Daily Archives: April 5, 2012

ಎಂದೂ ಮುಗಿಯದ ಯುದ್ಧ (ನಕ್ಸಲ್‍ ಕಥನ -1)


– ಡಾ.ಎನ್.ಜಗದೀಶ್ ಕೊಪ್ಪ


 

“ನಕ್ಸಲಿಯರು ಹಿಂಸೆಯ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಆಂತರೀಕ ಭದ್ರತೆಗೆ ಅತಿದೊಡ್ಡ ಸವಾಲಾಗಿದ್ದಾರೆ.” ಇದು ಪ್ರಧಾನ ಮಂತ್ರಿಯ ಮನದಾಳದ ಮಾತು. ಸ್ವತಃ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ ಡಾ. ಮನಮೋಹನಸಿಂಗ್, ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಬಲ್ಲವರು. ಹಾಗಾಗಿ  ಅವರ ಈ ಮಾತು ನೂರರಷ್ಟು ಸತ್ಯಕೂಡ ಹೌದು.

ಸ್ವಾತಂತ್ರ್ಯ ನಂತರ ಭಾರತದ ಒಡಲೊಳಗೆ ಒಂದು ಗಾಯದ ಹುಣ್ಣಿನಂತೆ ಹುಟ್ಟಿಕೊಂಡು ಕ್ಯಾನ್ಸರ್ ರೋಗದಂತೆ ಎಲ್ಲೆಡೆ ಹಬ್ಬುತ್ತಿರುವ ನಕ್ಸಲ್ ಹಿಂಸಾಚಾರದ ಚಳವಳಿಯ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾದವರೆಂದರೆ, ಈ ದೇಶದ ಜನಪ್ರತಿನಿಧಿಗಳು, ಪೊಲೀಸರು, ಅಧಿಕಾರಿಗಳು, ಮತ್ತು ಜಮೀನುದಾರರು. ಇವರೆಲ್ಲರ ದಿವ್ಯ ನಿರ್ಲಕ್ಷ್ಯ, ಅಮಾನವೀಯತೆಯ ನಡುವಳಿಕೆ, ಹಾಗೂ ಬಡವರು ಮತ್ತು ಕೂಲಿಕಾರ್ಮಿಕರುಗಳ ಬಗ್ಗೆ ಇವರುಗಳು ಹೊಂದಿದ್ದ ತಿರಸ್ಕಾರ ಭಾವನೆಗೆ ಪ್ರತಿಯಾಗಿ ತಲೆ ಎತ್ತಿರುವ ಇವತ್ತಿನ ಹಿಂಸೆಗೆ ನಾವೆಲ್ಲಾ ಮೂಕ ಸಾಕ್ಷಿಯಾಗಬೇಕಿದೆ.

1967 ರ ಮಾರ್ಚ್ ತಿಂಗಳ ಮೂರರಂದು ಪಶ್ಚಿಮ ಬಂಗಾಳದ ಉತ್ತರಭಾಗದ ನಕ್ಸಲ್‍ಬಾರಿ ಎಂಬ ಪುಟ್ಟ ಹಳ್ಳಿಯಲ್ಲಿ ಸ್ಪೋಟಗೊಂಡ ಪ್ರತಿಭಟನೆಯ ಅಗ್ನಿಜ್ವಾಲೆ ಈಗ ನಕ್ಸಲ್ ಚಳವಳಿಯ ಹೆಸರಿನಲ್ಲಿ ಆರದೆ ಇಂದಿಗೂ ಉರಿಯುತ್ತ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಈ ಅಗ್ನಿ ದೀವಿಗೆಯನ್ನು ಹೊತ್ತಿಸಿ ಎತ್ತಿ ಹಿಡಿದವರು ಚಾರು ಮುಜಂದಾರ್ ಮತ್ತು ಕನುಸನ್ಯಾಲ್ ಎಂಬ ಎಡಪಂಥೀಯ ವಿಚಾರೆಧಾರೆಗಳಿಂದ ಪ್ರಭಾವಿತರಾದ ಇಬ್ಬರು ನಾಯಕರು. ಉತ್ತರಕ್ಕೆ ನೇಪಾಳ. ಪೂರ್ವಕ್ಕೆ ಇಂದಿನ ಬಂಗ್ಲಾ ದೇಶಗಳ ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದಿರುವ ನಕ್ಸಲ್‍ಬಾರಿ ಹಳ್ಳಿಯ ಕೃಷಿ ಕೂಲಿಕಾರ್ಮಿಕರಿಂದ ಪ್ರಾರಂಭವಾದ ಪ್ರತಿಭಟನೆ ಒರ್ವ ಪೋಲಿಸ್ ಅಧಿಕಾರಿ ಹಾಗೂ ಹತ್ತು ಮಂದಿ ಚಳವಳಿಗಾರರ ಸಾವಿನೊಂದಿಗೆ (ಇವರಲ್ಲಿ ಆರು ಮಂದಿ ಮಹಿಳೆಯರು) ಹಿಂಸೆಯ ಅಧ್ಯಾಯಕ್ಕೆ ನಾಂದಿ ಹಾಡಿತು. ನಕ್ಸಲ್ ಚಳವಳಿ ಭಾರತದಲ್ಲಿ ದಿಡೀರನೆ ಹುಟ್ಟಿಕೊಂಡ ಹಿಂಸಾತ್ಮಕ ಚಳವಳಿಯಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವಿದೆ.

ಈ ಹಿಂದೆ ನಡೆದ ಭಾರತದ ರೈತರ ಮತ್ತು ಕೃಷಿ ಕೂಲಿಕಾರ್ಮಿಕರ ಪ್ರತಿಭಟನೆಯ ಇತಿಹಾಸ ಇದರ ಬೆನ್ನುಲುಬಾಗಿದೆ. ನಕ್ಸಲ್ ಹೋರಾಟ ಎಂದರೆ, ಹಿಂಸೆಯ ಪ್ರತಿರೂಪ ಎಂಬ ಇಂದಿನ ಉಢಾಪೆ ಮಾತು ಮತ್ತು ಹೇಳಿಕೆಗಳ ನಡುವೆ ಅದರ ಇತಿಹಾಸವನ್ನು ಕೂಲಂಕುಷವಾಗಿ ಮುಕ್ತ ಮನಸ್ಸಿನಿಂದ ಪರಾಮರ್ಶಿಸುವ ಅಗತ್ಯವಿದೆ. ಭಾರತದ ಇದೇ ಪಶ್ಚಿಮ ಬಂಗಾಳದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನೀಲಿ ಬೆಳೆ ಬೆಳೆಯಲು ನಿರಾಕರಿಸಿ ಪ್ರತಿಭಟಿಸಿದ ರೈತರು, ಕೇರಳದಲ್ಲಿ ಮಾಪಿಳ್ಳೆಗಳು ನಡೆಸಿದ ಹೋರಾಟ, ಆಂಧ್ರದ ತೆಲಂಗಾಣದಲ್ಲಿ ಸರ್ಕಾರ ಮತ್ತು ಜಮೀನುದಾರರ ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರ ಪ್ರತಿಭಟನೆ ಇವೆಲ್ಲವೂ ನಕ್ಸಲ್ ಚಳವಳಿಯ ಪೂರ್ವ ಇತಿಹಾಸದ ಭಾಗಗಳೇ ಆಗಿವೆ. ಹಾಗಾಗಿ ನಕ್ಸಲ್ ಚಳವಳಿಯ ಅಧ್ಯಯನಕ್ಕೆ 1919 ರಲ್ಲಿ ಕಾಲಿಟ್ಟ ಕಮ್ಯೂನಿಷ್ಟ್ ವಿಚಾರಧಾರೆಯಿಂದ ಹಿಡಿದು ಇಂದಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಅರಾಜಕತೆಯ ಕೂಲಂಕುಷ ಅಧ್ಯಯನದ ಅವಶ್ಶಕತೆ ಇದೆ.

ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಇಂಗ್ಲಿಷರ ವಸಾಹಿತುಶಾಹಿ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಕ್ರಾಂತಿಯಾದದ್ದು ಪಶ್ಚಿಮ ಬಂಗಾಳದಲ್ಲಿ. ಹಾಗಾಗಿ ದುಡಿಯುವ ವರ್ಗದ ಆರಾಧ್ಯ ದೈವ ಕಾರ್ಲ್ ಮಾರ್ಕ್ಸ್‌ನ ವಿಚಾರಧಾರೆಯ ಬೀಜಗಳು ಇದೇ ನೆಲದಲ್ಲಿ  ಮೊಳಕೆ ಹೊಡೆದವು. ನಕ್ಸಲ್ ಹೋರಾಟದ ಇತಿಹಾಸ ಅರಿಯಲು, ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರ್ಯ ಪೂರ್ವದ ಸುಧಾರಣಾವಾದಿಗಳ ಬದುಕು, ಮತ್ತು ಅವರ ಹೋರಾಟ, ಹಾಗೂ 1919 ರಲ್ಲಿ ತಳವೂರಿ ನಂತರ ಹಲವು ಸಂಘಟನೆಗಳಾಗಿ ವಿಭಜನೆಗೊಂಡ ಕಮ್ಯೂನಿಷ್ಟ್ ಪಕ್ಷದ ಇತಿಹಾಸವನ್ನು ನೋಡಬೇಕಾಗಿದೆ. ಅದೇ ರೀತಿ. ಆಂಧ್ರದಲ್ಲಿ ನಿಜಾಮನ ಆಳ್ವಿಕೆಯ ದೌರ್ಜನ್ಯ, ಅರಾಜಕತೆ, ಸ್ವಾತಂತ್ರ್ಯ ಪೂರ್ವದಲ್ಲಿ ಆಂಧ್ರದಲ್ಲಿ ಸೃಷ್ಟಿಯಾದ “ದೇಸಕೋಸಂ (ದೇಶಕೊಸ್ಕರ)”, “ಈ ದಾರಿ ಎಕ್ಕಡಿಕಿ (ಈ ದಾರಿ ಎಲ್ಲಿಗೆ)”, “ಜ್ವಾಲಾತೋರಣಂ (ಬೆಂಕಿಯ ತೋರಣ)”, “ಕೊಳ್ಳಮುಗಟ್ಟಿತೆ ಏಮಿ (ತುಂಡು ಉಡುಗೆ ಉಟ್ಟರೇನು?)” ಮುಂತಾದ ವೈಚಾರಿಕ ಕಾದಂಬರಿಗಳು, ಮತ್ತು ಈ ಕೃತಿಗಳು ಅಂದಿನ ತಲೆಮಾರಿನ ಯುವಕರ ಮೇಲೆ ಬೀರಿದ ಪ್ರಭಾವ, ಹಾಗೂ ಆಂಧ್ರ ಪ್ರದೇಶದ ಹೊಲೆ ಮಾದಿಗರ ದಾರುಣ ಬದುಕನ್ನು ತೆರೆದಿಡುವ ವೈ.ಬಿ. ಸತ್ಯನಾರಾಣರ “ನನ್ನ ಅಪ್ಪ ಬಲಿಯ” ಎಂಬ ಆತ್ಮ ಕಥನ, ಕೇರಳದ ತಿರುವಾಂಕೂರು ರಾಜನ ತಲೆತಿರುಕುತನದ ಇತಿಹಾಸ ಇವೆಲ್ಲವನ್ನು ನಾವು ಅರಿಯಬೇಕಾಗಿದೆ.

ಭಾರತದ ನಿಜವಾದ ಬಡತನದ ಮುಖವನ್ನು ಕಾಣಬೇಕಾದರೆ, ಫ್ರೆಂಚ್ ಲೇಖಕ ಡಾಮಿನಿಕ್ಯೂ ಲಾಪಿಯರ್ರೆ‍ರವರ “ಸಿಟಿ ಆಫ್ ‍ಜಾಯ್” ಕಾದಂಬರಿ, ಇಲ್ಲಿನ ಆದಿವಾಸಿಗಳ ನೋವಿನ ಜಗತ್ತನ್ನು ಅರಿಯಬೇಕಾದರೆ ಎಸ್.ಕೆ. ಚೌಧುರಿಯವರ “ಇಂಡಿಯನ್ ಟ್ರೈಬ್ಸ್ ಅಂಡ್ ಮೆಯಿನ್‍ಸ್ಟ್ರೀಮ್ ಹಾಗೂ ಟ್ರೈಬಲ್ ಐಡೆಂಟಿಟಿ” ಕೃತಿಗಳನ್ನು ಓದಬೇಕು. ಇವೆಲ್ಲಕ್ಕಿಂತ ಹೆಚ್ಚಾಗಿ ಈ ಭೂಮಿಯ ಬಹುಭಾಗವನ್ನು ಹಲವು ಶತಮಾನಗಳು ಆಕ್ರಮಿಸಿಕೊಂಡು ಆಳಿದ ಬ್ರಿಟಿಷರು ಈ ನೆಲದ ಅನಕ್ಷರಸ್ತ, ಅಮಾಯಕ ಜನರ ಮೇಲೆ ನಡೆಸಿದ ಮಾನಸಿಕ ಹಾಗೂ ಬೌದ್ಧಿಕ ದೌರ್ಜನ್ಯವನ್ನು ತಿಳಿಯಬೇಕಾದರೆ, ಫ್ರಾನ್ಸ್ ಮೂಲದ ವೈದ್ಯ ಪ್ರಾಂಟ್ಜ್ ಪಾನನ್ ಬರೆದ “ದ ವ್ರೆಚ್ಚಡ್ ಆಪ್ ದ ಅರ್ಥ್ (ಭೂಮಿಯ ವಿಕೃತಿ)” ಹಾಗೂ ಎಲ್ಲೆಕೆಬೊಯಿಚ್ಮಿರ್ ಬರೆದ “ಕಲೋನಿಯಲ್ ಅಂಡ್ ಪೋಸ್ಟ್ ಕಲೋನಿಯಲ್ ಲಿಟ್‌ರೇಚರ್” ಕೃತಿಗಳನ್ನು ನಾವು ಅವಲೋಕಿಸಬೇಕಾಗಿದೆ. ಏಕೆಂದರೆ, ಇವತ್ತಿನ ಭಾರತದ ಗರ್ಭಗುಡಿ ಸಂಸ್ಕೃತಿಯಿಂದ ಬಂದ ತಲೆ ಮಾಸಿದ ಕೆಲವರು ನಕ್ಸಲ್ ಚಳವಳಿಯ ಬಗ್ಗೆ ನೀಡುವ ಬೀಸು ಹೇಳಿಕೆಯನ್ನು ಗಮನಿಸಿದಾಗ ಈ ರಕ್ತಸಿಕ್ತ ಹೋರಾಟಕ್ಕೆ ಹಲವು ಮುಖಗಳಿವೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ.

ನಕ್ಸಲ್ ಚಳವಳಿಯನ್ನು ಹುಟ್ಟು ಹಾಕಿದ ಚಾರು ಮುಜಂದಾರ್, ಕನು ಸನ್ಯಾಲ್, ಮತ್ತು ಕೊಂಡಪಲ್ಲಿ ಸೀತರಾಮಯ್ಯ ಇವರುಗಳ ಬದುಕಿನ ಹೋರಾಟ ಮತ್ತು ದಾರುಣ ಅಂತ್ಯ, ನಕ್ಸಲ್ ಹೋರಾಟಕ್ಕೆ ಮನಸೋತು ಆತ್ಮಹತ್ಯೆಯ ದಾರಿ ಹಿಡಿದಿರುವ ಇಂದಿನ ಯುವಕರಿಗೆ ಎಚ್ಚರಿಕೆಯ ಗಂಟೆಯಾಗಬಲ್ಲದು. ನಕ್ಸಲ್ ಹೋರಾಟದ ಪಿತಾಮಹಾರೆಂದು ಗುರುತಿಸಿಕೊಂಡಿವ ಚಾರುಮುಜಂದಾರ್ ಮತ್ತು ಕನುಸನ್ಯಾಲ್ ಇವರ ಬದುಕು ಒಂದು ರೀತಿಯ ದುರಂತ ಕಥನವೆಂದರೆ ತಪ್ಪಾಗಲಾರದು. ಚಾರು ಮುಜಂದಾರ್ ಸಿಲಿಗುರಿಯ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿದವನು. (1918) ಅವನ ತಂದೆ ಬೀರೆಶ್ವರ್ ಮುಜಂದಾರ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಗತಿಪರ ಮನೋಭಾವವುಳ್ಳ ವ್ಯಕ್ತಿಯಾಗಿದ್ದರು.

ಬಾಲ್ಯದಿಂದಲೂ ಬಡವರು ಮತ್ತು ಬಡ ಕೂಲಿಕಾರ್ಮಿಕರ ಬಗ್ಗೆ ಅನುಕಂಪ ಹೊಂದಿದ್ದ ಚಾರುಮುಜಂದಾರ್ ಸಿಲಿಗುರಿಯಲ್ಲಿ ಪ್ರೌಢ ಶಿಕ್ಷಣ ಪಡೆದು ನಂತರ ಈಗ ಬಂಗ್ಲಾದೇಶಕ್ಕೆ ಸೇರಿಹೋಗಿರುವ ಪಾಬ್ನಾ ಪಟ್ಟಣದಲ್ಲಿನ ಎಡ್ವಡ್ ಕಾಲೇಜಿಗೆ ಸೇರ್ಪಡೆಯಾಗಿದ್ದ. ಆದರೆ, ತನ್ನ ಹರೆಯದಲ್ಲೇ ಕಾಲೇಜು ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಚಹಾ ತೋಟದ ಕಾರ್ಮಿಕರ ಬಗ್ಗೆ ದನಿಯೆತ್ತಿದ್ದ. ಕಾರ್ಲ್ ಮಾರ್ಕ್ಸ್ ದುಡಿಯುವ ವರ್ಗದ ಬಗ್ಗೆ ಹೊಂದಿದ್ದ ಕಾಳಜಿಯಿಂದ ಪ್ರೇರಿತನಾದ ಚಾರು ತನ್ನ ಕಣ್ಣ ಮುಂದೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಗಮನಿಸತೊಡಗಿದ. ಡಾರ್ಜಿಲಿಂಗ್ ಸುತ್ತ ಮುತ್ತ ಇದ್ದ ಆಂಗ್ಲರ ಚಹಾ ತೋಟಗಳಲ್ಲಿ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಇದನ್ನು ಸಹಿಸಲಾಗದೆ, ಕಾರ್ಮಿಕರನ್ನು ಸಂಘಟಿಸಿ, ಅವರಿಗೆ ಗೌರಯುತವಾದ ಜೀವನ ಮತ್ತು ಶ್ರಮಕ್ಕೆ ತಕ್ಕಂತೆ ಕೂಲಿ ದೊರಕಿಸಿಕೊಡುವಲ್ಲಿ ಯಶಸ್ವಿಯಾದನು.

ಈ ಒಂದು ಹೋರಾಟದ ಯಶಸ್ವಿನ ನಂತರ ಬಡ ಗೇಣಿದಾರರ ಬವಣೆಯತ್ತ ಗಮನ ಹರಿಸಿದ ಚಾರು ಆ ಪ್ರಾಂತ್ಯದ ಶ್ರೀಮಂತ ಜಮೀನುದಾರರ ವಿರುದ್ಧ ಹೋರಾಟಕ್ಕೆ ಅಣಿಯಾದನು. ಶ್ರೀಮಂತರಿಂದ ಭೂಮಿಯನ್ನು ಗುತ್ತಿಗೆ ಪಡೆದ ಬಡ ರೈತರು ತಾವೇ ಬಿತ್ತನೆ ಬೀಜ, ಗೊಬ್ಬರ ತಂದು ಉತ್ತಿ ಬಿತ್ತಿ ಬೆಳೆ ತೆಗೆದ ನಂತರ ಮಾಲಿಕರಿಗೆ ಮೂರು ಭಾಗದ ಫಸಲು ನೀಡಿ ಉಳಿದ ಕಾಲು ಭಾಗ ಫಸಲನ್ನು ತಾವು ಪಡೆಯುತ್ತಿದ್ದರು. ಇದೊಂದು ರೀತಿಯಲ್ಲಿ ಕೂತು ಉಣ್ಣುವವರು ಬೇರೆ, ದುಡಿಯುವವರು ಬೇರೆ ಎಂಬಂತಾಗಿತ್ತು ಇಂತಹ ಅಸಮಾನತೆಯ ವಿರುದ್ಧ ಬಂಡೆದ್ದ ಚಾರು ಮುಜಂದಾರ್, ದುಡಿಯುವ ರೈತರಿಗೆ ಮೂರು ಭಾಗ ಫಸಲು ಸೇರಬೇಕೆಂದು 1942 ರಿಂದ 1946 ರವರೆಗೆ ನಿರಂತರವಾಗಿ ಪ್ರತಿಭಟಿಸಿ ಹಲವಾರು ಬಾರಿ ಜೈಲು ಸೇರಬೇಕಾಯಿತು. ಇಂತಹ ಒಂದು ಸಂದರ್ಭದಲ್ಲಿ ಚಾರುಗೆ ಕನುಸನ್ಯಾಲ್ ಭೇಟಿಯಾದನು.

ಕನುಸನ್ಯಾಲ್ ಕೂಡ ಸಿಲುಗುರಿ ಸಮೀಪದ ಸೆಪ್ತುಲ್ಲಜ್ಯೂಟ್ ಎಂಬ ಹಳ್ಳಿಯಲ್ಲಿ 1919 ರಲ್ಲಿ ಜನಿಸಿದವನು. ತನ್ನ ಹರೆಯದಲ್ಲಿ ಎಡಪಂಥೀಯ ವಿಚಾರಧಾರೆಗೆ ಒಲಿದು ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತನಾಗಿದ್ದಕೊಂಡು, ಕಾಲೇಜು ಶಿಕ್ಷಣದ ನಂತರ ಸಿಲುಗುರಿಯ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತಿದ್ದವನು. ಒಮ್ಮೆ ಪಶ್ಚಿಮ ಬಂಗಾಳದ ಸರ್ಕಾರ ಕಮ್ಯೂನಿಷ್ಟ್ ಪಕ್ಷವನ್ನು ನಿಷೇಧಿಸಿದಾಗ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಜೈಲು ಸೇರಿದ ಕನುಸನ್ಯಾಲ್, ಜಲುಪಗುರಿಯ ಸೆರೆಮನೆಯಲ್ಲಿ ಚಾರು ಮುಜಂದಾರ್‌ನನ್ನು ಭೇಟಿಯಾಗುವುದರ ಮೂಲಕ ನಕ್ಸಲ್ ಹೋರಾಟದ ಇತಿಹಾಸಕ್ಕೆ ಹೊಸ ಆಯಾಮವೊಂದನ್ನು ಒದಗಿಸಿದ.

(ಮುಂದುವರಿಯುವುದು)