Daily Archives: April 26, 2012

ಮುಸಲ್ಮಾನ ಸ್ತ್ರೀಯರ ಗೆಳತಿ ಮತ್ತು ಸಮಾನತೆ ಬಯಸುವವರ ಒಡನಾಡಿಯ ಆತ್ಮಕಥನ

– ರವಿ ಕೃಷ್ಣಾರೆಡ್ಡಿ

ಬಹುಶಃ ಭಾರತದಲ್ಲಿ ಇಂದು ಮುಸ್ಲಿಮರಲ್ಲಿ, ಅದರಲ್ಲೂ ಅವರ ಹೆಣ್ಣುಮಕ್ಕಳಲ್ಲಿರುವಷ್ಟು ಅಸಮಾನತೆ, ನಿರುದ್ಯೋಗ, ಅನಕ್ಷರತೆ, ಅನ್ಯಾಯ, infant mortality, ಬೇರೊಂದು ಜನವರ್ಗದಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ಈ ಒಂದೊಂದು ಅನಿಷ್ಟಗಳೂ ಬೇರೆಬೇರೆ ವರ್ಗದ ಜನರಲ್ಲಿ ಇನ್ನೂ ತೀವ್ರವಾಗಿ ಇರಬಹುದು. ಆದರೆ ಮುಸಲ್ಮಾನರನ್ನೇ ಒಟ್ಟಾಗಿ ತೆಗೆದುಕೊಂಡರೆ ಇವರನ್ನು ಬಾಧಿಸುವಷ್ಟು ಸಂಕೀರ್ಣ ಸಮಸ್ಯೆಗಳು ಬೇರೊಬ್ಬರನ್ನು ಬಾಧಿಸವು ಎನ್ನಿಸುತ್ತದೆ.

ಕನ್ನಡದ ಒಬ್ಬ ಲೇಖಕಿಯೇ ಹೇಳುವಂತೆ ಇಸ್ಲಾಮಿನಲ್ಲಿ ಹೆಣ್ಣಿಗೂ ಅನೇಕ ಹಕ್ಕುಗಳಿವೆ. ಆದರೆ ಬ್ರಿಟಿಷರು ಪ್ರಥಮವಾಗಿ 1872ರಲ್ಲಿ ಮೊಹಮ್ಮಡನ್ ಕಾನೂನು ಜಾರಿಗೆ ತಂದಾಗ ಸರಿಯಾದ ನ್ಯಾಯಮನಸ್ಸಿನ ಮೌಲ್ವಿಗಳ ಅಭಿಪ್ರಾಯಗಳನ್ನು ಪದೆದುಕೊಳ್ಳದೆ ಮುಸಲ್ಮಾನ ಹೆಣ್ಣಿನ ಮದುವೆ ಮತ್ತು ವಿಚ್ಚೇದನಕ್ಕೆ ಸಂಬಂಧಪಟ್ಟಂತೆ ಕೆಲವು ಹಕ್ಕುಗಳನ್ನು ನಿರಾಕರಿಸಿ ಅನ್ಯಾಯ ಎಸಗಿದ್ದರು. ಗಂಡ ಎಂತಹ ಕ್ರೂರಿಯಾದರೂ ಹೆಂಡತಿಯಾದವಳು ಅವನೊಡನೆ ಬಾಳಲೇಬೇಕಾಗಿತ್ತು. ಮುಸಲ್ಮಾನ ಹೆಣ್ಣು ವೈವಾಹಿಕ ಬಂಧನದಿಂದ ಬಿಡುಗಡೆಗೊಳ್ಳಲು, ತಾನಾಗಿ ವಿಚ್ಚೇದನ ಪಡೆದುಕೊಳ್ಳಲು ಸಾಧ್ಯವೇ ಇರಲಿಲ್ಲ.

ಕಳೆದ ಶತಮಾನದ ಆದಿಯಲ್ಲಿ ಭಾರತದ ಎಲ್ಲಾ ಜಾತಿಜನಾಂಗಗಳಲ್ಲಿ ಬಾಲ್ಯವಿವಾಹ ನಡೆಯುತ್ತಿತ್ತು. ಕೇರಳದ ಕಾಸರಗೋಡಿನ ಬಳಿಯ ತಳಂಗೆರೆ ಎಂಬ ಹಳ್ಳಿಯಲ್ಲಿ ಮಮ್ಮುಂಇ ಎನ್ನುವರೊಬ್ಬರು ಹೆಂಚು ಮತ್ತಿತರ ವ್ಯಾಪಾರಗಳಿಂದ 1900ರ ಸುಮಾರಿನಲ್ಲಿ ಸಾಕಷ್ಟು ಶ್ರೀಮಂತರಾದರು. ಅವರಿಗೆ ನಾಲ್ವರು ತಂಗಿಯವರೂ ಓರ್ವ ತಮ್ಮನೂ ಇದ್ದ. ಜೈನಾಬಿ ಎನ್ನುವ ಹೆಣ್ಣುಮಗಳು ಮಮ್ಮುಂಇರವರ ಕೊನೆಯ ತಂಗಿ. 1915ರ ಸುಮಾರಿನಲ್ಲಿ, ಜೈನಾಬಿಗೆ ಎಂಟು ವರ್ಷವಿದ್ದಾಗ, ಆಕೆಯ ಅನುಮತಿಯನ್ನು ಕೇಳದೇ ಸಮೀಪದ ಮೊಗ್ರಾಲ್ ಪುತ್ತೂರು ಎನ್ನುವ ಹಳ್ಳಿಯ ಶ್ರೀಮಂತ ಮನೆತನದ ಹಸ್ಸನ್ ಕುಟ್ಟಿ ಬ್ಯಾರಿ ಎನ್ನುವವರಿಗೆ ನಿಕಾಹ್ ಮಾಡಿಕೊಡಲಾಯಿತು. ಇದು ಒಂದು ರೀತಿಯಲ್ಲಿ ಅರೆ ಮದುವೆ. ನಿಶ್ಚಿತಾರ್ಥದಂತಿರುತ್ತಿದ್ದ ಈ ನಿಕಾಹ್‌ನ ಎರಡು-ಮೂರು ವರ್ಷಗಳ ನಂತರ ಮದುವೆ ಅಗುತ್ತಿತ್ತು.

ಆದರೆ ಆ ನಿಜವಾದ ಮದುವೆ ಅಗುವುದಕ್ಕೆ ಮೊದಲೇ ಎರಡೂ ಕಡೆಯವರಿಗೆ ಬಹುಶಃ ವರದಕ್ಷಿಣೆಯ ವಿಚಾರಕ್ಕೆ ಮನಸ್ತಾಪ ಉಂಟಾಯಿತು. ಇದರಿಂದ ಬೇಸತ್ತ ಶ್ರೀಮಂತ ಮಮ್ಮುಂಇ ತನ್ನ ತಂಗಿ ಜೈನಾಬಿಗೆ ಹಸ್ಸನ್ ಕುಟ್ಟಿ ತಲಾಖ್ ನೀಡಬೇಕೆಂದು ಕೇಳಿದರು. ಗಂಡಿನ ಕಡೆಯವರು ಒಪ್ಪಲಿಲ್ಲ. ಮಮ್ಮುಂಇ ತಂಗಿಯ ಪರವಾಗಿ ನ್ಯಾಯಾಲಯಕ್ಕೆ ಹೋದರು. ಆಗಿನ 1872ರ ಮುಸ್ಮಿಮ್ ವ್ಯಕ್ತಿನಿಯಮ ಕಾನೂನಿನಲ್ಲಿ ಆಸ್ಪದ ಇಲ್ಲದಿದ್ದರೂ ಖುರಾನಿನ ವಾಕ್ಯಗಳಿಗೆ ಅನುಗುಣವಾಗಿ ವಿಚ್ಛೆದನ ದೊರಕಬೇಕೆಂದು ಅವರು ವಾದ ಮಂಡಿಸಿದರು. ಮುನ್ಸಿಫ್ ಕೋರ್ಟ್, ಸಬ್ ಕೋರ್ಟ್, ಕೊನೆಗೆ ಮದ್ರಾಸಿನ ಹೈಕೋರ್ಟ್‌ವರೆಗೂ ಮೊಕದ್ದಮೆ ಹೋಯಿತು. ಐದಾರು ವರ್ಷಗಳ ಕಾನೂನು ಹೋರಾಟದ ನಂತರ ಮದ್ರಾಸ್ ಹೈಕೋರ್ಟ್‌ನ ಇಂಗ್ಲಿಷ್ ಜಡ್ಜ್ ಮತ್ತು ಹಿಂದು ಜಡ್ಜ್ ಇದ್ದ ಪೀಠ 1928ರಲ್ಲಿ ಜೈನಾಬಿಗೆ ವಿಚ್ಛೇದನವನ್ನು ಮಂಜೂರು ಮಾಡಿತು.

ಇದಾದ ನಂತರ 1937ರಲ್ಲಿ ಬ್ರಿಟಿಷರು ಶರಿಯತ್ ಕಾನೂನನ್ನು ತಂದರು. ಅದಾದ ಎರಡೇ ವರ್ಷಗಳಿಗೆ, 1939ರಲ್ಲಿ ಆಗಿನ ಭಾರತದ ಸಂಸತ್ತು ಮುಸಲ್ಮಾನ ಮದುವೆ ಕಾನೂನಿಗೆ ತಿದ್ದುಪಡಿ ತಂದು ವಿಚ್ಚೇದನ ವಿಷಯಗಳಿಗೆ ಸಂಬಂಧಪಟ್ಟಂತೆ ಆಗಿನ ಕಾಲಕ್ಕೆ ಕ್ರಾಂತಿಕಾರಕ ಎನ್ನಬಹುದಾದ ಬದಲಾವಣೆಗಳನ್ನು ತಂದಿತು. ಹಸನ್ ಕುಟ್ಟಿ ಬ್ಯಾರಿ ಮತ್ತು ಜೈನಾಬಿ ಮೊಕದ್ದಮೆಯ ತೀರ್ಪಿನ ಆಧಾರದ ಮೇಲೆ ಮುಸಲ್ಮಾನ ಹೆಣ್ಣುಮಗಳೂ ವಿಚ್ಚೇದನವನ್ನು ಕೇಳಬಹುದು ಎನ್ನುವ ಹಕ್ಕನ್ನು ಆ ಕಾನೂನು ಕೊಟ್ಟಿತು. (ಅದರೆ ವಿಚ್ಛೇದನ ನೀಡುವ ಹಕ್ಕನ್ನು ಮಾತ್ರ ಕೊಡಲಿಲ್ಲ.)

ಅಂದ ಹಾಗೆ, ಇದಾದ ನಂತರ, ಹಸನ್ ಕುಟ್ಟಿ ಮತ್ತು ಜೈನಾಬಿ ಮೊಕದ್ದಮೆಯ ತೀರ್ಪು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳ ಇಸ್ಲಾಮ್ ಕಾನೂನುಗಳಲ್ಲಿಯೂ ಉಲ್ಲೇಖಗೊಂಡಿದೆ.

ನ್ಯಾಯಾಲಯದ ತೀರ್ಪು ಬರುವಷ್ಟರಲ್ಲಿ ಜೈನಾಬಿಗೆ ಸುಮಾರು ಹದಿನಾಲ್ಕು ವರ್ಷ ವಯಸ್ಸಾಗಿತ್ತು. ಮದುವೆಯ ವಯಸ್ಸು (ಆಗಿನ ಕಾಲಕ್ಕೆ) ಮೀರುತ್ತ ಬಂದಿತ್ತು. ವಿಚ್ಛೇದನ ಬೇರೆ ಆಗಿತ್ತು. ಸಾಕಷ್ಟು ಶ್ರೀಮಂತ ಕುಟುಂಬವಾಗಿದ್ದರಿಂದ ಸರಿಸಮಾನ ಅಂತಸ್ತಿನ ಜನರ ನಡುವೆ ಸಂಬಂಧ ಏರ್ಪಡುವುದು ಕಷ್ಟಸಾಧ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ದೂರದ ಸಂಬಂಧಿಕರ ವಯಸ್ಸಿಗೆ ಬಂದಿದ್ದ ಅಹಮದ್ ಎನ್ನುವ ಹುಡುಗನೊಬ್ಬ ಕಾನೂನು ಪದವಿ ಓದಲು ಬಯಸುತ್ತಿದ್ದ. ಆದರೆ ಮನೆಯ ಕಡೆ ಪರಿಸ್ಥಿತಿ ಆತನನ್ನು ಓದಿಸುವಷ್ಟು ಚೆನ್ನಾಗಿರಲಿಲ್ಲ. ಆತನನ್ನು ಓದಿಸುವ ಜವಾಬ್ದಾರಿ ಹೊತ್ತ ಮಮ್ಮುಂಇ ಆತನೊಡನೆ ತನ್ನ ತಂಗಿಗೆ ನಿಕಾಹ್ ಮಾಡಿದರು. ಆತನನ್ನು ನಾಲ್ಕು ವರ್ಷ ಮದ್ರಾಸಿನಲ್ಲಿ ಓದಿಸಿದರು. ಹುಡುಗ ಕಾನೂನು ಪದವಿಯ ಜೊತೆಗೆ ಮಹಮ್ಮದೀಯ ಕಾನೂನಿನಲ್ಲಿ ಚಿನ್ನದ ಪದಕ ಸಹ ಪಡೆದ. ಪದವಿ ಪಡೆದ ನಂತರ ಅಹಮದ್‌ಗೂ ಜೈನಾಬಿಗೂ ಮದುವೆ ಅಯಿತು.

ಜೈನಾಬಿಗೆ ಸಾಲಾಗಿ ಮೂರು ಜನ ಗಂಡುಮಕ್ಕಳಾದರು. ಮನೆಯಲ್ಲಿ ಎಲ್ಲರಿಗೂ ಹೆಣ್ಣುಮಗುವೊಂದು ಆಗಲಿ ಎಂಬ ಆಸೆಯಿತ್ತು. ಅಹಮದ್‌ರ ತಂದೆಗೂ ಆರು ಜನ ಗಂಡುಮಕ್ಕಳಾಗಿದ್ದರೇ ಹೊರತು ಒಂದೂ ಹೆಣ್ಣುಮಗು ಆಗಿರಲಿಲ್ಲ. ಜೈನಾಬಿ ನಾಲ್ಕನೇ ಬಾರಿ ಗರ್ಭಿಣಿಯಾದಾಗ ಆಕೆಯ ಮಾವ, ಅಂದರೆ ಅಹಮದ್‌ರ ತಂದೆ ಹರಕೆಯನ್ನೂ ಹೊತ್ತರು; “ಈ ಬಾರಿ ಜೈನಾಬಿಗೆ ಹೆಣ್ಣು ಮಗು ಹುಟ್ಟಿದರೆ ಮಗುವಿಗೆ ಪ್ರವಾದಿ ಇಬ್ರಾಹೀಂ ಅವರ ಪತ್ನಿಯಾದ ’ಸಾರಾ’ ರವರ ಹೆಸರನ್ನು ಇಡೋಣ.” ಜೈನಾಬಿ ತನ್ನ ನಾಲ್ಕನೇ ಮಗುವನ್ನು ಪ್ರವಾದಿ ಮಹಮ್ಮದರ ಜನ್ಮದಿನದಂದು ಹೆರುತ್ತಾರೆ. ಅದು ಹೆಣ್ಣು ಮಗು. ಹರಕೆಯಂತೆ ’ಸಾರಾ’ ಎಂದು ಹೆಸರಿಡುತ್ತಾರೆ.

ಸಾರಾಳ ತಂದೆ ಹೆಂಡತಿ ಜೈನಾಬಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಗಳನ್ನು ಓದಿಸುತ್ತಾರೆ. ಆಕೆಗಾಗಿಯೇ ಕಾಸರಗೋಡಿಗೆ ವಾಸ್ತವ್ಯ ಬದಲಾಯಿಸುತ್ತಾರೆ. ಮಗಳು ಮೆಟ್ರಿಕ್ಯುಲೇಷನ್ ಅನ್ನು ಉತ್ತಮ ಅಂಕಗಳಿಂದ ಪಾಸಾಗುತ್ತಾಳೆ. ಆದರೆ ಹೆಂಡತಿ ಮತ್ತು ತಾಯಿ ತನ್ನ ಮಗಳ ಕಾಲೇಜು ಓದಿಗೆ ಸಮ್ಮತಿಸುವುದಿಲ್ಲ ಎಂದು ತಿಳಿದು ಅಪ್ಪ ಮಗಳನ್ನು ಮುಂದಕ್ಕೆ ಓದಿಸಲು ಹೋಗುವುದಿಲ್ಲ. ಕೆಲವು ವರ್ಷಗಳ ನಂತರ ಸಾರಾಳಿಗೆ ಮಂಗಳೂರಿನ ಎಂ. ಅಬೂಬಕ್ಕರ್ ಎನ್ನುವ ಇಂಜಿನಿಯರ್‌ರೊಡನೆ ವಿವಾಹವಾಗುತ್ತದೆ. ಮದುವೆಯ ನಂತರ ಆಕೆ ಸಾರಾ ಅಬೂಬಕ್ಕರ್ ಆಗುತ್ತಾರೆ.

ಇಂದು ಅಮ್ಮ ಜೈನಾಬಿ ಮತ್ತು ಮಗಳು ಸಾರಾ ಅಬೂಬಕ್ಕರ್ ಪುಸ್ತಕಗಳಲ್ಲಿ ದಾಖಲಾಗಿದ್ದಾರೆ. ಅಮ್ಮ ಕಾನೂನಿನ ಪುಸ್ತಕಗಳಲ್ಲಿ, ಮಗಳು ಸಾಹಿತ್ಯ, ಸಾಮಾಜಿಕ, ಮತ್ತು ವರ್ತಮಾನದ ಆಗುಹೋಗುಗಳಲ್ಲಿ.

ಕಳೆದ ಫೆಬ್ರವರಿಯಲ್ಲಿ ಗೆಳೆಯ ಅರವಿಂದ ಚೊಕ್ಕಾಡಿ ತಮ್ಮ ತಂದೆಯ ನೆನಪಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರಾ ಅಬೂಬಕ್ಕರ್ ಮಾತನಾಡಿದ್ದರು. ಬಹುಶಃ ಅವರಿಗೆ ನಾನು ಅಪರಿಚಿತ ಎಂಬ ಭಾವನೆ ನನಗಿತ್ತು. ಅದರೆ ಅವರಿಗೆ ಗೊತ್ತಿತ್ತು. ನಾನು ನಾಲ್ಕು ವರ್ಷಗಳ ಹಿಂದೆ ಚುನಾವಣೆಗೆ ನಿಂತಿದ್ದು ಸಹ ಗೊತ್ತಿತ್ತು. ಹಾಗಾಗಿ ನಾನೊಬ್ಬ ರಾಜಕಾರಣಿ ಎಂದೂ ಸಹ ಹೇಳಿದರು! ನಾನದಕ್ಕೆ ತಮಾಷೆಯಾಗಿ ಸಾರಾ ಅಬೂಬಕ್ಕರ್‌ರವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದೆ. ನಮ್ಮ ಮಾತುಗಳು ಮುಗಿದ ನಂತರ ಹೋಗುವ ಮೊದಲು ಅವರಿಗೆ ನನ್ನ ಒಂದೆರಡು ಪುಸ್ತಕ ಕೊಟ್ಟಿದ್ದೆ. ಅದಾದ ಎರಡು-ಮೂರು ವಾರಗಳಿಗೆ ಅವರಿಂದ ಒಂದಷ್ಟು ಪುಸ್ತಕಗಳು ಅಂಚೆಯಲ್ಲಿ ಬಂದವು. ಅದರಲ್ಲಿ ನಾನು ಮೊದಲಿಗೆ ಓದಿದ್ದು “ಹೊತ್ತು ಕಂತುವ ಮುನ್ನ”. ಅದು ಸಾರಾ ಅಬೂಬಕ್ಕರ್‌ರವರ ಆತ್ಮಕಥನ.

ಸಾರಾ ಅಬೂಬಕ್ಕರ್‌ರವರು ತನ್ನ ಇಸ್ಲಾಮ್ ಮತದಲ್ಲಿ, ಪ್ರವಾದಿಗಳಲ್ಲಿ ನಂಬಿಕೆ ಇಟ್ಟಿರುವ ಮಹಿಳೆ. ಅದರೆ ಅದೇ ಸಮಯದಲ್ಲಿ ಇಸ್ಲಾಮಿನ ಪುರೋಹಿತಶಾಹಿ ತನ್ನ ಮತ ಮತ್ತು ಪ್ರವಾದಿಯ ಹೆಸರಿನಲ್ಲಿ ಹೆಣ್ಣಿಗೆ ನಿರಾಕರಿಸುತ್ತ ಬಂದಿರುವ ಮಾನವ ಹಕ್ಕುಗಳ ವಿರುದ್ಧ ಹೋರಾಡುತ್ತ ಬಂದಿರುವ ಹೋರಾಟಗಾರ್ತಿ ಸಹ. ಇಂದು ಕರ್ನಾಟಕದಲ್ಲಿ ಮುಸಲ್ಮಾನ ಹೆಣ್ಣುಮಗಳಿಗೆ ಆದರ್ಶವಾಗಬಹುದಾದ, ಗೆಳತಿಯಾಗಬಹುದಾದ ಹೆಣ್ಣುಮಕ್ಕಳಲ್ಲಿ ಸಾರಾರವರು ಮೊದಲಿಗರು. ಅವರಿಗೆ ಮುಸಲ್ಮಾನ ಹೆಣ್ಣುಮಕ್ಕಳಿಂದ ಬರುವ ಪತ್ರಗಳ ಬಗ್ಗೆ ಯೋಚಿಸಿದರೆ, ಆಗಿದ್ದಾರೆ ಸಹ.

ಅವರ ಆತ್ಮಕಥನ ಎಲ್ಲಾ ಕೋಮುವಾದಿ ಶಕ್ತಿಗಳ ಕುತಂತ್ರಗಳ ಬಗ್ಗೆ ಮಾತನಾಡುತ್ತದೆ. ಪುರುಷವರ್ಗದ ಅಸಹನೆಯ ಬಗ್ಗೆ, ತನ್ನದೇ ವಾರಿಗೆಯ ಕೆಲವು ಮುಸಲ್ಮಾನ ಲೇಖಕರ ಅಸಹನೆ ಮತ್ತು ಅಸೂಯೆಯ ಬಗ್ಗೆ ಮಾತನಾಡುತ್ತದೆ. ಹಾಗೆಯೆ ಕನ್ನಡದ ಕೆಲವು ಲೇಖಕಿಯರ ಅಸೂಯೆಯ ಬಗ್ಗೆಯೂ. ಇದು ಹಾಗಾಗಬಾರದಿತ್ತು. ಅದರೆ ಮನುಷ್ಯನ ಅಪ್ರಾಮಾಣಿಕತೆ ಮತ್ತು ಅಸೂಯೆ ಪ್ರಗತಿಪರರನ್ನೂ ಬಿಟ್ಟಿಲ್ಲ.

ಇಂಡೋನೇಷ್ಯಾ ಬಿಟ್ಟರೆ ಭಾರತದಲ್ಲಿಯೇ ಅತಿಹೆಚ್ಚು ಮುಸಲ್ಮಾನರಿರುವುದು. ಕರ್ನಾಟಕವನ್ನೇ ತೆಗೆದುಕೊಂಡರೆ ಮೂರನೇ ಅಥವ ನಾಲ್ಕನೇ ಅತಿದೊಡ್ಡ ಜನವರ್ಗ ಅದು. ಆದರೆ ಬೇರೆಲ್ಲಾ ವರ್ಗಗಳಿಗಿಂತ ಹೆಚ್ಚು ಹಿಂದುಳಿದ ವರ್ಗ ಎಂದರೇ ಅದೇನೆ. ವಿಶೇಷವಾಗಿ ಶೈಕ್ಷಣಿಕವಾಗಿ ಈ ವರ್ಗ ಹಿಂದುಳಿಯುತ್ತಲೇ ಇದೆ. ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಸಮುದಾಯದಲ್ಲಿನ ನ್ಯಾಯಾನ್ಯಾಯ ವಿವೇಚನೆಯನ್ನೇ ಹಾಳು ಮಾಡುತ್ತದೆ. ಮಾನವ ಹಕ್ಕುಗಳ ದಮನವನ್ನು ಸಂಪ್ರದಾಯ ಎನ್ನುತ್ತದೆ. ಇನ್ನಷ್ಟು ಮತ್ತಷ್ತು ಕೋಮುವಾದಿಯಾಗುತ್ತ ಹೋಗುತ್ತದೆ. ಅದು ಮತ್ತೊಂದು ಕೋಮುವಾದಿ ಗುಂಪಿನ ಬೆಂಕಿಗೆ ಉಸಿರು ನೀಡುತ್ತ ಸಾಗುತ್ತದೆ. ಇದರ ಪರಿಣಾಮವನ್ನು ನಾವು ಕಳೆದೆರಡು ದಶಕಗಳಿಂದ ಕರಾವಳಿಯಲ್ಲಿ ಕಾಣುತ್ತ ಬಂದಿದ್ದೇವೆ. ಸರಿತಪ್ಪುಗಳ ಬಗ್ಗೆ ಮಾತನಾಡದಂತಹ ಪರಿಸ್ಥಿತಿಯನ್ನು ಇವು ತಂದೊಡ್ಡುತ್ತಿವೆ. ಭಾರತದ ಮುಸಲ್ಮಾನರ ಆಧುನಿಕತೆ ಮತ್ತು ಪ್ರಗತಿಯಲ್ಲಿ ಈ ದೇಶದ ಶಾಂತಿ ಮತ್ತು ಭದ್ರತೆ ಇದೆ. ಇದನ್ನು ಹಿಂದೂ ಕೋಮುವಾದಿಗಳು ತಿಳಿದುಕೊಳ್ಳಬೇಕು. ನ್ಯಾಯಾನ್ಯಾಯ ವಿವೇಚನೆಯ ಮುಸಲ್ಮಾನರೂ ಅರಿಯಬೇಕು. ಸಾಚಾರ್ ಸಮಿತಿಯ ಶಿಫಾರಸುಗಳ ಜಾರಿಗೆ ಮುಸಲ್ಮಾನರು ಮಾತ್ರವಲ್ಲದೆ ನ್ಯಾಯ ಮತ್ತು ಸಮಾನತೆ ಬಯಸುವ ಪ್ರತಿಯೊಬ್ಬರೂ ಆಗ್ರಹಿಸಬೇಕಿದೆ.

ಸ್ನೇಹಿತರೆ, “ಹೊತ್ತು ಕಂತುವ ಮುನ್ನ” ಓದಿಲ್ಲದಿದ್ದರೆ ದಯವಿಟ್ಟು ಒಮ್ಮೆ ಓದಿ. ಒಂದು ಶತಮಾನದ ಕರಾವಳಿ ಮುಸಲ್ಮಾನರ ಆಧುನಿಕತೆಯ ಹೋರಾಟವನ್ನು ಮಾತ್ರವಲ್ಲದೆ ಸಮಾಜದಲ್ಲಿಯ ವಿವಿಧ ಮನಸ್ಥಿತಿಗಳ ಪರಿಚಯವನ್ನೂ ಮಾಡಿಕೊಡುತ್ತದೆ. ಪ್ರಗತಿಪರರು ಹೇಳಲು ಹೆದರುವ ವಿಷಯಗಳ ಬಗ್ಗೆ ಸಾರಾರವರು ನಿರ್ಭೀತಿಯಿಂದ ಬರೆಯುತ್ತಾರೆ. ಹಾಗೆ ನಿರ್ಭೀತಿಯಿಂದ ಸಮಾಜದ ವಿವೇಚನೆ ಬೆಳೆಸಲು ಹೋರಾಡಿದವರ ಸಾವು-ಹತ್ಯೆಗಳ ಬಗ್ಗೆಯೂ ಬರೆದಿದ್ದಾರೆ. ಶಾ ಭಾನು ಪ್ರಕರಣದಿಂದ ಹಿಡಿದು ಏಕರೂಪ ಹಕ್ಕುಗಳ ಬಗ್ಗೆಯೂ ಅವರು ಮುಕ್ತವಾಗಿ ಬರೆದಿದ್ದಾರೆ. ಮುಸಲ್ಮಾನೇತರ ಪ್ರಗತಿಪರರು ಇಸ್ಲಾಮ್ ಕೋಮುವಾದದ ವಿಚಾರಕ್ಕೆ ಬಂದಾಗ ಯಾವ ಅಭಿಪ್ರಾಯ ತಳೆಯಬೇಕು ಎನ್ನುವುದನ್ನು ಈ ಆತ್ಮಕಥನ ಹೇಳುತ್ತದೆ. ಅಷಾಢಭೂತಿಗಳಾಗದಂತೆ ನಮ್ಮ ಅಂತಃಸಾಕ್ಷಿಯನ್ನು ಉದ್ದೀಪಿಸುತ್ತದೆ. ಹಲವು ಉತ್ತಮ ಕಾದಂಬರಿಗಳು ಕೊಡಲಾಗದ ನೇರಾನೇರ ಜೀವನದೃಷ್ಟಿಯನ್ನು ಈ ಆತ್ಮಕಥನ ಕೊಡುತ್ತದೆ.


“ಹೊತ್ತು ಕಂತುವ ಮುನ್ನ”
ಪ್ರಕಾಶಕರು: ಚಂದ್ರಗಿರಿ ಪ್ರಕಾಶನ
2-21-1631/2
ಸೂಕ್ಷ್ಮತರಂಗ ನಿಲಯ ರಸ್ತೆ,
ಮಂಗಳೂರು – 575 006

ಬೆಲೆ: ರೂ.150