Daily Archives: March 21, 2012

ಬಳ್ಳಾರಿ ಹಿನ್ನೆಲೆಯಲ್ಲಿ ಉ-ಚಿ ಚುನಾವಣೆ ಅವಲೋಕನ – ಪ್ರಗತಿಪರರಿಗೊಂದು ಪಾಠ?


-ಬಿ. ಶ್ರೀಪಾದ ಭಟ್


 
ಇತ್ತ ಮುಂಬೈ ಕರ್ನಾಟಕಕ್ಕೂ ಸೇರದ ಅತ್ತ ಹೈದರಾಬಾದ್ ಕರ್ನಾಟಕಕ್ಕೂ ಸೇರದ ಟಿಪಿಕಲ್ ಬಯಲುಸೀಮೆ ಬರಡು ಪ್ರದೇಶದ ಬಳ್ಳಾರಿ ಜಿಲ್ಲೆಗೆ ಕರ್ನಾಟಕದ ಇತರೇ ಜಿಲ್ಲೆಗಳಂತೆ ತನ್ನದೇ ಆದ ಒಂದು ಅಸ್ಮಿತೆಯಾಗಲಿ, ಸಾಂಸ್ಕೃತಿಕ ಪರಂಪರೆಯಾಗಲಿ ಇಲ್ಲ. ಇದು ತನ್ನದೇ 7 ತಾಲೂಕುಗಳಾದ ಸಿರುಗುಪ್ಪ, ಹೊಸಪೇಟೆ, ಕೂಡ್ಲಿಗಿ, ಬಳ್ಳಾರಿ ಗ್ರಾಮಾಂತರ, ಹೂವಿನ ಹಡಗಲಿ, ಹಗರಿಬೊಮ್ಮನ ಹಳ್ಳಿ, ಸೊಂಡೂರು (ಸಿರುಗುಪ್ಪ ಹಾಗು ಬಳ್ಳಾರಿ ಗ್ರಾಮಾಂತರ ಹೊರತುಪಡಿಸಿ) ಇವುಗಳೊಂದಿಗೂ ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಯಾವುದೇ ರೀತಿಯ ಸಾಮ್ಯತೆಯನ್ನು ಹೊಂದಿಲ್ಲ. ಈ ಜಿಲ್ಲೆ ಹೆಚ್ಚೂ ಕಡಿಮೆ ಕಳೆದ 2 ದಶಕಗಳಿಂದ ಆಂಧ್ರದ ರಾಯಲಸೀಮದ ಜಮೀನ್ದಾರಿ ವ್ಯಕ್ತಿತ್ವವನ್ನೂ, ಫ಼್ಯೂಡಲಿಸಂನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅದನ್ನೂ ಸಂಪೂರ್ಣವಾಗಿ ಹೊತ್ತುಕೊಂಡಿಲ್ಲ ಅಥವಾ ಒಳಗೊಂಡಿಲ್ಲ. ಈ ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶ ಈ ರೀತಿಯಾಗಿ ತೆಲುಗುಮಯವಾಗದಂತೆ ತೊಡರುಗಾಲಿಡುತ್ತಿರುವುದು ಅಲ್ಲಿನ ಕನ್ನಡದ ಜನತೆಯಿಂದ. ಆದರೆ ಈಗ ಇವರೂ ಅಲ್ಪಸಂಖ್ಯಾತರಾಗಿದ್ದಾರೆ. ಗಣಿಚೋರರಾದ ರೆಡ್ಡಿಗಳ ದೆಸೆಯಿಂದ ಕಳೆದ ಹತ್ತು ವರ್ಷಗಳಲ್ಲಿ ಇಡೀ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ತೆಲುಗು ಭಾಷೆಯನ್ನು ಆಡು ಮಾತನ್ನಾಗಿಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಕಾಲದಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದ ಅಲ್ಲಿನ ನಟರಾಜ ಹಾಗೂ ಉಮಾ ಚಿತ್ರಮಂದಿರಗಳು ಇಂದು ತೆಲಗು ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿವೆ. ಅಲ್ಲಿನ ತಾಲೂಕ ಕಛೇರಿಗಳಲ್ಲಾಗಲಿ, ಡಿಸಿ ಆಫೀಸಿನಲ್ಲಾಗಲಿ, ನಗರಸಭೆಗಳಲ್ಲಾಗಲಿ ಎಲ್ಲಾ ವಿಭಾಗಳಲ್ಲಿಯೂ ವಿಜೃಂಭಿಸುತ್ತಿರುವುದು ತೆಲುಗು ಭಾಷೆ. ಕೇವಲ ಆಡಳಿತದಲ್ಲಿನ ವ್ಯವಹಾರ ಮಾತ್ರ ಕನ್ನಡದಲ್ಲಿದೆ.

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಇಲ್ಲಿನ ರಾಜಕೀಯವನ್ನು, ಶಾಸಕ ಕ್ಷೇತ್ರವನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತ್ತು. ಆ ಹಿಡಿತ ಊಳಿಗಮಾನ್ಯದ, ಫ಼ೂಡಲಿಸಂನ ಕಪಿಮುಷ್ಟಿಯಾಗಿತ್ತು. ಅಲ್ಲಿ ಅಬಿವೃದ್ದಿ ಎನ್ನುವುದು ಮರೀಚಿಕೆಯಾಗಿತ್ತು. ಅಲ್ಲಿ ವಿಜೃಂಭಿಸುತ್ತಿದ್ದುದು ಕೇವಲ ಗೂಂಡಾಗಿರಿ ಮಾತ್ರ. ಜನತೆಯಲ್ಲಿ ಕೂಡ ಯಾವುದು ಜೀವಂತ ಸ್ಥಿತಿ, ಯಾವುದು ಸತ್ತಂತಹ ವ್ಯವಸ್ಥೆ ಎನ್ನುವ ಜಿಜ್ನಾಸೆ ಕೂಡ ಇರಲಿಲ್ಲ. ಇವರಲ್ಲಿ ಗೊಂದಲಗಳೇ ಇರಲಿಲ್ಲ. ಅವರಲ್ಲಿ ರಾಜಕೀಯ ಪ್ರಜ್ನೆಯಾಗಲಿ, ಮಹತ್ವಾಕಾಂಕ್ಷೆಯಾಗಲಿ ಮೈಗೂಡಿರಲೇ ಇಲ್ಲ. ಹೀಗಾಗಿ ಇಲ್ಲಿ ನಡೆದ ಸಮಾಜವಾದಿ, ಎಡಪಂಥೀಯ ಪ್ರಗತಿಪರ ಹೋರಾಟಗಳು ಸಾಮೂಹಿಕ ಜನ ಬೆಂಬಲವಿಲ್ಲದೆ ಸೊರಗಿದವು. ಈ ಪ್ರಗತಿಪರ ಹೋರಾಟಗಳು ದಾಸನ್ ಸಾಲೋಮನ್ ,ಶಾಂತರುದ್ರಪ್ಪ, ಸಿರಿಗೆರೆ ಬಸವರಾಜ್, ಅರವಿಂದ ಮಲೆಬೆನ್ನೂರು, ಶಾರದಮ್ಮ ಮಲೆಬೆನ್ನೂರುರಂತಹವರ ಆದರ್ಶದ, ಪ್ರಾಮಾಣಿಕತೆಯ, ಸಿದ್ಧಾಂತ ಆಧಾರಿತ ಹೋರಾಟದ ವ್ಯಕ್ತಿಗತ ನೆಲೆಯನ್ನು ಮಾತ್ರ ನೆಚ್ಚಿಕೊಂಡಿದ್ದವು. ಸಿರಿಗೆರೆ ಬಸವರಾಜು ಅವರು ಎಂಬತ್ತರ ದಶಕದಲ್ಲಿ ಆಗಿನ ಶಾಸಕರಾಗಿದ್ದ ಮುಂಡ್ಲೂರು ರಾಮಪ್ಪ ಹಾಗೂ ಬಸವರಾಜೇಶ್ವರಿಯವರ ವಿರುದ್ಧ ತಮ್ಮ ಏಕಾಂಗಿ ಹೋರಾಟವನ್ನು ನಡೆಸಿದ್ದರು. ಮುಂಡ್ಲೂರು ರಾಮಪ್ಪನವರದು ತೋಳ್ಬಲದ ದಬ್ಬಾಳಿಕೆಯ, ಫ಼ೂಡಲಿಸಂನ ರಾಜಕೀಯವಾದರೆ ( ಇವರ ತಮ್ಮ ರೈಲ್ವೆ ಬಾಬು ಆ ಕಾಲಕ್ಕೆ ಕುಖ್ಯಾತ ರೌಡಿಯಾಗಿದ್ದ) ಸಿರಿಗೆರೆ ಬಸವರಾಜು ಅವರದು ಪ್ರವಾಹದ ವಿರುದ್ಧದ ಅತ್ಯಂತ ಏಕಾಂಗಿ ಹೋರಾಟವಾಗಿತ್ತು. ಸಿರಿಗೆರೆ ಬಸವರಾಜು ಅವರ ಈ ಗೂಂಡಾಗಿರಿಯ ವಿರುದ್ಧದ ಬೀದಿ ಹೋರಾಟಕ್ಕೆ ಕೆಳವರ್ಗಗಳಿಂದ, ದಲಿತರಿಂದ ಅಪಾರ ಜನ ಬೆಂಬಲವಿತ್ತು. ಆದರೆ ಅಲ್ಲಿನ ಮಧ್ಯಮ ವರ್ಗ ಮಾತ್ರ ಸಿರಿಗೆರೆ ಬಸವರಾಜು ಅವರ ಪ್ರಗತಿಪರ ಹೋರಾಟಕ್ಕೆ ಸಂಪೂರ್ಣ ಅಸಡ್ಡೆಯನ್ನು, ನಿರ್ಲಕ್ಷ್ಯವನ್ನು ಪ್ರದರ್ಶಿಸಿತು. ಆದರೆ ದುರಂತವೆಂದರೆ ಬಳ್ಳಾರಿಯ ರಕ್ತಸಿಕ್ತ ರಾಜಕಾರಣಕ್ಕೆ ಬಲಿಯಾದ ಅಮಾಯಕ ಸಿರಿಗೆರೆ ಬಸವರಾಜು ಹತ್ಯೆಗೀಡಾದರು. ಅಲ್ಲಿಗೆ ಆ ಬರಡು ನೆಲದಲ್ಲಿ ಎಲ್ಲೋ ಒಂದು ಕಡೆ ಕ್ಷೀಣವಾಗಿಯಾದರೂ ಧ್ವನಿ ಹೊರಡಿಸುತ್ತಿದ್ದ ಜನಪರ, ಪ್ರಜಾಸತ್ತಾತ್ಮಕ ಹೋರಾಟದ ನೆಲೆಯೇ ಅಂತ್ಯಗೊಂಡಿತು.

ಸಿರಿಗೆರೆ ಪನ್ನರಾಜು ಅವರು ಸಿರಿಗೆರೆ ಬಸವರಾಜು ಅವರ ಸಹೋದರ. ಇಂತಹ ಅತ್ಯಂತ ನಿರಾಶದಾಯಕ ಹಿನ್ನೆಲೆಯ ಬಳ್ಳಾರಿಯಲ್ಲಿ 1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮಂಡ್ಲೂರು ರಾಮಪ್ಪ ಹಾಗೂ ಪಕ್ಷೇತರ ಭಾಸ್ಕರನಾಯ್ಡು ( ಮಟ್ಕ ದೊರೆ) ಅವರ ವಿರುದ್ಧ ಪ್ರಗತಿಪರ ಹೋರಾಟಗಾರಾದ ಸಿರಿಗೆರೆ ಪನ್ನರಾಜು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪನ್ನರಾಜು ಅವರಿಗೆ ಅಣ್ಣ ಸಿರಿಗೆರೆ ಬಸವರಾಜು ಅವರ ಜನಪ್ರಿಯತೆಯ ದೊಡ್ಡ ಅಲೆಯೇ ಆಶಾಕಿರಣ ಹಾಗೂ ನಂಬುಗೆಯ ತೇಲು ದೋಣಿ. ಆಗ ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ವಿ,ಪಿ,ಸಿಂಗ್‌ರವರ ಜನಪ್ರಿಯತೆಯ ಪ್ರಭಾವಳಿಯಲ್ಲಿ ಸಿಲುಕಿಕೊಂಡು ಮೊಟ್ಟಮೊದಲ ಬಾರಿಗೆ  ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿ ಸಿರಿಗೆರೆ ಪನ್ನರಾಜು ಪರವಾಗಿ ಚುನಾವಣ ಕಣದಲ್ಲಿ ಸಂಪೂರ್ಣ ಪ್ರಚಾರಕ್ಕೆ ತೊಡಗಿಕೊಂಡಿದ್ದೆವು. ಇದು ನಮ್ಮೆಲ್ಲರ ಮೊಟ್ಟ ಮೊದಲ ಬಹಿರಂಗ ಚುನಾವಣ ಪ್ರಯೋಗವಾಗಿತ್ತು. ಬಸವರಾಜು ಅವರ ಜನಪರ ಹೋರಾಟದ, ಕೆಳಮಧ್ಯಮ ವರ್ಗದ ಹಿನ್ನೆಲೆ, ಸರಳತೆಯಿಂದಾಗಿ ಸಹೋದರ ಪನ್ನರಾಜುರವರ ಜನಪ್ರಿಯತೆ ತೀವ್ರವಾಗುತ್ತಿತ್ತು. ನಾವೆಲ್ಲ ಸತತವಾಗಿ 15 ದಿನಗಳ ಕಾಲ ಸಂಪೂರ್ಣವಾಗಿ ನಮ್ಮನ್ನೆಲ್ಲ ಪನ್ನರಾಜು ಪರವಾಗಿ  ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ ಆಗ ಮಂಡ್ಲೂರು ರಾಮಪ್ಪನವರ ಹಣ ಬಲ ಹಾಗೂ ಚುನಾವಣ ರಣತಂತ್ರಗಳ ಎದುರು ಜನಪ್ರಿಯರಾಗಿದ್ದರೂ ಪನ್ನರಾಜು ಸೋಲಬೇಕಾಯಿತು. ತನ್ನ ಹಣಬಲ ಹಾಗೂ ತೋಳ್ಬಲದಿಂದ ಮುಂಡ್ಲೂರು ರಾಮಪ್ಪ ಗೆದ್ದುಬಿಟ್ಟರು. ನಮಗೆಲ್ಲ ಆಗ ಈ ಶಕ್ತಿ ರಾಜಕಾರಣ ಹಾಗೂ ಹುಂಡಾ ರಾಜಕಾರಣದ ಹತ್ತಿರದ ಎಳ್ಳಷ್ಟೂ ಪರಿಚಯವಿಲ್ಲದ ಕಾರಣ ಜನಪ್ರಿಯತೆಯಿದ್ದೂ, ಅಪಾರ ಜನಬೆಂಬಲ, ವಿದ್ಯಾರ್ಥಿಗಳ ಬೆಂಬಲವಿದ್ದೂ ಪನ್ನರಾಜು ಅವರ ಸೋಲಿನ ಫಲಿತಾಂಶದಿಂದ ನಾವೆಲ್ಲ ತೀವ್ರ ನಿರಾಶೆಗೆ ಒಳಗಾಗಿದ್ದೆವು.

ಆದರೆ ಇದಕ್ಕಿಂತ ದುರಂತ ಬಳ್ಳಾರಿಗೆ ಹಾಗು ಅಲ್ಲಿನ ಜನತೆಗೆ ಮುಂದೆ ಕಾದಿದ್ದು ವಿಧಿಯ ಕಠೋರ ವಿಪರ್ಯಾಸ.ನಂತರ ನಡೆದದ್ದು ಸಂಪೂರ್ಣ ದುರಂತ ಕಥೆ. ಬಳ್ಳಾರಿಯ ಜನತೆ ಬೆಂಕಿಯಿಂದ ಬಿಡಿಸಿಕೊಳ್ಳಲು ಮುಳ್ಳೂರು ರಾಮಪ್ಪನವರ ತೆಕ್ಕೆಯಿಂದ ಹೊರಬಂದು ಗಣಿಚೋರರಾದ ರೆಡ್ಡಿಗಳು, ಭ್ರಷ್ಟ ರಾಜಕಾರಣಿ ಶ್ರೀರಾಮುಲು ಎನ್ನುವ ಕುದಿವ ಲಾವರಸದ ಪ್ರಪಾತಕ್ಕೆ ಬಿದ್ದು ಸಂಪೂರ್ಣವಾಗಿ ನಲುಗಿ ಹೋದರು. ಅಲ್ಲದೆ ಅಲ್ಲಿನ ಜನತೆ ತಮ್ಮ ಈ ವಿವೇಚನಾರಹಿತ ನಿರ್ಧಾರಗಳಿಂದ ಇಡೀ ಜಿಲ್ಲೆಯನ್ನೇ ಹಾಳುಗೆಡುವಲು ಪರೋಕ್ಷವಾಗಿ ಕಾರಣರಾದರು. ದುರಂತವೆಂದರೆ  ಇಡೀ ಈ ರೆಡ್ಡಿಗಳ, ಶ್ರೀರಾಮುಲು ಅವರ ಅನೈತಿಕ, ಭ್ರಷ್ಟ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ಅಮಾಯಕರಾದ ಹಿಂದುಳಿದ ವರ್ಗಗಳ ಜನಾಂಗ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿಗಿಂತಲೂ ಇಂದಿನ ಇವರ ವರ್ತಮಾನ ಹಾಗು ಭವಿಷ್ಯ ಭೀಕರವಾಗಿದೆ. ಈಗ ಒಬ್ಬ ತರ್ಕರಹಿತ ಸಿದ್ದಾಂತರಹಿತ ರಾಜಕಾರಣಿಯಾದ ಶ್ರೀರಾಮುಲುರವರ ಹುಂಬತನದ ,ಭ್ರಷ್ಟ, ಗೊತ್ತು ಗುರಿಯಿಲ್ಲದ ಬೌದ್ಧಿಕ ದಿವಾಳಿತನದ ಸ್ಥಿತಿಯಿಂದಾಗಿ ಇಡೀ ಬಳ್ಳಾರಿ ಜಿಲ್ಲೆ ಮತ್ತೆ ಅತಂತ್ರ ಸ್ಥಿತಿಯಲ್ಲಿದೆ. ತಾನು ರೆಡ್ಡಿಗಳೊಂದಿಗೆ ಜೊತೆಗೂಡಿ ಅಕ್ರಮವಾಗಿ ಸಂಪಾದಿಸಿದ ಭ್ರಷ್ಟ ದುಡ್ಡಿನಿಂದ ಜನರಿಗೆ ಬೇಕಾಬಿಟ್ಟಿಯಾಗಿ ಹಂಚಿ ಅಮಾಯಕ ಜನರನ್ನು ತಮ್ಮ ಹಂಗಿನರಮನೆಯೊಳಗಿರಿಸಿಕೊಂಡಿದ್ದಾರೆ ಈ ಶ್ರೀರಾಮುಲು.

ಇದೆಲ್ಲವೂ ಶ್ರೀರಾಮುಲು ಅವರನ್ನು ಬೆಂಬಲಿಸುತ್ತಿರುವ ನಮ್ಮ ಕೆಲವು ಸಂಘಟನೆಗಳಿಗೆ, ಪ್ರಗತಿಪರ ಪತ್ರಕರ್ತರಿಗೆ ಗೊತ್ತಿಲ್ಲವೇ? ಗೊತ್ತಿದೆ! ಆದರೆ ಏತಕ್ಕೆ ಇಂತಹ ಅತ್ಮಹತ್ಯಾತ್ಮಕ ನಿಲುವು? ಇವರೆಲ್ಲಾ ಕಳೆದ 50 ವರ್ಷಗಳ ಬಳ್ಳಾರಿಯ ರಾಜಕೀಯ, ಸಾಮಾಜಿಕ ಹಿನ್ನೆಲೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ಶ್ರೀರಾಮುಲು ಅವರ ಆಡೊಂಬಲವೇ ಬಳ್ಳಾರಿ. ಏಕೆಂದರೆ ಶ್ರೀರಾಮುಲು ಇಂದು ಪ್ರದರ್ಶಿಸುತ್ತಿರುವ ಅಮಾಯಕತ್ವ ಬಲು ದೊಡ್ಡ ನಟನೆ. ಗಣಿ ಲೂಟಿಯ, ಲೂಟಿಗೆ ಸಂಪೂರ್ಣವಾಗಿ ಸಹಕರಿಸಿದ ಪಾಪದ ಕೊಡದಿಂದ ಆಪರೇಷನ್ ಕಮಲವೆನ್ನುವ ಅತ್ಯಂತ ಹೇಯ ರಾಜಕೀಯ ಸಿದ್ಧಾಂತದಿಂದ ಕರ್ನಾಟಕ ರಾಜಕಾರಣವನ್ನು ಸಂಪೂರ್ಣ ಕುಲಗೆಡಿಸಿದ ಅಪಾದನೆಗಳಿಂದ ಹಾಗೂ ಬಳ್ಳಾರಿ ಜಿಲ್ಲೆಯನ್ನು ಒಂದು ಜೀತದ ಹಟ್ಟಿಯನ್ನಾಗಿ ಮಾಡಿದ ರೆಡ್ಡಿಗಳಿಗೆ ಸಂಪೂರ್ಣ ಹೆಗಲುಕೊಟ್ಟು ಸಹಕರಿಸಿದ ಶ್ರೀರಾಮುಲು ಎನ್ನುವ ಸಿದ್ಧಾಂತರಹಿತ, ಭ್ರಷ್ಟ ರಾಜಕಾರಣಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲೇ ಬಾರದು. ಹಿಂದೊಮ್ಮೆ ಇಂತಹ ಗತಿಗೆಟ್ಟ ರಾಜಕೀಯದ ವಿರುದ್ಧ ದನಿಯೆತ್ತಿದ ಸಿರಿಗೆರೆ ಬಸವರಾಜು ಅವರು ಬಳ್ಳಾರಿಯ ಫ಼್ಯೂಡಲಿಸಂನ ವಿರುದ್ಧ ಏಕಾಂಗಿ ಹೋರಾಟ ನಡೆಸಿದ್ದರು. ಇದೇ ಮಾದರಿಯ ಏಕಾಂಗಿ ಹೋರಾಟ ರಾಜ್ಯದ ಇತರೇ ಜಿಲ್ಲೆಗಳಲ್ಲಿ ಕೂಡ ಕಾಣಬಹುದು. ಈ ಏಕಾಂಗಿ ಹೋರಾಟದ ಮಾರ್ಗ ಎಂದೂ ಕಳಂಕಿತಗೊಳ್ಳದ, ಪ್ರಾಮಾಣಿಕ, ನಿಸ್ವಾರ್ಥ ಮಾರ್ಗ. ಇದು ಅನ್ಯಾಯದ ವಿರುದ್ಧದ ನಿರಂತರ ಹೋರಾಟ. ಪ್ರೊ.ಎಂ.ಡಿ.ಎನ್ ರವರ ಮಾರ್ಗವೂ ಇದೇ. ಲೋಹಿಯಾ ಮಾರ್ಗವೂ ಇದೇ. ಈ ಮಾರ್ಗವನ್ನು ನಾವು ಕೂಡ ಕೈಗೆತ್ತಿಕೊಳ್ಳಬೇಕು.

ಇಂದು ಸೆಮಿನಾರಗಳಲ್ಲಿ,ವಿಚಾರ ಸಂಕಿರಣಗಳಲ್ಲಿ ಮೈಮರೆತು ಆನಂದಿಸುತ್ತಿರುವ ಕನ್ನಡದ ಬುದ್ಧಿಜೀವಿಗಳು,ಪ್ರಗತಿಪರ ಚಿಂತಕರು ಇವುಗಳ ರೋಚಕತೆಯಿಂದ ಹೊರಬರಬೇಕಿದೆ. ಏಕೆಂದರೆ ಇಲ್ಲಿನ ಬಿಜೆಪಿಯ ಭ್ರಷ್ಟ ರಾಜಕಾರಣದ, ಕೋಮುವಾದದ ವಿರುದ್ಧ ನಿರಂತರ ಹೋರಾಟದ ಮಾತಿರಲಿ, ಸಂತೋಷ ಹೆಗ್ಡೆಯವರು ನಿರ್ಗಮಿಸಿದ ನಂತರ ಲೋಕಾಯುಕ್ತ ಸಂಸ್ಥೆಯ ಕಾರ್ಯ ವೈಖರಿಗಳು ಅತ್ಯಂತ ಅನುಮಾನಾಸ್ಪದವಾಗಿರುವುದು ನಮ್ಮ ಬುದ್ದಿಜೀವಿಗಳಿಗೆ ಕಾಣುತ್ತಿಲ್ಲವೇ? ಪ್ರಮುಖ ರಾಜಕಾರಣಿಗಳ ವಿರುದ್ಧದ ಕೇಸುಗಳಲ್ಲಿ ಲೋಕಾಯುಕ್ತ ಪೋಲೀಸರು ಅತ್ಯಂತ ತ್ವರಿತಗತಿಯಲ್ಲಿ ತಮ್ಮ ತನಿಖೆಯನ್ನು ಪೂರ್ಣಗೊಳಿಸಿ, ಕಳಂಕಿತರ ವಿರುದ್ಧ ಯಾವುದೇ ದೋಷಾರೋಪ ಪಟ್ಟಿಯನ್ನು ಸಲ್ಲಿಸದೇ ಬಿಜೆಪಿಯ ಆಪಾದಿತ ಎಲ್ಲ ಭ್ರಷ್ಟ ಮಂತ್ರಿಗಳನ್ನು ನಿರ್ದೋಷಿಗಳೆಂದು ಅತ್ಯಂತ ಅನುಮಾನಾಸ್ಪದವಾಗಿ ರಿಪೋರ್ಟ್ ನೀಡುತ್ತಿರುವುದು ನಮ್ಮ ಬುದ್ಧಿಜೀವಿಗಳಿಗೆ ಗೋಚರಿಸುತ್ತಿಲ್ಲವೇ? ಈ ಘಟನೆಗಳು ನಮ್ಮಲ್ಲಿ ತಲ್ಲಣಗೊಳಿಸುತ್ತಿಲ್ಲವೇ? ಎಲ್ಲಿ ಹೋಯಿತು ಇವರೆಲ್ಲರ ಆತ್ಮಸಾಕ್ಷಿ? ನಮಗೆಲ್ಲ ಇಷ್ಟು ಬೇಗನೇ ಸಿನಿಕತನ ಬಂದಿತೇ?

ಇಂದು ಕೇಸರೀಕರಣಗೊಂಡ ಜಿಲ್ಲೆ ಎಂದು ಅಪಖ್ಯಾತಿಗೊಳಗಾದ ಉಡುಪಿ ಜಿಲ್ಲೆ ಪಾರ್ಲಿಮೆಂಟರಿ ಉಪ ಚುನಾವಣೆಯಲ್ಲಿ ಬಿಜೆಪಿಯ ಕೋಮುವಾದಿ ಅಭ್ಯರ್ಥಿ ಸುನಿಲ್ ಕುಮಾರ್‌ನನ್ನು ಸೋಲಿಸಿದ್ದಾರೆ. ಜಯಪ್ರಕಾಶ್ ಹೆಗಡೆ ಗೆದ್ದಿದ್ದಾರೆ. ಇದಕ್ಕೆ ಜಯಪ್ರಕಾಶ್ ಅವರ ಉತ್ತಮ ಇಮೇಜ್ ಕಾರಣವಿರಬಹುದಾದರು ಎಲ್ಲದಿಕ್ಕಿಂತಲೂ ಬಲು ಮುಖ್ಯ ಕಾರಣ ಜನ ಕರ್ನಾಟಕವನ್ನು ಇನ್ನಿಲ್ಲದಂತೆ ಹಾಳುಗೆಡವಿದ ಭ್ರಷ್ಟ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಒಬ್ಬ ಉತ್ತಮ ಪರ್ಯಾಯ ಆಯ್ಕೆ ದೊರೆತರೆ ಜನತೆ ಈ ದಿಕ್ಕು ದೆಸೆಯಿಲ್ಲದ ಸಂಘ ಪರಿವಾರವನ್ನು ಮೂಲೆಗುಂಪು ಮಾಡಲು ಮನಸ್ಸು ಮಾಡಿರುವುದು ಉಡುಪಿಯ ಈ ಫಲಿತಾಂಶವೇ ಸಾಕ್ಷಿ. ಇದು ಜಡಗೊಂಡ ನಮ್ಮ ಬುದ್ದಿಜೀವಿಗಳಿಗೆ ಒಂದು ಮಾದರಿಯನ್ನು ತೋರಿಸಿಕೊಟ್ಟಿದೆಯಲ್ಲವೇ? ಇದನ್ನೇ ಮುಂದುವರಿಕೆಯಾಗಿ ಬೇರೆ ಜಿಲ್ಲೆಗಳ ಜನತೆಗೂ ಇದೇ ಮಾದರಿ ಉತ್ತಮ ಪರ್ಯಾಯ ಆಯ್ಕೆಯನ್ನು ರೂಪಿಸಲು ನಮ್ಮ ಪ್ರಗತಿಪರರಿಗೆ ಇರುವ ತೊಂದರೆಯಾದರೂ ಏನು? ಒಂದೇ ತೊಂದರೆ ಅದು ಇಚ್ಹಾಶಕ್ತಿಯ ಕೊರತೆ. ಒಂದೇ ತೊಂದರೆ ಅದು ಜಡತ್ವದ ತೊಂದರೆ. ಒಂದೇ ತೊಂದರೆ ಅದು ಹೋರಾಟಗಳ ಮಾದರಿಗೆ ಸಂಪೂರ್ಣವಾಗಿ ತಿಲಾಂಜಲಿಯನ್ನು ಕೊಟ್ಟಿರುವುದು. ಆದರೆ ಅನ್ಯಾಯದ ವಿರುದ್ಧದ ಹೋರಾಟ ನಿರಂತರವಾದದ್ದು. NO CEASEFIRE ಎನ್ನುವ ಮೂಲ ತತ್ವವನ್ನು ಇಷ್ಟು ಬೇಗ ಮರೆತುಹೋಗಬಾರದೆಂಬುದೇ ನಮ್ಮೆಲ್ಲರ ಕನವರಿಕೆ.