ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-2)


– ಡಾ.ಎನ್.ಜಗದೀಶ್ ಕೊಪ್ಪ


ಕಮ್ಯೂನಿಷ್ಟ್ ವಿಚಾರಧಾರೆಯಲ್ಲಿ ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡಿದ್ದ ಚಾರು ಮುಜಂದಾರ್, ಕನು ಸನ್ಯಾಲ್ ಗೆಳೆಯರಾದ ಮೇಲೆ ಕೃಷಿ ಕೂಲಿಕಾರ್ಮಿಕರ ಹೋರಾಟಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು. ಹತ್ತಾರು ವರ್ಷ ಕೇವಲ ಪ್ರತಿಭಟನೆ ಮತ್ತು ಪೊಲೀಸರ ಬಂಧನದಿಂದ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಮನಗಂಡ ಈ ಇಬ್ಬರು ಗೆಳೆಯರು ನೇರಕಾರ್ಯಾಚರಣೆ (Direct Action) ನಡೆಸಲು ತೀರ್ಮಾನಿಸಿದರು. ಚಾರು ಪ್ರತಿಭಟನೆ ಮತ್ತು ಹೋರಾಟಗಳಿಗೆ ಯೋಜನೆ ರೂಪಿಸುವಲ್ಲಿ ಪರಿಣಿತನಾದರೆ, ಕನುಸನ್ಯಾಲ್  ಸಂಘಟನೆಗೆ ಜನರನ್ನು ಒಗ್ಗೂಡಿಸುವ ವಿಷಯದಲ್ಲಿ ಅದ್ಭುತ ಕ್ರಿಯಾಶೀಲ ವ್ಯಕ್ತಿಯಾಗಿದ್ದ. ಹಾಗಾಗಿ ಈ ಎರಡು ಪ್ರತಿಭೆಗಳ ಸಂಗಮ ಕೃಷಿಕರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿತು.  ಮೂಲಭೂತವಾಗಿ ಈ ಹೋರಾಟ ಹಿಂಸೆಯನ್ನು ಒಳಗೊಳ್ಳುವ ಆಲೋಚನೆಯಿಂದ ಕೂಡಿರಲಿಲ್ಲ. ಆದರೆ, ನಕ್ಸಲ್‍ಬಾರಿ ಹಳ್ಳಿಯ ಪ್ರಥಮ ಪ್ರತಿಭಟನೆ ಒಂದು ಕೆಟ್ಟ ಗಳಿಗೆಯಲ್ಲಿ ಅನಿರೀಕ್ಷಿತವಾಗಿ ತೆಗೆದುಕೊಂಡ ತಿರುವಿನಿಂದಾಗಿ ಇವರೆಲ್ಲರನ್ನು ಹಿಂಸೆಯ ಹಾದಿಯಲ್ಲಿ ಶಾಶ್ವತವಾಗಿ ನಡೆಯುವಂತೆ ಮಾಡಿದ್ದು ಭಾರತದ ಸಾಮಾಜಿಕ ಹೋರಾಟಗಳ ದುರಂತದ ಅಧ್ಯಾಯಗಳಲ್ಲಿ ಒಂದು.

1967 ರ ಮಾರ್ಚ್ ಮೂರರಂದು, ಲಪ, ಸಂಗು, ರೈತ ಎಂಬ ಮೂವರು ಸಣ್ಣ ಹಿಡುವಳಿದಾರರು ನೂರೈವತ್ತುಕ್ಕೂ ಹೆಚ್ಚು ಮಂದಿ ಇದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದಿಂದ ನಕ್ಸಲ್‍ಬಾರಿಯ ಜಮೀನುದಾರನ ಮನೆಗೆ ಬಿಲ್ಲು, ಬಾಣ, ಭರ್ಜಿ ಮುಂತಾದ ಆಯುಧಗಳೊಂದಿಗೆ ದಾಳಿ ಇಟ್ಟು ಮುನ್ನೂರು ಭತ್ತದ ಚೀಲಗಳನ್ನು ಹೊತ್ತೊಯ್ದು ಎಲ್ಲರೂ ಸಮನಾಗಿ ಹಂಚಿಕೊಂಡರು. ಈ ಸಣ್ಣ ಘಟನೆ ಕಮ್ಯೂನಿಷ್ಟ್ ಚಳವಳಿಗೆ ಭಾರತದಲ್ಲಿ ಪ್ರಥಮಬಾರಿಗೆ ಹೊಸ ಆಯಾಮ ನೀಡಿತು.

ನಕ್ಸಲ್‍ಬಾರಿ ಹಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆ ಕಮ್ಯೂನಿಷ್ಟ್ ಪಕ್ಷಕ್ಕೆ ವಿನೂತನವಾಗಿ ಕಂಡರೂ ಇದಕ್ಕೂ ಮೊದಲು ಪಕ್ಷದ ಕಾರ್ಯಕರ್ತರು  ರೈತರ ಪರವಾಗಿ ಧ್ವನಿಯೆತ್ತಿದ್ದರು. ಪಶ್ಚಿಮ ಬಂಗಾಳದ ದಿನಜಪುರ್ ಮತ್ತು ರಂಗ್ಪುರ್ ಜಿಲ್ಲೆಗಳಲ್ಲಿ ಜಮೀನುದಾರರು ಗೇಣಿದಾರರಿಗೆ ಬೇಳೆಯುವ ಫಸಲಿನಲ್ಲಿ ಅರ್ಧದಷ್ಟು ಪಾಲು ಕೊಡಬೇಕೆಂದು ಒತ್ತಾಯಿಸಿ ನಡೆಸಿದ ಹೋರಾಟ, ಬಂಗಾಳದ ಉತ್ತರ ಭಾಗದಿಂದ ದಕ್ಷಿಣದ 24 ಪರಗಣ ಜಿಲ್ಲೆಯವರೆಗೆ ಹಬ್ಬಿತ್ತು. ಇದಕ್ಕಾಗಿ ಕಮ್ಯೂನಿಷ್ಟ್ ಪಕ್ಷದಲ್ಲಿ ಕಿಸಾನ್‍ಸಭಾ ಎಂಬ ಘಟಕವನ್ನು ರಚಿಸಿಕೊಂಡು ಕಾರ್ಯಕರ್ತರು 1946 ರಿಂದ ಸತತ ಹೋರಾಟ ನಡೆಸುತ್ತಾ ಬಂದಿದ್ದರು.

ನೆರೆಯ ಆಂಧ್ರ ಪ್ರದೇಶದಲ್ಲಿಯೂ ಕೂಡ ತೆಲಂಗಾಣ ಪ್ರಾಂತ್ಯದಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ನಿಜಾಮನ ಶೋಷಣೆಯ ವಿರುದ್ಧ ಸ್ಥಳೀಯ ರೈತರು ದಂಗೆಯೆದ್ದರು. ನಿಜಾಮನ ಆಳ್ವಿಕೆ ಹಾಗೂ ಅವನ ಆಡಳಿತದ ಅರಾಜಕತೆಯಿಂದ ಬೇಸತ್ತ ಅಲ್ಲಿನ ಜನತೆ 1946 ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಕಾಡ್ಗಿಚ್ಚು ಆ ಪ್ರಾಂತ್ಯದ ಮೂರು ಸಾವಿರ ಹಳ್ಳಿಗಳಿಗೆ ಹರಡಿ ಪ್ರತಿಯೊಂದು ಹಳ್ಳಿಯೂ ಸ್ವಯಂ ಸ್ವತಂತ್ರ ಘಟಕದಂತೆ ನಡೆಯಲು ಪ್ರಾರಂಭಿಸಿದವು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಸ್ವಾತಂತ್ರ್ಯಾನಂತರದ ಭಾರತದ ಸೇನೆ ಆಂಧ್ರಪ್ರದೇಶಕ್ಕೆ ಧಾವಿಸಿ ಬಂದು, ಹೈದರಾಬಾದ್ ಪ್ರಾಂತ್ಯವನ್ನು ನಿಜಾಮನಿಂದ ಕಿತ್ತುಕೊಳ್ಳುವವರೆಗೂ ನಾಲ್ಕುಸಾವಿರ ಮಂದಿ ರೈತರು ನಿಜಾಮನ ದಬ್ಬಾಳಿಕೆಯಲ್ಲಿ ಹೋರಾಟದ ಹೆಸರಿನಲ್ಲಿ ಮೃತಪಟ್ಟಿದ್ದರು. (ಹೈದರಾಬಾದ್ ನಿಜಾಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕನಂತರ ಹೈದರಾಬಾದ್ ಅನ್ನು ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದನು).

ಕಮ್ಯೂನಿಷ್ಟ್ ಪಕ್ಷದ ಅಂಗವಾದ ಕಿಸಾನ್‍ಸಭಾ ಘಟಕದ ಹೋರಾಟಕ್ಕೆ ನಿಜವಾದ ಹೊಸ ಆಯಾಮ ತಂದುಕೊಟ್ಟವರು ನಕ್ಸಲ್‍ಬಾರಿ ಗ್ರಾಮದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು. ಇವರಿಗೆ ಆಧಾರವಾಗಿ ನಿಂತವರು, ಚಾರು ಮುಜಂದಾರ್, ಕನುಸನ್ಯಾಲ್, ಮತ್ತು ಸ್ಥಳೀಯ ಆದಿವಾಸಿ ನಾಯಕ ಜಂಗಲ್ ಸಂತಾಲ್ ಎಂಬಾತ. ನಕ್ಸಲ್‍ಬಾರಿ ಘಟನೆ ಮೇಲು ನೋಟಕ್ಕೆ ಒಂದು ಸಣ್ಣ ಘಟನೆಯಂತೆ ಕಂಡು ಬಂದರೂ ಅದು ಕಮ್ಯೂನಿಷ್ಟ್ ಪಕ್ಷ ತಾನು ನಂಬಿಕೊಂಡು ಬಂದಿದ್ದ ವಿಚಾರ ಮತ್ತು ತಾತ್ವಿಕ ಸಿದ್ಧಾಂತಕ್ಕೆ ಅತಿ ದೊಡ್ಡ ಸವಾಲನ್ನು ಎಸೆದಿತ್ತು. ಅದು ಅನಿರೀಕ್ಷಿತವಾಗಿ ಸ್ಪೋಟಗೊಂಡರೂ ಸಹ ಅದರ ಹಿನ್ನಲೆಯಲ್ಲಿ ಅನೇಕ ರೈತರ, ಸಿಟ್ಟು, ಸಂಕಟ ಮತ್ತು ನೋವು ಹಿಂಸಾಚಾರದ ಮೂಲಕ ವ್ಯಕ್ತವಾಗಿತ್ತು.

ಇದಕ್ಕೆ ಭಾರತ ಸರ್ಕಾರ 1955 ರಲ್ಲಿ ಜಾರಿಗೆ ತಂದ ಭೂಮಿತಿ ಕಾಯ್ದೆ ಕೂಡ ಪರೋಕ್ಷವಾಗಿ ಕಾರಣವಾಗಿತ್ತು. ಪ್ರತಿಯೊಬ್ಬ ವ್ಯಕ್ತಿ 15 ಎಕರೆ ಕೃಷಿಭೂಮಿ, 25 ಎಕರೆ ಕೃಷಿಗೆ ಯೋಗ್ಯವಲ್ಲದ ಭೂಮಿ ಮತ್ತು ಮನೆ ಹಾಗೂ ಇನ್ನಿತರೆ ಬಳಕೆಗಾಗಿ 5 ಎಕರೆ, ಈಗೆ ಒಟ್ಟು 45 ಎಕರೆಯನ್ನು ಮಾತ್ರ ಹೊಂದಬಹುದಾಗಿತ್ತು. ಆದರೆ, ಪಶ್ಚಿಮ ಬಂಗಾಳ, ಆಂಧ್ರ ಸೇರಿದಂತೆ ದೇಶಾದ್ಯಂತ ಅನೇಕ ಜಮೀನುದಾರರು ಸಾವಿರಾರು ಎಕರೆ ಭೂಮಿ ಹೊಂದಿದ್ದರು. ಸರ್ಕಾರದ ಕಣ್ಣು ಒರೆಸುವ ಸಲುವಾಗಿ ತಮ್ಮ ಭೂಮಿಯನ್ನು ಮುಗ್ದ ರೈತರ ಹೆಸರಿಗೆ ವರ್ಗಾಯಿಸಿ, ಅವುಗಳ ದಾಖಲೆ ಪತ್ರಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು. ಭೂಮಿಯ ಒಡೆಯರಾಗಿದ್ದರೂ ಕೂಡ ರೈತರು ಜಮೀನ್ದಾರರಿಗೆ ಹಾಗೂ ಅವರು ಸಾಕಿಕೊಂಡಿದ್ದ ಗೂಂಡಗಳಿಗೆ ಹೆದರಿ ಗೇಣಿದಾರರಾಗಿ ದುಡಿಯುತ್ತಾ ತಾವು ಬೆಳೆದ ಫಸಲಿನ ಮುಕ್ಕಾಲು ಪಾಲು ಅವರಿಗೆ ನೀಡಿ, ಉಳಿದ ಕಾಲು ಪಾಲನ್ನು ತಾವು ಅನುಭವಿಸುತ್ತಿದ್ದರು.

ಈ ಅಸಮಾನತೆಯ ವಿರುದ್ಧ ನಕ್ಸಲ್‍ಬಾರಿ ಪ್ರದೇಶದಲ್ಲಿ ಸಣ್ಣ ಹಿಡುವಳಿದಾರರು, ಗೇಣಿದಾರರು ಮತ್ತು ಕೃಷಿ ಕೂಲಿಕಾರ್ಮಿಕರ ಪರವಾಗಿ ಕಿಸಾನ್‍ಸಭಾ ಸಂಘಟನೆ 1959 ರಲ್ಲಿ ಪ್ರಥಮ ಬಾರಿಗೆ ಪ್ರತಿಭಟನೆಯ ಬಾವುಟ ಹಾರಿಸಿತ್ತು. ಆದರೆ, ಈ ಹೋರಾಟ 1962 ರವರೆಗೆ ಮುಂದುವರಿದು ಕೆಲವು ನಾಯಕರ ಬಂಧನದೊಂದಿಗೆ ವಿಫಲತೆಯನ್ನು ಅನುಭವಿಸಿತು. ಇಂತಹ ಸೋಲಿನ ಹಿನ್ನಲೆಯಲ್ಲಿ ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಙಾಸೆ ಮೂಡಿಸಿತು. ಪಕ್ಷದ ನಾಯಕರಲ್ಲಿ ಕೆಲವರಿಗೆ ರೈತರ ಸಮಸ್ಯೆಗಳಿಗೆ ಸೈದ್ಧಾಂತಿಕ ನೆಲೆಗಟ್ಟಿನ ಹೋರಾಟದಲ್ಲಿ ಪರಿಹಾರ ಕಂಡುಕೊಳ್ಳುವ ಹಂಬಲವಿತ್ತು. ಆದರೆ, ಈ ಸೌಮ್ಯವಾದಿಗಳ ನಿರ್ಧಾರ ಕೆಲವು ತೀವ್ರವಾದಿ ಮನಸ್ಸಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಒಪ್ಪಿಗೆಯಾಗಲಿಲ್ಲ. ಇವರಲ್ಲಿ ಚಾರು ಮತ್ತು ಕನುಸನ್ಯಾಲ್, ನಾಗಭೂಷಣ್ ಪಟ್ನಾಯಕ್, ಕೊಂಡಪಲ್ಲಿ ಸೀತಾರಾಮಯ್ಯ ಪ್ರಮುಖರು.

1966 ರ ಅಕ್ಟೋಬರ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದಾನ್ ಜಿಲ್ಲೆಯ ಸಟ್‍ಗಚಿಯ ಎಂಬಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಿತು. ಅವರೆಗೂ ಮಾರ್ಕ್ಸ್ ಹಾಗೂ ಲೆನಿನ್ ವಿಚಾರಧಾರೆಯನ್ನು ಅನುಕರಿಸಿಕೊಂಡು ಬಂದಿದ್ದ ಪಕ್ಷಕ್ಕೆ ಹೊಸದಾಗಿ ಚೀನಾದ ಮಾವೋತ್ಸೆ ತುಂಗನ ಕ್ರಾಂತಿಕಾರಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಸಂದಿಗ್ದತೆ ಎದುರಾಯಿತು. ಈ ಸಮಾವೇಶಕ್ಕೆ ಸಿಲುಗುರಿ ಪ್ರಾಂತ್ಯದಿಂದ ಚಾರು ಮುಜಂದಾರ್, ಕನುಸನ್ಯಾಲ್, ಜಂಗಲ್ ಸಂತಲ್ ಸೇರಿದಂತೆ ಎಂಟು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇವರೆಲ್ಲರೂ 1965 ರ ಏಪ್ರಿಲ್ ತಿಂಗಳಿನಲ್ಲಿ ಮುದ್ರಿಸಿದ್ದ ಕರಪತ್ರವೊಂದನ್ನು ಜೊತೆಯಲ್ಲಿ ತಂದಿದ್ದರು. ಕರಪತ್ರದಲ್ಲಿ ರೈತರು, ಗೇಣಿದಾರರು ಮುಂದೆ ಬಂದು ಬಲತ್ಕಾರವಾಗಿ ಜಮೀನ್ದಾರರಿಂದ ಭೂಮಿಯನ್ನು ಕಿತ್ತುಕೊಳ್ಳಲು ಕರೆನೀಡಲಾಗಿತ್ತು. ಅಲ್ಲದೆ, ಸಮಾವೇಶಕ್ಕೆ ಮುನ್ನ ಎರಡು ತಿಂಗಳ ಮುಂಚೆ ಅಂದರೆ, ಆಗಸ್ಟ್ ತಿಂಗಳಿನಲ್ಲಿ ಮುದ್ರಿಸಲಾಗಿದ್ದ ಕರಪತ್ರವನ್ನು ಸಹಾ ಸಿಲಿಗುರಿ ಪ್ರಾಂತ್ಯದ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಹಂಚಿದರು.

ಕರಪತ್ರದಲ್ಲಿ ಹಳ್ಳಿಗಳಲ್ಲಿ ವಾಸವಾಗಿರುವ ರೈತರು ಹಾಗೂ ಕೃಷಿಕೂಲಿ ಕಾರ್ಮಿಕರು ಸಂಘಟಿತರಾಗಲು ಕರೆ ನೀಡಲಾಗಿತ್ತು, ಎರಡನೇದಾಗಿ ದುರಂಕಾರದ ಜಮೀನ್ದಾರರು, ಮತ್ತು ಅವರ ಗೂಂಡಾ ಪಡೆಯನ್ನು ಸಮರ್ಥವಾಗಿ ಎದುರಿಸಲು ಬಿಲ್ಲು, ಬಾಣಗಳಿಂದ ಸಿದ್ಧರಾಗಲು ವಿನಂತಿಸಿಕೊಳ್ಳಲಾಗಿತ್ತು, ಮೂರನೇದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು ಮತ್ತು ಕೂಲಿಕಾರರು, ಅಸಹಾಯಕ ಗೇಣಿದಾರರು ನೆಮ್ಮದಿಯಿಂದ ಬದುಕಬೇಕಾದರೆ, ಕೊಬ್ಬಿದ ಜಮೀನ್ದಾರರನ್ನು ಮಟ್ಟ ಹಾಕುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದೇ ವಿಚಾರಗಳನ್ನು ಪಕ್ಷದ ಸಮಾವೇಶದಲ್ಲಿ ಚಾರು ಮತ್ತು ಅವನ ಸಂಗಡಿಗರು ಬಲವಾಗಿ ಸಮರ್ಥಿಸಿಕೊಂಡು, ಪಕ್ಷ ಶೀಮಂತ ಜಮೀನ್ದಾರರ ಬಗ್ಗೆ ಕಠಿಣ ನಿಲುವು ತಳೆಯಬೇಕೆಂದು ಆಗ್ರಹಸಿದರು. ಕಮ್ಯೂನಿಷ್ಟ್ ಪಕ್ಷದ ಧುರೀಣರು ಚಾರು ಮತ್ತು ಅವನ ಸಂಗಡಿಗರು ಎತ್ತಿದ ಪ್ರಶ್ನೆಗಳಿಗೆ ಯಾವುದೇ ಸಮಜಾಯಿಸಿ ನೀಡಲು ಸಾಧ್ಯವಾಗದೇ ಮೌನಕ್ಕೆ ಶರಣಾದರು. ಇದು ಪರೋಕ್ಷವಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ತಾವು ನಂಬಿಕೊಂಡು ಬಂದಿದ್ದ ತಾತ್ವಿಕ ಸಿದ್ಧಾಂತಗಳಿಗಾಗಿ ಅಂಟಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಒಟ್ಟಾರೆ, 1966 ರ ಈ ಸಮಾವೇಶ, ಕಮ್ಯೂನಿಷ್ಟ್ ಸಿದ್ಧಾಂತಗಳ ಸಂಘರ್ಷದಿಂದಾಗಿ ಹೋಳಾಗುವ ಸ್ಥಿತಿ ತಲುಪಿತು. ಕೆಲವರು ಮಾರ್ಕ್ಸ್ ಮತ್ತು ಲೆನಿನ್ ಸಿದ್ಧಾಂತಕ್ಕೆ ಅಂಟಿಕೊಂಡರೆ, ಮತ್ತೇ ಕೆಲವರು ತೀವ್ರಗಾಮಿ ಎನಿಸಿದ ಮಾವೋನ ವಿಚಾರಗಳಿಂದ ಪ್ರೇರಿತರಾಗಿ ಮಾವೋನನ್ನು ಆರಾಧಿಸತೊಡಗಿದರು.

(ಮುಂದುವರಿಯುವುದು)

Leave a Reply

Your email address will not be published. Required fields are marked *