ಸರ್ವಾಧಿಕಾರಿ ಧೋರಣೆಯ ಸರ್ಕಾರ

-ಆನಂದ ಪ್ರಸಾದ್

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂವಿಧಾನಬದ್ಧ ಆಡಳಿತದಲ್ಲಿ ನಂಬಿಕೆ ಇರುವಂತೆ ಕಾಣುವುದಿಲ್ಲ. ಲೋಕಾಯುಕ್ತರ ನೇಮಕ ಮಾಡದೆ ಹುದ್ದೆಯನ್ನು ಖಾಲಿ ಬಿಡಲಾಗಿದೆ. ಎರಡನೇ ಉಪಲೋಕಾಯುಕ್ತರಾಗಿ ನೇಮಕವಾದ ಚಂದ್ರಶೇಖರಯ್ಯ ಅವರ ನೇಮಕವನ್ನು ರಾಜ್ಯ ಹೈಕೋರ್ಟ್ ಅಸಿಂಧುಗೊಳಿಸಿದೆ. ತನ್ನ ಮೂಗಿನ ನೇರಕ್ಕೆ ಲೋಕಾಯುಕ್ತ ಕಾಯ್ದೆಯನ್ನು ಅನ್ವಯಿಸಿಕೊಂಡು ತನಗೆ ಬೇಕಾದವರನ್ನು ಲೋಕಾಯುಕ್ತ, ಉಪ ಲೋಕಾಯುಕ್ತರಾಗಿ ನೇಮಕ ಮಾಡುವ ಸರ್ಕಾರದ ಕ್ರಮ ಸಂವಿಧಾನ ವಿರೋಧಿಯಾಗಿದೆ ಹಾಗೂ ಸರ್ವಾಧಿಕಾರಿ ಧೋರಣೆಯ ಕ್ರಮವಾಗಿದೆ.

ಆಳುವ ಪಕ್ಷದವರಿಗೆ ಮಾತ್ರ ಒಪ್ಪಿಗೆಯಾಗುವ ಲೋಕಾಯುಕ್ತರ ನೇಮಕ ಮಾಡಿದರೆ ಆಡಳಿತ ಪಕ್ಷದ ಹಲವರು ಆರೋಪಿ ಸ್ಥಾನದಲ್ಲಿ ಲೋಕಾಯುಕ್ತರ ಮುಂದೆ ನಿಂತಿರುವಾಗ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುತ್ತದೆ ಎಂದು ಯಾರಾದರೂ ನಂಬಲು ಸಾಧ್ಯವೇ?. ತಾವು ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ನಡೆಸುತ್ತಿದ್ದೇವೆ ಎಂಬ ವಿಷಯ ಆಡಳಿತ ಪಕ್ಷದವರಿಗೆ ಇರುವಂತೆ ಕಾಣುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಜೊತೆ ಸಮಾಲೋಚಿಸದೆ ಉಪಲೋಕಾಯುಕ್ತರ ನೇಮಕ ಮಾಡಲಾಗಿದೆ ಎಂದು ಹೇಳಿದಾಗಲೇ ಉಪಲೋಕಾಯುಕ್ತರಾಗಿ ನೇಮಕಗೊಂಡ ಚಂದ್ರಶೇಖರಯ್ಯನವರು ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಅವರು ಒಬ್ಬ ಅಧಿಕಾರದಾಹೀ ರಾಜಕಾರಣಿಯಂತೆ ತಮ್ಮ ಸ್ಥಾನಕ್ಕೆ ಅಂಟಿ ಕುಳಿತದ್ದು ನ್ಯಾಯಾಧೀಶರಾಗಿ ಕೆಲಸ ಮಾಡಬೇಕಾದವರ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ. ನ್ಯಾಯಾಧೀಶರು ರಾಜಕಾರಣಿಗಳಂತೆ ವರ್ತಿಸಿದರೆ ದೇಶವನ್ನು ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಯಾರು ರಕ್ಷಿಸಬೇಕು?.

ಉಪಲೋಕಾಯುಕ್ತರ ನೇಮಕವನ್ನು ಅಸಿಂಧುಗೊಳಿಸಿದ ರಾಜ್ಯ ಹೈಕೋರ್ಟಿನ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಸಮಂಜಸವಾಗಿಲ್ಲ. ಹೀಗಾಗಿ ಈಗ ಸುಪ್ರೀಂಕೋರ್ಟು ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕದಲ್ಲಿ ಅನುಸರಿಸಬೇಕಾದ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ತೀರ್ಪು ನೀಡಬೇಕಾಗಿರುವುದು ದೇಶದ ಹಿತದೃಷ್ಟಿಯಿಂದ ಅಗತ್ಯ. ಇಲ್ಲದೆ ಹೋದರೆ ಆಡಳಿತ ಪಕ್ಷದವರು ತಮಗೆ ಅನುಕೂಲಕರವೆನಿಸುವ ವ್ಯಕ್ತಿಗಳನ್ನು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರಾಗಿ ನೇಮಿಸುವ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸುವುದರಲ್ಲಿ ಅನುಮಾನವಿಲ್ಲ.

ಹೀಗಾಗಿ ಈ ದೇಶದ ಬಗ್ಗೆ ಕಾಳಜಿ ಇರುವ ಹಿರಿಯ ವಕೀಲರು ಈ ವಿಚಾರವಾಗಿ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲು ಮುಂದಾಗುವುದು ಅಗತ್ಯ ಹಾಗೂ ಈ ವಿಚಾರವಾಗಿ ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಬೇಕಾದ ಅಗತ್ಯ ಇದೆ. ಲೋಕಾಯುಕ್ತ ಹಾಗೂ ಉಪಲೋಕಾಯುಕ್ತ ಹುದ್ದೆಗಳನ್ನು ನಿರ್ದಿಷ್ಟ ಅವಧಿಯ ಒಳಗೆ ತುಂಬಲೇಬೇಕು ಎಂಬ ನಿರ್ಬಂಧವನ್ನು ವಿಧಿಸಬೇಕಾದ ಅಗತ್ಯ ಇದೆ. ಹೀಗೆ ಮಾಡಿದರೆ ಅನಿರ್ದಿಷ್ಟ ಅವಧಿಗೆ ಈ ಹುದ್ದೆಗಳನ್ನು ಖಾಲಿ ಬಿಡುವ ನಿಲುವನ್ನು ತಪ್ಪಿಸಬಹುದು.

ರಾಜ್ಯ ಸರ್ಕಾರವು ಪೊಲೀಸ್ ಮಹಾನಿರ್ದೇಶಕರ ನೇಮಕದಲ್ಲೂ ತನಗೆ ಸಂವಿಧಾನಬದ್ಧ ಆಡಳಿತದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಶಂಕರ ಬಿದರಿ ನೇಮಕ ಮಾಡಿ ತೋರಿಸಿದೆ. ಈ ವಿಚಾರದಲ್ಲೂ ಹೈಕೋರ್ಟ್ ಛೀಮಾರಿ ಹಾಕಿದೆ. ಆದರೂ ಅದರಿಂದ ಪಾಠ ಕಲಿಯದೇ ಈ ವಿಚಾರದಲ್ಲೂ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದೆ. ತಾನು ಮಾಡಿದ್ದೇ ಸರಿ ಮತ್ತು ತಾನು ಏನು ಮಾಡಿದರೂ ನಡೆಯಬೇಕು ಎಂಬ ಇಂಥ ಧೋರಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ತಳೆಯುವುದಿಲ್ಲ. ಇಂಥ ಧೋರಣೆ ರಾಜಪ್ರಭುತ್ವಕ್ಕೆ ಮಾತ್ರ ಹೊಂದುತ್ತದೆ. ರಾಜಪ್ರಭುತ್ವದಲ್ಲಿ ಸಂವಿಧಾನ ಎಂಬುದು ಇರುವುದಿಲ್ಲ ಮತ್ತು ನ್ಯಾಯಾಂಗ ಎಂಬುದೂ ಇರುವುದಿಲ್ಲ. ರಾಜನೇ ಅಲ್ಲಿ ನ್ಯಾಯಾಧೀಶನ ಕೆಲಸ ಮಾಡುತ್ತಾನೆ. ಬಿಜೆಪಿ ಸರ್ಕಾರ ರಾಜಪ್ರಭುತ್ವದ ಗುಂಗಿನಲ್ಲೇ ಇದೆ. ಹೀಗಾಗಿ ಅದಕ್ಕೆ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ವಿಷಯದಲ್ಲೂ ಮೇಲ್ಮನವಿ ಮಾಡಲು ಹೋಗುತ್ತಿದೆ. ಮೇಲ್ನೋಟಕ್ಕೆ ಯಾವುದು ನ್ಯಾಯ ಎಂಬುದು ಸಾಮಾನ್ಯ ಜನರಿಗೂ ಕಂಡು ಬರುವ ವಿಷಯದಲ್ಲಿ ಮೇಲ್ಮನವಿ ಸಲ್ಲಿಸಲು ಹೋಗುವುದು ವಿವೇಕವಲ್ಲ.

ತುಂಬಾ ದೀರ್ಘಕಾಲ ಲೋಕಾಯುಕ್ತ ಹುದ್ದೆಯನ್ನು ಖಾಲಿ ಬಿಟ್ಟಿದ್ದರೂ ರಾಜ್ಯದ ಮುಖ್ಯ ವಾಹಿನಿಯ ಮಾಧ್ಯಮಗಳು ಈ ಬಗ್ಗೆ ಚಕಾರ ಎತ್ತುತ್ತಾ ಇಲ್ಲ. ಹೀಗಾದರೆ ಮಾಧ್ಯಮಗಳು ಇರುವುದು ಏಕೆ ಎಂಬ ಪ್ರಶ್ನೆ ಏಳುವುದಿಲ್ಲವೇ? ಎಲ್ಲ ಮಾಧ್ಯಮಗಳೂ ಸೇರಿ ಈ ವಿಷಯದಲ್ಲಿ ಸರ್ಕಾರದ ಮೇಲೆ ನಿರಂತರ ಒತ್ತಡ ನಿರ್ಮಿಸಿದ್ದರೆ ಯಾವಾಗಲೋ ಲೋಕಾಯುಕ್ತರ ನೇಮಕ ಆಗುತ್ತಿತ್ತು. ರಾಜ್ಯದ ಮಾಧ್ಯಮಗಳು ಆಳುವ ಪಕ್ಷದ ಬಗ್ಗೆ ಮೃದು ಧೋರಣೆ ತಳೆಯಲು ಕಾರಣ ಏನು ಎಂಬ ಬಗ್ಗೆ ಜನ ಆಲೋಚಿಸಬೇಕಾದ ಅಗತ್ಯ ಇದೆ.

Leave a Reply

Your email address will not be published. Required fields are marked *