Daily Archives: April 1, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-14)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ನರಭಕ್ಷಕ ಹುಲಿಯೊಂದನ್ನು ಪ್ರಥಮ ಬಾರಿಗೆ ಬೇಟೆಯಾಡಿದ್ದು 1907 ರಲ್ಲಿ. ಸುಮಾರು ಇನ್ನೂರು ಜನರನ್ನು ತಿಂದುಹಾಕಿದ್ದ ಈ ಹೆಣ್ಣು ಹುಲಿ ನೆರೆಯ ನೇಪಾಳದಿಂದ ಭಾರತಕ್ಕೆ ವಲಸೆ ಬಂದಿತ್ತು. ನೇಪಾಳದ ಬುಡಕಟ್ಟು ಜನ ಈ ನರಭಕ್ಷಕನ ಉಪಟಳ ತಾಳಲಾರದೆ, ಬಲೆ ಹಾಕಿ ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು 1903 ರಲ್ಲಿ ನೈನಿತಾಲ್‍ನ ಪೂರ್ವಕ್ಕೆ ಇರುವ ಲೋಹಘಾಟ್ ನದಿ ಕಣಿವೆ ಮುಖಾಂತರ 65 ಕಿಲೋಮೀಟರ್ ದೂರದ ಅಲ್ಮೋರ ಹಾಗೂ ಲೋಹಾರ್‍‌ಘಾಟ್ ಕಣಿವೆಗೆ ಬಂದ ಈ ಹುಲಿ ಇಡೀ ಪ್ರದೇಶವನ್ನು ತನ್ನ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿತು.

ಇಲ್ಲಿಗೆ ಬಂದ ನಂತರವೂ ಮನುಷ್ಯರ ಬೇಟೆಯನ್ನು ಮುಂದುವರಿಸಿದ ನರಭಕ್ಷಕ 1903 ರಿಂದ 1907 ರವರೆಗೆ ಮತ್ತೇ ಇನ್ನೂರು ಜನರನ್ನು ಬಲಿತೆಗೆದುಕೊಂಡಿತು. ಸರಾಸರಿ ಪ್ರತಿ ಮೂರುದಿನಕ್ಕೆ ಒಬ್ಬರಂತೆ ಬೇಟೆಯಾಡಿದ್ದ ಈ ಹೆಣ್ಣು ಹುಲಿಯನ್ನು ಸೇನೆಯ ಗೂರ್ಖ ರೆಜಿಮೆಂಟ್ ತಂಡ ಮತ್ತು ಹವ್ಯಾಸಿ ಶಿಕಾರಿಕಾರರು ಹಾಗೂ ಸರ್ಕಾರದ ಅಧಿಕಾರಿಗಳು ಹಿಡಿಯುವಲ್ಲಿ ಅಥವಾ ಕೊಲ್ಲುವಲ್ಲಿ ಪ್ರಯತ್ನಿಸಿ ವಿಫಲರಾದರು.

ಅಂತಿಮವಾಗಿ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿಯ ಮೂಲಕ ಹುಲಿಗಳ ಚಲನವಲನದ ಬಗ್ಗೆ ನಿಷ್ಣಾತನಾಗಿದ್ದ ಜಿಮ್ ಕಾರ್ಬೆಟ್‍ನ ಮೊರೆ ಹೋಯಿತು. ಮೊಕಮೆಘಾಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಒಮ್ಮೆ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದ ಕಾರ್ಬೆಟ್ ಸರ್ಕಾರದ ಆಹ್ವಾನವನ್ನು ಸ್ವೀಕರಿಸಿದ. ಆದರೆ, ಸರ್ಕಾರದ ಮುಂದೆ ಎರಡು ಷರತ್ತುಗಳನ್ನು ವಿಧಿಸಿದ. ಈ ನರಭಕ್ಷಕ ಹುಲಿಯನ್ನು ಬೇಟೆಯಾಡಿದರೆ ಸರ್ಕಾರ ಯಾವುದೇ ಬಹುಮಾನ ಘೋಷಿಸಬಾರದು ಹಾಗೂ ಈ ನರಭಕ್ಷಕ ಹುಲಿಯನ್ನು ತಾನು ಕೊಲ್ಲುವವರೆಗೂ ಇತರರು ಈ ಪ್ರದೇಶದಲ್ಲಿ ಬೇರೆ ಯಾವುದೇ ಹುಲಿಯ ಶಿಕಾರಿಗೆ ಇಳಿಯಬಾರದು ಎಂಬುದು ಕಾರ್ಬೆಟ್‍ನ ಬೇಡಿಕೆಯಾಗಿತ್ತು.  ಒಂದು ರೀತಿಯಲ್ಲಿ ಅವನ ಬೇಡಿಕೆ ಅರ್ಥಪೂರ್ಣವಾಗಿತ್ತು. ಮುಂದಿನ ದಿನಗಳಲ್ಲಿ ಬಹುಮಾನದ ಆಸೆಗಾಗಿ ಬೇಟೆಗಾರರು ನರಭಕ್ಷಕವಲ್ಲದ ಹುಲಿಗಳನ್ನು ಕೊಂದುಹಾಕುತ್ತಾರೆ ಎಂಬ ಆತಂಕ ಹಾಗೂ ಹುಲಿಗಳನ್ನು ಗಾಯಗೊಳಿಸಿ ಅವುಗಳನ್ನು ಜೀವಂತ ಬಿಟ್ಟರೆ ಅವುಗಳು ಸೇಡು ತೀರಿಸಿಕೊಳ್ಳುವ ಸಲುವಾಗಿ ನರಭಕ್ಷಕ ಹುಲಿಗಳಾಗಿ ಪರಿವರ್ತನೆ ಹೊಂದುತ್ತವೆ ಎಂಬ ಕಾರ್ಬೆಟ್‍ನ ನಿಲುವು ಸರ್ಕಾರದ ಮುಂದೆ ಈ ಷರತ್ತುಗಳನ್ನು ವಿಧಿಸಲು ಕಾರಣವಾಗಿತ್ತು. ಜೊತಗೆ ಕಾರ್ಬೆಟ್ ತನ್ನ ಸುಧೀರ್ಘ ಕಾಡಿನ ಅನುಭವದಲ್ಲಿ ಹುಲಿಗಳ ಮನೋಭಾವವನ್ನು ಚೆನ್ನಾಗಿ ಅರಿತವನಾಗಿದ್ದ.

ಸಾಮಾನ್ಯವಾಗಿ ವಯಸ್ಸಾದ ಹುಲಿಗಳು ವೇಗವಾಗಿ ಚಲಿಸಿ ಜಿಂಕೆ, ಸಾರಂಗ, ಕಾಡೆಮ್ಮೆ ಮುಂತಾದ ಪ್ರಾಣಿಗಳನ್ನು ಹಿಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿ ಹಸಿವು ತಾಳಲಾರದೆ ಮನುಷ್ಯನ ಕಡೆ ತಿರುಗುತ್ತವೆ ಎಂಬುದನ್ನು ಕಾರ್ಬೆಟ್ ಅನುಭವದಿಂದ ಗ್ರಹಿಸಿದ್ದ. ಅಲ್ಲದೇ, ಒಮ್ಮೆ ಮನುಷ್ಯನ ರಕ್ತದ ರುಚಿ ನೋಡಿದ ಹುಲಿಗಳು ಮತ್ತೇ ಬೇರೆಡೆ ಆಹಾರಕ್ಕಾಗಿ ಅಲೆದಾಡುವುದು ತೀರಾ ಕಮ್ಮಿ ಎಂಬುದನ್ನು ಸಹ ಕಾರ್ಬೆಟ್ ಅರಿತಿದ್ದ. ನರಭಕ್ಷಕ ಹುಲಿಗಳನ್ನು ಶಿಕಾರಿ ಮಾಡುವುದು ಅತ್ಯಂತ ಕ್ಲಿಷ್ಟಕರ ಕೆಲಸವಾಗಿತ್ತು. ನರಮನುಷ್ಯರ ಹಿಂದೆ ಬಿದ್ದ ಹುಲಿಗಳು ಅತ್ಯಂತ ಜಾಗರೂಕತೆಯಿಂದ ದಾಳಿ ಮಾಡುತ್ತವೆ ಇದಕ್ಕಾಗಿ ಅವುಗಳು ಗಂಟೆಗಟ್ಟಲೆ, ದಿನಗಟ್ಟಲೆ ಕಾಯ್ದು ಕುಳಿತು ಹೊಂಚು ಹಾಕಿ ಮನುಷ್ಯರನ್ನು ಬಲಿ ತೆಗೆದುಕೊಳ್ಳುವುದನ್ನು ಕಾರ್ಬೆಟ್ ಗಮನಿಸಿದ್ದ.

ಸರ್ಕಾರ ಜಿಮ್ ಕಾರ್ಬೆಟ್‍ನ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿತು. ನರಭಕ್ಷಕ ಹುಲಿಯನ್ನು ಬೇಟೆಯಾಡುವ ತನಕ ಯಾರೂ ಕುಮಾವನ್ ಮತ್ತು ಅಲ್ಮೋರ ಪ್ರಾಂತ್ಯದಲ್ಲಿ ಹುಲಿ ಬೇಟೆಯಾಡಬಾರದು ಎಂಬ ಆದೇಶವನ್ನು ಹೊರಡಿಸಿತು. ಈ ಆದೇಶ ಕಾರ್ಬೆಟ್‍ನ ಕೈಗೆ ತಲುಪುವುದರೊಳಗೆ ನೈನಿತಾಲ್‍ನಿಂದ 48 ಕಿ.ಮಿ. ದೂರದ ಪಾಲಿ ಎಂಬ ಹಳ್ಳಿಯಲ್ಲಿ ನರಭಕ್ಷಕ ಹುಲಿ ಮನುಷ್ಯ ಜೀವವೊಂದನ್ನು ಆಹುತಿ ತೆಗೆದುಕೊಂಡಿತು.

ತಕ್ಷಣವೇ ಜಿಮ್ ಕಾರ್ಬೆಟ್ ತನ್ನ ಆರು ಮಂದಿ ಸೇವಕರು ಮತ್ತು ಸಹಾಯಕರೊಡನೆ ಪಾಲಿ ಹಳ್ಳಿಯತ್ತ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ. ಸಾಮಾನ್ಯವಾಗಿ ನರಭಕ್ಷಕ ಪ್ರಾಣಿಗಳ ಬೇಟೆಗೆ ಹೊರಡುವಾಗ ಕಾರ್ಬೆಟ್ ಸೇವಕರನ್ನು ಕರೆದೊಯ್ಯುತ್ತಿದ್ದ. ಅಡುಗೆ ಮಾಡಲು, ಗುಡಾರ ಹಾಕಲು, ಕತ್ತಲೆಯಲ್ಲಿ ಲಾಂಟಿನ್ ಇಲ್ಲವೆ ಪಂಜು ಹಿಡಿಯಲು ಮೂವರು ಸೇವಕರು ಹಾಗೂ ಬೇಟೆಯ ವೇಳೆ ಮರದ ಮೇಲೆ ಮಚ್ಚಾನು ಕಟ್ಟಲು, ಜೊತೆಯಲ್ಲಿರಲು ಶಿಕಾರಿ ಅನುಭವ ಇರುವ ಮೂವರು ಸಹಾಯಕರನ್ನು ದಿನಗೂಲಿ ಆಧಾರದ ಮೇಲೆ ಕರೆದೊಯ್ಯುತ್ತಿದ್ದ. ನರಭಕ್ಷಕ ಪ್ರಾಣಿಗಳ ಬೇಟೆಯ ಸಮಯದಲ್ಲಿ ಕಾರ್ಬೆಟ್‍ನ ಖರ್ಚುವೆಚ್ಚಗಳನ್ನು ಸರ್ಕಾರ ಭರಿಸುತಿತ್ತು.

ಅಂದಿನ ದಿನಗಳಲ್ಲಿ ಕುಮಾವನ್ ಪ್ರಾಂತ್ಯದ 3500 ಅಡಿ ಎತ್ತರದ ಬೆಟ್ಟ ಗುಡ್ಡಗಳನ್ನ ಹತ್ತಿ ಇಳಿದು ಸಾಗುವ ದಾರಿ ದುರ್ಗಮವಾಗಿತ್ತು. ಆದರೆ ಜಿಮ್ ಕಾರ್ಬೆಟ್‍ಗೆ ಆ ಪ್ರದೇಶದ ಕಚ್ಛಾ ರಸ್ತೆಗಳು, ಅರಣ್ಯ ಪ್ರದೇಶ ಪರಿಚಿತವಾಗಿದ್ದ ಕಾರಣ ಪ್ರತಿ ದಿನ 20 ರಿಂದ 25 ಕಿಲೋಮೀಟರ್ ನಡೆಯುವ ಶಕ್ತಿಯನ್ನು ಕಾರ್ಬೆಟ್ ಮೈಗೂಡಿಸಿಕೊಂಡಿದ್ದ. ಸತತ ಎರಡು ದಿನಗಳ ಪ್ರಯಾಣದ ನಂತರ ಮೂರನೇ ದಿನ ಬೆಳಗಿನ ಜಾವ ನಾಲ್ಕು ಗಂಟೆ ಸಮಯಕ್ಕೆ ಕಾರ್ಬೆಟ್ ಪಾಲಿಹಳ್ಳಿಯನ್ನು ತಲುಪಿದಾಗ ಆ ಪುಟ್ಟ ಹಳ್ಳಿಯ ಜನ ಇನ್ನೂ ನಿದ್ರಿಸುತ್ತಿದ್ದರು.

ಊರ ಮುಂದಿನ ಬಯಲಿನಲ್ಲಿ ಬಿಡಾರ ಹೂಡಿದ ಕಾರ್ಬೆಟ್ ತನ್ನ ಸೇವಕರಿಗೆ ಚಹಾ ಮಾಡಲು ತಿಳಿಸಿ, ಹಾಗೆ ಹಳ್ಳಿಯನ್ನು ಒಂದು ಸುತ್ತು ಹಾಕಿ ವೀಕ್ಷಿಸಿದ. ಕೇವಲ 50 ರಷ್ಟು ಜನಸಂಖ್ಯೆ ಇದ್ದ ಪಾಲಿಯೆಂಬ ಆ ಹಳ್ಳಿ , ಸಣ್ಣ ಪ್ರಮಾಣದ ರೈತರು ಹಾಗೂ ಅರಣ್ಯದ ಕಿರು ಉತ್ಪನ್ನ ಮತ್ತು ಕೂಲಿಯನ್ನು ನಂಬಿ ಬದುಕುತ್ತಿರುವ ಕೂಲಿಕಾರ್ಮಿಕರಿಂದ ಕೂಡಿತ್ತು. ಇಡೀ ಊರಿನ ಜನ ನರಭಕ್ಷಕ ಹುಲಿಯ ಭಯದಿಂದ ತಮ್ಮ ಮನೆಯ ಬಾಗಿಲುಗಳನ್ನು ಭದ್ರ ಪಡಿಸಿ, ಕಿಟಕಿ, ಬಾಗಿಲು, ಮತ್ತು ಜಾನುವಾರು ಕೊಟ್ಟಿಗೆಗಳಿಗೆ ಮುಳ್ಳಿನ ಕಂತೆಗಳನ್ನು ಇರಿಸಿ ಹುಲಿಯಿಂದ ರಕ್ಷಣೆ ಪಡೆದುಕೊಂಡಿದ್ದರು. ಹಗಲಿನ ವೇಳೆ ತಮ್ಮ ತಮ್ಮ ಜಮೀನುಗಳಿಗೆ ಅಥವಾ ಕಾಡಿಗೆ ಗುಂಪಾಗಿ ಹೋಗಿ ಬರುತ್ತಿದ್ದರು. ಅದೇ ರೀತಿ ಹೆಂಗಸರು ಸಹ ನೀರು ತರಲು, ಬಟ್ಟೆ ತೊಳೆಯಲು, ಅಥವಾ ಕಾಡಿನ ಅಂಚಿನ ಪ್ರದೇಶದಿಂದ ಉರುವಲು ಕಟ್ಟಿಗೆ ತರಲು ಆಯುಧಗಳನ್ನು ಹಿಡಿದ ಪುರುಷರ ರಕ್ಷಣೆ ಪಡೆಯುತ್ತಿದ್ದರು.

ಬೆಳಕರಿದ ತಕ್ಷಣ ಊರಿಗೆ ಬಂದ ಅಪರಿಚಿತ ವ್ಯಕ್ತಿಗಳನ್ನು ನೋಡಿ, ಒಬ್ಬೊಬ್ಬರಂತೆ ಕಾರ್ಬೆಟ್ ಬಿಡಾರದತ್ತ ಸುಳಿದರು. ಊರಿನ ಕೆಲವು ಹಿರಿಯರಿಗೆ ಕಾರ್ಬೆಟ್ ಪರಿಚಯವಿದ್ದುದ್ದರಿಂದ ಅವನ ಮುಂದೆ ಕುಳಿತು ನರಭಕ್ಷಕ ಹುಲಿಯ ಹಾವಳಿ ಬಗ್ಗೆ ಮತ್ತು ಪ್ರತಿದಿನ ಪಕ್ಕದ ಕಾಡಿನಿಂದ ಅದು ಘರ್ಜಿಸುವ ಬಗ್ಗೆ ವಿವರಿಸಿದರು.

ಕಾರ್ಬೆಟ್ ಚಹಾ ಕುಡಿದು ನರಭಕ್ಷಕ ಹುಲಿ ಮೂರು ದಿನದ ಹಿಂದೆ ಪಾಲಿಹಳ್ಳಿಯ ಹೆಣ್ಣು ಮಗಳನ್ನು ಹಿಡಿದು ಕೊಂದು ಹಾಕಿದ್ದ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ವೀಕ್ಷಣೆಗಾಗಿ ಹೊರಟ. ಊರ ಹೊರಗಿನ ಬಯಲಿನಲ್ಲಿ ಹಲವಾರು ಹೆಣ್ಣು ಮಕ್ಕಳೊಂದಿಗೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಗೃಹಿಣಿಯೊಬ್ಬಳು ಓಕ್ ಮರದ ಕೊಂಬೆಯನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ನರಭಕ್ಷಕ ಹಿಂದಿನಿಂದ ದಾಳಿ ನಡೆಸಿತ್ತು. ಸಂಗಾತಿಗಳ ಕೂಗಾಟ ಮತ್ತು ಚೀರಾಟಗಳ ನಡುವೆಯೂ ಗೃಹಿಣಿಯ ಕುತ್ತಿಗೆಯನ್ನು ಬಲವಾಗಿ ಬಾಯಲ್ಲಿ ಹಿಡಿದು ಎತ್ತೊಯ್ದಿತ್ತು. ಹೆಣ್ಣು ಮಕ್ಕಳ ಚೀರಾಟದ ಶಬ್ಧ ಕೇಳಿ ಗ್ರಾಮಸ್ಥನೊಬ್ಬ ಬಂದೂಕ ಹಿಡಿದು ಸ್ಥಳಕ್ಕೆ ಬರುವಷ್ಟರಲ್ಲಿ ನರಭಕ್ಷಕ ಗೃಹಿಣಿಯ ಶವದೊಂದಿಗೆ ಕಾಡು ಸೇರಿತ್ತು. ಆತ ಗಾಳಿಯಲ್ಲಿ ಗುಂಡು ಹಾರಿಸಿದ ತಕ್ಷಣ ನರಭಕ್ಷಕನ ಘರ್ಜನೆ ಕೇಳಿಬಂದಿದ್ದರಿಂದ ಎಲ್ಲರೂ ಹೆದರಿ ವಾಪಸ್ ಹಳ್ಳಿಗೆ ಬಂದರು.

ಜಿಮ್ ಕಾರ್ಬೆಟ್ ಗ್ರಾಮಸ್ಥರ ನೆರವಿನಿಂದ ನರಭಕ್ಷಕ ಹುಲಿ ಮಹಿಳೆಯನ್ನು ಎಳೆದೊಯ್ದಿದ್ದ ಜಾಡು ಹಿಡಿದು ಹೋಗಿ ಸ್ಥಳ ಪರಿಕ್ಷೀಸಿದಾಗ ಆಕೆಯ ಬಟ್ಟೆ ಮತ್ತು ಮೂಳೆಗಳು ಮಾತ್ರ ಅಲ್ಲಿ ಉಳಿದಿದ್ದವು. ನರಭಕ್ಷಕ ಹುಲಿ ಪಾಲಿ ಗ್ರಾಮದ ಜನರನ್ನು ಗುರಿಯಾಗಿಟ್ಟುಕೊಂಡು ಇಲ್ಲೆ ಬೀಡು ಬಿಟ್ಟಿದೆ ಎಂಬುದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡು ವಾಪಸ್ಸಾದ. ಹುಲಿಗೆ ಬಲಿಯಾದ ಗೃಹಿಣಿಯ ಮನೆಯವರು ಆಕೆಯ ಶವ ಸಂಸ್ಕಾರದ ವಿಧಿ ವಿಧಾನದ ಪೂಜೆಗಾಗಿ ಆಕೆಯ ಮೂಳೆಗಳನ್ನು ಸಂಗ್ರಹಿಸಿಕೊಂಡು ಬಂದರು.

ಆದಿನ ಬೆಳಗಿನ ಜಾವವೇ ಕಾರ್ಬೆಟ್ ಪಾಲಿ ಎಂಬ ಪುಟ್ಟ ಹಳ್ಳಿಗೆ ಬಂದಿದ್ದರಿಂದ ಗ್ರಾಮಸ್ಥರಿಗೆ ತುಸು ಧೈರ್ಯ ಬಂದಂತಾಯಿತು. ಕಾರ್ಬೆಟ್ ಬಂದೂಕಿನ ರಕ್ಷಣೆಯಡಿ ರೈತರು ಬೇಸಾಯದ ಕೆಲಸಗಳನ್ನು ನಿರ್ವಹಿಸಿದರೆ ಹಳ್ಳಿಯ ಹೆಂಗಸರು ತಮ್ಮ ಮನೆಗಳಿಂದ ಹೊರ ಬಂದು ಬಾವಿಯಲ್ಲಿ ನೀರು ಸೇದುವುದು, ಬಟ್ಟೆ ಒಗೆಯುವುದು, ಕಟ್ಟಿಗೆ ಸಂಗ್ರಹಿಸುವ ಕೆಲಸವನ್ನು ನಿರಾಳವಾಗಿ ಮಾಡಿದರು.

ಆ ರಾತ್ರಿ ಊರಿನ ಮುಖಂಡ ಕಾರ್ಬೆಟ್ ಮತ್ತು ಅವನ ಸೇವಕರಿಗೆ ವಸತಿ ವ್ಯವಸ್ಥೆಗಾಗಿ ಒಂದು ಕೊಠಡಿಯಿದ್ದ ಮನೆಯೊಂದನ್ನು ನೀಡಿದ. ಕಾರ್ಬೆಟ್ ಸೇವಕರನ್ನು ಮನೆಯೊಳಗೇ ಮಲಗಿಸಿ, ಮನೆಯ ಮುಂಭಾಗದಲ್ಲಿ ಒಂದು ಕಡೆ ಗೋಡೆ ಮತ್ತೊಂದು ಕಡೆ ಮರವನ್ನು ರಕ್ಷಣೆ ಮಾಡಿಕೊಂಡು ನರಭಕ್ಷಕ ಹುಲಿಗಾಗಿ ರಾತ್ರಿಯೆಲ್ಲಾ ಕಾದು ಕುಳಿತ. ಕಾಡಿನಿಂದ ಈ ಹಳ್ಳಿಗೆ ಬರಲು ಇದ್ದ  ಏಕೈಕ ರಸ್ತೆಯಲ್ಲೇ ನರಭಕ್ಷಕ ಹುಲಿ ಸಹ ಊರಿನೊಳಕ್ಕೆ ಪ್ರವೇಶಿಸಬೇಕಾಗಿತ್ತು. ಗೃಹಿಣಿಯನ್ನು ಕೊಂದು ಮೂರು ದಿನವಾದ್ದರಿಂದ, ಮತ್ತೇ ಆಹಾರಕ್ಕಾಗಿ ನರಭಕ್ಷಕ ದಾಳಿ ಮಾಡುತ್ತದೆ ಎಂಬುದು ಕಾರ್ಬೆಟ್‍ನ ನಿರೀಕ್ಷೆಯಾಗಿತ್ತು.

(ಮುಂದುವರೆಯುವುದು)