Daily Archives: April 20, 2012

ಪಿತೃ ಪ್ರಾಧಾನ್ಯತೆಯ ಪುರುಷಾರ್ಥ!


-ಡಾ.ಎಸ್.ಬಿ. ಜೋಗುರ


 

ಪಿತೃಪ್ರಾಧಾನ್ಯತೆ ಎನ್ನುವದು ಸರ್ವತ್ರವಾಗಿ ಎಲ್ಲಾ ಕಡೆಗಳಲ್ಲಿ ಅಲ್ಲದಿದ್ದರೂ ವಿಶ್ವದ ಬಹುತೇಕ ಕಡೆಗಳಲ್ಲಿ ಅಸ್ಥಿತ್ವದಲ್ಲಿರುವ ಸಾಮಾಜಿಕ ರಚನೆಯ ಒಂದು ಸಾಮಾನ್ಯ ಭಾಗವಾಗಿದ್ದು, ಇಲ್ಲಿ ತಂದೆಯ ಪ್ರಭಾವವೇ ಪ್ರಧಾನವಾಗಿದ್ದು, ಪುರುಷರು ಮಹಿಳೆಯರ ಮೇಲೆ ತಮ್ಮ ಅಧಿಪತ್ಯವನ್ನು ಚಲಾಯಿಸುವ ವ್ಯವಸ್ಥೆಯಿದು. ಇದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರೇ ಪ್ರಧಾನವಾಗಿರುವ ಮಾತೃಪ್ರಧಾನ ವ್ಯವಸ್ಥೆ ತೀರಾ ಅಪರೂಪ ಎನ್ನುವ ಹಾಗೆ ಅಲ್ಲಲ್ಲಿ ಉಳಿದುಕೊಂಡಿರುವದಿದೆ. ಈ ಪಿತೃಪ್ರಾಧಾನ್ಯತೆ ಎನ್ನುವದು ಒಂದು ಲಿಂಗ ಇನ್ನೊಂದು ಲಿಂಗಕ್ಕಿಂತಾ [ಗಂಡು ಹೆಣ್ಣಿಗಿಂತ] ಸ್ವಾಭಾವಿಕವಾಗಿಯೇ ಶ್ರೇಷ್ಟ ಎನ್ನುವದನ್ನು [ವೈಜ್ಞಾನಿಕವಾಗಿ ಅಲ್ಲದಿದ್ದರೂ] ತಲೆತಲಾಂತರದಿಂದಲೂ ಪ್ರತಿಪಾದಿಸಿಕೊಂಡೇ ಬಂದಿದೆ. ಅತ್ಯಂತ ಸರಳ ಶ್ರಮವಿಭಜನೆ ಇರುವ ಸಮಾಜಗಳಿಂದ ಹಿಡಿದು ಸದ್ಯದ ಸಂಕೀರ್ಣ ಸಮಾಜಗಳವರೆಗೆ ನಾವು ಅದೇ ಮನೋಭಾವವನ್ನು ಕಾಣಬಹುದು. ಈ ಪುರುಷಪ್ರಾಧಾನ್ಯತೆಯ ವ್ಯವಸ್ಥೆಯಿಂದ ರೂಪಿತವಾದ ಲಿಂಗವಾದದಲ್ಲಿ ಸುಮಾರು ಅರ್ಧದಷ್ಟು ಜನಸಂಖ್ಯೆಯ ಸಾಮರ್ಥ್ಯ ಮತ್ತು ಪ್ರತಿಭೆ ಸರಿಯಾಗಿ ಬಳಕೆಯಾಗುವದಿಲ್ಲ. ಮರ್ಲಿನ್ ಫ್ರೆಂಚ್ [1985] ಎನ್ನುವ ಚಿಂತಕರು ಹೇಳುವಂತೆ. “ಈ ಪುರುಷ ಪ್ರಧಾನ ವ್ಯವಸ್ಥೆ ಪುರುಷನನ್ನು ಸದಾ ಮಹಿಳೆಯ ಮೇಲೆ ನಿಯಂತ್ರಣ ಹೇರುವಂತೆ ಒತ್ತಾಯ ತರುತ್ತದೆ. ಇದು ಕೆಲ ಬಾರಿ ಪುರುಷರಲ್ಲಿ ಉದ್ವೇಗ ಉಲ್ಬಣವಾಗಲು, ಅಪಘಾತಗಳು ಜರುಗಲು, ಹೃದಯಾಘಾತ ಸಂಭವಿಸಲೂ ಕಾರಣವಾಗುತ್ತದೆ,’ ಎಂದಿರುವರು. ಮಾನವನ ಭಾವನೆ, ವಿಚಾರಗಳು, ಕ್ರಿಯೆಗಳು ಆ ಸಮಾಜದ ಸಂಸ್ಕೃತಿಯ ಮೂಲಕ ನಿರ್ಧಾರವಾಗುವಂತಿದ್ದಾಗ ಅವರು ಮುಕ್ತವಾಗಿ ಮಾನವೀಯ ಗುಣಗಳನ್ನು ಹೊರಹಾಕಲಾರರು. ಅದರಲ್ಲೂ ವಿಶೇಷವಾಗಿ ಪುರುಷ ಪ್ರಧಾನ ಸಮಾಜದಲ್ಲಿಯ ಪುರುಷರ ಪಾತ್ರ ಪ್ರಜ್ಞೆಯೇ ಅವರನ್ನು ರೋಗಗ್ರಸ್ಥರನ್ನಾಗಿಸಲು ಸಾಕು. ಮರ್ಯಾದಾ ಹತ್ಯೆಯ ಸಂದರ್ಭದಲ್ಲಿ ಆ ಯುವತಿಯ ಸಹೋದರ..ಚಿಕ್ಕಪ್ಪ..ದೊಡ್ದಪ್ಪ..ಅಪ್ಪ ಎನ್ನುವಂಥಾ ಪುರುಷಮಣಿಗಳೇ ಹೆಚ್ಚಾಗಿ ದೌರ್ಜನ್ಯಗಳನ್ನು ಎಸಗಿರುವ ಉದಾಹರಣೆಗಳಿವೆ.

ಸ್ತ್ರೀ ಸಮಾನತೆ, ಲಿಂಗ ಸಮಾನತೆ, ಮಹಿಳಾ ವಿಮೋಚನೆ ಎನ್ನಬಹುದಾದ ಮಾತುಗಳು ಬಹುತೇಕವಾಗಿ ಪ್ರಬಂಧ ಇಲ್ಲವೇ ಭಾಷಣದ ವಿಷಯವಾಗಿರುವದು ವಾಸ್ತವ. ಮಹಿಳಾ ವೇದಿಕೆಯಲ್ಲಿ ಮಹಾದೇವಿಯಕ್ಕನ ವಚನ ಬಳಸಿ, ವಿಮೋಚನೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ ಪುರುಷರು ಮನೆಗೆ ಮರಳಿದ್ದೇ ಮತ್ತೆ ತಮ್ಮ ಅಧಿಪತ್ಯ ಚಲಾವಣೆಯನ್ನು ಶುರು ಹಚ್ಚಿಕೊಳ್ಳುತ್ತಾರೆ. ಅತ್ಯಂತ ಲಿಬರಲ್ ಸೊಸೈಟಿಗಳೆಂದು ಕರೆಯಿಸಿಕೊಳ್ಳುವ ನೆಲೆಗಳಲ್ಲಿಯೂ ಮಹಿಳೆ ತನ್ನ ಜನನ ನಿಯಂತ್ರಣ ವಿಧಾನಗಳ ಮೇಲೆ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಲಾಗಿಲ್ಲ. ಪ್ರತಿಯೊಂದು ಸಮಾಜದಲ್ಲಿಯ ಪುರುಷಗಣ ಮಹಿಳೆಯ ಸ್ವಾತಂತ್ರ್ಯವನ್ನು ಪರೋಕ್ಷವಾಗಿ ಅದುಮಿ ಹಿಡಿಯುವುದೇ ಪೌರುಷದ ಸಂಕೇತವೆಂದು ಭಾವಿಸಿರುವುದಿದೆ. ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷೋತ್ತಮರ ಬದುಕಿನ ಬಹುಭಾಗ ಮಹಿಳೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸುವ ಕಸರತ್ತಿನಲ್ಲಿಯೇ ಕಳೆದುಹೋಗುತ್ತದೆ.

ನನಗಾಗ 8-10 ವರ್ಷ ಇದ್ದಿರಬಹುದು. ಕೇರಿಯೊಳಗಿನ ಪೋರನೊಂದಿಗೆ ಕುಸ್ತಿ ಹಿಡಿಯಲು ನಮ್ಮ ತಂದೆ ನನ್ನನ್ನು ಹುರಿದುಂಬಿಸುತ್ತಿದ್ದರು. ನಾನು ಒಂದೊಮ್ಮೆ ಸೋತು ಜೊಲು ಮುಖ ಹಾಕಿದರೆ, “ಲೇ..ಹುಡಿಗೇರು ಅತ್ತಂಗ ಅಳ್ತಿಯಲ್ಲಲೇ..” ಅನ್ನವರು. ಪುರುಷನೊಬ್ಬ ಅಳುವದನ್ನು ಪುರುಷ ಬಿಡಿ, ಮಹಿಳೆಯರೂ ಸಹಿಸುವದಿಲ್ಲ. ಹಾಗಾಗಿಯೇ “ನಗುವ ಹೆಂಗಸು ಹಾಗೂ ಅಳುವ ಗಂಡಸು” ಇಬ್ಬರೂ ತಾತ್ಸಾರದ ಪ್ರತೀಕವೇ. ಅಡುಗೆ ತಯಾರಿಸುವವರೇ ಕೊನೆಯಲ್ಲಿ ಊಟ ಮಾಡುವ ಪರಿಪಾಠ ಇಂದಿಗೂ ನಮ್ಮ ನಿಮ್ಮ ಮನೆಯಲ್ಲಿದೆ. ಹಾಗಿರುವ ಪರಿಪಾಠವನ್ನೇ ಒಂದು ಸುಸಂಸ್ಕೃತ ಮನೆತನದ ಪರಂಪರೆ ಎನ್ನುವಂತೆ ಅದನ್ನು ಕಾಪಾಡಿಕೊಂಡು ಬಂದದ್ದು, ಉಳಿದದ್ದು ಮಾತ್ರ ವಿಚಿತ್ರ ಹಾಗೂ ವಿಷಾದವೆನಿಸುತ್ತದೆ.

ಇಂದು ನಮ್ಮೆಲ್ಲರ ಮನೆಗಳಲ್ಲಿಯ ಮನಸುಗಳನ್ನು ದೂರದರ್ಶನದಲ್ಲಿಯ ಮಸಾಲಾ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳು ಆಳುತ್ತವೆ. ಕಾರ್ಯಕ್ರಮದ ಮಧ್ಯೆ ಅದೊಂದು ಜಾಹಿರಾತು. ಆ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮಾಡೆಲ್ ಅಂತರರಾಷ್ಟ್ರೀಯ ಮಟ್ಟದ ನಟ. ಆತ ಜಾಹಿರಾತಿನಲ್ಲಿ ಒಬ್ಬ ಯುವಕನಿಗೆ ನೀನು ಸುಂದರವಾಗಿ ಕಾಣಬೇಕೆ..? ಹುಡುಗಿಯರ ಕ್ರೀಂ ಅನ್ನು ಬಳಸಬೇಡ, ಪುರುಷರ ಕ್ರೀಂ ಬಳಸು. ಎಂದು ಹೇಳುವಲ್ಲಿಯೂ ಒಂದು ಪ್ರಜ್ಞಾತೀತವಾದ ಲಿಂಗತರತಮ ನೀತಿ ಅಡಗಿದೆ ಎನಿಸುವದಿಲ್ಲವೇ?

ನನ್ನೊಂದಿಗೆ ಬೆಳೆದ ನನ್ನ ಸಹೋದರಿಯರಿಗೆ ಅಮ್ಮ ತಾಕೀತು ಮಾಡುತ್ತಿದ್ದುದೇ ಹೆಚ್ಚಾಗಿತ್ತು. ಅವರು ಜೋರಾಗಿ ನಕ್ಕರೆ, ಬಾಗಿಲಲ್ಲಿ ನಿಂತರೆ, ಎಲ್ಲೋ ಕುಳಿತರೆ, ಗೆಳತಿಯರೊಂದಿಗೆ ಹರಟಿದರೆ ಅವ್ವ ಹೇಳಿಯೇ ಬಿಡುತ್ತಿದ್ದಳು. “ಅದೇನು ಹಲ್ಲು ಕಿಸಿಯುತ್ತೀರಿ.. ಹುಡುಗರಂಗೆ” ಎಂದು. ಹುಡುಗಿಯಾದವಳು ದೊಡ್ದವಳಾಗುತ್ತಿದ್ದಂತೆ, ಹೆತ್ತವಳೇ “ನೀನೊಂದು ಹೆಣ್ಣು ಎನ್ನುವದನ್ನು ಮರೀಬೇಡ” ಎಂದು ವಾರ್ನಿಂಗ್ ಮಾಡುವದಿದೆಯಲ್ಲಾ.. ಅದು ಕೂಡಾ ಪುರುಷ ಪ್ರಧಾನ ಸಮಾಜದ ಹಿತಾಸಕ್ತಿಯ ಬಗೆಗಿನ ಕಾಳಜಿಯೇ ಆಗಿದೆ. ಆ ಕಾಳಜಿ ಹಾಗೆ ಹೆಣ್ಣಿನಲ್ಲಿಯೂ ಮೂಡುವಂತೆ ಮಾಡಿದ ಹುನ್ನಾರ ಯಾರದು?

ಕೂಡುವಲ್ಲಿ, ನಿಲ್ಲುವಲ್ಲಿ, ಮಲಗುವಲ್ಲಿ, ತಿನ್ನುವಲ್ಲಿಯೂ ಹೆಣ್ತನವಿರಬೇಕು ಅದೇ ಸರಿ ಎನ್ನುವಂತೆಯೇ ಹುಡುಗರಿಗೆ ಪುರುಷ ಪ್ರಧಾನ ಸಮಾಜದ ಸ್ಥಾಪಿತ ನಿಯಮಗಳಂತಿರಬೇಕು ಎಂದು ಒತ್ತಾಯಿಸುವದೂ ಇದೆ. ಆ ಮೂಲಕ ಲಿಂಗತರತಮ ನೀತಿಯನ್ನು ಕಾಪಾಡಿಕೊಳ್ಳುವ ಹಿಕಮತ್ತೂ ಅಡಗಿದೆ. ನಾನಾಗ ಡಿಗ್ರಿಯಲ್ಲಿ ಓದುತ್ತಿದ್ದೆ. ಅಮಿತಾಬ್‌ನ ‘ದಿವಾರ್’ ಸಿನೇಮಾ ಹಾವಳಿಯಲ್ಲಿ ನನ್ನ ಹೇರ್ ಸ್ಟೈಲೇ ಬದಲಾಯಿತು. ನನ್ನ ಅಪ್ಪ ನನಗೆ ವಾರ್ನಿಂಗ್ ಮಾಡಿಯೇ ಬಿಟ್ಟರು. “ಅದೇನಲೇ ನಡುವೆ ಬೈತಲು ತಗದೀದಿ ಹೆಂಗಸರಂಗೆ, ನೆಟ್ಟಗ ಬಾಚಕೋ ಇಲ್ಲಾ ತಲಿನೇ ಬೋಳಸತೀನಿ,” ಅಂದಿದ್ದು ಈಗಲೂ ನೆನಪಿದೆ. ಇತ್ತೀಚಿಗೆ ನನ್ನ ಸ್ನೇಹಿತನೊಬ್ಬ ನಾನು ತೊಟ್ಟ ಒಂದು ಬಣ್ಣದ ಡಿಸೈನರ್ ಶರ್ಟ್ ಒಂದನ್ನು ನೋಡಿ, “ಇದ್ಯಾಕ ತಗೊಂಡಿಯೋ… ಹುಡ್ಗೀರ ಥರಾ” ಎಂದದ್ದನ್ನು ಕೇಳಿ ಮನದಲ್ಲೇ ನಕ್ಕಿದ್ದೆ. ಅಂದರೆ ನಮ್ಮ ಸಮಾಜದಲ್ಲಿ ಸಾಮಾಜಿಕ ಅಂತರಕ್ರಿಯೆಯ ಸಂದರ್ಭದಲ್ಲಿಯೂ ನಾವು ಗಂಡು, ಗಂಡಿನ ಸ್ಥಾಪಿತ ಮಾರ್ಗದಲ್ಲಿಯೇ ನಡೆಯಬೇಕೆಂದೂ, ಹೆಣ್ಣು ಆಕೆಗೆಂದೇ ನಿಗದಿಪಡಿಸಿದ ರೀತಿನೀತಿಗಳಿಗೆ ತಕ್ಕ ಹಾಗೆ ಇರಬೇಕು ಎನ್ನುವದು, ಹಾಗಿರುವದು ಮಾತ್ರ ಸಮಾಜ ಸ್ವೀಕೃತವಾದ ವರ್ತನೆ. ಜೈವಿಕ ಭೇದಗಳನ್ನು ಅನುಲಕ್ಷಿಸಿ “ನೀನು ಗಂಡು ಗಂಡಿನಂತಿರು, ನೀನು ಹೆಣ್ಣು ಹೆಣ್ಣಿನಂತಿರು” ಎನ್ನುವ ಮೂಲಕ ಲಿಂಗತರತಮ ನೀತಿಯಲ್ಲಿ ಒಂದು ಬಗೆಯ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗುವಲ್ಲಿಯೂ ನಾವು ಹಿಂದೆ ಬಿದ್ದಿಲ್ಲ.

ಶಾರೀರಿಕವಾಗಿ ಗಂಡು ಗಂಡಿನಂತಿರುವದು, ಹೆಣ್ಣು ಹೆಣ್ಣಿನಂತಿರುವಲ್ಲಿ ಯಾವ ತಕರಾರುಗಳೂ ಬೇಡ. ಆದರೆ ಸಾಂಸ್ಕೃತಿಕ ಕಟ್ಟಳೆಗಳ ಹಿನ್ನೆಲೆಯಲ್ಲಿ ಗಂಡಿನ ವರ್ತನಾ ಮಾದರಿಗಳೆಂದು ಸಾವಿರಾರು ವರ್ಷಗಳಿಂದ ಅನೂಚಾನವಾಗಿ ಸಾಗಿಸಿಕೊಂಡು ಬಂದಿರುವದು, ಬರುತ್ತಿರುವದರ ಬಗ್ಗೆ ಆಕ್ಷೇಪಗಳು ಇರಬೇಕಾದದ್ದೇ. ಅಷ್ಟು ಮಾತ್ರವಲ್ಲದೇ ಗಂಡಿನ ವರ್ತನಾ ಮಾದರಿಗಳ ವೈಪರೀತ್ಯದಲ್ಲಿ ಎಲ್ಲ ಬಗೆಯ ರಿಯಾಯತಿಗಳಿವೆ. ಸರಿಯೋ ತಪ್ಪೋ.. ಒಟ್ಟಿನಲ್ಲಿ ‘ನಾನು ಗಂಡಸು’ ಇಲ್ಲವೇ ‘ಅವನು ಗಂಡಸು’ ಎಂದು ಪ್ರತಿಪಾದಿಸುವ ರೀತಿ ಮಾತ್ರ ಲಿಂಗತರತಮ ನೀತಿಯ ಪರವಾಗಿ ಮತನಾಡಿದಂತಿರುತ್ತದೆ. ಅದು ಸರಿಯಾದ ಕ್ರಮ ಎಂದರೆ ‘ಅವಳು ಹೆಂಗಸು’ ಎನ್ನುವ ರಿಯಾಯತಿಗಳು ಅಲ್ಲಿ ಏಕಿಲ್ಲ? ಎನ್ನುವ ಪ್ರಶ್ನೆ.. ಗಂಡು ಅಪವರ್ತಿಯಾದಾಗಲೂ ‘ಅವನು ಗಂಡಸು’ ಅನ್ನುವ ರಿಯಾಯಿತಿ ಕೊಟ್ಟವರಾರು? ಈ ಪ್ರಶ್ನೆಗೆ ಮತ್ತೆ ಅದೇ ಪುರುಷ ಪ್ರಾಧಾನ್ಯತೆಯದೇ ಉತ್ತರ.

ಪುರುಷ ಪ್ರಾಧಾನ್ಯತೆ ಎನ್ನುವದು ತನ್ನ ಹುಳುಕುಗಳನ್ನು ಮರ್ಯಾದೆಯ ಜೊತೆಗೆ ಥಳುಕು ಹಾಕಿಕೊಳ್ಳದೇ ಕೇವಲ ಹೆಣ್ಣಿಗೆ ಮಾತ್ರ ಶೀಲ..ಚಾರಿತ್ರ್ಯ, ನಡತೆ ಎನ್ನುವ ಭವ್ಯ ಮರ್ಯಾದಿತ ವರ್ತನೆಗಳನ್ನು ಮಹಿಳೆಗೆ ಗುತ್ತಿಗೆ ಕೊಟ್ಟಂತೆ ವರ್ತಿಸುವ ನಡುವೆ ಹತ್ಯೆ ಮಾಡಿದರೂ ಅದು ಮರ್ಯಾದೆಯ ಕಾರಣಕ್ಕಾಗಿ ಸಹ್ಯ ಎನ್ನುವ ರೇಡಿಮೇಡ್ ಮನೋಭೂಮಿಕೆಯೊಂದು ಎಲ್ಲ ಕಾಲಕ್ಕೂ ಇದೆ. ಹೆಣ್ಣಿನ ಈ ಕೆಳಗಿನ ವರ್ತನೆಗಳನ್ನು ಸಹಿಸದಿರುವ ಗಂಡು ತನ್ನ ಇದೇ ವರ್ತನೆಗಳನ್ನು ಮಾಮೂಲು ಎನ್ನುವಂತೆ ಸ್ವೀಕರಿಸುವದನ್ನು ನೋಡಿದಾಗ ಪುರುಷ ಪ್ರಾಧಾನ್ಯತೆಯ ಪೌರುಷ ಮನದಟ್ಟಾಗದೇ ಇರದು. ಇಂಥಾ ಪುರುಷ ಪ್ರಧಾನ ಸಮಾಜ ಈ ಕೆಳಗಿನ ಕಾರಣಗಳಿಗಾಗಿ ಕಳೆದುಕೊಂಡ ಮರ್ಯಾದೆಗಾಗಿ ಹೆಣ್ಣನ್ನು ಹತ್ಯೆ ಮಾಡಿ ಕೃತಾರ್ಥರಾಗುವ ಕ್ರಮ ಅತ್ಯಂತ ಹೇಯವಾದುದು.

  • ಆಕೆ ವಿವಾಹ ಪೂರ್ವ ಸಂಬಂಧದಲ್ಲಿ ಸಿಲುಕಿದ್ದರೆ
  • ವಿವಾಹಪೂರ್ವ ಸಂಬಂಧದಿಂದ ತಾಯಿಯಾಗಿದ್ದರೆ
  • ವಿಶ್ವಾಸದ್ರೋಹ
  • ಅನೈತಿಕ ಸಂಬಂಧ
  • ಹೇಳದೇ ತಂದೆಯ ಇಲ್ಲವೇ ಗಂಡನ ಮನೆ ಬಿಟ್ಟು ಪರಾರಿಯಾಗಿದ್ದರೆ
  • ಊರಲ್ಲಿ ಊಹಾಪೋಹಗಳಿಗೆ ಕಾರಣವಾಗಿದ್ದರೆ
  • ಹಗರಣಗಳಲ್ಲಿ ಸಿಲುಕಿದ್ದರೆ
  • ಬಲತ್ಕಾರಕ್ಕೆ ಒಳಗಾದರೆ

ಹೀಗೆ ಇಂಥಾ ಅನೇಕ ಕಾರ್ಯಗಳಿಗೆ ಸ್ವತ: ಪುರುಷನೇ ಕಾರಣಕರ್ತನಾಗಿದ್ದರೂ ತಾನು ಅತ್ಯಂತ ಅಮಾಯಕನೆನ್ನುವ ಹಾಗೆ ಹೆಣ್ಣನ್ನು ಬಲಿಪಶು ಮಾಡುವ ಹುನ್ನಾರ ಪಿತೃಪ್ರಧಾನ ಸಮಾಜಗಳಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ.

(ಚಿತ್ರಕೃಪೆ: ವಿಕಿಪೀಡಿಯ)