Daily Archives: April 8, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -15)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಆದಿನ ಇಡೀ ರಾತ್ರಿ ನರಭಕ್ಷಕ ಹುಲಿಗಾಗಿ ಕಾದಿದ್ದು ಏನೂ ಪ್ರಯೋಜನವಾಗಲಿಲ್ಲ. ನರಭಕ್ಷಕ ತನ್ನ ಅಡಗುತಾಣವನ್ನು ಬದಲಾಯಿಸಿರಬಹುದು ಎಂಬ ಸಂಶಯ ಕಾರ್ಬೆಟ್‍ಗೆ ಕಾಡತೊಡಗಿತು. ಬೆಳಿಗ್ಗೆ ಸ್ನಾನ ಮಾಡಿದ ಅವನು ಏನಾದರೂ ಸುಳಿವು ಸಿಗಬಹುದೇ ಎಂಬ ನಿರೀಕ್ಷೆಯಿಂದ ನರಭಕ್ಷಕ ದಾಳಿ ಮಾಡಿದ್ದ ಮನೆಯೊಂದಕ್ಕೆ ಭೇಟಿ ನೀಡಿದ. ಕೇವಲ ಒಂದು ವಾರದ ಹಿಂದೆ ಮನೆಯ ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬಳನ್ನು ನರಭಕ್ಷಕ ಹುಲಿ ಕೊಂಡೊಯ್ದಿತ್ತು. ಮನೆಯ ಸುತ್ತಾ ಅದರ ಹೆಜ್ಜೆ ಗುರುತಿಗಾಗಿ ಕಾರ್ಬೆಟ್ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ.

ಜಿಮ್ ಕಾರ್ಬೆಟ್‍ಗೆ ಹುಲಿಗಳ ಹೆಜ್ಜೆ ಗುರುತಿನ ಮೇಲೆ ಅವುಗಳ ವಯಸ್ಸನ್ನು ಅಂದಾಜಿಸಬಲ್ಲ ಶಕ್ತಿಯಿತ್ತು. ಅಷ್ಟೇ ಅಲ್ಲ ಸಾಮಾನ್ಯವಾಗಿ ಹುಲಿಗಳು ನಡೆಯುವಾಗ ಅವುಗಳ ಹಿಂದಿನ ಕಾಲುಗಳ ಹೆಜ್ಜೆ ಗುರುತುಗಳು ನೆಲದ ಮೇಲೆ ಮೂಡತ್ತವೆ ಎಂಬುದನ್ನು ಅವನು ಅರಿತ್ತಿದ್ದ. ಹುಲಿಗಳು ಪ್ರಾಣ ಭಯ ಅಥವಾ ಇನ್ನಿತರೆ ಕಾರಣಗಳಿಂದ ವೇಗವಾಗಿ ಓಡುವಾಗ ಮಾತ್ರ ಅವುಗಳ ಮುಂದಿನ ಕಾಲುಗಳ ಬಲವಾದ ಹೆಜ್ಜೆಯ ಗುರುತು ಮೂಡುತ್ತವೆ ಎಂಬುದು ಅವನ ಶಿಕಾರಿ ಅನುಭವದಲ್ಲಿ ಮನದಟ್ಟಾಗಿತ್ತು.

ಪಾಲಿಹಳ್ಳಿಯಲ್ಲಿ ಎರಡು ಹಗಲು, ಎರಡು ರಾತ್ರಿ ಕಳೆದರೂ ನರಭಕ್ಷಕನ ಸುಳಿವು ಸಿಗದ ಕಾರಣ, ಅದು ತನ್ನ ವಾಸ್ತವ್ಯ ಬದಲಾಯಿಸಿದೆ ಎಂಬ ತೀರ್ಮಾನಕ್ಕೆ ಬಂದ ಕಾರ್ಬೆಟ್ ತನ್ನ ಸೇವಕರೊಡನೆ ನೈನಿತಾಲ್‍ಗೆ ಹಿಂತಿರುಗಲು ಸಿದ್ಧನಾದ. ಆ ದಿನಗಳಲ್ಲಿ ನರಭಕ್ಷಕ ಆ ಪ್ರಾಂತ್ಯದಲ್ಲೇ ಸುಳಿದಾಡುತ್ತಿದ್ದರಿಂದ ಹಗಲಿನ ವೇಳೆಯಲ್ಲಿ ದಾರಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕಾಗಿತ್ತು. ಕಾರ್ಬೆಟ್ ಬೆಟ್ಟ ಗುಡ್ಡ ಹತ್ತಿ, ಇಳಿದು. ನೈನಿತಾಲ್‍ಗೆ ಸಾಗುತ್ತಿದ್ದ ವೇಳೆ ಪಾಲಿಹಳ್ಳಿಯಿಂದ 20 ಕಿಲೋ ಮೀಟರ್ ದೂರದ ಚಂಪಾವತ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ದಿ ಕಾರ್ಬೆಟ್ ತಂಡಕ್ಕೆ ತಲುಪಿತು. ವಿಷಯ ತಿಳಿಯುತ್ತಿದ್ದಂತೆ ಕಾರ್ಬೆಟ್ ನೈನಿತಾಲ್ ಮಾರ್ಗವನ್ನು ತೊರೆದು ಚಂಪಾವತ್ ಹಳ್ಳಿಯತ್ತ ಹೊರಟ.

ಆ ಹಳ್ಳಿಯಲ್ಲಿ ಡಾಕ್ ಬಂಗ್ಲೆ ಎಂದು ಆ ಕಾಲದಲ್ಲಿ ಕರೆಯುತ್ತಿದ್ದ ಪ್ರವಾಸಿ ಮಂದಿರವಿದ್ದುದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರಿಗೆ ವಸತಿ ವ್ಯವಸ್ಥೆಗೆ ಯಾವುದೇ ತೊಂದರೆಯಾಗಲಿಲ್ಲ. ಚಂಪಾವತ್ ಹಳ್ಳಿಯ ಹೊರಭಾಗದಲ್ಲಿದ್ದ ಆ ಪ್ರವಾಸಿ ಮಂದಿರಕ್ಕೆ ಆಗಾಗ್ಗೆ ಸರ್ಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡುತ್ತಿದ್ದರಿಂದ ಅಲ್ಲಿ ಒಬ್ಬ ಸೇವಕನನ್ನು ಸರ್ಕಾರ ನೇಮಕ ಮಾಡಿತ್ತು ಆತ ಅಲ್ಲಿಗೆ ಬರುವ ಅತಿಥಿಗಳ ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದ ಕಾರ್ಬೆಟ್ ಚಹಾ ಕುಡಿದು, ಸ್ನಾನ ಮುಗಿಸುವಷ್ಟರಲ್ಲಿ ಆ ಪ್ರದೇಶದ ತಹಸಿಲ್ದಾರ್  ಅಲ್ಲಿಗೆ ಬಂದು ಕಾರ್ಬೆಟ್‍ನನ್ನು ಪರಿಚಯಿಸಿಕೊಂಡ. ಇಬ್ಬರೂ ಉಪಹಾರ ಸೇವಿಸುತ್ತಾ ನರಭಕ್ಷಕ ಹುಲಿಯ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ ಹಳ್ಳಿಯಿಂದ ಯುವಕನೊಬ್ಬ ಓಡೋಡಿ ಬರುತ್ತಲೇ ಹುಲಿ ಯುವತಿಯೊಬ್ಬಳನ್ನು ಆಹುತಿ ತೆಗೆದುಕೊಂಡು ಕಾಡಿನತ್ತ ಕೊಂಡೊಯ್ದ ಸುದ್ದಿಯನ್ನು ಮುಟ್ಟಿಸಿದ. ತಮ್ಮ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿದ ಇಬ್ಬರೂ ಬಂದೂಕಿನೊಂದಿಗೆ ಹಳ್ಳಿಯತ್ತ ತೆರಳಿದರು.

ಕಾರ್ಬೆಟ್ ಮತ್ತು ತಹಸಿಲ್ದಾರ್ ಚಂಪಾವತ್ ಗ್ರಾಮದ ಮಧ್ಯ ಇದ್ದ ದೇವಸ್ಥಾನದ ಬಳಿ ಬರುವುದರೊಳಗೆ ಹಳ್ಳಿ ಜನರೆಲ್ಲಾ ಆತಂಕ ಮತ್ತು ಭಯದೊಂದಿಗೆ ಗುಂಪುಗೂಡಿ ಚರ್ಚಿಸುತ್ತಾ ನಿಂತಿದ್ದರು. ಅವರಿಂದ ವಿವರಗಳನ್ನು ಪಡೆದ ಕಾರ್ಬೆಟ್, ಜನರೊಂದಿಗೆ ನರಭಕ್ಷಕ ಹುಲಿ ದಾಳಿ ನಡೆಸಿದ ಸ್ಥಳದತ್ತ ತೆರಳಿದ. ಇಲ್ಲಿಯೂ ಕೂಡ ನರಭಕ್ಷಕ ಹುಲಿ ಬಯಲಿನಲ್ಲಿ ಹಲವಾರು ಮಹಿಳೆಯರ ಜೊತೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಎರಗಿ ದಾಳಿ ನಡೆಸಿತ್ತು. ದಾಳಿ ನಡೆದ ಸ್ಥಳದಲ್ಲಿ ರಕ್ತದ ಕೋಡಿ ಹರಿದು ಹೆಪ್ಪುಗಟ್ಟಿದ್ದರಿಂದ, ಹುಲಿ ನೇರವಾಗಿ ಯುವತಿಯ ಕುತ್ತಿಗೆಗೆ ಬಾಯಿ ಹಾಕಿ ಸ್ಥಳದಲ್ಲೇ ಕೊಂದಿದೆ ಎಂದು ಕಾರ್ಬೆಟ್ ಊಹಿಸಿದ.

ಹುಲಿ ಯುವತಿಯನ್ನು ಹೊತ್ತೊಯ್ದ ಜಾಡು ಹಿಡಿದು ಸಾಗಿದಾಗ, ದಾರಿಯುದ್ದಕ್ಕೂ ಯುವತಿಯ ತಲೆ ನೆಲಕ್ಕೆ ತಾಗಿದ ಪರಿಣಾಮ ಆಕೆಯ ತಲೆ ಬುರುಡೆ ಒಡೆದು ಹೋಗಿ, ಅಲ್ಲಲ್ಲಿ ನೆಲದ ಮೇಲೆ, ಗಿಡಗಳ ಮೇಲೆ ರಕ್ತದ ಕಲೆಗಳು ಕಾಣಿಸಿದವು. ನರಭಕ್ಷ ಹುಲಿ ಯುವತಿಯ ಶವವನ್ನು ದಾಳಿ ನಡೆಸಿದ ಸ್ಥಳದಿಂದ ಸುಮಾರು ಒಂದೂವರೆ ಕಿಲೊಮೀಟರ್ ದೂರದ ಕಾಡಿನೊಳಗೆ 300 ಅಡಿಯಷ್ಟು ಆಳವಿದ್ದ ತಗ್ಗಿನ ಪ್ರದೇಶದ ಪೊದೆಗೆ ಕೊಂಡೊಯ್ದಿತ್ತು.

ಜಿಮ್ ಕಾರ್ಬೆಟ್ ತನ್ನೊಂದಿಗೆ ಬಂದಿದ್ದ ಜನರನ್ನು ಅಲ್ಲೇ ತಡೆದು, ತನ್ನ ಮೂವರು ಸೇವಕರ ಜೊತೆ, 300 ಅಡಿ ಆಳದ ಕಣಿವೆಗೆ ಇಳಿಯತೊಡಗಿದ. ದಾಳಿ ಅನಿರೀಕ್ಷಿತವಾಗಿ ನಡೆದಿದ್ದರಿಂದ ಶಿಕಾರಿಗೆ ಅವಶ್ಯವಿದ್ದ ಉಡುಪುಗಳನ್ನಾಗಲಿ, ಬೂಟುಗಳನ್ನಾಗಲಿ ಕಾರ್ಬೆಟ್ ಧರಿಸಿರಲಿಲ್ಲ. ಮಂಡಿಯುದ್ದಕ್ಕೂ ಧರಿಸುತ್ತಿದ್ದ ಕಾಲುಚೀಲ ಮತ್ತು ಕ್ಯಾನವಾಸ್ ಬೂಟುಗಳನ್ನು ಮಾತ್ರ ತೊಟ್ಟಿದ್ದ. ಅವುಗಳಲ್ಲೇ ಅತ್ಯಂತ ಜಾಗರೂಕತೆಯಿಂದ ಹಳ್ಳಕ್ಕೆ ಇಳಿಯತೊಡಗಿದ್ದ.

ಹಳ್ಳದಲ್ಲಿ ಒಂದು ಸರೋವರವಿದ್ದುದರಿಂದ ನರಭಕ್ಷಕ ಯುವತಿಯ ಕಳೇಬರವನ್ನು ಸರೋವರದ ಮಧ್ಯೆ ಮಂಡಿಯುದ್ದದ ನೀರಿನಲ್ಲಿ ಎಳೆದೊಯ್ದು ಆಚೆಗಿನ ಪೊದೆಯಲ್ಲಿ ಬೀಡು ಬಿಟ್ಟಿತ್ತು ಸರೋವರದ ನೀರು ರಕ್ತ ಮತ್ತು ಕೆಸರಿನಿಂದ ರಾಡಿಯಾಗಿತ್ತು, ಕಾರ್ಬೆಟ್ ತನ್ನ ಇಬ್ಬರು ಸೇವಕರನ್ನು ಹತ್ತಿರದಲ್ಲಿ ಇದ್ದ ಕಲ್ಲು ಬಂಡೆಯ ಮೇಲೆ ಕೂರಿಸಿ, ಸರೋವರದ ಬಳಿ ತೆರಳುತ್ತಿದ್ದಂತೆ, ಮನುಷ್ಯ ವಾಸನೆಯನ್ನು ಗ್ರಹಿಸಿದ ನರಭಕ್ಷಕ ಪೊದೆಯಿಂದಲೇ ಘರ್ಜಿಸತೊಡಗಿತು.

ಜಿಮ್ ಕಾರ್ಬೆಟ್ ಕ್ಯಾನ್ವಾಸ್ ಬೂಟುಗಳನ್ನು ಧರಿಸಿದ್ದರಿಂದ ನೀರಿಗೆ ಇಳಿಯಲು ಸಾದ್ಯವಾಗಲಿಲ್ಲ. ಒದ್ದೆಯಾದ ನೆಲದ ಮೇಲೆ ಮೂಡಿದ್ದ ನರಭಕ್ಷಕನ ಹೆಜ್ಜೆಯ ಗುರುತುಗಳನ್ನು ಪರಿಶೀಲಿಸಿ ಇದೊಂದು ವಯಸ್ಸಾದ ಹುಲಿ ಎಂಬ ತೀರ್ಮಾನಕ್ಕೆ ಬಂದ. ಸರೋವರದ ದಕ್ಷಿಣದ ತುದಿಯಲ್ಲಿ ನಿಂತು, ಅತ್ತ, ಇತ್ತ ತಿರುಗಾಡುತ್ತಾ ಆ ಬದಿಯಲ್ಲಿದ್ದ ನರಭಕ್ಷಕನ್ನು ಪ್ರಚೋದಿಸಲು ಪ್ರಯತ್ನಿಸಿದ. ಪೊದೆಯಿಂದ ಹೊರಬಂದು ಮುಖಮುಖಿಯಾದರೆ, ಗುಂಡಿಟ್ಟು ಕೊಲ್ಲಲು ಕಾರ್ಬೆಟ್ ಹವಣಿಸಿದ್ದ. ಆದರೆ, ನಿರಂತರ ನಾಲ್ಕು ಗಂಟೆಗಳು ಕಾರ್ಬೆಟ್ ಪ್ರಯತ್ನ ಪಟ್ಟರೂ, ಪೊದೆಯಿಂದ ನರಭಕ್ಷಕ ಹುಲಿಯ ಘರ್ಜನೆ ಸದ್ದು ಮಾತ್ರ ಹೊರಬರುತ್ತಿತ್ತು.

ಕೊನೆಗೆ ಕಾರ್ಬೆಟ್‍ನ ಧೈರ್ಯಕ್ಕೆ ಹೆದರಿದಂತೆ ಕಂಡ ನರಭಕ್ಷಕ ಯುವತಿಯ ಕಳೇಬರವನ್ನು ಅಲ್ಲೇ ಬಿಟ್ಟು ಕಣಿವೆಯ ಮೇಲ್ಭಾಗಕ್ಕೆ ಚಲಿಸತೊಡಗಿತು. ಅದು ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬುದು ಗಿಡಗೆಂಟೆಗಳ ಅಲುಗಾಡುವಿಕೆಯಿಂದ ತಿಳಿದು ಬರುತಿತ್ತು. ಅಂತಿಮವಾಗಿ ಕಣಿವೆಯಿಂದ ಮೇಲಕ್ಕೆ ಬಂದ ನರಭಕ್ಷಕ ಸಣ್ಣ ಸಣ್ಣ ಬಂಡೆಗಳು ಮತ್ತು ಕುರಚಲು ಗಿಡ ಮತ್ತು ಹುಲ್ಲುಗಾವಲು ಇದ್ದ ಬಯಲಿನಲ್ಲಿ ಅಡಗಿಕೊಂಡಿತು. ಅದನ್ನು ಅಲ್ಲಿಯೆ ಬಿಟ್ಟು ಸಂಗಡಿಗರೊಂದಿಗೆ ವಾಪಸ್ ಹಳ್ಳಿಗೆ ಬಂದ ಕಾರ್ಬೆಟ್ ಹೊಸ ಯೋಜನೆಯೊಂದನ್ನು ರೂಪಿಸಿದ.

ಸಾಮಾನ್ಯವಾಗಿ ಹುಲಿಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಒಂದು ಸ್ಥಳದಲ್ಲಿರಿಸಿಕೊಂಡು ಎರಡು ಅಥವಾ ಮೂರು ದಿನ ಆಹಾರವಾಗಿ ಬಳಸುವುದನ್ನು ಅರಿತಿದ್ದ ಜಿಮ್ ಕಾರ್ಬೆಟ್ ನರಭಕ್ಷಕ ಹುಲಿ ಯುವತಿಯ ಕಳೇಬರವನ್ನು ತಿಂದು ಮುಗಿಸದೇ ಬೇರೆ ದಾಳಿಗೆ ಇಳಿಯುವುದಿಲ್ಲ ಎಂದು ಅಂದಾಜಿಸಿದ. ಮಾರನೇ ದಿನ ಹಳ್ಳಿಯ ಜನರ ಜೊತೆಗೂಡಿ ಅದನ್ನು ಬಯಲು ಪ್ರದೇಶದಿಂದ ಮತ್ತೇ ಕಣಿವೆಗೆ ಇಳಿಯುವಂತೆ ಮಾಡುವುದು, ಕಣಿವೆಯ ದಾರಿಯಲ್ಲಿ ಅಡಗಿ ಕುಳಿತು ನರಭಕ್ಷಕ ಹುಲಿಯನ್ನು ಕೊಲ್ಲುವುದು ಎಂಬ ತನ್ನ ಯೋಜನೆಯನ್ನು ತಹಸಿಲ್ದಾರ್ ಮುಂದಿಟ್ಟ, ಕೂಡಲೆ ಒಪ್ಪಿಗೆ ಸೂಚಿಸಿದ ತಹಸಿಲ್ದಾರ್ ಮರುದಿನ, ನಡು ಮಧ್ಯಾಹ್ನದ ಹೊತ್ತಿಗೆ 298 ಗ್ರಾಮಸ್ತರನ್ನು ಹುಲಿ ಬೆದರಿಸುವುದಕ್ಕಾಗಿ ಸಜ್ಜುಗೊಳಿಸಿದ.

ಮಚ್ಚು, ಕೊಡಲಿ, ದೊಣ್ಣೆ ಹಾಗೂ ತಮ್ಮ ತಮ್ಮ ಮನೆಗಳಲ್ಲಿ ಇದ್ದ ನಾಡ ಬಂದೂಕಗಳೊಂದಿಗೆ ಹಾಜರಾದ ಹಳ್ಳಿಯ ಜನರನ್ನು ಕರೆದುಕೊಂಡು ಬಯಲು ಪ್ರದೇಶಕ್ಕೆ ಬಂದ ಕಾರ್ಬೆಟ್, ನರಭಕ್ಷಕ ಅಡಗಿದ್ದ ಬಯಲು ಪ್ರದೇಶದಲ್ಲಿ ಕಣಿವೆಗೆ ತೆರಳಲು ಇದ್ದ ಮಾರ್ಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಎಲ್ಲರನ್ನು ಇಂಗ್ಲಿಷ್ ಯು ಅಕ್ಷರದ ಆಕಾರದಲ್ಲಿ ನಿಲ್ಲಿಸಿ, ನಾನು ಸೂಚನೆ ನೀಡಿದಾಗ ಜೋರಾಗಿ ಗದ್ದಲವೆಬ್ಬಿಸಿ, ಗಾಳಿಯಲ್ಲಿ ಗುಂಡು ಹಾರಿಸುತ್ತಾ ಕಣಿವೆಯ ದಾರಿಯತ್ತಾ ಬರಬೇಕೆಂದು ಸೂಚಿಸಿದ. ಬಯಲು ಪ್ರದೇಶದ ಕಾಡಿನಂಚಿನಿಂದ ಕಣಿವೆಗೆ ಇಳಿಯುವ ದಾರಿಯಲಿ ತಗ್ಗಿನ ಪ್ರದೇಶದಲ್ಲಿ ಕಾರ್ಬೆಟ್ ಅಡಗಿ ಕುಳಿತ. ಅಲ್ಲದೇ . ತಾನು ಕುಳಿತ ಸ್ಥಳದಿಂದ 100 ಅಡಿ ಎತ್ತರದ ಬಲಭಾಗದಲ್ಲಿ ತಹಸಿಲ್ದಾರ್  ಕೈಗೆ ಪಿಸ್ತೂಲ್ ಕೊಟ್ಟು ಬಂಡೆಯೊಂದರ ಮೇಲೆ ಹುಲಿ ಬರುವ ಬಗ್ಗೆ ಸುಳಿವು ಕೊಡುವ ಉದ್ದೇಶದಿಂದ ಅವನನ್ನು ಕೂರಿಸಿದ.

ಕಾರ್ಬೆಟ್ ಸೂಚನೆ ನೀಡಿದ ಕೂಡಲೆ ಗ್ರಾಮಸ್ಥರು ಕೇಕೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ, ಗಾಳಿಯಲ್ಲಿ ಗುಂಡು ಹಾರಿಸುತ್ತ ಜೋರಾಗಿ ಗದ್ದಲವೆಬ್ಬೆಸಿ ಬರತೊಡಗಿದರು. ಕಾರ್ಬೆಟ್‍ನ ನಿರೀಕ್ಷೆ ಸುಳ್ಳಾಗಲಿಲ್ಲ. ಬಯಲು ಪ್ರದೇಶದ ಹುಲ್ಲಿನೊಳಗೆ ಅಡಗಿ ಕುಳಿತಿದ್ದ ನರಭಕ್ಷಕ ಜನರ ಸದ್ದಿನ ಭಯದಿಂದ ಕಣಿವೆಗೆ ಇಳಿಯಲು ವೇಗವಾಗಿ ಧಾವಿಸುತ್ತಿತ್ತು. ಎರಡರಿಂದ ಮೂರು ಅಡಿ ಎತ್ತರಕ್ಕೆ ಹುಲ್ಲು ಬೆಳದಿದ್ದರಿಂದ ಕಾರ್ಬೆಟ್ ಕಣ್ಣಿಗೆ ಹುಲಿ ಕಾಣುತ್ತಿರಲಿಲ್ಲ. ಅದರೆ, ಹುಲ್ಲಿನ ಬಾಗುವಿಕೆಯಿಂದ ನರಭಕ್ಷಕ ಯಾವ ದಿಕ್ಕಿನಲಿ, ಬರುತ್ತಿದೆ ಎಂಬುದು ಕಾರ್ಬೆಟ್‍ಗೆ ಗೋಚರವಾಗುತ್ತಿತ್ತು. ತಾನು ಕುಳಿತ ಸ್ಥಳಕ್ಕೆ 50 ಅಡಿ ಹತ್ತಿರಕ್ಕೆ ಬರುತಿದ್ದಂತೆ ಕಾರ್ಬೆಟ್ ಹುಲ್ಲು ಅಲುಗಾಡುವಿಕೆಯನ್ನು ಗುರಿಯಾಗಿರಿಸಿಕೊಂಡು ಎರಡು ಗುಂಡು ಹಾರಿಸಿದ. ಆ ಕ್ಷಣಕ್ಕೆ ಅವುಗಳು ನರಭಕ್ಷಕನಿಗೆ ತಾಗಿದ ಬಗ್ಗೆ ಯಾವ ಸೂಚನೆ ಕಾಣಲಿಲ್ಲ. ಸ್ವಲ್ಪ ಹೊತ್ತು ಎಲ್ಲೆಡೆ ಮೌನ ಆವರಿಸಿತು. ನರಭಕ್ಷಕ ಗದ್ದಲವೆಬ್ಬಿಸುತ್ತಿರುವ ಗ್ರಾಮಸ್ತರ ಮೇಲೆ ಎರಗಲು ವಾಪಸ್ ಬಯಲಿನತ್ತ ತೆರಳುತ್ತಿರಬೇಕು ಎಂದು ಕಾರ್ಬೆಟ್ ಊಹಿಸಿದ್ದ.

ಆದರೆ, ಅದು ಅವನ ಸನಿಹಕ್ಕೆ ಕೇವಲ 30ನ ಅಡಿ ಹತ್ತಿರಕ್ಕೆ ಬಂದು ಒಮ್ಮೆ ಹುಲ್ಲಿನಿಂದ ತಲೆಯನ್ನು ಹೊರಚಾಚಿ ಕಾರ್ಬೆಟ್‍ನನ್ನು ನೋಡಿ ಗರ್ಜಿಸಿತು. ಕಾರ್ಬೆಟ್‍ಗೆ ಅಷ್ಟು ಸಾಕಾಗಿತ್ತು ಅವನು ಸಿಡಿಸಿದ ಮೂರನೇ ಗುಂಡು ನೇರವಾಗಿ ನರಭಕ್ಷನ ಎದೆಯ ಬಲಭಾಗಕ್ಕೆ ತಗುಲಿತು. ಆದರೂ ಕಾರ್ಬೆಟ್‍ಗೆ  ನಂಬಿಕೆ ಬಾರದೆ, ತಹಸಿಲ್ದಾರ್ ಬಳಿ ಓಡಿ ಹೋಗಿ ಅವನ ಬಳಿ ಇದ್ದ ಪಿಸ್ತೂಲ್ ಅನ್ನು ಕಸಿದು ತಂದು ಅದರಿಂದ ನರಭಕ್ಷಕ ಕಾಣಿಸಿಕೊಂಡ ಜಾಗದತ್ತ ಗುಂಡಿನ ಮಳೆಗರೆದ. ಸುಮಾರು ಒಂದು ಗಂಟೆಯವರೆಗೂ ನರಭಕ್ಷಕ ಹುಲಿಯ ನರಳುವಿಕೆಯಾಗಲಿ, ಘರ್ಜನೆಯಾಗಲಿ, ಕೇಳಬರದಿದ್ದರಿಂದ ಅತ್ಯಂತ ಜಾಗರೂಕತೆಯಿಂದ ತನ್ನ ಸಹಚರರ ಜೊತೆ ನಿಧಾನವಾಗಿ ಗುಂಡು ಹಾರಿಸಿದ ಸ್ಥಳಕ್ಕೆ ಬಂದ ಕಾರ್ಬೆಟ್ ನೋಡಿದ ದೃಶ್ಯ, ಸ್ವತಃ ಅವನಿಗೇ ಅಚ್ಚರಿ ಮೂಡಿಸಿತು. ಏಕೆಂದರೆ, ನೇಪಾಳದಲ್ಲಿ 200  ಹಾಗೂ ಭಾರತದಲ್ಲಿ 206 ಮಂದಿಯನ್ನು ಬಲಿತೆಗೆದುಕೊಂಡಿದ್ದ ವಯಸ್ಸಾದ ನರಭಕ್ಷಕ ಹೆಣ್ಣು ಹುಲಿ ಅಲ್ಲಿ ತಣ್ಣಗೆ ನೆಲಕ್ಕೊರಗಿ ಮಲಗಿತ್ತು.

    ( ಮುಂದುವರಿಯುವುದು)