Daily Archives: March 30, 2012

ಕಟ್ಟೆಚ್ಚರ: ನ್ಯಾಯ, ನೀತಿ, ಮೌಲ್ಯ, ಆಶಾವಾದಗಳಿಗೆ….

– ರವಿ ಕೃಷ್ಣಾರೆಡ್ಡಿ

ಸಂಪಾದಕೀಯ ಬ್ಲಾಗ್‌ನಲ್ಲಿ ಟಿ.ಕೆ. ದಯಾನಂದ್‌ರ ಪತ್ರವೊಂದು ಪ್ರಕಟವಾಗಿದೆ. ನೆನ್ನೆ ಸುವರ್ಣ ನ್ಯೂಸ್ ಚಾನಲ್‌ನಲ್ಲಿ ತುಂಬಾ ಹೊಣೇಗೇಡಿಯಾಗಿ ಆಶ್ಲೀಲ ಕಾರ್ಯಕ್ರಮವೊಂದು ಪ್ರಸಾರವಾದ ಬಗ್ಗೆ ಬರೆದ ಪತ್ರ ಅದು. ಅದರಲ್ಲಿ ಅವರು ಕೆಲವೊಂದು ವ್ಯಕ್ತಿಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಆದರೆ, ಇಲ್ಲಿ ವ್ಯಕ್ತಿಗಳ ವಿಮರ್ಶೆಯಿಂದ ಮತ್ತು ಅವರು ಸರಿಹೋಗುವುದರಿಂದ ಈ ಸ್ಥಿತಿಗಳೇನೂ ಬದಲಾಗುವುದಿಲ್ಲ ಎನ್ನಿಸುತ್ತದೆ. ಬದಲಾಗುವ ಹಾಗಿದ್ದರೆ ಇಷ್ಟೊತ್ತಿಗೆ ಎಂದೋ ಬದಲಾಗಬೇಕಿತ್ತು.

ಕೇವಲ ವ್ಯಕ್ತಿಗಳು ಮಾತ್ರ ಕೆಟ್ಟಿದ್ದರೆ ಅದೊಂದು ಸಹಿಸಬಹುದಾಗಿದ್ದ ವಿದ್ಯಮಾನ. ಅವರ ಗುಂಪೂ ಸಣ್ಣದಿರುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಮತ್ತು ಸಮಾಜವೇ ಕೆಟ್ಟಿದೆ. ಆಗುತ್ತಿರುವುದು ಏನೆಂದರೆ, ತಾವು ಉಳಿಯಲು ಅಥವ ಯಶಸ್ವಿಯಾಗಲು ವ್ಯಕ್ತಿಗಳು ಯಾವ ಹಂತಕ್ಕೂ ಇಳಿಯುತ್ತಾರೆ. ಯಾರನ್ನು ಬೇಕಾದರೂ ಬಳಸಿಕೊಂಡು ಬಿಸಾಡಬಲ್ಲವರಾಗಿದ್ದಾರೆ. ತಂದೆತಾಯಿಯರ ಕಚ್ಚೆಹರುಕತನವನ್ನೂ ಬಯಲಲ್ಲಿ ಹರಡುತ್ತಾರೆ. ತಮ್ಮದೇ ಅಸಹ್ಯಗಳನ್ನು ಹೇಳಿಕೊಳ್ಳುತ್ತಾರೆ, ತಮ್ಮ ಮನೆಯ ಹೆಣ್ಣುಮಕ್ಕಳ ಮಾನವನ್ನೂ ಹರಾಜು ಹಾಕುತ್ತಾರೆ. ಸಮಸ್ಯೆ ಏನೆಂದರೆ ಇಂದಿನ ಸಮಾಜ ಅದನ್ನು ನೋಡಿಕೊಂಡು ಪೋಷಿಸುತ್ತದೆ. ನಾಲ್ಕಾರು ನಿಮಿಷ ಟಿವಿಯಲ್ಲಿ ಕಾಣಿಸಿಕೊಳ್ಳಲು ಜನ ಏನು ಬೇಕಾದರೂ ಹೇಳಲು, ಮಾಡಲು ಸಿದ್ದವಾಗಿದ್ದಾರೆ.

ಮತ್ತು ಇಂತಹ ಜನರ ಅವಿವೇಕತನವನ್ನು ಶೋಷಿಸಿ ತಾವು ತಮ್ಮ ರಂಗದಲ್ಲಿ ಉಳಿಯಲು ನಮ್ಮ ಮಾಧ್ಯಮ ಮಂದಿ ಯಾವೊಂದು ಮೌಲ್ಯ, ನೀತಿ, ನಾಚಿಕೆ, ಸಂಕೋಚ, ಇಲ್ಲದೆ ಸಿದ್ಧವಾಗಿದ್ದಾರೆ.

ಕಳೆದ ಒಂದೂವರೆ ದಶಕದಿಂದೀಚೆಗೆ ಕಾಣಿಸಿಕೊಂಡ ಪರಮಸ್ವಾರ್ಥಿ ಪತ್ರಕರ್ತ-ಬರಹಗಾರರ ಗುಂಪೊಂದು ತಮ್ಮ ಉಳಿವಿಗಾಗಿ ಏನೆಲ್ಲ ಮಾಡಲೂ ಸಿದ್ದವಾಗಿದ್ಡಾರೆ. ಮತ್ತು ಅವರು ಯಶಸ್ವಿಯೂ ಆಗಿದ್ದಾರೆ. ನ್ಯಾಯ-ನೀತಿ-ಧರ್ಮದ ಬಗ್ಗೆ ಸುರರ ಮಕ್ಕಳಂತೆ ಬರೆಯುವ ಈ ಜನ ಅದಕ್ಕೆ ವಿರುದ್ಧವಾದ ವ್ಯಭಿಚಾರದಲ್ಲೂ ತೊಡಗಿಕೊಂಡಿದ್ದಾರೆ. ಅದು ಕೇವಲ ಹೊಟ್ಟೆಪಾಡಿಗಾಗಿಯಷ್ಟೇ ನಡೆಸುವ ಅಕ್ಷರವ್ಯಭಿಚಾರ ಮಾತ್ರವಲ್ಲ. ಇವರು ರಾಜಕಾರಣಿಗಳ ದಲ್ಲಾಳಿಗಳಾಗಿದ್ದಾರೆ. ರಿಯಲ್‌ಎಸ್ಟೇಟ್ ಏಜೆಂಟರಾಗಿದ್ದಾರೆ. ಗಣಿ ಮಾಫಿಯಾದವರಿಂದ ಪಾಲು ತೆಗೆದುಕೊಂಡಿದ್ದಾರೆ. ತಮಗೊಂದು ತಮ್ಮವರಿಗೊಂದು ಎಂದು ಸರ್ಕಾರಿ ಸೈಟು ಹೊಡೆದುಕೊಳ್ಳುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಸ್ಥರನ್ನು ಮತ್ತು ತಮ್ಮ ಕ್ಲೈಂಟ್‌ಗಳನ್ನು ಶಾಮೀಲು ಮಾಡುತ್ತಾರೆ. ಬೇಕಾದವರ ಪರ, ಬೇಡದವರ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲವರಾಗಿದ್ದಾರೆ. ಭ್ರಷ್ಟಾಚಾರಗಳನ್ನು ದುಡ್ಡು ತೆಗೆದುಕೊಂಡು ಮುಚ್ಚಿ ಹಾಕುತ್ತಾರೆ. ಸುಳ್ಳು ಆರೋಪಗಳನ್ನೂ ಸಾಬೀತು ಮಾಡುತ್ತಾರೆ. ಕಾಮಾತುರರಿಗೆ ವೇಶ್ಯಾಗೃಹಗಳ ವಿಳಾಸ ಮತ್ತು ನಂಬರ್‌ಗಳನ್ನು ತಮ್ಮ ಟಿವಿ ಮತ್ತು ಪತ್ರಿಕೆಗಳಲ್ಲಿ ರೋಚಕವಾಗಿ ಒದಗಿಸುತ್ತಾರೆ. Deccan Herald - Mining Paymentsತಮ್ಮ ಬಳಿಗೆ ಬರುವ ಗಂಡು-ಹೆಣ್ಣುಗಳನ್ನು ಬಳಸಿಕೊಳ್ಳುತ್ತಾರೆ. ಇನ್ನೊಬ್ಬರಿಗೆ ಬಳಸಿಕೊಳ್ಳಲು ಕಳುಹಿಸಿಕೊಡುವಷ್ಟು ಉದಾರತೆ ಮೆರೆಯುತ್ತಾರೆ. ಪೋಲಿಸರ ಪಟ್ಟಿಯಲ್ಲಿ ಇವರಿರುತ್ತಾರೆ. ಇವರ ಪಟ್ಟಿಯಲ್ಲಿ ಪೋಲಿಸರಿರುತ್ತಾರೆ.

ಇವರು ಎಂದೆಂದೂ ತಮ್ಮ ಅಪರಾಧಗಳಿಗೆ ಶಿಕ್ಷೆಗೊಳಗಾಗುವುದಿಲ್ಲ. ಕಾಣಿಸಿಕೊಳ್ಳಬೇಕಾದ ಸಮಯದಲ್ಲಿ ಧರ್ಮಧುರಂಧರರಂತೆ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಫಲಾನುಭವಿಗಳ ಮೊದಲ ಸಾಲಿನಲ್ಲಿ ಇವರಿದ್ದಾರೆ. ವ್ಯವಸ್ಥೆಯನ್ನು ಕೆಡಿಸಿದ್ದಾರೆ, ಇಲ್ಲವೇ ಕೆಟ್ಟ ವ್ಯವಸ್ಥೆಯಲ್ಲಿ ಏಳಿಗೆ ಕಂಡಿದ್ದಾರೆ.

ಇದು ನಮ್ಮ ಸಮಾಜಕ್ಕೇನೂ ಗೊತ್ತಿಲ್ಲದೆ ಇಲ್ಲ. ಇದೇ ಜನ ಬೀದಿಗೆ ಬಂದರೆ ಇವರಿಗೆ ಜೈಕಾರ ಹಾಕುವುದಕ್ಕೂ ಹಿಂದುಮುಂದು ನೋಡದಷ್ಟು ವಿವೇಚನಾಹೀನರೂ, ಸಮಯಸಾಧಕರೂ ಆಗಿದ್ದಾರೆ ಜನ. ಅವಕಾಶ ಸಿಕ್ಕರೆ ಇದೇ ಜನಗಳ ತಪ್ಪನ್ನು ತಾವೂ ಮಾಡಲು ಸಿದ್ಧರಾಗಿದ್ದಾರೆ. ಇವನಲ್ಲದಿದ್ದರೆ ಇನ್ನೊಬ್ಬ ಮಾಡಲು ಕಾಯುತ್ತಿದ್ದಾನೆ. ಮಾಡಲು ಸಿದ್ಧವಿಲ್ಲದವರು ಇಂದಿನ ವರ್ತಮಾನದಲ್ಲಿ ಅಪ್ರಸ್ತುತರಾಗುತ್ತ ಸೋಲುತ್ತ ಹೋಗುತ್ತಿದ್ದಾರೆ.

ಸಮಸ್ಯೆ ಇಷ್ಟೇ ಅಲ್ಲ. ಇದು ಇಂದು ಕೆಲವರಿಗೆ ಅಥವ ಕೆಲವೊಂದು ಗುಂಪಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಜೊತೆ ಇರುವವನೆ, ನಮ್ಮ ಸಮಾನಮನಸ್ಕನೇ, ಅವಕಾಶ ಸಿಕ್ಕಾಗ ಮೇಲೆ ಹೇಳಿದ ಜನರ ರೀತಿಯೇ “ಉಳಿವಿಗಾಗಿ” ಬದಲಾಗುತ್ತಿದ್ದಾನೆ. ಅಂತಹ ಸಮಯದಲ್ಲಿ ನಮ್ಮ ವಿವೇಚನೆಗಳೂ ಸೋಲುತ್ತಿವೆ. ಸ್ನೇಹವನ್ನು ಬಿಡಲಾಗದವರಾಗಿ ಒಳ್ಳೆಯವರು ಆತ್ಮದ್ರೋಹವನ್ನೂ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ಯಾರನ್ನು ಹೇಗೆ ಎದುರಿಸೋಣ? ಸೈತಾನ ಮನಸ್ಸುಗಳ ಮೇಲೆ ಅಧಿಪತ್ಯ ಸಾಧಿಸಿಬಿಟ್ಟಿದ್ದಾನೆ, ಮತ್ತು ಪ್ರತಿಕ್ಷಣವೂ ಅವನಿಗೆ ಹೊಸಮನಸ್ಸುಗಳು ಸಿಗುತ್ತಲೇ ಇವೆ.

ಹಾಗಾಗಿ, ಇಲ್ಲಿ ವ್ಯಕ್ತಿಯೊಬ್ಬ ತೊಲಗಿದಾಗ ಅಥವ ಬದಲಾದಾಗ ಎಲ್ಲವೂ ಬದಲಾಗಿಬಿಡುವ ಸಾಧ್ಯತೆ ಇಲ್ಲವೇ ಇಲ್ಲ. ವ್ಯವಸ್ಥೆಯನ್ನು ಹೇಗೆ ಬೇಕಾದರೂ, ಎಷ್ಟು ಬೇಕಾದರೂ ದುರುಪಯೋಗಪಡಿಸಿಕೊಳ್ಳುವ ಕಲೆ ಮತ್ತು ಅದನ್ನು ದಕ್ಕಿಸಿಕೊಳ್ಳುವ ತಾಕತ್ತು ದುರುಳರಿಗಿದೆ. ಇದೊಂದು ರಕ್ತಬೀಜಾಸುರ ಸಂತತಿ. ಅವು ತಾವೇತಾವಾಗಿ ನಶಿಸುವುದಿಲ್ಲ. ಅದಕ್ಕೊಂದು ನಿರ್ಣಾಯಕ ಗಳಿಗೆ ಬರಬೇಕು. ಮತ್ತು ಅದು ಹತ್ತಿರದಲ್ಲೆಲ್ಲೂ ಇರುವ ಹಾಗೆ ಕಾಣಿಸುವುದಿಲ್ಲ.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ,
ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ,
ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.
– ಬಸವಣ್ಣ

ಇಂತಹ ಸಂದರ್ಭದಲ್ಲೂ ಒಡ್ದಬಹುದಾದ ದೊಡ್ಡ ಪ್ರತಿರೋಧವೆಂದರೆ ನಾವು ಕ್ರಿಯಾಶೀಲರಾಗಿರುವುದು. ಅಂತಹವರಿಗೆಲ್ಲ ನಮನಗಳು.

ಕೈವಾರ ತಾತಯ್ಯನ ಮಠ ಮಾದರಿಯಾಗಬೇಕು

-ಡಾ.ಎಸ್.ಬಿ.ಜೋಗುರ

ಮಠಗಳು ಧರ್ಮಕಾರಣದಿಂದ ವಿಚಲಿತವಾಗಿ ರಾಜಕಾರಣಕ್ಕೆ ಹತ್ತಿರವಾಗುವ ಪರಿಪಾಠ ಕಳೆದ ಐದಾರು ವರ್ಷಗಳಿಂದ ಹೆಚ್ಚಾಗುತ್ತಿದೆ. ಎಲ್ಲವನ್ನೂ ವರ್ಜಿಸುವ ತಾತ್ವಿಕತೆಯ ತಳಹದಿಯಲ್ಲಿ ಪ್ರತಿಷ್ಠಾಪನೆಯಾದ ಮಠ ಸಂಸ್ಕೃತಿ ಅದು ಹೇಗೆ ಮತ್ತು ಯಾವಾಗ ಐಹಿಕ ಅಬ್ಯುದಯದ ಸಹವಾಸಕ್ಕೆ ಬಂದವೋ ತಿಳಿಯದು. ಎಲ್ಲ ಭೌತಿಕ ಸುಖಗಳು ಸುತ್ತ ಸುರಿಯುವಂತೆ ಬದುಕಬೇಕೆನ್ನುವ ಹಂಬಲ ಹನಿಯುವವರೇ ಮಠಾದೀಶರಾದರೆ ಕಾರ್ಯ ನಿರ್ವಹಣೆಯ ಕ್ಷೇತ್ರಗಳೇ ಅದಲು ಬದಲಾಗುವ ಅಪಾಯಗಳಿವೆ. ಮಠಗಳು ತನ್ನ ಅನುಯಾಯಿಗಳ ಮಾನಸಿಕ ಸ್ಥೈರ್ಯ ಮತ್ತು ನೈತಿಕತೆಯ ಬೆಂಗಾವಲಾಗಬೇಕೇ ಹೊರತು ಒಂದು ಉದ್ಯಮದ ಹಾಗೆ ವ್ಯಾಪಿಸುವ ಅವಶ್ಯಕತೆಯಿಲ್ಲ. ಪ್ರತಿಯೊಂದು ಜಾತಿಯ ಮಠಗಳಲ್ಲಿ ಆ ಮಠದ ಅನುಯಾಯಿಗಳ ಕಷ್ಟಕೋಟಲೆಗಳಿಗೆ ಕೊನೆಯಂತೂ ಇಲ್ಲ. ಧರ್ಮಗಳು ಇಂದು ಶಕ್ತಿ ಪ್ರದರ್ಶನದ ಅಖಾಡಗಳಾಗುತ್ತಿರುವ ವೇಳೆಯಲ್ಲಿ ಅನುಯಾಯಿಗಳನ್ನು ಸರಿಯಾದ ರಹದಾರಿಗೆ ತರುವಲ್ಲಿ ಈ ಮಠಗಳು ಯತ್ನಿಸಬೇಕು. ಇಡೀ ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ, ಮೌಲ್ಯಗಳ ಅಧ:ಪತನವಾಗುತ್ತಿದೆ ಎಂದು ಬೊಬ್ಬಿರಿದರೂ ಯಾವ ಮಠಗಳಿಗೂ ಅದನ್ನು ಸರಿಪಡಿಸುವುದು ಸಾಧ್ಯವಾಗುತ್ತಿಲ್ಲ.

ಮಠ ಎನ್ನುವುದು ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ಹೆಣಗಬೇಕಾದ ಒಂದು ಪ್ರಮುಖ ಸಂಸ್ಥೆ. ವಾಸ್ತವದಲ್ಲಿ ಇಂದು ಮಠಗಳು ನಿರ್ವಹಿಸುತ್ತಿರುವ ಕಾರ್ಯಬಾಹುಳ್ಯ ಎಂಥದು ಎನ್ನುವುದು ಆಯಾ ಮಠಗಳಿಗೂ ಮತ್ತು ಆ ಮಠದ ಅನುಯಾಯಿಗಳಿಗೂ ತಿಳಿದಿದೆ. ಕೆಲವು ಮಠಗಳು ಈಗಲೂ ತಮ್ಮ ಮೂಲ ಧೋರಣೆಯಿಂದ ವಿಚಲಿತವಾಗದೇ ಉಳಿದು ಅಪ್ಪಟ ಧಾರ್ಮಿಕ ಮತ್ತು ಮೌಲ್ಯ ಪ್ರಸಾರದ ಕಾರ್ಯವನ್ನೇ ಮಾಡುತ್ತಿವೆ. ಅಂಥಾ ಮಠಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಒಬ್ಬ ರಾಜಕಾರಣಿ ಎಲ್ಲ ರೀತಿಯಲ್ಲಿಯೂ ಭ್ರಷ್ಟ ಎನ್ನುವುದನ್ನು ಒಂದು ಸಮಾಜ ಗುರುತಿಸಿ ತಿರಸ್ಕರಿಸುವ ಹಂತದಲ್ಲಿರುವಾಗಲೂ ಅಂಥವನನ್ನು ಹೊಗಳುವುದಾಗಲೀ.. ಬೆಂಬಲಿಸಿ ಮಾತನಾಡುವ ಮಠಗಳ ಧೋರಣೆ ಸರಿಯಲ್ಲ.

ಬಜೆಟ್ ಮಂಡನೆಯನ್ನು ಕಣ್ಣ್‌ಅಗಲಿಸಿ ಕಾಯುವವರ, ಕಿವಿ ನಿಮಿರಿಸಿ ಕೇಳುವವರ ಸಾಲಲ್ಲಿ ಮಠಗಳು ನಿಲ್ಲಬಾರದು. ಅವುಗಳ ಕಾರ್ಯ ನಿರ್ವಹಣೆ ಅತ್ಯಂತ ಮೌಲಿಕವಾಗಿರಬೇಕು. ರಾಜಕೀಯ ಮುಖಂಡರುಗಳು ನೀಡುವ ಹಣದಲ್ಲಿ ಮಠದ ಭೌತಿಕ ಸ್ವರೂಪ ಬದಲಾಗಬಹುದೇ ಹೊರತು ಆಂತರಿಕ ತತ್ವಾದರ್ಶಗಳಲ್ಲ. ಇತ್ತೀಚಿನ ಬಜೆಟ್ ಮಂಡನೆಯಲ್ಲಿ ಕೈವಾರ ತಾತಯ್ಯನ ಮಠಕ್ಕೆ ನೀಡಲಾದ ಒಂದು ಕೋಟಿ ಅನುದಾನವನ್ನು ಆ ಮಠ ಅತ್ಯಂತ ಸ್ಥಿತಪ್ರಜ್ಞೆಯಿಂದ ಹಿಂದಿರುಗಿಸಿ ತನ್ನ ಹಿರಿಮೆಯನ್ನು ಮೆರೆಯುವ ಜೊತೆಗೆ ಕೆಲ ಮಠಗಳಾದರೂ ಇಂದಿಗೂ ತನ್ನತನವನ್ನು ಉಳಿಸಿಕೊಂಡಿವೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಮೇಲ್ನೊಟಕ್ಕೆ ಯಾವುದೋ ಒಂದು ಜಾತಿಗೆ ಸೀಮಿತವಾಗಿರುವ ಮಠ ಇದಾದರೂ ಸಾಧ್ಯವಾದ ಮಟ್ಟಿಗೆ ಜಾತ್ಯಾತೀತ ನಿಲುವನ್ನು ಕಾಪಾಡಿಕೊಂಡು ಬಂದಿರುವುದಿದೆ. ಈ ಮಠದ ಧರ್ಮಾಧಿಕಾರಿ ಎಮ್.ಆರ್. ಜಯರಾಮ ಹಾಗೆ ಮಾಡುವ ಮೂಲಕ ರಾಜ್ಯದ ಮಿಕ್ಕ ಮಠಗಳಿಗೆ ಮಾದರಿಯಾಗಿದ್ದಾರೆ. ರಾಜಕೀಯ ಹಂಗಿನಿಂದ ಹೊರಗುಳಿದ ಮಠಗಳಿಂದ ಮಾತ್ರ ನಾವು ತತ್ವನಿಷ್ಠ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರೂಪಿಸುವಲ್ಲಿ ನೆರವಾಗಬಹುದು. ಕೈವಾರ ತಾತಯ್ಯನ ಮಠ ಅನೇಕ ವರ್ಷಗಳಿಂದಲೂ ತನ್ನ ಅನುಭಾವಿ ಪರಂಪರೆಯ ಮೂಲಕ ಹೆಸರುವಾಸಿಯಾದುದು. ಈಗ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ತನ್ನದೇಯಾದ ಪರಿಶುದ್ಧತೆಯನ್ನು ಅದು ಉಳಿಸಿಕೊಂಡಿದೆ.

ಮಠಗಳ ಬೆಳವಣಿಗೆ ಎನ್ನುವುದು ಆಧ್ಯಾತ್ಮಿಕವಾಗಿರಬೇಕೆ ಹೊರತು ಭೌತಿಕವಾಗಿ ಅಲ್ಲ. ನಮ್ಮದೇ ರಾಜ್ಯದ ಕೆಲವು ಮಠಗಳು ಅನೇಕ ಬಗೆಯ ಪ್ರಗತಿಪರ ಚಟುವಟಿಕೆಗಳನ್ನು ರಾಜಕಾರಣಿಗಳ ಹಂಗಿಲ್ಲದೇ ನಡೆಯಿಸಿಕೊಂಡು ನಡೆದಿವೆ. ಗ್ರಂಥ ಪ್ರಕಾಶನ ಕಾರ್ಯವಿರಬಹುದು, ದಾಸೋಹದ ಕಾರ್ಯವಿರಬಹುದು, ಶಿಕ್ಷಣ ನೀಡುವ, ಧಾರ್ಮಿಕ ವಿಚಾರಗಳನ್ನು ತಾರ್ಕಿಕವಾಗಿ ಪ್ರಸರಣ ಮಾಡುವ ಕಾರ್ಯದಲ್ಲಿಯೂ ಸ್ವತಂತ್ರ್ಯವಾಗಿ ತೊಡಗಿರುವುದಿದೆ. ಈ ಬಗೆಯ ಮಠಗಳ ಬಗೆಗೆ ಅದರ ಅನುಯಾಯಿಗಳಲ್ಲಿ ಗೌರವ ಇದ್ದೇ ಇದೆ. ಚಿತ್ರದುರ್ಗದ ಮುರಘಾ ಶರಣರ ಬಗ್ಗೆ ಅಪಾರವಾದ ಗೌರವವಿರುವವರ ಸಾಲಲ್ಲಿ ನಾನೂ ಒಬ್ಬನಾಗಿದ್ದೆ. ಇತ್ತೀಚಿನ ಒಂದು ಸಮಾರಂಭವೊಂದರಲ್ಲಿ ಅವರ ಸಂಕುಚಿತ ಮಾತುಗಳು ನನ್ನನ್ನು ಘಾಸಿಗೊಳಿಸಿದವು. ಇಂಥಾ ಸ್ವಾಮಿಗಳು ನಮ್ಮ ನಡುವೆ ಕೆಲವರಾದರೂ ಇದ್ದಾರಲ್ಲ..? ಎಂದುಕೊಳ್ಳುವಾಗಲೇ ಇವರೂ ಎಲ್ಲರಂತಾದದ್ದು ನನ್ನಂಥಾ ಅನೇಕರಿಗೆ ಬೇಸರ ತಂದಿರುವುದಿದೆ. ಮಠಗಳು ರಾಜಕೀಯದಿಂದ ದೂರ ಉಳಿಯಬೇಕು. ಅವರು ಕೊಡಮಾಡುವ ಅನುದಾನವನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಮಠದ ಸಂಪನ್ಮೂಲಗಳನ್ನು ವಿಸ್ತರಿಸಿಕೊಳ್ಳುವ ಮೂಲಕ ಮಠಗಳು ಬೆಳೆಯಬೇಕೇ ಹೊರತು ರಾಜಕಾರಣಿಗಳ ಅನುದಾನದಿಂದ ಅಲ್ಲ. ಕೈವಾರ ತಾತಯ್ಯನವರ ಮಠ ಆ ದಿಶೆಯಲ್ಲಿ ಒಂದು ಮಾದರಿಯಾಗಬೇಕು.