Daily Archives: April 16, 2012

ಸಂವಿಧಾನ ಶಿಲ್ಪಿಗೆ 121 ವರ್ಷವಾದರೂ ದಲಿತರಿಗೆ ಭೂಮಿ ದೊರೆತಿಲ್ಲ

-ನವೀನ್ ಸೂರಿಂಜೆ

“ಈ ದೇಶದಲ್ಲಿ ಬೇಕಾದಷ್ಟು ಮಹಾತ್ಮರು ಹುಟ್ಟಿದ್ದಾರೆ. ಹುಟ್ಟುತ್ತಾರೆ. ಆದರೆ ದಲಿತರು ದಲಿತರಾಗಿಯೇ ಸಾಯುತ್ತಾರೆ,” ಎಂದು ಅಂಬೇಡ್ಕರ್ ಹೇಳಿದ್ದರು. ಈ ಮಾತು ಸ್ವತಃ ಅಂಬೇಡ್ಕರ್‌ಗೂ ಅನ್ವಯಿಸುವಂತಹ ಸ್ಥಿತಿ ಈಗಲೂ ಭಾರತದಲ್ಲಿದೆ. ಅಂಬೇಡ್ಕರ್ ಎಂಬ ಮಹಾತ್ಮ ಹುಟ್ಟಿ 121 ವರ್ಷವಾದರೂ ದಲಿತರು ದಲಿತರಾಗಿಯೇ ಸಾಯುತ್ತಿದ್ದಾರೆ.

“ಸ್ವಾತಂತ್ರ್ಯದ ಒತ್ತಡದಲ್ಲಿ ಬ್ರಿಟಿಷರು ತಕ್ಷಣವೇ ಭಾರತವನ್ನು ಬಿಟ್ಟು ಹೋದರೆ ಆ ಸಮಾಜದಲ್ಲಿ ನನ್ನ ಜನಕ್ಕೆ ಭೂಮಿ ಮಾತ್ರ ಅಲ್ಲ ನೀರೂ ಸಿಗುವುದಿಲ್ಲ,” ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ “ವಾಟ್ ಕಾಂಗ್ರೆಸ್ ಆ್ಯಂಡ್ ಗಾಂಧಿ ಹ್ಯಾವ್ ಡನ್ ಟು ದ ಅನ್‍ಟಚೆಬಲ್ಸ್” ಎಂಬ ಪುಸ್ತಕದಲ್ಲಿ ಉಲೇಖಿಸಿದ್ದ ಮಾತು ಅವರ 121 ನೇ ಜನ್ಮದಿನಾಚರಣೆ ಸಂದರ್ಭದಲ್ಲೂ ಅವರದ್ದೇ ಸಂವಿಧಾನವನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇನ್ನೂ ನಿಜವಾಗಿಯೇ ಉಳಿದಿದೆ. ದೇಶದಾದ್ಯಂತ ದಲಿತರು ಈಗಲೂ ಭೂರಹಿತರಾಗಿಯೇ ಇದ್ದರೂ ಲಜ್ಜೆಗೆಟ್ಟ ಸರ್ಕಾರಗಳು ಯಾವುದೇ ರೀತಿಯಲ್ಲೂ ತಪ್ಪಿತಸ್ಥರಲ್ಲದಂತೆ ಅಂಬೇಡ್ಕರ್ ದಿನಾಚರಣೆಯನ್ನು ದೊಡ್ಡದ್ದಾಗಿ ಆಚರಿಸಿದೆ.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಎಪ್ರಿಲ್ 14 ರಂದು ಅಂಬೇಡ್ಕರ್ ಫೋಟೋ ಇಟ್ಟು ಅಂಬೇಡ್ಕರ್ ಭಜನೆ(!) ಮಾಡಿದ್ದಾರೆ. ಕೆಲವೊಂದು ಕಡೆ ನಾಸ್ತಿಕ ಅಂಬೇಡ್ಕರ್ ಫೋಟೋದ ಹಣೆಗೆ ತಿಲಕವಿಟ್ಟು, ಆರತಿ ಎತ್ತಿ ಪೂಜೆ ಸಲ್ಲಿಸಿದರು. ಅಕ್ಷರಶಃ ರಾಜ್ಯದ ಎಲ್ಲಾ ಕಡೆ ಅಂಬೇಡ್ಕರ್‌ಗೆ ಅವಮಾನ ಮಾಡಲಾಗಿತ್ತು. ಆದರೆ ಗಮನ ಸೆಳೆದಿದ್ದು ಬಂಟ್ವಾಳ ತಾಲೂಕು ಪಂಚಾಯತ್‍ನಲ್ಲಿ ನಡೆದ ಸರ್ಕಾರದ ಅಂಬೇಡ್ಕರ್ ದಿನಾಚರಣೆಯಲ್ಲಿ ದಲಿತರೇ ಅಂಬೇಡ್ಕರ್ ಜಯಂತಿಗೆ ತಡೆ ಒಡ್ಡಿ, ಅಂಬೇಡ್ಕರ್ ಭಾವ ಚಿತ್ರದ ಹಣೆಗೆ ಹಚ್ಚಲಾಗಿದ್ದ ತಿಲಕ ಒರೆಸಿ ಫೋಟೋವನ್ನು ವಶಪಡಿಸಿಕೊಳ್ಳುವ ಮೂಲಕ ಅಂಬೇಡ್ಕರ್‌ಗೆ ಸಣ್ಣದೊಂದು ನಮನ ಸಲ್ಲಿಸಿದ್ದು. ವಶಪಡಿಸಿಕೊಂಡ ಫೋಟೋವನ್ನು ರಸ್ತೆಯ ಮಧ್ಯೆ ಇಟ್ಟು ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಿಜವಾಗಿಯೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ದಲಿತನ ಹುಟ್ಟು ಹಬ್ಬವನ್ನು ದಲಿತರು ಕ್ರಾಂತಿಯುತವಾಗಿ ಆಚರಿಸಿದರು. ದಲಿತರ ಈ ಕೋಪ ವೇದಿಕೆಯಲ್ಲಿದ್ದ ಶಾಸಕರ ಸಹಿತ ಜನಪ್ರತಿನಿಧಿಗಳ ಅಸಹನೆಗೆ ಈಡಾಯಿತು. ಇಷ್ಟಕ್ಕೂ ದಲಿತರಿಗೆ ಕೋಪ ಬಂದಿದ್ದಾದರೂ ಏತಕ್ಕೆ ಎಂದು ಒಂದು ಕ್ಷಣವೂ ಅವರೂ ಯೋಚಿಸಿಲ್ಲ.

ದಲಿತರಿಗೆ ಕೋಪ ಬಂದಿದ್ದಾದರೂ ಏತಕ್ಕೆ?

ಕರ್ನಾಟಕ ಭೂ ಮಂಜೂರಾತಿ ಅಧಿನಿಯಮ 1969 ರಂತೆ ಕೃಷಿ ಭೂಮಿ ರಹಿತ ದಲಿತರಿಗೆ ಐದು ಎಕರೆ ಕೃಷಿ ಭೂಮಿ ನೀಡಬೇಕು. ಆದರೆ ರಾಜ್ಯದಲ್ಲಿ ಈ ಭೂಮಿಯ ಸೌಲಭ್ಯವನ್ನು ಪಡೆಯಬೇಕಾದರೆ ಕುಟುಂಬದ ವಾರ್ಷಿಕ ಆದಾಯ 8000 ರೂಪಾಯಿ ಒಳಗಿರಬೇಕಿದೆ. ಈ ವಾರ್ಷಿಕ ಆದಾಯವನ್ನು ಕನಿಷ್ಠ 25,000 ರೂಗಳಿಗೆ ಏರಿಕೆ ಮಾಡಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ದಲಿತರ ಅಸಮಾಧಾನಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದರೂ ವಾರ್ಷಿಕ ಆದಾಯ ಎಂಟು ಸಾವಿರ ದಾಟುತ್ತದೆ. ತಿಂಗಳಿಗೆ 667 ರೂಪಾಯಿ ಸಂಪಾದನೆ ಮಾಡೋ ಕುಟುಂಬವೊಂದು ಬದುಕಲು ಸಾಧ್ಯವಾ ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ದಲಿತ ಕುಟುಂಬಕ್ಕೆ ಭೂಮಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಾರ್ಷಿಕ ಆದಾಯ ಮಿತಿಯನ್ನು ಕನಿಷ್ಠ 25 ಸಾವಿರ ರೂಪಾಯಿಗಳಿಗಾದರೂ ಏರಿಸಿ ಎಂಬುದು ದಲಿತರ ಅಳಲು. ಅದನ್ನು ಖುದ್ದು ಸದಾನಂದ ಗೌಡರಿಗೇ ಬೇಡಿಕೆ ಸಲ್ಲಿಸಿದ್ದರು. ಆದರೆ ಗೌಡರು ಮಾಡಲಾಗಲ್ಲ ಎಂದು ಕಡತವನ್ನು ಮೂಲೆಗೆಸೆದಿದ್ದರು. ನಂತರ ಬಂಟ್ವಾಳ ಶಾಸಕರಿಗೆ ಈ ಬಗ್ಗೆ ದಲಿತರು ಮನವಿ ಮಾಡಿದ್ದರು.

ಬಂಟ್ವಾಳ ಶಾಸಕ ಬಿ. ರಮಾನಾಥ ರೈಯವರು ಇತ್ತೀಚೆಗೆ ವಿಧಾನಸಭೆಯ ಅಧಿವೇಶನದಲ್ಲಿ ದಲಿತರು ಭೂಮಿ ಪಡೆಯಲು ಈ ವಾರ್ಷಿಕ ಆದಾಯ ಮಿತಿಯನ್ನು ಏರಿಕೆ ಮಾಡಬೇಕು ಎಂದು ಕೇಳಿದ್ದರು. ಸಮಾಜದಲ್ಲಿ ಪ್ರತಿಯೊಬ್ಬ ಭೂಮಿರಹಿತ ದಲಿತ ಕುಟುಂಬಗಳಿಗೂ ಕೃಷಿ ಭೂಮಿ ದೊರೆತರೆ ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯಲಿದ್ದಾರೆ ಎಂದು ಅವರು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಸದನದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮಾತ್ರ ಅದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ದಲಿತರ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಇದು ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್‌ರವರ 121ನೇ ಜನ್ಮ ದಿನವನ್ನು ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಚರಿಸಲು ತಡೆಯೊಡ್ಡಿದ ದಲಿತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾತ್ರವಲ್ಲದೆ ಅಂಬೇಡ್ಕರ್‌ರವರ ಭಾವಚಿತ್ರವನ್ನು ಪಂಚಾಯತ್ ಕಚೇರಿ ವೇದಿಕೆಯಿಂದ ಹೊರತಂದು ರಸ್ತೆಯಲ್ಲಿಟ್ಟು ಜನ್ಮದಿನವನ್ನು ಆಚರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ದಲಿತರಿಗೆ ಕೃಷಿ ಭೂಮಿ ದೊರೆತರೆ ದಲಿತರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮೇಲೇರಲು ಮೆಟ್ಟಿಲು ಸಿಕ್ಕಂತಾಗುತ್ತದೆ” ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಅಂಬೇಡ್ಕರ್ ಆಶಯಕ್ಕೇ ವಿರುದ್ಧವಾಗಿರುವ ಮಂದಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ ಎಂದರೂ ದಲಿತರಿಗೆ ಸಿಟ್ಟು ಬಂದಿಲ್ಲವೆಂದರೆ, ಇಲ್ಲಿ ಏನಾಗಿದೆ?.

ಕೋಪ ಬರದೇ ಇರುತ್ತಾ?

1931 ಆಗಸ್ಟ್ 16 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮಹಾತ್ಮಾ ಗಾಂಧಿಯನ್ನು ಭೇಟಿ ಮಾಡುತ್ತಾರೆ. “ಗಾಂಧೀಜಿ.. ನೀವು ನನಗೆ ಮಾತೃಭೂಮಿ ಇದೆ ಅನ್ನುತ್ತೀರಿ. ನಾನು ಇದನ್ನು ಮಾತೃಭೂಮಿ ಎಂದು ಹೇಗೆ ಒಪ್ಪಿಕೊಳ್ಳಲಿ. ಯಾವ ನೆಲದಲ್ಲಿ ದನಗಳಿಗೆ, ಹಂದಿಗಳಿಗೆ, ಕೋಳಿಗಳಿಗೆ ಸಿಗುವಷ್ಟು ಭೂಮಿ ನನ್ನ ಜನಗಳಿಗೆ ಸಿಗುವುದಿಲ್ಲವೋ ಅಂತಹ ನೆಲವನ್ನು ನನ್ನದೆಂದು ಹೇಗೆ ಕರೆದುಕೊಳ್ಳಲಿ. ಸ್ವಾಭಿಮಾನ ಹೊಂದಿರುವ ಯಾವನೇ ಅಸ್ಪ್ರಶ್ಯ ಈ ದೇಶ ನನ್ನದೆಂದು ಹೇಳಲು ಸಾಧ್ಯವಿಲ್ಲ” ಎನ್ನುತ್ತಾರೆ. ಅಂಬೇಡ್ಕರ್‌ರವರು ಈ ಮಾತಿಗೆ ಇನ್ನೂ ಸಾವು ಬಂದಿಲ್ಲ.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಗೋಶಾಲೆ ಮಾಡುತ್ತೇನೆ ಅಂದಾಗ ಆ ಸ್ವಾಮಿ ಕೇಳದೇನೇ ಸರ್ಕಾರ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಸ್ವಾಮಿ ಹೆಸರಿಗೆ ಬರೆಸಿಕೊಡಲು ಮುಂದಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಜಮೀನ್ದಾರಿ ಗುತ್ತಿನ ಮನೆತನದ ಮಂದಿ ಕೋಣಗಳನ್ನು ಓಡಿಸೋ ಕಂಬಳ ಕ್ರೀಡೆಗೆ ಅನಾಮತ್ತು ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಪಿಲಿಕುಳದಲ್ಲಿ ಖಾಸಗಿ ಭೂಮಿಯನ್ನು ಅಧಿಸೂಚನೆಗೊಳಿಸಿ ಕಂಬಳಕ್ಕಾಗಿ ಗದ್ದೆ ನಿರ್ಮಾಣ ಮಾಡಲಾಗಿದೆ. ಮುಜರಾಯಿ ದೇವಸ್ಥಾನದಲ್ಲಿ ಕೋಳಿ ಅಂಕದ ಕೋಳಿ ಕಟ್ಟಲೆಂದೇ ಸರ್ಕಾರಿ ಸ್ಥಳವನ್ನು ಬಳಕೆ ಮಾಡಲಾಗುತ್ತದೆ. ಆದರೆ ದಲಿತರಿಗೆ ಮಾತ್ರ ಹಂಚಲು ಭೂಮಿಯಿಲ್ಲ. ಹೆಚ್ಚೆಚ್ಚು ಅಂದರೆ ಐದು ಸೆಂಟ್ಸ್‌ಗಳ ಕಾಲನಿಯನ್ನು ಸರ್ಕಾರ ದಯಪಾಲಿಸಬಹುದು. ಗೋಶಾಲೆಗೆ, ಕಂಬಳ ಗದ್ದೆಗೆ ಭೂಮಿ ನೀಡಲು  ಕೃಷಿ ಭೂಮಿಯನ್ನು ಬಳಕೆ ಮಾಡಲಾಗುತ್ತದೆ. ದಲಿತರಿಗೆ ಕೃಷಿ ಭೂಮಿ ನೀಡಬೇಕಾದರೆ ವಾರ್ಷಿಕ ಆದಾಯ ಎಂಟು ಸಾವಿರಕ್ಕಿಂತ ಕಡಿಮೆ ಇರಬೇಕು. ಅಂದರೆ ಸ್ಪಷ್ಟವಾಗಿ “ದಲಿತರಿಗೆ ಕೃಷಿ ಭೂಮಿ ನೀಡುವುದಿಲ್ಲ” ಎಂದರ್ಥ.

ತಪ್ಪಿತಸ್ಥರಿಗೆ ಶಿಕ್ಷೆ ಏನು?

ಯಾವಾನೋ ಒಬ್ಬ ಮುಸಲ್ಮಾನ ರಾಜ, ಬಾಬರನೋ ಇನ್ನಾರೋ ಮಾಡಿದ ತಪ್ಪಿಗೆ ದೇಶದ ಮುಸ್ಲಿಮರಿಗೆ ಇಂದಿಗೂ ಶಿಕ್ಷೆ ಕೊಡುವ ಕ್ರಿಯೆಗೆ ವ್ಯವಸ್ಥಿತಿ ಕಾರ್ಯತಂತ್ರಗಳು ನಡೆಯುತ್ತದೆ. ಯಾರೋ ನಾಲ್ಕು ಮಂದಿ ಭಯೋತ್ಪಾದಕರು ಮುಸ್ಲೀಮರಾಗಿದ್ದರು ಎಂಬ ಕಾರಣಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನೇ ಅದಕ್ಕೆ ಹೊಣೆ ಮಾಡಲಾಗುತ್ತದೆ. ಯಾವಾನೋ ಒಬ್ಬ ಮುಸಲ್ಮಾನ ಯಾವುದೋ ಕಾಲದಲ್ಲಿ ದೇವಸ್ಥಾನವನ್ನು ಮಸೀದಿಯಾಗಿಸಿದ ಎಂದು ಈಗಲೂ ಮುಸ್ಲಿಮರ ರಕ್ತಪಾತ ಮಾಡಲಾಗುತ್ತದೆ. ಅದರೆ ಈ ದೇಶದ 60 ಕೋಟಿ ಶೂದ್ರ ಸಮುದಾಯಕ್ಕೆ ಶತಶತಮಾನಗಳಿಗೆ ಅಕ್ಷರ ವಂಚಿಸಿದ, ಮೂವತ್ತು ಕೋಟಿ ದಲಿತ ಸಮುದಾಯಕ್ಕೆ ಭೂಮಿ ಮತ್ತು ಅಕ್ಷರ ಎರಡನ್ನೂ ವಂಚಿಸಿದ ಒಂದು ಧಾರ್ಮಿಕ ವ್ಯವಸ್ಥೆಯನ್ನು ಪ್ರತಿಪಾದಿಸೋ ಜನರಿಗೆ ಯಾವ ಶಿಕ್ಷೆ ಕೊಡಲು ಸಾಧ್ಯವಿದೆ? ಅವರಿಗೆ ಶಿಕ್ಷೆ ಕೊಡಬೇಕು ಎಂಬುದು ಕಾಳಜಿಯೂ ಅಲ್ಲ. ಉದ್ದೇಶವೂ ಅಲ್ಲ. ಆದರೆ ಈ ದೇಶದಲ್ಲಿ ಒಂದು ಆತ್ಮಾವಲೋಕನ ಆಗಬೇಕಿದೆ. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಪ್ರಾಯಶ್ಚಿತ್ತ ಪಟ್ಟುಕೊಂಡು ತಿದ್ದುವಂತಹ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ಭೂರಹಿತರಿಗೆ ಭೂಮಿ ನೀಡುವ, ಶಿಕ್ಷಣರಹಿತರಿಗೆ ಶಿಕ್ಷಣ ನೀಡುವ ಬಗ್ಗೆ ವ್ಯವಸ್ಥೆಗಳು ಸಕ್ರಿಯಗೊಳ್ಳಬೇಕಿದೆ. ಶೇಕಾಡ 96 ರಷ್ಟು ಪರಿಶಿಷ್ಟ ಜಾತಿಯವರಿಗೆ ಈ ರಾಜ್ಯದಲ್ಲಿ ಕೃಷಿ ಭೂಮಿ ಇಲ್ಲ. ದಲಿತರಿಗೆ ಕೃಷಿ ಭೂಮಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಕೆಲಸ ಮಾಡಬೇಕಿದೆ.

ಭೂಮಿಯಿಂದ ಯಾಕೆ ವಂಚಿಸಲಾಯಿತು? ವಂಚಿಸಲಾಗುತ್ತಿದೆ?

ಶತಶತಮಾನಗಳಿಂದಲೂ ದಲಿತರನ್ನು ಭೂಮಿಯಿಂದ ವಂಚಿಸಲಾಗುತ್ತಿದೆ. ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದು ಇಷ್ಟು ಕಾಲ ಕಳೆದರೂ ಇನ್ನೂ ದಲಿತರಿಗೆ ಭೂಮಿ ದೊರೆತಿಲ್ಲ. ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಬಂದಿದ್ದರಿಂದ ಕೆಲವೊಂದು ಜನಾಂಗದ ಶೂದ್ರರು ಭೂಮಿ ಪಡೆದುಕೊಂಡರು. ಆ ಕಾಯ್ದೆಯಿಂದ ಭೂಮಿ ಪಡೆದುಕೊಂಡ ದಲಿತರೆಷ್ಟು ಎಂದು ಕೇಳಿದರೇ, ದಲಿತರು ಕನಿಷ್ಠ ಉಳುವವರೂ ಆಗಿರಲಿಲ್ಲ. ಭೂಮಿ ದೊರೆಯುವ ಸಾಧ್ಯತೆಯೇ ಇರಲಿಲ್ಲ. ಈ ದೇಶದ ಮೂಲ ನಿವಾಸಿಗಳಾದ ದಲಿತರನ್ನು ಭೂಮಿಯಿಂದ ವಂಚಿಸುವುದರ ಹಿಂದೆ ಅಸ್ಪ್ರಶ್ಯತೆಯನ್ನು ಜಾರಿಯಲ್ಲಿಡುವ ಗುಪ್ತ ಅಜೆಂಡಾವಿದೆ. ಒಂದಂತೂ ಸ್ಪಷ್ಟ. ಅಸ್ಪ್ರಶ್ಯತೆ ಮತ್ತು ಜಾತೀಯತೆ ಎನ್ನುವುದು ಬ್ರಾಹ್ಮಣಿಕೆಯ ಜೀವಾಳ. ಅದಿಲ್ಲದೆ ಬ್ರಾಹ್ಮಣ/ವೈದಿಕ ಧರ್ಮ ಬದುಕುವುದಿಲ್ಲ. 30 ಕೋಟಿ ಇರುವ ದಲಿತ ಸಮುದಾಯವನ್ನು ಅಕ್ಷರದಿಂದ ಮತ್ತು ಭೂಮಿಯಿಂದ ವಂಚಿಸಿದಂತಹ ಪಾಪವನ್ನು ವೈದಿಕ ಆಚಾರ-ವಿಚಾರಗಳು ಮಾಡಿವೆ. ಆ ಮೂಲಕ ಅಸ್ಪ್ರಶ್ಯತೆಯನ್ನು ಜಾರಿಯಲ್ಲಿಡಲಾಗುತ್ತದೆ. ಈ ದೇಶದಲ್ಲಿ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ , ಪರಂಪರೆ ಹೆಸರಿನಲ್ಲಿ ಅಸ್ಪ್ರಶ್ಯರ ಮೇಲೆ ನಿರಂತರ ದೌರ್ಜನ್ಯಗಳು, ದಬ್ಬಾಳಿಕೆಗಳು, ಆತ್ಯಾಚಾರಗಳನ್ನು ನಡೆಸಲಾಗಿದೆ. ಅದಕ್ಕೆ ಅಂಬೇಡ್ಕರ್ ಹೇಳುತ್ತಾರೆ. “ಅಕ್ಷರ ಮತ್ತು ಭೂಮಿಯನ್ನು ನನ್ನ ಜನಗಳಿಂದ ವಂಚಿಸಿದ ಧರ್ಮವು ಈ ನೆಲವನ್ನು ಅಸ್ಪ್ರಶ್ಯನೊಬ್ಬ ತನ್ನದೆಂದು ಹೇಳಿಕೊಳ್ಳಲು ಸಾದ್ಯವಿಲ್ಲದಂತೆ ಮಾಡಿದೆ. ಒಂದು ವೇಳೆ ನನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನ ಕಾರ್ಯಚಟುವಟಿಕೆಯಿಂದ ಈ ದೇಶಕ್ಕೆ ತೊಂದರೆಯಾದರೆ ಅದಕ್ಕೆ ನೀವು ಕಾರಣರಾಗುತ್ತೀರಿ. ನಾನಲ್ಲ. ಒಂದು ವೇಳೆ ನನ್ನ ಕಾರ್ಯಚಟುವಟಿಕೆಯಿಂದ ಈ ದೇಶಕ್ಕೆ ಒಳ್ಳೆಯದಾದರೆ, ಅದು ನನ್ನ ಅಂತಃಸಾಕ್ಷಿಯಿಂದಲೇ ಹೊರತು ಬೇರೇನೂ ಅಲ್ಲ. ನಿಮ್ಮ ನೆಲದ ಮೇಲಿರುವ ಅಥವಾ ಧರ್ಮದ ಮೇಲಿರುವ ಪ್ರೀತಿಯಿಂದ ಅಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಅಂಬೇಡ್ಕರ್ ಜಯಂತಿಗೆ ಬಂಟ್ವಾಳದಲ್ಲಿ ದಲಿತರು ತಡೆಯೊಡ್ಡಿದ್ದೇ ನಿಜವಾದ ಅಂಬೇಡ್ಕರ್ ಜಯಂತಿ ಎಂದು ಕಂಡಿದೆ. ವೇದಿಕೆಯಲ್ಲಿ ಸರ್ವಾಲಂಕೃತಗೊಂಡಿದ್ದ ಅಂಬೇಡ್ಕರ್ ಫೋಟೋವನ್ನು ರಸ್ತೆಗೆ ತಂದು ಅಂಬೇಡ್ಕರ್ ದಿನಾಚರಣೆ ಮಾಡಿದ್ದು ಅರ್ಥಪೂರ್ಣವಾಗಿಯೇ ಕಾಣುತ್ತದೆ. ಎಲ್ಲಾ ದಲಿತರಿಗೆ ಅವರ ಹಕ್ಕಿನ ಕೃಷಿಭೂಮಿ ದೊರೆತಾಗ ಮಾತ್ರ ಅಂಬೇಡ್ಕರ್ ಜಯಂತಿಗೊಂದು ಅರ್ಥ ಬರುತ್ತದೆ. ಅತ್ತ ಕಡೆ ಧರ್ಮದಲ್ಲೂ ಇಲ್ಲ. ಇತ್ತ ಕಡೆ ಬದುಕಲು ಕನಿಷ್ಠ ಭೂಮಿಯೂ ಇಲ್ಲ ಎಂಬ ಪಾಡು ದಲಿತರದ್ದು. ಹಿಂದೂ ಧರ್ಮ ಎಂದರೆ ಅಲ್ಲಿ ದಲಿತರು ಎಂಜಲು ತಿನ್ನುತ್ತಿರಬೇಕು. ಅಂಬೇಡ್ಕರ್ ಮಾಡಿದಂತೆ ಬೌದ್ಧ ಧರ್ಮಕ್ಕೆ ಹೋದರೆ ಅಲ್ಲಿದ್ದವರು ಈಗ ನವ ಬೌದ್ಧರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಹೋದರೆ ಅಲ್ಲಿ ದಲಿತರು ದಲಿತ ಕ್ರಿಶ್ಚಿಯನ್ನರಾಗುತ್ತಾರೆ! ದಲಿತರು ಯಾವುದನ್ನು ತನ್ನದೆಂದು ಅಪ್ಪಿಕೊಳ್ಳಲಿ? ಕ್ರಿಶ್ಚಿಯಾನಿಟಿಯಲ್ಲಿ ಜಾತಿ ಇಲ್ಲ. ಆದರೆ ದಲಿತ ಕ್ರಿಶ್ಚಿಯನ್ ಎಲ್ಲಿಂದ ಆಯಿತು? ಕ್ರಿಶ್ಚಿಯನ್ನರಲ್ಲಿ ದಲಿತ ಕ್ರಿಶ್ಚಿಯನ್ನರು ಇರುವುದೇ ಆದರೆ ಬ್ರಾಹ್ಮಣ ಕ್ರಿಶ್ಚಿಯನ್ ಎಂಬ ಮತ್ತೊಂದು ಜಾತಿಯೂ ಇರಬೇಕಲ್ಲವೇ? ಅದೆಲ್ಲಾ ಸಾಯಲಿ, ಧರ್ಮಗಳ ಪರಂಪರೆಯೇ ಅಂತದ್ದು, ನಮ್ಮದೇ ಹಕ್ಕಿನ ಕೃಷಿಭೂಮಿ ಕೊಡಿ, ಎಂದಷ್ಟೇ ದಲಿತರು ಕೇಳುತ್ತಿದ್ದಾರೆ.