ವಾಗ್ವಾದಗಳೂ, ಹೋರಾಟಗಳೂ ಗರ್ಭಪಾತಗೊಂಡಂತಹ ಸಂದರ್ಭದಲ್ಲಿ…


-ಬಿ. ಶ್ರೀಪಾದ ಭಟ್


 

ನಿಡುಮಾಮಿಡಿ ಮಠದ ಹಿಂದಿನ ಸ್ವಾಮಿಗಳಾದ ಜ.ಚ.ನಿ. ಅವರು ಬಸವಣ್ಣನವರ “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಾ”, “ಇವನಾರವ ಇವನಾರವ ಎನ್ನದಿರು ಇವ ನಮ್ಮವ ಇವ ನಮ್ಮವ ಎನ್ನಯ್ಯ” ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟವರು. ವೈದಿಕರ ಪುರೋಹಿತಶಾಹಿ ತತ್ವಗಳಿಂದ ಹೊರ ಬಂದ ಜ.ಚ.ನಿ. ಅವರು ಇಲ್ಲಿ ಜ್ಞಾನವನ್ನು ಸಕಲ ಜೀವ ರಾಶಿಗಳಿಗೂ ನೀಡಬೇಕೆನ್ನುವ ಜೀವಪರ ತತ್ವಕ್ಕೆ ಇಂಬು ಕೊಟ್ಟರು. ಆ ಮೂಲಕ ನಿಡುಮಾಮಿಡಿ ಮಠವನ್ನು ಪ್ರಗತಿಪರ ಕ್ಷೇತ್ರವನ್ನಾಗಿರಿಸಿದರು. ಬಸವಣ್ಣನ ಕಾಯಕ ತತ್ವದಲ್ಲಿ ಅಪಾರ ನಂಬುಗೆ ಇಟ್ಟು ಅದೇ ರೀತಿ ನುಡಿದಂತೆ ನಡೆದವರು. (ಜ.ಚ.ನಿ. ಸ್ವಾಮಿಗಳ ಬಗ್ಗೆ ಮಾತನಾಡುವಾಗ ನನಗೆ ಮಲ್ಲಾಡಿಹಳ್ಳಿಯ ಗುರುಗಳಾದ “ತಿರುಕ” ನೆನಪಾಗುತ್ತಾರೆ. ಇವರೂ ಸಹ ಕಾಯಕ ತತ್ವವಾದಿ. ಸಣ್ಣವನಿದ್ದಾಗಿನಿಂದಲೂ ಇವರನ್ನು ನಾನು ಹತ್ತಿರದಿಂದ ನೋಡಿದ್ದೆ.)

ನಂತರ ಬಂದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರು ತಮ್ಮ ಗುರುಗಳ ನೀತಿಗಳನ್ನೇ ಮುಂದುವರೆಸುತ್ತಾ ಪ್ರಗತಿಪರ ಧೋರಣೆಗಳಿಗೆ, ಜಾತ್ಯಾತೀತ ನಿಲುವಿಗೆ ಸದಾ ಬದ್ಧರಾಗಿರುತ್ತಾ ನಿಡುಮಾಮಿಡಿ ಮಠವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದರು. ಕಳೆದ 25 ವರ್ಷಗಳಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ, ದಲಿತರ ಆತಂಕಗಳು, ತಲ್ಲಣಗಳು ಹಾಗೂ ಅವಶ್ಯಕತೆಗಳನ್ನು ತಳ ಮಟ್ಟದಲ್ಲಿ ಅರಿತಿದ್ದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಅದಕ್ಕೆ ಸ್ಪಂದಿಸಿದ್ದೂ ಕೂಡ ಅನನ್ಯವಾಗಿತ್ತು. ಎಲ್ಲರಿಗೂ ಅಂದರೆ ಜನಸಾಮಾನ್ಯರಿಗೂ ಹಾಗೂ ಇತರ ಶೂದ್ರ ಮಠದ ಸ್ವಾಮಿಗಳಿಗೂ ಮಾದರಿಯಾಗಿತ್ತು.

ಇಂದು ರಾಜ್ಯದ ಬ್ರಾಹ್ಮಣ ಹಾಗೂ ಲಿಂಗಾಯಿತ ಜಾತಿಯ ಬಹುಪಾಲು ಮಠಗಳು ಹಾಗೂ ಅದರ ಸ್ವಾಮಿಗಳು ಪ್ರತಿಪಾದಿಸುತ್ತಿರುವ ಸ್ವಚ್ಛಂದ, ನಿರ್ಲಜ್ಜ ಕೀಳು ಮಟ್ಟದ ಜಾತೀಯತೆ, ಭೋದಿಸುತ್ತಿರುವ ಧಾರ್ಮಿಕ, ಮೂಢಕಂದಾಚಾರಗಳು, ಬೆಳೆಸುತ್ತಿರುವ ಅನೈತಿಕ ಪರಂಪರೆ, ಕುಗ್ಗಿಸುತ್ತಿರುವ ಮೌಲ್ಯಗಳು ಸರ್ವರಿಗೂ ಗೊತ್ತಿರುವಂತಹದ್ದು. ನಮ್ಮ ಮೂಲಭೂತ ಚಿಂತನೆಗಳಾದ ವೈದಿಕತೆ ಹಾಗೂ ಪುರೋಹಿತಶಾಹಿಯನ್ನೇ, ಅಲ್ಪಸಂಖ್ಯಾತರ ತುಚ್ಛೀಕರಣವನ್ನೇ ಸಂಘ ಪರಿವಾರ ಕೂಡ ಎತ್ತಿ ಹಿಡಿಯುತ್ತದೆ ಎನ್ನುವಂತೆ ವರ್ತಿಸುವ ಬಹುಪಾಲು ಬ್ರಾಹ್ಮಣ ಮಠಗಳು, ಯಡಿಯೂರಪ್ಪ ತಮ್ಮ ಜಾತಿಯವನು ಹಾಗೂ ಜನರ ಹಣವನ್ನು ತಮಗೆಲ್ಲ ಸಂವಿಧಾನ ಬಾಹಿರವಾಗಿ ಬಿಟ್ಟಿಯಾಗಿ ಕೊಟ್ಟಿದ್ದಾರೆ ಎನ್ನುವ ಅನೈತಿಕ, ಭ್ರಷ್ಟಾಚಾರದ ಹಂಗಿನಲ್ಲಿ ರಾಜ್ಯದ ಬಹುಪಾಲು ಲಿಂಗಾಯತ ಮಠದ ಸ್ವಾಮಿಗಳು ಎಲ್ಲಾ ಆದರ್ಶಗಳು, ಮೌಲ್ಯಗಳನ್ನು ಗಾಳಿಗೆ ತೂರಿ ಕಡು ಭ್ರಷ್ಟಚಾರದ ಅಪಾದನೆಯನ್ನು ಹೊತ್ತಿರುವ ಕಳಂಕಿತ ಯಡಿಯೂರಪ್ಪರವರನ್ನು ನಿರ್ಲಜ್ಜವಾಗಿ ಬೆಂಬಲಿಸುತ್ತಿರುವುದೂ ಕನ್ನಡಿಗರಿಗೆಲ್ಲರಿಗೂ ದಿನನಿತ್ಯದ ಸುದ್ದಿಯಾಗಿ ಹಳಸಲಾಗಿದೆ. (ಬರು ಬರುತ್ತಾ ಜನತೆ ಇದನ್ನು ಅಯ್ಯೋ ಮಾಮೂಲಿ ಬಿಡಿ ಹೊಸತೇನಿದೆ ಎನ್ನುವ ಹಂತಕ್ಕೆ ತಲುಪುವ ಅಪಾಯವಿದೆ.)

ಜನತೆ ಈಗ ಇವರನ್ನೆಲ್ಲಾ ಸಾರ್ವಜನಿಕವಾಗಿ ಬಹಿಷ್ಕರಿಸಬೇಕು. ಈಗ ಉಳಿದಿರುವುದು ಇದೊಂದೇ ಮಾರ್ಗ. ಆದರೆ ಗಂಟೆ ಕಟ್ಟುವವರಾರು? ಈ ಸ್ವಾಮಿಗಳ ಸಾಲಿನಲ್ಲಿ ಶತಾಯುಷಿಯಾಗಿರುವ ಸೋಕಾಲ್ಡ್ ನಡೆದಾಡುವ ದೇವರು ಸೇರಿಕೊಂಡಿರುವುದಕ್ಕೆ ನಮಗೆಲ್ಲಾ ಅಂತಹ ಆಶ್ಚರ್ಯವಿರಲಿಲ್ಲ. ಇದನ್ನು ನಾವೆಲ್ಲಾ ಎಂದೋ ನಿರೀಕ್ಷಿಸಿದ್ದೆವು. ಆದರೆ ಈ ಸಾಲಿನಲ್ಲಿ ನಮ್ಮ ಪ್ರೀತಿಯ ಮುರುಘಾಮಠದ ಶರಣರು ಸೇರಿಕೊಂಡಿದ್ದು ನಿಜಕ್ಕೂ ಕನ್ನಡದ ಪ್ರಜ್ಞಾವಂತರಿಗೆ ಅಘಾತವನ್ನುಂಟು ಮಾಡಿತ್ತು. ಕೇವಲ ಚಿಂತನೆಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಚರ್ಚೆಗಳಲ್ಲಿ ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನದಲ್ಲಿಯೂ ಹರಸಾಹಸ ಪಡುತ್ತಿದ್ದ, ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಯಶಸ್ಸನ್ನೂ ಕಂಡ ಮುರುಘಾಮಠದ ಶರಣರು ಸಾಮೂಹಿಕ ಸರಳ ವಿವಾಹಗಳನ್ನು ರಾಹು ಕಾಲದಲ್ಲಿ ನಡೆಸಿ, ಅಂತರ್ಜಾತೀಯ ವಿವಾಹಗಳನ್ನು ಮನಪೂರ್ವಕವಾಗಿ ಪ್ರೋತ್ಸಾಹಿಸುತ್ತಾ, ನಿಜದ ಹೋರಾಟಗಾರರನ್ನು, ಪ್ರಾಮಾಣಿಕ ಪ್ರಗತಿಪರ ಚಿಂತಕರನ್ನು ಗುರುತಿಸಿ ಅವರಿಗೆ ಬಸವಶ್ರೀ ಪ್ರಶಸ್ತಿಯ ಮೂಲಕ ಗೌರವಿಸುತ್ತಿದ್ದರು, ಉಪಮಠಗಳಿಗೆ ದಲಿತರನ್ನು ಸ್ವಾಮಿಗಳಾಗಿ ನೇಮಿಸುವ ಕ್ರಾಂತಿಕಾರಿ ಪರಿಪಾಠಗಳ ಮೂಲಕ ಕನ್ನಡ ನಾಡಿಗೆ ಜೀವಂತ ಮಾದರಿಯಾಗಿದ್ದರು, ಪ್ರಗತಿಪರ ಹೋರಾಟಗಾರರಿಗೆ, ಚಿಂತಕರಿಗೆ ಆಪ್ತ ಸ್ನೇಹಿತರಂತಿದ್ದರು, ಹಿತಚಿಂತಕರಾಗಿದ್ದರು. ಸಮಾಜದಲ್ಲಿ ನಿಜಕ್ಕೂ ಒಂದು ಧನಾತ್ಮಕ ಘಟ್ಟವನ್ನು ತಲುಪಿ ನಮ್ಮನ್ನೆಲ್ಲ ನೀವೂ ಕೂಡ ಕೇವಲ ಮಾತನಾಡುವುದನ್ನು ಬಿಟ್ಟು ಚಿಂತನೆಗಳನ್ನು ಕಾರ್ಯಗತಗೊಳಿಸುತ್ತಾ ಆ ಘಟ್ಟಕ್ಕೆ ಬಂದು ತಲುಪಿ ಎನ್ನುವಷ್ಟರ ಮಟ್ಟಿಗೆ ಎಲ್ಲಾ ತಲೆಮಾರಿಗೆ ಆದರ್ಶಪ್ರಾಯರಾಗಿದ್ದರು.

ಇಂತಹ ಜೀವಪರ ಮುರುಘಾಮಠದ ಸ್ವಾಮಿಗಳು “ಪಾಯಸ ತಿಂದಾಗ ಹೆಸರು ಕೆಡಸಿಕೊಳ್ಳಲಿಲ್ಲ, ಆದರೆ ನೊಣವನ್ನು ನೆಕ್ಕಿ ಸಿಕ್ಕಿ ಹಾಕಿಕೊಂಡ” ಎನ್ನುವ ಗಾದೆ ಮಾತಿನಂತೆ ಯಡಿಯೂರಪ್ಪನವರ ಅನಗತ್ಯ ಹೊಗಳಿಕೆಯ ಮೂಲಕ ಕಳೆದ 15 ವರ್ಷಗಳ ತಮ್ಮ ಮಾದರಿ ಬದುಕಿಗೆ ಕಪ್ಪು ಹಚ್ಚಿಕೊಂಡರು. ತೀರಾ ನೋವಿನ ಸಂಗತಿ ಎಂದರೆ 15 ವರ್ಷಗಳು ಪ್ರಗತಿಪರರಾಗಿ, ಜಾತ್ಯಾತೀತರಾಗಿ ನಿರಂತರವಾಗಿ ಜೀವಿಸುವುದಕ್ಕೇ ತುಂಬಾ ದೀರ್ಘವಾಯಿತೇ? ಹೌದೆನ್ನುವುದಾದರೆ ಮುಂದಿನ ದಿನಗಳನ್ನು ನೆನಸಿಕೊಂಡು ಮೈನಡುಗುತ್ತದೆ. ಇಂದು ಸಂಘಟನೆಗಳು ವಿಘಟನೆಗೊಂಡು ಸೃಜನಶೀಲ ಸಂವಾದಗಳು, ವಾಗ್ವಾದಗಳೂ ಹಾಗೂ ಎಲ್ಲಾ ಹೋರಾಟಗಳೂ ಸ್ಥಗಿತಗೊಂಡಂತಹ, ಗರ್ಭಪಾತಗೊಂಡಂತಹ ಇಂದಿನ ದಿನಗಳಲ್ಲಿ ನಾವೇನಾದರೂ ಪ್ರತಿಭಟನೆಯನ್ನಾಗಲಿ, ಸರಣಿ ಅಥವಾ ಸಾಂಕೇತಿಕವಾಗಿ ಒಂದು ದಿನದ ನಿರಶನವನ್ನಾಗಲಿ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಈ ಬೀದಿ ಹೋರಾಟಗಳಿಗೆ, ನಿರಶನಗಳಿಗೆ ಸಾಮಾನ್ಯ ಜನಬೆಂಬಲಗಳಿಸಿಕೊಳ್ಳುವುದರಿಂದ ಹಿಡಿದು ಅವರನ್ನು ಬೀದಿಗೆ ಕರೆತರುವಷ್ಟರಲ್ಲಿ ಅರ್ಧ ಆಯಸ್ಸು ಕಳೆದಿರುತ್ತದೆ. ಇನ್ನು ಈ ಮಟ್ಟದ ಜಾತಿಹೀನ, ಕ್ರಿಯಾತ್ಮಕ ಚಳವಳಿಗಳಿಗೆ, ಧಾರ್ಮಿಕತೆಯ ಬೆಂಬಲವಿಲ್ಲದ ಚಳವಳಿಗಳಿಗೆ ಪ್ರಭುತ್ವವಂತೂ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ನಮ್ಮ ಕಡೆಗೆ ತಿರುಗೀ ಸಹ ನೋಡುವುದಿಲ್ಲ. ನಾವೆಲ್ಲಾ ಅಂತೂ ನಾವು ಕೂಡ ಬೀದಿಗಿಳಿದೆವು ಎಂದು ಇತಿಹಾಸವಾಗುವಷ್ಟಕ್ಕೆ ತೃಪ್ತಿ ಪಡಬೇಕಾಗಿದೆ. ಆದರೆ ಅನೇಕ ವೇಳೆ ಇದು ಅರಣ್ಯರೋದನವಾಗುತ್ತದೆ. ಇದು ಇಂದಿನ ಕಟು ವಾಸ್ತವ. ಮಾತಿಗೂ ಕೃತಿಗೂ ಸಾಗರದಷ್ಟು ಅಂತರವಿದೆ.

ಇತ್ತೀಚೆಗೆ ಢೋಂಗಿ ಗುರು ರವಿಶಂಕರ್ ಸರ್ಕಾರಿ ಶಾಲೆಗಳನ್ನು ನಕ್ಸಲೀಯರನ್ನು ತಯಾರಿಸುವ ಕೇಂದ್ರ ಎನ್ನುವ ದೇಶದ್ರೋಹಿ ಹೇಳಿಕೆ ಕೊಟ್ಟಾಗ ನಮ್ಮ ಅನೇಕ ಪ್ರಜ್ಞಾವಂತರಲ್ಲಿ ಇದು ತಳಮಳವನ್ನಾಗಲಿ, ಕ್ರೋಧವನ್ನಾಗಿ ಹುಟ್ಟುಹಾಕಲೇ ಇಲ್ಲ. ಕಡೆಗೆ SFI ನ ಗೆಳೆಯರು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ರವಿಶಂಕರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕಾಯಿತು.

ಇಷ್ಟೆಲ್ಲ ಪೀಠಿಕೆ ಏಕೆಂದರೆ ನಿಡುಮಾಮಿಡಿ ಮಠದ ಸ್ವಾಮಿಗಳಾದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳ ನೇತೃತ್ವದಲ್ಲಿ ಸುಮಾರು 30 ಹಿಂದುಳಿದ, ದಲಿತ ಮಠಗಳ ಸ್ವಾಮಿಗಳು ಹಾಗೂ ಗದುಗಿನ ತೋಂಟದಾರ್ಯ ಸ್ವಾಮಿಗಳು ಮತ್ತು ಪ್ರಗತಿಪರ ಚಿಂತಕರು ಹಾಗೂ ದಲಿತ ಸಂಘಟನೆಗಳು ಮಡೆಸ್ನಾನ ಹಾಗೂ ಪಂಕ್ತಿಭೇದ ನೀಷೇಧದ ವಿರುದ್ದ ನಿರಶನ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ನಾವೆಲ್ಲಾ ಕೂಡ ಇದರಲ್ಲಿ ಪಾಲ್ಗೊಂಡಿದ್ದೆವು. ವಿಶೇಷವೇನೆಂದರೆ ಅಲ್ಲಿ ಭಾಷಣ ಮಾಡಿದ ಬಹುಪಾಲು ಸ್ವಾಮಿಗಳು ಅತ್ಯಂತ ಕ್ರಾಂತಿಕಾರಿಯಾಗಿ ಮಾತನಾಡಿದ್ದು. ನಿಜಗುಣ ಸ್ವಾಮಿಗಳು, ಬಸವಲಿಂಗ ಪಟ್ಟದೇವರು ಸ್ವಾಮಿಗಳು ಪ್ರತಿ ನುಡಿಗೂ ಬಸವಣ್ಣನ ಕ್ರಾಂತಿಕಾರೀ ವಚನಗಳನ್ನು ಬಳಸಿಕೊಳ್ಳುತ್ತ ವರ್ಣಾಶ್ರಮ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಿರುವ ಮೇಲ್ಜಾತಿ ಮಠಗಳನ್ನು, ಪೇಜಾವರ ಸ್ವಾಮಿಗಳ ಜಾತೀಯತೆಯನ್ನು ಕಟುವಾಗಿ ಟೀಕಿಸಿದರು. ಜಾತಿರಹಿತ ಸಮಾಜ ಕಟ್ಟುವುದು ನಮ್ಮ ಮುಂದಿನ ಗುರಿ ಎಂದು ಘೋಷಿಸಿಯೇ ಬಿಟ್ಟರು. ಇವರು ಜಾತಿವಾದದ ವಿರುದ್ಧ, ಶೋಷಣೆಯ ವಿರುದ್ಧ, ಇಂದಿನ ಲಿಂಗಾಯತ ಸ್ವಾಮಿಗಳ ನಡತೆಗಳ ವಿರುದ್ಧ ಗುಡುಗಿದ್ದು ನಮ್ಮಲ್ಲಿ ಇನ್ನಿಲ್ಲದ ಅತ್ಯಂತ ಅಚ್ಚರಿ ಹಾಗೂ ಆಶಾವಾದ ಮೂಡಿಸಿತ್ತು. ಅಲ್ಲದೆ ಸ್ವತಃ ಮುಖ್ಯಮಂತ್ರಿಗಳೇ ಬಂದು ಮಡೆಸ್ನಾನ ಹಾಗೂ ಪಂಕ್ತಿಭೇಧ ನಿಷೇದಿಸುತ್ತೇವೆ ಎಂದು ಹೇಳಿಕೆ ಕೊಡದಿದ್ದರೆ ಸಂಜೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ನಿಡುಮಾಮಿಡಿ ಸ್ವಾಮಿಗಳು ಗುಡುಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸಂಜೆ ಪ್ರತಿಭಟನೆಯ ಸ್ಥಳವಾದ ಸ್ವಾತಂತ್ರ್ಯ ಉದ್ಯಾನಕ್ಕೆ ಸ್ವತಃ ಸದಾನಂದ ಗೌಡರೇ ಬಂದು ಇನ್ನೆರೆಡು ತಿಂಗಳೊಳಗೆ ಮಡೆಸ್ನಾನ ನಿಷೇಧಕ್ಕೆ ಸದನದೊಳಗೆ ವಿಧೇಯಕವನ್ನು ತಂದು ಈ ನೀಷೇಧ ಪ್ರಕ್ರಿಯೆಗೆ ಚಾಲನೆ ಕೋಡುತ್ತೇವೆ ಎಂದು ಒಪ್ಪಿಕೊಂಡರು.

ಇದು ನಿಜಕ್ಕೂ ಪ್ರಗತಿಪರ ಚಳವಳಿಗಳ ಜಯ. ಒಂದು ವೇಳೆ ಇದು ಜಾರಿಗೊಂಡರೆ ಅದರ ಯಶಸ್ಸು ನಿಡುಮಾಮಿಡಿ ಸ್ವಾಮಿಗಳಿಗೆ ಸಲ್ಲುತ್ತದೆ. ಕಳೆದ ನಾಲ್ಕು ತಿಂಗಳಿಂದ ಇದನ್ನು ನಿರಂತರವಾಗಿ ಸಂವಾದದ ರೂಪದಲ್ಲಿ ಜೀವಂತವಾಗಿಟ್ಟದ್ದು ನಿಡುಮಾಮಿಡಿ ಸ್ವಾಮಿಗಳು.

ಅಂತಿಮವಾಗಿ ಇದು ಏನನ್ನು ಸೂಚಿಸುತ್ತದೆ? ಜನಸಾಮಾನ್ಯರ, ಬಡವರ, ದಲಿತರ ಅಳಲುಗಳನ್ನು, ಮೂಲಭೂತ ಹಕ್ಕುಗಳ ಪರವಾದ, ಶೋಷಣೆಗಳ ವಿರುದ್ಧದ ಅಹಿಂಸಾತ್ಮಕ ಹೋರಾಟವನ್ನು ನಡೆಸಬೇಕಾದರೆ, ಈ ಅಹಿಂಸಾತ್ಮಕ ಹೋರಾಟಕ್ಕೆ ಪ್ರಭುತ್ವವನ್ನು ಬಗ್ಗುವಂತೆ ತರಬೇಕಾದರೆ, ಸ್ವಃತಹ ಮುಖ್ಯಮಂತ್ರಿಗಳೇ ನಿರಶನ ಸ್ಥಳಕ್ಕೆ ಕರೆಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾದ ಅಹಿಂಸಾತ್ಮಕ ಚಳವಳಿಯನ್ನು ಕಟ್ಟಬೇಕೆಂದರೆ ಅದು ಇಂದು ಮಠಗಳ ಕೈಯಲ್ಲಿ ಮಾತ್ರ ಸಾಧ್ಯ ಎಂಬುದು ಇಂದು ಸಂಪೂರ್ಣವಾಗಿ ಸಾಬೀತಾಗುತ್ತಿದೆ. ಈ ಸ್ವಾಮಿಗಳಿಗೆ ಮಾತ್ರ ಮುಖ್ಯಮಂತ್ರಿಗಳನ್ನು ತಾವಿದ್ದ ಸ್ಥಳಕ್ಕೆ ಓಡೋಡಿ ಬರುವಂತೆ ಮಾಡುವ ತಾಕತ್ತಿದೆ ಎಂದು ಪುರಾವೆ ಸಹಿತ ಸಾಬೀತಾಗಿದೆ (ಇದು ಅತಿರೇಕವೆಂದು ಗೊತ್ತಿದೆ).

ಅಂದು ಚಿಂತಕ ಕೆ. ಮರಳುಸಿದ್ಧಪ್ಪನವರು ಕೂಡ ಹೇಳಿದ್ದು “ಕೇವಲ ಮಡೆಸ್ನಾನ ನಿಷೇಧ ಮಾತ್ರವಲ್ಲದೆ ಇನ್ನಿತರ ಅನಿಷ್ಟಗಳಾದ ಅಂತರ್ಜಾತೀಯ ವಿವಾಹಿತರ ಬರ್ಬರ ಹತ್ಯೆಗಳು, ಸರ್ಕಾರದ ಭ್ರಷ್ಟಾಚಾರ ಹಾಗೂ ಕೋಮುವಾದ ಇವುಗಳೆಲ್ಲದರ ವಿರುದ್ಧ ನೀವು ಅಂದರೆ ಪ್ರಗತಿಪರ ಸ್ವಾಮಿಗಳು ಮುಂಚೂಣಿಯಲ್ಲಿದ್ದರೆ ನಾವೆಲ್ಲ ಅಂದರೆ ಪ್ರಗತಿಪರ ಹೋರಾಟಗಾರರು ಹಾಗೂ ಚಿಂತಕರು ನಿಮ್ಮ ಹಿಂದೆ ಇರುತ್ತೇವೆ”. ಅಂದರೆ ಇಂದು ದಲಿತ, ಪ್ರಗತಿಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಮೇಲ್ಕಾಣಿಸಿದ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಬೇಕು, ಇದು ಬಿಟ್ಟರೆ ಬೇರೆ ದಾರಿಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇಂದಿನ ಹೋರಾಟ ತನ್ನ ದಿಕ್ಕನ್ನು ಗುರುತಿಸಿಕೊಂಡಿದೆಯೇ? ಇದನ್ನು ಅತ್ಯಂತ ಹುಷಾರಾಗಿ ಜವಬ್ದಾರಿಯಿಂದ ಹಾಗೂ ಪ್ರಜ್ಞಾಪೂರಕವಾಗಿ ಕೇಳಿಕೊಳ್ಳುತ್ತಿದ್ದೇನೆ. (ಇದು ಅತಿರೇಕವೆಂದು ಗೊತ್ತಿದೆ).

ಅಲ್ಲದೆ ಇಂದಿನ ಪ್ರತಿಭಟನೆಯಲ್ಲಿ ಕಂಡುಬಂದ ಮತ್ತೊಂದು ವಿಶೇಷವೆಂದರೆ ವಿಭಜನೆಗೊಂಡ ಮೂರು ಪ್ರಮುಖ ದಲಿತ ಸಂಘಟನೆಯ ಸಂಚಾಲಕರು ಇಂದಿನ ಸಮಾನ ವೇದಿಕೆಯಲ್ಲಿ ಭಾಗವಹಿಸಿದ್ದು. ಇದು ನನ್ನ ಕೆಲವು ದಲಿತ ಸಂಚಾಲಕ ಗೆಳೆಯರಲ್ಲಿ ಅತ್ಯಂತ ಭಾವಾವೇಶವನ್ನು ಉಂಟು ಮಾಡಿತು.

ಆದರೆ ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಾಗಿದ್ದ ಲಂಕೇಶ್ ಈ ಅತಿರೇಕದ, ಪ್ರಗತಿಪರ ಸ್ವಾಮೀಜಿಗಳ ಬಗ್ಗೆ ಕಟುವಾದ ಗುಮಾನಿಯ ಎಚ್ಚರಿಕೆಯನ್ನು, ಸದಾಕಾಲ ತಮ್ಮಲ್ಲಿ ಪ್ರಜ್ವಲವಾಗಿ ಇರುವಂತೆ ಚಿಂತಿಸುತ್ತಿದ್ದರು. ಅದನ್ನು ತಮ್ಮ ಅತ್ಯುತ್ತಮ ಗ್ರಹಿಕೆಯ ಮೂಲಕ ನಮಗೂ ತಲುಪಿಸುತ್ತಿದ್ದರು. ನಮ್ಮ ಪ್ರಜ್ಞೆಯ ಆಳದಲ್ಲಿ, ನಮ್ಮ ಚಿಂತನೆಗಳ ಅಂಬೆಗಾಲಿನಲ್ಲಿ ಈ ಭಾವಾವೇಶದಲ್ಲಿ ಆ ಮೇಲ್ಕಾಣಿಸಿದ ಲಂಕೇಶ್ ಪ್ರಜ್ಞೆ ನಮ್ಮಲ್ಲಿದ್ದರೆ ಮಾತ್ರ ನಾವೆಲ್ಲ ಬಚಾವ್. ಇಲ್ಲವೆಂದರೆ ನಾವೆಲ್ಲ ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಏಕೆಂದರೆ ಧರ್ಮ ಅರ್ಥಾತ್ ಧಾರ್ಮಿಕತೆ ಮತ್ತು ಆಧ್ಯಾತ್ಮಿಕದ ಮಧ್ಯೆ ಸಾಕಷ್ಟು ಅಂತರವಿದೆ. ಅನೇಕ ಭಿನ್ನತೆಗಳಿವೆ. ಆಧುನಿಕ ಭಾರತದಲ್ಲಿ ಇದನ್ನು ಮೊಟ್ಟಮೊದಲು ಅರ್ಥ ಮಾಡಿಕೊಂಡವರು ರಾಮಕೃಷ್ಣ ಪರಮಹಂಸರು. ಪರಮಹಂಸರು ಆಧ್ಯಾತ್ಮವನ್ನು ಧಾರ್ಮಿಕತೆಯಿಂದ ಬಿಡುಗಡೆಗೊಳಿಸಿ ದೈವತ್ವಕ್ಕೆ ಕೊಂಡೈಯ್ದಿದ್ದರು. ಈ ನಿಟ್ಟಿನಲ್ಲಿ ಪರಮಹಂಸರು ನಡೆಸಿದ ಪ್ರಯೋಗಗಳು ನಮ್ಮೆಲ್ಲರ ಊಹೆಗಳನ್ನೂ ಮೀರಿದ್ದು. ಆದರೆ ಕಡೆಗೆ ಆಧುನಿಕ ಭಾರತದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಗುರುವೆಂದರೆ ಅವರು ರಾಮಕೃಷ್ಣ ಪರಮಹಂಸರು. ಆದರೆ ಪರಮಹಂಸರ ಈ ಮಾರ್ಗ ಅತ್ಯಂತ ಕ್ಲಿಷ್ಟಕರವಾದದ್ದು. ಅದಕ್ಕೆಂದೇ ಇದನ್ನು ಸರಳಗೊಳಿಸಲು ವಿವೇಕಾನಂದರನ್ನು ತರಬೇತುಗೊಳಿಸಿದರು. ಆದರೆ ಇಂದು ವಿವೇಕಾನಂದರಿಗೆ ಬಂದೊದಗಿದ ಗತಿ ಎಲ್ಲರಿಗೂ ಗೊತ್ತು. ಸಂಘ ಪರಿವಾರ ವಿವೇಕಾನಂದರನ್ನು ಮರಳಿ ಧಾರ್ಮಿಕ ವ್ಯಕ್ತಿಯನ್ನಾಗಿ ಸ್ವಾಮಿಯ ಪಟ್ಟಕೊಟ್ಟು ಕೂರಿಸಿದೆ.

ಇದಕ್ಕೆ ಮೂಲಭೂತ ಕಾರಣ ಧರ್ಮದ ಹಾಗೂ ಆಧ್ಯಾತ್ಮದ ಬಗ್ಗೆ ನಮ್ಮ ಮಠಗಳಲ್ಲಿರುವ ಅತ್ಯಂತ ಸೀಮಿತ ಗ್ರಹಿಕೆ. ಇದು ಅತ್ಯಂತ ಸರಳೀಕೃತಗೊಂಡ ಮಾದರಿ. ನೀನು ಈಶ್ವರನಲ್ಲಿ ನಂಬಿಕೆ ಇಡು ಅವನು ಮರಳಿ ನಿನಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವಂತಹ ಅತ್ಯಂತ ಸರಳೀಕೃತ ಚಿಂತನೆ ಕಾಲಕ್ರಮೇಣ ಜಡವಾಗುತ್ತದೆ.

ಆದರೆ ಇಂದು ಅತ್ಯಂತ ಜಾತ್ಯಾತೀತರಾಗಿ ಕಾಯಕವನ್ನೇ ನೆಚ್ಚೋಣ ಮತ್ತೇನನ್ನು ಅಲ್ಲ ಎಂದು ಹೇಳುತ್ತಿರುವ ಮೇಲಿನ ಸ್ವಾಮಿಗಳು ಈ ಧರ್ಮ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಈ ಅಪಾಯ ಪ್ರಗತಿಪರ ಸ್ವಾಮಿಗಳಿಗೂ ತಪ್ಪಿದ್ದಲ್ಲ. ಏಕೆಂದರೆ ಬಹಿರಂಗವಾಗಿ ಎಷ್ಟೇ ಪ್ರಗತಿಪರವಾಗಿ, ಜಾತ್ಯಾತೀತರಾಗಿ ಘೋಷಿಸಿಕೊಂಡರೂ ಸ್ಥಾವರಗೊಂಡ ಅವರ ಮಠಗಳು ಅವರನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಬಿಡುತ್ತವೆಯೇ? ಒಂದು ವೇಳೆ ಆಯ್ಕೆಯ ಪ್ರಶ್ನೆ ಬಂದಾಗ ಇವರೆಲ್ಲ ತಮ್ಮ ಚಿಂತನೆಗಳಿಗೆ ತೊಡರುಗಾಲಾಗುವ ಮೌಢ್ಯದ ಜಾತೀವಾದದ ತಮ್ಮ ಮಠಗಳನ್ನು ಧಿಕ್ಕರಿಸುವಷ್ಟು ಎದೆಗಾರಿಕೆ ಹಾಗೂ ಸಮಯಪ್ರಜ್ಞೆ ಹೊಂದಿರುತ್ತಾರೆಯೇ? ಇವು ಮೂಲಭೂತ ಪ್ರಶ್ನೆಗಳು.

ಇಂತಹ ಸಂದಿಗ್ಧತೆಯ ಬಗ್ಗೆ ತೊಂಬತ್ತರ ದಶಕದಲ್ಲಿ ಶೂದ್ರ ಏರ್ಪಡಿಸಿದ್ದ “ಧರ್ಮ ಸಂವಾದ” ವಿಚಾರ ಸಂಕಿರಣದಲ್ಲಿ ಖ್ಯಾತ ಚಿಂತಕ ದಿವಂಗತ ಡಿ.ಆರ್. ನಾಗರಾಜ್ ಬಹು ಮಾರ್ಮಿಕವಾಗಿ ಈ ಕೆಳಗಿನಂತೆ ಹೇಳಿದ್ದರು:

“ದೇವಾಲಯಗಳು ಅಧಿಕಾರದ ಅಟ್ಟಹಾಸಗಳಾದಾಗ ಅವನ್ನು ನಿರಾಕರಿಸಿ ಮಾನವನನ್ನು ಎತ್ತಿ ಹಿಡಿಯಲಾಯಿತು. ಗುರು ಮಠಗಳು ಗಾಢಾಂದಕಾರದ ಗವಿಗಳಾದಾಗ ಅವನ್ನು ಅಪಾಯಕಾರಿ ಬಿಲಗಳೆಂದು ಕರೆಯಲಾಯಿತು. ಎಲ್ಲ ಧರ್ಮಗಳಿಗೂ ಉಜ್ವಲ ಪ್ರಾರಂಭ ಇರುತ್ತವೆ. ಕ್ರಮೇಣ ಕೊಳೆಯುವುದು ಧರ್ಮಗಳ ಶರೀರ ಗುಣ. ತಮ್ಮ ಪ್ರಾರಂಭದ ಉಜ್ವಲತೆಗೆ ಮರಳಲು ಆಗಾಗ ಆ ಧರ್ಮದ ಪರಿಭಾಷೆಯಲ್ಲಿ ನಂಬಿಕೆ ಇರುವ ಮಂದಿ ತೀವ್ರವಾಗಿ ಪ್ರಯತ್ನಿಸುತ್ತಾರೆ. ಉಜ್ವಲ ಪ್ರಾರಂಭದ ನಂತರ ಕೊಳೆಯುವುದು ಹೇಗೆ ಧರ್ಮಗಳ ಮೂಲ ಗುಣವೋ ಹಾಗೆಯೇ ಶುದ್ದೀಕರಣದ ಹಂಬಲ ಕೂಡಾ. ಈ ಶುದ್ದೀಕರಣದ ಹಂಬಲ ಕೆಲವೊಮ್ಮೆ ಸುಧಾರಣೆಗೆ, ಕೆಲವೊಮ್ಮೆ ಅಪಾಯಕಾರಿಯಾದ ಮೂಲಭೂತವಾದಕ್ಕೇ ಎಡೆ ಮಾಡುತ್ತದೆ. ಅದಕ್ಕಾಗಿಯೇ ಧರ್ಮಗಳ ಚಾರಿತ್ರಿಕ ನಿರಂತರತೆಯ ಬಗ್ಗೆ ಹುಚ್ಚು ವ್ಯಾಮೋಹ ಬಿಡಬೇಕಾಗುತ್ತದೆ. ಧರ್ಮದ ಉಜ್ವಲ ಪ್ರಾರಂಭ ಅಥವಾ ಕೇಂದ್ರದರ್ಶನಗಳ ಅಂತರಂಗೀಕರಣ ನಡೆದಾಗ ಧರ್ಮಕ್ಕೆ ಬೇರೆಯೇ ಅರ್ಥ ಬಂದು ಬಿಡುತ್ತದೆ.”

ಡಿ.ಆರ್. ನಾಗರಾಜ್ ಅವರ ಈ ಮಾತುಗಳನ್ನು ನಮ್ಮ ಪ್ರಗತಿಪರ ಸ್ವಾಮಿಗಳು ಮನನ ಮಾಡಿಕೊಂಡರೆ ನಿಜಕ್ಕೂ ನಮಗೆಲ್ಲ ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂದರ್ಥ. ಏಕೆಂದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯ ನಡೆಯುವ ಅನೇಕ ಸಾಧ್ಯತೆಗಳಿವೆ. ಇಲ್ಲವೆಂದರೂ ಮುಂದಿನ ವರ್ಷದಲ್ಲಿ ಚುನಾವಣೆ ನಡೆಯಲೇಬೇಕು. ಅಂದರೆ ಇನ್ನೂ ಕೇವಲ ಎಂಟು ತಿಂಗಳು ಮಾತ್ರ. ಆಗ ನಾವು ಬೇಕಾದರೆ ಕರ್ನಾಟಕದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕೋಮುವಾದಿ, ಭ್ರಷ್ಟ ಅಭ್ಯರ್ಥಿಗಳ ವಿರುದ್ಧ ಪ್ರಗತಿಪರ ಸ್ವಾಮಿಗಳನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಲು ಒತ್ತಾಯಿಸಬಹುದು. ಆಗ ಪರ್ಯಾಯ ಪರಿಕಲ್ಪನೆಗೆ ಇಲ್ಲಿಂದ ಒಂದು ಚಾಲನೆ ಸಿಗಬಹುದೇ? ಏಕೆಂದರೆ ಈಗ ಬದಲಾವಣೆಗೆ ಹದಗೊಂಡಿರುವ ಕರ್ನಾಟಕಕ್ಕೆ “ರಾಜೀವ, ರಾಚೂತಪ್ಪ, ಸಿದ್ಧಲಿಂಗಯ್ಯ, ಜಿ.ಕೆ. ವೆಂಕಟೇಶ್ Combinationನ “ಬಂಗಾರದ ಮನುಷ್ಯ” ತಂಡ ಬೇಕಾಗಿದೆ.

4 thoughts on “ವಾಗ್ವಾದಗಳೂ, ಹೋರಾಟಗಳೂ ಗರ್ಭಪಾತಗೊಂಡಂತಹ ಸಂದರ್ಭದಲ್ಲಿ…

  1. mahantesh navalkal

    ಇದು ಸುಳ್ಳು ಭಟ್ಟರೆ ಜ ಚ ನಿ ಯವರು ಅಪ್ಪಟ ಪುರೊಹಿತಶಾಹಿಗಳಾಗಿದ್ದರು ಅವರ ಪಂಚಾಚಾರ್ಯರ ಬಗ್ಗೆ ಒದಿದ ಲೇಖನ ಒದಿದ ಲೇಖನ ಒದಿದರೆ ನಿಮಗೆ ತಿಳಿಯುತ್ತದೆ ಬಸವಣ್ನ ವೀರಶೈವ ಧರ್ಮ ಸ್ಥಾಪಕನಲ್ಲ ಎಂದು ಅವರು ಪ್ರೂ…. ಮಾಡಲು ಅವ಻ರು ಪಟ್ಟ ಕಷ್ಟ ಅಷ್ಟಿಷ್ಟಲ್ಲ

    Reply
  2. B.Sripad Bhat

    ಮೊದಲನೇ ಸ್ಪಷ್ಟೀಕರಣ ನಾನು ಬರೆದ ಕೆಲವೇ ಸಾಲುಗಳಲ್ಲಿ ಎಲ್ಲಿಯೂ ಜ.ಚ.ನಿ. ಅವರನ್ನು ವೈಭವೀಕರಿಸಿಲ್ಲ.ನನ್ನ ಕೇವಿಯಟ್ ಏನೆಂದರೆ ನಾನು ಅವರ ಭಕ್ತನಲ್ಲ,ಅಭಿಮಾನಿಯೂ ಅಲ್ಲ.
    1909ರಲ್ಲಿ ಜನಿಸಿ 1996 ರಲ್ಲಿ ನಿಧನ ಹೊಂದಿದ ಜ.ಚ.ನಿ.ಸ್ವಾಮಿಗಳು 88 ವರ್ಷಗಳ ಕಾಲ ಜೀವಿಸಿದ್ದರು. ಅದರಲ್ಲಿ ಸಾರ್ವಜನಿಕ ಜೀವನದಲ್ಲಿ 65 ವರ್ಷಗಳಷ್ಟು ಕಾಲ ನಿಡುಮಾಮಿಡಿ ಮಠದ ಸ್ವಾಮಿಗಳಾಗಿದ್ದರು.ಈ 65 ವರ್ಷಗಳಲ್ಲಿ ಅವರು ಉಡುಪಿಯ ವೈದಿಕ ಅಷ್ಟಮಠಗಳ ಹಾಗೆ ತಮ್ಮ ನಿಡುಮಾಮಿಡಿ ಮಠವನ್ನು ಕರ್ಮಠವನ್ನಾಗಿ ಎಂದೂ ಬೆಳೆಸಲಿಲ್ಲ.ಇಂದು ಸ್ವತಂತ್ರವಾಗಿ ಯೋಚಿಸುವ,ಪ್ರಗತಿಪರವಾಗಿ,ಜೀವಪರವಾಗಿ ಚಿಂತಿಸುವ ವೀರಭದ್ರ ಚೆನ್ನಮಲ್ಲ ಸ್ವಾಮಿಗಳಿಗೆ ನಿಡುಮಾಮಿಡಿಯನ್ನು ಒಂದು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಟ್ಟಿದ್ದು ಜ.ಚ.ನಿ.ಸ್ವಾಮಿಗಳು.ಏಕೆಂದರೆ ವೇದಿಕೆಯಲ್ಲಿ,ಸೆಮಿನಾರ್ ಗಳಲ್ಲಿ ಅತ್ಯಂತ ವೈಚಾರಿಕವಾಗಿ,ಬಂಡಾಯಗಾರರಾಗಿ ಮಾತನಾಡುವ ನಮಗೆ ಹಾಗೂ ಕೆಲ ಸ್ವಾಮಿಗಳಿಗೆ ನಮ್ಮೆಲ್ಲರ ವೈಯುಕ್ತಿಕ ಜೀವನದಲ್ಲಿ ನುಡಿದಂತೆ ಬದುಕುವುದು ಒಂದು ಹೋರಾಟವೇ ಆಗಿಬಿಡುತ್ತದೆ.ಅದೇ ರೀತಿ ವೈಚಾರಿಕವಾಗಿ ಚಿಂತಿಸುವ,ಸಮಾಜವನ್ನು ಜಾತ್ಯಾತೀತವಾಗಿ ಕಟ್ಟುವಂತೆ ಕರೆಕೊಡುವ ಸ್ವಾಮಿಗಳಿಗೆ ಸ್ವತಹ ಅವರ ಮಠಗಳನ್ನೇ,ಆ ಮಠಗಳ ಕಂದಾಚಾರಗಳನ್ನೇ ಮೀರಲಿಕ್ಕೆ ಸಾಧ್ಯವಾಗುವುದಿಲ್ಲ. ಆದರೆ ವೀರಭದ್ರ ಚೆನ್ನಮಲ್ಲ ಸ್ವಾಮಿಗಳಿಗೆ ಇದು ಸಾಧ್ಯವಾಯಿತು.ಈ ಮೀರುವುದು ಸಾಧ್ಯವಾಗಿದ್ದು ಆ ಮೊದಲು ಜ.ಚ.ನಿ.ಸ್ವಾಮಿಗಳು ತಮ್ಮ ಸಂಶೋಧನೆಗಳ ಮೂಲಕ,ಪುಸ್ತಕಗಳ ಮೂಲಕ ಬಹುಮುಖ್ಯವಾಗಿ ಕಾಯಕ ತತ್ವದ ಮೂಲಕ ನಿಡುಮಾಮಿಡಿಯನ್ನು ನಂತರದ ತಲೆಮಾರಿಗೆ ಪ್ರಗತಿಪರವಾಗಿ ಚಿಂತಿಸುವಂತೆ ಹದಗೊಳಿಸಿದ್ದು.ನಾನು ಹೇಳ ಹೊರಟಿದ್ದು ಕೂಡ ಇದನ್ನು ಮಾತ್ರ.ಹೊರತಾಗಿ ಜ.ಚ.ನಿ.ಸ್ವಾಮಿಗಳಲ್ಲಿ ಕಾಮ್ರೇಡ್ ತನವನ್ನಾಗಲೀ,ಕಡು ಜಾತ್ಯಾತೀತತೆಯನ್ನಾಗಲಿ ಹುಡುಕಲು ಆಲ್ಲವೇ ಅಲ್ಲ.ಇದು ಸಾಧ್ಯವೇ ಇಲ್ಲ ಸಹ.ಏಕೆಂದರೆ ಇವರ ಜೀವನ ದೃಷ್ಟಿಯಲ್ಲಿ ಕೂಡ ಅನೇಕ ಮಿತಿಗಳಿವೆ.ವೀರಶೈವದ ಬಗ್ಗೆ ಅತ್ಯಂತ ಮುಗ್ಧ ನಂಬುಗೆಗಳಿವೆ.ಅನೇಕ ವೇಳೆ ಇವು ಚರ್ಚಾರ್ಹ ಕೂಡ.ಆದರೆ ಇವರು ಸ್ಥಾವರಗೊಂಡ ಇತರ ಲಿಂಗಾಯತ ಮಠಗಳಂತೆ ಆಚಾರ ಹೇಳೋದಕ್ಕೆ ಬದನೆಕಾಯಿ ತಿನ್ನೋದಕ್ಕೆ ಎನ್ನುವಂತೆ ಖಂಡಿತ ಬದುಕಲಿಲ್ಲ.ತಮ್ಮ ಸುದೀರ್ಘ ಜೀವನದಲ್ಲಿ ವೀರಶೈವ ಮತವನ್ನು ಆಳವಾಗಿ ಅಧ್ಯಯನವನ್ನು ಮಾಡಿದರು,ಸಂಶೋದಕರೆನಿಸಿಕೊಂಡರು,ಅನೇಕ ಪ್ರಮುಖ ಪುಸ್ತಕಗಳನ್ನು ಬರೆದರು.ಉದಾಹರಣೆಗೆ ಜ.ಚ.ನಿ ಯವರು ಬರೆದ ಕೆಲವು ಕೃತಿಗಳು ಜೀವನ ಸಿದ್ಧಾಂತ,ಶಿವಾದ್ವೈತ ದರ್ಶನಗಳು,ಸಂಪಾದನೆಯ ಸೊಂಪು,ಜನನ ಸಿದ್ಧಾಂತ. ಈ ಪುಸ್ತಕಗಳನ್ನು ಅವರು ತಮ್ಮ ತೀವ್ರ ಅಧ್ಯಯನದಿಂದ,ಆಳವಾದ ಸಂಶೋದನೆಯ ಮುಖಾಂತರ ಕಂಡುಕೊಂಡು ಬರೆದರು.ಅವರು ತಮ್ಮ ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಬರೆಯುತ್ತಿದ್ದರು.ಇವರ ಕೃತಿಗಳಲ್ಲಿ ತಲಸ್ಪರ್ಶಿ ಅಧ್ಯಯನಗಳನ್ನು,ಶಾಸ್ತ್ರೀಯ ಶಿಸ್ತನ್ನು,ಆದುನಿಕ ಸಂಶೋಧಕನ ಪ್ರಜ್ನೆಯನ್ನು ಹುಡುಕಿ ಕೆದಕಿ ನೋಡಿ ಇದು ಅನೇಕ ಕಡೆ ಎಷ್ಟು ಸಾಧಾರಣವಾಗಿದೆ ಎಂದರೆ ಇದು ನಮ್ಮ ಸಣ್ಣತನವನ್ನು ತೋರುತ್ತದೆ ಅಷ್ಟೆ.”ಎಂಟು ಮಂದಿ ನಂಟರು ನಿನಗಮ್ಮ,ಉಂಟಾದ ಹತ್ತು ದಿಕ್ಕಿನ ಬೆಳಗಮ್ಮ” ಎಂದು ಹಾಡಿದ ಜನಪದ “ಕೊರವಂಜಿ ಸಾಹಿತ್ಯವನ್ನು” ಸಂಶೋದಿಸಿ,ಅಭ್ಯಸಿಸಿ ಅದರ ಬಗೆಗೆ ಬರೆದರು ನಾವು ಕೂಡ ಕೊರವಂಜಿ ಸಾಹಿತ್ಯವನ್ನು ಓದಿದ್ದು ಜ.ಚ.ನಿ.ಅವರ ಮುಖಾಂತರ.ಅನುಭಾವ ಸಾಹಿತ್ಯವನ್ನು ಹೇಳುವ,ಸಮತಾಭಾವ ಹಾಗೂ ಸಮತಾವಾದದ ಆದರ್ಶವನ್ನು ಸಾರುವ, “ವೀರಾಗಮ” ಪರಂಪರೆಯ ಬಗ್ಗೆ ಬರೆದರು( ಇದಕ್ಕೂ ಪ್ಲೇಟೋ ಚಿಂತನೆಗಳಿಗೂ ಅನೇಕ ಸಾಮರಸ್ಯಗಳಿವೆ ಎಂದು ಚಿಂತಕರು ಹೇಳುತ್ತಾರೆ).ವೀರಶೈವ ಸೂಳ್ನುಡಿಕಾರರ ಬಗೆಗೆ ಬರೆದರು ಹಾಗೂ ಸಂಶೋದಿಸಿದರು.ಈ ಸೂಳ್ನುಡಿಕಾರರ ಬಗ್ಗೆ ಎಲ್.ಬಸವರಾಜು ಅವರು ಹೇಳುತ್ತಾರೆ ” ವಚನ ಸಾಹಿತ್ಯವನ್ನು ಪ್ರವರ್ತಿಸಿದ ಶಿವಾಚಾರ್ಯರು ೧೦ನೇ ಶತಮಾನದಷ್ಟು ಹಿಂದೆಯೇ ಜಾತಿ ಭೇದಗಳೊಂದೂ ಇಲ್ಲದ,ಸ್ತ್ರೀ,ಪುರುಷರ ನಡುವೆ ಸಮಾನತೆ ಇರುವ,ಐಹಿಕ ಜೀವನದ ಬಗ್ಗೆ ಆಶಾಭಾವನೆ ಇರುವ ಒಂದು ಧರ್ಮವನ್ನು ಅದರ ತಳಹದಿಯ ಮೇಲೆ ಒಂದು ಹೊಸ ಜನಪರ ಸಮಾಜವನ್ನು ಕಟ್ಟಿದರು”.ಇಂತಹ ಸೂಳ್ನುಡಿ ಶಿವಾಚಾರ್ಯರರನ್ನು ಅಧ್ಯಯನ ಮಾಡಿ ಕೃತಿಯನ್ನು ರಚಿಸಿದವರು ಜ.ಚ.ನಿ.ಸ್ವಾಮಿಗಳು.ನಮಗೆ ಇವೆಲ್ಲ ಮುಖ್ಯವಾಗಬೇಕಲ್ಲವೇ ?? ಈ ಅಧ್ಯಯನಶೀಲ,ಸಂಶೋಧಕರಾದ,ಕಾಯಕ ತತ್ವದಲ್ಲಿ ನಂಬುಗೆ ಇರಿಸಿದ ಜ.ಚ.ನಿ.ಸ್ವಾಮಿಗಳನ್ನು ನಾವು ಅವರನ್ನು ತೀರಾ ಕಾಮಾಲೆ ನೋಟದಿಂದ ನೋಡುವ ಅವಶ್ಯಕತೆ ಇಲ್ಲವೆನಿಸುತ್ತದೆ.ಒಮ್ಮೆ ಆ ದೃಷ್ಟಿಕೋನದಿಂದ ಹೊರಟರೆ ಅಪಾರ್ಥಕ್ಕೆ ಎಡೆ ಮಾಡಿಕೊಡುವ ಅನೇಕ ಸಂಗತಿಗಳು ಜ.ಚ.ನಿ.ಅವರ ಜೀವನದಲ್ಲಿ ನಮಗೆ ಸಿಗುತ್ತವೆ.ಇದೇ ಮಾತನ್ನು ಕೂಡ ನಾನು ಉದಾಹರಣೆಯಾಗಿ ಮಲ್ಲಾಡಿಹಳ್ಳಿ ಗುರುಗಳಾದ “ತಿರುಕ” ( ರಾಘವೇಂದ್ರ) ಬಗೆಯೂ ಕೂಡ ಕೊಡಬಹುದು.

    Reply
  3. B.Sripad Bhat

    ಮೊದಲನೇ ಸ್ಪಷ್ಟೀಕರಣ ನಾನು ಬರೆದ ಕೆಲವೇ ಸಾಲುಗಳಲ್ಲಿ ಎಲ್ಲಿಯೂ ಜ.ಚ.ನಿ. ಅವರನ್ನು ವೈಭವೀಕರಿಸಿಲ್ಲ.ನನ್ನ ಕೇವಿಯಟ್ ಏನೆಂದರೆ ನಾನು ಅವರ ಭಕ್ತನಲ್ಲ,ಅಭಿಮಾನಿಯೂ ಅಲ್ಲ.
    1909ರಲ್ಲಿ ಜನಿಸಿ 1996 ರಲ್ಲಿ ನಿಧನ ಹೊಂದಿದ ಜ.ಚ.ನಿ.ಸ್ವಾಮಿಗಳು 88 ವರ್ಷಗಳ ಕಾಲ ಜೀವಿಸಿದ್ದರು. ಅದರಲ್ಲಿ ಸಾರ್ವಜನಿಕ ಜೀವನದಲ್ಲಿ 65 ವರ್ಷಗಳಷ್ಟು ಕಾಲ ನಿಡುಮಾಮಿಡಿ ಮಠದ ಸ್ವಾಮಿಗಳಾಗಿದ್ದರು.ಈ 65 ವರ್ಷಗಳಲ್ಲಿ ಅವರು ಉಡುಪಿಯ ವೈದಿಕ ಅಷ್ಟಮಠಗಳ ಹಾಗೆ ತಮ್ಮ ನಿಡುಮಾಮಿಡಿ ಮಠವನ್ನು ಕರ್ಮಠವನ್ನಾಗಿ ಎಂದೂ ಬೆಳೆಸಲಿಲ್ಲ.ಇಂದು ಸ್ವತಂತ್ರವಾಗಿ ಯೋಚಿಸುವ,ಪ್ರಗತಿಪರವಾಗಿ,ಜೀವಪರವಾಗಿ ಚಿಂತಿಸುವ ವೀರಭದ್ರ ಚೆನ್ನಮಲ್ಲ ಸ್ವಾಮಿಗಳಿಗೆ ನಿಡುಮಾಮಿಡಿಯನ್ನು ಒಂದು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಟ್ಟಿದ್ದು ಜ.ಚ.ನಿ.ಸ್ವಾಮಿಗಳು.ಏಕೆಂದರೆ ವೇದಿಕೆಯಲ್ಲಿ,ಸೆಮಿನಾರ್ ಗಳಲ್ಲಿ ಅತ್ಯಂತ ವೈಚಾರಿಕವಾಗಿ,ಬಂಡಾಯಗಾರರಾಗಿ ಮಾತನಾಡುವ ನಮಗೆ ಹಾಗೂ ಕೆಲ ಸ್ವಾಮಿಗಳಿಗೆ ನಮ್ಮೆಲ್ಲರ ವೈಯುಕ್ತಿಕ ಜೀವನದಲ್ಲಿ ನುಡಿದಂತೆ ಬದುಕುವುದು ಒಂದು ಹೋರಾಟವೇ ಆಗಿಬಿಡುತ್ತದೆ.ಅದೇ ರೀತಿ ವೈಚಾರಿಕವಾಗಿ ಚಿಂತಿಸುವ,ಸಮಾಜವನ್ನು ಜಾತ್ಯಾತೀತವಾಗಿ ಕಟ್ಟುವಂತೆ ಕರೆಕೊಡುವ ಸ್ವಾಮಿಗಳಿಗೆ ಸ್ವತಹ ಅವರ ಮಠಗಳನ್ನೇ,ಆ ಮಠಗಳ ಕಂದಾಚಾರಗಳನ್ನೇ ಮೀರಲಿಕ್ಕೆ ಸಾಧ್ಯವಾಗುವುದಿಲ್ಲ. ಆದರೆ ವೀರಭದ್ರ ಚೆನ್ನಮಲ್ಲ ಸ್ವಾಮಿಗಳಿಗೆ ಇದು ಸಾಧ್ಯವಾಯಿತು.ಈ ಮೀರುವುದು ಸಾಧ್ಯವಾಗಿದ್ದು ಆ ಮೊದಲು ಜ.ಚ.ನಿ.ಸ್ವಾಮಿಗಳು ತಮ್ಮ ಸಂಶೋಧನೆಗಳ ಮೂಲಕ,ಪುಸ್ತಕಗಳ ಮೂಲಕ ಬಹುಮುಖ್ಯವಾಗಿ ಕಾಯಕ ತತ್ವದ ಮೂಲಕ ನಿಡುಮಾಮಿಡಿಯನ್ನು ನಂತರದ ತಲೆಮಾರಿಗೆ ಪ್ರಗತಿಪರವಾಗಿ ಚಿಂತಿಸುವಂತೆ ಹದಗೊಳಿಸಿದ್ದು.ನಾನು ಹೇಳ ಹೊರಟಿದ್ದು ಕೂಡ ಇದನ್ನು ಮಾತ್ರ.ಹೊರತಾಗಿ ಜ.ಚ.ನಿ.ಸ್ವಾಮಿಗಳಲ್ಲಿ ಕಾಮ್ರೇಡ್ ತನವನ್ನಾಗಲೀ,ಕಡು ಜಾತ್ಯಾತೀತತೆಯನ್ನಾಗಲಿ ಹುಡುಕಲು ಆಲ್ಲವೇ ಅಲ್ಲ.ಇದು ಸಾಧ್ಯವೇ ಇಲ್ಲ ಸಹ.ಏಕೆಂದರೆ ಇವರ ಜೀವನ ದೃಷ್ಟಿಯಲ್ಲಿ ಕೂಡ ಅನೇಕ ಮಿತಿಗಳಿವೆ.ವೀರಶೈವದ ಬಗ್ಗೆ ಅತ್ಯಂತ ಮುಗ್ಧ ನಂಬುಗೆಗಳಿವೆ.ಅನೇಕ ವೇಳೆ ಇವು ಚರ್ಚಾರ್ಹ ಕೂಡ.ಆದರೆ ಇವರು ಸ್ಥಾವರಗೊಂಡ ಇತರ ಲಿಂಗಾಯತ ಮಠಗಳಂತೆ ಆಚಾರ ಹೇಳೋದಕ್ಕೆ ಬದನೆಕಾಯಿ ತಿನ್ನೋದಕ್ಕೆ ಎನ್ನುವಂತೆ ಖಂಡಿತ ಬದುಕಲಿಲ್ಲ.ತಮ್ಮ ಸುದೀರ್ಘ ಜೀವನದಲ್ಲಿ ವೀರಶೈವ ಮತವನ್ನು ಆಳವಾಗಿ ಅಧ್ಯಯನವನ್ನು ಮಾಡಿದರು,ಸಂಶೋದಕರೆನಿಸಿಕೊಂಡರು,ಅನೇಕ ಪ್ರಮುಖ ಪುಸ್ತಕಗಳನ್ನು ಬರೆದರು.ಉದಾಹರಣೆಗೆ ಜ.ಚ.ನಿ ಯವರು ಬರೆದ ಕೆಲವು ಕೃತಿಗಳು ಜೀವನ ಸಿದ್ಧಾಂತ,ಶಿವಾದ್ವೈತ ದರ್ಶನಗಳು,ಸಂಪಾದನೆಯ ಸೊಂಪು,ಜನನ ಸಿದ್ಧಾಂತ. ಈ ಪುಸ್ತಕಗಳನ್ನು ಅವರು ತಮ್ಮ ತೀವ್ರ ಅಧ್ಯಯನದಿಂದ,ಆಳವಾದ ಸಂಶೋದನೆಯ ಮುಖಾಂತರ ಕಂಡುಕೊಂಡು ಬರೆದರು.ಅವರು ತಮ್ಮ ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಬರೆಯುತ್ತಿದ್ದರು.ಇವರ ಕೃತಿಗಳಲ್ಲಿ ತಲಸ್ಪರ್ಶಿ ಅಧ್ಯಯನಗಳನ್ನು,ಶಾಸ್ತ್ರೀಯ ಶಿಸ್ತನ್ನು,ಆದುನಿಕ ಸಂಶೋಧಕನ ಪ್ರಜ್ನೆಯನ್ನು ಹುಡುಕಿ ಕೆದಕಿ ನೋಡಿ ಇದು ಅನೇಕ ಕಡೆ ಎಷ್ಟು ಸಾಧಾರಣವಾಗಿದೆ ಎಂದರೆ ಇದು ನಮ್ಮ ಸಣ್ಣತನವನ್ನು ತೋರುತ್ತದೆ ಅಷ್ಟೆ.”ಎಂಟು ಮಂದಿ ನಂಟರು ನಿನಗಮ್ಮ,ಉಂಟಾದ ಹತ್ತು ದಿಕ್ಕಿನ ಬೆಳಗಮ್ಮ” ಎಂದು ಹಾಡಿದ ಜನಪದ “ಕೊರವಂಜಿ ಸಾಹಿತ್ಯವನ್ನು” ಸಂಶೋದಿಸಿ,ಅಭ್ಯಸಿಸಿ ಅದರ ಬಗೆಗೆ ಬರೆದರು ನಾವು ಕೂಡ ಕೊರವಂಜಿ ಸಾಹಿತ್ಯವನ್ನು ಓದಿದ್ದು ಜ.ಚ.ನಿ.ಅವರ ಮುಖಾಂತರ.ಅನುಭಾವ ಸಾಹಿತ್ಯವನ್ನು ಹೇಳುವ,ಸಮತಾಭಾವ ಹಾಗೂ ಸಮತಾವಾದದ ಆದರ್ಶವನ್ನು ಸಾರುವ, “ವೀರಾಗಮ” ಪರಂಪರೆಯ ಬಗ್ಗೆ ಬರೆದರು( ಇದಕ್ಕೂ ಪ್ಲೇಟೋ ಚಿಂತನೆಗಳಿಗೂ ಅನೇಕ ಸಾಮರಸ್ಯಗಳಿವೆ ಎಂದು ಚಿಂತಕರು ಹೇಳುತ್ತಾರೆ).ವೀರಶೈವ ಸೂಳ್ನುಡಿಕಾರರ ಬಗೆಗೆ ಬರೆದರು ಹಾಗೂ ಸಂಶೋದಿಸಿದರು.ಈ ಸೂಳ್ನುಡಿಕಾರರ ಬಗ್ಗೆ ಎಲ್.ಬಸವರಾಜು ಅವರು ಹೇಳುತ್ತಾರೆ ” ವಚನ ಸಾಹಿತ್ಯವನ್ನು ಪ್ರವರ್ತಿಸಿದ ಶಿವಾಚಾರ್ಯರು ೧೦ನೇ ಶತಮಾನದಷ್ಟು ಹಿಂದೆಯೇ ಜಾತಿ ಭೇದಗಳೊಂದೂ ಇಲ್ಲದ,ಸ್ತ್ರೀ,ಪುರುಷರ ನಡುವೆ ಸಮಾನತೆ ಇರುವ,ಐಹಿಕ ಜೀವನದ ಬಗ್ಗೆ ಆಶಾಭಾವನೆ ಇರುವ ಒಂದು ಧರ್ಮವನ್ನು ಅದರ ತಳಹದಿಯ ಮೇಲೆ ಒಂದು ಹೊಸ ಜನಪರ ಸಮಾಜವನ್ನು ಕಟ್ಟಿದರು”.ಇಂತಹ ಸೂಳ್ನುಡಿ ಶಿವಾಚಾರ್ಯರರನ್ನು ಅಧ್ಯಯನ ಮಾಡಿ ಕೃತಿಯನ್ನು ರಚಿಸಿದವರು ಜ.ಚ.ನಿ.ಸ್ವಾಮಿಗಳು.ನಮಗೆ ಇವೆಲ್ಲ ಮುಖ್ಯವಾಗಬೇಕಲ್ಲವೇ ?? ಈ ಅಧ್ಯಯನಶೀಲ,ಸಂಶೋಧಕರಾದ,ಕಾಯಕ ತತ್ವದಲ್ಲಿ ನಂಬುಗೆ ಇರಿಸಿದ ಜ.ಚ.ನಿ.ಸ್ವಾಮಿಗಳನ್ನು ನಾವು ಅವರನ್ನು ತೀರಾ ಕಾಮಾಲೆ ನೋಟದಿಂದ ನೋಡುವ ಅವಶ್ಯಕತೆ ಇಲ್ಲವೆನಿಸುತ್ತದೆ.ಒಮ್ಮೆ ಆ ದೃಷ್ಟಿಕೋನದಿಂದ ಹೊರಟರೆ ಅಪಾರ್ಥಕ್ಕೆ ಎಡೆ ಮಾಡಿಕೊಡುವ ಅನೇಕ ಸಂಗತಿಗಳು ಜ.ಚ.ನಿ.ಅವರ ಜೀವನದಲ್ಲಿ ನಮಗೆ ಸಿಗುತ್ತವೆ

    Reply
  4. ದಿನೇಶ್ ಕುಮಾರ್ ಎಸ್.ಸಿ

    ಮಹಾಂತೇಶ್ ನಾವಲ್ಕರ್ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಲಿಲ್ಲ. ಡಾ.ಜಚನಿಯವರು ಪುರೋಹಿತಶಾಹಿಯಾಗಿದ್ದರು ಎನ್ನುತ್ತಾರೆ. ಧರ್ಮಗುರುಗಳನ್ನೆಲ್ಲ ಪುರೋಹಿತಶಾಹಿ ವರ್ಗಕ್ಕೆ ಸೇರಿಸುವುದಾದರೆ ಜಚನಿಯವರು ಪುರೋಹಿತಶಾಹಿಗಳೇ ಹೌದು. ಆದರೆ ನಾವು ಪುರೋಹಿತಶಾಹಿಯನ್ನು ಪದವನ್ನು ಯಾವ ಕಾರಣಕ್ಕೆ ಬಳಸುತ್ತೇವೋ ಹಾಗೆ ಬದುಕಿದವರಲ್ಲ ಜಚನಿಯವರು.
    ಪಂಚಾಚಾರ್ಯರ ಕುರಿತಂತೆ ಜಚನಿಯವರು ಬರೆದ ಲೇಖನ ಯಾವುದು? ಅದರಲ್ಲಿ ಏನಿದೆ ಎಂಬುದನ್ನು ಮಹಾಂತೇಶ್ ಹೇಳಬೇಕು. ಪಂಚಾಚಾರ್ಯರ ಪೂರ್ವಾಗ್ರಹಗಳು ಎಂಬ ಪುಸ್ತಕವನ್ನು ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಬರೆದಿದ್ದಾರೆ. ತಮ್ಮ ಜೀವನದುದ್ದಕ್ಕೂ ಈ ಪಂಚಾಚಾರ್ಯರ ದುರ್ಮಾರ್ಗಗಳ ವಿರುದ್ಧ ಹೋರಾಡುತ್ತಲೇ ಬಂದವರು ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು. ಇದಕ್ಕಾಗಿ ಪ್ರಾಣಭೀತಿಯನ್ನೂ ಎದುರಿಸಬೇಕಾಯಿತು. ಪಂಚಾಚಾರ್ಯರ ಕುರಿತು ಜಚನಿಯವರ ನಿಲುವು ಏನಾಗಿತ್ತು ಎಂಬುದರ ಕುರಿತು ಮಹಾಂತೇಶ್ ಅವರಿಗೆ ಸ್ಪಷ್ಟವಾಗಿ ಏನಾದರೂ ಗೊತ್ತಿದ್ದರೆ ಹೇಳಲಿ. ಇನ್ನು ಕಡೆಯದಾಗಿ ಬಸವಣ್ಣ ವೀರಶೈವ ಧರ್ಮ ಸ್ಥಾಪಕರಲ್ಲ ಎಂಬ ನಿಲುವಿನ ಕುರಿತಾಗಿ ಹೇಳುವುದಾದರೆ ಬಸವಣ್ಣನ ಪೂರ್ವದಲ್ಲೇ ವೀರಶೈವ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬಸವಣ್ಣ ವೀರಶೈವವನ್ನು ಪುನರ್ ರೂಪಿಸಿದ್ದು ನಿಜ, ಸ್ಥಾಪಕರಲ್ಲ.
    ಮಹಾಂತೇಶ್ ತಮಗೆ ಗೊತ್ತಿರುವ ವಿಷಯಗಳನ್ನು ಸಮರ್ಪಕವಾಗಿ, ಆಧಾರಸಹಿತವಾಗಿ ಹೇಳಿದರೆ ಒಳ್ಳೆಯದು. ಹಿಟ್ ಅಂಡ್ ರನ್ ಥರದ ಕಮೆಂಟುಗಳಿಂದ ಒಳಗಿನ ಅಸಹನೆ ಕಾರಿಕೊಳ್ಳುವ ಆ ಕ್ಷಣದ ತೃಪ್ತಿಯಷ್ಟೆ ಲಭಿಸಬಲ್ಲದು. ಶ್ರೀಪಾದ ಭಟ್ಟರು ಬರೆದಂತೆ ಡಾ.ಜಚನಿಯವರು ಕನ್ನಡ ಸಾಹಿತ್ಯಕ್ಕೆ, ವೀರಶೈವ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅನನ್ಯ. ಅವರ ಕುರಿತು ಲಘುವಾದ ಮಾತುಗಳು ಸಲ್ಲ.

    Reply

Leave a Reply to B.Sripad Bhat Cancel reply

Your email address will not be published. Required fields are marked *