Daily Archives: March 23, 2012

Karnataka High Court

ನ್ಯಾಯಾಂಗ ಕಲಾಪಗಳ ನೇರಪ್ರಸಾರ ಅಗತ್ಯ

ಆನಂದ ಪ್ರಸಾದ್

ಪ್ರಮುಖ ಹುದ್ದೆಗಳಲ್ಲಿರುವ ರಾಜಕಾರಣಿಗಳ, ಉದ್ಯಮಿಗಳ ಭ್ರಷ್ಟಾಚಾರದ ಹಗರಣಗಳ ವಿಚಾರಣೆಯ ಕಲಾಪಗಳ ನೇರಪ್ರಸಾರಕ್ಕೆ ಟಿವಿ ವಾಹಿನಿಗಳಿಗೆ ಅವಕಾಶ ಮಾಡಿಕೊಡಬೇಕಾದ ಅಗತ್ಯ ಇಂದು ಭಾರತದಲ್ಲಿ ಇದೆ ಹಾಗೂ ಅದೇ ಕಲಾಪಗಳು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಬೇಕಾದ ಅಗತ್ಯ ಇದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಅಗತ್ಯ. ಸಾರ್ವಜನಿಕ ವಲಯದಿಂದ ಈ ಬಗ್ಗೆ ಒತ್ತಾಯ ರೂಪುಗೊಳ್ಳಬೇಕಾಗಿದೆ. ಅಮೆರಿಕದಲ್ಲಿ ನ್ಯಾಯಾಲಯ ಕಲಾಪಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಇಂಥ ವ್ಯವಸ್ಥೆ ಭಾರತದಲ್ಲಿಯೂ ಬರಬೇಕಾದ ಅಗತ್ಯ ಇದೆ. ಇಂದು ಭಾರತದ ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದು. ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡುವುದರಿಂದ ನ್ಯಾಯಾಧೀಶರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದರಿಂದ ರೂಪುಗೊಳ್ಳಬಹುದು. ಇಂದು ನ್ಯಾಯಾಂಗದ ನಡವಳಿಕೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಂಶಯಾಸ್ಪದವಾಗಿದ್ದು ನಿಷ್ಪಕ್ಷಪಾತ ನ್ಯಾಯ ದೊರಕದೆ ಭ್ರಷ್ಟ ರಾಜಕಾರಣಿಗಳು ತಮ್ಮ ಹಣಬಲ, ಅಧಿಕಾರ ಬಲದಿಂದ ನ್ಯಾಯವನ್ನು ಕೊಂಡುಕೊಳ್ಳುತ್ತಿದ್ದಾರೇನೋ ಅಥವಾ ನ್ಯಾಯಾಲಯದಲ್ಲಿ ನ್ಯಾಯದ ಪರವಾಗಿ ವಾದಮಾಡಬೇಕಾದ ಸಂಸ್ಥೆಗಳು/ಸರ್ಕಾರಿ ವಕೀಲರುಗಳು ನಿಷ್ಕ್ರಿಯರಾಗಿ ಸಮರ್ಪಕ ವಾದಮಂಡಿಸದೆ ಭ್ರಷ್ಟರು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೇನೋ ಎಂಬ ಸಂಶಯ ಹಾಗೂ ಅನಿಸಿಕೆ ಜನರಲ್ಲಿ ರೂಪುಗೊಳ್ಳುತ್ತಿದೆ.

ಇಂಥ ಸಂಶಯ ಹಾಗೂ ಅನಿಸಿಕೆ ರೂಪುಗೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇಂಥ ಸಂಶಯ ಹಾಗೂ ಅನಿಸಿಕೆಗಳನ್ನು ದೂರ ಮಾಡಬೇಕಾದರೆ ಪ್ರಮುಖ ಪ್ರಕರಣಗಳ ವಿಚಾರಣೆಯ ಕಲಾಪವನ್ನು ನೇರ ಪ್ರಸಾರ ಮಾಡುವುದು ಪಾರದರ್ಶಕತೆಯನ್ನು ಕಾಪಾಡಲು ಅಗತ್ಯ. ಹೀಗೆ ಮಾಡುವುದರಿಂದ ನ್ಯಾಯದ ಪರ ವಾದಮಂಡಿಸುವ ವಕೀಲರು ತಮ್ಮ ವಾದವನ್ನು ಸಮರ್ಪಕವಾಗಿ ಮಂಡಿಸಿದ್ದಾರೆಯೇ ಅಥವಾ ಭ್ರಷ್ಟರ ಜೊತೆ ಶಾಮೀಲಾಗಿ ದುರ್ಬಲ ವಾದವನ್ನು ಮಂಡಿಸಿ ಭ್ರಷ್ಟರು ತಪ್ಪಿಸಿಕೊಳ್ಳಲು ಅನುವುಮಾಡಿಕೊಟ್ಟಿದ್ದಾರೆಯೇ ಎಂಬ ಬಗ್ಗೆ ಜನರಿಗೆ ತಿಳಿಯಲು ಅನುಕೂಲವಾಗಲಿದೆ. ಉದಾಹರಣೆಗೆ ಒಬ್ಬ ರಾಜಕಾರಣಿಯ ಮೇಲೆ ಲೋಕಾಯುಕ್ತ ವರದಿಯಲ್ಲಿ ಪರೋಕ್ಷ ಲಂಚ ತೆಗೆದುಕೊಂಡು ಕೆಲ ವ್ಯಕ್ತಿಗಳಿಗೆ/ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟಿರುವ ಉಲ್ಲೇಖ ಇದ್ದಾಗ ಅದನ್ನು ನ್ಯಾಯಾಲಯ ವಿಚಾರಣೆಗೆ ಅವಕಾಶ ಮಾಡಿಕೊಡದೆಯೇ ಸಂಬಂಧಪಟ್ಟ ಆರೋಪಿಯನ್ನು ನಿರಪರಾಧಿ ಎಂದು ಹೇಳಲು ಏನು ಕಾರಣ ಎಂಬುದು ಜನರಿಗೆ ತಿಳಿಯಬಹುದು. ಇಂಥ ಸಂದರ್ಭದಲ್ಲಿ ಸಂಬಂಧ ಪಟ್ಟ ಲೋಕಾಯುಕ್ತ ಸಂಸ್ಥೆಯು ದುರ್ಬಲ ವಾದಮಂಡಿಸಿದೆಯೇ ಅಥವಾ ಸರ್ಕಾರದ ಪರವಾಗಿ ವಾದವನ್ನೇ ಮಂಡಿಸದೆ ಭ್ರಷ್ಟರಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆಯೇ ಎಂಬುದು ಜನರಿಗೆ ತಿಳಿಯುತ್ತದೆ.

ಉನ್ನತ ಮಟ್ಟದ ರಾಜಕಾರಣಿಗಳು ಹಾಗೂ ಉದ್ಯಮಿಗಳ ಭ್ರಷ್ಟಾಚಾರ ಹಗರಣಗಳಿಂದ ದೇಶದ ಜನತೆ ಇಂದು ಆಕ್ರೋಶಗೊಂಡಿದೆ. ಇಂಥ ಸಂದರ್ಭದಲ್ಲಿ ನ್ಯಾಯಾಂಗ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡು ನ್ಯಾಯ ನೀಡಬೇಕಾದ ಅಗತ್ಯ ಇದೆ. ಇಲ್ಲದೆ ಹೋದರೆ ಆಕ್ರೋಶಗೊಂಡ ಜನರು ತಾವೇ ಭ್ರಷ್ಟರ ಮೇಲೆ ಆಕ್ರಮಣ ಮಾಡುವ ಪರಿಸ್ಥಿತಿ ರೂಪುಗೊಳ್ಳಬಹುದು. ಇಂಥ ಅಭಿಪ್ರಾಯವನ್ನು ಈಗಾಗಲೇ ಕೆಲವರು ವ್ಯಕ್ತಪಡಿಸಿದ್ದಾರೆ. ಯಾವುದೇ ಒಂದು ದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ನೆಲೆಸಲು ಸಂವಿಧಾನ ಹಾಗೂ ಕಾನೂನುಗಳನ್ನು ಎಲ್ಲರೂ ಪಾಲಿಸುವುದು ಅಗತ್ಯ. ಸಂವಿಧಾನದ ಎದುರು ಹಾಗೂ ನ್ಯಾಯಾಂಗದ ಎದುರು ಎಲ್ಲರೂ ಸಮಾನರು. ಇದು ಇಂದು ಭಾರತದಲ್ಲಿ ಪಾಲಿಸಲ್ಪಡುತ್ತಿದೆಯೇ ಎಂದು ನೋಡಿದರೆ ನಿರಾಶೆ ಕವಿಯುತ್ತದೆ. ಒಂದೆಡೆ ಲಕ್ಷಾಂತರ ಸಾಮಾನ್ಯ ಕೈದಿಗಳು ವಿಚಾರಣಾಧೀನರಾಗಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರ ಮೇಲೆ ಆರೋಪ ಸಾಬೀತುಪಡಿಸುವ ಸಾಕ್ಷ್ಯ ಇಲ್ಲವೆಂದು ಅವರನ್ನು ಯಾವ ನ್ಯಾಯಾಲಯವೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಕಂಡು ಬರುತ್ತಿಲ್ಲ. ಮತ್ತೊಂದೆಡೆ ದೇಶದ ಸಂಪತ್ತನ್ನು ನುಂಗಿ ನೀರು ಕುಡಿದ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಉದ್ಯಮಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಅಧಿಕಾರ ಸ್ಥಾನದಲ್ಲಿ ಕುಳಿತುಕೊಳ್ಳುವ ಅತ್ಯಂತ ವಿಕಾರ ಪರಿಸ್ಥಿತಿ ರೂಪುಗೊಳ್ಳುತ್ತಿದೆ.

ಕಳ್ಳನಿಗೆ ತನ್ನ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ತನಗೆ ಬೇಕಾದ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ದೊರೆತರೆ ಅಂಥ ನ್ಯಾಯಾಧೀಶರಿಂದ ನ್ಯಾಯ ದೊರೆಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ? ಇಂದಿನ ರಾಜಕೀಯದ ನೋಡಿದರೆ ಇದೇ ರೀತಿಯ ಪರಿಸ್ಥಿತಿ ಇದೆ. ಕಳ್ಳನೇ ಅಧಿಕಾರದಲ್ಲಿ ಇದ್ದರೆ ಅಂಥ ಕಳ್ಳನು ತನ್ನ ವಿರುದ್ಧವಾಗಿ ನ್ಯಾಯಾಲಯದಲ್ಲಿ ವಾದಮಂಡಿಸಲು ತನ್ನ ಕೈಕೆಳಗಿನ ಅಧಿಕಾರಿಗಳಿಗೆ ಅವಕಾಶ ಕೊಡುತ್ತಾನೆ ಎಂದು ಯಾರಾದರೂ ಭಾವಿಸಲು ಸಾಧ್ಯವೇ? ಹೀಗಾಗಿ ಒಬ್ಬ ವ್ಯಕ್ತಿ ಕಳ್ಳತನದ ಆರೋಪದಿಂದ ಮುಕ್ತನಾಗದೆ ಅವನಿಗೆ ಅಧಿಕಾರ ಸ್ಥಾನ ಕೊಡುವುದು ಯೋಗ್ಯವಾದದ್ದಲ್ಲ. ಅಂಥ ವ್ಯಕ್ತಿಗೆ ಅಧಿಕಾರ ಕೊಟ್ಟದ್ದೇ ಆದರೆ ಅಂಥ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಉಳಿಯಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಅದನ್ನು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವಿಲ್ಲ ಅದು ಒಂದೋ ಸರ್ವಾಧಿಕಾರಿ ವ್ಯವಸ್ಥೆಯಾಗುತ್ತದೆ ಅಥವಾ ಪಾಳೆಗಾರಿಕೆ ವ್ಯವಸ್ಥೆಯಾಗುತ್ತದೆ.

ಭಾರತಕ್ಕೆ ಬ್ರಿಟಿಷರು ಬರುವುದಕ್ಕೆ ಮೊದಲು ಇದ್ದದ್ದು ಇಂಥ ಸರ್ವಾಧಿಕಾರಿ ಹಾಗೂ ಪಾಳೆಗಾರಿಕೆ ವ್ಯವಸ್ಥೆಯೇ. ಇಂಥ ನೂರಾರು ಪಾಳೇಗಾರರು ಹಾಗೂ ರಾಜರು ಇಡೀ ದೇಶದಲ್ಲಿ ಒಗ್ಗಟ್ಟಿಲ್ಲದೆ ಪರಸ್ಪರ ಒಳಸಂಚು ಮಾಡುತ್ತಾ, ಪರಸ್ಪರ ಹೋರಾಡುತ್ತಾ ಇರುವ ಒಂದು ವ್ಯವಸ್ಥೆ ಇತ್ತು. ಇಂದು ನಮ್ಮ ದೇಶವು ಒಂದಾಗಿ ಇರಲು ಎಲ್ಲರೂ ಒಪ್ಪಿರುವ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಕಾರಣ. ಹೀಗಾಗಿ ಇಂಥ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಂಡು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇಲ್ಲದೆ ಹೋದರೆ ಭ್ರಷ್ಟಾಚಾರ ಹಾಗೂ ದೇಶದ ಸಂಪತ್ತನ್ನು ಪರದೇಶಗಳಿಗೆ ಮಾರಿ ಗಳಿಸಿದ ದೇಶದ್ರೋಹದ ಹಣದಿಂದ ವೋಟುಗಳನ್ನು ಕೊಂಡುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ನಾವು ಮತ್ತೆ ಹಿಂದಿನ ಅದೇ ಪಾಳೆಗಾರಿಕೆ ವ್ಯವಸ್ಥೆಗೆ ಮರಳಬೇಕಾದೀತು. ಹೀಗಾಗಿ ಹಣಕ್ಕಾಗಿ ಅಥವಾ ಇನ್ನಿತರ ಆಮಿಷಕ್ಕಾಗಿ ವೋಟನ್ನು ಮಾರಿಕೊಳ್ಳದಂತೆ ಜಾಗೃತಿ ಮೂಡಿಸುವುದು ಮಾಧ್ಯಮಗಳ ಪ್ರಧಾನ ಕರ್ತವ್ಯವಾಗಿದೆ.