Daily Archives: April 30, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-18)


– ಡಾ.ಎನ್.ಜಗದೀಶ್ ಕೊಪ್ಪ


ನರಭಕ್ಷಕ ಹುಲಿಗಳ ಬೇಟೆಯಿಂದಾಗಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದ ಜಿಮ್ ಕಾರ್ಬೆಟ್ ಮಾನಸಿಕವಾಗಿ ಪ್ರಾಣಿ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ತನ್ನ ಕಣ್ಣ ಮುಂದೆ ಅರಣ್ಯ ನಶಿಸಿ ಹೋಗುತ್ತಿರುವುದು ಮತ್ತು ಕಾಡಿನ ಪ್ರಾಣಿಗಳು ಶಿಕಾರಿಗಾರರ ತೆವಲಿಗೆ ಬಲಿಯಾಗುತ್ತಿರುವುದರ ಬಗ್ಗೆ ವೈಯಕ್ತಿಕವಾಗಿ ನೊಂದುಕೊಂಡಿದ್ದ. ಈ ಕಾರಣಕ್ಕಾಗಿ ನರಭಕ್ಷಕ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದನ್ನು ಅವನು ನಿಲ್ಲಿಸಿದ್ದ.

ಜಿಮ್ ಕಾರ್ಬೆಟ್ ಬದುಕಿನಲ್ಲಿ, ಹಾಗೂ ಅವನ ಶಿಕಾರಿಯ ಅನುಭವದಲ್ಲಿ ಅತಿ ದೊಡ್ಡ ಸವಾಲು ಎದುರಾದದ್ದು, ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲುವ ಸಂದರ್ಭದಲ್ಲಿ ಮಾತ್ರ. ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸುಮಾರು 800 ಚದುರ ಕಿ. ಮಿ. ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರ ಎಂಟು ವರ್ಷಗಳ ಕಾಲ ನರಮನುಷ್ಯರನ್ನು ಬೇಟೆಯಾಡುತ್ತಾ, ಸರ್ಕಾರವನ್ನು, ಸ್ಥಳೀಯ ಜನತೆಯನ್ನು ಆತಂಕದ ಮಡುವಿಗೆ ನೂಕಿದ್ದ ಈ ಚಿರತೆಯನ್ನು ಕೊಲ್ಲಲು ಜಿಮ್ ಕಾರ್ಬೆಟ್ ನಡೆಸಿದ ಸಾಹಸ, ಪಟ್ಟ ಪಾಡು ಒಂದು ಮಹಾ ಕಾವ್ಯದಂತೆ ರೋಮಾಂಚಕಾರಿಯಾದ ಕಥನ. ಈ ನರಭಕ್ಷಕನ ಬೇಟೆಗಾಗಿ ಅಂದಿನ ದಿನಗಳಲ್ಲಿ ಇಡೀ ಜಗತ್ತು ಎದುರು ನೋಡುತ್ತಿತ್ತು ಏಕೆಂದರೆ, ಪ್ರತಿದಿನ 50 ರಿಂದ 100 ಕಿ.ಮಿ. ದೂರ ಸಂಚರಿಸುತ್ತಾ ಇದ್ದ ಈ ಚಿರತೆಯ ಪ್ರತಿ ನರಬೇಟೆಯೂ ಜಗತ್ತಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು. ಇಂಗ್ಲೆಂಡಿನ ಪಾರ್ಲಿಮೆಂಟ್‌‌‍ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಚಾರದ ಬದಲಿಗೆ, ಈ ನರಭಕ್ಷಕ ಚಿರತೆಯ ಬಗ್ಗೆ ತೀವ್ರತರವಾದ ಚರ್ಚೆಗಳು ನಡೆಯುತ್ತಿದ್ದವು.

ಕಾಡಿನ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾದ ಚಿರತೆ ಸಾಮಾನ್ಯವಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆ ಬಹುತೇಕ ಕಡಿಮೆ. ಸಿಂಹ ಅಥವಾ ಹುಲಿ ಬೇಟೆಯಾಡಿ ತಿಂದು ಮುಗಿಸಿದ ಪ್ರಾಣಿಗಳ ಅವಶೇಷ ಅಥವಾ ವಯಸ್ಸಾಗಿ ಸತ್ತು ಹೋದ ಪ್ರಾಣಿಗಳ ಕಳೇಬರಗಳನ್ನು ತಿನ್ನುವುದು ಚಿರತೆಗಳ ಪವೃತ್ತಿ. ಆದರೆ, ರುದ್ರಪ್ರಯಾಗದ ಈ ನರಭಕ್ಷಕ ಚಿರತೆ ಆಕಸ್ಮಾತ್ತಾಗಿ ನರಭಕ್ಷಕ ಪ್ರಾಣಿಯಾಗಿ ಪರಿವರ್ತನೆ ಹೊಂದಿತ್ತು. ಇದಕ್ಕೆ ಸ್ಥಳೀಯ ಜನರ ಸಾಂಸ್ಕೃತಿಕ ಆಚರಣೆಗಳು ಕೂಡ ಪರೋಕ್ಷವಾಗಿ ಕಾರಣವಾಗಿದ್ದವು. ರುದ್ರಪ್ರಯಾಗ ಹಿಮಾಲಯದ ಪವಿತ್ರ ಕ್ಷೇತ್ರಗಳ ನಡುವಿನ ಸಂಗಮ ಕ್ಷೇತ್ರಗಳಲ್ಲಿ ಒಂದು. ಹಿಮಾಲಯದ ತಪ್ಪಲಲ್ಲಿ ಹುಟ್ಟಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುವ ಮಂದಾಕಿನಿ ಹಾಗೂ ಅಲಕನಂದಾ ನದಿಗಳು ರುದ್ರಪ್ರಯಾಗದಲ್ಲಿ ಒಂದುಗೂಡಿ, ಮುಂದೆ ಗಂಗಾನದಿಯಾಗಿ ಹರಿದು, ಮುಂದೆ ಹೃಷಿಕೇಶ ಹರಿದ್ವಾರ, ವಾರಣಾಸಿ ಮುಂತಾದ ಪವಿತ್ರ ಕ್ಷೇತ್ರಗಳ ತಟದಲ್ಲಿ ಹರಿದು ಕೊಲ್ಕತ್ತಾ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಬಂಗಾಳ ಕೊಲ್ಲಿ ಸೇರುತ್ತದೆ.

ಭಾರತದ ಹಿಂದೂ ಸಮುದಾಯದ ಪಾಲಿಗೆ ಗಂಗಾ ನದಿ ಪುಣ್ಯನದಿ. ಇದು ಇಲ್ಲಿ ಜನಗಳ ಧಾರ್ಮಿಕ ಮನೋಭೂಮಿಯಲ್ಲಿ ಒಂದು ಅಚ್ಚಳಿಯದ ಹೆಸರು. ಹಿಂದು ಭಕ್ತರ ಪಾಲಿಗೆ ಚಾರ್‌ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಬದರಿನಾಥ್ ಹಾಗೂ ಕೇದಾರನಾಥ ಇವುಗಳನ್ನು ಸಂದರ್ಶಿಸುವುದು ಅವರ ಜೀವಮಾನದ ಕನಸು ಮತ್ತು ಹೆಬ್ಬಯಕೆ. ಹಾಗಾಗಿ ಈ ಸ್ಥಳಗಳು ವರ್ಷಪೂರ್ತಿ ದೇಶದ ವಿವಿಧೆಡೆಗಳಿಂದ ಬರುವ ಭಕ್ತರಿಂದ ತುಂಬಿ ತುಳುಕುತ್ತವೆ. ಹೃಷಿಕೇಶದಿಂದ ಹೊರಟ ಭಕ್ತರು ರುದ್ರಪ್ರಯಾಗದ ಬಳಿ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಬೇರೆ ಬೇರೆ ದಾರಿ ಹಿಡಿದು ಸಾಗಬೇಕು. ಆ ಕಾಲದಲ್ಲಿ ಬಹುತೇಕ ಪ್ರಯಾಣವನ್ನು ಕಾಲು ನಡಿಗೆಯಲ್ಲೇ ಕ್ರಮಿಸಬೇಕಿತ್ತು ಇಂತಹ ಸಂದರ್ಭದಲ್ಲಿ ವಯಸ್ಸಾದ ಭಕ್ತರು ನಡುದಾರಿಯಲ್ಲಿ ಅಸುನೀಗಿದರೆ, ಅವರುಗಳ ಶವವನ್ನು ನದಿಯ ಕೊರಕಲು ಪ್ರದೇಶಕ್ಕೆ ನೂಕಿ ಮುಂದುವರಿಯುವುದು ಅನಿವಾರ್ಯವಾಗಿತ್ತು. ಜೊತೆಗೆ ಹಿಮಾಲಯದ ತಪ್ಪಲಿನ ಬಹುತೇಕ ಹಳ್ಳಿಗಳು ಪರ್ವತದ ಮೇಲಿದ್ದ ಕಾರಣ ಅಲ್ಲಿ ಜನರೂ ಸಹ ಸತ್ತವರ ಬಾಯಿಗೆ ಒಂದಿಷ್ಟು ಬೆಂಕಿಯ ಕೆಂಡವನ್ನು ಹಾಕಿ ಪರ್ವತದ ಮೇಲಿಂದ ಶವವನ್ನು ಹಳ್ಳಕ್ಕೆ ತಳ್ಳುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಇಂತಹ ಒಂದು ಸಂದರ್ಭದಲ್ಲಿ ಸತ್ತ ಪ್ರಾಣಿಗಳ ಆಹಾರವನ್ನು ಅರಸುತ್ತಿದ್ದ ಚಿರತೆ ಮನುಷ್ಯರ ಶವಗಳನ್ನು ತಿನ್ನುವುದರ ಮೂಲಕ ನರಭಕ್ಷಕ ಪ್ರಾಣಿಯಾಗಿ ಅಲ್ಲಿನ ಜನರನ್ನು ಕಾಡತೊಡಗಿತ್ತು.

ಜಿಮ್ ಕಾರ್ಬೆಟ್ ನೈನಿತಾಲ್‌ನಲ್ಲಿ ಇರುವಾಗಲೇ ರುದ್ರಪ್ರಯಾಗದ ನರಭಕ್ಷಕ ಚಿರತೆಯು ಮನುಷ್ಯರನ್ನು ಬೇಟೆಯಾಡುತ್ತಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದಿದ್ದ, ಬ್ರಿಟಿಷ್ ಸರ್ಕಾರ ಕೂಡ ಇದನ್ನು ಕೊಂದು ಹಾಕಲು ಹವ್ಯಾಸಿ ಬೇಟೆಗಾರರಿಗೆ ಆಹ್ವಾನ ನೀಡಿ 10 ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು, ಜೊತೆಗೆ ಆ ಪ್ರದೇಶದ ಜನರಿಗೆ ಮುಕ್ತವಾಗಿ ಬಂದೂಕಿನ ಪರವಾನಗಿ ನೀಡಿತ್ತು. ಹಿಮಾಲಯದ ಪರ್ವತದ ಪ್ರದೇಶಗಳಿಂದ ಬಂದ ಸೈನಿಕರಿಗೆ ರಜೆಯ ಮೇಲೆ ಊರಿಗೆ ತೆರಳುವಾಗ ಬಂದೂಕವನ್ನು ತೆಗೆದುಕೊಂಡು ಹೋಗಲು ಅನುಮತಿಯನ್ನು ಸಹ ನೀಡಿತು ನರಭಕ್ಷಕ ಚಿರತೆಯನ್ನು ಕೊಲ್ಲಲು ಸರ್ಕಾರ ಇಷ್ಟೇಲ್ಲಾ ವ್ಯವಸ್ಥೆ ಮಾಡಿರುವಾಗ ನಾನು ಮಾಡುವುದಾದರೂ ಏನು? ಎಂಬುದು ಕಾರ್ಬೆಟ್‌ನ ನಿಲುವಾಗಿತ್ತು. ಕಾರ್ಬೆಟ್‌ಗೆ ಈ ನರಭಕ್ಷಕಕನ ಬಗ್ಗೆ ಪ್ರಥಮಬಾರಿಗೆ ಸುದ್ಧಿ ತಿಳಿದಾಗ ಅವನು ನೈನಿತಾಲ್ ಸಿನಿಮಾ ಮಂದಿರದಲ್ಲಿ ಇಂಗ್ಲಿಷ್ ಸಿನಿಮಾವೊಂದನ್ನು ನೋಡುತ್ತಾ ಕುಳಿತಿದ್ದ. ಆರು ವರ್ಷಗಳ ನಂತರವೂ ಯಾರ ಕೈಗೂ ಸಿಗದೆ, ಸೆರೆ ಹಿಡಿಯಬಹುದಾದ ಎಲ್ಲಾ ವಿಧವಾದ ಉಪಾಯಗಳಿಗೂ ಜಗ್ಗದೆ ಚಿರತೆ ತನ್ನ ದಾಳಿಯನ್ನು ಮುಂದುವರಿಸಿತ್ತು. ಎರಡು ಬಾರಿ ಅದೃಷ್ಟವಶಾತ್ ಸಾವಿನ ಕುಣಿಕೆಯಿಂದ ಅದು ಪಾರಾಗಿತ್ತು.

ಒಮ್ಮೆ ರುದ್ರಪ್ರಯಾಗದ ಸಮೀಪದ ಹಳ್ಳಿಯ ಬಯಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಚಿರತೆ ಅವನನ್ನು ಕೊಂದು ಸಮೀಪದ ಹಳ್ಳವೊಂದಕ್ಕೆ ಕೊಂಡೊಯ್ದು ತಿನ್ನುತ್ತಿರುವಾಗ ಇದನ್ನು ಕಂಡ ಕೆಲವು ಗ್ರಾಮಸ್ಥರು ದೊಣ್ಣೆ, ಮಚ್ಚು, ಕೊಡಲಿಗಳಿಂದ, ನರಭಕ್ಷಕನನ್ನು ಬೆನ್ನಟ್ಟಿದ್ದರು. ಅದು ಭಯದಿಂದ ಮನುಷ್ಯನ ಶವದೊಂದಿಗೆ ಓಡಿ ಹೋಗಿ ಸಮೀಪದ ಗುಹೆಯನ್ನು ಹೊಕ್ಕಿತು. ಕೂಡಲೇ ಗ್ರಾಮಸ್ಥರು ಗುಹೆಯ ಬಾಗಿಲಿಗೆ ಮುಳ್ಳು ಕಂಟಿ, ಮರದಬೊಡ್ಡೆ ಹಾಗೂ ಕಲ್ಲುಗಳನ್ನು ಅಡ್ಡ ಇಟ್ಟು ಚಿರತೆ ಹೊರಬಾರದಂತೆ ಭದ್ರಪಡಿಸಿದರು. ಸತತ ಐದು ದಿನಗಳ ಕಾಲ ಗುಹೆಯ ಬಾಗಿಲಲ್ಲಿ ಅವರೆಲ್ಲಾ ಕಾದು ಕುಳಿತರೂ ಸಹ ಗುಹೆಯ ಒಳಗಿನಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಸಂಶಯಗೊಂಡ ಒಬ್ಬಾತ ಗುಹೆಬಾಗಿಲಿಗೆ ಅಡ್ಡಲಾಗಿರಿಸಿದ್ದ ಮುಳ್ಳು ಮತ್ತು ಕಲ್ಲುಗಳನ್ನು ತೆಗೆಯುತಿದ್ದಂತೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಕ್ಷಣಾರ್ಧದಲ್ಲಿ ಹೊರಕ್ಕೆ ನೆಗೆದ ನರಭಕ್ಷಕ ಚಿರತೆ ಜನರ ನಡುವೆ ಓಡಿ ಹೋಗಿ ಕಾಡು ಹೊಕ್ಕಿತು. ಅನಿರೀಕ್ಷಿತವಾಗಿ ಜರುಗಿದ ಈ ಘಟನೆಯಿಂದ ಭಯ ಭೀತರಾದ ಅಷ್ಟೂ ಜನ ಗುಂಡಿನ ಶಬ್ಧಕ್ಕೆ ಬೆದರಿ ಮರದಿಂದ ಹಾರುವ ಹಕ್ಕಿಗಳಂತೆ ಚಲ್ಲಾಪಿಲ್ಲಿಯಾಗಿದ್ದರು.

ಇನ್ನೊಮ್ಮೆ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಗುಂಡಿನ ದಾಳಿಯಿಂದ ಇದೇ ನರಭಕ್ಷಕ ಚಿರತೆ ಕ್ಷಣ ಮಾತ್ರದಲ್ಲಿ ಪಾರಾಗಿತ್ತು. ರುದ್ರಪ್ರಯಾಗ ಪಟ್ಟಣದಿಂದ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ 24 ಕಿ.ಮಿ. ದೂರದಲ್ಲಿ ಕರ್ಣಪ್ರಯಾಗ ಎಂಬ ಜನವಸತಿ ಪ್ರದೇಶವಿದ್ದು ಈ ಎರಡು ಊರುಗಳ ನಡುವೆ ಅಲಕಾನಂದಾ ನದಿ ರಭಸದಿಂದ ಹರಿಯುತ್ತದೆ. ಪ್ರಯಾಣಿಕರು ನದಿ ದಾಟಲು ಅಡ್ಡಲಾಗಿ ತೂಗು ಸೇತುವೆಯೊಂದನ್ನು ಕಟ್ಟಲಾಗಿದೆ. ನರಭಕ್ಷಕ ರುದ್ರಪ್ರಯಾಗಕ್ಕೆ ಬರಬೇಕಾದರೆ, ಈ ಸೇತುವೆ ದಾಟಿ ಬರಬೇಕಿತ್ತು. ಏಕೆಂದರೆ, ಅತ್ಯಂತ ವೇಗವಾಗಿ ರಭಸದಲ್ಲಿ ಹರಿಯುವ ಅಲಕನಂದಾ ನದಿಯನ್ನು ಅದು ಈಜುವುದು ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರೂ ಅಧಿಕಾರಿಗಳು ಸೇತುವೆಯ ಎರಡು ಬದಿಯಿದ್ದ ಗೋಪುರಗಳ ಮೇಲೆ ನಿರಂತರ 60 ದಿನಗಳ ರಾತ್ರಿ ಕಾವಲು ಕುಳಿತರು. ಕಡೆಗೂ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಒಂದು ದಿನ ತಡರಾತ್ರಿಯ ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಸೇತುವೆ ಮೇಲೆ ನರಭಕ್ಷಕ ನಡೆದು ಬಂತು. ಸೇತುವೆಯ ಮಧ್ಯದವರೆಗೆ ಬರುವುದನ್ನೇ ಕಾಯುತ್ತಿದ್ದ ಅವರಲ್ಲಿ, ರುದ್ರಪ್ರಯಾಗದ ದಿಕ್ಕಿನ ಗೋಪುರದಲ್ಲಿ ಕುಳಿತಿದ್ದ ಅಧಿಕಾರಿ ತಡಮಾಡದೇ, ನರಭಕ್ಷಕನತ್ತ ಗುರಿಯಿಟ್ಟು ಗುಂಡುಹಾರಿಸಿದ. ಬಂದೂಕಿನಿಂದ ಸಿಡಿದ ಗುಂಡು ಚಿರತೆಗೆ ಬಡಿಯುವ ಬದಲು, ಅದರ ಮುಂಗಾಲಿನ ಸಮೀಪ ಸೇತುವೆಗೆ ಬಿಗಿಯಲಾಗಿದ್ದ ಮರದ ಹಲಗೆಗೆ ತಾಗಿತು. ಆದರೂ ಕೂಡ ಗುಂಡಿನಿಂದ ಸಿಡಿದ ಚೂರೊಂದು ಅದರ ಕಾಲನ್ನು  ಘಾಸಿಗೊಳಿಸಿತ್ತು. ಗುಂಡಿನ  ಶಬ್ಧಕ್ಕೆ ಬೆದರಿದ ಚಿರತೆ ತಾನು ಬಂದ ದಾರಿಯತ್ತ ಹಿಂತಿರುಗಿ ಶರವೇಗದಿಂದ ಓಡುತ್ತಿರುವಾಗ, ಅತ್ತ ಕರ್ಣಪ್ರಯಾಗದ ದಿಕ್ಕಿನ ಗೋಪುರದಲ್ಲಿದ್ದ ಅಧಿಕಾರಿ ತನ್ನ ಪಿಸ್ತೂಲಿಂದ ಆರು ಗುಂಡುಗಳನ್ನು ಹಾರಿಸಿದ ಆದರೆ, ಎಲ್ಲವೂ ಗುರಿತಪ್ಪಿ ನರಭಕ್ಷಕ ಸಾವಿನ ಬಾಯಿಂದ ಪಾರಾಗಿತ್ತು. ನಂತರ ಗೋಪುರದಿಂದ ಕೆಳಗಿಳಿದು ಬಂದ ಇಬ್ಬರೂ ಸ್ಥಳವನ್ನು ಅವಲೋಕಿಸಿ. ಗುಂಡಿನ ದಾಳಿಯಿಂದ ಚಿರತೆ ಗಂಭೀರವಾಗಿ ಗಾಯಗೊಂಡು ಸತ್ತಿರಬಹುದೆಂದು ನದಿಯ ಇಕ್ಕೆಲಗಳಲ್ಲಿ ಬೆಳಕರಿದ ಮೇಲ ಎಲ್ಲೆಡೆ ಜಾಲಾಡಿದರು. ಆದರೆ, ಚಿರತೆಯ ಯಾವ ಸುಳಿವು ಸಿಗಲಿಲ್ಲ. ಈ ಘಟನೆ ಸಂಭವಿಸಿದ ಐದು ತಿಂಗಳವರೆಗೆ ಎಲ್ಲಿಯೂ ನರಭಕ್ಷಕನ ದಾಳಿ ನಡೆಯಲಿಲ್ಲವಾದ್ದರಿಂದ ಎಲ್ಲರೂ ಅದು ಗುಂಡೇಟಿನಿಂದ ಅಸುನೀಗಿದೆ ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದರು, ಆದರೆ, ಐದು ತಿಂಗಳ ತರುವಾಯ ನರಬಲಿಯ ಬೇಟೆಯೊಂದಿಗೆ ನರಭಕ್ಷಕ ಚಿರತೆ ತಾನು ಇನ್ನೂ ಸತ್ತಿಲ್ಲವೆಂದು ಅಪಾಯದ ಸೂಚನೆಯನ್ನು ರುದ್ರಪ್ರಯಾಗದ ಪ್ರಾಂತ್ಯದ ಜನತೆಗೆ ರವಾನಿಸಿ, ಮತ್ತೆ ಎಲ್ಲರನ್ನು ಆತಂಕದ ಮಡುವಿಗೆ ನೂಕಿತು.

ಒಂದು ಸಂಜೆ ನೈನಿತಾಲ್‌ನ ಕ್ಲಬ್‌ನಲ್ಲಿ ಗೆಳೆಯರೊಂದಿಗೆ ವಿಸ್ಕಿ ಕುಡಿಯುತ್ತಾ ಕುಳಿತ್ತಿದ್ದ ಕಾರ್ಬೆಟ್, ನರಭಕ್ಷಕ ಚಿರತೆಯ ಬಗ್ಗೆ ಎಲ್ಲರೂ ಮಾತನಾಡುವುದನ್ನು ಸುಮ್ಮನೇ ಕೇಳಿಸಿಕೊಳ್ಳುತ್ತಾ ಕುಳಿತ್ತಿದ್ದ. ಶಿಕಾರಿ ಹವ್ಯಾಸವಿದ್ದ ಹಲವಾರು ಯೂರೋಪಿಯನ್ನರು ಅಲ್ಲಿದ್ದರು. ಸರ್ಕಾರ ನರಭಕ್ಷಕ ಬೇಟೆಗೆ ಸರ್ಕಾರ ಆಹ್ವಾನವಿತ್ತಿದ್ದರೂ ಯಾರೊಬ್ಬರೂ ಹೋಗಲು ಅಂಜುತ್ತಿದ್ದರು. ಚಿರತೆಯನ್ನು ಕೊಲ್ಲಲು ಸರ್ಕಾರ ಅಂತಿಮವಾಗಿ ಅದು ಬೇಟೆಯಾಡುತ್ತಿದ್ದ ಪ್ರಾಣಿಗಳು ಅಥವಾ ಮನುಷ್ಯರ ಶವಕ್ಕೆ ಸೈನೈಡ್ ಮತ್ತು ಇತರೆ ವಿಷಗಳನ್ನು ಹಾಕಿ ಕೊಲ್ಲಲು ಪ್ರಯತ್ನಿದರೂ ಇದರಿಂದ ಯಾವ ಪ್ರಯೋಜನವಾಗಲಿಲ್ಲ. ಈ ಎಲ್ಲಾ ಘಟನೆಗಳ ನಡುವೆ ಈ ನರಭಕ್ಷಕ ಚಿರತೆಗೆ ದೈವಿಶಕ್ತಿ ಇದೆ ಎಂಬ ಪುಕಾರು ಎಲ್ಲೆಡೆ ಹಬ್ಬಿದ ಪರಿಣಾಮ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಯಿತು. ಅಂದು ರಾತ್ರಿ ಕಾರ್ಬೆಟ್ ಕ್ಲಬ್‌ನಿಂದ ಮನೆಗೆ ಬರುವುದರೊಳಗೆ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿ ಇಬ್ಸೋಟನ್‌ನಿಂದ ಕಾಗದದ ಲಕೋಟೆಯೊಂದು ಬಂದಿತ್ತು. ಸರ್ಕಾರದ ಪರವಾಗಿ ಇಬ್ಸೋಟನ್ ನರಭಕ್ಷ ಚಿರತೆಯನ್ನು ಬೇಟೆಯಾಡಲು ಜಿಮ್ ಕಾರ್ಬೆಟ್‌ನನ್ನು ವಿನಂತಿಸಿಕೊಂಡಿದ್ದ. ಈ ಪತ್ರ ಕಾರ್ಬೆಟ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

                                                (ಮುಂದುವರಿಯುವುದು)