Daily Archives: April 25, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 4)


– ಡಾ.ಎನ್.ಜಗದೀಶ್ ಕೊಪ್ಪ


 

ನಕ್ಸಲ್‌ಬಾರಿ ಪ್ರತಿಭಟನೆಯ ಯಶಸ್ವಿನ ಬಗ್ಗೆ ಚಳವಳಿಗಾರರಾಗಲಿ ಅಥವಾ ಈ ಹಿಂಸಾಚಾರ ಮತ್ತು ಚಳವಳಿಯನ್ನು ಹತ್ತಿಕ್ಕಿದ ಬಗ್ಗೆ ಪಶ್ಚಿಮ ಬಂಗಾಳದ ಸರ್ಕಾರವಾಗಲಿ ಉಭಯ ಬಣಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ಈ ಘಟನೆ ಸರ್ಕಾರ ಮತ್ತು ಪ್ರತಿಭಟನಾಗಾರರಿಗೆ ಪರೋಕ್ಷವಾಗಿ ಹಲವಾರು ಎಚ್ಚರಿಕೆಯ ಪಾಠಗಳನ್ನು ಕಲಿಸಿಕೊಟ್ಟಿತು.

ಯಾವುದೇ ಒಂದು ಚಳವಳಿಯನ್ನು ಪ್ರಲೋಭನೆ ಮತ್ತು ಆಮಿಷದ ಮೂಲಕ ಹುಟ್ಟು ಹಾಕುವುದು ಅತಿಸುಲಭ ಆದರೆ, ಅದನ್ನು ನಿಯಂತ್ರಿಸುವ ನೈತಿಕತೆ ಮತ್ತು ತಾಕತ್ತು ಈ ಎರಡುಗುಣಗಳು ನಾಯಕನಿಗಿರಬೇಕು. ಭಾರತದ ಸಂದರ್ಭದಲ್ಲಿ ಅಂತಹ ತಾಕತ್ತು ಮಹಾತ್ಮಗಾಂಧಿಗೆ ಇತ್ತು. ಅವರು ಎಷ್ಟೋಬಾರಿ ಭಾರತ ಸ್ವಾತಂತ್ರ್ಯ ಚಳವಳಿ ದಿಕ್ಕು ತಪ್ಪಿದಾಗಲೆಲ್ಲಾ ಇಡೀ ಚಳವಳಿಯನ್ನು ಸ್ಥಗಿತಗೊಳಿಸಿದ್ದರು. ಇದಕ್ಕೆ ಚೌರಿಚೌರ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಮತ್ತು ಪೊಲೀಸರ ಹತ್ಯಾಕಾಂಡದ ಘಟನೆ ನಮ್ಮೆದುರು ಸಾಕ್ಷಿಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರುವ, ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂಬಂತೆ ಪರಿಭಾವಿಸುವ ವ್ಯಕ್ತಿಗಳು ಮಾತ್ರ ನಾಯಕತ್ವದ ಗುಣ ಹೊಂದಿರುತ್ತಾರೆ. ಅಂತಹ ಗುಣ ಈ ನೆಲದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರವರಿಗೆ ಇತ್ತು.

ಇಂತಹ ಯಾವುದೇ ಗುಣಗಳು ಕಿಸಾನ್‌ಸಭಾ ಮೂಲಕ ರೈತರು ಮತ್ತು ಗೇಣಿದಾರರು, ಹಾಗೂ ಕೃಷಿ ಕೂಲಿಕಾರ್ಮಿಕರ ಬಗ್ಗೆ ಧ್ವನಿ ಎತ್ತಿದ ಚಾರು ಮುಜುಂದಾರ್ ಅಥವಾ ಕನು ಸನ್ಯಾಲ್‌ಗೆ ಇರಲಿಲ್ಲ. ಇಂತಹ ದೂರದೃಷ್ಟಿಕೋನದ ಕೊರತೆ ಒಂದು ಜನಪರ ಚಳವಳಿಯಾಗಬೇಕಿದ್ದ ಮಹತ್ವದ ಘಟನೆಯನ್ನು ಹಿಂಸೆಯ ಹಾದಿಗೆ ನೂಕಿಬಿಟ್ಟಿತು. ಗಾಂಧಿಯ ವಿಚಾರ ಧಾರೆಯ ಬಗ್ಗೆ ಅಪನಂಬಿಕೆ ಹೊಂದಿದ್ದ ಈ ಎಡಪಂಥೀಯ ನಾಯಕರಿಗೆ ತಮ್ಮದೇ ಪಶ್ಚಿಮ ಬಂಗಾಳದಲ್ಲಿ 1860 ರ ದಶಕದಲ್ಲಿ ರೈತರು ನಡೆಸಿದ ನೀಲಿ ಕ್ರಾಂತಿಯಾದರೂ ಮಾದರಿಯಾಗಬೇಕಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿ ಮತ್ತು ಪ್ಲಾಂಟರ್‌ಗಳ ವಿರುದ್ಧ ಸ್ಥಳೀಯ ಗೇಣಿದಾರ ರೈತರು ನಡೆಸಿದ ಕಾನೂನು ಬದ್ಧ, ಹಾಗೂ ಅಹಿಂಸಾತ್ಮಕ ಹೋರಾಟವನ್ನು ಮಾವೋವಾದಿ ಬೆಂಬಲಿಗರು ಅವಲೋಕಿಸಬೇಕಿತ್ತು. ಏಕೆಂದರೆ, ಅಣುಬಾಂಬ್‌ಗಿಂತ ಅಹಿಂಸೆ ಎಂಬ ಅಸ್ತ್ರ ಹೆಚ್ಚು ಪರಿಣಾಮಕಾರಿ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟ ಈ ನೆಲದಲ್ಲಿ ಯಾರೂ ಹಿಂಸೆಯನ್ನು ಪ್ರತಿಪಾದಿಸಲಾರರು, ಅಥವಾ ಬೆಂಬಲಿಸಲಾರರು.

ಭಾರತೀಯ ಮುಗ್ದ ರೈತರನ್ನು ನಿರಂತರವಾಗಿ ಶೋಷಿಸಿಕೊಂಡ ಬಂದ ಇತಿಹಾಸ ಇಂದು ನಿನ್ನೆಯದಲ್ಲ, ಅದಕ್ಕೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷರ ವಸಾಹತು ಶಾಹಿಯ ಆಡಳಿತ, ಅವರ ಭೂಕಂದಾಯ ಪದ್ಧತಿ, ಆರ್ಥಿಕ ನೀತಿಗಳು ಇವೆಲ್ಲವೂ ರೈತರ ರಕ್ತವನ್ನು ಹೀರಿವೆ. ಅನಕ್ಷರತೆ, ಸಂಘಟನೆಯ ಕೊರತೆ ಇಂತಹ ಶೋಷಣೆಗೆ ಪರೋಕ್ಷವಾಗಿ ಕಾರಣವಾದವು. 1859-60 ರಲ್ಲಿ ಪಶ್ಚಿಮ ಬಂಗಾಳದ ರೈತರು ನೀಲಿ ಬೆಳೆಯ ವಿರುದ್ಧ ಬಂಡಾಯವೆದ್ದ ಘಟನೆ ಭಾರತದ ಇತಿಹಾಸದಲ್ಲಿ ಪ್ರಥಮ ರೈತರ ಬಂಡಾಯವೆಂದು ಕರೆಯಬಹುದು. ಈಸ್ಷ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಬಹುತೇಕ ಪ್ಲಾಂಟರ್‌ಗಳು ಯರೋಪಿಯನ್ನರೇ ಆಗಿದ್ದರು. ತಮ್ಮ ತಾಯ್ನಾಡಿನ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಗೇಣಿದಾರರನ್ನು ನೀಲಿ ಬೆಳೆ ಬೆಳೆಯುವಂತೆ ಒತ್ತಾಯಿಸುತ್ತಿದ್ದರು. ರೈತರು, ತಮ್ಮ ಕುಟುಂಬದ ಆಹಾರಕ್ಕಾಗಿ ಭತ್ತ ಬೆಳೆಯಲು ಆಸ್ಪದ ನೀಡದೆ ಕಿರುಕುಳ ನೀಡುತ್ತಿದ್ದರು. ರೈತರು ಕಷ್ಟ ಪಟ್ಟು ಬೆಳೆದ ನೀಲಿ ಬೆಳೆಗೆ ಅತ್ಯಂತ ಕಡಿಮೆ ಬೆಲೆಯನ್ನ ನೀಡಲಾಗುತಿತ್ತು. ಪ್ಲಾಂಟರ್‌ಗಳ ಆದೇಶವನ್ನು ಧಿಕ್ಕರಿಸಿದ ರೈತರನ್ನು ತಮ್ಮ ಮನೆಗಳಲ್ಲಿ ಕೂಡಿ ಕಾಕಿ ಚಾಟಿ ಏಟಿನ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಪ್ರತಿಯೊಬ್ಬ ಬ್ರಿಟಿಷ್ ಪ್ರಜೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿದ್ದವು ಇವುಗಳನ್ನು ವಿಪ್ಟಿಂಗ್‌ಹೌಸ್ ಎಂದು ಕರೆಯಲಾಗುತ್ತಿತ್ತು. ಚಾಟಿ ಏಟು ಹೊಡೆಯಲು ಭಾರತೀಯ ಗುಲಾಮರನ್ನು ನೇಮಕ ಮಾಡಲಾಗಿತ್ತು ಪ್ರತಿ ಒಂದು ಏಟಿಗೆ ಒಂದಾಣೆಯನ್ನು (ಒಂದು ರೂಪಾಯಿಗೆ ಹದಿನಾರು ಆಣೆ) ಏಟು ತಿನ್ನುವ ರೈತನೇ ಭರಿಸಬೇಕಾಗಿತ್ತು.

ಇಂತಹ ಕ್ರೂರ ಅಮಾನವೀಯ ಶೋಷಣೆಯನ್ನು ಸಹಿಸಲಾರದೆ, ರೈತರು ಸಣ್ಣ ಪ್ರಮಾಣದ ಗುಂಪುಗಳ ಮೂಲಕ ಪ್ರತಿಭಟಿಸಲು ಮುಂದಾದರು. ಇದೇ ಸಮಯಕ್ಕೆ ಸರಿಯಾಗಿ ಕಲರೋವ ಜಿಲ್ಲೆಯ ಜಿಲ್ಲಾಧಿಕಾರಿ ರೈತರ ಪರವಾಗಿ ಆದೇಶವನ್ನು ಹೊರಡಿಸಿ, ಗೇಣಿ ಪಡೆದ ಭೂಮಿಯನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲು ರೈತರು ಸ್ವತಂತ್ರರು ಹಾಗೂ ತಮಗಿಷ್ಟ ಬಂದ ಬೆಳೆ ತೆಗೆಯುವುದು ಅವರ ವ್ಯಯಕ್ತಿಕ ಹಕ್ಕು ಎಂದು ಘೋಷಿಸಿದನು. ಇದು ರೈತರಿಗೆ ನೂರು ಆನೆಯ ಬಲ ತಂದುಕೊಟ್ಟಿತು. ದಿಗಂಬರ ವಿಶ್ವಾಸ್ ಮತ್ತು ವಿಷ್ಣು ವಿಶ್ವಾಸ್ ಎಂಬ ವಿದ್ಯಾವಂತ ರೈತರ ನೇತೃತ್ವದಲ್ಲಿ ದೊಡ್ಡ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಆತಂಕಗೊಂಡ ಪ್ಲಾಂಟರ್‌ಗಳು ತಮ್ಮ ಭೂಮಿಯ ಗೇಣಿ ದರ ಹೆಚ್ಚಿಸುವುದರ ಮೂಲಕ ರೈತರನ್ನು ಮಣಿಸಲು ಯತ್ನಿಸದರು. ಒಗ್ಗೂಡಿದ ರೈತರು ಗೇಣಿ ಕೊಡುವುದಿರಲಿ, ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಸಂಪೂರ್ಣವಾಗಿ ನೀಲಿ ಬೆಳೆ ತೆಗೆಯುವುದನ್ನು ನಿಲ್ಲಿಸಿ ತಮಗೆ ಬೇಕಾದ ಆಹಾರ ಬೆಳೆಗಳ ಕೃಷಿಯಲ್ಲಿ ತೊಡಗಿಕೊಂಡರು. ಅನಿವಾರ್ಯವಾಗಿ ಕಚ್ಚಾ ವಸ್ತುಗಳಿಲ್ಲದೆ ಪಶ್ಚಿಮ ಬಂಗಾಳದ ಎಲ್ಲಾ ಕಂಪನಿಗಳು ಮುಚ್ಚತೊಡಗಿದವು. ಈ ಆಂದೋಲನದ ಮತ್ತೊಂದು ವೈಶಿಷ್ಟತೆಯೆಂದರೆ, ಮುಗ್ಧ ರೈತರ ಬಂಡಾಯಕ್ಕೆ ಬಂಗಾಲದ ಎಲ್ಲಾ ವಿದ್ಯಾವಂತರು, ಬುದ್ಧಿಜೀವಿಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದರು. ಇವರೆಲ್ಲರೂ ಬಂಗಾಳದಾದ್ಯಂತ ಸಭೆ ನಡೆಸಿ ರೈತರ ಜ್ವಲಂತ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಸಮಾಜ ಮತ್ತು ಸರ್ಕಾರದ ಗಮನ ಸೆಳೆದರು. ಹರೀಶ್ಚಂದ್ರ ಮುಖರ್ಜಿಯವರ ‘ “ಹಿಂದೂ ದೇಶ ಭಕ್ತ” ಎಂಬ ಪತ್ರಿಕೆ ಹಾಗೂ “ಧೀನ ಬಂಧು ಮಿತ್ರ” ಅವರ “ನೀಲಿ ದರ್ಪಣ” ಎಂಬ ನಾಟಕ ಜನಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು ಕೊನೆಗೆ ಎಚ್ಚೆತ್ತುಕೊಂಡ ಸರ್ಕಾರ ಒಂದು ಆಯೋಗವನ್ನು ರಚಿಸಿ ರೈತರ ಸಮಸ್ಯೆ ಪರಿಹರಿಸಲು ಮುಂದಾಯಿತು.

ಇಂತಹ ಒಂದು ಅನನ್ಯವಾದ ಅಪೂರ್ವ ಇತಿಹಾಸವಿದ್ದ ಬಂಗಾಳದ ನೆಲದಲ್ಲಿ ರೈತರ, ಕೃಷಿ ಕೂಲಿಕಾರ್ಮಿಕರ ನೆಪದಲ್ಲಿ ರಕ್ತ ಸಿಕ್ತ ಇತಿಹಾಸದ ಅಧ್ಯಾಯ ಆರಂಭಗೊಂಡಿದ್ದು ನೋವಿನ ಹಾಗೂ ವಿಷಾದಕರ ಸಂಗತಿ. ನಕ್ಸಲ್‌ಬಾರಿಯ ಹಿಂಸಾತ್ಮಕ ಹೋರಾಟ ಪಶ್ಚಿಮ ಬಂಗಾಳ ಸೇರಿದಂತೆ ಆಂಧ್ರಪ್ರದೇಶದಲ್ಲಿ ಹಲವು ಮಹತ್ವದ ಬದಲಾವಣೆಗೆ ಕಾರಣವಾಯಿತು. ಅವುಗಳಲ್ಲಿ ಕನು ಸನ್ಯಾಲ್ ಸಮರ್ಥಿಸಿಕೊಂಡ ಪ್ರಮುಖವಾದ ಅಂಶಗಳೆಂದರೆ.

  1. ವಂಶಪಾರಂಪರ್ಯವಾಗಿ ಬೀಡು ಬಿಟ್ಟಿದ್ದ ಪಾಳೇಗಾರತನದ ಅಡಿಪಾಯ ಬಿರುಕು ಬಿಟ್ಟಿತು.
  2. ಜಮೀನ್ದಾರರ ಮನೆಯಲ್ಲಿದ್ದ ರೈತರ ಒಪ್ಪಂದ ಪತ್ರಗಳೆಲ್ಲಾ ನಾಶವಾದವು.
  3.  ಅನೈತಿಕತೆಯ ಮಾರ್ಗದಲ್ಲಿ ಶ್ರೀಮಂತ ಜಮೀನ್ದಾರರು ಮತ್ತು ಬಡ ರೈತರ ನಡುವೆ ಏರ್ಪಟ್ಟಿದ್ದ ಒಪ್ಪಂದಗಳನ್ನು ಶೂನ್ಯ ಎಂದು ಘೋಷಿಸಲಾಯಿತು.
  4. ಹಳ್ಳಿಗಳಲ್ಲಿ ಜಮೀನ್ದಾರರು ಪೋಷಿಸಿಕೊಂಡು ಬಂದಿದ್ದ ಅಮಾನವೀಯ ಮುಖದ ಎಲ್ಲಾ ಕಾನೂನು, ಕಟ್ಟಳೆಗಳನ್ನು ರದ್ದು ಪಡಿಸಲಾಯಿತು.
  5. ಮುಕ್ತವಾಗಿ ನಡೆದ ವಿಚಾರಣೆಯಲ್ಲಿ ಶೋಷಣೆ ಮಾಡುತ್ತಿದ್ದ ಜಮೀನ್ದಾರರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸಲಾಯಿತು.
  6. ಜಮೀನ್ದಾರರೊಂದಿಗೆ ಬೆಳೆದು ಬಂದಿದ್ದ ಗೂಂಡಾ ಪಡೆ ಸಂಪೂರ್ಣನಾಶವಾಯಿತು.
  7. ಕೇವಲ ಬಿಲ್ಲು ಬಾಣಗಳೋಂದಿಗೆ ಸೆಣಸಾಡುತ್ತಿದ್ದ ಪ್ರತಿಭಟನಾನಿರತ ರೈತರಿಗೆ ಜಮೀನ್ದಾರರ ಮನೆಯಲ್ಲಿ ಅಪಹರಿಸಿ ತಂದ ಬಂದೂಕಗಳು ಹೊಸ ಆಯುಧಗಳಾದವು.
  8. ಜಮೀನ್ದಾರರ ಬಗ್ಗೆ ರೈತರಿಗೆ ಇದ್ದ ಭಯ ಭೀತಿ ಕಾಣದಾದವು.
  9. ರಾತ್ರಿ ವೇಳೆ  ಹಳ್ಳಗಳನ್ನು ಕಾಯಲು ರೈತರು, ಕಾರ್ಮಿಕರು ಮತ್ತು ಆದಿವಾಸಿಗಳಿಂದ ಕೂಡಿದ ಗಸ್ತು ಪಡೆಯೊಂದು ಸೃಷ್ಟಿಸಲಾಯಿತು.
  10. ಕಿಸಾನ್‌ಸಭಾ ಸಂಘಟನೆಯೊಳಗೆ ಕ್ರಾಂತಿಕಾರಿ ತಂಡವೊಂದನ್ನು ಹುಟ್ಟು ಹಾಕಲಾಯಿತು.

ಈ ಹೊರಾಟ ಕುರಿತಂತೆ ನಕ್ಸಲ್ ಚರಿತ್ರೆಯ ಸಂಪುಟಗಳನ್ನೇ ಬರೆದಿರುವ ಬಂಗಾಳಿ ಲೇಖಕ ಸಮರ್‌ಸೇನ್ ಬಣ್ಣಿಸುವುದು ಹೀಗೆ: ನಕ್ಸಲ್‌ಬಾರಿಯ ಪ್ರತಿಭಟನೆ ಎಡಪಂಥೀಯ ತತ್ವ ಸಿದ್ಧಾಂತಗಳಲ್ಲಿ ಹುದುಗಿಹೋಗಿದ್ದ ಹಲವು ಕ್ರಾಂತಿಕಾರಿ ಅಂಶಗಳನ್ನು ರೈತರ ಬಂಡಾಯದ ಮೂಲಕ ಹೊರಹಾಕಿದೆ. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಇದ್ದ ಅಂತರವನ್ನು ಇದು ಕಡಿಮೆ ಮಾಡಿತು. ತೆಲಂಗಾಣ ರೈತರ ಹೋರಾಟ ಕೂಡ ಇದಕ್ಕೆ ಪೂರಕವಾಗಿ ಪರಿಣಮಿಸಿತು. ಹಿಂಸೆಯ ಮೂಲಕ ಶೋಷಣೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ಎಲ್ಲಾ ಶೋಷಿತರು ತಮ್ಮ ತಮ್ಮ ನಿಜವಾದ ಸ್ಥಾನಮಾನಗಳನ್ನು ಗುರುತಿಸಿಕೊಂಡರು. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಹೋರಾಟದ ಮೂಲಕ ಅವರು ಮತ್ತಷ್ಟು ಸದೃಢರಾದರು.

ಸಮರ್ ಸೇನ್‌ರವರ ಅತಿ ರಂಜಿತವಾದ ಈ ಹೇಳಿಕೆ ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ಮೇಲು ನೋಟಕ್ಕೆ ಕಂಡು ಬರುತ್ತದೆ. ಏಕೆಂದರೆ, ಒಂದು ಪಕ್ಷದ ಸಿದ್ಧಾಂತದ ಚೌಕಟ್ಟಿನಲ್ಲಿ ನಡೆಯಬೇಕಾದ ಹೋರಾಟದ ಲಕ್ಷಣಗಳನ್ನು ನಕ್ಸಲ್‌ಬಾರಿಯ ಹೋರಾಟ ಒಳಗೊಂಡಿರಲಿಲ್ಲ. ಜೊತೆಗೆ ಅದು ಸಿಲಿಗುರಿ ಪ್ರಾಂತ್ಯದ ಎಲ್ಲಾ ಸಮೂಹದ ಚಳವಳಿಯಾಗಿರಲಿಲ್ಲ. ಎಲ್ಲಾ ವರ್ಗದ ಭಾವನೆಗಳನ್ನು ಕ್ರೋಢೀಕರಿಸುವಲ್ಲಿ ಹೋರಾಟ ವಿಫಲವಾಯಿತು. ಜಮೀನ್ದಾರರ ಶೋಷಣೆಯ ಬಗ್ಗೆ ನ್ಯಾಯ ಪಡೆಯಲು ಪರ್ಯಾಯ ಮಾರ್ಗಗಳಿದ್ದರೂ ಕೂಡ ಕಾನೂನನ್ನು ಸ್ವತಃ ರೈತರು, ಆದಿವಾಸಿಗಳು ಕೈಗೆತ್ತಿಕೊಂಡಿದ್ದು ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆಯಲ್ಲಿ ಒಪ್ಪುವಂತಹ ಸಂಗತಿಗಳಲ್ಲ. 1919 ರಿಂದ ಭಾರತದಲ್ಲಿ ಬೇರು ಬಿಟ್ಟು, ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳ ಅಡಿಯಲ್ಲಿ ಸಾಗಿದ್ದ ಕಮ್ಯೂನಿಷ್ಟ್ ಪಕ್ಷಕ್ಕೆ ಚೀನಾದ ಮಾವೋತ್ಸೆ ತುಂಗನ ಉಗ್ರವಾದಿ ನಿಲುವುಗಳು ಜೀರ್ಣಿಸಿಕೊಳ್ಳಲು ಕಷ್ಟವಾಯಿತು. ಇದನ್ನು ಮಾವೋನ ಮಾತುಗಳಲ್ಲಿ ಹೇಳಬಹುದಾದರೆ, ನಮ್ಮ ಕಾಲುಗಳಿಗೆ ತಕ್ಕಂತೆ ಪಾದರಕ್ಷೆಗಳು ಇರಬೇಕೆ ಹೊರತು, ಪಾದರಕ್ಷೆ ಅಳತೆಗೆ ನಮ್ಮ ಕಾಲಿನ ಪಾದಗಳನ್ನು ಕತ್ತರಿಸಿಕೊಳ್ಳಬಾರದು. ನಕ್ಸಲ್‌ಬಾರಿಯ ಘಟನೆಯಲ್ಲಿ ಆದದ್ದು ಕೂಡ ಇದೇ ಸಂಗತಿ.

(ಮುಂದುವರೆಯುವುದು)

ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ


– ದಿನೇಶ್ ಕುಮಾರ್ ಎಸ್.ಸಿ


 
ಹೆಸರಾಂತ ಚಿತ್ರನಟ ಅಮೀರ್ ಖಾನ್ ಅವರ ಬಹುನಿರೀಕ್ಷೆಯ ಉದ್ದೇಶಿತ ಟೆಲಿವಿಷನ್ ಶೋ ’ಸತ್ಯಮೇವ ಜಯತೆ’ ಯಿಂದಾಗಿ ಕನ್ನಡ ಸಿನಿಮಾ-ಕಿರುತೆರೆಯಲ್ಲಿ ಚಾಲ್ತಿಯಲ್ಲಿರುವ ಡಬ್ಬಿಂಗ್ ನಿಷೇಧದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಾದವಿವಾದಗಳು ಬಿರುಸಾಗಿಯೇ ನಡೆಯುತ್ತಿದೆ. ಸತ್ಯಮೇವ ಜಯತೆಯನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಯಾರಿಸುತ್ತೇವೆ ಎಂದು ಆಯೋಜಕರು ಘೋಷಿಸುತ್ತಿದ್ದಂತೆ, ಸಿನಿ-ಟಿವಿ ಸಂಘಟನೆಗಳು ತಮ್ಮ ಏಕತೆಯನ್ನು ಪ್ರದರ್ಶಿಸಿ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ. ಸಣ್ಣಪುಟ್ಟದಕ್ಕೂ ಕಾದಾಡಿಕೊಂಡು ಬಂದು ನ್ಯೂಸ್ ಟೆಲಿವಿಷನ್‌ಗಳ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ಅಸಭ್ಯವಾಗಿ ಜಗಳವಾಡುವ ಈ ಮಂದಿ ಡಬ್ಬಿಂಗ್ ಧಾರಾವಾಹಿಯ ಕುರಿತಂತೆ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ಒಂದು ವಿಶೇಷ ಬೆಳವಣಿಗೆಯೆಂದೇ ಪರಿಗಣಿಸಬಹುದು!

ಆದರೆ ಮುಖ್ಯವಾಗಿ ಸಿನಿಮಾ-ಟಿವಿ ಸಂಘಟನೆಗಳ ಈ ಅಭೂತಪೂರ್ವ ಒಗ್ಗಟ್ಟಿಗೆ ಕಾರಣ ಹುಡುಕಿಕೊಂಡು ಹೋದರೆ ನಿರಾಶೆಯೇ ಕಾದಿರುತ್ತದೆ. ಕನ್ನಡದ ಸೂಕ್ಷ್ಮಮತಿ ನಟಿ, ಹಾಲಿ ರಾಜಕಾರಣಿಯೊಬ್ಬರು ಅಮೀರ್ ಖಾನ್ ಶೋ ಬಗ್ಗೆ ಹೇಳಿದ ಮಾತು ಗಾಬರಿ ಹುಟ್ಟಿಸುವಂತಿದೆ. ಅವರು ಶೋ ಡಬ್ ಮಾಡಿದರೆ ಮಾಡಿಕೊಳ್ಳಲಿ, ಪ್ರಸಾರ ಮಾಡಲು ಬಿಡುವವರು ಯಾರು? ಇದು ಅವರ ಮಾತು. ಉದ್ಯಮದ ಪ್ರತಿಕ್ರಿಯೆ ಈ ಧಾಟಿಯ ಪಾಳೆಗಾರಿಕೆ ಭಾಷೆಯಲ್ಲಿದ್ದರೆ ಅವುಗಳಿಗೆ ಉತ್ತರಿಸುವುದು ಕಷ್ಟ. ಆದರೂ ಕೆಲವು ಮುಖ್ಯವಾದ ಅಂಶಗಳನ್ನು ಚರ್ಚಿಸಲೇಬೇಕಾಗಿದೆ.

ಡಬ್ಬಿಂಗ್ ವಿರುದ್ಧ ಕತ್ತಿ-ಗುರಾಣಿ ಹಿಡಿದು ನಿಂತಿರುವ ಸಿನಿಮಾ-ಟಿವಿ ಸಂಘಟನೆಗಳ ವಲಯದ ಬುದ್ಧಿಜೀವಿಗಳು ಬಳಸುತ್ತಾ ಇರುವುದು ಜಾಗತೀಕರಣದ ಭೂತವನ್ನು. ಹೀಗೆ ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ಜಾಗತೀಕರಣಕ್ಕೆ ಕನೆಕ್ಟ್ ಮಾಡುವುದು ಬಲು ಸುಲಭ. ಇದು ಅತ್ಯಂತ ಬುದ್ಧಿವಂತಿಕೆಯ ಸಮರ್ಥನೆ. ಯಾಕೆಂದರೆ ಜಾಗತೀಕರಣ ಪ್ರತಿ ಮನೆಯನ್ನೂ ಪ್ರವೇಶಿಸಿದೆ. ಕುಡಿಯುವ ನೀರಿನಿಂದ ಹಿಡಿದು, ಉಸಿರಾಡುವ ಗಾಳಿಯವರೆಗೆ ಅದು ಎಲ್ಲವನ್ನೂ ಪ್ರಭಾವಿಸುತ್ತಿದೆ. ಸಮಸ್ಯೆಯನ್ನು ವಿಸ್ತಾರಗೊಳಿಸಿ ಅದಕ್ಕೊಂದು ಜಾಗತಿಕ ಆಯಾಮ ಕೊಡಲು ಸಿನಿ ಬುದ್ಧಿಜೀವಿಗಳು ಈಗ ಡಬ್ಬಿಂಗ್ ಜಾಗತೀಕರಣದ ಪಿಡುಗು ಎಂದು ಬಿಂಬಿಸುತ್ತಿದ್ದಾರೆ.

ಅಸಲಿಗೆ ಹೀಗೆ ಜಾಗತೀಕರಣವನ್ನು ಗುರಾಣಿಯನ್ನಾಗಿ ಬಳಸುವವರ ಧಾರಾವಾಹಿಗಳಿಗೆ ಜಾಹೀರಾತು ನೀಡುವವು ಬಹುರಾಷ್ಟ್ರೀಯ ಕಂಪೆನಿಗಳೇ ಆಗಿರುತ್ತವೆ. ಇವರ ಸಿನಿಮಾ ನಿರ್ಮಾಣಕ್ಕೆ ಸಹಯೋಗ ನೀಡುವ ಸಂಸ್ಥೆಗಳೂ ಅವೇ ಆಗಿರುತ್ತವೆ. ಈ ದ್ವಂದ್ವದಿಂದ ಹೊರಬರಲಾರದವರು ಡಬ್ಬಿಂಗ್ ಜಾಗತೀಕರಣದ ಉತ್ಪನ್ನ ಎಂದು ಹೇಳುವುದೇ ಒಂದು ತಮಾಷೆಯಾಗಿ ಕೇಳಿಸುತ್ತದೆ.

ಡಬ್ಬಿಂಗ್ ಏಕಸಂಸ್ಕೃತಿಯನ್ನು ಹೇರುವ ಪ್ರಯತ್ನ, ಇದು ಬಹುಸಂಸ್ಕೃತಿಗಳನ್ನು ನಾಶಪಡಿಸುತ್ತವೆ ಎಂಬುದು ಸಿನಿ ಬುದ್ಧಿಜೀವಿಗಳ ಮತ್ತೊಂದು ಗೋಳು. ಅಸಲಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಯೋಗ್ಯತೆ ಸಿನಿಮಾ ಮಂದಿಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ. ಕನ್ನಡದಲ್ಲಿ ನಿರ್ಮಾಣವಾಗುವ ಅರ್ಧದಷ್ಟು ಸಿನಿಮಾಗಳ ಹೀರೋಗಳಿಗೆ ಸಿಗುವ ಪಾತ್ರ ರೌಡಿಯದ್ದೇ ಆಗಿರುತ್ತದೆ. ಮಿಕ್ಕ ಸಿನಿಮಾಗಳಲ್ಲೂ ರೌಡಿಜಂದೇ ಕಾರುಬಾರು. ಇದೇನು ಕನ್ನಡದ ಸಂಸ್ಕೃತಿಯೇ? ಮಚ್ಚು ಲಾಂಗು ಐಟಮ್ ಸಾಂಗುಗಳಿಲ್ಲದೆ ಸಿನಿಮಾ ಮಾಡೋದೇ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಕನ್ನಡ ಸಿನಿಮಾ ರಂಗ ತಲುಪಿದೆ. ಕನ್ನಡದ ಜನರು ಮಚ್ಚು ಸಂಸ್ಕೃತಿಯಿಂದ ಬಂದವರಾ? ಸಾಲುಮೀರಿ ಈ ಥರಹದ ಸಿನಿಮಾಗಳು ತೋಪಾಗುತ್ತಿದ್ದರೂ ಇದೇ ಫಾರ್ಮುಲಾ ಹಿಡಿದುಕೊಂಡು ಸಿನಿಮಾ ಮಾಡುವುದಾದರೂ ಯಾಕೆ? ಇವತ್ತು ಕನ್ನಡದ ಧಾರಾವಾಹಿಗಳ ಪೈಕಿ ಟಾಪ್ ಟೆನ್‌ನಲ್ಲಿರುವ ಎಲ್ಲ ಧಾರಾವಾಹಿಗಳು ರೀಮೇಕ್ ಧಾರಾವಾಹಿಗಳು. ಅಂದರೆ ಬೇರೆ ಭಾಷೆಗಳಲ್ಲಿ ಬಂದ ಧಾರಾವಾಹಿಗಳನ್ನೇ ಕಾಪಿ ಹೊಡೆದು ನಿರ್ಮಿಸಿದ ಧಾರಾವಾಹಿಗಳು. ಇವು ಯಾವ ಸಂಸ್ಕೃತಿಯನ್ನು ಬಿಂಬಿಸುತ್ತವೆ? ವರ್ಷಗಟ್ಟಲೆ ನಡೆಯುವ ಕನ್ನಡ ಸೀರಿಯಲ್‌ಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಹೆಣ್ಣೇ ನಾಯಕಿ, ಹೆಣ್ಣೇ ವಿಲನ್. ಎಲ್ಲ ಸೀರಿಯಲ್‌ಗಳು ವಿಲನ್ ಹೆಣ್ಣುಗಳು ಸಾಲುಸಾಲು ಹೆಣಗಳನ್ನು ಉರುಳಿಸುವಷ್ಟು ವಿಕೃತ ಮನಸ್ಸಿನವರು. ಇವರು ಕನ್ನಡದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಾರಾ? ಇದು ಕನ್ನಡ ಸಂಸ್ಕೃತಿಯಾ?

ಡಬ್ಬಿಂಗ್‌ನಿಂದ ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಘೋಷಿಸುವವರು ಮೊದಲು ಕನ್ನಡ ಸಿನಿಮಾಗಳು, ಧಾರಾವಾಹಿಗಳು ಯಾವ ಸಂಸ್ಕೃತಿಯನ್ನು ಪೋಷಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳುವಂತವರಾಗಬೇಕು. ಹಾಗೆ ನೋಡಿದರೆ ಬಹುಸಂಸ್ಕೃತಿಗಳು ಇವೆ ಎಂಬುದನ್ನೇ ಕನ್ನಡ ಸಿನಿಮಾಗಳು-ಧಾರಾವಾಹಿಗಳು ನಿರಾಕರಿಸುತ್ತವೆ. ಅಲ್ಲಿರುವುದು ಕಪ್ಪು ಬಿಳುಪು ಸಂಸ್ಕೃತಿ ಮಾತ್ರ. ಆದರ್ಶದ ಪಾತ್ರಗಳಿಗೆ ಮೇಲ್ವರ್ಗದ ಹೆಸರುಗಳಿದ್ದರೆ, ಕೇಡಿಗಳ ಹೆಸರುಗಳೆಲ್ಲ ಕೆಳವರ್ಗದವರ ಹೆಸರುಗಳೇ ಆಗಿರುತ್ತವೆ. ಹೀಗೆ ಕಪ್ಪು ಬಿಳುಪಾಗಿ ನೋಡುವ ಹಿನ್ನೆಲೆಯಲ್ಲಿ ಕೆಲಸ ಮಾಡುವ ಮನಸ್ಸುಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆಮಾಡಬಹುದು. ಆದರೆ ನಾಡಿನ ನೂರಾರು, ಸಾವಿರಾರು ಸಂಸ್ಕೃತಿ-ಉಪಸಂಸ್ಕೃತಿಗಳಿಗೆ ಈತನಕ ಕುರುಡಾಗೇ ಇರುವ, ಆ ಕಡೆಗೆ ಕಣ್ಣುಹಾಯಿಸಿಯೂ ನೋಡದ ಜನರು ಬಹುಸಂಸ್ಕೃತಿಗಳು ನಾಶವಾಗುತ್ತವೆ ಎಂಬ ಅಸ್ತ್ರ ಹಿಡಿದು ಡಬ್ಬಿಂಗ್ ವಿರೋಧ ಸಮರ್ಥಿಸಿಕೊಳ್ಳುವುದೇ ನಾಚಿಕೆಗೇಡು. ಇವತ್ತಿಗೂ ಕನ್ನಡ ಸಿನಿಮಾ-ಧಾರಾವಾಹಿಗಳಿಗೆ ಇತರ ಭಾಷೆಗಳ ಸಿನಿಮಾ-ಧಾರಾವಾಹಿಗಳೇ ಕಚ್ಚಾ ಸರಕು. ಇತರೆ ಭಾಷೆ ಸಿನಿಮಾ-ಧಾರಾವಾಹಿಗಳನ್ನು ಒಂದೋ ನಿರ್ಭಿಡೆಯಿಂದ ಮಕ್ಕೀಕಾಮಕ್ಕೀ ರೀಮೇಕ್ ಮಾಡುತ್ತಾರೆ. ಅಥವಾ ಅವುಗಳ ದೃಶ್ಯಗಳನ್ನು ಕದಿಯುತ್ತಾರೆ. ಆಗ ಯಾವ ಸಂಸ್ಕೃತಿನಾಶ ಆಗುವುದಿಲ್ಲವೋ?

ಈ ಸಿನಿ-ಟಿವಿ ಸಂಘಟನೆಗಳ ತರ್ಕ, ವಾದ ಏನೇ ಇರಲಿ ಕೆಲವು ಮಹತ್ವದ ಕಾರಣಗಳಿಗಾಗಿ ಡಬ್ಬಿಂಗ್ ನಿಷೇಧವನ್ನು ತೆರವುಗೊಳಿಸಲೇಬೇಕಾದ ಅನಿವಾರ್ಯತೆ ಇದೆ. ಈಗಲಾದರೂ ಸಿನಿಮಾ-ಟಿವಿ ರಂಗ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ಡಬ್ಬಿಂಗ್‌ಗಳಿಗೆ ಅವಕಾಶ ನೀಡುವುದು ಒಳ್ಳೆಯದು. ಡಬ್ಬಿಂಗ್ ಯಾಕೆ ಬೇಕು ಎಂಬುದಕ್ಕೆ ನನಗೆ ಹೊಳೆದ ಕಾರಣಗಳು ಹೀಗಿವೆ.

1. ಮೊದಲನೆಯದಾಗಿ ಡಬ್ಬಿಂಗ್ ನಿಷೇಧ ಎಂಬ ಪದಪ್ರಯೋಗವೇ ತಪ್ಪು. ಡಬ್ಬಿಂಗ್ ನಿಷೇಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ, ಅದರ ಉಪ ಸಂಘಟನೆಗಳಿಗಾಗಲಿ ಡಬ್ಬಿಂಗ್ ನಿಷೇಧಿಸುವ ಯಾವ ತರಹದ ಹಕ್ಕೂ ಇಲ್ಲ. ಡಬ್ಬಿಂಗ್ ನಿಷೇಧವಾಗಲೇಬೇಕೆಂದಿದ್ದರೆ ಅದು ಕಾನೂನಾಗಿ ಜಾರಿಗೆ ಬರಬೇಕು. ಅಂಥ ಕಾನೂನುಗಳು ದೇಶದ ಯಾವ ಮೂಲೆಯಲ್ಲೂ ನಿರ್ಮಾಣವಾಗಿಲ್ಲ.

2. ಜ್ಞಾನ-ಮನರಂಜನೆಯನ್ನು ತಮಗೆ ಇಷ್ಟವಾದ ಭಾಷೆಯಲ್ಲಿ ಪಡೆದುಕೊಳ್ಳುವುದು ಎಲ್ಲರ ಮೂಲಭೂತ ಹಕ್ಕು. ಜಗತ್ತಿನ ಯಾವುದೇ ಭಾಷೆಯಲ್ಲಿ ನಿರ್ಮಾಣವಾಗಬಹುದಾದ ಸಿನಿಮಾ, ಧಾರಾವಾಹಿ, ಡಾಕ್ಯುಮೆಂಟರಿ ಇತ್ಯಾದಿಗಳು ನನಗೆ ಕನ್ನಡ ಭಾಷೆಯಲ್ಲೇ ಬೇಕು. ಜಗತ್ತನ್ನು ನಾನು ಕನ್ನಡದ ಕಣ್ಣಿನಿಂದಲೇ ನೋಡಲು ಬಯಸುತ್ತೇನೆ. ನನ್ನ ಹಕ್ಕನ್ನು ಮೊಟಕುಗೊಳಿಸುವ ಸ್ವಾತಂತ್ರ್ಯವನ್ನು, ಅಧಿಕಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾನು ನೀಡಿಲ್ಲ.

3. ಪರಭಾಷಾ ಸಿನಿಮಾಗಳು ಮಿತಿ ಮೀರಿವೆ. ಇದಕ್ಕೆ ಕಾರಣ ಕನ್ನಡ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನೇ ಆಕರ್ಷಿಸದೇ ಇರುವುದು. ಒಳ್ಳೆಯ ಸಿನಿಮಾಗಳು ಬಂದಾಗ (ಮುಂಗಾರುಮಳೆ, ಆಪ್ತಮಿತ್ರ) ಕನ್ನಡ ಪ್ರೇಕ್ಷಕರು ಅವುಗಳನ್ನು ಗೆಲ್ಲಿಸಿದ್ದಾರೆ. ಕಳಪೆ ಸಿನಿಮಾಗಳು ಬಂದಾಗ ತಿರಸ್ಕರಿಸಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬಾರದೇ ಹೋದಾಗ ಭಾಷೆ ಬಾರದಿದ್ದರೂ ಬೇರೆ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಆ ಸಿನಿಮಾಗಳು ಕನ್ನಡದಲ್ಲೇ ಬರುವಂತಾದರೆ ಕನ್ನಡಿಗರು ಕನ್ನಡ ಸಿನಿಮಾಗಳನ್ನೇ ನೋಡುತ್ತಾರೆ, ಕನ್ನಡ ವಾತಾವರಣವೂ ನಿರ್ಮಾಣವಾಗುತ್ತದೆ.

4. ಡಬ್ಬಿಂಗ್ ಚಾಲ್ತಿಗೆ ಬಂದರೆ ಒಂದು ಆರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಕನ್ನಡ ನಿರ್ಮಾಪಕರು-ನಿರ್ದೇಶಕರು ಒಳ್ಳೆಯ ಸಿನಿಮಾ-ಧಾರಾವಾಹಿಗಳನ್ನು ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಪೈಪೋಟಿ ಹೆಚ್ಚಿದಾಗಲೇ ಗುಣಮಟ್ಟವೂ ಹೆಚ್ಚಲು ಸಾಧ್ಯವಿದೆ. ಕನ್ನಡಿಗರು ಒಳ್ಳೆಯ ಗುಣಮಟ್ಟದ ಸಿನಿಮಾ-ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

5. ಕನ್ನಡವೊಂದೇ ಗೊತ್ತಿರುವ, ಬೇರೆ ಯಾವ ಭಾಷೆಗಳೂ ಬಾರದ ಕನ್ನಡ ಪ್ರೇಕ್ಷಕರು ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶವನ್ನು ಪಡೆಯುತ್ತಾನೆ. ಟೈಟಾನಿಕ್, ಅವತಾರ್‌ನಂಥ ಸಿನಿಮಾಗಳನ್ನು ಭಾಷೆಯ ಕಾರಣಕ್ಕಾಗಿ ನೋಡದೇ ಉಳಿದಿರುವ ಕನ್ನಡಿಗರಿಗೆ ಆಗುವ ಅನ್ಯಾಯಗಳು ತಪ್ಪುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಇದು ಪಾಳೇಗಾರಿಕೆಯ ಕಾಲವಲ್ಲ. ಜನರು ತಮಗೆ ಇಷ್ಟವಾಗಿದ್ದನ್ನು ನೋಡುವ, ಕೇಳುವ ಹಕ್ಕನ್ನು ಕಾನೂನುಬದ್ಧವಾಗಿ ಹೊಂದಿದ್ದಾರೆ. ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಡಬ್ಬಿಂಗ್ ವಿರೋಧಕ್ಕೆ ಕಾರಣವಾಗಿ ತಮ್ಮ ಹೊಟ್ಟೆಪಾಡನ್ನು ವಿವರಿಸಿದರೆ ಸಿನಿ-ಟಿವಿ ಸಂಘಟನೆಗಳಿಗೆ ಪರ್ಯಾಯ ಮಾರ್ಗ ದೊರಕಿಸಿಕೊಡಲು ಸರ್ಕಾರ, ಜವಾಬ್ದಾರಿಯುತ ಸಮಾಜದ ಗಣ್ಯರು ಚಿಂತಿಸಬಹುದು. ಅದನ್ನು ಬಿಟ್ಟು, ಡಬ್ಬಿಂಗ್ ಮೂಲಕ ಜಾಗತೀಕರಣ ಪ್ರವೇಶ ಪಡೀತಾ ಇದೆ, ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಎಳಸು ಎಳಸಾಗಿ ಮಾತನಾಡುವುದನ್ನು ಈ ಜನರು ಬಿಡಬೇಕಿದೆ. ಡಬ್ಬಿಂಗ್ ಇಂದಲ್ಲ ನಾಳೆ ಬರಲೇಬೇಕು, ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ತಡೆಯುವುದಕ್ಕೆ ಯಾವ ಸಕಾರಣಗಳೂ ಯಾರ ಬಳಿಯೂ ಇಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.