ಕಟ್ಟೆಚ್ಚರ: ನ್ಯಾಯ, ನೀತಿ, ಮೌಲ್ಯ, ಆಶಾವಾದಗಳಿಗೆ….

– ರವಿ ಕೃಷ್ಣಾರೆಡ್ಡಿ

ಸಂಪಾದಕೀಯ ಬ್ಲಾಗ್‌ನಲ್ಲಿ ಟಿ.ಕೆ. ದಯಾನಂದ್‌ರ ಪತ್ರವೊಂದು ಪ್ರಕಟವಾಗಿದೆ. ನೆನ್ನೆ ಸುವರ್ಣ ನ್ಯೂಸ್ ಚಾನಲ್‌ನಲ್ಲಿ ತುಂಬಾ ಹೊಣೇಗೇಡಿಯಾಗಿ ಆಶ್ಲೀಲ ಕಾರ್ಯಕ್ರಮವೊಂದು ಪ್ರಸಾರವಾದ ಬಗ್ಗೆ ಬರೆದ ಪತ್ರ ಅದು. ಅದರಲ್ಲಿ ಅವರು ಕೆಲವೊಂದು ವ್ಯಕ್ತಿಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಆದರೆ, ಇಲ್ಲಿ ವ್ಯಕ್ತಿಗಳ ವಿಮರ್ಶೆಯಿಂದ ಮತ್ತು ಅವರು ಸರಿಹೋಗುವುದರಿಂದ ಈ ಸ್ಥಿತಿಗಳೇನೂ ಬದಲಾಗುವುದಿಲ್ಲ ಎನ್ನಿಸುತ್ತದೆ. ಬದಲಾಗುವ ಹಾಗಿದ್ದರೆ ಇಷ್ಟೊತ್ತಿಗೆ ಎಂದೋ ಬದಲಾಗಬೇಕಿತ್ತು.

ಕೇವಲ ವ್ಯಕ್ತಿಗಳು ಮಾತ್ರ ಕೆಟ್ಟಿದ್ದರೆ ಅದೊಂದು ಸಹಿಸಬಹುದಾಗಿದ್ದ ವಿದ್ಯಮಾನ. ಅವರ ಗುಂಪೂ ಸಣ್ಣದಿರುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಮತ್ತು ಸಮಾಜವೇ ಕೆಟ್ಟಿದೆ. ಆಗುತ್ತಿರುವುದು ಏನೆಂದರೆ, ತಾವು ಉಳಿಯಲು ಅಥವ ಯಶಸ್ವಿಯಾಗಲು ವ್ಯಕ್ತಿಗಳು ಯಾವ ಹಂತಕ್ಕೂ ಇಳಿಯುತ್ತಾರೆ. ಯಾರನ್ನು ಬೇಕಾದರೂ ಬಳಸಿಕೊಂಡು ಬಿಸಾಡಬಲ್ಲವರಾಗಿದ್ದಾರೆ. ತಂದೆತಾಯಿಯರ ಕಚ್ಚೆಹರುಕತನವನ್ನೂ ಬಯಲಲ್ಲಿ ಹರಡುತ್ತಾರೆ. ತಮ್ಮದೇ ಅಸಹ್ಯಗಳನ್ನು ಹೇಳಿಕೊಳ್ಳುತ್ತಾರೆ, ತಮ್ಮ ಮನೆಯ ಹೆಣ್ಣುಮಕ್ಕಳ ಮಾನವನ್ನೂ ಹರಾಜು ಹಾಕುತ್ತಾರೆ. ಸಮಸ್ಯೆ ಏನೆಂದರೆ ಇಂದಿನ ಸಮಾಜ ಅದನ್ನು ನೋಡಿಕೊಂಡು ಪೋಷಿಸುತ್ತದೆ. ನಾಲ್ಕಾರು ನಿಮಿಷ ಟಿವಿಯಲ್ಲಿ ಕಾಣಿಸಿಕೊಳ್ಳಲು ಜನ ಏನು ಬೇಕಾದರೂ ಹೇಳಲು, ಮಾಡಲು ಸಿದ್ದವಾಗಿದ್ದಾರೆ.

ಮತ್ತು ಇಂತಹ ಜನರ ಅವಿವೇಕತನವನ್ನು ಶೋಷಿಸಿ ತಾವು ತಮ್ಮ ರಂಗದಲ್ಲಿ ಉಳಿಯಲು ನಮ್ಮ ಮಾಧ್ಯಮ ಮಂದಿ ಯಾವೊಂದು ಮೌಲ್ಯ, ನೀತಿ, ನಾಚಿಕೆ, ಸಂಕೋಚ, ಇಲ್ಲದೆ ಸಿದ್ಧವಾಗಿದ್ದಾರೆ.

ಕಳೆದ ಒಂದೂವರೆ ದಶಕದಿಂದೀಚೆಗೆ ಕಾಣಿಸಿಕೊಂಡ ಪರಮಸ್ವಾರ್ಥಿ ಪತ್ರಕರ್ತ-ಬರಹಗಾರರ ಗುಂಪೊಂದು ತಮ್ಮ ಉಳಿವಿಗಾಗಿ ಏನೆಲ್ಲ ಮಾಡಲೂ ಸಿದ್ದವಾಗಿದ್ಡಾರೆ. ಮತ್ತು ಅವರು ಯಶಸ್ವಿಯೂ ಆಗಿದ್ದಾರೆ. ನ್ಯಾಯ-ನೀತಿ-ಧರ್ಮದ ಬಗ್ಗೆ ಸುರರ ಮಕ್ಕಳಂತೆ ಬರೆಯುವ ಈ ಜನ ಅದಕ್ಕೆ ವಿರುದ್ಧವಾದ ವ್ಯಭಿಚಾರದಲ್ಲೂ ತೊಡಗಿಕೊಂಡಿದ್ದಾರೆ. ಅದು ಕೇವಲ ಹೊಟ್ಟೆಪಾಡಿಗಾಗಿಯಷ್ಟೇ ನಡೆಸುವ ಅಕ್ಷರವ್ಯಭಿಚಾರ ಮಾತ್ರವಲ್ಲ. ಇವರು ರಾಜಕಾರಣಿಗಳ ದಲ್ಲಾಳಿಗಳಾಗಿದ್ದಾರೆ. ರಿಯಲ್‌ಎಸ್ಟೇಟ್ ಏಜೆಂಟರಾಗಿದ್ದಾರೆ. ಗಣಿ ಮಾಫಿಯಾದವರಿಂದ ಪಾಲು ತೆಗೆದುಕೊಂಡಿದ್ದಾರೆ. ತಮಗೊಂದು ತಮ್ಮವರಿಗೊಂದು ಎಂದು ಸರ್ಕಾರಿ ಸೈಟು ಹೊಡೆದುಕೊಳ್ಳುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಸ್ಥರನ್ನು ಮತ್ತು ತಮ್ಮ ಕ್ಲೈಂಟ್‌ಗಳನ್ನು ಶಾಮೀಲು ಮಾಡುತ್ತಾರೆ. ಬೇಕಾದವರ ಪರ, ಬೇಡದವರ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲವರಾಗಿದ್ದಾರೆ. ಭ್ರಷ್ಟಾಚಾರಗಳನ್ನು ದುಡ್ಡು ತೆಗೆದುಕೊಂಡು ಮುಚ್ಚಿ ಹಾಕುತ್ತಾರೆ. ಸುಳ್ಳು ಆರೋಪಗಳನ್ನೂ ಸಾಬೀತು ಮಾಡುತ್ತಾರೆ. ಕಾಮಾತುರರಿಗೆ ವೇಶ್ಯಾಗೃಹಗಳ ವಿಳಾಸ ಮತ್ತು ನಂಬರ್‌ಗಳನ್ನು ತಮ್ಮ ಟಿವಿ ಮತ್ತು ಪತ್ರಿಕೆಗಳಲ್ಲಿ ರೋಚಕವಾಗಿ ಒದಗಿಸುತ್ತಾರೆ. Deccan Herald - Mining Paymentsತಮ್ಮ ಬಳಿಗೆ ಬರುವ ಗಂಡು-ಹೆಣ್ಣುಗಳನ್ನು ಬಳಸಿಕೊಳ್ಳುತ್ತಾರೆ. ಇನ್ನೊಬ್ಬರಿಗೆ ಬಳಸಿಕೊಳ್ಳಲು ಕಳುಹಿಸಿಕೊಡುವಷ್ಟು ಉದಾರತೆ ಮೆರೆಯುತ್ತಾರೆ. ಪೋಲಿಸರ ಪಟ್ಟಿಯಲ್ಲಿ ಇವರಿರುತ್ತಾರೆ. ಇವರ ಪಟ್ಟಿಯಲ್ಲಿ ಪೋಲಿಸರಿರುತ್ತಾರೆ.

ಇವರು ಎಂದೆಂದೂ ತಮ್ಮ ಅಪರಾಧಗಳಿಗೆ ಶಿಕ್ಷೆಗೊಳಗಾಗುವುದಿಲ್ಲ. ಕಾಣಿಸಿಕೊಳ್ಳಬೇಕಾದ ಸಮಯದಲ್ಲಿ ಧರ್ಮಧುರಂಧರರಂತೆ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಫಲಾನುಭವಿಗಳ ಮೊದಲ ಸಾಲಿನಲ್ಲಿ ಇವರಿದ್ದಾರೆ. ವ್ಯವಸ್ಥೆಯನ್ನು ಕೆಡಿಸಿದ್ದಾರೆ, ಇಲ್ಲವೇ ಕೆಟ್ಟ ವ್ಯವಸ್ಥೆಯಲ್ಲಿ ಏಳಿಗೆ ಕಂಡಿದ್ದಾರೆ.

ಇದು ನಮ್ಮ ಸಮಾಜಕ್ಕೇನೂ ಗೊತ್ತಿಲ್ಲದೆ ಇಲ್ಲ. ಇದೇ ಜನ ಬೀದಿಗೆ ಬಂದರೆ ಇವರಿಗೆ ಜೈಕಾರ ಹಾಕುವುದಕ್ಕೂ ಹಿಂದುಮುಂದು ನೋಡದಷ್ಟು ವಿವೇಚನಾಹೀನರೂ, ಸಮಯಸಾಧಕರೂ ಆಗಿದ್ದಾರೆ ಜನ. ಅವಕಾಶ ಸಿಕ್ಕರೆ ಇದೇ ಜನಗಳ ತಪ್ಪನ್ನು ತಾವೂ ಮಾಡಲು ಸಿದ್ಧರಾಗಿದ್ದಾರೆ. ಇವನಲ್ಲದಿದ್ದರೆ ಇನ್ನೊಬ್ಬ ಮಾಡಲು ಕಾಯುತ್ತಿದ್ದಾನೆ. ಮಾಡಲು ಸಿದ್ಧವಿಲ್ಲದವರು ಇಂದಿನ ವರ್ತಮಾನದಲ್ಲಿ ಅಪ್ರಸ್ತುತರಾಗುತ್ತ ಸೋಲುತ್ತ ಹೋಗುತ್ತಿದ್ದಾರೆ.

ಸಮಸ್ಯೆ ಇಷ್ಟೇ ಅಲ್ಲ. ಇದು ಇಂದು ಕೆಲವರಿಗೆ ಅಥವ ಕೆಲವೊಂದು ಗುಂಪಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಜೊತೆ ಇರುವವನೆ, ನಮ್ಮ ಸಮಾನಮನಸ್ಕನೇ, ಅವಕಾಶ ಸಿಕ್ಕಾಗ ಮೇಲೆ ಹೇಳಿದ ಜನರ ರೀತಿಯೇ “ಉಳಿವಿಗಾಗಿ” ಬದಲಾಗುತ್ತಿದ್ದಾನೆ. ಅಂತಹ ಸಮಯದಲ್ಲಿ ನಮ್ಮ ವಿವೇಚನೆಗಳೂ ಸೋಲುತ್ತಿವೆ. ಸ್ನೇಹವನ್ನು ಬಿಡಲಾಗದವರಾಗಿ ಒಳ್ಳೆಯವರು ಆತ್ಮದ್ರೋಹವನ್ನೂ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ಯಾರನ್ನು ಹೇಗೆ ಎದುರಿಸೋಣ? ಸೈತಾನ ಮನಸ್ಸುಗಳ ಮೇಲೆ ಅಧಿಪತ್ಯ ಸಾಧಿಸಿಬಿಟ್ಟಿದ್ದಾನೆ, ಮತ್ತು ಪ್ರತಿಕ್ಷಣವೂ ಅವನಿಗೆ ಹೊಸಮನಸ್ಸುಗಳು ಸಿಗುತ್ತಲೇ ಇವೆ.

ಹಾಗಾಗಿ, ಇಲ್ಲಿ ವ್ಯಕ್ತಿಯೊಬ್ಬ ತೊಲಗಿದಾಗ ಅಥವ ಬದಲಾದಾಗ ಎಲ್ಲವೂ ಬದಲಾಗಿಬಿಡುವ ಸಾಧ್ಯತೆ ಇಲ್ಲವೇ ಇಲ್ಲ. ವ್ಯವಸ್ಥೆಯನ್ನು ಹೇಗೆ ಬೇಕಾದರೂ, ಎಷ್ಟು ಬೇಕಾದರೂ ದುರುಪಯೋಗಪಡಿಸಿಕೊಳ್ಳುವ ಕಲೆ ಮತ್ತು ಅದನ್ನು ದಕ್ಕಿಸಿಕೊಳ್ಳುವ ತಾಕತ್ತು ದುರುಳರಿಗಿದೆ. ಇದೊಂದು ರಕ್ತಬೀಜಾಸುರ ಸಂತತಿ. ಅವು ತಾವೇತಾವಾಗಿ ನಶಿಸುವುದಿಲ್ಲ. ಅದಕ್ಕೊಂದು ನಿರ್ಣಾಯಕ ಗಳಿಗೆ ಬರಬೇಕು. ಮತ್ತು ಅದು ಹತ್ತಿರದಲ್ಲೆಲ್ಲೂ ಇರುವ ಹಾಗೆ ಕಾಣಿಸುವುದಿಲ್ಲ.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ,
ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ,
ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.
– ಬಸವಣ್ಣ

ಇಂತಹ ಸಂದರ್ಭದಲ್ಲೂ ಒಡ್ದಬಹುದಾದ ದೊಡ್ಡ ಪ್ರತಿರೋಧವೆಂದರೆ ನಾವು ಕ್ರಿಯಾಶೀಲರಾಗಿರುವುದು. ಅಂತಹವರಿಗೆಲ್ಲ ನಮನಗಳು.

4 thoughts on “ಕಟ್ಟೆಚ್ಚರ: ನ್ಯಾಯ, ನೀತಿ, ಮೌಲ್ಯ, ಆಶಾವಾದಗಳಿಗೆ….

 1. ಗುರುರಾಜ್ , ನಾನು ನನ್ನಿಷ್ಟ ..

  ಪತ್ರಿಕೋದ್ಯಮ ತನ್ನ ಗತ್ತು ,ಘನತೆಯನ್ನು ರಾಜಕಾರಣಿಗಳಿಗೆ , ಶ್ರೀಮಂತ ಶಾಹಿಗಳಿಗೆ ಅಡವಿಟ್ಟು ಯಾವುದೋ ಕಾಲವಾಗಿದೆ , ನಾನು ಕಳ್ಳ ,ನೀನು ಕಳ್ಳ ತಿನ್ನುವುದಾದರೆ ಜೊತೆಯಲ್ಲೇ ತಿನ್ನೋಣ ಎಂಬ ಅನೈತಿಕ ಅನುಸಂಧಾನಕ್ಕೆ ಬಹುಪಾಲು ಪತ್ರಕರ್ತರು ಬಂದಾಗಿದೆ , ಪತ್ರಿಕೆ ಮತ್ತು ಪತ್ರಕರ್ತ ಎಂಬುದನ್ನು ಟ್ರಂಪ್ ಕಾರ್ಡ್ ನಂತೆ ಬಳಸಿಕೊಂಡು ಇತರೆ ಲಾಭದಾಯಕ ವ್ಯವಹಾರದಲ್ಲಿ ಮುಳುಗಿರುವವರ ದೊಡ್ಡ ಲಿಸ್ಟೇ ಪತ್ರಿಕೊದ್ಯಮದಲ್ಲಿದೆ .ಇಷ್ಟಾಗಿಯೂ ಜನ ಮಾಧ್ಯಮವನ್ನು ನಂಬುವುದು, ಮನಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವ ಕೆಲವೇ ಕೆಲವು ಜನಪರ ,ಜೀವಪರ ಪತ್ರಕರ್ತರ ಕಾರಣಕ್ಕಾಗಿ ಮಾತ್ರ. ಮೀಡಿಯಾ ರವಷ್ಟಾದರೂ ಮಾನ ಉಳಿಸಿಕೊಂಡಿದೆಯೆಂದರೆ ಅದಕ್ಕೆ ಕಾರಣ ನಮ್ಮೀ ಜನಪರ ಕಾಳಜಿಯ ಪತ್ರಕರ್ತರೇ.
  ಕನ್ನಡ ಒಂದೆರಡು ಸುದ್ದಿ ಚಾನೆಲ್ ಗಳನ್ನೂ ಹೊರತು ಪಡಿಸಿ ಮಿಕ್ಕೆಲಾ ಚಾನೆಲ್ ಗಳು ಟಿ ಆರ್ ಪಿ ಗುಮ್ಮನನ್ನು ಮುಂದಿಟ್ಟುಕೊಂಡು ಹಗಲು ಹೊತ್ತಿನಲ್ಲಿ ,ರೌಡಿಗಳಂತಿರುವ ಶನಿಗಳನ್ನು ಕೂರಿಸಿ ಜ್ಯೋತಿಷ್ಯದ ಹೆಸರಲ್ಲಿ ಮೌಡ್ಯವನ್ನು ಮನೆ ಮನಕೂ ಹಂಚುತ್ತಿದ್ದಾರೆ ,ಇನ್ನು ರಾತ್ರಿ ಹೊತ್ತು ,ಎದೆ ಸೀಳು , ಹೊಕ್ಕುಳ ತೊಡೆ ಕಾಣಿಸುವಂತೆ ಬಟ್ಟೆ ತೊಟ್ಟು ಮದವೇರಿ ಕುಣಿಯುವ ಸಿನಿಮಾದ ದೃಶ್ಯಗಳನ್ನು , ತನಿಖಾ ವರದಿಯೆಂಬ ಹೆಸರಲ್ಲಿ ಅಶ್ಲೀಲ ವೀಡಿಯೊ ಗಳನ್ನೂ ತೋರಿಸಿ ಮನೆ ಮಂದಿಯೆಲ್ಲ ಅಸಹ್ಯ ಪಡುವಂತೆ ಮಾಡುತ್ತಾರೆ , ಸಾಮಾಜಿಕ ಪ್ರಜ್ಞೆಯಿರುವ ಯಾವುದೇ ಸಂಪಾದಕ /ಪತ್ರಕರ್ತ ಅತ್ಯಾಚಾರ ,ಅಶ್ಲೀಲ ಎಂ ಎಂ ಎಸ್ ನಂತಹ ಸುದ್ದಿ ಸಿಕ್ಕಾಗ ಅದನ್ನು ಚಿಕ್ಕದೊಂದು ಸುದ್ದಿಯಾಗಿ ತೋರಿಸಿ ಸುಮ್ಮನಾಗುತ್ತಾರೆ , ಆದರೆ ಅಗ್ಗದ ಜನಪ್ರಿಯತೆ ಮತ್ತು ಚಾನೆಲ್ ಗಳ ನಡುವೆ ಮೇಲುಗೈ ಸಾಧಿಸಲು ಜಿದ್ದಿಗೆ ಬಿದ್ದಿರುವ ಮಾಧ್ಯಮ ಪ್ರಭೃತಿಗಳು ಮನಸಾಕ್ಷಿಯನ್ನು ಹರಾಜಿಗಿಟ್ಟು ಇಂತ ವಿಕೃತಿಯನ್ನು ಮೆರೆಯುತ್ತಾರೆ . ಅವರಿಗೆ ಧಿಕ್ಕಾರವಿರಲಿ …

  Reply
 2. Ananda Prasad

  ಇಂದು ಮುಖ್ಯ ವಾಹಿನಿಯ ಮಾಧ್ಯಮಗಳು ರಾಜಕಾರಣಿಗಳು, ಉದ್ಯಮಿಗಳು ಜೊತೆ ಶಾಮೀಲಾಗಿ ತನ್ನತನವನ್ನೇ ಕಳೆದುಕೊಂಡಿವೆ. ಹೀಗಾಗಿ ಪ್ರಜಾಪ್ರಭುತ್ವದ ಕಾವಲುಗಾರನಾಗಿರಬೇಕಾದ ಮಾಧ್ಯಮ ನಿಷ್ಕ್ರಿಯವಾಗಿರುವುದರಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕಾವಲುಗಾರನಿಲ್ಲದೆ ಅಪಾಯಕ್ಕೆ ಸಿಲುಕಿದೆ. ಸಮಾಜ ಯಾವಾಗಲೂ ಬಹುಸಂಖ್ಯಾತರ ಒಲವು ನಿಲುವುಗಳಿಂದ ಪ್ರಭಾವಿತವಾಗುವುದರಿಂದ ಅಂಥ ನಿಲುವನ್ನು ರೂಪಿಸುವ ಜವಾಬ್ದಾರಿ ಮಾಧ್ಯಮಗಳಿಗೆ ಇದೆ. ಅಂಥ ನಿಲುವನ್ನು ರೂಪಿಸುವ ಸಾಮರ್ಥ್ಯ ಏಕಕಾಲಕ್ಕೆ ಎಲ್ಲೆಡೆ ತಲುಪುವ ತನ್ನ ವಿಶಿಷ್ಟತೆಯಿಂದಾಗಿ ಮಾಧ್ಯಮಗಳಿಗೆ ಇದೆ. ನಿಲುವನ್ನು ರೂಪಿಸುವಾಗ ಒಂದು ಪತ್ರಿಕೆ ಅಥವಾ ವಾಹಿನಿ ಮಾತ್ರ ಮುಂದೆ ಬರುವುದರಿಂದ ಪ್ರಯೋಜನವಾಗುವುದಿಲ್ಲ, ಎಲ್ಲ ಪತ್ರಿಕೆಗಳು, ವಾಹಿನಿಗಳು ಜೊತೆಗೂಡಿ ಕೆಲಸ ಮಾಡಬೇಕು. ಆಗ ಸಮಾಜದ ನಿಲುವನ್ನೂ ಬದಲಾಯಿಸಲು ಸಾಧ್ಯ. ಪ್ರವಾಹವು ಯಾವ ರೀತಿ ಕೊಳೆಯನ್ನು ತೊಳೆದುಕೊಂಡು ಹೋಗುವುದೋ ಅದೇ ರೀತಿ ಮಾಧ್ಯಮಗಳು ಒಟ್ಟಾಗಿ ಕೆಲಸ ಮಾಡಿದಾಗ ಸಮಾಜದ ಕೊಳೆಯನ್ನು ಪ್ರವಾಹದ ರೀತಿ ಗುಡಿಸಿ ಹಾಕಬಹುದು. ಇಲ್ಲದೆ ಇದ್ದರೆ ಸಾಧ್ಯವಿಲ್ಲ.

  Reply
 3. basavarajb

  ಟಿ.ವಿ. ಮಾಧ್ಯಮಗಳು ಸ್ವಸ್ತ ಸಮಾಜಕ್ಕೆ ನಾಂದಿಯಾಗಬೇಕೆ ಹೊರತು,ಸಮಾಜಕ್ಕೆ ಕೊಳೆ ಬಿಡುವ ಕೆಲಸವನ್ನು ಬಿಡಬೇಕು

  Reply
 4. shylesh

  patrikodyma yennuvudu …..peetha patrikodyamavagi bahala dinagaladavu. tale hidukara crime hinnle iruvavare thumbi hogiddare….huchhu munde maduveyalli undavane jana

  Reply

Leave a Reply

Your email address will not be published.