Monthly Archives: May 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-9)


– ಡಾ.ಎನ್.ಜಗದೀಶ್ ಕೊಪ್ಪ


 

The greatest of evils and the worst of crimes is poverty. -Bernard Shaw

ಶ್ರೀಕಾಕುಳಂ ಜಿಲ್ಲೆಯನ್ನು ಬೆಂಕಿ ಮತ್ತು ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟ, ಹೇಳಲು ಬಾಯಿಲ್ಲದೆ, ಎದುರಿಸಲು ಆತ್ಮ ಸ್ಥೈರ್ಯವಿಲ್ಲದೆ, ನರಳಿದ್ದ ಬುಡಕಟ್ಟು ಜನಾಂಗದ ಪುರುಷರು ಹಾಗೂ  ಮಹಿಳೆಯರಿಗೆ ಅನಿರೀಕ್ಷಿತವಾಗಿ ಸ್ವಾಭಿಮಾನದ ಬದುಕನ್ನು ಅವರೆದುರು ಅನಾವರಣಗೊಳಿಸಿತ್ತು. ಅದೇ ರೀತಿ ಪಟ್ಟಭದ್ರ ಹಿತಾಶಕ್ತಿಗಳ ಬೇರುಗಳನ್ನು ಬುಡಸಮೇತ ಅಲುಗಾಡಿಸಿತು.
ಜನಸಾಮಾನ್ಯರು ನಡೆಸಿದ ಪಂಚಾಯಿತಿ ಸಭೆಯಲ್ಲಿ ಕೈಕಟ್ಟಿ ನಿಂತು ಅವರು ಒಮ್ಮತದಿಂದ ನೀಡುವ ತೀರ್ಪಿಗೆ ಭೂಮಾಲಿಕರು, ದಲ್ಲಾಳಿಗಳು, ಬಡ್ಡಿ ವ್ಯಾಪಾರದ ಸಾಹುಕಾರರು ಪ್ರತಿರೋಧವಿಲ್ಲದೆ ತಲೆಬಾಗಿದರು.

1969 ರ ಮೆ11 ರಂದು ಪತನಪಟ್ನಂ ತಾಲೂಕಿನ ಎತಮನಗುಡ ಎಂಬ ಹಳ್ಳಿಯ ಜಮೀನ್ದಾರನಾದ ಐವತ್ತು ವರ್ಷದ ಪಿ.ಜಮ್ಮುನಾಯ್ಡು ಎಂಬಾತನನ್ನು 200 ಮಂದಿ ಹೋರಾಟಗಾರರು ಅವನ ಮನೆಯಿಂದ ಅನಾಮತ್ತಾಗಿ ಎತ್ತಿ ಹಾಕಿಕೊಂಡು ಬಂದು, ಪಂಚಾಯಿತಿ ಸಭೆ ಮುಂದೆ ನಿಲ್ಲಿಸಿದರು. ಈತನಿಗೆ ಏಳು ಮಂದಿ ಪತ್ನಿಯರು ಅವರಲ್ಲಿ ಇವನು ಅಪಹರಿಸಿಕೊಂಡು ಹೋಗಿದ್ದ ಬುಡಕಟ್ಟು ಜನಾಂಗದ ನಾಲ್ವರು ಮಹಿಳೆಯರಿದ್ದರು. ಆ ನಾಲ್ವರಲ್ಲಿ ಇಬ್ಬರು, ಇನ್ನೂ ಅಪ್ರಾಪ್ತ ಬಾಲಕಿಯರು. ಈತ ಪೊಲೀಸರ ಬೆಂಬಲದಿಂದ ಆದಿವಾಸಿಗಳ 600 ಎಕರೆಗೂ ಹೆಚ್ಚು ಭೂಮಿಯನ್ನು ಕಬಳಿಸಿದ್ದ. ಸಭೆಯಲ್ಲಿ ಆತನಿಗೆ ಅವನ ಸಹೋದರರು ಮತ್ತು ಪತ್ನಿಯರ ಎದುರೇ, ಸಾವಿನ ಶಿಕ್ಷೆಯನ್ನು ವಿಧಿಸಲಾಯಿತು. ಜಮೀನ್ದಾರನ ರುಂಡ ಮುಂಡವನ್ನು ಎಲ್ಲರೆದುರು ಬೇರ್ಪಡಿಸಿ, ರುಂಡವನ್ನು ಊರಿನ ಮಧ್ಯಭಾಗದಲ್ಲಿ ಕೆಂಪು ಧ್ವಜದೊಂದಿಗೆ ನೇತು ಹಾಕಲಾಯಿತು.

ಮತ್ತೊಂದು ಘಟನೆಯಲ್ಲಿ ಬಡ್ಡಿ ವ್ಯಾಪಾರಿಯೊಬ್ಬನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತ ಆದಿವಾಸಿಗಳಿಗೆ ವರ್ಷವೊಂದಕ್ಕೆ ಒಂದು ರೂಪಾಯಿಗೆ ಪ್ರತಿಯಾಗಿ ಐದು ರೂಪಾಯಿ ಬಡ್ಡಿ ಹಣ ಕಲೆ ಹಾಕುತ್ತಿದ್ದ. ನೂರು ರೂಪಾಯಿ ಪಡೆದ ಬಡರೈತ ವರ್ಷ ತುಂಬಿದ ನಂತರ ಈತನಿಗೆ ಆರು ನೂರು ನೀಡಬೇಕಾಗಿತ್ತು. ಈ ಬಡ್ಡಿ ವ್ಯಾಪಾರಿ ಆದಿವಾಸಿ ರೈತರಿಂದ ಹಣದ ಬದಲು ಅವರು ಕಾಡಿನಲ್ಲಿ ಕಲೆ ಹಾಕುತ್ತಿದ್ದ ಹುಣಸೆ ಹಣ್ಣನ್ನು ಪಡೆಯುತ್ತಿದ್ದ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1600 ರೂ. ಇದ್ದರೆ, ಈ ವ್ಯಾಪಾರಿ ಆದಿವಾಸಿ ರೈತರಿಂದ ಕೇವಲ 600 ರೂ. ಗಳಿಗೆ ಪಡೆಯುತ್ತಿದ್ದ. ಸಾಲದ ಸುಳಿಗೆ ಸಿಲುಕಿದ ಆದಿವಾಸಿಗಳು, ಅವನು ಕೇಳಿದ ಬೆಲೆಗೆ ಹುಣಸೆ ಹಣ್ಣನ್ನು ನೀಡಿ ಸಾಲದಿಂದ ವಿಮುಕ್ತಿಯಾಗುತ್ತಿದ್ದರು. ವಿಚಾರಣೆಯಲ್ಲಿ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡು, ಬಡ್ಡಿ ಹಣವನ್ನು ಹಿಂತಿರುಗಿಸಲು ಒಪ್ಪಿ. ಪ್ರಾಣ ಭಿಕ್ಷೆಗೆ ಅಂಗಲಾಚಿದ ಫಲವಾಗಿ, ವ್ಯಾಪಾರಿಗೆ ದಂಡವಿಧಿಸಿ ಬಿಡುಗಡೆಗೊಳಿಸಲಾಯಿತು.

ಇಂತಹ ವಿವೇಚನೆಯ ತೀರ್ಮಾನಗಳ ನಡುವೆಯೂ, ಹೋರಾಟದ ಸಂಭ್ರಮದಲ್ಲಿ ಉದ್ರಿಕ್ತರಾಗಿದ್ದ ಆದಿವಾಸಿಗಳಿಗೆ ಎಲ್ಲಾ ರೀತಿಯ ವಿವೇಚನೆ ಹಾಗೂ ಮಾನವೀಯತೆಯ ಗುಣಗಳು ಮಾಯವಾಗಿದ್ದವು. ಸೇಡಿನ ಜ್ವಾಲೆ ಅವರ ಮುಖದಲ್ಲಿ ಹತ್ತಿ ಉರಿಯುತ್ತಿತ್ತು. ಸೂರ್ಯ ಚಂದ್ರ ಇರುವವರೆಗೂ ಪಟ್ಟಭದ್ರ ಹಿತಾಶಕ್ತಿಗಳು ನಮ್ಮ ತಂಟೆಗೆ ಬರಬಾರದು ಎಂಬ ಪಾಠವನ್ನು ಅವರಿಗೆ ಕಲಿಸುವ ಹಠಮಾರಿತನವಿತ್ತು. ಹಿಂಸೆಗೆ ಹಿಂಸೆಯೇ ಪ್ರತ್ತ್ಯುತ್ತರ ಎಂಬ ಕಟು ನಿರ್ಧಾರ ಸಹ ಅವರಲ್ಲಿ ಬೇರೂರಿತ್ತು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಗ್ನಿ ಪರ್ವತದ ಜ್ವಾಲೆಯಂತೆ ಭುಗಿಲೆದ್ದ ಆದಿವಾಸಿಗಳ ಪ್ರತಿಭಟನೆಗೆ ನಾಗರಿಕ ಜಗತ್ತು ಬೆಚ್ಚಿಬಿದ್ದಿತು. ಆಂಧ್ರ ಸರ್ಕಾರಕ್ಕೆ ಏನೂ ತೋಚದಂತಾಯಿತು. ಏಕೆಂದರೆ, ಹೋರಾಟಗಾರರು ನಡೆಸುತ್ತಿದ್ದ ನರಹತ್ಯೆಗೆ, ಸ್ವತಃ ಪೊಲೀಸರೇ ನಡುಗಿ ಹೋಗಿದ್ದರು. ಇದರಿಂದಾಗಿ ಹೋರಾಟದ ಜ್ವಾಲೆ ಕಾಡ್ಗಿಚ್ಚಿನಂತೆ ಆಂಧ್ರದ ಇತರೆ ಜಿಲ್ಲೆಗಳಾದ ಕಮ್ಮಮ್, ವಾರಂಗಲ್, ಅದಿಲಾಬಾದ್, ಕರೀಂನಗರದ ಪ್ರದೇಶಗಳಿಗೂ ಹರಡಿತು ಟಿ.ನಾಗಿರೆಡ್ಡಿ ಎಂಬ ನಾಯಕ ಈ ಜಿಲ್ಲೆಗಳಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ. ನಕ್ಸಲ್ ಚಳವಳಿ ಕೇವಲ ಐದು ತಿಂಗಳ ಅವಧಿಯಲ್ಲಿ ತೆಲಂಗಾಣ ಪ್ರಾಂತ್ಯದ 10 ಸಾವಿರ ಚದುರ ಕಿ.ಮಿ. ವ್ಯಾಪ್ತಿಯ ಹಳ್ಳಿಗಳಿಗೆ ಹರಡಿ, ನಾಲ್ಕು ಲಕ್ಷ ಜನ ಹೋರಾಟಕ್ಕೆ ಕೈ ಜೋಡಿಸಿದರು.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಆಂಧ್ರ ಸರ್ಕಾರ, ಹೋರಾಟಕ್ಕೆ ಸಂಬಂಧಿಸಿದಂತೆ 1969 ರ ಡಿಸಂಬರ್ ತಿಂಗಳಿನಲ್ಲಿ ನಾಗಿರೆಡ್ಡಿ ಸೇರಿದಂತೆ ಏಳು ಜನ ಪ್ರಮುಖ ನಾಯಕರನ್ನು ಬಂಧಿಸಿತು. ನಾಗಿರೆಡ್ಡಿಯ ಬಂಧನದ ನಂತರ ಅವನ ಅನುಪ ಸ್ಥಿತಿಯಲ್ಲಿ ಚಂದ್ರಪುಲ್ಲ ರೆಡ್ಡಿ ಹೋರಾಟವನ್ನು ಮುನ್ನಡೆಸಿದನು. ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1969 ರ ಆಗಸ್ಟ್ ತಿಂಗಳ 12 ರಂದು. ಆಂಧ್ರ ಸರ್ಕಾರ ವಿಶಾಖಪಟ್ಟಣದಲ್ಲಿ, ನೆರೆಯ ಒರಿಸ್ಸಾ ಮತ್ತು ಮಧ್ಯಪ್ರದೇಶದ ಅಧಿಕಾರಿಗಳ ಜೊತೆ ಗುಪ್ತ ಸಮಾಲೋಚನೆ ನಡೆಸಿತು. ಅಲ್ಲದೇ, ನೇರ ಕಾರ್ಯಾಚರಣೆಗೆ ಮುಂದಾಯಿತು. ಈ ಕಾರ್ಯಾಚರಣೆಯ ಮುಖ್ಯ ಗುರಿ ನಕ್ಸಲ್ ಚಳವಳಿಯ ನಾಯಕರನ್ನು ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸುವುದಾಗಿತ್ತು.

1969 ರ ಅಂತ್ಯದ ವೇಳೆಗೆ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಪ್ರಮುಖ ನಾಯಕರಾದ ಭಾಸ್ಕರ ರಾವ್, ತಮ್ಮಡ ಗಣಪತಿ, ನಿರ್ಮಲ ಕೃಷ್ಣಮೂರ್ತಿ, ಸುಬ್ಬರಾವ್ ಪ್ರಾಣಿಗ್ರಹಿ, ರಮೇಶ್ಚಂದ್ರ ಸಾಹು ಇವರು ಆಂಧ್ರ ಪೊಲೀಸರ ಬಂಧನಕ್ಕೆ ಒಳಗಾಗಿ, ಪೊಲೀಸರ ಎನ್‌ಕೌಂಟರ್ ಎಂಬ ನರಹತ್ಯೆಗೆ ಪರ್ವತದ ನಿರ್ಜನ ಪ್ರದೇಶದಲ್ಲಿ ಬಲಿಯಾದರು. ಭಾರತದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಇದು ಪ್ರಥಮ ಎನ್‌ಕೌಂಟರ್ ಪ್ರಕರಣ. ಸಂಧಾನದ ಮೂಲಕ ಬಗೆ ಹರಿಯಬಹುದಾಗಿದ್ದ ಆದಿವಾಸಿಗಳ ನ್ಯಾಯಯುತವಾದ ಹೋರಾಟಕ್ಕೆ ಪ್ರತಿಯಾಗಿ ಆಂಧ್ರ ಸರ್ಕಾರ ಮತ್ತು ಅಲ್ಲಿನ ಪೊಲೀಸರು, ಹಿಂಸೆಯ ಹಾದಿ ತುಳಿದರು. ನಕ್ಸಲಿಯರನ್ನು ಶಾಶ್ವತವಾಗಿ ಹಿಂಸೆಯನ್ನು ತುಳಿಯುವಂತೆ ಮಾಡಿದರು.

ವರ್ತಮಾನದ ನಾಗರಿಕ ಸಮಾಜದಲ್ಲಿ ಹಿಂಸೆಯನ್ನು ಪ್ರತಿಪಾದಿಸುವುದು, ಅಥವಾ ಬೆಂಬಲಿಸುವುದು, ಅವಿವೇಕತನ. ಅಷ್ಟೇ ಅಲ್ಲ, ಅದೊಂದು ಅನಾಗರಿಕ ನಡುವಳಿಕೆ ಕೂಡ. ಆದರೆ, ನಕ್ಸಲಿಯರು, ವರ್ತಮಾನದ ಭಾರತದಲ್ಲಿ ದೇಶಾದ್ಯಂತ ಪೊಲೀಸರನ್ನ ಏಕೆ ಇಷ್ಟೊಂದು ನಿರ್ಧಯವಾಗಿ ಕೊಲ್ಲುತ್ತಿದ್ದಾರೆ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೊರಟರೆ, ಅದು ನಮ್ಮನ್ನು ಮೇಲ್ಕಂಡ ದುರಂತದ ಕಥನದ ಬಳಿ ಕರೆದು ತಂದು ನಿಲ್ಲಿಸುತ್ತದೆ.

ನಕ್ಸಲಿಯರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಗುಡ್ಡಗಾಡಿನ ರೈತರು, ಕೃಷಿ ಕೂಲಿಕಾರ್ಮಿಕರು, ಆದಿವಾಸಿಗಳು, ಈ  ದೇಶದ ಭದ್ರತೆಗೆ, ಅಥವಾ ಆಂಧ್ರ ಸರ್ಕಾರದ ಪತನಕ್ಕೆ ಎಂದೂ ಒಳಸಂಚು ರೂಪಿಸಿದವರಲ್ಲ, ಮೇಲಾಗಿ ಅವರ್‍ಯಾರು ವಿದೇಶಿ ಆಕ್ರಮಣಕಾರರೂ ಆಗಿರಲಿಲ್ಲ. ಅವರ ಬೇಡಿಕೆಗಳು ಕೂಡ ಅತಿ ಸಾಮಾನ್ಯವಾಗಿದ್ದವು. ಅವರು ಬಯಸಿದ್ದು ಯಾವುದೇ ರೀತಿಯ ಕಿರುಕುಳವಿಲ್ಲದ ನೆಮ್ಮದಿಯ ಬದುಕನ್ನು ಮಾತ್ರ. ಆದರೆ, ಈ ನಮ್ಮ ಸರ್ಕಾರಗಳು, ಆಳುವ ಪ್ರತಿನಿಧಿಗಳು ಇವರುಗಳಿಗೆ ಮಾಡಿದ್ದಾದರೂ ಏನು? ಇವರ ಬದುಕನ್ನು ಶೋಷಿಸುವುದನ್ನೇ ವೃತ್ತಿ ಮಾಡಿಕೊಂಡ ಭೂಮಾಲೀಕರ ಕೈಗೆ ಒಪ್ಪಿಸಿ ಇಡೀ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತ್ತಿತು. ಅಸಮಾನತೆ, ಅತ್ಯಾಚಾರ, ಶೋಷಣೆಗಳೇ ತಾಂಡವಾಡುತ್ತಿದ್ದ ವ್ಯವಸ್ಥೆಯಲ್ಲಿ ಆದಿವಾಸಿಗಳು, ಪ್ರಾಣಿಗಳಂತೆ ಬದುಕಿ ಜಂಗಲ್‌ರಾಜ್ಯದ ಕಾನೂನಿಗೆ ತಮ್ಮಗಳ ಇಡೀ ಜೀವನವನ್ನೇ ಒತ್ತೆಯಿಡಬೇಕಾಯಿತು.

ಹೋರಾಟದ ಆರಂಭದ ದಿನಗಳಲ್ಲಿ ಈ ಆದಿವಾಸಿಗಳ ಬೇಡಿಕೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದರೆ, ನಕ್ಸಲಿಯರ ಹಿಂಸಾಚಾರದ ಇತಿಹಾಸ ಇಲ್ಲಿಯವರೆಗೂ ಮುಂದುವರಿಯುತ್ತಿತ್ತೆ? ಇದು ನಮ್ಮ ನಮ್ಮ ಆತ್ಮಸಾಕ್ಷಿಗೆ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ. ಅವರುಗಳು ಯಾವ ಸಾಮ್ರಾಜ್ಯದ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿರಲಿಲ್ಲ. ಈ ನೆಲದಲ್ಲಿ ಪ್ರಕೃತಿಯ ಮಕ್ಕಳಾಗಿ ಹುಟ್ಟಿ, ಇಲ್ಲಿನ ಸಮಾಜಕ್ಕೆ ಅಥವಾ ಪರಿಸರಕ್ಕೆ ಯಾವ ಕೇಡನ್ನೂ ಬಗೆದಿರಲಿಲ್ಲ. ಆಳುವ ಸರ್ಕಾರಗಳು ಜೀವ ಭಯದ ಮೂಲಕ ಚಳವಳಿಯ ಹುಟ್ಟಡಗಿಸಲು ಹೋಗಿ, ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದವು. ಇದು ಎಂತಹ ಅವಿವೇಕತನದ ನಡುವಳಿಕೆ ಎಂದರೆ, ಬಾಯಾರಿ ನೀರಿಗಾಗಿ ಬೊಗಸೆಯೊಡ್ಡಿದವನ ಕೈಗೆ ಕುಡಿಯುವ ನೀರು ಸುರಿಯುವ ಬದಲು, ಮೂತ್ರ ವಿಸರ್ಜನೆ ಮಾಡಿದಂತೆ. ಇದನ್ನು ಜಾಣ್ಮೆಯ ನಡೆಎನ್ನಲಾಗದು. ಅಮಾನುಷ ಕ್ರಿಯೆ ಎಂದು ಕರೆಲಾಗುತ್ತದೆ. ನಕ್ಸಲ್ ಹೋರಾಟದ ಇತಿಹಾಸದುದ್ದಕ್ಕೂ ಸರ್ಕಾರಗಳು ಇಂತಹ ಅವಿವೇಕತನಗಳನ್ನು ಮಾಡಿಕೊಂಡು ಬಂದಿವೆ. ಈ ನೆಲದಲ್ಲಿ ಮುಕ್ತವಾದ ಮಾತುಕತೆ ಅಥವಾ ಸಂಧಾನದ ಮೂಲಕ ಬಗೆ ಹರಿಯದ ಸಮಸ್ಯೆಗಳು ಯಾವುವೂ ಇಲ್ಲ ಎಂಬ ಕಟು ಸತ್ಯವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಮೊದಲು ಅರಿಯಬೇಕು.

ನಕ್ಸಲ್ ನಾಯಕರ ಎನ್‌ಕೌಂಟರ್ ಘಟನೆ ನಕ್ಸಲಿಯ ಹೋರಾಟಗಾರರಲ್ಲಿ ಬೆದರಿಕೆಯನ್ನು ಹುಟ್ಟು ಹಾಕುವ ಬದಲು, ಅವರನ್ನು ಮತ್ತಷ್ಟು ಕೆರಳಿಸಿತು. ಈ ಘಟನೆಗೆ ಪ್ರತಿಯಾಗಿ ಅವರು, 1970 ಜನವರಿ 8 ರಂದು ಮತ್ತೊಬ್ಬ ಜಮೀನ್ದಾರನ ಹತ್ಯೆಯನ್ನು ಅತ್ಯಂತ ಭೀಕರವಾಗಿ ನಡೆಸಿದರು. ಸೋಂಪೇಟ ತಾಲೂಕಿನ ಭಾವನಪುರಂ ಎಂಬ ಹಳ್ಳಿಯ ಹೊರವಲಯದ ತೋಟದಲ್ಲಿ ವಾಸವಾಗಿದ್ದ ವೂನ ಸವರಯ್ಯ ಎಂಬ ಜಮೀನ್ದಾರನನ್ನು ಅವನ ಹೆಂಡತಿ, ಮಕ್ಕಳೆದುರು, ಕತ್ತರಿಸಿ ಹಾಕಿ ಅವನ ದೇಹದ ಅಂಗಾಂಗಗಳನ್ನು ಮನೆಯ ಮುಂಭಾಗದಲ್ಲಿ ತೋರಣದಂತೆ ಕೆಂಪು ಬಾವುಟಗಳ ಸಮೇತ ನೇತು ಹಾಕಲಾಯಿತು. ಅಲ್ಲದೆ, ಅವನ ರಕ್ತದಲ್ಲಿ ಗೋಡೆಯ ಮೇಲೆ ಬರಹವೊಂದನ್ನು ಬರೆಯುವುದರ ಮೂಲಕ ತಾಕತ್ತಿದ್ದರೆ, ನಮ್ಮ ಹೋರಾಟವನ್ನು ನಿಗ್ರಹಿಸಿ ಎಂಬ ಸವಾಲನ್ನು ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಹಾಕಲಾಗಿತ್ತು.

ಬಹುತೇಕ ನಾಯಕರು ಎನ್‌ಕೌಂಟರ್‌ಗೆ ಬಲಿಯಾದ ನಂತರ, ಆಂಧ್ರ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ, ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಗಿರಿಜನರನ್ನು ಸಂಘಟಿಸುವ ಸಂಪೂರ್ಣ ಹೊಣೆ ವೆಂಪಟಾಪು ಸತ್ಯನಾರಾಯಣನ ಮೇಲೆ ಬಿತ್ತು. ಇಂತಹ ವೇಳೆಯಲ್ಲಿ ಸತ್ಯನಾರಾಯಣನಿಗೆ ಅದಿಬಟ್ಲ ಕೈಲಾಸಂ ಎಂಬ ಅದ್ಭುತ ಸಂಘಟನಾಕಾರನೊಬ್ಬ ನೆರವಾದ. ನಾಯಕರ ಹತ್ಯೆಯಿಂದ ಆದಿವಾಸಿ ಹೋರಾಟಗಾರರು ಎದೆಗುಂದಿರಲಿಲ್ಲ. ದಿನನಿತ್ಯ ಜಮೀನ್ದಾರರ ಕೈಗೆ ಸಿಕ್ಕಿ ಸಾಯುವ ಬದಲು, ಪೋಲೀಸರನ್ನು ಎದುರಿಸಿ ಒಂದೇ ದಿನ ಸಾಯೋಣ ಎಂಬ ದೃಢ ನಿರ್ಧಾರಕ್ಕೆ ಅವರೆಲ್ಲಾ ಬದ್ಧರಾಗಿದ್ದರು. ಆದರೆ ಅವರನ್ನು ಮುನ್ನಡೆಸುವ ನಾಯಕರು ಇರಲಿಲ್ಲ. ಈ ಕೊರತೆ ಅವರನ್ನು ಕಾಡುತ್ತಿತ್ತು.

ಶ್ರೀಕಾಕುಳಂ ಜಿಲ್ಲೆಯ ಎನ್‌ಕೌಂಟರ್ ಘಟನೆಯಿಂದ ತೀವ್ರ ಹತಾಶನಾದವನಂತೆ ಕಂಡುಬಂದ ಚಾರುಮುಜಂದಾರ್ ದೂರದ ಕೊಲ್ಕತ್ತ ನಗರದಿಂದ ಆಂಧ್ರದ ಕಾಮ್ರೇಡ್‌ಗಳಿಗೆ ಪ್ರತಿದಿನ ಪತ್ರ ಬರೆದು ಅವರುಗಳನ್ನು ಹೋರಾಟಕ್ಕೆ ಹುರಿದುಂಬಿಸುತ್ತಿದ್ದ. 1970 ರ ಜುಲೈ ತಿಂಗಳಿನಲ್ಲಿ ಪತ್ರ ಬರೆದು, ಈಗ ನೂರು ಸದಸ್ಯರಿರುವ ದಳಗಳನ್ನು ವಿಭಜಿಸಿ, ತಲಾ 10 ರಿಂದ 20 ಸದಸ್ಯರಿರುವ ದಳಗಳನ್ನಾಗಿ ಮಾಡಿ ಎಂದು ಸತ್ಯನಾರಾಯಣನಿಗೆ ಸಲಹೆ ನೀಡಿದ. ಪೊಲೀಸರ ಎನ್‌ಕೌಂಟರ್‌ನಿಂದ ಆಗಿರುವ ಹಿನ್ನಡೆಯಿಂದ ನಕ್ಸಲ್ ಹೋರಾಟ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಚಾರುವಿಗಿತ್ತು. ಆದರೆ, ಜುಲೈ 18 ರಂದು, ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇಬ್ಬರನ್ನು ಸರೆಹಿಡಿದ ಆಂಧ್ರ ಪೊಲೀಸರು. ಅವನ್ನು ಪಾರ್ವತಿಪುರಂ ತಾಲೂಕಿನ ಬೋರಿಬೆಟ್ಟ ಎಂಬಲ್ಲಿಗೆ ಕರೆದೊಯ್ದು, ಬೆಟ್ಟದ ತುದಿಯಲ್ಲಿ ನಿರ್ಧಯವಾಗಿ ಗುಂಡಿಟ್ಟು ಕೊಂದು, ಎನ್‌ಕೌಂಟರ್ ಹೆಸರಿನಲ್ಲಿ ಈ ಹತ್ಯೆಗೆ ತೇಪೆ ಹಚ್ಚಿದರು.

ಈ ಇಬ್ಬರು ನಾಯಕರ ಹತ್ಯೆಯಿಂದಾಗಿ ಶ್ರೀಕಾಕುಳಂ ಪ್ರಾಂತ್ಯದ ಆದಿವಾಸಿ ರೈತರ ಮೊದಲ ಹಂತದ ಹೋರಾಟಕ್ಕೆ ತೆರೆಬಿದ್ದಿತು. ಆದರೆ, ನಕ್ಸಲ್ ಹೋರಾಟವೆಂಬ ಅಗ್ನಿ ಪರ್ವತದ ಲಾವಾರಸ ನೆರೆಯ ರಾಜ್ಯಗಳಿಗೆ ವ್ಯಾಪಿಸಿ, ಹತ್ತು ವರ್ಷಗಳ ನಂತರ ಮತ್ತೇ ತೆಲಂಗಾಣ ಪ್ರಾಂತ್ಯದಲ್ಲಿ, ಪ್ರಜಾಸಮರಂ (ಪೀಪಲ್ಸ್ ವಾರ್) ಎಂಬ  ಹೆಸರಿನಲ್ಲಿ ಉದ್ಭವಗೊಂಡು, ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಾಯಕನನ್ನು ಹುಟ್ಟು ಹಾಕಿತು. ಸೋಜಿಗದ ಸಂಗತಿಯೆಂದರೆ, ಸೀತಾರಾಮಯ್ಯ ಕೂಡ, ನಕ್ಸಲ್ ಹೋರಾಟಕ್ಕೆ ದುಮುಕುವ ಮುನ್ನ, ಸತ್ಯನಾರಾಯಣನಂತೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದ.

ಭ್ರಷ್ಟಾಚಾರಕ್ಕೆ ಭದ್ರತೆ, ಪ್ರಾಮಾಣಿಕತೆಯ ಹತ್ಯೆ

– ಬಿ.ಎಸ್. ಕುಸುಮ

ಸಮಾಜದಲ್ಲಿ ಪ್ರಾಮಾಣಿಕತೆ ಎಂಬ ಪದ ಬಹಳ ಸಂಕೀರ್ಣಗೊಳ್ಳುತ್ತಿದೆ. ಕೇವಲ ರಾಜಕಾರಣಿಗಳ ಭಾಷಣದಲ್ಲಿ, ಚಳವಳಿಗಾರರ ವೇದಿಕೆಗಳಲ್ಲಿ ಮಾತ್ರ ಪ್ರಾಮಾಣಿಕತೆ ಎಂಬ ಪದ ಸುಳಿದಾಡುತ್ತಿದೆಯೇ ಹೊರತು, ಪ್ರಾಮಾಣಿಕತೆಯ ಹತ್ಯೆ ಸಾಲು ಸಾಲಾಗಿ ನಡೆಯುತ್ತಲೇ ಇದೆ. ಇದಕ್ಕೆ ಅನೇಕ ಪ್ರಕರಣಗಳು ಸಾಕ್ಷಿಯಾಗಿವೆ. ದೇಶದ ಕೆಲವು ರಾಜ್ಯಗಳಲ್ಲಿ  ಭ್ರಷ್ಟಾಚಾರದ ವಿರುದ್ದ ನಿಲ್ಲುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳನ್ನು ಕೊಲ್ಲುವುದು ಹೊಸದೇನಲ್ಲ, ಬಿಹಾರದಲ್ಲಿ ರಸ್ತೆ ನಿರ್ಮಾಣದಲ್ಲಿನ ಕಳಪೆ ಗುಣ್ಣಮಟ್ಟದ ಕಾರ್ಯವನ್ನು ಪತ್ತೆ ಹಚ್ಚಿದ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿ ಕೃಷ್ಣಯ್ಯ ಅವರನ್ನು 1994ರಲ್ಲಿ ರಸ್ತೆಯ ಮಧ್ಯದಲ್ಲೇ ಗುಂಡು ಹೊಡೆದು ನಂತರ ಕಲ್ಲಲ್ಲಿ ಹೊಡೆದು ಹತ್ಯೆ ಮಾಡಿದ ಪ್ರಕರಣ ರಾಷ್ಟವ್ಯಾಪ್ತಿ ಪ್ರಚಾರ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ದ ನಿಂತ ಸತ್ಯೇಂದ್ರ ದುಬೆ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಯೋಜನಾ ನಿರ್ದೇಶಕನಾಗಿದ್ದ 30ರ ವಯಸ್ಸಿನ ಯುವಕ) ಮತ್ತು ಎಸ್. ಮಂಜುನಾಥ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಮ್ಯಾನೇಜರ್ ಆಗಿದ್ದ ಕೆ.ಜಿ.ಎಫ್‌.ನ ಯುವಕ) ರ ಹತ್ಯೆಯೂ ಸಹ ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಚಲಿತದಲ್ಲಿತ್ತು. ಈಗ ಕರ್ನಾಟಕದಲ್ಲಿಯೂ ಅಂತಹುದೇ ಹತ್ಯೆಗಳು ಜರುಗಲು ಆರಂಭವಾಗಿವೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎ.ಸಿ.ಎಫ್. ಮದನ ನಾಯಕ್‌ರ ಹತ್ಯೆ ಒಂದು ಘಟನೆಯಾದರೆ,  ಅದಾದ ಕೆಲವೇ ದಿನಗಳಲ್ಲಿ ಸಹಕಾರ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎ.ಎಸ್. ಅಧಿಕಾರಿ ಮಹಾಂತೇಶ್ ಹತ್ಯೆ ಮತ್ತೊಂದು. ಇದರಿಂದ ರಾಜ್ಯದಲ್ಲಿ ಪ್ರಾಮಾಣಿಕವಾಗಿ ಮತ್ತು ಧೈರ್ಯವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಜೀವಕ್ಕೆ ಸಮಾಜದಲ್ಲಿ ಯಾವುದೇ ಭದ್ರತೆ ಇಲ್ಲ ಎಂಬುದು ಸಾಬೀತಾಗುತ್ತಿದೆ.

ಮಹಾಂತೇಶ್ ಮೂಲತಃ ಕುಣಿಗಲ್ ತಾಲೂಕಿನ ಸೀಗೆಹಳ್ಳಿಯವರು. ಅವರ ತಂದೆ ಪುಟ್ಟಣ್ಣಯ್ಯ ಕುಣಿಗಲ್ ಪುರಸಭೆಯ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದ್ದಿದರು. ಪುಟ್ಟಣ್ಣಯ್ಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಹಂತೇಶ್ ಒಬ್ಬರೇ ಗಂಡು ಮಗ. ಮಹಾಂತೇಶ್ ಪಡೆದ್ದು ಕಾನೂನು ಪದವಿ, ಆದರೇ ಅದದ್ದು ಕೆಎಎಸ್ ಅಧಿಕಾರಿ. ದಾವಣಗೆರೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಬೆಂಗಳೂರಿಗೆ 2 ವರ್ಷಗಳ ಹಿಂದೆ ಹಿಂತಿರುಗಿ, ನಗರದ ಚಾಮರಾಜಪೇಟೆಯ ವಿಠ್ಠಲನಗರದಲ್ಲಿ ವಾಸವಾಗಿದ್ದರು. ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದ ಮಹಾಂತೇಶ್ ಮೇ 20 ರಂದು ಬೆಳಿಗ್ಗೆ 6:30 ಕ್ಕೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವನ್ನಪ್ಪಿದರು. ದುರಂತ ಎಂದರೆ ಅವರ ಸಾವಿನ ಹಿಂದಿನ ದಿನ ಅವರ 15 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಇತ್ತು, ಜೊತೆಗೆ ಒಬ್ಬ ಮಗಳ ಹನ್ನೊಂದನೇ ವರ್ಷದ ಹುಟ್ಟು ಹಬ್ಬವಿತ್ತು.

ಹಲ್ಲೆಯ ಹಿನ್ನೆಲೆ

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕನಾಗಿ ಮಹಾಂತೇಶ್ ಕೆಲಸ ನಿರ್ವಹಿಸುತ್ತಿದ್ದರು. ಎರಡೂವರೆ ವರ್ಷದಿಂದ ನಗರ ವಿಭಾಗದ ಪ್ರತಿಯೊಂದು ಹೌಸಿಂಗ್ ಸೊಸೈಟಿಯ ಕಡತಗಳ ಪರಿಶೀಲನೆಯು ಮಹಾಂತೇಶ್ ಅವರ ಮಾರ್ಗದರ್ಶದಲ್ಲಿಯೇ ನಡೆಯುತ್ತಿತ್ತು. ಲಂಚ ಎಂದರೆ ಕಿಡಿ ಕಾರುತ್ತಿದ್ದ ಮಹಾಂತೇಶ್ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ 2 ಪ್ರಮುಖ ಸೊಸೈಟಿಗಳಿಗೆ ಸಂಬಂದಪಟ್ಟ ಕಡತಗಳ ಪರಿಶೀಲನೆಯನ್ನು ನಡೆಸುತ್ತಿದ್ದರು. ಬೆಮೆಲ್, ಟಿಲಿಕಾಂ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅವ್ಯವಹಾರವನ್ನು ಬಗ್ಗೆ ತನಿಖೆ ನಡೆಸುತ್ತಿದ್ದ ಮಹಾಂತೇಶ್ ಅನೇಕ ಭೂಮಾಫಿಯ ಜನರಿಗೆ ಮತ್ತು ಅವರ ಅಕ್ರಮ ಕಾರ್ಯಸಾಧನೆಗೆ ಅಡ್ಡಿಯಾಗಿದ್ದರು. ಇದರ ಹಿನ್ನೆಲ್ಲೆಯಲ್ಲಿ ಮಹಾಂತೇಶ್ ಮೇಲೆ ಈ ಹಿಂದೆ ಕೂಡ ಹಲ್ಲೆ ನಡೆದಿತ್ತು. ಬೆದರಿಕೆಯ ಕರೆಗಳು ಸಹಾ ಬರುತ್ತಿದ್ದವು. ಆದರೆ ಮಹಾಂತೇಶ್ ಯಾವುದೇ ದೂರನ್ನು ದಾಖಲಿಸಿರಲ್ಲಿಲ್ಲ.

ಬೆಂಗಳೂರಿನ ಸುತ್ತಮುತ್ತ ಇರುವ ಭೂಮಿಯ ಬೆಲೆ ಬಂಗಾರಕ್ಕೆ ಸಮವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ಕಾಣುತ್ತಾರೆ, ಇಂತಹ ಜನರ ಕನಸನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವಾರು ರಿಯಲ್ ಎಸ್ಟೇಟ್ ಏಜಂಟರು ಗೃಹ ನಿರ್ಮಾಣ ಸಹಕಾರ ಸಂಘಗಳನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಚಾಲಾಕಿತನವನ್ನು ಬಳಸಿ ಜನರ ಸಂಪರ್ಕ ಸಂಪಾದಿಸಿ ಕೋಟಿಗಟ್ಟಲೆ ವ್ಯವಹಾರ ನಡೆಸುವ ದಂಧೆ ಇದಾಗಿದೆ. ಸಹಕಾರ ಸಂಘಗಳನ್ನು ರಚಿಸಿ ಕಂತುಗಳಲ್ಲಿ ಹಣ ಪಡೆದು ನಿವೇಶನ ನೀಡುವುದು ಈ ಸಹಕಾರ ಸಂಘಗಳ ಕೆಲಸ. ಆದರೆ ಕೆಲವು ಸಂಘಗಳು ಸರಿಯಾದ ಸಮಯಕ್ಕೆ ನಿವೇಶನ ನೀಡದೆ ಜನರ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಮತ್ತು ಸುಮಾರು 253 ಸಹಕಾರ ಸಂಘಗಳಲ್ಲಿ ಈ ರೀತಿಯ ಅಕ್ರಮ ಎಸಗಿರುವುದು 2010 ಮತ್ತು 2011 ನೇ ಸಾಲಿನ ಲೆಕ್ಕ ಪರಿಶೋಧನೆಯ ವಾರ್ಷಿಕ ವರದಿಯಲ್ಲಿ ಬಯಲಾಗಿತ್ತು. ಈ ಲೆಕ್ಕ ಪರಿಶೋಧನೆಯ ಉಪನಿರ್ದೇಕರಾಗಿದ್ದ ಮಹಾಂತೇಶ್ ಇಂತಹ ಭೂಅಕ್ರಮಗಳಲ್ಲಿ ತೊಡಗಿದ್ದ ಕೆಲವರ ವಿರುದ್ದ ತನಿಖೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದರು.

ಜೀವನ್ಮರಣ ಹೋರಾಟ ಅಂತ್ಯ

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕನಾಗಿ ಮಹಾಂತೇಶ್ ಅವ್ಯವಹಾರಗಳನ್ನು ಬಯಲಿಗೆ ತರುವ ಮೂಲಕ ದುಷ್ಕರ್ಮಿಗಳ ಕೋಪಕ್ಕೆ ಗುರಿಯಾಗಿದ್ದರು. ಎಮ್.ಎಸ್. ಬಿಲ್ಡಿಂಗ್‌ನಲ್ಲಿರುವ ಕಛೇರಿಯಿಂದ ಮೇ 15 ರಂದು ಸಂಜೆ 4 ಗಂಟೆಗೆ ಅವರು ಸಹಕಾರ ನಗರ ಕೋ-ಆಪರೇಟಿವ್ ಸೊಸೈಟಿಗೆ ಲೆಕ್ಕ ಪರಿಶೋಧನೆಗೆ ತೆರಳಿದ್ದರು. ಅಲ್ಲಿ ಆಡಿಟಿಂಗ್ ಮುಗಿಸಿ ರಾತ್ರಿ 8.30 ಕ್ಕೆ ರ ಸಮಯಕ್ಕೆ ಚಾಮರಾಜಪೇಟೆಯಲ್ಲಿರುವ ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಅವರ ಕಾರನ್ನು ವಿಧಾನಸೌಧಕ್ಕೆ ಕೂಗಳತೆಯ ದೂರದಲ್ಲಿರುವ ಏಟ್ರಿಯಾ ಹೋಟೆಲ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್‌ರನ್ನು ಕಂಡ ದಾರಿಹೋಕರು ವಿಧಾನಸೌಧ ಪೊಲೀಸ್ ಠಾಣೆಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಾಂತೇಶರನ್ನು ಮಲ್ಲಿಗೆ ಆಸ್ಪತ್ರೆಗೆ ಸೇರಿಸಿದರು. ಎಡ ಬದಿಯ ಕಣ್ಣಿನ ರೆಪ್ಪೆ ಸಮೀಪ ರಾಡಿನ ಗಾಯ, ಎಡ ಕಣ್ಣು ಮತ್ತು ಮೂಗಿನ ಮಧ್ಯದ ಭಾಗದಲ್ಲಿ ಹಾಗೂ ಬಲ ಭಾಗದ ಹಣೆ ಮೇಲೆ, ತಲೆ ಹಿಂಭಾಗದಲ್ಲಿ 2.5 ಇಂಚು ಗಾಯ, ತಲೆ ಮಧ್ಯದಲ್ಲಿ 1.5 ಇಂಚು ಗಾಯ ಹಾಗೂ ಮಂಡಿಗಳ ಮೇಲೆಲ್ಲ ಗಾಯಗಲಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ನಾಲ್ಕು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 6:30 ಕ್ಕೆ ಮಹಾಂತೇಶ್ ಸಾವನ್ನಪ್ಪಿದರು,

ಸರ್ಕಾರದ ಉತ್ತರ, ಶೀಘ್ರ ಮಾಹಿತಿ ಬಯಸಿದ ಕೋರ್ಟ್

ಮಹಾಂತೇಶರ ಮೇಲೆ ಹಲ್ಲೆಯಾಗಿ ಇಂದಿಗೆ 15 ದಿನವಾಗಿದೆ. ಅವರು ಸತ್ತು ಹತ್ತು ದಿನ ಮೀರುತ್ತ ಬಂದಿದೆ. ಆದರೂ ಇಲ್ಲಿಯವರೆಗೆ ಅವರ ಹತ್ಯೆಯ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಲಾಗಲಿ. ಅವರ ವಿವರಗಳನ್ನಾಗಲಿ ಶೇಖರಿಸಲು ನಗರದ ಪೋಲಿಸ್ ಇಲಾಖೇಯಿಂದ ಸಾಧ್ಯವಾಗಿಲ್ಲ. ಕೊಲೆಗೆ ಸಂಬಂಧ ಪಟ್ಟಂತೆ ತನಿಖೆಯನ್ನು ತೀವ್ರಗೊಳಿಸಿರುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಹೇಳಿ ವಾರದ ಮೇಲಾಯಿತು. ಪ್ರಕರಣದ ತನಿಖೆಗೆ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆಯನ್ನು ಕೌಟುಂಬಿಕ ಹಿನ್ನೆಲೆ, ವೃತ್ತಿ ವೈಷಮ್ಯ ಅಥವಾ ವೈಯಕ್ತಿಕ ಕಾರಣ ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮಹಾಂತೇಶ್ ಕೊಲೆ ಪ್ರಕರಣ ಸಂಬಂದ ಪಟ್ಟಂತೆ ಪೊಲೀಸರು 17 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಎಂದು ವಾರದಿಂದೆಯೇ ಸುದ್ದಿಯಾಗಿತ್ತು.  ಮತ್ತು 6 ಜನರನ್ನು ಪೋಲಿಸ್ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳೇ ಹೇಳಿದ್ದರು. ಆದರೂ ಸಹಾ ಈ ವಿಚಾರದಲ್ಲಿ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಇದನ್ನೆಲ್ಲ ಮತ್ತು ಮಹಾಂತೇಶರ ಪ್ರಾಮಾಣಿಕ ಸೇವೆಯ ಹಿನ್ನೆಲೆಯನ್ನು ಗಮನಿಸಿ ರಾಜ್ಯದ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನರವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಜೂನ್ 20ರ ಒಳಗೆ ತನಿಖೆ ಮಾಹಿತಿಯನ್ನು ನೀಡಬೇಕು ಎಂದು ಪೀಠ ನಿರ್ದೇಶಿಸಿ ವಿಚಾರಣಿಯನ್ನು ಮೇ 21 ಕ್ಕೆ ಮುಂದೂಡಿದೆ.

ಇತ್ತೀಚಿನ ಸುದ್ದಿಗಳ ಪ್ರಕಾರ ಪೊಲೀಸರು ಮಹಾಂತೇಶರ ಕುಟುಂಬದವರಿಂದ ಮತ್ತು ಅವರ ಸಹೋದ್ಯೋಗಿಗಳಿಂದ ಮಾಹಿತಿ ಪಡೆಯುವ ಕಾರ್ಯ ಮುಗಿಸಿದ್ದು ತನಿಖೆ ಗತಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ ಇನ್ನೂ ಹೆಚ್ಚಿನ ವಿಷಾದ ಏನೆಂದರೆ ಒಬ್ಬ ಸರ್ಕಾರಿ ನೌಕರ ಹಲ್ಲೆಗೀಡಾಗಿ ಸತ್ತಿದ್ದರೂ ಈ ವಿಚಾರದಲ್ಲಿ ಪೊಲೀಸರನ್ನೂ ಒಳಗೊಂಡಂತೆ ಇತರೆ ಸರ್ಕಾರಿ ನೌಕರರ ಎದ್ದುಕಾಣಿಸುತ್ತಿರುವ ದಿವ್ಯನಿರ್ಲಕ್ಷ್ಯ. ತನಿಖೆ ತೀವ್ರಗತಿಯಲ್ಲಿ ಸಾಗಿ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗಲಿ ಎಂಬ ಯಾವುದೇ ಒತ್ತಡ ಈ ಸರ್ಕಾರಿ ನೌಕರರಿಂದ ಮತ್ತು ಅವರ ಸಂಘಗಳಿಂದ ಬೀಳುತ್ತಿರುವ ಹಾಗೆ ಕಾಣಿಸುತ್ತಿಲ್ಲ.

“ಕರ್ನಾಟಕ ರತ್ನ” ಹಾಗೂ “ಬಸವಶ್ರೀ” ಪ್ರಶಸ್ತಿ ಎಸ್.ಆರ್. ಹಿರೇಮಠರಿಗೆ ಸಲ್ಲಬೇಕು

– ಆನಂದ ಪ್ರಸಾದ್

ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಅದಿರಿನ ರಕ್ಷಣೆ ಹಾಗೂ ಗಣಿಗಾರಿಕೆಯ ಹಿಂದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಕಾನೂನು ಹೋರಾಟದಲ್ಲಿ ತೊಡಗಿ ಕರ್ನಾಟಕಕ್ಕೆ ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ಇಂಥವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಘನತೆ ಹೆಚ್ಚಲಿದೆ. ಅಮೇರಿಕಾದಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ಹುದ್ದೆಯನ್ನು ತೊರೆದು ರಾಜ್ಯಕ್ಕೆ ವಾಪಾಸಾಗಿ ಓರ್ವ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತ ನಾಡಿನ ಗಣಿ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲದ ಉಳಿವಿಗಾಗಿ ಕಾನೂನು ಹೋರಾಟದಲ್ಲಿ ತೊಡಗಿರುವ ಹಿರೇಮಠರು ನಮಗೆ ಒಂದು ಆದರ್ಶವಾಗಬೇಕಾಗಿದೆ. ಬಸವಣ್ಣನವರ ಆದರ್ಶಗಳ ಸಾಕಾರ ರೂಪದಂತಿರುವ ಹಿರೇಮಠರು ಬಸವಶ್ರೀ ಪ್ರಶಸ್ತಿಗೆ ಕೂಡ ಅರ್ಹ ಸೂಕ್ತ ವ್ಯಕ್ತಿಯೆನ್ನಲು ಅಡ್ಡಿಯಿಲ್ಲ.

ಇಂದು ಭಾರತದಲ್ಲಿ ಭ್ರಷ್ಟಾಚಾರ, ಅನಾಚಾರ, ಅದಕ್ಷತೆ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪಗಳು, ನ್ಯಾಯ ನಿರ್ಣಯದಲ್ಲಿ ನಡೆಯುತ್ತಿರುವ ವಿಳಂಬ, ಚುನಾವಣಾ ವ್ಯವಸ್ಥೆಯಲ್ಲಿರುವ  ಲೋಪಗಳು ಮೊದಲಾದವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿರಲು ಪ್ರಧಾನ ಕಾರಣ ದೇಶದಲ್ಲಿ ನಾಯಕರ ಕೊರತೆಯಿರುವುದೇ ಆಗಿದೆ. ದೇಶದಲ್ಲಿ ಸಾರ್ವಜನಿಕ ವಿಚಾರಗಳ ಬಗ್ಗೆ ನಿಸ್ವಾರ್ಥವಾಗಿ ಕೆಲಸ ಮಾಡುವವರ ಕೊರತೆ ಇದೆ.  ಸಾರ್ವಜನಿಕ ಆಸಕ್ತಿಯ ವಿಚಾರಗಳನ್ನು ಎತ್ತಿಕೊಂಡು ಜನಜಾಗೃತಿ ಮಾಡುವುದು ಇಂದು ಬಹಳ ಕಠಿಣವಾದ ಕೆಲಸವಾಗಿದೆ. ಏಕೆಂದರೆ ಇಂದು  ಬಹುತೇಕ ಜನರಿಗೆ ರಾಷ್ಟ್ರದ ಅಥವಾ ರಾಜ್ಯದ ಆಗುಹೋಗುಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವೇ  ಇದೆ. ಅದೂ ಅಲ್ಲದೆ ಜನಸಾಮಾನ್ಯರಿಗೆ ತಮ್ಮ ಕುಟುಂಬ ಪಾಲನೆ, ಉದ್ಯೋಗ ಮೊದಲಾದ ಜವಾಬ್ದಾರಿಗಳೂ ಇರುವ ಕಾರಣ ಸಾರ್ವಜನಿಕ ಸಮಸ್ಯೆಗಳ ಬಗೆಗಾಗಲಿ, ದೇಶದ, ರಾಜ್ಯದ  ಸಮಸ್ಯೆಗಳ ಬಗೆಗಾಗಲಿ ಹೋರಾಟ ರೂಪಿಸುವುದಾಗಲಿ ಅಥವಾ ಅದರಲ್ಲಿ ಭಾಗವಹಿಸುವುದಾಗಲಿ ಅಸಾಧ್ಯ. ಹೀಗಾಗಿ ಒಂದು ಹಂತದವರೆಗೆ ತಮ್ಮ ಉದ್ಯೋಗ ಹಾಗೂ ಕುಟುಂಬದ ಜವಾಬ್ದಾರಿಯನ್ನು  ನಿಭಾಯಿಸಿ ನಿವೃತ್ತಿ ಆಗಿರುವವರು, ಅಂದರೆ ತಮ್ಮ ಮಕ್ಕಳ ಕಲಿಕೆಯನ್ನು ಪೂರೈಸಿ ಅವರು ಉದ್ಯೋಗ ಪಡೆದ ನಂತರ ದೇಶದ, ರಾಜ್ಯದ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ  ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಸುಮಾರು ಅರುವತ್ತರ ವಯಸ್ಸಿನ ಆಸುಪಾಸಿನಲ್ಲಿ ವ್ಯಕ್ತಿಯೊಬ್ಬನ ಮಕ್ಕಳ ಕಲಿಕೆ ಮುಗಿದು ಅವರು ಉದ್ಯೋಗ ಪಡೆದು, ಅವರ ಮದುವೆ ಇತ್ಯಾದಿಗಳು ಮುಗಿದು ವ್ಯಕ್ತಿಯೊಬ್ಬನ ಪ್ರಮುಖ ಕೌಟುಂಬಿಕ ಜವಾಬ್ದಾರಿ ಮುಗಿದಿರುತ್ತದೆ. ಹೀಗಾಗಿ ದೇಶದಲ್ಲಿ ನಿವೃತ್ತರು ಅಥವಾ ಅರುವತ್ತರ ನಂತರದ ವಯಸ್ಸಿನವರು ಸಾರ್ವಜನಿಕ ಹಿತಾಸಕ್ತಿಯ ಹೋರಾಟದಲ್ಲಿ ತೊಡಗಲು ಮುಂದೆ ಬಂದರೆ ದೇಶದಲ್ಲಿ  ಬದಲಾವಣೆಯನ್ನು, ಸುಧಾರಣೆಗಳನ್ನು ತರಲು ಸಾಧ್ಯ.

ಸಾರ್ವಜನಿಕ ಜೀವನದ ಸಮಸ್ಯೆಗಳು ಅಥವಾ ದೇಶದ ಸಮಸ್ಯೆಗಳಾದ ಭ್ರಷ್ಟಾಚಾರ, ಸ್ವಜನ  ಪಕ್ಷಪಾತ, ಜಾತೀಯತೆ, ನ್ಯಾಯಾಂಗದ ನಿಧಾನ ಗತಿ, ಚುನಾವಣಾ ಸುಧಾರಣೆಗಳ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಹೋರಾಡುವವರು ಪಕ್ಷಾತೀತ ನಿಲುವನ್ನು ಹೊಂದಿರಬೇಕಾಗುತ್ತದೆ. ಒಂದು ಪಕ್ಷದ ಭ್ರಷ್ಟಾಚಾರವನ್ನು ಟೀಕಿಸಿ ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸುವುದು ಜನಬೆಂಬಲ ಕಳೆದುಕೊಳ್ಳಲು ಕಾರಣವಾಗುತ್ತದೆ.  ಇದಕ್ಕೆ ಸ್ಪಷ್ಟ ಉದಾಹರಣೆ ಅಣ್ಣಾ ಹಜಾರೆ ಹಾಗೂ ಯೋಗ ಗುರು ರಾಮದೇವ್ ಅವರ ಹೋರಾಟಗಳು. ಇಂಥ ಸ್ಥಗಿತ ಸ್ಥಿತಿಯಲ್ಲಿ ಎಸ್.ಆರ್. ಹಿರೇಮಠರಂಥ ನಿಷ್ಪಕ್ಷಪಾತ ಹಾಗೂ ಪ್ರಗತಿಶೀಲ ಮನಸಿನ ವ್ಯಕ್ತಿಗಳು ದೇಶದಲ್ಲಿ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಂಥ ವ್ಯಕ್ತಿಗಳನ್ನು ಮಾಧ್ಯಮಗಳು ಮುಂಚೂಣಿಗೆ ತಂದು ಹೆಚ್ಚಿನ ಪ್ರಚಾರ ನೀಡಬೇಕಾದ ಅಗತ್ಯ ಇದೆ. ಅನಿವಾಸಿ ಭಾರತೀಯರು ಕೂಡ ಇಂಥ ಹೋರಾಟಗಳಿಗೆ ನೈತಿಕ ಹಾಗೂ ಹಣಕಾಸಿನ ಬೆಂಬಲವನ್ನು ನೀಡಲು ಮುಂದೆ ಬರಬೇಕಾದ ಅಗತ್ಯ ಇದೆ. ದೇಶದ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಮಾನಮನಸ್ಕ, ಹೆಚ್ಚಿನ ಕೌಟುಂಬಿಕ ಜವಾಬ್ದಾರಿ ಇಲ್ಲದ ಮತ್ತು ಆರ್ಥಿಕವಾಗಿ ದೃಢ  ಸ್ಥಿತಿಯಲ್ಲಿ ಇರುವ ನಿವೃತ್ತರು ಹಾಗೂ ಇನ್ನಿತರರು ಹೋರಾಟ ಸಮಿತಿ ಹಾಗೂ ಸಂಘಟನೆಗಳನ್ನು ಮಾಡಿಕೊಂಡು ದೇಶವ್ಯಾಪಿ ಹೋರಾಟವನ್ನು ಕಟ್ಟಬೇಕಾದ ಅವಶ್ಯಕತೆ ಇದೆ.  ಬಾಲ್ಯ, ಯೌವನ, ಗೃಹಸ್ಥ ಅವಸ್ಥೆಗಳನ್ನು ಪೂರೈಸಿರುವ ನಿವೃತ್ತರು ಹಾಗೂ ಅರುವತ್ತರ ವಯಸ್ಸನ್ನು ಮೀರಿದವರು ವಾನಪ್ರಸ್ಥ  ಜೀವನಕ್ಕೆ ಅಂದರೆ ದೇಶದ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಜೀವನಕ್ಕೆ  ತಮ್ಮನ್ನು ತೊಡಗಿಸಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಅಗತ್ಯವಿದೆ. ದೇಶದಲ್ಲಿ ಉದ್ಭವಿಸಿರುವ ನಾಯಕತ್ವದ ಕೊರತೆಯನ್ನು ನೀಗಿಸಲು ಇಂಥ ವಾನಪ್ರಸ್ಥ ಅವಸ್ಥೆಯ ಹಿರಿಯ ಜನಾಂಗದ ಅವಶ್ಯಕತೆ ಇದೆ.

ಯುವಕರು ಕಲಿಕೆಯ ಹಂತಗಳಲ್ಲಿ ಅಥವಾ ಉದ್ಯೋಗದ ಪ್ರಾರಂಭಾವಸ್ಥೆಯಲ್ಲಿ  ಇರುವುದರಿಂದ ಅವರು ಇಂಥ ಹೋರಾಟಗಳಲ್ಲಿ ತೊಡಗುವುದು ಅವರ ಕಲಿಕೆಯ ಮೇಲೆ ಅಥವಾ ಉದ್ಯೋಗದ ಮೇಲೆ ಪರಿಣಾಮ  ಬೀರುತ್ತದೆ.  ಹೀಗಾಗಿ ಅವರು ಇಂಥ ಹೋರಾಟಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಲಾರದು. ಆದರೆ ಅವರು ಇಂಥ ಹೋರಾಟಗಳಿಗೆ ನೈತಿಕ ಬೆಂಬಲ ನೀಡಬಹುದು. ಭ್ರಷ್ಟಾಚಾರವು ನಮ್ಮ ದೇಶದಲ್ಲಿ ಮಿತಿಮೀರಿ ಬೆಳೆಯಲು ಕಾರಣ ಭ್ರಷ್ಟರಿಗೆ ಯಾವುದೇ ಶಿಕ್ಷೆ ಆಗದಿರುವುದು ಮತ್ತು ಅವರು ಅಕ್ರಮವಾಗಿ ಕೂಡಿಹಾಕಿದ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗದಿರುವುದೇ ಆಗಿದೆ. ಭ್ರಷ್ಟರಿಗೆ ಶೀಘ್ರವಾಗಿ ಶಿಕ್ಷೆಯಾಗಿ ಅವರು ಕಠಿಣ ಜೈಲು ಶಿಕ್ಷೆ ಅನುಭವಿಸುವಂತಾಗಿ ಅವರು ಕೂಡಿಹಾಕಿದ ಎಲ್ಲ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡು ದೇಶದ ಅಭಿವೃದ್ಧಿಗೆ ಬಳಸುವಂತಾದರೆ ಮುಂದೆ ಭ್ರಷ್ಟಾಚಾರ ಮಾಡಲು ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಿಂಜರಿಯುವ ಪರಿಸ್ಥಿತಿ ನಿರ್ಮಾಣ ಆಗಿಯೇ ಆಗುತ್ತದೆ. ಅದರಲ್ಲಿ ಸಂದೇಹವಿಲ್ಲ.

ಸನ್‌ಫಿಲಮ್ ಮತ್ತು ಅಪರಾಧ ತಡೆ


-ಸೂರ್ಯ ಮುಕುಂದರಾಜ್  


 

ಬಹುಶಃ ಪೆಟ್ರೋಲ್ ಬೆಲೆ ಏರಿಕೆಯ ಭಾರಕ್ಕಿಂತ ಸುಪ್ರೀಂಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದೇಶದ ಅಸಂಖ್ಯಾತ ಕಾರು ಮಾಲೀಕರನ್ನು ಚಿಂತೆಗೀಡು ಮಾಡಿದೆ. ತಮ್ಮ ಕಾರುಗಳ ಕಿಟಕಿಗಳಿಗೆ ಹಾಕಿರುವ ಸನ್‌ಫಿಲಮ್‌ಗಳನ್ನು ಸಾರಿಗೆ ಕಾನೂನು ಪ್ರಕಾರ ಇಲ್ಲವಾದರೆ ತೆಗೆದುಹಾಕಬೇಕೆಂದು ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ತಮ್ಮ ಖಾಸಗಿತನವೇ ಬಟಾಬಯಲು ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಆರ್.ಟಿ.ಒ. ಕಾನೂನು ಕಾರುಗಳ ಸನ್‌ಫಿಲಮ್‌ಗಳು ಮುಂಭಾಗ, ಹಿಂಭಾಗ 70 ರಷ್ಟು ಮತ್ತು ಪಕ್ಕದ ಗಾಜುಗಳು 50 ರಷ್ಟು ಕಾಣುವಂತಿರಬೇಕೆಂದು ಹೇಳುತ್ತದೆ. ಕಾರಣ ಅಪಘಾತಗಳು ಸಂಭವಿಸುತ್ತವೆ, ಕಾರಿನಲ್ಲೇ ಅತ್ಯಾಚಾರವೆಸಗುತ್ತಾರೆ, ಅಪರಾಧಿಗಳ ಇರುವಿಕೆ ತಿಳಿಯುವುದಿಲ್ಲ ಇತ್ಯಾದಿ ಕಾರಣಗಳು. ಇಲ್ಲಿಯವರೆಗೂ ಎಷ್ಟು ಅಪಘಾತಗಳು ಸನ್‌ಫಿಲಮ್‌ಗಳ ಕಾರಣದಿಂದ ಆಗಿವೆಯೆಂದು ಅಂಕಿಅಂಶಗಳಿವೆಯೇ?. ಕಾರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತದೆಯೆಂದು ವಾದಮುಂದಿಡುವ ಅರ್ಜಿದಾರರ ಪ್ರಕಾರ ದೇಶದ ಎಲ್ಲಾ ಟಿಂಟೆಡ್ ಗಾಜುಗಳ ಕಾರುಗಳ ಮಾಲೀಕರು ಅತ್ಯಾಚಾರಿಗಳೇ?. ದೊಡ್ಡ ದೊಡ್ಡ ಕಾರುಗಳಲ್ಲಿ ಅತ್ಯಾಚಾರ ನಡೆಯುತ್ತದೆ ಎಂಬುದನ್ನು ನಂಬಬಹುದು, ಮಾರುತಿ 800, ನ್ಯಾನೋದಂತಹ ಸಣ್ಣಕಾರುಗಳಲ್ಲೂ ರೇಪ್ ಕಿಡ್ನಾಪ್‌ಗಳಾಗಲು ಸಾಧ್ಯವೇ?. ನಮ್ಮ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಾಗರಿಕರ ಖಾಸಗಿತನದ ವಿಚಾರದಲ್ಲಿ ಸುಪ್ರೀಂಕೋರ್ಟ್ ಎಲ್ಲೋ ನಡೆದ ಒಂದೆರಡು ಘಟನೆಗಳನ್ನು ಮುಂದುಮಾಡಿಕೊಂಡು ಏಕಪಕ್ಷೀಯ ನಿರ್ಧಾರ ಪ್ರಕಟಿಸಿರುವುದು ಸರಿಯಾದ ಕ್ರಮವಲ್ಲ.

ಕೆಲವೇ ಕೆಲವು ಕಹಿಘಟನೆಗಳನ್ನು ನೆಪಮಾಡಿಕೊಂಡು ಹಲವು ರೀತಿಯ ಅನೂಕೂಲಗಳಿಗೆ ಬರೆಯೆಳೆಯುವುದು ನ್ಯಾಯಸಮ್ಮತವಲ್ಲ. ಹೆಣ್ಣುಮಕ್ಕಳ ರಕ್ಷಣೆಯನ್ನೇ ಮುಖ್ಯವಾಗಿಟ್ಟು ಅರ್ಜಿದಾರರ ವಾದವನ್ನು ಪರಿಗಣಿಸುವ ನ್ಯಾಯಾಲಯ ಒಂಟಿಯಾಗಿ ಕಾರುಗಳಲ್ಲಿ ಸಂಚರಿಸುವ ಹೆಣ್ಣುಮಕ್ಕಳ ರಕ್ಷಣೆ ಮುಖ್ಯವೆನಿಸುವುದಿಲ್ಲವೇ?. ಯಾವುದೇ ಪ್ರೇರಿತ ಹಿತಾಸಕ್ತಿಗಳನ್ನು ಮನದಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿಯ ಅಭಿಪ್ರಾಯವೇ ಸರ್ವಸಮ್ಮತವೆಂದು ಭಾವಿಸಿಕೊಳ್ಳುವುದು ನ್ಯಾಯದಾನದಲ್ಲಿ ಅಸಮತೋಲನ. ಎಷ್ಟೋ ಜನ ಪುರುಷರು ಕೂಡ ತಮ್ಮ ಕಛೇರಿಗಳ ರಾತ್ರಿ ಪಾಳಿಗಳಿಗೆ ಹೋಗುವಾಗ ದುಷ್ಕರ್ಮಿಗಳ ಕಣ್ಣಿಗೆ ಬೀಳುವ ಮಿಕಗಳಾಗುತ್ತಾರೆ.

ಕಾರುಗಳಲ್ಲಿನ ಬೆಲೆಬಾಳುವ ಸ್ಟೀರಿಯೋಗಳು ಕಳ್ಳರ ಪಾಲಾಗುತ್ತದೆ. ಬೆಲೆಬಾಳುವ ಲ್ಯಾಪ್‌ಟಾಪ್‌ಗಳು, ಕ್ಯಾಮೆರಗಳು ಕೂಡ ಕಾರಿನಿಂದ ಮಾಯಾವಾಗುತ್ತದೆ. ಒಂದು ಕ್ಷಣ ಕಾರಿಗಳ ಸನ್‌ಫಿಲಮ್‌ಗಳ ಮರೆಯಿಂದ ಅಪರಾಧಗಳು ಘಟಿಸುತ್ತವೆಯೆಂದಾದರೆ ನಾಳೆ ಇನ್ನೊಬ್ಬ ನಾಲ್ಕು ಗೋಡೆಗಳ ಮರೆಯಲ್ಲಿ ಲಂಚ ಸ್ವೀಕರಿಸುತ್ತಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಹೆಂಡತಿಯರ ಮೇಲೆ ಸೀಮೆಯೆಣ್ಣೆ ಸುರಿದು ಬೆಂಕಿಯಿಡುತ್ತಾರೆ, ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿಕೊಳ್ಳುತ್ತಾರೆ, ರಾಜಕಾರಣಿ, ಅಧಿಕಾರಿಗಳು ಹಣ ಪೇರಿಸಿಕೊಳ್ಳುತ್ತಾರೆ ಆದ್ದರಿಂದ ಮನೆಗಳಿಗೆ ಕಿಟಕಿ ಬಾಗಿಲು ಗೋಡೆಗಳೇ ಇರಬಾರದೆಂದು ಅರ್ಜಿ ಸಲ್ಲಿಸಿದರೇ ಆತನ ವಾದಕ್ಕೆ ಬೆಲೆಕೊಟ್ಟು ನಡೆದುಕೊಂಡುಬಿಟ್ಟರೇ ದೇಶದ ಪ್ರಜೆಗಳ ಖಾಸಗಿತನದ ಹಕ್ಕು ಬಟಾಬಯಲಾಗುತ್ತದೆ. ಕೋಣೆಗಳು ಪಾರದರ್ಶಕವಾಗಿರಬೇಕೆಂದು ಹೇಳುವುದು ಅಸಮಂಜಸವೋ ಹಾಗೆಯೇ ಕಾರುಗಳ ಸನ್‌ಫಿಲಮ್ ತೆಗೆಯಬೇಕೆಂದು ನಿರ್ದೇಶಿಸುವುದು ಅಸಮಂಜಸ.

ಏಕಪಕ್ಷೀಯವಾಗಿ ದೂಷಿಸುವ ಮೂಲಕ ಸನ್‌ಫಿಲಮ್‌ಗಳಿಂದಾಗುವ ಅನುಕೂಲತೆಗಳನ್ನು ಮರೆಯಬಾರದು. ಬಿಸಿಲಿನ ಪ್ರಭಾವನ್ನು ಕಡಿಮೆಮಾಡುವ ಮೂಲಕ ಹೆಚ್ಚು ಏಸಿ ಬಳಕೆಯನ್ನು ತಡೆಯುತ್ತದೆ. ಜೊತೆಗೆ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸಿ ಚರ್ಮರೋಗಕ್ಕೀಡಾಗುವುದು ತಪ್ಪುತ್ತದೆ. ಇತ್ತೀಚಿನ ಕೆಲವು ಅಪರಾಧ ಸುದ್ಧಿಗಳ ಕಡೆಗೆ ಕಣ್ಣಾಯಿಸಿದರೆ ಹಣ ಸಾಗಿಸುವ ವಾಹನಗಳ ಲೂಟಿ ಮಾಡುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನ್ಯಾಯಾಲಯದ ಆಜ್ಞೇಯ ಮೇರೆಗೆ ಸನ್‌ಫಿಲಮ್‌ಗಳನ್ನು ತೆಗೆದು ನಿಮ್ಮ ಕಾರ್‌ಗಳಲ್ಲಿ ಹಣ ಕೊಂಡೊಯ್ಯುವ ಧೈರ್ಯ ಬರುತ್ತದೆಯೇ? ಇಲ್ಲಿ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆಯೆಳೆದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಕಾರ್‌ಗಳು ಇಂದು ಕೇವಲ ಸಂಚಾರ ವ್ಯವಸ್ಥೆಯ ಭಾಗವಾಗಿ ಉಳಿದಿಲ್ಲ. ಸಾವಿರಾರು ಜನರ ಸಂಚಾರಿ ಕಛೇರಿಗಳಾಗಿ, ತಮ್ಮ ಪರ್ಯಾಯ ಮನೆಗಳಾಗಿ ಬದುಕಿನ ಮುಖ್ಯ ಅಂಗಗಳಾಗಿವೆ. ತಮ್ಮ ಮುಖ್ಯವಾದ ದಾಖಲೆಗಳು, ಕಡತಗಳನ್ನು ಕಾರ್‌ಗಳಲ್ಲಿಟ್ಟು ಕೊಂಡಿರುತ್ತಾರೆ. ಕೇವಲ ವಿ.ಐ.ಪಿ. ಗಳಲ್ಲದೇ ಕರ್ತವ್ಯ ಮುಗಿಸಿ ಮನೆಗೆ ತೆರಳುವ ಪೊಲೀಸ್ ಅಧಿಕಾರಿಗಳ, ವ್ಯಾಪಾರಿಗಳ, ವಕೀಲರು, ಮಾಧ್ಯಮದವರ ಜೀವಕ್ಕೆ ಅಲ್ಪಮಟ್ಟಿಗೆ ರಕ್ಷಣೆಯಿರುವುದು ಟಿಂಟೆಡ್ ಗ್ಲಾಸ್‌ಗಳಿಂದ. ಸನ್‌ಫಿಲಮ್ ತಯಾರಿಸುವ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ, ಮಾರಾಟಮಾಡುವ ಫಿಲಮ್‌ಗಳನ್ನು ಹಾಕುವ ಸಾವಿರಾರು ದುಡಿಯುವ ಕೈಗಳನ್ನು ಕತ್ತರಿಸುವ ತೀರ್ಪು ಇದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸನ್‌ಫಿಲಮ್‌ಗಳ ವಿಲೇವಾರಿಯ ಬಗ್ಗೆ ಯೋಚಿಸಿದರೆ ಸಾಕು ದೇಶಕ್ಕೆ ಆಗುವ ನಷ್ಟದ ಪ್ರಮಾಣದ ಕಲ್ಪನೆಯೇ ಭೀಕರ. ಕಾರ್‌ಗಳ ಮಾಲೀಕರು ಟಿಂಟೆಡ್‌ಗಳನ್ನು ತೆಗೆಸುವು ನಷ್ಟವನ್ನು ಪರಿಗಣಿಸಿದರೆ ಅವರಿಗೆ ಪೆಟ್ರೋಲ್ ಬೆಲೆ ಏರಿಕೆ ಬಾಧೆಯುಂಟುಮಾಡುವುದಿಲ್ಲ. ಸುಪ್ರೀಂಕೋರ್ಟ್ ಏಕಪಕ್ಷೀಯವಾಗಿ ಯೋಚನೆ ಮಾಡದೆ ಈ ದೇಶದ ಖಾಸಗಿ ಹಕ್ಕನ್ನು ಕಿತ್ತುಕೊಳ್ಳುವ ತೀರ್ಪಿನ ಬಗ್ಗೆ ಪುನರಾವಲೋಕನೆ ಮಾಡಬೇಕಿದೆ. ಸಮಾಜದ ಹಿತಕ್ಕಾಗಿ ಸ್ವಯಂಪ್ರೇರಿತರಾಗಿ ಕಾರ್‌ಗಳ ಮಾಲೀಕರು, ವಕೀಲರು ಸುಪ್ರೀಂಕೋರ್ಟ್‌ಗೆ ಪುನರ್ಪರಿಶೀಲನಾ ಅರ್ಜಿಸಲ್ಲಿಸುವ ಹೆಜ್ಜೆಯಿಡಬೇಕು. ಭವಿಷ್ಯದಲ್ಲಿ ಸುಪ್ರೀರಂಕೋರ್ಟ್ ಕೆಟ್ಟ ಉದಾಹರಣೆಗಳನ್ನೇ ಮುಂದಿಟ್ಟುಕೊಂಡು ದೇಶದ ನಾಗರಿಕರಿಗೆ ಹೊರೆಯಾಗುವಂತಹ ತೀರ್ಪು ನೀಡದಿರಲಿ.

ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

– ರವಿ ಕೃಷ್ಣಾರೆಡ್ಡಿ

ನೆನ್ನೆ (27/5/12) ಸಂಜೆಗೆಲ್ಲ ಬಹುಶಃ ದೇಶದ ಬಹಳಷ್ಟು ಜನರಿಗೆ ಐಪಿಎಲ್ ‌ಫೈನಲ್ ಪಂದ್ಯದ ಸಾಂಕ್ರಾಮಿಕ ಜ್ವರ ಹಬ್ಬಿತ್ತು. ಆಟವೂ ಸಹ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಕೊನೆಯ ಚೆಂಡಿನ ತನಕವೂ ಹೋರಾಟ ಬಿಡದ ಧೋನಿ ಈ ಪಂದ್ಯದಲ್ಲೂ ಅಂತಹುದೇ ಅಂತ್ಯ ಕಾಣಿಸಬಹುದೇ ಎನ್ನುವುದು ಬಹುಶಃ ಬಹುತೇಕ ಎಲ್ಲರಲ್ಲೂ ಇದ್ದ ಕುತೂಹಲ. ಇನ್ನು, ಟಿವಿಯಲ್ಲಿ ಕಂಡ ಕೆಲವು ದೃಶ್ಯಗಳಂತೂ ಚಿತ್ರವಿಚಿತ್ರವಾಗಿದ್ದವು. ತಲೆಯ ಮೇಲೆ ಕೈಇಟ್ಟುಕೊಂಡಿದ್ದವರು ಹಲವರಾದರೆ ದೇವರಿಗೆ ಮೊರೆ ಇಡುತ್ತಿದ್ದವರೂ ಹಲವರಿದ್ದರು. ಭಾವನಾತ್ಮಕವಾಗಿ ಇದು ನಮ್ಮನ್ನು ಚಲಿಸಬೇಕು ಎನ್ನಲು ಇದು ದೇಶದೇಶಗಳ ನಡುವೆ ನಡೆದ ಪಂದ್ಯವಲ್ಲ. ದೇಶದೊಳಗಿನ ರಾಜ್ಯಗಳೊಳಗಿನ ಪಂದ್ಯ ಎನ್ನುವ ಹಾಗೂ ಇಲ್ಲ. ಬೆಂಗಳೂರಿನ ರಾಹುಲ್ ದ್ರಾವಿಡ್ ದೂರದ ರಾಜಸ್ಥಾನ ತಂಡದ ನಾಯಕ. ಕೊಲ್ಕತ್ತದ ಗಂಗೂಲಿ ಪುಣೆ ತಂಡದ ನಾಯಕ. ನೆನ್ನೆ ನಡೆದ ಪಂದ್ಯದಲ್ಲಿಯೇ ದೆಹಲಿಯ ಗೌತಮ್ ಗಂಭೀರ್ ಕೊಲ್ಕತ್ತ ತಂಡವನ್ನು ನಡೆಸಿದರೆ ಜಾರ್ಖಂಡ್‌ನ ಧೋನಿ ಚೆನ್ನೈ ತಂಡದ ನಾಯಕ. ಆಟಗಾರರ ಮತ್ತು ತಂಡದ ನಾಯಕರ ಒತ್ತಡವನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಈ ಆಟಗಳು ಕೇವಲ ಆಟ ಎನ್ನುವುದಕ್ಕಿಂತ ಹೆಚ್ಚು ಮಹತ್ವದ್ದವು. ತಮ್ಮ ಭವಿಷ್ಯದ ಸ್ಥಾನ ಮತ್ತು ಹಣದ ಹರಿವಿನ ಯೋಚನೆಯೇ ಅವರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಆದರೆ, ಅಲ್ಲಿದ್ದ ಪ್ರೇಕ್ಷಕರ ಕಾತರಗಳು ಮತ್ತು ದಿಗಂತದೆಡೆಗಿನ ಮೊರೆಗಳು ಅತಾರ್ಕಿಕವಾದವುಗಳು. ಆಟವನ್ನು ಸವಿಯಲಾರದ ಮೂಢರು. ಬದುಕು ತೀರಾ ವೈಯಕ್ತಿಕವಾಗುತ್ತಿದೆ ಮತ್ತು ಅಸಹ್ಯವಾಗುತ್ತಿದೆ.

ಆದರೂ, ಈ ಐಪಿಎಲ್ ಪಂದ್ಯಗಳ ಒಂದು ಸೊಗಸು ಎಂದರೆ ಅದು ಒಂದು ರೀತಿಯಲ್ಲಿ ಎರಡು ವಿಶ್ವತಂಡಗಳ ಆಟ. ಪ್ರಾಂತ್ಯಗಳ, ಭಾಷೆಗಳ, ದೇಶದ ಗಡಿ ದಾಟಿ ಈ ತಂಡಗಳು ರೂಪುಗೊಂಡಿವೆ. ಆಸ್ಟ್ರೇಲಿಯದ ಆಕ್ರಮಣಕಾರಿ ಆಟಗಾರನಿಗೆ ಜೊತೆಯಾಗಿ ನ್ಯೂಜಿಲೆಂಡ್‌ನ ಜಂಟಲ್‌ಮನ್, ವೆಸ್ಟ್ ಇಂಡೀಸ್‌ನ ದೈತ್ಯಶಕ್ತಿಯ ಕಪ್ಪು ಆಟಗಾರನಿಗೆ ಹೆಗಲುಕೊಟ್ಟು ಆಡುವ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಅಂತ್ಯದ ನಂತರ ಆಡಲು ಇಳಿದ ಬಿಳಿಯ ದೈತ್ಯ, ಈಗಾಗಲೆ ದಂತಕತೆಯಾಗಿರುವ ಶತಕೋಟ್ಯಾಧಿಪತಿ ಆಟಗಾರನೊಂದಿಗೆ ಭಾರತದ ಯಾವುದೊ ಮೂಲೆಯ ಚಿಕ್ಕ ಪಟ್ಟಣದಿಂದ ಬಂದ ಬಡಯುವಕ; ನಿಜಕ್ಕೂ ಇದೊಂದು ಒಳ್ಳೆಯ ಜಾಗತೀಕರಣದ ಸುಂದರ ಉದಾಹರಣೆ. ದೇಶ-ಪ್ರಾಂತ್ಯ-ಭಾಷೆ-ಜನಾಂಗಗಳ ಗಡಿ ಮೀರಿ ಏಕ-ತಂಡವಾಗಿ ಆಡುತ್ತಿರುವ ಬಹುಶಃ ವಿಶ್ವದ ಏಕೈಕ ಕ್ರೀಡಾಕೂಟ. (ಇದರ ಜೊತೆಗೆ ಈ ಕ್ರೀಡಾಕೂಟದಿಂದ ಸಾಧ್ಯವಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನೂ—ಗುಣಾತ್ಮಕವಾದವುಗಳನ್ನು, ನಿರಾಕರಿಸುವಂತಿಲ್ಲ.)

ದೇಶ ನೆನ್ನೆ ಈ ಆಟದ ಕುತೂಹಲದಲ್ಲಿ ಮತ್ತು ಭಾನುವಾರದ ಸಂಜೆಯ ರಜೆಯ ವಿರಾಮದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಘಟನೆ ಜರುಗಿತು. ಮೂರು ದಿನದಿಂದ ಪ್ರತಿದಿನವೂ ಜಗನ್‍ಮೋಹನ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಸಂಸ್ಥೆ ನೆನ್ನೆ ಸಂಜೆಗೆ ರೆಡ್ಡಿಯನ್ನು ಬಂಧಿಸುವ ನಿರ್ಧಾರ ತೆಗೆದುಕೊಂಡಿತು. ಈಗ ಜಗನ್‌ಮೋಹನ್ ರೆಡ್ಡಿ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೆರಳ ಹೊರತುಪಡಿಸಿ ದಕ್ಷಿಣದ ಇತರ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಎನ್ನುವುದು ಕಳೆದ ಒಂದೂವರೆ ದಶಕದಿಂದ ಅತಿ ಸಾಮಾನ್ಯವಾಗಿ ಹೋಗಿದೆ. ತಮಿಳುನಾಡಿನ ಜಯಲಲಿತ ದಶಕದ ಹಿಂದೆಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಜೈಲಲ್ಲಿ ಕುಳಿತಿದ್ದರು. ಅವರ ನಂತರ ಬಂದ ಕರುಣಾನಿಧಿ ಸರ್ಕಾರದ ಭ್ರಷ್ಟತೆಯೂ ಕಮ್ಮಿ ಇರಲಿಲ್ಲ. ರಾಜ, ಕನಿಮೊಳಿಗಳು ದೆಹಲಿ ಮಟ್ಟದಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕರುಣಾನಿಧಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಇಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಕೇಸುಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಹೊರಗೆ ಹೆಚ್ಚಿಗೆ ಗೊತ್ತಾಗಿಲ್ಲ. ಸ್ಟ್ಯಾಲಿನ್ ಮತ್ತವರ ಮಗನ ಮೇಲೆಯೂ ಆಪಾದನೆಗಳಿವೆ. ಜಯಲಲಿತರಂತಹ ಜಯಲಲಿತರವರೇ ಇಂದು ತಮಿಳುನಾಡಿನಲ್ಲಿ ಸಂತಳಂತೆ ಕಾಣಿಸುತ್ತಿದ್ದಾರೆ ಎಂದರೆ ಕರುಣಾನಿಧಿಯವರ ಪಕ್ಷದ ಭ್ರಷ್ಟಾಚಾರ ಯಾವ ಹಂತಕ್ಕೆ ಹೋಗಿರಬಹುದು ಎನ್ನುವುದನ್ನು ಊಹಿಸಬಹುದು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅವರ ಕುಟುಂಬ ಮಾಡಿದ ಆಸ್ತಿ ಮತ್ತು ದುಡ್ಡಿನ ಬಗ್ಗೆ ಅನೇಕ ಆರೋಪ ಮತ್ತು ಊಹಾಪೋಹಗಳಿವೆ. ನಾಯ್ಡು‌ರವರ ಪತ್ನಿಯ ಒಡೆತನದ ಹೆರಿಟೇಜ್ ಡೈರಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದ ಕೆ‍ಎಂ‌ಎಫ್‌ಗೆ ಸೆಡ್ಡು ಹೊಡೆದಿತ್ತು. ಈ ಡೈರಿ ಆರಂಭವಾಗಿರುವುದೇ ಭ್ರಷ್ಟಾಚಾರದ ಹಣದಿಂದ ಎಂಬ ಆಪಾದನೆಗಳಿತ್ತು. ಸಾಮಾನ್ಯ ಬಡರೈತನ ಮಗ ಚಂದ್ರಬಾಬು ನಾಯ್ಡುರವರ ಕುಟುಂಬದ ಆಸ್ತಿ ಸಾವಿರಾರು ಕೋಟಿಗಳಲ್ಲಿ ಇದೆ ಎಂದು 2004ರಲ್ಲಿಯೇ ಅಲ್ಲಿಯ ಅವರ ರಾಜಕೀಯ ವಿರೋಧಿಗಳು ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅವರ ನಂತರ ಬಂದ ವೈಎಸ್‌ಆರ್ ಆಡಳಿತ ಮತ್ತು ಅವರ ಮನೆಯವರ ಭ್ರಷ್ಟತೆ ಇಂದು ನಾಯ್ಡುರವರನ್ನು ಅಲ್ಲಿ ಸಂತನನ್ನಾಗಿ ಮಾಡಿದೆಯೇನೊ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂದು ಇಡೀ ದೇಶದಲ್ಲಿ ತಮ್ಮ ಕುಟುಂಬದ ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿ ಸಂಪಾದಿಸಿದ ರಾಜಕಾರಣಿ ಇದ್ದರೆ ಅದು ಜಗನ್‌ಮೋಹನ್ ರೆಡ್ಡಿ. ತನ್ನ ತಂದೆ ಮುಖ್ಯಮಂತ್ರಿಯಾಗಿದ್ದ ಕೇವಲ ಐದೂವರೆ ವರ್ಷಗಳಲ್ಲಿ ಈ ಮಟ್ಟದ ಅಕ್ರಮ ಆಸ್ತಿ ಮತ್ತು ರಾಜಕೀಯ ಬಲವನ್ನು ದೇಶದ ಇನ್ನೊಂದು ರಾಜಕೀಯ ಕುಟುಂಬ ಮಾಡಿರುವ ಸಾಧ್ಯತೆ ಕಮ್ಮಿ. ನಮ್ಮ ರಾಜ್ಯದ ಯಡ್ಡಯೂರಪ್ಪನವರಿಗಿಂತ ಹೆಚ್ಚಿನ ಮಟ್ಟದ ನಿರಂಕುಶತೆ ಮತ್ತು ಇನ್ನೂ ಹೆಚ್ಚಿನ ಸರ್ವಾಧಿಕಾರತ್ವ ಇದ್ದ ವ್ಯಕ್ತಿ ರಾಜಶೇಖರ ರೆಡ್ಡಿ. 2009ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದರೆ ಅದಕ್ಕೆ ಕಾರಣ ಅಲ್ಲಿ  ಕಾಂಗ್ರೆಸ್‌ನ ಹಣಕಾಸು ಸಂಪನ್ಮೂಲಗಳನ್ನು ಸರಿಗಟ್ಟಲಾಗದೆ ಹೋದದ್ದು. ರಾಜಶೇಖರ ರೆಡ್ಡಿ ಬದುಕಿದ್ದರೆ ಅವರು ಇಂದು ಎದುರಿಸಬಹುದಿದ್ದ ಸ್ಥಿತಿ ಬಹುಶಃ ನಮ್ಮ ರಾಜ್ಯದಲ್ಲಿ ಇಂದು ಯಡ್ಡಯೂರಪ್ಪ ಎದುರಿಸುತ್ತಿರುವ ಸ್ಥಿತಿಗಿಂತ ಭಿನ್ನವಿರುತ್ತಿರಲಿಲ್ಲ. ಮಗನ ಸ್ಥಾನದಲ್ಲಿ ಅಪ್ಪ-ಮಗ ಇಬ್ಬರೂ ಇರುತ್ತಿದ್ದರು. (ಇದನ್ನು ಅಷ್ಟು ಖಚಿತವಾಗಿ ಹೇಳಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಜನಾರ್ದನ ರೆಡ್ಡಿ, ರಾಜಶೇಖರ ರೆಡ್ಡಿ, ಜಗನ್‌ಮೋಹನ್ ರೆಡ್ಡಿ ಇವರ ಮೇಲೆಲ್ಲ ಸಿಬಿಐ ಈ ರೀತಿ ಎರಗಿ ಬೀಳುತ್ತಿತ್ತು ಎಂದು ಅಷ್ಟೇನೂ ಸ್ವಾಯತ್ತವಲ್ಲದ, ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಒಲವುಗಳನ್ನು ಅರಿತು ಕೆಲಸ ಮಾಡುವ ಸಿಬಿಐ ಸಂಸ್ಥೆಯ ಇತಿಹಾಸ ಅರಿತವರು ಹೇಳಲಾರರು. ಆದರೆ, ಸಿಬಿಐ ಇವೆಲ್ಲವನ್ನೂ ಮೀರಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭಗಳು ಬರುತ್ತವೆ.  ಉದಾಹರಣೆಗೆ, ಸುಪ್ರೀಮ್‌ಕೋರ್ಟ್ ಆದೇಶದ ಮೇರೆಗೆ, ಮತ್ತು ನಮ್ಮ ನ್ಯಾಯಾಂಗ ಭ್ರಷ್ಟವಾಗಿಲ್ಲದ ಸಂದರ್ಭದಲ್ಲಿ.)

ಇನ್ನು ನಮ್ಮ ರಾಜ್ಯದಲ್ಲಿ 2000 ದಿಂದೀಚೆಗೆ ನಡೆದಿರುವ ಭ್ರಷ್ಟಾಚಾರ ಗೊತ್ತಿರುವುದೆ. ಪ್ರತಿ ಮಂತ್ರಿ-ಮುಖ್ಯಮಂತ್ರಿಯೂ ಹಿಂದಿನ ಮಂತ್ರಿ-ಮುಖ್ಯಮಂತ್ರಿಯನ್ನು ಮೀರಿಸುತ್ತ ಬಂದರು. ಈ ಸ್ವಚ್ಛಂದ ಭ್ರಷ್ಟಾಚಾರದ ಪ್ರಯುಕ್ತವಾಗಿಯೇ ಒಮ್ಮೆ ರಾಜ್ಯದ ಐದು ಜನ ಶಾಸಕರು ಜೈಲಿನಲ್ಲಿ ಇದ್ದರು. ರಾಜ್ಯದ ಪುಣ್ಯವೋ ಪಾಪವೋ ಈಗ ಎಲ್ಲರೂ ಹೊರಗಿದ್ದಾರೆ. (ಇನ್ನೂ ಒಳಗಿರುವವರ ಶಾಸಕತ್ವ ಈಗಾಗಲೆ ಮುಗಿದಿದೆ, ಇಲ್ಲವೆ ಕೆಲವೇ ದಿನಗಳಲ್ಲಿ ಮುಗಿಯಲಿದೆ.)

ಒಂದು ರೀತಿಯಲ್ಲಿ ತಮಿಳುನಾಡಿನ ಜನರಿಗಿಂತ ನಮ್ಮ ರಾಜ್ಯದ ಮತ್ತು ಆಂಧ್ರಪ್ರದೇಶದ ಜನ ಕಮ್ಮಿ ನ್ಯಾಯವಂತಿಕೆ ತೋರಿಸುತ್ತಿದ್ದಾರೆ. ಅವರ ನ್ಯಾಯಾನ್ಯಾಯ ವಿವೇಚನೆಗೆ ರೋಗ ಬಡಿದಿರುವುದು ಜಾತಿ ಎಂಬ ಕ್ಷುದ್ರ ಆಲೋಚನೆಯಿಂದ. ಆಂಧ್ರದಲ್ಲಿ ಕೇವಲ  ಐದಾರು ಪ್ರತಿಶತ ಇರುವ ರೆಡ್ಡಿ ಜಾತಿಯ “ಜಾತಿವಾದಿ” ಜನ ಜಗನ್‌ಮೋಹನ್ ರೆಡ್ಡಿಯ ಪರ ನಿಂತಿರುವ ಹಾಗಿದೆ. ಅವರಿಗೆ ಎಲ್ಲಕ್ಕಿಂತ ಜಾತಿ ಮುಖ್ಯವಾಗಿದೆ. ಜಗನ್ ಬಂಧನ ಮುಂದಿನ ದಿನಗಳಲ್ಲಿ ಆತನಿಗೆ ಇನ್ನೂ ಹೆಚ್ಚಿನ ರಾಜಕೀಯ ಮತ್ತು ಜಾತಿ ಬಲ ತಂದುಕೊಟ್ಟರೂ ಆಶ್ಚರ್ಯಪಡುವ ಹಾಗೆ ಇಲ್ಲ. ಇನ್ನು ಒಂದೆರಡು ವಾರದಲ್ಲಿ ಅಲ್ಲಿ ನಡೆಯಲಿರುವ 18 ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಆತನ ವೈಕಾಪಾ (ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ) ಗೆದ್ದರೆ ಆಶ್ಚರ್ಯಪಡುವಂತಹುದ್ದೇನೂ ಇಲ್ಲ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸುಮಾರು 14-15 ಪ್ರತಿಶತ ಇರುವ ಲಿಂಗಾಯತ ಜಾತಿಯ “ಜಾತಿವಾದಿ” ಜನ ಯಡ್ಡಯೂರಪ್ಪನವರ ಪರ ಇರುವಂತೆ ತೋರಿಸುತ್ತಿದ್ದಾರೆ. ಉಗಿಸಿಕೊಳ್ಳಲೂ ಯೋಗ್ಯರಲ್ಲದ, ಬಸವಣ್ಣನ ಹೆಸರು ಹೇಳಲೂ ಅರ್ಹರಲ್ಲದ ಕೆಲವು ಹೀನ ಮಠಾಧೀಶರಂತೂ ಈ ಸಮುದಾಯದ ಸಾಂಘಿಕ ಮತ್ತು ಸಮಷ್ಟಿ ನ್ಯಾಯಪ್ರಜ್ಞೆಯನ್ನೇ ಅವಮಾನ ಮಾಡುತ್ತಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರೂ ಜಾತಿ ಕಾರಣಕ್ಕೆ ತಮ್ಮ ನ್ಯಾಯದ ಪರಿಕಲ್ಪನೆಯನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ರುಜುವಾತಾದರೂ ಹಲವು ಕ್ಷೇತ್ರಗಳಲ್ಲಿ ಯಡ್ಡಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಜಾತಿವಾದಿಗಳು ಗೆಲ್ಲಿಸುವ ಮತ್ತು ಅವರ ವಿರೋಧಿಗಳನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳೂ ಇವೆ.  ಜಾತಿವಾದಿಗಳಿಗೆ ತಮ್ಮ ಜಾತಿಯ ಮುಖಂಡನೊಬ್ಬ ಮಾಡಿದ ಭ್ರಷ್ಟಾಚಾರ ಭ್ರಷ್ಟಾಚಾರ ಅಲ್ಲವೇ ಅಲ್ಲ. ಬೇರೆ ಜಾತಿಯವನು ಮಾಡಿದರೆ ಮಾತ್ರ ಅದು ಭ್ರಷ್ಟಾಚಾರ.

ನೆನ್ನೆಯ ಬಂಧನ ನನ್ನನ್ನೂ ಒಳಗೊಂಡಂತೆ ದೇಶದ ಅನೇಕ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಒಂದಿಷ್ಟು ಸಂತಸ ತಂದಿರಬಹುದು. ಆದರೆ, ಈಗಾಗಲೆ ಇಂತಹ ಹಲವಾರು ಬಂಧನಗಳು ಆಗಿಹೋಗಿವೆ. ಇವರು ಜೈಲಿನಿಂದ ಹೊರಗೆ ಬಂದಾಗ ಆರತಿ ಬೆಳಗಿ ವೀರೋಚಿತ ಸ್ವಾಗತಗಳು ಸಿಗುತ್ತವೆ. ಈ ನೆನಪು ಮತ್ತು ವಾಸ್ತವವೇ ನಮ್ಮೆಲ್ಲರನ್ನು ಒಂದೆಡೆಗೆ ಕಾರ್ಯೋನ್ಮುಖರಾಗಲು ಎಳೆಯಬೇಕು. ಆದರೆ ಎಲ್ಲಕ್ಕಿಂತ ಸುಲಭವಾಗಿ ಇದು ನಮ್ಮನ್ನು ಸಿನಿಕರನ್ನಾಗಿ ಮಾಡುತ್ತಿದೆ.

ಏನಾಗಬೇಕು ಎಂದು ಗೊತ್ತಿರುವವರು ಇಲ್ಲಿ ಅನೇಕರಿದ್ದಾರೆ. ಹೇಗೆ ಮಾಡಬೇಕು ಎಂದು ತೋರಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇಶದ ಪ್ರಜೆಗಳಲ್ಲಿ ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ ಬೆಳೆಯದ ಹೊರತು ಇಲ್ಲಿ ಗುಣಾತ್ಮಕ ಪರಿಣಾಮಗಳು ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಅಂತಹ ಪರಿವರ್ತನೆಯನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?