ಲೋಕಾಯುಕ್ತ ಪೊಲೀಸರ ವರದಿ ತಿರಸ್ಕರಿಸಿದ ನ್ಯಾಯಾಲಯ

ಸ್ನೇಹಿತರೆ,

ಇಂದು ಬೆಳಗ್ಗೆ ಹನ್ನೊಂದರಿಂದ ಸಂಜೆ ಐದರವರೆಗೆ ನನ್ನ ಊರಿನಿಂದ ಆರೇಳು ಕಿ.ಮೀ. ದೂರದ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಲೋಕಾಯುಕ್ತ ಕೋರ್ಟ್‌ನಲ್ಲಿದ್ದೆ. ನಿಮ್ಮಲ್ಲಿ ಕೆಲವರಿಗೆ ಗೊತ್ತಿರುವಂತೆ ನಾನು ಯಡ್ಡ್‌ಯೂರಪ್ಪ, ಸೋಮಣ್ಣ, ಇತರರ ಮೇಲೆ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳಿಗೆ ಸಂಬಂಧಪಟ್ಟಂತೆ ಖಾಸಗಿ ದೂರೊಂದನ್ನು ಕಳೆದ ನವೆಂಬರ್‌ನಲ್ಲಿ ದಾಖಲಿಸಿದ್ದೆ. ಅದರ ಬಗ್ಗೆ ಎರಡು-ಮೂರು ವಾರದ ಹಿಂದೆ ಲೋಕಾಯುಕ್ತ ಪೋಲಿಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆ ವರದಿಗೆ ಸಂಬಂಧಿಸಿದಂತೆ ಇಂದು ಆದೇಶ ಇತ್ತು.

ಅಂದ ಹಾಗೆ, ಈ ಕೋರ್ಟ್‌ನಲ್ಲಿ ಕಳೆದ ಐದು ತಿಂಗಳಿನಿಂದ ಎಂತಎಂತಹ ಜನರನ್ನೆಲ್ಲಾ ನಾನು ನೋಡಿದೆ! ನ್ಯಾಯಕ್ಕಾಗಿ ಹೋರಾಡುವವರನ್ನು ಕಂಡೆ (ಇಂದು ಸಿರಗುಪ್ಪದ ಶಾಸಕ ಸೋಮಲಿಂಗಪ್ಪರ ಮೇಲೆ ದೂರು ಕೊಟ್ಟಿರುವ ಅಲ್ಲಿನ ನಿವೃತ್ತ ಲೆಕ್ಚರರ್ ಈರಣ್ಣನವರ ಭೇಟಿಯಾಯಿತು). ಕೋರ್ಟ್‌ ಒಳಗೆ ಮಾತ್ರ ತಲೆತಗ್ಗಿಸಿ ಹೊರಗೆ ಬಂದಾಕ್ಷಣ ಎದೆಉಬ್ಬಿಸಿ ನಡೆಯುವ ಲಂಚಕೋರರನ್ನು ಕಂಡೆ. ಮಾಜಿ ಸಚಿವರೊಬ್ಬರನ್ನು ಕಟೆಕಟೆಯಲ್ಲಿ ನೋಡಿದೆ. ಇಂದು ಹಾಲಿ ಶಾಸಕರೊಬ್ಬರನ್ನು (ಸಂಪಂಗಿ) ಕಟೆಕಟೆಯಲ್ಲಿ ನೋಡಿದೆ. ಕೋರ್ಟ್‌ನ ಇಂದಿನ ಆದೇಶದಂತೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಚಿವರೊಬ್ಬರು ಸಹ ಕಟೆಕಟೆ ಹತ್ತಬಹುದು. ಹೌದು, ನ್ಯಾಯಾಲಯ ತನ್ನ ಇಂದಿನ ತೀರ್ಪಿನಲ್ಲಿ ನನ್ನ ದೂರಿಗೆ ಸಂಬಂದಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ವರದಿಯನ್ನು ತಿರಸ್ಕರಿಸಿ, ನಾವು ಹೆಸರಿಸಿರುವ ಎಲ್ಲಾ ನಾಲ್ಕು ಆರೋಪಿಗಳು ಇದೇ ತಿಂಗಳ 30ರಂದು ಕೋರ್ಟ್‌ಗೆ ಖುದ್ದು ಹಾಜರಾಗಬೇಕೆಂದು ಆದೇಶಿಸಿ ಸಮ್ಮನ್ಸ್ ಜಾರಿ ಮಾಡಿತು. ಯಡ್ಡಯೂರಪ್ಪ, ಶ್ರೀಮತಿ ಶೈಲಜಾ ಸೋಮಣ್ಣ, ಸೋಮಣ್ಣ, ಮತ್ತು ಲಿಂಗಣ್ಣ; ಇವರು ನಾವು ದೂರಿನಲ್ಲಿ ಹೆಸರಿಸಿರುವ ಆರೋಪಿಗಳು.

ನಮ್ಮ ಮೊಕದ್ದಮೆಯ ಆದೇಶ ಆದನಂತರ ನ್ಯಾಯಾಲಯ ಇನ್ನೊಂದು ಕೇಸಿನಲ್ಲೂ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಿ, ಪುನರ್‌ವಿಚಾರಣೆ ನಡೆಸಲು ಆದೇಶಿಸಿತು.  ಅದು ಚಿಕ್ಕಮಗಳೂರಿನ ಶಾಸಕ ಸಿ.ಟಿ. ರವಿಯವರ ಮೇಲೆ ಅಲ್ಲಿಯ ಸ್ಥಳೀಯರೊಬ್ಬರು ಭೂಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರು.

ಇಂದಿನಿಂದ ಲೋಕಾಯುಕ್ತ ಪೊಲೀಸರು ತಾವು ಸಲ್ಲಿಸುವ ವರದಿಗಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಜವಾಬ್ದಾರಿ ನಿರ್ವಹಿಸಬಹುದು ಎನ್ನಿಸುತ್ತದೆ.

ಈ ಎಲ್ಲಾ ಆಶಾವಾದಗಳ ಮಧ್ಯೆಯೂ ಭ್ರಮನಿರಸನ ಆಗುತ್ತಿದೆ. ಒತ್ತಡಗಳು ಹೆಚ್ಚುತ್ತಿವೆ. ಆದರೆ ಅವು ನನ್ನನ್ನು ಬಾಧಿಸವು. ಬಾಧಿಸುವ ವಿಚಾರಗಳೇ ಬೇರೆ. ಏನನ್ನು ಸಾಧಿಸುವಂತಾಗುತ್ತದೆ ಎನ್ನುವುದು ಒಂದಾದರೆ, ಇಲ್ಲಿ ಜನ ಜನಪ್ರತಿನಿಧಿಗಳ ದುರುಳತನವನ್ನು ದುರುಳತನ ಎಂದು ಕಾಣದಿರುವುದು ಇನ್ನೊಂದು. ಈ ಒಂದು ಕೇಸಿನಿಂದ ಅಥವ ಕರ್ನಾಟಕದಲ್ಲಿ ರಾಜಕಾರಣಿಗಳ ವಿರುದ್ಧ ಹಾಕಿರುವ ಮೊಕದ್ದಮೆಗಳಿಂದ ಈ ರಾಜ್ಯದಲ್ಲಿ ಪರಿವರ್ತನೆ ಆಗಿಬಿಡುತ್ತದೆ ಎನ್ನುವ ಯಾವ ಹುಚ್ಚು ಭ್ರಮೆಯೂ ನನಗಿಲ್ಲ. ಜನ ಇಲ್ಲಿ ತಮಗೆ ನೇರವಾಗಿ ಬಾಧಿಸದ ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಅವರಿಗೆ ನಮ್ಮ ರಾಜ್ಯ-ದೇಶದಲ್ಲಿಯ ದುರಾಡಳಿತ ಮತ್ತು ಭ್ರಷ್ಚಾಚಾರವೆ ನಮ್ಮ ಮತ್ತು ನಮ್ಮ ಮುಂದಿನ ಸಂತತಿಗಳನ್ನು ತೀವ್ರವಾಗಿ ಕಾಡುವ, ಬಾಧಿಸುತ್ತಿರುವ, ಬಾಧಿಸುವ ವಿಚಾರ ಎಂದು ಗೊತ್ತಾಗುತ್ತಿಲ್ಲ.

ಇವತ್ತು ಬೇರೆ ಪಕ್ಷದಲ್ಲಿರುವ ಭ್ರಷ್ಟ ನಾಳೆ ನನ್ನ ಪಕ್ಷಕ್ಕೆ ಬರುತ್ತಾನೆ ಮತ್ತು ಅದರಿಂದ ನಾಳೆ ನನಗೆ ಅಧಿಕಾರ ಸಿಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ರಾಜಕಾರಣಿಗಳಿದ್ದಾರೆ. ಮತ್ತು ಅದು ಅಂತಹ ಪಕ್ಷಗಳ ಕಾರ್ಯಕರ್ತರನ್ನು ಮತ್ತು ಜನರನ್ನು ಯಾವ ರೀತಿಯೂ ಸಂಕೋಚಕ್ಕೆ ಈಡುಮಾಡದು ಎನ್ನುವ ಸ್ಥಿತಿಗೆ ನಾವು ಮುಟ್ಟಿದ್ದೇವೆ. ನಮ್ಮ ಎಲ್ಲಾ ವೈಯಕ್ತಿಕ ಪ್ರಯತ್ನಗಳು ಬ್ರಹ್ಮರಾಕ್ಷಸ ಮತ್ತು ರಕ್ತ ಬೀಜಾಸುರರ ಸಂತತಿಯ ಸ್ಫೋಟಕ ಬೆಳವಣಿಗೆಯನ್ನು ನಿಧಾನಿಸಬಹುದು ಎನ್ನುವುದು ಬಿಟ್ಟರೆ, ಅವರ ನಿರ್ನಾಮ ಮಾಡದು.

ಅವರ ನಿರ್ನಾಮವಾಗದೆ ಅಥವ ಸಮಾಜದ ಮೇಲೆ ಆ ಸೈತಾನ ಮನಸ್ಥಿತಿಯ ಪ್ರಭಾವ ನಗಣ್ಯವಾಗದೆ ಇಲ್ಲೊಂದು ಸಹನೀಯ ಸಮಾಜ ಹುಟ್ಟದು. ಅದನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ?

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

3 thoughts on “ಲೋಕಾಯುಕ್ತ ಪೊಲೀಸರ ವರದಿ ತಿರಸ್ಕರಿಸಿದ ನ್ಯಾಯಾಲಯ

  1. B.Sripad Bhat

    ನಾವೆಲ್ಲ ನಿಮ್ಮ ಜೊತೆಗಿದ್ದೇವೆ.ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮಂತ್ರಿಯ ವಿರುದ್ಧದ ನಿಮ್ಮ ನ್ಯಾಯಾಂಗ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ.ನ್ಯಾಯ ದೇವತೆ ವಿಳಂಬವಾದರೂ ಸುಳ್ಳಾಗಲಾರಳು. ನಮಗೆಲ್ಲ ಗೊತ್ತಿರುವ ಹಾಗೆ 2500 ವರ್ಷಗಳ ಹಿಂದೆ “ಗೌತಮ ಬುದ್ಧ” ಶುರು ಮಾಡಿದ ಸಾಮಾಜಿಕ ನ್ಯಾಯದ ಚಿಂತನೆ ಹಾಗೂ ಚಳುವಳಿ ಇಂದಿಗೂ ಆಮೆಯ ವೇಗದಲ್ಲಿದೆ.ನಾವೆಲ್ಲ ಕಾಯಬೇಕು.ಆದರೆ ಸುಮ್ಮನೆ ಅಂತೂ ಇರಲಾಗದು.ಏಕೆಂದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ

    Reply
  2. Ananda Prasad

    ಸಮಾಜದಲ್ಲಿ ಗಣ್ಯ ಎನಿಸಿಕೊಂಡ ಹಾಗೂ ಜೀವನಕ್ಕೆ ಭದ್ರವಾದ ಉದ್ಯೋಗ ಹಾಗೂ ಸಂಪನ್ಮೂಲ ಉಳ್ಳ ವ್ಯಕ್ತಿಗಳು ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ದ್ವನಿ ಎತ್ತಬೇಕು. ಸಮಾಜದಲ್ಲಿ ಯಾವಾಗಲೂ ಶ್ರೀಮಂತರ ಮಾತಿಗೆ ಹೆಚ್ಚಿನ ಬೆಲೆ. ಬಡವರ ಮಾತಿಗೆ ಬೆಲೆ ಕಡಿಮೆ. ಹೀಗಾಗಿ ಶ್ರೀಮಂತ ವ್ಯಕ್ತಿಗಳು ಹಾಗೂ ಮೇಲ್ಮಟ್ಟದ ಹೆಚ್ಚು ವೇತನ ಅಥವಾ ಗಳಿಕೆ ಇರುವ ವಿಜ್ಞಾನಿಗಳು, ಪ್ರಾಧ್ಯಾಪಕರು, ಇಂಜಿನಿಯರುಗಳು, ಡಾಕ್ಟರುಗಳು, ನ್ಯಾಯವಾದಿಗಳು, ಉದ್ಯಮಿಗಳು ಮೊದಲಾದವರು ಸಮಾಜದಲ್ಲಿ ಹಾಗೂ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಧ್ವನಿಯೆತ್ತಲು ಸುರು ಮಾಡಿದರೆ ಅದರ ಪರಿಣಾಮ ಸಮಾಜದ ಮೇಲೆ ಆಗಿಯೇ ಆಗುತ್ತದೆ. ಆದರೆ ಇಂದು ಸಮಾಜದ ಮೇಲ್ವರ್ಗದ ಹೆಚ್ಚು ಸಂಪಾದನೆ ಉಳ್ಳ ವರ್ಗ ಯಾವುದೇ ಅನ್ಯಾಯದ ವಿರುದ್ಧ ಕನಿಷ್ಠ ಧ್ವನಿ ಎತ್ತುವ ಕೆಲಸವನ್ನೂ ಮಾಡುತ್ತಿಲ್ಲ (ಕೆಲವು ಅಪವಾದ ಇರಬಹುದು). ದೇಶದ ಹಾಗೂ ರಾಜ್ಯದ ಪ್ರಖ್ಯಾತ ವಿಜ್ಞಾನಿಗಳು, ಸಾಹಿತಿಗಳು, ಕಲಾವಿದರು ಮೊದಲಾದವರು ಕೂಡ ಇಂದು ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ಧ್ವನಿ ಎತ್ತುವುದು ಕಂಡು ಬರುತ್ತಿಲ್ಲ. ಸಮಾಜದಲ್ಲಿ ಪ್ರಖ್ಯಾತರಾದ ಸಾಹಿತಿಗಳು, ವಿಜ್ಞಾನಿಗಳು, ಕಲಾವಿದರು ಧ್ವನಿ ಎತ್ತಿದರೂ ಅದು ಸಮಾಜದ ಮೇಲೆ ಪರಿಣಾಮ ಬೀರಬಲ್ಲದು. ಆದರೆ ಭ್ರಷ್ಟಾಚಾರ, ಅನ್ಯಾಯ, ದುರಾಡಳಿತದ ವಿರುದ್ಧ ಎಲ್ಲಿಂದಲೂ ಒಂದು ಸಣ್ಣ ಸೊಲ್ಲು ಕೂಡ ಕರ್ನಾಟಕದಲ್ಲಿ ಕೇಳಿ ಬರುತ್ತಿಲ್ಲ. ಲೋಕಾಯುಕ್ತರ ಹುದ್ಧೆ ಎಷ್ಟೋ ತಿಂಗಳುಗಳಿಂದ ಖಾಲಿ ಬಿದ್ದಿದ್ದರೂ ಸಮಾಜದ ಉನ್ನತ (elite) ವರ್ಗದಿಂದ ಇದನ್ನು ತುಂಬಿಸಬೇಕೆಂಬ ಒಂದು ಸಣ್ಣ ಕೂಗು ಕೂಡ ಕೇಳಿಬರುತ್ತಿಲ್ಲ ಎಂದರೆ ನಮ್ಮ ರಾಜ್ಯಕ್ಕೆ ಏನಾಗಿದೆ?

    Reply
  3. Anonymous

    Navu nimma jothe iddeve bro yavaga karedaru barthivi brashtacharada virudda nimma horatakke sada navu sidda

    Reply

Leave a Reply

Your email address will not be published. Required fields are marked *