಟೇಸ್ವಾಮಿ, ಮಲೆಮಹದೇಶ್ವರ ಮಾರ್ಗಗಳನ್ನು ಆಧುನಿಕ ಕಾಲದಲ್ಲಿ ಹೊಸದಾಗಿ ವಿವರಿಸುತ್ತಿರುವ ಚಿಂತಕ, ಚಿಂತಕಿಯರು ಭಾರತದ ಧರ್ಮಗಳ ಒಳಗೇ ಇರುವ ಜಾತ್ಯತೀತ ಅಂಶಗಳನ್ನು ಮುನ್ನೆಲೆಗೆ ತರುವ ಯತ್ನ ಮಾಡುತ್ತಿದ್ದಾರೆ.

ಅದೇ ರೀತಿ, ಕಾಮ, ಪ್ರೇಮ, ಆಳವಾದ ರಾಷ್ಟ್ರೀಯತಾ ಭಾವ, ಸಮುದಾಯ ಪ್ರಜ್ಞೆ, ಅಸಲಿ ಆಧ್ಯಾತ್ಮ, ವೈಚಾರಿಕತೆ, ವೈಜ್ಞಾನಿಕ ನೋಟ, ಕರುಣೆ, ಮೇಲುಜಾತಿಯ ಜನರಲ್ಲಿರಬಹುದಾದ ನಿಜವಾದ ಪಾಪಪ್ರಜ್ಞೆ, ಸಂಸ್ಕೃತಿಯ ಸ್ವ-ಪರೀಕ್ಷೆ, ಮುಕ್ತತೆ, ತಾರುಣ್ಯದ ತೀವ್ರಸ್ಥಿತಿ, ಒಳಿತಿನ ಪ್ರಜ್ಞೆ, ಮುಗ್ಧತೆ… ಇವೇ ಮುಂತಾದ ಸ್ಥಿತಿಗಳಲ್ಲೂ ಭಾರತೀಯರು ಜಾತಿ ಮೀರಿ ನಡೆದುಕೊಳ್ಳಲೆತ್ನಿಸಿದ್ದಾರೆ. ಹಾಗೆಯೇ, ಹಿರಿಯರ ಅನಗತ್ಯ ಜಾತೀಯ ಹಾಗೂ ಮತೀಯ  ದುರ್ಮಾರ್ಗದರ್ಶನವಿಲ್ಲದ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಜಾತ್ಯತೀತವಾಗಿ ವರ್ತಿಸುತ್ತಾ ಬಂದಿದ್ದಾರೆ. ಕರ್ನಾಟಕದ ಚುನಾವಣೆಗಳಲ್ಲಿ ಕೂಡ ಜನ ಆಗಾಗ್ಗೆ  ಜಾತಿ, ಧರ್ಮಗಳನ್ನು ಮೀರಿ ಮತ ಚಲಾಯಿಸಿದ್ದಾರೆ. ನಗರಗಳಲ್ಲಿ ಹಾಗೂ ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಅಂತರ್ಜಾತೀಯ ವಿವಾಹಗಳು ಕೂಡ ಆಧುನಿಕ ವಲಯಗಳಲ್ಲಿ ಹಬ್ಬುತ್ತಿರುವ ಒಂದು ಮಟ್ಟದ ಜಾತ್ಯತೀತತೆಯನ್ನು ಸೂಚಿಸುತ್ತವೆ. ಆದರೆ, ಮೀಸಲಾತಿಯ ಪ್ರಶ್ನೆ ಬಂದಾಗ ಈ ಕಾರ್ಪೊರೇಟ್ ವಲಯದ ಜನ ಜಾತ್ಯತೀತವಾಗಿ ಯೋಚಿಸಲಾರರು ಎಂಬುದು ಈ ವಲಯದ ಜಾತ್ಯತೀತತೆಯ ಸೀಮಿತತೆಯನ್ನೂ ಸೂಚಿಸುತ್ತದೆ.

ಭಾರತೀಯ ಸಮಾಜದ  ಎಲ್ಲ  ಜಾತಿಗಳೂ ಭಾಗವಹಿಸುವ ಪ್ರಜಾಪ್ರಭುತ್ವದ ಸ್ವರೂಪದಿಂದಾಗಿ ಸರ್ಕಾರಗಳು ಜಾತ್ಯತೀತವಾಗಿ ವರ್ತಿಸಲೇಬೇಕಾದ ಅನಿವಾರ್ಯತೆಯೂ ಇದೆ. ಭಾರತೀಯ ಸಂವಿಧಾನದ ಬಗೆಬಗೆಯ ನಿರ್ದೆಶನಗಳಿಂದಾಗಿ ಹಾಗೂ ಸರ್ಕಾರಗಳನ್ನು ರೂಪಿಸಿದ ಕೆಲವು ರಾಜಕಾರಣಿಗಳು ಅಧಿಕಾರಿಗಳು ಹಾಗೂ ಸಲಹೆಗಾರರ ಆರೋಗ್ಯಕರ ನೋಟಗಳಿಂದಾಗಿ ಸರ್ಕಾರಿ ನೀತಿಗಳು ಹಾಗೂ ಯೋಜನೆಗಳಲ್ಲೂ ಜಾತ್ಯತೀತ ಚಿಂತನೆ ಕೆಲಸ ಮಾಡಿದೆ. ಉದ್ಯೋಗದಲ್ಲಿ ಮೀಸಲಾತಿ, ಎಲ್ಲ ಜಾತಿಯ ಹುಡುಗರೂ ಇರುವ ಹಿಂದುಳಿದ ವರ್ಗಗಳ ಹಾಸ್ಟೆಲುಗಳು, ಬಿ.ಡಿ.ಎ. ಸೈಟು ಹಂಚಿಕೆ, ವಿವಿಧ ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಯೋಜನೆಗಳು, ಸರ್ಕಾರಿ ಶಾಲಾಕಾಲೇಜುಗಳಲ್ಲಿ ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ  ಒದಗಿರುವ ವಿದ್ಯಾಭ್ಯಾಸದ ಅವಕಾಶಗಳು… ಇವೇ ಮುಂತಾದ ಸರ್ಕಾರಿ ಕಾರ್ಯಕ್ರಮಗಳಲ್ಲೂ ಜಾತ್ಯತೀತ ಚಿಂತನೆಯ ಎಳೆಗಳಿವೆ. ಕಾಂಗ್ರೆಸ್, ಜೆ.ಡಿ.ಎಸ್, ಬಹುಜನ ಸಮಾಜ ಪಕ್ಷಗಳು ಕೂಡ ತಮ್ಮ ಕೆಲ ಬಗೆಯ ಚಿಂತನೆ, ಕಾರ್ಯನೀತಿ ಹಾಗೂ ಕಾರ್ಯಕ್ರಮಗಳಲ್ಲಿ ಜಾತ್ಯತೀತತೆಯನ್ನು ಬಿಂಬಿಸುತ್ತಾ ಬಂದಿವೆ. ಎಷ್ಟೇ ಮತೀಯವಾದಿ ಧೋರಣೆಯಿದ್ದರೂ, ಬಿಜೆಪಿ ಥರದ ಸರ್ಕಾರಗಳು ಕೂಡ ಜಾತ್ಯತೀತವಾಗಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯೂ ಇದೆ. ಇವೆಲ್ಲದಕ್ಕೂ ಒಂದು ದೃಷ್ಟಿಯಿಂದ ಭಾರತೀಯ ಸಂವಿಧಾನದ ಜಾತ್ಯತೀತ ತಳಹದಿಯೇ ಕಾರಣವಾಗಿದೆ.

2

ಇಪ್ಪತ್ತನೆಯ ಶತಮಾನದ ಎಂಬತ್ತರ ದಶಕದಿಂದೀಚೆಗೆ ಹೆಡೆಯೆತ್ತಿದ ಕೋಮುವಾದದಿಂದಾಗಿ  ಜಾತ್ಯತೀತ  ಚಿಂತನೆಯ ಸ್ವರೂಪದಲ್ಲಿ ಮುಖ್ಯ ಪಲ್ಲಟವುಂಟಾಯಿತು. ಜಾತೀಯತೆಯ ಭಾಗವಾಗಿದ್ದ ನೀಚತನ, ಸಂಕುಚಿತತೆ, ಇತರ ಜಾತಿಗಳ ದಮನ ಹಾಗೂ ಅನ್ಯರ ಬಗ್ಗೆ ಅಸಹ್ಯ ಸೃಷ್ಟಿಸುವ ವಿಚಾರಗಳು ಕಳೆದ ಮೂರು ದಶಕಗಳಲ್ಲಿ ಬೆಳೆದ ಕೋಮುವಾದದ ಭಾಗವೂ ಆಗತೊಡಗಿದವು. ಜಾತೀಯತೆಯ ಭಾಗವಾಗಿದ್ದ ಫ್ಯಾಸಿಸ್ಟ  ಧೋರಣೆ ಕೋಮುವಾದಕ್ಕೂ ವರ್ಗಾವಣೆಗೊಂಡಿತು. ಅಸ್ಪೃಶ್ಯತೆಗೆ ಒಗ್ಗಿ ಹೋದ ಕಂದಾಚಾರಿ ಹಿಂದೂ ಮನಸ್ಸು ಹೊಸಹೊಸ ಅಸ್ಪೃಶ್ಯತೆಗಳನ್ನು ಸೃಷ್ಟಿಸಲಾರಂಭಿಸಿತು. ಮುಸ್ಲಿಮರು ಹಾಗೂ ಕ್ರಿಶ್ಚ್ಚಿಯನ್ನರ ಬಗೆಗೆ ಅಸ್ಪೃಶ್ಯತೆಯ ಭಾವವನ್ನು ಬೆಳೆಸತೊಡಗಿತು.  ಹಾಗೆಯೇ ಜನರ ಭಕ್ತಿ, ನಂಬಿಕೆಗಳ ದುರುಪಯೋಗ, ಚರಿತ್ರೆ ಹಾಗೂ ಚಾರಿತ್ರಿಕ ಬೆಳವಣಿಗೆಗಳ ವಿಕೃತ ವ್ಯಾಖ್ಯಾನ, ಧರ್ಮದ ದುರ್ಬಳಕೆಯ ಮೂಲಕ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಕುಟಿಲ ಯೋಜನೆಗಳು, ಪ್ರಬಲ ಜಾತಿಗಳ ಯಜಮಾನೀ ಹಿಡಿತ, ವೈದಿಕ ಹುನ್ನಾರಗಳು ಹಾಗೂ ವ್ಯಾಪಾರಿ ಶಕ್ತಿಗಳು ಕೂಡ ಕೋಮುವಾದವನ್ನು ಬೆಳೆಸಿವೆ, ಬೆಳೆಸುತ್ತಿವೆ. ಈ ದಿಸೆಯಲ್ಲಿ ಕೋಮುವಾದವನ್ನು ಬೆಳೆಸಲೆಂದೇ ಹುಟ್ಟಿರುವ ಆರ್.ಎಸ್.ಎಸ್. ವಿ.ಎಚ್.ಪಿ ಮತ್ತು ಅವುಗಳ ಅಂಗಸಂಸ್ಥೆಗಳು ಹಾಗೂ ಧರ್ಮಗುರುಗಳ  ಕುಮ್ಮಕ್ಕು ನೇರವಾಗಿಯೂ  ಹಿನ್ನೆಲೆಯಲ್ಲಿಯೂ ಕೆಲಸಮಾಡುತ್ತಿದೆ. ಬಹುಸಂಖ್ಯಾತ ಕೋಮುವಾದದಿಂದಾಗಿ ಜಮಾತೆ ಇಸ್ಲಾಮಿ ಥರದ ಅಲ್ಪಸಂಖ್ಯಾತ ಕೋಮುವಾದವೂ ತಲೆಯೆತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಧುನಿಕ ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಲ್ಲಿ ಜಾತೀಯತೆಯ ಜೊತೆಜೊತೆಗೇ, ಅದಕ್ಕಿಂತ  ಅಪಾಯಕಾರಿಯಾದ ಕೋಮುವಾದವೂ ಪ್ರಬಲವಾಗತೊಡಗಿತು. ಈ ಘಟ್ಟದಲ್ಲಿ, ಈ ಬರಹದ ಮೊದಲ ಭಾಗದಲ್ಲಿ ಉಲ್ಲೇಖಿಸಿದ ಎಲ್ಲ ಜನತಾ ಚಳವಳಿಗಳೂ ಕ್ರಮೇಣ ಕೋಮುವಾದವನ್ನು ವಿರೋಧಿಸುವ ಹಾಗೂ ಜಾತ್ಯತೀತತೆಯನ್ನು ಬೆಂಬಲಿಸುವ ಹೋರಾಟಗಳ ಜೊತೆ ಸೇರಿದ್ದು ಸಹಜವಾಗಿತ್ತು ಮತ್ತು ಅನಿವಾರ್ಯವಾಗಿತ್ತು. ಬಹುಸಂಖ್ಯಾತರ ಕೋಮುವಾದದಿಂದ ಆತಂಕಕ್ಕೊಳಗಾದ ಅಲ್ಪಸಂಖ್ಯಾತ ಬುದ್ಧಿಜೀವಿಗಳ ಜೊತೆಗೆ, ಅಲ್ಪಸಂಖ್ಯಾತರ ಕೆಲವು ವೇದಿಕೆಗಳು ಕೂಡ ಈ ಹೋರಾಟಗಳ ಜೊತೆ ಸೇರಿಕೊಂಡವು. ಅಲ್ಪಸಂಖ್ಯಾತ ವಲಯದ ಬುದ್ಧಿಜೀವಿಗಳು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಗಳೆರಡನ್ನೂ ವಿರೋಧಿಸುವ  ಕೆಲಸ ಮಾಡಬೇಕಾಯಿತು.

ತೊಂಬತ್ತರ ದಶಕದ ಅಯೋಧ್ಯಾ ರಾಜಕೀಯ ಆರಂಭಿಸಿದ ಹಿಂಸಾಮಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಜಾತ್ಯತೀತ ಹೋರಾಟಕ್ಕೆ ನಿರ್ದಿಷ್ಟವಾದ  ಕೋಮುವಾದ ವಿರೋಧದ ಸ್ವರೂಪ ಸೇರಿಕೊಂಡಿತು. ಬಗೆಬಗೆಯ ಸಮಾಜಪರ ವೇದಿಕೆಗಳು ಒಂದಾಗಿ ಕೋಮುಸೌಹಾರ್ದ ವೇದಿಕೆಯನ್ನು ರೂಪಿಸಿದವು. ಆರಂಭದಲ್ಲಿ ಈ ವೇದಿಕೆಯನ್ನು ಬದ್ಧ ಎಡಪಂಥೀಯ ನಾಯಕರು ರೂಪಿಸಿದರೂ, ಕ್ರಮೇಣ ಅದರಲ್ಲಿ ಕರ್ನಾಟಕದ ದಲಿತ ಚಳವಳಿಯ ಹಲವು ಬಣಗಳು, ಕರ್ನಾಟಕ ರಾಜ್ಯ ರೈತ ಸಂಘ, ಮಾನವ ಹಕ್ಕುಗಳ ಕಾರ್ಯಕರ್ತರು, ಕಮ್ಯೂನಿಸ್ಟ ಪಕ್ಷಗಳಿಂದ ಹಿಡಿದು ಹಲಬಗೆಯ ಜಾತ್ಯತೀತ ವೇದಿಕೆಗಳು, ಸರ್ಕಾರೇತರ ಸಂಸ್ಥೆಗಳು, ಜಾತ್ಯತೀತ ಪತ್ರಕರ್ತರು, ಬರಹಗಾರ, ಬರಹಗಾರ್ತಿಯರು ಪ್ರಜಾಸತ್ತಾತ್ಮಕ ಸಂಘಟನೆಗಳು ಒಂದುಗೂಡಿದ್ದು ಕರ್ನಾಟಕದ ಚರಿತ್ರೆಯ ಮಹತ್ವದ ಬೆಳವಣಿಗೆಯೊಂದಕ್ಕೆ ಕಾರಣವಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೆಳೆಸಲು  ಕೋಮುವಾದಿ ಶಕ್ತಿಗಳು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡ‌ನ್‍ಗಿ‌ರಿಯನ್ನು ನೆಪವಾಗಿಸಿಕೊಂಡ ಆ ಕಾಲಘಟ್ಟದಲ್ಲಿ ಕೋಮುಸೌಹಾರ್ದ ವೇದಿಕೆಯ  ಮೂಲಕ ಜಾತ್ಯತೀತ ಶಕ್ತಿಗಳು ಕರ್ನಾಟಕದ ಕೋಮುವಾದೀಕರಣಕ್ಕೆ ಪ್ರಬಲ ವಿರೋಧವೊಡ್ಡಿದವು. ’ಜನಮತ ಕೋಮುವಾದದ ವಿರುದ್ಧ ಕರ್ನಾಟಕ’ ಸಂಘಟನೆ ಕೂಡ ಕೆಲ ಕಾಲ ಕೋಮುವಾದದ ವಿರುದ್ಧ ಜನಮತವನ್ನು ರೂಪಿಸಿತು. ರಹಮತ್ ತರೀಕೆರೆ, ಎಸ್.ಎಸ್.ಹಿರೇಮಠ, ಜಿ.ರಾಜಶೇಖರ್, ಫಣಿರಾಜ್, ವಸು,  ಶಿವಸುಂದರ್, ಎಸ್.ಚಂದ್ರಶೇಖರ್ ಮೊದಲಾದವರು ಚರಿತ್ರೆ, ಸಾಹಿತ್ಯ, ಸಮಾಜವಿಜ್ಞಾನಗಳಲ್ಲಿ ನಡೆಸಿರುವ ಜವಾಬ್ದಾರಿಯುತ ಸಂಶೋಧನೆಗಳು ಕೋಮುವಾದದ ಪಿತೂರಿಗಳನ್ನು ಬಯಲಿಗೆಳೆಯುತ್ತಾ ಜಾತ್ಯತೀತ ಚಿಂತನೆಯನ್ನು ಬಲಪಡಿಸಿವೆ. ಎಂ.ಡಿ.ನಂಜುಂಡಸ್ವಾಮಿ, ಯು.ಆರ್.ಅನಂತಮೂರ್ತಿ, ಕೆ.ಮರುಳಸಿದ್ಧಪ್ಪ, ರಾಜೇಂದ್ರ ಚೆನ್ನಿ, ಜಿ.ಕೆ.ಗೋವಿಂದರಾವ್, ಲಂಕೇಶ್, ತೇಜಸ್ವಿ, ಡಿ.ಆರ್.ನಾಗರಾಜ್. ಕಿ.ರಂ.ನಾಗರಾಜ್, ಗಿರೀಶ್ ಕಾರ್ನಾಡ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಬಾನು ಮುಷ್ತಾಕ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣ, ದೇವನೂರ ಮಹಾದೇವ, ದಿನೇಶ್ಅಮೀನಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಶೂದ್ರ ಶ್ರೀನಿವಾಸ್, ಇಂದೂಧರ ಹೊನ್ನಾಪುರ, ಬಿ.ಎಂ.ಹನೀಫ್, ಸುಬ್ಬುಹೊಲೆಯಾರ್, ಗೌರಿ ಲಂಕೇಶ್, ಕೆ.ನೀಲಾ, ಅಗ್ನಿ ಶ್ರೀಧರ್, ಟಿ.ಕೆ.ತ್ಯಾಗರಾಜ್, ಅಬ್ದುಲ್ ಬಶೀರ್, ಬಂಜಗೆರೆ ಜಯಪ್ರಕಾಶ್, ಮೊಗಳ್ಳಿ ಗಣೇಶ್, ಬಿ.ಎಂ.ಪುಟ್ಟಯ್ಯ, ದು.ಸರಸ್ವತಿ, ಮಲ್ಲಿಕಾ ಘಂಟಿ ಹಾಗೂ ಇಲ್ಲಿ ಹೆಸರಿಸದ ಇದೇ ರೀತಿಯ ನೂರಾರು ಬರಹಗಾರರು, ಹೋರಾಟಗಾರರು ತಮ್ಮ ಚಿಂತನೆ ಹಾಗೂ ಕ್ರಿಯೆಗಳ ಮೂಲಕ ಕೋಮುವಾದಕ್ಕೆ ವಿರೋಧ ಒಡ್ಡುತ್ತಾ ಬಂದಿದ್ದಾರೆ. ಬಿ.ಶಾಮಸುಂದರ್, ಬಿ.ಕೃಷ್ಣಪ್ಪ, ಕೆ.ರಾಮದಾಸ್, ಕೆ,ಎಸ್.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ, ಕೆ.ಎಲ್.ಅಶೋಕ್, ಮಾವಳ್ಳಿ  ಶಂಕರ್, ಲಕ್ಮ್ಷೀನಾರಾಯಣ ನಾಗವಾರ, ಡಿ.ಜಿ.ಸಾಗರ್, ವೆಂಕಟಸ್ವಾಮಿ, ಗೋವಿಂದಯ್ಯ ಥರದ ಹೋರಾಟಗಾರರು ಕೋಮುವಾದದ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಾ ಬಂದಿದ್ದಾರೆ. ಹಿಂದೂ ಕೋಮುವಾದವನ್ನು ವಿರೋಧಿಸುವ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಮುರುಘಾ ಶರಣರು, ಗದುಗಿನ ತೋಂಟದಾರ್‍ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರಂಥ ಕೆಲವು ಉದಾರವಾದಿ ಲಿಂಗಾಯತ ಹಾಗೂ ಶೂದ್ರ ಜಾತಿಗಳ ಧರ್ಮಗುರುಗಳು, ಫಾದರ್ ಚೆಸರಾ ಥರದ ಕ್ರೈಸ್ತ ಪಾದ್ರಿಗಳು ಕೂಡ ಕೋಮುವಾದ ವಿರೋಧಿ ಹೋರಾಟಗಳಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತಳವೂರಿದ ಮೇಲೆ ಬೇರೆ ಬೇರೆ ರೀತಿಯಲ್ಲಿ ಧ್ರುವೀಕರಣಗೊಳ್ಳತೊಡಗಿದ ಜಾತೀಯ ಹಾಗೂ  ಮತೀಯ ಶಕ್ತಿಗಳಿಗೆ ಇವತ್ತಿಗೂ ಹಲಬಗೆಯ ಜಾತ್ಯತೀತ ವೇದಿಕೆಗಳು, ಗಾಂಧೀವಾದಿಗಳು, ಎಡಪಂಥೀಯರು, ಸಮಾಜವಾದಿಗಳು, ಎಡಪಕ್ಷಗಳು ಹಾಗೂ ದಲಿತ ಸಂಘಟನೆಗಳು ವಿರೋಧ ತೋರಿಸುತ್ತಲೇ ಇವೆ. ಈ ವಿರೋಧವು  ಪತ್ರಿಕೆಗಳು, ಪ್ರತಿಭಟನೆ, ಸಾಹಿತ್ಯ, ಬರಹ, ಸಂವಾದ, ವಿಚಾರ ಸಂಕಿರಣ, ಬೋಧನೆ ಹಾಗೂ ಕಾರ್ಯಕ್ರಮಗಳ ಮೂಲಕ  ನಿರಂತರವಾಗಿ ವ್ಯಕ್ತವಾಗುತ್ತಲೇ ಇದೆ.

3

ಕರ್ನಾಟಕದ ಟಿಪಿಕಲ್ ಸೆಕ್ಯುಲರ್ ಪ್ರಜ್ಞೆ  ಏಕಕಾಲಕ್ಕೆ ಜಾತಿವಿರೋಧಿ ಹಾಗೂ ಕೋಮುವಾದ ವಿರೋಧಿ ಎರಡೂ ಆಗಿದೆ. ಆದರೆ ಕರ್ನಾಟಕದಲ್ಲಿ  ಈ ಬಗೆಯ ಸೆಕ್ಯುಲರ್ ಪ್ರಜ್ಞೆ  ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಇರುವ ಕೆಲವು  ತೊಡಕುಗಳನ್ನೂ ಸರಿಯಾಗಿ ಗಮನಿಸಬೇಕು. ಸಮಾಜಪರ ಕೆಲಸದಲ್ಲಿ ಭಾಗಿಯಾಗಿರುವ ಅನೇಕ ಸಂಘಟನೆಗಳಿಗೆ ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವು ಹಾಗೂ ಅರಿವು ಇಲ್ಲದಿರುವುದು ಕೂಡ ಒಂದು ಮುಖ್ಯ ಸಮಸ್ಯೆಯೇ ಆಗಿದೆ. ಉದಾಹರಣೆಗೆ, ಅರಸು ಆಡಳಿತ ಹಾಗೂ ಆನಂತರದ ಕೆಲವು ಘಟ್ಟಗಳಲ್ಲಿ ಹಿಂದುಳಿದ ವರ್ಗಗಳು ಹಾಗೂ ಹಿಂದುಳಿದ ಜಾತಿಗಳ ಮರು ಧೃವೀಕರಣವಾದಾಗ ಅವುಗಳ ನಾಯಕರು ಜಾತಿವಿನಾಶ ಹಾಗೂ ಜಾತ್ಯತೀತತೆಯ ಅಂಶಗಳನ್ನು ಈ ಚಳವಳಿಯ ಜೊತೆಗೆ ಸಮರ್ಥವಾಗಿ ಬೆಸೆಯಲಾರದೆ ಹೋದರು. ಅಲ್ಪಸಂಖ್ಯಾತ, ಹಿಂದುಳಿದ ದಲಿತರನ್ನು ಒಗ್ಗೂಡಿಸಲು ಯತ್ನಿಸಿದ ’ಅಹಿಂದ’ದ ಪರಿಕಲ್ಪನೆ ಕೂಡ ಜಾತ್ಯತೀತ ಕಲ್ಪನೆಯಾಗಿ ವಿಕಾಸಗೊಳ್ಳಲಿಲ್ಲ. ಯಜಮಾನೀ ಜಾತಿಗಳ ಹಿಡಿತದಿಂದ ನರಳಿರುವ ಹಿಂದುಳಿದ ಜಾತಿಗಳು ಒಗ್ಗೂಡಿದ ಘಟ್ಟದಲ್ಲಿ, ಜಾತಿಪದ್ಧತಿಗೆ ಮಾರಣಾಂತಿಕ ಹೊಡೆತ ಕೊಡುವುದರ ಮೂಲಕವೇ ಹಿಂದುಳಿದವರ ನಿಜವಾದ ಬಿಡುಗಡೆ ಸಾಧ್ಯ ಎಂಬ ಮುಖ್ಯ ಸತ್ಯವನ್ನು ಈ ಜಾತಿಗಳ ನಾಯಕರು ಮರೆತರು. ಬದಲಿಗೆ ತಂತಮ್ಮ ಜಾತಿಗಳ ಜನರನ್ನು ಒಗ್ಗೂಡಿಸುವುದರ ಮೂಲಕ ಸಣ್ಣಪುಟ್ಟ ನಾಯಕತ್ವ ಪಡೆಯಲು ಈ  ನಾಯಕರು ಮುಂದಾದರು. ಹಿಂದುಳಿದ ಜಾತಿಗಳ ಕೆಲವು ನಾಯಕರಲ್ಲಿ ಇದ್ದ ಒಂದು ಮಟ್ಟದ ಜಾತ್ಯತೀತ ಪ್ರಜ್ಞೆ ಅವರ ಹಿಂದುಳಿದ ಜಾತಿಗಳ ಅನುಯಾಯಿಗಳಿಗೆ ವರ್ಗಾವಣೆಯಾಗಲಿಲ್ಲ. ದಲಿತ ಸಂಘರ್ಷ ಸಮಿತಿಗಳ ಮೂಲಕ ದಲಿತ ಪ್ರಜ್ಞೆ  ಹಾಗೂ ಜಾತ್ಯತೀತ ಪ್ರಜ್ಞೆಗಳು ದಲಿತ ಸಮುದಾಯಗಳಲ್ಲಿ ಬೆಳೆದಂತೆ, ಹಿಂದುಳಿದ ವರ್ಗಗಳ ಚಳವಳಿಯ ಮೂಲಕ  ಹಿಂದುಳಿದ ಜಾತಿಗಳಲ್ಲಿ ಶೂದ್ರಪ್ರಜ್ಞೆ ಹಾಗೂ ಜಾತ್ಯತೀತ ಪ್ರಜ್ಞೆಗಳು ಬೆಳೆಯಲಿಲ್ಲ. ಹೀಗಾಗಿ, ಹಿಂದುಳಿದ ಜಾತಿಗಳ ಹುಡುಗರು ಭಜರಂಗ ದಳದಂಥ ಕ್ರೂರ ಮತೀಯ ವೇದಿಕೆಗಳ ಸೇವಕ ವರ್ಗವಾಗುವ ಹೀನಾಯಸ್ಥಿತಿ ತಲುಪಿ, ಕೋಮುವಾದಿ ಹಿಂಸೆಯನ್ನು ಬಿತ್ತುವವರ ದಾಳಗಳಾದರು. ಜಾತಿವಿರೋಧದ ಆಶಯವಿರುವ ಬಹುಜನ ಸಮಾಜ ಪಕ್ಷ ಕೂಡ ಬರಬರುತ್ತಾ, ’ಜಾತಿವಿನಾಶಕ್ಕಿಂತ ಜಾತಿಗಳ ಒಗ್ಗೂಡುವಿಕೆಯ ಮೂಲಕವೇ ಬಹುಜನರು ಅಧಿಕಾರ ಹಿಡಿಯಬೇಕು’ ಎಂದು ವಾದಿಸಿದ ಕಾನ್ಶೀರಾಮ್ ಅವರ ಚಿಂತನೆಯಿಂದ  ಹೆಚ್ಚು ಪ್ರಭಾವಿತವಾಯಿತು.

ಸಾಂಸ್ಕೃತಿಕ ಕೇಂದ್ರಗಳಲ್ಲಿರುವ ಅನೇಕ ಉದಾರವಾದಿ ಗುಂಪುಗಳು ಜಾತಿವಿರೋಧ ಹಾಗೂ ಜಾತ್ಯತೀತತೆಯ ಬಗ್ಗೆ ಇನ್ನೂ  ಸ್ಪಷ್ಟವಿದ್ದಂತಿಲ್ಲ. ಅಲ್ಲದೆ, ಸೆಕ್ಯುಲರ್ ಪ್ರಜ್ಞೆಯ ವ್ಯಕ್ತಿಗಳು ಹಾಗೂ ವೇದಿಕೆಗಳ ಜೊತೆಗೆ  ಬುದ್ಧಿಜೀವಿ ವರ್ಗದ ಬಹು ದೊಡ್ಡ ಭಾಗವಾದ ಲಾಯರುಗಳು, ಇಂಜಿನಿಯರ್‌‍ಗಳು, ವಿಜ್ಞಾನಿಗಳು, ಡಾಕ್ಟರುಗಳು ಹೆಚ್ಚಿನ ಸಂಖ್ಯೆಯಲ್ಲಿ  ಸೇರಿದಂತೆ ಕಾಣುತ್ತಿಲ್ಲ. ಸ್ತ್ರೀವಾದಿಗಳು ಜಾತೀಯತೆ ಹಾಗೂ ಕೋಮುವಾದಕ್ಕೆ ವಿರೋಧ ತೋರುತ್ತಾ ಬಂದಿದ್ದರೂ, ಮಹಿಳೆಯರನ್ನು ಉದ್ದೇಶಿಸಿ ಬರೆದಾಗ, ಮಾತಾಡಿದಾಗ ಈ ಸಮಸ್ಯೆಯನ್ನು ಹೆಚ್ಚು ಮುಖ್ಯವಾಗಿ ಪರಿಗಣಿಸಿದಂತಿಲ್ಲ. ಕೋಮುವಾದದಿಂದ ಅಪಾರ ಅಪಾಯಕ್ಕೆ ಒಳಗಾಗುವ ಹಾಗೂ ಕೋಮುವಾದ ಹಬ್ಬಿಸುವ ಕಂದಾಚಾರದಿಂದಾಗಿ ತಮ್ಮ ಅವಕಾಶಗಳನ್ನು ಹಾಗೂ ಚಲನೆಯ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮಹಿಳೆಯರಿಗೆ ಕೋಮುವಾದದ ಬಗ್ಗೆ ವ್ಯಾಪಕ ಎಚ್ಚರ ಮೂಡಿಸಲು ಸ್ತ್ರೀವಾದಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ, ಮಹಿಳೆಯರು ಪುರುಷರು ಬಿತ್ತುವ ಕೋಮು ಪೂರ್ವಗ್ರಹದ ಬಲಿಪಶುಗಳೂ ಆಗಿದ್ದಾರೆ. ತಮಗರಿವಿಲ್ಲದೆಯೇ ಆ ಪೂರ್ವಗ್ರಹವನ್ನು ಹಬ್ಬಿಸುವ ಪ್ರಸಾರಕೇಂದ್ರಗಳೂ ಆಗಿದ್ದಾರೆ. ಈ ಅಪಾಯವನ್ನು ನಮ್ಮ ಸ್ತ್ರೀವಾದಿಗಳು  ದೊಡ್ಡ ಮಟ್ಟದಲ್ಲಿ ಗ್ರಹಿಸಿ ವಿವರಿಸಿದಂತಿಲ್ಲ. ಕೋಮುವಾದ ಕುರಿತಂತೆ ವಿದ್ಯಾರ್ಥಿ ಸಮುದಾಯವನ್ನು ಎಚ್ಚರಿಸುತ್ತಾ, ಜಾತ್ಯತೀತತೆಯನ್ನು ಬೆಳೆಸುವ  ಕೆಲಸ ದಲಿತ ಚಳವಳಿ ಹಾಗೂ ಎಸ್.ಎಫ್.ಐ ಥರದ  ಕೆಲವೇ ಸಂಘಟನೆಗಳು ಹಾಗೂ ಬಿಡಿ ಬಿಡಿ ವ್ಯಕ್ತಿಗಳ ಮಟ್ಟದಲ್ಲಿ  ಮಾತ್ರ ನಡೆಯುತ್ತಾ ಬಂದಿದೆಯೇ ಹೊರತು ಉಳಿದ ವೇದಿಕೆಗಳು ಇತ್ತ  ಹೆಚ್ಚು ಗಮನ ಕೊಟ್ಟಂತಿಲ್ಲ.

ಕರ್ನಾಟಕದ ವಿವಿಧ ಸಮುದಾಯಗಳು ಅನುಸರಿಸುತ್ತಿರುವ ಹಲವು ಧರ್ಮಗಳಲ್ಲಿ ಇರಬಹುದಾದ ಒಂದು ಮಟ್ಟದ ಜಾತ್ಯತೀತ ಲಕ್ಷಣಗಳಿಗೂ ಕೋಮುವಾದದಿಂದಾಗಿ ಹಾಗೂಈ ಧರ್ಮಗಳ ಒಳಗೇ ಇರುವ ಸನಾತನ ಧೋರಣೆಯಿಂದಾಗಿ ಹಿನ್ನಡೆಯಾದಂತಿದೆ. ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಧರ್ಮಗಳಲ್ಲಿ ಮನುಧರ್ಮವನ್ನು ಹಾಗೂ ವೈದಿಕ ಹಿಂದೂ ಧರ್ಮವನ್ನು ಪೋಷಿಸುತ್ತಾ ಬಂದಿರುವ ಸ್ಮಾರ್ತ ಹಾಗೂ ಮಾಧ್ವ ಧರ್ಮಗಳನ್ನು ಬಿಟ್ಟರೆ ಉಳಿದ ಅನೇಕ ಧರ್ಮಗಳ ನೋಟಕ್ರಮಗಳು ಚರಿತ್ರೆಯಲ್ಲಿ ಜಾತಿಪದ್ಧತಿಗೆ ಒಂದಲ್ಲ ಒಂದು ಬಗೆಯ ಭಿನ್ನಮತವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಲಿಂಗಾಯತ ಧರ್ಮ, ಜೈನಧರ್ಮ, ಸಿಖ್ ಧರ್ಮ, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಸೂಫಿ ಮಾರ್ಗ, ಮಂಟೇಸ್ವಾಮಿ, ಮಲೆಮಾದೇಶ್ವರ ಚಿಂತನಾ ಕ್ರಮಗಳು ಜಾತಿಪದ್ಧತಿಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿವೆ. ಆದರೆ ಈಚಿನ ದಶಕಗಳಲ್ಲಿ  ಜೈನ, ಲಿಂಗಾಯತ, ಸಿಖ್ ಮಾರ್ಗಗಳು ತಮ್ಮ ಧರ್ಮಗಳ ಮೂಲದಲ್ಲಿರುವ ಜಾತ್ಯತೀತ ಸತ್ವವನ್ನೇ ನಾಶಮಾಡಿಕೊಂಡಂತೆ ಕಾಣುತ್ತದೆ. ಈ ಸ್ಥಿತಿಗೆ ಆಯಾ ಧರ್ಮಗಳ ಉದಾರ ಗುಣಗಳನ್ನು ಅವುಗಳ ಒಳಗಿದ್ದೇ ನಾಶ ಮಾಡುತ್ತಿರುವ ಪೂಜಾರಿ, ಪುರೋಹಿತರೂ, ಈ ಧರ್ಮಗಳ ಅಸ್ತಿತ್ವವನ್ನು ಇಲ್ಲವಾಗಿಸಲು ಯತ್ನಿಸುತ್ತಾ ಬಂದಿರುವ ವೈದಿಕರೂ ಕಾರಣರಾಗಿದ್ದಾರೆ. ’ಜಾತಿ ಸಹಜ ಅಲ್ಲ, ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ’ ಎಂಬ ತತ್ವದ ಮೇಲೆ ನಿಂತಿರುವ ಬೌದ್ಧ ಧರ್ಮ ಮಾತ್ರ ದಲಿತ ಚಳವಳಿಯ ಜೊತೆ ಬೆರೆತಿರುವ ಕಾರಣದಿಂದಾಗಿ ಇಂದಿಗೂ ಜಾತ್ಯತೀತ ತತ್ವವನ್ನು ಉಳಿಸಿಕೊಂಡೇ ಬೆಳೆಯುತ್ತಿದೆ.

ದೇಶದ ಎಲ್ಲೆಡೆ ಜಾತ್ಯತೀತ ಆಂದೋಲನದಲ್ಲಿರುವ ಒಂದು ಮುಖ್ಯ ಸಮಸ್ಯೆ ಕರ್ನಾಟಕದ ಜಾತ್ಯತೀತ ಆಂದೋಲನದಲ್ಲೂ ಇದೆ. ಅದೇನೆಂದರೆ, ಈ ಆಂದೋಲನ ಮತೀಯವಾದಿಗಳು ಒಡ್ಡುವ ಸಮಸ್ಯೆಗಳ ಸಂದರ್ಭದಲ್ಲಿ  ಹೆಚ್ಚು ಜಾಗೃತವಾಗುತ್ತದೆ. ಉಳಿದಂತೆ ಅದು ಅಲ್ಪತೃಪ್ತ ಸ್ಥಿತಿಯಲ್ಲಿರತೊಡಗುತ್ತದೆ.  ಸಾಮಾನ್ಯವಾಗಿ ಕೇಡನ್ನು ಸೃಷ್ಟಿಸುವವರಿಗೆ ಇರುವ  ದುರುಳ ಏಕೋದ್ದೇಶ ಹಾಗೂ ಜಿಗುಟುತನ ಒಳಿತಿನ ಪರವಾಗಿರುವವರಿಗೆ ಇರುವುದಿಲ್ಲ. ಯಥಾಸ್ಥಿತಿವಾದಿಗಳಿಂದ, ರಾಜಕೀಯ ಪಕ್ಷಗಳಿಂದ ಹಾಗೂ ಮತೀಯ ಶಕ್ತಿಗಳಿಂದ ಹಣ ಹಾಗೂ ಇನ್ನಿತರ ಬಗೆಯ ಬೆಂಬಲ ಪಡೆವ ಕೋಮುವಾದಿಗಳು ಸದಾ ಒಂದಲ್ಲ ಒಂದು ಸಂಚು ಮಾಡಿ ಸಮಾಜದ ಸಮತೋಲನ ಕೆಡಿಸುತ್ತಲೇ ಇರುತ್ತಾರೆ. ಈ ಸಂಚುಗಳನ್ನು  ಸಮಾಜ ವಿರೋಧಿ ಅಪರಾಧಗಳೆಂದು ಪರಿಗಣಿಸಿ ಮಟ್ಟ ಹಾಕುವುದು ಸರ್ಕಾರಗಳ ಕರ್ತವ್ಯ. ಈ ಕೆಲಸವನ್ನು ಜಾತ್ಯತೀತವಾದಿಗಳೇ ಮಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ, ಬಲಪಂಥೀಯ ಗುಂಪುಗಳು, ಧಾರ್ಮಿಕ ವೇದಿಕೆಗಳು, ಕೋಮುವಾದಿ ಪೋಲೀಸರು, ಅಧಿಕಾರಿಗಳು, ಮಾಧ್ಯಮಗಳಲ್ಲಿ ನುಸುಳಿಕೊಂಡಿರುವ ಕೋಮುವಾದಿಗಳು ವಿಚ್ಛಿದ್ರಕಾರಿ ಕೋಮು ಶಕ್ತಿಗಳಿಗೆ ಬಲ ತುಂಬುತ್ತಿರುವ ಕ್ರಮಗಳ ಬಗೆಗೆ ಸರ್ಕಾರಗಳನ್ನು ಹಾಗೂ ಜನರನ್ನು ಎಚ್ಚರಿಸುವ ಕೆಲಸವನ್ನಂತೂ ಜಾತ್ಯತೀತ ಶಕ್ತಿಗಳು ನಿರಂತರವಾಗಿ ಮಾಡುತ್ತಿರಬೇಕಾಗುತ್ತದೆ. ಸರ್ಕಾರಗಳೇ ಮತೀಯವಾದಾಗ ಈ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.

ಹಾಗೆಯೇ, ಜಾತ್ಯತೀತತೆ ಎನ್ನುವುದು ಕೇವಲ ಕೋಮುವಾದ ಹುಟ್ಟು ಹಾಕುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸಕ್ಕೆ ಮಾತ್ರ ಸೀಮಿತವಾಗಬಾರದು. ಬದಲಿಗೆ ಜಾತ್ಯತೀತತೆಯನ್ನು  ಒಂದು ವಿಶಾಲ ನೋಟಕ್ರಮವಾಗಿ ಬೆಳೆಸಿ, ಜಾತ್ಯತೀತ ಮೌಲ್ಯಗಳನ್ನು, ಆಶಯಗಳನ್ನು ಜನರ ಜೀವನಕ್ರಮದ ಭಾಗವಾಗಿ ಬೆಳೆಸಲು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಜಾತ್ಯತೀತತೆ ಎನ್ನುವುದು ನಾವೂ ನೆಮ್ಮದಿಯಿಂದ ಬದುಕಿ ನಮ್ಮ ಸುತ್ತಲಿನವರನ್ನೂ ನೆಮ್ಮದಿಯಿಂದ ಬದುಕಲು ನೆರವಾಗುವ ಉದಾತ್ತ ಜೀವನಕ್ರಮ ಎಂಬುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಿರಬೇಕಾಗುತ್ತದೆ. ಆಧುನಿಕ ಭಾರತದಲ್ಲಿ ಜಾತ್ಯತೀತತೆ ಇಲ್ಲದಿದ್ದರೆ ಸ್ಕೂಲು, ಆಸ್ಪತ್ರೆಗಳಿಂದ ಹಿಡಿದು ಯಾವ ಆಧುನಿಕ ಸಂಸ್ಥೆಗಳೂ ಇರುತ್ತಿರಲಿಲ್ಲ ಹಾಗೂ ಶೋಷಿತ ವರ್ಗಗಳ ಬಿಡುಗಡೆ ಅಸಾಧ್ಯವಾಗುತ್ತಿತ್ತು ಎಂಬ ಸರಳ ಸತ್ಯವನ್ನು ಜನಸಾಮಾನ್ಯರು ಮನಗಾಣಬೇಕಾಗಿದೆ. ಜೊತಗೆ.  ಕೋಮುವಾದದ ವಿಷದ  ಬಗೆಗೆ ಹಾಗೂ ಅದರ ಭೀಕರತೆಯ ಬಗೆಗೆ ಎಲ್ಲ ತಲೆಮಾರಿನ ಜನರನ್ನೂ ಎಚ್ಚರಿಸುತ್ತಿರಬೇಕಾಗುತ್ತದೆ. ನಮ್ಮ ನಿಲುವು, ಬರಹ, ಮಾತು, ಕಾರ್ಯಕ್ರಮ, ರಾಜಕೀಯ ಹಾಗೂ ಸಾಮಾಜಿಕ ಆಯ್ಕೆಗಳು…  ಮುಂತಾಗಿ ಎಲ್ಲ ವಲಯಗಳಲ್ಲೂ ಜಾತಿವಿನಾಶ, ಜಾತಿವಿರೋಧ, ಜಾತ್ಯತೀತತೆ ಹಾಗೂ ಧರ್ಮಾತೀತತೆಗಳು ಬೆಸೆದುಕೊಂಡೇ ಇರಬೇಕಾಗುತ್ತದೆ. ಅದರ ಜೊತೆಗೆ, ಜನಪರವಾದ ಚಳವಳಿಗಳಲ್ಲಿ ಭಾಗಿಯಾಗುವವರು ಜನರ ಕಷ್ಟಗಳನ್ನು ಹಂಚಿಕೊಳ್ಳುವ ಬಗೆಬಗೆಯ ವೇದಿಕೆಗಳಿಗೆ ನೆರವಾಗುತ್ತಾ ಜಾತ್ಯತೀತ ಮನೋಭಾವವನ್ನು ಹಬ್ಬಿಸಬೇಕಾಗುತ್ತದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮನಸ್ಸು ಜಾತೀಯತೆ ಹಾಗೂ ಕೋಮುಭಾವನೆಗಳಿಂದ ವಿಕಾರಗೊಳ್ಳದ ಹಾಗೆ ನೋಡಿಕೊಳ್ಳುವ ಕೆಲಸ ಲಕ್ಷಾಂತರ ಶಿಕ್ಷಕ, ಶಿಕ್ಷಕಿಯರ ಮೇಲೂ ಇದೆ. ಅದೇ ವೇಳೆಗೆ ಬಹುಸಂಖ್ಯಾತರ  ಕೋಮುವಾದಕ್ಕೆ ಪ್ರತಿಯಾಗಿ ಹುಟ್ಟುವ ಅಲ್ಪಸಂಖ್ಯಾತರ ಕೋಮುವಾದದ ಅಪಾಯದ ಬಗೆಗೂ ಕೂಡ ಜಾತ್ಯತೀತರು ಎಚ್ಚರವಾಗಿರಬೇಕಾಗುತ್ತದೆ. ಹಿಂದೂ ಕೋಮುವಾದದಿಂದ ಹಿಂದೂಜಾತಿಗಳ ದುರ್ಬಲರಿಗೆ  ಅನ್ಯಾಯವಾದಂತೆ, ಮುಸ್ಲಿಂ ಮೂಲಭೂತವಾದದಿಂದ ಬಡಮುಸ್ಲಿಮರಿಗೂ ಅನ್ಯಾಯವಾಗುತ್ತದೆ. ಲಂಕೇಶ್, ಅಥವಾ ತೇಜಸ್ವಿ ಥರದವರು ತೋರಿಸಿಕೊಟ್ಟಂತೆ ಸೆಕ್ಯುಲರ್ ಆಗಿರುವುದೆಂದರೆ ಎಲ್ಲ ಬಗೆಯ ಕೋಮುವಾದವನ್ನೂ ವಿರೋಧಿಸುವುದು ಎಂಬುದನ್ನು ನಾವು ಮರೆಯಬಾರದು. ಒಂದು ಬಗೆಯ ಕೋಮುವಾದದ ಬಗ್ಗೆ ಯೋಜಿತ ಮೌನದಿಂದಿರುವುದು ಕೂಡ  ತಪ್ಪು ಎಂಬುದನ್ನು ಲೋಹಿಯಾರಂಥ  ಚಿಂತಕರು ನಮಗೆ ಮನವರಿಕೆ ಮಾಡಿಕೊಟ್ಟಿರುವುದನ್ನು ಕಡೆಗಣಿಸಬಾರದು. ಈ ಎಲ್ಲದರ ನಡುವೆಯೂ ಭಾರತದ ಎಲ್ಲ ಜಾತಿ, ಧರ್ಮಗಳ ಅನುಯಾಯಿಗಳನ್ನೂ ಆಯಾ ಧರ್ಮಗಳ ಪುರೋಹಿತಶಾಹಿಗಳ ಹಿಡಿತದಿಂದ ಹೊರತರುವ ದಿಕ್ಕಿನಲ್ಲೂ ಯೋಚಿಸಬೇಕಾಗುತ್ತದೆ. ಹಾಗೆಯೇ, ಕೋಮು ಭಾವನೆಗಳನ್ನು ಬೆಳೆಸುವ ದುರುಳ ವೇದಿಕೆಗಳ ವ್ಯಾಖ್ಯಾನಗಳನ್ನು, ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಗಾಳಿಸುದ್ದಿಗಳಾಗಿ ಹಬ್ಬಿಸುವ ಬೇಜವಾಬ್ದಾರಿ ಮಧ್ಯಮ ವರ್ಗದ ವಾಚಾಳಿಗಳ ಪೂರ್ವಗ್ರಹ ಹಾಗೂ ಅಜ್ಞಾನಗಳನ್ನು ತಿದ್ದುವ ಕೆಲಸವನ್ನೂ ಮಾಡುತ್ತಿರಬೇಕಾಗುತ್ತದೆ.

ಸಂವಿಧಾನದ ಮೂಲ ಆಶಯವಾದ ಹಾಗೂ ಭಾರತದ ಉಳಿವಿಗೆ ಅತ್ಯಗತ್ಯವಾದ ಸೆಕ್ಯುಲರಿಸಮ್ಮನ್ನು ಅಪಾರ ಎಚ್ಚರದಿಂದ, ನಿರಂತರವಾಗಿ ಪೊರೆಯದಿದ್ದರೆ ಭಾರತದ ವರ್ತಮಾನ ಹಾಗೂ ಭವಿಷ್ಯಗಳೆರಡೂ ಗಂಡಾಂತರದಲ್ಲಿರುತ್ತವೆ ಎಂಬ ಕಠೋರ ಸತ್ಯವನ್ನು ಎಲ್ಲ ಭಾರತೀಯರಿಗೂ ತಲುಪಿಸುವ ದೊಡ್ಡ ಜವಾಬ್ದಾರಿ ಜಾತ್ಯತೀತರ ಮೇಲೇ ಇದೆ ಎಂಬುದನ್ನು ಮರೆಯಬಾರದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)