Daily Archives: April 21, 2012

ಕಥೆ : ಕತೆಗಾರನೇ ಕಥೆಯಾದ ಪ್ರಸಂಗ


-ಡಾ.ಎಸ್.ಬಿ. ಜೋಗುರ


ಬಣ್ಣ ಮಾಸಿದ ಕರೀ ರಟ್ಟಿನ ಟೊಪ್ಪಿಗಿ, ಅದರ ಸುತ್ತಲೂ ಹಿಮಾಲಯ ಪರ್ವತ ಶ್ರೇಣಿಗಳನ್ನ ಬಿಡಿಸಿರೋ ಥರಾ ಕಾಣೋ ಒಣಗಿದ ಬೆವರಿನ ಗುರುತು, ಕಮಟುಗಟ್ಟಿದ ಮಂಜರಪಟ್ಟ ಅಂಗಿಯ ಕಾಲರು, ಇಲಿಯೊಂದು ಹಲ್ಲು ಮಸೆಯಲು ಕತ್ತರಿಸಿದಂತೆ ಕಾಣೊ ಅಂಗಿಯ ಕೈ ಕಪ್ಪು, ಹೊಗೆ ಸುತ್ತಿದಂತೆ ಕಾಣೊ ದೋತರ, ಮತ್ತೆ ಮತ್ತೆ ಮೊಳೆ ಜಡಿಸಿಕೊಂಡ ಮೆಟ್ಟುಗಳು, ರಣಹದ್ದಿನಂಥಾ ಮೂಗು, ಗುಳಿ ಬಿದ್ದ ಕಣ್ಣು, ಹೊಂದಾಣಿಕೆಯಿಲ್ಲದ ಹಲ್ಲು, ನೆರಿಗೆಗಳನ್ನೇ ಹೊತ್ತುಗೊಂಡಿರೋ ಮುಖ, ಪೊರೆಬಿಡುವ ಮುದಿ ಗೋಧಿ ಬಣ್ಣದ ನಾಗರಹಾವಿನಂಥಿರೋ ಈ ಮನುಷ್ಯನಿಗೀಗ ಅಜಮಾಸು ತೊಂಬತ್ತರ ಆಸುಪಾಸು.

ಹನುಮಂತ ದೇವರ ಕಟ್ಟೆಯ ಮೇಲೆ ಕುಂತು, ಮುಷ್ಟಿ ಮಾಡಿ, ಅದರ ನಡುವ ಗಚ್ಯಾಗಿ ಬೀಡಿ ಹಿಡದು, ಕಿರುಬೆರಳು ಮತ್ತು ಹೆಬ್ಬರಳನ್ನು ನಿಮಿರಿಸಿ ಉಷ್..! ಅಂತ ದಮ್ಮು ಎಳದು ಬೆರಳಿಂದ ಚಟ್ ಚಟ್… ಅಂತ ಚಿಟಕೀ ಹಾರಸಿ ಬೂದಿ ಉದುರಿಸಿ, ಮೂಗಿಂದ ಹೊಗಿ ಬಿಡೋ ಆ ಹಿರಿ ಮನುಷ್ಯಾನೇ ಕತೀ ಹೇಳೋ ತಿಪ್ಪಣ್ಣ. ಬರೀ ನನಗ ಮಾತ್ರ ಕತೀ ತಿಪ್ಪಣ್ಣ ಅಲ್ಲ, ಆ ಮನಿಯೊಳಗಿನ ನಾಕಿಪ್ಪತ್ತು ಮಂದಿ, ಮಕ್ಕಳು, ಮೊಮ್ಮಕ್ಕಳಿಗೂ ಅಂವಾ ಕತಿ ತಿಪ್ಪಣ್ಣನೇ.. ನನಗ ತಿಳುವಳಿಕೆ ಬಂದ ದಿನದಿಂದ ಅವನ್ನ ನಾ ನೋಡಾಕತ್ತೀನಿ ಅಂವಾ ಅವಾಗೂ ಹಂಗೇ ಇದ್ದ, ಈಗಲೂ ಹಂಗೇ ಅದಾನ. ಫ್ಲರಕ್ ಏನಂದರ ಅವಾಗ ಅಂವಗ ಕಣ್ಣ ನಿಚ್ಚಳಾಗಿ ಕಾಣತಿದ್ವು ಈಗ ಕಾಣೂದಿಲ್ಲ ಅಷ್ಟೇ. ನಾ ಮುಂದ ನಿಂತರೂ ನನ್ನ ಗುರುತು ಅಂವಗ ಸಿಗುವಂಗಿಲ್ಲ. ಅವನ ಮಗಾ ಅಲ್ಲೇ ಇದ್ದರೂ ಅವನ ಎದುರಲ್ಲೇ ಅವನ್ನ ಹಿಗ್ಗಾ ಮುಗ್ಗಾ ಬೈದು, ’ಅದು ಬಾಳ ಖೋಡಿ ಐತಿ, ಅದರ ಮುಂದ ನಿಮ್ಮಪ್ಪ ಹಿಂಗ ಬೈಯಾಕತ್ತಿದ್ದ ಅಂತ ಹೇಳಬ್ಯಾಡ್ರಿ’ ಅಂದಿದ್ದು ಕೇಳಿ ಅವನ ಮಗ ಮಲಕಾಜಿಗೆ ನಗು ತಡಿಲಾರದೇ ’ಆಯ್ತು ತಗೋರಪಾ ಹೇಳೂವಂಗಿಲ್ಲ’ ಅನ್ಕೊಂತ ನಡದಿದ್ದ. ಈ ತಿಪ್ಪಣ್ಣನಿಗಿಂತ ಸಣ್ಣವರು ಅವನ ಬೆನ್ನ ಮ್ಯಾಲ ಮತ್ತ ಮೂರು ಮಂದಿ ಇದ್ದರು. ಅವರೆಲ್ಲಾ ಸತ್ತು ಸ್ವರ್ಗ ಸೇರದ ಮ್ಯಾಲೂ ಈ ತಿಪ್ಪಣ್ಣ ಇನ್ನೂ ಭೇಷ ಗಟ್ ಮುಟ್ಟಿದ್ದ.  ಆ ಚೋಳಗಿಯವರ ಮನಿತನದೊಳಗ ಇಂವಾ ಅಂದ್ರ ಹಳೀ ಬೇರ ಇದ್ದಂಗ ಆಗಿತ್ತು. ತಿಪ್ಪಣ್ಣನ್ನ ಅವನ ಮಕ್ಕಳು ಸೈತ ಕತೀ ತಿಪ್ಪಣ್ಣ ಅಂತೇ ಕರೀತಿದ್ರು. ಅಷ್ಟೇ ಅಲ್ಲ ಓಣ್ಯಾಗಿನ ಚುಕ್ಕೋಳು ಸೈತ ಅವನ್ನ ಹಂಗೇ ಕರೀತಿದ್ದರು.

ಚೋಳಗಿ ಲಕ್ಷ್ಮಣನ ಮನೆತನದೊಳಗ ಐದು ಮಕ್ಕಳು. ಅದರಾಗ ನಾಕು ಗಂಡು, ಒಂದು ಹೆಣ್ಣು. ಈ ಗಂಡು ಮಕ್ಕಳ ಪೈಕಿ ಎಲ್ಲರಿಗಿಂತ ಹಿರೀ ಮನುಷ್ಯಾನೇ ಈ ತಿಪ್ಪಣ್ಣ ಅರ್ತಾರ್ಥ ಕತೀ ತಿಪ್ಪಣ್ಣ. ಇವನ ತಮ್ಮದೇರು ತೀರಿ ಹೋಗಿ ಹತ್ತಿಪ್ಪತ್ತು ವರ್ಷ ಆಗಲಿಕ್ಕ ಬಂದರೂ ಈ ತಿಪ್ಪಣ್ಣ ಮಾತ್ರ ಇನ್ನೂ ಭೇಷ ಇದ್ದ. ಅದಕ್ಕ ಕಾರಣ ಅಂವಾ ಯಾವದರ ಬಗ್ಗೆನೂ ತಲೀ ಕೆಡಸಕೋತಿರಲಿಲ್ಲ ಅನ್ನೂದು ಆ ಓಣಿಯೊಳಗಿನ ಮಂದೀ ಮಾತು. ಅದು ಖರೆನೂ ಇತ್ತು. ನನಗ ತಿಳದಂಗ ತಿಪ್ಪಣ್ಣ ಮೈ ಬಗ್ಗಿಸಿದ್ದು ಬಾಳ ಕಡಿಮಿ. ಮುಂಜಮುಂಜಾನೆ ಎದ್ದು ನಾಕು ಬಿಸಿ ರೊಟ್ಟಿ ಕತ್ತರಿಸಿ, ಬಯಲಿಗಿ ಬಿದ್ದ ಅಂದರ ಮುಗೀತು ಅಲ್ಲೀಟು ಕುಂತೆ, ಕತಿ ಹೇಳದೆ. ಇಲ್ಲೀಟು ಕುಂತೆ, ಕತೀ ಹೆಳದೆ. ಅನ್ಕೊಂಡು ದೇಶಾವರಿ ಮಾತಾಡಿ ಮತ್ತ ಹೊಟ್ಟಿ ಕವ್ ಕವ್….  ಅಂದಾಗಲೇ ಮನಿಕಡಿ ಹಾಯ್ತಿದ್ದ. ತಿಪ್ಪಣ್ಣನ ಹೆಂಡತಿ ಗುರನಿಂಗವ್ವ ಮತ್ತು ಮಕ್ಕಳೇ ಕಟಿಬಿಟಿ ಮಾಡಿ ಇವನ ಹೊಟ್ಟೀ ತುಂಬಬೇಕು. ಹೀಂಗ ಇದ್ದ ಮ್ಯಾಲೂ ತಿಪ್ಪಣ್ಣ ಮತ್ತ ಮತ್ತ ಅವರ ಮ್ಯಾಲೇ ಜಿಗದಾಡೂದು ಇತ್ತು. ಮಾತೆತ್ತದರ. ’ಮಕ್ಕಳೇ ಈ ಹೊಲ ಮನಿ ನಂದು, ನನಗೇನು ಪುಗ್ಸಟ್ಟೆ ಕೂಳ ಹಾಕ್ತೀರೆನೂ..?’ ಅಂತಿದ್ದ.

ತಿಪ್ಪಣ್ಣನ ಅಪ್ಪ ಲಕ್ಷ್ಮಣ ಚುಲೋ ಆಸ್ತಿ ಮಾಡಿದ್ದ. ನಾಲ್ಕೂ ಮಕ್ಕಳಿಗಿ ತಲಾಗ ಐದೈದು ಎಕರೆ ಜಮೀನ ಬಂದಿದ್ವು. ದುಡದರ ಕಡಿಮಿ ಇರಲಿಲ್ಲ. ಆದರ ಈ ತಿಪ್ಪಣ್ಣ ಹೊಲದಕಡಿ ಹಾಯೂದು ವರ್ಷದಾಗ ಒಂದೇ ಸಾರಿ ಆಗಿತ್ತು. ಅದೂ ಮಾವಿನ ಗಿಡಕ ಹೂವ ಆಗ್ಯಾವೋ, ಇಲ್ಲೋ ಅಂತ ನೋಡಾಕ. ಹಂಗೇನಾರೇ ಹೂ ಭರ್ಚಕ್ ಅಗ್ಯಾವ ಅಂದ್ರ ಅವನ್ನ ಭಾಗವಾನರ ನಬೀಸಾಬಗ ಗುತ್ತಗಿ ಕೊಟ್ಟು ಆ ರೊಕ್ಕ ಖಾಲೀ ಆಗೂಮಟ ಮನಿಕಡಿ ಹಾಯ್ತಿರಲಿಲ್ಲ. ಅವಾಗ ತಿಪ್ಪಣ್ಣ ಪಕ್ಕಾ ಕತೆಗಾರನೇ.. ಕುಡದು ಬಂದು ಓಣ್ಯಾಗಿನ ಎಲ್ಲಾ ಚುಕ್ಕೋಳಗಿ ಸುತ್ತಾ ಕೂಡಸಕೊಂಡು ಅವುಕ್ಕ ಎರಡೆರಡು ಕಾಳು ಹುರಕಡ್ಲಿ ಕೊಟ್ಟು ನಶೆ ಇಳಿಯೂಮಟ ಕುತಗೊಂಡು ಕತಿ ಹೇಳತ್ತಿದ್ದ. ಇಂಥಾ ತಿಪ್ಪಣ್ಣ ಈಗ ಇದ್ದಕ್ಕಿದ್ದಂಗ ನನಗ ನೆನಪಾಗಲಿಕ್ಕ ಕಾರಣಿತ್ತು…

  *******************

ಅವತ್ತೊಂದಿನ ಕಾನ್ವೆಂಟ್‍ನಲ್ಲಿ ಮೂರನೇ ಕ್ಲಾಸಲ್ಲಿ ಓದೋ ನನ್ನ ಮಗ, ಹಗೂರಕ ನಾ ಕುಳಿತ ಕುರ್ಚಿ ಬಾಜೂ ಬಂದು, ’ಪಪ್ಪಾ.. ಒಂದು ಕತಿ ಹೇಳು’ ಅಂದ. ಆದರೆ… ಟರ್ಮ್ಸ್ ಆಂಡ್ ಕಂಡಿಶನ್ಸ್ ಅಪ್ಲೈ ಅನ್ನೋ ಥರಾ ಕರಾರು ಹಾಕಾಕ ಶುರು ಮಾಡದ. ಅವನ ಕಂಡೀಶನ್ನು ಹೀಗಿದ್ವು.

’ನೋಡು, ನಂಗಂತೂ ಕಾಗಕ್ಕ ಗುಬ್ಬಕ್ಕನ ಕತೀ ಬ್ಯಾಡ..

ದೆವ್ವ ಭೂತದ್ದೂ ಬ್ಯಾಡ..

ಅಜ್ಜಿ -ಮೊಮ್ಮಗನ ಕತೀನೂ ಬ್ಯಾಡ..

ಬಂಗಾರದ ಕೂದಲು.. ಬೆಳ್ಳೀ ಅರಮನಿ ಕತೀನೂ ಬ್ಯಾಡ..

ಮಂತ್ರದ ಬಡಿಗಿ, ದನಾ ಕಾಯೋ ಹುಡುಗನೂ ಬ್ಯಾಡ..

ನರಿ ಮತ್ತ ದ್ರಾಕ್ಷಿದೂ ಬ್ಯಾಡ.’

ಇವೆಲ್ಲವುಗಳ ಹಂಗು ಹರಿದು, ಅಂವಾ ದಿನ್ನಾ ಪೋಗೋ ಚ್ಯಾನೆಲ್‍ದಲ್ಲಿ ನೋಡೋ ’ಮಿ. ಬೀನ್ ಕಥಿ ಬೇಕು’ ಅನ್ನೋ ಕಂಡೀಶನ್ನು. ಹಿಂಗ ಕರಾರ್ ಮಾಡಿ, ತಕರಾರು ತಗದು ಕಥಿ ಕೇಳೋ ಜಮಾನಾದಾಗಿರೋ ನನ್ನ ಮಗಾ, ನನ್ನನ್ನ ಇದ್ದಕ್ಕಿದ್ದಂಗ ತನ್ನ ವಯಸ್ಸಿಗಿ ಕರಕೊಂಡು ಹೋಗಿದ್ದ……

**********************

ನಾ ಅವಾಗಿನ್ನೂ ನಾಕನೆತ್ತೆ ಇದ್ದಿರಬೇಕು. ಎಡವಿ ಬಿದ್ರ ಮನಿ ಬಾಜೂನೇ ಸಾಲಿ. ಸಾಲೀಗಿ ಹೋಗೂದಂದ್ರ ನನಗ ಬಾಳ ಬಿರಿ ಬರತಿತ್ತು, ಸಾಲಿ ಅಂದಕೂಡಲೇ ಅಂಗಾಲಿಗೆಲ್ಲಾ ಮುಳ್ಳ ನಟ್ಟಂಗ ಆಗತ್ತಿತ್ತು. ಗಣಿತ ಕಲಸೋ ಕುಲ್ಕರ್ಣೆ ಮಾಸ್ತರ ನೋಡದರ ಹಸಿಹಾಗಲಕಾಯಿ ತಿಂದಂಗ ಆಗ್ತಿತ್ತು. ಅಪ್ಪ ಪೆಪ್ಪರಮಿಂಟ್ ತಿನ್ನಲಿಕ್ಕ ಹತ್ತು ಪೈಸೆ ಕೊಟ್ಟು, ಪುಸಲಾಯಿಸಿ ಕಳಸತ್ತಿದ್ದ. ಅಟ್ಟಾಗಿನೂ ನಾ ಮತ್ತ ರಿಪಿ ರಿಪಿ ಮಾಡದರ, ನನ್ನ ರಟ್ಟಿ ಹಿಡಕೊಂಡು, ದರದರ ಎಳಕೊಂಡು ಹೋಗಿ ಬಿಟ್ಟು ಬರತಿದ್ದ. ಅಟ್ಟೇ ಅಲ್ಲ ಹೊಳ್ಳಿ ಬರೂಮುಂದ ಮಾಸ್ತರಗ ಒಂದು ಮಾತ ಹೇಳಿ ಬರತಿದ್ದ. ’ಸರ್, ಅಂವಾ ಏನಾರೆ ಕಂಯಕ್… ಅಂದ್ರ ಝಾಡಿಸಿ ಮುಕುಳಿ ಮ್ಯಾಲ ಒದೀರಿ, ಜರ್ ಕರತ್ ಕೇಳಲಿಲ್ಲ ಅಂದ್ರ ನನಗ ಹೇಳ್ರಿ ಕಾಲೇ ಮುರಿತೀನಿ’ ಅಂತ ಖಡಕ್ ಆಗಿ ತಾಕೀತ್ ಮಾಡಿ ಬರತಿದ್ದ. ನನಗ ಕಲಸೋ ಸರ್‌ಗಳು ನನಗ ಇಕಾಡಿದಿಕಾಡಿ ಮುಟ್ಟಲಿಕ್ಕೇ ಹೆದರತ್ತಿದ್ದರು. ಅದ್ಯಾಕ ಹಂಗ ಅನ್ನೂದು ನನಗೂ ಗೊತ್ತಿರಲಿಲ್ಲ. ’ಯವ್ವಾ ಅದ್ಯಾಕ ಹಂಗ? ನೀ ಹೇಳದರೆ ಅಟ್ಟೇ ನಾ ಸಾಲೀಗಿ ಹೋಗಂವ’ ಅಂತ ಅವ್ವಗ ಕಿರಕಿರಿ ಮಾಡದಮ್ಯಾಲ ಅಕಿ ನಕ್ಕೋಂತ ’ನೀ ಒಂದನೆತ್ತೆ ಇದ್ದಾಗ ಒಂದಿನ ನಾಯಕ್ ಮಾಸ್ತರು ಬೆನ್ನೀಗಿ ರಿಮಕ್..! ಅಂತ ಗುದ್ದದರು. ನೀ ಚಡ್ಯಾಗೇ ತೆಕ್ಕಿಗಟ್ಟಲೇ ಹೇತಿದ್ದಿ…! ನಿನಗ ನೆನಪಿಲ್ಲ, ನಾ ಹೋಗಿ ಬಳದು ಬಂದೀನಿ’ ಅಂದದ್ದೇ ನನ್ನ ತಲೆಯೊಳಗ ಪಕ್ ಅಂತ ಲೈಟ್ ಹತ್ತದಂಗ ಆಯಿತು. ಅದ್ಕೇ ಸರ್ ಈಗ ಹೊಡದರ ಮತ್ತೆಲ್ಲಿ ಇಂವಾ ಚಡ್ಯಾಗೇ. ಅನ್ನೋ ಕಾರಣಕ್ಕ ನನಗ ಹೊಡಿತಿರಲಿಕ್ಕಿಲ್ಲ ಅಂತ ತಿಳಕೊಂಡೆ. ಅವತ್ತೊಂದಿನ ನನ್ನದೇ ಜೋಡಿ ಓದೋ ಬಡಿಗೇರ ಈರಣ್ಣನ ಸೀಸ್ ಪೆನ್ಸಿಲ್ ಕದ್ದರೂ ನಮ್ಮ ಸರ್ ಗುದ್ದದೆನೇ ’ಇನ್ನೊಂದ್ಸಾರಿ ಹಿಂಗ ಮಾಡದರ ನಿಮ್ಮ ಅಪ್ಪನ ಮುಂದೇ ಹೇಳತೀನಿ ನೋಡು’ ಅಂದಾಗಂತೂ ನನಗ ಹೊಡೀದೇ ಇರಲಿಕ್ಕ ಖರೆ ಕಾರಣ ಸಿಕ್ಕಿತ್ತು.

          ***********************

ನನಗೂ ಮೊದಲಿಂದಲೂ ಕತಿ ಕೇಳೂದು ಅಂದ್ರ ಬಾಳ ಮಜಾ ಅನಿಸುತ್ತಿತ್ತು. ’ಹುಂ’ ಅನ್ನಲಿಕ್ಕ ನಾ ಎಂದೂ ಹೈರಾಣಾದಂವಲ್ಲ. ಸಾಲಿ ಸೂಟಿ ಬಿಟ್ಟಿದ್ದೇ ಹೊಲದ ಕಡಿ ಹೋಗೂದು ಮಾಮೂಲು. ನಮ್ಮ ಹೊಲದಾಗ ಈ ತಿಪ್ಪಣ್ಣ ಅನ್ನವನು ಕೆಲಸಕ್ಕ ಇದ್ದ. ಅವನ ಬುತ್ತಿ ತಗೊಂಡು ನಾನು ಮತ್ತ ನಮ್ಮ ದೊಡ್ದಪ್ಪನ ಮಗಾ ಹೊಲದ ಕಡಿ ಹೋಗತ್ತಿದ್ದಿವಿ. ಈ ತಿಪ್ಪಣ್ಣ ಅಂದ್ರ ನಮ್ಮ ಪಾಲಿಗಿ ನಡದಾಡೊ ಪಂಚತಂತ್ರದ ಕತಿ ಪುಸ್ತಕ ಇದ್ದಂಗ. ಅಂವಾ ಊಟಾ ಮಾಡೂ ಮಟಾ ಅಷ್ಟೇ ನಾವು ಸುಮ್ಮನಿರತಿದ್ವಿ. ಅವನ ಊಟ ಮುಗದಿದ್ದೇ ‘ ತಿಪ್ಪಣ್ಣ ಒಂದು ಕತಿ ಹೇಳೊ’ ಅಂತ ಬೆನ್ನ ಬೀಳತಿದ್ವಿ. ’ಮಾಲಕರ, ಈಗ ಬ್ಯಾಡ್ರಿ ದೊಡ್ಡ ಸಾವುಕಾರು ಬೈತಾರ, ಕೆಲಸಾ ಬಿಟ್ಟು ಕತೀ ಹೇಳಾಕತ್ತೀಯೇನೋ ಬೋಳಿ ಮಗನ ಅಂತಾ ಅವತ್ತು ಬೈದಿದ್ದು ನಿಮಗ ನೆನಪೈತೋ.. ಇಲ್ಲೋ? ಬೇಕಾದ್ರ ಆಮ್ಯಾಲ ಹೇಳತೀನಿ. ಈಗ ಹ್ಯಾಂಗೂ ಬಾರಾ, ಸಾಡೇ ಬಾರಾ ಆಗಾಕ ಬಂದೈತಿ. ಸಾವುಕಾರ ಈಗ ಗೆಳೆ ಬಿಟ್ಟು ಊಟಾ ಮಾಡಿ ಮಲಗತಾರ, ಅವಾಗ ಗ್ಯಾರಂಟೀ ಹೇಳ್ತೀನಿ’ ಅಂತಿದ್ದ. ಅಂವಾ ಓದ್ದಂವ ಅಲ್ಲ, ಬರದಂವ ಅಲ್ಲ ಆದ್ರ ಬಾಳ ಚುಲೋ ಚುಲೋ ಕತಿ ಅವನ ನಾಲಗಿ ತುದಿ ಮ್ಯಾಲ ಒಂದು ಸವನ ಹರದಾಡತ್ತಿದ್ವು. ಹಂಗಾಗೇ ಅಂವಗ ಕತೀ ತಿಪ್ಪಣ್ಣ ಅಂತ ಹೆಸರ ಬಿದ್ದಿತ್ತು. ಅಪ್ಪ ಸಿಟ್ಟೀಲೇ ಅವನ್ನ ತಿಪಲದ ತಿಪ್ಯಾ ಅಂತ ಕರೀತಿದ್ದ.

ಮಲತಾಯಿ ಮಲಮಕ್ಕಳಿಗೆ ತ್ರಾಸು ಕೊಡೋ ಕತಿ..

ಜಾದೂ ಕೋಲು ತೊಗೋಂಡು ಎಮ್ಮೀ ಕೋಡಿಗಿ ಮುಟ್ಟಿದ್ದೇ ಬೇಕಂದಿದ್ದು ಪಟ್ಟಂತ ಸಿಗೋ ಕತಿ..

ಮೂರು ಕೋಡಿನ ಆಕಳ ಕತಿ..

ಹಾವು ಮತ್ತು ಮುಂಗಸಿ ಕತಿ..

ದೇವರು ಮತ್ತು ಕುಡ್ಡ ಭಕ್ತನ ಕತಿ..

ಬಂಗಾರದ ಕೊಡ್ಲಿ ಕತಿ..

ಹಿಂಗ ಒಂದೋ.. ಎರಡೊ .. ನೂರಾರು ಕತಿ ಅವನ ನೆನಪಿನ ಗಂಟಿನೊಳಗ ಕಾಲಮುರಕೊಂಡು ಅಂಗಾತ ಬಿದಿದ್ವು. ನನ್ನ ವಯಸ್ಸಿನ ಚುಕ್ಕೊಳಿಗೆಲ್ಲಾ ತಿಪ್ಪಣ್ಣ ಅಂದ್ರ ಬಾಳ ಜೀವ. ಅಂವಾ ಒಂದೇ ಒಂದು ದಿನ ಕತಿ ಹೇಳಾಕ ಬೇಜಾರ ಮಾಡಕೊಂಡಂವ ಅಲ್ಲ. ಆದರ ಅಂವಗ  ತೂಕಡಕಿಯೊಳಗೂ ಭೇಷನ್ಯಾಗೆ ’ಹುಂ’ ಅನ್ನವರು ಬೇಕು, ಇಲ್ಲಾಂದ್ರ ಕತಿ ಅರ್ಧಕ್ಕೇ ತುಂಡು ಮಾಡಿ ಬಿಡತ್ತಿದ್ದ. ಒಂದು ಕತಿ ಮುಗದ ಮ್ಯಾಲ ಪ್ರತಿ ಸಾರೀನೂ ’ನಾ ಹಾಲು ಕುಡದು ಹಾಸಗ್ಯಾಗ ಮಲಗದ್ಯಾ, ನೀವು ತುಪ್ಪ ಕುಡದು ತಿಪ್ಪ್ಯಾಗ ಮಲಗದರಿ’ ಅನ್ನಂವ. ನಮಗಂತೂ ಒಂಚೂರೂ ಬ್ಯಾಸರ ಅನಸತಿರಲಿಲ್ಲ. ಅವನ ಥರಾ ಕತಿ ಹೇಳವರಿದ್ದರ ತಿಪ್ಪ್ಯಾಗ ಮಲಗಲಿಕ್ಕೂ ನಾವು ಸಜ್ಜಾಗಿದ್ದಿವಿ. ಹಂಗಾಗೇ ಹಂತಿ ಮಾಡೋ ಮುಂದ ನಾವು ತಪ್ಪಿನೂ ಬೆಚ್ಚಗ ಗುಡಸಲದಾಗ ಮಲಗತಿರಲಿಲ್ಲ. ಜೋಳದ ಕಣಕಿಯೊಳಗ, ತಿಪ್ಪಣ್ಣನ ಜೋಡಿನೇ ಮಲಗತ್ತಿದ್ದವಿ. ತಿಪ್ಪಣ್ಣನ್ನ ಅಪ್ಪ ಸುಮ್ಮ ಹಿಂಗೇ ಹೊಲದ ಕಡಿ ಇರಲಿ. ಸೈರೇ ದನ ಬರ್ತಾವ ನೋಡಕೊಂಡು ಕೂಡಲಿ ಅಂತ ಕೆಲಸಕ್ಕ ಇಟಗೊಂಡಿದ್ದ. ತಿಪ್ಪಣ್ಣ ಬರೀ ಕತಿ ಹೇಳಂವ, ಮೈ ಬಗ್ಗಿಸಿ ಕೆಲಸಾ ಮಾಡಂವಲ್ಲ. ಅಪ್ಪ-ಅವ್ವ ಇಬ್ಬರೂ ಅಂವಾ ಅಂದ್ರ ಬಾಳ ಚುಲೋ ಮಾಡತ್ತಿದ್ದರು. ಒಂದೇ ದಿನ ಅಂವಗ ತಂಗಳು ರೊಟ್ಟಿ ಕಟ್ಟತಿರಲಿಲ್ಲ. ಅಂವಾ ಆಳು ಮನುಷ್ಯಾ ಅಂತ ಹೇಳಿ ಅಂವಗೊಂದು, ನಮಗೊಂದು ಮಾಡತಿರಲಿಲ್ಲ. ಹಿಂಗಾಗಿ ತಿಪ್ಪಣ್ಣ ನಮ್ಮ ಮನಿ ಮನಷ್ಯಾನೇ ಆಗಿದ್ದ. ನಾವು ಕತಿ ಹೇಳು ಅಂದಾಗೆಲ್ಲಾ ಅಂವಾ ಹೇಳಂವಲ್ಲ ಅಂವಗ ಮೂಡ್ ಬರಬೇಕು. ಇಲ್ಲಾಂದ್ರ ನಾವು ಹೊರಳಾಡಿ, ಕಾಲು ಹೊಸತು ಅತ್ತರೂ ಕತಿ ಹೇಳಂವಲ್ಲ. ಅಂವಾ ಸಿಂದಗಿ ತಾಲೂಕಿನ ಚಾಂದಕವಟೆಯವನು. ಹಬ್ಬ ಹರಿದಿನ, ಜಾತ್ರಿಗಿ ಸೈತಾ ಊರಿಗೆ ಹೋಗೋ ಮನುಷ್ಯಾ ಅಲ್ಲ. ’ನನ್ನ ಹೆಂಡತಿ ಬಾಳ ಸುಮಾರ ಅದಾಳ್ರಿ ಎರಡು ರೊಟ್ಟೀ ಹಾಕಲಾಕ ಒಂದು ಸವನ ಹೊಯ್ಕೊಂತಾಳ’ ಅನ್ನಂವ. ಈಗ ಅಂವಾ ಫುಲ್ ಹಣ್ಣಾಗ್ಯಾನ ಮೊದಲ ಹೊಲದಿಂದ ಮನಿಗಿ ಬರೋ ಮುಂದ ನನಗ ತನ್ನ ಹೆಗಲ ಮ್ಯಾಲ ಎರಡೂ ಕಡಿ ಕಾಲ ಇಳಿಬಿಟಗೊಂಡು, ಕೂಡಿಸಿಕೊಂಡು ಓಡಕೊಂತ ಬರವನು. ಮನಿ ಸನ್ಯಾಕ ಬಂದಿಂದ ಅಪ್ಪ-ಅವ್ವ ನೋಡದರ ಬೈತಾರ ಅಂತ ಹೇಳಿ ಅಲ್ಲೇ ಬಾವಿ ಬಾಜೂ ಇಳಿಸಿ, ’ಸಾವುಕಾರ ಮುಂದ ಹೇಳಬ್ಯಾಡ್ರಿ’ ಅನ್ನಂವ. ಇಂಥಾ ಗಟ್ಟೂಳ ತಿಪ್ಪಣ್ಣ ಅದ್ಯಾಂಗ ಮೈಗಳ್ಳ ಆದ ಅನ್ನೂದೇ ತಿಳೀದಂಗ ಆಗಿತ್ತು. ಅಂವಾ ಸಾಲೀಕಟ್ಟೀ ಸೈತಾ ಹತ್ತದಂವ ಅಲ್ಲ. ದೊಡ್ಡಾಟದಾಗ ನಿಶುಂಬನ ಪಾರ್ಟ್ ಮಾಡಿ, ವಾರದೊಳಗ ಎಲ್ಲಾ ಮಾತ ಬಾಯ್‍ಪಾಠ ಮಾಡಿ ನಮ್ಮ ಕೈಯಾಗ ಪುಸ್ತಕ ಕೊಟ್ಟು. ’ಅಲೆಲೆ ಶಹಬ್ಬ.. ಇಂದ್ರ ಸಖಿಯರಾದ ರಂಬೆ ಮೆನಕೆಯರೇ ಪರಿಪರಿಯಿಂದ ಕೇಳಿದರೂ ನನಗೆಂದೂ ಕನಿಕರ ಬರದು’ ಎಂದು ಡೈಲಾಗ್ ಹೆಳಾಕ ಸುರು ಮಾಡದರ ಅಟ್ಟೂ ಮುಗಿಯೂಮಟ ಬಿಡಂವಲ್ಲ. ಬಯಲಾಟ ದಿವಸ ಅಪ್ಪ ಅವನಿಗೆ ಮೈತುಂಬಾ ಬಟ್ಟೆ ಆಯೇರಿ ಮಾಡತ್ತಿದ್ದ. ’ಕಾಕಾ ನೀವೇನ್ರಿ ದರಾಸಾರಿ ನನಗ ಬಾಳ ವಜ್ಜಿ ಮಾಡ್ತೀರಿ, ವರ್ಷಾ ದೀಪಾವಳಿಗೆ ಎರಡು ಜೋಡು ಇಸಗೂಟುದು ಅಲ್ದೇ, ಮತ್ಯಾಕ ಸುಮ್ಮನೇ ಈ ಒಜ್ಜಿ.’ ಅಂತ ಬಾಳ ಬಿಡೆ ಮಾಡಕೊಳ್ಳಂವ. ’ಏ ತಿಪ್ಪಣ್ಣ ಅದಕ್ಯಾಕ ಅಷ್ಟು ಬಿಡೆ ಮಾಡಕೊಂತಿಯೋ.. ಬ್ಯಾರೇ ಯಾರರೇ ಕೊಟ್ಟಾರನೂ..? ಕೊಟ್ಟವರು ನಿಮ್ಮ ಕಾಕಾನೇ ಹೌದಿಲ್ಲೋ.’  ಅಂತ ಅವ್ವ ಅಂದಾಗ ನಕ್ಕೊಂತ ಸುಮ್ಮ ಆಗತ್ತಿದ್ದ.

                                         ****************************

ತಿಪ್ಪಣ್ಣ ಲಗ್ನ ಆಗಿಂದ ಬಿಟ್ಟು ಹೋಗತಾನ ಅಂದಾಗ ನನಗ ಆದಷ್ಟು ಬ್ಯಾಸರ ಬ್ಯಾರೇ ಯಾರಿಗೂ ಆಗಿರಲಿಲ್ಲ. ಅಂವಾ ಹೋದ ಮ್ಯಾಲೂ ಆಳುಗಳು ಕೆಲಸಕ್ಕ ಬಂದೇ ಬರ್ತಾರ ಆದರ ಅವನಂಗ ಕತಿ ಹೇಳವರು ಬರಬೇಕಲ್ಲ..? ಹಂಗಂತ ಅಪ್ಪನ ಮುಂದೂ ಹೇಳುವಂಗಿಲ್ಲ. ಆದರ ಅವ್ವಗ ಅದು ಗೊತ್ತಿತ್ತು. ಹಿಂಗಾಗಿ ತಿಪ್ಪಣ್ಣ ಹೋಗೋ ಮುಂದ  ’ನೀ ಅವಾಗಾವಾಗ ಬಂದು ನಮ್ಮ ರಾಜುಗೆ ಕತಿ ಹೇಳಬೇಕು’ ಅಂದಾಗ ’ಏ ಅದಕ್ಕೇನ್ರಿ ಅವ್ವಾರ, ಇಲ್ಲೇ ಎಡವಿ ಬಿದ್ದರ ಚಾಂದಕವಟೆ, ಸಂತಿಗಿ ಬಂದಾಗೊಮ್ಮ ನಮ್ಮ ಸಾವುಕಾರಗ ಮನಿ ಮಟ ಬಂದು ಕತಿ ಹೇಳೇ ಹೋಗತೀನ್ರಿ’ ಅಂದಾಗ ನಾ ಮುಖಾ ಸಣ್ಣ ಮಾಡಕೊಂಡು ನಿಂತಿದ್ದು ನೋಡಿ, ನನ್ನ ಸನ್ಯಾಕ ಬಂದು ಬಾಗಿ ’ಸುಮ್ನೇ ಅಲ್ಲರೀ ಸಾವುಕಾರ, ನೀವು ನೋಡುವಂತ್ರಿ, ಐತಾರ ದಿನ ಬಂದು ನಿಮಗ ಕತಿ ಹೇಳಿ ಹೋಗಲಿಲ್ಲ ಅಂದ್ರ ಆಮ್ಯಾಲ ಮಾತಾಡ್ರಿ’ ಅಂತ ಹೇಳಿ ಎರಡು ವರ್ಷ ಕಳಿಲಿಕ್ಕ ಬಂದರೂ ಪತ್ತೆನೇ ಇರಲಿಲ್ಲ. ಅಂವಾ ಹೋದ ವಾರದೊಳಗ ಅಪ್ಪ ಸಿದ್ದಣ್ಣ ಅನ್ನೋ ಬ್ಯಾರೇ ಒಬ್ಬನನ್ನು ಕೆಲಸಕ್ಕ ಅಂತ ಕರಕೊಂಡು ಬಂದ. ಅಂವಾ ಬೋರಗಿ ಊರವನು. ಅಪ್ಪ ಎಮ್ಮಿ ಖರೀದಿಗಿ ಅಂತ ಹೋದಾಗ ಕುರುಬರ ಲಕ್ಕಪ್ಪನ ಮುಂದ ’ನಮಗೊಂದು ಚುಲೋ ಆಳು ಇದ್ದರ ನೋಡು’ ಅನ್ನೋದರೊಳಗ ಲಕ್ಕಪ್ಪ ಅವನ್ನ ಕರಕೊಂಡು ಬಂದು, ಅಪ್ಪನ ಜೊತೆ ಮಾಡಿ ಎಮ್ಮೀ ಜೋಡಿನೇ ಕಳಸಿಕೊಟ್ಟಿದ್ದ. ಕೆಲಸದ ವಿಷಯದಾಗ ಸಿದ್ದಪ್ಪ ದೆವ್ವ ಇದ್ದಂಗ ಅಂತ ಅಪ್ಪ ಅವ್ವನ ಮುಂದ ಹೇಳೂದನ್ನ ನಾನು ಕೇಳಿದ್ದಿತ್ತು. ’ಕತಿ ವಿಷ್ಯದಾಗ ಹ್ಯಾಗಂತ..?’ ಅಂಥ ಕೇಳಬೇಕು ಅಂದಕೊಂಡಿದ್ದೆ. ಅಪ್ಪನ ಭಯಕ್ಕ ಸುಮ್ಮ ಆಗಿದ್ದೆ. ಅಂವಾ ಬಂದು ಇನ್ನೂ ಒಂದು ವಾರನೂ ಕಳದಿರಲಿಲ್ಲ. ಹಗೂರಕ ಬುತ್ತಿ ಕೊಡೊ ನೆಪದಾಗ ಅವನ ದೋಸ್ತಿ ಮಾಡಕೊಂಡೆ. ನೋಡೆರೆ ನೋಡಮ್ಮು ಅಂವಾ ಹ್ಯಾಂಗ ಕತಿ ಹೇಳ್ತಾನ ಅಂತ ಕೇಳಬೇಕು ಅಂದ್ಕೊಂಡು.

’ಸಿದ್ದಣ್ಣ ಒಂದು ಕತಿ ಹೇಳೋ’

’ಯಾವ ಕತೀರಿ..?’ ಅಂದ.

’ಯಾವದರೇ, ನಿನಗ ಯಾವುದು ಬರತೈತಿ ಅದು’

’ನನಗ ಬರಲ್ಲರೀ ಸಾವುಕಾರ’

’ಎಷ್ಟು ಬರತೈತಿ ಅಷ್ಟು’

’ಎತ್ತಗೊಳಿಗಿ ನೀರ ಕುಡಿಸಿ ಕಟ್ಟಿ ಬರ್ತೀನಿ ನಿಲ್ಲರಿ’

’ನಾ ಇಲ್ಲೇ ಗುಂಡ ಮಾವಿನ ಗಿಡದ ಕೆಳಗ ಕುತಗೊಳ್ಯಾ..?’

’ಕೂಡ್ರಿ ಈ ಸದ್ಯೇ ಬಂದ್ಯಾ’ ಎಂದವನೇ ಬಾವಿ ಕಡಿ ನಡದ. ಅಪ್ಪ ಗುಡಸಲದಾಗ ಮಲಗಿದ್ದ. ಮಟಮಟ ಮಧ್ಯಾಹ್ನ. ನಾನು ನಮ್ಮ ದೊಡ್ದಪ್ಪನ ಮಗ ಇಬ್ಬರೂ ಸಿದ್ದಪ್ಪಣ್ಣ ಬಂದು ಕತಿ ಹೇಳ್ತಾನ ಅಂತ ಕಾಯ್ಕೊಂಡು ಕುಂತಿದ್ದಿವಿ. ಅಷ್ಟರೊಳಗ ಖಾಲಿ ಬಕೀಟ ಕೈಯಾಗ ಹಿಡಕೊಂಡು ಗಿಡದ ಕಡಿ ಬಂದ. ಟವಲ್ಲಿಂದ ಮುಖಾ ಒರಸಗೊಂತ

’ಅನಗಾಡ ಬಿಸಲ ಬಿಡ್ರಿ ಸಾಹುಕಾರ… ಈ ಬಿಸಲಹೊತ್ತಿನ್ಯಾಗ ಅದೆಂಥಾ ಕತೀರಿ, ಹೋಗಿ ಕಾಕಾ ಅವರ ಜೋಡಿ ಗುಡಸಲದಾಗ ಮಲಗಬಾರದೇನ್ರಿ..?’

’ಅದೆಲ್ಲಾ ಬ್ಯಾಡ, ಈಗ ಮೊದಲ ನಮಗೊಂದು ಕತಿ ಹೇಳು’

’ಖರೆ ಹೇಳಬೇಕಂದ್ರ ಇನ್ನೂ ನಂದು ಊಟ ಆಗಿಲ್ಲರೀ..’

’ಮಾಡು ಯಾರು ಬ್ಯಾಡ ಅಂದ್ರು’

’ಹಂಗಂದರ ನೀವಿಬ್ಬರೂ ಇಲ್ಲೇ ತುಸು ಹೊತ್ತು ಏನರೇ ಆಡ್ರಿ.. ಪಟ್ಟಂತ ಒಂದು ರೊಟ್ಟಿ ತಿಂತೀನಿ’ ಅಂದ. ಕಿಸೆಯೊಳಗ ಕೈ ಹಾಕಿದೆ. ಮನಿಯಿಂದ ತಗೊಂಡು ಬಂದಿದ್ದ ಗೋಟಿ ಆಡಾಕ ಶುರು ಮಾಡದವಿ. ಒಂದು ಆಟಾ ಆಡೋದರೊಳಗ ಇಬ್ಬರಿಗೂ ಬ್ಯಾಸರ ಬಂದು, ಗೋಲಿಗುಂಡ ಕುರಿ ಹಿಕ್ಕಿ ಕಂಡಂಗ ಆಗಾಕತ್ವು. ಅಷ್ಟರೊಳಗ ಸಿದ್ದಪ್ಪಣ್ಣ ’ಸಾಹುಕಾರ ಬರ್ರಿ’ ಅಂತ ಕರದ. ಚಂಗ್ ಅಂತ ಓಡಿ ಬಂದು ಅವನ ಬಾಜೂ ಕುಂತವಿ. ತನ್ನ ತಲಿಗಿ ಸುತಗೊಂಡಿದ್ದ ಟವಲ್ ತಗದು, ಝಾಡಿಸಿ ’ಇದರ ಮ್ಯಾಲ ಕುಂದರ್ರಿ’ ಅಂದ. ನಾವು ಅಂವಾ ಹೇಳದಂಗೇ ಮಾಡದವಿ.

‘ಈಗ ಕತಿ ಸುರು ಮಾಡಲೇನ್ರಿ..?.’ ಅಂದ.

’ಲಗೂ ಲಗು ಹೇಳು’

’ನನಗೇನು ಅಂಥಾ ಕತಿ ಬರಲ್ಲರೀ’ ಅನ್ಕೋಂತ ಶುರು ಮಾಡದ. ’ಅವತ್ತು ಬಾದಮಿ ಅಮಾಶಿ ಇತ್ತರಿ. ಹಿಂಗೇ ಮಟಮಟ ಮಧ್ಯಾಹ್ನದಾಗ ನಮ್ಮೂರ ಹೊರಗಿರೋ ಹುಂಚೀ ಗಿಡದ ಕಡಿಗೆ ಹೊಂಟಿದ್ಯಾರಿ. ದಿನ್ನಾ ಅಲ್ಲಿ ಒಬ್ಬರಿಲ್ಲಾ ಒಬ್ಬರು ಇರವರು. ಆದರ ಅವತ್ತು ನಿಮಗ ಹೇಳಬೇಕಂದರ ಒಂದೇ ಒಂದು ನರಪಿಳ್ಳೆನೂ ಕಣ್ಣಿಗೆ ಬೀಳಲಿಲ್ಲರಿ. ಗಿಡದ ಸನ್ಯಾಕ ಬಂದಿದ್ದೇ ಅದು ಗವ್.. ಅಂದಂಗ ಆಯಿತು. ಮ್ಯಾಲ ಮುಖಾ ಎತ್ತಿ ನೋಡದರ ತೆಕ್ಕಿಗಟ್ಟಲೆ ತೊಗಲು ಬಾವಲಿ ಹಕ್ಕಿ ಮುಖಾ ಕೆಳಗ ಮಾಡಿ ಜೋತಾಡತ್ತಿದ್ವು. ಅಮವಾಶಿ ಕತ್ತಲ ಪೂರಾ ಗಿಡದ ಹೊಟ್ಟ್ಯಾಗೇ ದಟ್ಟಾಗಿ ಹೊಕ್ಕಂಗ ಕಾಣತ್ತಿತ್ತು. ಮೈಲಗಟ್ಟಲೆ ದೂರ ಕಣ್ಣ ಹರಸಿದರೂ ಒಂದೇ ಒಂದು ಕಾಗಿ ಕಾಣ್ಲಿಲ್ಲ. ನನಗೂ ತುಸು ಅಂಜಿಕಿ ಬಂದಂಗ ಆಯಿತು. ಗಿಡದ ಕೆಳಗ ಕೂಡಲಿಕ್ಕೂ ಮನಸು ಬರಲಿಲ್ಲರಿ. ತಿರುಗಿ ಮನಿಗಿ ನಡದರ ಆಯ್ತು ಅಂತ ಹೊಂಟೆ. ಎದುರಗಿ ಒಂದು ಕುರಿ ಕಂಡಂಗ ಆಯ್ತು. ನೋಡಲಿಕ್ಕ ಬಾಳ ಮಜಬೂತಾಗಿತ್ತು. ಅದರ ಹಿಂದ ಮುಂದ, ಆಜೂ ಬಾಜೂ ಯಾರೂ ಇರಲಿಲ್ಲ. ಅದು ತಿರುಗಾಡೊ ಜಾಗಾ ನೋಡದರ ಸುಡಗಾಡು. ನನ್ನ ಸನ್ಯಾಕ ಬಂದದ್ದೇ ಅದು ಮಂಗಮಾಯ..! ನನಗಂತೂ ಬಾಳ ಅಂಜಿಕಿ ಬಂದಂಗ ಆಯ್ತು. ಅಕಾಡಿ ಇಕಾಡಿ ನಾಕೂ ನಿಟ್ಟ ನೋಡದ ಮ್ಯಾಲೂ ಅದು ಕಾಣಲಿಲ್ಲ.. ’ಅಂತ ಕಣ್ಣಗಲ ಮಾಡಿ, ಗಾಭರಿಯಾಗಿ ಹೇಳತ್ತಿದ್ದ.

ನಾವಿಬ್ಬರೂ ಬಿಟ್ಟ ಕಣ್ಣ.. ಬಾಯಿ ಬಿಟಗೊಂಡೇ ಕೇಳತಿದ್ದಿವಿ. ನಮ್ಮ ದೊಡ್ದಪ್ಪನ ಮಗ ’ಮುಂದ ಏನಾಯಿತು.?’ ಅಂದ. ’ಹೇಳತೀನಿ ಆದರ ಹೆದರಬ್ಯಾಡ್ರಿ’ ಅಂದ. ನನಗ ಅದಾಗಲೇ ಒಳಗ ಟುಕುಟುಕು ಶುರು ಆಗಿತ್ತು. ಉಗುಳು ನುಂಕೋಂತೇ ‘ಹೆದರೂದಿಲ್ಲ ಹೇಳು’ ಅಂದೆ.

’ಆ ಕುರಿ ಎಲ್ಲಿ ಹೋಯ್ತು ಅಂತ ಸುಡಗಾಡ ತುಂಬಾ ಹುಡುಕದ್ಯಾರಿ ಕಾಣಲಿಲ್ಲ. ಹಂಗೇ ತುಸು ಮುಂದು ಹೋದ್ಯಾ.. ಅಲ್ಲಿ ಒಂದು ಗೋರಿ ಮ್ಯಾಲ ಒಬ್ಬಳು ಅಗಲ ಹೆಂಗಸು ಚಪಗಾಲು ಹಾಕಿ ಕುತಗೊಂಡಿದ್ದಳು. ಇಂಥಾ ಮಟಮಟ ಮಧ್ಯಾಹ್ನದಾಗ ಅದ್ಯಾಕ ಇಲ್ಲಿ ಕುಂತಾಳ ಅಂತ ಸನ್ಯಾಕ ಹೋಗಿ ನೋಡುದರೊಳಗ ಅಕಿನೂ ಮಂಗ ಮಾಯ..’ ಅಂತ ಹೇಳಿ ನಮ್ಮಿಬ್ಬರ ಮುಖಾ ನೋಡದ. ಒಳಗೊಳಗ ಒಂಥರಾ ನಡುಕ ಹುಟ್ಟೈತಿ ಅನ್ನೂದನ್ನು ಸಿದ್ದಣ್ಣ ಲೆಕ್ಕಾ ಹಾಕಿ ’ಮುಂದಿಂದು ಹೇಳಲೋ ಬ್ಯಾಡ್ರಿ..?’ ಅಂತ ಕೇಳದ. ಖರೆನೇ ನಾವು ಹೆದರಿದ್ದರೂ ’ಹೇಳು’ ಅಂದಿವಿ.

’ಆಮ್ಯಾಲ ನನಗ ಗೊತ್ತಾಯಿತು. ಆ ಕುರಿ.. ಮತ್ತ ಆ ಹೆಂಗಸು ಸುಡಗಾಡದಾಗೇ ಮಂಗ ಮಾಯ ಆದರು. ಅಂದ ಮ್ಯಾಲ ಅವೆರಡೂ ಗ್ಯಾರಂಟೀ ದೆವ್ವೇ ಅದಾವ ಅಂತ ಹೇಳಿ ಅಲ್ಲಿಂದ ಏಳಕೊಂತ ಬೀಳಕೊಂತ ಓಡಲಿಕ್ಕ ಸುರು ಮಾಡದವನು, ಮನಿ ಮುಟ್ಟೂ ಮಟ ಎಲ್ಲೂ ನಿಲ್ಲಲಿಲ್ಲರೀ.’ ಅಂತ ಹೇಳಿ ಕತಿ ಮುಗಸದ. ನಮಗ ಸಿದ್ದಣ್ಣ ಬಾಳ ಧೈರ್ಯವಾನ್ ಅದಾನ ಅನಿಸಿತ್ತು. ನಾವು ಹೊಲದಿಂದ ಮನಿಗೆ ಹೋಗೋವಾಗ ಸುಡುಗಾಡ ದಾಟಿಕೊಂಡೇ ಹೋಗಬೇಕು ಹಂಗ ಹೋಗೋ ಮುಂದ ನಮಗ ಎದುರಿಗಿ ಒಂದೇ ಒಂದು ಕುರಿ ಬಂದರೆ, ಇಲ್ಲಾಂದ್ರ ಅಡ್ಡಾಲಕ ಕುಂಕುಮ ಹಚಕೊಂಡು ಯಾವದರೇ ಹೆಂಗಸು ಬಂದರೂ ನಮ್ಮ ಬಾಯಿ ಬರಬರ… ಬಿರಿಬಿರಿ ಒಣಗತಿತ್ತು.

ಈ ಸಿದ್ದಪ್ಪಣ್ಣನ ಕತಿಗಳಂದ್ರ ಎಲ್ಲಾ ಇಂಥಾವೇ.. ತಾನು ದೆವ್ವನ್ನ ಒಂದೇ ಮಾರು ದೂರದಿಂದ ನೋಡೀನಿ ಅದರ ಕಾಲು ಉಲ್ಟಾ ಇರ್ತಾವ.. ಬಿಳಿ ಸೀರಿ ಉಟ್ಗೊಂಡಿರ್ತಾವ.. ಹಣಿ ತುಂಬ ಅರಿಶಿಣ ಕುಂಕುಮ ಬಡ್ಕೋಂಡಿರ್ತಾವ ಅಂತ ಹೇಳಿದ್ದ. ಒಂದು ದಿನ ಮನಿಗಿ ಥೇಟ್ ಇದೇ ಥರಾ ರೂಪ ಇರೋ ಗೊಲ್ಲರ ಹೆಂಗಸು ಒಬ್ಬಳು ಭಿಕ್ಷೆ ಬೇಡಲಿಕ್ಕ ಬಂದಿದ್ದಳು. ಮನ್ಯಾಗ ಇದ್ದದ್ದು ನಾನು ಮತ್ತ ನಮ್ಮ ತಂಗಿ. ಹೋಗಿ ನೀಡೂ ಮುಂದ ಸಿದ್ದಪ್ಪಣ್ಣ ಹೇಳಿದ್ದ ದೆವ್ವಿನ ರೂಪ ತಟ್ಟ್ ಅಂತ ನೆನಪಾಗಿ, ಹೆದರ್ಕೊಂತ ಅಕಿ ಪಾದ ನೋಡಿದ್ದೆ. ಅವು ಸೀದಾನೇ ಇದ್ದು ಹಿಂಗಾಗಿ ಸನ್ಯಾಕ ಹೋಗಿ ಭಿಕ್ಷೆ ಹಾಕಲಿಕ್ಕ ಧೈರ್ಯ ಬಂದಿತ್ತು. ಸಿದ್ದಪ್ಪಣ್ಣಂದು ಒಂದೆರಡಲ್ಲ. ಅಮವಾಶ್ಯೆ ದಿನ ಅದರಲ್ಲೂ ನಡುರಾತ್ರಿಯೊಳಗ ಸುಡಗಾದದೊಳಗ ಹೋಗಿ, ಗೋರಿ ಮ್ಯಾಲ ಇಟ್ಟ ಹೋಳಿಗಿ ಉಂಡು, ನೂರು ರೂಪಾಯಿ ಬಹುಮಾನ ಗೆದ್ದ ಕತೀನೂ ಒಂದು ಹೇಳಿದ್ದ. ಅಂವಾ ಇನ್ನೂ ಒಂದು ಹೇಳಿದ್ದ. ಸುಡಗಾಡು ದಾಟಿ ಬರೋ ಮುಂದ ಗೋರಿ ಕಡೆ ಕೈ ಮಾಡಬಾರದು ಅಂತ. ಹಂಗೇನಾರೆ ಮಾಡದರ ಕಾಲ ಒಳಗಿಂದ ಕೈ ಹಾಕಿ ಐದೂ ಬೆರಳನ್ನ ಹಗೂರಾಗಿ ಬಾಯಾಗ ಹಿಡದು, ಕಡಕೋಬೇಕು ಅಂತ. ನಾ ಮೆಟ್ರಿಕ್ ಮುಗಿಯೋ ಮಟ ಹಂಗ ಮಾಡಿದ್ದೈತಿ. ಬರ್ತಾ ಬರ್ತಾ ಸಿದ್ದಣ್ಣ ಮತ್ತವನ ಕತಿ ನಮ್ಮಂತಾ ಹುಡುಗರ ಪಾಲಿಗೆ ಬೆನ್ನಿಗಿ ಬಿದ್ದ ಬೇತಾಳ ಆಗಿದ್ವು. ಅದರ ಪರಿಣಾಮ ನಾವು ರಾತ್ರಿ ಉಚ್ಚೆ ಬಂದರೂ ಒಬ್ಬನೇ ಎದ್ದು ಒಯ್ಯುವಂಗಿರಲಿಲ್ಲ. ಅಮವಾಶ್ಯೆ ಹಿಂದಾಮುಂದ ಸಿದ್ದಣ್ಣ ಹೇಳಿದ್ದ ಕತಿಗಳೇ ಸುತ್ತ-ಮುತ್ತಲೂ ಬಿಚ್ಚಕೊತಿದ್ವು. ನಡುರಾತ್ರಿಯೊಳಗ ಎಚ್ಚರಾಗಿ ಹಿಂಗ ಕಣ್ಣ ಬಿಟ್ಟರೂ ಮನಿ ಗ್ವಾಡಿ ಮ್ಯಾಲ ಥೈ ಥೈ ಅಂತ ಕುಣದಂಗ ಕಾಣಸತ್ತಿತ್ತು. ಉಸರ ಬಿಗಿ ಹಿಡದು, ಮುಸಕ ಹಾಕಿ ಮಲಗಿದ್ದೂ ಐತಿ. ಮಟಮಟ ಮಧ್ಯಾಹ್ನ ಸಂಡಾಸ್ ಬಂದರೂ ಎದಿ ಧಸಕ್ ಅಂತಿತ್ತು. ದೆವ್ವ ಯಾವ ರೂಪದಾಗ ಬರ್ತಾವ ಅಂತ ಹೇಳೂವಂಗಿಲ್ಲ ಅದಕ್ಕೇ ಕಿಸೆಯೊಳಗ ಒಂದು ದೇವರ ಪೋಟೊ ಇಟ್ಗೋಬೇಕು ಅಂತ ತನ್ನ ಕಿಸೆಯೊಳಗಿದ್ದ ಎಲ್ಲಮ್ಮನ ಪೋಟೋ ತಗದು ತೋರಿಸಿದ್ದ. ದೆವ್ವ ಬಡದರ ತಮಗ ಬರಲಾರದ ಬಾಷೆ ಸೈತಾ ಮಾತಡತಾರ ಅಂದಿದ್ದ. ಅಂವಾ ಹೇಳದಂಗೇ ಅದು ಖರೆ ಆಗಿತ್ತು. ನಮ್ಮ ಬಾಜೂ ಮನಿಯೊಳಗ ಶರಣವ್ವ ಅನ್ನೋ ಹೆಂಗಸಿಗಿ ಗಾಳಿ ಆಗ್ಯಾದ ಅನ್ನೋ ಸುದ್ದಿ ಇಡೀ ಓಣಿಗೆ ಓಣಿನೇ ಅವಾಜ್ ಮಾಡಿತ್ತು. ಅವ್ವ ಅಕಾಡಿ ಹೋಗಬ್ಯಾಡ್ರಿ ಅಂತ ತಾಕೀತು ಮಾಡಿದ ಮ್ಯಾಲೂ ನಾವು ಮೂರ್ನಾಕು ಹುಡುಗರು ಶರಣವ್ವಳ ಮನಿ ಸನ್ಯಾಕ ಹೋಗಿದ್ದೇ ಅಕಿ ಜೋರಾಗಿ ವದರೂದು ಕೇಳತ್ತಿತ್ತು. ಅಕಿ ಕನ್ನಡಾನೇ ತೊಡರ್ ಬಡರ್ ಮಾತಾಡುವಕ್ಕಿ, ಅಂತದರೊಳಗ ಉರ್ದುದಾಗ ವಟಾ ವಟಾ ಅನ್ನೂದು ಕೇಳಿ ಸಿದ್ದಪ್ಪಣ್ಣ ಖರೆ ಹೇಳಿದ್ದ ಅನಿಸಿತ್ತು. ಹಂಗೆನೇ ಆ ಶರಣವ್ವನ ಅತ್ತಿ  ಮುಂದ ವರ್ಷ ಒಪ್ಪತ್ತಿನ್ಯಾಗ ನೆಗದು ಬಿದ್ದಿದ್ದೇ ದೆವ್ವ ಶರಣವ್ವನ ಮೈಯಾಂದು ಖರೆ ಖರೆನೆ ಓಡಿ ಹೋದಂಗಿತ್ತು

ಸುಗ್ಗಿದಿಂದಾಗ ಒಂದೆರಡು ದಿನ ರಾಶಿ ಮಾಡೂ ಮುಂದ ನಾನೂ ಹೊಲದಾಗ ಮಲಗತಿದ್ದೆ. ಅಪ್ಪ ’ಹುಚ್ಚ ಖೋಡಿಯಂಗ ಮಾಡಬ್ಯಾಡ, ನಸುಕಿನ್ಯಾಗ ಬಾಳ ಥಂಡಿ ಇರತ್ತೈತಿ ಸುಮ್ಮ ಮನ್ಯಾಗ ಇರು’ ಅಂದರೂ ಕೇಳತಿರಲಿಲ್ಲ. ಅವತ್ತೊಂದಿನ ಹಂತಿ ಮಾಡೂ ಮುಂದ ಸಿದ್ದಣ್ಣ ನನಗ ದೂರದಲ್ಲಿ ಲಮಾಣಿಗೇರ ತಾಂಡಾ ಹೊರಗ ಬ್ಯಾಟರಿ ಹಿಡಕೊಂಡು ತಿರುಗಾಡೊದನ್ನು ತೋರಿಸಿ, ಅದು ಕೊಳ್ಳಿದೆವ್ವ. ಮೊನ್ನೆ ನಾ ಹಿಂಗೇ ಮಲಗದಾಗ ನಾ ಹೊದುಕೊಂಡು ಮಲಗಿದ್ದ ಕಂಬಳಿ ಜೋಡಿನೇ ನನಗ ಎತ್ತಿ ವಗೀತು.. ಎದ್ದು ನೋಡದರ ಮಂಗ ಮಾಯ..! ಬೆಳ್ಳ ಬೆಳತನಕ ಆ ಕೊಳ್ಳಿ ದೆವ್ವ ತಿರಗತಿರತೈತಿ. ನಸುಕಿನ ವ್ಯಾಳೆದಾಗ ಕೋಳಿ ಕೂಗೋ ಮೊದಲೇ ಮಂಗಮಾಯ ಆಗಿ, ಮುಗಲಾಗ ಹೋಗಿ ಒಂದು ಚುಕ್ಕಿ ಆಗಿ ಮುಗಲಿಗಿ ಮೆತ್ತಕೊಂಡು ಬಿಡತೈತಿ, ಮತ್ತ ಮರುದಿನ ರಾತ್ರಿ ಹಿಂಗ ಕೊಳ್ಳಿ ದೆವ್ವ ಆಗಿ ತಿರಗತೈತಿ ಅಂತ ಹೇಳಿದ್ದ. ಹುಣಸೀಗಿಡ ಅಂದ್ರ ಆ ದೆವ್ವಗೋಳು ಬಾಳ ಹುರುಪ ಆಗ್ತಾವ. ಹಗಲ ಹೊತ್ತಿನ್ಯಾಗೂ ತಂಪಂತ ಹೇಳಿ, ಅವು ಅಲ್ಲೇ ಮಲಗೂದು, ತಾ ನೋಡೀನಿ ಅಂತ ಹೇಳಿದ್ದ. ಆ ದಿನದಿಂದ ಅಂವಗ ನಾವು ಹುಣಸೀಕಾಯಿ ಹರದುಕೊಡು ಅನ್ನೂದೇ ಬಿಟ್ಟಿದ್ದಿವಿ. ಇಂಥಾ ಸಿದ್ದಣ್ಣ ಬರತಾ ಬರತಾ ನಮ್ಮನ್ನ ಬೀಡಿ ತರಲಿಕ್ಕ. ತಂಬಾಕ ತರಲಿಕ್ಕ ಬಳಸಿಕೊಳ್ಳಾಕ ಶುರುಮಾಡದ. ಎಲ್ಲೀವರಿಗೆಂದ್ರ ನಾವು ರಾತ್ರಿ ಕತಿ ಕೇಳತಾ ಕೇಳತಾ ಅಂಜಕೊಂಡು ಅವನ ಹಾಸಿಗಿಯೊಳಗೇ ಮುದಡಿ ಆಗಿ ಮಲಗತಿದ್ದಿವಿ. ನಾವು ಅಂವಗ ಇನ್ನೂ ಗಟ್ಟಿ ಆಗಿ ಹಿಡೀಲಿ ಅಂತ ಹೇಳಿ ಮತ್ತೂ ಹೆದರಿಕಿ ಆಗೂವಂಥಾ ಕತಿ ಹೇಳಂವ. ನಾವು ಸಾಕು ಅಂದರೂ ಬಿಡ್ತಿರಲಿಲ್ಲ. ಎಲ್ಲೀವರೆಗಂದರ ನಾವು ನಮ್ಮವ್ವ ಹಾಗೂ ಅಪ್ಪ ಹೇಳೊ ಕೆಲಸ ಒಲ್ಲೆ ಅಂತಿದ್ದೀವಿ ಸಿದ್ದಪ್ಪಣ್ಣ ಹೇಳಿದರ ಮರು ಮಾತಾಡದೇ ಮಾಡತಿದ್ದಿವಿ. ಸಿದ್ದಪ್ಪಣ್ಣ ನೋಡಲಿಕ್ಕೂ ಒಂಥರಾ ರಾವ್ ಇದ್ದ. ಅವನ ಕಾಲಿನ ಮೀನಗಂಡದ ಮ್ಯಾಲ ಉಬ್ಬಿದ ನರಗೋಳೇ ಭಯ ಹುಟ್ಟಿಸುವಂಗ ಇದ್ವು. ಕೋರೆ ಮೀಸೆ, ಗುಂಗರಗೂದಲು, ದಢೂತಿ ದೇಹ, ಗಡಸು ಧ್ವನಿ ಒಟ್ಟಿನ್ಯಾಗ ಅಂವಾ ದೆವ್ವಿನ ಕಥಿ ಹೇಳಲಾಕ ಹೇಳಿ ಮಾಡಸದಂಗ ಇದ್ದ.

 *******************************

ಗೌರೀ ಹುಣ್ಣವಿ ಜಾತ್ರಿ ಮುಂದ ಹೊಲದಾಗ ಕಡ್ಲಿ ರಾಶಿ ಇತ್ತು. ಜಾತ್ರಿ ಸಲಾಗಿ ಎರಡು ದಿನ ಸಾಲಿ ಸೂಟಿ ಕೊಟ್ಟಿದ್ದಿತ್ತು. ಅಪ್ಪ ಬ್ಯಾಡ ಅಂದರೂ ನಾನೂ ರಾತ್ರಿ ಹೊಲದಾಗೇ ಇರತೀನಿ ಅಂತ ಪಂಟ ಹಚ್ಚದೆ. ಥಂಡಿ ಬಾಳ ಇರತೈತಿ ಬರೂದಿದ್ದರ ಒಂದು ಕೌದಿ ತಗೊಂಡು ಬಾ ಅಂದ. ಬಾಳಂದ್ರ ಬಾಳ ಖುಷಿ ಆಯಿತು. ಸಿದ್ದಣ್ಣ ರಾಶಿ ದಿನ ಕತಿ ಹೇಳ್ತೀನಿ ಅಂತ ಮಾತು ಕೊಟ್ಟಿದ್ದ. ಕೊಟ್ಟ ಮಾತು ತಪ್ಪದರ ನಾ ಬಿಡೂವಂಗಿಲ್ಲ ಅಂತ ಅಂವಗೂ ಗೊತ್ತಿತ್ತು. ರಾತ್ರಿ ಉರಿ ಹಚ್ಚಿ ಕಡ್ಲಿ ಗಿಡ ಸುಟ್ಟು ಕಟರುಂ ಕುಟರುಂ ಅಂತ ಭೇಷ ರಾತ್ರಿ ಬಾರಾ, ಸಾಡೇ ಬಾರಾತನ ಅಪ್ಪ. ಸಿದ್ದಣ್ಣ, ಬಾಜೂ ಹೊಲದ ಚಿನ್ನಪ್ಪ ಕಟದೇ ಕಟದರು. ಹುಣ್ಣವಿ ಬೆಳದಿಂಗಳ ಹೊಲದ ತುಂಬಾ ಸುರವಿದಂಗ ಕಾಣ್ತಿತ್ತು. ಅಪ್ಪ ’ನಿನಗ ನಿದ್ದಿ ತಡಿಯೂದಿಲ್ಲ ಹೋಗಿ ಗುಡಸಲದಾಗ ಮಲಕೊ’ ಅಂದ. ನಾ ಸುಮ್ಮ ಕುಂತೆ. ’ಪುಕ್ಕಲ ಕುರಸಾಲ್ಯಾ ಹೆದರಿ ಸಾಯ್ತಾನ. ಸಿದ್ಯಾ, ಅವಂಗ ಕರಕೊಂಡು ಹೋಗು ನೀನೂ ಅಲ್ಲೇ ಮಲಕೊ’ ಅಂದಾಗ ಅಂವಾ ’ನೀವು ಕತಿ ಹೇಳು ಅನಬಾರದು ನೋಡ್ರಿ’ ಅಂದ. ನಾನು ’ಒಂದೇ ಒಂದು’ ಅನ್ಕೊಂತ ಅವನ ಜೋಡಿ ನಡದೆ ಬೆಳದಿಂಗಳು ಗುಡಿಸಲ ಬಾಗಿಲಕ ಪರದೆ ಹಾಕದಂಗ ಮೂಡಿತ್ತು. ಬಾಳಂದ್ರ ಬಾಳ ಥಂಡಿ. ಸಿದ್ದಣ್ಣ ಹಾಸಗಿ ಹಾಸೂ ಪುರಸತ್ತಿಲ್ಲದೇ ’ಕತಿ ಹೇಳು ಕತಿ ಹೇಳು’ ಅಂತ ಬೆನ್ನಿಗಿ ಬಿದ್ದೆ. ಅಂವಾ ಮತ್ತ ಹುಣಸೀ ಗಿಡ.. ಹಾಳು ಬಿದ್ದ ಬಾವಿ.. ಸುಡಗಾಡು ಅಂತ ಸುರು ಮಾಡದ. ನಾ ಅಲ್ಲೇ ಉಗುಳು ನುಂಗ್ತಾ ಮೆತ್ತಗ ಹುಂ..ಹುಂ..ಅನ್ನಾಕತ್ತಿದ್ದೆ. ಹಂಗ ಅನ್ಕೊಂತ ಕಣ್ಣ ಮುಚ್ಚದಂಗ ಮಾಡದೆ. ’ನಿದ್ದಿ ಬಂತು ಕತಿ ಸಾಕು’ ಅಂದೆ. ಅಂವಾ ಎದ್ದು ಕಂದೀಲು ಆರಸದ. ನನಗ ಹಗೂರಕ ಕೌದಿ ಹೊಚ್ಚಿ ತಾನೂ ಅದರಾಗೇ ಹೊಕ್ಕೊಂಡ. ನನ್ನ ಮ್ಯಾಲ ಕಾಲು ಹಾಕದ, ನನಗ ಜೋರಾಗಿ ಹಿಡ್ಕೊಂಡ. ಹಿಂದ ಹಂಗ ಎಂದೂ ಅಂವಾ ನನಗ ಹಿಡದಿರಲಿಲ್ಲ. ಎಲ್ಲಿ ಬೇಕು ಅಲ್ಲಿ ಕೈಆಡ್ಸಾಕತ್ತದ. ನಾ ಕಣ್ಣ ತಿಕ್ಕೊಂತ ಎದ್ದು ಕುಂತೆ. ತನಗ ಬಾಳ ಜೋರ್ ನಿದ್ದಿ ಹತ್ತಿತ್ತು ಅನ್ನೂವಂಗ ನಾಟಕ ಮಾಡ್ಕೊಂತ ಎದ್ದ.

’ಯಾಕ್ರಿ ಏನಾಯ್ತು..?’ ಅಂದ.

’ನಾ ನಮ್ಮಪ್ಪನ ಹತ್ಯಾಕ ಹೋಗ್ತೀನಿ’ ಅಂದೆ.

’ಏನಾಯ್ತು ಹೇಳ್ರಿ..’ ಅಂದ.

’ನನ್ನ ಚಡ್ಯಾಗ ಎಲ್ಲಾ ಕೈ ಹಾಕತೆಲ್ಲೋ..?’

’ಓ ಅದಾ..? ಈ ದೆವ್ವಿನ ಕತೀನೇ ಹಂಗರಿ. ಕನಸಿನ್ಯಾಗ ಬಂದು ಹಂಗೆಲ್ಲಾ ಮಾಡಸ್ತಾವ. ಅದು ನಾ ಮಾಡಿದ್ದಲ್ಲ. ಅವು ಮಾಡಸಿದ್ದು. ಏನು ಮಾಡಾಕತ್ತೀನಿ ಅಂತ ನನಗೇ ನೆನಪಿರೂದಿಲ್ಲ. ಯಾರ ಮುಂದೂ ಹೇಳಬ್ಯಾಡ್ರಿ. ಹೇಳದರ ನಿಮ್ಮ ಕನಸ್ನ್ಯಾಗೂ ಹಂಗೇ ಸುರು ಆಗತೈತ’ ಅಂದ. ನಾ ಹೇಳೂದಿಲ್ಲ ಅಂದ್ಕೊಂಡು ಸುಮ್ಮ ಮಲಗದೆ. ಅಪ್ಪ ಅಲ್ಲೇ ಕಡ್ಲಿಗಿಡ ಒಟ್ಟದಲ್ಲೇ ಮಲಗಿದ್ದ. ಮುಂಜಾನೆ ಎದ್ದು ನೋಡದರ ಸಿದ್ದಪ್ಪನ ಕಾಲ. ಕೈ ಎರಡೂ ನನ್ನ ಮ್ಯಾಲೇ ಇದ್ವು. ಹಗೂರಕ ಸರಿಸಿ, ಎದ್ದು ಹೊರಗ ಬಂದೆ. ಅಪ್ಪ ಅಲ್ಲೇ ಉರಿ ಕಾಯ್ಸ್ಕೊಂತ ಬೀಡಿ ಸೇದತಿದ್ದ. ’ಸಿದ್ಯಾಗ ಎಬ್ಬಸು. ಅಪ್ಪ ಕರಿಯಾಕತ್ತಾನ ಅಂತ ಹೇಳು.’ ಅಂದ. ಜೋರಾಗಿ ಅಲ್ಲಿಂದಲೇ ಸಿದ್ದಪ್ಪಣ್ಣ. ಸಿದ್ದಪ್ಪಣ್ಣ ಅಂತ ಒದರದೆ. ಹುಂ ಇಲ್ಲ ಉಹುಂ.. ಇಲ್ಲ. ಅಪ್ಪ ಜೋರಾಗಿ ’ಸಿದ್ಯಾ ಹೊತ್ತ ನೋಡೊಲೇ ಎಷ್ಟಾಗೈತಿ. ಏಳು..ಏಳು..’ ಅಂದ. ಅವಾಗೂ ಅಂವಾ ಏಳಲಿಲ್ಲ. ’ಅದ್ಯಾವ ನಮನಿ ನಿದ್ದಿ ಅಂವಂದು..! ನೀರ ಉಗ್ಗು ಮುಖಕ್ಕ’ ಅಂದಾಗ ಗುಡಸಲ ಕಡಿ ಹೊಂಟೆ ಬಾಗಿಲದೊಳಗ ಕಾಲ ಹಾಕೂದರೊಳಗ ಎದುರಿನ ಬುತ್ತೀ ಸಿಗಸೋ ಕಟಿಗಿ ರಿಕ್ಕಿಗಿ ದೊಡ್ಡ ನಾಗರಹಾಂವ ಬುಶ್..! ಅಂತ ಜೋತ್ಯಾಡತಿತ್ತು. ಎದಿ ಝಲ್ ಅಂತು. ಅದು ಚಮಕೀಲೇ ಸರಸರ ಮ್ಯಾಲ ನಿರಕಿಯೊಳಗ ಹೊಯ್ತು. ನನ್ನ ಬಾಯಾಗ ಮಾತೇ ಬರಲಿಲ್ಲ. ನಾ ಹಂಗೇ ಹೌ ಹಾರಿ ಓಡಿ ಬರೂದು ನೋಡಿ ’ಯಾಕ ಏನಾಯಿತು..?’ ಅಂತ ಅಪ್ಪನೇ ಎದ್ದು ಬಂದ. ನನ್ನ ಮೈ ಒಂದು ಸವನ ನಡಗತಿತ್ತು. ಅಷ್ಟು ದೊಡ್ಡ ಹಾವು ನೋಡಿ, ಮಾತ ಸತ್ತಂಗ ಆಗಿದ್ದೆ. ತುಸು ಹೊತ್ತಿನ ಮ್ಯಾಲ ನಾ ಗುಡಸಲದೊಳಗ ನೋಡಿದ್ದು ಹೇಳದೆ. ಅಪ್ಪ ಬಂದು ಅವನ ಮೈ ಕೈ ಹಿಡದು ಅಲ್ಲಾಡಿಸಿದ ಮ್ಯಾಲೂ ಅಂವಾ ಏಳಲಿಲ್ಲ. ಹೊತ್ತ ಏರದಂಗ ಅವನ ಮೈ ಬಣ್ಣಾನೂ ಫ್ಲರ್ಕ್ ಆಗಿ, ಹಚ್ಚಗ ಆಗಾಕತ್ತಿತ್ತು. ಮತ್ಯಾರೂ ಅವನಿಗಿ ಏಳಸೋ ಉಸಾಬರಿನೇ ಮಾಡಿರಲಿಲ್ಲ.

          *********************

ನನ್ನ ಮಗ ’ನೀ ಕತಿ ಹೇಳಂದ್ರೆ ಏನು ಯೋಚನೆ ಮಾಡಾಕತ್ತಿ..?’ ಅಂತ  ನನ್ನ ಹಿಡಿದು ಅಲ್ಲಾಡಿಸಿದಾಗಲೇ ನಾ ಮತ್ತ  ಮೂರು ದಶಕ ಮುಂದ ಬಂದು, ಹೀಂಗ್ ಒಂದು ಊರಲ್ಲಿ… ಅಂತ ಕತೀ ಸುರು ಮಾಡೂ ಮೊದಲೇ ’ಇದು ಬ್ಯಾಡ ನನಗೆ ಪೋಗೋ ಚಾನೆಲ್‍ನಲ್ಲಿ ಬರ್ತಾನಲ್ಲ, ಮಿ.ಬೀನ್, ಅವನ ಕತಿ ಹೇಳು ಅಂದ. ನನಗ ನೋಡದರೆ ಆ ಮಿ.ಬೀನ್ ಆಗಲೀ.. ಅವನ ಕತೆಯಾಗಲೀ ಯಾವುದೂ ಗೊತ್ತಿಲ್ಲ. ಇವನಿಗಿ ಹ್ಯಾಂಗ ಹೇಳೂದು ಅನ್ನೂದರೊಳಗ ’ಪೋಗೊ ಚಾನೆಲ್‍ನಲ್ಲಿ ,ಮಿ.ಬೀನ್ ಕಾರ್ಟೂನ್ ಎನಿಮೇಶನ್ ಬಂತ್ನೋಡು ಬಾ’ ಅಂತ ಅವಳು ಕರದಿದ್ದೇ, ನಾನೊಂದು ದೊಡ್ಡ ನಿಟ್ಟುಸಿರನ್ನು ಬಿಟ್ಟು ಬಚಾವಾಗಿದ್ದೆ.