Daily Archives: May 6, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 19)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿ ಕೊಲ್ಲಬೇಕು ಎಂದು ಅನಿಸಿದರೂ ಕೂಡ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದ ಕಾರಣ ಅವನು ಈ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆ ವೇಳೆಗಾಗಲೇ ಐವತ್ತು ವರ್ಷವನ್ನು ದಾಟಿದ್ದ ಕಾರ್ಬೆಟ್ ಮೊದಲಿನಂತೆ, ನರಭಕ್ಷಕ ಹುಲಿ ಅಥವಾ ಚಿರತೆಗಳನ್ನು ಬೆನ್ನಟ್ಟಿ ವಾರಗಟ್ಟಲೇ ಸರಿಯಾದ ಊಟ ತಿಂಡಿಯಿಲ್ಲದೆ, ರಾತ್ರಿಗಳನ್ನು ಮರದ ಮೇಲೆ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ಸರ್ಕಾರದ ಪರವಾಗಿ ರುದ್ರಪ್ರಯಾಗದ ಚಿರತೆಯನ್ನು ಬೇಟೆಯಾಡಲು ಮನವಿ ಪತ್ರ ಬರೆದ, ಜಿಲ್ಲಾಧಿಕಾರಿ ವಿಲಿಯಮ್ ಇಬ್ಸ್‌ಟನ್ ಕಾರ್ಬೆಟ್‌ನ ಆತ್ಮೀಯ ಗೆಳೆಯನಾಗಿದ್ದ.

ಇಬ್ಸ್‌ಟನ್ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ತನ್ನ ಪತ್ನಿ ಸಮೇತನಾಗಿ ಅಲ್ಲಿಗೆ ಬಂದಿದ್ದ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಕಾಲೇಜಿನ ಪದವೀಧರನಾದ ಆತ 1909 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ, ಭಾರತಕ್ಕೆ ಬಂದಿದ್ದ. ವಯಸ್ಸಿನಲ್ಲಿ ಕಾರ್ಬೆಟ್‌‍ಗಿಂತ ಹತ್ತುವರ್ಷ ಚಿಕ್ಕವನಾದರೂ ಆತನಿಗಿದ್ದ, ಮೀನು ಶಿಕಾರಿ, ಕುದುರೆ ಸವಾರಿ, ಮತ್ತು ಬಿಡುವಾದಾಗ ಕಾಡು ಅಲೆಯುವ ಹವ್ಯಾಸ ಇವುಗಳಿಂದ ಕಾರ್ಬೆಟ್‌ಗೆ ತೀರಾ ಹತ್ತಿರದ ಸ್ನೇಹಿತನಾಗಿದ್ದ. ಅಧಿಕಾರಿಗಳಲ್ಲಿ ವಿಂಧಮ್‌ನನ್ನು ಹೊರತುಪಡಿಸಿ, ಇಬ್ಸ್‌ಟನ್‌ನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕಾರ್ಬೆಟ್ ಅವನನ್ನು ಪ್ರೀತಿಯಿಂದ ಇಬ್ಬಿ ಎಂದು ಕರೆಯುತ್ತಿದ್ದ. ಈತ ಕೂಡ, ವಿಂದಮ್ ರೀತಿಯಲ್ಲಿ ಭಾರತೀಯರನ್ನು ತುಂಬು ಹೃದಯದಿಂದ ಕಾಣುತ್ತಿದ್ದುದ್ದು ಕಾರ್ಬೆಟ್‌ಗೆ ಆತನ ಬಗ್ಗೆ  ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು.

ಇಂತಹ ಸನ್ನೀವೇಶದಲ್ಲಿ ಇಬ್ಸ್‌ಟನ್ ಮನವಿಯನ್ನು ನಿರಾಕರಿಸಲಾರದೆ, ಚಿರತೆಯ ಬೇಟೆಗೆ ಹೊರಡಲು ಕಾರ್ಬೆಟ್ ನಿರ್ಧರಿಸಿದ. ಈ ಬಾರಿ ವಯಸ್ಸಿನ ಕಾರಣದಿಂದಾಗಿ ಬೇಟೆಗೆ ಹೋಗಲು ಅವನ ಸಹೋದರಿ ಮ್ಯಾಗಿ ಕೂಡ ಆಕ್ಷೇಪ ವ್ಯಕ್ತಪಡಿಸಿದಳು. ಅವಳನ್ನು ಸಮಾದಾನ ಪಡಿಸಿ. ಆರು ಮಂದಿ ಘರವಾಲ್ ಜನಾಂಗದ ಸೇವಕರು, ಹಾಗೂ ಬೇಟೆಯ ಸಂದರ್ಭದಲ್ಲಿ ತನ್ನ ಜೊತೆಯಿರಲು ನೆಚ್ಚಿನ ಭಂಟ ಮಾಧೂಸಿಂಗ್ ಜೊತೆ ಕಾರ್ಬೆಟ್ ಘರ್‍ವಾಲ್‌ನತ್ತ ಹೊರಟ. ಈ ಬಾರಿ ಜಿಲ್ಲಾಧಿಕಾರಿ ಇಬ್ಸ್‌‌‌ಟನ್ ಪ್ರಯಾಣಕ್ಕಾಗಿ ಕುದುರೆ ವ್ಯವಸ್ಥೆ ಮಾಡಿದ್ದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರ ಪ್ರಯಾಣ ತ್ರಾಸದಾಯಕವೆನಿಸಲಿಲ್ಲ.

ಕಾರ್ಬೆಟ್ ತನ್ನ ಸೇವಕರ ಜೊತೆ ಕುದುರೆ ಮತ್ತು ಕಾಲ್ನಡಿಗೆ ಮೂಲಕ ರಾಣಿಖೇತ್, ಅದ್‌ಬಾದ್ರಿ ಮತ್ತು ಕರ್ಣಪ್ರಯಾಗದ ಮೂಲಕ ರುದ್ರಪ್ರಯಾಗವನ್ನು ತಲುಪುವುದಕ್ಕೆ ಹತ್ತುದಿನಗಳು ಹಿಡಿಯಿತು. ಆ ವೇಳೆಗಾಗಲೇ ನರಭಕ್ಷಕ ಚಿರತೆ ಮತ್ತೊಬ್ಬನನ್ನು ಬಲಿತೆಗೆದುಕೊಂಡಿತ್ತು. ಕಮೇರ ಎಂಬ ಹಳ್ಳಿಯಲ್ಲಿ ಬದರಿನಾಥ್ ಯಾತ್ರಿಕರಿಗಾಗಿ ಹೊಟೇಲ್ ನಡೆಸುತ್ತಿದ್ದ ಪಂಡಿತನೊಬ್ಬನ ಮನೆಯಿಂದ ರಾತ್ರಿ ವೇಳೆ ಮಲಗಿದ್ದ ಓರ್ವ ಸಾಧುವನ್ನು ನರಭಕ್ಷಕ ಎಳೆದೊಯ್ದು ಕೊಂದುಹಾಕಿತ್ತು. ಆದಿನ ಸಂಜೆ ಇಪ್ಪತ್ತುಕ್ಕೂ ಹೆಚ್ಚು ಮಂದಿ ಇದ್ದ ಯಾತ್ರಿಕರು ಮಳೆಯ ಕಾರಣ ಪ್ರಯಾಣ ಮುಂದುವರಿಸಲಾರದೆ, ಪಂಡಿತನಲ್ಲಿ ವಸತಿ ವ್ಯವಸ್ಥೆಗೆ ಆಶ್ರಯ ಕೋರಿದ್ದರು. ಗುಡ್ಡಗಳ ಒರಟು ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಸುಮಾರು ಸುತ್ತಲೂ ಎಂಟು ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಿ ತಗಡಿನ ಶೀಟ್ ಹೊದಿಸಿದ್ದ ಅವನ ಹೊಟೇಲ್ ಹಿಂಭಾಗದ ಕೋಣೆಯನ್ನು ಪಂಡಿತ ಆ ರಾತ್ರಿ ಯಾತ್ರಿಕರಿಗೆ ತಂಗಲು ನೀಡಿದ್ದ. ಕಿಟಕಿ ಬಾಗಿಲುಗಳಿಲ್ಲದ ಆ ಕೋಣೆಗೆ ಹಲವೆಡೆ ಬೆಳಕು ಬರಲು ಗೋಡೆಯಲ್ಲಿ ದೊಡ್ಡ ಮಟ್ಟದ ರಂಧ್ರಗಳನ್ನು ಹಾಗೇ ಬಿಡಲಾಗಿತ್ತು. ಬಾಗಿಲಿಗೆ ತಗಡಿನ ಒಂದು ಹೊದಿಕೆಯನ್ನು ಮುಚ್ಚಿ ಅದು ಗಾಳಿಗೆ ಬೀಳದಂತೆ ಕಲ್ಲನ್ನು ಅದಕ್ಕೆ ಒರಗಿಸಿ ಇಡಲಾಗಿತ್ತು. ನರಭಕ್ಷಕ ಆ ರಾತ್ರಿ ಯಾವ ಸುಳಿವು ಸಿಗದಂತೆ ಬಾಗಿಲಿನ ಕಲ್ಲನ್ನು ಪಕ್ಕಕ್ಕೆ ಸರಿಸಿ, ಒಳಗೆ ಪ್ರವೇಶ ಮಾಡಿ, ಕೋಣೆಯೊಳಗೆ ಮಲಗಿದ್ದ ಇಪ್ಪತ್ತು ಜನರ ಪೈಕಿ ಸಾಧುವಿನ ಕುತ್ತಿಗೆಗೆ ಬಾಯಿ ಹಾಕಿ ಅವನಿಂದ ಯಾವುದೇ ಶಬ್ಧ ಬರದಂತೆ ಮಾಡಿ ಎತ್ತೊಯ್ದಿತ್ತು. ಹೋಟೇಲ್‌ನ ಅನತೀ ದೂರದಲ್ಲಿ ಹರಿಯುತ್ತಿದ್ದ ನದಿ ತೀರದ ಬಳಿ ಆತನ ದೇಹವನ್ನು ಅರೆ ಬರೆ ತಿಂದು ಬಿಸಾಡಿ ಹೋಗಿತ್ತು.

ಈ ಘಟನೆಯಿಂದ ಎಚ್ಚೆತ್ತು ಕೊಂಡ ಜಿಲ್ಲಾಧಿಕಾರಿ ಇಬ್ಸ್‌ಟನ್ ಚಿರತೆ ಇಲ್ಲೆ ಕಾಡಿನಲ್ಲಿರಬಹುದೆಂದು ಊಹಿಸಿ ಆದಿನ ತೂಗು ಸೇತುವೆಯನ್ನು ಬಂದ್ ಮಾಡಿಸಿ ಎರಡು ಸಾವಿರ ಜನರೊಂದಿಗೆ ಸುತ್ತಮುತ್ತಲಿನ ಕಾಡನ್ನು ಜಾಲಾಡಿದ. ಸ್ವತಃ ನುರಿತ ಶಿಕಾರಿಕಾರನಾದ ಇಬ್ಸ್‌ಟನ್ ನರಭಕ್ಷಕ ಸೇತುವೆ ದಾಟಿ ಆಚೆಕಡೆಗಿನ ಕಾಡು ಸೇರಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದ. ಆದರೆ, ಅವನು ಒಂದು ವಿಷಯದಲ್ಲಿ ಎಡವಿದ್ದ. ಅದೆನೇಂದರೆ,ಸಾಮಾನ್ಯವಾಗಿ ಹಸಿವಾದಾಗ ಬೇಟೆಯಾಡುವ ನರಭಕ್ಷಕ ಚಿರತೆ ಅಥವಾ ಹುಲಿಗಳು ತಮ್ಮ ಬೇಟೆಯನ್ನು ದೂರದ ಕಾಡಿಗೆ ಒಯ್ದು ಗುಪ್ತ ಸ್ಥಳವೊಂದರಲ್ಲಿ ಇಟ್ಟು ಎರಡರಿಂದ ಮೂರು ದಿನ ತಿನ್ನುವುದು ವಾಡಿಕೆ ಅವುಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಅಲ್ಲೆ ತಿಂದು ಬಿಸಾಡಿ ಹೋಗಿದ್ದರೆ, ಅವುಗಳು ಆ ಸ್ಥಳಕ್ಕೆ ಮತ್ತೇ ವಾಪಸ್ ಬರುವುದಿಲ್ಲ ಎಂದೇ ಅರ್ಥ. ಇಲ್ಲಿ ಕೂಡ ಚಿರತೆ ಆ ರಾತ್ರಿಯೇ ಸಾಧುವಿನ ಕಳೆಬರವನ್ನು ಅರ್ಧತಿಂದು, ತೂಗುಸೇತುವೆಯನ್ನು ದಾಟಿ ಬಹು ದೂರದವರೆಗೆ ಸಾಗಿಬಿಟ್ಟಿತ್ತು.

ಕಾರ್ಬೆಟ್ ರುದ್ರಪ್ರಯಾಗದ ತಲುಪಿದ ನಂತರ ಅವನಿಗೆ ನರಭಕ್ಷಕ ಬೇಟೆಯಾಡುತ್ತಿರುವ ಪ್ರದೇಶಗಳ ನಕ್ಷೆಯ ಹೊರತಾಗಿ ಬೇರೆ ಯಾವುದೇ ಮಾಹಿತಿ ದೊರಕಲಿಲ್ಲ. ನಕ್ಷೆಯನ್ನು ಮುಂದೆ ಹರಡಿಕೊಂಡು ಜನವಸತಿ ಪ್ರದೇಶಗಳನ್ನು ಕಾರ್ಬೆಟ್ ಗುರುತು ಮಾಡತೊಡಗಿದ. ಅಲಕಾನದಿಗೆ ಎರಡು ತೂಗು ಸೇತುವೆಗಳಿದ್ದದನ್ನು ಅವನು ಗಮನಿಸಿದ. ನದಿಯ ಒಂದು ಬದಿಯಲ್ಲಿ ಯಾವುದೇ ಹಳ್ಳಿಗಳು ಇಲ್ಲದ ಕಾರಣ ಚಿರತೆ ತನ್ನ ಬೇಟೆಗಾಗಿ ಸೇತುವೆ ದಾಟಿ ಜನರಿರುವ ವಸತಿ ಪ್ರದೇಶಕ್ಕೆ ಬರುತ್ತಿದೆ ಎಂದು ಊಹಿಸಿದ. ಅವನ ಈ ಊಹೆಗೆ ಚಿಟ್ಪಾವಲ್ ಹಳ್ಳಿ ಸಮೀಪದ ತೂಗು ಸೇತುವೆಯ ಸಮೀಪದ ಪಂಡಿತನ ಮನೆಯಲ್ಲಿ ಸಾಧು ನರಭಕ್ಷನಿಗೆ ಬಲಿಯಾದದ್ದು ಬಲವಾದ ಕಾರಣ ವಾಗಿತ್ತು. ಈ ಕಾರಣಕ್ಕಾಗಿ ಚಿರತೆ ಜನವಸತಿ ಪ್ರದೇಶದ ಅಂಚಿನ ಕಾಡಿನಲ್ಲೇ ಇರಬೇಕೆಂದು ಅಂದಾಜಿಸಿದ. ಇದಕ್ಕಾ ಗೋಲಬಾರಿ ಎಂಬ ಹಳ್ಳಿ ಸಮೀಪದ ಹೊರವಲಯದ ಕಾಡಿನ ನಡುವೆ ಇದ್ದ ಪ್ರವಾಸಿ ಬಂಗಲೆಯಲ್ಲಿ ತನ್ನ ಸೇವಕರೊಡನೆ ಉಳಿಯಲು ನಿರ್ಧರಿಸಿದ.

ಚಿರತೆಯ ಜಾಡು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡು ಮೇಕೆಗಳನ್ನು ಕೊಂಡು ತಂದು ಅವುಗಳಲ್ಲಿ ಒಂದನ್ನು ದಟ್ಟ ಕಾಡಿನ ನಡುವೆ, ಮತ್ತೊಂದನ್ನು ಗೋಲಬಾರಿ ಹಳ್ಳಿಗೆ ಕಾಡಿನಿಂದ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಮರಗಳಿಗೆ ಕಟ್ಟಿ ಹಾಕಿ ಬಂದ. ಮಾರನೇ ದಿನ ಮೇಕೆ ಕಟ್ಟಿ ಹಾಕಿದ ಸ್ಥಳಗಳಿಗೆ ಹೋಗಿ ನೋಡಿದಾಗ. ಕಾಡಿನಲ್ಲಿ ಕಟ್ಟಿ ಹಾಕಿದ್ದ ಮೇಕೆ ಚಿರತೆಗೆ ಬಲಿಯಾಗಿತ್ತು. ಆದರೆ, ಅದನ್ನು ತಿನ್ನದೇ ಹಾಗೆಯೇ ಉಳಿಸಿ ಹೋಗಿರುವುದು ಕಾರ್ಬೆಟ್‌ನ ಜಿಜ್ಙಾಸೆಗೆ ಕಾರಣವಾಯಿತು. ಬೇರೆ ಯಾವುದಾದರೂ ಪ್ರಾಣಿ ದಾಳಿ ಮಾಡಿರಬಹುದೆ? ಎಂಬ ಪ್ರಶ್ನೆಯೂ ಒಮ್ಮೆ ಅವನ ತಲೆಯಲ್ಲಿ ಸುಳಿದು ಹೋಯಿತು. ಆದರೂ ಪರೀಕ್ಷಿಸಿ ಬಿಡೋಣ ಎಂಬಂತೆ ಮೇಕೆಯ ಕಳೇಬರದ ಸ್ಥಳದಿಂದ ಸುಮಾರು ಐವತ್ತು ಅಡಿ ದೂರದಲ್ಲಿ ಮಧ್ಯಾಹದಿಂದ ಸಂಜೆ ಮಬ್ಬು ಕತ್ತಲೆ ಕವಿಯುವವರೆಗೂ ಬಂದೂಕ ಹಿಡಿದು ಕಾದು ಕುಳಿತ. ಆದರೆ, ಮೇಕೆಯ ಕಳೇಬರದ ಹತ್ತಿರಕ್ಕೆಯಾವ ಪ್ರಾಣಿಯೂ ಸುಳಿಯಲಿಲ್ಲ. ಕತ್ತಲು ಆವರಿಸುತಿದ್ದಂತೆ ಇಲ್ಲಿರುವುದು ಅಪಾಯ ಎಂದು ಭಾವಿಸಿದ ಕಾರ್ಬೆಟ್, ಪ್ರವಾಸಿ ಬಂಗಲೆಯತ್ತ ಹಿಂತಿರುಗಿದ. ಕಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಅಪಾಯಕಾರಿ ಪ್ರಾಣಿಗಳು ಇರುವ ಪ್ರದೇಶದಲ್ಲಿ ಎಡಬಲದ ಪ್ರದೇಶಗಳನ್ನು ಗಮನಿಸದೇ ನೇರವಾಗಿ ನಡೆಯುದು ಅಪಾಯಕಾರಿ ಎಂಬುದನ್ನು ಕಾರ್ಬೆಟ್ ಅರಿತ್ತಿದ್ದ. ಸಾಮಾನ್ಯವಾಗಿ ಹುಲಿ, ಚಿರತೆಗಳು ಹಿಂಬದಿಯಿಂದ ಆಕ್ರಮಣ ಮಾಡುವುದನ್ನು ಅರಿತ್ತಿದ್ದ ಅವನು ಪ್ರತಿ ಎರಡು ಮೂರು ಹೆಜ್ಜೆಗೊಮ್ಮೇ ನಿಂತು ಹಿಂತಿರುಗಿ ನೋಡುತ್ತಿದ್ದ. ನಡೆಯುವಾಗ ಕೂಡ ಎಡ ಬಲ ಗಮನ ಹರಿಸಿ ತನ್ನ ಇಡೀ ಶರೀರವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಳ್ಳುತ್ತಿದ್ದ. ಅದೃಷ್ಟವೆಂದರೆ, ಅವನ ಈ ಎಚ್ಚರಿಕೆಯೇ ಅಂದು ಅವನನ್ನು ನರಭಕ್ಷಕ ಚಿರತೆಯ ದಾಳಿಯಿಂದ ಪಾರು ಮಾಡಿತ್ತು. ಆದಿನ ರಾತ್ರಿ ಪ್ರವಾಸಿ ಬಂಗಲೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ನೋಡುವಾಗ, ಚಿರತೆ, ದಾರಿಯುದ್ದಕ್ಕೂ ಕಾರ್ಬೆಟ್‌‍ನನ್ನು ಹಿಂಬಾಲಿಸಿಕೊಂಡು ಪ್ರವಾಸಿ ಮಂದಿರದವರೆಗೂ ಬಂದು ಇಡೀ ಕಟ್ಟಡವನ್ನು ಎರಡು ಮೂರು ಬಾರಿ ಸುತ್ತು ಹಾಕಿ ವಾಪಸ್ ಹೋಗಿರುವುದನ್ನು ಅದರ ಹೆಜ್ಜೆ ಗುರುತುಗಳು ಹೇಳುತ್ತಿದ್ದವು. ಚಿರತೆಯ ಹೆಜ್ಜೆ ಗುರುತು ಗಮನಿಸಿದ ಕಾರ್ಬೆಟ್ ಇದೊಂದು ಯವ್ವನ ದಾಟಿದ ವಯಸ್ಸಾದ ನರಭಕ್ಷಕ ಚಿರತೆ ಎಂಬುದನ್ನು ಖಚಿತಪಡಿಸಿಕೊಂಡ.

  (ಮುಂದುವರಿಯುವುದು)