ಕೈವಾರ ತಾತಯ್ಯನ ಮಠ ಮಾದರಿಯಾಗಬೇಕು

-ಡಾ.ಎಸ್.ಬಿ.ಜೋಗುರ

ಮಠಗಳು ಧರ್ಮಕಾರಣದಿಂದ ವಿಚಲಿತವಾಗಿ ರಾಜಕಾರಣಕ್ಕೆ ಹತ್ತಿರವಾಗುವ ಪರಿಪಾಠ ಕಳೆದ ಐದಾರು ವರ್ಷಗಳಿಂದ ಹೆಚ್ಚಾಗುತ್ತಿದೆ. ಎಲ್ಲವನ್ನೂ ವರ್ಜಿಸುವ ತಾತ್ವಿಕತೆಯ ತಳಹದಿಯಲ್ಲಿ ಪ್ರತಿಷ್ಠಾಪನೆಯಾದ ಮಠ ಸಂಸ್ಕೃತಿ ಅದು ಹೇಗೆ ಮತ್ತು ಯಾವಾಗ ಐಹಿಕ ಅಬ್ಯುದಯದ ಸಹವಾಸಕ್ಕೆ ಬಂದವೋ ತಿಳಿಯದು. ಎಲ್ಲ ಭೌತಿಕ ಸುಖಗಳು ಸುತ್ತ ಸುರಿಯುವಂತೆ ಬದುಕಬೇಕೆನ್ನುವ ಹಂಬಲ ಹನಿಯುವವರೇ ಮಠಾದೀಶರಾದರೆ ಕಾರ್ಯ ನಿರ್ವಹಣೆಯ ಕ್ಷೇತ್ರಗಳೇ ಅದಲು ಬದಲಾಗುವ ಅಪಾಯಗಳಿವೆ. ಮಠಗಳು ತನ್ನ ಅನುಯಾಯಿಗಳ ಮಾನಸಿಕ ಸ್ಥೈರ್ಯ ಮತ್ತು ನೈತಿಕತೆಯ ಬೆಂಗಾವಲಾಗಬೇಕೇ ಹೊರತು ಒಂದು ಉದ್ಯಮದ ಹಾಗೆ ವ್ಯಾಪಿಸುವ ಅವಶ್ಯಕತೆಯಿಲ್ಲ. ಪ್ರತಿಯೊಂದು ಜಾತಿಯ ಮಠಗಳಲ್ಲಿ ಆ ಮಠದ ಅನುಯಾಯಿಗಳ ಕಷ್ಟಕೋಟಲೆಗಳಿಗೆ ಕೊನೆಯಂತೂ ಇಲ್ಲ. ಧರ್ಮಗಳು ಇಂದು ಶಕ್ತಿ ಪ್ರದರ್ಶನದ ಅಖಾಡಗಳಾಗುತ್ತಿರುವ ವೇಳೆಯಲ್ಲಿ ಅನುಯಾಯಿಗಳನ್ನು ಸರಿಯಾದ ರಹದಾರಿಗೆ ತರುವಲ್ಲಿ ಈ ಮಠಗಳು ಯತ್ನಿಸಬೇಕು. ಇಡೀ ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ, ಮೌಲ್ಯಗಳ ಅಧ:ಪತನವಾಗುತ್ತಿದೆ ಎಂದು ಬೊಬ್ಬಿರಿದರೂ ಯಾವ ಮಠಗಳಿಗೂ ಅದನ್ನು ಸರಿಪಡಿಸುವುದು ಸಾಧ್ಯವಾಗುತ್ತಿಲ್ಲ.

ಮಠ ಎನ್ನುವುದು ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ಹೆಣಗಬೇಕಾದ ಒಂದು ಪ್ರಮುಖ ಸಂಸ್ಥೆ. ವಾಸ್ತವದಲ್ಲಿ ಇಂದು ಮಠಗಳು ನಿರ್ವಹಿಸುತ್ತಿರುವ ಕಾರ್ಯಬಾಹುಳ್ಯ ಎಂಥದು ಎನ್ನುವುದು ಆಯಾ ಮಠಗಳಿಗೂ ಮತ್ತು ಆ ಮಠದ ಅನುಯಾಯಿಗಳಿಗೂ ತಿಳಿದಿದೆ. ಕೆಲವು ಮಠಗಳು ಈಗಲೂ ತಮ್ಮ ಮೂಲ ಧೋರಣೆಯಿಂದ ವಿಚಲಿತವಾಗದೇ ಉಳಿದು ಅಪ್ಪಟ ಧಾರ್ಮಿಕ ಮತ್ತು ಮೌಲ್ಯ ಪ್ರಸಾರದ ಕಾರ್ಯವನ್ನೇ ಮಾಡುತ್ತಿವೆ. ಅಂಥಾ ಮಠಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಒಬ್ಬ ರಾಜಕಾರಣಿ ಎಲ್ಲ ರೀತಿಯಲ್ಲಿಯೂ ಭ್ರಷ್ಟ ಎನ್ನುವುದನ್ನು ಒಂದು ಸಮಾಜ ಗುರುತಿಸಿ ತಿರಸ್ಕರಿಸುವ ಹಂತದಲ್ಲಿರುವಾಗಲೂ ಅಂಥವನನ್ನು ಹೊಗಳುವುದಾಗಲೀ.. ಬೆಂಬಲಿಸಿ ಮಾತನಾಡುವ ಮಠಗಳ ಧೋರಣೆ ಸರಿಯಲ್ಲ.

ಬಜೆಟ್ ಮಂಡನೆಯನ್ನು ಕಣ್ಣ್‌ಅಗಲಿಸಿ ಕಾಯುವವರ, ಕಿವಿ ನಿಮಿರಿಸಿ ಕೇಳುವವರ ಸಾಲಲ್ಲಿ ಮಠಗಳು ನಿಲ್ಲಬಾರದು. ಅವುಗಳ ಕಾರ್ಯ ನಿರ್ವಹಣೆ ಅತ್ಯಂತ ಮೌಲಿಕವಾಗಿರಬೇಕು. ರಾಜಕೀಯ ಮುಖಂಡರುಗಳು ನೀಡುವ ಹಣದಲ್ಲಿ ಮಠದ ಭೌತಿಕ ಸ್ವರೂಪ ಬದಲಾಗಬಹುದೇ ಹೊರತು ಆಂತರಿಕ ತತ್ವಾದರ್ಶಗಳಲ್ಲ. ಇತ್ತೀಚಿನ ಬಜೆಟ್ ಮಂಡನೆಯಲ್ಲಿ ಕೈವಾರ ತಾತಯ್ಯನ ಮಠಕ್ಕೆ ನೀಡಲಾದ ಒಂದು ಕೋಟಿ ಅನುದಾನವನ್ನು ಆ ಮಠ ಅತ್ಯಂತ ಸ್ಥಿತಪ್ರಜ್ಞೆಯಿಂದ ಹಿಂದಿರುಗಿಸಿ ತನ್ನ ಹಿರಿಮೆಯನ್ನು ಮೆರೆಯುವ ಜೊತೆಗೆ ಕೆಲ ಮಠಗಳಾದರೂ ಇಂದಿಗೂ ತನ್ನತನವನ್ನು ಉಳಿಸಿಕೊಂಡಿವೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಮೇಲ್ನೊಟಕ್ಕೆ ಯಾವುದೋ ಒಂದು ಜಾತಿಗೆ ಸೀಮಿತವಾಗಿರುವ ಮಠ ಇದಾದರೂ ಸಾಧ್ಯವಾದ ಮಟ್ಟಿಗೆ ಜಾತ್ಯಾತೀತ ನಿಲುವನ್ನು ಕಾಪಾಡಿಕೊಂಡು ಬಂದಿರುವುದಿದೆ. ಈ ಮಠದ ಧರ್ಮಾಧಿಕಾರಿ ಎಮ್.ಆರ್. ಜಯರಾಮ ಹಾಗೆ ಮಾಡುವ ಮೂಲಕ ರಾಜ್ಯದ ಮಿಕ್ಕ ಮಠಗಳಿಗೆ ಮಾದರಿಯಾಗಿದ್ದಾರೆ. ರಾಜಕೀಯ ಹಂಗಿನಿಂದ ಹೊರಗುಳಿದ ಮಠಗಳಿಂದ ಮಾತ್ರ ನಾವು ತತ್ವನಿಷ್ಠ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರೂಪಿಸುವಲ್ಲಿ ನೆರವಾಗಬಹುದು. ಕೈವಾರ ತಾತಯ್ಯನ ಮಠ ಅನೇಕ ವರ್ಷಗಳಿಂದಲೂ ತನ್ನ ಅನುಭಾವಿ ಪರಂಪರೆಯ ಮೂಲಕ ಹೆಸರುವಾಸಿಯಾದುದು. ಈಗ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ತನ್ನದೇಯಾದ ಪರಿಶುದ್ಧತೆಯನ್ನು ಅದು ಉಳಿಸಿಕೊಂಡಿದೆ.

ಮಠಗಳ ಬೆಳವಣಿಗೆ ಎನ್ನುವುದು ಆಧ್ಯಾತ್ಮಿಕವಾಗಿರಬೇಕೆ ಹೊರತು ಭೌತಿಕವಾಗಿ ಅಲ್ಲ. ನಮ್ಮದೇ ರಾಜ್ಯದ ಕೆಲವು ಮಠಗಳು ಅನೇಕ ಬಗೆಯ ಪ್ರಗತಿಪರ ಚಟುವಟಿಕೆಗಳನ್ನು ರಾಜಕಾರಣಿಗಳ ಹಂಗಿಲ್ಲದೇ ನಡೆಯಿಸಿಕೊಂಡು ನಡೆದಿವೆ. ಗ್ರಂಥ ಪ್ರಕಾಶನ ಕಾರ್ಯವಿರಬಹುದು, ದಾಸೋಹದ ಕಾರ್ಯವಿರಬಹುದು, ಶಿಕ್ಷಣ ನೀಡುವ, ಧಾರ್ಮಿಕ ವಿಚಾರಗಳನ್ನು ತಾರ್ಕಿಕವಾಗಿ ಪ್ರಸರಣ ಮಾಡುವ ಕಾರ್ಯದಲ್ಲಿಯೂ ಸ್ವತಂತ್ರ್ಯವಾಗಿ ತೊಡಗಿರುವುದಿದೆ. ಈ ಬಗೆಯ ಮಠಗಳ ಬಗೆಗೆ ಅದರ ಅನುಯಾಯಿಗಳಲ್ಲಿ ಗೌರವ ಇದ್ದೇ ಇದೆ. ಚಿತ್ರದುರ್ಗದ ಮುರಘಾ ಶರಣರ ಬಗ್ಗೆ ಅಪಾರವಾದ ಗೌರವವಿರುವವರ ಸಾಲಲ್ಲಿ ನಾನೂ ಒಬ್ಬನಾಗಿದ್ದೆ. ಇತ್ತೀಚಿನ ಒಂದು ಸಮಾರಂಭವೊಂದರಲ್ಲಿ ಅವರ ಸಂಕುಚಿತ ಮಾತುಗಳು ನನ್ನನ್ನು ಘಾಸಿಗೊಳಿಸಿದವು. ಇಂಥಾ ಸ್ವಾಮಿಗಳು ನಮ್ಮ ನಡುವೆ ಕೆಲವರಾದರೂ ಇದ್ದಾರಲ್ಲ..? ಎಂದುಕೊಳ್ಳುವಾಗಲೇ ಇವರೂ ಎಲ್ಲರಂತಾದದ್ದು ನನ್ನಂಥಾ ಅನೇಕರಿಗೆ ಬೇಸರ ತಂದಿರುವುದಿದೆ. ಮಠಗಳು ರಾಜಕೀಯದಿಂದ ದೂರ ಉಳಿಯಬೇಕು. ಅವರು ಕೊಡಮಾಡುವ ಅನುದಾನವನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಮಠದ ಸಂಪನ್ಮೂಲಗಳನ್ನು ವಿಸ್ತರಿಸಿಕೊಳ್ಳುವ ಮೂಲಕ ಮಠಗಳು ಬೆಳೆಯಬೇಕೇ ಹೊರತು ರಾಜಕಾರಣಿಗಳ ಅನುದಾನದಿಂದ ಅಲ್ಲ. ಕೈವಾರ ತಾತಯ್ಯನವರ ಮಠ ಆ ದಿಶೆಯಲ್ಲಿ ಒಂದು ಮಾದರಿಯಾಗಬೇಕು.

Leave a Reply

Your email address will not be published. Required fields are marked *