ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ


– ದಿನೇಶ್ ಕುಮಾರ್ ಎಸ್.ಸಿ


 
ಹೆಸರಾಂತ ಚಿತ್ರನಟ ಅಮೀರ್ ಖಾನ್ ಅವರ ಬಹುನಿರೀಕ್ಷೆಯ ಉದ್ದೇಶಿತ ಟೆಲಿವಿಷನ್ ಶೋ ’ಸತ್ಯಮೇವ ಜಯತೆ’ ಯಿಂದಾಗಿ ಕನ್ನಡ ಸಿನಿಮಾ-ಕಿರುತೆರೆಯಲ್ಲಿ ಚಾಲ್ತಿಯಲ್ಲಿರುವ ಡಬ್ಬಿಂಗ್ ನಿಷೇಧದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಾದವಿವಾದಗಳು ಬಿರುಸಾಗಿಯೇ ನಡೆಯುತ್ತಿದೆ. ಸತ್ಯಮೇವ ಜಯತೆಯನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಯಾರಿಸುತ್ತೇವೆ ಎಂದು ಆಯೋಜಕರು ಘೋಷಿಸುತ್ತಿದ್ದಂತೆ, ಸಿನಿ-ಟಿವಿ ಸಂಘಟನೆಗಳು ತಮ್ಮ ಏಕತೆಯನ್ನು ಪ್ರದರ್ಶಿಸಿ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ. ಸಣ್ಣಪುಟ್ಟದಕ್ಕೂ ಕಾದಾಡಿಕೊಂಡು ಬಂದು ನ್ಯೂಸ್ ಟೆಲಿವಿಷನ್‌ಗಳ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ಅಸಭ್ಯವಾಗಿ ಜಗಳವಾಡುವ ಈ ಮಂದಿ ಡಬ್ಬಿಂಗ್ ಧಾರಾವಾಹಿಯ ಕುರಿತಂತೆ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ಒಂದು ವಿಶೇಷ ಬೆಳವಣಿಗೆಯೆಂದೇ ಪರಿಗಣಿಸಬಹುದು!

ಆದರೆ ಮುಖ್ಯವಾಗಿ ಸಿನಿಮಾ-ಟಿವಿ ಸಂಘಟನೆಗಳ ಈ ಅಭೂತಪೂರ್ವ ಒಗ್ಗಟ್ಟಿಗೆ ಕಾರಣ ಹುಡುಕಿಕೊಂಡು ಹೋದರೆ ನಿರಾಶೆಯೇ ಕಾದಿರುತ್ತದೆ. ಕನ್ನಡದ ಸೂಕ್ಷ್ಮಮತಿ ನಟಿ, ಹಾಲಿ ರಾಜಕಾರಣಿಯೊಬ್ಬರು ಅಮೀರ್ ಖಾನ್ ಶೋ ಬಗ್ಗೆ ಹೇಳಿದ ಮಾತು ಗಾಬರಿ ಹುಟ್ಟಿಸುವಂತಿದೆ. ಅವರು ಶೋ ಡಬ್ ಮಾಡಿದರೆ ಮಾಡಿಕೊಳ್ಳಲಿ, ಪ್ರಸಾರ ಮಾಡಲು ಬಿಡುವವರು ಯಾರು? ಇದು ಅವರ ಮಾತು. ಉದ್ಯಮದ ಪ್ರತಿಕ್ರಿಯೆ ಈ ಧಾಟಿಯ ಪಾಳೆಗಾರಿಕೆ ಭಾಷೆಯಲ್ಲಿದ್ದರೆ ಅವುಗಳಿಗೆ ಉತ್ತರಿಸುವುದು ಕಷ್ಟ. ಆದರೂ ಕೆಲವು ಮುಖ್ಯವಾದ ಅಂಶಗಳನ್ನು ಚರ್ಚಿಸಲೇಬೇಕಾಗಿದೆ.

ಡಬ್ಬಿಂಗ್ ವಿರುದ್ಧ ಕತ್ತಿ-ಗುರಾಣಿ ಹಿಡಿದು ನಿಂತಿರುವ ಸಿನಿಮಾ-ಟಿವಿ ಸಂಘಟನೆಗಳ ವಲಯದ ಬುದ್ಧಿಜೀವಿಗಳು ಬಳಸುತ್ತಾ ಇರುವುದು ಜಾಗತೀಕರಣದ ಭೂತವನ್ನು. ಹೀಗೆ ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ಜಾಗತೀಕರಣಕ್ಕೆ ಕನೆಕ್ಟ್ ಮಾಡುವುದು ಬಲು ಸುಲಭ. ಇದು ಅತ್ಯಂತ ಬುದ್ಧಿವಂತಿಕೆಯ ಸಮರ್ಥನೆ. ಯಾಕೆಂದರೆ ಜಾಗತೀಕರಣ ಪ್ರತಿ ಮನೆಯನ್ನೂ ಪ್ರವೇಶಿಸಿದೆ. ಕುಡಿಯುವ ನೀರಿನಿಂದ ಹಿಡಿದು, ಉಸಿರಾಡುವ ಗಾಳಿಯವರೆಗೆ ಅದು ಎಲ್ಲವನ್ನೂ ಪ್ರಭಾವಿಸುತ್ತಿದೆ. ಸಮಸ್ಯೆಯನ್ನು ವಿಸ್ತಾರಗೊಳಿಸಿ ಅದಕ್ಕೊಂದು ಜಾಗತಿಕ ಆಯಾಮ ಕೊಡಲು ಸಿನಿ ಬುದ್ಧಿಜೀವಿಗಳು ಈಗ ಡಬ್ಬಿಂಗ್ ಜಾಗತೀಕರಣದ ಪಿಡುಗು ಎಂದು ಬಿಂಬಿಸುತ್ತಿದ್ದಾರೆ.

ಅಸಲಿಗೆ ಹೀಗೆ ಜಾಗತೀಕರಣವನ್ನು ಗುರಾಣಿಯನ್ನಾಗಿ ಬಳಸುವವರ ಧಾರಾವಾಹಿಗಳಿಗೆ ಜಾಹೀರಾತು ನೀಡುವವು ಬಹುರಾಷ್ಟ್ರೀಯ ಕಂಪೆನಿಗಳೇ ಆಗಿರುತ್ತವೆ. ಇವರ ಸಿನಿಮಾ ನಿರ್ಮಾಣಕ್ಕೆ ಸಹಯೋಗ ನೀಡುವ ಸಂಸ್ಥೆಗಳೂ ಅವೇ ಆಗಿರುತ್ತವೆ. ಈ ದ್ವಂದ್ವದಿಂದ ಹೊರಬರಲಾರದವರು ಡಬ್ಬಿಂಗ್ ಜಾಗತೀಕರಣದ ಉತ್ಪನ್ನ ಎಂದು ಹೇಳುವುದೇ ಒಂದು ತಮಾಷೆಯಾಗಿ ಕೇಳಿಸುತ್ತದೆ.

ಡಬ್ಬಿಂಗ್ ಏಕಸಂಸ್ಕೃತಿಯನ್ನು ಹೇರುವ ಪ್ರಯತ್ನ, ಇದು ಬಹುಸಂಸ್ಕೃತಿಗಳನ್ನು ನಾಶಪಡಿಸುತ್ತವೆ ಎಂಬುದು ಸಿನಿ ಬುದ್ಧಿಜೀವಿಗಳ ಮತ್ತೊಂದು ಗೋಳು. ಅಸಲಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಯೋಗ್ಯತೆ ಸಿನಿಮಾ ಮಂದಿಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಬೇಕಾಗುತ್ತದೆ. ಕನ್ನಡದಲ್ಲಿ ನಿರ್ಮಾಣವಾಗುವ ಅರ್ಧದಷ್ಟು ಸಿನಿಮಾಗಳ ಹೀರೋಗಳಿಗೆ ಸಿಗುವ ಪಾತ್ರ ರೌಡಿಯದ್ದೇ ಆಗಿರುತ್ತದೆ. ಮಿಕ್ಕ ಸಿನಿಮಾಗಳಲ್ಲೂ ರೌಡಿಜಂದೇ ಕಾರುಬಾರು. ಇದೇನು ಕನ್ನಡದ ಸಂಸ್ಕೃತಿಯೇ? ಮಚ್ಚು ಲಾಂಗು ಐಟಮ್ ಸಾಂಗುಗಳಿಲ್ಲದೆ ಸಿನಿಮಾ ಮಾಡೋದೇ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಕನ್ನಡ ಸಿನಿಮಾ ರಂಗ ತಲುಪಿದೆ. ಕನ್ನಡದ ಜನರು ಮಚ್ಚು ಸಂಸ್ಕೃತಿಯಿಂದ ಬಂದವರಾ? ಸಾಲುಮೀರಿ ಈ ಥರಹದ ಸಿನಿಮಾಗಳು ತೋಪಾಗುತ್ತಿದ್ದರೂ ಇದೇ ಫಾರ್ಮುಲಾ ಹಿಡಿದುಕೊಂಡು ಸಿನಿಮಾ ಮಾಡುವುದಾದರೂ ಯಾಕೆ? ಇವತ್ತು ಕನ್ನಡದ ಧಾರಾವಾಹಿಗಳ ಪೈಕಿ ಟಾಪ್ ಟೆನ್‌ನಲ್ಲಿರುವ ಎಲ್ಲ ಧಾರಾವಾಹಿಗಳು ರೀಮೇಕ್ ಧಾರಾವಾಹಿಗಳು. ಅಂದರೆ ಬೇರೆ ಭಾಷೆಗಳಲ್ಲಿ ಬಂದ ಧಾರಾವಾಹಿಗಳನ್ನೇ ಕಾಪಿ ಹೊಡೆದು ನಿರ್ಮಿಸಿದ ಧಾರಾವಾಹಿಗಳು. ಇವು ಯಾವ ಸಂಸ್ಕೃತಿಯನ್ನು ಬಿಂಬಿಸುತ್ತವೆ? ವರ್ಷಗಟ್ಟಲೆ ನಡೆಯುವ ಕನ್ನಡ ಸೀರಿಯಲ್‌ಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಹೆಣ್ಣೇ ನಾಯಕಿ, ಹೆಣ್ಣೇ ವಿಲನ್. ಎಲ್ಲ ಸೀರಿಯಲ್‌ಗಳು ವಿಲನ್ ಹೆಣ್ಣುಗಳು ಸಾಲುಸಾಲು ಹೆಣಗಳನ್ನು ಉರುಳಿಸುವಷ್ಟು ವಿಕೃತ ಮನಸ್ಸಿನವರು. ಇವರು ಕನ್ನಡದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಾರಾ? ಇದು ಕನ್ನಡ ಸಂಸ್ಕೃತಿಯಾ?

ಡಬ್ಬಿಂಗ್‌ನಿಂದ ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಘೋಷಿಸುವವರು ಮೊದಲು ಕನ್ನಡ ಸಿನಿಮಾಗಳು, ಧಾರಾವಾಹಿಗಳು ಯಾವ ಸಂಸ್ಕೃತಿಯನ್ನು ಪೋಷಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳುವಂತವರಾಗಬೇಕು. ಹಾಗೆ ನೋಡಿದರೆ ಬಹುಸಂಸ್ಕೃತಿಗಳು ಇವೆ ಎಂಬುದನ್ನೇ ಕನ್ನಡ ಸಿನಿಮಾಗಳು-ಧಾರಾವಾಹಿಗಳು ನಿರಾಕರಿಸುತ್ತವೆ. ಅಲ್ಲಿರುವುದು ಕಪ್ಪು ಬಿಳುಪು ಸಂಸ್ಕೃತಿ ಮಾತ್ರ. ಆದರ್ಶದ ಪಾತ್ರಗಳಿಗೆ ಮೇಲ್ವರ್ಗದ ಹೆಸರುಗಳಿದ್ದರೆ, ಕೇಡಿಗಳ ಹೆಸರುಗಳೆಲ್ಲ ಕೆಳವರ್ಗದವರ ಹೆಸರುಗಳೇ ಆಗಿರುತ್ತವೆ. ಹೀಗೆ ಕಪ್ಪು ಬಿಳುಪಾಗಿ ನೋಡುವ ಹಿನ್ನೆಲೆಯಲ್ಲಿ ಕೆಲಸ ಮಾಡುವ ಮನಸ್ಸುಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆಮಾಡಬಹುದು. ಆದರೆ ನಾಡಿನ ನೂರಾರು, ಸಾವಿರಾರು ಸಂಸ್ಕೃತಿ-ಉಪಸಂಸ್ಕೃತಿಗಳಿಗೆ ಈತನಕ ಕುರುಡಾಗೇ ಇರುವ, ಆ ಕಡೆಗೆ ಕಣ್ಣುಹಾಯಿಸಿಯೂ ನೋಡದ ಜನರು ಬಹುಸಂಸ್ಕೃತಿಗಳು ನಾಶವಾಗುತ್ತವೆ ಎಂಬ ಅಸ್ತ್ರ ಹಿಡಿದು ಡಬ್ಬಿಂಗ್ ವಿರೋಧ ಸಮರ್ಥಿಸಿಕೊಳ್ಳುವುದೇ ನಾಚಿಕೆಗೇಡು. ಇವತ್ತಿಗೂ ಕನ್ನಡ ಸಿನಿಮಾ-ಧಾರಾವಾಹಿಗಳಿಗೆ ಇತರ ಭಾಷೆಗಳ ಸಿನಿಮಾ-ಧಾರಾವಾಹಿಗಳೇ ಕಚ್ಚಾ ಸರಕು. ಇತರೆ ಭಾಷೆ ಸಿನಿಮಾ-ಧಾರಾವಾಹಿಗಳನ್ನು ಒಂದೋ ನಿರ್ಭಿಡೆಯಿಂದ ಮಕ್ಕೀಕಾಮಕ್ಕೀ ರೀಮೇಕ್ ಮಾಡುತ್ತಾರೆ. ಅಥವಾ ಅವುಗಳ ದೃಶ್ಯಗಳನ್ನು ಕದಿಯುತ್ತಾರೆ. ಆಗ ಯಾವ ಸಂಸ್ಕೃತಿನಾಶ ಆಗುವುದಿಲ್ಲವೋ?

ಈ ಸಿನಿ-ಟಿವಿ ಸಂಘಟನೆಗಳ ತರ್ಕ, ವಾದ ಏನೇ ಇರಲಿ ಕೆಲವು ಮಹತ್ವದ ಕಾರಣಗಳಿಗಾಗಿ ಡಬ್ಬಿಂಗ್ ನಿಷೇಧವನ್ನು ತೆರವುಗೊಳಿಸಲೇಬೇಕಾದ ಅನಿವಾರ್ಯತೆ ಇದೆ. ಈಗಲಾದರೂ ಸಿನಿಮಾ-ಟಿವಿ ರಂಗ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ಡಬ್ಬಿಂಗ್‌ಗಳಿಗೆ ಅವಕಾಶ ನೀಡುವುದು ಒಳ್ಳೆಯದು. ಡಬ್ಬಿಂಗ್ ಯಾಕೆ ಬೇಕು ಎಂಬುದಕ್ಕೆ ನನಗೆ ಹೊಳೆದ ಕಾರಣಗಳು ಹೀಗಿವೆ.

1. ಮೊದಲನೆಯದಾಗಿ ಡಬ್ಬಿಂಗ್ ನಿಷೇಧ ಎಂಬ ಪದಪ್ರಯೋಗವೇ ತಪ್ಪು. ಡಬ್ಬಿಂಗ್ ನಿಷೇಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ, ಅದರ ಉಪ ಸಂಘಟನೆಗಳಿಗಾಗಲಿ ಡಬ್ಬಿಂಗ್ ನಿಷೇಧಿಸುವ ಯಾವ ತರಹದ ಹಕ್ಕೂ ಇಲ್ಲ. ಡಬ್ಬಿಂಗ್ ನಿಷೇಧವಾಗಲೇಬೇಕೆಂದಿದ್ದರೆ ಅದು ಕಾನೂನಾಗಿ ಜಾರಿಗೆ ಬರಬೇಕು. ಅಂಥ ಕಾನೂನುಗಳು ದೇಶದ ಯಾವ ಮೂಲೆಯಲ್ಲೂ ನಿರ್ಮಾಣವಾಗಿಲ್ಲ.

2. ಜ್ಞಾನ-ಮನರಂಜನೆಯನ್ನು ತಮಗೆ ಇಷ್ಟವಾದ ಭಾಷೆಯಲ್ಲಿ ಪಡೆದುಕೊಳ್ಳುವುದು ಎಲ್ಲರ ಮೂಲಭೂತ ಹಕ್ಕು. ಜಗತ್ತಿನ ಯಾವುದೇ ಭಾಷೆಯಲ್ಲಿ ನಿರ್ಮಾಣವಾಗಬಹುದಾದ ಸಿನಿಮಾ, ಧಾರಾವಾಹಿ, ಡಾಕ್ಯುಮೆಂಟರಿ ಇತ್ಯಾದಿಗಳು ನನಗೆ ಕನ್ನಡ ಭಾಷೆಯಲ್ಲೇ ಬೇಕು. ಜಗತ್ತನ್ನು ನಾನು ಕನ್ನಡದ ಕಣ್ಣಿನಿಂದಲೇ ನೋಡಲು ಬಯಸುತ್ತೇನೆ. ನನ್ನ ಹಕ್ಕನ್ನು ಮೊಟಕುಗೊಳಿಸುವ ಸ್ವಾತಂತ್ರ್ಯವನ್ನು, ಅಧಿಕಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾನು ನೀಡಿಲ್ಲ.

3. ಪರಭಾಷಾ ಸಿನಿಮಾಗಳು ಮಿತಿ ಮೀರಿವೆ. ಇದಕ್ಕೆ ಕಾರಣ ಕನ್ನಡ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನೇ ಆಕರ್ಷಿಸದೇ ಇರುವುದು. ಒಳ್ಳೆಯ ಸಿನಿಮಾಗಳು ಬಂದಾಗ (ಮುಂಗಾರುಮಳೆ, ಆಪ್ತಮಿತ್ರ) ಕನ್ನಡ ಪ್ರೇಕ್ಷಕರು ಅವುಗಳನ್ನು ಗೆಲ್ಲಿಸಿದ್ದಾರೆ. ಕಳಪೆ ಸಿನಿಮಾಗಳು ಬಂದಾಗ ತಿರಸ್ಕರಿಸಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬಾರದೇ ಹೋದಾಗ ಭಾಷೆ ಬಾರದಿದ್ದರೂ ಬೇರೆ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಆ ಸಿನಿಮಾಗಳು ಕನ್ನಡದಲ್ಲೇ ಬರುವಂತಾದರೆ ಕನ್ನಡಿಗರು ಕನ್ನಡ ಸಿನಿಮಾಗಳನ್ನೇ ನೋಡುತ್ತಾರೆ, ಕನ್ನಡ ವಾತಾವರಣವೂ ನಿರ್ಮಾಣವಾಗುತ್ತದೆ.

4. ಡಬ್ಬಿಂಗ್ ಚಾಲ್ತಿಗೆ ಬಂದರೆ ಒಂದು ಆರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಕನ್ನಡ ನಿರ್ಮಾಪಕರು-ನಿರ್ದೇಶಕರು ಒಳ್ಳೆಯ ಸಿನಿಮಾ-ಧಾರಾವಾಹಿಗಳನ್ನು ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಪೈಪೋಟಿ ಹೆಚ್ಚಿದಾಗಲೇ ಗುಣಮಟ್ಟವೂ ಹೆಚ್ಚಲು ಸಾಧ್ಯವಿದೆ. ಕನ್ನಡಿಗರು ಒಳ್ಳೆಯ ಗುಣಮಟ್ಟದ ಸಿನಿಮಾ-ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

5. ಕನ್ನಡವೊಂದೇ ಗೊತ್ತಿರುವ, ಬೇರೆ ಯಾವ ಭಾಷೆಗಳೂ ಬಾರದ ಕನ್ನಡ ಪ್ರೇಕ್ಷಕರು ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶವನ್ನು ಪಡೆಯುತ್ತಾನೆ. ಟೈಟಾನಿಕ್, ಅವತಾರ್‌ನಂಥ ಸಿನಿಮಾಗಳನ್ನು ಭಾಷೆಯ ಕಾರಣಕ್ಕಾಗಿ ನೋಡದೇ ಉಳಿದಿರುವ ಕನ್ನಡಿಗರಿಗೆ ಆಗುವ ಅನ್ಯಾಯಗಳು ತಪ್ಪುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಇದು ಪಾಳೇಗಾರಿಕೆಯ ಕಾಲವಲ್ಲ. ಜನರು ತಮಗೆ ಇಷ್ಟವಾಗಿದ್ದನ್ನು ನೋಡುವ, ಕೇಳುವ ಹಕ್ಕನ್ನು ಕಾನೂನುಬದ್ಧವಾಗಿ ಹೊಂದಿದ್ದಾರೆ. ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಡಬ್ಬಿಂಗ್ ವಿರೋಧಕ್ಕೆ ಕಾರಣವಾಗಿ ತಮ್ಮ ಹೊಟ್ಟೆಪಾಡನ್ನು ವಿವರಿಸಿದರೆ ಸಿನಿ-ಟಿವಿ ಸಂಘಟನೆಗಳಿಗೆ ಪರ್ಯಾಯ ಮಾರ್ಗ ದೊರಕಿಸಿಕೊಡಲು ಸರ್ಕಾರ, ಜವಾಬ್ದಾರಿಯುತ ಸಮಾಜದ ಗಣ್ಯರು ಚಿಂತಿಸಬಹುದು. ಅದನ್ನು ಬಿಟ್ಟು, ಡಬ್ಬಿಂಗ್ ಮೂಲಕ ಜಾಗತೀಕರಣ ಪ್ರವೇಶ ಪಡೀತಾ ಇದೆ, ಬಹುಸಂಸ್ಕೃತಿ ನಾಶವಾಗುತ್ತದೆ ಎಂದು ಎಳಸು ಎಳಸಾಗಿ ಮಾತನಾಡುವುದನ್ನು ಈ ಜನರು ಬಿಡಬೇಕಿದೆ. ಡಬ್ಬಿಂಗ್ ಇಂದಲ್ಲ ನಾಳೆ ಬರಲೇಬೇಕು, ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ತಡೆಯುವುದಕ್ಕೆ ಯಾವ ಸಕಾರಣಗಳೂ ಯಾರ ಬಳಿಯೂ ಇಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

19 thoughts on “ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ

  1. ದಿನೇಶ್ ಕುಮಾರ್ ಎಸ್.ಸಿ

    ಪ್ರಿಯ ಶಿವಣ್ಣ,
    ನೀವಂದ್ರೆ ನಮಗೆ ಇಷ್ಟ. ನಿಮ್ಮ ಅಪ್ಪಾಜಿ ಅಂದ್ರೆ ಮತ್ತೂ ಇಷ್ಟ. ಅವರು ಇಡೀ ಕನ್ನಡ ಜನಸಮೂಹದಿಂದ ಅಣ್ಣಾವ್ರು ಅನಿಸಿಕೊಂಡವರು. ಅವರನ್ನು ಯಾರೂ ತಮ್ಮ ಇಷ್ಟಾನಿಷ್ಟಗಳಿಗೆ ಕಟ್ಟಿಹಾಕಿಕೊಳ್ಳಬಾರದು.
    “ಇದೇ ರೀತಿ ಇನ್ನೂ ಮುಂದುವರಿದರೆ ಚೆನ್ನಾಗಿರುವುದಿಲ್ಲ. ಅಪ್ಪಾಜಿ ಆಶಯಕ್ಕೆ ವಿರುದ್ಧವಾಗಿ ಹೋದರೆ ಸುಮ್ಮನಿರಲ್ಲ. ಎಲ್ಲಾ ಭಾಷೆ, ಎಲ್ಲಾ ನಟರ ಚಿತ್ರಗಳ ಮೇಲೆ ನಮಗೆ ಅಭಿಮಾನವಿದೆ. ಆದರೆ ಇತ್ತೀಚಿಗೆ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ತೀವ್ರ ಅಸಮಾಧಾನವಾಗಿದೆ. ಅಪ್ಪಾಜಿಯ ಮೇಲೆ ಆಣೆ ಮಾಡುತ್ತೇನೆ, ನಾನು ಜೀವ ಹೋಗುವವರೆಗೂ ಹೋರಾಟಕ್ಕೆ ಸಿದ್ಧ. ನಾನು ಹೋದರೆ ತಮ್ಮ, ತಮ್ಮನ ಮಕ್ಕಳು ಇದ್ದಾರೆ. ನಾನು ಯಾರಿಗೂ ಕೇರ್ ಮಾಡೊಲ್ಲ” ಅಂತ ನೀವು ಹೇಳಿದ್ದೀರಿ.
    ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಾಗ, ನೆರೆ ಬಂದು ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದಾಗ, ಬೆಂಗಳೂರು ಜನರು ಒಳಚರಂಡಿ ನೀರನ್ನೇ ಶುದ್ಧಗೊಳಿಸಿ ಕುಡಿಯಬೇಕು ಎಂದು ಕಾವೇರಿ ನ್ಯಾಯಮಂಡಳಿ ಆದೇಶ ಹೊರಡಿಸಿದಾಗ, ಕನ್ನಡದ ಮಕ್ಕಳ ಉದ್ಯೋಗವನ್ನು ಇನ್ಯಾವುದೋ ರಾಜ್ಯಗಳ ಜನರು ಅಕ್ರಮವಾಗಿ ಕಿತ್ತುಕೊಂಡಾಗ ಹೀಗೆ ಪ್ರಾಣತ್ಯಾಗದ ಮಾತನ್ನು ಚಿತ್ರೋದ್ಯಮದವರು ಆಡಿದ ಉದಾಹರಣೆ, ನಡೆದುಕೊಂಡ ಉದಾಹರಣೆಯೂ ಇಲ್ಲ.
    ಅದು ಹಾಗಿರಲಿ, ಅಣ್ಣಾವ್ರು ಗೋಕಾಕ್ ವರದಿ ಜಾರಿಗಾಗಿ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಿದರು. ಕನ್ನಡವೇ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂಬುದು ಆ ಆಂದೋಲನದ ಮೂಲಗುರಿಯಾಗಿತ್ತು. ಇವತ್ತು ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಎಗ್ಗಿಲ್ಲದೆ ಮೆರೆಯುತ್ತಿವೆ. ಅಣ್ಣಾವ್ರು ಬದುಕಿದ್ದರೆ, ಇವತ್ತಿನ ಸ್ಥಿತಿಯಲ್ಲಿ ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಇರಲಿ ಎಂದು ಹೇಳುತ್ತಿದ್ದರೇನೋ, ಇದು ಅಣ್ಣಾವ್ರ ಅಭಿಮಾನಿಗಳಾದ ನನ್ನಂಥವರ ಅನಿಸಿಕೆ.
    ಯಾಕೆ ಡಬ್ಬಿಂಗ್ ವಿಷಯ ಬಂದಾಗಲೆಲ್ಲ ಕನ್ನಡ ಚಿತ್ರರಂಗದವರು ಇಷ್ಟೊಂದು ಕೆರಳುತ್ತಾರೆ ಶಿವಣ್ಣ? ಈಗ ನೋಡಿ, ನೀವು ಕೂಡ ನೂರು ಸಿನಿಮಾ ಮಾಡಿದ್ದೀರಿ. ಅದರಲ್ಲಿ ಕನ್ನಡದ ಕಥೆಗಳೆಷ್ಟು, ರೀಮೇಕ್ ಸಿನಿಮಾಗಳೆಷ್ಟು? ಎಷ್ಟು ಸಿನಿಮಾಗಳಿಗೆ ಪರಭಾಷಾ ನಟಿಯರನ್ನು ಕರೆತರಲಾಗಿದೆ? ಎಷ್ಟು ಸಿನಿಮಾಗಳಲ್ಲಿ ಬೇರೆ ಭಾಷೆ ಸಿನಿಮಾಗಳ ತುಣುಕುಗಳನ್ನು ಕದ್ದು ತೂರಿಸಲಾಗಿದೆ? ಇದೆಲ್ಲ ನಿಮಗೆ ಗೊತ್ತಿರುವಂಥದ್ದೇ, ಇದನ್ನು ತಡೆಯುವುದೂ ಸಹ ನಿಮ್ಮ ಕೈಯಲ್ಲಿಲ್ಲ.
    ಬೇರೆ ಭಾಷೆ ಸಿನಿಮಾಗಳ ಹಂಗಲ್ಲೇ ಬದುಕುತ್ತಿರುವ ಕನ್ನಡ ಚಿತ್ರೋದ್ಯಮ ಡಬ್ಬಿಂಗ್ ವಿಷಯದಲ್ಲಿ ಮಾತ್ರ ತೊಡೆತಟ್ಟಿ ನಿಲ್ಲುವುದು ಹಾಸ್ಯಾಸ್ಪದ ಅನಿಸೋದಿಲ್ವೇ? ಅದೆಲ್ಲ ಹೋಗಲಿ, ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳಿಗೆ ಯಾಕೆ ಡಬ್ ಮಾಡ್ತೀರಿ? ಆ ಭಾಷೆ ನಟರು ಪ್ರಾಣ ಕಳೆದುಕೊಂಡರೂ ಪರವಾಗಿಲ್ಲವೇ?
    ಶಿವಣ್ಣ, ಪ್ರಾಣ ಕಳೆದುಕೊಳ್ಳುವ ಮಾತು ಬೇಡ. ಕನ್ನಡ ಭಾಷೆಯ ಉಳಿವಿಗಾಗಿಯೇ ಇವತ್ತು ಡಬ್ಬಿಂಗ್ ಬೇಕಾಗಿರೋದು. ಬೇರೆ ಭಾಷೆಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರೆ ಅದರ ಡಬ್ಬಿಂಗ್ ಆವೃತ್ತಿಗಳನ್ನು ನಾವು ನೋಡುತ್ತೇವೆ. ಚೆನ್ನಾಗಿಲ್ಲದಿದ್ದರೆ ತಿರಸ್ಕರಿಸುತ್ತೇವೆ. ಹಾಗೆ ನೋಡಿದರೆ ನಮಗೆ ಶಾರೂಕ್, ಚಿರಂಜೀವಿ, ರಜಿನಿಗಿಂತ ನೀವೇ ಇಷ್ಟ. ನಿಮ್ಮ ಸಿನಿಮಾಗಳು ಸ್ಪರ್ಧೆ ಮಾಡಲಿ ಬಿಡಿ, ಯಾಕೆ ಈ ಅಂಜುಬುರುಕುತನ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ?
    ಕಡೇದಾಗಿ ಒಂದು ಮಾತು. ಅಣ್ಣಾವ್ರು ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡಿದಾಗ ಇದ್ದ ಸ್ಥಿತಿಯೇ ಬೇರೆ, ಈಗಿನ ಸ್ಥಿತಿಯೇ ಬೇರೆ. ಡಬ್ಬಿಂಗ್ ವಿವಾದಕ್ಕೆ ದಯವಿಟ್ಟು ಅಣ್ಣಾವ್ರನ್ನು ಎಳೆಯಬೇಡಿ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬ ಸಿನಿಮಾ ನೋಡುಗನಿಗೂ ಅವನದೇ ಆದ ಮೂಲಭೂತ ಸ್ವಾತಂತ್ರ್ಯವಿರುತ್ತದೆ. ಅದನ್ನು ಗೌರವಿಸೋಣ.
    ಪ್ರೀತಿಯಿಂದ

    Reply
  2. ವಿಜಯ್ ಹನಕೆರೆ

    ಪ್ರಿಯ ದಿನೇಶ್‌ಕುಮಾರ್‌ರವರೇ
    ಅಜ್ಜಿಗೆ ಅರಿವೆಯ ಚಿಂತೆಯಾದರೆ, ಮೊಮ್ಮಗಳಿಗೆ ಮಿಂಡನ ಚಿಂತೆಯಂತೆ..
    ನಮಗೆ ಇಲ್ಲಿ ಹೊಟ್ಟೇಹಸಿವು .. ನೀವು ತರ್ಕಬದ್ಧ ವಾದ ಮಾಡುತ್ತಿದ್ದೀರಾ.. ನಾಚಿಕೆ ಅದರೂ ಪರವಾಗಿಲ್ಲ.. ನಮಗೆ ಡಬ್ಬಿಂಗ್ ಬಂದರೆ ಭಯ.. ಯಾಕೆಂದರೆ ಹೊಟ್ಟೆಹಸಿವು..

    ಒಂದೂ ಧಾರಾವಾಹಿಯನ್ನಾಗಲೀ ಅಥವಾ ಚಿತ್ರವನ್ನಾಗಲಿ ನಿರ್ದೇಶನ/ನಿರ್ಮಾಣ ಮಾಡದೇ ಇರುವ(ಹಾಗಂದುಕೊಂಡಿದ್ದೇನೆ) ನೀವು ಅಷ್ಟು ಸಾರಾ ಸಗಟಾಗಿ ಡಬ್ಬಿಂಗ್ ಪರವಾಗಿ ಮಾತಾಡುವುದನ್ನು ಕೇಳಿ ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಒಂದು ಕೆಲಸ ಮಾಡಿ, ನಿಮ್ಮ ಎಲ್ಲಾ ಹಣದ ಮೂಲವನ್ನು ಒಂದು ತಿಂಗಳವರೆಗೆ ಬಂದ್ ಮಾಡಿ, ಚಿತ್ರನಿರ್ಮಾಣದಲ್ಲಿ ತೊಡಗಿ. ಆಗ ನಿಮಗೆ ನಮ್ಮ ಹಸಿವಿನ ಅರಿವಾಗಬಹುದು. ಇಲ್ಲಿ ಡಬ್ಬಿಂಗ್ ಬೇಕು ಅಥವಾ ಬೇಡಾ ಅನ್ನುವುದರ ಪ್ರಶ್ನೆಯಲ್ಲ.. ಯಾಕೆಂದರೆ ಅದನ್ನು ತೀರ್ಮಾನಿಸಲು ನಾನು ಯಾರು.. ಆದರೆ ಅದರ ಪರಿಣಾಮದ ಬಗ್ಗೆ ಭಯ ಅಷ್ಟೇ.. ಒಂದು ಮಾತು ನೆನಪಿರಲಿ, ಒಮ್ಮೆ ಧಾರಾವಾಹಿಗಳನ್ನು ಡಬ್ಬಿಂಗ್ ಮಾಡಲು ಅವಕಾಶ ಕಲ್ಪಿಸಿದರೆ ಒಂದೇ ಒಂದು ಧಾರಾವಾಹಿಯೂ ಕನ್ನಡದಲ್ಲಿ ನಿರ್ಮಾಣ ಆಗುವುದಿಲ್ಲ. ಉದಯಾ ಟೀವಿ ಒಂದರಲ್ಲೇ ಐದು ವರ್ಷಕ್ಕಾಗುವಷ್ಟು ಧಾರಾವಾಹಿಗಳು ಸಾಲಿನಲ್ಲಿ ನಿಂತಿವೆ..

    ಯಾವುದೇ ಕ್ಷೇತ್ರ ಎಷ್ಟು ಹಣ ಗಳಿಸುತ್ತದೆ ಎನ್ನುವುದಕ್ಕಿಂತಾ ಎಷ್ಟು ಜನರಿಗೆ ಕೆಲಸ ಕಲ್ಪಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ಕಥೆಗಳನ್ನು ನೀವು ಬಣ್ಣಿಸುವುದಾದರೆ, ಯಾವ ಕ್ಷೇತ್ರದ ದೋಸೆ ತೂತಿಲ್ಲ ಹೇಳಿ. ರಾಜಕೀಯದಲ್ಲಿ ರೆಡ್ಡಿ ಯಡ್ಡಿ.. ನಿಮ್ಮ ಪತ್ರಿಕಾ ಲೋಕದಲ್ಲಿ ಬೆಳಗೆರೆ ಒಬ್ಬನೇ ಸಾಕು.. ಬೇರೇ ಭಾಷೆಯಲ್ಲಿ ಕೌನ್ ಬನೇಗ ಕ್ರೋರ್‌ಪತಿ ಬಂದರೆ .. ಅದು ನಮ್ಮ ಭಾಷೆಯಲ್ಲಿ ಕನ್ನಡದ ಕೋಟ್ಯಾದಿಪತಿ ಆಗಲಿ ಪರವಾಗಿಲ್ಲ. ಆದರೆ ಅದನ್ನೇ ಡಬ್ ಮಾಡೊಣ ಅಂದರೆ ನನ್ನ ಗೆಳೆಯರು ಮನೆ ಬಾಡಿಗೆ ಕಟ್ಟಲು ಆಗುವುದಿಲ್ಲ. ಎಷ್ಟು ಜನರು, ಅದರಲ್ಲೂ ಮುಖ್ಯವಾಗಿ ಎಷ್ಟು ಲೈಟ್ ಬಾಯ್ಸ್ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಅರಿವಿದೆಯೇ ನಿಮಗೆ..? ( ನಿಮ್ಮ ಒಂದು ಲೇಖನದಲ್ಲಿ ವರ್ಷಗಟ್ಟಲೆ ನಡೆಯುವ ಕನ್ನಡ ಸೀರಿಯಲ್‌ಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಹೆಣ್ಣೇ ನಾಯಕಿ, ಹೆಣ್ಣೇ ವಿಲನ್ ) ಎಂದು ಕನ್ನಡದ ಧಾರಾವಾಹಿಗಳ ಗುಣಮಟ್ಟದ ಬಗ್ಗೆ ಬಣ್ಣಿಸಿದ್ದೀರಿ. ಆದರೆ ಬೇರೇ ಭಾಷೆಗಳಲ್ಲಿ ಏನು ಕುಮಾರವ್ಯಾಸರುಗಳಿಲ್ಲ.. ಮಹಾನ್ ಕೃತಿಗಳನ್ನು ಸೃಷ್ಟಿಸಲು. ಅವರಲ್ಲಿ ಹಣವಿದೆ.. ನಮ್ಮಲ್ಲಿ ಅಷ್ಟಿಲ್ಲಾ.. ಏನು ಮಾಡಲಿ. ನಮ್ಮ ಕಥೆಗಳಿಗೆ ಒಂದು ಸ್ಟ್ರಾಟಜಿ ಎಂದು ಇರುತ್ತದೆ. ಅದಕ್ಕೆ ತಕ್ಕಂತೆ ನಾವು ಕಥೆ ಹೆಣೆಯಬೇಕಾಗುತ್ತೆ. ಅಷ್ಟೇಲ್ಲಾ ಏಕೆ ನಿಮ್ಮ ನಲ್ನುಡಿಯಲ್ಲೇ ನೀವು ಕನ್ನಡದ ಬಗ್ಗೆ ಮಾತ್ರ ಏಕೆ ಬರೆಯಿತ್ತೀರಿ.. ಮರಾಠಿಗರಿಗೆ, ಮಣೀಪುರಿಗಳಿಗೆ ಸಮಸ್ಯೆಗಳಿಲ್ಲವೇ. ಇಲ್ಲಿ ಕನ್ನಡ ನಿಮ್ಮ ಸ್ಟ್ರಾಟಜಿ.. ಹಾಗೇಯೇ ಅತ್ತೆ-ಸೊಸೆ ನಮ್ಮ ಸ್ಟ್ರಾಟಜಿ..

    ರೈಲ್ವೇ ಕೆಲ್ಸಗಳಿಗೆ ಬಿಹಾರಿಗಳನ್ನೇ ತೆಗೆದುಕೊಳ್ಳುತ್ತಾರೆ ಎಂದು ಕರವೇಯವರು ಧರಣಿ ಮಾಡಿದ್ದು ನೆನಪಿಲ್ಲವೇ .. ನಿಮ್ಮ ಪ್ರತಿಭಟನೆಯಲ್ಲಿ ಕೆಲವು ಸೂಕ್ಮಗಳಿಗೆ ಅದಕ್ಕಾಗಿ ಹೋರಾಡುತ್ತೀರಿ. ಹಾಗೇಯೇ ನಮ್ಮ ಹೋರಾಟದಲ್ಲೂ ಸೂಕ್ಮತೆಯಿದೆ.. ಚಿಂತಿಸಿ..

    ತುಂಬಾ ಒಳ್ಳೆಯ ವಿಷಯವನ್ನು ಪ್ರಸಾರ ಮಾಡಿದರೆ ಜನ ತೆಗೆದುಕೊಳ್ಳುತ್ತಾರೆ ಎಂದು ದಯವಿಟ್ಟು ಭ್ರಮಿಸಬೇಡಿ. ನಿಮ್ಮ ತೇಜಸ್ವೀ ಡಾಕುಮೆಂಟರಿಯನ್ನೇ ಎಷ್ಟು ಜನ ನೋಡಿದರು..? ಅದಕ್ಕೆ ತಕ್ಕ ವೀಕ್ಷಕರು ಸಿಕ್ಕಿದರಾ.. ? ಮಾರ್ಮಿಕವಾದ ಧಾರಾವಾಹಿಗಳನ್ನು ಯಾರೂ ತಿರುಗಿಯೂ ನೋಡುವುದಿಲ್ಲ. ಅವುಗಳನ್ನು ತೆಗೆದು ಅನುಭವಿಸುವವರ ಪಾಡು ಅವರನ್ನೇ ಕೇಳಿ.. ದರ್ಶನ್ ಹೆಂಡತಿಗೆ ಹೊಡೆದ ಎಂದು ಪುಟಗಟ್ಟಲೆ ಬರೆದ ಪತ್ರಿಕೆಗಳು ಬೆಟ್ಟದಜೀವ ಹಾಗು ಪುಟ್ಟಕ್ಕನ ಹೈವೇ ಬಗ್ಗೆ ಬೂತಕನ್ನಡಿಯಲ್ಲಿ ಹುಡುಕುವಷ್ಟು ಸಣ್ಣದಾಗಿ ಬರೆದಿರುತ್ತವೆ. ಕಲ್ಲರಳಿ ಹೂವಾಗಿ ಅಂತಾ ಒಂದು ಚಿತ್ರ ಬಂದಿತ್ತು ನೆನಪಿದೆಯೇ.. ಅದರ ಮೇಕಿಂಗ್ ಬಗ್ಗೆ ರಾಷ್ಟ್ರ ಪ್ರಶಸ್ತಿ ಜ್ಯೂರಿಗಳೇ ಹುಬ್ಬೇರಿಸಿದ್ದರು. ಆದರೆ ಇಲ್ಲಿ ಯಾರು ನೋಡಿದರು. ಮೂರೇ ದಿನ ಓಡಿದ್ದು. ಎಲ್ಲಾ ಕ್ಷೇತ್ರಗಳು ಅಷ್ಟೇ.. ಹಣದೊಂದಿಗೆ ಬೆಳೆದರೆ ಮಾತ್ರ ಸೃಜನಶೀಲತೆ.. ಇಲ್ಲವಾದರೆ ಸಂಸ್ಕೃತಕ್ಕೆ ಆದ ಗತಿಯೇ ಕನ್ನಡಕ್ಕೂ ಆಗುತ್ತದೆ.

    ಶಿವಣ್ಣ ಜೀವ ಕಳೆದುಕೊಳ್ಳುತ್ತೇನೆ ಎಂಬುದರ ಬಗ್ಗೆ ಅಂಜುಬುರುಕತನ ಎಂದು ಅಪಹಾಸ್ಯ ಮಾಡಬೇಡಿ. ಶಿವಣ್ಣ ಈ ವ್ಯವಸ್ಥೆಯಲ್ಲಿ ಉಳಿದಿರುವುದು ಅವರ ಘನತೆ ಅಥವಾ ನಟನೆಗಿಂತಾ ಹೆಚ್ಚಾಗಿ, ಅವರಿಗಿರುವ ಗುಣಕ್ಕೆ.. ಡಬ್ಬಿಂಗ್ ಬಂದರೆ ಶಿವಣ್ಣನ ಆಸ್ತಿ ಏನೂ ದೋಚಿ ಹೋಗುವುದಿಲ್ಲ. ಆದರೆ ಶಿವಣ್ಣ ಜೀವ ಹೋದರೂ ಪರವಾಗಿಲ್ಲ ಎಂದಿರುವುದು ಹೆದರಿ ಹೋಗಿರುವ ನಮ್ಮಂಥಾ ಹಸಿದ ತಂತ್ರಜ್ಞರಿಗೆ ಧೈರ್ಯ ಕೊಡಲು.. ಅವರ ಕಂಪನಿಗಳಿಂದ ಎಷ್ಟು ಜನರ ಸಂಸಾರ ಸಾಗಿದೆ. ಅವರ ಕಾರ್ಮಿಕರ ಪರವಾಗಿ ಜೀವ ಕೊಡಲು ಸಿದ್ಧನಿದ್ದೇನೆ ಎಂದು ಅವರು ಹೇಳಿರುವುದು. ಕಾವೇರಿ ನೀರೀಗೋ , ರೈತರ ಆತ್ಮಹತ್ಯೆಗೋ ಹೋರಾಡಿ ಎನ್ನುತ್ತೀರಾ.. ಸಮಯ ಬಂದಾಗ ಹೋರಾಡುತ್ತೇವೆ.. ಮುಂದೆಯೂ ಹೋರಾಡೋಣ ಅದಕ್ಕೇನು.. ಹೊಟ್ಟೆ ತುಂಬಲಿ ಮೊದಲು..

    ಮಾತು ಮಾತಿಗೂ ಅಣ್ಣಾವ್ರನ್ನ ಎಳಿಯಬೇಡಿ ಎನ್ನುತ್ತೀರಾ. ಇನ್ಯಾರನ್ನ ನೆನೆಸಿಕೊಳ್ಳಲಿ..? ಎಲ್ಲಾರೂ ಹಾಗೆಯೇ, ನೀವು ಕುವೆಂಪು-ಬಸವಣ್ಣನನ್ನು ನೆನೆಸಿಕೊಳ್ಳುವುದಿಲ್ಲವೇ .. ಹಾಗೆಯೇ ನಾವು ಅಣ್ಣಾವ್ರನ್ನ ಆಶಯಗಳನ್ನ ನೆನೆಸಿಕೊಳ್ಳುತ್ತೇವೆ. ದಯವಿಟ್ಟು ನಮ್ಮ ಅತ್ತೆ-ಸೊಸೆಯರ ಕತೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಲಹೆ ಕೊಡಿ.. ಡಬ್ಬಿಂಗ್ ಸಧ್ಯಕ್ಕೆ ಬೇಡಾ.. ಆಮೇಲೆ ಮರಾಠಿ-ಬಿಹಾರಿಗಳೇ ಇಲ್ಲೂ ತುಂಬಿಹೋಗುತ್ತಾರೆ. ಸಾಧ್ಯವಾದರೆ ನಿಮ್ಮ ಪತ್ರಿಕೆಗಳಲ್ಲಿ ಒಂದೆರಡು ಜಾಹಿರಾತನ್ನು ಹಾಕಿಸಿ, ನಿಮ್ಮ ಗೆಳೆಯರಿಗೂ ತಿಳಿಸಿ.

    ಬೇರೇ ಭಾಷೆಯಲ್ಲಿ ಬರುವೆ ಅಮೋಘ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡುವುದು ನಿಮ್ಮ ಬಯಕೆ ಆಗಿದ್ದರೆ.. ನಮಗೇ ಸ್ವಲ್ಪ ತಿಳಿ ಹೇಳಿ ಉತ್ತೇಜಿಸಿ.. ನಾವೇ ಮಾಡುತ್ತೇವೆ. ’ಚಿಗುರಿದ ಕನಸು’, ’ಭೂಮಿಗೀತ’ ಹಾಗು ’ಮಾಯಾಮೃಗ’, ’ಸಾಧನೆ’ ಮಾಡಿದ್ದವರು ನಾವು.. ಇನ್ನು ಮುಂದೆ ಯಾರು ನೋಡುವುದಿಲ್ಲ ಎಂದು ತಿಳಿದು ಸುಮ್ಮನಾಗಿದ್ದೇವೆ. ಮತ್ತೆ ನೋಡುತ್ತಾರೆ ಎಂದಾದರೆ ಮಾಡೋಣ.. ನಮಗೇ ಸ್ವಲ್ಪ ಸಹಾಯ ಮಾಡಿ..

    ಇಷ್ಟೆಲ್ಲಾ ಆದಮೇಲೂ ನಿಮಗೆ ಡಬ್ಬಿಂಗ್ ಬೇಕೇ ಬೇಕು ಅನ್ನುವುದಾದರೆ, ನಾವು ನಿಮ್ಮ ಜೊತೆಯಿದ್ದೇವೆ, ಊಟ ಕೊಡಿಸಿ ಸಾಕು ಬರುತ್ತೇವೆ. ಬದಲಾವಣೆ ಜಗದ ನಿಯಮ. ಡಬ್ಬಿಂಗ್ ಜಾರಿಗೆ ಬರುವಷ್ಟರಲ್ಲಿ ಮೂರು ನಾಕು ತಿಂಗಳ ಮನೆ ಬಾಡಿಗೆ ಸಂಪಾದಿಸಿಬಿಟ್ಟರೆ ಸಾಕು ಅನಿಸುತಿದೆ ಯಾಕೋ ಇಂದು..

    ಮತ್ತೆ ಸಿಗೋಣ. ನಿದ್ದೆ ಬರುತ್ತಿದೆ ಮಲಗುತ್ತೇನೆ. ಈ ಹಾಳು ಲೈಟ್ ಹುಡುಗರ ಗೊರಕೆ ಬೇರೆ.. ನಿದ್ದೆಯೇ ಬರುವುದಿಲ್ಲ..

    Reply
    1. ರಾಜು

      ವಿಜಯ್ ಹನಕೆರೆಯವರೆ ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅವರ ಪ್ರತಿಸವಾಲನ್ನು ಡಬ್ಬಿಂಗ್ ಎಂಬ ಭೂತಕ್ಕೆ ನೀವು ಕೊಟ್ಟ ಚಿಕಿತ್ಸೆ ಸರಿಯಾಗಿದೆ. ಡಬ್ಬಿಂಗ್ ಬೇಕು ಎನ್ನುವವರು ಈ ಲೇಖನ ಮಾಲೆಯನ್ನು ಓದಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿ…..

      Reply
  3. shyam shetty

    @Vijay:
    ಡಬ್ಬ ಕನ್ನಡ ಫಿಲಂ ಮಾಡಿ ಕನ್ನಡ ಮಾನ ಹರಾಜು ಮಾಡೋ ಬದಲು ಬೇರೆ ಯಾವುದಾದರು kelsa ನೋಡ್ಕೊಳ್ಳಿ ಹೊಟ್ಟೆ ಪಾಡಿಗೆ Karnataka vishala vagide. ಫಿಲಂ ಒಂದು passion . ಒಬ್ಬ ಫಿಲಂ ನಾಯಕ ಅಂದ್ರೆ ಅವನನ್ನ ಎಸ್ಟೋ ಜನ ಅನುಕರಿಸುತ್ತಾರೆ.ಅದೇ ನಮ್ಮ ಕನ್ನಡ ದಲ್ಲಿ ಒಬ್ಬನೇ ಒಬ್ಬ ಅಂತ ಅನುಕರಿಸೋ ನಾಯಕ ನ ಹೆಸರು ಹೇಳಿ ನೋಡೋಣ? ಟೀವಿ anchor ನಿಂದ ಹಿಡಿದು ಲೈಟ್ ಬಾಯ್ ತನಕ ಎಲ್ಲರು ಹೀರೋ ಗಳೇ, ಸಾಲಾಗಿ ನಿಲ್ಲಿಸಿದರೆ ಬನಶಂಕರಿ ಯಿಂದ ಕನಕಪುರ ತನಕ. ಆದ್ರೆ ಒಬ್ಬನೇ ಒಬ್ಬ talented ?

    Reply
  4. shyam shetty

    ನಮ್ಮ ಮೂಲಭೂತ ಸ್ವಾತಂತ್ರ್ಯ ನ ನಿಮ್ಮ ಹೊಟ್ಟೆ ಹಸಿವು ತಿರ್ಸೋಕೆ ಕಿತ್ತುಕೊಬೇಡಿ. ಕರ್ನಾಟಕ ವಿಶಾಲ ವಾಗಿದೆ. ಡಬ್ಬ ಕನ್ನಡ ಫಿಲಂ ಮಾಡಿ ಕನ್ನಡ ಮಾನ ಹರಾಜು ಮಾಡೋ ಬದಲು ಬೇರೆ ಯಾವುದಾದರು kelsa ನೋಡ್ಕೊಳ್ಳಿ ಹೊಟ್ಟೆ ಪಾಡಿಗೆ. ಫಿಲಂ ಒಂದು passion . ಒಬ್ಬ ಫಿಲಂ ನಾಯಕ ಅಂದ್ರೆ ಅವನನ್ನ ಎಸ್ಟೋ ಜನ ಅನುಕರಿಸುತ್ತಾರೆ.ಅದೇ ನಮ್ಮ ಕನ್ನಡ ದಲ್ಲಿ ಒಬ್ಬನೇ ಒಬ್ಬ ಅಂತ ಅನುಕರಿಸೋ ನಾಯಕ ನ ಹೆಸರು ಹೇಳಿ ನೋಡೋಣ? ಟೀವಿ anchor ನಿಂದ ಹಿಡಿದು ಲೈಟ್ ಬಾಯ್ ತನಕ ಎಲ್ಲರು ಹೀರೋ ಗಳೇ, ಸಾಲಾಗಿ ನಿಲ್ಲಿಸಿದರೆ ಬನಶಂಕರಿ ಯಿಂದ ಕನಕಪುರ ತನಕ. ಆದ್ರೆ ಒಬ್ಬನೇ ಒಬ್ಬ talented ?

    Reply
  5. ದಿನೇಶ್ ಕುಮಾರ್ ಎಸ್.ಸಿ

    ಪ್ರಿಯ ವಿಜಯ್ ಹನಕೆರೆ,

    ನೇರವಾಗಿ ವಿಷಯಕ್ಕೆ ಬರ‍್ತೀನಿ. ಈ ಚಾನಲ್‌ಗಳ ಟಿಆರ್‌ಪಿ-ಜಿಆರ್‌ಪಿ ಬಗ್ಗೆ ನಂಗೂ ಅಲ್ಪಸ್ವಲ್ಪ ಗೊತ್ತು. ಬೆಂಗಳೂರಲ್ಲಿ ನಂ.೧ ಚಾನಲ್ ಯಾವುದು ಗೊತ್ತಾ? ನಮ್ಮ ಉದಯ ಟಿವಿನೂ ಅಲ್ಲ, ಸುವರ್ಣನೂ ಅಲ್ಲ, ಈ ಟಿವಿ-ಜಿಟಿವಿಗಳೂ ಅಲ್ಲ. ನಂ.೧ ಸ್ಥಾನದಲ್ಲಿ ಇರೋದು ಸನ್ ಟಿವಿ. ಇದನ್ನು ಹೇಳೋದಕ್ಕೆ ಸಂಕಟ ಆಗುತ್ತೆ ಕಣ್ರೀ. ಹಾಗಂತ ನಾನು ತಮಿಳು ಭಾಷೆಯ ದ್ವೇಷಿನೂ ಅಲ್ಲ, ತಮಿಳು ಚಾನಲ್ ವಿರೋಧಿನೂ ಅಲ್ಲ. ಬರೀ ತಮಿಳರಷ್ಟೇ ಸನ್ ಟಿವಿ ನೋಡ್ತಾ ಇದ್ದಿದ್ದರೆ ಅದು ನಂ.೧ ಆಗೋದಕ್ಕೆ ಸಾಧ್ಯನೇ ಇರಲಿಲ್ಲ. ಕನ್ನಡಿಗರು ನೋಡ್ತಾರೆ. ಅದರಿಂದಾಗಿಯೇ ಅದು ನಂ.೧ ಆಗಿದೆ.

    ಸನ್ ಟಿವಿ ಮೊದಲ ಸ್ಥಾನಕ್ಕೆ ಬರೋದಕ್ಕೆ ಬೆಂಗಳೂರಲ್ಲಿ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರೋದೇ ಕಾರಣ ಅಂತ ನೀವು ಉಡಾಫೆಯಾಗಿ ಉತ್ತರ ಕೊಟ್ಟುಬಿಡಬಹುದು. ಆದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಸಾರವಿರುವ ಪತ್ರಿಕೆಗಳ ರೇಟಿಂಗು ತೆಗೆದುಕೊಳ್ಳಿ.. ಅಲ್ಲಿ ತಮಿಳು ಪತ್ರಿಕೆ ಯಾವತ್ತಿಗೂ ನಂ.೫ರೊಳಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಚಾನಲ್ ವಿಷಯದಲ್ಲಿ ಯಾಕೆ ಹೀಗೆ?

    ಕರ್ನಾಟಕದಲ್ಲಿ ಸನ್ ಟಿವಿಯೋ, ಜೆಮಿನಿ ಟಿವಿಯೋ ಪ್ರವರ್ಧಮಾನಕ್ಕೆ ಬಂದರೆ, ಅದನ್ನು ಕನ್ನಡಿಗರೂ ನೋಡುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಸಿನಿಮಾ-ಟಿವಿ ಇಂಡಸ್ಟ್ರಿಯವರಿಗೇನು ಬೇಜಾರಾಗೋದಿಲ್ಲ. ತಮಿಳಿನ ೩ ಸಿನಿಮಾ ನೋಡಿ ಮೆಚ್ಚಿಕೊಂಡೆ, ಮಗಧೀರ ಕರ್ನಾಟಕದಲ್ಲಿ ಯಶಸ್ವಿಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ನಿಮ್ಮ ಸಿನಿಮಾನಟರುಗಳೇ ಬಹಿರಂಗ ಹೇಳಿಕೆ ಕೊಡುತ್ತಾರೆ. ಬೇರೇನೂ ಬೇಡ, ನಿಮ್ಮ ಸಿನಿಮಾ ತಯಾರಾಗುವ ಸೆಟ್ ಗಳಲ್ಲೂ ಕನ್ನಡಕ್ಕಿಂತ ಹೆಚ್ಚು ತಮಿಳೇ ಕೇಳಿಸ್ತಾ ಇರುತ್ತೆ. ಯಾವುದಕ್ಕೂ ನಿಮಗೆ ಆತ್ಮಾಭಿಮಾನ ಕೆರಳೋದೇ ಇಲ್ಲ.

    ಒಂದು ಧಾರಾವಾಹಿಯನ್ನಾಗಲೀ, ಚಿತ್ರವನ್ನಾಗಲೀ ನಿರ್ದೇಶನ/ನಿರ್ಮಾಣ ಮಾಡದೇ ಇರುವ ನೀವು…. ಎಂದು ನನಗೆ ಸಂಬೋಧಿಸಿದ್ದೀರಿ. ನಾನು ಒಬ್ಬ ವೀಕ್ಷಕನಾಗಿ ನನಗೇನು ಬೇಕು ಎಂದು ಕೇಳುವ ಹಕ್ಕು ಇಲ್ಲವೇ? ಭತ್ತ ಬೆಳೆಯಲಾಗದವನು ಅನ್ನ ತಿನ್ನಲೇಬಾರದಾ? ನಾನೊಬ್ಬ ಗ್ರಾಹಕ, ನನಗೆ ಬೇಕಾದ್ದನ್ನೇ ನಾನು ಕೇಳುತ್ತೇನೆ. ಇದು ಸಾಮಾನ್ಯ ಜ್ಞಾನ.

    ಇನ್ನು ನೀವು ಹಸಿವಿನ ವಿಷಯ ಮಾತಾಡಿದ್ದೀರಿ. ಹಸಿವು ಏನೆಂಬುದು ನನಗೂ ಗೊತ್ತು. ಈ ನೆಲದ ರೈತನ, ಕೂಲಿ ಕಾರ್ಮಿಕರ, ದಲಿತರ, ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ. ನಮ್ಮ ರೈತನನ್ನು ಬಲವಂತವಾಗಿ, ಅವನಿಗೆ ಗೊತ್ತೇ ಇಲ್ಲದಂತೆ ಜಾಗತೀಕರಣದ ಸ್ಪರ್ಧೆಗೆ ದೂಡಲಾಯಿತು. ಮೂಡಿಗೆರೆಯ ಸಣ್ಣ ಕಾಫಿ ಬೆಳೆಗಾರ ಮತ್ತು ಅವನ ಬಳಿ ಕೂಲಿ ಮಾಡುವವರು ಬ್ರೆಜಿಲ್ ನ ದೊಡ್ಡ ಕಾಫಿ ಬೆಳೆಗಾರರೊಂದಿಗೆ ಅವರಿಗೇ ಗೊತ್ತಿಲ್ಲದಂತೆ ಸ್ಪರ್ಧೆ ಮಾಡಬೇಕಾಯಿತು. ಅರಸೀಕೆರೆಯ ತೆಂಗು ಬೆಳೆಗಾರ ಶ್ರೀಲಂಕಾದ ಬೆಳೆಗಾರನೊಂದಿಗೆ ಸ್ಪರ್ಧೆ ಮಾಡಿದ. ಆದರೆ ಯಾವತ್ತೂ ಮಾರುಕಟ್ಟೆಗೆ ನನ್ನ ಕಾಫಿಯಷ್ಟೇ ಬರಬೇಕು, ಬ್ರೆಜಿಲ್ ನ ಕಾಫಿ ಬರಕೂಡದು, ಬಂದರೆ ನಾನು ಅದನ್ನು ನನ್ನ ತೋಳ್ಬಲದಿಂದ ತಡೆಯುತ್ತೇನೆ ಎಂದು ರೈತ ಹೇಳಲಿಲ್ಲ. ಯಾಕೆಂದರೆ ಅವನಿಗೆ ಸಿನಿಮಾ ನಟರಿಗೆ ಇರುವ ಫ್ಯಾನ್ ಫಾಲೋಯಿಂಗ್ ಇಲ್ಲ. ದುಡ್ಡು ಮೊದಲೇ ಇಲ್ಲ, ತೊಡೆತಟ್ಟಿ ಯುದ್ಧಕ್ಕೆ ನಿಂತರೆ ಅವತ್ತಿನ ಕೂಳೂ ಇಲ್ಲದಂತಾಗುತ್ತದೆ ಎಂಬ ಭೀತಿ.

    ನನ್ನ ತೇಜಸ್ವಿ ಡಾಕ್ಯುಮೆಂಟರಿ ಸರಣಿ ೮ ಕಂತುಗಳಲ್ಲಿ ಪ್ರಸಾರವಾಯಿತು. ಇನ್ನಷ್ಟು ಕಂತು ಮಾಡಬಹುದಿತ್ತು ನಿಜ. ಒಂದು ವೇಳೆ ಇದು ಯಶಸ್ವಿಯಾಗಿಲ್ಲ ಎಂದು ನಿಮಗನ್ನಿಸಿದ್ದರೆ, ಅದನ್ನು ಜನರು ಹೆಚ್ಚು ನೋಡಿಲ್ಲ ಎಂದನಿಸಿದ್ದರೆ ಅದಕ್ಕೆ ನಾನೇ ಹೊಣೆ. ಜನರನ್ನು ಹೊಣೆಯಾಗಿಸುವುದು ಸರಿಯಲ್ಲ. ಚಿಗುರಿದ ಕನಸು, ಕಲ್ಲರಳಿ ಹೂವಾಗಿ ಸಿನಿಮಾಗಳು ವ್ಯಾವಹಾರಿಕವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಬೇರೆಯದೇ ತೆರನಾದ ಆತ್ಮಶೋಧನೆ ಆಗಬೇಕು. ನೋಡುಗರ ಅಭಿರುಚಿಯನ್ನು ಕೆಡಿಸಿದವರು ನಾವು. ಅದಕ್ಕೆ ಜನರನ್ನು ದೂರಿ ಪ್ರಯೋಜನವೂ ಇಲ್ಲ. ಜನರು ಏನನ್ನು ಬಯಸುತ್ತಾರೋ ಅದನ್ನು ಕೊಡುತ್ತೇವೆ ಎಂಬುದು ಯಾವುದೇ ಸಮೂಹ ಮಾಧ್ಯಮದ ನಿಲುವಾಗಬಾರದು. ಜನರಿಗೆ ಏನು ಅಗತ್ಯವಿದೆಯೋ ಅದನ್ನು ಕೊಡಬೇಕು. ನಾವು ಅಭಿರುಚಿಯನ್ನು ಬೆಳೆಸಲಿಲ್ಲ. ಅದರ ಫಲವನ್ನು ಈಗ ಉಣ್ಣುತ್ತಿದ್ದೇವೆ, ಅಷ್ಟೆ.

    ವಿಜಯ್, ಕನ್ನಡ ನಿಮ್ಮ ಸ್ಟ್ರಾಟಜಿ ಅಂತ ಹೇಳಿದ್ದೀರಿ. ಈ ಥರದ ಮಾತುಗಳನ್ನು ಆಡುವ ಮುನ್ನ ಹತ್ತು ಸಲ ಯೋಚನೆ ಮಾಡಿ. ಕನ್ನಡ ನಮ್ಮ ಬದುಕು ಕಣ್ರೀ, ನಮ್ಮ ಸಂಸ್ಕೃತಿ, ಅದು ನಮ್ಮ ಭಾವ. ಕನ್ನಡವನ್ನು ಸ್ಟ್ರಾಟಜಿ ಮಾಡಿಕೊಳ್ಳುವಷ್ಟು ಹರಾಮಿಕೋರತನ ನನಗಂತೂ ಇಲ್ಲ. ನೀವು ಮಣಿಪುರಿಗಳ ಬಗ್ಗೆ ಯಾಕೆ ಬರೆದಿಲ್ಲ ಅಂತ ಕೇಳ್ತಾ ಇದ್ದೀರಿ. ಕರವೇ ನಲ್ನುಡಿಯಲ್ಲೇ ನಾನು ಮಣಿಪುರಿಗಳ ಕುರಿತು ಸುದೀರ್ಘ ಲೇಖನ ಬರೆದಿದ್ದೇನೆ. ಬೇಕಿದ್ದರೆ ಆ ಸಂಚಿಕೆ ನಿಮಗೂ ಕಳಿಸ್ತೇನೆ. ಕನ್ನಡವನ್ನು ಪ್ರೀತಿಸುವುದು ಅಂದರೆ ಇತರ ಭಾಷೆಗಳನ್ನು ದ್ವೇಷಿಸುವುದು ಎಂದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆ, ರಾಜ್ಯಗಳು ಸಮಾನವಾದ ಅಧಿಕಾರ, ಹಕ್ಕು ಮತ್ತು ಗೌರವವನ್ನು ಪಡೆಯಬೇಕು ಎಂಬುದಷ್ಟೇ ನಮ್ಮ ನಿಲುವು.

    ನಿಮಗೆ ಐದು ಸಾವಿರ ಮಂದಿ ಕಾರ್ಮಿಕರ ಹೊಟ್ಟೆ ಹಸಿವಿನ ಚಿಂತೆ. ನನಗೆ ಆರು ಕೋಟಿ ಕನ್ನಡಿಗರ ಜ್ಞಾನದ ಹಸಿವಿನ ಚಿಂತೆ. ನಮ್ಮ ಮಕ್ಕಳಿಗೆ ಡಿಸ್ಕವರಿ, ಅನಿಮಲ್ ಪ್ಲಾನೆಟ್ ಇತ್ಯಾದಿಗಳೆಲ್ಲವೂ ಕನ್ನಡದಲ್ಲೇ ಸಿಗುವಂತಾಗಬೇಕು, ತಮಿಳಿಗರಿಗೆ ಸಿಕ್ಕ ಹಾಗೆ. ಅದಕ್ಕೆ ನಿಮ್ಮ ಸಿನಿಮಾ ಇಂಡಸ್ಟ್ರಿಯೇ ದೊಡ್ಡ ಅಡ್ಡಿ, ನಿಮ್ಮ ಹಸಿವೇ ಅಡ್ಡಿ. ಕನ್ನಡ ಮತ್ತು ಕನ್ನಡ ಸಿನಿಮಾ ಎಂಬ ಎರಡು ಆಯ್ಕೆಗಳು ನನ್ನ ಮುಂದಿದ್ದರೆ ನಾನು ಕನ್ನಡವನ್ನೇ ಆಯ್ದುಕೊಳ್ಳುತ್ತೇನೆ. ಕನ್ನಡ ಸಿನಿಮಾಗೆ ನೂರು ವರ್ಷಗಳ ಇತಿಹಾಸವೂ ಇಲ್ಲ, ಆದರೆ ಕನ್ನಡಕ್ಕೆ, ಕನ್ನಡ ಸಂಸ್ಕೃತಿಗೆ ೨೦೦೦ ವರ್ಷಗಳ ಇತಿಹಾಸವಿದೆ. ಸಂಸ್ಕೃತಿಯ ಬಗ್ಗೆ ಮಾತನಾಡುವವರಿಗೆ ಈ ವಿವೇಕ ಇದ್ದರೆ ಒಳ್ಳೆಯದು.

    ಈಗ ಹೇಳಿ ವಿಜಯ್, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಮಿಂಡನ ಚಿಂತೆ ಅನ್ನೋ ಗಾದೆ ನಿಮಗೇ ಹೆಚ್ಚು ಅನ್ವಯವಾಗುತ್ತೆ ಅಲ್ವಾ? (ಕ್ಷಮಿಸಿ ಈ ಥರದ ಗಾದೆಗಳನ್ನು ನಾನು ನನ್ನ ಬರೆಹದಲ್ಲಿ ಬಳಸೋದಿಲ್ಲ. ನೀವು ಹೇಳಿರೋದ್ರಿಂದ, ಮತ್ತು ಅದು ನಿಮಗೇ ಹೆಚ್ಚು ಅನ್ವಯಿಸಿದ್ದರಿಂದ ಈ ಪ್ರಶ್ನೆ ಕೇಳಬೇಕಾಯಿತು.

    ಪ್ರೀತಿ ಇರಲಿ
    ನಮಸ್ಕಾರಗಳು.

    Reply
    1. guheshwara

      yaar , I think you are too prejudiced against particular entity ( u know what : ) ).In that case come out direct or out perform them ,or get the thing done through court .don’t simply wage proxy war Every one knows waht u are against .If it is only dubbing issue , why this collective voice supporting it has not surfaced when vishnuvardhan was doing series of remakes that too flops ?
      look into yourself .and be clear or dubb an english block buster and make money .nobody can stop that at it is perfectly legal.It is not just dubbing you are concerned .It is the your eye sore that is bothering you .

      Grow up ….

      Reply
      1. ದಿನೇಶ್ ಕುಮಾರ್ ಎಸ್.ಸಿ

        ಗುಹೇಶ್ವರಾ,
        ಏನನ್ನು ಬರೆದಿದ್ದೇನೋ ಅದರ ಬಗ್ಗೆ ಮಾತಾಡುವಂತವರಾಗಿ. ಪೂರ್ವಾಗ್ರಹಗಳು ನನಗಿಲ್ಲ. ನಿಮಗೆ ಏನು ಕಾಣಿಸ್ತೋ ಅದು ನನಗೆ ಅಲ್ಲಮಪ್ರಭುಗಳ ಮೇಲಾಣೆಗೂ ಗೊತ್ತಿಲ್ಲ. ನನಗೆ ಅನಿಸಿದ್ದನ್ನು ನಾನು ನೇರವಾಗೇ ಹೇಳಿ ಅಭ್ಯಾಸ. ಹೇಳಿದ್ದೇನೆ. ಡಬ್ಬಿಂಗ್ ಇರಬೇಕು ಅನ್ನೋದು ನನ್ನ ಇಂದಿನ ನಿಲುವೇನೂ ಅಲ್ಲ. ವಿಷ್ಣುವರ್ಧನ ಅವರು ಸಾಲುಸಾಲಾಗಿ ಮಾಡಿದ ರೀಮೇಕ್ ಸಿನಿಮಾಗಳಲ್ಲಿ ಮೀಸೆ, ತಲೆಗೆ ಕಟ್ಟುವ ಮುಂಡಾಸಿನ ಸಮೇತ ಎಲ್ಲವನ್ನೂ ರೀಮೇಕು ಮಾಡಿದ್ದರ ಕುರಿತು ಅವತ್ತಿಗೂ ಬೇಸರವಿತ್ತು, ಇವತ್ತಿಗೂ ಇದೆ.
        ನಾನು ಸಿನಿಮಾದ ವೀಕ್ಷಕನಾಗಿ ಮಾತನಾಡಿದ್ದೇನೆ. ನಾನೊಬ್ಬ ಗ್ರಾಹಕನಷ್ಟೆ. ಇಂಗ್ಲಿಷ್ ಸಿನಿಮಾ ಡಬ್ ಮಾಡಿ ಹಣ ಮಾಡುವ ನಿಮ್ಮ ಪುಗಸಟ್ಟೆ ಉಪದೇಶಕ್ಕೆ ನನ್ನ ಬಳಿ ಕವಡೆಕಾಸಿನ ಕಿಮ್ಮತ್ತೂ ಇಲ್ಲ. ಯಾಕೆಂದರೆ ಅದು ನನ್ನ ಕ್ಷೇತ್ರವೂ ಅಲ್ಲ, ಆಸಕ್ತಿಯೂ ಅಲ್ಲ. ನನಗೆ ಜ್ಞಾನ ಮತ್ತು ಮನರಂಜನೆ ನನ್ನ ಭಾಷೆಯಲ್ಲಿಯೇ ಬೇಕು ಅನ್ನೋದೊಂದೇ ನನ್ನ ಬೇಡಿಕೆ.
        ಬರೆದಿರೋದನ್ನಷ್ಟೇ ಅರ್ಥ ಮಾಡಿಕೊಳ್ಳಿ ಗುಹೇಶ್ವರಾ, ಲಿಂಗ ಮೆಚ್ಚಿ ಅಹುದಹುದೆನ್ನಬಹುದು. ಆಮೇಲೆ ಇನ್ನೊಬ್ಬರಿಗೆ Grow up… ಎಂಬ ಉಪದೇಶ ಮಾಡಿಕೊಳ್ಳಿ.

        Reply
        1. guheshwara

          by the way for your knowledge i am also one who support dubbing to kannada and outside kannada .pl. mail me at this id guheshwara@gmail.com we will discuss .Let us not get emotional .Your main article did not have normal tone for which i had to reply that way. I am expecting your mail .Let some thing worthy come out of this .pl. help me grow up .: -).AT least give me your mail and give me a chance to grow up .I am eagerly waiting for your replay .I respect you and I mean it .No question of hiding .

          Reply
      2. ಜ್ಞಾನೇಂದ್ರ ಕುಮಾರ್

        ಇನ್ನೊಬ್ಬರ ನಿಂದಿಸುವ ಮುನ್ನ
        ಗುಹೆಯಿಂದ ಒಮ್ಮೆ ಹೊರಗೆ ಬಂದು ಚೀರೋ ಗುಹೇಶ್ವರ
        ಬಯಲು ಬೆತ್ತಲಾಗದೆ, ಬೆತ್ತಲು ಬಯಲಾಗದೆ
        ಅರಿವಿನ ಋಣ ತೀರದು ಕಾಣಾ
        ಗುಹೆ ಹೊಕ್ಕು ಗುಡುಗಿದರೆ ಗುಹೆಯೂ ಅಲುಗಾಡದು
        ತಮ್ಮ ನಿಜವದನವ ತೋರಿ ಕಾದಾಡಿದರೆ
        ಆ ಲಿಂಗಜಂಗಮರೆಲ್ಲರೂ ಮೈದಳೆದು ಕಾಣುವರು
        ಸೊಕ್ಕಿನ ಮಾತಾಡುವ ಮುನ್ನ ಉಕ್ಕಿನ ಮೂಳೆಹಂದರವ ತೋರದೊಡೆ
        ಭಿಕ್ಷೆಗೂ ಗತಿಯಿಲ್ಲದಂತಾಗುವುದು ಕಾಣಾ ಗುಹೇಶ್ವರಾ….

        Reply
        1. guheshwara

          Dear gnaanendra kumar ., I am not hiding Nor I am here to quarrel .Let us have cordial discussion .Provide your mail , or mail me at guheshwara@gmail.com .Don’t be so excited .I am one who believe the ones which prevails is truth and knowledge .If we can do that through discussion , I am ready for that . I dont understand why are u so much enraged .It is upto you now .Let us not quarrel .bye .

          Reply
        2. guheshwara

          ಕೂಪ ಮಂದೂಕದ ಕೋಪ
          ಜಗತ್ತ ತಿಳಿದಿಹೆ ಎಂಬ ಅಜ್ಞಾನ
          ತನ್ನ ಕೂಪವನ್ನೇ ತಿಳಿಯದ
          ಅಸಹಾಯಕತೆ , ಅದರಿಂದ ಹೊರಟ ವಟ ವಟ , ಚೀರಾಟ .
          ಅದಕ್ಕೆ ಕೊಟ್ಟು ಕೊಂಡ ಹೆಸರೇ ಹೋರಾಟ .

          ಇಂತವರೊಂದಿಗೆ ಸಂವಾದ ವ್ಯರ್ಥ .
          ವಿವಾದವೊಂದೇ ಇಂತವರ ಪುರುಷಾರ್ಥ .

          ಸಾಧಿಸಲಿ . . . . . ಅನವರತ .

          Reply
  6. vinay

    ಶಿವಣ್ಣನ ಈ ಹಾರಾಟ, ಚೀರಾಟ ಎಲ್ಲ ತೆಲುಗು ಟಿವಿ visuals ಕದ್ದು ತೆಲುಗು ಚಿತ್ರಗಳ ಪ್ರಚಾರ ಮಾಡುತಿರುವ ಕನ್ನಡ ನ್ಯೂಸ್ ಚಾನೆಲ್ ಗಳ ಮೇಲಿರಲಿ. ಹಾಗೆ ತಮ್ಮ ಚಿತ್ರಗಳಲ್ಲಿ ನಟಿಸುವ ಪರಭಾಷಾ ನಟ/ನಟಿ, ತಂತ್ರಜ್ನರ ವಿರುದ್ದ ಹೋರಾಡಲಿ. ಅವರ ಹೊಟ್ಟೆ ಮೇಲೆ ಕಲ್ಲು ಬಿದ್ದಾಗ ಇಲ್ಲದ ಚಿಂತೆ ನಿಮ್ಮ ಹೊಟ್ಟೆ ಮೇಲೆ ಬಿದ್ದಾಗ ಯಾಕೆ. ಶಿವಣ್ಣನ ಮನೆಯವರಿಗೆಲ್ಲ ಪ್ರಾಯಶ ತಮಿಳ್ ಬರುತ್ತೆ ಅದಕ್ಕೆ ತಮಿಳು ಸಿನಿಮಾ ನೋಡುತ್ತಾರೆ ಆದರೆ ಬೇರೆಯವರ ಗತಿಯೇನು.ನಾವೆಲ್ಲ ತಮಿಳು, ತೆಲುಗು ಕಲಿಯಬೇಕೆನು?

    Reply
  7. vageesh kumar g a

    ವಿಜಯ ಹನಕೆರೆ ಅವರ ಬರಹಕ್ಕೆ ನನ್ನ ಉತ್ತರ. ಸಿನಿಮಾ ಒಂದರಿಂದಲೇ ಹೊಟ್ಟೆ ಹೊರೆದುಕೊಳ್ಳಬೇಕು. ಆದ್ದರಿಂದ ಡಬ್ಬಿಂಗ್ ಬೇಡ ಅನ್ನುತ್ತಿದ್ದೀರಲ್ಲಾ, ನಾನು ಪದೇ ಪದೇ ಫೇಸ್ ಬುಕ್ ನಲ್ಲಿ ಹಾಕಿದ್ದೀನಿ. ಚಿಂಟು ಟಿವಿಯಲ್ಲಿ ಡಬ್ಬಿಂಗ್ ಬರುತ್ತಿದೆ ಅದಕ್ಕೆ ನೀವು ಯಾಕೆ ಗಮನ ಹರಿಸುತ್ತಿಲ್ಲ. ಜಾಕಿಜಾನ್, ತುಂಟಿ ಸೋಫಿ ಎಲ್ಲವೂ ಡಬ್ಬಿಂಗ್ ಗಳೇ. ತರ್ಕ ಮಾಡಿದ್ರೆ ಅದು ಡಬ್ಬಿಂಗ್ ಅಲ್ಲ ಅಂತ ಟೆಕ್ನಿಕಲ್ ಆಗಿ ನೀವು ಹೇಳಬಹುದು. ಮೊದಲು ಅದಕ್ಕೆ ಗಮನ ಕೊಡಿ. ಆಮೇಲೆ ಡಬ್ಬಿಂಗ್ ನಿಶೇಧ ಬೇಕು ಅಂತ ವಾದ ಮಾಡಿ.

    Reply

Leave a Reply

Your email address will not be published. Required fields are marked *