Daily Archives: May 1, 2012

ದಕ್ಷಿಣ ಕನ್ನಡದ ದಲಿತರ ಮತ್ತು ತಳವರ್ಗದವರ ಸಮಸ್ಯೆಗಳು

– ನವೀನ್ ಸೂರಿಂಜೆ

ಕಳೆದ ಶನಿವಾರದಂದು (28/4/12) ಮಂಗಳೂರಿನ “ಪತ್ರಕರ್ತರ ಅಧ್ಯಯನ ಕೇಂದ್ರ” ಅಲ್ಲಿಯ  ಸಹೋದಯ ಸಭಾಂಗಣದಲ್ಲಿ “ತಳ ಸಮುದಾಯಗಳು ಮತ್ತು ಮಾಧ್ಯಮ ಎಂಬ ಸಂವಾದ” ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಂಡ ದಕ್ಷಿಣ ಕನ್ನಡದ ವಿಭಿನ್ನ ತಳ ಸಮುದಾಯಗಳ ಬಹುತೇಕ ನಾಯಕರು ತಮ್ಮ ಸಮುದಾಯಗಳ ಸಮಸ್ಯೆ ಮತ್ತು ನೋವುಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು. ಅಲ್ಲಿ ಮಾತನಾಡಿದ ಅನೇಕರು ಅವರ ಸಮುದಾಯಗಳ ಮೊದಲ ತಲೆಮಾರಿನ ವಿದ್ಯಾವಂತರು. ಹೆಚ್ಚಿನವರು ಪದವಿ ಶಿಕ್ಷಣ ಸಹ ಪಡೆಯದೆ ಇರುವಂತಹವರು. ಅವರಲ್ಲಿ ಕಾಡಿನ ಉತ್ಪನ್ನಗಳನ್ನು ಮಾರಿ ಜೀವನ ಸಾಗಿಸುವ ಮೂಲನಿವಾಸಿಗಳೇ ಹೆಚ್ಚು. ಅಲ್ಲಿ ಪಾಲ್ಗೊಂಡ ಆ ಸಮುದಾಯಗಳ ಕೆಲವು ಮುಖಂಡರಿಗೆ ಈ ರೀತಿ ತಮ್ಮ ಸಮಸ್ಯೆಗಳನ್ನು ಪತ್ರಕರ್ತರ ಮುಂದೆ ಹೇಳಿಕೊಳ್ಳಲು ಸಿಕ್ಕ ಮೊದಲ ಅವಕಾಶ ಇದು ಎನ್ನಬಹುದು. ತಮ್ಮ ಜನರ ನೋವು, ಈಗಲೂ ಇರುವ ಅಸ್ಪೃಶ್ಯತೆ, ಮೇಲ್ವರ್ಗದ ಜನರಿಗಾಗಿ ಮಾಡಬೇಕಾದ ಅತಿ ಅಮಾನವೀಯ ಕೊಳಕು ಸಂಪ್ರದಾಯಗಳು, ಶೋಷಣೆ, ಪೊಲೀಸರ ಕಾಟ, ಇವುಗಳ ಬಗ್ಗೆ ಪ್ರಸ್ತಾಪಿಸುತ್ತ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಹಾಗೂ ಭೂಮಿಯ ಹಕ್ಕಿನ ಕುರಿತಂತೆ ಉಲ್ಲೇಖಿಸಿದರು.

ಸಭೆಯಲ್ಲಿ ಪಾಲ್ಗೊಂಡ ಮುಖಂಡರು ತಮ್ಮ ಸಮುದಾಯಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳನ್ನು ಹೀಗಿವೆ:

  • ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳ ಹೊರತಾಗಿಯೂ ನಮ್ಮ ಸಮುದಾಯದ ಬೆರಳೆಣಿಕೆಯ ಜನರು ಮಾತ್ರವೇ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಹಾಗಿದ್ದರೂ  ಭೂತ ಕಟ್ಟುವ ನಮ್ಮ ಸಮುದಾಯದವರು ದೊಡ್ಡ ವ್ಯಕ್ತಿಗಳಿಗೆ ತಲೆಬಾಗುವ ಶೋಷಣೆ ಮಾತ್ರ ಇಂದಿಗೂ ತಪ್ಪಿಲ್ಲ. ನಮ್ಮ ಜನರನ್ನು ಇಂದಿಗೂ ಇತರ ಸಮುದಾಯ ವಕ್ರದೃಷ್ಟಿಯಿಂದಲೇ ನೋಡುತ್ತಿದೆ. – ರತಿ, ಪಂಬದ ಸಮುದಾಯ.
  • ಕೆಳಸ್ತರದ ಜನರಿಗೆ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಜ್ಞಾನ, ಅರಿವನ್ನು ನೀಡಬೇಕಾಗಿದೆ. – ಜಗನ್ನಾಥ, ಪರವ ಸಮುದಾಯ.
  • ಕೊರಗ ಸಮುದಾಯದಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ. ವರದಕ್ಷಿಣೆ, ವಿಧವೆ ಎಂಬ ಸಮಸ್ಯೆಗಳ ಜಂಜಾಟವಿಲ್ಲ. ಸಮುದಾಯದಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಇಂತಹ ಸಂದರ್ಭ ಸಮುದಾಯವು ಮುಖ್ಯವಾಹಿನಿಗೆ ಸೇರಬೇಕೆನ್ನುವ ಕರೆಯು ಆತಂಕ ಸೃಷ್ಟಿಸುತ್ತಿದೆ. ಸಮುದಾಯವು ಪ್ರಾಕೃತಿಕವಾಗಿ ಬದುಕಲು ಅನುಗುಣವಾದ ವ್ಯವಸ್ಥೆ ಆಗಬೇಕಿದೆ. – ಮತ್ತಡಿ, ಕೊರಗ ಸಮುದಾಯ.
  • ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಜಾಗ ಹಲವಾರು ವರ್ಷಗಳ ಹೋರಾಟದ ಬಳಿಕವೂ ತೆರವುಗೊಳಿಸಲಾಗಿಲ್ಲ. – ಎಸ್.ಪಿ. ಆನಂದ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿದೆ. ನಮ್ಮ ಸಮುದಾಯಕ್ಕೆ ಇನ್ನೂ ಜಾತಿ ಸರ್ಟಿಫಿಕೆಟ್ ಸಿಕ್ಕಿಲ್ಲ. – ಎಂ. ದುಶ್ಯಂತ, ಹಂಡಿ ಜೋಗಿ ಸಮುದಾಯ.
  • 600 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಮುದಾಯದ ಜನರಿಗೆ ಭೂಮಿ, ನಿವೇಶನದ ಹಕ್ಕು ಮಾತ್ರ ಸಿಗುತ್ತಿಲ್ಲ. – ಬಿ.ಕೆ. ಸೇಸಮಪ್ಪ ಬೆದ್ರಕಾಡು, ಬೈರ ಸಮುದಾಯ.
  • ರಾಜ್ಯದಲ್ಲಿ  ನಮ್ಮ ಸಮುದಾಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರ ಸಂಖ್ಯೆ 750 ಆಗಿದ್ದರೂ ಇಂಜಿನಿಯರ್ ಆಗಿರುವುದು ಮಾತ್ರ 53 ಮಂದಿ. – ಪದ್ಮನಾಭ ನರಿಂಗಾನ, ಬಾಕುಡ ಸಮುದಾಯ.
  • ಕಾಡಿನ ಜೀವನವನ್ನು ನಮ್ಮದಾಗಿಸಿಕೊಂಡಿರುವ ನಮ್ಮ ಸಮುದಾಯಕ್ಕೆ ನಕ್ಸಲ್ ವಿರುದ್ಧದ ಕಾರ್ಯಾಚರಣೆಯ ಹೆಸರಿನಲ್ಲಿ ಪೊಲೀಸರ ದೌರ್ಜನ್ಯವೇ ಅಧಿಕ. – ಸುಧಾಕರ, ಮಲೆಕುಡಿಯ ಸಮುದಾಯ.
  • ಮೂಲ ದ್ರಾವಿಡ ಜನಾಂಗವಾದ ನಮ್ಮ ಸಮುದಾಯ ಜಾತಿ ಪಟ್ಟಿಯಲ್ಲಿಯೇ ಇಲ್ಲ. ಇದರಿಂದಾಗಿ ನಾವು ಯಾವುದೇ ರೀತಿಯ ಸರಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. – ಚೆನ್ನಪ್ಪ ಕಕ್ಕೆಪದವು, ಮನ್ಸ ಸಮುದಾಯ.
  • ಉಳುವವನೇ ಹೊಲದೊಡೆಯ ಎಂಬ ಮಾತು  ನಮ್ಮ ಸಮಾಜಕ್ಕಿನ್ನೂ ಅನ್ವಯವಾಗಿಲ್ಲ. ಬದಲಾಗಿ ಈ ಸಮುದಾಯ ಸರಕಾರಿ ಪ್ರಾಯೋಜಿತ ದೌರ್ಜನ್ಯದಿಂದ ನಲುಗುತ್ತಿದೆ. ಅಲೆಮಾರಿ ಜನಾಂಗಗಳ ಬಗ್ಗೆ ಸಮೀಕ್ಷೆ  ನಡೆಸಿ ವ್ಯವಸ್ಥಿತವಾದ ಕಾನೂನು ಜಾರಿಗೊಳಿಸಬೇಕು. – ಭಾನುಚಂದ್ರ ಕೃಷ್ಣಾಪುರ, ಆದಿದ್ರಾವಿಡ ಸಮುದಾಯ.
  • ದ.ಕ. ಜಿಲ್ಲೆಯಲ್ಲಿ ಗೊಡ್ಡ ಸಮುದಾಯದ 152 ಕುಟುಂಬಗಳಿದ್ದು, ಏಳು ಮಂದಿ ಮಾತ್ರವೇ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಉಡುಪಿಯಲ್ಲಿ ನಾಲ್ಕು ಮಂದಿ ಎಲ್‌ಎಲ್‌ಬಿ ಹಾಗೂ ಆರು ಮಂದಿ ಸ್ನಾತಕೋತ್ತರ ಶಿಕ್ಷಣ ಪಡೆದವರು. –  ಕೃಷ್ಣಾನಂದ ಡಿ., ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ).

ಹಾಗೆಯೇ, ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನಾ ವೇದಿಕೆಯ ಡೀಕಯ್ಯ, ದಸಂಸ (ಭೀಮವಾದ) ಮುಖಂಡ ಪಿ. ಕೇಶವ ಹಾಗೂ ಇನ್ನಿತರರು ಸಹ ದಲಿತರ ಸಮಸ್ಯೆ ಮತ್ತು ಜಾತಿಪದ್ದತಿಯ ಬಗ್ಗೆ ಮಾತನಾಡಿದರು.

ಇದಾದ ನಂತರ ಮಾತನಾಡಿದ ಲೇಖಕ ರವಿ ಕೃಷ್ಣಾರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯವನ್ನು ಕಾಡುತ್ತಿರುವ ಭೂಮಿ ಹಕ್ಕು ಸಮಸ್ಯೆಯನ್ನು ವಿವಿಧ ದಲಿತ ಸಮುದಾಯಗಳ ನಾಯಕರು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ “ಚಳವಳಿಗಾರರ ಜವಾಬ್ಧಾರಿಗಳು ಮತ್ತು ಮಾಧ್ಯಮದ ಪಾತ್ರ”ದ ಬಗ್ಗೆ ಮಾತನಾಡಿದ ಅವರು,  ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಅರಣ್ಯ ಭೂಮಿಗಳು ಲಭ್ಯವಿದ್ದು, ಅರ್ಹ ದಲಿತರಿಗೆ ಅವುಗಳನ್ನು ಹಂಚುವಲ್ಲಿ ದಲಿತ ನಾಯಕರು ಪ್ರಮುಖವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಶಿಕ್ಷಣದ ಸಮಸ್ಯೆಯು ಕೂಡಾ ತಳ ಮಟ್ಟದ ಹಲವಾರು ಸಮುದಾಯಗಳನ್ನು ಕಾಡುತ್ತಿದ್ದು, ಶಿಕ್ಷಣವಿಲ್ಲದ, ಉದ್ಯೋಗವಿಲ್ಲದ ದಲಿತ ಸಮುದಾಯಗಳ ವಯಸ್ಕ ಜನರಿಗೆ ದಲಿತ ಮೀಸಲಾತಿಯಿಂದ ಪ್ರಯೋಜನವಾಗದು, ಅಂತಹ ಜನರಿಗೆ ಕೃಷಿ ಭೂಮಿ ಹಂಚಿಕೆಯಿಂದ ಮಾತ್ರ ಸ್ವಾವಲಂಬನೆ ಮತ್ತು ಘನತೆ ದೊರಕಿಸಲು ಸಾಧ್ಯ ಎಂದರು. ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಲು, ಗೌರವ ಪಡೆದುಕೊಳ್ಳಲು ಸಾಧ್ಯ ಎಂಬ ನಿಟ್ಟಿನಲ್ಲಿ ದಲಿತರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜಾಗೃತವಾಗುವ ಜೊತೆಗೆ ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ಇಂದಿನ ಅತ್ಯಗತ್ಯ ಎಂದು ರವಿ ಕೃಷ್ಣಾರೆಡ್ಡಿ ಅಭಿಪ್ರಾಯಿಸಿದರು. ಹಾಗೆಯೇ, ದಲಿತ ಸಮುದಾಯಗಳ ಬಗ್ಗೆ ಪ್ರತಿದಿನವೂ ಬೆಳಕು ಚೆಲ್ಲುವಂತಹ ಲೇಖನಗಳನ್ನು ಪ್ರಕಟಿಸುತ್ತ, ಅವರ ಸ್ಥಿತಿಗತಿಗಳ ಬಗ್ಗೆ ಸಮಾಜದ ಜವಾಬ್ದಾರಿಯನ್ನು ನೆನಪಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕೆಂದು ವಿನಂತಿಸಿದರು.

“ತಳ ಸಮುದಾಯಗಳ ಇತಿಹಾಸ ಮತ್ತು ಅಭಿವೃದ್ಧಿ ಹಿನ್ನೆಡೆ ಕಾರಣಗಳು” ಎಂಬ ವಿಷಯದಲ್ಲಿ ಮಾತನಾಡಿದ ಮಂಗಳೂರು ವಿವಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಉದಯ ಬಾರ್ಕೂರು, ತುಳುನಾಡಿನ ಇತಿಹಾಸವನ್ನು ಅವಲೋಕನ ಮಾಡಿದರೆ ಎಲ್ಲಿಯೂ ತಳವರ್ಗದ ಸಮಸ್ಯೆಗಳ ಬಗ್ಗೆ ಕಂಡುಬರುವುದಿಲ್ಲ, ಜೀತ ಪದ್ಧತಿ, ಸಂಸ್ಕೃತಿಯ ಬಗ್ಗೆ ಉಲ್ಲೇಖವೇ ಇಲ್ಲ, ಇದರಿಂದಾಗಿ ತಳಮಟ್ಟದ ಸಮಸ್ಯೆಗಳು ತಳಮಟ್ಟದಲ್ಲಿಯೇ ಉಳಿದು ಹೋಗಿದೆ, ಇದಕ್ಕೆ ಕಾರಣ ತುಳುನಾಡಿನ ಇತಿಹಾಸವನ್ನು ಬರೆದವರಿಗೆ ದಾಖಲೆಗಳನ್ನು ಕಲೆಹಾಕುವ ಮನಸ್ಥಿತಿ ಇಲ್ಲದಿರುವುದು, ಎಂದು ಬೇಸರಿಸಿದರು. ಆದರೆ ತುಳುನಾಡಿನ ಗುಲಾಮಗಿರಿಯ ಕುರಿತು “ಈಸ್ಟ್ ಇಂಡಿಯಾ ಸ್ಲೇವರಿ” ಎಂಬ ಸಂಪುಟದಲ್ಲಿ ಬಹಳಷ್ಟು ದಾಖಲೆ, ಮಾಹಿತಿಗಳಿವೆ. ಆದರೆ ತುಳುನಾಡಿನ ಇತಿಹಾಸಕಾರರು ಅದನ್ನು ತಿರುಚುವ ಅಥವಾ ಮರೆಮಾಚುವ ಕೆಲಸ ಮಾಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಸೇರಿದಂತೆ ಸಮಾಜವು ತಳ ಸಮುದಾಯಗಳ ಇತಿಹಾಸವನ್ನು ಅಧ್ಯಯನ ಮಾಡುವ ಜೊತೆಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಕೆಲಸವನ್ನು  ಮಾಡಬೇಕಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ದಲಿತರಿಗೆ ಸಿಗಬೇಕಾದ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ಸೇರಿದಂತೆ ಅವರ ಭೂಮಿಯ ಹಕ್ಕನ್ನು ಒದಗಿಸುವ ಬಗ್ಗೆ ನಾಯಕರು ಸೇರಿದಂತೆ ತಳ ಮಟ್ಟದ ಕಾರ್ಯಕರ್ತರಿಂದ ಪ್ರಾಮಾಣಿಕವಾದ ಕೆಲಸ ಆಗಬೇಕು ಎಂದರು.