Daily Archives: April 28, 2012

ಇರಾನ್ ಅಣ್ವಸ್ತ್ರ ಕಾರ್ಯಕ್ರಮ ವಿಶ್ವಕ್ಕೆ ಮಾರಕವೇ?

– ಆನಂದ ಪ್ರಸಾದ್

ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ಅದರ ಮೇಲೆ ನಿರ್ಬಂಧ ಹೇರಲು ಅಮೆರಿಕ, ಇಸ್ರೇಲ್, ಬ್ರಿಟನ್, ರಷ್ಯಾ ಮೊದಲಾದ ದೇಶಗಳು ಹವಣಿಸುತ್ತಿವೆ. ಇದರಿಂದಾಗಿ ಇರಾನಿನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳು ತೊಂದರೆಗೊಳಗಾಗಿದ್ದು ತೈಲ ಬೆಲೆ ಹೆಚ್ಚಳ ಆಗುವ ಆತಂಕವೂ ಇದೆ. ವಾಸ್ತವವಾಗಿ ಇಂಥ ನಿರ್ಬಂಧ ಹಾಕುವ ನೈತಿಕ ಅಧಿಕಾರ ಈ ದೇಶಗಳಿಗೆ ಇದೆಯೇ ಎಂದರೆ ಇಲ್ಲ ಎಂದೇ ಕಂಡು ಬರುತ್ತದೆ. ಈ ಎಲ್ಲ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿದ್ದು ಇತರ ದೇಶಗಳು ಅಣ್ವಸ್ತ್ರ ಹೊಂದಬಾರದು ಎಂದು ಹೇಳುವುದು ಪಾಳೆಗಾರಿಕೆ ನೀತಿಯಾಗುತ್ತದೆಯೇ ಹೊರತು ಸಮಂಜಸ ಎಂದು ಕಂಡು ಬರುವುದಿಲ್ಲ.

ಜಗತ್ತು ಇರಾನಿನ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ಆತಂಕ ಪಡಬೇಕಾದ ಅಗತ್ಯ ಇದೆಯೇ ಎಂದರೆ ಅಂಥ ಆತಂಕಕ್ಕೆ ಕಾರಣವಿಲ್ಲ ಎಂಬುದು ಚಿಂತನೆ ನಡೆಸಿದರೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ಇಂದು ಅಣ್ವಸ್ತ್ರ ಅಭಿವೃದ್ಧಿಪಡಿಸಿದ ಯಾವ ದೇಶವೂ ಅದನ್ನು ಯುದ್ಧದಲ್ಲಿ ಬಳಸಲಾರದ ಸನ್ನಿವೇಶ ವಿಶ್ವದಲ್ಲಿ ಸೃಷ್ಟಿಯಾಗಿದೆ. ಯಾವುದಾದರೂ ಒಂದು ದೇಶದ ಬಳಿ ಮಾತ್ರ ಅಣ್ವಸ್ತ್ರ ತಂತ್ರಜ್ಞಾನ ಇದ್ದಿದ್ದರೆ ಖಂಡಿತ ಅದರ ಬಳಕೆ ಯುದ್ಧದಲ್ಲಿ ಆಗಿಯೇ ಆಗುತ್ತಿತ್ತು. ಆದರೆ ಇಂದು ಹಲವು ದೇಶಗಳ ಬಳಿ ಅಣ್ವಸ್ತ್ರ ತಂತ್ರಜ್ಞಾನ ಇರುವ ಕಾರಣ ಯಾವ ದೇಶವೂ ಅಣ್ವಸ್ತ್ರಗಳನ್ನು ಯುದ್ಧದಲ್ಲಿ ಬಳಸುವ ಸಾಹಸ ಮಾಡಲಾರದು. ಹಾಗೆ ಮಾಡಿದರೆ ಅದು ಆತ್ಮಹತ್ಯೆಗೆ ಸಮಾನ ಎಂಬುದು ಎಲ್ಲ ದೇಶಗಳ ಅರಿವಿಗೂ ಬಂದಿದೆ. ಹೀಗಾಗಿಯೇ ಎರಡನೇ ಮಹಾಯುದ್ಧದ ನಂತರ ಯುದ್ಧಗಳು ನಡೆದಿದ್ದರೂ ಅಣ್ವಸ್ತ್ರಗಳ ಬಳಕೆ ಯುದ್ಧದಲ್ಲಿ ಆಗಿಲ್ಲ.

ಪ್ರಪಂಚದಲ್ಲಿ ಇರುವ 249 ದೇಶಗಳ ಪೈಕಿ 5 ದೇಶಗಳು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಾಗಿವೆ. ಅವುಗಳು ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ. ಮೂರು ದೇಶಗಳು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಅವು ಭಾರತ, ಪಾಕಿಸ್ತಾನ, ಹಾಗೂ ಉತ್ತರ ಕೊರಿಯಾ ದೇಶಗಳು. ಇಸ್ರೇಲ್ ಅಣ್ವಸ್ತ್ರಗಳನ್ನು ಹೊಂದಿದ ದೇಶವಾದರೂ ತಾನು ಅಣ್ವಸ್ತ್ರ ಹೊಂದಿರುವ ದೇಶ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗೆ ಪ್ರಪಂಚದ ಒಟ್ಟು 249 ದೇಶಗಳಲ್ಲಿ ಕೇವಲ 9 ದೇಶಗಳು ಮಾತ್ರ ಅಣ್ವಸ್ತ್ರ ಹೊಂದಿವೆ. ಬೆಲ್ಗಿಯಂ, ಜರ್ಮನಿ, ಇಟಲಿ, ನೆದರ್ ಲ್ಯಾಂಡ್, ಟರ್ಕಿ ದೇಶಗಳು ನ್ಯಾಟೋ ಒಕ್ಕೂಟದ ಅಣ್ವಸ್ತ್ರ ಹಂಚುವಿಕೆಯ ಅನುಸಾರ ಅಮೆರಿಕಾದ ಅಣ್ವಸ್ತ್ರಗಳನ್ನು ಹಂಚಿಕೊಂಡಿವೆ. ಮೊದಲಿದ್ದ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಬೆಲಾರೂಸ್, ಉಕ್ರೈನ್, ಕಜ್ಹಕಿಸ್ತಾನ್ ದೇಶಗಳು ತಮ್ಮಲ್ಲಿದ್ದ ಅಣ್ವಸ್ತ್ರಗಳನ್ನು ರಷ್ಯಾಕ್ಕೆ ಒಪ್ಪಿಸಿವೆ ಹಾಗೂ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿವೆ. ದಕ್ಷಿಣ ಆಫ್ರಿಕಾ ದೇಶವು ಒಮ್ಮೆ ಅಣ್ವಸ್ತ್ರಗಳನ್ನು ಉತ್ಪಾದಿಸಿ ಜೋಡಿಸಿತ್ತಾದರೂ ನಂತರ ಅದನ್ನು ಕಳಚಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದೆ. ರಕ್ಷಣೆಗೆ ಅಣ್ವಸ್ತ್ರಗಳು ಬೇಕೇ ಬೇಕು ನಿಜವಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಅಣ್ವಸ್ತ್ರ ಇಲ್ಲದ ದೇಶಗಳನ್ನು ಅಣ್ವಸ್ತ್ರ ಇರುವ ದೇಶಗಳು ಆಕ್ರಮಣ ಮಾಡಿ ದಕ್ಕಿಸಿಕೊಳ್ಳುವುದಾಗಿದ್ದರೆ 249 ದೇಶಗಳ ಪೈಕಿ ಕೆಲವು ದೇಶಗಳ ಮೇಲಾದರೂ ಆಕ್ರಮಿಸಿ ವಶಪಡಿಸಿಕೊಳ್ಳಬೇಕಾಗಿತ್ತು. ಆದರೆ ಅಂಥ ಪ್ರಯತ್ನವನ್ನು ಮಾಡಲಾರದ ಸಮತೋಲನದ ಸ್ಥಿತಿ ಇಂದು ವಿಶ್ವದಲ್ಲಿ ರೂಪುಗೊಂಡಿದೆ. ಹೀಗೆ ಅಣ್ವಸ್ತ್ರ ಇಲ್ಲದೆಯೂ ಹಲವು ದೇಶಗಳು ಭದ್ರತೆ ಪಡೆದಿವೆ.

ಇರಾನಿನ ವಿಷಯಕ್ಕೆ ಬರುವುದಾದರೆ ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೂ ಅದಕ್ಕೆ ಯಾರೂ ಅಂಜಬೇಕಾದ ಅಗತ್ಯ ಇಲ್ಲ. ಅಣ್ವಸ್ತ್ರಗಳನ್ನು ಇರಾನ್ ಬಳಸಿ ಇಸ್ರೇಲ್‌ಅನ್ನು ನಾಶ ಮಾಡಬಹುದೆಂಬುದು ಇಸ್ರೇಲ್ ಹಾಗೂ ಅದರ ಗಾಡ್ ಫಾದರ್ ಅಮೆರಿಕಾದ ಭೀತಿ. ಆದರೆ ಅಂಥ ಪರಿಸ್ಥಿತಿ ಉಂಟಾಗುವ ಪ್ರಮೇಯ ಇಲ್ಲ. ಇಸ್ರೇಲ್ ಬಳಿಯೂ ಹಾಗೂ ಅದರ ಗಾಡ್ ಫಾದರ್ ಅಮೆರಿಕಾದ ಬಳಿ ಯಥೇಚ್ಛ ಅಣ್ವಸ್ತ್ರ ಇರುವಾಗ ಇರಾನ್ ಅದರ ಮೇಲೆ ಅಣ್ವಸ್ತ್ರ ಬಳಸಿದರೆ ಅದೂ ತನ್ನ ಮೇಲೆ ಅಣ್ವಸ್ತ್ರ ಬಳಸುತ್ತದೆ ಎಂದು ತಿಳಿಯಲಾರದ ಮೂರ್ಖ ದೇಶ ಇರಾನ್ ಎಂದು ತಿಳಿಯಲು ಕಾರಣಗಳಿಲ್ಲ. ಹೀಗಾಗಿ ಇರಾನ್ ಅಣ್ವಸ್ತ್ರ ಅಭಿವೃದ್ಧಿಪಡಿಸಿದರೆ ಅದರಿಂದ ದೊಡ್ಡ ಅನಾಹುತ ಆದೀತು ಎಂಬುದಕ್ಕೆ ಕಾರಣಗಳಿಲ್ಲ. ಇದಕ್ಕಾಗಿ ಎಲ್ಲ ದೇಶಗಳ ಮೇಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದ ಮೂಲಕ ಪರಿಣಾಮ ಬೀರುವ ಅರ್ಥಿಕ ದಿಗ್ಬಂಧನ ಹೇರುವ ಅಗತ್ಯ ಇಲ್ಲ. ಇನ್ನು ಇರಾನಿನಿಂದ ಅಣ್ವಸ್ತ್ರಗಳು ಉಗ್ರಗಾಮಿಗಳ ಕೈಗೆ ಸಿಕ್ಕಿ ತೊಂದರೆಯಾಗಬಹುದು ಎಂಬ ಭೀತಿಗೆ ಕಾರಣವಿಲ್ಲ. ಒಂದು ವೇಳೆ ಉಗ್ರಗಾಮಿಗಳಿಗೆ ಸಿಕ್ಕಿ ಅವರು ಅದನ್ನು ಪ್ರಯೋಗಿಸಿದರೂ ಅದನ್ನು ಉಗ್ರಗಾಮಿಗಳಿಗೆ ನೀಡಿದ ದೇಶದ ಮೇಲೆ ಅಣ್ವಸ್ತ್ರ ಧಾಳಿಯ ಭೀತಿ ಇದ್ದೇ ಇರುವುದರಿಂದ ಅಂಥ ಪ್ರಮಾದ ಮಾಡಲು ಇರಾನಿನಂಥ ದೇಶ ಮುಂದಾಗುವ ಸಂಭವ ಇದೆ ಎನಿಸುವುದಿಲ್ಲ.

ಇಂಥ ಭೀತಿ ಪಾಕಿಸ್ತಾನದ ವಿಷಯದಲ್ಲೂ ಇತ್ತು, ಆದರೆ ಅದು ನಿಜವಾಗಿಲ್ಲ. ಹೀಗಾಗಿ ಇರಾನಿನ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳಿಗೆ ಯಾರೂ ಹೆದರಬೇಕಾದ ಅಗತ್ಯ ಇಲ್ಲ. ಇರಾನಿಗೆ ಅಣ್ವಸ್ತ್ರಗಳ ಅವಶ್ಯಕತೆ ಇದೆಯೇ ಎಂದರೆ ಇಲ್ಲ ಎಂಬುದು ನಿಜವಾದರೂ ಬುದ್ಧಿಗೇಡಿಯಾಗಿ ಅದು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದರೆ ಅದಕ್ಕೆ ಹೆಚ್ಚಿನ ಹಾಹಾಕಾರ ಮಾಡಬೇಕಾದ ಅಗತ್ಯ ಇಲ್ಲ. ಅಣ್ವಸ್ತ್ರವನ್ನು ಅದು ಅಭಿವೃದ್ಧಿಪಡಿಸಿದರೂ ಅದನ್ನು ಬಳಸಲು ಸಾಧ್ಯವಿಲ್ಲ, ಹಾಗೆ ಬಳಸಬೇಕಾದರೆ ಅದು ತನ್ನನ್ನು ತಾನೆ ಸರ್ವನಾಶಕ್ಕೆ ಒಡ್ಡಿಕೊಳ್ಳುವ ಮೂರ್ಖ ದೇಶವಾಗಿರಬೇಕು. ಸರ್ವನಾಶಕ್ಕೆ ಇಂದು ಯಾವ ದೇಶವೂ ಸಿದ್ಧವಾದ ಮನಸ್ಥಿತಿಯನ್ನು ಹೊಂದಿಲ್ಲದ ಕಾರಣ ಇರಾನಿನ ಅಣ್ವಸ್ತ್ರ ಕಾರ್ಯಕ್ರಮಗಳಿಂದ ಪ್ರಪಂಚದಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಲಾರದು. ಇಂದು ಎಷ್ಟೇ ದೊಡ್ಡ ಮಿಲಿಟರಿ ಬಲ ಹೊಂದಿರುವ ದೇಶವಾದರೂ ಸಣ್ಣ ದೇಶಗಳ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವ ವಸಾಹತುಶಾಹೀ ಕಾಲ ಮುಗಿದು ಮಾನವ ಜನಾಂಗ ಮುಂದಿನ ಘಟ್ಟಕ್ಕೆ ಮುಟ್ಟಿದೆ. ಹೀಗಾಗಿಯೇ ಇಂದು ಸಣ್ಣ ಸಣ್ಣ ದೇಶಗಳನ್ನು ಅಪಾರ ಮಿಲಿಟರಿ ಬಲದ ದೇಶಗಳು ಆಕ್ರಮಿಸುವ ಪರಿಪಾಟ ಕಂಡುಬರುತ್ತಿಲ್ಲ.

ಇನ್ನು ಮುಂಬರುವ ದಿನಗಳಲ್ಲಿ ಪರಸ್ಪರ ಸಹಕಾರ, ತಿಳಿವು, ಒಪ್ಪಂದ, ವೈಜ್ಞಾನಿಕ ಮುನ್ನಡೆ ಹಾಗೂ ಸಂಶೋಧನೆಗಳಿಂದ ಪ್ರಪಂಚದ ದೇಶಗಳು ಅಭಿವೃದ್ಧಿಯೆಡೆಗೆ ಹಾಗೂ ಶಾಂತಿ ಸಹಕಾರಗಳೆಡೆಗೆ ಮುನ್ನಡೆಯುವ ದಿನಗಳು ಬರುವ ಸಂಭವ ಇದೆ. ಇದು ಮಾನವ ವಿಕಾಸದ ಮುಂದಿನ ಘಟ್ಟ. ಅದನ್ನು ತಲುಪಲು ಎಲ್ಲ ದೇಶಗಳಲ್ಲೂ ಅರಿವು ಹಾಗೂ ಚಿಂತನೆ ಮೂಡಬೇಕಾದ ಅಗತ್ಯ ಇದೆ. ಅಂಥ ಚಿಂತನೆಯನ್ನು ರೂಪಿಸಲು ಪ್ರಪಂಚದ ಎಲ್ಲ ದೇಶಗಳ ಚಿಂತಕರು, ವಿಜ್ಞಾನಿಗಳು, ಮೇಧಾವಿಗಳು ಪ್ರಯತ್ನಿಸಬೇಕಾದ ಅಗತ್ಯ ಇದೆ.