ನೈಸರ್ಗಿಕ ಸಂಪತ್ತಿನ ಉಪಯೋಗ ದೇಶದ ಅಭಿವೃದ್ಧಿಗೆ ಬಳಕೆಯಾಗಲಿ

-ಆನಂದ ಪ್ರಸಾದ್

ವಿವಿಧ ಲೋಹಗಳ ಅದಿರುಗಳು, ಕಲ್ಲಿದ್ದಲು, ನೈಸರ್ಗಿಕ ಅನಿಲ ಮೊದಲಾದವು ನಮ್ಮ ರಾಷ್ಟ್ರೀಯ ಸಂಪತ್ತುಗಳಾಗಿವೆ. ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆಯ ಮೂಲಕ ಇವುಗಳನ್ನು ಕೆಲವೇ ಖಾಸಗಿ ವ್ಯಕ್ತಿಗಳು ಲೂಟಿ ಹೊಡೆಯುತ್ತಿದ್ದು. ಸರ್ಕಾರಕ್ಕೆ ಸೇರಬೇಕಾದ ಮತ್ತು ತನ್ಮೂಲಕ ಜನತೆಯ ಕಲ್ಯಾಣಕ್ಕೆ ಉಪಯೋಗಿಸಬೇಕಾಗಿದ್ದ ಅಪಾರ ಸಂಪತ್ತು ಖಾಸಗಿ ವ್ಯಕ್ತಿಗಳ ತಿಜೋರಿ ಸೇರಿ ಪರದೇಶಗಳಲ್ಲಿ ಕಪ್ಪು ಹಣವಾಗಿ ಸಂಗ್ರಹವಾಗಿದೆ.

ನಮ್ಮ ದೇಶದಲ್ಲಿ ಉದಾರೀಕರಣ ಹಾಗೂ ಜಾಗತೀಕರಣದ ನಂತರ ದೇಶದ ಖನಿಜ ಸಂಪತ್ತು ಸಕ್ರಮವಾಗಿಯೇ ಖಾಸಗಿ ವ್ಯಕ್ತಿಗಳ ತಿಜೋರಿ ಸೇರುತ್ತಿದೆ. ಒಬ್ಬ ವ್ಯಕ್ತಿ ಅಥವಾ ಕಂಪನಿ ಅದಿರನ್ನು ಅಗೆದು ಮಾರಿದಾಕ್ಷಣ ಅದರ ಬಹುಪಾಲು ಆ ವ್ಯಕ್ತಿಗೆ ಸೇರುವುದು ಎಷ್ಟರ ಮಟ್ಟಿಗೆ ಸಮಂಜಸ? ಉದಾಹರಣೆಗೆ ಕಬ್ಬಿಣದ ಅದಿರಿನ ರಾಯಧನ ಟನ್ನಿಗೆ ಮಾರುಕಟ್ಟೆ ಬೆಲೆಯ 10% ಇದೆ ಅಂದರೆ ಟನ್ನಿಗೆ ಮಾರುಕಟ್ಟೆ ಬೆಲೆ 5000 ರೂಪಾಯಿ ಇದ್ದರೆ 500 ರೂಪಾಯಿ ಸರ್ಕಾರಕ್ಕೆ ಪಾವತಿಸಿ ಉಳಿದ ಹಣ ಅದಿರನ್ನು ಅಗೆದು ಸಾಗಿಸಿದ ಕಂಪನಿಗೆ ಸೇರುತ್ತದೆ.

ಸಕ್ರಮ ಗಣಿಗಾರಿಕೆ ಕೂಡ ದೇಶದ ಸಂಪತ್ತನ್ನು ಬಳಸಿ ಕೆಲವೇ ಕೆಲವರು ಶ್ರೀಮಂತರಾಗಲು ಅವಕಾಶ ಮಾಡಿಕೊಡುವಂತೆ ಸರ್ಕಾರದ ನೀತಿ ಇದೆ. ಇದರ ಬದಲು ರಾಯಧನ ಟನ್ನಿಗೆ 50% ನಿಗದಿಪಡಿಸಿದರೆ ಸರ್ಕಾರಕ್ಕೆ ಸಾಕಷ್ಟು ಆದಾಯ ಬರಬಹುದು. ಭಾರತ ಪ್ರತಿ ವರ್ಷ 20 ಕೋಟಿ ಟನ್ನಿನಷ್ಟು ಕಬ್ಬಿಣದ ಅದಿರನ್ನು ಹೊರತೆಗೆದರೆ ಇದರ ಅರ್ಧದಷ್ಟನ್ನು ಅಂದರೆ 10 ಕೋಟಿ ಟನ್ನಿನಷ್ಟು ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. 20 ಕೋಟಿ ಟನ್ನಿಗೆ 10% ರಾಯಧನದಂತೆ ಸರ್ಕಾರಕ್ಕೆ ಈಗ ಸಂದಾಯವಾಗುವ ಹಣ 10,000 ಕೋಟಿ ರೂಪಾಯಿಗಳು ಮಾತ್ರ. ಇದು ಸಕ್ರಮವಾಗಿ ಗಣಿಗಾರಿಕೆ ಮಾಡಿದರೆ ಮಾತ್ರ.

ಅಕ್ರಮ ಗಣಿಗಾರಿಕೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುವುದರಿಂದ ಸರ್ಕಾರಕ್ಕೆ ಇಷ್ಟೂ ಆದಾಯ ಬರಲಿಕ್ಕಿಲ್ಲ. ಇದರ ಬದಲು ಟನ್ನಿಗೆ 50% ರಾಯಧನ ನಿಗದಿ ಮಾಡಿದರೆ ಸರ್ಕಾರಕ್ಕೆ 50,000 ಕೋಟಿ ಆದಾಯ ಕಬ್ಬಿಣದ ಅದಿರಿನಿಂದಲೇ ಬರುತ್ತದೆ. ಈ ಆದಾಯವನ್ನು ರಸ್ತೆ, ನೀರಾವರಿ, ವಿದ್ಯುತ್ ಉತ್ಪಾದನೆ ಮೊದಲಾದ ಕ್ಷೇತ್ರಗಳಿಗೆ ಬಳಸಬಹುದು ಅಥವಾ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಬ್ಸಿಡಿಯ ರೂಪದಲ್ಲಿ ನೀಡಿ ಅಸಂಪ್ರದಾಯಿಕ ಇಂಧನ ಉತ್ಪಾದನೆಗೆ ಉತ್ತೇಜನ ನೀಡಬಹುದು ಅಥವಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಳಸಬಹುದು.

ಕೃಷಿಕರ ಜಮೀನಿನ ಬದಿಯಲ್ಲಿ ತೋಡು ಅಥವಾ ನದಿ ಹರಿಯುತ್ತಿದ್ದರೆ ಆ ನದಿಯ ಬದಿಯ ಜಾಗವನ್ನು ಪರಂಬೋಕು ಜಾಗ ಎಂದು ಹೇಳುತ್ತಾರೆ. ಪರಂಬೋಕು ಸರ್ಕಾರಕ್ಕೆ ಸೇರಿದ್ದು ಎಂದು ಪರಿಗಣಿಸಲ್ಪಡುತ್ತದೆ. ತೋಡು ಹಾಗೂ ನದಿಯ ಬದಿಯಲ್ಲಿ ಮರಗಳು ಬೆಳೆದು ನಿಂತಿರುತ್ತವೆ. ಈ ಮರಗಳು ಪ್ರವಾಹದ ಕಾರಣದಿಂದಾಗಿ ಹಾಗೂ ಮಣ್ಣಿನ ಸವೆತದಿಂದಾಗಿ ಬೇರುಗಳು ಸಡಿಲಗೊಂಡು ಆಗಾಗ ಬೀಳುತ್ತಿರುತ್ತವೆ. ಈ ಬಿದ್ದ ಮರವನ್ನೂ ಕೃಷಿಕನು ತನ್ನ ಮನೆ ಉಪಯೋಗಕ್ಕಾಗಿ ಅರಣ್ಯ ಇಲಾಖೆಯ ಕಾನೂನಿನ ಪ್ರಕಾರ ಬಳಸುವಂತಿಲ್ಲ. ಅದನ್ನು ಬಳಸಬೇಕಾದರೆ ಸರ್ಕಾರಕ್ಕೆ ಆ ಮರದ ಮಾರುಕಟ್ಟೆ ಮೌಲ್ಯವನ್ನು ಸಂಪೂರ್ಣವಾಗಿ ಪಾವತಿಸಿ ಉಪಯೋಗಿಸಬೇಕು. ಆ ಮರವು ಕೃಷಿಕನ ಜಮೀನಿನ ಬದಿಯಲ್ಲೇ ಇದ್ದರೂ, ಅದನ್ನು ಕೃಷಿಕನು ಕಳ್ಳಕಾಕರಿಂದ ರಕ್ಷಿಸಿದರೂ ಅವನಿಗೆ ಆ ಮರದ ಉಪಯೋಗದಲ್ಲಿ ಎಳ್ಳಷ್ಟೂ ರಿಯಾಯಿತಿ ಇಲ್ಲ. ಆ ಬಿದ್ದ ಮರವು ಮಳೆ ಗಾಳಿಗೆ ಹಾಳಾಗಿ ಹೋದರೂ ಅದನ್ನು ಕೃಷಿಕನ ಉಪಯೋಗಕ್ಕೆ ಕೊಡುವುದಿಲ್ಲ ಹಾಗೂ ಅರಣ್ಯ ಇಲಾಖೆಯವರು ಅದನ್ನು ತಾವೂ ಕೊಂಡು ಹೋಗುವುದಿಲ್ಲ. ಅದು ಅಲ್ಲೇ ಬಿದ್ದು ಗೆದ್ದಲು ಹಿಡಿದು ಹಾಳಾಗಿ ಹೋದರೂ ಸರಿ ಕೃಷಿಕನ ಉಪಯೋಗಕ್ಕೆ ಕೊಡುವುದಿಲ್ಲ ಎಂಬುದು ಅರಣ್ಯ ಇಲಾಖೆಯ ನಿಲುವು.

ಇದೇ ನಿಲುವನ್ನು ಕಬ್ಬಿಣದ ಅದಿರಿನ ಬಗೆಗಿನ ನಿಲುವಿನ ಜೊತೆ ಹೋಲಿಸಿ ನೋಡಿದರೆ ಅದಿರಿನ ವಹಿವಾಟಿನಲ್ಲಿ ಸರ್ಕಾರದ ಕಾನೂನಿನ ಪ್ರಕಾರವೇ (ಅಂದರೆ ಸಕ್ರಮ ಗಣಿಗಾರಿಕೆ ಮೂಲಕವೇ) ಎಸ್ಟೊಂದು ತಾರತಮ್ಯ ಇದೆ ಎಂಬುದು ಗೊತ್ತಾಗುತ್ತದೆ. ಅದಿರನ್ನು ಅಗೆದು ಸಾಗಿಸಿದ ವ್ಯಕ್ತಿ/ಕಂಪನಿಯು ಅದಿರಿನ ಮಾರುಕಟ್ಟೆ ಮೌಲ್ಯದ 10% ರಾಯಧನ ಸರ್ಕಾರಕ್ಕೆ ಸಲ್ಲಿಸಿದರೆ ಉಳಿದ ಲಾಭ ಆತನಿಗೇ ಸಿಗುತ್ತದೆ. ಕೃಷಿಕನ ಜೊತೆ ಸರ್ಕಾರ ಮರದ ವಿಷಯದಲ್ಲಿ ವರ್ತಿಸುವ ರೀತಿಗೂ ಒಬ್ಬ ಉದ್ಯಮಿಯ ವಿಚಾರದಲ್ಲಿ ಕಬ್ಬಿಣದ ಅದಿರಿನ ವಿಚಾರದಲ್ಲಿ ವರ್ತಿಸುವ ರೀತಿಗೂ ಎಷ್ಟು ಅಂತರ! ಎರಡೂ ಸರ್ಕಾರದ ಸೊತ್ತುಗಳೇ. ಇಂಥ ಕಾನೂನುಗಳನ್ನು ರಚಿಸಿದವರು ಬ್ರಿಟಿಷರಲ್ಲ ಬದಲಿಗೆ ನಮ್ಮ ಶಾಸಕರು ಹಾಗೂ ಸಂಸದರೇ.

ಕಬ್ಬಿಣದ ಅದಿರಿನ ವಿಚಾರದಲ್ಲಿ ಹಗಲು ದರೋಡೆಗೆ ಅವಕಾಶ ನೀಡಿದ ಈ ಕಾನೂನು ಸಕ್ರಮವಾಗಿಯೇ ದೇಶದ ಸಂಪತ್ತಿನ ಶೋಷಣೆಗೆ ಕಾರಣವಾಗಿದೆ. ಆದರೂ ಇದನ್ನು ಬದಲಿಸಿ ಕನಿಷ್ಠ 50% ರಾಯಧನವನ್ನಾದರೂ ಸರ್ಕಾರಕ್ಕೆ ಸಂದಾಯವಾಗುವಂತೆ ಕಾನೂನು ರೂಪಿಸಲು ನಮ್ಮ ಸರ್ಕಾರ ಯಾಕೆ ಮುಂದಾಗುವುದಿಲ್ಲ? ಈ ಬಗ್ಗೆ ಕಾನೂನು ರೂಪಿಸಲು ಯಾಕೆ ಯಾರೂ ಒತ್ತಾಯಿಸುವುದಿಲ್ಲ? ನಮ್ಮ ಮಾಧ್ಯಮಗಳು ಯಾಕೆ ಈ ವಿಷಯದಲ್ಲಿ ಕುರುಡು, ಮೂಕ ಹಾಗೂ ಕಿವುಡಾಗಿವೆ?

ಕಬ್ಬಿಣದ ಅದಿರು ಒಂದರ ಮೇಲೆಯೇ 50% ರಾಯಧನ ನಿಗದಿಪಡಿಸಿದರೆ ಸರ್ಕಾರಕ್ಕೆ ವಾರ್ಷಿಕವಾಗಿ (ದೇಶದಲ್ಲಿ) 50,000 ರೂಪಾಯಿ ಆದಾಯ ಬರುತ್ತದೆ. ಇದೇ ರೀತಿ ಕಲ್ಲಿದ್ದಲು, ನೈಸರ್ಗಿಕ ಅನಿಲ, ಬೇರೆ ಲೋಹಗಳ ಅದಿರುಗಳು ಇವುಗಳ ಮೇಲೆಯೂ ರಾಯಧನವನ್ನು 50% ನಿಗದಿ ಪಡಿಸಿದರೆ ಸರ್ಕಾರಕ್ಕೆ ಬಹಳಷ್ಟು ಆದಾಯ ಬರಬಹುದು. ಈಗ ಇವುಗಳ ಮೇಲೆ ಎಷ್ಟು ರಾಯಧನ ನಿಗದಿಯಾಗಿದೆ ಎಂಬ ಬಗ್ಗೆ ಮಾಹಿತಿ ಅಂತರ್ಜಾಲದಲ್ಲಿ ಸಿಗಲಿಲ್ಲ. ಇವುಗಳ ಮೇಲೆಯೂ ಕಬ್ಬಿಣದ ಅದಿರಿನ ರೀತಿಯಲ್ಲಿಯೇ ಬಹಳ ಕಡಿಮೆ ರಾಯಧನ ಇರುವ ಸಾಧ್ಯತೆ ಇದೆ. ಇದರಿಂದಾಗಿ ದೇಶದ ಸಂಪತ್ತನ್ನು ಕೆಲವೇ ಖಾಸಗಿ ವ್ಯಕ್ತಿಗಳು ನುಂಗಿ ಹಾಕುವ ಪರಿಸ್ಥಿತಿ ಇಂದು ದೇಶದಲ್ಲಿ ಇದೆ. ರಾಯಧನವನ್ನು 50% ಹೆಚ್ಚಿಸಿ ಈ ರೀತಿ ಬಂದ ಆದಾಯವನ್ನು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಉಪಯೋಗಿಸಬಹುದು. ಇಂಥ ಕಾನೂನುಗಳನ್ನು ರೂಪಿಸಲು ನಮ್ಮ ಸಂಸತ್ತು ಹಾಗೂ ವಿಧಾನಸಭೆಗಳು ಮುಂದಾಗುವುದಿಲ್ಲ. ಇಂಥ ಕಾನೂನುಗಳನ್ನು ರೂಪಿಸುವಂತೆ ಜನತೆಯಿಂದ ಜನಪ್ರತಿನಿಧಿಗಳ ಮೇಲೆ ಒತ್ತಾಯ ಬರಬೇಕಾಗಿದೆ.

2 thoughts on “ನೈಸರ್ಗಿಕ ಸಂಪತ್ತಿನ ಉಪಯೋಗ ದೇಶದ ಅಭಿವೃದ್ಧಿಗೆ ಬಳಕೆಯಾಗಲಿ

  1. s.s.shashi

    ದೇಶದ ಸಂಪತ್ತನ್ನು ಕೆಲವೇ ಖಾಸಗಿ ವ್ಯಕ್ತಿಗಳು ನುಂಗಿ ಹಾಕುವ ಪರಿಸ್ಥಿತಿ ಇಂಥ ಕಾನೂನುಗಳನ್ನು ರಚಿಸಿದವರು ಬ್ರಿಟಿಷರಲ್ಲ ಬದಲಿಗೆ ನಮ್ಮ ಶಾಸಕರು ಹಾಗೂ ಸಂಸದರೇ.ಕಬ್ಬಿಣದ ಅದಿರಿನ ವಿಚಾರದಲ್ಲಿ ಹಗಲು ದರೋಡೆಗೆ ಅವಕಾಶ ನೀಡಿದ ಈ ಕಾನೂನು ಸಕ್ರಮವಾಗಿಯೇ ದೇಶದ ಸಂಪತ್ತಿನ ಶೋಷಣೆಗೆ ಕಾರಣವಾಗಿದೆ.

    Reply

Leave a Reply to s.s.shashi Cancel reply

Your email address will not be published. Required fields are marked *