Daily Archives: May 2, 2012

ಗಾಣಕ್ಕೆ ಸಿಕ್ಕ ಗಬಾಳಿಗರು

– ವೀರಣ್ಣ ಮಡಿವಾಳರ

ಉತ್ತರ ಕರ್ನಾಟಕದ ಕೂಲಿಯ ಚಿತ್ರಗಳು ಭಿನ್ನವಾದವು. ಇಲ್ಲಿ ತಂದೆಯೊಬ್ಬ ಬಡತನದ ದಯನೀಯ ಸ್ಥಿತಿಯಲ್ಲಿ ಎಳೆಯ ಹೆಣ್ಣುಮಕ್ಕಳನ್ನು ನೇಗಿಲಿಗೆ ಹೂಡಿ ಹೊಲ ಹಸನುಮಾಡುವ ಹೃದಯ ಬಿರಿಯುವ ಚಿತ್ರ, ಅದೀಗ ವಸಂತಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳು ಪೆನ್ನು ಪುಸ್ತಕ ಹಿಡಿದು ಕಾಲೇಜು ಓದುತ್ತಲೇ ಮಸಾರಿ ಹೊಲದಲ್ಲಿ ದೊಡ್ಡ ಎತ್ತುಗಳ ಪಳಗಿಸಿಕೊಂಡು ಅಷ್ಟು ಭಾರದ ಕುಂಟೆಯನ್ನು ಎತ್ತಿ ಕೆಡವಿ ಹರಗುವ ಪರಿಯ ಸೋಜಿಗದ ಚಿತ್ರ. ಹೀಗೆ ಅನೇಕ ಚಿತ್ರಗಳು ತಲ್ಲಣಿಸುವಂತೆ ಮಾಡುತ್ತವೆ. ಕಮತ ಇಂದು ಕಗ್ಗಂಟಾಗಿದೆ. ಕಾಲ ಸರಿದಂತೆ ಉಳ್ಳವರ ಮೋಸಕ್ಕೆ ಬಲಿಯಾಗಿ ಇದ್ದ ತುಂಡು ಜಮೀನುಗಳನ್ನು ಬಡ್ಡಿ ಚಕ್ರಬಡ್ಡಿಗೆ ಕಳೆದುಕೊಂಡು ತಮ್ಮದೇ ಜಮೀನಿನಲ್ಲಿ ಪರರಿಗೆ ಜೀತವಿರುವವರು ಇಲ್ಲಿ ಹಲವು ಜನರಿದ್ದಾರೆ.

ಇನ್ನೂ ನಮ್ಮ ಹಳ್ಳಿಗಳಲ್ಲಿ ಜಮೀನ್ದಾರರು, ಸಾಹುಕಾರರೇ ಬ್ಯಾಂಕುಗಳಾಗಿದ್ದಾರೆ. ಅವರು ಹಾಕಿದ್ದೇ ಬಡ್ಡಿ, ಇಟ್ಟದ್ದೇ ಲೆಕ್ಕ. ಯಾರದೋ ಬೆಳೆ ವಿಮೆಯ ದುಡ್ಡು ಯಾರದೋ ಜೇಬಿಗೆ ಸೇರುತ್ತದೆ. ಸಾಲ ಮರುಪಾವತಿ ಮಾಡಿ, ಹೊಸಸಾಲ ಪಡೆಯುವಾಗ ನಡೆಯುವ ಅಕ್ರಮಗಳು ಜೀವ ಹಿಂಡುತ್ತವೆ. ಸಾಲ ಪಾವತಿ ಮಾಡುವವನಿಗೆ ಬ್ಯಾಂಕಿನ ಬಾಗಿಲಲ್ಲೇ ದುಡ್ಡಿದ್ದವರು ಕಾದು ಕುಳಿತಿರುತ್ತಾರೆ. ಉಳ್ಳವರಿಂದ ದುಡ್ಡು ಪಡೆದು ಬ್ಯಾಂಕಿಗೆ ತುಂಬಿ, ಮರುಸಾಲ ಪಡೆದ ತಕ್ಷಣವೇ ದುಡ್ಡು ಕೊಟ್ಟವನಿಗೆ ನೂರಕ್ಕೆ ಹತ್ತು ರೂಪಾಯಿಯಂತೆ ಬಡ್ಡಿ ಸೇರಿಸಿ ಮರಳಿ ಕೊಡಬೇಕು. ಹತ್ತು ನಿಮಿಷದಲ್ಲಿ ಸಾವಿರ ಸಾವಿರ ದುಡ್ಡನ್ನು ಬಡ್ಡಿಯ ರೂಪದಲ್ಲಿ ಕಿತ್ತುಕೊಳ್ಳುವವರು ಇಲ್ಲಿ ಅನೇಕರಿದ್ದಾರೆ. ಸಾಮಾನ್ಯವಾಗಿ ಇವರು ಜಮೀನನ್ನು ಅಡವಿಟ್ಟುಕೊಂಡವರಿರುತ್ತಾರೆ.

ಜೀತದ ಸ್ವರೂಪವೇ ಇಂದು ಬೇರೆಯಾಗಿದೆ. ಬೆಳಗ್ಗೆ ಹೊತ್ತು ಮೂಡುವ ಮುನ್ನವೇ ಮಕ್ಕಳ ಮುಖ ನೋಡದೆ ಎದ್ದು ಬಂದು ಸಾಹುಕಾರರ ಎತ್ತಿನ ಮನೆಯನ್ನು ಚಂದಗಾಣಿಸಿ ಹೊಲದ ಕೆಲಸ ಮಾಡುತ್ತಾ ಹೊತ್ತೇರಿದಾಗ ತುತ್ತು ತಿಂದು ಹೊತ್ತು ಮುಳುಗಿದ ಮೇಲೆ ಸಾಹುಕಾರರ ಮನೆಗೆ ಬಂದು ಇದ್ದಬದ್ದ ಚಾಕರಿ ಮುಗಿಸಿ ತನ್ನ ಮನೆಗೆ ಹೋದಾಗ ಮಕ್ಕಳು ಮಲಗಿರುತ್ತವೆ. ಇದು ಒಂದು ಊರಿನ ಒಂದು ಮನೆಯ ಚಿತ್ರವೇನಲ್ಲ. ಹಲವು ಹಳ್ಳಿಗಳ ಹಲವು ಜನರ ಸಂಕಥನವೂ ಇದೇ.

ಕೃಷಿ ಕೂಲಿಕಾರ್ಮಿಕರ ಸ್ಥಿತಿಗತಿ ಹೇಳತೀರದು. ಅವರ ಸಂಕಷ್ಟದ ರೂಪಗಳು ಹಲವು. ಕೂಲಿಗೆ ನಿರ್ದಿಷ್ಟ ಸ್ವರೂಪವಿಲ್ಲ, ಕಾಲಮಿತಿಯಿಲ್ಲ, ಇಷ್ಟೇ ದುಡ್ಡು ಎಂತಲೂ ಇಲ್ಲ. ಅನುಭವಿಸಲಾಗದ, ಹಂಚಿಕೊಳ್ಳಲಾಗದ ತೀವ್ರ ಸಂಕಷ್ಟದಲ್ಲಿ ಇಲ್ಲಿನ ಕೂಲಿ ಕಾರ್ಮಿಕರಿದ್ದಾರೆ. ನಮ್ಮ ಕಾನೂನುಗಳು ಆರಕ್ಷಕ ಠಾಣೆಗಳಲ್ಲಿ, ಅಧಿಕಾರಿಗಳ ಫೈಲುಗಳಲ್ಲಿ ಮಲಗಿವೆ. ಹಳ್ಳಿಗಳಲ್ಲಿ ಉಳ್ಳವರೇ ನ್ಯಾಯಾಧೀಶರು, ಮಾತನಾಡಿದ್ದೇ ಕಾನೂನು.

ಬೆಳಗಾವಿ ಜಿಲ್ಲೆಯ ಸುಮಾರು ಕಡೆ ತಿರುಗಾಡುತ್ತಾ ಹೋದರೆ ಕರ್ನಾಟಕದ ಕೂಲಿ ಕಾರ್ಮಿಕರ ಸ್ಥಿತಿಗಳು ಹೆಚ್ಚು ಅರ್ಥವಾಗುತ್ತವೆ. ಅವು ಮನೆಗಳಲ್ಲ, ಗುಡಿಸಲುಗಳಲ್ಲ, ಗೂಡುಗಳು. ಇಂಥ ಸಾವಿರ ಗೂಡುಗಳಲ್ಲಿ ಸಾವಿರ ಸಾವಿರ ಕೂಲಿ ಕಾರ್ಮಿಕರು ಬದುಕುತ್ತಲೇ ದುಡಿಯುತ್ತಿದ್ದಾರೆ. ಈ ಜಿಲ್ಲೆಯಲ್ಲಿ  ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಮಧ್ಯದಲ್ಲಿ ನೂರಾರು ಗೂಡುಗಳ ಸಮೂಹ ಕಣ್ಣಿಗೆ ರಾಚುತ್ತವೆ. ಊರಿನಲ್ಲಿಯೇ ಇದ್ದರೂ ಒಳ್ಳೆಯ ಸಿಮೆಂಟ್ ಕಟ್ಟಡಗಳ ನಡುವಿನ ಜಾಗದಲ್ಲಿ ಇಂಥದೇ ಹತ್ತಾರು ಗೂಡುಗಳನ್ನು ಕಟ್ಟಿಕೊಂಡು ಬದುಕು ದೂಡುತ್ತಿರುವ ಸನ್ನಿವೇಷಗಳು ಸಾಕಷ್ಟು. ಇಂಡಿಯಾದ ವಾಸ್ತವಗಳೇ ಹೀಗೆ.

ಮನುಷ್ಯರೇ ಆದರೂ ಪ್ರಾಣಿಗಳೂ ಆಶ್ಚರ್ಯಪಡುವಂತೆ ಬದುಕುತ್ತಿರುವ ಇವರಾರು? ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸುಮಾರು ಇಪ್ಪತ್ತೊಂದು ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ ಅರ್ಧ ಖಾಸಗಿ ಒಡೆತನದವು. ಎರಡು ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚು ಜಮೀನಿನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಹೀಗೆ ಬೆಳೆದ ಕಬ್ಬನ್ನು ಕಡಿದು ತಂದು ಕಾರ್ಖಾನೆಗೆ ಮುಟ್ಟಿಸಿ ದೇಶಕ್ಕೆಲ್ಲ ಸಕ್ಕರೆ ತಿನ್ನಿಸುವ ಕೂಲಿ ಕಾರ್ಮಿಕರೇ ಹೀಗೆ ಅನಾಥ ಬಯಲ ಬದುಕು ನಡೆಸುತ್ತಿರುವ ನಿರ್ಗತಿಕರು. ಇವರಲ್ಲಿ ಕೆಲವರು ಬಿಜಾಪುರ, ಬಾಗಲಕೋಟೆ, ಬಳ್ಳಾರಿ ಮುಂತಾದ  ಜಿಲ್ಲೆಗಳಿಂದ ಬಂದಿದ್ದರೆ, ಇನ್ನು ಕೆಲವರು ಮಹಾರಾಷ್ಟ್ರದ ಬೀಡ, ಜತ್, ಉಸ್ಮಾನಾಬಾದ್ ಮುಂತಾದ ಜಿಲ್ಲೆಗಳಿಂದ ಬಂದಿರುತ್ತಾರೆ. ಇಲ್ಲಿನ ಜನ ಇವರನ್ನು ಗಬಾಳಿಗರು ಎನ್ನುತ್ತಾರೆ. ಗಬಾಳ ಎನ್ನುವುದು ಇಲ್ಲಿನವರ ಪ್ರಕಾರ ಜಾತಿಯಲ್ಲ ಅದು ಒಟ್ಟು ಕಬ್ಬು ಕಡಿಯಲು ಬರುವ ಕೂಲಿ ಕಾರ್ಮಿಕರನ್ನು ಸೂಚಿಸುವ ಪದ.

ಕಾರ್ಖಾನೆಯ ಸಮೀಪ ಬಂದು ನೋಡಿದರೆ ಗೂಡುಗಳ ಸಮುದ್ರವೇ ಗೋಚರಿಸುತ್ತದೆ. ಈ ಗೂಡುಗಳಲ್ಲಿರುವವರೆಲ್ಲ ಬೇರೆ ಬೇರೆ ಕಡೆಗಳಿಂದ ಬಂದ ದುಡಿಯುವ ದರ್ದಿನವರೇ.  ಸ್ವಲ್ಪ ಹತ್ತಿರದಿಂದ ಈ ದುಡಿಯುವ ಜನಗಳ ಬದುಕನ್ನು ನೋಡಿದರೆ ಕೆಲವು ಅಸಹನೀಯ ಸತ್ಯಗಳು ಎದೆ ಕಲಕುತ್ತವೆ. ಈ ಗೂಡುಗಳನ್ನು ಇವರೆಲ್ಲ ಕಬ್ಬಿನ ರವುದಿಯಿಂದಲೇ ಕಟ್ಟಿಕೊಳ್ಳುತ್ತಾರೆ. ಪಕ್ಕದಲ್ಲೇ ತಮ್ಮೊಂದಿಗೆ ತಂದಿರುವ ಎಮ್ಮೆ ಆಕಳು ಎತ್ತುಗಳಿಗೂ. ಕೋಳಿಗಳ  ಜೊತೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಈ ಜನ ಅದು ಹೇಗೆ ಅಷ್ಟು ಪುಟ್ಟ ಗೂಡುಗಳಲ್ಲಿ ಬದುಕುತ್ತಾರೋ ಕಣ್ಣುಗಳೇ ಹೆದರುತ್ತವೆ. ಕುಡಿಯಲು ಸಾಕಷ್ಟು ನೀರಿಲ್ಲ. ಅಷ್ಟು ಸಾವಿರ ಜನರಿಗೆ ಮಧ್ಯದಲ್ಲೆಲ್ಲೋ ಒಂದು ನೀರಿನ ಟ್ಯಾಂಕು. ರಾತ್ರಿಯಾದರೆ ಕಗ್ಗತ್ತಲು. ಹೌದು ಸೂರ್ಯ ಮುಳುಗಿದರೆ ಸಾಕು ಎಲ್ಲೆಲ್ಲೂ ಹುಡುಕಿದರೆ ಬೊಗಸೆ ಬೆಳಕು ಸಿಗುವುದಿಲ್ಲ. ಬಹಳಷ್ಟು ಕಡೆ ಹೀಗಿದೆ. ವಿಷಕಾರಿ  ಕೀಟಗಳು ಹೀಗೆ ಕತ್ತಲಲ್ಲಿ ಬದುಕುತ್ತಿರುವ ಇವರ ಚೈತನ್ಯವನ್ನು ಕಂಡೇ ಹತ್ತಿರ ಸುಳಿಯುವುದಿಲ್ಲವೇನೋ. ಅಡುಗೆ ಮಾಡಿಕೊಳ್ಳಲು ಉರುವಲಿಗೆ ತಮ್ಮ ತಮ್ಮ ಎತ್ತುಗಳ ಸಗಣಿಯಿಂದ ಮಾಡಿದ ಕುಳ್ಳುಗಳೇ ಗತಿ. ಇವು ಯಾವುವೂ ಇವರನ್ನು ಬಾಧಿಸುವುದಿಲ್ಲ.

ಹೀಗೆ ಕಬ್ಬು ಕಡಿಯಲು ಬರುವ ಈ ಕೂಲಿ ಕಾರ್ಮಿಕರು ವರ್ಷದ ಸುಮಾರು ಎಂಟು ತಿಂಗಳು ಇಲ್ಲಿ ದುಡಿಯುತ್ತಾರೆ. ಕೊರೆಯುವ ಚಳಿ, ಜೀವ ಹಿಂಡುವ ಮಳೆ, ಉರಿಯುವ  ಬಿಸಿಲು ಎಲ್ಲವನ್ನೂ ಇವರು ಅನುಭವಿಸುತ್ತಾರೆ ಯಾವುದೇ ಆತಂಕವಿಲ್ಲದೆ. ಬೆಳಗಿನ ಜಾವ ಇನ್ನೂ ಕತ್ತಲಲ್ಲೇ ಎದ್ದು ಬಂಡಿಗೆ ಎತ್ತುಗಳನ್ನು ಹೂಡಿಕೊಂಡು ರಸ್ತೆ ಹಿಡಿದು ಹೊರಡ ಬೇಕು ಕಬ್ಬಿರುವ ಹೊಲಕ್ಕೆ. ಕೆಲವು ಹತ್ತಿರದಲ್ಲಿದ್ದರೆ, ಕೆಲವು ಕಾರ್ಖಾನೆಯಿಂದ ಹಲವು ಕಿಲೋಮೀಟರ್‌‌ಗಳ ದೂರದಲ್ಲಿರುತ್ತವೆ.

ಕಬ್ಬಿನ ಬೆಳೆಯ ರಚನೆಯೂ ಈ ಕೂಲಿ ಕಾರ್ಮಿಕರನ್ನು ಹೇಗೆ ಹಿಂಸಿಸುತ್ತದೆ ಎನ್ನುವುದಕ್ಕೆ ಇವರ ಮುಖ, ಅಂಗೈ, ಕೈಕಾಲುಗಳನ್ನು ನೋಡಬೇಕು. ಮುಖದ ತುಂಬ ಯಾರೋ ಹರಿತವಾದ ರೇಜರ್‌ನಿಂದ ಪರಚಿದಂತಹ ಗೆರೆಗಳು, ಕಬ್ಬು ಕಡಿಯುವಾಗ ತಪ್ಪಿ ಬಿದ್ದು ಇನ್ನೂ ತುಂಡಾಗದೆ ಅಲ್ಲೇ ಕೂಡಿಕೊಂಡಿರುವ ಕೈಬೆರಳುಗಳು. ಮೈತುಂಬ ಪರಚಿದ ಗಾಯಗಳು. ಕಬ್ಬಿನ ಹಸಿ ಎಲೆಗಳು ತುಂಬ ಹರಿತ. ಅವುಗಳನ್ನು ಮುಷ್ಠಿಮಾಡಿ ಹಿಡಿದು ಕುಡುಗೋಲಿನಿಂದ ಕಡಿಯುವಾಗ ಇಷ್ಟೆಲ್ಲವನ್ನೂ ಅನುಭವಿಸಲೇಬೇಕು. ಇದು ಯಾರದೋ ಒಬ್ಬರ ಸ್ಥಿತಿಯಲ್ಲ ಕಬ್ಬು ಕಡಿಯುವ ಯಾರ ಅಂಗೈಯನ್ನು ನೋಡಿದರು ಈ ರೀತಿಯ ಗಾಯಗಳು ಸಾಮಾನ್ಯ. ಈ ಜನ ಕೇವಲ ಬೆವರನ್ನು ಹರಿಸುವುದಿಲ್ಲ, ರಕ್ತದ ಹನಿಗಳನ್ನೂ ಉದುರಿಸಬೇಕು.

ದುಡಿಮೆಯಲ್ಲಿನ ಇವರ ಶ್ರದ್ಧೆ, ತನ್ಮಯತೆ ಕಠೋರತೆ ಅನನ್ಯವಾದುದು. ಕಬ್ಬಿನ ದೊಡ್ಡ ದೊಡ್ಡ ಹೊಲಗಳು ಗಬಾಳಿಗರ ದುಡಿತದ ದಾಳಿಗೆ ವಿನಯದಿಂದ ಬಾಗುತ್ತವೆ. ಈ ದುಡಿಮೆಯ ಚಿತ್ರಗಳನ್ನು ಗಮನಿಸಿದರೆ ಬಹುಶಃ ದುಡಿಮೆಯಾಚೆಗೆ ಇವರು ಬೇರೇನನ್ನೂ ಯೋಚಿಸುವುದಿಲ್ಲ ಎನ್ನಿಸುತ್ತದೆ. ಈ ರಾಜ್ಯ, ಇಲ್ಲಿನ ಜನಪ್ರತಿನಿಧಿಗಳು, ಇಲ್ಲಿನ ಬಡ್ಜೆಟ್ಟು ಎಲ್ಲವನ್ನೂ ಸಾರಾಸಗಟಾಗಿ ಧಿಕ್ಕರಿಸಿ ತಮ್ಮ ದುಡಿತದ ಮೂಲಕವೇ, ತಮ್ಮ ಬದುಕಿನ ಸಂಕಷ್ಟದ ಆತ್ಯಂತಿಕ ಸ್ಥಿತಿಯ ಮೂಲಕವೇ ಈ ಪ್ರಭುತ್ವಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ ಎನ್ನಿಸುತ್ತದೆ.

ಇಲ್ಲಿನ ದುಡಿಮೆಗಾರರನ್ನು ಮಾತನಾಡಿಸಿದರೆ ನಾವು ಬಹುಶಃ ಊಹಿಸಲಾರದ ಕಠೋರ ವಾಸ್ತವಗಳು ಹೊರಬೀಳುತ್ತವೆ. ಮುಖ್ಯವಾದದ್ದೆಂದರೆ ಈ ಗಬಾಳಿಗರಿಗೂ ಮತ್ತು ಕಾರ್ಖಾನೆಗಳಿಗೂ ಯಾವುದೇ ಸಂಬಂಧವೇ ಇಲ್ಲ. ಅಂದರೆ ಇವರು ಕಬ್ಬನ್ನು ಕಡಿದು ತಂದು ಕಾರ್ಖಾನೆಗೆ ಮುಟ್ಟಿಸಿದರೂ ಕಾರ್ಖಾನೆ ಇವರಿಗೆ ಕೂಲಿ ಕೊಡುವುದಿಲ್ಲ ಬದಲಾಗಿ ಮಧ್ಯದ ದಲ್ಲಾಳಿಗಳು ನೀಡುತ್ತಾರೆ. ಇಲ್ಲಿರುವುದೇ ಎಣಿಕೆಗೆ ನಿಲುಕದ ಸೌಮ್ಯ ಮೋಸಗಳು. ಹೀಗೆ ಅಲೆಮಾರಿಗಳಾಗಿ ಬರುವ ಗಬಾಳಿಗರ ಮೂಲ ಊರುಗಳಿಗೆ ಹೋಗಿ ದಲ್ಲಾಳಿಗಳು ಕೆಲಸಕ್ಕೆ ಬರುವ ಮೊದಲೇ ದುಡ್ಡನ್ನು ಕೊಟ್ಟು ಎಷ್ಟು ಜನ ಬರಬೇಕು, ಎಷ್ಟು ಕೆಲಸ ಮಾಡಬೇಕು ಎಲ್ಲಿ ಕೆಲಸ ಮಾಡಬೇಕು ಮುಂತಾಗಿ  ಎಲ್ಲವನ್ನೂ ನಿರ್ಧರಿಸಿರುತ್ತಾರೆ. ಹಾಗಾದರೆ ಈ ದಲ್ಲಾಳಿಗಳಿಗೆ ದುಡ್ಡು ಹೇಗೆ ಬರುತ್ತದೆ ಎಂದು ವಿಚಾರಿಸಿದರೆ ಕಾರ್ಖಾನೆಗಳೇ ಈ ದಲ್ಲಾಳಿಗಳಿಗೆ ದುಡ್ಡನ್ನು ಕೊಟ್ಟಿರುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. ದಲ್ಲಾಳಿಗಳಿಗೇನಿದೆ ಲಾಭ ಎಂದು ಯೋಚಿಸಿದರೆ ತಾವು ಹೂಡುವ ಎತ್ತಿಗಿಂತಲೂ ಭಯಂಕರವಾಗಿ ದುಡಿಯುವುದು ಗೊತ್ತಿರುವ ನಮ್ಮ ಜನ ಅದೆಷ್ಟು ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾರೆ ಎಂಬುದು ವಿಷದವಾಗುತ್ತದೆ.

ಹೊಲದಿಂದ ಟನ್ನುಗಟ್ಟಲೆ ಕಬ್ಬನ್ನು ಕಡಿದು, ಫ್ಯಾಕ್ಟರಿಗಳೇ ಪೂರೈಸಿರುವ ಬಂಡಿಗಳಲ್ಲಿ ತುಂಬಿ ತಂದು ಕಾರ್ಖಾನೆಗೆ ಮುಟ್ಟಿಸಿದರೆ ಟನ್ನಿಗೆ ಇಂತಿಷ್ಟು ಎಂದು ಕಾರ್ಖಾನೆ ದುಡ್ಡು ನಿಗದಿಪಡಿಸಿರುತ್ತದೆ. ಅಲ್ಲಿನ ಲೆಕ್ಕ ಬರೆದುಕೊಳ್ಳುವವ ಕೂಲಿಕಾರ್ಮಿಕನ ಹೆಸರು ಬರೆದುಕೊಂಡು ಎಷ್ಟು ದುಡ್ಡಾಯಿತು ಎಂದೂ ಬರೆದುಕೊಳ್ಳುತ್ತಾನೆ. ಕೂಲಿಕಾರ್ಮಿಕ ತಂದ ಕಬ್ಬಿಗೆ ಕಾರ್ಖಾನೆ ನಿಗದಿಪಡಿಸಿದ ದುಡ್ಡಿನಲ್ಲಿ ನೂರಕ್ಕೆ ೧೮ ರೂಪಾಯಿಯಿಂದ ೨೫ ರೂಪಾಯಿಯವರೆಗೆ ಕಮೀಷನ್ ದಲ್ಲಾಳಿಗೆ ಹೋಗುತ್ತದೆ ಎಂಬುದಾಗಿ ಇಲ್ಲಿನ ಜನ ಅಲವತ್ತುಕೊಳ್ಳುತ್ತಾರೆ. ಕಾರ್ಖಾನೆಯವರೂ ಸಹ ಬಂಡಿಯನ್ನೇನು ಪುಗಸಟ್ಟೆ ನೀಡುವುದಿಲ್ಲ, ಅದಕ್ಕೂ ದಿನಬಾಡಿಗೆ ಕಟ್ಟಲೇಬೇಕು. ಹೀಗೆ ದಲ್ಲಾಳಿಯ ಕಮೀಷನ್, ಬಂಡಿಯ ಬಾಡಿಗೆ ತೆಗೆದು ಒಂದು ಗಬಾಳ ಕುಟುಂಬ ಗಂಡ, ಹೆಂಡತಿಯ ದುಡಿಮೆಯ ಜೊತೆಗೆ ಎರಡು ಎತ್ತುಗಳ ದುಡಿಮೆಯನ್ನೂ ಸೇರಿಸಿ ಸಿಗುವ ಪ್ರತಿಫಲ ಮಾತ್ರ ಕನಿಕರ ಉಕ್ಕಿಸುವಂಥದ್ದು. ಹೀಗೆ ಯಾರದೋ ದುಡಿತದಿಂದ ತಮ್ಮ ಜೇಬು ತುಂಬಿಸಿಕೊಳ್ಳುವ ದಲ್ಲಾಳಿ ಜನ ಇಲ್ಲಿ ಬಹಳ. ಆದರೂ ಬೇರೆ ಕೃಷಿ ಕೂಲಿಗೆ ಹೋಲಿಸಿದರೆ ಗಬಾಳಿಗರ ದುಡಿಮೆಯ ಫಲ ಸ್ವಲ್ಪ ಹೆಚ್ಚೇ, ಅದು ಕೇವಲ ದುಡ್ಡಿನ ರೂಪದಲ್ಲಲ್ಲ ಬೆವರು ರಕ್ತದ ರೂಪದಲ್ಲೂ.

ದುಡಿಯಲು ಬರುವ ಮೊದಲೇ ಸಿಕ್ಕ ದುಡ್ಡನ್ನು ಕೆಲವರು ಮಕ್ಕಳ ಮದುವೆ ಮಾಡಿ, ಜಾತ್ರೆ, ಹಬ್ಬ ಮಾಡಿ, ಇನ್ನೂ ಕೆಲವರು ಕುಡಿದು, ಜೂಜಾಡಿ ಖಾಲಿಯಾಗಿ ದುಡಿತಕ್ಕೆ ಬರುತ್ತಾರೆ. ಹೀಗೆ ಬಂದು ಇಲ್ಲಿ ಸಿಕ್ಕ ಬಯಲಿನ ಜಾಗದಲ್ಲಿ ರವುದಿಯಿಂದ ಗೂಡು ಕಟ್ಟಿ ದಿನದ ದುಡಿತದ ಯುದ್ಧಕ್ಕೆ ಅಣಿಮಾಡುವ ತಾಯಂದಿರ ಸ್ಥಿತಿಗತಿಗಳು ಮಹಿಳಾ ಕಲ್ಯಾಣದ ಮಾತನ್ನಾಡುವ ಪ್ರಭುತ್ವವನ್ನು ಅಣಕಿಸುವಂತಿವೆ. ಹೊತ್ತು ಮೂಡುವ ಮುನ್ನವೇ ಕತ್ತಲು ತುಂಬಿರುವ ಬಯಲಿನ್ಲಲ್ಲಿಯೇ ನೂರಾರು ಮಹಿಳೆಯರ  ಸ್ನಾನವೆಂದರೆ ನಮ್ಮ ಅತ್ಯಾಧುನಿಕ ನಾಗರಿಕತೆ ಇನ್ನೂ ಅಲ್ಲೇ ಇದೆ ಅನಿಸುತ್ತದೆ. ಸಿಕ್ಕ ದುಂಡು ಕಲ್ಲುಗಳಿಂದಲೇ ಒಲೆ ಹೂಡಿ, ಬೆರಣಿಗಳಿಂದ ಒಲೆ ಹೊತ್ತಿಸಿ ಅಡುಗೆ ಮಾಡಿಕೊಂಡು ಬಂಡಿ ಹತ್ತಿದಾಗ ಇನ್ನೂ ಬೆಳಕು  ಮೂಡಿರುವುದಿಲ್ಲ. ಕಬ್ಬು ಕಡಿಯುವಿಕೆ ಪ್ರಾರಂಭವಾಗಿ  ಬಂಡಿ ತುಂಬಿಸಿ ಹೊಲ ಸಮೀಪವಿದ್ದರೆ ಒಂದು ಬಂಡಿ ಕಾರ್ಖಾನೆಗೆ ಮುಟ್ಟಿಸಿ ಮತ್ತೆ ಇನ್ನೊಂದು ಬಂಡಿ ಒಯ್ಯುವ  ಧಾವಂತದಲ್ಲಿ ಬಂಡಿ ಏರುತ್ತಾರೆ. ಹೆಣ್ಣುಮಕ್ಕಳೇ ಅಷ್ಟು ಬಲವಾದ ಉಢಾಳ ಎತ್ತುಗಳನ್ನು ಪಳಗಿಸಿ ತಾವೇ ಬಂಡಿ ಕಟ್ಟುತ್ತಾರೆ, ತಾವೇ  ಬಂಡಿ ನಡೆಸುತ್ತಾರೆ. ಟನ್ನುಗಟ್ಟಲೇ ಕಬ್ಬನ್ನು ಹೇರಿಕೊಂಡು  ಹೀಗೆ ಬಂಡಿ ನಡೆಸಿಕೊಂಡು ಬರುವ ದಾರಿಯೇನು  ಹಸನಾದದ್ದಲ್ಲ. ಮುದುಕರು ಸರಾಗವಾಗಿ ನಡೆದುಕೊಂಡು ಬರಲು ಸಾಧ್ಯವಿಲ್ಲದ ತಗ್ಗು ದಿನ್ನೆಗಳಿಂದ ಕೂಡಿರುವ ರಸ್ತೆಯಲ್ಲಿ ಹೀಗೆ ಬರುವುದು ದುಸ್ಸಾಹಸವೇ ಸರಿ. ಕಷ್ಟ ಎದುರಾಗುವುದು ಏರುದಿನ್ನೆಗಳು ಬಂದಾಗ . ಎತ್ತುಗಳು ಜಗ್ಗಲು ಆಗದೇ ಒದ್ದಾಡುವಾಗ ಈ ಹೆಣ್ಣುಮಕ್ಕಳು ತಮ್ಮೆಲ್ಲ ಶಕ್ತಿಯನ್ನೂ ಕೂಡಿಸಿಕೊಂಡು ಎತ್ತುಗಳ ಜೊತೆ ಕಬ್ಬು ತುಂಬಿದ ಬಂಡಿಯನ್ನು ಎಳೆಯುತ್ತಾರೆ. ಹೀಗೆ ಎಳೆಯುವಾಗ ಆಗುವ ಅನಾಹುತಗಳು ತುಂಬ ಕ್ರೂರವಾದವು. ಎತ್ತುಗಳ ಕಾಲುಗಳೇ ಮುರಿಯುತ್ತವೆ, ಕಬ್ಬು ತುಂಬಿದ ಬಂಡಿ ಮುಗುಚಿ ಬೀಳುತ್ತವೆ, ಮತ್ತೆ ಎತ್ತುಗಳನ್ನು ಸುಧಾರಿಸಿಕೊಂಡು, ಕಬ್ಬನ್ನು ಮರಳಿ ತುಂಬಿ ಕಾರ್ಖಾನೆಗೆ ಮುಟ್ಟಿಸುವ ಕರ್ಮವೇ ಇಲ್ಲಿನ ಜನರ ಬದುಕಿನ ಚೈತನ್ಯವನ್ನು ಹೇಳುತ್ತದೆ.

ಇದಕ್ಕಿಂತ  ಭಯಾನಕ ಸನ್ನಿವೇಶವೆಂದರೆ ಗರ್ಭಿಣಿ ಹೆಣ್ಣುಮಕ್ಕಳು ಯಾವುದೇ ಅಳುಕಿಲ್ಲದೆ, ಆತಂಕವಿಲ್ಲದೆ ಕಿಲೋಮೀಟರ್ ಗಟ್ಟಲೆ ನಡೆದು ಕಬ್ಬು ಕಡಿಯಲು ಬರುವ ಚಿತ್ರ ಎಂಥವರನ್ನೂ ಅಲುಗಾಡಿಸದೇ ಇರದು. ಇನ್ನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗುತ್ತದೆ ಎನ್ನುವಾಗಲೂ ಇಲ್ಲಿನ ಮಹಿಳೆಯರು ಹೊಲದಲ್ಲಿ ಕಬ್ಬು ಕಡಿಯುತ್ತಿರುತ್ತಾರೆ. ತೀರಾ ತುರ್ತಿಗೆ ಬಂದು ನರಳಲು ಪ್ರಾರಂಭಿಸಿದ ಮೇಲೆ ಕನಿಷ್ಠ ವೈದ್ಯಕೀಯ ಸೌಲಭ್ಯವಿಲ್ಲದೆ ಬದುಕುತ್ತಿರುವ ಈ ದುಡಿಮೆಗಾರರು ಹೇಗೋ ರಸ್ತೆಗೆ ಬಂದು ಸಿಕ್ಕ ಬಸ್ಸನ್ನೇರಿ ಎಲ್ಲೋ ಇರುವ ಆಸ್ಪತ್ರೆಯನ್ನು ಹುಡುಕಿ ನಡೆಯುತ್ತಾರೆ.  ಹೀಗೆ ಹೋಗುವಾಗ  ಬಸ್ಸಿನಲ್ಲಿಯೇ ಹೆರಿಗೆಯಾದ ಉದಾಹರಣೆಗಳನ್ನು ಕೇಳಿ ದಿಗಿಲಾಯಿತು .  ಜೀವ ಪಣಕ್ಕಿಟ್ಟು ಮತ್ತೊಂದು ಜೀವಕ್ಕೆ ಜನ್ಮ ಕೊಡುವಾಗ ಯಾವ ಡಾಕ್ಟರುಗಳೂ ಇಲ್ಲದೆ ಔಷಧ, ಇಂಜೆಕ್ಷನ್ ಇಲ್ಲದೆ ಹೆರಿಗೆ ನಡೆಯುತ್ತದೆ ಎಂದರೆ ನಮ್ಮ ನವನಾಗರೀಕ ಸಮಾಜದ ಹೊಣೆ ಹೊತ್ತ ನಾಡ ಪ್ರಭುಗಳು ಏನು ಹೇಳುತ್ತಾರೆ.  ‘ಜನನಿ ಸುರಕ್ಷಾ’ ಯೋಜನೆ ತಾನು ಸುರಕ್ಷಿತವಾಗಿದೆಯೇ ಎಂದು ಕೇಳಬೇಕಾಗುತ್ತದೆ. ಬಿಡಿ ಇದು ದುಡಿತಕ್ಕೆ ಒಗ್ಗಿಕೊಂಡ ಇಲ್ಲಿನ ಜನಕ್ಕೆ ಯಾವುದೂ ಅಸಹಜವೆನಿಸುವುದಿಲ್ಲ ಎಂಬುದು ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ. ಇಂಥ ಘೋರ ಸಂಕಷ್ಟಗಳನ್ನೆಲ್ಲ ಇವರು ತುಂಬ ಸರಳವಾಗಿ ನಿರಾಕರಿಸಿ ಮುಂದಡಿಯಿಡುತ್ತಾರಲ್ಲ ಈ ಧೀಮಂತಿಕೆಗೆ ಸಾಟಿ ಯಾವುದು.

ಇತ್ತೀಚೆಗೆ ಹೊಸದಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯಿದೆ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ಇದರ ಪ್ರಕಾರ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗುವಂತಿಲ್ಲ. ಹಾಗೇನಾದರೂ ಆದರೆ ಅದಕ್ಕೆ ಕಾರಣರಾದ ತಂದೆ ತಾಯಿಯಾಗಲಿ, ಶಿಕ್ಷಕರಾಗಲಿ ಎಲ್ಲರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದರೆ ಈ ದುಡಿಯುವ ಜನಗಳ ಜೊತೆ ಬರುವ ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಎಳೆಯ ರಟ್ಟೆಗಳಲ್ಲಿಯೇ ಕಬ್ಬು ಕಡಿಯುತ್ತಿರುವ ಚಿತ್ರ ಈ ಕಟ್ಟು ನಿಟ್ಟಿನ ಕಾಯಿದೆಯನ್ನು ಕಟ್ಟುನಿಟ್ಟಾಗಿ ನಿರಾಕರಿಸಿರುವುದನ್ನು ಸೂಚಿಸುತ್ತದೆ. ನಮ್ಮ ಮಕ್ಕಳು ಶಿಕ್ಷಣದಿಂದ ವಿಮುಖರಾಗಬಾರದೆಂದು ಏನೆಲ್ಲ ಯೋಜನೆಗಳು, ಎಷ್ಟು ಸಾವಿರ ಕೋಟಿ  ರೂಪಾಯಿಗಳು ಎಲ್ಲಿ ಹೋಗುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ. ಆಟವಾಡಬೇಕಾದ ಮಕ್ಕಳು ಆಳೆತ್ತರದ ಕಬ್ಬನ್ನು ಹರಿತ ಕುಡುಗೋಲಿನಿಂದ ಕಡಿಯುತ್ತಾ, ಮೈಮುಖಗಳನ್ನೆಲ್ಲ ಗಾಯಮಾಡಿಕೊಂಡು ಎತ್ತುಗಳನ್ನು ಹೂಡಿಕೊಂಡು ಬಂಡಿ ನಡೆಸುವ ಚಿತ್ರಕ್ಕೆ ಉತ್ತರ ಕೊಡುವವರಾರು?

ಉತ್ತರ ಕರ್ನಾಟಕದ ಮಕ್ಕಳ ಎದೆಯ ಮೇಲೆ ಮತ್ತು ಎದೆಯ ಒಳಗೆ ಬಿದ್ದಿರುವ ಬರೆಗಳು ಅಮಾನುಷವಾದವು. ತೋರಿಸಿ ಅರ್ಥೈಸಲಾರದವು. ಹೊಲದಲ್ಲಿ ಕಬ್ಬು ಕಡಿಯುತ್ತಿರುವ ತಮ್ಮ ಪುಟ್ಟ ಮಕ್ಕಳನ್ನು, ಹಸುಗೂಸುಗಳನ್ನು ಅಲ್ಲಿಯೇ ನೆರಳಿರುವ ಜಾಗ ನೋಡಿ , ಕಬ್ಬಿನ ಎಲೆಗಳನ್ನೇ ಹಾಸಿ ಮಲಗಿಸಿರುತ್ತಾರೆ. ಹೀಗೆ ಮಲಗಿಸಿರುವಾಗ ಹಿಮ್ಮುಖವಾಗಿ ಕಬ್ಬು ಹೇರಲು ಬಂದ ಟ್ರ್ಯಾಕ್ಟರ್ ಗಾಲಿಗೆ ಸಿಕ್ಕು ಜೀವ ಕಳೆದುಕೊಂಡ ಹಸುಗೂಸುಗಳ ಸಾವಿನ ಹೊಣೆ ಯಾರು ಹೊರುತ್ತಾರೆ? ಈ ದುರಂತಗಳು ಹುಡುಕಿದಷ್ಟು ಭೀಕರ. ಆದರೆ ಈ ದುರಂತಗಳ ಪರಿಹಾರದ ದಾರಿಗಳ ತುಂಬ ಮುಳ್ಳುಗಳು ತುಂಬಿವೆ. ಕೂಲಿ ಕಾರ್ಮಿಕರಿಗೆ ಅವರ ದುಡಿಮೆಗೆ ಸಂಬಂಧಿಸಿದಂತೆ ಹಲವು ಕಾನೂನುಗಳಿವೆ. ಈ ಕಾನೂನುಗಳನ್ನು ರೂಪಿಸಿದ ಪ್ರಭುತ್ವವೇ ಕಾನೂನನ್ನು ಹೇಗೆ ಮುರಿಯುತ್ತಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಈಗಿರುವ ಕಾನೂನಿನ ಪ್ರಕಾರ ಒಂದು ದಿನಕ್ಕೆ ನಿಗದಿಪಡಿಸಿದ ಕೂಲಿಯನ್ನು ಪ್ರಭುತ್ವ ಅಂಗನವಾಡಿ ಆಯಾಗಳಿಗೆ, ಬಿಸಿಯೂಟದ ಕಾರ್ಯಕರ್ತೆಯರಿಗೆ ನೀಡುತ್ತಿದೆಯೆ? ಉತ್ತರಿಸುವವರಾರು?

ಕೃಷಿಯ ಅವಸಾನಕ್ಕೂ, ಕೂಲಿಕಾರ್ಮಿಕರು ಎದುರಿಸುತ್ತಿರುವ ದುರಂತಗಳಿಗೂ ನೇರವಾದ ಸಂಬಂಧಗಳಿವೆ. ನಮ್ಮ ಪ್ರಭುತ್ವದ ಇಂದಿನ ನಡೆಯನ್ನು ಗಮನಿಸಿದರೆ ಅದು ಕೃಷಿಗೆ ಬಂದೆರಗಿರುವ ವಿಪತ್ತುಗಳನ್ನು ದೂರಮಾಡುವಿಕೆಯಲ್ಲಿ  ಗಮನಹರಿಸದೆ ಕೃಷಿಯನ್ನು ಕಾರ್ಪೋರೇಟ್ ಗೊಳಿಸುವಿಕೆಯಲ್ಲಿ ಹೆಚ್ಚು ಆಸ್ಥೆವಹಿಸಿದೆ ಎಂಬುದು ಸಹಜವಾಗಿ ಅರಿವಿಗೆ ಬರುತ್ತದೆ. ಈ ಕಾರಣದಿಂದಲೇ ಇಂದು ಸಾವಿರ ಜನ ಭೂಮಿ ಕಳೆದುಕೊಳ್ಳುತ್ತಿದ್ದಾರೆ, ಹಾಗೆ ಭೂಮಿ ಕಳೆದುಕೊಂಡವರು ಸಹಜವಾಗಿ ಕೂಲಿಕಾರ್ಮಿಕರಾಗಿ ಈ ರೀತಿ ತಬ್ಬಲಿ ಬದುಕಿಗೆ ಒಗ್ಗಿಕೊಳ್ಳುವಂತಾಗಿದೆ. ನಮ್ಮ ಅನ್ನದಾತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿಪಡಿಸದೆ, ಆ ಬೆಳೆದ ಬೆಳೆಯ ಉತ್ಪನ್ನ, ಉಪಉತ್ಪನ್ನಗಳ ಬೆಲೆಯನ್ನು ಗಮನಿಸಿದರೆ ಈ ಮಹಾಮೋಸದ  ಅರಿವಾಗುತ್ತದೆ. ಗೋಧಿಯ ಬೆಲೆಯಲ್ಲಿ ಎರಡು ದಶಕಗಳಲ್ಲಿ ಆಗಿರುವ ಬೆಳವಣಿಗೆಗಳಿಗೂ, ಅದರ ಉತ್ಪನ್ನಗಳಾದ ಬಿಸ್ಕಿಟ್, ಬೇಕರಿ ತಿಂಡಿಗಳ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಹೋಲಿಸಿದರೆ ತುಂಬ ಆತಂಕವಾಗುತ್ತದೆ. ಹತ್ತಿ ಬೆಳೆಯ ಬೆಲೆಯಲ್ಲಿ  ಆಗದಿರುವ ಏರಿಕೆ ಬಟ್ಟೆಯ ಬೆಲೆಯಲ್ಲಿ ಆಗಿದೆಯಲ್ಲ, ಇದು ಎಂಥ ವಿಪರ್ಯಾಸ. ತಾನೇ ಬೆಳೆದ ಹತ್ತಿಯಿಂದ ತಯಾರಿಸಿದ ಬಟ್ಟೆಯನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲಾಗದೆ ಬೆತ್ತಲೆ ಫಕೀರರಂತೆ ಬದುಕು ದೂಡುತ್ತಿರುವ ಹಲವು ರೈತರನ್ನು ನಾವು ನೋಡುತ್ತಲೇ ಬಂದಿದ್ದೇವೆ. ರೈತಮಕ್ಕಳ ಹರಕುಬಟ್ಟೆಯಲ್ಲಿ ಈ ದೇಶದ ಚಿತ್ರ ಯಾರು ಬರೆದರೋ?

ಈ ಬದುಕಿನ ಎರಡು ಅಂಚುಗಳನ್ನು ಗಮನಿಸಿದರೆ ಈ ನೆಲದ ಚೈತನ್ಯ ಮತ್ತು ಪ್ರಭುತ್ವದ ದಾರಿದ್ರ್ಯದ ವಾಸ್ತವಗಳು ಸ್ಪಷ್ಟವಾಗುತ್ತವೆ. ಹೀಗೆ ಏನೆಲ್ಲ ಸಂಕಷ್ಟಗಳನ್ನು ಎದುರಿಸಿಯೂ ಇದೇ ದುಡಿಮೆಯ ದುಡ್ಡಿನಿಂದ ಇರುವ ಎರಡೂ ಹೆಣ್ಣುಮಕ್ಕಳನ್ನು ಓದಿಸಿ ಡಾಕ್ಟರ್, ಟೀಚರ್ ಮಾಡಿ ಬದುಕನ್ನು ಚಂದಗಾಣಿಸಿಕೊಂಡಿರುವ ಕುಟುಂಬದ ಉದಾಹರಣೆಯೂ ಇಲ್ಲಿದೆ. ತಮ್ಮ ಮಕ್ಕಳ ಮದುವೆಗೆ ನಾಲ್ಕು ಲಕ್ಷದವರೆಗೆ ಖರ್ಚುಮಾಡಿ ದುಡಿಯಲು ಬಂದವರೂ ಇದ್ದಾರೆ. ಜಮೀನಿದ್ದೂ ಕಾಲದ ಅವಕೃಪೆಯಿಂದ  ವ್ಯವಸಾಯ ಮಾಡಲಾಗದೆ ಇಲ್ಲಿ ಬಂದು ದುಡಿದು ಮತ್ತೆ ತಮ್ಮ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುವ ಕುಟುಂಬಗಳೂ ಇಲ್ಲಿವೆ.

ಹಾಗೆಯೇ  ಹೀಗೆ ಅಲೆಮಾರಿಗಳಾಗಿ ಇಲ್ಲಿ ಕೃಷಿಕೂಲಿ ಕಾರ್ಮಿಕರಾಗಿ  ಬಂದವರಲ್ಲಿ ಬಹುತೇಕ ಜನ ಗ್ರಾಮೀಣ ತಳಸಮುದಾಯದವರು. ಇರಲು ಮನೆಯಿಲ್ಲದೆ ಜೋಪಡಿಗಳಲ್ಲಿ ವಾಸ ಮಾಡುತ್ತಲೇ ಸಿಕ್ಕ ಕೆಲಸ ಮಾಡುತ್ತ  ಜೀವನ ನಡೆಸುತ್ತಿದ್ದವರಿಗೆ, ಯಾವ  ಕೆಲಸಗಳೂ ಸಿಗದೆ ದುಸ್ಥರವಾದಾಗ ಹೀಗೆ ಗಬಾಳಿಗರಾಗಿ ಇಲ್ಲಿ  ಬಂದು ಬದುಕು ದೂಡುತ್ತಿದ್ದಾರೆ. ಊರಿನ ಸಾಮಾಜಿಕ ದೌರ್ಜನ್ಯಗಳು, ಅವಮಾನಗಳು, ಕೊನೆಗೆ ಮನುಷ್ಯರಾಗಿ  ನೋಡುವ ಕಣ್ಣಿಲ್ಲದ ಮೇಲ್ಜಾತಿಗಳ ಅಮಾನವೀಯತೆಗೆ ಬೇಸತ್ತು  ಊರು ತೊರೆದು ಬಂದವರಿದ್ದಾರೆ. ಈ ಪ್ರಭುತ್ವದ ದಲಿತೋದ್ಧಾರದ ಮಾತುಗಳು, ಯೋಜನೆಗಳು ಯಾರ  ಹೆಸರಿನಲ್ಲಿ ಯಾರಿಗೆ ಸೇರುತ್ತಿವೆ ಎನ್ನುವುದಕ್ಕೆ ಇದಕ್ಕಿಂತ ವಾಸ್ತವಗಳು ಬೇರೆ ಇಲ್ಲ. ಹಲವರಿಗೆ ತಾವು ಇಂತವರೆಂದು ಹೇಳಿಕೊಳ್ಳಲೂ ಸಹ ಮತದಾನದ ಗುರುತಿನ ಚೀಟಿಗಳೇ ಇಲ್ಲದ ಮೇಲೆ ಯಾವ ಸೌಲಭ್ಯ ತಾನೆ ಯಾರಿಗೆ ದಕ್ಕುತ್ತೆ?

ಇಲ್ಲಿನ ಮೋಸದ ಚಹರೆಗಳನ್ನು ಗಮನಿಸುತ್ತಾ ಹೋದರೆ ನಮ್ಮ ಕಲ್ಪನೆಗೂ ಮೀರಿದ ವಾಸ್ತವಗಳು ತೆರೆದುಕೊಳ್ಳುತ್ತವೆ. ಕಬ್ಬು ಬೆಳೆಗಾರರೂ ಸಹ ಏಜೆಂಟರ ವಂಚನೆಗಳಿಗೆ ಬಲಿಯಾಗಿದ್ದಾರೆ. ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗಳಿಗೆ ಕೊಂಡೊಯ್ಯಲು ಇದೇ ಏಜೆಂಟರಿಗೆ ಎರಡು ಸಾವಿರದವರೆಗೆ ದುಡ್ಡು ಕೊಟ್ಟು ಕೈಸುಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ದುಡ್ಡು ಕೊಡದೆ ಹೋದರೆ ಆ ರೈತನ ಕಬ್ಬು ಹೊಲದಲ್ಲಿಯೇ  ಉಳಿಯಬೇಕಾಗುತ್ತದೆ. ವಂಚನೆಗೊಳಗಾಗಲೇಬೇಕಾಗದ ಅನಿವಾರ್ಯತೆಯನ್ನು ಇಲ್ಲಿನ ಏಜೆಂಟರು ಸೃಷ್ಟಿಸಿದ್ದಾರೆ.

ಇಲ್ಲಿ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಮ್ಮ ರೈತ ಹೋರಾಟಗಳು ಯಾರನ್ನು ಕೇಂದ್ರೀಕರಿಸಿಕೊಂಡಿವೆ, ಯಾರನ್ನು ಅಲಕ್ಷಿಸಿವೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕಬ್ಬು ಬೆಳೆಗಾರರಿಗಾಗಿ ಸಂಘಗಳನ್ನು ಕಟ್ಟಿಕೊಂಡು ನ್ಯಾಯಯುತವಾದ  ಬೆಲೆಗಾಗಿ ಹೋರಾಟ ನಡೆಸುತ್ತಿರುವುದು ಸರಿಯಷ್ಟೆ, ಆದರೆ ಈ ಹೋರಾಟ ಜಮೀನು ಉಳ್ಳವರ ಸಮಸ್ಯೆಗಳಲ್ಲಿ ತೋರಿದ ಆಸಕ್ತಿಯನ್ನು, ಕೂಲಿಕಾರ್ಮಿಕರ  ಸಂಕಷ್ಟಗಳನ್ನು ನಿವಾರಿಸುವಲ್ಲಿ ತೋರುತ್ತಿಲ್ಲ  ಏಕೆ?  ರೈತ ಸಂಘ ಉಳ್ಳವರ, ಜಮೀನು ವಾರಸುದಾರರ ಪರವಾಗಿ ಮಾತ್ರವಿದೆಯೆಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಕೂಲಿ  ಇಂದು ನೆಮ್ಮದಿಯ ಘನತೆಯ ಬದುಕಿಗೆ ದಾರಿಯಾಗದೆ, ಜೀವ ಉಳಿಸಿಕೊಳ್ಳುವುದಕ್ಕಾಗಿ ನಡೆಯುವ ಹೋರಾಟದಲ್ಲಿ ಸಿಕ್ಕ ಸಣ್ಣ ಭರವಸೆ ಮಾತ್ರವಾಗಿದೆ. ರೈತ ಬೆಳೆದ ಬೆಳೆಗೆ ನ್ಯಾಯಯುತವಾದ ಬೆಲೆ ದೊರೆತಿದ್ದರೆ  ಕೆಲವು ಜನ ಕೂಲಿಕಾರ್ಮಿಕರಾದರೂ ನೆಮ್ಮದಿಯಿಂದ  ಉಸಿರಾಡಬಹುದಿತ್ತು. ಜಮೀನನ್ನು ಊರ ಸಾಹುಕಾರನಿಗೋ, ಗೌಡನಿಗೋ ಅಡವಿಡದೆ ತಾವು ಬೆಳೆದ ಅನ್ನ ತಾವೇ ತಿನ್ನಬಹುದಿತ್ತು. ಇಂದು ಯಾರನ್ನೂ ಶೋಷಕರೆಂದು  ಬೊಟ್ಟು ಮಾಡಿ ತೋರಿಸುವಂತಿಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ದೌರ್ಜನ್ಯ ನಡೆಸುವವರಿಗೆ ನಿರ್ದಿಷ್ಟ ಆಕಾರವೇ ಇಲ್ಲ, ಇನ್ನು ಹೇಗೆ ಗುರುತಿಸುವುದು? ಶತಶತಮಾನದಿಂದ ನೋವೇ ಬದುಕಾದವರಿಗೆ ಶೋಷಣೆಯ ಚಹರೆಗಳು ಅರ್ಥವಾಗುವುದಿಲ್ಲ. ಸಮಾನತೆ ಕನಸೆ? ಕಾಲವೇ ಉತ್ತರಿಸುತ್ತದೆ.

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)

(ಚಿತ್ರಗಳು: ಲೇಖಕರವು)

ಧರ್ಮ ಹಾಗೂ ಆರ್ಥಿಕ ಅಂತ:ಸತ್ವ


-ಡಾ.ಎಸ್.ಬಿ. ಜೋಗುರ  


 

“Christianity will go. It will vanish and shrink. I needn’t argue about that; I’am right and I will be proved right. We ‘re more popular than Jesus now; I don’t know which will go first-rock’n’ roll or Christinity. Jesus was all right but his desciples were thick and ordinary. It’s them twisting it that ruins it for me.”  – John Lennon

ಧರ್ಮ ಮತ್ತು ಸಮಾಜದ ಮಧ್ಯೆ ಇರುವ ಸಂಬಂಧವನ್ನು ಕುರಿತ ಅಧ್ಯಯನ, ಮಾನವ ಸಮಾಜ ಅತ್ಯಂತ ಸರಳವಾಗಿರುವ ಹಂತದಿಂದಲೂ ಮುಂದುವರೆದುಕೊಂಡು ಬಂದಿರುವುದಿದೆ. ನಿಸರ್ಗದ ಎಲ್ಲ ವ್ಯಾಪಾರಗಳೂ ಧರ್ಮದಿಂದಲೇ ನಿಯಂತ್ರಿತ. ನಿರ್ಧರಿತ ಎನ್ನುವುದರಿಂದ ಆರಂಭಿಸಿ, ಸರ್ವಚೇತನವಾದ ಮತ್ತು ಲಾಂಛನವಾದಗಳ ಮೂಲಕ ಸಾಗಿ ಬಂದು, ಅನೇಕ ದೇವರ ಪರಿಕಲ್ಪನೆಯ ನಡುವೆ ಏಕದೇವತಾರಾಧನೆ ಮತ್ತು ದೇವನೊಬ್ಬ ನಾಮ ಹಲವು ಎನ್ನುವ ದಾರ್ಶನಿಕತೆಯವರೆಗೂ ಬಂದು ತಲುಪಿ, ಈಗ ನಮ್ಮ ನಡುವೆ ಪರಸ್ಪರ ಬಲಪ್ರದರ್ಶನದ ಮೂಲಕ ಗುರುತಿಸಿಕೊಳ್ಳುವ, ತಾನೇ ಶ್ರೇಷ್ಟ ಎನ್ನುವ ಅಹಮಿಕೆಯವರೆಗೂ ಬಂದು ತಲುಪಿರುವ ಅಗೋಚರ, ಅತಿಮಾನುಷ ಶಕ್ತಿಯಾದ ಧರ್ಮವು ಒಂದು ಸಮಾಜದ ಆರ್ಥಿಕ ಅಂತ:ಸತ್ವವಾಗಿಯೂ ಕೆಲಸ ಮಾಡುವುದಿದೆ ಎನ್ನುವುದನ್ನು ಕೆಲವು ಚಿಂತಕರಾದರೂ ತಮ್ಮ ಅಧ್ಯಯನದ ಮೂಲಕ ತೋರಿಸಿಕೊಟ್ಟಿರುವುದಿದೆ.

ಶ್ರೇಷ್ಟ ಮಾನವಶಾಸ್ತ್ರಜ್ಞರಾದ ಇವನ್ಸ್ ಫ್ರಿಚರ್ಡ್ ಮತ್ತು ರಾಡಕ್ಲಿಪ್ ಬ್ರೌನ್‌ರವರು ಸಾಮಾಜಿಕ ವಿಕಸನದ ಘಟ್ಟಗಳಾದ ಬೇಟೆಯಾಡುವ ಹಂತ, ಆಹಾರನ್ವೇಷಣೆಯ ಹಂತ, ಹುಲ್ಲುಗಾವಲು ಹಂತ ಮತ್ತು ಒಕ್ಕಲುತನದ ಹಂತದಲ್ಲಿಯ ಧರ್ಮದ ಸರಳ ಸ್ವರೂಪವನ್ನು ಕುರಿತು ಅಧ್ಯಯನ ಮಾಡಿರುವುದಿದೆ. ವಿಶ್ವದ ಎಲ್ಲ ಧರ್ಮಗಳು ಮನುಷ್ಯ ಕುಲವನ್ನು ಅಖಂಡವಾಗಿ ಬೆಸೆಯುವಲ್ಲಿ ಸೋತಿವೆ ಹಾಗಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಜಾಗತಿಕ ಧರ್ಮಗಳು ತಮ್ಮ ಮೂಲ ಹೊಣೆಗಾರಿಕೆಯಿಂದ ವಿಚಲಿತವಾಗಿದ್ದು, ಅವುಗಳ ಸ್ಥಾನದಲ್ಲಿ ಮಾನವತಾವಾದಿ ಧರ್ಮವನ್ನು ಸ್ಥಾಪಿಸಬೇಕು. ನಿಸರ್ಗವನ್ನು ನಿಯಂತ್ರಿಸುವ, ಮನುಷ್ಯನ ಐಹಿಕ ಬೇಡಿಕೆಗಳನ್ನು ಈಡೇರಿಸುವುದು ಮನುಷ್ಯ ಮಾತ್ರನಿಂದ ಸಾಧ್ಯ ಹೀಗಾಗಿ ದೇವರ ಸ್ಥಾನದಲ್ಲಿ ಮಹಾಮಾನವನನ್ನು ಕುಳ್ಳರಿಸಬೇಕು ಎಂದು ಪ್ರತಿಪಾದನೆ ಮಾಡಿದ ಫ್ರಾನ್ಸ್ ದೇಶದ ಸಮಾಜಶಾಸ್ರ್ತಜ್ಞ ಅದು ಸಾಧ್ಯ ಮಾಡಲಾಗದೇ ಅಂಥಾ ಒಂದು ಧರ್ಮವನ್ನು ಸ್ಥಾಪಿಸಲಾಗದೇ ಜೀವನದ ಕೊನೆಯ ಗಳಿಗೆಯಲ್ಲಿ ತನ್ನ ಖಾಸಗಿ ಬದುಕಿನ ಪೆಟ್ಟುಗಳಲ್ಲಿ ಸಿಲುಕಿ ಅತ್ಯಂತ ಜರ್ಜರಿತನಾಗಿ ಹೋದದ್ದು ಈಗ ಚರಿತ್ರೆ. ಇಂಗ್ಲೆಂಡ್ ಮೂಲದ  ಸ್ಪೆನ್ಸರ್‌ನಂಥಾ ಚಿಂತಕರು ಧರ್ಮವನ್ನು ಸಾಮಾಜಿಕ ನಿಯಂತ್ರಣದ ಅನೌಪಚಾರಿಕ ಸಾಧನವನ್ನಾಗಿ ಗುರುತಿಸಿ ’ಇದ್ದವರ ಭಯದಿಂದ ರಾಜ್ಯ ಹಾಗೂ ಸತ್ತವರ ಭಯದಿಂದ ಧರ್ಮ ಹುಟ್ಟಿತು’ ಎಂದಿರುವುರು. ಇಲ್ಲಿ ಭಯ ಎನ್ನುವುದೇ ಧರ್ಮ ಇಲ್ಲವೇ ರಾಜ್ಯ ಎನ್ನುವ ಪ್ರಭುತ್ವಗಳ ಹುಟ್ಟಿಗೆ ಕಾರಣವಾಗಿರುವುದು ಕಟುವಾಸ್ತವ.

ಫ್ರಾನ್ಸ್ ದೇಶದ ಚಿಂತಕ ಡರ್ಖಹೀಮ್ ಧರ್ಮ ಎನ್ನುವುದು ಬದುಕಿನ ಭಾಗ, ಜೀವನದ ಅಗತ್ಯ ಎನ್ನುವ ಹಾಗೆ ಮಾತನಾಡಿ ಸಂಪ್ರದಾಯವಾದಿಗಳ ಸಾಲಿಗೆ ಸೇರಿರುವುದಿದೆ. ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಅವರು 1952 ರ ಸಂದರ್ಭದಲ್ಲಿ  ದಕ್ಷಿಣ ಭಾರತದ ಕೊಡವರ ಧರ್ಮ ಮತ್ತು ಸಮಾಜ ಎನ್ನುವ ಅಧ್ಯಯನದ ಮೂಲಕ ಅಲ್ಲಿಯ ಪ್ರಾದೇಶಿಕತೆಯಲ್ಲಿ ಧರ್ಮ ಹೇಗೆ ಒಂದು ಬಗೆಯ ಅಸ್ಮಿತೆಯನ್ನು ಕಾಪಾಡಿಕೊಂಡಿತ್ತು ಎನ್ನುವ ಬಗ್ಗೆ ಚರ್ಚಿಸಿರುವರು. ಹೀಗೆ ಇನ್ನೂ ಅನೇಕರು ಧರ್ಮ ಮತ್ತು ಸಮಾಜವನ್ನು ಕುರಿತು ಅಧ್ಯಯನ ಮಾಡಿರುವರಾದರೂ ಜರ್ಮನಿಯ ಆರ್ಥಿಕ ಚಿಂತಕ ಮತ್ತು ಸಮಾಜಶಾಸ್ತ್ರಜ್ಞ  ಮ್ಯಾಕ್ಸ್‌ವೆಬರನ ನಿಲುವು ಮಾತ್ರ ಮಿಕ್ಕ ಎಲ್ಲರಿಗಿಂತಲೂ ವಿಭಿನ್ನವಾದುದು.

ಈ ಮ್ಯಾಕ್ಸ್‌‍ ವೆಬರ್ 19 ನೇ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಲ್ಲಿ ಒಬ್ಬ ಶ್ರೀಮಂತ ಉದ್ಯಮಿಯಿದ್ದಾನೆ ಎಂದಾಗ ಆತ ಸಹಜವಾಗಿಯೇ ಪ್ರೊಟೆಸ್ಟಂಟ್ ಆಗಿರಬೇಕು ಎನ್ನುವಂಥಹ ನಂಬುಗೆಯ ಸ್ಥಾಪನೆಗೆ ಕ್ರಿಶ್ಚಿಯನ್ ಧರ್ಮದ ಪಂಗಡವೊಂದು ಕಾರಣವಾಗಿತ್ತು ಎನ್ನುವುದನ್ನು ತನ್ನ ಸಿದ್ಧಾಂತದಲ್ಲಿ ಅತ್ಯಂತ ತಾರ್ಕಿಕವಾಗಿ ಚರ್ಚಿಸಿದ್ದಾನೆ.  ಕ್ರಿಶ್ಚಿಯನ್ ಧರ್ಮದಲ್ಲಿ ಪ್ರೊಟೆಸ್ಟಂಟ್ ಮತ್ತು ಕ್ಯಾಥೊಲಿಕ್ ಎನ್ನುವ ಎರಡು ಪಂಗಡಗಳಿವೆ. 19 ನೇ ಶತಮಾನದ ಸಂದರ್ಭದಲ್ಲಿ ಯುರೋಪದಲ್ಲಿ ಪ್ರಬಲವಾದ ಸುಧಾರಣಾವಾದದ ಗಾಳಿಯೊಂದು ಬೀಸತೊಡಗಿತು. ಪ್ರೊಟೆಸ್ಟಂಟರು ಮಾತ್ರ ಆರ್ಥಿಕವಾಗಿ ಬೆಳೆಯಬಲ್ಲರು ಎನ್ನುವಂಥ ನಂಬುಗೆಯ ಗಾಳಿಯದು. ಇದರ ಹೊಡೆತಕ್ಕೆ ಸಿಲುಕಿ ಕ್ಯಾಥೊಲಿಕ್ ನೆಲೆಗಳಾದ ಆಷ್ಟ್ರಿಯಾ, ಫ್ರಾನ್ಸ್, ಇಟಲಿ, ಪೋರ್ಚುಗಲ್, ಸ್ಪೇನ್‌ನಂತಹ ರಾಷ್ಟ್ರಗಳು ಪ್ರೊಟೆಸ್ಟಂಟ್ ಪಂಥದ ಪ್ರಾಂತಗಳಾದ ಇಂಗ್ಲೆಂಡ್, ಹಾಲಂಡ್, ಸ್ಕಾಟಲ್ಯಾಂಡ್‌ಗಳ ಕಡೆಗೆ ಹೊರಳಿ ನೊಡುವಂತಾದದ್ದು ಚರಿತ್ರೆ. ಅದಕ್ಕೆ ಅತಿ ಮುಖ್ಯ ಕಾರಣ ಪ್ರೊಟೆಸ್ಟಂಟ್ ಧರ್ಮದ ವಸ್ತುನಿಷ್ಟ ನಿಲುವು.

ಶ್ರಮ ಮತ್ತು ಬಂಡವಾಳ ಶೇಖರಣೆಗಳೆರಡನ್ನೂ ಬಲವಾಗಿ ಪ್ರತಿಪಾದಿಸುವ ಆ ಪಂಗಡ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಷ್ಟಾಪನೆಗೆ ಆಹ್ವಾನವನ್ನೂ ನೀಡಿತು ಎನ್ನುವುದನ್ನು ವೆಬರ್‌ ತನ್ನ ’ಪ್ರೊಟೆಸ್ಟಂಟ್ ಧರ್ಮ ಮತ್ತು ಬಂಡವಾಳಶಾಹಿ ಸಮಾಜದ ಅಂತ:ಸತ್ವ’ ಎನ್ನುವ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದಿದೆ. ಜರ್ಮನ್ ದೇಶ ಸುಧಾರಣಾವಾದದ ಪ್ರಭಾವಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮ್ಯಾಕ್ಸ್ ವೆಬರ್ ಅತ್ಯಂತ ಉತ್ಸಾಹಿ ತರುಣ. ಆತ ತನ್ನ ಹದಿಮೂರನೇಯ ವಯಸ್ಸಿನಲ್ಲಿ ತನ್ನ ಪಾಲಕರಿಗೆ ಕ್ರಿಸ್ಮಸ್ ಕೊಡುಗೆಯಾಗಿ ’About the Course of German History, with reference to the Positions of the Emperor and the Pope’ ಎನ್ನುವ ಪ್ರಬಂಧವನ್ನು ನೀಡಿರುವುದಿತ್ತು. ವಿಶ್ವದ ಮಹಾನ್ ತತ್ವಜ್ಞಾನಿಗಳನ್ನು ಅಧ್ಯಯನ ಮಾಡಿದ ವೆಬರ್, ಅರ್ಥಶಾಸ್ತ್ರದ ಅಧ್ಯಾಪಕನಾಗಿಯೂ ಕಾರ್ಯನಿರ್ವಹಿಸಿದ.

ಪಶ್ಚಿಮದ ನೆಲೆಗಳು ಶ್ರಮವಹಿಸಿ ದುಡಿಯುವುದನ್ನು ಮಾತ್ರವಲ್ಲದೇ  ಬಂಡವಾಳವನ್ನು ಉಳಿಸುವ, ಬೆಳೆಸುವ ದಿಶೆಯಲ್ಲೂ ಪ್ರೊಟೆಸ್ಟಂಟ್ ಪಂಗಡ ನೆರವಾಗಿರುವ ಬಗ್ಗೆ ಆತ ತನ್ನ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದಿದೆ.  ಜಗತ್ತಿನ ಬಹುತೇಕ ಧರ್ಮಗಳು, ತ್ಯಾಗ, ನಿರ್ಮೋಹ, ಅಸಂಗ್ರಹ ಪ್ರವೃತ್ತಿಯನ್ನೇ ಪ್ರತಿಪಾದಿಸುತ್ತವೆ ಹಾಗಾಗಿ ಅಂಥಾ ಧರ್ಮಗಳಿರುವ ರಾಷ್ಟ್ರಗಳು ಆರ್ಥಿಕವಾಗಿ ಹಿಂದುಳಿದಿರುವುದಿದೆ. ಪ್ರೊಟೆಸ್ಟಂಟ್ ಧರ್ಮ ಹಾಗಲ್ಲ ದುಡಿಮೆಯನ್ನು ಬಲವಾಗಿ ಬೆಂಬಲಿಸುವ ಜೊತೆಯಲ್ಲಿ  ಹಣವನ್ನು ಉಳಿಸುವ, ತೊಡಗಿಸುವ, ಬೆಳೆಸುವ ದಿಶೆಯಲ್ಲಿಯೂ ಅದು ನೆರವಾಗುತ್ತದೆ. ಮಾರುಕಟ್ಟೆಗಾಗಿ ಉತ್ಪಾದಿಸುತ್ತ, ತರ್ಕ ಸಮ್ಮತ ವ್ಯವಹಾರದೊಂದಿಗೆ ಹಣವನ್ನು ಕೂಡಿ ಹಾಕಬೇಕು ಎನ್ನುವ ಧರ್ಮ ಅದಾಗಿದೆ ಎನ್ನುತ್ತಾನೆ. ವಿಶ್ವದಲ್ಲಿ ಬಡ್ಡಿ ವ್ಯವಹಾರವನ್ನು ನಿರಾಕರಿಸದಿರುವ ಪಂಥವೆಂದರೆ ಈ ಪ್ರೊಟೆಸ್ಟಂಟ್ ಪಂಗಡ ಎಂದು ಆತ ಪ್ರತಿಪಾದಿಸುತ್ತಾನೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಉಪದೇಶಿಸುವ ಯಾವುದೇ ಧರ್ಮಗಳು ಬಂಡವಾಳಶಾಹಿ ವ್ಯವಸ್ಥೆಗೆ ಗಟ್ಟಿ ಅಡಿಪಾಯವನ್ನು ಹಾಕಲಾರವು.

ಮನುಷ್ಯ ಈಗಾಗಲೇ ಭೌತಿಕತೆಯ ಧಾವಂತದಲ್ಲಿ ಎಸಗುತ್ತಿರುವ ಪ್ರಮಾದಗಳಿಗೆ ವೆಬರನ ಪ್ರೊಟೆಸ್ಟಂಟ್ ಧರ್ಮದ ವಿಚಾರಗಳು ಸಮರ್ಥನೀಯವಾದ ಪರಿಹಾರಗಳನ್ನು ಒದಗಿಸಲಾರವು ಎನ್ನುವ ಸತ್ಯದ ನಡುವೆಯೇ ಧರ್ಮ ಎನ್ನುವುದು ಕೇವಲ ಆಚರಣೆ. ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿ ಉಳಿಯದೇ 12 ನೇ ಶತಮಾನದ ಶ್ರಮ ಸಂಸ್ಕೃತಿಯನ್ನು ಬೆಂಬಲಿಸಿದ್ದೇಯಾದರೆ ಖಂಡಿತ ವಿಶ್ವದ ಎಲ್ಲ ಧರ್ಮಗಳು ಸಮಾಜಮುಖಿಯಾಗಿ ಕಾರ್ಯ ಎಸಗಿದಂತಾಗುತ್ತದೆ. ಅಷ್ಟಕ್ಕೂ ಈಗೀಗ ಧರ್ಮ ಮತ್ತು ಅದರ ಸಹವಾಸದಲ್ಲಿರುವ ಮಠಗಳು ತಾವು ಧರ್ಮಕಾರಣಕ್ಕಾಗಿ ಮಾತ್ರವಲ್ಲದೇ ರಾಜಕಾರಣಕ್ಕಾಗಿಯೂ ಇದ್ದೇವೆ ಎನ್ನುವಂತೆ ವ್ಯವಹರಿಸುವುದನ್ನು ನೋಡಿದಾಗ ’ಅರ್ಥ’ ಕಾರಣದ ವಿಷಯದಲ್ಲಿಯೂ ಅವು ಹಿಂದೆ ಬಿದ್ದಿವೆ ಎನಿಸುವುದಿಲ್ಲ.

ಆದರೆ ವೆಬರ್ ಹೇಳುವಂತಹ ಬಂಡವಾಳಶಾಹಿ ಸಮಾಜದ ನಿರ್ಮಾಣದಲ್ಲಿ ಇವರ ’ಅರ್ಥ’ ಕಾರಣ ನಿರ್ಣಾಯಕವಾಗಲಾರದು. ವೆಬರ್ ಪರೋಕ್ಷವಾಗಿ ಬಸವೇಶ್ವರರ ಕಾಯಕದ ತತ್ವವನ್ನು ಕಟ್ಟುನಿಟ್ಟಾಗಿ ಪ್ರತಿಪಾದಿಸಿದರೂ ಆತ ಉದಾಹರಿಸುವ ಪ್ರೊಟೆಸ್ಟಂಟ್ ಪಂಥ ದಾಸೋಹದಂತಿರುವ ಮಾರ್ಗವೊಂದನ್ನು ಮಾತ್ರ ಬೆಂಬಲಿಸುವುದಿಲ್ಲ. ಬದಲಾಗಿ ದುಡಿಯಿರಿ, ಗಳಿಸಿರಿ, ಉಳಿಸಿರಿ, ಬೆಳೆಸಿರಿ ಎನ್ನುವಂಥಹ ತತ್ವಗಳನ್ನು  ಮೈಗೂಡಿಸಿಕೊಂಡ ಪ್ರೊಟೆಸ್ಟಂಟ್ ಪಂಥದಿಂದ ಮಾತ್ರ ಬಂಡವಾಳಶಾಹಿ ಸಮಾಜದ ಸ್ಥಾಪನೆ ಸಾಧ್ಯ ಎನ್ನುವ ವೆಬರನ ಅಭಿಪ್ರಾಯದಲ್ಲಿಯೂ ಒಂದು ಬಗೆಯ ತಥ್ಯ ಅಡಗಿದೆ. ಅದೇ ವೇಳೆಗೆ ಧರ್ಮ ಇಷ್ಟೊಂದು ಐಹಿಕವಾಗಿ ವ್ಯವಹರಿಸುವುದು ಸರಿಯೆ.? ಎನ್ನುವ ಪ್ರಶ್ನೆಯೂ ಹಾಗೇ ಉಳಿಯುತ್ತದೆ.