ಭೀಮಾತೀರದಲ್ಲಿ ಕಂಡ ಕನ್ನಡ ಪತ್ರಿಕೋದ್ಯಮ


– ಪರಶುರಾಮ ಕಲಾಲ್


 

ಭೀಮಾತೀರದಲ್ಲಿ.. ಸಿನಿಮಾ ಈಗ ವಿವಾದದ ವಸ್ತುವಾಗಿದೆ. ನಾನು ಬರೆದ ’ಭೀಮಾ ತೀರದ ಹಂತಕರು’ ಪುಸ್ತಕವನ್ನು ನೋಡಿಯೇ ಈ ಸಿನಿಮಾ ತೆಗೆದಿದ್ದಾರೆ ಎಂದು ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಾದ ಮಾಡಿ, ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ. ಚಿತ್ರನಟ ವಿಜಯ್, ಟಿವಿ9 ಸ್ಟುಡಿಯೋದಲ್ಲಿ ರವಿ ಬೆಳಗೆರೆಯನ್ನು ಕುಳ್ಳರಿಸಿಕೊಂಡೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ ಫೋನ್‌ನಲ್ಲಿಯೇ ರವಿ ಬೆಳಗೆರೆ ಭಾಷೆಯಲ್ಲಿ ಹೇಳುವುದಾದರೆ ಕಂಡಂ ಮಾಡಿ ಹಾಕಿದ್ದಾನೆ. ಸುವರ್ಣ ಚಾನಲ್‌ನಲ್ಲಿ ಪ್ರತಾಪ ಸಿಂಹ ರವಿ ಬೆಳಗೆರೆಯ ಜನ್ಮ ಜಾಲಾಡಿ, ನನ್ನ ಎದುರು ಬಂದು ರವಿ ಬೆಳಗೆರೆ ತನ್ನ ವಿದ್ವತ್ ಪ್ರದರ್ಶಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಎಲ್ಲಾ ಪ್ರಹಸನ ನೋಡಿದ ಮೇಲೆ ಒಂದಿಷ್ಟು ಈ ಬಗ್ಗೆ ಚರ್ಚಿಸಬೇಕು ಎಂದು ಈ ಲೇಖನ ಬರೆಯುತ್ತಿರುವೆ.

ಚಂದಪ್ಪ ಹರಿಜನ ಎನ್ನುವನನ್ನು ಜಗತ್ತಿಗೆ ಪರಿಚಯಿಸಿದವನು ನಾನೇ ಎಂದು ರವಿ ಬೆಳಗೆರೆ ಎದೆತಟ್ಟಿಕೊಂಡು ಹೇಳಿದ್ದಾರೆ. ಎದೆಗೆ ಕಿವಿಗೊಟ್ಟು ಅವರು ಕೇಳಿಕೊಳ್ಳಲಿ ಚಂದಪ್ಪ ಹರಿಜನ ಸಾವಿಗೆ ನಾನೂ ಕಾರಣ ಎಂಬ ಸತ್ಯ ಗೊತ್ತಾಗುತ್ತದೆ.

ಸಾಮಾನ್ಯನಾದ ವ್ಯಕ್ತಿಯೊಬ್ಬ ಸಾಮಾಜಿಕ ಕಾರಣಕ್ಕೂ, ಧ್ವೇಷದ ಕಾರಣಕ್ಕೂ ಅಪರಾಧಿಯಾಗಿ ಬದಲಾವಣೆಯಾದಾಗ ಆತನನ್ನು ಆ ದಾರಿಯಿಂದ ಹೊರ ತಂದು ಹೊಸ ದಾರಿ ತೋರಿಸಬೇಕಾಗಿದ್ದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಅದರ ಬದಲು ಆ ವ್ಯಕ್ತಿಯ ಅಪರಾಧವನ್ನು ವೈಭವಿಕರಿಸಿ, ಆತನನ್ನು ಹೀರೋ ಮಾಡುವ ಮೂಲಕ ಆತನಿಗೆ ಮತ್ತೊಂದು ಭ್ರಮೆಯನ್ನು ಉಣಬಡಿಸುವ ಮೂಲಕ ಆತ ಎನ್‌ಕೌಂಟರ್‌ನಲ್ಲೂ ವೀರನಂತೆ ಹೋರಾಡಲು ಹೋಗಿ ಸಾವನಪ್ಪಿಬಿಡುತ್ತಾನೆ. ಒಂದು ಪತ್ರಿಕೆಯ ಪ್ರಸರಣ ಏರಿಸಲು ಆತನನ್ನು ಹೀರೋ ಮಾಡಿ ಬಳಸಿಕೊಳ್ಳುವ ವಿಧಾನ ಇದೆಯಲ್ಲಾ ಇದು ಅತ್ಯಂತ ಹೇಯವಾದುದ್ದು.

ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ಸೋಮ ಎಂಬ ಬಡಕಲು ಪುಡಿ ರೌಡಿಯೊಬ್ಬನಿಗೆ ಡೆಡ್ಲಿ ಸೋಮ ಎಂದು ಕರೆದು, ವರ್ಣಿಸಿ, ವೈಭವೀಕರಿಸಿದ್ದಕ್ಕೆ ಆ ಸೋಮು ಪೊಲೀಸರಿಗೆ ಶರಣಾಗದೇ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ಗುಂಡಿಗೆ ಬಲಿಯಾಗಿ ಬಿಟ್ಟ.

ಯಾವುದೋ ಕಮರ್ಷಿಯಲ್ ಚಿತ್ರದ ಬಗ್ಗೆ ಅದರ ಸತ್ಯಾಸತ್ಯತೆಯ ಬಗ್ಗೆ ದಿನಗಟ್ಟಲೇ ಚರ್ಚೆ ಮಾಡುವುದೇ ಮೂಲಭೂತವಾಗಿ ಸರಿಯಾದುದ್ದಲ್ಲ. ಅದು ಪರವಾಗಿ ಇರಲಿ, ವಿರುದ್ಧವಾಗಿಯಾದರೂ ಇರಲಿ. ಅದು ದೊಡ್ಡ ಪಾಂಡಿತ್ಯದ ಚರ್ಚೆಯ ವಿಷಯವೇ? ತಮ್ಮ ತಮ್ಮ ವಿದ್ವತ್ ಎಂದು ಭಾವಿಸಿರುವ ಪೊಲೀಸ್ ರಿಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯ ಇತ್ತೇ?  ಇದು ಸ್ವಪ್ರತಿಷ್ಠೆಗಳ ನಡುವೆ ನಡೆಯುತ್ತಿರುವ ಕದನವಲ್ಲದೇ ಬೇರೇನೋ ಅಲ್ಲ.

ದರ್ಶನ್, ವಿಜಯ್ ಏನೇ ಎಳಸು ಇದ್ದರೂ ಚರ್ಚೆಯ ಸಂದರ್ಭದಲ್ಲಿ ಅವರು ಮಾಧ್ಯಮಗಳ ಬಗ್ಗೆ ಎತ್ತಿರುವ ಕೆಲವು ಪ್ರಶ್ನೆಗಳು ಗಂಭೀರ ಪ್ರಶ್ನೆಗಳೇ ಆಗಿವೆ. ಖಾಸಗಿ ಬದುಕಿನ ಘಟನೆಗಳನ್ನು ವರ್ಣರಂಜಿತವಾಗಿ ಬರೆದು, ಅದೇ ಇವತ್ತಿನ ಪ್ರಸ್ತುತ ಸಮಸ್ಯೆ ಎಂದು ಬಿಂಬಿಸುವುದು ಎಷ್ಟು ಸರಿ ಎನ್ನುವ ಅವರ ಮಾತು ಸುದ್ದಿಯನ್ನು ಮಾರಿಕೊಂಡೇ ಜೀವಿಸುವವರು ಕೇಳಿಕೊಳ್ಳಬೇಕಾದ ಮಾತೇ ಆಗಿತ್ತು.

ರಾಜ್ಯದಲ್ಲಿ ಬರಗಾಲ ತೀವ್ರ ರೀತಿಯಲ್ಲಿ ಕಾಡುತ್ತಿದೆ. ಜಾನುವಾರುಗಳಿಗೆ ಮೇವು ಇಲ್ಲ. ಹಳ್ಳಿಗಳ ಜನ ಗುಳೇ ಎದ್ದು ನಗರಗಳಿಗೆ ಹೋಗುತ್ತಿದ್ದಾರೆ. ಬಿಸಿಲು ತೀವ್ರವಾಗಿ ಹೆಚ್ಚಾಗಿದ್ದು, ಕರ್ನಾಟಕದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅನೇಕ ಕಡೆ ಕುಡಿಯುವ ನೀರು ಫ್ಲೊರೆಸೆಸ್‌ನಿಂದ  ಕೂಡಿದೆ. ಈಗ ಆ ನೀರು ಕೂಡಾ ಕುಡಿಯಲು ಸಿಗುತ್ತಿಲ್ಲ. ಜನ ಸಂಕಷ್ಟಗಳನ್ನೇ ಹೊದ್ದುಕೊಂಡು ಜೀವ ಹಿಡಿದು ಬದುಕುತ್ತಿದ್ದಾರೆ. ಇವರ ಬದುಕಿಗೆ ಉತ್ತರದಾಯಿತ್ವವಾಗಬೇಕಾದವರೂ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಒಣ ಪಾಂಡಿತ್ಯದ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಹಕ್ಕುದಾರಿಕೆಯ ಬಗ್ಗೆ, ತಮ್ಮ ಪ್ರತಿಷ್ಠೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಅವರಿಗೂ ನಮ್ಮ ರಾಜಕಾರಣಿಗಳಿಗೂ ಏನು ವ್ಯತ್ಯಾಸವಿದೆ?

ಕನ್ನಡದ ಯಾವ ದಿನ ಪತ್ರಿಕೆಯೂ ಬರಗಾಲದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರಣಿ ವರದಿ ಮಾಡುವ ಹೊಣೆಗಾರಿಕೆಯನ್ನು ಮರೆತು ಬಿಟ್ಟವಾ…? ಪ್ರಜಾವಾಣಿಯಾದರೂ ಈ ಕೆಲಸ ಮಾಡೀತು ಎಂದು ಕೊಂಡಿದ್ದರೆ ಅದು ಹುಸಿಯಾಗಿ ಹೋಗಿದೆ. ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಕಾಲ ಇದಾಗಿದೆಯೆ?

ವಿಜಯ ಸಂಕೇಶ್ವರ ಸಾರಥ್ಯದಲ್ಲಿ ವಿಜಯವಾಣಿ ಎಂಬ ದಿನ ಪತ್ರಿಕೆಯು ಕಾಲಿಟ್ಟಿದೆ. ವಾರ ಪತ್ರಿಕೆಗಳ ಶೈಲಿಯು ದಿನ ಪತ್ರಿಕೆಗೆ ಬಂದು ಬಿಟ್ಟಿತಾ ಅನ್ನುವ ರೀತಿ ಸಾರಥ್ಯ ಬಂದು ಕೂತಿದೆ. ಇನ್ನೂ ಸಾರಥಿಗಳೇ ಎಲಾ, ಭಲರೇ ಎಲೈ ಸಾರಥಿ ನಾವುದಾರು ಎಂದರೆ ಎಂದು ಫರಾಕು ಹೇಳುವ ತಮ್ಮ ಕೀರ್ತಿ, ಅಭಿದಾನ, ಜಾತಿ, ಧರ್ಮ ಎಲ್ಲವನ್ನೂ ಪ್ರದರ್ಶಿಸಿ ಫಲಕ ಹಿಡಿದು ನಿಂತು ಕೊಳ್ಳುವ ಕಾಲಕ್ಕೆ ಬಂದು ನಿಂತಿದೆ ನಮ್ಮ ಕನ್ನಡದ ಪತ್ರಿಕೋದ್ಯಮ.

ಪ್ರಜಾವಾಣಿ, ಕನ್ನಡಪ್ರಭವನ್ನು ಕಟ್ಟಿ ಅದಕ್ಕೊಂದು ಘನತೆ, ಗಾಂಭಿರ್ಯ ತಂದಿರುವ ಮಹನೀಯರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರು ಬೇಜಾರು ಪಟ್ಟುಕೊಳ್ಳುವ ಸಂಭವವಿಲ್ಲ. ನಡೆಯಲಿ ಕರುನಾಟಕ ಪಾವನವಾಗಲಿ ಎಂದೇ ಹೇಳುವುದು ಬಿಟ್ಟು ಬೇರೇನೋ ತೋಚುತ್ತಿಲ್ಲ.

(ಚಿತ್ರಕೃಪೆ: ಚಿತ್ರಲೋಕ.ಕಾಮ್)

10 thoughts on “ಭೀಮಾತೀರದಲ್ಲಿ ಕಂಡ ಕನ್ನಡ ಪತ್ರಿಕೋದ್ಯಮ

 1. n.sujatha

  ಚನ್ನಾಗಿ ಬರೆದ್ದಿದಿರ ಸರ್ ಪ್ರತಿಯೊಬ್ಬರು ಅವರವರ ಜಗಳದ್ಲ್ಲೇ ತೊಡಗಿದ್ದಾರೆ ಜನರಿಗೆ ಪರಿಹಾರ ಸಿಗುದೆಲ್ಲಿ ಹೇಳಿ. ನೀವೆಲ್ಲರೂ ಹೀಗೆ ಬೇರೆಯವರ ಸ್ವಂತ ವಿಚಾರಗಳನ್ನ ಎತ್ತಿ ತೋರಿಸುತ್ತಿರಿ… ಇದನ್ನು ಮೊದಲು ಬಿಡಿ ನಮ್ಮ ಮಾದ್ಯಮದ ಗೆಳೆಯರು ಹೀಗೆ ಒಂದು ವಿಷಯ ಸಿಕ್ಕರೆ ಅದನ್ನ ರಬ್ಬರ್ ತರ ಎಳೆದು ನ್ಯೂಸ್ ನೋಡಲು ನಮಗೆ ಮನಸ್ಸೇ ಬರುವುದಿಲ್ಲ ಸರ್ ಇದರ ಕಡೆ ನಿಮಗೆಲ್ಲ ಗಮನವಿರಲಿ…..

  Reply
 2. ಶ್ರೀವತ್ಸ ಜೋಶಿ

  ಈ ಲೇಖನ ನನಗೆ ಬಹಳ ಇಷ್ಟವಾಯಿತು.

  ಪರಶುರಾಮ್ ಕಲಾಲ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

  Reply
 3. Ananda Prasad

  ರೌಡಿಗಳ ಜೀವನ ಚರಿತ್ರೆ ಬರೆದು ಅದನ್ನು ಮಾರಾಟದ ಸರಕಾಗಿಸಿ ಹಣ ಮಾಡುವ ಬದಲು ಸಮಾಜಕ್ಕೆ, ಮಾನವ ಜನಾಂಗಕ್ಕೆ ಮಹತ್ತರ ಕೊಡುಗೆ ನೀಡಿದ ವಿಜ್ಞಾನಿಗಳು, ಚಿಂತಕರು, ಮೇಧಾವಿಗಳು, ಮುತ್ಸದ್ಧಿ ನಾಯಕರು, ಸಾಹಿತಿಗಳು ಮೊದಲಾದವರ ಜೀವನ ಚರಿತ್ರೆ ಬರೆದರೆ ಅದು ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲದು. ಭೀಮಾ ತೀರದ ಹಂತಕರು ಎಂಬ ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಚರ್ಚಿಸಲು ಅದು ಇಡೀ ರಾಜ್ಯದ ಜನರ ಸಮಸ್ಯೆಯೇನೂ ಅಲ್ಲ. ರಾಜ್ಯದ ಸಮಸ್ಯೆಗಳು ರಾಶಿ ಬಿದ್ದಿರುವಾಗ ಅದೆಲ್ಲವನ್ನೂ ಬಿಟ್ಟು ನಮ್ಮ ಟಿವಿ ವಾಹಿನಿಗಳು ಇಂಥ ನಿಷ್ಪ್ರಯೋಜಕ ವಿಷಯಗಳ ಬಗ್ಗೆ ಚರ್ಚಿಸುವುದು “ರೋಮಿಗೆ ಬೆಂಕಿ ಬಿದ್ದಿರುವಾಗ ನೀರೋ ಪಿಟೀಲು ಬಾರಿಸಿದಂತೆ” ಆಗುತ್ತದೆ.

  Reply
 4. ದೊಡ್ಡಿ ಮೂರ್ತಿ

  ಒಂದು ಬಹುಮುಖ್ಯವಾದ ಚರ್ಚನೀಯ ವಿಷಯ. ಈ ವಿಷಯವನ್ನು ಚರ್ಚೆಗೆ ತಂದ ತಮಗೆ ಅಭಿನಂದನೆಗಳು.

  Reply
 5. n.sujatha

  ರಾಜ್ಯದ ಸಮಸ್ಯೆಗಳು ರಾಶಿ ಬಿದ್ದಿರುವಾಗ ಅದೆಲ್ಲವನ್ನೂ ಬಿಟ್ಟು ನಮ್ಮ ಟಿವಿ ವಾಹಿನಿಗಳು ಇಂಥ ನಿಷ್ಪ್ರಯೋಜಕ ವಿಷಯಗಳ ಬಗ್ಗೆ ಚರ್ಚಿಸುವುದು …ಯಂಥ ವಿಪರ್ಯಾಸ ಅಲ್ಲವೇ…….ನನ್ನ ಈ ಕವನವನ್ನ ಓದಿ…..

  ಭೀಮಾತೀರ

  ಭೀಮ ತೀರದ ಅಂಗಳದಲ್ಲಿ,
  ಸತ್ತ ಶವಗಳೆಷ್ಟು?
  ಪ್ರೇತಗಳ ನರ್ತನ ಇಂದಿಗೂ.

  ಈ ಪ್ರೇತಗಳಿಗೆ ಬಣ್ಣ ಬಳಿದು,
  ಮಾಧ್ಯಮಗಳಲ್ಲಿ ನರ್ತನ,

  ಸತ್ತು ಸಮಾಧಿಯಾದವರು,
  ಬಿಸಿಲಲ್ಲಿ ಬೆಂದು ನರಳುವವರು,
  ಇವರು ಈಗ ಸರಕು,
  ವ್ಯಾಪಾರವೇ ನಡೆದಿದೆ,
  ಬದುಕಿದ ಜನರ ಕೈಯಲ್ಲಿ,
  ಮುರುಕು ಬಟ್ಟಲು ಈಗಲೂ ನಗುತಿದೆ….

  ಅವರ ಹೃದಯದ ಗಾಯಕೆ ಮುಲಾಮು,
  ಅವರ ಕಣ್ಣಂಚಿನಲ್ಲಿ ಮಿಂಚು,
  ಪ್ರೀತಿಯ ತಾರಮಂಡಲವಿದೆ ಇಲ್ಲಿ,
  ಹೇಳಬೇಕಾದವರು,
  ಹಕ್ಕು, ಪ್ರತಿಷ್ಠೆಗಳ ಪೈಪೋಟಿಯಲ್ಲಿ,
  ಭೀಮತೀರವೇ,
  ಹರಿಯುತ್ತಾ ಇದ್ದಿಯಾ ಇನ್ನೂ,
  ಇದನ್ನೆಲ್ಲಾ ನೋಡುತಾ…

  ಎನ್. ಸುಜಾತ

  Reply
 6. ಬಸವರಾಜು

  ಲೇಖನ ತುಂಬಾ ಚೆನ್ನಾಗಿದೆ ಸರ್​. ಸುದ್ದಿಯ ಸರಕನ್ನೇ ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಮಂದಿ ವಿಜಯ್‌ ದರ್ಶನ್​ರ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಯಾವುದೇ ಮಾಧ್ಯಮಗಳು ಬರ, ನೀರಿನ ಸಮಸ್ಯೆ ಬಗ್ಗೆ ಮಾತಾಡುತ್ತಿಲ್ಲ ಅಂದಿದ್ದೀರಿ. ಟಿವಿ9, ಸುವರ್ಣ ಬೆಳಗೆರೆ ಮತ್ತು ಭೀಮತೀರದ ವಿವಾದವನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದಾಗ ಜನಶ್ರೀ `ಬರ` ಕಾರ್ಯಕ್ರಮದಲ್ಲಿ ಭೀಮತೀರದಲ್ಲಿನ ನೀರಿನ ಬವಣೆಯ ಬಗ್ಗೆ ಪ್ರಸಾರ ಮಾಡುತಿತ್ತು.

  Reply
 7. prasad raxidi

  ಅಂತರ್ಜಾಲ ಮಾದ್ಯಮವೊಂದು ಜನರ ಕೈಯಲ್ಲಿರುವದರಿಂದ ಸುದ್ದಿಖೋರರಿಗೆ ಒಂದಿಷ್ಟಾದರೂ ಕಡಿವಾಣ ಹಾಕಲು ಸಾದ್ಯವಾಗಿದೆ. ಇಲ್ಲವಾದಲ್ಲಿ ಇವರನ್ನು ಕೇಳುವವರೇ ಇಲ್ಲದಂತಾಗುತ್ತಿತ್ತು. ವಿಜಯ್ ಮತ್ತು ದರ್ಶನ ಅವರು ಎತ್ತಿರುವ ಪ್ರಶ್ನೆಗಳು ಗಂಭೀರವಾದುದುದು ಸರಿ ಆದರೆ ಖಾಸಗಿ ಬದುಕಿನ ಹೆಸರಿನಲ್ಲಿ ಖಾಸಗಿ ದುಷ್ಟತನವನ್ನು ಮುಚ್ಚಿ ಹಾಕುವಂತಾಗಬಾರದು ಅಷ್ಟೆ..

  Reply
 8. shylesh.....tv artist

  ravi belageri tavu hay bengalur tanda sandarbadalli vishyavatike ……mataDisharu…..night club…skill game intha cheep gimmic galannu madidu yaRIGU GOTHILLAVE …DAYAVIITU VAYASIGE TAKKA PRBUDATTE BELISIKOLLALI

  Reply

Leave a Reply

Your email address will not be published.