ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -16)


– ಡಾ.ಎನ್.ಜಗದೀಶ್ ಕೊಪ್ಪ


 

ನರಭಕ್ಷಕ ಹುಲಿ ಸತ್ತು ಬಿದ್ದಿದ್ದ ಸ್ಥಳದ ಸುತ್ತ ಆವರಿಸಿಕೊಂಡ ಹಳ್ಳಿಯ ಜನ ಕುಣಿದು ಕುಪ್ಪಳಿಸಿ ಕೇಕೆ ಹಾಕಿ, ಒಬ್ಬರಿಗೊಬ್ಬರು ಅಪ್ಪಿಕೊಂಡು ತಮ್ಮ ಸಂತಸ ಹಂಚಿಕೊಂಡರು. ಕಾರ್ಬೆಟ್ ತನ್ನ ಸೇವಕರಿಗೆ ಹುಲಿಯನ್ನು ಪ್ರವಾಸಿ ಮಂದಿರಕ್ಕೆ ಹೊತ್ತೊಯ್ದು ಚರ್ಮ ಸುಲಿಯುವಂತೆ ಆದೇಶಿದ. ಕೂಡಲೇ ಹಳ್ಳಿಯ ಜನರೆಲ್ಲಾ ತಾವು ಈ ನರಭಕ್ಷಕನನ್ನು ಸುತ್ತ ಮುತ್ತಲಿನ ಹಳ್ಳಿಯಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಬೇಕೆಂದು ಬೇಡಿಕೊಂಡಾಗ ಕಾರ್ಬೆಟ್‍ಗೆ ಬೇಡವೆನ್ನಲು ಮನಸ್ಸಾಗದೆ ಸಮ್ಮತಿಸಿದ.

ಚಂಪಾವತ್ ಹಳ್ಳಿಯ ಜನ ಬಿದಿರಿನ ಬೊಂಬುಗಳಲ್ಲಿ ನಿರ್ಮಿಸಿದ ತಡಿಕೆಯಲ್ಲಿ ನರಭಕ್ಷಕ ಹುಲಿಯ ಶವವನ್ನು ಹೊತ್ತು ತಮಟೆ, ನಗಾರಿಗಳ ಜೊತೆ ಹಳ್ಳಿಗಳಲ್ಲಿ ಮೆರವಣಿಗೆ ಮಾಡಿದರು. ನರಭಕ್ಷಕನಿಗೆ ಬಲಿಯಾದ ವ್ಯಕ್ತಿಗಳ ಮನೆ ಮುಂದೆ ನಿಲ್ಲಿಸಿ, ಕುಟುಂಬದ ಸದಸ್ಯರಿಗೆ ಅದನ್ನು ತೋರಿಸಿ ಮುಂದುವರಿಯುತ್ತಿದ್ದರು. ರಾತ್ರಿ ದೀಪದ ಬೆಳಕಿನಲ್ಲಿ ನರಭಕ್ಷಕ ಹುಲಿಯ ಚರ್ಮವನ್ನು ಸೀಳಿ, ಹೊಟ್ಟೆಯನ್ನು ಬಗೆದಾಗ, ಅದು ಕಡೆಯ ಬಾರಿ ಬಲಿ ತೆಗೆದುಕೊಂಡಿದ್ದ ಯುವತಿಯ ಬಳೆಗಳು ದೊರೆತವು. ಯುವತಿಯ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಅವುಗಳನ್ನು ಪಡೆದು, ಬೇಟೆಯ ಸಂದರ್ಭದಲ್ಲಿ ದೊರೆತ್ತಿದ್ದ ಆಕೆಯ ತಲೆ ಬುರುಡೆಯ ಜೊತೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದರು.

ಈ ಘಟನೆ ನಡೆದ ಒಂದು ತಿಂಗಳಿನಲ್ಲಿ ಬ್ರಿಟಿಷ್ ಸರ್ಕಾರದ ಪರವಾಗಿ ತಹಸಿಲ್ದಾರ್ ತನ್ನ ಕಚೇರಿ ಸಿಬ್ಬಂದಿಯೊಂದಿಗೆ ನೈನಿತಾಲ್‍ಗೆ ಬಂದು ಪಟ್ಟಣದಲ್ಲಿ ಕಾರ್ಬೆಟ್‍ನನ್ನು ಸಾರ್ವಜನಿಕವಾಗಿ ಸನ್ಮಾನಿಸಿದ. ಕಾರ್ಬೆಟ್ ಸರ್ಕಾರದಿಂದ ಹಣ ತೆಗೆದುಕೊಳ್ಳಲು ಮೊದಲೇ ನಿರಾಕರಿಸಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರದ ಲೆಪ್ಟಿನೆಂಟ್ ಜನರಲ್ ಸರ್ ಜೆ.ಪಿ.ಹೆವಿಟ್ ಕೊಡುಗೆಯಾಗಿ ನೀಡಿದ ಆತ್ಯಾಧುನಿಕ ಹಾಗೂ ಇಂಗ್ಲೆಂಡ್‍ನಲ್ಲಿ ತಯಾರಾದ ಬಂದೂಕವನ್ನು ಕಾರ್ಬೆಟ್‍ಗೆ ಕಾಣಿಕೆಯಾಗಿ ಅರ್ಪಿಸಲಾಯಿತು.

ಈ ನರಭಕ್ಷಕನ ಬೇಟೆಯ ನಂತರ ಜಿಮ್ ಕಾರ್ಬೆಟ್ ತಾನು ಕೆಲಸ ಮಾಡುತ್ತಿದ್ದ ಮೊಕಮೆಘಾಟ್‍ಗೆ ಹೋಗಿ ಮತ್ತೇ ನೈನಿತಾಲ್‍ಗೆ ಹಿಂತಿರುಗಿ ಬರುವುದರೊಳಗೆ, ನೈನಿತಾಲ್ ಮತ್ತು ಅಲ್ಮೋರಾ ಪಟ್ಟಣಗಳ ನಡುವೆ ಇರುವ ಮುಕ್ತೇಶ್ವರ ಎಂಬ ಹಳ್ಳಿಯಲ್ಲಿ ಮತ್ತೊಂದು ನರಭಕ್ಷಕ ಹುಲಿ ಕಾಣಿಸಿಕೊಂಡು ಮೂವರನ್ನು ಬಲಿತೆಗೆದುಕೊಂಡಿತು. ಉತ್ತರ ಭಾರತದ ಹಿಮಾಲಯ ಪ್ರಾಂತ್ಯದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಬಗ್ಗೆ ಬ್ರಿಟನ್ನಿನ ಪಾರ್ಲಿಮೆಂಟ್‍ನಲ್ಲೂ ಕೂಡ ಚರ್ಚೆಯಾಗಿ, ಭಾರತದಲ್ಲಿನ ಸರ್ಕಾರದ ವೈಫಲ್ಯವನ್ನು ಖಂಡಿಸಲಾಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಭಾರತದ ವೈಸ್‍ರಾಯ್, ಮತ್ತು ಬ್ರಿಟಿಷ್ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿ ಸರ್. ಬರ್ಥ್‍ಹುಡ್ ಮೂಲಕ ಕಾರ್ಬೆಟ್‍ಗೆ ನರಭಕ್ಷಕನನ್ನು ಕೊಲ್ಲಲು ಮನವಿ ಮಾಡಿಕೊಂಡಿತು. ಆದರೆ ನೈನಿತಾಲ್‍ನಲ್ಲಿದ್ದ ತನ್ನ ರಿಯಲ್‍ಎಸ್ಟೇಟ್ ವ್ಯವಹಾರ ಹಾಗೂ ಮೊಕಮೆಘಾಟ್‍ಗೆ ರೈಲ್ವೆ ಇಲಾಖೆಯ ಕೆಲಸದಿಂದಾಗಿ ತಕ್ಷಣ ಬೇಟೆಗೆ ಹೊರಡಲು ಕಾರ್ಬೆಟ್ ನಿರಾಕರಿಸಿದ.

15 ದಿನಗಳ ನಂತರ ಸರ್ಕಾರದ ಮನವಿಗೆ ಸ್ಪಂದಿಸಿ ಕಾರ್ಬೆಟ್ ಮತ್ತೆ ತನ್ನ ಬಂದೂಕಗಳನ್ನು ಹೆಗಲಿಗೇರಿಸಿ, ಸಹಾಯಕರೊಡನೆ ಮುಕ್ತೇಶ್ವರಕ್ಕೆ ಹೊರಟು ನಿಂತ. ಆದರೆ ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಭೇಟಿ ನೀಡುವುದರೊಳಗೆ ನರಭಕ್ಷಕ ಹುಲಿ 24 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಪ್ರಾರಂಭದಲ್ಲಿ ಕಾಡಿನಲ್ಲಿ ಸೌದೆ ಅರಸುತ್ತಿದ್ದ ಹೆಂಗಸಿನ ಮೇಲೆ ಎರಗಿ ಬಲಿತೆಗೆದು ಕೊಂಡಿದ್ದ ಈ ಹುಲಿ, ತನ್ನ ಎರಡನೇ ಬಲಿಯನ್ನು ಸಹ ಅದೇ ರೀತಿ, ತಾನು ವಿಶ್ರಮಿಸುತ್ತಿದ್ದ ಪೊದೆಯ ಬಳಿ ಅರಿಯದೇ ಬಂದ ಮತ್ತೊಬ್ಬ ಹೆಂಗಸನ್ನು ದಾಳಿ ನಡೆಸಿ ಕೊಂದುಹಾಕಿತ್ತು. ಈ ಎರಡು ದಾಳಿಗಳ ನಂತರ ಮನುಷ್ಯನ ರಕ್ತದ ರುಚಿ ಹುಲಿಯನ್ನು ನರಭಕ್ಷಕನನ್ನಾಗಿ ಪರಿವರ್ತಿಸಿತ್ತು. ಮೊದಲು ತನ್ನ ಬಳಿ ಸುಳಿದವರನ್ನು ಬೇಟೆಯಾಡುತ್ತಿದ್ದ ಈ ಹುಲಿ ನಂತರದ ದಿನಗಳಲ್ಲಿ ಮನುಷ್ಯರನ್ನೇ ಅರಸುತ್ತಾ ಅಲೆಯತೊಡಗಿತು.

ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಬರುವ ಹಿಂದಿನ ದಿನದ ಸಂಜೆ ಎರಡು ಹೋರಿಗಳನ್ನು ಮೇಯಿಸಲು ಹೋಗಿದ್ದ ಪುತ್ಲಿ ಎಂಬ ಬಾಲಕಿಯ ಮೇಲೆ ಎರಗಲು ಪ್ರಯತ್ನಿಸಿ ವಿಫಲವಾಗಿ ಅಂತಿಮವಾಗಿ ಹೋರಿಯೊಂದನ್ನು ಕೊಂದು ಹಾಕಿತ್ತು. ಕಾರ್ಬೆಟ್ ಆ ಬಾಲಕಿಯನ್ನು ಕರೆದುಕೊಂಡು ದಾಳಿ ನಡೆದ ಸ್ಥಳಕ್ಕೆ ಹೋದಾಗ ಬಿಳಿ ಬಣ್ಣದ ಹೋರಿಯ ಶವ ಅಲ್ಲೇ ಇತ್ತು. ನರಭಕ್ಷಕ ಹುಲಿ ಹೋರಿಯ ತೊಡೆಯ ಭಾಗವನ್ನು ಮಾತ್ರ ತಿಂದುಹೋಗಿತ್ತು ಈ ದಿನ ರಾತ್ರಿ ನರಭಕ್ಷಕ ಮತ್ತೇ ಬರುವುದು ಖಚಿತ ಎಂಬ ನಿರ್ಧಾರಕ್ಕೆ ಬಂದ ಕಾರ್ಬೆಟ್ ಮರದ ಮೇಲೆ ಕುಳಿತು ಬೇಟೆಯಾಡಲು ನಿರ್ಧರಿಸಿದ. ಆದರೆ, ಹೋರಿಯ ಶವವಿದ್ದ ಜಾಗದಲ್ಲಿ ಮಚ್ಚಾನು ಕಟ್ಟಿ ಕುಳಿತುಕೊಳ್ಳಲು ಯಾವುದೇ ಮರವಿರಲಿಲ್ಲ. ಕೇವಲ ಎಂಟು ಅಡಿಯಿದ್ದ ಕಾಡು ಹೂಗಳ ಪುಟ್ಟ ಮರವೊಂದಿತ್ತು. ಮಚ್ಚಾನು ಕಟ್ಟುವ ಬದಲು ಅದರಮೇಲೆ ಕುಳಿತಿಕೊಳ್ಳಲು ನಿರ್ಧರಿಸಿ, ಅ ಹಳ್ಳಿಯಲ್ಲಿ ಪರಿಚಿತನಾಗಿದ್ದ ಬದ್ರಿ ಎಂಬಾತನ ನೆರವಿನಿಂದ ಟೊಂಗೆಯ ಮೇಲೆ ಹಸಿರು ಎಲೆಗಳನ್ನು ಹೊದಿಸಿ ಗೂಡನ್ನು ನಿರ್ಮಿಸಿಕೊಂಡ. ವಾಪಸ್ ಮುಕ್ತೇಶ್ವರ ಹಳ್ಳಿಗೆ ಬಂದ ಕಾರ್ಬೆಟ್, ಬೇಟೆಗೆ ಬೇಕಾದ ಜೋಡು ನಳಿಕೆಯ ಬಂದೂಕ, ಚಾಕು, ಟಾರ್ಚ್, ಬೆಂಕಿಪೊಟ್ಟಣ, ಸಿಗರೇಟ್, ಒಂದಿಷ್ಟು ಬ್ರೆಡ್ ಮತ್ತು ಬಿಸ್ಕೇಟ್ ಹಾಗೂ ನೀರಿನೊಂದಿಗೆ ಮರದ ಬಳಿ ಬಂದ ಕಾರ್ಬೆಟ್, ಅತ್ತ ಬಾನಿನಲ್ಲಿ  ಸೂರ್ಯ ಮುಳುಗುತ್ತಿದ್ದಂತೆ ಕತ್ತಲಾಗುವ ಮುನ್ನವೇ ಮರವೇರಿ ಕುಳಿತ.

ಅರಣ್ಯದ ಸುತ್ತೆಲ್ಲಾ ಕತ್ತಲು ಆವರಿಸಕೊಳ್ಳುತ್ತಿದ್ದಂತೆ, ಎಲ್ಲೆಡೆ ಮೌನ ಮನೆ ಮಾಡತೊಡಗಿತು. ಸುಮಾರು ಏಳುಗಂಟೆ ಸಮಯಕ್ಕೆ ಸರಿಯಾಗಿ ಕಾರ್ಬೆಟ್ ಕುಳಿತ್ತಿದ್ದ ಜಾಗದಿಂದ ಸುಮಾರು 200 ಅಡಿ ದೂರದಲ್ಲಿ ಜಿಂಕೆಗಳ ಓಟ, ಮರದ ಮೇಲಿದ್ದ ಮಂಗಗಳ ಕಿರುಚಾಟ ಕೇಳಿಬರತೊಡಗಿತು. ಇದು ನರಭಕ್ಷಕ ಬರುವ ಸೂಚನೆ ಎಂಬುದನ್ನು ಅರಿತ ಕಾರ್ಬೆಟ್ ಬಂದೂಕ ಸಿದ್ಧಪಡಿಸಿಕೊಂಡು ಜಾಗರೂಕನಾದ. ಆಕಾಶದಲ್ಲಿ ದಟ್ಟ ಮೋಡಗಳು ಕವಿದ ಪರಿಣಾಮ ಅವನ ಕಣ್ಣಿಗೆ ನರಭಕ್ಷಕ ಗೋಚರವಾಗುತ್ತಿರಲಿಲ್ಲ. ಓಣಗಿದ ತರಗೆಲೆಗಳ ಮೇಲೆ ಅದು ನಡೆದು ಬರುತ್ತಿರುವ ಸದ್ದನ್ನು ಆಲಿಸತೊಡಗಿದ.

ಕಾರ್ಬೆಟ್ ಕುಳಿತ್ತಿದ್ದ ಜಾಗದ ಸುಳಿವು ಸಿಗದ ಕಾರಣ ನರಭಕ್ಷಕ ನೇರವಾಗಿ ಮರದ ಬಳಿ ಬಂದು ಕಾರ್ಬೆಟ್ ಕುಳಿತ ಜಾಗದಿಂದ ಕೇವಲ ಹತ್ತು ಅಡಿ ದೂರದಲ್ಲಿ ಬಂದು ವಿಶ್ರಮಿಸಿತು. ಅಪರಿಮಿತ ಕತ್ತಲಿನಲ್ಲಿ ಬಿಳಿಯ ಬಣ್ಣದ ಹೋರಿಯ ಕಳೇಬರ ಕೂಡ ಅವನ ಕಣ್ಣಿಗೆ ಕಾಣದಾಗಿತ್ತು. ನರಭಕ್ಷಕ ತಾನು ಕುಳಿತ ಜಾಗದಿಂದ ಎದ್ದು ನಡೆದು ಹೋರಿಯ ಕಳೇಬರದತ್ತ ತೆರಳಿ ಅದನ್ನು ತಿನ್ನಲು ಶುರು ಮಾಡಿತು. ಇಡೀ ಅದರ ಚಲನವನ್ನು ತರಗೆಲೆಗಳ ಮೇಲಿನ ಶಬ್ಧದಿಂದ ಗ್ರಹಿಸಿದ ಕಾರ್ಬೆಟ್ ಇಪ್ಪತ್ತು ಅಡಿ ದೂರದಲ್ಲಿದ್ದ ನರಭಕ್ಷನಿಗೆ ಅಂದಾಜಿನ ಮೇಲೆ ಗುಂಡು ಹಾರಿಸಿದ. ಎರಡು ನಿಮಿಷಗಳ ಕಾಲ ಗುಂಡಿನ ಸದ್ದು ಪ್ರತಿಧ್ವನಿಸಿದ್ದರಿಂದ ಏನೂ ಕಾಣದಾಯಿತು ಹಾಗೂ ಕೇಳದಾಯ್ತು. ಆನಂತರ ನರಭಕ್ಷಕ ಹುಲಿ ಘರ್ಜನೆ ಮತ್ತು ಆರ್ಭಟ ಅವನು ಕುಳಿತ ಮರದ ಸುತ್ತಾ ಮುಂದುವರಿಯಿತು. ಇದರಿಂದ ತಾನು ಗುಂಡು ಗುರಿತಪ್ಪಿದ್ದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡ. ಅವನು ಕುಳಿತ ಮರಕೂಡ ಚಿಕ್ಕದಾಗಿದ್ದ ಕಾರಣ ಕಾರ್ಬೆಟ್ ಕುಳಿತ್ತಿದ್ದ ಮರದ ಟೊಂಗೆಗಳು ಅವನ ಭಾರಕ್ಕೆ ನೆಲದತ್ತ ಬಾಗತೊಡಗಿದವು. ಒಮ್ಮೆಯಂತು ನರಭಕ್ಷಕ ಮರದ ಕೆಳಕ್ಕೆ ಬಂದು ಅವನ್ನು ಹಿಡಿಯಲು ಪ್ರಯತ್ನಿಸಿತು. ಕೂಡಲೇ ಮತ್ತೊಂದು ಟೊಂಗೆಗೆ ನೆಗೆದ ಅವನು ಅದರ ಮೇಲೆ ಕುಕ್ಕರಗಾಲಿನಲ್ಲಿ ಕುಳಿತ.

ಅತ್ಯಂತ ಒತ್ತಡಕ್ಕೆ ಸಿಲುಕಿದ ಕಾರ್ಬೆಟ್ ಜೇಬಿನಿಂದ ಸಿಗರೇಟು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀಚಿದಾಗ ತಕ್ಷಣ ಹೊತ್ತಿಕೊಂಡ ಬೆಂಕಿಯ ಬೆಳಕಿಗೆ ಹೆದರಿದ ನರಭಕ್ಷಕ ದೂರ ಸರಿಯಿತು. ರಾತ್ರಿ ಹತ್ತು ಗಂಟೆಯವರೆಗೆ ನಿರಂತರ ಐದು ಸಿಗರೇಟು ಸೇದಿದ ನಂತರ ಅವನ ಮನಸ್ಸು ಸ್ವಲ್ಪ ಮಟ್ಟಿಗೆ ತಹಬದಿಗೆ ಬಂದಿತು . ಆದರೆ, ಬೆಳಗಿನ ಜಾವ ಆರು ಗಂಟೆಯವರೆಗೆ ಮರದ ಮೇಲೆ ಜೀವಭಯದಲ್ಲಿ ಒಂದೇ ಸ್ಥಿತಿಯಲ್ಲಿ ಕೂರಬೇಕಾದ ದುಸ್ಥಿತಿ ಕಾರ್ಬೆಟ್‍ಗೆ ಒದಗಿಬಂತು. ಅದೇ ವೇಳೆಗೆ ಸಣ್ಣಗೆ ಶುರವಾದ ಮಳೆ, ನಂತರ ಆಕಾಶವೇ ಹರಿದು ಹೋದಂತೆ ರಾತ್ರಿಯಿಂದ ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಎಡ ಬಿಡದೆ ಜೋರಾಗಿ ಸುರಿಯಿತು. ಕಾರ್ಬೆಟ್‍ನ ಬಲಿಗಾಗಿ ಕಾದು ಕುಳಿತ್ತಿದ್ದ ನರಭಕ್ಷಕ ಕೂಡ ಮಳೆಯ ಆರ್ಭಟಕ್ಕೆ ಹೆದರಿ ರಕ್ಷಣೆಗಾಗಿ ಪೊದೆಗಳ ಮೊರೆ ಹೋಯಿತು.

ಬೆಳಗಿನ ಜಾವ ಆರು ಗಂಟೆ ಸಮಯಕ್ಕೆ ಸಹಾಯಕ ಬದ್ರಿ ಕಾರ್ಬೆಟ್‍ಗೆ ಚಹಾ ತೆಗೆದುಕೊಂಡು ಬಂದಾಗ, ಮಳೆ ಮತ್ತು ಚಳಿ ಹಾಗೂ ಒಂದೇ ಸ್ಥಿತಿಯಲ್ಲಿ ಮರದ ಮೇಲೆ ಕುಳಿತ ಕಾರ್ಬೆಟ್ ಅಕ್ಷರಶಃ ಜೀವಂತ ಶವವಾಗಿ ಹೋಗಿದ್ದ. ಅವನ ಕೈ ಕಾಲುಗಳು ಮರಗಟ್ಟುಕೊಂಡು ಸೆಟೆದು ಬಿಗಿದುಕೊಂಡಿದ್ದವು, ಬದ್ರಿ ಕಾರ್ಬೆಟ್‍ನನ್ನು ಮರದಿಂದ ಜೋಪಾನವಾಗಿ ಕೆಳಕ್ಕೆ ಇಳಿಸಿ ಹೆಗಲ ಮೇಲೆ ಹೊತ್ತುಕೊಂಡು ಪ್ರವಾಸಿ ಮಂದಿರಕ್ಕೆ ತಂದು ಕೈಕಾಲುಗಳಿಗೆ ಎಣ್ಣೆಯಿಂದ ಮಸಾಜು ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿಸಿದ. ಕಾರ್ಬೆಟ್‍ನ ಶಿಕಾರಿ ಅನುಭವದಲ್ಲಿ ಆ ರಾತ್ರಿ ಮರೆಯಲಾಗದ ಕರಾಳ ಅನುಭವವಾಯಿತು.

(ಮುಂದುವರಿಯುವುದು)

Leave a Reply

Your email address will not be published. Required fields are marked *