Daily Archives: April 4, 2012

ತಾರ್ಕಿಕತೆಯ ಮೇಲೆ ಪ್ರಭುತ್ವದ ಸವಾರಿ

-ಡಾ.ಎಸ್.ಬಿ.ಜೋಗುರ

ಮನುಷ್ಯನ ನಾಗರೀಕತೆಯ ಬೆಳವಣಿಗೆಯೊಂದಿಗೆ ಐಹಿಕ ಅಭ್ಯುದಯ ಸಾಧ್ಯವಾಗಿದೆಯೇ ಹೊರತು, ಮಾನಸಿಕ ಸ್ತರಗಳು ಊರ್ದ್ವಮುಖವಾಗಿ ಪಲ್ಲಟಗೊಂಡಿದ್ದು ಇಲ್ಲ. ಇದು ಅತ್ಯಂತ ಯೋಗ್ಯವಾದ ಹಂತ ಎಂದು ಎಲ್ಲ ಕಾಲಮಾನಗಳು ಗುರುತಿಸಿರುವಂತಹ ಒಂದು ಸ್ಥಿತಿಗೆ ಹೋಗಿ ತಲುಪಿರುವುದು ಎಲ್ಲಿಯೂ ಇಲ್ಲ. ಹಾಗಾಗಿಯೇ ಎಲ್ಲ ಕಾಲಮಾನಗಳಲ್ಲಿಯೂ ತುಸು ಹೆಚ್ಚು, ತುಸು ಕಡಿಮೆ ಎನ್ನಬಹುದಾದ ಸ್ಥಿತ್ಯಂತರಗಳು ಮನುಷ್ಯನ ಮನಸ್ಸಿನ ಆವರಣದೊಳಗೆ ಸುತ್ತಿ ಸುಳಿದಿರುವುದಿದೆ.

ಇಂಥಾ ಅನೇಕ ಬಗೆಯ ಮಾನಸಿಕ ಸಂವೇದನೆಗಳಲ್ಲಿ ಭಯ ಇಲ್ಲವೇ ನಿಯಂತ್ರಣದ ಹೆಸರಿನಲ್ಲಿ ಹೇರಬಹುದಾದ ಸಾಮಾಜಿಕ ಅನುಮತಿಗಳೆರಡೂ ಅತ್ಯಂತ ನಿರ್ಣಾಯಕವಾದವುಗಳು. ಭಯ ಮನುಷ್ಯನ ತಾರ್ಕಿಕತೆಯ ಬಹುದೊಡ್ಡ ಶತ್ರು. ಭಯ ಮತ್ತು ತಾರ್ಕಿಕತೆಗಳೆರಡೂ ಬದುಕಿಗೆ ಅತ್ಯಾವಶ್ಯಕವಾದರೂ ಅವೆರಡರ ಮಧ್ಯೆ ಒಂದು ಬಗೆಯ ಸ್ವಾಂಗೀಕರಣವಾಗಲೀ, ಸಾರೂಪ್ಯತೆಯಾಗಲೀ ಸಾಧ್ಯವಿಲ್ಲ. ಅಮೇರಿಕದ ಕ್ರಾಂತಿಗೆ ಎರಡು ದಶಕಗಳ ಮೊದಲು ಲೇಖಕ ಎಡ್ಮಂಡ್ ಬರ್ಕ್ ಒಂದು ಮಾತನ್ನು ಹೇಳಿರುವುದಿತ್ತು: “ಮನಸ್ಸಿನ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ಅತ್ಯಂತ ಸಮರ್ಥವಾಗಿ ಸೂರೆ ಮಾಡುವ ತಾಕತ್ತು ಭಯ ಎನ್ನುವ ಸಂವೇದನೆಗಿದೆ”. ಇಲ್ಲಿ ಭಯ ಎನ್ನುವುದು ಸಂಘಟಿತ ಸಮುದಾಯದ ಭಾಗವಾದ ಪ್ರಭುತ್ವದ ಹೇರಿಕೆ ಇಲ್ಲವೇ ದಬ್ಬಾಳಿಕೆ ಎಂದರ್ಥ. ಹಾಗೆ ನೋಡಿದರೆ ಪ್ರಭುತ್ವದ ನಿರ್ವಹಣೆ ಮತ್ತು ಸ್ಥಾಪನೆ ಕೂಡಾ ಸಾಧ್ಯವಾಗುವುದು. ಸೂಕ್ಷ್ಮವಾಗಿ ಈ ಭಯದ ನೆರಳಿನಲ್ಲಿಯೇ.

ರೋಮನ್ ಫಿಲಾಸಫರ್ ಲೆಕ್ಟಾನಿಯಸ್, “ಭಯದ ಅಸ್ಥಿತ್ವದ ನಡುವೆ ಜಾಣ್ಮೆ ಉಳಿಯುವುದಿಲ್ಲ, ಭಯವನ್ನು ಮೀರಿ ನಿಲ್ಲುವ ಕ್ರಿಯೆ ಮಾತ್ರ ಯಶಸ್ಸಿಗೆ ಕಾರಣವಾಗಬಲ್ಲದು,” ಎಂದಿರುವ ಹಿಂದೆಯೂ ತಾರ್ಕಿಕತೆಯ ಮೇಲೆ ಭಯದ ಸವಾರಿಯ ಅಹಿತಕರವಾದ ಚಿತ್ರಣವಿದೆ. ಥಾಮಸ್ ಜೆಫರಸನ್ [1822] ಹೇಳುವ ಹಾಗೆ, “ಭಯಕ್ಕೆ ಶರಣಾದವನು ತನ್ನ ಯಾವುದೇ ಬಗೆಯ ಹಿತವನ್ನು ತಾರ್ಕಿಕವಾಗಿ ಕಾಪಾಡಿಕೊಳ್ಳಲಾರ,” ಎಂದಿರುವ ಹಿಂದೆಯೂ ಭಯದ ಬದುಕು ವ್ಯಕ್ತಿಯ ಹಿತಕ್ಕೆ ಸಂಚಕಾರಿಯಾಗಿಯೇ ಕೆಲಸ ಮಾಡುವ ಬಗ್ಗೆ ಪ್ರತಿಪಾದಿಸುತ್ತದೆ.

ನಾವೆಲ್ಲರೂ ಅತ್ಯಂತ ಸ್ವಾಯತ್ತವಾದ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಭಾವಿಸುವ ವೇಳೆಗಾಗಲೇ ನೌಕರಶಾಹಿ ವ್ಯವಸ್ಥೆಯ ಪ್ರಭುತ್ವದ ಸಾಂಸ್ಥಿಕ ಮೂಲದ ನಿರ್ಬಂಧಗಳಿಗೆ ಸಿಲುಕಿರುತ್ತೇವೆ. ಆದಿಮ ಸಮಾಜದ ಹಂತದಿಂದಲೂ ಈ ಬಗೆಯ ನಿರ್ಬಂಧಗಳು ಆರ್ಥಿಕ ನಿರ್ಣಾಯಕವಾದದ ಮೂಲಕ ಹೇರಿಕೆಯಾಗುತ್ತಾ ಬಂದಿರುವ ಬಗ್ಗೆ ಮಾರ್ಕ್ಸ್ ಕೂಡಾ ಪ್ರತಿಪಾದಿಸಿರುವುದಿದೆ.

ಅಸ್ಥಿತ್ವದಲ್ಲಿರುವ ಸಮಾಜಗಳ ಚರಿತ್ರೆಯ ಬೇರುಗಳನ್ನು ಅರಸುತ್ತಾ ಹೊರಟರೆ ಎಲ್ಲ ಕಾಲ ಘಟ್ಟಗಳಲ್ಲಿಯೂ ಒಂದಿಲ್ಲಾ ಒಂದು ಬಗೆಯ ಹೇರಿಕೆ, ಧ್ವನಿ ಎತ್ತುವವರ ಮೇಲೆ ಇದ್ದೇ ಇದೆ. ಇವತ್ತಿಗೂ ನಮಗೇಕೆ ಬೇಕು ಉಸಾಬರಿ ಎನ್ನುವವರೇ ಪ್ರಭುತ್ವವನ್ನು ಅದರ ಹಿತಾಸಕ್ತಿಯನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಹೋಗುತ್ತಿರುವ ಸಂಪೋಷಕರು. ಪ್ರಭುತ್ವವನ್ನು ಬಂಡಾಯದ ಧ್ವನಿಯ ಮೂಲಕ, ಜಾಣ ನಿರಾಕರಣೆಯ ಮೂಲಕ ಚೂರು ಪಾರು ಸಾಮಾಜಿಕ ಅನುಮತಿಗಳನ್ನು ಪ್ರಶ್ನಿಸುತ್ತಲೇ ಕೆಣಕುವವರಿರುವುದರಿಂದಾಗಿಯೇ ಅರಿವಿನ ಅಂತಃಸತ್ವದ ಮೇಲೆ ಈವರೆಗೂ ಪ್ರಭುತ್ವಕ್ಕೆ ಸವಾರಿ ಮಾಡಲು ಅಷ್ಟಾಗಿ ಸಾಧ್ಯವಾಗಿಲ್ಲ. ಆಗಿರುವುದೆಲ್ಲಾ ಕೇವಲ ಹೊರಗಣ ಹಿಡಿತ ಮಾತ್ರ. ಪ್ರಭುತ್ವಗಳು ಹೀಗಿದ್ದರೆ ಚೆನ್ನ ಎನ್ನುವುದು ಜನಸಾಮಾನ್ಯನ ಭ್ರಮೆ ಅಷ್ಟೇ.

ಪ್ರಜಾಪ್ರಭುತ್ವ ಎನ್ನುವುದಾಗಲೀ ಸರ್ವಾಧಿಕಾರ ಎನ್ನುವುದಾಗಲೀ ಎರಡೂ ಅಂತಿಮವಾಗಿ ಪ್ರಭುತ್ವದ ಪರವಾಗಿಯೇ ಕೆಲಸ ಮಾಡುತ್ತವೆ. ಹಾಗಾದಾಗ ಪ್ರಭುತ್ವದ ಬಗೆಗಿನ ಸಾಮಾನ್ಯನ ಕನಸು ಭ್ರಮನಿರಸನದ ಮಟ್ಟದಲ್ಲಿಯೇ ಉಳಿದುಹೋಗುತ್ತದೆ. ಪ್ರಭುತ್ವ ಯಾವುದೇ ಬಗೆಯದಿರಲಿ, ಅವುಗಳ ಘೋಷಿತ ಧೋರಣೆಗಳಲ್ಲಿ ಭಿನ್ನತೆಗಳಿವೆಯೇ ಹೊರತು ಅವುಗಳ ಒಟ್ಟು ಪರಿಣಾಮದಲ್ಲಿ, ಬಿಗಿತದಲ್ಲಿ ಹೇಳಿಕೊಳ್ಳಬಹುದಾದ ವ್ಯತ್ಯಾಸಗಳಂತೂ ಇಲ್ಲ. ಭಾರತದಂತಹ ನೆಲದಲ್ಲಿ ಒಬ್ಬ ಲೇಖಕನಾದವನು ತನ್ನ ಬರವಣಿಗೆಯ ಪ್ರತಿ ಹಂತದಲ್ಲಿಯೂ ಅಮೂರ್ತವಾದ ಸಂಸ್ಥೆಯೊಂದರ ಮೂಲಕ ಹೊರಡಬಹುದಾದ ಪ್ರತಿಕ್ರಿಯೆಗಳನ್ನು ಪ್ರತಿ ಹಂತದಲ್ಲಿಯೂ ನಿಂತು ಜಾಗೃತ ಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಗ್ರಹಿಸಿ ಬರವಣಿಗೆಯನ್ನು ಮಾಡಬೇಕಾದ ಸನ್ನಿವೇಶದ ನಿರ್ಮಾಣದ ಹಿಂದೆ ಸಾಂಪ್ರದಾಯಿಕ ಪ್ರಭುತ್ವದ ಬಿಗಿತನ ಇಲ್ಲವೆನ್ನುವುದಾದರೂ ಹೇಗೆ? ಬರಹಗಾರನ ಬೌದ್ಧಿಕತೆ ಮತ್ತು ಆತನ ಅಭಿವ್ಯಕ್ತಿಯ ಬಗ್ಗೆ ಮಾತನಾಡುತ್ತಾ ಖ್ಯಾತ ಚಿಂತಕ ನೋಮ್ ಚಾಮಸ್ಕಿ, “ಪ್ರಜಾಸತ್ತಾತ್ಮಕ ವ್ಯವಸ್ಥೆಯ ನೆಲೆಯಾದ ಇಂಗ್ಲೆಂಡ್‍ನಂತಹ ರಾಷ್ಟ್ರಗಳಲ್ಲಿಯೂ ಪ್ರಭುತ್ವಗಳು ಬರಹಗಾರರ ಬೌದ್ಧಿಕತೆಯ ಮೇಲೆ ಸವಾರಿ ಮಾಡಿರುವುದಿದೆ.”, ಎನ್ನುತ್ತಾ, ಜಾರ್ಜ್ ಆರ್ವೆಲ್‍ರಂತಹ ಬರಹಗಾರರು ಅನುಭವಿಸಿದ ಕಿರಿಕಿರಿಯನ್ನು ಉಲ್ಲೇಖಿಸಿ, “’ಅನಿಮಲ್ ಫಾರ್ಮ್’ ಎನ್ನುವ ಕಾದಂಬರಿಯನ್ನು ಬರೆದ ಆರ್ವೆಲ್ ತನ್ನ ಮುನ್ನುಡಿಯನ್ನು ಕಾದಂಬರಿ ಪ್ರಕಟವಾದ ಮೂರು ದಶಕಗಳ ನಂತರ ಬೆಳಕು ಕಾಣಿಸುವಂತಾದದ್ದು ಪ್ರಭುತ್ವದ ಸವಾರಿಯಲ್ಲದೇ ಇನ್ನೇನು? ಜಾರ್ಜ್ ಆರ್ವೆಲ್ ’ಇಂಗ್ಲೆಂಡ್‍ನಲ್ಲಿ ಸಾಹಿತ್ಯದ ಸೆನ್ಸಾರನ್ನು ಲೇಖಕರೇ ಸ್ವಇಚ್ಚೆಯಿಂದ ಒಪ್ಪಿಕೊಂಡಿರುವುದು ವಿಕೃತವಾಗಿದೆ. ಇಲ್ಲಿ ಯಾವ ಅಧಿಕೃತವಾದ ಬಹಿಷ್ಕಾರ ಇಲ್ಲದೆಯೇ ಅಪ್ರಿಯ ವಿಚಾರಗಳನ್ನು ಹತ್ತಿಕ್ಕಬಹುದು’ ಎಂದಿರುವರು.” [ಮನುಕುಲದ ಮಾತುಗಾರ-ಚೋಮಸ್ಕಿ ಪು 68-89]

ಅಂತಿಮವಾಗಿ ಬರಹಗಾರನೊಬ್ಬನ ಬೌದ್ಧಿಕತೆ ಎನ್ನುವುದು ಪ್ರಭುತ್ವ ಹಾಗೂ ಅವರ ಪರವಾಗಿ ಸ್ವಾಮಿನಿಷ್ಠೆ ಮೆರೆಯುವ ಮಾಧ್ಯಮಗಳ ಕೈಯಲ್ಲಿ ಸಿಲುಕಿ ನರಳಬೇಕಾಗಿರುವ ಸತ್ಯವನ್ನು ಆರ್ವೆಲ್ ಸೊಗಸಾಗಿ ಪ್ರತಿಪಾದಿಸಿದ್ದಾರೆ. ಜರ್ಮನಿಯ ಮಾರ್ಕ್ಸ್ ಇದೇ ಬಗೆಯ ಅನೇಕ ಕಿರಿಕಿರಿಗಳನ್ನು ಪ್ರಭುತ್ವದಿಂದ ಅನುಭವಿಸಿದ ಬಗ್ಗೆ ಚರಿತ್ರೆಯ ಪಾಠಗಳು ಮನದಟ್ಟು ಮಾಡಿಸುತ್ತವೆ. ಆಸ್ಟ್ರೇಲಿಯಾದ ಸಮಾಜಶಾಸ್ತ್ರ್ರಜ್ಞ ಅಲೆಕ್ ಕೆರೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಒಳಹೊರಗಣವನ್ನು ಕುರಿತು ಬರೆದ ಕೃತಿಯೊಂದನ್ನು ಮುದ್ರಿಸಲು ಯಾರೂ ಮುಂದೆ ಬಾರದ ಕಾರಣ ಲೇಖಕ ಪರಿತಪಿಸಬೇಕಾಯಿತು. ಇಲ್ಲಿಯೂ ಮತ್ತೆ ಭಯದ ಮೂಲಕವೇ ಬುದ್ಧಿಯನ್ನು ಗೆಲ್ಲುವ ತಂತ್ರದ ಕುರುಹು ಕಾಣದೇ ಇರದು. ಭಾರತೀಯ ಸಾಮಾಜಿಕ ಪರಿಸರದಲ್ಲಿಯೂ ತಾರ್ಕಿಕತೆಯ ಬೆನ್ನೇರಿ ಸವಾರಿ ಮಾಡುವ ಕ್ರಿಯೆಗಳು ಆಗಾಗ ಮಿಂಚಿ ಮಾಯವಾಗುವುದಿದೆ.

ಡೆವಿಡ್ ಹ್ಯುಮ್ ಹೇಳುವ ಹಾಗೆ “ನಿರಂಕುಶ ಮಿಲಿಟರಿ ಆಡಳಿತದಲ್ಲಿ ಹೇಗೋ, ಹಾಗೆಯೆ ಜನತಂತ್ರದ ಸರ್ಕಾರಗಳಲ್ಲಿ ಆಳುವವರು ವಿಚಾರಗಳನ್ನು ಹದ್ದುಬಸ್ತಿನಲ್ಲಿಡುವ ತಂತ್ರಗಳನ್ನೇ ಮೆಚ್ಚಿಕೊಂಡಿರಬೇಕು.” ಈಗ ಎಲ್ಲ ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ಹ್ಯುಮ್ ವಿಚಾರಗಳನ್ನು ಶಿರಸಾವಹಿಸಿ ಪಾಲಿಸುವಂತೆ ನಡೆದುಕೊಳ್ಳುತ್ತಿವೆ.

ಮನುಷ್ಯನ ಸ್ವಾತಂತ್ರ್ಯವನ್ನು ಆತನ ತಾರ್ಕಿಕತೆಯನ್ನು ಇಷ್ಟಪಡದಿರುವ ಹಿತಾಸಕ್ತಿಗಳು ದಾಸ್ಯವನ್ನು ಒಪ್ಪಿಕೊಳ್ಳುವ ಸ್ವಭಾವ ಮನುಷ್ಯನಲ್ಲಿ ಸ್ವಾಭಾವಿಕವಾಗಿಯೇ ಅಡಕವಾಗಿರುವುದಿದೆ ಎಂದು ಪ್ರತಿಪಾದಿಸುವುದಿದೆ. ಸ್ವಾತಂತ್ರ್ಯದ ಪರಿಕಲ್ಪನೆಗೆ ಮೌಲಿಕತೆಯನ್ನು ತಂದುಕೊಟ್ಟ ರುಸ್ಸೊರಂತಹ ದಾರ್ಶನಿಕರು ಮಾತ್ರ ಮನುಷ್ಯನ ಮೌಲಿಕವಾದ ಗುಣವೇ ಸ್ವಾತಂತ್ರ್ಯವೆಂದು ಮಾತನಾಡುವ ಮೂಲಕ ದಾಸ್ಯವನ್ನು ಒಪ್ಪುವ ಗುಣವನ್ನು ಅಲ್ಲಗಳೆದಿರುವುದಿದೆ. ಹೆಂಬೋಲ್ಟ್ ಎನ್ನುವ ತತ್ವಜ್ಞಾನಿ ಮನುಷ್ಯನಲ್ಲಿಯ ಸರ್ವಸಾಮರ್ಥ್ಯಗಳ ಬೆಳವಣಿಗೆ ಹಾಗೂ ಬಳಕೆ ಎರಡೂ ಸ್ವಾತಂತ್ರ್ಯದಿಂದಲೇ ಸಾಧ್ಯ ಎಂದಿರುವುದಿದೆ. ಮನುಷ್ಯನ ತಾರ್ಕಿಕತೆಯ ಎದುರಲ್ಲಿ ಭಯವನ್ನು ಪ್ರತಿಷ್ಠಾಪಿಸುವ ಮೂಲಕ ಆತನ ಚಿಂತನಾ ಸಾಮರ್ಥ್ಯದ ಮೇಲೆ ಸವಾರಿ ಮಾಡುವ ಪ್ರಭುತ್ವಗಳು ಇತಿಹಾಸದುದ್ದಕ್ಕೂ ಇವೆ.

ಮಾರ್ಕ್ಸ್‌ನ ಪ್ರಕಾರ ಈ ಬಗೆಯ ಪ್ರಭುತ್ವಗಳು ಒಂದು ಹಂತದವರೆಗೆ ಉಳಿದು ಮುಂದೊಮ್ಮೆ ಜನಸಾಮಾನ್ಯನಿಗೆ ಬೇಡವಾಗುತ್ತವೆ. ಈ ಬಗೆಯ ಬೇಡವಾಗುವಿಕೆಯ ಕ್ರಿಯೆಯ ಹಿಂದೆ ಜನಸಾಮಾನ್ಯನ ಪರಕೀಯ ಪ್ರಜ್ಞೆ ಒಂದು ಪ್ರಬಲ ಒತ್ತಡವಾಗಿ ಕಾರ್ಯನಿರ್ವಹಿಸುವುದು ಎನ್ನುವ ಮಾರ್ಕ್ಸ್‌‌ನ ಭವಿಷ್ಯವಾಣಿಯನ್ನು ಇಲ್ಲಿ ನೆನೆಯಬೇಕು. ಅಂಥಾ ಒಂದು ಒತ್ತಡ ಮತ್ತು ಪರಕೀಯ ಪ್ರಜ್ಞೆ ಮೈಗೂಡುವ ’ಜನಸಾಮಾನ್ಯ’ ಈಗ ಒಟ್ಟಾರೆಯಾಗಿ ಸಿನಿಕನಾಗಿದ್ದಾನೆ. ಆತ ಹಾಗಾಗುವಂತೆ ಮಾಡುವಲ್ಲಿಯೂ ಪ್ರಭುತ್ವಗಳ ಕಸರತ್ತು ಇಲ್ಲದಿಲ್ಲ. ಪ್ರಭುತ್ವ ಬಹುತೇಕವಾಗಿ ಮನುಷ್ಯನ ತಾರ್ಕಿಕತೆಯ ಮೇಲೆ ಸವಾರಿ ಮಾಡುವ, ಗೆಲ್ಲುವ ಹಿಂದಿರುವ ಸೂತ್ರ ಅದರ ಜೊತೆಗೆ ಸದಾ ಸಾಥ್ ನೀಡುವ ಅಧಿಕಾರವೇ ಆಗಿದೆ.