Monthly Archives: March 2012

ಪ್ರಸಕ್ತ ಭಾರತದಲ್ಲಿ ರಾಷ್ಟ್ರೀಯ ನಾಯಕರ ಕೊರತೆ

-ಆನಂದ ಪ್ರಸಾದ್

ವರ್ತಮಾನ ಕಾಲದ ಭಾರತದ ರಾಜಕೀಯವನ್ನು ನೋಡಿದರೆ ರಾಷ್ಟ್ರೀಯ ನಾಯಕರಿಲ್ಲದೆ ದೇಶವು ಬಳಲುತ್ತಿದೆ. ಒಂದು ದೇಶವು ಅಭಿವೃದ್ಧಿಯಾಗಬೇಕಾದರೆ ದೂರದೃಷ್ಟಿಯುಳ್ಳ ರಾಷ್ಟ್ರೀಯ ನಾಯಕರು ಇರಬೇಕು. ದೇಶದ ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ ಹಿನ್ನೆಲೆಯ ಅರಿವು ರಾಷ್ಟ್ರೀಯ ನಾಯಕರಿಗೆ ಇರಬೇಕು. ರಾಷ್ಟ್ರೀಯ ನಾಯಕರಿಗೆ ದೇಶದ ಜನತೆಯ ಜೊತೆ ನೇರ ಸಂಪರ್ಕ ಇರಬೇಕು. ಇಡೀ ದೇಶದಲ್ಲಿ ಆಗಾಗ ಪ್ರವಾಸ ಕೈಗೊಂಡು ಅಲ್ಲಿನ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಚಾಕಚಕ್ಯತೆ ಹಾಗೂ ಮನಸ್ಸು ಇರಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದು ಭಾರತದಲ್ಲಿ ರಾಷ್ಟ್ರೀಯ ನಾಯಕರು ಯಾವ ಪಕ್ಷದಲ್ಲಿಯೂ ಇರುವಂತೆ ಕಾಣುವುದಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ನಾಯಕರು ಎನಿಸಿಕೊಂಡವರು ಪ್ರಚಾರಕ್ಕೆ ಬರುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಯಾವುದೇ ನಾಯಕರು ರಾಷ್ಟ್ರ ಸಂಚಾರ ಮಾಡುತ್ತಿರುವುದು ಕಂಡು ಬರುವುದಿಲ್ಲ. ಹೀಗಾಗಿ ಇಂದಿನ ನಮ್ಮ ರಾಷ್ಟ್ರೀಯ ಪಕ್ಷಗಳು ಎನಿಸಿಕೊಂಡ ಪಕ್ಷಗಳಿಗೂ ರಾಷ್ಟ್ರದ ಮೂಲಭೂತ ಸಮಸ್ಯೆಗಳ ಅರಿವು ಇಲ್ಲ ಮತ್ತು ನೆಲದ ಜೊತೆ ಸಂಪರ್ಕವೇ ಇಲ್ಲ. ಹೀಗಾಗಿ ಇಡೀ ದೇಶಕ್ಕೆ ನಾಯಕತ್ವ ನೀಡಬಲ್ಲ ಮುತ್ಸದ್ಧಿಗಳ ಕೊರತೆ ಇದೆ.

ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಗಾಂಧಿಯವರಿಗೆ ಜನರ ನೇರ ಸಂಪರ್ಕ ಇರುವಂತೆ ಕಾಣುವುದಿಲ್ಲ. ಭವಿಷ್ಯದ ನಾಯಕ ಎಂದು ಕಾಂಗ್ರೆಸ್ ಬಿಂಬಿಸುತ್ತಿರುವ ರಾಹುಲ್ ಗಾಂಧಿಗೂ ಜನತೆಯ ನೇರ ಸಂಪರ್ಕ ಇಲ್ಲ. ಹೀಗಾದರೆ ಒಂದು ರಾಷ್ಟ್ರೀಯ ಪಕ್ಷ ಬೆಳೆಯುವುದಾದರೂ ಹೇಗೆ? ದೇಶದ ಹಾಗೂ ರಾಜ್ಯದ ಆಗುಹೋಗುಗಳನ್ನು ತನ್ನ ಸುತ್ತ ಕಟ್ಟಿಕೊಂಡ ಒಂದಿಷ್ಟು ಮಂದಿಯ ಮೂಲಕವೇ ಅರಿಯುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಿದೆ. ಹೀಗಾದಾಗ ನಿಜ ಸ್ಥಿತಿ ಏನೆಂದು ತಿಳಿಯುವ ಸಂಭವ ಕಡಿಮೆ. ತನ್ನ ಸುತ್ತ ಮುತ್ತ ಇರುವ ಮಂದಿ ಹೇಳಿದ್ದೇ ನಿಜ ಎಂಬ ಪರಿಸ್ಥಿತಿ ಇದರಿಂದ ರೂಪುಗೊಳ್ಳುತ್ತದೆ. ಪಕ್ಷದ ಅಧ್ಯಕ್ಷರಾಗಿರುವವರು ತಾನೇ ಸ್ವತಹ: ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಣಯ ತೆಗೆದುಕೊಳ್ಳದೆ ಹೋದರೆ ರಾಷ್ಟ್ರೀಯ ನಾಯಕತ್ವ ಬೆಳೆಯಲಾರದು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಾಗ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು ಅಲ್ಲಿನ ಆಗುಹೋಗುಗಳನ್ನು ತಿಳಿಯುತ್ತಾ ಸ್ಥಳೀಯ ನಾಯಕರಿಗೆ ಸಲಹೆ ಸೂಚನೆ ಕೊಡುವುದು ಮತ್ತು ಪಡೆಯುವುದು ಮಾಡುವುದರಿಂದ ರಾಜ್ಯಗಳಲ್ಲಿ ಪಕ್ಷ ಬಲವರ್ಧನೆಗೊಳ್ಳಬಹುದು ಮತ್ತು ಹೀಗೆ ಮಾಡುವುದರಿಂದ ದೇಶದ ಎಲ್ಲೆಡೆ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಲು ಸಾಧ್ಯ. ಕಾಂಗ್ರೆಸ್ ಪಕ್ಷದ ವೆಬ್‍ಸೈಟ್ ನೋಡಿದರೆ ಅಲ್ಲಿಯೂ ಜನರ ಜೊತೆ ನೇರ ಸಂಪರ್ಕಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಜನರು ದೇಶದ ಯಾವುದೇ ಭಾಗದಿಂದಾದರೂ ತಮ್ಮ ಸಲಹೆ, ಸೂಚನೆ, ಸಮಸ್ಯೆಗಳನ್ನು ಪಕ್ಷಕ್ಕೆ ಹಾಗೂ ಪಕ್ಷದ ಅಧ್ಯಕ್ಷರಿಗೆ ತಿಳಿಸಲು ವ್ಯವಸ್ಥೆಯನ್ನು ಒಂದು ಉತ್ತಮ ಪಕ್ಷವು ಮಾಡಬೇಕು ಮತ್ತು ಜನರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಬೇಕು. ಹೀಗೆ ಮಾಡುವುದರಿಂದ ಪಕ್ಷದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಬೆಳೆಯಲು ಸಾಧ್ಯ.

ಬಿಜೆಪಿ ಎಂಬ ಇನ್ನೊಂದು ರಾಷ್ಟ್ರೀಯ ಪಕ್ಷದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಪಕ್ಷದ ಅಧ್ಯಕ್ಷರಿಗೆ ರಾಜ್ಯಗಳ ಜೊತೆ ನೇರ ಸಂಪರ್ಕ ಇಲ್ಲ. ಅದರ ವೆಬ್‍ಸೈಟ್‍ನಲ್ಲೂ ಜನರು ನೇರವಾಗಿ ಸಂಪರ್ಕಿಸುವ ವ್ಯವಸ್ಥೆ ಇಲ್ಲ. ಬಿಜೆಪಿಯಲ್ಲಿಯೂ ರಾಷ್ಟ್ರೀಯ ನಾಯಕರ ಅಭಾವ ಇದೆ. ಉಳಿದಂತೆ ಕೆಲವು ಪಕ್ಷಗಳು ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಇದ್ದರೂ ಅವುಗಳ ಪ್ರಭಾವ ಪ್ರಾದೇಶಿಕ ಮಾತ್ರವೇ ಆಗಿದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳು ಇಲ್ಲವೆಂದೇ ಹೇಳಬಹುದು. ಈ ಎರಡೂ ಪಕ್ಷಗಳ ನೀತಿಯೂ ಉದಾರೀಕರಣದ ನಂತರ ಒಂದೇ ಆಗಿದೆ ಎಂಬ ದೂರು ಇದೆ. ಹೀಗಾಗಿ ಇವುಗಳನ್ನು ಬಿಟ್ಟು ಇನ್ನೊಂದು ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದಿರುವುದರಿಂದ ಜನರಿಗೆ ಆಯ್ಕೆಯೇ ಇಲ್ಲದಂತೆ ಆಗಿದೆ. ತೃತೀಯ ರಂಗ ಎಂದು ರೂಪುಗೊಳ್ಳಬಹುದಾದ ಒಂದು ರಂಗದಲ್ಲಿ ರಾಷ್ಟ್ರೀಯ ವರ್ಚಸ್ಸಿನ ನಾಯಕರು ಕಾಣಿಸುತ್ತಿಲ್ಲ. ಇರುವ ನಾಯಕರೆಲ್ಲರೂ ಪ್ರಾದೇಶಿಕ ರಾಜಕೀಯಕ್ಕೆ ಸೀಮಿತವಾಗಿರುವುದರಿಂದಾಗಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದು ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟುಗೂಡಿಸಿ ಸಂಭಾಳಿಸಿಕೊಂಡು ಹೋಗುವುದು ಸಾಧ್ಯವಾಗದ ಒಂದು ಪರಿಸ್ಥಿತಿ ಇದೆ. ಇಂಥ ಸ್ಥಿತಿ ಇರುವುದರಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಬಹಳಷ್ಟು ರಾಷ್ಟ್ರೀಯ ನಾಯಕರು ರೂಪುಗೊಂಡಿದ್ದರು. ಗಾಂಧಿ, ನೆಹರೂ, ಪಟೇಲ್ ಮೊದಲಾದ ನಾಯಕರು ರಾಷ್ಟ್ರದಲ್ಲಿ ಆಗಾಗ ಪ್ರವಾಸ ಮಾಡುತ್ತಾ ಜನರ ಜೊತೆ ನೇರ ಸಂಪರ್ಕ ಇರಿಸಿಕೊಂಡ ಕಾರಣ ಇಡೀ ರಾಷ್ಟ್ರದಲ್ಲಿ ಅವರಿಗೆ ವರ್ಚಸ್ಸು ಇತ್ತು. ಇಂದು ಅಂಥ ರಾಷ್ಟ್ರೀಯ ನಾಯಕರು ಇಲ್ಲದೆ ಹೋಗಿರುವುದರಿಂದಾಗಿಯೇ ಪ್ರಾದೇಶಿಕ ಪಕ್ಷಗಳು ಬೆಳೆದು ರಾಷ್ಟ್ರೀಯ ಹಿತಾಸಕ್ತಿಗಳು ಮರೆಯಾಗಿ ಪ್ರಾದೇಶಿಕ ಹಿತಾಸಕ್ತಿಗಳು ತಾಂಡವವಾಡುತ್ತಿದ್ದು ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯೇ ರೂಪುಗೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲ ವಾಪಾಸ್ ಪಡೆಯುವ ಬೆದರಿಕೆ ಹಾಕಿ ತಮ್ಮ ರಾಜ್ಯಕ್ಕೆ ಮಾತ್ರ ಅನುಕೂಲ ಮಾಡಿಕೊಂಡು ಉಳಿದ ರಾಜ್ಯಗಳನ್ನು ಕಡೆಗಣಿಸುವ ಪ್ರವೃತ್ತಿಯಿಂದಾಗಿ ಮೈತ್ರಿರಂಗದ ರಾಜಕೀಯ ದೇಶದಲ್ಲಿ ಅಸಮಾನತೆಯನ್ನು ಹುಟ್ಟು ಹಾಕಲು ಕಾರಣವಾಗಿದೆ. ಇಂಥ ಪ್ರವೃತ್ತಿ ರಾಷ್ಟ್ರ ಹಿತಕ್ಕೆ ಮಾರಕ ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಪ್ರವೃತ್ತಿಯಿಂದ ಹೊರಬರಬೇಕಾದರೆ ರಾಷ್ಟ್ರೀಯ ಪಕ್ಷಗಳನ್ನು ಜನರು ಬೆಂಬಲಿಸಬೇಕಾದ ಅಗತ್ಯ ಇದೆ.

ಅಲ್ಲದೆ ದೇಶದಲ್ಲಿ ಈಗ ಇರುವ ಎರಡು ಪ್ರಧಾನ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇನ್ನೂ ಒಂದು ರಾಷ್ಟ್ರವ್ಯಾಪಿ ಪಕ್ಷವನ್ನು ರೂಪಿಸಬೇಕಾದ ಅಗತ್ಯ ಇದೆ ಅಥವಾ ಈಗ ಇರುವ ಪ್ರಾದೇಶಿಕ ಪಕ್ಷಗಳು ಸ್ಪಷ್ಟವಾದ ಸೈದ್ದಾಂತಿಕ ಆಧಾರದಲ್ಲಿ ಒಂದು ರಾಷ್ಟ್ರೀಯ ರಂಗವನ್ನು ರಚಿಸಿಕೊಂಡು ಚುನಾವಣೆಗಳಲ್ಲಿ ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟಾಗಿ ಹೋರಾಡಿ ಒಂದು ರಾಷ್ಟ್ರೀಯ ಸರ್ಕಾರ ರೂಪಿಸುವ ಪರಿಸ್ಥಿತಿ ಬರುವಂತೆ ಮಾಡಬೇಕಾದ ಅಗತ್ಯ ಇದೆ. ಇಂಥ ರಾಷ್ಟ್ರೀಯ ರಂಗವನ್ನು ರಚಿಸುವಾಗಲೇ ಸಂಕುಚಿತ ಪ್ರಾದೇಶಿಕ ಬೇಡಿಕೆಗಳಿಗಾಗಿ ಬೆಂಬಲ ವಾಪಸ್ ಪಡೆಯಲು ಅವಕಾಶ ನೀಡದಂಥ ಒಂದು ಪ್ರಣಾಳಿಕೆಯನ್ನು ರಚಿಸಬೇಕಾಗುತ್ತದೆ ಮತ್ತು ಅದಕ್ಕೆ ಎಲ್ಲರೂ ಬದ್ಧರಾಗಿ ನಡೆದುಕೊಳ್ಳುವ ಲಿಖಿತ ದಾಖಲೆಯ ಭರವಸೆಯನ್ನು ಪಡೆದುಕೊಳ್ಳುವಂತೆ ಮಾಡಬೇಕಾದ ಅಗತ್ಯ ಇದೆ.

(ಚಿತ್ರಕೃಪೆ: ವಿಕಿಪೀಡಿಯ)

ಲೈಂಗಿಕ ಕಿರುಕುಳದ ಕರಾಳ ಮುಖ

-ಡಾ.ಎಸ್.ಬಿ.ಜೋಗುರ

ಮಹಿಳಾ ದಿನಾಚರಣೆಯ ಬಂಟಿಂಗ್ ಮತ್ತು ಬ್ಯಾನರ್‌ಗಳು ಇನ್ನೂ ಮಡಿಕೆಯಾಗಿ ಮೂಲೆ ಸೇರುವ ಮುನ್ನವೇ ದೇಶದ ಪ್ರತಿಷ್ಠಿತ ಆಂಗ್ಲ ಪತ್ರಿಕೆಯಾದ ’ಹಿಂದುಸ್ಥಾನ್ ಟೈಮ್ಸ್’ 15-50 ವರ್ಷ ವಯೋಮಿತಿಯೊಳಗಿನ ಸುಮಾರು 5041 ಮಹಿಳೆಯರನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು, ಅವರ ಮೇಲಾಗುವ ಲೈಂಗಿಕ ಕಿರುಕುಳವನ್ನು ಕುರಿತು ಸಮೀಕ್ಷೆ ಮಾಡಿ ಇಡೀ ದೇಶವೇ ಬೆಚ್ಚಿ ಬೀಳಬಹುದಾದ ಅಂಕಿ ಅಂಶಗಳನ್ನು ಮಹಿಳಾ ದಿನಾಚರಣೆಯಂದೇ ಹೊರಹಾಕಿರುವುದಿದೆ.

ದೇಶದ ಕೆಲ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚನೈ, ಹೈದರಾಬಾದ್, ಬೆಂಗಳೂರು, ಪಟ್ನಾ, ಕೋಲ್ಕತ್ತಾ, ರಾಂಚಿ, ಚಂಡೀಗಡ ಮುಂತಾದ ಕಡೆಗಳಲ್ಲಿ ಈ ವಿಷಯವಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. ಸುಮಾರು 63 ಪ್ರತಿಶತದಷ್ಟು ಮಹಿಳೆಯರು ಒಂದಿಲ್ಲಾ ಒಂದು ರೀತಿಯಲ್ಲಿ ತಾವು ಲೈಂಗಿಕ ಕಿರುಕುಳಕ್ಕೆ ಸಿಲುಕಿದ ಬಗ್ಗೆ ಆ ಸಮೀಕ್ಷೆಯಲ್ಲಿ ತಿಳಿಸಿರುವುದಿದೆ. ನಗರ ಪ್ರದೇಶಗಳ ಪ್ರತಿ 10 ಮಹಿಳೆಯರಲ್ಲಿ 9 ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿರುವ ಮಾಹಿತಿ ಲಬ್ಯವಾಗಿದೆ. ಆದರೆ ಈ ಬಗೆಯ ದೌರ್ಜನ್ಯಗಳಿಗೆ ಪ್ರತಿಯಾಗಿ ಪೋಲಿಸರಿಗೆ ದೂರು ಸಲ್ಲಿಸಿದವರು ಪ್ರತಿ 8 ಶೋಷಿತ ಮಹಿಳೆಯರಲ್ಲಿ ಒಬ್ಬಳು ಮಾತ್ರ ಎನ್ನುವುದು ಇನ್ನೊಂದು ಅಚ್ಚರಿಯ ಸಂಗತಿ. ಅದಕ್ಕಿಂತಲೂ ಅಚ್ಚರಿಯ ಸಂಗತಿ ಎಂದರೆ ಆ ಓರ್ವ ಮಹಿಳೆಗೂ ಕೂಡಾ ಸಕಾರಾತ್ಮಕವಾದ ಸಹಕಾರ ಪೋಲಿಸರಿಂದ ಸಿಗದೇ ಇರುವ ಚಿತ್ರಣ.

ಇದೆಲ್ಲಾ ಏನು.? ಹಾಗಾದರೆ ಹೆಣ್ಣನ್ನು ಪೂಜ್ಯ ಭಾವನೆಯಿಂದ ಕಾಣುವುದು ಬರೀ ಗೋಸುಂಬೆತನವೇ? ಸಾಮಾನ್ಯವಾಗಿ ಎಲ್ಲಿ ಮಹಿಳೆಯ ಶೀಲ ಚಾರಿತ್ರ್ಯದ ಬಗ್ಗೆ ಕಟ್ಟಳೆಗಳು ಅತಿಯಾಗಿವೆಯೋ ಅಂಥಾ ನೆಲೆಗಳಲ್ಲಿಯೇ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಹೆಚ್ಚು. ಜೊತೆಗೆ ಭಾರತದಂತಹ ಸಾಂಪ್ರದಾಯಿಕ ಸಮಾಜಗಳನ್ನೊಳಗೊಂಡು, ಅಮೆರಿಕಾದಂತಹ ರಾಷ್ಟ್ರಗಳಲ್ಲಿಯೂ ಅಗಮ್ಯಗಮನ ಸಂಬಂಧ [incest relations]ಗಳ ಮೂಲಕ ಲೈಂಗಿಕ ಶೋಷಣೆ ನಡೆಯುವುದು ಇದ್ದೇ ಇದೆ ಎನ್ನುವುದನ್ನು ಡಯಾನಾ ರಸಲ್ ಅವರ ಸ್ಥಿತಿ ಅಧ್ಯಯನಗಳು ತೋರಿಸಿಕೊಟ್ಟಿವೆ. ಮನುಷ್ಯ ಮಾನವಶಾಸ್ತ್ರದ ನಂಬುಗೆಯಂತೆ ಬಗೆ ಬಗೆಯ ಹೆಣ್ಣುಗಳನ್ನು, ಗಂಡುಗಳನ್ನು ಬಯಸುವ ಜೀವಿ. ಇದು ಮನುಷ್ಯನ ಬೀಜಗುಣ ಎಂದರೂ ತಪ್ಪಲ್ಲ. ಹೇಗೆ ಲೈಂಗಿಕತೆಯ ಬಗ್ಗೆ ಅತ್ಯಂತ ಬಿಗುಮಾನಗಳಿರುವಲ್ಲಿಯೇ ಅಸಹ್ಯವಾದ ಕ್ರಿಯೆಗಳು ನಡೆಯುವುದಿದೆಯೋ.

ಶೀಲ-ಅಶ್ಲೀಲಗಳ ಬಗ್ಗೆ ಕರಾರುವಕ್ಕಾಗಿ ಮಡಿವಂತಿಕೆಯನ್ನು ಪ್ರದರ್ಶಿಸುವಾತನೂ ಎಲ್ಲೋ ಒಂದು ಕಡೆ ನೀಲಿ ಚಿತ್ರವನ್ನು ನೋಡುವ ಹಂಬಲ ಹೊಂದಿರುವ ಹಾಗೆ ಬೇರೆ ಬೇರೆ ಹೆಣ್ಣು ಗಂಡುಗಳ ಭೌತಿಕ ಸಾಮೀಪ್ಯಕ್ಕೆ ಸದ್ಯದ ಮೊಬೈಲ್ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟದ್ದೂ ಇದೆ. ಬರೀ ಸಪ್ಪೆ ಮಾತು ನಾಲಿಗೆಯ ರುಚಿ ಕೆಡಿಸುವಂತೆ, ಮಸಾಲಾ ಡೈಲಾಗ್‍ಗಳ ಹಾವಳಿಯ ನಡುವೆ ಈ ಲೈಂಗಿಕ ಕಿರುಕುಳ ಇನ್ನಷ್ಟು ಹೆಚ್ಚಾಯಿತು. ಕಿವಿಗಂಟಿದ ಮೊಬೈಲ್ ಬೇಗನೇ ಕಳಚುವುದೇ ಇಲ್ಲ. ಹಾಗೆ ಸುದೀರ್ಘವಾಗಿ ಮೊಬೈಲ್ ಮಾತಿಗೆ ತೊಡಗುವವರ ಹಾವಭಾವಗಳನ್ನು ಗಮನಿಸಿದರೂ ಸಾಕು ಅಲ್ಲೊಂದು ಬಗೆಯ ಈಸ್ಟ್‌ಮನ್ ಕಲರ್ ಸೃಷ್ಟಿಯಾಗುತ್ತಿದೆ ಎಂದೆನಿಸದಿರದು. ಅದೇ ವೇಳೆಗೆ ಅನೇಕ ಟೀನೇಜ್ ಹುಡುಗಿಯರು ಜಸ್ಟ್ ಮಾತ್ ಮಾತಲ್ಲೇ ಮಿಸ್ ಆಗುತ್ತಿದ್ದಾರೆ. ಬೆಂಗಳೂರಿನ ಅಪರಾಧಿ ದಾಖಲಾತಿ ಇಲಾಖೆಯ ಪ್ರಕಾರ 2011 ರಲ್ಲಿ ಹೀಗೆ ನಾಪತ್ತೆಯಾದ ಟೀನೇಜ್ ಹುಡುಗಿಯರ ಸಂಖ್ಯೆ 1282.

ಹಿಂದೊಮ್ಮೆ ಅಸಹ್ಯ ಎನ್ನಬಹುದಾದ ವರ್ತನೆಗಳು ಇಂದು ಸಾಮಾಜಿಕ ಬದಲಾವಣೆಯ ಹೆಸರಲ್ಲಿ ಸಹ್ಯವಾಗುತ್ತಿವೆ. ಮನುಷ್ಯನ ಮನಸನ್ನು ಆರೋಗ್ಯಕರವಾಗಿ ರೂಪಿಸಬೇಕಾದ ಮಾಧ್ಯಮಗಳೇ ಇಂದು ಅವನನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಪ್ರೇಕ್ಷಕ ಬಯಸುತ್ತಾನೆ ಎಂದು ಆಫೀಮಿನಂಥಾ ವಿಷಯ ವಸ್ತುಗಳನ್ನೇ ಬಿಕರಿ ಮಾಡ ಹೊರಟಂತೆ ತಯಾರಾಗುವ ಚಲನಚಿತ್ರಗಳು ಇಂದಿನ ಸಾಮಾಜಿಕ ಬದುಕನ್ನು ಬದಲಾವಣೆಯ ಹೆಸರಲ್ಲಿ ಅಹಿತಕರವಾದ ಮಾರ್ಗದಗುಂಟ ಕರೆದೊಯ್ಯುತ್ತಿರುವುದು ಒಂದು ವಿಷಾದ. ಇದೊಂದು ಇತ್ತೀಚಿಗೆ ಬಿಡುಗಡೆಯಾಗಿ ವಾರದಲ್ಲಿ 5-6 ಕೋಟಿ ರೂಪಾಯಿ ಕೊಳ್ಳೆ ಹೊಡೆದ ಚಿತ್ರ. ಅದರಲ್ಲಿಯ ಸಹನಟಿಯೊಬ್ಬಳು ನಾಯಕನಿಗೆ ಒಂದು ವಿಚಿತ್ರ ಬಗೆಯ ಸವಾಲನ್ನು ಹಾಕುತ್ತಾಳೆ. ನೀನು ಗಂಡಸೇ ಆಗಿದ್ದರೆ ಆ ಗೂಂಡಾಗಳನ್ನು ಹೊಡೆದೋಡಿಸು ನಾನೇ ಅವಳನ್ನು [ಕಥಾನಾಯಕಿಯನ್ನು] ರೇಪ್ ಮಾಡಲು ಜಾಗ ಹುಡುಕಿ ಕೊಡುತ್ತೇನೆ ಎಂದು ಸವಾಲು ಹಾಕುತ್ತಾಳೆ. ಈ ಬಗೆಯ ಸಂಭಾಷಣೆಯನ್ನು ಬರೆದ ಸಾಹಿತಿಯ ಸಮಕಾಲೀನ ಪ್ರಜ್ಞೆಯನ್ನು ಏನನ್ನಬೇಕೋ ತಿಳಿಯಲಿಲ್ಲ. ಈ ಬಗೆಯ ಸವಾಲುಗಳು ಚಿತ್ರರಂಗದಲ್ಲಿ ನಾಯಕಿಯರು ನಾಯಕರಿಗೆ ಹಾಕುವುದು ಹೊಸತಂತೂ ಅಲ್ಲ. 70-80 ರ ದಶಕದಲ್ಲಾಗಿದ್ದರೆ ಅದು ಹೂವಿನ ಗಿಡದ ಮರೆಯಲ್ಲಿಯ ಒಂದು ನಾಚಿಕೆಯ ಅಮೂರ್ತ ಚುಂಬನದೊಂದಿಗೆ ಮುಕ್ತಾಯವಾಗುತ್ತಿತ್ತು ಆದರೆ ಕಾಲ ಬದಲಾಗಿದೆ ಎನ್ನುವುದನ್ನು ನಿರ್ದೇಶಕ ಮಹಾಶಯ ತೋರಿಸುವುದಾದರೂ ಹೇಗೆ? ಇಂಗ್ಲಿಷ್ ಸಿನೇಮಾ ಮಾದರಿಯಲ್ಲಿ ಚುಂಬನದ ದೃಷ್ಯಗಳು ಈಗಂತೂ ಮಾಮೂಲು. ಆ ಮೂಲಕ ಸಮಾಜ ತುಂಬಾ ಫಾಸ್ಟ್ ಆಗಿದೆ ಎಂದು ತೋರಿಸಿದ್ದೂ ಆಯಿತು. ಈ ಬಗೆಯ ಸಂಭಾಷಣೆಗಳು, ದೃಷ್ಯಗಳು ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ನೂಕುವಲ್ಲಿ ಅಪೂರ್ವ ಕೊಡುಗೆಯನ್ನು ಕೊಡದೇ ಇರಲಾರವು.

ಸದ್ಯದ ಸಂದರ್ಭದಲ್ಲಿ ನಾವು ಬದುಕಿರುವ ಸನ್ನಿವೇಶ ತುಂಬಾ ಕಲುಷಿತವಾಗಿದೆ. ಈ ಕಲುಷಿತತೆಗೆ ಕಾರಣ ನೈಸರ್ಗಿಕ ಸಂಗತಿಗಳಲ್ಲ. ಬದಲಾಗಿ ಮಾನವ ನಿರ್ಮಿತ ಭೌತಿಕ ಜಗತ್ತು. ಸಾಂಸ್ಕೃತಿಕ ಮೌಲ್ಯಗಳ ಗಂಧ-ಗಾಳಿಯಿಲ್ಲದ ಈ ಭೌತಿಕ ಜಗತ್ತು ಥೇಟ್ ಸಿನಿಮೀಯ ಮಾದರಿಯಲ್ಲಿ ಇರುವುದರಿಂದಾಗಿಯೇ ಹೀಗೆ ಹೆಣ್ಣನ್ನು ಲೈಂಗಿಕವಾಗಿ ಶೋಷಿಸುವ ಚಟುವಟಿಕೆಗಳು ತೀವ್ರಗೊಳ್ಳುತ್ತಿವೆ. ಮನುಷ್ಯ ಸಂಬಂಧಗಳು ಅತ್ಯಂತ ಯಾಂತ್ರಿಕವಾಗಿ ಸ್ಥಾಪನೆಗೊಂಡು ಅಷ್ಟೇ ಯಾಂತ್ರಿಕವಾಗಿ ಮುಕ್ತಾಯಗೊಳ್ಳುತ್ತಿವೆ. ಹಿಂದೊಮ್ಮೆ ಯಾವುದೋ ಒಬ್ಬ ವ್ಯಕ್ತಿಯನ್ನು ಭೇಟಿಯಾಗಬೇಕಿದ್ದರೆ, ಅವನೊಂದಿಗೆ ಮಾತನಾಡಬೇಕಿದ್ದರೆ ಅದೆಷ್ಟೋ ತಿಂಗಳು ಕಾಯಬೇಕಿತ್ತು. ಹಾಗೆ ಕಾಯುವಲ್ಲಿಯೂ ಒಂದು ಹಿತವಿತ್ತು. ಈಗ ಹಾಗಲ್ಲ ನಿಮ್ಮನ್ನು ಕಾಡುವ ವ್ಯಕ್ತಿಯೊಂದಿಗೆ ತಕ್ಷಣ ನಿಮ್ಮ ಸಂವಹನ ಸಾಧ್ಯವಾಗುವ ಎಲ್ಲ ಅವಕಾಶಗಳ ನಡುವೆ ಮಾತುಗಳು ತೂಕ ಕಳೆದುಕೊಳ್ಳುತ್ತಿವೆ. ಔಪಚಾರಿಕ ಮಾತು ಮುಗಿಯುತ್ತಿದ್ದಂತೆ ಮುಂದೇನು.? ಎನ್ನುವ ಯೋಚನೆಯಾಗಲೀ. ಚೌಕಟ್ಟಾಗಲೀ ಅಲ್ಲಿಲ್ಲ ಅಲ್ಲಿದ್ದದ್ದು ಬರೀ ಮಾತು. ಮಾತು. ಮಾತು…. ಅದು ಎಲ್ಲಿಂದಲೋ ಶುರುವಾಗಿ ಎಲ್ಲೋ ಹೋಗಿ ಮುಟ್ಟುತ್ತದೆ. ಯಾವುದೇ ಬಗೆಯ ಸಂಬಂಧಗಳಿರಲಿ, ಅಂತರಕ್ರಿಯೆಯಿಲ್ಲದೇ ಸಾಧ್ಯವಿಲ್ಲ. ಹಾಗಾಗಿ ಬರೀ ಹೆಣ್ಣನ್ನಾಗಲೀ ಬರೀ ಗಂಡನ್ನಾಗಲೀ ಈ ಬಗೆಯ ಕೃತ್ಯಗಳಿಗೆ ಆರೋಪಿಸುವುದು ಸರಿಯಲ್ಲ. ಅಲ್ಲಿ ಒಬ್ಬರನ್ನೊಬ್ಬರು ದೂರುತ್ತಲೇ ಇಬ್ಬರೂ ಹೊಣೆಗಾರರಾಗಿರುವುದಂತೂ ಹೌದು.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -13)


– ಡಾ.ಎನ್.ಜಗದೀಶ್ ಕೊಪ್ಪ


 

ಅಭಿರುಚಿ ಮತ್ತು ಸಾಹಸಕ್ಕೆ ಇನ್ನೊಂದು ಹೆಸರೇ ಬ್ರಿಟಿಷರು. ಇದು ಅತಿಶಯೋಕ್ತಿಯ ಮಾತೆನಲ್ಲ. ಇಡೀ ಭಾರತದ ಗಿರಿಧಾಮಗಳ, ಚಹಾ ಮತ್ತು ಕಾಫಿ ತೋಟಗಳ ಇತಿಹಾಸ ಗಮನಿಸಿದರೇ, ಇವುಗಳ ಹಿಂದೆ ಬ್ರಿಟಿಷರು ತಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ಹೋಗಿರುವುದನ್ನು ನಾವು ಗಮನಿಸಬಹುದು. ಇಂದು ಭಾರತದಲ್ಲಿ ಪ್ರಸಿದ್ಧಿಯಾಗಿರುವ, ಸಿಮ್ಲಾ, ಮಸ್ಸೂರಿ, ಡಾರ್ಜಲಿಂಗ್, ನೈನಿತಾಲ್, ಕುಲು-ಮನಾಲಿ, ನೀಲಗಿರಿ, ಕೊಡೈಕೆನಾಲ್, ಸೇಲಂ ಬಳಿಯ ಏರ್ಕಾಡ್ ಇವೆಲ್ಲಾ ಗಿರಿಧಾಮಗಳು ಬ್ರಿಟಿಷರ ಅನ್ವೇಷಣೆ ಮತ್ತು ಕೊಡುಗೆಗಳಾಗಿವೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿ ತನ್ನ ನಿವೃತ್ತಿಯ ದಿನಗಳನ್ನು ಅರಣ್ಯದ ನಡುವೆ ಇಲ್ಲವೇ, ಗಿರಿಧಾಮಗಳ ನಡುವೆ ಬೃಹತ್ ಕಾಫಿ ಇಲ್ಲವೆ ಚಹಾ ತೋಟಗಳನ್ನು ಮಾಡಿಕೊಂಡು ಬದುಕಿದ್ದನ್ನು ನಾವು ಇತಿಹಾಸದಲ್ಲಿ ಕಂಡಿದ್ದೇವೆ. ಇಂತಹ ಸಾಹಸ ಪ್ರವೃತ್ತಿ ಅವರಲ್ಲಿ ರಕ್ತಗತವಾಗಿ ಬಂದಿದೆ. ಇಂತಹದ್ದೇ ಗುಣವನ್ನು ನಾವು ಜಿಮ್ ಕಾರ್ಬೆಟ್‍ನಲ್ಲಿ ಕಾಣಬಹುದು. ಜಿಮ್ ಕಾರ್ಬೆಟ್ ಕೀನ್ಯಾ ಮತ್ತು ತಾಂಜೇನಿಯಾದಲ್ಲಿ ಭೂಮಿಯ ಮೇಲೆ ಬಂಡವಾಳ ತೊಡಗಿಸಿದ ಮೂಲ ಉದ್ದೇಶ ತನ್ನ ಸಂಸ್ಥೆಯಾದ ಮ್ಯಾಥ್ಯು ಅಂಡ್ ಕೊ ಹಾಗೂ ಕುಟುಂಬದ ಹಿತದೃಷ್ಟಿ ಮಾತ್ರ ಮುಖ್ಯವಾಗಿತ್ತು. ತನ್ನ ಭವಿಷ್ಯದ ಹಿತಾಸಕ್ತಿಯ ನಡುವೆಯೂ ತನ್ನ ಸುತ್ತ ಮುತ್ತ ವಾಸಿಸುತ್ತಿದ್ದ ಬಡ ಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದ, ಭಾರತದ  ಏಕೈಕ ಹೃದಯವಂತ ಬ್ರಿಟಿಷ್ (ಐರೀಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ. ಇದು ಅವನ ಮೃದು ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಆ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಉನ್ನತ ಹುದ್ದೆಯಲ್ಲಿ ಅಥವಾ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದ ಅಧಿಕಾರಿಗಳಿಗೆ ಸರ್ಕಾರ ಅವರು ಕೇಳಿದ ಜಾಗದಲ್ಲಿ ಎಕರೆಗೆ ತಲಾ ಎರಡು ರೂಪಾಯಿನಿಂದ ಹಿಡಿದು ಇಪ್ಪತ್ತು ರೂಪಾಯಿ ಬೆಲೆಯಲ್ಲಿ ಭೂಮಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ಅವಕಾಶವನ್ನು ಬಳಸಿಕೊಂಡ ಕಾರ್ಬೆಟ್, ಬೇಸಿಗೆಯ ದಿನಗಳಲ್ಲಿ ತನ್ನ ಕುಟುಂಬ ಕಾಲ ಕಳೆಯುತ್ತಿದ್ದ ಕಲದೊಂಗಿ ಸಮೀಪದ ಚೋಟಾಹಲ್ದಾನಿ ಎಂಬ ಇಡೀ ಹಳ್ಳಿಯನ್ನು ಖರೀದಿಸಿದ.

ಅರಣ್ಯದಿಂದ ಆವೃತ್ತವಾಗಿ ಸುಮಾರು ಎರಡು ಸಾವಿರ ಎಕರೆಗೂ ಅಧಿಕ ವಿಸ್ತೀರ್ಣವಿದ್ದ ಈ ಹಳ್ಳಿಯಲ್ಲಿ, ಜನಸಂಖ್ಯೆ ತೀರಾ ಕಡಿಮೆಯಿತ್ತು. ವ್ಯವಸಾಯವನ್ನು ನಂಬಿಕೊಂಡಿದ್ದ ಕೆಲವು ಕುಟುಂಬಗಳು ಮಾತ್ರ ವಾಸವಾಗಿದ್ದವು. ಬಹುತೇಕ ಮಂದಿ ಉದ್ಯೋಗ ಹರಸಿ ಬೇರೆಡೆ ವಲಸೆ ಹೋಗಿದ್ದರು. ಇಡೀ ಪ್ರದೇಶ ನೀರಿನಿಂದ ಕೂಡಿದ್ದ ಜೌಗು ಪ್ರದೇಶವಾಗಿತ್ತು ಅಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಅಲ್ಲಿ ವ್ಯವಸಾಯ ಮಾಡುವುದು ಕೂಡ ಕಷ್ಟಕರವಾಗಿತ್ತು.

ಕಾರ್ಬೆಟ್ ಚೋಟಾಹಲ್ದಾನಿ ಹಳ್ಳಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ, ಬಸಿ ಕಾಲುವೆಗಳನ್ನು ನಿರ್ಮಿಸಿ ನೀರು ಹರಿದು ಹೋಗುವಂತೆ ಮಾಡಿದ. ಮೊಕಮೆಘಾಟ್‍ನಲ್ಲಿ ಕೆಲಸ ಮಾಡಿದ್ದ ಕೆಲವು ಕೂಲಿ ಕೆಲಸಗಾರರನ್ನು ಕರೆಸಿ ಅವರಿಂದ ಗಿಡಗೆಂಟೆಗಳನ್ನು ತೆರವುಗೊಳಿಸಿ, ವ್ಯವಸಾಯಕ್ಕೆ ಅನೂಕೂಲವಾಗುವಂತೆ ಭೂಮಿಯನ್ನು ಸಿದ್ದಪಡಿಸಿ, ಅವರಿಗೆಲ್ಲಾ ತಲಾ ಎರಡರಿಂದ ಐದು ಎಕರೆ ಭೂಮಿಯನ್ನು ಹಂಚಿದ. ಈ ಮೊದಲು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದವರಿಗೆ ಮತ್ತಷ್ಟು ಭೂಮಿ ನೀಡುವುದರ ಜೊತೆಗೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರಿಗೆ ವ್ಯವಸ್ಥಿತ ರೀತಿಯಲ್ಲಿ ಮನೆ ನಿರ್ಮಿಸಿ ಕೊಟ್ಟ. ಇಡೀ ಹಳ್ಳಿಗೆ ರಸ್ತೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಕೃಷಿಗೆ ಅನೂಕೂಲವಾಗುವಂತೆ ರೈತರಿಗೆ ಸಿಮೆಂಟ್ ಕಾಲುವೆಗಳನ್ನು ನಿರ್ಮಿಸಿದ.

ಜಿಮ್ ಕಾರ್ಬೆಟ್‍ನ ಈ ಸೇವೆ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹರಡುತ್ತಿದ್ದಂತೆ ಊರು ಬಿಟ್ಟು ಹೋಗಿದ್ದ ಎಲ್ಲರೂ ಮತ್ತೆ ಹಳ್ಳಿಗೆ ಬಂದು ವಾಸಿಸತೊಡಗಿದರು. ತನ್ನ ಬಾಲ್ಯದಲ್ಲಿ, ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಅರಣ್ಯದಲ್ಲಿ ಅಲೆಯಲು ಹೋಗುತ್ತಿದ್ದ ಬಾಲಕ ಕಾರ್ಬೆಟ್‍ಗೆ ಈ ಹಳ್ಳಿಯ ಜನ ತೋರಿದ್ದ ಪ್ರೀತಿಗೆ ಪ್ರತಿಫಲವಾಗಿ ಅವನು ಚೋಟಾಹಲ್ದಾನಿ ಗ್ರಾಮವನ್ನೇ ಅವರಿಗೆ ಸಮರ್ಪಿಸಿದ. ಅಲ್ಲಿಯವರೆಗೆ ಸ್ಥಳೀಯ ಜನರ ಬಾಯಲ್ಲಿ ಕೇವಲ ಕಾರ್ಪೆಟ್ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಕಾರ್ಬೆಟ್, ನಂತರ ಜಮಿನ್ದಾರ್ ಕಾರ್ಪೆಟ್ ಸಾಹೇಬನಾದ.

ಈ ಹಳ್ಳಿಯಲ್ಲಿ ಜನತೆಗೆ ಬೇಸಾಯ ಮಾಡಲು ಕಾಡುಹಂದಿಗಳ ಕಾಟ ಅತಿ ದೊಡ್ಡ ತೊಡಕಾಗಿತ್ತು. ಇದನ್ನು ಶಾಶ್ವತವಾಗಿ ತಡೆಗಟ್ಟಲು ನಿರ್ಧರಿಸಿದ ಕಾರ್ಬೆಟ್ ಎಲ್ಲರೂ ಅಚ್ಚರಿ ಪಡುವಂತೆ ಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪ ಮತ್ತು ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸಿ, (ಒಂದೂವರೆ ಚದುರ ಕಿ.ಮೀ. ಸುತ್ತಳತೆ) ಹಳ್ಳಿಯ ನಾಲ್ಕು ದಿಕ್ಕಿನಲ್ಲಿ ಬಾಗಿಲುಗಳನ್ನು ನಿರ್ಮಿಸಿದ. ಹಳ್ಳಿಯ ಜನತೆ ಇವುಗಳನ್ನು ತಮ್ಮ ಜಾನುವಾರುಗಳ ಜೊತೆ ಅರಣ್ಯಕ್ಕೆ ಹೋಗುವುದು, ಉರುವಲು ಕಟ್ಟಿಗೆ ತರುವುದು ಮುಂತಾದ ಕ್ರಿಯೆಗಳಿಗೆ ಬಳಸತೊಡಗಿದರು.

ಕೇವಲ 180 ಮಂದಿ ಜನಸಂಖ್ಯೆ ಇದ್ದ ಚೋಟಾಹಲ್ದಾನಿ ಹಳ್ಳಿ, ಕಾರ್ಬೆಟ್ ಅಭಿವೃದ್ಧಿ ಪಡಿಸಿದ ನಂತರ ಎರಡು ಸಾವಿರ ಜನಸಂಖೆಯನ್ನು ಒಳಗೊಂಡಿತು. ಇವರಲ್ಲಿ ಅರ್ಧದಷ್ಟು ಮಂದಿ ಮುಸ್ಲಿಮರು ಇದ್ದುದು ವಿಶೇಷ. ಈ ಹಳ್ಳಿಗರ ಜೊತೆ ಒಡನಾಟ ಇರಿಸಿಕೊಳ್ಳುವ ಸಲುವಾಗಿ ಕಾರ್ಬೆಟ್ ಅಲ್ಲಿಯೇ ತನಗಾಗಿ ಅರ್ಧ ಎಕರೆ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡ. ಮನೆಯ ಸುತ್ತ ಹಲವು ಬಗೆಯ ಹಣ್ಣಿನ ಗಿಡಗಳು ನೆಡುವುದರ ಮೂಲಕ ಹಳ್ಳಿಗರಿಗೂ ಹಣ್ಣುಗಳ ಬಗ್ಗೆ ಅಭಿರುಚಿ ಬೆಳೆಯಲು ಕಾರಣ ಕರ್ತನಾದ (ಭಾರತ ಸರ್ಕಾರದಿಂದ ಈಗ ಮ್ಯೂಸಿಯಂ ಆಗಿರುವ ಕಾರ್ಬೆಟ್ ಮನೆಯ ಆವರಣದಲ್ಲಿ ಅವನು ನೆಟ್ಟಿದ್ದ ಮಾವಿನ ಗಿಡ ಈಗ ಹೆಮ್ಮರವಾಗಿ ಬೆಳೆದು ಅವನ ನೆನಪನ್ನು ಜೀವಂತವಾಗಿರಿಸಿದೆ.)

ಭಾರತದ ಬಡಜನತೆ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದುದನ್ನು ಕಣ್ಣಾರೆ ಕಂಡಿದ್ದ ಕಾರ್ಬೆಟ್ ತನ್ನ ಹಳ್ಳಿಯ ಜನಕ್ಕೆ ವಿವಿಧ ಬಗೆಯ ತರಕಾರಿ, ಹಣ್ಣುಗಳ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ. ಇದಕ್ಕಾಗಿ ಅವನು ಕೀನ್ಯಾ ಮತ್ತು ತಾಂಜೇನಿಯಾ ದೇಶಗಳೀಂದ ಹಲವು ಬಗೆಯ ಮುಸುಕಿನ ಜೋಳ, ಬಾಳೆಯ ಗಿಡ ಮತ್ತು ಗೆಣಸುಗಳ ತಳಿಯನ್ನು ತಂದು ಪರಿಚಯಿಸಿದ. ದ್ರಾಕ್ಷಿ ಮತ್ತು ಕಾಫಿ ಬೆಳಯ ಪ್ರಯೋಗಗಳನ್ನು ಸಹ ಮಾಡಿದ. ಆದರೆ ಅಲ್ಲಿನ ವಾತಾವರಣಕ್ಕೆ ಕಾಫಿ ಮತ್ತು ದ್ರಾಕ್ಷಿ ಹೊಂದಿಕೊಳ್ಳಲಾರದೆ ವಿಫಲವಾದವು.

ಕಾರ್ಬೆಟ್ ತನ್ನ ಭೂಮಿಯನ್ನು ವ್ಯವಸಾಯಕ್ಕಾಗಿ ಉಚಿತವಾಗಿ ಹಂಚುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ನೈನಿತಾಲ್ ಪಟ್ಟಣದಲ್ಲಿ ಮಾರುಕಟ್ಟೆ ಸೃಷ್ಟಿಸಿದ. ಇದರಿಂದಾಗಿ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತರಕಾರಿ, ಆಹಾರದ ಬೆಳೆಗಳು ಸಿಗುವಂತಾಯಿತು. ಮಧ್ಯವರ್ತಿಗಳ ಕಾಟವಿಲ್ಲದೆ, ತಾವು ಬೆಳೆದ ಬೆಳೆಗಳಿಗೆ ರೈತರು ಯೋಗ್ಯ ಬೆಲೆ ಪಡೆಯುವಂತಾಯಿತು.

ಜಿಮ್ ಕಾರ್ಬೆಟ್ ಚೋಟಾಹಲ್ದಾನಿಯ ಮನೆಯಲ್ಲಿ ಇದ್ದಾಗಲೆಲ್ಲಾ ಮನೆಯ ವರಾಂಡದಲ್ಲಿ ಕುಳಿತು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ವ್ಯಕ್ತಿ ವ್ಯಕ್ತಿಗಳ ನಡುವೆ, ಅಥವಾ ಕುಟುಂಬಗಳ ವೈಮನಸ್ಸು ಅಥವಾ ಜಗಳ ಕಂಡು ಬಂದರೆ, ತಾನೆ ಮುಂದಾಗಿ ಬಗೆಹರಿಸುತ್ತಿದ್ದ. ಕಾರ್ಬೆಟ್ ಮನುಷ್ಯರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಂಗಡಿಸಿ ನೋಡಬಾರದು ಎಂದು ಯಾವಾಗಲೂ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುತ್ತಿದ್ದ. ಇದಕ್ಕೆ ಅವನ ಬದುಕು, ನಡವಳಿಕೆ ಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಡೇ ಅಲ್ಲದೆ, ಕಾರ್ಬೆಟ್‍ನ ಮಾತುಗಳನ್ನು ದೇವರ ಅಪ್ಪಣೆ ಎಂಬಂತೆ ಪಾಲಿಸುತ್ತಿದ್ದರು.

ಜಿಮ್ ಕಾರ್ಬೆಟ್ ಪ್ರತಿ ವರ್ಷ ತನ್ನ ಸಹೋದರಿ ಮ್ಯಾಗಿ ಜೊತೆಗೂಡಿ ಮನೆಯ ಆವರಣದಲ್ಲಿ ಗ್ರಾಮಸ್ಥರ ಜೊತೆ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ. ಅದೇ ರೀತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ನೈನಿತಾಲ್ ಪಟ್ಟಣದಿಂದ ಸಿಹಿ ತಿಂಡಿಯ ಪೊಟ್ಟಣಗಳನ್ನು ತಂದು ಪ್ರತಿ ಮನೆಗೂ ಹಂಚುವ ಪದ್ಧತಿಯನ್ನು ಇಟ್ಟುಕೊಂಡಿದ್ದ. ಮುಸ್ಲಿಮರ ರಂಜಾನ್ ಹಬ್ಬಕ್ಕೆ ಪ್ರತಿ ಮನೆಗೆ ಎರಡು ಕೆ.ಜಿ. ಕುರಿ ಇಲ್ಲವೆ ಮೇಕೆ ಮಾಂಸವನ್ನು ಉಚಿತವಾಗಿ ವಿತರಿಸುತ್ತಿದ್ದ. ಡಿಸೆಂಬರ್ ತಿಂಗಳಿನಲ್ಲಿ ಬರುತ್ತಿದ್ದ ಕ್ರಿಸ್‍ಮಸ್ ಹಬ್ಬಕ್ಕೆ ಅಂದಿನ ಭಾರತದ ವೈಸ್‍ರಾಯ್‍ಗಳು, ಉನ್ನತ ಮಟ್ಟದ ಅಧಿಕಾರಿಗಳು ಕಾರ್ಬೆಟ್‍ನ ವಿಶೇಷ ಅತಿಥಿಗಳಾಗಿ ಚೋಟಾಹಲ್ದಾನಿ ಹಳ್ಳಿಗೆ ಆಗಮಿಸುತ್ತಿದ್ದರು. ಇಡಿ ಹಳ್ಳಿಯ ಗ್ರಾಮಸ್ಥರನ್ನು ಕರೆಸಿ ಅವರ ಭಾಷೆ, ಸಂಸ್ಕೃತಿಯನ್ನು ಬ್ರಿಟಿಷ್ ಅಧಿಕಾರಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದ. ಜೊತೆಗೆ ಅವರ ಜೊತೆಗೆ ಚಹಾ ಕೂಟವನ್ನು ಏರ್ಪಡಿಸುತ್ತಿದ್ದ. ಕ್ರಿಸ್‍ಮಸ್ ಆಚರಣೆಯ ಸಂದರ್ಭದಲ್ಲಿ ಒಂದು ವಾರ ಅವನ ಮನೆ ಹಳ್ಳಿಯ ಜನರಿಂದ, ಅತಿಥಿಗಳಿಂದ ತುಂಬಿರುತ್ತಿತ್ತು. ಇವತ್ತಿಗೂ ಆ ಹಳ್ಳಿಯ ಹಲವಾರು ಮನೆಗಳಲ್ಲಿ ಕ್ರಿಸ್‍ಮಸ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಒಟ್ಟಾಗಿ ತೆಗೆಸಿಕೊಂಡ ಕಪ್ಪು ಬಿಳುಪಿನ ಚಿತ್ರಗಳಿವೆ.

ನಾನು ಕಾರ್ಬೆಟ್ ಮನೆಯಲ್ಲಿ ಕುಳಿತು ಅಲ್ಲಿನ ಹಿರಿಯ ಜೀವಗಳ ಜೊತೆ ಮಾತನಾಡುತ್ತಾ ಮಾಹಿತಿ ಕಲೆಹಾಕುತ್ತಾ ಇರುವ ವೇಳೆಯಲ್ಲಿ  ನನ್ನ ಮಗಳ ವಯಸ್ಸಿನ ಒಬ್ಬ ಮುಸ್ಲಿಂ ಯುವತಿ ತನ್ನ ಮನೆಗೆ ಬರುವಂತೆ ನನ್ನನ್ನು ಆಹ್ವಾನಿಸಿದಳು. ಗೆಳೆಯ ಬಸು ಯಂಕಚಿ ಜೊತೆ ಆಕೆಯ ಮನೆಗೆ ಹೋದಾಗ ಆ ಯುವತಿ ತನ್ನ ಕುಟುಂಬದ ಸದಸ್ಯರನ್ನು ಪರಿಚಯಿಸಿ, ತನ್ನ ತಾತನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಮಾಹಿತಿ ಒದಗಿಸಿದಳು. ಬಹದ್ದೂರ್ ಖಾನ್ ಎಂಬ ಹೆಸರಿನ ಅವಳ ತಾತ 30 ವರ್ಷಗಳ ಕಾಲ ಕಾರ್ಬೆಟ್‍ಗೆ ಆ ಹಳ್ಳಿಯಲ್ಲಿ ನೆಚ್ಚಿನ ಭಂಟನಾಗಿದ್ದ. ಕಾರ್ಬೆಟ್ ಅರಣ್ಯಕ್ಕೆ ತೆರಳುತಿದ್ದಾಗಲೆಲ್ಲಾ ಅವನ ರಕ್ಷಣೆಗಾಗಿ ತೆರಳುತ್ತಿದ್ದ. ವೈಸ್‍ರಾಯ್ ಮತ್ತು ಕಾರ್ಬೆಟ್ ಜೊತೆ ತೆಗೆಸಿಕೊಂಡಿರುವ ಅನೇಕ ಪೋಟೊಗಳನ್ನು ಆಕೆಯ ಕುಟುಂಬ ಇಂದಿಗೂ ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡು ಬಂದಿದೆ.

ಈಗ ಚೋಟಾಹಲ್ದಾನಿ ಹಳ್ಳಿಯಲ್ಲಿ ಸ್ಥಳೀಯ ಯುವಕರು ಒಗ್ಗೂಡಿ ಎಕೋ ಟೂರಿಸಂ ಹೆಸರಿನಲ್ಲಿ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಬೆಟ್ ಹೆಸರಿನಲ್ಲಿ ರೆಸಾರ್ಟ್ ಸ್ಥಾಪಿಸಿದ್ದಾರೆ. ದೇಶಿ ಶೈಲಿಯ ಆಹಾರ, ವಸತಿ ವ್ಯವಸ್ಥೆ, ಕುದುರೆ ಸವಾರಿ, ಅರಣ್ಯದ ಅಂಚಿನಲ್ಲಿ ತಿರುಗಾಟ ಎಲ್ಲ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಿಕೊಡಲಾಗಿದೆ.

(ಮುಂದುವರಿಯುವುದು)

ಪಗೋ ಎಂಬ ನಿಷ್ಠ ಪತ್ರಕರ್ತರೂ, ಪ್ರಾಯೋಜಕತ್ವದ ಪ್ರಶಸ್ತಿಯೂ

-ನವೀನ್ ಸೂರಿಂಜೆ

ಕರಾವಳಿಯ ಹೆಮ್ಮೆಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರವರ ಹೆಸರಲ್ಲಿ 2004 ರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ”ಪ ಗೋ” ಪ್ರಶಸ್ತಿ ನೀಡುತ್ತಿದೆ. ಗ್ರಾಮೀಣ ವರದಿಗಾರಿಕೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದು ಹೆಮ್ಮೆಯ ವಿಷಯವಾದರೂ ಪ್ರಶಸ್ತಿ ನೀಡಿಕೆಯಲ್ಲಿ “ಪ ಗೋ” ಅವರನ್ನು ಅವಮಾನಿಸಲಾಗುತ್ತಿದೆ.

ಪತ್ರಿಕಾಗೋಷ್ಠಿ ನಡೆಸುವೆವರು ನೀಡುವ ಕನಿಷ್ಠ ಚಹಾವನ್ನೂ ಕುಡಿಯದ ಪದ್ಯಾಣ ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಯ ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರಿಗೆ ದುಂಬಾಲು ಬಿದ್ದು ಪಡೆದುಕೊಳ್ಳಲಾಗುತ್ತಿದೆ. ಪತ್ರಕರ್ತರು ಗಿಫ್ಟ್ ತೆಗೆದುಕೊಳ್ಳುವುದನ್ನು ಕಟುವಾಗಿ ವಿರೋಧಿಸುತ್ತಿದ್ದ ಪತ್ರಕರ್ತ ಪ. ಗೋಪಾಲಕೃಷ್ಣರ ಹೆಸರಲ್ಲಿ ನೀಡುವ ಪ್ರಶಸ್ತಿಗೆ ಪ್ರಾಯೋಜಕರಿದ್ದಾರೆ ಎಂದರೆ ಪತ್ರಕರ್ತ “ಪ ಗೋ” ಅವರಿಗೆ ಮಾಡುವ ಅವಮಾನವಲ್ಲವೆ?

ಪದ್ಯಾಣ ಗೋಪಾಲಕೃಷ್ಣರವರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಗಡಿ ಭಾಗವಾಗಿರುವ ಅಡ್ಯನಡ್ಕದಲ್ಲಿ 1928ರಲ್ಲಿ ಜನಿಸಿದರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ವಿಶ್ವಕರ್ನಾಟಕ ಎಂಬ ಪತ್ರಿಕೆಯ ಮೂಲಕ 1956ರಲ್ಲಿ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸಿದರು. ತಾನು ಪತ್ರಿಕಾ ಕ್ಷೇತ್ರ ಪ್ರವೇಶಿಸಿದಂದಿನಿಂದಲೂ ಪ ಗೋಪಾಲಕೃಷ್ಣರು ಯಾವ ರೀತಿಯಲ್ಲೂ ತಾವು ನಂಬಿದ ಸಿದ್ದಾಂತಗಳನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಟ್ಟವರಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಪತ್ರಿಕಾ ಸ್ನೇಹಿತರ ಒಂದು ದೊಡ್ಡ ಬಳಗವನ್ನೇ ಅವರು ಹೊಂದಿದ್ದರಂತೆ. ವಿಶ್ವ ಕರ್ನಾಟಕ ದಿನ ಪತ್ರಿಕೆಯ ನಂತರ ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ “ಪ ಗೋ” ರವರು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ನಂತರ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ಶಕ್ತಿ ಎಂಬ ಪತ್ರಿಕೆಯಲ್ಲೂ ಉಪಸಂಪಾದಕ ಮತ್ತು ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

1959 ಸುಮಾರಿಗೆ ಬೆಂಗಳೂರು ಬಿಟ್ಟು ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಪ ಗೋಪಾಲಕೃಷ್ಣರು ನವ ಭಾರತ ಎಂಬ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ನಂತರ ಕನ್ನಡವಾಣಿ ಎಂಬ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಎಲ್ಲರಿಗೂ ಗೊತ್ತಿರುವಂತೆ ಅಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಇಂದಿನ ಪತ್ರಿಕೋಧ್ಯಮ ಕ್ಷೇತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಲ್ಯಾಪ್‌ಟಾಪ್, ಫ್ಲ್ಯಾಟುಗಳನ್ನೇ ಪತ್ರಕರ್ತರಿಗೆ ಗಿಫ್ಟ್ ಆಗಿ ನೀಡುತ್ತಿದ್ದರೆ, ಹಿಂದೆಲ್ಲಾ ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡಲಾಗುತ್ತಿತ್ತು. ಪೆನ್ನು ಮತ್ತು ಪೇಪರ್ ಪ್ಯಾಡನ್ನು ಗಿಫ್ಟ್ ಆಗಿ ನೀಡುತ್ತಿದ್ದ ಪತ್ರಿಕಾಗೋಷ್ಠಿ ಎಂದರೆ ಅದೊಂದು ಐಶಾರಾಮಿ ಪತ್ರಿಕಾಗೋಷ್ಠಿ ಎಂದೇ ಅಂದಿನ ಕಾಲದಲ್ಲಿ ಬಿಂಬಿತವಾಗುತ್ತಿತ್ತು.

ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ನೀಡುವ ಪೆನ್ನು ಪೇಪರಿನ ಗಿಫ್ಟು ಕೂಡಾ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಪ್ರೆಸ್ ಮೀಟ್ ಪ್ರಾಯೋಜಕರು ನೀಡುವ ಚಹಾ ತಿಂಡಿಯನ್ನೂ ಮುಟ್ಟುತ್ತಿರಲಿಲ್ಲವಂತೆ. ಪ. ಗೋಪಾಲಕೃಷ್ಣರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಾಲಿನಲ್ಲಿ ಕುಳಿತಿದ್ದಾರೆ ಎಂದರೆ ರಾಜಕಾರಣಿಗಳು ತಂದಿದ್ದ ಗಿಫ್ಟನ್ನು ಮರಳಿ ಕೊಂಡೊಯ್ದ ದಿನಗಳೂ ಇದೆಯೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಅಂತಹ “ಪ ಗೋ” ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2004 ರಿಂದ ಪ ಗೋ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಪ್ರಾಯೋಜಕರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು. ಪ್ರೆಸ್ ಮೀಟ್ ಪ್ರಾಯೋಜಕರಿಂದ ಕನಿಷ್ಠ ಚಹಾವನ್ನು ಪಡೆಯದ ಪ ಗೋಪಾಲ ಕೃಷ್ಣರ ಹೆಸರಲ್ಲಿ ನೀಡುವ “ಪ ಗೋ” ಪ್ರಶಸ್ತಿಗೆ ಖಾಸಗಿ ಪ್ರಾಯೋಜಕತ್ವ ಪಡೆದಿರುವುದು ವಿಪರ್ಯಾಸ.

ಪ.ಗೋ ಪ್ರಶಸ್ತಿಯನ್ನು ನೀಡಲು ಪತ್ರಕರ್ತರ ಸಂಘ 2004 ರಿಂದ ಆರಂಭ ಮಾಡಿತ್ತು. ಆಗ ಪ್ರಶಸ್ತಿ ಪ್ರಮಾಣ ಪತ್ರದ ಜೊತೆ 2,500 ರೂಪಾಯಿ ಪ್ರಶಸ್ತಿ ಮೊತ್ತವನ್ನು ನೀಡಲಾಗುತ್ತಿತ್ತು. ಪ್ರಾರಂಭದಿಂದಲೂ ಪ್ರಶಸ್ತಿ ಮೊತ್ತದ ಪ್ರಾಯೋಜಕರು ವೀರೇಂದ್ರ ಹೆಗ್ಗಡೆಯವರೇ ಆಗಿದ್ದರು. 2009 ರಿಂದ ಪ್ರಶಸ್ತಿ ಮೊತ್ತ 5000 ರೂಪಾಯಿಗೆ ಏರಿಕೆಯಾಗಿದೆ. ವಿಪರ್ಯಾಸ ಎಂದರೆ 2008 ಆಗಸ್ಟ್ 16 ರಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಮೊತ್ತವನ್ನು ಏರಿಕೆ ಮಾಡುವಂತೆ ಬಿನ್ನವಿಸಿದ್ದು ! ಪತ್ರಕರ್ತರ ಮನವಿಯನ್ನು ಸ್ವೀಕರಿಸಿದ ವೀರೇಂದ್ರ ಹೆಗ್ಗಡೆಯವರು ಅದೇ ವರ್ಷದಿಂದಲೇ ಪ್ರಶಸ್ತಿ ಮೊತ್ತವನ್ನು ಐದು ಸಾವಿರಕ್ಕೆ ಏರಿಸೋ ಭರವಸೆ ನೀಡಿದ್ದರು. ಅದನ್ನು ಅಂದಿನ ಪದಾಧಿಕಾರಿಗಳ ಸಮಿತಿ ಫೋಟೋ ಸಮೇತ ಪತ್ರಿಕಾ ಪ್ರಕಟಣೆ ನೀಡಿ, ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿತ್ತು.

ಅಕ್ಟೋಬರ್ 06 1976 ರಂದು ಸ್ಥಾಪನೆಗೊಂಡ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಪ ಗೋ ರವರ ಹೆಸರಲ್ಲಿ ನೀಡಲಾಗುತ್ತಿರುವ “ಗ್ರಾಮೀಣ ವರದಿಗಾರಿಕೆಯ ಪ್ರಶಸ್ತಿ” ಮೊತ್ತಕ್ಕೆ ಪತ್ರಕರ್ತರ ಸಂಘಕ್ಕೆ ಪ್ರಾಯೋಜಕರನ್ನು ಹುಡುಕುವ ಅನಿವಾರ್ಯತೆಯೇನೂ ಇರಲಿಲ್ಲ. ಪತ್ರಕರ್ತರ ಸಂಘದ ಅಡಿಯಲ್ಲೇ ಇರುವ ಪ್ರೆಸ್‌ಕ್ಲಬ್ಬಿನಲ್ಲಿ ಬೇಕಾದಷ್ಟು ದುಡ್ಡಿದೆ. 1976 ರಂದು ಪ್ರಾರಂಭವಾದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಈಗ ಅತ್ಯಂತ ಶ್ರೀಮಂತ ಸಂಘಗಳಲ್ಲಿ ಒಂದು. ಸಂಘದ ಕಟ್ಟಡಕ್ಕೆ ಅಪಾರ ರಾಜಕಾರಣಿಗಳು ಲಕ್ಷ ಲಕ್ಷವನ್ನೇ ಸುರಿದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಜನಾರ್ದನ ಪೂಜಾರಿಯವರಂತೂ ಜಿಲ್ಲೆಯಲ್ಲಿ ಬೇರೆ ಯಾವ ಸಮಸ್ಯೆಯೂ ಇಲ್ಲದೆ ಎಂಪಿ ಅನುದಾನ ಕೊಳೆಯುತ್ತಿದೆ ಎಂದು ಭಾಸವಾಗುವ ರೀತಿಯಲ್ಲಿ ಅನುದಾನ ನೀಡಿದ್ದಾರೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳು ಸಂಘದ ಕಟ್ಟಡಕ್ಕೆ ನೀಡಿದ ಅನುದಾನದ ಲೆಕ್ಕ ನೋಡಿದರೆ ತಲೆ ತಿರುಗಬಹುದು. ಅದೆಲ್ಲಾ ಇರಲಿ. ಇಲ್ಲಿರುವ ಪ್ರೆಸ್‌ಕ್ಲಬ್ಬಿನಲ್ಲಿ ದಿನಕ್ಕೆ ಐದು ಪ್ರೆಸ್ ಮೀಟ್ ನಡೆಸಲು ಅವಕಾಶ ಇದೆ. ಏನಿಲ್ಲವೆಂದರೂ ದಿನಾ ಸರಾಸರಿ ಮೂರರಿಂದ ನಾಲ್ಕು ಪ್ರೆಸ್ ಮೀಟ್‌ಗೆ ಕೊರತೆ ಇಲ್ಲ. ನಾಗಮಂಡಲ, ಬ್ರಹ್ಮಕಲಶ, ಕೋಲ, ನೇಮದಿಂದ ಹಿಡಿದು ಪ್ರತಿಭಟನೆಗಳವರೆಗೆ ಮಂಗಳೂರಿನಲ್ಲಿ ಕಾರ್ಯಕ್ರಮಗಳಿಗೆ ಕೊರತೆ ಇಲ್ಲದಿರುವಾಗ ಪತ್ರಿಕಾಗೋಷ್ಠಿಗೆ ಕೊರತೆ ಬರಲು ಸಾಧ್ಯವಿಲ್ಲ. ನಾಗಮಂಡಲವಿರಲಿ, ಬ್ರಹ್ಮಕಲಶವಿರಲಿ, ದಲಿತ ಮಲದ ಗುಂಡಿಗೆ ಬಿದ್ದ ಬಗೆಗಿನ ಪತ್ರಿಕಾಗೋಷ್ಠಿಯೇ ಇರಲಿ, ಒಂದು ಸಾವಿರ ರೂಪಾಯಿಯನ್ನು ಪ್ರೆಸ್‌ಕ್ಲಬ್ಬಿಗೆ ನೀಡಿ ರಶೀದಿ ಮಾಡಿಕೊಳ್ಳಲೇ ಬೇಕು. ಪ್ರತೀ ಪ್ರೆಸ್ ಮೀಟ್‌ಗೆ ಒಂದು ಸಾವಿರ ರೂಪಾಯಿಯಂತೆ ಪ್ರೆಸ್‌ಕ್ಲಬ್ಬಿನ ತಿಂಗಳ-ವಾರ್ಷಿಕ ಆದಾಯ ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಇಷ್ಟೊಂದು ಆದಾಯ ಇರುವ ಪತ್ರಕರ್ತರ ಸಂಘ “ಪ ಗೋ” ಪ್ರಶಸ್ತಿಯ ಐದು ಸಾವಿರಕ್ಕೆ ಪ್ರಾಯೋಜಕರಿಗೆ ದಂಬಾಲು ಬಿದ್ದು ಪ ಗೋ ರವರಿಗೆ ಅವಮಾನ ಮಾಡುವುದು ಎಷ್ಟು ಸರಿ ಎಂಬುದನ್ನು ಕಾರ್ಯನಿರತ ಪತ್ರಕರ್ತರ ಸಂಘ ಆಲೋಚಿಸಬೇಕು.

ನಾವೆಲ್ಲಾ ಪ ಗೋ ರವರನ್ನು ಆದರ್ಶವಾಗಿರಿಸಿಕೊಂಡು ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಇರಲು ಬಯಸುವವರು. ರಾತ್ರಿ ಗುಂಡು ತುಂಡು ಪಾರ್ಟಿ, ಬೆಲೆಬಾಳುವ ಗಿಫ್ಟ್, ಗಿಫ್ಟ್ ಓಚರ್‌ಗಳ ಭರಾಟೆಯಲ್ಲಿ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಹಾಳುಗೆಡವುತ್ತಿದ್ದಾರೆ. ಪ ಗೋ ಪ್ರಶಸ್ತಿಯನ್ನು ಕೊಡುವಂತಹ ಸಂಧರ್ಭದಲ್ಲಿ ಈಗಿನ ಪತ್ರಕರ್ತರಿಗೆ ಪ ಗೋ ಆದರ್ಶಗಳ ಬಗ್ಗೆ ಹೇಳಬೇಕಿದೆ. ದೊಡ್ಡ ದೊಡ್ಡ ಆದರ್ಶಗಳನ್ನು ಅಲ್ಲದಿದ್ದರೂ ಕನಿಷ್ಠ ಗಿಫ್ಟ್, ಗಿಫ್ಟ್ ಓಚರ್, ಗುಂಡು ತುಂಡು ಪಾರ್ಟಿಗಳನ್ನು ತಿರಸ್ಕರಿಸುವಂತೆ ಕಾರ್ಯನಿರತ ಪತ್ರಕರ್ತ ಸಂಘ ಹೇಳಬೇಕಿದೆ. ಆದರೆ ಆ ರೀತಿ ಹೇಳುವಾಗ ನಮಗೂ ನೈತಿಕತೆ ಬೇಕಾಗುತ್ತದೆ. ಆ ಹಿನ್ನಲೆಯಲ್ಲಿ ಮುಂದಿನ ವರ್ಷದಿಂದ “ಪ ಗೋ ಪ್ರಶಸ್ತಿ”ಗೆ ಪ್ರಾಯೋಜಕತ್ವ ಪಡೆಯದೆ ಪ್ರಶಸ್ತಿ ವಿತರಿಸಬೇಕು. ಇಲ್ಲದೇ ಇದ್ದಲ್ಲಿ ಉತ್ತಮ ಪತ್ರಕರ್ತರು ಅಂತಹ ಪ್ರಶಸ್ತಿಯನ್ನು ತಿರಸ್ಕರಿಸಬೇಕು. ಆಗ ನಿಜವಾಗಿಯೂ ಪ ಗೋ ಪ್ರಶಸ್ತಿಗೆ ಬೆಲೆ ಬರುತ್ತದೆ ಎಂಬುದು ನಮ್ಮಂತಹ ಕಿರಿಯ ಪತ್ರಕರ್ತರ ಮನವಿ.

ಪದ್ಯಾಣ ಗೋಪಾಲಕೃಷ್ಣ ವಿವರ

ಹುಟ್ಟೂರು: ದ. ಕ. ಜಿಲ್ಲೆ ಕಾಸರಗೋಡು ಗಡಿ ಅಡ್ಯನಡ್ಕ
ಹುಟ್ಟಿದ ದಿನ: 1928
ಬೆಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1956
ಮಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದು: 1959
ಕರ್ತವ್ಯ ನಿರ್ವಹಿಸಿದ ಪತ್ರಿಕೆಗಳು: ವಿಶ್ವ ಕರ್ನಾಟಕ , ತಾಯಿ ನಾಡು, ಕಾಂಗ್ರೇಸ್ ಸಂದೇಶ, ಸಂಯುಕ್ತ ಕರ್ನಾಟಕ, ಶಕ್ತಿ, ನವಭಾರತ, ಕನ್ನಡ ವಾಣಿ, ಇಂಡಿಯನ್ ಎಕ್ಸ್ಪ್ರೆಸ್, ಕನ್ನಡ ಪ್ರಭ, ಟೈಮ್ಸ್ ಆಫ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯಾ.
ಸ್ವಂತ ಪತ್ರಿಕೆ: 1963-1964 – ವಾರ್ತಾಲೋಕ ಪತ್ರಿಕೆ
ನಿವೃತ್ತಿ: 1994
ಕಾದಂಬರಿಗಳು: ಬೆಳ್ಳಿ ಸೆರಗು, ಗನ್ ಬೋ ಸ್ಟ್ರೀಟ್, ಓ ಸಿ 67
ನಿಧನ: 1997

ಕೇಳುವವರೇ ಇಲ್ಲದ ಕರಾವಳಿ

ನವೀನ್ ಸೂರಿಂಜೆ

ಕರಾವಳಿಯ ಎರಡು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳೇ ಇಲ್ಲ. ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಾಜಕೀಯ ಗೊಂದಲಗಳ ಹಿನ್ನಲೆಯಲ್ಲಿ ಜನರ ಪಾಲಿಗೆ ಸ್ವಿಚ್ಡ್ ಆಫ್ ಆಗಿದ್ದಾರೆ. ಕೇಳುವವರೇ ಇಲ್ಲದ ಕರಾವಳಿಯಲ್ಲಿ ಇದೀಗ ಜಿಲ್ಲಾಡಳಿತ ಆಡಿದ್ದೇ ಆಟ. ಇದೇ ಸಂದರ್ಭವನ್ನು ಬಳಸಿಕೊಂಡ ಮಂಗಳೂರು ವಿಶೇಷ ಆರ್ಥಿಕ ವಲಯದಂತಹ ಸಂಸ್ಥೆಗಳು ಜಿಲ್ಲಾಡಳಿತವನ್ನು ಬಳಸಿಕೊಂಡು ಜನರ ಪ್ರತಿಭಟನೆಯನ್ನು ಹತ್ತಿಕ್ಕಿ ಬಲವಂತವಾಗಿ ಕಾಮಗಾರಿ ಆರಂಭಿಸುತ್ತಿವೆ. ಮೀನುಗಾರ ಸಾರ್ವಜನಿಕ ಆಲಿಕಾ ಸಭೆ ನಡೆಸದೆ, ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆಯದೆ, ಮೀನುಗಾರರ ಆಕ್ಷೇಪಗಳಿಗೆ ಉತ್ತರ ನೀಡದೆ ಕಡಲಿಗೆ ವಿಷ ಉಣಿಸುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಯಶಸ್ವಿಯಾಗಿದ್ದೇ ಆದಲ್ಲಿ ಕರಾವಳಿಯ ಸಾವಿರಾರು ಮೀನುಗಾರರ ಕುಲಕಸುಬಿಗೆ ಬರೆ ಬೀಳಲಿದ್ದು, ಕರಾವಳಿ ಕಡಲಿನ ಜೀವಚರಗಳು ನಶಿಸಿ ಕಡಲು ಬಂಜೆಯಾಗಲಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಮಂಗಳೂರಿನ ಬಜಪೆ, ಕಳವಾರು, ಪೆರ್ಮುದೆ ಗ್ರಾಮಗಳ 1800 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲಾಗಿದ್ದು, ಅದರಲ್ಲಿ ಒಎನ್‍ಜಿಸಿ ಸೇರಿದಂತೆ ಎರಡು ಮೂರು ಪೆಟ್ರೋಲಿಯಂ ಸಂಬಂಧಿ ಕಂಪನಿಗಳು ಅನುಷ್ಠಾನಗೊಳ್ಳಲಿವೆ. ಕೃಷಿಕರಿಂದ ಕೃಷಿ ಭೂಮಿಯನ್ನೆನೋ ಬಲವಂತದಿಂದ ಸ್ವಾಧೀನ ಮಾಡಲಾಗಿದೆ. ಇದೀಗ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಅಳವಡಿಸೋ ಕಾಮಗಾರಿ ಜನರ ವಿರೋಧದ ಮಧ್ಯೆಯೇ ಆರಂಭಗೊಂಡಿದೆ. ಜನರಿಂದ ಭಾರೀ ವಿರೋಧ ವ್ಯಕ್ತವಾಗಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ರಾಜಕೀಯ ಗೊಂದಲದ ಈ ಸಮಯವನ್ನೇ ಬಳಕೆ ಮಾಡಿಕೊಂಡು ಪುನರಾರಂಭ ಮಾಡಲಾಗುತ್ತಿದೆ.

ಏನಿದು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ?

ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ ಇದೊಂದು ಕೇಂದ್ರ ಸರ್ಕಾರ ಪ್ರಾಯೋಜಿತ ವಿದೇಶದ ಹಿತ ಕಾಯುವ ಬಂಡವಾಳಶಾಹಿಗಳ ಯೋಜನೆ. ನೂರು ಶೇಕಡಾ ರಫ್ತು ಮಾಡುವ ಉತ್ಪನ್ನಗಳನ್ನಷ್ಟೇ ತಯಾರು ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರ ನೂರು ಶೇಕಡಾ ತೆರಿಗೆ ರಿಯಾಯಿತಿಯನ್ನೂ ನೀಡಿದೆ. ಎಸ್ಇಝಡ್ ಸ್ಥಾಪನೆಗಾಗಿ ಈ ದೇಶದಲ್ಲಿ 705 ಅರ್ಜಿಗಳು ಬಂದಿದ್ದು, ತೀರಾ ನಿನ್ನೆ ಮೊನ್ನೆಯವರೆಗೂ 400 ವಿಶೇಷ ಆರ್ಥಿಕ ವಲಯಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. “ಭಾರತ ದೇಶ ಅದ್ಯಾಕೆ ಎಸ್ಇಝಡ್‍ಗಳ ಹಿಂದೆ ಬಿದ್ದಿದೆ ಎಂಬುದು ಗೊತ್ತಾಗುತ್ತಿಲ್ಲ. ಎಸ್ಇಝಡ್‍ನಿಂದ ದೇಶದ ಉದ್ದಾರ ಸಾಧ್ಯವಿಲ್ಲ” ಎಂದು ವಲ್ಡ್‌ಬ್ಯಾಂಕ್ ಸಲಹೆಗಾರ ರಾಜನ್ ಹೇಳುವುದನ್ನು ಭಾರತ ಸರ್ಕಾರ ಕೇಳಿಯೂ ಕೇಳದಂತೆ ಅನುಮತಿ ಕೊಡುತ್ತಲೇ ಇದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡಲು ಒಎನ್‍ಜಿಸಿ ಎಂಬ ಪೆಟ್ರೋಲಿಯಂ ಆಧಾರಿತ ಕಂಪನಿಗೆ ಅನುಮತಿ ದೊರೆತು ಕರ್ನಾಟಕ ಸರ್ಕಾರದ ಶೇಕಡಾ 23ರ ಪಾಲುದಾರಿಕೆಯಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ಅಧಿಸೂಚನೆ ಹೊರಡಿಸಲಾಯಿತು. ಒಎನ್‍ಜಿಸಿ ಕೊರಿಕೆಯಂತೆ ಅದರದ್ದೇ ಒಡೆತನದ ಎಂಆರ್‌ಪಿಎಲ್ (ಮಂಗಳೂರು ಪೆಟ್ರೋಕೆಮಿಕಲ್ ಪ್ರೈವೇಟ್ ಲಿಮಿಟೆಡ್) ವಿಸ್ತರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉಪ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಕೊಡಲು ಕೆಐಎಡಿಬಿ ಮಂಗಳೂರು ತಾಲೂಕಿನ ಬಜಪೆ, ಪೆರ್ಮುದೆ, ಕಳವಾರಿನ 1800 ಎಕರೆಗೆ ಪ್ರಥಮವಾಗಿ ಅಧಿಸೂಚನೆ ಹೊರಡಿಸಿತು.

ಕಳವಾರಿನಲ್ಲಿರುವ ಜಮಿನ್ದಾರಿ ಗುತ್ತಿನ ಮನೆಗಳ ಚೇಲಾಗಿರಿಯಿಂದಾಗಿ 1800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಅನಾಯಾಸವಾಗಿ ಕೆಐಎಡಿಬಿ ಪಡೆದುಕೊಂಡಿತು. ಎರಡನೇ ಹಂತದ ಎಸ್ಇಝಡ್‍ಗಾಗಿ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು ಗ್ರಾಮದ 2035 ಎಕರೆ ಕೃಷಿ ಭೂಮಿಯನ್ನು ಸ್ವಾಧೀನತೆಗೆ ನೋಟಿಫೈಗೊಳಿಸಿತು. ಇದರಲ್ಲಿ ಮಾತ್ರ ಎಸ್ಈಝಡ್ ಆಟ ನಡೆಯಲಿಲ್ಲ. ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್ ಮತ್ತು ನಟೇಶ್ ಉಳ್ಳಾಲ್‍ರ ಉತ್ಸಾಹದಿಂದ ಇಡೀ ಹಳ್ಳಿಯ ರೈತರನ್ನು ಸಂಘಟಿಸಿ ಹೋರಾಟ ನಡೆಸಲಾಯಿತು. ಎಲ್ಲಾ ಧರ್ಮದ ಧರ್ಮ ಗುರುಗಳನ್ನೂ ಹೋರಾಟಕ್ಕೆ ಬಳಸಿ ಪಕ್ಕಾ ರಾಜಕೀಯ ಗಿಮಿಕ್‍ಗಳನ್ನು ಮಾಡಿ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಲಾಯಿತು. ರೈತರ ಭೂಮಿ ಮರಳಿ ರೈತರಿಗೆ ದಕ್ಕಿತು. ಅದರ ಹಿಂದಿನ ಹೋರಾಟದ ಕತೆಗಳು ಎರಡು ವಾಕ್ಯ ಅಥವಾ ಒಂದು ಲೇಖನದಿಂದ ಹೇಳಿ ಮುಗಿಯುವಂತದ್ದಲ್ಲ. ಇದೀಗ ಮೊದಲ ಹಂತದ ಎಸ್ಇಝಡ್ ಯೋಜನೆಯ ಕಾಮಗಾರಿಗಳು ಭರದಿಂದ ಸಾಗಿವೆ. ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಉಲ್ಲಂಘನೆ ಮಾಡಿ, ಪರಿಸರ ಕಾಯ್ದೆಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಯುತ್ತಿದೆ ಎಂಬುದು ಬೇರೆ ಮಾತು. ಅದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಹದಿನೈದು ಮಂದಿ ಉತ್ತರ ಭಾರತದ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.

ಬಂಜೆಯಾಗಲಿರುವ ಕರಾವಳಿ ಕಡಲು

ಇದೀಗ ಮೊದಲ ಹಂತದ ಎಸ್ಇಝಡ್‍ನಲ್ಲಿ ಬರುವ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಪೈಪ್‍ಲೈನ್ ಕಾಮಗಾರಿಯನ್ನು ಕಡಲ ತಡಿಯಲ್ಲಿ ಮಾಡಲಾಗುತ್ತದೆ. 1990 ರಲ್ಲಿ ಎಂಆರ್‌ಪಿಎಲ್‍ನಿಂದ ತ್ಯಾಜ್ಯ ನೀರು ವಿಸರ್ಜನಾ ಪೈಪ್‍ಲೈನ್ ಅಳವಡಿಸಲು ಮೀನುಗಾರರು ವಿರೋಧ ವ್ಯಕ್ತಪಡಿಸಿ ಕರ್ಫ್ಯೂ ಹೇರುವ ಹಂತಕ್ಕೂ ತಲುಪಿತ್ತು. ಈ ಬಾರಿ  ಎಂಆರ್‌ಪಿಎಲ್ ತ್ಯಾಜ್ಯಕ್ಕಿಂತಲೂ ಅಪಾಯಕಾರಿ ತ್ಯಾಜ್ಯವನ್ನು ಕಡಲಿಗೆ ಬಿಡುವ ಪೈಪ್‍ಲೈನ್‍ಗೆ ಮೀನುಗಾರರ ಅಂತಹ ವಿರೋಧಗಳು ಇಲ್ಲ. ಯಾಕೆಂದರೆ ಮೀನುಗಾರ ಮುಖಂಡರು ಎನಿಸಿಕೊಂಡವರ ಬಳಿ ಎಸ್ಈಝಡ್ ಈಗಾಗಲೇ ಮಾತನಾಡಿ ಸೆಟಲ್ ಮಾಡಿಕೊಂಡಿದೆ. “ತ್ಯಾಜ್ಯ ನೀರನ್ನು ಶುದ್ದೀಕರಿಸಿ ಬಿಡುತ್ತೇವೆ. ಮೀನುಗಾರಿಕೆಗೆ ಕ್ಷೀಣಿಸುವ ಯಾವುದೇ ಅಪಾಯ ಇಲ್ಲ,” ಎಂದು ಹೇಳುವ ಎಸ್ಇಝಡ್ ನಾಡದೋಣಿ ಮೀನುಗಾರರಿಗೆ ಅಧಿಕೃತವಾಗಿ ಎಸ್ಈಝಡ್ ಚೆಕ್ ಮೂಲಕ ಐವತ್ತು ಸಾವಿರ ಪರಿಹಾರ ನೀಡಿದೆ. ಈ ಪರಿಹಾರ ಫಲನುಭವಿಗಳ ಪಟ್ಟಿ ತಯಾರಿಸಿದ್ದು ಜಿಲ್ಲಾಡಳಿತವಲ್ಲ. ಬದಲಿಗೆ ಮೀನುಗಾರ ಮುಖಂಡರು. ನೈಜ ನಾಡದೋಣಿ ಮೀನುಗಾರರಿಗೆ ಪರಿಹಾರ ನೀಡದೆ ಮೀನುಗಾರ ಮುಖಂಡರಿಗೆ ಬೇಕಾದವರಿಗೆ ಪರಿಹಾರ ನೀಡಲಾಗಿದೆ. ಪರಿಹಾರವನ್ನು ಎಲ್ಲಾ ಮೀನುಗಾರರಿಗೆ ನೀಡಲು ಎಸ್ಇಝಡ್ ಸಿದ್ದವಿದ್ದರೂ ಎಲ್ಲಾ ಮೀನುಗಾರರು ಪರಿಹಾರ ಪಡೆದುಕೊಳ್ಳಲು ಸಿದ್ದರಿಲ್ಲ. ಮೀನುಗಾರಿಯನ್ನೇ ಕುಲಕಸುಬು ಮಾಡಿಕೊಂಡಿರುವವರು ಒಮ್ಮೆ ಸಿಗೋ ಐವತ್ತು ಸಾವಿರ ಪರಿಹಾರದ ಹಣದಲ್ಲಿ ಜೀವಮಾನವಿಡೀ ಬದುಕು ಸಾಗಿಸುತ್ತೇನೆ ಎಂದು ಭ್ರಮೆಪಡಲು ಮೀನುಗಾರರೇನೂ ಮೂರ್ಖರಲ್ಲ. ಎಸ್ಇಝಡ್ ಪೈಪ್‍ಲೈನ್ ಕಾಮಗಾರಿ ಮುಗಿದು ಸಮುದ್ರಕ್ಕೆ ಎಸ್ಇಝಡ್ ತ್ಯಾಜ್ಯ ನೀರನ್ನು ಬಿಟ್ಟ ಕರಾವಳಿ ಕಡಲು ಬಂಜೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿನ್ನಲೆಯಲ್ಲಿ ಮೀನುಗಾರರು ಪೈಪ್‍ಲೈನ್ ವಿರೋಧಿಸುತ್ತಿದ್ದರು. 2011 ನವೆಂಬರ್‍‌ನಲ್ಲಿ ಪೈಪ್‍ಲೈನ್ ಕಾಮಗಾರಿಗೆ ಬಂದಿದ್ದ ಬಾರ್ಜ್‌ಗೆ ನೈಜ ಮೀನುಗಾರರು ವಿರೋಧ ವ್ಯಕ್ತಪಡಿಸಿದ ನಂತರ ಎಸ್ಇಝಡ್ ಇತ್ತೀಚಿನವರೆಗೆ ತೆಪ್ಪಗಿತ್ತು.

ಮಂಗಳೂರಿನವರೇ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಯಾವುದೇ ರಾಜಕೀಯ ನಾಯಕರು ಮತ್ತು ಪಕ್ಷ ಮೀನುಗಾರರನ್ನು ನಿರ್ಲಕ್ಷಿಸುವಂತಿಲ್ಲ. ಕರಾವಳಿಯಲ್ಲಿ ಬಲಿಷ್ಠ ವರ್ಗವಾಗಿರುವ ಮೀನುಗಾರರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡೇ ಬಂದಿದ್ದಾರೆ. ಮೀನುಗಾರರ ಚಿಕ್ಕ ಪ್ರತಿಭಟನೆ ಮತ್ತು ಬೇಡಿಕೆಯನ್ನೂ ಕರಾವಳಿಯಲ್ಲಿ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತದೆ. ಮೀನುಗಾರರ ಯಾವುದೇ ಸಮಸ್ಯೆಗಳಿಗೂ ಯಾವುದೇ ಪಕ್ಷಗಳು ಈವರೆಗೂ ಪರಿಹಾರ ಕಂಡುಕೊಳ್ಳದಿದ್ದರೂ ಅವರನ್ನು ಎದುರು ಹಾಕಿಕೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿ ಪೈಪ್‍ಲೈನ್ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಆದರೆ ಮೊನ್ನೆಯಿಂದ ಪ್ರಾರಂಭವಾದ ಯಡಿಯೂರಪ್ಪರ ರೆಸಾರ್ಟ್ ವಾಸ ಮತ್ತು ಡಿ.ವಿ. ಸದಾನಂದ ಗೌಡರ ಖುರ್ಚಿಯ ಗೊಂದಲದ ಕಡೆಗೆ ಎಲ್ಲರ ಗಮನ ಹರಿಯುತ್ತಿದ್ದಂತೆ ಎಸ್ಇಝಡ್ ಮೆಲ್ಲನೆ ಎದ್ದುಕೊಂಡಿದೆ. ಮಾರ್ಚ್ 21 ಬಜೆಟ್ ಮಂಡನೆ ಮತ್ತೊಂದೆಡೆ ಉಡುಪಿ ಉಪಚುನಾವಣೆ ಫಲಿತಾಂಶ. ಇವೆಲ್ಲದರ ಮಧ್ಯೆ ರಾಜಕೀಯ ಗೊಂದಲ. ಇದೇ ಸಮಯವನ್ನು ಬಳಸಿಕೊಂಡ ಎಸ್ಈಝಡ್ ಪೈಪ್‍ಲೈನ್‍ಗಾಗಿ ಮೀನುಗಾರರ ವಿರೋಧದ ಮಧ್ಯೆಯೇ ಸುರತ್ಕಲ್ ಸಮೀಪದ ಮಲ್ಲಮಾರ್ ಕಡಲಿಗೆ ಬೃಹತ್ ಬಾರ್ಜ್ ತಂದಿದೆ. ಜನವಿರೋಧವನ್ನು ಲೆಕ್ಕಿಸದೇ ಕಾಮಗಾರಿ ನಡೆಸುತ್ತೇವೆ ಎಂದು ಪೊಲೀಸರ ಮೂಲಕ ಮೀನುಗಾರರಿಗೆ ಬೆದರಿಕೆ ಹಾಕಿದೆ.

ಕೇಳುವವರೇ ಇಲ್ಲದ ಕರಾವಳಿ

ಈಗ ಕರಾವಳಿಯನ್ನು ಕೇಳುವವರೇ ಇಲ್ಲ. ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಕಳೆದ ಫೆಬ್ರವರಿಯಲ್ಲಿ ನಿಧನ ಹೊಂದಿದ್ದಾರೆ. ಅವರು ಸಚಿವರಾಗಿದ್ದಾಗಲೂ ಎಸ್ಇಝಡ್, ನಾಗಾರ್ಜುಗಳಂತಹ ಕಂಪನಿಗಳನ್ನು ಬೆಂಬಲಿಸುತ್ತಿದ್ದರು ಎಂಬುದು ಬೇರೆ ಮಾತು. ಆದರೆ ತೋರ್ಪಡಿಕೆಗಾದರೂ ಜನಪ್ರತಿನಿಧಿಯೆಂಬಂತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಬ್ಲೂ ಫಿಲಂ ಹಗರಣದಲ್ಲಿ ಸಿಲುಕಿ ಮನೆ ಸೇರಿದ್ದಾರೆ. ಮಂಗಳೂರಿನ ನಿವಾಸಿ, ಉಡುಪಿ ಲೋಕಸಭಾ ಸದಸ್ಯರಾಗಿ ಈಗ ಮುಖ್ಯಮಂತ್ರಿಯಾಗಿರುವ ಸದಾನಂದ ಗೌಡರನ್ನು ಸಂಪರ್ಕಿಸೋಣ ಎಂದರೆ ಅವರು ಶಾಸಕರ ಲೆಕ್ಕಾಚಾರದಲ್ಲೇ ಬ್ಯೂಸಿ ಆಗಿದ್ದಾರೆ. ಒಂದೆಡೆ ಎಲೆಕ್ಷನ್ ಲೆಕ್ಕಾಚಾರದ ತಲೆಬಿಸಿಯಾದರೆ ಮತ್ತೊಂದೆಡೆ ಯಡಿಯೂರಪ್ಪ ಕಾಟ, ಚೊಚ್ಚಲ ಬಜೆಟ್ ಮಂಡನೆಯ ಆತಂಕಗಳು, ಹೈಕಮಾಂಡ್‍ನಿಂದ ಬರೋ ಮಾತುಗಳ ನಿರೀಕ್ಷೆಗಳ ಮಧ್ಯೆ ಸದಾನಂದ ಗೌಡರ ತಲೆ ಹನ್ನೆರಡಾಣೆ ಆಗಿದೆ. ಈಗ ಸದಾನಂದ ಗೌಡರು ಕನಿಷ್ಠ ದೂರವಾಣಿ ಕರೆಗೂ ಸಿಗುವುದು ಕಷ್ಟ. ಒಟ್ಟಾರೆ ಕೇಳುವವರೇ ಇಲ್ಲದ ಕರಾವಳಿಯನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಸದ್ಬಳಕೆ ಮಾಡಿಕೊಳ್ಳುತ್ತಿದೆ.

(ಚಿತ್ರಕೃಪೆ: ಡೈಜಿವರ್ಲ್ಡ್, ಇತ್ಯಾದಿ)