Daily Archives: April 17, 2012

ಅಂಬೇಡ್ಕರ್ ಸಂವಿಧಾನ V/s ಭಾರತದ ಸಂವಿಧಾನ

– ಶಿವಸುಂದರ್

ದೇಶ 61ನೇ ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದೆ. ಹಾಗೆಂದರೇನು? ಯಥಾ ಪ್ರಕಾರ ದೆಹಲಿಯಲ್ಲಿ ನಮ್ಮ ರಕ್ಷಣಾ ಪಡೆಗಳು ಅಮೆರಿಕ, ಇಸ್ರೇಲ್ ಮತ್ತಿತರ ದೇಶಗಳಿಂದ ಕೊಂಡುಕೊಂಡ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ನೆರೆಹೊರೆಯ ದೇಶಗಳಿಗೆ ಭೀತಿ ಬಿತ್ತಲು ಮತ್ತು ರಾಜ್ಯದಲ್ಲಿ ಶಾಲಾ ಮಕ್ಕಳು ಬಾಲಿವುಡ್‌ನ  ಪ್ಲಾಸ್ಟಿಕ್ ದೇಶಪ್ರೇಮದ ಹಾಡುಗಳಿಗೆ ಡ್ಯಾನ್ಸ್ ಮಾಡಲು ಹಾಗೂ ಟಿವಿ ಚಾನೆಲ್‌ಗಳು  ಹಸಿ ಮತ್ತು ಹುಸಿ ದೇಶಪ್ರೇಮದ ಚಲನಚಿತ್ರಗಳನ್ನು ದಿನವಿಡೀ ಪ್ರದರ್ಶಿಸಲು ಸಜ್ಜಾಗುವುದು ಎಂದೇ ಆರ್ಥವಾಗಿಬಿಟ್ಟಿದೆ. ಈ ನಡುವೆ ಎಲ್ಲಾ ಕಡೆ ದೇಶದ ಬಾವುಟವನ್ನು ಹಾರಿಸಿದಾಗ ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಮತ್ತು ನಮ್ಮ ಸಂವಿಧಾನದ ಬಗ್ಗೆ ಈ ದೇಶದ ಪ್ರಭುಗಳೆಲ್ಲಾ ಹಾಡಿ ಹೊಗಳಾಡುವುದು ವಾಡಿಕೆಯಾಗಿಬಿಟ್ಟಿದೆ. ಅದರ ಜೊತೆಜೊತೆಗೆ ನಮ್ಮದು ಪ್ರಪಂಚದಲ್ಲಿ ಅತ್ಯುತ್ತಮ ಸಂವಿಧಾನವೆಂಬ ಹೆಗ್ಗಳಿಕೆಯನ್ನು ಹೇಳಿಕೊಳ್ಳುವುದಲ್ಲದೆ ಇದನ್ನು ದೇಶಕ್ಕೆ ನೀಡಿದ ಸಂವಿಧಾನ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಎಂಬುದನ್ನೂ ನೆನಪಿಸಿಕೊಳ್ಳಲಾಗುತ್ತದೆ.

ಕೇಳಲೇ ಬೇಕಾದ ಪ್ರಶ್ನೆಗಳು!

ಅಂಬೇಡ್ಕರ್ ಅವರ ಬದುಕಿನ ಆಶಯಗಳನ್ನು, ಅವರ ಹೋರಾಟಗಳನ್ನು ಹಾಗೂ ಈ ದೇಶದ ಎಲ್ಲಾ ಶೋಷಿತ ಮತ್ತು ದಮನಿತ ಜನತೆಯ ವಿಮೋಚನೆಗಾಗಿ-ಕೇವಲ ದಲಿತರ ವಿಮೋಚನೆಗಲ್ಲ-ಅವರು ನಡೆಸಿದ ಸತತ ಸಂಘರ್ಷವನ್ನು ಹಾಗೂ ಸಹಸ್ರಾರು ವರ್ಷಗಳಿಂದ ಜಾತಿ-ವರ್ಗಗಳ ಶೋಷಣೆಯಿಂದ ಕಂಗೆಟ್ಟಿದ್ದ ಈ ದೇಶ ಸ್ವಾತಂತ್ರ್ಯ-ಸಮಾನತೆ-ಭ್ರಾತೃತ್ವಗಳ ನೆಲೆಗಟ್ಟಿನಲ್ಲಿ ಹೊಸ ದಾರಿಯಲ್ಲಿ ನಡೆಯಲು ಮಾರ್ಗವನ್ನಿರಿಸಿದ ಅವರ ದಾರ್ಶನಿಕ ಚಿಂತನೆಯನ್ನು ಅರ್ಥಮಾಡಿಕೊಂಡಿರುವ ಎಲ್ಲರಿಗೂ ಸಂವಿಧಾನದ ಜೊತೆ ಅಂಬೇಡ್ಕರ್ ಹೆಸರು ಜೋಡಿಸಿದೊಡನೆ ಸಂವಿಧಾನದ ಬಗ್ಗೆಯೂ ಅದೇ ರೀತಿಯ ಭಾವನೆಗಳು ಮೂಡುತ್ತವೆ. ಅದು ಸಹಜ. ಆದರೆ 63 ವರ್ಷಗಳ ನಂತರವೂ, ಒಂದು ‘ಅತ್ಯುತ್ತಮ’ ಸಂವಿಧಾನವನ್ನು ಈ ದೇಶ ಹೊಂದಿದ್ದರೂ  ಈ ದೇಶದ ಶೋಷಿತರ ಪರಿಸ್ಥಿತಿ, ದಲಿತರ ದಮನ, ರೈತಾಪಿಗಳ ಸಂಕಷ್ಟ ದಿನೇ ದಿನೇ ಹೆಚ್ಚುತ್ತಲೇ ಇರುವುದು ಏಕೆ? 1947ಕ್ಕೇ ಹೋಲಿಸಿದರೂ ಈ ದೇಶದಲ್ಲಿ ಶೇ.60 ಜನರ ಆಹಾರ ಬಳಕೆ ಕಡಿಮೆಯೇ ಆಗುತ್ತಿರುವುದು ಏಕೆ? ದಲಿತರ ಮೇಲಿನ ದಮನ ಇನ್ನೂ ಹೊಸಹೊಸ ರೂಪಗಳನ್ನು ಪಡೆದುಕೊಂಡು ಭೀಕರ ರೂಪದಲ್ಲಿ ಮುಂದುವರೆಯುತ್ತಿರುವುದೇಕೆ? ನಮ್ಮ ಆರ್ಥಿಕ ನೀತಿಗಳು ಮತ್ತು ಸಮಾಜಿಕ ನೀತಿಗಳು ಈ ದೇಶದ ಯಾರನ್ನೂ ಜಾತಿ-ಲಿಂಗ-ವರ್ಗದ ಆಧಾರದಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಎಂದು ಅಂಬೇಡ್ಕರ್ ಅವರೇ ಖುದ್ದಾಗಿ ರಚಿಸಿದ ಸಂವಿಧಾನದ ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಸಾಮಾಜಿಕವಾಗಿ ಶೂದ್ರ-ದಲಿತರನ್ನು ಹೊರಗಿಡುವ ಹಿಂದೂತ್ವ ಮತ್ತು ಆರ್ಥಿಕವಾಗಿ ಎಲ್ಲಾ ಬಡವರನ್ನು ಇನ್ನಷ್ಟು ಬಡತನದ ಕೂಪಕ್ಕೆ ತಳ್ಳುತ್ತಿರುವ ಜಾಗತೀಕರಣಗಳೇ ರಾಜ್ಯಭಾರ ಮಾಡಲು ಸಾಧ್ಯವಾದದ್ದು ಹೇಗೆ?

ಇವೆಲ್ಲವೂ ಕೇವಲ ಸಂವಿಧಾನದ ಅನುಷ್ಟಾನದಲ್ಲಿ ಇರುವ ಸಮಸ್ಯೆಯೋ? ಅಥವಾ ಸಂವಿಧಾನದ ರಚನೆಯಲ್ಲೇ ಇದ್ದ ಸಮಸ್ಯೆಯೋ? ಆದ್ದರಿಂದಲೇ ಅಂಬೇಡ್ಕರ್ ಅವರು ಕನಸಿದ ಸಂವಿಧಾನವೂ ಮತ್ತು ಅಂತಿಮವಾಗಿ ಸಂವಿಧಾನ ರಚನಾ ಸಭೆ ನೀಡಿದ ಸಂವಿಧಾನವೂ ಎರಡೂ ನಿಜಕ್ಕೂ ಒಂದೇ ಆಗಿದೆಯೇ ಎಂಬ ಪ್ರಶ್ನೆಯನ್ನು ಈಗಲಾದರೂ ಹಾಕಿಕೊಳ್ಳಬೇಕಾಗುತ್ತದೆ… ಅಲ್ಲವೇ?

ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಪಡೆದುಕೊಳ್ಳಬೇಕೆಂದರೆ ಈ ದೇಶದ ಸಂವಿಧಾನವನ್ನು ರಚಿಸಿದ ಪ್ರಧಾನಶಕ್ತಿಗಳು ಯಾವುವು? ಮತ್ತು ಸಂವಿಧಾನ ರಚನಾ ಸಭೆಯಲ್ಲಿ ನಿಜಕ್ಕೂ ಅಂಬೇಡ್ಕರ್ ಕನಸಿದ ಸಮಾಜವಾದಿ ಆಶಯಗಳಿಗೂ ಮತ್ತು ಸಂವಿಧಾನ ಸಭೆಯಲ್ಲಿದ್ದ ಇತರ ಶಕ್ತಿಗಳಿಗೂ ನಡೆದ ವಾಗ್ವಾದಗಳೇನು? ಮತ್ತು ಅಂತಿಮವಾಗಿ ಅಂಬೇಡ್ಕರ್ ಈ ಸಂಘರ್ಷದಲ್ಲಿ,  ಈ ದೇಶದ ವರ್ಣಾಶ್ರಮ ವ್ಯವಸ್ಥೆಗೆ ಬಲಿಯಾಗಿ ಶೋಷಿತರು ಶತಶತಮಾನಗಳಿಂದ ಕನಸು ಕಾಣಲು ಸಾಧ್ಯವಾಗದೇ ಇದ್ದ  ಕೆಲವು ಮೂಲಭೂತ ಹಕ್ಕುಗಳನ್ನು ಸಂಘರ್ಷದ ಮೂಲಕ ಗಳಿಸಿಕೊಟ್ಟಿದ್ದು ನಿಜವೇ ಆದರೂ, ದಮನಿತ ಜನರ ಸಮಗ್ರ ವಿಮೋಚನೆಗೆ ಈ ಸಂವಿಧಾನ ನಿಜಕ್ಕೂ ಪೂರಕವಾಗುತ್ತದೆ ಎಂದು ಭಾವಿಸಿದ್ದರೆ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ.

ಸಂವಿಧಾನ ರಚನಾ ಸಭೆ-ಉಳ್ಳವರಿಂದ ಉಳ್ಳವರಿಗಾಗಿ:

ಮೊದಲನೆಯದಾಗಿ ಈ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಲು ಬಂದ ಬ್ರಿಟನ್ನಿನ ಕ್ಯಾಬಿನೆಟ್ ಮಿಷನ್ನಿನ ಸಲಹೆಯ ಮೇರೆಗೆ ಈ ದೇಶದಲ್ಲಿ ಸಂವಿಧಾನ ರಚನಾ ಸಭೆಯೊಂದು ರೂಪುಗೊಂಡಿತು. ಆದರೆ ಈ ಸಂವಿಧಾನ ರಚನಾ ಸಭೆಯು ಆಯ್ಕೆಯಾಗುವುದು ಹೇಗೆ? ಅದಕ್ಕೆ ಬ್ರಿಟಿಷರು ಸೂಚಿಸಿದ ಮಾನದಂಡ ಮತ್ತು ಕಾಂಗ್ರೆಸ್ ನಾಯಕರು ಒಪ್ಪಿಕೊಂಡ ಮಾನದಂಡ ಎಂದರೆ ಪರೋಕ್ಷ ಮತದಾನ. 1935ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಕೆಳಗೆ ಬ್ರಿಟಿಷರೇ ರಚಿಸಿದ ‘government of india’ ನಡಿ ಈ ದೇಶದಲ್ಲಿ ಪ್ರಾಂತೀಯ ಅಸೆಂಬ್ಲಿಗಳನ್ನು ರಚಿಸಲಾಗಿತ್ತು. ಅದು ಬಡವರು, ದಲಿತರು, ಅನಕ್ಷರಸ್ಥರು ಎಲ್ಲರೂ ಸೇರಿ ಮಾಡಿದ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾದ ಅಸೆಂಬ್ಲಿಗಳಲ್ಲ. ಬದಲಿಗೆ ಪದವೀಧರರು ಮತ್ತು ಆಸ್ತಿವಂತರಿಗೆ ಮಾತ್ರ ಮತದಾನದ ಹಕ್ಕಿದ್ದ ಮತಕ್ಷೇತ್ರಗಳ ಮೂಲಕ ಆಯ್ಕೆಯಾದ ಅಸೆಂಬ್ಲಿಗಳು. ಸಹಜವಾಗಿಯೇ ವಿದ್ಯೆ ಮತ್ತು ಆಸ್ತಿಗಳೆರಡೂ ಮೇಲ್ಜಾತಿ ಮತ್ತು ಮೇಲ್ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಈ ದೇಶದಲ್ಲಿ ಈ ಮೂಲಕ ಆಯ್ಕೆಯಾದ ಶೇ.90ರಷ್ಟು ಜನ ಮೇಲ್ವರ್ಗ ಮತ್ತು ಮೇಲ್ಜಾತಿಗಳಿಗೆ ಸೇರಿದವರಾಗಿದ್ದು ಮಾತ್ರವಲ್ಲ. ಮೇಲ್ವರ್ಗ ಮತ್ತು ಮೇಲ್ಜಾತಿಗಳ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವುಳ್ಳವರೇ ಆಗಿದ್ದರು.

ಸಂವಿಧಾನ ರಚನಾ ಸಭೆ ಆಯ್ಕೆಯಾಗಿದ್ದು ಈ ಪ್ರಾಂತಿಯ ಸಭೆಗಳ ಸದಸ್ಯರಾಗಿದ್ದವರ ಮತದಾನದಿಂದ! ಅಂದರೆ ಒಂದು ಅಂದಾಜಿನ ಪ್ರಕಾರ ಈ ದೇಶದ ಶೇ.17ರಷ್ಟು ಜನ ಮಾತ್ರ ಮಾಡಿದ ಮತದಾನದ ಮೂಲಕ.! ಹಾಗೆಯೇ ಸಂವಿಧಾನ ರಚನಾ ಸಭೆಗೆ ಪ್ರಧಾನವಾಗಿ ಆಯ್ಕೆಯಾದದ್ದು ಮೇಲ್ಜಾತಿ ಮತ್ತು ಮೇಲ್ವರ್ಗಗಳ ಹಿತಾಸಕ್ತಿಗಳೇ!! (1)

ಅಂತಿಮವಾಗಿ 292 ಸದಸ್ಯರು ಈ ರೀತಿಯ ಪರೋಕ್ಷ ಮತದಾನದಿಂದ ಆಯ್ಕೆಯಾದರೆ ಇನ್ನೂ 93 ಸದಸ್ಯರನ್ನು ರಾಜಸಂಸ್ಥಾನಗಳು ಅಂದರೆ ಊಳಿಗಮಾನ್ಯ ದೊರೆಗಳು ತಮ್ಮ ಪ್ರತಿನಿಧಿಗಳನ್ನಾಗಿ ನೇಮಿಸಿದರು! ಇನ್ನು ನಾಲಕ್ಕು ಜನರನು ಚೀಫ್ ಕಮಿಷನರೇಟ್ ಅಡಿಯಲ್ಲಿದ್ದ ಪ್ರಾಂತ್ಯಗಳಿಂದ ನೇಮಿಸಲಾಯಿತು. ಹೀಗೆ ಒಟ್ಟು  389 ಸದಸ್ಯರ ಭಾರತದ ಸಂವಿಧಾನ ರಚನಾ ಸಭೆ ರೂಪುಗೊಂಡಿತು. ಆದರೆ 1947ರಲ್ಲಿ ದೇಶವಿಭಜನೆಯಾದ ನಂತರ ಒಟ್ಟು ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಕುಸಿಯಿತು. (2)

ಇದೇ ಸಮಯದಲ್ಲಿ ಎರಡನೇ ಪ್ರಪಂಚ ಯುದ್ಧದ ನಂತರ ಫ್ಯಾಸಿಸ್ಟ್ ಆಳ್ವಿಕೆಯಿಂದ ವಿಮೋಚನೆಗೊಂಡ ಇಟಲಿಯನ್ನೂ ಒಳಗೊಂಡಂತೆ ಹಲವಾರು ನವ ವಿಮೋಚಿತ ಮತ್ತು ಬಡ ದೇಶಗಳ ಸಂವಿಧಾನ ರಚನಾ ಸಭೆ  ಸಾರ್ವತ್ರಿಕ ಮತದಾನದ ಮೂಲಕವೇ ಆಯ್ಕೆಯಾಗಿದ್ದನ್ನು ಇಲ್ಲಿ ಗುರುತಿಸಲೇ ಬೇಕು. ಹೀಗೆ ಭಾರತದ ಪ್ರಜಾತಾಂತ್ರಿಕ ಸಂವಿಧಾನ ರಚನೆಯ ಬುನಾದಿಯೇ ಅಪ್ರಜಾತಾಂತ್ರಿಕವಾಗಿತ್ತು.

ಅಂಬೇಡ್ಕರರನ್ನು ಹೊರಗಿಡಲು ನಡೆದ ಹುನ್ನಾರಗಳು:

ಇನ್ನು ಈ ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗುವುದಿರಲಿ  ಸದಸ್ಯರಾಗುವುದಕ್ಕೇ ಅಂಬೇಡ್ಕರ್ ಪಟ್ಟ ಪಾಡು ಈ ಸಂವಿಧಾನ ರಚನಾ ಸಭೆಯ ಅಪ್ರಜಾತಾಂತ್ರಿಕ ನೆಲೆಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. (3)

ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಕಾಂಗ್ರೆಸ್ ನಾಯಕತ್ವದ ಸ್ವತಂತ್ರ ಭಾರತದಲ್ಲಿ ಹಿಂದೂ ಸವರ್ಣೀಯರ ಭಾರತವಾಗುತ್ತದೆಯೇ ವಿನಃ ದಲಿತ ಭಾರತವಾಗುವುದಿಲ್ಲ ಎಂದು ಸ್ಪಷ್ಟವಾಗಿ ಮನಗಂಡು ದಲಿತರಿಗೆ ಸ್ವತಂತ್ರ ಭಾರತದಲ್ಲಿ ಗೌರವನೀಯ ಮತ್ತು ಪ್ರತ್ಯೇಕ ಸ್ಥಾನಮಾನಕ್ಕೆ ಪೂನಾ ಒಪ್ಪಂದದ (1932) ದಿನಗಳಿಂದಲೂ ಹೋರಾಡುತ್ತಿದ್ದ ಅಂಬೇಡ್ಕರ್ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗುವುದು ಕಾಂಗ್ರೆಸ್ಸಿಗರಿಗೆ ಬೇಡವಾಗಿತ್ತು. ಬ್ರಿಟನ್ನಿನ ಕ್ಯಾಬಿನೆಟ್ ಕಮಿಷನ್ ಭಾರತಕ್ಕೆ ಬಂದಾಗ ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಅಂಬೇಡ್ಕರ್ ನೇತೃತ್ವದ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್- ಈಮೂರೂ ಶಕ್ತಿಗಳ ಒಡಂಬಡಿಕೆಯ ಆಧಾರದ ಮೇಲೆ ಹೊಸ ಸಂವಿಧಾನ ಮತ್ತು ಸ್ವತಂತ್ರ ಭಾರತದ ಸ್ವರೂಪ ರೂಪುಗೊಳ್ಳುವುದೆಂಬ ಅಭಿಪ್ರಾಯವನ್ನು ನೀಡಲಾಗಿತ್ತು. ಆದರೆ ಕಾಂಗ್ರೆಸ್ನ ಕುತಂತ್ರದಿಂದಾಗಿ 1946ರಲ್ಲಿ ನಡೆದ ಪ್ರಾಂತಿಯ ಅಸೆಂಬ್ಲಿ ಚುನಾವಣೆಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಸೋಲನ್ನಪ್ಪಿತ್ತು. ಈ ಅಸೆಂಬ್ಲಿ ಸದಸ್ಯರೇ ಸಂವಿಧಾನ ರಚನಾ ಸಭೆಯನ್ನು ಆಯ್ಕೆ ಮಾಡಬೇಕಾದ್ದರಿಂದ ಅಂಬೇಡ್ಕರ್ರವರ ಸೋಲು ಪೂರ್ವನಿಶ್ಚಿತವೇ ಆಗಿಬಿಟ್ಟಿತು. ಇದು ಪೂನಾ ಒಪ್ಪಂದದಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಮತ್ತು ಮತದಾನ ನೀಡದೆ ಕೆಲವು ಸವರ್ಣೀಯರು ಮತ್ತು ದಲಿತರು ಇಬ್ಬರೂ ಓಟು ಹಾಕಿ ದಲಿತ ಅರ್ಭ್ಯಥಿಯನ್ನು ಗೆಲ್ಲಿಸುವ ಇಂದು ಜಾರಿಯಲ್ಲಿರುವ ಮತದಾನ ಪದ್ಧತಿಯ ಸಹಜ ಪರಿಣಾಮವೇ ಆಗಿತ್ತು. ದಲಿತನೇ ಗೆದ್ದು ಬಂದರೂ ಮೇಲ್ಜಾತಿ ಹಂಗಿನಲ್ಲಿರುವ ದಲಿತ ಮಾತ್ರ ಗೆದ್ದು ಬರುವಂಥ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಮತ್ತವರ ಫೆಡರೇಷನ್ ಗೆದ್ದು ಬರುವುದು ಕಷ್ಟವೇ ಆಗಿತ್ತು. ಆದ್ದರಿಂದಲೇ ಹಿರಿಯ ಅಂಬೇಡ್ಕರ್ವಾದಿ ಚಿಂತಕ ಭಗವಾನ್ ದಾಸ್ರವರು ಪೂನಾ ಒಪ್ಪಂದದ ಪರಿಣಾಮವನ್ನು ವಿಶ್ಲೇಷಿಸುತ್ತಾ ದಲಿತರಿಗೆ ಹೆಚ್ಚಿನ ಸೀಟುಗಳು ಸಿಕ್ಕವು. ಆದರೆ ಹಕ್ಕುಗಳು ಸಿಕ್ಕಿದ್ದು ಕೆಲವು. ಅಧಿಕಾರವಂತೂ ಸಿಗಲೇ ಇಲ್ಲ ಎಂದು ಮಾರ್ಮಿಕವಾಗಿ ವಿಶ್ಲೇಷಣೆ ಮಾಡುತ್ತಾರೆ.

ಸಂವಿಧಾನ ರಚನಾ ಸಭೆಯಲ್ಲಿ 30 ದಲಿತರು ಆಯ್ಕೆಯಾದರು. ಆದರೆ ಅಂಬೇಡ್ಕರ್ ಆಯ್ಕೆಯಾಗಲಿಲ್ಲ. ಆದರೆ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದ ಮತ್ತೊಬ್ಬ ದಲಿತ ನಾಯಕ ಜೋಗೇಂದ್ರ ನಾಥ್ ಮಂಡಲ್ರವರು ಬಂಗಾಳ ಪ್ರಾಂತ್ಯದಿಂದ ಅಂಬೇಡ್ಕರ್ ಗೆದ್ದು ಸಂವಿಧಾನ ರಚನಾ ಸಭೆ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಆದರೆ  1947ರಲ್ಲಿ ದೇಶ ವಿಭಜನೆಯಾಗಿ ಬಂಗಾಳವೂ ವಿಭಜನೆಯಾದ ನಂತರ ಮತ್ತೆ ಅಂಬೇಡ್ಕರ್ ಸಂವಿಧಾನ ಸಭೆಯಿಂದ ಹೊರಗುಳಿಯಬೇಕಾಯಿತು.  ಆದರೆ ಅಂಬೇಡ್ಕರ್ರವರು ಆ ವೇಳೆಗಾಗಲೇ ದೇಶದ ಮತ್ತು ಶೊಷಿತ ಜನರ ಪ್ರಶ್ನಾತೀತ ನಾಯಕರಾಗಿದ್ದರಿಂದ ಕಾಂಗ್ರೆಸ್ಗೆ ಅಂಬೇಡ್ಕರ್ ನುಂಗಲಾರದ ಬಿಸಿತುಪ್ಪವೇ ಆಗಿದ್ದರು. ಆದರೇ ಸಸವರ್ಣೀಯರ ಸಮಾಜದ ಔದಾರ್ಯ ರೂಪದ ಹಂಗಿನ ಕುತಂತ್ರವನ್ನು ಅರ್ಥಮಾಡಿಕೊಂಡಿದ್ದ ಏಕೈಕ ನಾಯಕರಾಗಿದ್ದ ಅಂಬೇಡ್ಕರ್ರವರನ್ನು ಹೊರಗಿಡುವುದು ತಮಗೇ ಅಪಾಯಕಾರಿ ಎಂದು ಅರ್ಥಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕತ್ವ ಅವರನ್ನೂ ಸಹ ರಚನಾ ಸಮಿತಿಯ ಸದಸ್ಯರನ್ನಾಗಿಸಿಕೊಂಡಿತು. ತಮ್ಮ ರಾಜಕೀಯ ಹೋರಾಟದ ಉದ್ದಕ್ಕು ಕಾಂಗ್ರೆಸ್ಸನ್ನು ಎದುರಾಗುತ್ತಲೇ ಬಂದಿದ್ದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯನ್ನೂ ಒಂದು ಸಂಘರ್ಷದ ಕಣವಾಗಿ ಪರಿಗಣಿಸಿ ಅದರ ಭಾಗವಾಗಲು ಒಪ್ಪಿದರು. ಮತ್ತೊಂದು ಕಡೆ ಮುಸ್ಲಿಂ ಭೂಮಾಲೀಕ ಹಾಗೂ ಶ್ರೀಮಂತರ ಪಕ್ಷವಾಗಿದ್ದ ಮುಸ್ಲಿಂ ಲೀಗ್ ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲೆಲ್ಲಾ ಗೆದ್ದಿತು. ಇಲ್ಲಿಯೂ ಮುಸ್ಲಿಂ ಬಡವರ ಅಥವಾ ಕೆಳಜಾತಿ ಅಜ್ಲಫ್ ಮತು ಅಲ್ಜಾರ್ ಮುಸ್ಲಿಮರ ಪ್ರಾತಿನಿಧ್ಯ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಕಾಂಗ್ರೆಸ್ಸಿನೊಳಗೆ ಆಚಾರ್ಯ ಕೃಪಲಾನಿಯಂತ ಕಾಂಗ್ರೆಸ್ಸನ್ನು ಒಳಗಿನಿಂದ ಸಮಾಜಮುಖಿ ಮಾಡಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ನ ಕಾಂಗ್ರೆಸ್ ಸೋಷಿಯಲಿಸ್ಟ್ ಬಣದವರು ಆಯ್ಕೆಯಾದದ್ದು ಸಹ ಅಪವಾದವೇ ಹೊರತು ನಿಯಮವಾಗಿರಲಿಲ್ಲ. ಇನ್ನು ಕಮ್ಯುನಿಸ್ಟ್ ಪಕ್ಷದ ಸೋಮನಾಥ್ ಲಾಹರಿ ಎಂಬುವರು ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾದರೂ ದೇಶ ವಿಭಜನೆಯ ನಂತರ ಅವರು ಪೂರ್ವ ಪಾಕಿಸ್ತಾನದ ಭಾಗವಾದ್ದರಿಂದ ಭಾರತದ ಸಂವಿಧಾನ ಸಭೆಯಿಂದ ಹೊರಬಿದ್ದರು.

ಹೀಗೆ ಸಂವಿಧಾನದ ಕರ್ತೃ ಎಂದೇ ಕರೆಸಿಕೊಳ್ಳಲ್ಪಡುವ ಅಂಬೇಡ್ಕರ್ ಸಂವಿಧಾನ ರಚನಾ ಸಭೆಯ ಸದಸ್ಯರಾಗುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ಸಿಗರೇ ಅಂದರೆ ಮೇಲ್ಜಾತಿ ಮತ್ತು ಮೇಲ್ವರ್ಗದ ಜನ ಅಥವಾ ಅವರ ಹಿತಾಸಕ್ತಿಯನ್ನು ಪ್ರಶ್ನಿಸಿದ ಜನರೇ ಮೆಜಾರಿಟಿಯಲ್ಲಿದ್ದ ಸಂವಿಧಾನ ರಚನಾ ಸಭೆ ಎಷ್ಟರ ಮಟ್ಟಿಗೆ ಅಂಬೇಡ್ಕರ್ ಅವರ ನೀತಿ ನಿಲುವುಗಳನ್ನು ಒಪ್ಪಿಕೊಂಡಿರಲು ಸಾಧ್ಯ? (4)

ಸಂವಿಧಾನ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರಾಗಿದ್ದದ್ದು ಡಾ.ಸಚ್ಚಿದಾನಂದ ಸಿನ್ಹಾ ಎಂಬ ಬ್ರಿಟಿಷ್ ಸೇವಾಸಕ್ತರು. (5)

ನಂತರದಲ್ಲಿ ಸಂವಿಧಾನ ಸಭೆಯ ಶಾಶ್ವತ ಅಧ್ಯಕ್ಷರಾಗಿ ನಂತರ ಭಾರತದ ಪ್ರಥಮ ರಾಷ್ಟ್ರಪತಿಯಾದವರು ಬಾಬು ರಾಜೇಂದ್ರ ಪ್ರಸಾದರು. ಈ ಮಹಾಶಯರು ತಾವು ರಾಷ್ಟ್ರಪತಿಯಾದ ನಂತರ ನೂರು ಜನರ ಬ್ರಾಹ್ಮಣರ ಪಾದವನ್ನು ತೊಳೆದು ತಮ್ಮ ನಿಷ್ಠೆ ಎಲ್ಲಿದೆ ಎಂದು ತೋರಿದವರು. ಇವರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದ ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾರವರು  ಯಾರ ಕೈಗಳು ಬ್ರಾಹ್ಮಣರ ಪಾದವನ್ನು ತೊಳೆಯುತ್ತದೋ ಅದು ಶೂದ್ರರನ್ನು ಒದೆಯುವ ಕಾಲುಗಳನ್ನೂ ಹೊಂದಿರುತ್ತದೆ ಎಂದು ಆಗಲೇ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. (6)

ಈ ಸಂವಿಧಾನ ರಚನಾ ಸಭೆ ನಿಯಮ, ನಡವಾಳಿ, ಹಣಕಾಸು, ರಾಜ್ಯದ ಹಕ್ಕು, ಕೇಂದ್ರದ ಅಧಿಕಾರ, ಅಲ್ಪಸಂಖ್ಯಾತರ ಹಕ್ಕು, ಹಣಕಾಸು ಇನ್ನಿತರ ವಿಷಯಗಳ ಬಗ್ಗೆ ಹಲವಾರು ಉಪಸಮಿತಿಯನ್ನು ರಚಿಸಿತು. ಅದರಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ನಡೆಯುವ  ಚರ್ಚೆಯನ್ನು ಸಂಗ್ರಹಿಸಿ ಸಂವಿಧಾನದ ಕರಡನ್ನು ರಚಿಸುವ ಮತ್ತೊಂದು ಪ್ರಧಾನ ಜವಾಬ್ದಾರಿಯುತ ಸಮಿತಿಯಾದ ಕರಡು ರಚನಾ ಸಮಿತಿಗೆ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಹೀಗೆ ಅಂಬೇಡ್ಕರ್ ಒಬ್ಬ ಸದಸ್ಯರಾಗಿ ಉದ್ದಕ್ಕೂ ಶೋಷಿತ-ದಲಿತರ ಆಸಕ್ತಿಗಳನ್ನು ಪ್ರತಿನಿಧಿಸುತ್ತಾ ಅವರ ಪರವಾಗಿ ಹೋರಾಡುತ್ತಾ ಬಂದರಾದರೂ ಅವರ ಧ್ವನಿ ಸಂವಿಧಾನ ರಚನಾ ಸಭೆಯಲ್ಲಿ ಹಲವಾರು ಬಾರಿ ಬಹುಮತವನ್ನು ಪಡೆದುಕೊಳ್ಳಲಾಗಲಿಲ್ಲ. ಇಷ್ಟರ ನಡುವೆಯೂ ಅಂಬೇಡ್ಕರ್ ಕೆಲವು ಶೋಷಿತ ಜನರ ಪರವಾದ ಹಕ್ಕುಗಳನ್ನು ಅಂಗೀಕಾರ ಮಾಡುವಂತೆ ಯಶಸ್ವಿಯಾದರು. ಆದರೂ ಅಂಬೇಡ್ಕರ್   ರವರೇ ಸಂವಿಧಾನ ಸಭೆಯ ಅಂತಿಮ ಭಾಷಣದಲ್ಲಿ ಮತ್ತು 1956ರರಲ್ಲಿ ನಿಧನರಾಗುವತನಕ ಮಾಡಿದ ಹೋರಾಟಗಳಲ್ಲಿ, ಈ ಸಂವಿಧಾನ ಸಂಪೂರ್ಣವಾಗಿ ಶೊಷಿತರ ವಿಮೋಚನೆಗೆ ಪೂರಕವಾಗುವುದಿಲ್ಲ ಎಂಬ ಮೂಲಭೂತ ಅನುಮಾನವನ್ನು ಮತ್ತು ಆಕ್ರೋಶವನ್ನು ಸ್ಪಷ್ಟವಾಗಿಯೇ ವ್ಯಕ್ತಪಡಿಸಿದ್ದಾರೆ.  ಹೀಗಾಗಿ ಅಂತಿಮವಾಗಿ ಹೊರಬಂದ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ ಸಂವಿಧಾನ ಎಂದು ಕರೆಯುವ ಮೂಲಕ ಅಂಬೇಡ್ಕರ್ರವರ ಹೋರಾಟದ ಬಗ್ಗೆ ತಪ್ಪು ಚಿತ್ರಣವನ್ನೇ ಕೊಟ್ಟಂತಾಗುತ್ತದೆ. ಏಕೆಂದರೆ ಇಂದು 63 ವರ್ಷಗಳ ಸಂವಿಧಾನಬದ್ಧ ಆಡಳಿತದ ನಂತರವೂ ಈ ದೇಶದ ಶೊಷಿತರ ಬದುಕು ಇನ್ನಷ್ಟು ಅಧಃಪತನವಾಗಲು ಕಾರಣವಿರುವುದು ಸಂವಿಧಾನದ ಅನುಷ್ಠಾನದ ವೈಫಲ್ಯದಲ್ಲಲ್ಲ. ಬದಲಿಗೆ ಸಂವಿಧಾನದಲ್ಲೇ ಆ ಮೂಲಭೂತ ಲೋಪವಿದೆ.

ಅಂಬೇಡ್ಕರ್ ಅವರು ಕನಸಿದ ನಿಜವಾದ ಸಂವಿಧಾನದ ರೂಪುರೇಷೆಗಳೇನೆಂಬುದನ್ನು ಅರ್ಥಮಾಡಿಕೊಂಡರೆ 1950ರ ಜವರಿ 28ರಂದು ಈ ದೇಶಕ್ಕೆ ನೀಡಲಾದ ಸಂವಿಧಾನದ ಮೂಲಕ ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳು-ಬಂಡವಾಳಶಾಹಿಗಳು, ಭೂಮಾಲೀಕರು ಮತ್ತು ಬ್ರಾಹ್ಮಣವಾದಿಗಳು-  ಮೂಲಭೂತವಾಗಿಯೇ ಹೇಗೆ ಈ ದೇಶದ ಜನರಿಗೆ ದ್ರೋಹ ಮಾಡಿದರೆಂಬುದು ಅರ್ಥವಾಗುತ್ತದೆ.

ಅಂಬೇಡ್ಕರ್ ರಚಿಸಿದ ಸಂವಿಧಾನ ಇದು!

1947ರಲ್ಲಿ ದೇಶ ವಿಭಜನೆಯಾಗಿ ಅಂಬೇಡ್ಕರ್ ಆಯ್ಕೆಯಾಗಿದ್ದ ಬಂಗಾಳ ಪ್ರಾಂತ್ಯದಿಂದ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿದ್ದ  ಅಂಬೇಡ್ಕರರ ಸದಸ್ಯತ್ವ ರದ್ದುಗೊಂಡಿದ್ದ ಸಂದರ್ಭದಲ್ಲಿ ಅಂಬೇಡ್ಕರ್ರವರು ಈ ದೇಶದ ಭವಿಷ್ಯದ ಸಂವಿಧಾನ ಹೇಗಿರಬೇಕೆಂಬ ಬಗ್ಗೆ 1947ರ ಮಾರ್ಚ್ ನಲ್ಲಿ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ- ‘States and Minorities: What are Their Rights and How to Secure them in the Constitution of Free India, ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು: ಅವರ ಹಕ್ಕುಗಳೇನು ಮತ್ತು ಅದನ್ನು ಸ್ವತಂತ್ರ ಭಾರತದ ಸಂವಿಧಾನದ ಮೂಲಕ ಪಡೆದುಕೊಳ್ಳುವ ಬಗೆ ಹೇಗೆ’ ಎಂಬ ಮನವಿಯೊಂದನ್ನು ಸಿದ್ಧಪಡಿಸಿದರು. (7) (ಇಲ್ಲಿ ಅಲ್ಪಸಂಖ್ಯಾತರು ಎಂದು ಕರೆದಿರುವುದು ಕೇವಲ ಧಾರ್ಮಿಕ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಮಾತ್ರವಲ್ಲ).ಇದನ್ನು ಅಂಬೇಡ್ಕರ ಕನಸಿದ ‘ Constitution of the United States of India’ ಎಂದೂ ಬಣ್ಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಪ್ರಸ್ತಾಪಿತವಾಗಿರುವ ಸರ್ವತಂತ್ರ ಭಾರತದ ರೂಪುರೇಷೆ ಮತ್ತು ಅದನ್ನು ಆಗುಮಾಡುವ ಶಾಸನಬದ್ಧ ಪರಿಗಳನ್ನು 1950ರ ಜನವರಿ 26ರಂದು ದೇಶಕ್ಕೆ ಕೊಡಮಾಡಲಾದ ಸಂವಿಧಾನವನ್ನೂ ಹೋಲಿಸಿ ನೋಡಿದಲ್ಲಿ ಅಂಬೇಡ್ಕರ್ ಅವರ ಸಂವಿಧಾನಕ್ಕೂ ಈ ದೇಶದ ಸಂವಿಧಾನಕ್ಕೂ ಇರುವ ಮೂಲಭೂತ ವ್ಯತ್ಯಾಸಗಳೂ ಗೊತ್ತಾಗುತ್ತದೆ.

ಸ್ಟೇಟ್ಸ್ ಅಂಡ್ ಮೈನಾರಿಟೀಸ್ ನಲ್ಲಿ ಅಂಬೇಡ್ಕರ್ ರವರು ಇಂದು ಐರೋಪ್ಯ ಮಾದರಿಯ ಪಾರ್ಲಿಮೆಂಟರಿ  ಪ್ರಜಾತಂತ್ರ ಯೂರೋಪಿನಲ್ಲೂ ಅಲ್ಲಿನ ಜನರನ್ನು ಬಿಡುಗಡೆ ಮಾಡಿಲ್ಲ. ಭಾರತದಂತ ದೇಶದಲ್ಲಂತೂ ಕೇವಲ ಪಾರ್ಲಿಮೆಂಟರಿ  ಪ್ರಜಾತಂತ್ರದಿಂದ ಈ ದೇಶದ ಜನರ ವಿಮೋಚನೆ ಸಾಧ್ಯವೇ ಇಲ್ಲವೆಂದು ಅಭಿಪ್ರಾಯಪಡುತ್ತಾರೆ. ಒಂದು ಪಾರ್ಲಿಮೆಂಟರಿ ಪ್ರಜಾತಂತ್ರಕ್ಕೆ ಸ್ವಾತಂತ್ರ್ಯ-ಲಿಬರ್ಟಿ ಮಾತ್ರ ಹೆಚ್ಚು ಪ್ರಿಯ ಮತ್ತು ಆದ್ಯತೆಯದ್ದು. ಆ ನಂತರವೇ ಸಮಾನತೆ ಅಥವಾ ಭ್ರಾತೃತ್ವ. ಆದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪರಂಪರಾನುಗತ ಅಸಮಾನತೆಯುಳ್ಳ ದೇಶವೊಂದರಲ್ಲಿ ಕೇವಲ ಸ್ವಾತಂತ್ರ್ಯ ಅಥವಾ ಕೇವಲ ಶಾಸನಬದ್ಧ ರಾಜಕೀಯ ಸಮಾನತೆ ಶೊಷಕ ವರ್ಗಗಳಿಗೆ ಮಾತ್ರ ಇನ್ನೂ ಹೆಚ್ಚು ಸ್ವಾತಂತ್ರ್ಯವನ್ನು ಕೊಡುತ್ತದೆ. ಅದು ಹೇಗೆಂದೂ ಕೂಡಾ ಅಂಬೇಡ್ಕರ್ರವರು ಸ್ಪಷ್ಟವಾಗಿ ವಿವರಿಸುತ್ತಾರೆ. ಅಂಬೇಡ್ಕರ್ ಹೇಳುವಂತೆ ಇಲ್ಲಿ ಸ್ವಾತಂತ್ರ್ಯವೆಂದರೆ ಆರ್ಥಿಕ  ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸರ್ಕಾರದ ಮಧ್ಯಪ್ರವೇಶದಿಂದ ಸ್ವತಂತ್ರ್ಯಕ್ಕೆ ಎಂದರ್ಥ. ಅಂದರೆ ಒಬ್ಬ ಭೂಮಾಲಿಕ ಗೇಣಿದಾರನಿಗೆ ಹೇಚ್ಚು ತೆರಿಗೆ ಅಥವಾ ಪಾಲು ಕೊಡಬೇಕೆಂದು ಜುಲುಮೆ ಮಾಡುವ ಸ್ವಾತಂತ್ರ್ಯ. ಅಥವಾ ಒಬ್ಬ ಬಂಡವಾಳಿಗನಿಗೆ ಕೆಲಸದ ಅವಧಿಯನ್ನು ಹೆಚ್ಚಿಸಲು ಮತ್ತು ಕಡಿಮೆ ಕೂಲಿಯನ್ನು ಕೊಡಲು ಸ್ವಾತಂತ್ರ್ಯ. ಇದೇ  ಈ ಸ್ವಾತಂತ್ರ್ಯಕ್ಕೆ ಅರ್ಥ. ಏಕೆಂದರೆ ಸ್ವಾತಂತ್ರ್ಯ- ಲಿಬರ್ಟಿಯ ಅರ್ಥವೇ ಸರ್ಕಾರದ ಮಧ್ಯಪ್ರವೇಶ ಕಡಿಮೆಯಾದಾಗ ಏನು ಉಳಿಯುತ್ತದೋ ಅದು ಎಂದು. ಆದರೆ ಒಂದು ಸಮಾಜ ಅಥವಾ ಕಾರ್ಖಾನೆ ನಡೆಯಲು ಯಾವುದಾದರೂ ಒಂದು ನಿಯಮ ಇರಲೇ ಬೇಕಾಗುತ್ತದೆ, ಸರ್ಕಾರ ಆ ನಿಯಮ ಮಾಡದಿದ್ದರೆ ಬಂಡವಾಳಿಗರು ಅಥವಾ ಭೂಮಾಲೀಕರೇ ಆ ಕಾನೂನು ಮಾಡುತ್ತಾರೆ. ಹೀಗಾಗಿ ಒಂದು ಅಸಮಾನ ಸಮಾಜದಲ್ಲಿ ಕೇವಲ ‘ಲಿಬರ್ಟಿ’ಯೆಂಬುದು ಶೋಷಕ ವರ್ಗಗಳ ಸರ್ವಾಧಿಕಾರವೆಂದೇ ಅರ್ಥ ಎನ್ನುತ್ತಾರೆ ಅಂಬೇಡ್ಕರ್. ಇಂಥಾ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಗಳಿಸಿಕೊಳ್ಳುವ ಸಮಾನತೆ ಸಾರಾಂಶದಲ್ಲಿ ಜನರ ಬದುಕಿನಲ್ಲಿ ಯಾವ ಅರ್ಥವನ್ನೂ ನೀಡುವುದಿಲ್ಲ. ಹೀಗಾಗಿ  ಆರ್ಥಿಕ  ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಸಮಾನತೆಯನ್ನು ಸಾಧಿಸಿಕೊಡುವಂಥಹ ಸಂವಿಧಾನ ಅತ್ಯಗತ್ಯ.

ಆದರೆ ಪ್ರಪಂಚದೆಲ್ಲೆಡೆ ಪಾರ್ಲಿಮೆಂಟರಿ  ಪ್ರಜಾಪ್ರಭುತ್ವಗಳು ರಾಜಕೀಯ ಸಮಾನತೆಯನ್ನು ಮಾತ್ರ ಸಂವಿಧಾನಾತ್ಮಕ ಶಾಸನಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಶಾಸನ ಸಭೆಗಳ ಮರ್ಜಿಗೆ ಬಿಟ್ಟಿವೆ. ಆದರೆ ಚುನಾವಣಾ ಪದ್ಧತಿಯಲ್ಲಿ ಪ್ರಬಲರೇ ಆರಿಸಿ ಬರುತ್ತಿರುವುದು ಎಲ್ಲಾ ಪಾರ್ಲಿಮೆಂಟರಿ  ಪ್ರಜಾಪ್ರಭುತ್ವಗಳ ಕಥೆಯೇ ಆಗಿರುವುದರಿಂದ ಯಾವ  ಪಾರ್ಲಿಮೆಂಟರಿ  ಪ್ರಜಾಪ್ರಭುತ್ವಗಳಲ್ಲೂ  ಆರ್ಥಿಕ  ಮತ್ತು ಸಾಮಾಜಿಕ ಸಮಾನತೆ ಜಾರಿಗೆ ಬಂದಿಲ್ಲ ಎಂದು ಅಂಬೇಡ್ಕರ್ ಎಚ್ಚರಿಸುತ್ತಾರೆ. ಸಾಮಾಜಿಕ ಮತ್ತು  ಆರ್ಥಿಕ ಸಮಾನತೆಯಿಲ್ಲದ ದೇಶಗಳಲ್ಲಿ ‘ಒಬ್ಬ ಮನುಷ್ಯನಿಗೆ ಒಂದು ಓಟು’ ಎಂಬ  ಪಾರ್ಲಿಮೆಂಟರಿ  ಪ್ರಜಾಪ್ರಭುತ್ವದ ಮೂಲಭೂತ ರಾಜಕೀಯ ಆಶಯ ‘ಒಂದು ಓಟು ಒಂದು ಮೌಲ್ಯ’ವಾಗಿ ಪರಿವರ್ತನೆಯಾಗುವುದೇ ಇಲ್ಲ ಎಂದು ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ನ ನಾಲ್ಕನೇ ಅಂಶಕ್ಕೆ ನೀಡಿರುವ ವಿವರಣಾ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸುತ್ತಾರೆ. ಮತ್ತು ಅದಕ್ಕೆ ಕಾರಣ ಐರೋಪ್ಯ ದೇಶಗಳ  ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಒಬ್ಬರಿಗೆ ಒಂದು ಓಟು ಮತ್ತು ಸಾರ್ವತ್ರಿಕ ಮತದಾನವೆಂಬ ರಾಜಕೀಯ ಮೌಲ್ಯಗಳನ್ನು ದಾಟಿ ಮುಂದಕ್ಕೆ ಹೋಗದೇ ಇರುವುದೇ ಕಾರಣವೆಂದೂ ವಿವರಿಸುತ್ತಾರೆ.

ಹಾಗಾದರೆ ಸಾಮಾಜಿಕ ಮತ್ತು  ಆರ್ಥಿಕ ಸಮಾನತೆಯನ್ನು ರಾಜಕೀಯ ಸಮಾನತೆಯ ಜೊತೆಗೆ ಈಡೇರಿಸಿಕೊಳ್ಳುವ ಬಗೆ ಹೇಗೆ ಎಂಬ ಪ್ರಶ್ನೆಗೆ ಅಂಬೇಡ್ಕರ್ ಅದಕ್ಕೆ ಇರುವ ಒಂದೇ ಉತ್ತರ ಡಿಕ್ಟೇಟರ್ಶಿಪ್-ನಿರಂಕುಶತ್ವ ಅಥವಾ ಪ್ರಭುತ್ವ ಸಮಾಜವಾದ- ಸ್ಟೇಟ್ ಸೋಷಿಯಲಿಸಂ- ಮೂಲಕ ಮಾತ್ರ ರಾಜಕೀಯ ಸಮಾನತೆಯನ್ನು ತರಲು ಸಾಧ್ಯ ಎಂದು ಉತ್ತರಿಸುತ್ತಾರೆ.   ಆದರೆ ಯಾವ ಸ್ವಾತಂತ್ರ್ಯ ಪ್ರೇಮಿಯೂ ನಿರಂಕುಶತ್ವವನ್ನೂ ಒಪ್ಪಲಾರ. ಅದೇರೀತಿ ಸಮಾಜವಾದದ ಬಗೆಗೆ ಒಲವಿರುವ ಯಾವ ಪಾರ್ಲಿಮೆಂಟರಿ  ಪ್ರಜಾತಂತ್ರವಾದಿಯೂ ನಿರಂಕುಶತ್ವಕ್ಕೆ ಒಪ್ಪಲಾರ ಎಂದು ಕೂಡಲೇ ವಿವರಿಸುವ ಅಂಬೇಡ್ಕರ್ ಹಾಗಿದ್ದಲ್ಲಿ ಏಕಕಾಲದಲ್ಲಿ ಪಾರ್ಲಿಮೆಂಟರಿ  ಪ್ರಜಾಪ್ರಭುತ್ವವೂ, ಸ್ವಾತಂತ್ರ್ಯವೂ ಉಳಿದುಕೊಂಡು ಪ್ರಭುತ್ವ ಸಮಾಜವಾದ ಜಾರಿಗೆ ಬರಬೇಕೆಂದರೆ ಮೂಲಭೂತ ಹಕ್ಕುಗಳ ಭಾಗವಾಗಿಯೇ ಸಂವಿಧಾನಾತ್ಮಕ ಶಾಸನವಾಗಿ ಸಾಮಾಜಿಕ- ಆರ್ಥಿಕ ಸಮಾನತೆಯೂ ಜಾರಿಗೆ ಬರುವಂತಹ ಸಂವಿಧಾನ ರಚನೆಯಾಗಬೇಕೆಂದೂ ಆಗ್ರಹಿಸುತ್ತಾರೆ. ಅಂದರೆ ಓಟು ಹಾಕುವ ಹಕ್ಕಿನಂತೆ  ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಹಕ್ಕೂ ಸಹ ಮೂಲಭೂತ ಹಕ್ಕಾಗುವುದು ಇದರ ಹಿಂದಿನ ಆಶಯ. ಇದು ಮೂಲಭೂತ ಹಕ್ಕಾಗಿಸದೆ  ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸುವ ಗುರಿಯನ್ನು ಸಂಸತ್ತಿನ ಶಾಸನಾತ್ಮಕ ಅಧಿಕಾರಕ್ಕೆ ಬಿಟ್ಟುಬಿಟ್ಟರೆ ಸಮಾನತೆ ಸಾದ್ಯವೇ ಇಲ್ಲವೆಂದು ಅಂಬೇಡ್ಕರ್ ಖಚಿತವಾಗಿ ಹೇಳುತ್ತಾರೆ. ಏಕೆಂದರೆ ಅಸಮಾನತೆಯೇ ಉಸಿರಾಗಿರುವ ದೇಶದಲ್ಲಿ ಮೊದಲನೆಯದಾಗಿ ಸಮಾನತೆಯ ಆಶಯವುಳ್ಳ ಜನರಿಗೆ ಅಧಿಕಾರ ಸಿಗುವುದು ಕಷ್ಟ. ಹಾಗೊಮ್ಮೆ ಸಿಕ್ಕರೂ ಅವರೇ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆ ಎಂಬುದಕ್ಕೆ ಪ್ರಪಂಚದ ಯಾವುದೇ ಪಾರ್ಲಿಮೆಂಟರಿ  ಪ್ರಜಾಪ್ರಭುತ್ವದಲ್ಲಿ ಪುರಾವೆಯಿಲ್ಲ. ಹೀಗಾಗಿ ಒಮ್ಮೆ ಪ್ರಭುತ್ವ ಸಮಾಜವಾದ ಪರವಾಗಿ ಅಧಿಕಾರಕ್ಕೆ ಬರುವ ಪಕ್ಷ ಮಾಡುವ ಶಾಸನವನ್ನು ಅದಕ್ಕೆ ತದ್ವಿರುದ್ಧವಾದ ಅಶಯಗಳನ್ನು ಇಟ್ಟುಕೊಂಡ ಪಕ್ಷ ಅಧಿಕಾರಕ್ಕೆ ಬಂದಾಗ ರದ್ದುಗೊಳಿಸಬಹುದು. ಆದರೆ ಅದು ಸಂವಿಧಾನಾತ್ಮ ಶಾಸನವಾದರೆ. ಯಾವ ಸರ್ಕಾರಗಳೂ ಕಿತ್ತುಕೊಳ್ಳದ ಮೂಲಭೂತ ಹಕ್ಕಾದರೆ ಮಾತ್ರ ಅಂಥ ಪ್ರಜಾಪ್ರಭುತ್ವ ಜನರಲ್ಲಿ ಸಮಾನತೆಯನ್ನು ತರಲು ಸಾಧ್ಯವಾಗಬಹುದು. ಆದ್ದರಿಂದಲೇ ಸಾಮಾಜಿಕ ಮತ್ತು ಆರ್ಥಿಕ  ಸಮಾನತೆಯ ಹಕ್ಕೂ ಸಹ ಮೂಲಭೂತ ಹಕ್ಕಾಗಬೇಕೆಂದೂ ಸಂವಿಧಾನಾತ್ಮಕ ಕಾನೂನಾಗಬೇಕೆಂದೂ ಆಗ್ರಹಿಸುತ್ತಾರೆ. ಹಾಗೂ ಇಂದು ಭಾರತದಲ್ಲಿ ಸಂವಿಧಾನ ಸಭೆಯಲ್ಲಿ ರಚಿತವಾಗುತ್ತಿರುವ ಸಂವಿಧಾನದಿಂದ ಈ ಗುರಿಗಳು ಈಡೇರಲು ಖಂಡಿತಾ ಸಾದ್ಯವಿಲ್ಲವೆಂದು ಸಾಕಷ್ಟು ಸ್ಪಷ್ಟವಾಗಿಯೇ ಹೇಳುತ್ತಾರೆ. (8)

ಆದ್ದರಿಂದ ತಮ್ಮ  ಸ್ಟೇಟ್ಸ್ ಅಂಡ್ ಮೈನಾರಿಟೀಸ್ ಕ್ಲಾಸ್ 4ರಲ್ಲಿ  ರಾಜಕೀಯ ಸಮಾನತೆಯ ಜೊತೆಜೊತೆಗೆ ಹೇಗೆ ಆರ್ಥಿಕ  ಮತ್ತು ಸಾಮಾಜಿಕ ಸಮಾನತೆ ತರಬೇಕೆಂಬುದರ ಬಗ್ಗೆ ಸಾಂವಿಧಾನಿಕ ಕಲಮುಗಳನ್ನು ರೂಪಿಸುತ್ತಾರೆ.

“ಸ್ಟೇಟ್ ಅಂಡ್ ಮೈನಾರಿಟೀಸ್”ನ ಕಲಂ 4ರ ಕೆಲವು ಮುಖ್ಯಾಂಶಗಳು ಹೀಗಿವೆ:

 • ಎಲ್ಲಾ ಕೀಲಕ ಕೈಗಾರಿಕೆಗಳ ಮತ್ತು ವಿಮೆ ಉದ್ಯಮಗಳ ಸಂಪೂರ್ಣ ಒಡೆತನ ಪ್ರಭುತ್ವದ್ದೇ ಆಗಿರಬೇಕು ಹಾಗೂ ಎಲ್ಲಾ ಶ್ರಮಜೀವಿಗಳಿಗೂ ಕಡ್ಡಾಯವಾಗಿ ಸರ್ಕಾರ ವಿಮೆ ಮಾಡಿಸಬೇಕು
 • ಕೃಷಿಯ ರಾಷ್ಟ್ರೀಕರಣವಾಗಿ ಅದನ್ನು  ಸರ್ಕಾರವೇ ಸಂಪೂರ್ಣವಾಗಿ ವಹಿಸಿಕೊಳ್ಳಬೇಕು.
 • ಖಾಸಗಿ ವ್ಯಕ್ತಿಗಳ ಬಳಿ ಇರುವ ಎಲ್ಲಾ ಜಮೀನನ್ನೂ  ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅದಕ್ಕೆ ಅವರಿಗೆ ಕೊಡುವ ಪರಿಹಾರವನ್ನು ಸಕರ್ಾರದ ಹಣದ ರೂಪದಲ್ಲಲ್ಲದೇ ಡಿಬೆಂಚರ್ ರೂಪದಲ್ಲಿ ಕೊಡಬೇಕು. ಆ ಡಿಬೆಂಚರ್ (ಅಂದರೆ ಮುಂದೆ ಒಂದು ನಿಗದಿತ ಮೊತ್ತದ ಹಣ ಪಾವತಿ ಮಾಡುವುದಾಗಿ ನೀಡುವ ಪ್ರಮಾಣ ಪತ್ರ) ಅನ್ನು ಯಾವಾಗ ನಗದಾಗಿ ಕೊಡಬೇಕೆಂಬ ತೀರ್ಮಾನ  ಸರ್ಕಾರವೇ ಮಾಡಬೇಕು.
 • ಎಲ್ಲಾ ಕೃಷಿ ಜಮೀನನ್ನು  ಸರ್ಕಾರವೆ ವಶಪಡಿಸಿಕೊಂಡು ಅದನ್ನು ಉಳುಮೆ ಮಾಡಲು ಹಳ್ಳಿಯ ರೈತರಿಗೆ ಉಳುಮೆ ಮಾಡಲು ಗೇಣಿಗೆ ಬಿಟ್ಟುಕೊಡುತ್ತದೆ.
 • ಕೃಷಿ ಭೂಮಿ ಹಂಚಿಕೆಮಾಡುವಾಗ ಜಾತಿ-ಮತಗಳ ಬೇಧವಿಲ್ಲದೆ ಮತ್ತು ಭೂಮಾಲೀಕ, ಭೂ ಹೀನ ಕಾರ್ಮಿಕನೆನ್ನುವ ವರ್ಗಗಳು ಹುಟ್ಟದ ರೀತಿ ಹಂಚಿಕೆಯಾಗಬೇಕು.
 • ಕೃಷಿಗೆ ಬೇಕಾದ ಸಲಕರಣೆಗಳು ಇತ್ಯಾದಿ ಸಹಾಯವನ್ನು ಸರ್ಕಾರವೇ ಮಾಡಬೇಕು. ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲಾ ಯೋಜನೆಗಳನ್ನು ಸಂವಿಧಾನ ಜಾರಿಗೆ ಬಂದ ನಂತರ ತ್ವರಿತವಾಗಿ ಮತ್ತು ಹೆಚ್ಚೆಂದರೆ ಹತ್ತು ವರ್ಷದೊಳಗೆ ಜಾರಿಗೆ ತರಲೇಬೇಕು.

ಇದು ಅಂಬೇಡ್ಕರ್ ಕಂಡಿದ್ದ ಕನಸಿನ ಸಂವಿಧಾನ… ಇದೇ ನಿಜಕ್ಕೂ ಸಾಕಾರಗೊಂಡಿದ್ದರೆ…ರೆ!!?

ಇದರ ಜೊತೆಗೆ ಭಾರತದ ಬಹುಧರ್ಮೀಯ ಮತ್ತು ಬಹುಸಮುದಾಯವುಳ್ಳ ಸಮಾಜದಲ್ಲಿ ಒಂದು ಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಓಟು ಪಡೆಯುವವರು ಮಾತ್ರ ಗೆಲ್ಲುವ ಚುನಾವಣೆ ವ್ಯವಸ್ಥೆ ಅಲ್ಪಸಂಖ್ಯಾತರಿಗೆ ಅನ್ಯಾಯವನ್ನೇ ಮಾಡುತ್ತದೆ ಮತ್ತು ಬಹುಸಂಖ್ಯಾತರ ಮತ್ತು ಪ್ರಬಲರ ರಾಜ್ಯಭಾರವನ್ನೇ ಮುಂದುವರೆಸುತ್ತದೆ ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಹೀಗಾಗಿ ಬಹುಸಂಖ್ಯಾತರ ಸೀಟುಗಳು ಶೇ.40ರಷ್ಟನ್ನು ದಾಟದಂತೆ ಶಾಸನವಾಗಬೇಕೆಂಬುದೂ ಅವರ ಆಗ್ರಹವಾಗಿತ್ತು. ಅಲ್ಪಸಂಖ್ಯಾತರಿಗೆ ಅದರಲ್ಲೂ ಅತಿ ಅಲ್ಪಸಂಖ್ಯಾತರಿಗೆ ಅವರ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿನ ಸೀಟುಗಳು ದೊರಕುವುದನ್ನು ಶಾಸನಬದ್ಧಗೊಳಿಸದಿದ್ದರೆ ಈ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ಶೋಷಣೆ ಅವ್ಯಾಹತವಾಗಿ ಮುಂದುವರೆಯುತ್ತದೆ ಎಂಬುದೂ ಅವರ ನಿಲುವಾಗಿತ್ತು. ಅದೇರೀತಿ ಚುನಾವಣಾ ಪದ್ಧತಿಯಲ್ಲಿ ಈಗಿನ ಒಂದುಕ್ಷೇತ್ರದಲ್ಲಿ ಇತರರಿಗಿಂತ ಹೆಚ್ಚು ಮತ ಪಡೆಯುವವರು ಗೆಲ್ಲುವ First-Past-The-Post (FPTP ) ಪದ್ಧತಿಗೆ ಬದಲಾಗಿ ಒಟ್ಟು ಪಡೆದ ಓಟುಗಳಾಧಾರದ ಸೀಟು ಪದ್ಧತಿ (proportionate election system)) ಹೆಚ್ಚು ಸೂಕ್ತವೆಂಬುದೂ ಅಂಬೇಡ್ಕರ್ ಅವರ ನಿಲುವಾಗಿತ್ತು. ಹಾಗೆಯೇ Single Transferable Vote (STV ) ಪದ್ಧತಿಯ ಪ್ರಕಾರ ಮತದಾರರು ಸ್ಪರ್ಧಿಸಿದ ಅಭ್ಯಥಿಗಳಿಗೆ ಆದ್ಯತೆಯ ಪ್ರಕಾರ ರ್ಯಾಂಕ್ ನೀಡುವ ಮತ್ತು ನಿದರ್ಿಷ್ಟ ಮೊತ್ತದಷ್ಟು ರ್ಯಾಂಕಿಂಗನ್ನು ಪಡೆದವರು ಮಾತ್ರ ಗೆದ್ದವರೆಂದು ಘೋಷಿಸುವ ಪದ್ಧತಿಯನ್ನೂ ಹಾಗೆಯೇ ದಲಿತರಿಗೆ ತಮ್ಮೊಳಗೆ ದಲಿತರೊಬ್ಬರನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಳ್ಳುವ ಮತ್ತು ಸವರ್ಣೀಯರಲ್ಲೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳೂವ ದ್ವಿ ಮತದಾನದ ಹಕ್ಕು ದೊರಕಬೇಕೆಂಬ ಈ ದೇಶದ ಪಾರ್ಲಿಮೆಂಟರಿ  ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾಗಿಸುವ ಪ್ರಸ್ತಾಪಗಳು ಅಂಬೇಡ್ಕರ್ ಕಂಡ ಕನಸಿನ ಸಂವಿಧಾನದಲ್ಲಿತ್ತು. (9) ಆದರೆ 1950ರ ಜನವರಿ 26ರಂದು ಈ ದೇಶಕ್ಕೆ ನೀಡಲಾದ ಸಂವಿಧಾನ ಈ ಆಶಯಗಳಿಗೆ ಮೂಲಭೂತವಾಗಿಯೇ ದ್ರೋಹ ಬಗೆದಿರಲಿಲ್ಲವೇ.

1950ರ ಸಂವಿಧಾನದಲ್ಲಿ ಅಂಬೇಡ್ಕರ್ ಎಲ್ಲಿದ್ದಾರೆ?

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ಎಲ್ಲಾ ಪಾರ್ಲಿಮೆಂಟರಿ  ಪ್ರಜಾಪ್ರಭುತ್ವದಲ್ಲಿದ್ದಂತೆ ನಮ್ಮ ದೇಶದಲ್ಲಿ ಸಂವಿಧಾನದಲ್ಲೂ ಘೋಷಿತವಾಗಿದೆ. ಆದರೆ ರಾಜಕೀಯ ಸಮಾನತೆ ಅರ್ಥಾಸ್  ಒಬ್ಬರಿಗೆ ಒಂದು ಓಟು ಎಂಬ ರಾಜಕೀಯ ಹಕ್ಕು ಮೂಲಭೂತ ಹಕ್ಕಾಯಿತೇ ವಿನಃ ಸಾಮಾಜಿಕ ಮತ್ತು ಆರ್ಥಿಕ  ಸಮಾನತೆಯ ಹಕ್ಕುಗಳು ಮೂಲಭೂತ ಹಕ್ಕುಗಳ ಪರಿಧಿಯನ್ನು ಸೇರಲೇ ಇಲ್ಲ. ನಮ್ಮ ಸಂವಿಧಾನದ ಅನುಚ್ಛೇದ 39(ಬಿ) ‘ಈ ದೇಶದ ಭೌತಿಕ ಸಂಪನ್ಮೂಲಗಳು ಎಲ್ಲಾ ಸಾರ್ವಜನಿಕರ ಹಿತವನ್ನು ಕಾಯುವಂತೆ ಹಂಚಿಕೆಯಾಗಬೇಕು’ ಎಂದೂ ಅನುಚ್ಛೇದ 39(ಸಿ) ‘ಪ್ರಭುತ್ವದ ಆರ್ಥಿಕ ನೀತಿಗಳು ಸಂಪನ್ಮೂಲಗಳು ಒಂದು ಕಡೆ ಕೇಂದ್ರೀಕೃತವಾಗದಂತೆ ನೋಡಿಕೊಳ್ಳಬೇಕೆಂದೂ’, ಅನುಚ್ಛೇದ 41 ‘ಪ್ರಭುತ್ವವು ಎಲ್ಲರಿಗೂ ದುಡಿಯುವ ಮತ್ತು ಶಿಕ್ಷಣದ ಹಕ್ಕನ್ನು ಮತ್ತು ದುರ್ಬಲರಿಗೆ, ವೃದ್ಧರಿಗೆ ಸಕರ್ಾರದಿಂದ ಸಹಾಯ ದೊರೆಯುವಂತೆಯೂ’ ನೋಡಿಕೊಳ್ಳಬೇಕೆಂದೂ, (ಆದರೆ ಸರ್ಕಾರದ ಆರ್ಥಿಕ ಸಾಮರ್ಥ್ಯಕ್ಕೆ ಒಳಪಟ್ಟು’ ಎಂಬ ಶರತ್ತೂ ಸೇರಿಸಲ್ಪಟ್ಟಿದೆ!), ಅನುಚ್ಛೇದ 43 ‘ಎಲ್ಲ ದುಡಿಯುವ ವರ್ಗಗಳಿಗೂ ಜೀವಿಸಲು ಸಾಧ್ಯವಾಗುವಷ್ಟು ವೇತನವನ್ನು ಒದಗಿಸುವಂತೆ ನೋಡಿಕೊಳ್ಳುವ’, ‘ಗಂಡಸರು ಮತ್ತು ಹೆಂಗಸರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸುವ’, ಅನುಚ್ಛೇದ 46 ‘ದಲಿತ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ  ಪುರೋಭಿವೃದ್ಧಿಯನ್ನು ಖಾತರಿಪಡಿಸುವ’ ನೀತಿಗಳನ್ನು ಮಾಡಬೇಕೆಂದೂ ಪ್ರಭುತ್ವಕ್ಕೆ ಸಂವಿಧಾನ ಮಾರ್ಗದರ್ಶನ ಮಾಡುತ್ತದೆ. (10)

ಆದರೆ ಈ ಎಲ್ಲಾ ಮಾರ್ಗದರ್ಶನಗಳು ಕೇವಲ ಮಾರ್ಗದರ್ಶನಗಳಷ್ಟೆ. ಏಕೆಂದರೆ ಈ ಎಲ್ಲಾ ಪುರೋಗಾಮೀ ನೀತಿಗಳು  ಸರ್ಕಾರಕ್ಕೆ ತನ್ನ ನೀತಿಗಳನ್ನು ರೂಪಿಸುವಾಗ ಗಮನಿಸಬೇಕಾದ ಅಂಶಗಳೇ ವಿನಃ ಅದಕ್ಕೆ ಶಾಸನಾತ್ಮಕ ನಿರ್ದೇಶನವಿಲ್ಲವೆಂದೂ ಅದನ್ನು ಯಾವುದೇ ನ್ಯಾಯಾಲಯಗಳು ಊರ್ಜಿತಕ್ಕೆ ತರಬೇಕೆಂದೂ  ನಿರ್ದೇಶನ ನೀಡುವ ಹಾಗಿಲ್ಲವೆಂದೂ ಈ ಎಲ್ಲಾ ಅನುಚ್ಛೇದಗಳನ್ನು ಪ್ರಸ್ತಾಪ ಮಾಡುವ ಮುಂಚೆಯೇ ಅನುಚ್ಛೇದ 37ರಲ್ಲಿ ‘ The provisions contained in this Part shall not be enforced by any court, but the principles therein laid down are nevertheless fundamental in the governance of the country and it shall be the duty of the State to apply these principles in making’ ಸ್ಪಷ್ಟವಾಗಿ ಹೇಳಲಾಗಿದೆ. ಅಂಬೇಡ್ಕರ್ ಸ್ಪಷ್ಟವಾಗಿ ವಿರೋಧಿಸಿದ್ದು ಈ ಸಾಧ್ಯತೆಯನ್ನೇ! ಎಲ್ಲಿಯತನಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳು ಮೂಲಭೂತ ಹಕ್ಕಾಗದೇ ಅಧಿಕಾರಸ್ಥರ ಮರ್ಜಿಗೆ ಬಿಡಲಾಗುತ್ತದೆಯೋ ಅಲ್ಲಿಯನತಕ ಈ ದೇಶದಲ್ಲಿ ಒಂದು  ಓಟು ಒಂದು ಮೌಲ್ಯವಾಗಲು ಸಾಧ್ಯವೇ ಇಲ್ಲವೆಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು.

ಅದೇ ರೀತಿ ಕೃಷಿ ಭೂಮಿಯ ರಾಷ್ಟ್ರೀಕರಣ ಮತ್ತು ಜಮೀನಿನ ಮೇಲೆ ಜಾತಿ ಬೇಧಗಳಿಲ್ಲದ ಸಾಮೂಹಿಕ ಒಡೆತನ ಹಾಗೂ ಸಾಮೂಹಿಕ ದುಡಿಮೆ ಭೂಮಾಲೀಕ-ಜೀತಗಾರ ಮತ್ತು ಅಸ್ಪೃಷ್ಯತೆ ಹಾಗೂ ಜಾತೀಯತೆಗಳು ನಿವಾರಣೆಯಾಗಲು ಅತ್ಯಗತ್ಯ ಆರ್ಥಿಕ ಕಾರ್ಯಕ್ರಮಗಳೆಂಬುದು ಅಂಬೇಡ್ಕರ್ರವರ ದೂರಗಾಮೀ ಆಲೋಚನೆಯಾಗಿತ್ತು. ಆದರೆ ನಮ್ಮ ಸಂವಿಧಾನವಾಗಲೀ ಮತ್ತು ಸಂಸತ್ತಾಗಲೀ ಅದರ ಬಗ್ಗೆ ಚಕಾರವೆತ್ತಿಲ್ಲ. ಅದೇ ರೀತಿ ಚುನಾವಣಾ ಪದ್ಧತಿಗಳಲ್ಲಿ ತರಬೇಕಾದ ಮೂಲಭೂತ ಬದಲಾವಣೆಯೂ ಸಹ ಅಂಬೇಡ್ಕರ್ ಯೋಜನೆಯ ಪ್ರಮುಖ ಧಾತುವಾಗಿತ್ತು. ಆದರೆ ಅಂಬೇಡ್ಕರ್ ಹೋರಾಡಿದ ಈ ಯಾವುದೇ ಕ್ರಮಗಳು ಮತ್ತು ಯೋಜನೆಗಳು ಸಂವಿಧಾನದ ಭಾಗವಾಗಲೇ ಇಲ್ಲ.

ಬದಲಿಗೆ ಈ ದೇಶದ ಸಾಮಾಜಿಕ ಅಸಮಾನತೆಗೆ  ರಾಜಕೀಯ ನೆಲೆಯನ್ನು ಒದಗಿಸಿಕೊಡುವ ರಾಜಕೀಯ, ಆರ್ಥಿಕ  ಅಸಮಾನತೆಯನ್ನು ಶಾಶ್ವತಗೊಳಿಸುವಂತ ಆಸ್ತಿ ಹಕ್ಕು ಮಾಡುತ್ತಲೇ ಇರುವ ಹಕ್ಕುಗಳು, ಮತ್ತು ರಾಜಕೀಯವಾಗಿಯೂ ಬಡವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರೂ ಎಂದೆಂದಿಗೂ ಬಹುಸಂಖ್ಯಾತರ ಭಯದಲ್ಲೇ ಬದುಕವಂತೆ ಮಾಡುವ ರಾಜಕೀಯ ಸಂಸ್ಥೆಗಳನ್ನೇ ಈ ಸಂವಿಧಾನ ನೀಡಿದೆ. ‘ಅಂಬೇಡ್ಕರ್ ಬರೆದ ಸಂವಿಧಾನ’ ಎಂದು ಜನರನ್ನು ನಂಬಿಸುವ ಸರ್ಕಾರಗಳು ಅಂಬೇಡ್ಕರ್ಗಾಗಿರುವ ಈ ಮೂಲಭೂತ ದ್ರೋಹಗಳನ್ನು ಹೇಳುವುದೇ ಇಲ್ಲ. (ಬಹಳಷ್ಟು ದಲಿತ ನಾಯಕರೂ ಈ ದ್ರೋಹದ ಬಗ್ಗೆ ಚಕಾರವೆತ್ತುವುದೇ ಇಲ್ಲ. ಬದಲಿಗೆ ಸಂವಿಧಾನದ ಬಗ್ಗೆ ವಿರ್ಮಶೆ ಮಾಡಿದರೆ ಅಂಬೇಡ್ಕರ್ ಬಗ್ಗೆ  ಮಾಡಿದ ವಿರ್ಮಶೆಯೆಂಬಂತೆ ಮತ್ತು ಪ್ರಜಾತಂತ್ರದ ಬಗ್ಗೆ ಮಾಡಿ ವಿರ್ಮಶೆಯೆಂಬಂತೆ ಭಾವಾವೇಶದಲ್ಲಿ ಮಾತಾಡುತ್ತಾರೆ. ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸದೆ, ಅಂಬೇಡ್ಕರ್ ಚಿಂತನೆಯನ್ನೂ ಅರ್ಥಮಾಡಿಕೊಳ್ಳದೆ ಅಂಬೇಡ್ಕರ್ರವರನ್ನು ಕೇವಲ ಪ್ರತಿಮೆಯನ್ನಾಗಿ ಮಾಡಿಕೊಂಡು ಭಾವಾವೇಶಕ್ಕೆ ಬಲಿಯಾಗಿರುವುದೂ ಸಹ ಇಂದಿನ ಒಟ್ಟಾರೆ ದುರಂತಕ್ಕೆ ಒಂದು ಪ್ರಮುಖ ಕಾರಣ!)

ಇಂದು ಸಂಪನ್ಮೂಲಗಳ ಅಪಾರ ಪ್ರಮಾಣದ ಕೇಂದ್ರೀಕರಣ ನಡೆಯುತ್ತಿದೆ. ಅದರಲ್ಲೂ 1991ರ ನಂತರ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳು ಜಾರಿಯಾದ ಮೇಲೆ ಒಂದೆಡೆ ಲಕ್ಷ ಕೋಟಿ ಆಸ್ತಿಗೆ ಅಧಿಪತಿಗಳಾಗಿರುವ ಕೆಲವೇ ಬಿಲಿಯನಾಧೀಶ್ವರರೂ ಮತ್ತೊಂದೆಡೆ ದಿನಕ್ಕೆ 20ರೂ ಸಹ ಸಂಪಾದಿಸಲಾಗದ ಕೋಟ್ಯಾಂತರ ಜನರು ಸೃಷ್ಟಿಯಾಗುತ್ತಿದ್ದಾರೆ. ಜಾತಿ ರಾಜಕಾರಣವು ಮತ್ತು ಬ್ರಾಹ್ಮಣವಾದಿ ಶಕ್ತಿಗಳ ಸಾಮಾಜಿಕ ಅಧಿಕಾರ ಗಟ್ಟಿಯಾಗುತ್ತಾ ಈ ದೇಶದ ದಲಿತ ಮತ್ತು ಶೋಷಿತ ಜನೆತೆಯಮೇಲಿನ ಶೋಷಣೆ ಹೆಚ್ಚಾಗುತ್ತಿದೆ. ರೈತಾಪಿ ದೇಶದಲ್ಲಿ 2 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 20 ನಿಮಿಷಕ್ಕೊಮ್ಮೆ ದಲಿತರ ಮೇಲೆ ಅತ್ಯಾಚಾರ ಮತ್ತು  ಹತ್ತು ನಿಮಿಷಕ್ಕೊಮ್ಮೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೂ ನಡೆಯುತ್ತಿದೆ. ಶೇ. 50 ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆ ಅಥವಾ ಸಾಯುತ್ತಿದ್ದಾರೆ. ಈ ದೇಶದ ಚುನಾವಣಾ ಪದ್ಧತಿಯ ಮೂಲಕವೇ ಅಧಿಕಾರ ಹಿಡಿದಿರುವ ಮಾರುಕಟ್ಟೆ ಶಕ್ತಿಗಳು ಮತ್ತು ಬ್ರಾಹ್ಮಣವ್ಚಾದಿ ಹಿಂದೂತ್ವವಾದಿಗಳು ಆರ್ಥಿಕ  ಅಸಮಾನತೆಯನ್ನು ಮತ್ತು ಸಾಮಾಜಿಕ ಸಮಾನತೆಯನ್ನು ಗಟ್ಟಿಗೊಳಿಸುತ್ತಿದ್ದಾರೆ.

ಇದು ‘ಅತ್ಯುತ್ತಮ ಸಂವಿಧಾನ’ದ ಅನುಷ್ಠಾನದಿಂದ ಉಂಟಾಗಿರುವ ಸಮಸ್ಯೆಯಲ್ಲ. ಸಂವಿಧಾನ ರಚನೆಯಲ್ಲಿ ಮೂಲಭೂತವಾಗಿ ಅಂಬೇಡ್ಕರ್ ಅಶಯಗಳನ್ನು ಹೊರಗಿಟ್ಟು ಉಳ್ಳವರ ಹಿತಾಸಕ್ತಿಗೆ ಅನುಗುಣವಾಗಿ ರಚಿಸಿದ ಸಂವಿಧಾನದಲ್ಲೇ ಇವತ್ತಿನ ಬವಣೆಯ ಮತ್ತು ಬಿಕ್ಕಟ್ಟಿನ ಬೀಜಗಳಿವೆ.

ಅಂಬೇಡ್ಕರ್ ಕನಸಿದ ಸಂವಿಧಾನಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟ!

ಇದನ್ನು ನಾವು ಈಗ ಕಾಣುತ್ತಿರಬಹುದು. ಆದರೆ ಸಾಮಾಜಿಕ ಮತ್ತು ಆರ್ಥಿಕ  ಸಮಾನತೆಯನ್ನು ಸಂವಿಧಾನಾತ್ಮಕ ಕಾನೂನು ಮಾಡದ, ಮೂಲಭೂತ ಹಕ್ಕನ್ನಾಗಿ ಮಾಡದ ಈ ಸಂವಿಧಾನ ಖಂಡಿತವಾಗಿ ಇದೇ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅಂಬೇಡ್ಕರ್ರವರು 1949ರಲ್ಲೇ ಎಚ್ಚರಿಸಿದ್ದರು.  1949ರ ನವಂಬರ್ 26ರಂದು ಸಂವಿಧಾನ ರಚನಾ ಸಭೆಯ ಅಂತಿಮ ಸಭೆಯಲ್ಲಿ ಭಾಷಣ ಮಾಡುತ್ತಾ ಈ ಅಂಶಗಳನ್ನು ಮತ್ತು ಎಚ್ಚರಿಕೆಯನ್ನು ಭಾರತದ ಜನತೆಗೆ ಮತ್ತು ಹೊಸದಾಗಿ ರೂಪಿತವಾದ ಭಾರತದ ಗಣತಂತ್ರಕ್ಕೆ ನೀಡಿದರು:

ಕೇವಲ ರಾಜಕೀಯ ಪ್ರಜಾತಂತ್ರದಿಂದ ನಾವು ಸಮಾಧಾನಗೊಳ್ಳಬಾರದು. ನಾವು ನಮ್ಮ  ರಾಜಕೀಯ ಪ್ರಜಾತಂತ್ರವನ್ನು ಸಾಮಾಜಿಕ ಪ್ರಜಾತಂತ್ರವನ್ನಾಗಿ ಮಾಡಬೇಕು. ಸಾಮಾಜಿಕ ಪ್ರಜಾತಂತ್ರವಿಲ್ಲದೆ ರಾಜಕೀಯ ಪ್ರಜಾತಂತ್ರ ಉಳಿಯಲಾರದು……ಸ್ವಾತಂತ್ರ್ಯ. ಸಮಾನತೆ ಮತ್ತು ಭ್ರಾತೃತ್ವಗಳು ಒಟ್ಟು ಒಂದೇ ಮೌಲ್ಯವಾಗಿದ್ದು ಒಂದನ್ನು ಮತ್ತೊಂದರಿಂದ ಬೇರ್ಪಡಿಸುವುದು ಪ್ರಜಾಪ್ರಭುತ್ವದ ಆಶಯವನ್ನೇ ವಿಫಲಗೊಳಿಸುತ್ತದೆ. ಸಮಾನತೆ ಇಲ್ಲದ ಸ್ವಾತಂತ್ರ್ಯ ಹಲವರ ಮೇಲೆ ಕೆಲವರ ಅಧಿಪತ್ಯವನ್ನು ಖಾಯಂಗೊಳಿಸುತ್ತದೆ. ಸ್ವಾತಂತ್ರ್ಯವಿಲ್ಲದ ಸಮಾನತೆ ವ್ಯಕ್ತಿಗಳ ಕಾರ್ಯೋತ್ಸಾಹವನ್ನೇ ಕೊಲ್ಲುತ್ತದೆ. ಭ್ರಾತೃತ್ವವಿಲ್ಲದೆ ಸಮಾನತೆ ಮತ್ತು ಸ್ವಾತಂತ್ರ್ಯಗಳು ಸಹಜ ವಿದ್ಯಮಾನವಾಗಲು ಸಾಧ್ಯವಿಲ್ಲ… ನಮ್ಮ ಸಮಾಜದಲ್ಲಿ ಎರಡು ಸಂಗತಿಗಳು ಗೈರುಹಾಜರಾಗಿರುವುದನ್ನು ನಾವು ಪರಿಗಣಿಸಬೇಕು. ಅದರಲ್ಲಿ ಮುಖ್ಯವಾದದ್ದು ಸಮಾನತೆಯೆಂಬ ಮೌಲ್ಯವೇ ಗೈರುಹಾಜರಾಗಿರುವುದು. ಸಾಮಾಜಿಕ ಸ್ಥರದಲ್ಲಿ ಕೆಲವರು ಮಾತ್ರ ಮೇಲ್ಸ್ತರದಲ್ಲಿ ಉಳಿದವರು ನೀಚಾತಿನೀಚಸ್ತರದಲ್ಲಿ ಉಳಿಸುವ ಸಾಮಾಜಿಕ ಸಮಾನತೆ. ಅದೇ ರೀತಿ ಆರ್ಥಿಕವಾಗಿ ನಮ್ಮಲ್ಲಿ ಕೆಲವರು ಅಪಾರ ಅಸ್ತಿಯನ್ನು ಸಂಗ್ರಹಿಸಿಕೊಂಡಿದ್ದರೆ ಉಳಿದವರು ಅಸಹನೀಯ ಬಡತನದಲ್ಲಿ ಬದುಕುತ್ತಿದ್ದಾರೆ.

1950ರ ಜನವರಿ 26ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರೆದಿರುತ್ತದೆ. ರಾಜಕೀಯದಲ್ಲಿ ನಾವು ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಒಂದು ಮೌಲ್ಯವೆಂದು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಮತು ಆಥರ್ಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯವೆಂಬ ತತ್ವವನ್ನು ನಿರಾಕರಿಸುತ್ತಿರುತ್ತೇವೆ. ಈ ವೈರುಧ್ಯಗಳಿಂದ ಕೂಡಿದ ಸಾಮಾಜಿಕ ಬದುಕನ್ನು ಎಷ್ಟು ಕಾಲ ಮುಂದುವರೆಸಲು ಸಾಧ್ಯ? ಎಷ್ಟು ಕಾಲ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯನ್ನು ನಿರಾಕರಿಸಲು ಸಾಧ್ಯ? ಇನ್ನೂ ಇದೇ ಬಗೆಯ ನಿರಾಕರಣೆಯನ್ನು ಮುಂದುವರೆಸುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ. ನಾವು ಆದಷ್ಟು ಬೇಗ ಈ ವೈರುಧ್ಯಗಳನ್ನು ನಿರ್ಮೂಲನೆ ಮಾಡದಿದ್ದರೆ ಅಸಮಾನತೆಯಿಂದ ನೊಂದ ಜನ ನಾವು ಕಷ್ಟಪಟ್ಟು ಕಟ್ಟಿರುವ ರಾಜಕೀಯ ಪ್ರಜಾಸತತ್ತೆಯ ರಚನೆಯನ್ನೇ ಸ್ಫೋಟ ಮಾಡುತ್ತಾರೆ(11)

ಇದು ನಿಜವಾದ ಪ್ರಜಾತಂತ್ರವಾದಿಯ ನೋವಿನ ಮಾತೂ ಹೌದು. ದಾರ್ಶನಿಕ ಎಚ್ಚರಿಕೆಯೂ ಹೌದು. ಕಳೆದ 62 ವರ್ಷಗಳ ಸಾಂವಿಧಾನಿಕ ಬದುಕು ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ಅಸಮಾನತೆಯನ್ನು ಮತ್ತು  ಆರ್ಥಿಕ  ಅಸಮಾನತೆಯನ್ನು ಹೆಚ್ಚಿಸುತ್ತಾ ರಾಜಕೀಯ ಅಸಮಾನತೆಯನ್ನು ಮತ್ತು ನಮ್ಮ ರಾಜಕೀಯ ಪ್ರಜಾಸತ್ತೆಯನ್ನು ಅವಹೇಳನ ಮಾಡುತ್ತಿದೆ.

ಬಂಡವಾಳವಾದ ಮತ್ತು ಬ್ರಾಹ್ಮಣವಾದ ಈ ದೇಶದ ಜನರ ಶತ್ರುಗಳು ಎಂದು ಅಂಬೆಡ್ಕರ್ ಸ್ಪಷ್ಟವಾಗಿ ಹೇಳಿದ್ದರು. ಅವರು ಕನಸು ಕಂಡ ಸಂವಿಧಾನ ಈ ಎರಡು ಶತೃಗಳನ್ನು ಸೋಲಿಸಲು ನೈಜ ಯೋಜನೆಗಳನ್ನು ಹೊಂದಿದ್ದವು. ಆದರೆ 1950ರಲ್ಲಿ ದತ್ತವಾದ ಸಂವಿಧಾನ ಪ್ರಧಾನವಾಗಿ ಇದೇ ಶಕ್ತಿಗಳಿಗೆ ಪೂರಕವಾಗಿತ್ತೆಂಬುದನ್ನು ಇಂದು ಸಂವಿಧಾನದ ಹೆಸರಲ್ಲಿ ನಮ್ಮನ್ನು ಆಳುತ್ತಿರುವ ಜಾಗತೀಕರಣ ಮತ್ತು ಹಿಂದೂತ್ವವೆಂಬ ಅವಳೀ ಶತೃಗಳು ರುಜುವಾತು ಮಾಡಿವೆ.

ಇಂದು 1950ಕ್ಕಿಂತಲೂ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಈಗ ಅಂಬೇಡ್ಕರ್ ಕನಸು ಕಂಡ ಸಮಾಜವಾದಿ ಸಂವಿಧಾನವನ್ನು ಸಾಕಾರ ಮಾಡಲು ಮತ್ತೊಂದು ನೈಜ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸದೇ ಬೇರೇ ದಾರಿಯೇನಿದೆ?

ಉಲ್ಲೇಖಗಳು:

 1. http://parliamentofindia.nic.in/ls/debates/debates.htm
 2. http://parliamentofindia.nic.in/ls/debates/facts.htm
 3. Ambedkar’ In And For The Post-Ambedkar Dalit Movement- Anand Teltumbde
 4. Constitutional predilections-JAMES CHIRIYANKANDATH
 5. http://en.wikipedia.org/wiki/Constitution_of_India
 6. ಡಾ. ರಾಮಮನೋಹರ ಲೋಹಿಯಾ ಚಿಂತನೆ-ಸಂ. ನಟರಾಜ್ ಹುಳಿಯಾರ್
 7. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು-ಸಂಪುಟ-1
 8. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು-ಸಂಪುಟ-2
 9. Resurrecting the radical Ambedkar-S. ANAND-SEMINAR-2009-September
 10. http://lawmin.nic.in/coi/coiason29july08.pdf
 11. Ambedkar’ In And For The Post-Ambedkar Dalit Movement- Anand Teltumbde.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)