Daily Archives: March 25, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -13)


– ಡಾ.ಎನ್.ಜಗದೀಶ್ ಕೊಪ್ಪ


 

ಅಭಿರುಚಿ ಮತ್ತು ಸಾಹಸಕ್ಕೆ ಇನ್ನೊಂದು ಹೆಸರೇ ಬ್ರಿಟಿಷರು. ಇದು ಅತಿಶಯೋಕ್ತಿಯ ಮಾತೆನಲ್ಲ. ಇಡೀ ಭಾರತದ ಗಿರಿಧಾಮಗಳ, ಚಹಾ ಮತ್ತು ಕಾಫಿ ತೋಟಗಳ ಇತಿಹಾಸ ಗಮನಿಸಿದರೇ, ಇವುಗಳ ಹಿಂದೆ ಬ್ರಿಟಿಷರು ತಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ಹೋಗಿರುವುದನ್ನು ನಾವು ಗಮನಿಸಬಹುದು. ಇಂದು ಭಾರತದಲ್ಲಿ ಪ್ರಸಿದ್ಧಿಯಾಗಿರುವ, ಸಿಮ್ಲಾ, ಮಸ್ಸೂರಿ, ಡಾರ್ಜಲಿಂಗ್, ನೈನಿತಾಲ್, ಕುಲು-ಮನಾಲಿ, ನೀಲಗಿರಿ, ಕೊಡೈಕೆನಾಲ್, ಸೇಲಂ ಬಳಿಯ ಏರ್ಕಾಡ್ ಇವೆಲ್ಲಾ ಗಿರಿಧಾಮಗಳು ಬ್ರಿಟಿಷರ ಅನ್ವೇಷಣೆ ಮತ್ತು ಕೊಡುಗೆಗಳಾಗಿವೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿ ತನ್ನ ನಿವೃತ್ತಿಯ ದಿನಗಳನ್ನು ಅರಣ್ಯದ ನಡುವೆ ಇಲ್ಲವೇ, ಗಿರಿಧಾಮಗಳ ನಡುವೆ ಬೃಹತ್ ಕಾಫಿ ಇಲ್ಲವೆ ಚಹಾ ತೋಟಗಳನ್ನು ಮಾಡಿಕೊಂಡು ಬದುಕಿದ್ದನ್ನು ನಾವು ಇತಿಹಾಸದಲ್ಲಿ ಕಂಡಿದ್ದೇವೆ. ಇಂತಹ ಸಾಹಸ ಪ್ರವೃತ್ತಿ ಅವರಲ್ಲಿ ರಕ್ತಗತವಾಗಿ ಬಂದಿದೆ. ಇಂತಹದ್ದೇ ಗುಣವನ್ನು ನಾವು ಜಿಮ್ ಕಾರ್ಬೆಟ್‍ನಲ್ಲಿ ಕಾಣಬಹುದು. ಜಿಮ್ ಕಾರ್ಬೆಟ್ ಕೀನ್ಯಾ ಮತ್ತು ತಾಂಜೇನಿಯಾದಲ್ಲಿ ಭೂಮಿಯ ಮೇಲೆ ಬಂಡವಾಳ ತೊಡಗಿಸಿದ ಮೂಲ ಉದ್ದೇಶ ತನ್ನ ಸಂಸ್ಥೆಯಾದ ಮ್ಯಾಥ್ಯು ಅಂಡ್ ಕೊ ಹಾಗೂ ಕುಟುಂಬದ ಹಿತದೃಷ್ಟಿ ಮಾತ್ರ ಮುಖ್ಯವಾಗಿತ್ತು. ತನ್ನ ಭವಿಷ್ಯದ ಹಿತಾಸಕ್ತಿಯ ನಡುವೆಯೂ ತನ್ನ ಸುತ್ತ ಮುತ್ತ ವಾಸಿಸುತ್ತಿದ್ದ ಬಡ ಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದ, ಭಾರತದ  ಏಕೈಕ ಹೃದಯವಂತ ಬ್ರಿಟಿಷ್ (ಐರೀಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ. ಇದು ಅವನ ಮೃದು ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಆ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಉನ್ನತ ಹುದ್ದೆಯಲ್ಲಿ ಅಥವಾ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದ ಅಧಿಕಾರಿಗಳಿಗೆ ಸರ್ಕಾರ ಅವರು ಕೇಳಿದ ಜಾಗದಲ್ಲಿ ಎಕರೆಗೆ ತಲಾ ಎರಡು ರೂಪಾಯಿನಿಂದ ಹಿಡಿದು ಇಪ್ಪತ್ತು ರೂಪಾಯಿ ಬೆಲೆಯಲ್ಲಿ ಭೂಮಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ಅವಕಾಶವನ್ನು ಬಳಸಿಕೊಂಡ ಕಾರ್ಬೆಟ್, ಬೇಸಿಗೆಯ ದಿನಗಳಲ್ಲಿ ತನ್ನ ಕುಟುಂಬ ಕಾಲ ಕಳೆಯುತ್ತಿದ್ದ ಕಲದೊಂಗಿ ಸಮೀಪದ ಚೋಟಾಹಲ್ದಾನಿ ಎಂಬ ಇಡೀ ಹಳ್ಳಿಯನ್ನು ಖರೀದಿಸಿದ.

ಅರಣ್ಯದಿಂದ ಆವೃತ್ತವಾಗಿ ಸುಮಾರು ಎರಡು ಸಾವಿರ ಎಕರೆಗೂ ಅಧಿಕ ವಿಸ್ತೀರ್ಣವಿದ್ದ ಈ ಹಳ್ಳಿಯಲ್ಲಿ, ಜನಸಂಖ್ಯೆ ತೀರಾ ಕಡಿಮೆಯಿತ್ತು. ವ್ಯವಸಾಯವನ್ನು ನಂಬಿಕೊಂಡಿದ್ದ ಕೆಲವು ಕುಟುಂಬಗಳು ಮಾತ್ರ ವಾಸವಾಗಿದ್ದವು. ಬಹುತೇಕ ಮಂದಿ ಉದ್ಯೋಗ ಹರಸಿ ಬೇರೆಡೆ ವಲಸೆ ಹೋಗಿದ್ದರು. ಇಡೀ ಪ್ರದೇಶ ನೀರಿನಿಂದ ಕೂಡಿದ್ದ ಜೌಗು ಪ್ರದೇಶವಾಗಿತ್ತು ಅಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಅಲ್ಲಿ ವ್ಯವಸಾಯ ಮಾಡುವುದು ಕೂಡ ಕಷ್ಟಕರವಾಗಿತ್ತು.

ಕಾರ್ಬೆಟ್ ಚೋಟಾಹಲ್ದಾನಿ ಹಳ್ಳಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ, ಬಸಿ ಕಾಲುವೆಗಳನ್ನು ನಿರ್ಮಿಸಿ ನೀರು ಹರಿದು ಹೋಗುವಂತೆ ಮಾಡಿದ. ಮೊಕಮೆಘಾಟ್‍ನಲ್ಲಿ ಕೆಲಸ ಮಾಡಿದ್ದ ಕೆಲವು ಕೂಲಿ ಕೆಲಸಗಾರರನ್ನು ಕರೆಸಿ ಅವರಿಂದ ಗಿಡಗೆಂಟೆಗಳನ್ನು ತೆರವುಗೊಳಿಸಿ, ವ್ಯವಸಾಯಕ್ಕೆ ಅನೂಕೂಲವಾಗುವಂತೆ ಭೂಮಿಯನ್ನು ಸಿದ್ದಪಡಿಸಿ, ಅವರಿಗೆಲ್ಲಾ ತಲಾ ಎರಡರಿಂದ ಐದು ಎಕರೆ ಭೂಮಿಯನ್ನು ಹಂಚಿದ. ಈ ಮೊದಲು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದವರಿಗೆ ಮತ್ತಷ್ಟು ಭೂಮಿ ನೀಡುವುದರ ಜೊತೆಗೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರಿಗೆ ವ್ಯವಸ್ಥಿತ ರೀತಿಯಲ್ಲಿ ಮನೆ ನಿರ್ಮಿಸಿ ಕೊಟ್ಟ. ಇಡೀ ಹಳ್ಳಿಗೆ ರಸ್ತೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಕೃಷಿಗೆ ಅನೂಕೂಲವಾಗುವಂತೆ ರೈತರಿಗೆ ಸಿಮೆಂಟ್ ಕಾಲುವೆಗಳನ್ನು ನಿರ್ಮಿಸಿದ.

ಜಿಮ್ ಕಾರ್ಬೆಟ್‍ನ ಈ ಸೇವೆ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹರಡುತ್ತಿದ್ದಂತೆ ಊರು ಬಿಟ್ಟು ಹೋಗಿದ್ದ ಎಲ್ಲರೂ ಮತ್ತೆ ಹಳ್ಳಿಗೆ ಬಂದು ವಾಸಿಸತೊಡಗಿದರು. ತನ್ನ ಬಾಲ್ಯದಲ್ಲಿ, ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಅರಣ್ಯದಲ್ಲಿ ಅಲೆಯಲು ಹೋಗುತ್ತಿದ್ದ ಬಾಲಕ ಕಾರ್ಬೆಟ್‍ಗೆ ಈ ಹಳ್ಳಿಯ ಜನ ತೋರಿದ್ದ ಪ್ರೀತಿಗೆ ಪ್ರತಿಫಲವಾಗಿ ಅವನು ಚೋಟಾಹಲ್ದಾನಿ ಗ್ರಾಮವನ್ನೇ ಅವರಿಗೆ ಸಮರ್ಪಿಸಿದ. ಅಲ್ಲಿಯವರೆಗೆ ಸ್ಥಳೀಯ ಜನರ ಬಾಯಲ್ಲಿ ಕೇವಲ ಕಾರ್ಪೆಟ್ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಕಾರ್ಬೆಟ್, ನಂತರ ಜಮಿನ್ದಾರ್ ಕಾರ್ಪೆಟ್ ಸಾಹೇಬನಾದ.

ಈ ಹಳ್ಳಿಯಲ್ಲಿ ಜನತೆಗೆ ಬೇಸಾಯ ಮಾಡಲು ಕಾಡುಹಂದಿಗಳ ಕಾಟ ಅತಿ ದೊಡ್ಡ ತೊಡಕಾಗಿತ್ತು. ಇದನ್ನು ಶಾಶ್ವತವಾಗಿ ತಡೆಗಟ್ಟಲು ನಿರ್ಧರಿಸಿದ ಕಾರ್ಬೆಟ್ ಎಲ್ಲರೂ ಅಚ್ಚರಿ ಪಡುವಂತೆ ಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪ ಮತ್ತು ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸಿ, (ಒಂದೂವರೆ ಚದುರ ಕಿ.ಮೀ. ಸುತ್ತಳತೆ) ಹಳ್ಳಿಯ ನಾಲ್ಕು ದಿಕ್ಕಿನಲ್ಲಿ ಬಾಗಿಲುಗಳನ್ನು ನಿರ್ಮಿಸಿದ. ಹಳ್ಳಿಯ ಜನತೆ ಇವುಗಳನ್ನು ತಮ್ಮ ಜಾನುವಾರುಗಳ ಜೊತೆ ಅರಣ್ಯಕ್ಕೆ ಹೋಗುವುದು, ಉರುವಲು ಕಟ್ಟಿಗೆ ತರುವುದು ಮುಂತಾದ ಕ್ರಿಯೆಗಳಿಗೆ ಬಳಸತೊಡಗಿದರು.

ಕೇವಲ 180 ಮಂದಿ ಜನಸಂಖ್ಯೆ ಇದ್ದ ಚೋಟಾಹಲ್ದಾನಿ ಹಳ್ಳಿ, ಕಾರ್ಬೆಟ್ ಅಭಿವೃದ್ಧಿ ಪಡಿಸಿದ ನಂತರ ಎರಡು ಸಾವಿರ ಜನಸಂಖೆಯನ್ನು ಒಳಗೊಂಡಿತು. ಇವರಲ್ಲಿ ಅರ್ಧದಷ್ಟು ಮಂದಿ ಮುಸ್ಲಿಮರು ಇದ್ದುದು ವಿಶೇಷ. ಈ ಹಳ್ಳಿಗರ ಜೊತೆ ಒಡನಾಟ ಇರಿಸಿಕೊಳ್ಳುವ ಸಲುವಾಗಿ ಕಾರ್ಬೆಟ್ ಅಲ್ಲಿಯೇ ತನಗಾಗಿ ಅರ್ಧ ಎಕರೆ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡ. ಮನೆಯ ಸುತ್ತ ಹಲವು ಬಗೆಯ ಹಣ್ಣಿನ ಗಿಡಗಳು ನೆಡುವುದರ ಮೂಲಕ ಹಳ್ಳಿಗರಿಗೂ ಹಣ್ಣುಗಳ ಬಗ್ಗೆ ಅಭಿರುಚಿ ಬೆಳೆಯಲು ಕಾರಣ ಕರ್ತನಾದ (ಭಾರತ ಸರ್ಕಾರದಿಂದ ಈಗ ಮ್ಯೂಸಿಯಂ ಆಗಿರುವ ಕಾರ್ಬೆಟ್ ಮನೆಯ ಆವರಣದಲ್ಲಿ ಅವನು ನೆಟ್ಟಿದ್ದ ಮಾವಿನ ಗಿಡ ಈಗ ಹೆಮ್ಮರವಾಗಿ ಬೆಳೆದು ಅವನ ನೆನಪನ್ನು ಜೀವಂತವಾಗಿರಿಸಿದೆ.)

ಭಾರತದ ಬಡಜನತೆ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದುದನ್ನು ಕಣ್ಣಾರೆ ಕಂಡಿದ್ದ ಕಾರ್ಬೆಟ್ ತನ್ನ ಹಳ್ಳಿಯ ಜನಕ್ಕೆ ವಿವಿಧ ಬಗೆಯ ತರಕಾರಿ, ಹಣ್ಣುಗಳ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ. ಇದಕ್ಕಾಗಿ ಅವನು ಕೀನ್ಯಾ ಮತ್ತು ತಾಂಜೇನಿಯಾ ದೇಶಗಳೀಂದ ಹಲವು ಬಗೆಯ ಮುಸುಕಿನ ಜೋಳ, ಬಾಳೆಯ ಗಿಡ ಮತ್ತು ಗೆಣಸುಗಳ ತಳಿಯನ್ನು ತಂದು ಪರಿಚಯಿಸಿದ. ದ್ರಾಕ್ಷಿ ಮತ್ತು ಕಾಫಿ ಬೆಳಯ ಪ್ರಯೋಗಗಳನ್ನು ಸಹ ಮಾಡಿದ. ಆದರೆ ಅಲ್ಲಿನ ವಾತಾವರಣಕ್ಕೆ ಕಾಫಿ ಮತ್ತು ದ್ರಾಕ್ಷಿ ಹೊಂದಿಕೊಳ್ಳಲಾರದೆ ವಿಫಲವಾದವು.

ಕಾರ್ಬೆಟ್ ತನ್ನ ಭೂಮಿಯನ್ನು ವ್ಯವಸಾಯಕ್ಕಾಗಿ ಉಚಿತವಾಗಿ ಹಂಚುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ನೈನಿತಾಲ್ ಪಟ್ಟಣದಲ್ಲಿ ಮಾರುಕಟ್ಟೆ ಸೃಷ್ಟಿಸಿದ. ಇದರಿಂದಾಗಿ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತರಕಾರಿ, ಆಹಾರದ ಬೆಳೆಗಳು ಸಿಗುವಂತಾಯಿತು. ಮಧ್ಯವರ್ತಿಗಳ ಕಾಟವಿಲ್ಲದೆ, ತಾವು ಬೆಳೆದ ಬೆಳೆಗಳಿಗೆ ರೈತರು ಯೋಗ್ಯ ಬೆಲೆ ಪಡೆಯುವಂತಾಯಿತು.

ಜಿಮ್ ಕಾರ್ಬೆಟ್ ಚೋಟಾಹಲ್ದಾನಿಯ ಮನೆಯಲ್ಲಿ ಇದ್ದಾಗಲೆಲ್ಲಾ ಮನೆಯ ವರಾಂಡದಲ್ಲಿ ಕುಳಿತು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ವ್ಯಕ್ತಿ ವ್ಯಕ್ತಿಗಳ ನಡುವೆ, ಅಥವಾ ಕುಟುಂಬಗಳ ವೈಮನಸ್ಸು ಅಥವಾ ಜಗಳ ಕಂಡು ಬಂದರೆ, ತಾನೆ ಮುಂದಾಗಿ ಬಗೆಹರಿಸುತ್ತಿದ್ದ. ಕಾರ್ಬೆಟ್ ಮನುಷ್ಯರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಂಗಡಿಸಿ ನೋಡಬಾರದು ಎಂದು ಯಾವಾಗಲೂ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುತ್ತಿದ್ದ. ಇದಕ್ಕೆ ಅವನ ಬದುಕು, ನಡವಳಿಕೆ ಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಡೇ ಅಲ್ಲದೆ, ಕಾರ್ಬೆಟ್‍ನ ಮಾತುಗಳನ್ನು ದೇವರ ಅಪ್ಪಣೆ ಎಂಬಂತೆ ಪಾಲಿಸುತ್ತಿದ್ದರು.

ಜಿಮ್ ಕಾರ್ಬೆಟ್ ಪ್ರತಿ ವರ್ಷ ತನ್ನ ಸಹೋದರಿ ಮ್ಯಾಗಿ ಜೊತೆಗೂಡಿ ಮನೆಯ ಆವರಣದಲ್ಲಿ ಗ್ರಾಮಸ್ಥರ ಜೊತೆ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ. ಅದೇ ರೀತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ನೈನಿತಾಲ್ ಪಟ್ಟಣದಿಂದ ಸಿಹಿ ತಿಂಡಿಯ ಪೊಟ್ಟಣಗಳನ್ನು ತಂದು ಪ್ರತಿ ಮನೆಗೂ ಹಂಚುವ ಪದ್ಧತಿಯನ್ನು ಇಟ್ಟುಕೊಂಡಿದ್ದ. ಮುಸ್ಲಿಮರ ರಂಜಾನ್ ಹಬ್ಬಕ್ಕೆ ಪ್ರತಿ ಮನೆಗೆ ಎರಡು ಕೆ.ಜಿ. ಕುರಿ ಇಲ್ಲವೆ ಮೇಕೆ ಮಾಂಸವನ್ನು ಉಚಿತವಾಗಿ ವಿತರಿಸುತ್ತಿದ್ದ. ಡಿಸೆಂಬರ್ ತಿಂಗಳಿನಲ್ಲಿ ಬರುತ್ತಿದ್ದ ಕ್ರಿಸ್‍ಮಸ್ ಹಬ್ಬಕ್ಕೆ ಅಂದಿನ ಭಾರತದ ವೈಸ್‍ರಾಯ್‍ಗಳು, ಉನ್ನತ ಮಟ್ಟದ ಅಧಿಕಾರಿಗಳು ಕಾರ್ಬೆಟ್‍ನ ವಿಶೇಷ ಅತಿಥಿಗಳಾಗಿ ಚೋಟಾಹಲ್ದಾನಿ ಹಳ್ಳಿಗೆ ಆಗಮಿಸುತ್ತಿದ್ದರು. ಇಡಿ ಹಳ್ಳಿಯ ಗ್ರಾಮಸ್ಥರನ್ನು ಕರೆಸಿ ಅವರ ಭಾಷೆ, ಸಂಸ್ಕೃತಿಯನ್ನು ಬ್ರಿಟಿಷ್ ಅಧಿಕಾರಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದ. ಜೊತೆಗೆ ಅವರ ಜೊತೆಗೆ ಚಹಾ ಕೂಟವನ್ನು ಏರ್ಪಡಿಸುತ್ತಿದ್ದ. ಕ್ರಿಸ್‍ಮಸ್ ಆಚರಣೆಯ ಸಂದರ್ಭದಲ್ಲಿ ಒಂದು ವಾರ ಅವನ ಮನೆ ಹಳ್ಳಿಯ ಜನರಿಂದ, ಅತಿಥಿಗಳಿಂದ ತುಂಬಿರುತ್ತಿತ್ತು. ಇವತ್ತಿಗೂ ಆ ಹಳ್ಳಿಯ ಹಲವಾರು ಮನೆಗಳಲ್ಲಿ ಕ್ರಿಸ್‍ಮಸ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಒಟ್ಟಾಗಿ ತೆಗೆಸಿಕೊಂಡ ಕಪ್ಪು ಬಿಳುಪಿನ ಚಿತ್ರಗಳಿವೆ.

ನಾನು ಕಾರ್ಬೆಟ್ ಮನೆಯಲ್ಲಿ ಕುಳಿತು ಅಲ್ಲಿನ ಹಿರಿಯ ಜೀವಗಳ ಜೊತೆ ಮಾತನಾಡುತ್ತಾ ಮಾಹಿತಿ ಕಲೆಹಾಕುತ್ತಾ ಇರುವ ವೇಳೆಯಲ್ಲಿ  ನನ್ನ ಮಗಳ ವಯಸ್ಸಿನ ಒಬ್ಬ ಮುಸ್ಲಿಂ ಯುವತಿ ತನ್ನ ಮನೆಗೆ ಬರುವಂತೆ ನನ್ನನ್ನು ಆಹ್ವಾನಿಸಿದಳು. ಗೆಳೆಯ ಬಸು ಯಂಕಚಿ ಜೊತೆ ಆಕೆಯ ಮನೆಗೆ ಹೋದಾಗ ಆ ಯುವತಿ ತನ್ನ ಕುಟುಂಬದ ಸದಸ್ಯರನ್ನು ಪರಿಚಯಿಸಿ, ತನ್ನ ತಾತನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಮಾಹಿತಿ ಒದಗಿಸಿದಳು. ಬಹದ್ದೂರ್ ಖಾನ್ ಎಂಬ ಹೆಸರಿನ ಅವಳ ತಾತ 30 ವರ್ಷಗಳ ಕಾಲ ಕಾರ್ಬೆಟ್‍ಗೆ ಆ ಹಳ್ಳಿಯಲ್ಲಿ ನೆಚ್ಚಿನ ಭಂಟನಾಗಿದ್ದ. ಕಾರ್ಬೆಟ್ ಅರಣ್ಯಕ್ಕೆ ತೆರಳುತಿದ್ದಾಗಲೆಲ್ಲಾ ಅವನ ರಕ್ಷಣೆಗಾಗಿ ತೆರಳುತ್ತಿದ್ದ. ವೈಸ್‍ರಾಯ್ ಮತ್ತು ಕಾರ್ಬೆಟ್ ಜೊತೆ ತೆಗೆಸಿಕೊಂಡಿರುವ ಅನೇಕ ಪೋಟೊಗಳನ್ನು ಆಕೆಯ ಕುಟುಂಬ ಇಂದಿಗೂ ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡು ಬಂದಿದೆ.

ಈಗ ಚೋಟಾಹಲ್ದಾನಿ ಹಳ್ಳಿಯಲ್ಲಿ ಸ್ಥಳೀಯ ಯುವಕರು ಒಗ್ಗೂಡಿ ಎಕೋ ಟೂರಿಸಂ ಹೆಸರಿನಲ್ಲಿ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಬೆಟ್ ಹೆಸರಿನಲ್ಲಿ ರೆಸಾರ್ಟ್ ಸ್ಥಾಪಿಸಿದ್ದಾರೆ. ದೇಶಿ ಶೈಲಿಯ ಆಹಾರ, ವಸತಿ ವ್ಯವಸ್ಥೆ, ಕುದುರೆ ಸವಾರಿ, ಅರಣ್ಯದ ಅಂಚಿನಲ್ಲಿ ತಿರುಗಾಟ ಎಲ್ಲ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಿಕೊಡಲಾಗಿದೆ.

(ಮುಂದುವರಿಯುವುದು)