Daily Archives: March 24, 2012

ಪಗೋ ಎಂಬ ನಿಷ್ಠ ಪತ್ರಕರ್ತರೂ, ಪ್ರಾಯೋಜಕತ್ವದ ಪ್ರಶಸ್ತಿಯೂ

-ನವೀನ್ ಸೂರಿಂಜೆ

ಕರಾವಳಿಯ ಹೆಮ್ಮೆಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರವರ ಹೆಸರಲ್ಲಿ 2004 ರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ”ಪ ಗೋ” ಪ್ರಶಸ್ತಿ ನೀಡುತ್ತಿದೆ. ಗ್ರಾಮೀಣ ವರದಿಗಾರಿಕೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದು ಹೆಮ್ಮೆಯ ವಿಷಯವಾದರೂ ಪ್ರಶಸ್ತಿ ನೀಡಿಕೆಯಲ್ಲಿ “ಪ ಗೋ” ಅವರನ್ನು ಅವಮಾನಿಸಲಾಗುತ್ತಿದೆ.

ಪತ್ರಿಕಾಗೋಷ್ಠಿ ನಡೆಸುವೆವರು ನೀಡುವ ಕನಿಷ್ಠ ಚಹಾವನ್ನೂ ಕುಡಿಯದ ಪದ್ಯಾಣ ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಗೆ ದುಂಬಾಲು ಬಿದ್ದು ಪಡೆದುಕೊಳ್ಳಲಾಗುತ್ತಿದೆ. ಪತ್ರಕರ್ತರು ಗಿಫ್ಟ್ ತೆಗೆದುಕೊಳ್ಳುವುದನ್ನು ಕಟುವಾಗಿ ವಿರೋಧಿಸುತ್ತಿದ್ದ ಪತ್ರಕರ್ತ ಪ. ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಗೆ ಪ್ರಾಯೋಜಕರಿದ್ದಾರೆ ಎಂದರೆ ಪತ್ರಕರ್ತ “ಪ ಗೋ” ಅವರಿಗೆ ಮಾಡುವ ಅವಮಾನವಲ್ಲವೆ?

ಪದ್ಯಾಣ ಗೋಪಾಲಕೃಷ್ಣರವರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಗಡಿ ಭಾಗವಾಗಿರುವ ಅಡ್ಯನಡ್ಕದಲ್ಲಿ 1928ರಲ್ಲಿ ಜನಿಸಿದರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ವಿಶ್ವಕರ್ನಾಟಕ ಎಂಬ ಪತ್ರಿಕೆಯ ಮೂಲಕ 1956ರಲ್ಲಿ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸಿದರು. ತಾನು ಪತ್ರಿಕಾ ಕ್ಷೇತ್ರ ಪ್ರವೇಶಿಸಿದಂದಿನಿಂದಲೂ ಪ ಗೋಪಾಲಕೃಷ್ಣರು ಯಾವ ರೀತಿಯಲ್ಲೂ ತಾವು ನಂಬಿದ ಸಿದ್ದಾಂತಗಳನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಟ್ಟವರಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಪತ್ರಿಕಾ ಸ್ನೇಹಿತರ ಒಂದು ದೊಡ್ಡ ಬಳಗವನ್ನೇ ಅವರು ಹೊಂದಿದ್ದರಂತೆ. ವಿಶ್ವ ಕರ್ನಾಟಕ ದಿನ ಪತ್ರಿಕೆಯ ನಂತರ ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ “ಪ ಗೋ” ರವರು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ನಂತರ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ಶಕ್ತಿ ಎಂಬ ಪತ್ರಿಕೆಯಲ್ಲೂ ಉಪಸಂಪಾದಕ ಮತ್ತು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

1959 ಸುಮಾರಿಗೆ ಬೆಂಗಳೂರು ಬಿಟ್ಟು ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಪ ಗೋಪಾಲಕೃಷ್ಣರು ನವ ಭಾರತ ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ನಂತರ ಕನ್ನಡವಾಣಿ ಎಂಬ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಎಲ್ಲರಿಗೂ ಗೊತ್ತಿರುವಂತೆ ಅಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಇಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಲ್ಯಾಪ್‌ಟಾಪ್, ಫ್ಲ್ಯಾಟುಗಳನ್ನೇ ಪತ್ರಕರ್ತರಿಗೆ ಗಿಫ್ಟ್ ಆಗಿ ನೀಡುತ್ತಿದ್ದರೆ, ಹಿಂದೆಲ್ಲಾ ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡಲಾಗುತ್ತಿತ್ತು. ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡುತ್ತಿದ್ದ ಪತ್ರಿಕಾಗೋಷ್ಠಿ ಎಂದರೆ ಅದೊಂದು ಐಶಾರಾಮಿ ಪತ್ರಿಕಾಗೋಷ್ಠಿ ಎಂದೇ ಅಂದಿನ ಕಾಲದಲ್ಲಿ ಬಿಂಬಿತವಾಗುತ್ತಿತ್ತು.

ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ನೀಡುವ ಪೆನ್ನು ಪೇಪರಿನ ಗಿಫ್ಟು ಕೂಡಾ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಪ್ರೆಸ್ ಮೀಟ್ ಪ್ರಾಯೋಜಕರು ನೀಡುವ ಚಹಾ ತಿಂಡಿಯನ್ನೂ ಮುಟ್ಟುತ್ತಿರಲಿಲ್ಲವಂತೆ. ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಾಲಿನಲ್ಲಿ ಕುಳಿತಿದ್ದಾರೆ ಎಂದರೆ ರಾಜಕಾರಣಿಗಳು ತಂದಿದ್ದ ಗಿಫ್ಟನ್ನು ಮರಳಿ ಕೊಂಡೊಯ್ದ ದಿನಗಳೂ ಇದೆಯೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಅಂತಹ “ಪ ಗೋ” ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2004 ರಿಂದ ಪ ಗೋ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಪ್ರಾಯೋಜಕರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು. ಪ್ರೆಸ್ ಮೀಟ್ ಪ್ರಾಯೋಜಕರಿಂದ ಕನಿಷ್ಠ ಚಹಾವನ್ನು ಪಡೆಯದ ಪ ಗೋಪಾಲ ಕೃಷ್ಣರ ಹೆಸರಲ್ಲಿ ನೀಡುವ “ಪ ಗೋ” ಪ್ರಶಸ್ತಿಗೆ ಖಾಸಗಿ ಪ್ರಾಯೋಜಕತ್ವ ಪಡೆದಿರುವುದು ವಿಪರ್ಯಾಸ.

ಪ.ಗೋ ಪ್ರಶಸ್ತಿಯನ್ನು ನೀಡಲು ಪತ್ರಕರ್ತರ ಸಂಘ 2004 ರಿಂದ ಆರಂಭ ಮಾಡಿತ್ತು. ಆಗ ಪ್ರಶಸ್ತಿ ಪ್ರಮಾಣ ಪತ್ರದ ಜೊತೆ 2,500 ರೂಪಾಯಿ ಪ್ರಶಸ್ತಿ ಮೊತ್ತವನ್ನು ನೀಡಲಾಗುತ್ತಿತ್ತು. ಪ್ರಾರಂಭದಿಂದಲೂ ಪ್ರಶಸ್ತಿ ಮೊತ್ತದ ಪ್ರಾಯೋಜಕರು ವೀರೇಂದ್ರ ಹೆಗ್ಗಡೆಯವರೇ ಆಗಿದ್ದರು. 2009 ರಿಂದ ಪ್ರಶಸ್ತಿ ಮೊತ್ತ 5000 ರೂಪಾಯಿಗೆ ಏರಿಕೆಯಾಗಿದೆ. ವಿಪರ್ಯಾಸ ಎಂದರೆ 2008 ಆಗಸ್ಟ್ 16 ರಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡುವಂತೆ ಬಿನ್ನವಿಸಿದ್ದು ! ಪತ್ರಕರ್ತರ ಮನವಿಯನ್ನು ಸ್ವೀಕರಿಸಿದ ವೀರೇಂದ್ರ ಹೆಗ್ಗಡೆಯವರು ಅದೇ ವರ್ಷದಿಂದಲೇ ಪ್ರಶಸ್ತಿ ಮೊತ್ತವನ್ನು ಐದು ಸಾವಿರಕ್ಕೆ ಏರಿಸೋ ಭರವಸೆ ನೀಡಿದ್ದರು. ಅದನ್ನು ಅಂದಿನ ಪದಾಧಿಕಾರಿಗಳ ಸಮಿತಿ ಫೋಟೋ ಸಮೇತ ಪತ್ರಿಕಾ ಪ್ರಕಟಣೆ ನೀಡಿ, ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿತ್ತು.

ಅಕ್ಟೋಬರ್ 06 1976 ರಂದು ಸ್ಥಾಪನೆಗೊಂಡ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಪ ಗೋ ರವರ ಹೆಸರಲ್ಲಿ ನೀಡಲಾಗುತ್ತಿರುವ “ಗ್ರಾಮೀಣ ವರದಿಗಾರಿಕೆಯ ಪ್ರಶಸ್ತಿ” ಮೊತ್ತಕ್ಕೆ ಪತ್ರಕರ್ತರ ಸಂಘಕ್ಕೆ ಪ್ರಾಯೋಜಕರನ್ನು ಹುಡುಕುವ ಅನಿವಾರ್ಯತೆಯೇನೂ ಇರಲಿಲ್ಲ. ಪತ್ರಕರ್ತರ ಸಂಘದ ಅಡಿಯಲ್ಲೇ ಇರುವ ಪ್ರೆಸ್‌ಕ್ಲಬ್ಬಿನಲ್ಲಿ ಬೇಕಾದಷ್ಟು ದುಡ್ಡಿದೆ. 1976 ರಂದು ಪ್ರಾರಂಭವಾದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಈಗ ಅತ್ಯಂತ ಶ್ರೀಮಂತ ಸಂಘಗಳಲ್ಲಿ ಒಂದು. ಸಂಘದ ಕಟ್ಟಡಕ್ಕೆ ಅಪಾರ ರಾಜಕಾರಣಿಗಳು ಲಕ್ಷ ಲಕ್ಷವನ್ನೇ ಸುರಿದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಜನಾರ್ದನ ಪೂಜಾರಿಯವರಂತೂ ಜಿಲ್ಲೆಯಲ್ಲಿ ಬೇರೆ ಯಾವ ಸಮಸ್ಯೆಯೂ ಇಲ್ಲದೆ ಎಂಪಿ ಅನುದಾನ ಕೊಳೆಯುತ್ತಿದೆ ಎಂದು ಭಾಸವಾಗುವ ರೀತಿಯಲ್ಲಿ ಅನುದಾನ ನೀಡಿದ್ದಾರೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಸಂಘದ ಕಟ್ಟಡಕ್ಕೆ ನೀಡಿದ ಅನುದಾನದ ಲೆಕ್ಕ ನೋಡಿದರೆ ತಲೆ ತಿರುಗಬಹುದು. ಅದೆಲ್ಲಾ ಇರಲಿ. ಇಲ್ಲಿರುವ ಪ್ರೆಸ್‌ಕ್ಲಬ್ಬಿನಲ್ಲಿ ದಿನಕ್ಕೆ ಐದು ಪ್ರೆಸ್ ಮೀಟ್ ನಡೆಸಲು ಅವಕಾಶ ಇದೆ. ಏನಿಲ್ಲವೆಂದರೂ ದಿನಾ ಸರಾಸರಿ ಮೂರರಿಂದ ನಾಲ್ಕು ಪ್ರೆಸ್ ಮೀಟ್‌ಗೆ ಕೊರತೆ ಇಲ್ಲ. ನಾಗಮಂಡಲ, ಬ್ರಹ್ಮಕಲಶ, ಕೋಲ, ನೇಮದಿಂದ ಹಿಡಿದು ಪ್ರತಿಭಟನೆಗಳವರೆಗೆ ಮಂಗಳೂರಿನಲ್ಲಿ ಕಾರ್ಯಕ್ರಮಗಳಿಗೆ ಕೊರತೆ ಇಲ್ಲದಿರುವಾಗ ಪತ್ರಿಕಾಗೋಷ್ಠಿಗೆ ಕೊರತೆ ಬರಲು ಸಾಧ್ಯವಿಲ್ಲ. ನಾಗಮಂಡಲವಿರಲಿ, ಬ್ರಹ್ಮಕಲಶವಿರಲಿ, ದಲಿತ ಮಲದ ಗುಂಡಿಗೆ ಬಿದ್ದ ಬಗೆಗಿನ ಪತ್ರಿಕಾಗೋಷ್ಠಿಯೇ ಇರಲಿ, ಒಂದು ಸಾವಿರ ರೂಪಾಯಿಯನ್ನು ಪ್ರೆಸ್‌ಕ್ಲಬ್ಬಿಗೆ ನೀಡಿ ರಶೀದಿ ಮಾಡಿಕೊಳ್ಳಲೇ ಬೇಕು. ಪ್ರತೀ ಪ್ರೆಸ್ ಮೀಟ್‌ಗೆ ಒಂದು ಸಾವಿರ ರೂಪಾಯಿಯಂತೆ ಪ್ರೆಸ್‌ಕ್ಲಬ್ಬಿನ ತಿಂಗಳ-ವಾರ್ಷಿಕ ಆದಾಯ ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಇಷ್ಟೊಂದು ಆದಾಯ ಇರುವ ಪತ್ರಕರ್ತರ ಸಂಘ “ಪ ಗೋ” ಪ್ರಶಸ್ತಿಯ ಐದು ಸಾವಿರಕ್ಕೆ ಪ್ರಾಯೋಜಕರಿಗೆ ದಂಬಾಲು ಬಿದ್ದು ಪ ಗೋ ರವರಿಗೆ ಅವಮಾನ ಮಾಡುವುದು ಎಷ್ಟು ಸರಿ ಎಂಬುದನ್ನು ಕಾರ್ಯನಿರತ ಪತ್ರಕರ್ತರ ಸಂಘ ಆಲೋಚಿಸಬೇಕು.

ನಾವೆಲ್ಲಾ ಪ ಗೋ ರವರನ್ನು ಆದರ್ಶವಾಗಿರಿಸಿಕೊಂಡು ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಇರಲು ಬಯಸುವವರು. ರಾತ್ರಿ ಗುಂಡು ತುಂಡು ಪಾರ್ಟಿ, ಬೆಲೆಬಾಳುವ ಗಿಫ್ಟ್, ಗಿಫ್ಟ್ ಓಚರ್‌ಗಳ ಭರಾಟೆಯಲ್ಲಿ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಹಾಳುಗೆಡವುತ್ತಿದ್ದಾರೆ. ಪ ಗೋ ಪ್ರಶಸ್ತಿಯನ್ನು ಕೊಡುವಂತಹ ಸಂಧರ್ಭದಲ್ಲಿ ಈಗಿನ ಪತ್ರಕರ್ತರಿಗೆ ಪ ಗೋ ಆದರ್ಶಗಳ ಬಗ್ಗೆ ಹೇಳಬೇಕಿದೆ. ದೊಡ್ಡ ದೊಡ್ಡ ಆದರ್ಶಗಳನ್ನು ಅಲ್ಲದಿದ್ದರೂ ಕನಿಷ್ಠ ಗಿಫ್ಟ್, ಗಿಫ್ಟ್ ಓಚರ್, ಗುಂಡು ತುಂಡು ಪಾರ್ಟಿಗಳನ್ನು ತಿರಸ್ಕರಿಸುವಂತೆ ಕಾರ್ಯನಿರತ ಪತ್ರಕರ್ತ ಸಂಘ ಹೇಳಬೇಕಿದೆ. ಆದರೆ ಆ ರೀತಿ ಹೇಳುವಾಗ ನಮಗೂ ನೈತಿಕತೆ ಬೇಕಾಗುತ್ತದೆ. ಆ ಹಿನ್ನಲೆಯಲ್ಲಿ ಮುಂದಿನ ವರ್ಷದಿಂದ “ಪ ಗೋ ಪ್ರಶಸ್ತಿ”ಗೆ ಪ್ರಾಯೋಜಕತ್ವ ಪಡೆಯದೆ ಪ್ರಶಸ್ತಿ ವಿತರಿಸಬೇಕು. ಇಲ್ಲದೇ ಇದ್ದಲ್ಲಿ ಉತ್ತಮ ಪತ್ರಕರ್ತರು ಅಂತಹ ಪ್ರಶಸ್ತಿಯನ್ನು ತಿರಸ್ಕರಿಸಬೇಕು. ಆಗ ನಿಜವಾಗಿಯೂ ಪ ಗೋ ಪ್ರಶಸ್ತಿಗೆ ಬೆಲೆ ಬರುತ್ತದೆ ಎಂಬುದು ನಮ್ಮಂತಹ ಕಿರಿಯ ಪತ್ರಕರ್ತರ ಮನವಿ.

ಪದ್ಯಾಣ ಗೋಪಾಲಕೃಷ್ಣ ವಿವರ

ಹುಟ್ಟೂರು: ದ. ಕ. ಜಿಲ್ಲೆ ಕಾಸರಗೋಡು ಗಡಿ ಅಡ್ಯನಡ್ಕ
ಹುಟ್ಟಿದ ದಿನ: 1928
ಬೆಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1956
ಮಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1959
ಕರ್ತವ್ಯ ನಿರ್ವಹಿಸಿದ ಪತ್ರಿಕೆಗಳು: ವಿಶ್ವ ಕರ್ನಾಟಕ , ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ, ಶಕ್ತಿ, ನವಭಾರತ, ಕನ್ನಡ ವಾಣಿ, ಇಂಡಿಯನ್ ಎಕ್ಸ್ಪ್ರೆಸ್, ಕನ್ನಡ ಪ್ರಭ, ಟೈಮ್ಸ್ ಆಫ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯಾ.
ಸ್ವಂತ ಪತ್ರಿಕೆ: 1963-1964 – ವಾರ್ತಾಲೋಕ ಪತ್ರಿಕೆ
ನಿವೃತ್ತಿ: 1994
ಕಾದಂಬರಿಗಳು: ಬೆಳ್ಳಿ ಸೆರಗು, ಗನ್ ಬೋ ಸ್ಟ್ರೀಟ್, ಓ ಸಿ 67
ನಿಧನ: 1997

ಕೇಳುವವರೇ ಇಲ್ಲದ ಕರಾವಳಿ

ನವೀನ್ ಸೂರಿಂಜೆ

ಕರಾವಳಿಯ ಎರಡು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳೇ ಇಲ್ಲ. ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಾಜಕೀಯ ಗೊಂದಲಗಳ ಹಿನ್ನಲೆಯಲ್ಲಿ ಜನರ ಪಾಲಿಗೆ ಸ್ವಿಚ್ಡ್ ಆಫ್ ಆಗಿದ್ದಾರೆ. ಕೇಳುವವರೇ ಇಲ್ಲದ ಕರಾವಳಿಯಲ್ಲಿ ಇದೀಗ ಜಿಲ್ಲಾಡಳಿತ ಆಡಿದ್ದೇ ಆಟ. ಇದೇ ಸಂದರ್ಭವನ್ನು ಬಳಸಿಕೊಂಡ ಮಂಗಳೂರು ವಿಶೇಷ ಆರ್ಥಿಕ ವಲಯದಂತಹ ಸಂಸ್ಥೆಗಳು ಜಿಲ್ಲಾಡಳಿತವನ್ನು ಬಳಸಿಕೊಂಡು ಜನರ ಪ್ರತಿಭಟನೆಯನ್ನು ಹತ್ತಿಕ್ಕಿ ಬಲವಂತವಾಗಿ ಕಾಮಗಾರಿ ಆರಂಭಿಸುತ್ತಿವೆ. ಮೀನುಗಾರ ಸಾರ್ವಜನಿಕ ಆಲಿಕಾ ಸಭೆ ನಡೆಸದೆ, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆಯದೆ, ಮೀನುಗಾರರ ಆಕ್ಷೇಪಗಳಿಗೆ ಉತ್ತರ ನೀಡದೆ ಕಡಲಿಗೆ ವಿಷ ಉಣಿಸುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಯಶಸ್ವಿಯಾಗಿದ್ದೇ ಆದಲ್ಲಿ ಕರಾವಳಿಯ ಸಾವಿರಾರು ಮೀನುಗಾರರ ಕುಲಕಸುಬಿಗೆ ಬರೆ ಬೀಳಲಿದ್ದು, ಕರಾವಳಿ ಕಡಲಿನ ಜೀವಚರಗಳು ನಶಿಸಿ ಕಡಲು ಬಂಜೆಯಾಗಲಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಮಂಗಳೂರಿನ ಬಜಪೆ, ಕಳವಾರು, ಪೆರ್ಮುದೆ ಗ್ರಾಮಗಳ 1800 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲಾಗಿದ್ದು, ಅದರಲ್ಲಿ ಒಎನ್‍ಜಿಸಿ ಸೇರಿದಂತೆ ಎರಡು ಮೂರು ಪೆಟ್ರೋಲಿಯಂ ಸಂಬಂಧಿ ಕಂಪನಿಗಳು ಅನುಷ್ಠಾನಗೊಳ್ಳಲಿವೆ. ಕೃಷಿಕರಿಂದ ಕೃಷಿ ಭೂಮಿಯನ್ನೆನೋ ಬಲವಂತದಿಂದ ಸ್ವಾಧೀನ ಮಾಡಲಾಗಿದೆ. ಇದೀಗ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿ ಜನರ ವಿರೋಧದ ಮಧ್ಯೆಯೇ ಆರಂಭಗೊಂಡಿದೆ. ಜನರಿಂದ ಭಾರೀ ವಿರೋಧ ವ್ಯಕ್ತವಾಗಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ರಾಜಕೀಯ ಗೊಂದಲದ ಈ ಸಮಯವನ್ನೇ ಬಳಕೆ ಮಾಡಿಕೊಂಡು ಪುನರಾರಂಭ ಮಾಡಲಾಗುತ್ತಿದೆ.

ಏನಿದು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ?

ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ ಇದೊಂದು ಕೇಂದ್ರ ಸರ್ಕಾರ ಪ್ರಾಯೋಜಿತ ವಿದೇಶದ ಹಿತ ಕಾಯುವ ಬಂಡವಾಳಶಾಹಿಗಳ ಯೋಜನೆ. ನೂರು ಶೇಕಡಾ ರಫ್ತು ಮಾಡುವ ಉತ್ಪನ್ನಗಳನ್ನಷ್ಟೇ ತಯಾರು ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರ ನೂರು ಶೇಕಡಾ ತೆರಿಗೆ ರಿಯಾಯಿತಿಯನ್ನೂ ನೀಡಿದೆ. ಎಸ್ಇಝಡ್ ಸ್ಥಾಪನೆಗಾಗಿ ಈ ದೇಶದಲ್ಲಿ 705 ಅರ್ಜಿಗಳು ಬಂದಿದ್ದು, ತೀರಾ ನಿನ್ನೆ ಮೊನ್ನೆಯವರೆಗೂ 400 ವಿಶೇಷ ಆರ್ಥಿಕ ವಲಯಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. “ಭಾರತ ದೇಶ ಅದ್ಯಾಕೆ ಎಸ್ಇಝಡ್‍ಗಳ ಹಿಂದೆ ಬಿದ್ದಿದೆ ಎಂಬುದು ಗೊತ್ತಾಗುತ್ತಿಲ್ಲ. ಎಸ್ಇಝಡ್‍ನಿಂದ ದೇಶದ ಉದ್ದಾರ ಸಾಧ್ಯವಿಲ್ಲ” ಎಂದು ವಲ್ಡ್‌ಬ್ಯಾಂಕ್ ಸಲಹೆಗಾರ ರಾಜನ್ ಹೇಳುವುದನ್ನು ಭಾರತ ಸರ್ಕಾರ ಕೇಳಿಯೂ ಕೇಳದಂತೆ ಅನುಮತಿ ಕೊಡುತ್ತಲೇ ಇದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡಲು ಒಎನ್‍ಜಿಸಿ ಎಂಬ ಪೆಟ್ರೋಲಿಯಂ ಆಧಾರಿತ ಕಂಪನಿಗೆ ಅನುಮತಿ ದೊರೆತು ಕರ್ನಾಟಕ ಸರ್ಕಾರದ ಶೇಕಡಾ 23ರ ಪಾಲುದಾರಿಕೆಯಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಅಧಿಸೂಚನೆ ಹೊರಡಿಸಲಾಯಿತು. ಒಎನ್‍ಜಿಸಿ ಕೊರಿಕೆಯಂತೆ ಅದರದ್ದೇ ಒಡೆತನದ ಎಂಆರ್‌ಪಿಎಲ್ (ಮಂಗಳೂರು ಪೆಟ್ರೋಕೆಮಿಕಲ್ ಪ್ರೈವೇಟ್ ಲಿಮಿಟೆಡ್) ವಿಸ್ತರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉಪ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೊಡಲು ಕೆಐಎಡಿಬಿ ಮಂಗಳೂರು ತಾಲೂಕಿನ ಬಜಪೆ, ಪೆರ್ಮುದೆ, ಕಳವಾರಿನ 1800 ಎಕರೆಗೆ ಪ್ರಥಮವಾಗಿ ಅಧಿಸೂಚನೆ ಹೊರಡಿಸಿತು.

ಕಳವಾರಿನಲ್ಲಿರುವ ಜಮಿನ್ದಾರಿ ಗುತ್ತಿನ ಮನೆಗಳ ಚೇಲಾಗಿರಿಯಿಂದಾಗಿ 1800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಅನಾಯಾಸವಾಗಿ ಕೆಐಎಡಿಬಿ ಪಡೆದುಕೊಂಡಿತು. ಎರಡನೇ ಹಂತದ ಎಸ್ಇಝಡ್‍ಗಾಗಿ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು ಗ್ರಾಮದ 2035 ಎಕರೆ ಕೃಷಿ ಭೂಮಿಯನ್ನು ಸ್ವಾಧೀನತೆಗೆ ನೋಟಿಫೈಗೊಳಿಸಿತು. ಇದರಲ್ಲಿ ಮಾತ್ರ ಎಸ್ಈಝಡ್ ಆಟ ನಡೆಯಲಿಲ್ಲ. ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್ ಮತ್ತು ನಟೇಶ್ ಉಳ್ಳಾಲ್‍ರ ಉತ್ಸಾಹದಿಂದ ಇಡೀ ಹಳ್ಳಿಯ ರೈತರನ್ನು ಸಂಘಟಿಸಿ ಹೋರಾಟ ನಡೆಸಲಾಯಿತು. ಎಲ್ಲಾ ಧರ್ಮದ ಧರ್ಮ ಗುರುಗಳನ್ನೂ ಹೋರಾಟಕ್ಕೆ ಬಳಸಿ ಪಕ್ಕಾ ರಾಜಕೀಯ ಗಿಮಿಕ್‍ಗಳನ್ನು ಮಾಡಿ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಲಾಯಿತು. ರೈತರ ಭೂಮಿ ಮರಳಿ ರೈತರಿಗೆ ದಕ್ಕಿತು. ಅದರ ಹಿಂದಿನ ಹೋರಾಟದ ಕತೆಗಳು ಎರಡು ವಾಕ್ಯ ಅಥವಾ ಒಂದು ಲೇಖನದಿಂದ ಹೇಳಿ ಮುಗಿಯುವಂತದ್ದಲ್ಲ. ಇದೀಗ ಮೊದಲ ಹಂತದ ಎಸ್ಇಝಡ್ ಯೋಜನೆಯ ಕಾಮಗಾರಿಗಳು ಭರದಿಂದ ಸಾಗಿವೆ. ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಉಲ್ಲಂಘನೆ ಮಾಡಿ, ಪರಿಸರ ಕಾಯ್ದೆಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಯುತ್ತಿದೆ ಎಂಬುದು ಬೇರೆ ಮಾತು. ಅದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಹದಿನೈದು ಮಂದಿ ಉತ್ತರ ಭಾರತದ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.

ಬಂಜೆಯಾಗಲಿರುವ ಕರಾವಳಿ ಕಡಲು

ಇದೀಗ ಮೊದಲ ಹಂತದ ಎಸ್ಇಝಡ್‍ನಲ್ಲಿ ಬರುವ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಕಾಮಗಾರಿಯನ್ನು ಕಡಲ ತಡಿಯಲ್ಲಿ ಮಾಡಲಾಗುತ್ತದೆ. 1990 ರಲ್ಲಿ ಎಂಆರ್‌ಪಿಎಲ್‍ನಿಂದ ತ್ಯಾಜ್ಯ ನೀರು ವಿಸರ್ಜನಾ ಪೈಪ್‍ಲೈನ್ ಅಳವಡಿಸಲು ಮೀನುಗಾರರು ವಿರೋಧ ವ್ಯಕ್ತಪಡಿಸಿ ಕರ್ಫ್ಯೂ ಹೇರುವ ಹಂತಕ್ಕೂ ತಲುಪಿತ್ತು. ಈ ಬಾರಿ  ಎಂಆರ್‌ಪಿಎಲ್ ತ್ಯಾಜ್ಯಕ್ಕಿಂತಲೂ ಅಪಾಯಕಾರಿ ತ್ಯಾಜ್ಯವನ್ನು ಕಡಲಿಗೆ ಬಿಡುವ ಪೈಪ್‍ಲೈನ್‍ಗೆ ಮೀನುಗಾರರ ಅಂತಹ ವಿರೋಧಗಳು ಇಲ್ಲ. ಯಾಕೆಂದರೆ ಮೀನುಗಾರ ಮುಖಂಡರು ಎನಿಸಿಕೊಂಡವರ ಬಳಿ ಎಸ್ಈಝಡ್ ಈಗಾಗಲೇ ಮಾತನಾಡಿ ಸೆಟಲ್ ಮಾಡಿಕೊಂಡಿದೆ. “ತ್ಯಾಜ್ಯ ನೀರನ್ನು ಶುದ್ದೀಕರಿಸಿ ಬಿಡುತ್ತೇವೆ. ಮೀನುಗಾರಿಕೆಗೆ ಕ್ಷೀಣಿಸುವ ಯಾವುದೇ ಅಪಾಯ ಇಲ್ಲ,” ಎಂದು ಹೇಳುವ ಎಸ್ಇಝಡ್ ನಾಡದೋಣಿ ಮೀನುಗಾರರಿಗೆ ಅಧಿಕೃತವಾಗಿ ಎಸ್ಈಝಡ್ ಚೆಕ್ ಮೂಲಕ ಐವತ್ತು ಸಾವಿರ ಪರಿಹಾರ ನೀಡಿದೆ. ಈ ಪರಿಹಾರ ಫಲನುಭವಿಗಳ ಪಟ್ಟಿ ತಯಾರಿಸಿದ್ದು ಜಿಲ್ಲಾಡಳಿತವಲ್ಲ. ಬದಲಿಗೆ ಮೀನುಗಾರ ಮುಖಂಡರು. ನೈಜ ನಾಡದೋಣಿ ಮೀನುಗಾರರಿಗೆ ಪರಿಹಾರ ನೀಡದೆ ಮೀನುಗಾರ ಮುಖಂಡರಿಗೆ ಬೇಕಾದವರಿಗೆ ಪರಿಹಾರ ನೀಡಲಾಗಿದೆ. ಪರಿಹಾರವನ್ನು ಎಲ್ಲಾ ಮೀನುಗಾರರಿಗೆ ನೀಡಲು ಎಸ್ಇಝಡ್ ಸಿದ್ದವಿದ್ದರೂ ಎಲ್ಲಾ ಮೀನುಗಾರರು ಪರಿಹಾರ ಪಡೆದುಕೊಳ್ಳಲು ಸಿದ್ದರಿಲ್ಲ. ಮೀನುಗಾರಿಯನ್ನೇ ಕುಲಕಸುಬು ಮಾಡಿಕೊಂಡಿರುವವರು ಒಮ್ಮೆ ಸಿಗೋ ಐವತ್ತು ಸಾವಿರ ಪರಿಹಾರದ ಹಣದಲ್ಲಿ ಜೀವಮಾನವಿಡೀ ಬದುಕು ಸಾಗಿಸುತ್ತೇನೆ ಎಂದು ಭ್ರಮೆಪಡಲು ಮೀನುಗಾರರೇನೂ ಮೂರ್ಖರಲ್ಲ. ಎಸ್ಇಝಡ್ ಪೈಪ್‍ಲೈನ್ ಕಾಮಗಾರಿ ಮುಗಿದು ಸಮುದ್ರಕ್ಕೆ ಎಸ್ಇಝಡ್ ತ್ಯಾಜ್ಯ ನೀರನ್ನು ಬಿಟ್ಟ ಕರಾವಳಿ ಕಡಲು ಬಂಜೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿನ್ನಲೆಯಲ್ಲಿ ಮೀನುಗಾರರು ಪೈಪ್‍ಲೈನ್ ವಿರೋಧಿಸುತ್ತಿದ್ದರು. 2011 ನವೆಂಬರ್‍‌ನಲ್ಲಿ ಪೈಪ್‍ಲೈನ್ ಕಾಮಗಾರಿಗೆ ಬಂದಿದ್ದ ಬಾರ್ಜ್‌ಗೆ ನೈಜ ಮೀನುಗಾರರು ವಿರೋಧ ವ್ಯಕ್ತಪಡಿಸಿದ ನಂತರ ಎಸ್ಇಝಡ್ ಇತ್ತೀಚಿನವರೆಗೆ ತೆಪ್ಪಗಿತ್ತು.

ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಯಾವುದೇ ರಾಜಕೀಯ ನಾಯಕರು ಮತ್ತು ಪಕ್ಷ ಮೀನುಗಾರರನ್ನು ನಿರ್ಲಕ್ಷಿಸುವಂತಿಲ್ಲ. ಕರಾವಳಿಯಲ್ಲಿ ಬಲಿಷ್ಠ ವರ್ಗವಾಗಿರುವ ಮೀನುಗಾರರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡೇ ಬಂದಿದ್ದಾರೆ. ಮೀನುಗಾರರ ಚಿಕ್ಕ ಪ್ರತಿಭಟನೆ ಮತ್ತು ಬೇಡಿಕೆಯನ್ನೂ ಕರಾವಳಿಯಲ್ಲಿ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತದೆ. ಮೀನುಗಾರರ ಯಾವುದೇ ಸಮಸ್ಯೆಗಳಿಗೂ ಯಾವುದೇ ಪಕ್ಷಗಳು ಈವರೆಗೂ ಪರಿಹಾರ ಕಂಡುಕೊಳ್ಳದಿದ್ದರೂ ಅವರನ್ನು ಎದುರು ಹಾಕಿಕೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿ ಪೈಪ್‍ಲೈನ್ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಆದರೆ ಮೊನ್ನೆಯಿಂದ ಪ್ರಾರಂಭವಾದ ಯಡಿಯೂರಪ್ಪರ ರೆಸಾರ್ಟ್ ವಾಸ ಮತ್ತು ಡಿ.ವಿ. ಸದಾನಂದ ಗೌಡರ ಖುರ್ಚಿಯ ಗೊಂದಲದ ಕಡೆಗೆ ಎಲ್ಲರ ಗಮನ ಹರಿಯುತ್ತಿದ್ದಂತೆ ಎಸ್ಇಝಡ್ ಮೆಲ್ಲನೆ ಎದ್ದುಕೊಂಡಿದೆ. ಮಾರ್ಚ್ 21 ಬಜೆಟ್ ಮಂಡನೆ ಮತ್ತೊಂದೆಡೆ ಉಡುಪಿ ಉಪಚುನಾವಣೆ ಫಲಿತಾಂಶ. ಇವೆಲ್ಲದರ ಮಧ್ಯೆ ರಾಜಕೀಯ ಗೊಂದಲ. ಇದೇ ಸಮಯವನ್ನು ಬಳಸಿಕೊಂಡ ಎಸ್ಈಝಡ್ ಪೈಪ್‍ಲೈನ್‍ಗಾಗಿ ಮೀನುಗಾರರ ವಿರೋಧದ ಮಧ್ಯೆಯೇ ಸುರತ್ಕಲ್ ಸಮೀಪದ ಮಲ್ಲಮಾರ್ ಕಡಲಿಗೆ ಬೃಹತ್ ಬಾರ್ಜ್ ತಂದಿದೆ. ಜನವಿರೋಧವನ್ನು ಲೆಕ್ಕಿಸದೇ ಕಾಮಗಾರಿ ನಡೆಸುತ್ತೇವೆ ಎಂದು ಪೊಲೀಸರ ಮೂಲಕ ಮೀನುಗಾರರಿಗೆ ಬೆದರಿಕೆ ಹಾಕಿದೆ.

ಕೇಳುವವರೇ ಇಲ್ಲದ ಕರಾವಳಿ

ಈಗ ಕರಾವಳಿಯನ್ನು ಕೇಳುವವರೇ ಇಲ್ಲ. ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಕಳೆದ ಫೆಬ್ರವರಿಯಲ್ಲಿ ನಿಧನ ಹೊಂದಿದ್ದಾರೆ. ಅವರು ಸಚಿವರಾಗಿದ್ದಾಗಲೂ ಎಸ್ಇಝಡ್, ನಾಗಾರ್ಜುಗಳಂತಹ ಕಂಪನಿಗಳನ್ನು ಬೆಂಬಲಿಸುತ್ತಿದ್ದರು ಎಂಬುದು ಬೇರೆ ಮಾತು. ಆದರೆ ತೋರ್ಪಡಿಕೆಗಾದರೂ ಜನಪ್ರತಿನಿಧಿಯೆಂಬಂತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಬ್ಲೂ ಫಿಲಂ ಹಗರಣದಲ್ಲಿ ಸಿಲುಕಿ ಮನೆ ಸೇರಿದ್ದಾರೆ. ಮಂಗಳೂರಿನ ನಿವಾಸಿ, ಉಡುಪಿ ಲೋಕಸಭಾ ಸದಸ್ಯರಾಗಿ ಈಗ ಮುಖ್ಯಮಂತ್ರಿಯಾಗಿರುವ ಸದಾನಂದ ಗೌಡರನ್ನು ಸಂಪರ್ಕಿಸೋಣ ಎಂದರೆ ಅವರು ಶಾಸಕರ ಲೆಕ್ಕಾಚಾರದಲ್ಲೇ ಬ್ಯೂಸಿ ಆಗಿದ್ದಾರೆ. ಒಂದೆಡೆ ಎಲೆಕ್ಷನ್ ಲೆಕ್ಕಾಚಾರದ ತಲೆಬಿಸಿಯಾದರೆ ಮತ್ತೊಂದೆಡೆ ಯಡಿಯೂರಪ್ಪ ಕಾಟ, ಚೊಚ್ಚಲ ಬಜೆಟ್ ಮಂಡನೆಯ ಆತಂಕಗಳು, ಹೈಕಮಾಂಡ್‍ನಿಂದ ಬರೋ ಮಾತುಗಳ ನಿರೀಕ್ಷೆಗಳ ಮಧ್ಯೆ ಸದಾನಂದ ಗೌಡರ ತಲೆ ಹನ್ನೆರಡಾಣೆ ಆಗಿದೆ. ಈಗ ಸದಾನಂದ ಗೌಡರು ಕನಿಷ್ಠ ದೂರವಾಣಿ ಕರೆಗೂ ಸಿಗುವುದು ಕಷ್ಟ. ಒಟ್ಟಾರೆ ಕೇಳುವವರೇ ಇಲ್ಲದ ಕರಾವಳಿಯನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಸದ್ಬಳಕೆ ಮಾಡಿಕೊಳ್ಳುತ್ತಿದೆ.

(ಚಿತ್ರಕೃಪೆ: ಡೈಜಿವರ್ಲ್ಡ್, ಇತ್ಯಾದಿ)