Daily Archives: April 9, 2012

ಭೀಮಾತೀರದಲ್ಲಿ ಕಂಡ ಕನ್ನಡ ಪತ್ರಿಕೋದ್ಯಮ


– ಪರಶುರಾಮ ಕಲಾಲ್


 

ಭೀಮಾತೀರದಲ್ಲಿ.. ಸಿನಿಮಾ ಈಗ ವಿವಾದದ ವಸ್ತುವಾಗಿದೆ. ನಾನು ಬರೆದ ’ಭೀಮಾ ತೀರದ ಹಂತಕರು’ ಪುಸ್ತಕವನ್ನು ನೋಡಿಯೇ ಈ ಸಿನಿಮಾ ತೆಗೆದಿದ್ದಾರೆ ಎಂದು ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಾದ ಮಾಡಿ, ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ. ಚಿತ್ರನಟ ವಿಜಯ್, ಟಿವಿ9 ಸ್ಟುಡಿಯೋದಲ್ಲಿ ರವಿ ಬೆಳಗೆರೆಯನ್ನು ಕುಳ್ಳರಿಸಿಕೊಂಡೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ ಫೋನ್‌ನಲ್ಲಿಯೇ ರವಿ ಬೆಳಗೆರೆ ಭಾಷೆಯಲ್ಲಿ ಹೇಳುವುದಾದರೆ ಕಂಡಂ ಮಾಡಿ ಹಾಕಿದ್ದಾನೆ. ಸುವರ್ಣ ಚಾನಲ್‌ನಲ್ಲಿ ಪ್ರತಾಪ ಸಿಂಹ ರವಿ ಬೆಳಗೆರೆಯ ಜನ್ಮ ಜಾಲಾಡಿ, ನನ್ನ ಎದುರು ಬಂದು ರವಿ ಬೆಳಗೆರೆ ತನ್ನ ವಿದ್ವತ್ ಪ್ರದರ್ಶಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಎಲ್ಲಾ ಪ್ರಹಸನ ನೋಡಿದ ಮೇಲೆ ಒಂದಿಷ್ಟು ಈ ಬಗ್ಗೆ ಚರ್ಚಿಸಬೇಕು ಎಂದು ಈ ಲೇಖನ ಬರೆಯುತ್ತಿರುವೆ.

ಚಂದಪ್ಪ ಹರಿಜನ ಎನ್ನುವನನ್ನು ಜಗತ್ತಿಗೆ ಪರಿಚಯಿಸಿದವನು ನಾನೇ ಎಂದು ರವಿ ಬೆಳಗೆರೆ ಎದೆತಟ್ಟಿಕೊಂಡು ಹೇಳಿದ್ದಾರೆ. ಎದೆಗೆ ಕಿವಿಗೊಟ್ಟು ಅವರು ಕೇಳಿಕೊಳ್ಳಲಿ ಚಂದಪ್ಪ ಹರಿಜನ ಸಾವಿಗೆ ನಾನೂ ಕಾರಣ ಎಂಬ ಸತ್ಯ ಗೊತ್ತಾಗುತ್ತದೆ.

ಸಾಮಾನ್ಯನಾದ ವ್ಯಕ್ತಿಯೊಬ್ಬ ಸಾಮಾಜಿಕ ಕಾರಣಕ್ಕೂ, ಧ್ವೇಷದ ಕಾರಣಕ್ಕೂ ಅಪರಾಧಿಯಾಗಿ ಬದಲಾವಣೆಯಾದಾಗ ಆತನನ್ನು ಆ ದಾರಿಯಿಂದ ಹೊರ ತಂದು ಹೊಸ ದಾರಿ ತೋರಿಸಬೇಕಾಗಿದ್ದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಅದರ ಬದಲು ಆ ವ್ಯಕ್ತಿಯ ಅಪರಾಧವನ್ನು ವೈಭವಿಕರಿಸಿ, ಆತನನ್ನು ಹೀರೋ ಮಾಡುವ ಮೂಲಕ ಆತನಿಗೆ ಮತ್ತೊಂದು ಭ್ರಮೆಯನ್ನು ಉಣಬಡಿಸುವ ಮೂಲಕ ಆತ ಎನ್‌ಕೌಂಟರ್‌ನಲ್ಲೂ ವೀರನಂತೆ ಹೋರಾಡಲು ಹೋಗಿ ಸಾವನಪ್ಪಿಬಿಡುತ್ತಾನೆ. ಒಂದು ಪತ್ರಿಕೆಯ ಪ್ರಸರಣ ಏರಿಸಲು ಆತನನ್ನು ಹೀರೋ ಮಾಡಿ ಬಳಸಿಕೊಳ್ಳುವ ವಿಧಾನ ಇದೆಯಲ್ಲಾ ಇದು ಅತ್ಯಂತ ಹೇಯವಾದುದ್ದು.

ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಸೋಮ ಎಂಬ ಬಡಕಲು ಪುಡಿ ರೌಡಿಯೊಬ್ಬನಿಗೆ ಡೆಡ್ಲಿ ಸೋಮ ಎಂದು ಕರೆದು, ವರ್ಣಿಸಿ, ವೈಭವೀಕರಿಸಿದ್ದಕ್ಕೆ ಆ ಸೋಮು ಪೊಲೀಸರಿಗೆ ಶರಣಾಗದೇ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಗುಂಡಿಗೆ ಬಲಿಯಾಗಿ ಬಿಟ್ಟ.

ಯಾವುದೋ ಕಮರ್ಷಿಯಲ್ ಚಿತ್ರದ ಬಗ್ಗೆ ಅದರ ಸತ್ಯಾಸತ್ಯತೆಯ ಬಗ್ಗೆ ದಿನಗಟ್ಟಲೇ ಚರ್ಚೆ ಮಾಡುವುದೇ ಮೂಲಭೂತವಾಗಿ ಸರಿಯಾದುದ್ದಲ್ಲ. ಅದು ಪರವಾಗಿ ಇರಲಿ, ವಿರುದ್ಧವಾಗಿಯಾದರೂ ಇರಲಿ. ಅದು ದೊಡ್ಡ ಪಾಂಡಿತ್ಯದ ಚರ್ಚೆಯ ವಿಷಯವೇ? ತಮ್ಮ ತಮ್ಮ ವಿದ್ವತ್ ಎಂದು ಭಾವಿಸಿರುವ ಪೊಲೀಸ್ ರಿಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯ ಇತ್ತೇ?  ಇದು ಸ್ವಪ್ರತಿಷ್ಠೆಗಳ ನಡುವೆ ನಡೆಯುತ್ತಿರುವ ಕದನವಲ್ಲದೇ ಬೇರೇನೋ ಅಲ್ಲ.

ದರ್ಶನ್, ವಿಜಯ್ ಏನೇ ಎಳಸು ಇದ್ದರೂ ಚರ್ಚೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳ ಬಗ್ಗೆ ಎತ್ತಿರುವ ಕೆಲವು ಪ್ರಶ್ನೆಗಳು ಗಂಭೀರ ಪ್ರಶ್ನೆಗಳೇ ಆಗಿವೆ. ಖಾಸಗಿ ಬದುಕಿನ ಘಟನೆಗಳನ್ನು ವರ್ಣರಂಜಿತವಾಗಿ ಬರೆದು, ಅದೇ ಇವತ್ತಿನ ಪ್ರಸ್ತುತ ಸಮಸ್ಯೆ ಎಂದು ಬಿಂಬಿಸುವುದು ಎಷ್ಟು ಸರಿ ಎನ್ನುವ ಅವರ ಮಾತು ಸುದ್ದಿಯನ್ನು ಮಾರಿಕೊಂಡೇ ಜೀವಿಸುವವರು ಕೇಳಿಕೊಳ್ಳಬೇಕಾದ ಮಾತೇ ಆಗಿತ್ತು.

ರಾಜ್ಯದಲ್ಲಿ ಬರಗಾಲ ತೀವ್ರ ರೀತಿಯಲ್ಲಿ ಕಾಡುತ್ತಿದೆ. ಜಾನುವಾರುಗಳಿಗೆ ಮೇವು ಇಲ್ಲ. ಹಳ್ಳಿಗಳ ಜನ ಗುಳೇ ಎದ್ದು ನಗರಗಳಿಗೆ ಹೋಗುತ್ತಿದ್ದಾರೆ. ಬಿಸಿಲು ತೀವ್ರವಾಗಿ ಹೆಚ್ಚಾಗಿದ್ದು, ಕರ್ನಾಟಕದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅನೇಕ ಕಡೆ ಕುಡಿಯುವ ನೀರು ಫ್ಲೊರೆಸೆಸ್‌ನಿಂದ  ಕೂಡಿದೆ. ಈಗ ಆ ನೀರು ಕೂಡಾ ಕುಡಿಯಲು ಸಿಗುತ್ತಿಲ್ಲ. ಜನ ಸಂಕಷ್ಟಗಳನ್ನೇ ಹೊದ್ದುಕೊಂಡು ಜೀವ ಹಿಡಿದು ಬದುಕುತ್ತಿದ್ದಾರೆ. ಇವರ ಬದುಕಿಗೆ ಉತ್ತರದಾಯಿತ್ವವಾಗಬೇಕಾದವರೂ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಒಣ ಪಾಂಡಿತ್ಯದ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಹಕ್ಕುದಾರಿಕೆಯ ಬಗ್ಗೆ, ತಮ್ಮ ಪ್ರತಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ರಾಜಕಾರಣಿಗಳಿಗೂ ಏನು ವ್ಯತ್ಯಾಸವಿದೆ?

ಕನ್ನಡದ ಯಾವ ದಿನ ಪತ್ರಿಕೆಯೂ ಬರಗಾಲದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರಣಿ ವರದಿ ಮಾಡುವ ಹೊಣೆಗಾರಿಕೆಯನ್ನು ಮರೆತು ಬಿಟ್ಟವಾ…? ಪ್ರಜಾವಾಣಿಯಾದರೂ ಈ ಕೆಲಸ ಮಾಡೀತು ಎಂದು ಕೊಂಡಿದ್ದರೆ ಅದು ಹುಸಿಯಾಗಿ ಹೋಗಿದೆ. ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಕಾಲ ಇದಾಗಿದೆಯೆ?

ವಿಜಯ ಸಂಕೇಶ್ವರ ಸಾರಥ್ಯದಲ್ಲಿ ವಿಜಯವಾಣಿ ಎಂಬ ದಿನ ಪತ್ರಿಕೆಯು ಕಾಲಿಟ್ಟಿದೆ. ವಾರ ಪತ್ರಿಕೆಗಳ ಶೈಲಿಯು ದಿನ ಪತ್ರಿಕೆಗೆ ಬಂದು ಬಿಟ್ಟಿತಾ ಅನ್ನುವ ರೀತಿ ಸಾರಥ್ಯ ಬಂದು ಕೂತಿದೆ. ಇನ್ನೂ ಸಾರಥಿಗಳೇ ಎಲಾ, ಭಲರೇ ಎಲೈ ಸಾರಥಿ ನಾವುದಾರು ಎಂದರೆ ಎಂದು ಫರಾಕು ಹೇಳುವ ತಮ್ಮ ಕೀರ್ತಿ, ಅಭಿದಾನ, ಜಾತಿ, ಧರ್ಮ ಎಲ್ಲವನ್ನೂ ಪ್ರದರ್ಶಿಸಿ ಫಲಕ ಹಿಡಿದು ನಿಂತು ಕೊಳ್ಳುವ ಕಾಲಕ್ಕೆ ಬಂದು ನಿಂತಿದೆ ನಮ್ಮ ಕನ್ನಡದ ಪತ್ರಿಕೋದ್ಯಮ.

ಪ್ರಜಾವಾಣಿ, ಕನ್ನಡಪ್ರಭವನ್ನು ಕಟ್ಟಿ ಅದಕ್ಕೊಂದು ಘನತೆ, ಗಾಂಭಿರ್ಯ ತಂದಿರುವ ಮಹನೀಯರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರು ಬೇಜಾರು ಪಟ್ಟುಕೊಳ್ಳುವ ಸಂಭವವಿಲ್ಲ. ನಡೆಯಲಿ ಕರುನಾಟಕ ಪಾವನವಾಗಲಿ ಎಂದೇ ಹೇಳುವುದು ಬಿಟ್ಟು ಬೇರೇನೋ ತೋಚುತ್ತಿಲ್ಲ.

(ಚಿತ್ರಕೃಪೆ: ಚಿತ್ರಲೋಕ.ಕಾಮ್)